ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಗಸೆಎಣ್ಣೆ
ಅಗಸೆಎಣ್ಣೆ
[ಸಂಪಾದಿಸಿ]ಅಗಸೆಯ (ನಾರಗಸೆಯ) ಬೀಜದಿಂದ ಪಡೆಯಲಾಗುವ ಉಪಯುಕ್ತವಾದ ಎಣ್ಣೆ (ಲಿನ್ಸೀಡ್ ಆಯಿಲ್). ಇದು ಒಂದು ಬಗೆಯ ಎಣ್ಣೆ, ಮೆರುಗು ಎಣ್ಣೆ. ನಾರಗಸೆಯ ಉತ್ಪನ್ನಗಳಲ್ಲಿ ಇದೇ ಅತ್ಯಂತ ಮುಖ್ಯವಾದುದು. ಈ ಗಿಡವನ್ನು ಸಮಶೀತೋಷ್ಣ ಪ್ರದೇಶಗಳಲ್ಲಿ ನಾರು, ಎಣ್ಣೆಗಳೆರಡರ ಸಲುವಾಗಿಯೂ ಟರ್ಕಿ, ಆಫ್ಘಾನಿಸ್ತಾನ ಮತ್ತು ಭಾರತಗಳಲ್ಲಿ ಬರಿ ಎಣ್ಣೆಗಾಗಿಯೂ ಬೆಳೆಯುತ್ತಾರೆ. ಭಾರತದಲ್ಲಿ ಮೂರು ನಾಲ್ಕು ಜಾತಿಯ ನಾರಗಸೆ ಗಿಡಗಳು ಬೆಳೆಯುತ್ತವೆ. ಇವುಗಳಲ್ಲಿ ಲಿನಮ್ ಯುಸಿಟಾಟಿಸಿಮಮ್ ಎಂಬ ಬಗೆಯನ್ನು ಬಹುವಾಗಿ ಬೆಳೆಯುತ್ತಾರೆ. ಇದರಲ್ಲಿ ಶೇ88. ಭಾಗ ಎಣ್ಣೆ ತೆಗೆಯಲು ಉಪಯೋಗವಾಗುತ್ತದೆ.
ಬೀಜಗಳನ್ನು ಮುಂಚೆ ನಯವಾಗಿ ಅರೆದು, ಎತ್ತಿನ ಗಾಣಗಳಿಂದ ಅಥವಾ ಯಂತ್ರಶಕ್ತಿಯಿಂದ ನಡೆಯುವ ಉರುಳೆಯಂತ್ರಗಳಿಂದ ಎಣ್ಣೆ ತೆಗೆಯುತ್ತಾರೆ. ಹಸಿ ಬೀಜದಿಂದಾಗಲೀ ಬೀಜವನ್ನು ಬಿಸಿಮಾಡಿಯಾಗಲಿ ಎಣ್ಣೆ ತೆಗೆಯಬಹುದು. ಬೀಜದ ಪುಡಿಯನ್ನು 16೦೦ ಉಷ್ಣತೆಯಲ್ಲಿ ಕಾಯಿಸಿದರೆ ಹೆಚ್ಚು ಎಣ್ಣೆ (ಬೀಜದ ತೂಕದ ಶೇ.33 ಭಾಗ) ಸಿಗುತ್ತದೆ. ಬೀಜದ ತೂಕದ ಶೇ.23 - ಶೇ.36ವರೆಗೆ ಎಣ್ಣೆ ಸಿಗಬಹುದು. ಭಾರತದಲ್ಲಿ ಸರಾಸರಿ ಉತ್ಪತ್ತಿ ಶೇ.33. ಹೀಗೆ ತೆಗೆದ ಎಣ್ಣೆಯನ್ನು ಶೇಖರಿಸಿಟ್ಟಿದ್ದರೆ ಅದರಲ್ಲಿರುವ ತೇವ ಮತ್ತು ಅಂಟು ಪದಾರ್ಥಗಳು ತಳದಲ್ಲಿ ನಿಲ್ಲುತ್ತವೆ. ಹಲವು ವರ್ಷಗಳು ಹೀಗೆ ಇಟ್ಟ ಎಣ್ಣೆಗೆ ಟ್ಯಾಂಕ್್ಡಆಯಿಲ್ ಎನ್ನುತ್ತಾರೆ. ವಾರ್ನಿಷ್ ತಯಾರಿಕೆಯಲ್ಲಿ ಇದಕ್ಕೆ ಬಹು ಬೆಲೆಯಿದೆ, ಆದರೆ ಈ ರೀತಿಯ ಶುದ್ಧೀಕರಣ ಬಹು ನಿಧಾನ. ಆದ್ದರಿಂದ ಸಾಮಾನ್ಯವಾಗಿ ಕಚ್ಚಾ ಎಣ್ಣೆಗೆ ಶೇ.1 ಅಥವಾ ಶೇ.2 ಭಾಗದಷ್ಟು ಪ್ರಬಲ ಸಲ್ಫ್ಯೂರಿಕ್ ಆಮ್ಲವನ್ನು ಸೇರಿಸುತ್ತಾರೆ. ಕಶ್ಮಲಗಳ ಬಹುಭಾಗ ಇದರಿಂದ ಕರಿಕಾಗಿ ಕೆಳಗೆ ನಿಲ್ಲುತ್ತದೆ. ಚಿತ್ರಕಾರರ ಎಣ್ಣೆಯನ್ನು ತಯಾರಿಸಲು ಈ ರೀತಿ ಶುದ್ಧಿಮಾಡಿದ ಎಣ್ಣೆಯನ್ನು ಆಳವಿಲ್ಲದ ಅಗಲವಾದ ತಟ್ಟೆಗಳಲ್ಲಿ ಹಾಕಿ ಗಾಜಿನ ಮುಚ್ಚಳಗಳಿಂದ ಮುಚ್ಚಿ ಬಿಸಿಲಿಗೆ ಇಡುತ್ತಾರೆ. ಇದರಿಂದ ಬಂದ ಎಣ್ಣೆ ಅತ್ಯಂತ ಪರಿಶುದ್ಧವಾಗಿರುತ್ತದೆ. ಇನ್ನೂ ಅನೇಕ ಶುದ್ಧೀಕರಣ ವಿಧಾನಗಳನ್ನು ಕಂಡುಹಿಡಿದಿದ್ದರೂ ಹಳೆಯ ವಿಧಾನಗಳೇ ಹೆಚ್ಚಾಗಿ ಬಳಕೆಯಲ್ಲಿವೆ.
ಎಣ್ಣೆಗೆ ಫುಲ್ಲರ್್ಸ ಆರ್ತ್ ಅಥವಾ ಚುರುಕುಗೊಳಿಸಿದ ಇಂಗಾಲವನ್ನು ಹಾಕಿ ಶೋಧಿಸಿದರೆ ಬಣ್ಣ ಉತ್ತಮಗೊಳ್ಳುತ್ತದೆ. ಅಲೋಹ ಪಾತ್ರೆಗಳಲ್ಲಿ ಹಾಕಿ ಗಾಳಿ ಬೆಳಕುಗಳ ಸಂಪರ್ಕವಿಲ್ಲದಂತೆ ಇಟ್ಟರೆ ಎಣ್ಣೆ ಬಹುಕಾಲ ಕೆಡದೆ ನಿಲ್ಲುತ್ತದೆ. ಈ ಎಣ್ಣೆಯ ಮುಖ್ಯ ಉಪಯೋಗ ವಾರ್ನಿಷ್ ಮತ್ತು ಬಣ್ಣಗಳ ತಯಾರಿಕೆಯಲ್ಲಿ. ಮೆರುಗು ಎಣ್ಣೆ ಅಥವಾ ಆರುವ ಎಣ್ಣೆಗಳಲ್ಲೆಲ್ಲಾ ಇದೇ ಅತಿ ಮುಖ್ಯವಾದುದು. ಲಿನೋಲಿಯಂ ಮತ್ತು ಮೇಣಗಪಟದ ಬಟ್ಟೆ, ಮುದ್ರಣ ಮತ್ತು ಲಿಥೋಗ್ರಫಿಂ ಮಸಿಗಳು, ಮೆತುಸಾಬೂನು, ಪಾಲಿಷ್ಗಳು, ಬಾಣಬಿರುಸುಗಳು-ಇವುಗಳ ತಯಾರಿಕೆಯಲ್ಲಿಯೂ ಚರ್ಮ ನಯ ಮಾಡುವಾಗಲೂ ಸೆಣಬಿನ ನೇಯ್ಗೆಯ ಬಾಬಿನ್ಗಳನ್ನೂ ಕ್ರಿಕೆಟ್ ಬ್ಯಾಟುಗಳನ್ನು ಹದ ಮಾಡುವುದಕ್ಕೂ ಸ್ವಚ್ಛ ಎಣ್ಣೆ ಉಪಯೋಗವಾಗುತ್ತದೆ. ಹಸಿಬೀಜದಿಂದ ತೆಗೆದ ಎಣ್ಣೆಯನ್ನು ಪೂರ್ವ ಯುರೋಪಿನಲ್ಲಿಯೂ ಕಾಶ್ಮೀರ, ಬಿಹಾರ್, ಮಧ್ಯಪ್ರದೇಶ, ಪಂಜಾಬ್ ಮತ್ತು ಉತ್ತರಪ್ರದೇಶಗಳಲ್ಲಿಯೂ ಆಹಾರದಲ್ಲಿ ಬಳಸುತ್ತಾರೆ. ಚರ್ಮದ ಮೇಲೆ ಔಷಧವಾಗಿ ಹಚ್ಚುವುದಕ್ಕೂ ಕುದುರೆಗಳಿಗೆ ಭೇದಿಔಷಧವಾಗಿಯೂ ಇದನ್ನು ಉಪಯೋಗಿಸುವುದುಂಟು. ಎಣ್ಣೆ ತೆಗೆದ ಅನಂತರ ಉಳಿವ ಹಿಂಡಿ ದನಗಳಿಗೆ ಒಳ್ಳೆಯ ಮೇವು.