ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾರಂತ ಉಲ್ಲಾಸ, ಕೆ
1948 - . ವಿಶ್ವವಿಖ್ಯಾತ ವನ್ಯಜೀವಿ ವಿಜ್ಞಾನಿ. ತಂದೆ ಶಿವರಾಮ ಕಾರಂತ. ತಾಯಿ ಲೀಲ ಕಾರಂತ. ಕಳೆದ ಎರಡು ದಶಕಗಳಿಂದ ಹುಲಿ ಕುರಿತ ಸಂಶೋಧನೆಯಿಂದ ಜಗತ್ತಿನ ಅತ್ಯಂತ ಗೌರವಾನ್ವಿತ ವನ್ಯಜೀವಿ ವಿಜ್ಞಾನಿ ಎಂಬ ಗೌರವಕ್ಕೆ ಭಾಜನರಾಗಿರುವವರು. ಸಂಶೋಧನೆಗಷ್ಟೇ ಸೀಮಿತವಾಗದೆ, ವೈಜ್ಞಾನಿಕ ವನ್ಯಜೀವಿ ಸಂರಕ್ಷಣೆಯಲ್ಲೂ ತೀವ್ರವಾಗಿ ತಮ್ಮನ್ನು ತೊಡಗಿಸಿಕೊಂಡಿರುವುದು ಇವರ ವೈಶಿಷ್ಟ್ಯ.
ಬಾಲ್ಯದಿಂದಲೇ ವನ್ಯಜೀವಿಗಳಲ್ಲಿ ಆಸಕ್ತಿ ಬೆಳೆಸಿಕೊಂಡ ಕಾರಂತರು, ತಂದೆ ಶಿವರಾಮ ಕಾರಂತರು ಓದಿ ಆ ಕೂಡಲೆ ಅನುವಾದಿಸಿ ಹೇಳುತಿದ್ದ, ಜಿಮ್ ಕಾರ್ಬೆಟ್ ಮತ್ತು ಕೆನೆತ್ ಆಂಡರ್ಸನ್ ಅವರ ಹುಲಿ ಬೇಟೆ ಕಥೆಗಳಿಂದ ರೋಮಾಂಚಿತರಾಗಿದ್ದರು. ಮುಂದೆ ಕೆನೆತ್ ಆಂಡರ್ಸನ್ ಅವರ ಸಖ್ಯವನ್ನು ಸಹ ಬೆಳೆಸಿಕೊಂಡರು. ಬಾಲವನದ ಸುತ್ತಮುತ್ತಲಿನ ಹಾಗೂ ರಾಜ್ಯದ ಅರಣ್ಯಗಳಲ್ಲಿ ಸುತ್ತಾಡಿ ಹವ್ಯಾಸಿ ವನ್ಯಜೀವಿ ಸಂರಕ್ಷಕರಾಗಿ ಭಾರತದ ಅಪೂರ್ವ ವನ್ಯಜೀವಿ ಸಂಪತ್ತನ್ನು ಸಂರಕ್ಷಿಸುವ ಕೆಲಸದಲ್ಲಿ ಮಗ್ನರಾಗಿದ್ದರು. ಮುಂದೆ ಎಂಜಿನಿಯರಾಗಿ, ಕೃಷಿಕರಾಗಿ ಬದುಕಿನಲ್ಲಿ ನೆಲೆಕಂಡುಕೊಂಡರೂ, ಅದು ಅವರಿಗೆ ಮಾನಸಿಕ ತೃಪ್ತಿಕೊಡಲಿಲ್ಲ.
ಜಾರ್ಜ್ ಷಾಲರ್ ಅವರ ಪುಸ್ತಕ: "ಡೀರ್ ಅಂಡ ದ ಟೈಗರ್” ಅವರ ಆಂತರ್ಯದಲ್ಲೇ ತುಡಿಯುತ್ತಿದ್ದ ವೈಜ್ಞಾನಿಕ ವನ್ಯಜೀವಿ ಸಂರಕ್ಷಣೆಯ ಮಹತ್ವಕ್ಕೆ ತೆರೆದಿಟ್ಟಿತು. ಕಾರಂತರು ಈ ಬಗ್ಗೆ ಹೇಳುತ್ತಾರೆ “ ಮಬ್ಬುಗಣ್ಣಿನವನಿಗೆ ಕನ್ನಡಕ ತೊಡಿಸಿದಂತಾಗಿತ್ತು”. ತಮ್ಮ ಆಸಕ್ತಿಯ ಜಾಡು ಹಿಡಿದು, ವರ್ಜೀನಿಯಾದ ಫ್ರಂಟ್ ರಾಯಲ್ನಲ್ಲಿರುವ ಕನ್ಸರ್ವೇಶನ್ ಅಂಡ್ ರೀಸರ್ಚ್ ಸೆಂಟರ್ನಲ್ಲಿ ವನ್ಯಜೀವಿ ನಿರ್ವಹಣೆ ಕುರಿತ ತರಬೇತಿ ಶಿಬಿರದಲ್ಲಿ ಭಾಗವಹಿಸಿದ ಇವರು, ಮುಂದೆ ಫ್ಲಾರಿಡಾ ಮತ್ತು ಮಂಗಳೂರು ವಿಶ್ವವಿದ್ಯಾನಿಲಯಗಳಲ್ಲಿ ಉನ್ನತ ಅಧ್ಯಯನ ಕೈಗೊಂಡರು. ನ್ಯೂಯಾರ್ಕ್ ಮೂಲದ ವೈಲ್ಟ್ಲೈಫ್ ಕನ್ಸರ್ವೇಷನ್ ಸೊಸೈಟಿಯ ಸಹಾಯದಿಂದ ಭಾರತದಲ್ಲಿ ಹುಲಿಗಳ ಅಧ್ಯಯನಕ್ಕೆ ತೊಡಗುವ ಮೂಲಕ ವೃತ್ತಿಪರ ವನ್ಯಜೀವಿ ವಿಜ್ಞಾನಿಯಾದÀ ಕಾರಂತರು, ಇದುವರೆಗೂ 60ಕ್ಕೂ ಹೆಚ್ಚಿನ ಸಂಶೋಧನಾ ಲೇಖನಗಳನ್ನು, 50ಕ್ಕೂ ಹೆಚ್ಚು ಜನಪ್ರಿಯ ವಿಜ್ಞಾನ ಲೇಖನಗಳನ್ನು ಬರೆದಿದ್ದಾರೆ. ನಾಲ್ಕು ಪುಸ್ತಕಗಳನ್ನು ಮತ್ತು ವನ್ಯಜೀವಿ ನಿರ್ವಾಹಕರಿಗೆ ಅನುಕೂಲವಾಗುವಂತಹ ಒಂದು ಕೈಪಿಡಿಯನ್ನು ಹೊರತಂದಿದ್ದಾರೆ.
ವನ್ಯಜೀವಿ ಸಂರಕ್ಷಣೆಯ ಮಹತ್ವ, ಸಂರಕ್ಷಣೆಯ ಕ್ರಮವನ್ನು ಜನರಿಗೆ ತಿಳಿಹೇಳಲು ಅನೇಕ ಲೇಖನಗಳನ್ನು, ಪುಸ್ತಕಗಳನ್ನು ಬರೆದಿದ್ದಾರೆ. ವೈಜ್ಞಾನಿಕ ವಿಷಯಗಳು ಪ್ರಾದೇಶಿಕ ಭಾಷೆಯಲ್ಲಿದ್ದಾಗ ಮಾತ್ರ ಹೆಚ್ಚಿನ ಪ್ರಯೋಜನವಾಗುತ್ತದೆ ಎಂಬುದನ್ನರಿತ ಅವರು ಕನ್ನಡದಲ್ಲಿ ಅನೇಕ ಲೇಖನಗಳನ್ನು ಬರೆದಿದ್ದಾರೆ. ಕನ್ನಡದಲ್ಲಿನ ತಮ್ಮ ಬರಹಗಳಿಗೆ ಹಿರಿಯ ಪತ್ರಕರ್ತರಾದ ವೈ.ಎನ್. ಕೆ. ಅವರ ಪ್ರೇರಣಯೇ ಕಾರಣ ಎಂದು ಅವರು ಹೇಳುತ್ತಾರೆ. ಲೇಖನಗಳಲ್ಲಿನ ಧ್ವನಿಮಾತ್ರ ಕಾರಂತರ ಅಂತರಾಳದ ಪರಿಸರಪರ ಕಾಳಜಿಗಳನ್ನು ತೋರಿಸುತ್ತದೆ. ಸಂರಕ್ಷಣೆಯನ್ನು ಸಾಧಿಸುವ ರೀತಿಯನ್ನು ಸಾಮಾನ್ಯ ಓದುಗನಿಗೂ ತಿಳಿಯುವಂತೆ ಹೇಳುವ ಕಲೆ ಅವರಿಗೆ ಸಿದ್ಧಿಸಿದೆ. ಅವರ ಇಂಗ್ಲಿಷ್ ಆಗಲಿ ಕನ್ನಡದ ಲೇಖನಗಳಲ್ಲೇ ಆಗಲಿ, ಒಂದೇ ಒಂದು ವಾಕ್ಯವೂ ಕೇವಲ ಸಾಹಿತ್ಯಾತ್ಮಕವಾಗಿರುವುದಿಲ್ಲ. ಅದರಲ್ಲಿ ವಿಜ್ಞಾನ ಹಾಗೂ ಸಂರಕ್ಷಣೆಯ ನಿರೂಪಣೆ ಇರುತ್ತದೆ. ವಿವರಣೆಗಳು 'ಸತ್ಯವು ಸರಳವಾಗಿರುತ್ತz'É ಎಂಬ ಆಂಗ್ಲ ನುಡಿಯನ್ನು ಪೋಶಿಸುತ್ತದೆ. ಪರಿಸರದ ಸೂಕ್ಷ್ಮ ಕೊಂಡಿಗಳನ್ನು ವಿವರಿಸುವ ಅವರ ಈ ಪರಿ ನೋಡಿ: “ ಪರಿಸರ ವ್ಯವಸ್ಥೆಯಲ್ಲಿ “ಎ” ಎಂಬ ಸಸ್ಯ ಹುಟ್ಟಬೇಕಾದರೆ “ಬಿ” ಎಂಬ ಕೀಟದಿಂದ ಪರಾಗಸ್ಪರ್ಶವಾಗಬೇಕು. “ಬಿ” ಎಂಬ ಕೀಟವನ್ನು ನಿಯಂತ್ರಿಸುವ “ಸಿ” ಎಂಬ ಹಕ್ಕಿ “ಡಿ” ಎಂಬ ಸಸ್ಯದಲ್ಲಿ ಗೂಡು ಕಟ್ಟಬಹುದು. “ಡಿ” ಎಂಬ ಹಣ್ಣನ್ನು ಆಹಾರವಾಗಿಗಟ್ಟು ಕೊಂಡ “ಇ” ಎಂಬ ಸಸ್ಯಾಹಾರಿ ಪ್ರಾಣಿಯೂ ಅದನ್ನು ಬೇಟೆಯಾಡುವ “ಎಫ್” ಎಂಬ ಬೇಟೆಗಾರ ಪ್ರಾಣಿಯೂ ಇದೆ. ಇವೆಲ್ಲಾ ಮಣ್ಣಾದಾಗ ಕಾರ್ಯಶೀಲವಾಗುವ “ಜಿ” ಎಂಬ ಬ್ಯಾಕ್ಟೀರಿಯಾವಿಲ್ಲದೆ ಸಸ್ಯಗಳಿಗೆ ಮಣ್ಣಿನ ಸಾರ ದೊರಕಲಾರದು..” ಇದು ಯಾರಿಗೆ ಅರ್ಥವಾಗುವುದಿಲ್ಲ?! ಇದೇ ಪರಿಸರದ ವೈಜ್ಞಾನಿಕ ವಿಶ್ವರೂಪ!
ಕೇವಲ ವಿಜ್ಞಾನಿಯಾಗಿ ತೃಪ್ತಿಯಾಗದ ಕಾರಂತರು ಸಂರಕ್ಷಣಾ ಕೆಲಸಕ್ಕೆ ಕೈ ಹಾಕಿ ಸಾಕಷ್ಟು ನಿಂದನೆಗೂ ಒಳಗಾದವರು. ಅನೇಕ ಲಾಬಿ ಒಳಸುಳಿಗಳಿರುವ ರಾಜಕೀಯ ಹಾಗೂ ಮಾಹಿತಿಯಿಲ್ಲದ ಜನಗಳ ನಡುವೆ ಸಿಲುಕಿ ತೊಂದರೆ ಅನುಭವಿಸಿದರು. ಹುಲಿಗಳಿಗೆ ರೇಡಿಯೋ ಕಾಲರ್ ತೊಡಿಸಿ ಅಧ್ಯಯನ ನಡೆಸುತ್ತಿದ್ದಾಗ ಕಾಲರ್ ತೊಟ್ಟುಕೊಂಡ ಹುಲಿಗಳ ಸಾವು, ಕಾಲರಿನಿಂದಲೇ ಆದ ಸಾವು ಎಂಬ ಅಪಪ್ರಚಾರ ತೊಡಗಿದಾಗ ಕಾರಂತರು ನ್ಯಾಯಾಲಯದ ಮೊರೆಹೊಕ್ಕು ತಮ್ಮ ಹಕ್ಕನ್ನು ಉಳಿಸಿಕೊಳ್ಳಬೇಕಾಯಿತು. ತಮ್ಮ ಸಂರಕ್ಷಣಾ ಪರ್ವದ ಬಗ್ಗೆ ಅವರು ಹೀಗೆ ಹೇಳುತ್ತಾರೆ: “ಇದರ ಫಲವಾಗಿ ನನ್ನ ಸಂಶೋಧನೆಯ ಕೆಲಸಕ್ಕೆ ಸಾಕಷ್ಟು ಅಡಚಣೆಗಳು ಬಂದಿವೆ. ಆದರೆ, ಇದಕ್ಕೂ ಹತ್ತು ಪಾಲು ಸಂತಸ, ತೃಪ್ತಿಗಳೂ ನನ್ನ ಪಾಲಿಗೆ ಬಂದಿವೆ!”.
ಸದ್ಯ ಕಾರಂತರು ವೈಲ್ಡ್ಲೈಫ್ ಕನ್ಸರ್ವೇಷನ್ ಸೊಸೈಟಿಯ ಭಾರತದ ಕಾರ್ಯಕ್ರಮಗಳ ನಿರ್ದೇಶಕರಾಗಿ ಕೆಲಸ ನಿರ್ವಹಿತ್ತಾ ಪರಿಸರ ಸಂರಕ್ಷಕರಿಗೆ ಸ್ಫೂರ್ತಿದಾಯಕರಾಗಿದ್ದಾರೆ. (ಕೆ.ಎಸ್. ನವೀನ್.)