ವಿಷಯಕ್ಕೆ ಹೋಗು

ಪುಟ:Chirasmarane-Niranjana.pdf/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
ಚಿರಸ್ಮರಣೆ
೬೫

"ಅಮ್ಮಾ, ನಾನು ಹೋಗಿ ಅಪ್ಪನ್ನ ನೋಡ್ಕೊಂಡು ಬರಲಾ? ಇಬ್ರು ಜತೆಯಾಗೇ ಬರ್ತೇವೆ."
ಮಗನ ಆ ಮಾತು ಕೇಳಿ ತಾಯಿಯ ಮುನಿಸೆಲ್ಲ ಮಾಯವಾಯಿತು.ಮಮತೆಯ ಹನಿ ಒಸರಿತು. ಆಕೆ "ಬೇಡ"ಎಂದಳು. ಹಾಗೆ ಹೇಳುತ್ತ ಮಗನನ್ನು ತನ್ನೆಡೆಗೆ ಎಳೆದುಕೊಂಡಳು.
ಮೊದಲು ತಾಯಿ ತನ್ನನ್ನು ಬೈದಳೆಂದು ಚಿರುಕಂಡನಿಗೆ ಬೇಸರವಾಗಿತ್ತು,ಇವರ ಪ್ರಪಂಚವೇ ಬೇರೆ, ತನ್ನದೇ ಬೇರೆ-ಎಂದು ಆತ ಭಾವಿಸಿದ್ದ, ಆದರೆ ಈಗ ಬೈಗಳ ಹಿಂದಿದ್ದ ಹೃದಯದ ನೋವಿನ ಆಳ ಅರಿವಾದಾಗ, ತನ್ನನ್ನು ಹೆತ್ತವರನ್ನು ಸರಿಯಾಗಿ ತಾನು ಅರ್ಥಮಾಡಿಕೊಳ್ಳುತ್ತಿಲ್ಲವಲ್ಲ ಎಂದು ವ್ಯಥೆಯಾಯಿತು.
ತಾಯಿ ಮಗ ಇಬ್ಬರೂ ಗುಡಿಸಿಲಿನ ಬಾಗಿಲಿಗೆ ಬಂದರು. ಹೊರಗೆ ಮೆಟ್ಟಲ ಮೇಲೆ ತಾಯಿ ಕುಳಿತಳು. ಮಗ ಆಕೆಯ ಮಡಿಲಿಗೊರಗಿದ. ತಣ್ಣನೆ ಗಾಳಿ ಬೀಸುತ್ತಿತ್ತು.ಹಿತ್ತಿಲಲ್ಲಿದ್ದ ಬಾಳೆಯ ಗಿಡಗಳ ಒಣಗಿದ ಉದ್ದನೆಯ ಎಲೆಗಳು ಅಸಹಾಯಕತೆಯಿಂದ ಮಡಚಿ ಸೋಗೆಯಾಗಿ ಗಾಳಿಗೆ ಅತ್ತಿಂದಿತ್ತ ಬೀಸುತ್ತಿದ್ದವು.ಹಸುರೆಲೆಗಳು ಹರಿದು ಚಿಂದಿಯಾದರೂ, ಹೆದರದೆ ನಗುನಗುತ್ತ ಗಾಳಿಯೊಡನೆ ಕದನ ನಡೆಸುತ್ತಿದುವು, ಅಂಗಳದಲ್ಲಿದ್ದ ಎರಡು ತೆಂಗಿನಮರಗಳಿಂದಲೂ ಗರಿಗಳು ಎತ್ತರದಲ್ಲಿ ಟಿಪಟಿಪಟಿಪ ಸದು ಮಾಡುತ್ತಿದ್ದವು–ಬೇರೆ ತಾಳವೇ ತಿಳಿಯದೆಂಬಂತೆ, ಏಕಪ್ರಕಾರವಾಗಿ.ಆಕಾಶದಲ್ಲಿ ಚಂದ್ರ ಇನ್ನೂ ಬಂದಿಲ್ಲವೆಂದು ಸಹಸ್ರ ನಕ್ಷತ್ರಗಳು ಅರಾಜಕತೆಯ ರಾಜ್ಯಭಾರ ನಡೆಸಿದ್ದುವು.
ತಾಯಿಯ ಮಡಿಲಲ್ಲಿ ತಲೆಯಿಟ್ಟು ಚಿರುಕಂಡ ಆಕಾಶವನ್ನೊಮ್ಮೆ ನೋಡಿದ.
ಆ ವಿಶಾಲತೆಯ ಎದುರಿನಲ್ಲಿ ತಾನೊಂದು ಚುಕ್ಕಿ ಮಾತ್ರ ಎಂದು ಆತನಿಗೆ ತೋರಿತು.
ತಾಯಿ ಮಗನ ತಲೆಗೂದಲನ್ನು ನೇವರಿಸಿದಳು. ಮೂರು ಹಡೆದು ನಾಲ್ಕಾರು ತಿಂಗಳು ಇರದೆ ಅವು ಕಣ್ಣು ಮುಚ್ಚಿದ ಮೇಲೆ, ಚಿರುಕಂಡ ಬಂದಿದ್ದ, ಇದರ ಲೀಲೆ ಎಷ್ಟು ದಿನವೊ?-ಎಂದು ದಂಪತಿ ಚಿಂತೆಯಲ್ಲೇ ಇದ್ದರು. ಎಂಟು ಒಂಭತ್ತು ತಿಂಗಳ ಬಳಿಕ ಅವರಿಗೆ ಧೈರ್ಯ ಬಂತು. ಹಳೆಯದರ ಜತೆಗೆ ಹೊಸ ಹರಕೆಗಳನ್ನು ಹೊತ್ತರು. ಹಾಗೆ ಬೆಳೆದಿದ್ದ ಚಿರುಕಂಡ.. ಬಡಕಲು ಮೈ, ಆದರೆ ತಾಯಿಗೆ ಅದೇ ಮೆಚ್ಚಿನದು. ಆತ ಚುರುಕಾದ ವಿದಾರ್ಥಿಯೆಂದು ಎಲ್ಲರೂ ಹೇಳುತ್ತಿದ್ದರು. ಮಗನನ್ನು ನೀಲೇಶ್ವರಕ್ಕೆ ಓದಲು ಕಳುಹಬೇಕೆಂದು ತಂದೆಗೆ ಆಸೆಯಿತ್ತು ಆದರೆ ಮಗನನ್ನು ಬಿಟ್ಟಿರಲು ತಾಯಿ ಒಪ್ಪಲಿಲ್ಲ. ತನ್ನ