ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರೀಡ್, ವಾಲ್ಟರ್

ವಿಕಿಸೋರ್ಸ್ದಿಂದ

ರೀಡ್, ವಾಲ್ಟರ್ 1851-1902. ಅಮೆರಿಕದ ಮಿಲಿಟರಿ ಸರ್ಜನ್. ಏಕಾಣುಜೀವಿವಿಜ್ಞಾನ ಇವನ ಅಧ್ಯಯನ ವಿಷಯ. ಈತನನ್ನು ಆರ್ಮಿ ಮೆಡಿಕಲ್ ಸ್ಕೂಲ್‍ನಲ್ಲಿ ಏಕಾಣುಜೀವಿವಿಜ್ಞಾನದ ಪ್ರಾಧ್ಯಾಪಕನಾಗಿ ನೇಮಿಸಲಾಯಿತು (1843). ಸ್ಪ್ಯಾನಿಷ್-ಅಮೆರಿಕನ್ ಯುದ್ಧದಲ್ಲಿ ಸ್ಪೇನಿಗರ ತುಪಾಕಿಗಳಿಂದ ಹತರಾದ ಅಮೆರಿಕನ್ ಯೋಧರ ಸಂಖ್ಯೆಗಿಂತ ಬಲು ಮಿಗಿಲಾಗಿ ಸೋಂಕು ಬೇನೆಗಳಿಂದ ಮಡಿದವರ ಸಂಖ್ಯೆ ಇತ್ತು. ಟೈಫಾಯಿಡ್ (ನೋಡಿ- ಟೈಫಾಯಿಡ್) ಜ್ವರದ ಕಾರಣ ಮತ್ತು ಪಿಡುಗುರೂಪದ ಹರಡಿಕೆ ಬಗ್ಗೆ ತಿಳಿಯಲು ನೇಮಕಗೊಂಡ ಆಯೋಗದ ಮುಖ್ಯಸ್ಥ ಇವನೇ ಆಗಿದ್ದ. ಆಗ ಜನರನ್ನು ಬಾಧಿಸು ತ್ತಿದ್ದ ಇನ್ನೊಂದು ಪಿಡುಗು ಹsಳದಿಜ್ವರ. ಇದು ಏಕಾಣು ಜೀವಿಜನ್ಯ ರೋಗವೆಂದು ರೀಡ್ ರುಜುವಾತಿಸಿದ (1897). ಯುದ್ಧ ಮುಗಿದಾಗ (1899) ಈತನನ್ನು ಹಳದಿ ಜ್ವರದ ಕಾರಣ ಶೋಧಿಸುವ ಆಯೋಗದ ಮುಖ್ಯಸ್ಥನಾಗಿ ನೇಮಿಸಿ ಕ್ಯೂಬಾಕ್ಕೆ (ತಾತ್ಕಾ ಲಿಕವಾಗಿ ಅಮೆರಿಕದ ರಕ್ಷಣೆಗೆ ಒಳಪಟ್ಟ ದೇಶ) ನಿಯೋಜಿಸಲಾಯಿತು. ಈತನ ಅಧ್ಯಯನ ಎರಡು ಮುಖ್ಯ ಸಂಗತಿಗಳನ್ನು ಶ್ರುತಪಡಿಸಿತು. ದೇಹಸಂಪರ್ಕ, ಬಟ್ಟೆ, ಹಾಸಿಗೆ ಮುಂತಾದವುಗಳ ಮೂಲಕ ಹಳದಿಜ್ವರ ಹರಡುವುದಿಲ್ಲ, ಬದಲು, ಸೊಳ್ಳೆ ಕಡಿತವೇ ಇದರ ಕಾರಣ. ಏಡಿಸ್ ಎಂದು ಈ ಸೊಳ್ಳೆಯ ಹೆಸರು. ಇದರ ಪ್ರಜನನ ಮೂಲವನ್ನೇ ನಾಶಗೊಳಿಸಬೇಕು, ಅಲ್ಲದೇ ಸೊಳ್ಳೆಯ ಕಡಿತವಾಗದಂತೆ ಜಾಗರೂಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರೀಡ್ ತೀರ್ಮಾನಿಸಿದ. ಈತ ಇನ್ನೂ ಒಂದು ಸಂಶೋಧನೆ ಮಾಡಿದ: ಹಳದಿಜ್ವರವಾಹಕ ಸೊಳ್ಳೆಗಳು ವಾಸ್ತವವಾಗಿ ವಿಶಿಷ್ಟ ಬಗೆಯ ವೈರಸುಗಳನ್ನು ಒಯ್ಯುವ ಮಧ್ಯವರ್ತಿಗಳು ಮಾತ್ರ, ವ್ಯಕ್ತಿಗಳನ್ನು ಸೊಳ್ಳೆಗಳು ಕಡಿದಾಗ ವೈರಸ್ ಅವರ ರಕ್ತಗತವಾಗಿ ಮುಂದೆ ಜ್ವರಕ್ಕೆ ಕಾರಣವಾಗುತ್ತದೆ (1901). ನಿಜಕ್ಕೂ ವೈರಸ್‍ಜನ್ಯ ಪ್ರಥಮ ಮಾನವ ವ್ಯಾಧಿಯೇ ಹಳದಿಜ್ವರ. ರೀಡ್‍ನ ಸಂಶೋಧನೆ ಫಲವಾಗಿ ಹವಾನದಿಂದ ಹಳದಿಜ್ವರ ಸಂಪೂರ್ಣವಾಗಿ ಉಚ್ಚಾಟನೆಗೊಂಡಿತು.

	(ಎಸ್.ಕೆ.ಎಚ್.)