ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂತರರಾಷ್ಟ್ರೀಯ ದ್ರವ್ಯನಿಧಿ

ವಿಕಿಸೋರ್ಸ್ದಿಂದ

ಅಂತರರಾಷ್ಟ್ರೀಯ ದ್ರವ್ಯನಿಧಿ

(ಇಂಟನ್ರ್ಯಾಷನಲ್ ಮಾನಿಟರಿ ಫಂಡ್) ವಿಶ್ವಸಂಸ್ಥೆಯೊಡನೆ ಸಂಯೋಜನೆಗೊಂಡಿದ್ದು ಅಂತರರಾಷ್ಟ್ರೀಯ ಹಣ ವಿನಿಮಯವನ್ನು ಸ್ಥಿರಗೊಳಿಸುವ ವಿಶಿಷ್ಟ ಉದ್ದೇಶದಿಂದ ಕೆಲಸಮಾಡುತ್ತಿರುವ ಒಂದು ಸಂಸ್ಥೆಯಾಗಿದೆ. 1944ರಲ್ಲಿ ಸಮಾವೇಶಗೊಂಡ ಬ್ರೇಟನ್ ವುಡ್ಸ್ ಸಮ್ಮೇಳನ ಈ ಸಂಸ್ಥೆಯ ಹಾಗೂ ಅಂತರರಾಷ್ಟ್ರೀಯ ಪುನರ್ರಚನೆ ಮತ್ತು ಅಭಿವೃದ್ದಿ ಬ್ಯಾಂಕಿನ ನಿಯಮಾವಳಿಗಳನ್ನು ರೂಪಿಸಿತು. 1945ರಲ್ಲಿ ಈ ಸಂಸ್ಥೆ ರೂಪುಗೊಂಡಿತು. ವ್ಯವಹಾರ ಮೊದಲಾದದ್ದು 1947ರಲ್ಲಿ. 1950ರ ಅಂತ್ಯದಲ್ಲಿ 67 ರಾಷ್ಟ್ರಗಳು ಸದಸ್ಯರಾಗಿದ್ದವು. ಆಗ ಯಾವ ಕಮ್ಯೂನಿಸ್ಟ್ ರಾಷ್ಟ್ರವೂ ಇದಕ್ಕೆ ಸೇರಿರಲಿಲ್ಲ. ಈಗ ಸದಸ್ಯರ ಒಟ್ಟು ಸಂಖ್ಯೆ 100ಕ್ಕೂ ಹೆಚ್ಚಾಗಿದೆ. ಗವರ್ನರುಗಳ ಮಂಡಳಿಗೆ ಒಬ್ಬೊಬ್ಬ ಗವರ್ನರನ್ನು ಪ್ರತಿಯೊಂದು ಸದಸ್ಯ ರಾಷ್ಟ್ರವು ಗೊತ್ತುಮಾಡುತ್ತದೆ. ಆಡಳಿತ 12 ಮಂದಿ ಕಾರ್ಯನಿರ್ವಾಹಕ ನಿರ್ದೇಶಕರಿಗೆ ವಹಿಸಲ್ಪಟ್ಟಿದೆ. ಇವರಲ್ಲಿ ಅತ್ಯಧಿಕ ಪ್ರಮಾಣದ ಬಂಡವಾಳ ಹೊಂದಿರುವ 5 ಪ್ರತಿನಿಧಿಗಳು ಇದ್ದು, ಮಿಕ್ಕ ಸ್ಥಾನಗಳು ಚುನಾವಣೆಯ ಮೂಲಕ ಭರ್ತಿಯಾಗುತ್ತವೆ. ಸಂಸ್ಥೆಯ ಧ್ಯೇಯಗಳು ಹೀಗಿವೆ:

1. ಅಂತರರಾಷ್ಟ್ರೀಯ ಆರ್ಥಿಕ ಸಮಸ್ಯೆಗಳ ಬಗ್ಗೆ ಸಲಹೆ ಮತ್ತು ಸಹೋದ್ಯಮಗಳ ಬಗ್ಗೆ ವಿವರಗಳನ್ನು ಒದಗಿಸುವ ಒಂದು ಸ್ಥಿರ ಸಂಸ್ಥೆಯ ಮೂಲಕ ಅಂತರರಾಷ್ಟ್ರೀಯ ಸಹಕಾರವನ್ನು ಅಭಿವೃದ್ಧಿಪಡಿಸುವುದು.

2. ಅಂತರರಾಷ್ಟ್ರೀಯ ವ್ಯಾಪಾರದ ಅಭಿವೃದ್ಧಿ ಮತ್ತು ಸಮರೂಪದ ಬೆಳವಣಿಗೆಗೆ ಅನುಕೂಲ ಮಾಡಿಕೊಡುವುದು.

3. ವಿನಿಮಯ ಸ್ಥಿರತ್ವವನ್ನು ಬಲಪಡಿಸುವುದು. ಪ್ರತಿನಿಧಿಗಳಲ್ಲಿ ಒಂದು ಕ್ರಮಬದ್ಧ ವಿನಿಮಯ ವ್ಯವಸ್ಥೆಯನ್ನು ನಡೆಸಿಕೊಂಡು ಹೋಗುವುದು ಮತ್ತು ವಿನಿಮಯದ ಏರಿಳಿತದ ಸ್ಪರ್ಧೆಯನ್ನು ತಡೆಯುವುದು.

4. ಚಾಲ್ತಿ ವ್ಯವಹಾರಗಳಲ್ಲಿನ ಕೊಡುಗೆಯ ವಿವಿಧ ಪಾಶ್ರ್ವ ವ್ಯವಸ್ಥೆಯ ಸ್ಥಾಪನೆಗೆ ಅಂದರೆ ಸಾಮಗ್ರಿ ಮತ್ತು ಕೆಲಸಗಳ ಚಾಲ್ತಿ ರಫ್ತು ಮತ್ತು ಆಮದುಗಳ ವಿಚಾರವಾಗಿ ಅನುಕೂಲ ಮಾಡಿಕೊಡುವುದು.

5. ಸಾಕಷ್ಟು ಆಧಾರಗಳ ಮೇಲೆ ಧನ ಸಂಸ್ಥೆಯ ನಿಧಿ ಸದಸ್ಯ ರಾಷ್ಟ್ರಗಳಿಗೆ ದೊರೆಯುವಂತೆ ಭರವಸೆ ನೀಡಿ, ಅವು ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಏಳಿಗೆಗೆ ಭಂಗತರುವ ವಿನಾಶಕಾರಿ ಕ್ರಮಗಳನ್ನು ಅವಲಂಬಿಸದಂತೆ ತಡೆಹಾಕಿ, ಅವರು ಕೊಡಬೇಕಾದ ಸಾಲದ ಬಾಕಿಯನ್ನು ಸೂಕ್ತಮಾರ್ಗದಲ್ಲಿ ಹಿಂತಿರುಗಿಸುವ ಒಂದು ಅವಕಾಶ ಮಾಡಿಕೊಡುವುದು.

6. ಮೇಲಿನ ಅಂಶಗಳಿಗೆ ಸಂಬಂಧಪಟ್ಟಂತೆ ಸದಸ್ಯ ರಾಷ್ಟ್ರಗಳು ಕೊಡಬೇಕಾದ ಅಂತರರಾಷ್ಟ್ರೀಯ ಬಾಕಿಯಲ್ಲಿನ ಅಸಮಸ್ಥಿತಿಯ ಪರಿಮಾಣವನ್ನು ತಗ್ಗಿಸಿ ಸಾಲ ತೀರುವೆಯ ಕಾಲವನ್ನು ಕಡಿಮೆ ಮಾಡುವುದು.

ಈ ಧನ ಸಂಸ್ಥೆಗೆ ಪ್ರತಿಯೊಂದು ಸದಸ್ಯ ರಾಷ್ಟ್ರವೂ ತಾನು ಕೊಡಬೇಕಾದ ಪ್ರಮಾಣದಲ್ಲಿ ಕೆಲವು ಭಾಗವನ್ನು ಚಿನ್ನದ ರೂಪವಾಗಿಯೂ, ಮತ್ತೆ ಕೆಲವು ಭಾಗವನ್ನು ತನ್ನದೇ ಆದ ನಾಣ್ಯದ ರೂಪದಲ್ಲೂ ಕೊಡಬೇಕಾಗುತ್ತದೆ. ಪ್ರತಿ ರಾಷ್ಟ್ರಕ್ಕೂ ಒಂದು ಪ್ರಮಾಣವನ್ನು ನಿರ್ಧರಿಸಲಾಗಿದೆ. ಅದು ಕೊಡಬೇಕಾದ ಹಣ ಈ ಪ್ರಮಾಣಕ್ಕೆ ಸಮನಾಗಿರುತ್ತದೆ. ಪ್ರತಿಯೊಂದು ಸದಸ್ಯ ರಾಷ್ಟ್ರವು ತನ್ನ ಚಂದಹಣದ 25% ಭಾಗವನ್ನು ಚಿನ್ನ ಅಥವಾ ಸಂಯುಕ್ತ ಸಂಸ್ಥಾನದ ಡಾಲರ್ ರೂಪದಲ್ಲಿ ಮತ್ತು ಉಳಿದ ಭಾಗವನ್ನು ತನ್ನದೇ ಆದ ನಾಣ್ಯದ ರೂಪದಲ್ಲಿ ಕೊಡುತ್ತದೆ. ಧನ ಸಂಸ್ಥೆ ಪಡೆಯುವ ಚಿನ್ನವನ್ನು ನ್ಯೂಯಾರ್ಕ್, ಲಂಡನ್, ಪ್ಯಾರಿಸ್, ಮುಂಬಯಿ ಮತ್ತು ಷಾಂಗೈಗಳಲ್ಲಿ ಇಟ್ಟಿರಲಾಗುತ್ತದೆ. ಈ ಧನಸಂಸ್ಥೆಯ ಹೆಸರಿನಲ್ಲಿ ಉಳಿದ ನಾಣ್ಯ ರೂಪದ ಹಣವನ್ನು ಸದಸ್ಯ ರಾಷ್ಟ್ರಗಳ ಕೇಂದ್ರ ಬ್ಯಾಂಕುಗಳಲ್ಲಿ ಇಟ್ಟಿರಲಾಗಿದ್ದು ಅವಶ್ಯವಿದ್ದಾಗ ಆಯಾ ರಾಷ್ಟ್ರಗಳು ತಮ್ಮ ಬ್ಯಾಂಕುಗಳಿಂದಲೇ ಹಣ ಪಡೆಯುವ ಅವಕಾಶವಿದೆ.

ಬ್ರೆಟನ್‍ವುಡ್ಸ್ ಸಮಾವೇಶದಲ್ಲಿ ಪ್ರತಿನಿಧಿಸಿದ ಮೂಲ ಸದಸ್ಯ ರಾಷ್ಟ್ರಗಳಲ್ಲಿ ಭಾರತವೂ ಒಂದು. ಇದು ಈ ಧನಸಂಸ್ಥೆಯಿಂದ ಅತ್ಯಂತ ಹೆಚ್ಚಿನ ಪ್ರಮಾಣದ ನೆರವನ್ನು ಪಡೆದಿರುವ 5ನೇ ರಾಷ್ಟ್ರವಾಗಿದ್ದು, ಕಾರ್ಯನಿರ್ವಾಹಕ ನಿರ್ದೇಶಕ ಮಂಡಳಿಗೆ ಒಬ್ಬ ನಿರ್ದೇಶಕನನ್ನು ಗೊತ್ತುಮಾಡುವ ಹಕ್ಕನ್ನು ಪಡೆದಿದೆ. ಈ ಧನ ಸಂಸ್ಥೆಯ ಉದ್ದೇಶಗಳು ಮತ್ತು ಕಾರ್ಯಗಳಿಗೆ ಭಾರತ ಇಟ್ಟಿರುವ ದಾಖಲೆ ಬಹಳ ಉತ್ತಮವಾಗಿದೆ. ಈ ಧನಸಂಸ್ಥೆ ನೀಡುವ ಸಾಲದ ಅವಕಾಶಗಳನ್ನು ಭಾರತ ಚೆನ್ನಾಗಿ ಬಳಸಿಕೊಂಡಿದೆ. ಇದುವರೆಗೆ ಧನಸಂಸ್ಥೆಯಿಂದ ಹೆಚ್ಚಿಗೆ ಸಹಾಯ ಪಡೆದಿರುವ ದೇಶಗಳಲ್ಲಿ ಬ್ರಿಟನ್ ಮೊದಲನೆಯದಾದರೆ, ಭಾರತವು ಎರಡನೆಯದಾಗಿತ್ತು. 1965ರ ಅಕ್ಟೋಬರ್ ಅಂತ್ಯದ ಹೊತ್ತಿಗೆ ಭಾರತ ಅತ್ಯಂತ ದೊಡ್ಡ ರಾಷ್ಟ್ರವಾಗಿದ್ದು ಅದು ಪಡೆದ ಒಟ್ಟು ಸಹಾಯದ ಮೊತ್ತ 775 ದಶಲಕ್ಷ ಡಾಲರುಗಳಷ್ಟಿತ್ತು. ಈ ಮೊತ್ತ ಇತ್ತೀಚಿನ ಸಾಮಾನ್ಯ ಹೆಚ್ಚುಗಾರಿಕೆಯ ಸಲುವಾಗಿ ಮತ್ತಷ್ಟು ದಶಲಕ್ಷ ಡಾಲರುಗಳಿಗೆ ಏರಿದೆ.

ಅಂತರರಾಷ್ಟ್ರೀಯ ದ್ರವ್ಯನಿಧಿಯ ರಚನೆಯಲ್ಲಿ ಕೆಲವು ಕೊರತೆಗಳೂ ಮತ್ತು ಅಪೂರ್ಣತೆಗಳೂ ಇದ್ದರೂ ಇದು ಅಂತರರಾಷ್ಟ್ರೀಯ ಆರ್ಥಿಕ ಚೌಕಟ್ಟಿನ ಮುಖ್ಯ ಕಂಬವಾಗಿದೆ ಎಂದು ಧಾರಾಳವಾಗಿ ಹೇಳಬಹುದು.