ದೂರದ ನಕ್ಷತ್ರ/೧೪

ವಿಕಿಸೋರ್ಸ್ದಿಂದ

೧೪

ಜಯರಾಮಶೆಟ್ಟರ ಮನೆಯಲ್ಲಿ ಶಾಮಲೆಯನ್ನು ಕಂಡಾಗಲೆಲ್ಲ ಜಯದೇವನಿಗೆ ಬೆಂಗಳೂರು ನೋಡುವ ಹಂಬಲ ಉಂಟಾಗುತಿತ್ತು.

ವೇಣುಗೋಪಾಲನೇನೋ “ನವರಾತ್ರಿಯ ರಜದಲ್ಲಿ ಬಾ” ಎಂದು ಬರೆದಿದ್ದು, ಆ ಕಾಗದದ ಕೊನೆಯಲ್ಲಿ, “ಜಯದೇವನವರೆ ಬನ್ನಿ” ಎಂದು ಸುನಂದೆಯೂ ದುಂಡದುಂಡಗಿನ ಮುದ್ದಾದ ಅಕ್ಷರಗಳಲ್ಲಿ ಬರೆದಿದ್ದಳು; “ಜಯಣ್ಣ ಬಾ” ಎಂದಿರಲಿಲ್ಲ ಆಕೆ, ಒಂದು ವರ್ಷದ ತನಕ ಬೆಂಗಳೂರಿಗೆ ಹಿಂತಿರುಗಬಾರದು ಎಂದುಕೊಂಡಿದ್ದ ಜಯದೇವ ಮಾತ್ರ, ಆ ನಿರ್ಧಾರಕ್ಕಿದಿರು ಪ್ರತಿಭಟಿಸುತ್ತಿದ್ದ ಮನಸ್ಸನ್ನು ಬಿಗಿ ಹಿಡಿದ. ಆತ ಕೊಟ್ಟ ಉತ್ತರ ಸ್ಪಷ್ಟವಾಗಿತ್ತು : "ನಿಮ್ಮನ್ನೆಲ್ಲ ನೋಡಬೇಕೆಂದು ನನಗೂ ಆಸೆ, ಆದರೆ ಬೇಸಗೆ ರಜಾದವರೆಗೂ ಬರಲಾರೆ.”

ಆಗಿನ್ನೂ 'ನನ್ನನ್ನು ದಾಟಿದ ಮೇಲಲ್ಲವೆ ಬೇಸಗೆ?” ಎಂದು ಚಳಿಗಾಲ ಅಣಕಿಸುತಿತ್ತು.

ಚಿಕ್ಕ ಪರೀಕ್ಷೆ ಮುಗಿಯಿತು. ತನ್ನ ಪಾಠಗಳಲ್ಲಿ ಹೆಚ್ಚಿನ ಹುಡುಗರು ನೀಡಿದ ಉತ್ತರ ನೋಡಿ ಜಯದೇವನಿಗೆ ಸಮಾಧಾನವೆನಿಸದಿರಲಿಲ್ಲ.

ಶಾಲೆಯನ್ನು ಕುರಿತು ಇನ್ಸ್ಪೆಕ್ಟರ್ ರಾಧಾಕೃಷ್ಣಯ್ಯ ಮಾಡಿದ ವರದಿಯ ಪ್ರತಿಯೊಂದು ಬಂದಾಗ ಜಯದೇವನ ಆತ್ಮವಿಶ್ವಾಸ ಮತ್ತಷ್ಟು ಬೆಳೆಯಿತು. 'ತೃಪ್ತಿಕರ'ವೆಂದೇ ಇತ್ತು ವರದಿ. ಅದಕ್ಕೆ ತಾವೇ ಕಾರಣ ಎಂಬಂತೆ ವೆಂಕಟರಾಯರೂ ವರ್ತಿಸಿದರು; ನಂಜುಂಡಯ್ಯನೂ ವರ್ತಿಸಿದರು. ಆದರೆ ರಾಧಾಕೃಷ್ಣಯ್ಯ ವರದಿ ಬರೆದಾಗ, ಬಹುಮಟ್ಟಿಗೆ ತಾನೇ ಅವರ ದೃಷ್ಟಿಯ ಮುಂದೆ ಇದ್ದೆನೆಂಬುದನ್ನು ಊಹಿಸುವುದು ಜಯದೇವನಿಗೆ ಕಷ್ಟವಾಗಲಿಲ್ಲ, ಒಂದೆಡೆ ರಾಧಾಕೃಷ್ಣಯ್ಯ ಬರೆದಿದ್ದರು: ಪಠ್ಯ ಪುಸ್ತಕಗಳ ಹೊರತಾದ ಬೌದ್ಧಿಕ ಚಟುವಟಿಕೆಗಳಿಗೆ ತುಂಬಾ ಆಸ್ಪದವಿದೆ. ಆ ಜವಾ ಬ್ದಾರಿಯನ್ನು ಹೊರಬಲ್ಲ ಉತ್ಸಾಹಿ ಉಪಾಧ್ಯಾಯರಿದ್ದೂ ಅತ್ತ ಗಮನ ಕೊಡದೇ ಇರುವುದು ಸರಿಯಲ್ಲ, ಆಟಗಳ ವಿಷಯದಲ್ಲೂ ಸಾಕಷ್ಟು ಸೌಕರ್ಯವಿಲ್ಲ.” ಅದನ್ನೋದಿದ ಜಯದೇವ ಮುಗುಳ್ನಕ್ಕ, ಉತ್ಸಾಹಿ ಉಪಾಧ್ಯಾಯರೆಂದು ಯಾರನ್ನು ಉದ್ದೇಶಿಸಿ ಬರೆದರೆಂಬುದು ವೆಂಕಟರಾಯರಿಗೂ ನಂಜುಂಡಯ್ಯನಿಗೂ ಹೊಳೆಯಿತು. ಆದರೆ ಅದನ್ನು ಬಹಿರಂಗವಾಗಿ ಒಪ್ಪಿಕೊಳ್ಳಲು ಅವರು ಸಿದ್ಧರಿರಲಿಲ್ಲ,

ಶಾಲೆಯ ವಾರ್ಷಿಕ ದಿನಾಚರಣೆಯು ಸಿದ್ಧತೆ ನಡೆಯಿತು. ಜಯದೇವನನ್ನು ಹೆಚ್ಚಿನ ದುಡಿತಕ್ಕೆ ಹಚ್ಚಿ ತಪ್ಪನ್ನಾದರೂ ಕಂಡುಹಿಡಿಯುತ್ತಿರಬಹುದೆಂದು ಮುಖ್ಯೋಪಾಧ್ಯಾಯರು ಭಾವಿಸಿದರು.

ಆಫೀಸು ಕೊಠಡಿಯಲ್ಲಿ ಜಯದೇವ ಸಲಹೆಗಳನ್ನು ಕೊಟ್ಟ.

“ವಿದ್ಯಾಭ್ಯಾಸ ಸುಧಾರಣೆಯ ವಿಷಯವಾಗಿ ಆ ಸಂದರ್ಭದಲ್ಲಿ ಒಂದು ಉಪನ್ಯಾಸ ಮಾಲೆ ಏರ್ಪಡಿಸೋದು ಒಳ್ಳೆದು.”

“ಉಪನ್ಯಾಸ ಮಾಲೇನೇ ? ವಾರ್ಷಿಕೋತ್ಸವದ ಸಮಯದಲ್ಲಿ ಉಪನ್ಯಾಸ ಯಾರಿಗ್ರೀ ಬೇಕು?

“ಹಾಗಂದ್ರೆ ಹ್ಯಾಗ್ಸಾರ್?"

'ಛೆ ! ಛೆ ! ಮಾಲೆ ಗೀಲೆ ಒ೦ದೂ ಬೇಡಿ, ನಾವೇ ಯಾರಾದರೂ ಸುಧಾರಣೆಯ ವಿವರ ಏನೂಂತ ವಿವರಿಸಿದಾಯ್ತು...”

“ಅಧ್ಯಕ್ಷ ಸ್ಥಾನಕ್ಕೆ ಹೊರಗಿಂದ್ಲೇ ಯಾರನ್ನಾದರೂ ಕರಿಸೋಣ. ಆಗ್ದೆ?" ಎಂದು ನಂಜುಂಡಯ್ಯ ಕೇಳಿದರು.

“ಯಾರನ್ನು ಹೇಳಿ?”

ಜಯದೇವನೆಂದ:

“ಸಾರ್ ನನ್ದೊಂದು ಸೂಚನೆ ಇದೆ. ಸಾಮಾನ್ಯವಾಗಿ ಮೇಲಿನ ಅಧಿಕಾರಿಗಳನ್ನೇ ಕರೆಯೋದು ರೂಢಿ ಅಲ್ವೆ? ಈ ಸಾರೆ ಯಾರಾದರೂ ಪ್ರಖ್ಯಾತರಾದ ಸಾಹಿತಿಗಳ್ಳ ಕರೆಸೋಣ.”

“ಸಾಹಿತಿಗಳು ಈ ಕೊಂಪೆಗೆ ಯಾಕ್ರೀ ಬರ್ತಾರೆ ? ಅವರಿಗೆ ಫಸ್ಟ್ ಕ್ಲಾಸೊ ಸೆಕೆಂಡ್ ಕ್ಲಾಸೊ ಪ್ರಯಾಣ ವೆಚ್ಚ ಕೊಡೋರು ಯಾರು? ಅದಲ್ದೆ, ಬಂದ್ಮೇಲೆ ಅವರ ಸಾಹಿತ್ಯ ಭಾಷಣ ಕೇಳೋ ಜನರಾದ್ರೂ ಬೇಡ್ವೆ?”

“ಅಂಥವರಲ್ಲ ಸಾರ್, ಯುವಕ ಸಾಹಿತಿಗಳು ಯಾರನ್ನಾದರೂ-”

"ಪ್ರಗತಿಶೀಲ ಸಾಹಿತಿಗಳೇನ್ರಿ?"--ಎಂದು ನಂಜುಂದಯ್ಯ ವ್ಯಂಗ್ಯವಾಗಿ ನಕ್ಕು ಕೇಳಿದರು.

“ಯಾಕ್ಸಾರ್ – ಜನರಾಜರನ್ನೋ ಕೃಷ್ಣರಾಜರನ್ನೋ ಕರಿಸಿದ್ರಾಗ್ದೆ?”

“ಅವರು ಯಾರು ?"-ಎಂದು ವೆಂಕಟರಾಯರು ಬೇಕುಬೇಕೆಂಬುದೇ ಕೇಳಿದರು. ಅದು ವ್ಯಂಗ್ಯಮಿಶ್ರಿತ ಪ್ರಶ್ನೆ ಎಂಬುದು ಜಯದೇವನಿಗೆ ಹೊಳೆಯದಿರಲಿಲ್ಲ, ಮಾತನಾಡಿ ಪ್ರಯೋಜನವಿಲ್ಲವೆಂದು ಆತ ಸುಮ್ಮ ನಾದ. ಅದನ್ನು ಗಮನಿಸಿ ನಂಜುಂಡಯ್ಯನೆಂದರು.

“ಸಾಹಿತಿಗಳು ಯಾರೂ ಬೇಡಿ. ನಮ್ಮ ಅಧಿಕಾರಿಗಳನ್ನೇ ಕರೆಸೋಣ..?

“ಯಾರನ್ನು--ರೇಂಜ್ ಇನ್ಸ್ಪೆಕ್ಟರ್ ರಾಧಾಕೃಷ್ಣಯ್ಯನವರ್ನ ಕರಿಸ್ತಿರೇನು ?'–ಎಂದು ಜಯದೇವ, ಅದಾದರೂ ಆಗಲಿ ಎಂಬ ಆಸೆಯಿಂದ ಹೇಳಿದ.

ವೆಂಕಟರಾಯರೂ ನಂಜುಂಡಯ್ಯನೂ ಪರಸ್ಪರ ಮುಖ ನೋಡಿಕೊಂಡರು.

“ರೇಂಜ್ ಇನ್ಸ್ಪೆಕ್ಟರು ಯಾತಕ್ರಿ ? ಜಿಲ್ಲಾ ಕೇಂದ್ರಕ್ಕೆ ಹೋಗಿ ಜಿಲ್ಲಾಧಿಕಾರಿಗಳನ್ನೇ ಕರಕೊಂಡು ಬರ್ತೀನಿ."

ಹಾಗೆ ಹೇಳಿದ ವೆಂಕಟರಾಯರು ಅದನ್ನು ಮಾಡಿಯೇ ತೀರುವರೆಂಬ ವಿಷಯದಲ್ಲಿ ಸಂದೇಹವಿರಲಿಲ್ಲ. ಆ ರೀತಿ ಜಯದೇವನ ಮನಸ್ಸನ್ನು ನೋಯಿಸಿದ ಮೇಲೆ, ಆ 'ಉತ್ಸಾಹಿ ಉಪಾಧ್ಯಾಯ'ರ ಸಾಮಾರ್ಥ್ಯಕ್ಕೆ ಆಹ್ವಾನ ನೀಡುವ ಬೇರೆ ಕೆಲಸವನ್ನು ಮುಖ್ಯೋಪಾಧ್ಯಾಯರು ಆತನಿಗೆ ಒಪ್ಪಿಸಿದರು.

“ಹುಡುಗರ್ದೊಂದು ನಾಟಕ, ಹುಡುಗೀರ್ದೊಂದು ನಾಟಕ-ಇಷ್ಟು ಜವಾಬ್ದಾರಿ ನಿಮ್ಮ ಮೇಲೆ.. ಏನು ಜಯದೇವ್ ?”

ಹೈಸ್ಕೂಲಿನಲ್ಲೆರಡು ಬಾರಿ, ಕಾಲೇಜಿನಲ್ಲೂ ಒಮ್ಮೆ, ನಾಟಕಗಳಲ್ಲಿ ಜಯದೇವ ಅಭಿನಯಿಸಿದ್ದ, ಆದರೆ, ಹುಡುಗ-ಹುಡುಗಿಯರನ್ನು ಕಲೆ ಹಾಕಿ ನಟನಟಿಯರನ್ನು ಸಿದ್ಧಗೊಳಿಸಿದುವುದು ಸುಲಭದ ಕೆಲಸವಾಗಿರಲಿಲ್ಲ.

“ಪ್ರಯತ್ನಪಟ್ಟು ನೋಡ್ತೀನಿ ಸಾರ್.”

ಜಯದೇವನ ಈ ಅಳಕು ಕಂಡು ವೆಂಕಟರಾಯರಿಗೆ ಸಂತೋಷವಾಯಿತು.

“ಹಾಗಂದ್ರೆ ಸಾಲ್ದು, ನೀವು ಪೂರ್ತಿ ಜವಾಬ್ದಾರಿ ತಗೋಬೇಕು.”

“ಆಗಲಿ--ಆಗಲಿ."

“ಮೂರು ವಾರ ತಯಾರಿ ಮಾಡಿದ್ರೆ ಸಾಕಲ್ವೆ? ಇಲ್ದೆ ಹೋದ್ರೆ. ನಾಟಕ-ನಾಟಕ ಅಂತ ಹುಡುಗ್ರು ಕೆಟ್ಟು ಹೋಗ್ತಾರೆ”

ಹುಡುಗರು ಮುಂದೆ ಉತ್ತೀರ್ಣರಾಗದೆ ಇದ್ದರೆ ಅದಕ್ಕೆ ನೀನೇ ಕಾರಣನಾಗುವೆ–ಎಂದು ಎಚ್ಚರಿಸಿದ ಹಾಗಿತ್ತು ಆ ಮಾತು.

“ನಾಟಕಗಳೂ ಚೆನಾಗಿರ್ಬೇಕು, ಯಾವುದನ್ನು ಆರಿಸ್ತೀರೋ' ಬಂದು ಹೇಳಿ,” ಎಂಬ ನಿರ್ದೇಶ ಜತೆಯಲ್ಲೆ.

ಆಯ್ಕೆ ಸುಲಭವಾಗಿರಲಿಲ್ಲ, ವೇಣುಗೋಪಾಲನಿಗೆ ಬರೆಯೋಣವೆ? -ಎಂಬ ಯೋಚನೆ ಬಂತು. ಆದರೆ ಅದು ಬೇಗನೆ ಆಗುವ ಕೆಲಸವಲ್ಲ. ತನ್ನಲ್ಲಂತೂ ಯಾವುದೂ ಇರಲಿಲ್ಲ. ' ಕನ್ನಡದಲ್ಲಿ ಸಾಕಷ್ಟು ಒಳ್ಳೆಯ. ನಾಟಕಗಳೇ ಇಲ್ಲ, ಹುಡುಗರಿಗಾಗಿಯೇ ಬರೆದ ಮೆಚ್ಚಿಕೊಳ್ಳುವ ನಾಟಕಗಳಂತೂ ಇಲ್ಲವೇ ಇಲ್ಲ—' ಎಂದು ಯಾರೋ ಸಾಹಿತಿಯೊಬ್ಬರು ಹಿಂದೆ ಒಂದು ಭಾಷಣದಲ್ಲಿ ಹೇಳಿದುದು ಜಯದೇವನ ನೆನಪಿಗೆ ಬಂತು. ಆ ಮಾತು ಸುಳ್ಳಾಗಿರಲಿಲ್ಲ, ಶಾಲೆಯ ಪುಸ್ತಕ ಭಂಡಾರದಲ್ಲಿದ್ದ ನಾಟಕಗಳು ಎರಡೇ ಎರಡು : ವಿ.ಸೀ. ಯವರ 'ಸೊಹ್ರಾಬ್-ರುಸ್ತುಂ' ಮತ್ತು ಚಿ.ಸದಾಶಿವಯ್ಯನವರ 'ಜಯಶ್ರೀ', ಎರಡು ನಾಟಕಗಳೂ ಅಲ್ಲಿನ ಹುಡುಗರ ಮಟ್ಟವನ್ನು ಮೀರಿದ್ದವು. ಆದರೆ 'ಸೊಹಾಬ್-ರುಸ್ತುಂ' ನಾಟಕದಲ್ಲಿನ ಹೃದಯಸ್ಪರ್ಶಿಯಾದ ಮಾನವೀಯ ಸಂಬಂಧವನ್ನು ಆ ಹುಡುಗರೂ ಕೂಡಾ ಅಭಿನಯಿಸಿ ತೋರಿಸುವುದು ಸಾಧ್ಯವಾದೀತೆಂದು ಜಯದೇವನಿಗೆ. ತೋರಿತು.

'ಸೊಹಾಬ್-ರುಸ್ಸುಂ' ನಾಟಕದ ಹೆಸರೆತ್ತಿದಾಗ ಮುಖ್ಯೋಪಾಧ್ಯಾಯರು ಮೊದಲು ಮೂಗು ಮುರಿದರು. ಅದು ಒಳ್ಳೆಯ ನಾಟಕಎಂಬ ಕಾರಣದಿಂದ ಅದನ್ನೊಪ್ಪಿಕೊಳ್ಳಲು ಅವರು ಸಿದ್ಧರಿರಲಿಲ್ಲ, ಆದರೆ ಅದನ್ನು ಬರೆದವರು ವಿ.ಸೀ. ಯವರೆಂದು ತಿಳಿದ ಬಳಿಕ, “ಆಗಬಹುದು” ಎಂದರು.

ಹುಡುಗರ ನಾಟಕದಲ್ಲಿ ಸ್ತ್ರೀ ಪಾತ್ರವನ್ನು ಹುಡುಗರೇ ವಹಿಸಬೇಕಾಗಿತ್ತು, ಹುಡುಗಿಯರ ನಾಟಕದಲ್ಲಿ ಅವರೇ ಪುರುಷರು, ಬೆಂಗಳೂರಲ್ಲೇ ಹುಡುಗರು ಟೋಫನ್ ಧರಿಸುವುದನ್ನು ಕಂಡಿದ್ದ ಜಯದೇವ ಆ ಹಳ್ಳಿಯಲ್ಲಿ ಬೇರೇನನ್ನೂ ನಿರೀಕ್ಷಿಸುವುದು ಸಾಧ್ಯವಿತ್ತು ?

ಇಷ್ಟಾದರೂ ಹುಡುಗಿಯರಿಗೆ ಸರಿಯಾದ ನಾಟಕ ಸಿಗಲಿಲ್ಲ. ಪ್ರಭಾಮಣಿ ದಿನಾಲೂ ಪೀಡಿಸುತ್ತಿದ್ದಳು:

“ಏನ್ಸಾರ್ ? ನಮ್ಮ ನಾಟಕ ಹುಡುಕ್ಲೆ ಇಲ್ವಲಾ ಸಾರ್ ನೀವು?"

ಜಯದೇವನಿಗೆ ಒಮ್ಮೆಲೆ ಪ್ರಾಥಮಿಕ ಶಾಲೆಯ ತಿಮ್ಮಯ್ಯ ಮೇಷ್ಟ್ರ ನೆನಪಾಯ್ತು, ನಾಟಕದ ಖಯಾಲಿಯ ಮನುಷ್ಯ, ಆ ಸಂಜೆಯೇ ಜಯದೇವ ಅವರನ್ನು ಕಂಡ. ಮಾಧ್ಯಮಿಕ ಶಾಲೆಯ వేుi్మ తెనే్కున్ను ಹುಡುಕಿಕೊಂಡು ಬಂದರೆಂದು ಅವರಿಗೆ ಸಂತೋಷವಾಗದಿರಲಿಲ್ಲ.

“ಹುಡುಗೀರು ಆಡೋಕೆ ಸರಿಹೋಗುವಂಥ ನಾಟಕ ಯಾವುದಾದ್ರೂ ಉಂಟೆ ತಿಮ್ಮಯ್ಯನವರೆ?"

ಅವರು ಮೂಗಿಗೆ ನಸ್ಯವೇರಿಸಿ ಒಂದು ಕ್ಷಣ ಗಂಭೀರವಾಗಿದ್ದು ಹೇಳಿದರು :

“ಯಾವಾಗ್ಬೇಕು?

“ಈಗ್ಲೇ ಸಿಗೋ ಹಾಗಿಲ್ವೇನು?”

“ಮನೇಲಿದೆ, ಹುಡುಕ್ಕೇಕು, ಇವತ್ತು ಮಂಗಳವಾರ, ಗುರುವಾರ ಕೊಟ್ರೆ ಸಾಕೊ ? ನೀವು ಎಲ್ಲಿರೋದು–ಜಯರಾಮಶೆಟ್ಟರ ಮನೇಲಿ ತಾನೆ? ಗುರುವಾರ ಬೆಳಿಗ್ಗೆ ಬಂದು ನಿಮ್ಮನ್ನ ಕಾಣ್ತೀನಿ? "

ಸಂಭಾಷಣೆಯನ್ನು ಕೇಳುತಲಿದ್ದ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರೆಂದರು.

“ತಿಮ್ಮಯ್ಯ, ನಾಳೆ ಶಾಲೆಗೆ ನೀವು ಚಕ್ಕರ್–ಹಾಗಾದ್ರೆ.”

ಮೂಗೊರೆಸಿ ತಿಮ್ಮಯ್ಯ, ಆ ದಿನ ಕಂಡಿದ್ದಂತೆ ನಾಟಕದ ಪಾತ್ರಧಾರಿಯ ಹಾಗೆಯೇ, ಬಿಡುಗಣ್ಣಿನಿಂದ ತಮ್ಮ ಮುಖ್ಯೋಪಾಧ್ಯಾಯರನ್ನು ನೋಡಿದರು.

ಗುರುವಾರ ಬೆಳಗ್ಗೆ ಬಂದು ತಿಮ್ಮಯ್ಯ ಮೇಷ್ಟ್ರು, ಸುರಳಿ ಸುತ್ತಿದ್ದ ಹಾಳೆಗಳನ್ನು ಜಯದೇವನಿಗೆ ಕೊಟ್ಟರು.

“ಕೈ ಬರಹ, ಪ್ರತಿಮಾಡಿದಿರಾ ?”

ತಿಮ್ಮಯ್ಯ ಮೇಷ್ಟ್ರು ಮಾತನಾಡಲಿಲ್ಲ.

“ಕೃಷ್ಣಪ್ರೇಮ.. ಯಾರು ಇದನ್ನು ಬರೆದದ್ದು ?"

ಆಗಲೂ ತಿಮ್ಮಯ್ಯ ಸುಮ್ಮನಿದ್ದರು. ಜಯದೇವ ಏನೂ ತಿಳಿಯದವನಂತೆ ಅವರ ಮುಖ ನೋಡಿದ. ಆ ಪ್ರಾಥಮಿಕ ಉಪಾಧ್ಯಾಯರ ಕಣ್ಣು ಗಳಲ್ಲಿ ತುಂಟತನದ ನಗೆಯಿತ್ತು.

“ಬೇರೆ ಯಾರೋ ಬರೆದಿದ್ದು ಬೇಕಾದ್ರೆ, ನನ್ಹತ್ರ ಬರಬೇಕಾಗಿತ್ತೆ ಸ್ವಾಮಿ ನೀವು ?”

ಜಯದೇವನಿಗೆ ಆಶ್ಚರ್ಯವಾಯಿತು:

“ನೀವೆ ಬರೆದ್ರಾ ಇದನ್ನ ?

“ಸಂಶಯವೋ?”

ಸಂಶಯವಿರಲಿಲ್ಲ. ತಿಮ್ಮಯ್ಯನವರನ್ನು ಕಾಣಲು ಹೋದ ದಿನ ಅವರ ಮುಖ್ಯೋಪಾಧ್ಯಾಯರು ಹೇಳಿದ್ದಿಲ್ವೆ? 'ನಾಳೆ ಶಾಲೆಗೆ ನೀವು ಚಕ್ಕರ್– ಹಾಗಾದ್ರೆ, ' ಆಸಾಮಿ, ಹಳ್ಳಿಯಲ್ಲಿ ಮನೆಯಲ್ಲೇ ಕುಳಿತು ಬರೆದಿರ್ಬೇಕು!

“ಓದಿ ನೋಡಿ. ಸಾಯಂಕಾಲ "

“ಕಾಫಿ ತಗೊಳ್ಳೋಣ.”

“ಸಾಯಂಕಾಲ. ಬರೇ ಕಾಫಿಯಲ್ಲ-ತಿಂಡೀನೂ ಬೇಕು, ನಾಟಕ ಚೆನಾಗಿದ್ರೆ.”

ಅದು ಚೆನಾಗಿರುತ್ತದೆಂಬ ನಂಬಿಕೆಯೇನೂ ಜಯದೇವನಿಗೆ ಇರಲಿಲ್ಲ ಆದರೂ ಓದಲು ಮೊದಲು ಮಾಡಿದ, ಓದುತ್ತ ಬೆರಗಾದ. ಹಳೆಯ ನಾಟಕ ಗಳ ಶೈಲಿಯಿತ್ತು, ಒಂದು ತೂಕ ಹೆಚ್ಚಾಗಿಯೇ ಇದ್ದ ಪ್ರಾಸಪ್ರಿಯತೆ. ನಡು ನಡುವೆ ಲಲಿತವಾದ ಹಾಡುಗಳು. ಆ ಹಾಡುಗಳಿಗೆ ಸ್ವರಪ್ರಸ್ತಾರ. ಕಥಾವಸ್ತು ಕೃಷ್ಣ-ರಾಧೆಯರ ಪ್ರೇಮಕ್ಕೆ ಸಂಬಂಧಿಸಿದ್ದು, ರಂಗಭೂಮಿಯ ಮೇಲೆ ಅದು ಅಭಿನಯಿಸಲ್ಪಡುತ್ತಿದ್ದಂತೆಯೇ ಚಿತ್ರಿಸಿಕೊಂಡು ಜಯದೇವ ಓದಿದ. ಅವನಿಗೆ ಸಮಾಧಾನವಾಯಿತು: ತೃಪ್ತಿಯಾಯಿತು. ದೋಷಗಳಿದ್ದರೂ ಕೃತಿ ಸುಂದರವಾಗಿತ್ತು, ನಾಲ್ವತ್ತೈದು ನಿಮಿಷಗಳ ನಾಟಕ. ತಿಮ್ಮಯ್ಯನವರಲ್ಲಿ ಅಂಥ ಸಾಮರ್ಥ್ಯ ಹುದುಗಿರಬಹುದೆಂದು ಜಯದೇವ ಊಹಿಸಿಯೇ ಇರಲಿಲ್ಲ.

ಶಾಲೆಗೆ ಹೋಗಲು ತಡವಾಗಿ ಹೋಗಿತ್ತು, ಅವಸರ ಅವಸರವಾಗಿ ಸ್ನಾನ ಮಾಡಿ ಬಟ್ಟೆಹಾಕಿಕೊಂಡು 'ಕೃಷ್ಣ ಪ್ರೇಮ'ದ ಸುರುಳಿಯನ್ನು ಕೈಲೆತ್ತಿಕೊಂಡು ಶಾಲೆಗೆ ವೇಗವೇಗವಾಗಿ ನಡೆದ. ಆಗಲೆ ಪಾಠಗಳು ಆರಂಭವಾಗಿದ್ದುವು. ತನ್ನ ಪಾಠವಿದ್ದ ಮೂರನೆಯ ತರಗತಿಗೆ ಏನೋ ಒಂದು ಲೆಕ್ಕ ಕೊಟ್ಟ ವೆಂಕಟರಾಯರು ತಮ್ಮ ತರಗತಿಗೆ ಹೋಗಿದ್ದರು. ಜಯದೇವ. ತರಗತಿಯನ್ನು ಹೊಕ್ಕರೂ ಹುಡುಗರ ಕ್ಷಮೆ ಕೇಳಿ, ಆ ಲೆಕ್ಕವಾಗುವವರೆಗೂ ಕಾದು ಕುಳಿತಿದು, ಆ ಬಳಿಕ ತನ್ನ ಪಾಠಮಾಡಿದ.

ಮಧ್ಯಾಹ್ನದ ವಿರಾಮದವರೆಗೂ ಸಿಡುಕಿನಲ್ಲೇ ಇದ್ದರು ವೆಂಕಟರಾಯರು, ಉಪಾಹಾರದ ಬಿಡುವಿನಲ್ಲಿ ಜಯದೇವ ಹೇಳಿದ:

“ಹುಡುಗೀರ್ಗೆ ಬೇಕಾದ ನಾಟಕ ಸಿಕ್ತು,”

"ಓ ! ಅದಕ್ಕೆ ತಡವಾಯ್ತೊ ? ನಿಮ್ಮನ್ನು ಹುಡುಕೋದಕ್ಕೆ ಜವಾನನ್ನ ಕಳಿಸೋಣಾಂತಿದ್ದೆ”

ಓದ್ತಾ ಇದ್ದವನಿಗೆ ಹೊತ್ತಾದ್ದು ಗೊತ್ತಾಗಲಿಲ್ಲ... ಇಲ್ಲೇ ಪ್ರಾಥಮಿಕ ಶಾಲೇಲಿ ತಿಮ್ಮಯ್ಯ ಅಂತ ಒಬ್ಬರು ಮೇಷ್ಟ್ರಿದಾರೆ.ಅವರು ಬರೆದು ಕೊಟ್ರು.”

“ಪರವಾಗಿಲ್ವೊ?”

“ಚೆನ್ನಾಗಿದೆ. 'ಕೃಷ್ಣ ಪ್ರೇಮ' ಅಂತ.”

“ಪ್ರೇಮ ಗೀಮ ಜಾಸ್ತಿ ಹಾಕ್ಬೇಡೀಪ್ಪ!”

“ಉಂಟೇ ಸಾರ್ ಎಲ್ಲಾದ್ರೂ!"

“ನಾಳೇನೆ ಪ್ರ್ಯಾಕ್ಟೀಸ್ ಇಟ್ಕೊಳ್ಳಿ, ನಾನೂ ಬರ್ತಿನಿ.”

ಸಂಜೆ ಜಯದೇವ ತಿಮ್ಮಯ್ಯನವರನ್ನು ಕರೆದುಕೊಂಡು ಆನಂದ ವಿಲಾಸಕ್ಕೆ ಹೋಗಿ ಭರ್ಜರಿಯಾಗಿ ತಿಂಡಿತಿನ್ನಿಸಿದ. ಆಮೇಲೆ ಇಬ್ಬರೂ ತಿಮ್ಮಯ್ಯನವರ ಹಳ್ಳಿಯತ್ತ ಸಾಗಿದ್ದ ಹಾದಿಯಲ್ಲಿ ಸಾವಕಾಶವಾಗಿ ನಡೆದು ಹೋದರು, ತಾವು 'ಕೃಷ್ಣಪ್ರೇಮ'ದಲ್ಲಿ ಸೇರಿಸಿದ್ದ ಒಂದೆರಡು ಹಾಡುಗಳನ್ನು ರಾಗವಾಗಿ ಅಂದು ತೋರಿಸಿದರು ತಿಮ್ಮಯ್ಯ,

ಜಯದೇವ ಮನಸಿನೊಳಗಿಂದ ಬಂದ ಒಂದು ಮಾತನ್ನು ಹೇಳಿದ:

“ನನಗೆ ಮುದ್ದಣನ ನೆನಪಾಗ್ತಿದೆ ತಿಮ್ಮಯ್ಯನವರೇ.”

“ಮುದ್ದಣ-ಮನೋರಮೆ,” ಎಂದು ತಿಮ್ಮಯ್ಯ ಮೆಲ್ಲನೆ ಅಂದು ನಕ್ಕು ಹೇಳಿದರು: “ನಮ್ಮನೇಲೇನಾದರೂ ನಾಟಕಾಭಿನಯ ಮಾಡಿದ್ರೆ ನನ್ನ ಮನೋರಮಾ ಪರಕೆ ತಗೊಂಡು ಬರ್ತಾಳೆ!”

ಹುಡುಗಿಯರ ನಾಟಕದ ಪಾತ್ರಗಳನ್ನು ಹಂಚುವುದು ಸುಲಭವಾಗಲಿಲ್ಲ. ಇಂದಿರಾ ರಾಧೆಯಾದಳು. ಪುಟ್ಟ ಪ್ರಭಾಮಣಿ ಕೃಷ್ಣನಾದಳು.

ಮತ್ತೆ ಇಂದಿರೆಯ ಸಾಮೀಪ್ಯದ ಸನ್ನಿವೇಶ.......

ಒಂದು ಸಂಜೆ ಸೊಹಾಬ್-ರುಸ್ಸುಂ ಅಭ್ಯಾಸ. ಇನ್ನೊಂದುದಿನ 'ಕೃಷ್ಣಪ್ರೇಮ..' ಆ ಹುಡುಗಿಯರ ನಾಚಿಕೆಯೊ-ಸಂಭ್ರಮವೊ, ಅವರ ನಾಟಕದ ಅಭ್ಯಾಸ ನಡೆದಾಗ ಹುಡುಗರು ಯಾರೂ ಇಣಿಕಿ ನೋಡದಂತೆ ಎಚ್ಚರ ವಹಿಸಿ ಜಯದೇವನಿಗೆ ಸಾಕಾಗುತಿತ್ತು. ನಂಜುಂಡಯ್ಯನಿಗೆ ಅದೊಂದರಲ್ಲೂ ಆಸಕ್ತಿ ಇರಲಿಲ್ಲ. ವೆಂಕಟರಾಯರು ಮಾತ್ರ ಆಗಾಗ್ಗೆ ಬಂದು ಹೋಗುತ್ತಿದ್ದರು. ಸಿದ್ಧತೆಯ ಪ್ರಗತಿಯನ್ನು ನಿರೀಕ್ಷಿಸುವುದಕ್ಕಲ್ಲ – ತನ್ನ ಮೇಲೆ ಕಣ್ಣಿಡುವುದಕ್ಕೆ ಅವರು ಬರುತಿದ್ದರೆಂಬುದನ್ನು ತಿಳಿಯಲು ಜಯದೇವನಿಗೆ ಹೆಚ್ಚು ಹೊತ್ತು ಹಿಡಿಯಲಿಲ್ಲ.

ತಿಮ್ಮಯ್ಯ ಉಪಾಧ್ಯಾಯರು ಮಾತ್ರ ಆಗಾಗ್ಗೆ ಬಂದು ಎರಡು ನಾಟಕಗಳ ಅಭಾಸದಲ್ಲೂ ಜಯದೇವನಿಗೆ ನೆರವಾಗುತ್ತಿದ್ದರು.

ನಾಯಿಕೆ ಇಂದಿರಾ ಜಯದೇವನನ್ನು ಮನೆಗೆ ಕರೆದಳು.

“ನಮ್ಮಮ್ಮ ನಿಮ್ಮನ್ನ ಕರಕೊಂಡು ಬಾ ಅಂದ್ರು ಸಾರ್.” ಜಯದೇವ ಅಂಜುಬುರುಕನಾಗಿರಲಿಲ್ಲ. ಆದರೆ ನಾಳೆಯ ದಿನ ಊರಲ್ಲೆಲ್ಲ ನಡೆಯುವ ಅಪಾರ್ಥ ಕಲ್ಪನೆಯ ಪ್ರಚಾರವನ್ನು ಕಲ್ಪಿಸಿಕೊಂಡು ಆತ ಅಳುಕಿದ. ಅವನು ಉಪಾಯವಾಗಿ ಉತ್ತರ ಕೊಟ್ಟ :

“ಈಗ ಬೇಡವಮ್ಮ, ವಾರ್ಷಿಕೋತ್ಸವವಾದ ಮೇಲೆ ನಿಮ್ಮನೇಲಿ ನಮಗೆಲ್ಲ ಕಾಫಿ ಕೊಟ್ಟೀಯಂತೆ.”

ವಾರ್ಷಿಕೋತ್ಸವದ ನಾಟಕಗಳ ನಿರ್ದೇಶಕನಾದ ಜಯದೇವನ ಜನಪ್ರಿಯತೆ ಬಲುಬೇಗನೆ ಹೆಚ್ಚಿತು.

ಶ್ಯಾಮಲೆಯನ್ನು ಕರೆದುಕೊಂಡು ಹೋಗಲು ಆಕೆಯ ಗಂಡ ಬಂದ. ಅಂತಸ್ತಿನಲ್ಲಿ ಆತ ಜಯರಾಮಶೆಟ್ಟರಿಗಿಂತ ಕಡಮೆಯವನೆಂಬುದು ಸ್ಪಷ್ಟವಾಗಿತ್ತು, ಶ್ಯಾಮಲಾ ಅವನೆದುರೇ ಅಂದು ಬಿಟ್ಟಳು :

“ನೀವು ಬೇರೆ ಮನೆ ಮಾಡಿದರೆ ಬರ್ತೀನಿ.”

ಹಾಸನದಲ್ಲೇ ಇದ್ದು ಬೇರೆ ಮನೆ ಮಾಡುವುದು ಸಾಧ್ಯವಿರಲಿಲ್ಲ. ವರ್ಗ ಮಾಡಿಸಿಕೊಳ್ಳಲು ಯತ್ನಿಸುವುದಾಗಿ ಆತ ಹೇಳಿದ.

ಶ್ಯಾಮಲಾ ತಾಯಿ ಮನೆಯಲ್ಲೇ ಉಳಿದಳು,

ಮುಗುಳು ನಗುವುದು-ಗಹಗಹಿಸಿಯೂ ನಗುವುದು-ಕಳೆದು, ಸಣ್ಣ ಪುಟ್ಟ ಸಂಭಾಷಣೆಗೆ ಆರಂಭವಾಯಿತು.

“ನಿಮಗೆ ತುಂಬಾ ಸಂಕೋಚ!” ಎಂದೂ ಒಮ್ಮೆ ಆಕೆ ಹೇಳಿದಳು.

ಜಯದೇವ ಮಾತ್ರ ಮುಳ್ಳಿನ ಹಾಸಿಗೆಯ ಮೇಲೆ ಮಲಗಿದವನಂತೆ ದಿನ ಕಳೆದ.

ವಾರ್ಷಿಕೋತ್ಸವ ವಿಜೃಂಭಣೆಯಿಂದಲೆ ಜರಗಿತು. ಜಿಲಾ ವಿದ್ಯಾಧಿಕಾರಿ ಬಂದರು. ಶಂಕರಪ್ಪ ಹಿರಿತನ ವಹಿಸಿದರು. ನಾಟಕ ನೋಡಲು ಮಧಾಹ್ನದಿಂದಲೆ ಕಾದು ಕುಳಿತಿದ್ದ ಪುಟ್ಟ ಹುಡುಗರ ಗದ್ದಲ ಗೊಂದಲಗಳ ನುಡುವೆ, ಮಾತನಾಡಿದವರಿಗಷ್ಟೇ ಕೇಳಿಸುವಂತೆ ಅವರಿಗೆ ಮಾತ್ರವೇ ಅರ್ಥವಾಗುವಂತೆ, ಭಾಷಣಗಳಾದುವು, ಶುಭ್ರವಾದ ಕ್ಚ್ಚೆ ಪಂಚೆಯುಟ್ಟು ಅಷ್ಟೇ ಶುಭ್ರವಾದ ಜುಬ್ಬ ಧರಿಸಿ, ನೆರೆದವರ ಗಮನದ ಕೇಂದ್ರವಾಗಿ ಜಯದೇವ ಓಡಾಡಿದ. ರಂಗಭೂಮಿಯ ಎಲ್ಲ ಉಸಾವಾರಿಯನ್ನೂ ತಿಮ್ಮಯ್ಯ ಮೇಷ್ಟ್ರು ವಹಿಸಿಕೊಂಡರು.

ಮೊದಲು 'ಕೃಷ್ಣ ಪ್ರೇಮ'ದ ಅಭಿನಯ. ಆ ಬಳಿಕ 'ರೊಹ್ರಾಬ್ ರುಸ್ತುಂ.' ಎರಡು ನಾಟಕಗಳೂ ಚೆನಾಗಿದ್ದುವು. ಅಧ್ಯಕ್ಷರಾಗಿದ್ದ ವಿದ್ಯಾಧಿಕಾರಿಗಳಿಗೆ ನಾಟಕಗಳ ನಡುವೆ ವಂದನಾರ್ಪಣೆ ಮಾಡುವ ಸಂದರ್ಭದಲ್ಲಿ ವೆಂಕಟರಾಯರು ತಿಮ್ಮಯ್ಯನವರ ವಿಷಯ ಪ್ರಸ್ತಾಪಿಸಲೇ ಇಲ್ಲ, ನಾಟಕಗಳ ವಿಚಾರವಾಗಿ ಮಾತನಾಡುವ ನೆಪಮಾಡಿಕೊಂಡು ಜಯದೇವ ತಿಮ್ಮಯ್ಯನವರ ಗುಣಗಾನ ಮಾಡಿದ. ಪರದೆಯ ಹಿಂದೆ ಮೂಲೆಯಲ್ಲಿ ಒಬ್ಬರೇ ಕುಳಿತಿದ್ದ ತಿಮ್ಮಯ್ಯನವರ ಕಣ್ಣಗಳು ಹನಿಗೂಡಿದುವು. ಮಾಧ್ಯ. ಏುಕ ಶಾಲೆಯು ನಗರವಾಸಿ ಮೇಷ್ಟ್ರು ಹಳ್ಳಿಯ ಪಾಥಮಿಕ ಶಾಲೆಯ ಬಡ ಉಪಾಧ್ಯಾಯರನ್ನು ಹೊಗಳಿದುದು ನೆರೆದಿದ್ದ ಹಲವರಲ್ಲಿ ಆಶ್ಚರ್ಯ నేన్నుంటిు ಮಾಡದೆ ಇರಲಿಲ್ಲ.

ರಂಗಭೂಮಿಯು ಮೇಲೆ ರಾಧೆಯಾಗಿ ರಾಣಿಯಾಗಿ ಮೆರೆದ: ಇಂದಿರಾ ಮುಖದ ಮೇಲಿನ ಬಣ್ಣವನ್ನು ಅರ್ಧಕ್ಕರ್ಧ ಮಾತ್ರ ತೆಗೆದು. ಅಲ್ಲಿಯೆ ನಿಂತಿದ್ದಳು ಆಕೆಯ ತಾಯಿಯೂ ಒಳಗೆ ಬಂದುಬಿಟ್ಟರು. ಇಂದಿರೆಯನ್ನು ನೋಡುತ್ತ ಹೃದಯದಲ್ಲೊಂದು ವಿಚಿತ್ರ ನೋವಿನ ಅನುಭವ ಜಯದೇವನಿಗಾಯಿತು. ನಾಲ್ವತ್ತು ದಾಟಿದ್ದರೂ ಇಂದಿರೆಯ ಸೌಂದರ್ಯವೇ ಗಾಂಭೀರ್ಯದ ಪ್ರೌಢತೆಯ ಒಪ್ಪಪಡೆದು ನಿಂತಹಾಗಿದ್ದರು ಆ ವಿಧವೆ ತಾಯಿ.

ಜಯದೇವನನ್ನೆ ಸೂಕ್ಷ್ಮವಾಗಿ ದಿಟ್ಟಿಸುತ್ತ ಅವರೆಂದರು:

“ನಮ್ಮ ಮನೆಗೆ ನೀವು ಬರಲೇ ಇಲ್ಲ ಮೇಷ್ಟ್ರೆ,.”

“ಬರ್ತೀನಮ್ಮ...”

ಒಬ್ಬೊಬ್ಬರಾಗಿ ಅಲ್ಲಿದ್ದವರೆಲ್ಲ ಹೊರಟು ಹೋದರು. ತಾಯಿಯನ್ನು ಹಿಂಬಾಲಿಸುತ್ತ ಹಿಂದಿರುಗಿ ಜಯದೇವನನ್ನೇ ನೋಡುತ್ತ ಇಂದಿರೆಯೂ ಹೊರಟಳು. ಪೆಟ್ರೋಮಾಕ್ಸ್ ದೀಪಗಳು ಇನ್ನು ಆರಿ ಹೋಗುತ್ತೇವೆ ಹಾರಿ ಹೋಗುತ್ತೇವೆ' ಎಂದು ಬೆದರಿಸಿದುವು.

ಅಷ್ಟರಲ್ಲಿ ನಾಗರಾಜ ಬಂದ.

“ಇದೇನೋ ? ಮನೆಗೆ ಹೋಗಿಲ್ವಾ ಇನ್ನೂ?”

“ನಮ್ಮಪ್ಪ ಆಗ್ಲೆ ಹೋದ್ರು.. ನೀವು ಬರ್ತೀರಿಂತ ಅಮ್ಮ ಅಕ್ಕ ಕಾದು ನಿಂತಿದ್ದಾರೆ. ಬರ್ತೀರಾ ಸಾರ್?”

ಓಡಾಡುವ ಗಡಿಬಿಡಿಯಲ್ಲಾ ಶಾಮಲೆಯನ್ನು ಜಯದೇವ ಕಂಡಿದ್ದ. ಯೌವನವೊಂದೆ ತಿಳಿದುಕೊಳ್ಳಲು ಸಮರ್ಥವಾಗುವಂಥ ಕಾತರ ತುಂಬಿದ. ಕಣ್ಣುಗಳಿಂದ ತನ್ನನ್ನು ಆಕೆ ನೋಡುತಿದ್ದಳು.

ಈಗ ಆಕೆಯ ಸಮಿಾಪದಲ್ಲೆ ಇದು ಮನೆಗೆ ಹಿಂತಿರುಗಬೇಕಾದಂತಹ ಪರಿಸ್ಥಿತಿ. . .

“ನಡಿ ನಾಗರಾಜ, ಬಂದೆ.”

ಕತ್ತಲೆಯ ಬೀದಿಯಲ್ಲಿ ನಡೆಯುತ್ತಿದಾಗ, ನಾಟಕಗಳು ಚೆನ್ನಾಗಿದ್ದುವೆಂದು ಶ್ಯಾಮಲೆಯ ತಾಯಿ ಮುಕ್ತಕಂಠದಿಂದ ಹೊಗಳಿದರು. ಆ ಕತ್ತಲಲ್ಲೂ ಸ್ಯಾಮಲ ತನ್ನನ್ನು ನೋಡುತ್ತಿದ್ದಂತೆ ಜಯದೇವನಿಗೆ ಭಾಸವಾಯಿತು. ಗಾಳಿ ಬೀಸುತಿರಲಿಲ್ಲ, ಆದರೆ ಶಾಮಲೆಯ ಸೀರೆಯು ಸೆರಗು ಜಯದೇವನಿಗೆ ತಗಲಿತು, ಜಯದೇವನ ಮೈ ತಣ್ಣಗಾಗಿ ಆತ ದೂರ ಸರಿದ.

ಮನೆಯ ಬಳಿ ಮೆಟ್ಟಿಲೇರುತಿದ್ದಾಗ ಶ್ಯಾಮಲಾ “ಅವ್ವಯ್ಯಾ!" ಎಂದು ಕಾಲು ಜಾರಿ ಹಿಂದಕ್ಕೆ ವಾಲಿದಳು.

“ಮೆತ್ತಗೆ-ಹುಷಾರಿ !” ಎಂದ ಜಯದೇವ, ಶ್ಯಾಮಲೆಯೇನೋ ಚೇತರಿಸಿಕೊಂಡಳು. ಆದರೆ ಬೀಳುವುದನ್ನು ತಡೆಯಲೆಂದು ನೀಡಿದ್ದ ಆತನ ಕೈ ಅವಳದನ್ನು ಸೋಕಿತು. ಎಷ್ಟೊಂದು ಬೆಚ್ಚಗಿನ ಸ್ಪರ್ಶ!

ಡವಡವನೆ ಹೊಡೆದುಕೊಳ್ಳುತ್ತಿದ್ದ ಎದೆಯೊಡನೆ ಜಯದೇವ ತನ್ನ ಕೊಠಡಿಗೆ ಓಡಿದ. ದೀಪವನ್ನೂ ಉರಿಸದೆ ಹಾಸಿಗೆಯ ಮೇಲುರುಳಿಕೊಂಡ. 'ಊಂ ಊಂ' ಎಂದು ನರಳಾಟದ ಸ್ವರ ಹೊರಟಿತು, ಸುನಂದಾ ಸುನಂದಾ' ಎಂದು ಆತ ತೊದಲಿದ.