ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಖಿಲಭಾರತ ವೈದ್ಯವಿಜ್ಞಾನಗಳ ಸಂಸ್ಥೆ

ವಿಕಿಸೋರ್ಸ್ದಿಂದ

ಅಖಿಲಭಾರತ ವೈದ್ಯವಿಜ್ಞಾನಗಳ ಸಂಸ್ಥೆ ದೇಶಕ್ಕೆ ಒಂದು ಪ್ರಗತಿಪರ, ವೈದ್ಯಶಿಕ್ಷಣಕ್ಕೆ ಮಾದರಿ ಎನಿಸಿರುವ, ಒಂದು ಕೇಂದ್ರವನ್ನು ಸ್ಥಾಪಿಸಬೇಕೆಂದು ಭೋರ್ ಸಮಿತಿ (1946) ಸಲಹೆ ಕೊಟ್ಟಿತ್ತು. ಭಾರತ ಸ್ವತಂತ್ರವಾದ ಮೇಲೆ, ನ್ಯೂಜಿûಲೆಂಡ್ ಸರ್ಕಾರ ಕೊಲಂಬೊ ಯೋಜನೆಯ ಮೂಲಕ ದತ್ತಿಯಾಗಿ ಕೊಟ್ಟ ಹತ್ತುಲಕ್ಷ ಪೌಂಡುಗಳನ್ನು ಭಾರತ ಸರ್ಕಾರ ಸ್ವೀಕರಿಸಿದಾಗ (1956) ಈ ಸಂಸ್ಥೆಯ (ಆಲ್ ಇಂಡಿಯ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್) ಯೋಜನೆ ಮೊಳೆಯಿತು. ಭಾರತದ ಲೋಕಸಭೆ ಅದೇ ವರ್ಷದ ಶಾಸನದಂತೆ, ಸ್ವಯಂ ಅಧಿಕಾರದ ಸಂಸ್ಥೆಯೊಂದು ನಾಡಿಗೇ ಪ್ರಧಾನ ವಿಶ್ವವಿದ್ಯಾನಿಲಯವಾಯಿತು. ಭಾರತದ ವೈದ್ಯರು ಪರದೇಶಗಳಿಗೆ ಹೆಚ್ಚಿನ ಕಲಿಕೆಗಾಗಿ ಹೋಗುವುದನ್ನು ತಪ್ಪಿಸಿ, ಮಹೋನ್ನತ ಮಟ್ಟದ ಸ್ನಾತಕೋತ್ತರ ವೈದ್ಯವಿದ್ಯೆ, ಶಿಕ್ಷಕರ ಶಿಕ್ಷಣ, ಸಂಶೋಧನೆ, ವೈದ್ಯಚಿಕಿತ್ಸೆಗಳಿಗೆ ಇಲ್ಲೇ ಎಲ್ಲ ಅವಕಾಶಗಳನ್ನು ಕಲ್ಪಿಸುವುದೇ ಈ ಸಂಸ್ಥೆಯ ಮುಖ್ಯ ಉದ್ದೇಶ. ಶಿಕ್ಷಕರ ಶಿಕ್ಷಣಕ್ಕಾಗಿ ವೈದ್ಯವಿದ್ಯಾರ್ಥಿಗಳ ಕಾಲೇಜು ವಿಭಾಗದಲ್ಲಿ ಪ್ರತಿವರ್ಷವೂ ಭಾರತದ ಎಲ್ಲೆಡೆಗಳಿಂದಲೂ ಹೊರನಾಡುಗಳಿಂದಲೂ ಆಯ್ಕೆಯಾಗಿ ಬರುವ, ಕೇವಲ 50 ವಿದ್ಯಾರ್ಥಿಗಳನ್ನು ಮಾತ್ರ ಸೇರಿಸಿಕೊಳ್ಳಲಾಗುವುದು.

ದಕ್ಷಿಣ ದೆಹಲಿಯಲ್ಲಿ 150 ಎಕರೆಯ ಹರವಿನಲ್ಲಿರುವ ವೈದ್ಯಶಿಕ್ಷಣ ಕೇಂದ್ರವಿದು. ವೈದ್ಯಶಿಕ್ಷಣದ ಎಲ್ಲ ವಿಭಾಗಗಳೂ ಇಲ್ಲಿದ್ದು, ಸಂಶೋಧನೆಗೆ ಪ್ರಪಂಚದಲ್ಲೇ ಹೆಸರಾಗಿದೆ. ಹೊರ ರೋಗಿಗಳ ಚಿಕಿತ್ಸೆಗಾಗಿ ಚೆನ್ನಾಗಿ ವ್ಯವಸ್ಥೆ ಇರುವಂತೆ, 650 ಹಾಸಿಗೆಗಳ ಆಸ್ಪತ್ರೆ ಒಂದಿದೆ. ಆಸ್ಪತ್ರೆ ದಾದಿಯರ ಕಾಲೇಜೂ ಇದೆ. ವಿದ್ಯಾರ್ಥಿಗಳು, ಶಿಕ್ಷಕರು, ಕೆಲಸಗಾರರು, ಎಲ್ಲರಿಗೂ ತಕ್ಕ ವಸತಿಗಳಿವೆ. ಪ್ರಾಧ್ಯಾಪಕರು ಸದಸ್ಯರಾಗಿರುವ ಸಮಿತಿಯೊಂದು ಆಡಳಿತ ನಡೆಸುತ್ತದೆ. ಅಮೆರಿಕ ಗೋದಿ ನಿಧಿಯಿಂದ (ಪಿ.ಎಲ್.-180) 290 ಲಕ್ಷ ರೂಪಾಯಿಗಳೂ ವಿದೇಶೀವಿನಿಮಯ ಹಣಕ್ಕಾಗಿ ರಾಕ್ಫೆಲರ್ ಪ್ರತಿಷ್ಠಾನದಿಂದ ಹತ್ತು ಲಕ್ಷ ಪೌಂಡುಗಳ ದತ್ತಿ ದಯಪಾಲಿಸಿದೆ. ನ್ಯೂಜಿಲೆಂಡ್ ಸರ್ಕಾರ ಒಂದು ಲಕ್ಷ ಪೌಂಡುಗಳ ದತ್ತಿ ನೀಡಿದೆ. ಸಂಸ್ಥೆಯ ಒಟ್ಟು ಯೋಜನೆಯ ಖರ್ಚು 9 ಕೋಟಿ ರೂಪಾಯಿಗಳು. ವರುಷದ ಖರ್ಚು ಒಂದು ಕೋಟಿ ರೂಪಾಯಿಗಳು.