ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬಗಳುಜಿಂಕೆ
ಬಗಳುಜಿಂಕೆ - ಆರ್ಟಿಯೊಡ್ಯಾಕ್ಟಿಲ ಗಣದ ಸರ್ವಿಡೀ ಕುಟುಂಬಕ್ಕೆ ಸೇರಿದ ಚಿಕ್ಕ ಗಾತ್ರದ ಜಿಂಕೆ (ಮಂಟ್ಜ್ಯಾಕ್) ಮಂಟಿಯಾಕಸ್ ಮಂಟ್ಜ್ಯಾಕ್ ಇದರ ವೈಜ್ಞಾನಿಕ ಹೆಸರು. ನೇಪಾಳ, ಭಾರತ ಶ್ರೀಲಂಕಾ, ಜಾವ, ಬೋರ್ನಿಯಾ, ಸುಮಾತ್ರ, ದಕ್ಷಿಣಚೀನ, ಫಾರ್ಮೋಸಗಳಲ್ಲಿ ಕಾಣದೊರೆಯತ್ತದೆ. ಇದರ ಉದ್ದ ಸುಮಾರು 800-1000 ಮಿಮೀ. ಎತ್ತರ 450-580ಮಿಮೀ. ತೂಕ 14-18ಕೆಜಿ. ದೇಹದ ಮೇಲೆ ಮೃದು ಕೂದಲುಗಳುಂಟು. ಮೈಬಣ್ಣ ಗಾಢ ಕಂದು ಇಲ್ಲವೆ ಬೂದುಮಿಶ್ರಿತ ಕಂದು. ಗಂಡು ಜಿಂಕೆಗಳಲ್ಲಿ ಮಾತ್ರ ಕೋಡುಗಳುಂಟು. ವರ್ಷಕ್ಕೊಮ್ಮೆ (ಮೇ ತಿಂಗಳಿನಲ್ಲಿ) ಕೋಡುಗಳು ಉದುರಿ, ಮತ್ತೆ ಹೊಸಕೋಡುಗಳು ಮೂಡುವುವು. ಕೋಡುಗಳ ಉದ್ದ ಸುಮಾರು 150 ಮಿಮೀ. ಇವುಗಳ ಬುಡದಲ್ಲಿ ರೋಮಾವೃತವಾದ ತೊಟ್ಟುಗಳಿವೆ. ಅಂತೆಯೇ ಗಂಡುಗಳ ಮೇಲ್ದವಡೆಯ ಕೋರೆಹಲ್ಲುಗಳು ಬಾಯಿಯಿಂದ ಹೊರಚಾಚಿ ನಸುಬಾಗಿದ ದಾಡೆಗಳಾಗಿವೆ. ಹರಿತವಾಗಿರುವ ಈ ದಾಡೆಗಳನ್ನು ಇವು ಪರಿಣಾಮಕಾರಿ ಅಸ್ತ್ರವಾಗಿ ಬಳಸುವುವು. ಹೆಣ್ಣುಗಳ ಕೋರೆಹಲ್ಲುಗಳಾದರೊ ಗಂಡಿನವುಗಳಷ್ಟು ದೊಡ್ಡವೂ ಅಲ್ಲ ಹರಿತವೂ ಅಲ್ಲ.
ಬಗಳುಜಿಂಕೆಗಳು ಗಾಬರಿಗೊಂಡಾಗ ಇಲ್ಲವೆ ಸಂತಾನವೃದ್ಧಿ ಸಮಯ ಬಂದಾಗ ಬಗಳುವ ತೆರ ಸದ್ದುಗೈಯುವುವು. ಈ ಗುಣವೇ ಇವುಗಳ ಹೆಸರಿಗೆ ಕಾರಣ. ದಟ್ಟ ಕಾಡುಗಳಲ್ಲಿ, ಪರ್ವತಸೀಮೆಗಳಲ್ಲಿ ಇವು ವಾಸಿಸುವುವು. ಇವುಗಳ ಚಟುವಟಿಕೆಯೆಲ್ಲ ಕತ್ತಲಾದ ಮೇಲೆ ಹುಲ್ಲು, ಎಳೆಚಿಗುರು ಇವುಗಳ ಪ್ರಧಾನ ಆಹಾರ. ಇವು ಒಂಟೊಂಟಿಯಾಗಿಯೋ ಜೊತೆ ಜೊತೆಯಾಗಿಯೋ ಸಾಮಾನ್ಯವಾಗಿ ನೀರತಾಣಗಳ ಸನಿಹದಲ್ಲಿ ಓಡಾಡಿಕೊಂಡಿರುವುವು. ವರ್ಷದ ಯಾವ ಕಾಲದಲ್ಲಾದರೂ ಮರಿಹಾಕಬಹುದಾದರೂ ಜನವರಿ-ಫೆಬ್ರುವರಿ ತಿಂಗಳುಗಳಲ್ಲಿ ಇದು ಹೆಚ್ಚು ಸಾಮಾನ್ಯ. ಗರ್ಭಾವಧಿಯ ಕಾಲ 180 ದಿನಗಳು. ಇವುಗಳ ಆಯಸ್ಸು ಸುಮಾರು 10 ವರ್ಷಗಳು. ಮಾಂಸಕ್ಕಾಗಿ, ಚರ್ಮಕ್ಕಾಗಿ ಇವನ್ನು ಬೇಟೆಯಾಡುವುದಿದೆ. ಹುಲಿ ಚಿರತೆಗಳು ಇವುಗಳ ಸ್ವಾಭಾವಿಕ ಶತ್ರುಗಳು. (ಬಿ.ಎಚ್.ಎಮ್.)