ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರೊಮ್ಯಾಂಟಿಕ್ ಯುಗದ ಹರಿಕಾರರು

ವಿಕಿಸೋರ್ಸ್ದಿಂದ

18ನೆಯ ಶತಮಾನದಲ್ಲೆಲ್ಲ ಕ್ಲಾಸಿಕಲ್ ಸಾಹಿತ್ಯವೊಂದೇ ವಿರಾಜಿಸಲಿಲ್ಲ. ಅಂಥ ಸಾಹಿತ್ಯ ಕೆಲವು ವರ್ಷಗಳು ಎಲ್ಲರ ಗಮನವನ್ನೂ ಸೆಳೆದ ಅನಂತರ ರೊಮ್ಯಾಂಟಿಕ್ ಸಾಹಿತ್ಯಪ್ರೇಮ ಅದಕ್ಕೆ ಪ್ರೇರಕವಾದ ಪ್ರವೃತ್ತಿಗಳು ಮತ್ತೆ ಲೇಖಕರ ಮನಗಳಲ್ಲಿ ಕಾಣಿಸಿಕೊಳ್ಳತೊಡಗಿದವು. ಮಧ್ಯಯುಗದ ಐತಿಹ್ಯಗಳು ಕಾಲ್ಪನಿಕ ಕಥೆಗಳು, ಜಾನಪದ ಸಾಹಿತ್ಯ, ಪ್ರಕೃತಿ, ಗ್ರಾಮಜೀವನ-ಇವುಗಳಲ್ಲೆಲ್ಲ ಹೊಸ ಆಸಕ್ತಿಯೊಂದು ಕಾಣಿಸಿಕೊಳ್ಳಲಾರಂಭಿಸಿತು. ಬಿಷಪ್ ಪರ್ಸಿಯ ರೆಲಿಸ್ ಆಫ್ ಏನ್ಷೆಂಟ್ ಇಂಗ್ಲಿಷ್ ಪೊಯಟ್ರಿ ಅನೇಕಾನೇಕ ಲಾವಣಿಗಳ ಸಂಗ್ರಹ, ಲಾವಣಿಗಳ ಸರಳತೆ, ಛಂದೋವೈವಿಧ್ಯ ಮುಂತಾದ ಗುಣಗಳು ಇಂಗ್ಲಿಷ್ ಕಾವ್ಯದ ಮೇಲೆ ಮತ್ತೆ ತಮ್ಮ ಪ್ರಭಾವವನ್ನು ಬೀರತೊಡಗಿದವು. ಹಳೆಯ ಕಾಲದ ಕೃತಿಗಳನ್ನು ಹೋಲುತ್ತಿದ್ದ ಮ್ಯಾಕ್ಫೆರ್ಸನ್ನ ಆಸಿಯನ್ ಎಂಬ ಕವನವೂ ಚಾಟರ್ಮನ್ನ ರೌಲಿ ಪೊಯಮ್ಸ್ ಎಂಬ ಕವನಸಂಗ್ರಹವೂ ಈ ಕಾಲದಲ್ಲೇ ಪ್ರಕಟವಾದುದು ಅರ್ಥಪೂರ್ಣವಾದ ಸಂಗತಿ. ಹೊರೇಸ್ ವಾಲ್ಟೋಲ್ನ ಕ್ಯಾಸಲ್ ಆಫ್ ಅಟ್ರೌಂಟೊ ಮಧ್ಯಯುಗದ ಗಾಥಿಕ್ ವರ್ಗದ ಕಲ್ಪನಾವೈಭವದಿಂದ ಕೂಡಿದ ಕಥೆ. ಮಿಸೆಸ್ ಆನ್ ರ್ಯಾಡ್ಕ್ಲಿಫ್ಳ ದಿ ಮಿಸ್ಟೆರೀಸ್ ಆಫ್ ಉಡಾಲ್ಫೋ ಕೂಡ ಇಂಥದೇ ಕೃತಿ. ಕತ್ತಲು ತುಂಬಿದ ಕಾಡು, ದೆವ್ವಗಳು, ದುಷ್ಟರು, ಪ್ರಕೃತಿಪ್ರೇಮ, ಭಾವೌತ್ಸುಕ್ಯ-ಇವು ಈ ಗ್ರಂಥಗಳ ಲಕ್ಷಣಗಳು.

ಈ ರೊಮ್ಯಾಂಟಿಕ್ ಪ್ರವೃತ್ತಿ 18ನೆಯ ಶತಮಾನದ ಉತ್ತರಾರ್ಧದಲ್ಲಿ ಮಾತ್ರವಲ್ಲದೆ ಮೊದಲಿನಿಂದಲೂ ಇತ್ತು. ಪೋಪ್ ತನ್ನ ವಿಡಂಬನೆಗಳನ್ನೂ ಚರ್ಚಾತ್ಮಕ ಕಾವ್ಯಗಳನ್ನೂ ಬರೆಯುತ್ತಿದ್ದಾಗಲೇ ಜೇಮ್ಸ್ ಥಾಮ್ಸನ್ ತನ್ನ ಸೀಸನ್ಸ್ ಎಂಬ ಋತುಗಳನ್ನು ಕುರಿತ ದೀರ್ಘಕವಿತೆಯನ್ನು ಬರೆದ (1731). ಎಡ್ವರ್ಡ್ ಯಂಗ್ನ ನೈಟ್ ಥಾಟ್ಸ್ ಕೆಲವು ವರ್ಷಗಳ ಅನಂತರ ಪ್ರಕಟಗೊಂಡಿತು. ಇವರೆಡರಲ್ಲೂ ಹಳ್ಳಿಯ ಜೀವನ, ಹಳ್ಳಿಗಾಡಿನ ದೃಶ್ಯಗಳು, ಪ್ರಕೃತಿವರ್ಣನೆ, ಮಾನವ ಸಹಜವಾದ ಭಾವಗಳು ವ್ಯಕ್ತವಾಗಿವೆ. ಶತಮಾನದ ಮಧ್ಯಭಾಗಕ್ಕೆ ಸೇರಿದ ಥಾಮಸ್ ಗ್ರೆ ಮತ್ತು ವಿಲಿಯಮ್ ಕಾಲಿನ್ಸ್ರಲ್ಲೂ ಈ ಗುಣಗಳುಂಟು. ಗ್ರೆ ಕವಿಯ ಎನ್ ಎಲಿಜಿ ರಿಟನ್ ಇನ್ ಎ ಕಂಟ್ರಿ ಚರ್ಚ್ಯಾರ್ಡ್ ಪ್ರಸಿದ್ಧ ಕವನ. ಅದು ಹಳ್ಳಿಯ ಜನರ ಕಷ್ಟ ಸುಖಗಳನ್ನೂ ಒಳಗೊಂಡಿದೆ. ಗ್ರೆ ಕವಿಯೇ ಬರೆದ ದಿ ಬಾರ್ಡ್ ಮತ್ತು ಪ್ರೋಗ್ರೆಸ್ ಆಫ್ ಪೊಯಸಿ ಕವನಗಳು ಕಲ್ಪನೆಯನ್ನು ಕೆರಳಿಸುವ ರಚನೆಗಳು. ಕಾಲಿನ್ಸನ ಓಡ್ ಟು ಈವನಿಂಗ್ ಕವಿತೆಯ ವಸ್ತು ಗ್ರಾಮಸೀಮೆಯ ಸಂಧ್ಯೆಯ ವರ್ಣನೆ. ಪ್ರಾಸರಹಿತವಾದ ಈ ಕವನ ಹಿರಾಯಿಕ್ ಕಪ್ಲೆಟ್ಟಿನ ಸಂಕೋಲೆಯಿಂದ ಹೇಗೆ ಕೆಲವರಾದರೂ ಬೇಸತ್ತಿದ್ದರೆಂದು ತೋರಿಸುತ್ತದೆ. ವಿಲಿಯಮ್ ಕೂಪರ್ ಮತ್ತು ಜಾರ್ಜ್ ಕ್ರ್ಯಾಬ್ರೂ ಹಳ್ಳಿಯ ಜೀವನದ ಮತ್ತು ನೋಟಗಳ ಕವಿಗಳು. ಸ್ಕಾಟ್ಲೆಂಡಿನ ಕವಿ ರಾಬರ್ಟ್ ಬನ್ರ್ಸ್ ಹಳ್ಳಿಯವ; ಸ್ವತ: ರೈತ. ಅವನ ಭಾವಗೀತೆಗಳು ಜನಪ್ರಿಯತೆಯನ್ನು ಗಳಿಸಿವೆ. ಪ್ರಣಯಕವನ ಗಳ ರಚನೆಯಲ್ಲಿ ಅವನದು ಎತ್ತಿದ ಕೈ. ಅವನ ಭಾಷೆ ಸ್ಕಾಟ್ಲೆಂಡಿನ ಪಶ್ಚಿಮ ಭಾಗದ ಆಡುಭಾಷೆ. ವಿಲಿಯಂ ಬ್ಲೇಕ್ ಅನುಭಾವೀ ಕವಿ. ಅವನ ಕವನಗಳಲ್ಲಿ ದೈವಚಿಂತನೆಯ ಹುಚ್ಚು ಎದ್ದು ಕಾಣುತ್ತದೆ. ಇವರೆಲ್ಲರೂ ಕಲ್ಪನೆಗೆ, ಸಹಜತೆ ಸರಳತೆಗಳಿಗೆ ಪ್ರಕೃತಿಪ್ರೇಮ ಮಾನವಪ್ರೇಮಗಳಿಗೆ ಮಾನ್ಯತೆಯಿತ್ತ ಕವಿಗಳು. ಇವರ ಕೃತಿಗಳು ರೊಮ್ಯಾಂಟಿಕ್ ಯುಗದ ಕಡೆಗೆ ಕೈತೋರಿಸುತ್ತವೆ; ಬರಲಿರುವ ಬದಲಾವಣೆಯನ್ನು ಸೂಚಿಸುತ್ತವೆ. ಆದುದರಿಂದ ಈ ಕವಿಗಳಿಗೆ ಟ್ರಾನ್ಸಿಷನ್ ಪೊಯಟ್ಸ್ ಎಂದು ಹೆಸರು ಬಂದಿದೆ. ಒಂದು ಬಗೆಯ ಕಾವ್ಯಪ್ರಪಂಚದಿಂದ ಇನ್ನೊಂದಕ್ಕೆ ಹೋಗುವವರು ಎಂದು ಆ ಮಾತು ಸೂಚಿಸುತ್ತದೆ. ಇವರು ಕ್ಲಾಸಿಕಲ್ ಸಾಹಿತ್ಯಕ್ಕೂ ರೊಮ್ಯಾಂಟಿಕ್ ಸಾಹಿತ್ಯಕ್ಕೂ ಮಧ್ಯೆ ಸೇತುವೆಯಂತಿದ್ದರು. ಇವರಲ್ಲಿ ಒಬ್ಬೊಬ್ಬರಲ್ಲೂ ಬೇರೆ ಬೇರೆಯಾಗಿ ಕಂಡುಬಂದ ಲಕ್ಷಣಗಳೇ ಒಟ್ಟಿಗೆ ಸೇರಿ ವಡ್ರ್ಸ್ ವರ್ತ್ ಮತ್ತು ಕೋಲರಿಜ್ರಲ್ಲಿ ಕಾಣಿಸಿಕೊಂಡು ರೊಮ್ಯಾಂಟಿಕ್ ಯುಗವನ್ನು ತಂದುವು

  • (ವಿಕಿಪೀಡಿಯಾಕ್ಕೆ ಹಾಕಿದೆ)