ಪುಟ:Mrutyunjaya.pdf/೬೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೫೨

ಮೃತ್ಯುಂಜಯ

ಬಿಲ್ಲುಬಾಣಗಳ ಗೊಂದಲದಲ್ಲಿ ಆ ಪೀಠವನ್ನು ಹೇಪಾಟ್” ಗಮನಿಸಿರಲಿಲ್ಲ.
ಬಕಿಲ ಹೇಳಿದ ಮೇಲೆ, ಯಾವ ಪ್ರಾಂತದಲ್ಲಿ ಇಲ್ಲದ್ದು ಇಲ್ಲಿದೆಯಲ್ಲ__ಬಂಡಾ
ಯದ ಸಂಕೇತ ಇದು__ಎನಿಸಿತು ಹೇಪಾಟ್ ಗೆ.
ಆತ ಕೇಳಿದ :
"ಮೇಲಿರೋದು ನೀರಾನೆಯೊ? ”
“ಕಲ್ಲಿನ್ದು”
"ಕಲ್ಲಿನ್ನೇ ನಾನು ಹೇಳಿದ್ದು. ಜೀವಂತ ನೀರಾನೆಯ ಗಾತ್ರ
ಎಷ್ಟೂಂತ ನನಗೆ ಗೊತ್ತಿಲ್ಲ ಅಂದ್ಕೊಂಡಿಯಾ ?”
“ತಪ್ಪಾಯ್ತು .”
“ಆ ನೀರಾನೇನ ಉರುಳಿಸು !”
ಹೇರು ದೋಣಿಯಿಂದ ಕಂಚಿನ ಸನಿಕೆಗಳನ್ನೂ ಚೂಪುಗಲ್ಲುಗಳನ್ನೂ
ಕಲ್ಲಿನ ಸುತ್ತಿಗೆಗಳನ್ನೂ ಹೊರತೆಗೆದರು. ಹತ್ತಿಪ್ಪತ್ತು ಜನ ಕಾರ್ಯೋನ್ಮುಖ
ರಾದರು. ಹೊಡೆತಕ್ಕೆ ಪೀಠದ ಕಲ್ಲುಗಳು ಸಡಲಿದುವು. ಮೇಲಿನ ಶಿಲ್ಪ
ಮೂರ್ತಿಯನ್ನು ತಳ್ಳಿದ ರಭಸಕ್ಕೆ ಕಟ್ಟಿಯ ಕಲ್ಲು ಹಾಸು ತಗಲಿ ಒಡೆಯುವು
ದರ ಬದಲು, ನೀರಾನೆ ಮೆದುಮಣ್ಣಿಗೆ ಬಿದ್ದು ಉರುಳಿ ನೀಲನದಿಯಲ್ಲಿ ಮುಳುಗಿ
ಹೋಯಿತು.
ಜನರ ಕಲರವ ಕೇಳಿಸಿದೊಡನೆ ಇನೇನಿ, ರಂಜಕದ ಜಾಡಿಯ ಮುಚ್ಚಳ
ತೆಗೆದು ದೇವತಾಮೂರ್ತಿಯ ಎಡ ಬಲಗಳಲ್ಲಿ ಇಷ್ಟಿಷ್ಟು ಪುಡಿ ಸುರಿದ, ಖ್ನೆಮ್
ಹೊಟೆಪ್ ಔಟ, ಐವತ್ತು ಯೋಧರು, ಬರಿಯ ಕೋಲು ಕೊರಡು ಹಿಡಿದ
ನೂರಾರು ಜನ ಕಟ್ಟೆಯತ್ತ ಧಾವಿಸುತ್ತಿದ್ದಂತೆ ಉರಿಯ ತೊಡಗಿದ ರಂಜಕದ
ನೀಲಪ್ರಭೆಯೂ ಅದರ ಧೂಮವೂ ಬಾಡುತ್ತಿದ್ದ ಬಿಸಿಲಿನೊಡನೆ ಬೆರೆತುವು.
ಖ್ನೆಮ್, ಔಟ ಇಬ್ಬರೂ ತಮ್ಮ ಜನರಿಗೆ ಕೂಗಿ ನುಡಿದರು :
“ಹೆದರಬೇಡಿ ! ಹೆದರಬೇಡಿ !”
ಅವರು ಹಾಗೆ ಹೇಳಿದರೂ ಹೆಚ್ಚಿನ ಜನ, ದೇವರನ್ನು ದೂರದಿಂದ
ಕಾಣುತ್ತಲೇ ಮಂಡಿಯೂರಿದರು. ಹೆದರದೆ ಇದ್ದ ಯೋಧರು ದಂಡೆ
ಯುದ್ದಕ್ಕೂ ನಿಂತಿದ್ದ ಸೈನಿಕರು ಬಾಣಬಿಟ್ಟರು ; ಧಾವಿಸಿದರು. ಬರಿಗೈ
ಯಿಂದ ಕೆಲ ಯೋಧರನ್ನು ನದಿಗೆ ತಳ್ಳಿದರು.