ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಭಾರತೀಯ ಸಂವಿಧಾನ

ವಿಕಿಸೋರ್ಸ್ದಿಂದ

ಭಾರತೀಯ ಸಂವಿಧಾನ

ಭಾರತದ್ದು ಲಿಖಿತ ಹಾಗೂ ಅಧಿನಿಯಮಿತ ಸಂವಿಧಾನ. ಅದು 1949 ನವೆಂಬರ್ 26ರಂದು ಸಂವಿಧಾನ ಸಭೆಯಿಂದ ಅಂಗೀಕೃತವಾಗಿ 1950 ಜನವರಿ 26ರಂದು ಆಚರಣೆಗೆ ಬಂದಿತು. ನ್ಯಾಯ, ಸ್ವಾತಂತ್ರ್ಯ ಸಮತೆ ಮತ್ತು ಭ್ರಾತೃಭಾವಗಳ ಅತ್ಯುಚ್ಚ ಆದರ್ಶ ಮತ್ತು ಧ್ಯೇಯ ಒಳಗೊಂಡಿರುವ ಭಾರತದ ಸಂವಿಧಾನ ಪ್ರಸ್ತಾವನೆ ಮೂಲದಲ್ಲಿ ಕೆಳಗಿನಂತಿತ್ತು:

ಭಾರತದ ಜನಗಳಾದ ನಾವು ಭಾರತವನ್ನು ಒಂದು ಸಂಪೂರ್ಣ ಪ್ರಭುತ್ವ ಸಂಪನ್ನ ಲೋಕತಂತ್ರಾತ್ಮಕ ಗಣರಾಜ್ಯವಾಗಿ ವ್ಯವಸ್ಥೆಗೊಳಿಸುವುದಕ್ಕಾಗಿಯೂ ಭಾರತದ ಸಮಸ್ತ ನಾಗರಿಕರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ, ನ್ಯಾಯ ವಿಚಾರ, ಅಭಿವ್ಯಕ್ತಿ, ವಿಶ್ವಾಸ, ಧರ್ಮೋಪಾಸನಾಸ್ವಾತಂತ್ರ್ಯ ಹಾಗೂ ಸ್ಥಾನಮಾನ ಮತ್ತು ಅವಕಾಶಸಮತೆ ದೊರೆಯುಂತೆ ಮಾಡುವುದಕ್ಕಾಗಿಯೂ ವ್ಯಕ್ತಿಗೌರವ ರಾಷ್ಟ್ರದ ಏಕತೆ ಸುನಿಶ್ಚಿತವಾಗಿ ನೆಲೆಗೊಳಿಸುವಂಥ ಬಂಧು ಭಾವನೆ ಇವನ್ನು ಸರ್ವರಲ್ಲಿ ವೃದ್ಧಿಗೊಳಿಸುವುಕ್ಕಾಗಿಯೂ ದೃಢಸಂಕಲ್ಪಮಾಡಿದವರಾಗಿ ನಮ್ಮ ಸಂವಿಧಾನ ಸಭೆಯಲ್ಲಿ ಈ 1949ನೆಯ ಇಸವಿ ನವೆಂಬರ್ ತಿಂಗಳು ಇಪ್ಪತ್ತಾರನೆಯ ತಾರೀಕಾದ ಇಂದಿನ ದಿವಸ ಈ ಮೂಲಕ ಈ ಸಂವಿಧಾನವನ್ನು ಅಂಗೀಕರಿಸಿ ಅಧಿನಿಯಮಿತಗೊಳಿಸಿ ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ.

1976ರಲ್ಲಿ ಆದ 42ನೆಯ ತಿದ್ದುಪಡಿಯಿಂದ ಪ್ರಸ್ತಾವನೆಯಲ್ಲಿ 'ಸಂಪೂರ್ಣ ಪ್ರಭುತ್ವಸಂಪನ್ನ ಲೋಕತಂತ್ರಾತ್ಮಕ ಗಣರಾಜ್ಯ ಎಂಬ ವಾಕ್ಯಭಾಗದ ಸ್ಥಾನದಲ್ಲಿ 'ಸಂಪೂರ್ಣ ಪ್ರಭುತ್ವಸಂಪನ್ನ ಸಮಾಜವಾದಿಧರ್ಮಾತೀತ ಲೋಕ ತಂತ್ರಾತ್ಮಕ ಗಣರಾಜ್ಯ ಎಂಬವಾಕ್ಯ ಭಾಗವನ್ನೂ 'ರಾಷ್ಟ್ರದ ಏಕತೆ ಎಂಬ ಪದಗಳ ಸ್ಥಾನದಲ್ಲಿ 'ರಾಷ್ಟ್ರದ ಏಕತೆ ಮತ್ತು ಅಖಂಡತೆ ಎಂಬ ಪದಗಳನ್ನೂ ಸೇರಿಸಲಾಗಿದೆ. ಪ್ರಸ್ತಾವನೆಯ ಮೊದಲ ಸಾಲು ಭಾರತ ಗಣರಾಜ್ಯದಲ್ಲಿ ರಾಜಕೀಯ ಅಧಿಕಾರಿ ಜನತೆಯಿಂದ ಪ್ರಾಪ್ತವಾಗುತ್ತದೆಂಬುದನ್ನು ಸ್ಪಷ್ಟೀಕರಿಸುತ್ತದೆ. ಸಂಪೂರ್ಣಪ್ರಭುತ್ವಸಂಪನ್ನ ಎಂಬ ಪದಗಳು ಭಾರತ ಎಲ್ಲ ಬಾಹ್ಯ ಹತೋಟಿಗಳಿಂದ ಮುಕ್ತವಾಗಿರಬೇಕೆಂಬುದನ್ನೂ 'ಸಮಾಜವಾದಿ ಎಂಬ ಪದ ಸಾಮಾಜಿಕಾರ್ಥಿಕ ಕ್ರಾಂತಿಗಾಗಿ ಪರಿಶ್ರಮಿಸಬೇಕೆನ್ನುವ ರಾಷ್ಟ್ರದ ಸಂಕಲ್ಪವನ್ನೂ ಗಣರಾಜ್ಯ ಎಂಬ ಪದ ಭಾರತದಲ್ಲಿ ಯಾವ ತರಹದ ರಾಜಪ್ರಭುತ್ವ ಪದ್ಧತಿಗೂ ಎಡೆಯಿಲ್ಲವೆಂಬುದನ್ನೂ ವಿಶದೀಕರಿಸುತ್ತವೆ. ಭಾರತ ಲೋಕತಂತ್ರಾತ್ಮಕ ದೇಶ. ಅಂದರೆ ಪ್ರಜಾಪ್ರತಿನಿಧಿಗಳಿಂದ ಆಳಲ್ಪಡಬೇಕಾದ ದೇಶ. ಅಖಂಡತೆ ಎಂಬ ಹೊಸತಾಗಿ ಸೇರಿಸಲಾಗಿರುವ ಪದ ಪ್ರತ್ಯೇಕತಾವಾದಿ ಪ್ರವೃತ್ತಿಗಳನ್ನು ಹತ್ತಿಕ್ಕಿ ಪ್ರಜೆಗಳು ಭಾರತದ ಪ್ರತಿಯೊಂದು ಭಾಗವೂ ತಮ್ಮದೇ ಮನೆಯೆಂದು ಮನಗಾಣುವಂತಾಗಬೇಕೆಂಬುದನ್ನು ಮಾಡುವುದಕ್ಕೆ ರಾಷ್ಟ್ರದ ನಿರ್ಧಾರವನ್ನು ಸೂಚಿಸುತ್ತದೆ. ಭಾರತದಲ್ಲಿ ಯಾವ ಬಗೆಯ ಧರ್ಮಾಂಧತೆಗೂ ಎಡೆಯಿರುವುದಿಲ್ಲ. ಭಾರತ ಸಾರ್ವತ್ರಿಕ ವಯಸ್ಕ ಮತದಾನದ ಹಕ್ಕುಗಳ ತಳಹದಿಯ ಮೇಲೆ ಚುನಾಯಿತ ಸಂಸದೀಯ ಪದ್ಧತಿಯ ಸರ್ಕಾರ ಹೊಂದಿರುವ ಸಮಾಜವಾದಿ, ಧರ್ಮಾಂಧತಾರಹಿತ, ಸಂಪೂರ್ಣ ಪ್ರಭುತ್ವಸಂಪನ್ನ ಪ್ರಜಾಸತ್ತಾತ್ಮಕ ಗಣರಾಜ್ಯ. ಸಂವಿಧಾನ ನಾಡಿನ ಮೂಲಕಟ್ಟಳೆ. ಸರ್ಕಾರದ ಪರರ್ವೋಚ್ಚ ಶಕ್ತಿಯ ಉಗ್ರಾಣ, ಅದು ಆ ಶಕ್ತಿಯ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಮೊದಲಾದ ವಿವಿಧ ಅಂಗಗಳ ರಚನೆ, ಕಾರ್ಯಾಚರಣೆ, ಅಧಿಕಾರ ಮತ್ತು ಪರಿಮಿತಿಗಳನ್ನೂ ಕೇಂದ್ರ ಮತ್ತು ರಾಜ್ಯಮಟ್ಟಗಳಲ್ಲಿ ಆ ಅಂಗಗಳ ಪರಸ್ಪರ ಸಂಬಂಧಗಳನ್ನೂ ಸರ್ಕಾರ ಹಾಗೂ ಪ್ರಜೆಗಳ ನಡುವಣ ನಂಟನ್ನೂ ವಿವರಿಸುತ್ತದೆ. (ಜಿ.ಕೆ.ಯು.)

ಇತಿಹಾಸ: ಪ್ರಾಚೀನ ಮತ್ತು ಮಧ್ಯಯುಗೀನ ಭಾರತದಲ್ಲಿ ಕೂಡ ಸ್ಥೂಲವಾದ ರಾಜಕೀಯ ಅಧಿಕಾರ ವ್ಯವಸ್ಥೆಯ ಮೂಲಸೂತ್ರವನ್ನು ಕಾಣಬಹುದು. ಆರ್ಯರ ಕಾಲದಲ್ಲಿ ರಾಜನ ಅಧಿಕಾರವನ್ನು ನಿಯಂತ್ರಿಸುವ ಸಭಾ ಮತ್ತು ಸಮಿತಿಗಳು ಸ್ಮøತಿಗಳಲ್ಲಿ ಉಲ್ಲೇಖವಾಗಿರುವ ರಾಜಾಧಿಕಾರದ ನಿಯಂತ್ರಣ, ಅನಂತರ ಪ್ರಚಲಿತವಿದ್ದ ಗಣತಂತ್ರಪದ್ಧತಿಗಳು, ಕೌಟಲ್ಯನ ಅರ್ಥಶಾಸ್ತ್ರದಲ್ಲಿ ಬರುವ ರಾಜಾಧಿಕಾರದ ನಿಯಮಗಳು, ಮೌರ್ಯರ ಕಾಲದಲ್ಲಿಯ ಕೇಂದ್ರೀಕೃತ ಆಡಳಿತ, ಗುಪ್ತರ ಯುಗದ ವಿಕೇಂದ್ರಿತ ವ್ಯವಸ್ಥೆ, ಚೋಳ, ವಿಜಯನಗರ ಮೊದಲಾದ ಸಾಮ್ರಾಜ್ಯಗಳಲ್ಲಿ ಕಂಡುಬರುವ ರಾಜಾಧಿಕಾರದ ನೀತಿಗಳು ಮತ್ತು ಸ್ಥಳೀಯ ಸರ್ಕಾರ ಪದ್ಧತಿಗಳು, ದೆಹಲಿ ಸುಲ್ತಾನರ ಮತ್ತು ಆಡಳಿತ ವ್ಯವಸ್ಥೆಗಳು ಇತಿಹಾಸದ ಪುಟಗಳಲ್ಲಿ ದಾಖಲಾದ ಅಂಶಗಳು ಇವೆಲ್ಲ ಪ್ರಜಾವಿರೋಧಿ ಸರ್ಕಾರಗಳಾಗಿರಲಿಲ್ಲ. ಆದರೆ ಅವು ಜನರಿಗೆ ಜವಾಬ್ದಾರಿಯಾದ ಗಣತಂತ್ರ ಸರ್ಕಾರಗಳಂತೂ ಆಗಿರಲಿಲ್ಲ (ಪ್ರಾಚೀನ ಗಣರಾಜ್ಯಗಳು ಇದಕ್ಕೆ ಅಪವಾದ).

ಆಧುನಿಕ ಭಾರತದಲ್ಲಿ ವ್ಯಾಪಾರ ಮತ್ತು ವಸಾಹತುವಾದಗಳ ಉದ್ದೇಶ ದಿಂದ ಬಂದ ಬ್ರಿಟಿಷರು 17, 18 ಮತ್ತು 19ನೆಯ ಶತಮಾನಗಳಲ್ಲಿ ತಮ್ಮ ವಸಾಹತನ್ನು ಸ್ಥಾಪಿಸಿ ಈಸ್ಟ್ ಇಂಡಿಯಾ ಕಂಪನಿ ಮೂಲಕ ರಾಜ್ಯವಿಸ್ತರಣೆ ಮಾಡುತ್ತಾ ಹೋದರು. ವಸಾಹತುವಾದ ಬಿಟ್ಟು ಜವಾಬ್ದಾರಿಯುತ ಗಣ ರಾಜ್ಯ ಸರ್ಕಾರ ಸ್ಥಾಪಿಸುವುದರಲ್ಲಿ ಬ್ರಿಟಿಷರಿಗೆ ಸ್ವಾಭಾವಿಕ ಆಸಕ್ತಿ ಏನೂ ಇರಲಿಲ್ಲ. ಆದರೂ ಕಂಪೆನಿ ಅಧಿಕಾರಿಗಳ ಅಧಿಕಾರ ದುರುಪಯೋಗ ತಡೆ ಗಟ್ಟಲು 18 ಮತ್ತು 19ನೆಯ ಶತಮಾನಗಳಲ್ಲಿ ಬ್ರಿಟಿಷ್ ಸಂಸತ್ತು ಶಾಸನಗಳನ್ನು ರಚಿಸಿತು. ಸಿಪಾಯಿದಂಗೆಯ (1857) ತರುವಾಯ ನೇರವಾಗಿ ಆಡಳಿತ ನಡೆಸತೊಡಗಿದ ಬ್ರಿಟಿಷ್ ಪ್ರಭುತ್ವ ರಾಷ್ಟ್ರೀಯ ಸ್ವಾತಂತ್ರ್ಯ ಆಂದೋಲನದ ಬಲವಂತಕ್ಕೆ ಮಣಿದು ಜನರ ಕೆಲವು ಹಕ್ಕುಗಳಿಗೆ ಮನ್ನಣೆ ಕೊಡುವುದು, ಶಾಸಕಾಂಗ ರಚಿಸಿ ಮಿತ ರೀತಿಯಲ್ಲಿ ಭಾರತೀಯರನ್ನು ಸರ್ಕಾರೀ ಕೆಲಸಗಳಲ್ಲಿ ಪಾಲುಗೊಳ್ಳುವಂತೆ ಮಾಡುವುದು, ಸಂಸ್ಥಾನಗಳ ಒಕ್ಕೂಟಕ್ಕೆ ಬುನಾದಿ ಹಾಕುವುದು, ನ್ಯಾಯಾಂಗ ಪದ್ಧತಿಯನ್ನು ವ್ಯವಸ್ಥೀಕರಿಸುವುದು, ಸಮಾನ ಕಾನೂನು ಕಟ್ಟಳೆಗಳನ್ನು ಕ್ರೋಡೀಕರಿಸುವುದು ಇತ್ಯಾದಿ ಕಾರ್ಯಗಳನ್ನು ಕೈಗೊಂಡಿತು. ಈ ರೀತಿ ಆಧುನಿಕ ಪ್ರಜಾಸತ್ತಾತ್ಮಕ ಮೌಲ್ಯಗಳ ಪರಿಚಯ ಮತ್ತು ಆವಶ್ಯಕತೆಗಳು ಭಾರತೀಯ ಜನರಿಗೆ ಮನದಟ್ಟಾಗಿ ಸ್ವತಂತ್ರ ಸಂವಿಧಾನದ ತಯಾರಿಕೆಯಲ್ಲಿ ಪ್ರಯೋಜನಕಾರಿಯಾದುವು.

ಮುಂದಿನ ಬೆಳೆವಣಿಗೆ ಈಗ ಇತಿಹಾಸದ ಪುಟಗಳಿಗೆ ಸೇರಿಹೋಗಿರುವ ಸಂಗತಿ. ಎರಡನೆಯ ಮಹಾಯುದ್ಧದ ವೇಳೆ ಮತ್ತು ತರುವಾಯ ಭಾರತದಲ್ಲಿ ತೀವ್ರ ರಾಜಕೀಯ ಚಟುವಟಿಕೆಗಳು ಕಂಡುಬಂದುವು. ಬ್ರಿಟಿಷ್ ಸರ್ಕಾರ ಯುದ್ಧ ಪರಿಸ್ಥಿತಿ ಎದುರಿಸಲು 1935ರ ಶಾಸನಕ್ಕೆ ತಂದ ತಿದ್ದುಪಡಿಯನ್ನು ಕಾಂಗ್ರೆಸ್ಸು ಬಲವಾಗಿ ವಿರೋಧಿಸಿತು (1939). 1940 ಆಗಸ್ಟ್ 8ರಂದು ಬ್ರಿಟಿಷ್ ಸರ್ಕಾರ ಭಾರತೀಯ ಪಕ್ಷಗಳ ಪ್ರತಿನಿಧಿಗಳನ್ನು ಗವರ್ನರನ ಕೌನ್ಸಿಲಿಗೆ ಸೇರ್ಪಡೆ ಮಾಡಿಕೊಳ್ಳುವಂತೆ ಘೋಷಿಸಿದ ಆಗಸ್ಟ್ ನೀಡಿಕೆಯನ್ನು ಕಾಂಗ್ರೆಸ್ ತಿರಸ್ಕರಿಸಿತು. 1942ರಲ್ಲಿ ಭಾರತಕ್ಕೆ ಬಂದ ಸರ್ ಸ್ಟಾಫರ್ಡ್‍ಕ್ರಿಪ್ಸ್ ನೇತೃತ್ವದ ರಾಯಭಾರ ಆಂತರಿಕ ಮತ್ತು ವಿದೇಶ ವ್ಯವಹಾರಗಳಲ್ಲಿ ಸಂಪೂರ್ಣ ಸ್ವಾಯತ್ತತೆಯುಳ್ಳ ಭಾರತೀಯ ಒಕ್ಕೂಟದಲ್ಲಿ ಸೇರಲು ಅಥವಾ ಸೇರದಿರಲು ರಾಜ್ಯಗಳಿಗೆ ನಿರ್ಧಾರದ ಅಧಿಕಾರ ಇವನ್ನು ಶಿಫಾರಸ್ಸು ಮಾಡಿತು. ತಾತ್ಕಾಲಿಕವಾಗಿ ಕೌನ್ಸಿಲಿಗೆ ಸೇರಲು ಕಾಂಗ್ರೆಸ್ ವರಿಷ್ಠರಿಗೆ ಬ್ರಿಟಿಷ್ ಸರ್ಕಾರ ಮಾಡಿದ ಮನವಿಯನ್ನು ಕಾಂಗ್ರೆಸ್ (ಕ್ವಿಟ್ ಇಂಡಿಯಾ) ನಿರ್ಣಯವನ್ನು ಕಾಂಗ್ರೆಸ್ 1942ರಲ್ಲಿ ಕೈಗೊಂಡು ದೇಶವ್ಯಾಪಿ ಚಳವಳಿ ನಡೆಸಿತು. ಮುಸ್ಲಿಮ್ ಲೀಗ್ ಪ್ರತ್ಯೇಕ ಮುಸ್ಲಿಮ್ ರಾಷ್ಟ್ರದ ಬೇಡಿಕೆಯನ್ನು ಮುಂದಿಟ್ಟಿತು. 1945ರಲ್ಲಿ ಸಿಮ್ಲಾದಲ್ಲಿ ಕರೆಯಲಾದ ಅಖಿಲ ಪಕ್ಷ ಪರಿಷತ್ತು ಗವರ್ನರನ ಕೌನ್ಸಿಲಿಗೆ ಭಾರತೀಯ ಸದಸ್ಯರನ್ನು ಚುನಾಯಿಸುವ ವಿಚಾರ ನಿರ್ಣಯಿಸುವುದರಲ್ಲಿ ಮತೀಯ ಭಾವನೆಗಳ ಬಿಕ್ಕಟ್ಟಿನಿಂದಾಗಿ ವಿಫಲವಾಯಿತು. 1946ರ ಕ್ಯಾಬಿನೆಟ್ ನಿಯೋಗದ ಯೋಜನೆ ರಾಷ್ಟ್ರ ವಿಭಜನೆಯ ತತ್ತ್ವವನ್ನು ತಳ್ಳಿಹಾಕಿ ಬ್ರಿಟಿಷ್ ಇಂಡಿಯಾ ಮತ್ತು ರಾಜ್ಯಗಳನ್ನು ಕೂಡಿಸಿಕೊಂಡ ಸ್ವತಂತ್ರ ಸಂಯುಕ್ತ ಭಾರತದ ಸ್ಥಾಪನೆ, ಬ್ರಿಟಿಷ್ ಇಂಡಿಯಾ ಮತ್ತು ರಾಜ್ಯಗಳ ಪ್ರತಿನಿಧಿಗಳು, ಕೇಂದ್ರ ಶಾಸಕಾಂಗ ಮತ್ತು ಕಾರ್ಯಾಂಗದಲ್ಲಿ ಭಾಗವಹಿಸುವಿಕೆ, ಒಕ್ಕೂಟಕ್ಕೆ ಕೊಡಲಾದ ಅಧಿಕಾರಿಗಳನ್ನು ಉಳಿದು ಇತರ ಎಲ್ಲ ಅಧಿಕಾರಗಳು ರಾಜ್ಯಕ್ಕೆ ಎಂಬ ತತ್ತ್ವ, ಮತೀಯ ಪ್ರಾತಿನಿಧ್ಯದ ಮುಂದುವರಿಕೆ ಸಂವಿಧಾನ ರಚನಾ ಸಮಿತಿಗೆ ಪರೋಕ್ಷ ಚುನಾವಣೆ ಮೂಲಕ ಆಯ್ಕೆ, ಅಂತಿಮವಾಗಿ ಬ್ರಿಟಿಷ್ ಸಾಮ್ರಾಜ್ಯದಿಂದ ಭಾರತೀಯ ಸಂವಿಧಾನ ರಚನಾ ಸಭೆಗೆ ಅಧಿಕಾರ ವರ್ಗಾವಣೆ-ಇವಿಷ್ಟನ್ನು ಶಿಫಾರಸ್ಸು ಮಾಡಿತು. ಸಂವಿಧಾನ ರಚನಾ ಸಭೆಗೆ ವಯಸ್ಕ ಮತದಾನ ಪದ್ಧತಿಯ ನೇರ ಚುನಾವಣೆ ವಿಳಂಬದಾಯಕವಾದ್ದರಿಂದ ಪ್ರತಿಯೊಂದು ಪ್ರಾಂತ್ಯಕ್ಕೂ ಆದರದರ ಜನಸಂಖ್ಯೆಯ ಆಧಾರದ ಮೇಲೆ ಸ್ಥೂಲವಾಗಿ ಹತ್ತು ಲಕ್ಷಕ್ಕೆ ಒಂದರಂತೆ ಸ್ಥಾನ ನಿರ್ಧಾರಮಾಡಿ ಎಲ್ಲ ಜನಾಂಗಕ್ಕೂ ಪ್ರಾತಿನಿಧ್ಯವಿರುವಂತೆ ನೋಡಿಕೊಳ್ಳಬೇಕೆಂದು ನಿಯೋಜಿಸಲಾಗಿತ್ತು. ಕಾಂಗ್ರೆಸ್ಸು ಕ್ಯಾಬಿನೆಟ್ ಯೋಜನೆಯನ್ನು ಅನುಮೋದಿಸಿತು. ತತ್ಪಲವಾಗಿ 1946 ಡಿಸೆಂಬರ್ 6ರಂದು ಸಂವಿಧಾನ ರಚನಾಸಭೆ ರಚಿತವಾಯಿತು. ಮುಸ್ಲಿಮ್ ಲೀಗ್ ಸಂವಿಧಾನ ರಚನಾಸಭೆಗೆ ಸೇರುವ ಬದಲು ಸಾರ್ವಭೌಮ ಮತೀಯ ಗಲಭೆಗೆ ಅವಕಾಶವಿತ್ತಿತು. ಈ ಮಧ್ಯೆ ಗವರ್ನರ್ ಜನರಲ್ಲನು ಕಾಂಗ್ರೆಸ್ ಮತ್ತು ಮುಸ್ಲಿಮ್ ಲೀಗ್ ಇವುಗಳ ಮನವೊಲಿಸಿ ನಡುಗಾಲ ಸರ್ಕಾರವನ್ನು ರಚಿಸಿದ (ಅಕ್ಟೋಬರ್ 1946).

ಇತ್ತ ಬ್ರಿಟಿಷ್ ಪ್ರಧಾನಮಂತ್ರಿ ಕ್ಲೆಮೆಂಟ್ ಅಟ್ಲೀ ಬ್ರಿಟಿಷ್ ಸರ್ಕಾರ 1948 ಜೂನಿಗಿಂತ ತಡವಾಗದಂತೆ ಜವಾಬ್ದಾರಿಯುತ ಭಾರತೀಯ ಹಸ್ತಗಳಿಗೆ ಅಧಿಕಾರ ವರ್ಗಾವಣೆ ಮಾಡುವುದೆಂದು 1947 ಫೆಬ್ರುವರಿ 20ರಂದು ಘೋಷಿಸಿದರು. ಆದರೆ ಭಾರತ ಕೇಂದ್ರ ಸರ್ಕಾರಕ್ಕೆ ಪರಮಾಧಿಕಾರ ಕೊಡಬೇಕೇ ಪ್ರಾಂತಗಳಿಗೆ ಕೊಡಬೇಕೇ ಅಥವಾ ಬೇರೆ ಯಾವುದಾದರೂ ಉಚಿತ ಮಾರ್ಗವಿದೆಯೇ ಎನ್ನುವುದನ್ನು ಬ್ರಿಟಿಷ್ ಸಾರ್ಕಾರ ಹೊಸ ವೇಸ್‍ರಾಯ್ ಮೌಂಟ್ ಬ್ಯಾಟನ್ನರ ಮೂಲಕ ಪರಿಶೀಲಸುವುದೆಂದು ಹೇಳಲಾಯಿತು.

ಈ ಸಮಯದಲ್ಲಿ ಬಂಗಾಳ, ಪಂಜಾಬುಗಳಲ್ಲಿ ಪ್ರತ್ಯೇಕ ರಾಷ್ಟ್ರಕ್ಕಾಗಿ ಕೋಮು ಗಲಭೆ ವ್ಯಾಪಕವಾಗಿ ನಡೆಯಿತು. ಮೌಂಟ್‍ಬ್ಯಾಟನ್ನರು ಎಲ್ಲ ಪಕ್ಷದ ನಾಯಕರೋಂದಿಗೆ ಮತ್ತು ಗಣ್ಯ ಧುರೀಣರೊಂದಿಗೆ ಮಾತುಕತೆ ನಡೆಸಿ ಸರ್ವಸಮ್ಮತ ಪರಿಹಾರದ ಅಸಾಧ್ಯತೆಯನ್ನೂ ರಾಷ್ಟ್ರ ವಿಭಜನೆಯ ಅನಿವಾರ್ಯತೆಯನ್ನೂ ವನಗಂಡರು. ಅಟ್ಲೀ ಘೋಷಣೆಯ ಅನುಷ್ಠಾನಕ್ಕೆ ತಮ್ಮ ಪ್ರಯತ್ನ ಕೇಂದ್ರೀಕರಿಸಿ ಬಂಗಾಳ ಮತ್ತು ಪಂಜಾಬ ಹಿಂದೂ ಮತ್ತು ಮುಸ್ಲಿಮ್ ಪ್ರತಿನಿಧಿಗಳು ಮತ ನೀಡಿದರೆ ಆ ಪ್ರಾಂತಗಳನ್ನು ವಿಭಜಿಸುವುದೆಂದು ತೀರ್ಮಾನಿಸಿದರು. ವಾಯವ್ಯ ಗಡಿ ಪ್ರಾಂತಗಳಲ್ಲಿ ಪಂಜಾಬ್ ಮತ್ತು ಸಿಂಧ್‍ನಲ್ಲಿ ನಡೆದ ಸಹಸ್ರಾರು ಕಗ್ಗೊಲೆಗಳು ರಾಷ್ಟ್ರವಿಭಜನೆಯ ಅನಿವಾರ್ಯತೆಯನ್ನು ದೃಢಪಡಿಸಿದುವು. ರಾಷ್ಟ್ರವನ್ನು ಎರಡಾಗಿ ಒಡೆಯುವ ನಿರ್ಧಾರಕ್ಕೆ ಕೊನೆಗೂ ಅನಪೇಕ್ಷೆಯಿಂದಲೇ ಎಲ್ಲ ಪಕ್ಷಗಳೂ ಒಪ್ಪಿದುವು. ಗಡಿವಿಂಗಡಣೆಗೆ ತಜ್ಞರ ಸಮಿತಿಯೂ (ರಾಡ್‍ಕ್ಲಿಫ್ ಸಮಿತಿ) ನೇಮಕವಾಯಿತು. 1947 ಆಗಸ್ವ್ 15ರಂದು ಅಧಿಕಾರ ವರ್ಗಾವಣೆಯನ್ನೂ ನಿರ್ವಹಿಸುವ ನಿರ್ಧಾರದ 1947 ಭಾರತ ಸ್ವಾತಂತ್ರ್ಯ ಶಾಸನ ಬ್ರಿಟಿಷ್ ಸಂಸತ್ತಿನಲ್ಲಿ ಅತಿ ಶೀಘ್ರವಾಗಿ ಅಂಗೀಕೃತವಾಯಿತು. 1947 ಆಗಸ್ವ್ 15 ರಂದು ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ಸ್ವತಂತ್ರ ರಾಷ್ಟ್ರಗಳ ಸ್ಥಾಪನೆ, ಪಾಕಿಸ್ತಾನದ ಭೂಪ್ರದೇಶದ ವ್ಯಾಪ್ತಿಯ ವಿವರ, ಭಾರತದ ರಾಜ್ಯಗಳು ಯಾವುದೇ ರಾಷ್ಟ್ರಕ್ಕೆ (ಭಾರತ ಅಥವಾ ಪಾಕಿಸ್ತಾನ) ಸೇರುವ ಸ್ವತಂತ್ರ ನಿರ್ಣಯದ ಅಧಿಕಾರ, ಭಾರತದಲ್ಲಿ ಬ್ರಿಟಿಷ್ ಚಕ್ರವರ್ತಿಯ ಆಧಿಪತ್ಯ ಕೊನೆಗೊಳ್ಳುವಿಕೆ, ಎರಡೂ ರಾಷ್ಟ್ರದ ಶಾಸನಸಭೆಗಳಿಗೆ ಪರಮಾಧಿಕಾರ ಈ ಎಲ್ಲ ಅಂಶಗಳನ್ನೂ 1947ರ ಶಾಸನ ಒಳಗೊಂಡಿತ್ತು.

1946 ಡಿಸೆಂಬರ್ 6ರಂದು ಸಂವಿಧಾನದ ರಚನಾಸಭೆ ಸೇರಿತು. ಕ್ಯಾಬಿನೆಟ್ ನಿಯೋಗದ ಯೋಜನೆಯಂತೆ ಸದಸ್ಯರ ಆಯ್ಕೆಯನ್ನು ಮಾಡಲಾಗಿತ್ತು. ಪಾಕಿಸ್ತಾನದ ಬೇಡಿಕೆಯನ್ನು ಮುಂದಿಟ್ಟಿದ್ದ ಮುಸ್ಲಿಮ್‍ಲೀಗ್ ಮಾತ್ರ ಈ ಸಭೆಯಲ್ಲಿ ಭಾಗವಹಿಸಲಿಲ್ಲ. ಪ್ರಾಂತೀಯ ಶಾಸನಸಭಾ ಸದಸ್ಯರು ಆಯ್ಕೆ ಮಾಡಿದ ಪ್ರತಿನಿಧಿಗಳು ಸಂವಿಧಾನ ರಚನಾ ಸಭೆಗೆ ನಿಯೋಜಿಸಲ್ಪಟ್ಟರು. ದೇಶೀಂiÀi ರಾಜಸಂಸ್ಥಾನಗಳಿಂದ ನಾಮಕರಣದ ಮೂಲಕ ಗಣ್ಯ ಸದಸ್ಯರ ಆಯ್ಕೆಯೂ ಆಯಿತು. ಎಲ್ಲ ಜನಾಂಗದ, ಎಲ್ಲ ವರ್ಗಗಳ ಪ್ರತಿನಿಧಿಗಳೂ ಅದರಲ್ಲಿದ್ದರು. ಸಂವಿಧಾನ ರಚನಾಸಭೆಯಲ್ಲಿ ಪ್ರಾತಿನಿಧ್ಯವಿರದ ಸಮುದಾಯವೇ ಇಲ್ಲವೆಂಬುದರಮಟ್ಟಿಗೆ ಅದು ಪರಿಪೂರ್ಣವೂ ಪ್ರಜಾಪ್ರಭುತ್ವವಾದಿಯೂ ಆಗಿತ್ತು. ಮೊದಲು ಸಚ್ಚಿದಾನಂದ ಸಿನ್ಹಾರವರು, ಆಮೇಲೆ ರಾಜೇಂದ್ರಪ್ರಸಾದರು ಸರ್ವಾನುಮತದಿಂದ ಸಂವಿಧಾನ ರಚನಾಸಭೆಯ ಅಧ್ಯಕ್ಷರಾದರು.

ರಚನಾ ಸಭೆ: ಸಂವಿಧಾನ ರಚನಾಸಭೆ ಬ್ರಿಟಿಷ್ ಸರ್ಕಾರದ ಯೋಜನೆಯ ಫಲವಾದ್ದರಿಂದ ಸಾಂವಿಧಾನಿಕವಾಗಿ ಅದು ಪರಮಾಧಿಕಾರವುಳ್ಳದ್ದೇ ಎಂಬ ಪ್ರಶ್ನೆ ಆಗಿನ ರಾಜಕೀಯ ಬೆಳೆವಣಿಗೆ ಮತ್ತು ಸಂವಿಧಾನ ರಚನಾಸಭೆಯ ನಿಯಮರೂಪಣಾ ಸ್ವಾಧಿಕಾರದ ಹಿನ್ನೆಲೆಯಲ್ಲಿ ಗೌಣವಾಯಿತು. ಅಗಾಧ ಜನಶಕ್ತಿಯ ಅವಿರೋಧ ಬೆಂಬಲವೇ ಸಂವಿಧಾನದ ರಚನೆ ಮತ್ತು ಅನುಷ್ಠಾನದ ರಕ್ಷಾಕವಚವಾಯಿತು.

ಮೊದಲಿಗೆ ಸಂವಿಧಾನ ರಚನಾಸಭೆ ಸಂವಿಧಾನದ ವಿಜಾರ ವ್ಯಾಪ್ತಿಯನ್ನು ಹಾಕಿಕೊಂಡಿತು. ನೆಹರೂ ಮಂಡಿಸಿದ ಧ್ಯೇಯೋದ್ದೇಶಗಳ ನಿರ್ಣಯ ಸಂವಿಧಾನದ ಪೀಠಿಕೆಯ ಹಿನ್ನೆಲೆಯಾಯಿತು. ಅನಂತರ ಸಭೆ ಸಾಂವಿಧಾನಿಕ ವಿಷಯ ಮತ್ತು ಸಮಸ್ಯೆಗಳ ವಿವಿಧ ಮುಖಗಳನ್ನು ಕುರಿತು ವ್ಯವಹರಿಸಲು ಕೇಂದ್ರ ಅಧಿಕಾರಗಳ ಸಮಿತಿ, ಕೇಂದ್ರ ಸಂವಿಧಾನ ಸಮಿತಿ, ಕೇಂದ್ರ-ರಾಜ್ಯಗಳ ಸಂಬಂಧದ ಕುರಿತಾದ ಸಮಿತಿ ಮೊದಲಾದ ಸಮಿತಿಗಳನ್ನು ನೇಮಿಸಿತು. ಇವು ಸಲ್ಲಿಸಿದ ವರದಿಗಳ ಆಧಾರದ ಮೇಲೆ ಸಂವಿಧಾನತಜ್ಞ ಮತ್ತು ಸಾಂವಿಧಾನಿಕ ಸಲಹೆಗಾರ ಬಿ. ಆರ್. ಅಂಬೇಡ್ಕರರ ಅಧ್ಯಕ್ಷತೆಯಲ್ಲಿ ಲೇಖನಸಮಿತಿ (ಡ್ರಾಫ್ಟಿಂಗ್ ಕಮಿಟಿ) ಇದನ್ನು ಆಧರಿಸಿ ಕರಡು ಸಂವಿಧಾನತಯಾರಿಸಿತು. ಸಂವಿಧಾನ ರಚನಾಸಭೆ ಈ ಕರಡು ಸಂವಿಧಾನವನ್ನು ಸುಧೀರ್ಘವಾಗಿ ಚರ್ಚಿಸಿತು. ಅದರಲ್ಲೂ ಎರಡನೆಯ ಸುತ್ತಿನಲ್ಲಿ ಓದುವಾಗ ವಿಮರ್ಶಾತ್ಮಕ ಚರ್ಚೆಯೇ ನಡೆಯಿತು. ಸಭೆ ಸಂವಿಧಾನ ರಚನೆಯ ಕಾರ್ಯ ಮುಗಿಸಲು ಹೆಚ್ಚು ಕಡಿಮೆ 3 ವರ್ಷಗಳನ್ನೇ ತೆಗೆದುಕೊಂಡಿತು. ಒಟ್ಟು 165ದಿವಸಗಳ ಅವಧಿಯಲ್ಲಿ 17 ಅಧಿವೇಶನಗಳು ಜರಗಿದುವು. ಇವುಗಳಲ್ಲಿ 114 ದಿಗಳು ಕರಡು ಸಂವಿಧಾನದ ಪರಿಶೀಲನೆಯಲ್ಲಿ ಕಳೆದುವು. ಸಭೆಯ ಕಲಾಪಗಳು ನೈಜ ಪ್ರಜಾಪ್ರಬೂತ್ವ ರೀತಿಯದಾಗಿತ್ತು. ಕರಡು ಸಂವಿಧಾನಕ್ಕೆ 2473 ತಿದ್ದುಪಡಿಗಳನ್ನು ವಾಸ್ತವವಾಗಿ ಮಂಡಿಸಿ ಚರ್ಚಿಸಿ ಮುಗಿಸಲಾಯಿತು. ಮುಕ್ತ ಮತ್ತು ಸಹನಾ ಪೂರಿತ ಚರ್ಚಗೆ ಅವಕಾಶವಿತ್ತು. ಏನನ್ನೂ ಬಲಾತ್ಕಾರವಾಗಿ ಹೇರುವ ಪ್ರಯತ್ನವಿರಲಿಲ್ಲ.

ಕರಡು ಪ್ರತಿಯಲ್ಲಿ 243 ಪರಿಚ್ಛೇದ ಮತ್ತು 13 ಪರಿಶಿಷ್ಟಗಳಿದ್ದರೆ ಅಂತಿಮ ಸ್ವರೂಪದಲ್ಲಿ 395 ಪರಿಚ್ಛೇದ ಮತ್ತು 8 ಪರಿಶಿಷ್ಟಗಳು ಇದ್ದುವು. 1949 ನವೆಂಬರ್ 26ರಂದು ಸರ್ವಾನುಮತದಿಂದ ಅಂಗೀಕರಿಸಲ್ಪಟ್ಟ ಸಂವಿಧಾನ 1950 ಜನವರಿ 26ರಂದು ಜಾರಿಗೆ ಬಂದಿತು.

ಈ ರೀತಿ ಭಾರತೀಯ ಸಂವಿಧಾನದ ಇತಿಹಾಸ ಒಂದು ದೇಶದೊಡನೆ, ದೇಶದ ಜನರೊಡನೆ ಬೆಳೆದ ಸಂಕೀರ್ಣ ರಾಜಕೀಯ ಮತ್ತು ಸಾಮಾಜಿಕ ಮೌಲ್ಯಗಳನ್ನು ಯಶಸ್ವಿಯಾಗಿ ಬಟ್ಟಿ ಇಳಿಸಿದ ಸಾಧನೆಯ ಕಥೆ. ಹಂತ ಹಂತವಾಗಿ ಹೆಚ್ಚು ಹೆಚ್ಚು ಶಾಸನ ಮತ್ತು ಆಡಳಿತಾಧಿಕಾರ ಪಡೆಯುತ್ತ ಪ್ರಜಾಪ್ರಭುತ್ವದ ವಿಧಿ ವಿಧಾನಗಳಲ್ಲಿ ತೊಡಗಿಕೊಂಡು, ಸ್ವಾತಂತ್ರ್ಯ ಹೋರಾಟದ ಆದರ್ಶ ಮತ್ತು ಜನಸಂಪರ್ಕದಿಂದ ಪಡೆದ ಅನುಭವಗಳನ್ನು ಮತ್ತು ನಾಗರಿಕ ರಾಷ್ಟ್ರಗಳು ಅನುಭವದಿಂದ ಪರೀಕ್ಷಿಸಿ ಸ್ವೀಕರಿಸಿದ ಮೂಲಭೂತ ಮೌಲ್ಯಗಳನ್ನು-ನಾಗರಿಕ ಹಕ್ಕುಗಳು, ಕಾನೂನಿನಿಂದ ಸೀಮಿತವಾದ ಸರ್ಕಾರ, ರಾಜಕೀಯ ನಿರ್ಣಯಗಳಲ್ಲಿ ಪ್ರಜೆಗಳ ಭಾಗವಹಿಸುವಿಕೆ, ಸ್ವತಂತ್ರ ನ್ಯಾಯಾಂಗ, ರಾಜ್ಯಗಳ ಒಕ್ಕೂಟ ಅಧಿಕಾರಗಳ ಬೇರ್ಪಡೆ ಇತ್ಯಾದಿ-ನಾಡಿನ ಮೂಲಭೂತ ನಿಯಮವಾಗಿ ಮಾಡಿದ ಹೆಮ್ಮೆಯ ಚರಿತ್ರೆ, ಭಾರತೀಯರಿಂದಲೇ ಭಾರತೀಯರಿಗಾಗಿ ನಿರ್ಮಿಸಿದ ಐತಿಹಾಸಿಕ ದಾಖಲೆ.

ರೂಪುರೇಷೆಗಳು: ಭಾರತೀಯ ಸಂವಿಧಾನದ ಸ್ಥೂಲ ಲಕ್ಷಣಗಳನ್ನು ಅದರ ಪ್ರಸ್ತಾವನೆಯಲ್ಲಿ ಕಾಣಬಹುದು. ಸಂವಿಧಾನದ ರಚನಾಸಭೆಯಲ್ಲಿ ಸ್ವೀಕೃತವಾದ ಧ್ಯೇಯ ನಿರ್ಣಯದ ಆಧಾರದಲ್ಲಿ ಈ ಪ್ರಸ್ತಾವನೆಯನ್ನು ರೂಪಿಸಲಾಗಿದೆ. ಇದರಲ್ಲಿ ಭಾರತೀಯ ಪ್ರಜೆಗಳು ಭಾರತವನ್ನು ಒಂದು ಸರ್ವಸ್ವತಂತ್ರ ಪ್ರಜಾಪ್ರಭುತ್ವ ಸಮಾಜವಾದಿ ಲೌಕಿಕ (ಜಾತ್ಯತೀತ) ಗಣರಾಜ್ಯವಾಗಿ ಸ್ಥಾಪಿಸಿ ಅದರ ಸಮಸ್ತ ಪ್ರಜೆಗಳಿಗೂ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನೂ ಚಿಂತನೆ, ಅಭಿವ್ಯಕ್ತಿ, ಶ್ರದ್ಧೆ, ನಂಬಿಕೆ ಮತ್ತು ಪೂಜೆಗಳ ಸ್ವಾತಂತ್ರ್ಯವನ್ನೂ ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆಯನ್ನು ವ್ಯಕ್ತಿ ಘನತೆಯನ್ನೂ ರಾಷ್ಟ್ರದ ಐಕ್ಯವನ್ನು ಆಶ್ವಾಸಿಸುವ ಸೋದರತ್ವವನ್ನೂ ಪ್ರತಿಷ್ಠಾಪಿಸುವ ಸಂವಿಧಾನವನ್ನು ತಮಗೆ ತಾವೇ ನೀಡಿಕೊಳ್ಳುವ ಪವಿತ್ರ ನಿರ್ಣಯವಿರುತ್ತದೆ.

ಸಂವಿಧಾನದ ಮೂರನೆಯ ಭಾಗದಲ್ಲಿ ಜನರಿಗೆ ಮೂಲಭೂತ ಹಕ್ಕುಗಳನ್ನು ಕೊಡಲಾಗಿದೆ. ವೈಯಕ್ತಿಕ ಸ್ವಾತಂತ್ರ್ಯ ಮತ್ತು ಸಾಮಾಜಿಕ ನಿಯಂತ್ರಣಗಳ ನಡುವೆ ಯುಕ್ತ ಹೊಂದಾಣಿಕೆ ಮಾಡುವ ಕಾಳಜಿಯನ್ನು ಇಲ್ಲಿ ಕಾಣಬಹುದು. ರಾಜ್ಯದ ಮತ್ತು ಸಮಾಜದ ಭದ್ರತೆಯ ಚೌಕಟ್ಟಿನೊಳಗೆ ಮಾನವ ವ್ಯಕ್ತಿತ್ವದ ಅತ್ಯಧಿಕ ವಿಕಸನವೇ ನಾಗರಿಕ ಸ್ವಾತಂತ್ರ್ಯಗಳ ಗುರಿ.

ಬ್ರಿಟಿಷ್ ಮಾದರಿಯ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳ ಲಿಖಿತ ಪಟ್ಟಿ ಇರುವುದಿಲ್ಲ. ಸಾರ್ವಭೌಮ ಶಾಸಕಾಂಗ ಕಾನೂನುರೀತ್ಯ ನಿಷೇಧಿಸದಿರುವ ಕ್ಷೇತ್ರವೇ ವೈಯಕ್ತಿಕ ಹಕ್ಕುಗಳು. ಆದರೆ ಅಮೆರಿಕ ಸಂಯುಕ್ತ ಸಂಸ್ಥಾನದ ನಿಲುವು ಕ್ಷೇತ್ರವೇ ಮೂಲಭೂತ ಹಕ್ಕುಗಳನ್ನು ಶಾಸಕಾಂಗದ ವಿರುದ್ಧ ಕೂಡ ರಕ್ಷಿಸುವಂತೆ ಲಿಖಿತ ಪಟ್ಟಿಯ ಮೂಲಕ ಕೊಡಮಾಡುವ ಧೋರಣೆ ಹೊಂದಿದೆ. ಭಾರತೀಯ ಸಂವಿಧಾನದಲ್ಲಿ ಅಮೆರಿಕದ ನಿಲವನ್ನೇ ಸ್ವೀಕರಿಸಿ ಸ್ಪಷ್ಟ ಮತ್ತು ನಿರ್ದಿಷ್ಟವಾಗಿ ವೈಯಕ್ತಿಕ ಹಕ್ಕುಗಳನ್ನೂ ಅವುಗಳ ಮೇಲೆ ಸರ್ಕಾರ ವಿಧಿಸಬಹುದಾದ ನಿರ್ಬಂಧಗಳ ಮಿತಿಗಳನ್ನೂ ಹೇಳಲಾಗಿದೆ.

ಮೂಲತಃ ಮೂಲಭೂತಹಕ್ಕುಗಳು ರಾಜ್ಯಾಧಿಕಾರದ ವಿರುದ್ಧ ರಕ್ಷಿಸಲ್ಪಡುವ ಉದ್ದೇಶವಿರುವುದರಿಂದ ರಾಜ್ಯ ಎಂಬ ಪದದ ವಿವರಣೆ ಕೊಡಲಾಗಿದೆ. ಸಂವಿಧಾನದ 3 ಮತ್ತು 4ನೆಯ ಭಾಗಗಳ ಮಟ್ಟಿಗೆ ರಾಜ್ಯ ಎಂಬ ಪದದ ಅರ್ಥ ವ್ಯಾಪ್ತಿಯೊಳಗೆ ಕೇಂದ್ರ ಸರ್ಕಾರ ಮತ್ತು ಶಾಸಕಾಂಗ. ರಾಜ್ಯ ಸರ್ಕಾರ ಮತ್ತು ಶಾಸಕಾಂಗ, ಭಾರತದೊಳಗಿರುವ ಅಥವಾ ಭಾರತದ ಅಧೀನವಾಗಿರುವ ಸ್ಥಳೀಯ ಮತ್ತು ಇತರ ಪ್ರಾಧಿಕಾರಗಳು ಬರುತ್ತವೆ. ಇತರ ಪ್ರಾಧಿಕಾರ ಎಂಬ ಶಬ್ದವನ್ನು ವ್ಯಾಖ್ಯಾನಿಸಿ ಸರ್ವೋಚ್ಚ ನ್ಯಾಯಲಯ ಸರ್ಕಾರಗಳು ನಿರ್ಮಿಸಿದ ಸಾರ್ವಜನಿಕ ಕಾರ್ಪೊರೇಷನ್, ಕಂಪೆನಿಗಳು ಮತ್ತು ಸೊಸೈಟಿಗಳು ಈ ಪದದ ವ್ಯಾಪ್ತಿಯಲ್ಲಿ ಬರುವುದೆಂದೂ ಇವುಗಳ ವಿರುದ್ಧವೂ ಮೂಲಭೂತ ಹಕ್ಕುಗಳನ್ನು ಸಾಧಿಸಬಹುದೆಂದೂ ಹೇಳಿದೆ. ಮೂಲಭೂತ ಹಕ್ಕುಗಳಿಗೆ ವಿರೋಧವಾಗಿಯೂ ಅಸಂಬದ್ಧವಾಗಿಯೂ ಇರುವ ಯಾವುದೇ ಸಂವಿಧಾನಪೂರ್ವ ಮತ್ತು ಸಂವಿಧಾನೋತ್ತರ ಕಾನೂನುಗಳು ಅಥವಾ ಕಾರ್ಯಕಾರೀ ಆಜ್ಞೆಗಳು ಅಸಂವೈಧಾನಿಕ ಮತ್ತು ನಿಷ್ಪರಿಣಾಮಕಾರಿ ಎಂದೂ ಸಂವಿಧಾನದಲ್ಲಿ ಹೇಳಲಾಗಿದೆ. ಆದರೆ ವಿಶೇಷ ಕಾನೂನಾಗಿರುವ ಸಂವಿಧಾನ ತಿದ್ದುಪಡಿ ಮೂಲಭೂತ ಹಕ್ಕುಗಳನ್ನು ಸಂವಿಧಾನದ ಆವಶ್ಯಕ ಲಕ್ಷಣಗಳಿಗೆ ಚ್ಯುತಿಬಾರದಂತೆ ಮೊಟಕುಗೊಳಿಸಬಹುದು.

ಮೊದಮೊದಲು ಸರ್ವೋಚ್ಚ ನ್ಯಾಯಾಲಯ ಪ್ರತಿಯೊಂದು ಮೂಲಭೂತ ಹಕ್ಕನ್ನೂ ಇತರ ಹಕ್ಕುಗಳಿಂದ ಪ್ರತ್ಯೇಕವಾಗಿ ನೋಡುತ್ತಿದ್ದು, ಒಂದು ನಿರ್ಬಂಧ ಹಲವು ಮೂಲಭೂತ ಹಕ್ಕುಗಳಿಗೆ ಬಾಧಕ ಒಡ್ಡುತ್ತಿದ್ದ ಸಂದರ್ಭದಲ್ಲಿ ಅಧಿಕ ಸಂಬಂಧಿತ ಮೂಲಭೂತ ಹಕ್ಕಿನ ದೃಷ್ಟಿಯಿಂದ ಮಾತ್ರ ಆ ನಿರ್ಬಂಧದ ಸಾಂವಿಧಾನದ ಮೌಲ್ಯವನ್ನು ನಿರ್ಣಯಿಸುತ್ತಿತ್ತು. ಆದರೆ 1969ರ ಅನಂತರ ಅಂಥ ಸಂದರ್ಭದಲ್ಲಿ ಆ ನಿರ್ಬಂಧ ಪ್ರತಿಯೊಂದು ಹಕ್ಕಿನ ಪರಿಮಿತಿಯೊಳಗೆ ಬರುವುದೇ ಎಂಬ ಅಂಶವನ್ನೂ ನಿರ್ಣಯಿಸುತ್ತ ಸಂವಿಧಾನದತ್ತ ಮೂಲಭೂತ ಹಕ್ಕುಗಳಿಗೆ ಹೆಚ್ಚು ವ್ಯಾಪ್ತಿಯನ್ನೂ ಪುಷ್ಟಿಯನ್ನೂ ಕೊಟ್ಟಿದೆ. ಕೆಲವು ಮೂಲಭೂತ ಹಕ್ಕುಗಳನ್ನು ವಿಶಿಷ್ಟವಾಗಿ ಪೌರರಿಗೆ ಮಾತ್ರ ಕೊಡಮಾಡಿದರೆ ಮತ್ತೆ ಕೆಲವನ್ನು ಎಲ್ಲ ವ್ಯಕ್ತಿಗಳಿಗೂ ಕೊಡಲಾಗಿದೆ. ಸಂವಿಧಾನದ 3ನೆಯ ಭಾಗದಲ್ಲಿ ಈ ಕೆಳಗಿನ ಹಕ್ಕುಗಳನ್ನು ರಕ್ಷಿಸಲಾಗಿದೆ.

ಸಮಾನತೆಯ ಹಕ್ಕು: ಭಾರತದಲ್ಲಿ ಯಾವ ವ್ಯಕ್ತಿಗೂ ನ್ಯಾಯದ ಎದುರು ಸಮಾನತೆಯನ್ನಾಗಲೀ ಕಾನೂನುಕಟ್ಟಳೆಗಳ ಸಮಾನ ರಕ್ಷಣೆಯನ್ನಾಗಲೀ ಅಲ್ಲಗಳೆಯತಕ್ಕದ್ದಲ್ಲ. ಇದು ಸಮಾನ ಸನ್ನಿವೇಶಗಳಲ್ಲಿ ಸಮಾನ ರಕ್ಷಣೆಯಾದ್ದರಿಂದ ರಾಜ್ಯವು ಶಾಸನದ ಉದ್ದೇಶಗಳಿಗೆ ಸಮಂಜಸ ವರ್ಗಗಳನ್ನು ಮಾಡಿಕೊಳ್ಳಬಹುದು. ಸಮಾನತೆಯ ತತ್ತ್ವ ಸರ್ಕಾರೀ ಅಧಿಕಾರಿಗಳ ಕೈಯಲ್ಲಿ ಅನಿರ್ಬಂಧಿತ ಅಧಿಕಾರವನ್ನು ಅಥವಾ ಸ್ವೇಚ್ಛಾ ರೀತಿಯ ಅಧಿಕಾರ ಚಲಾವಣೆಯನ್ನು ವಿರೋಧಿಸುತ್ತದೆ ಮತ್ತು ಕಾನೂನಿನ ಆಳ್ವಿಕೆಯನ್ನು ಪ್ರತಿಷ್ಠಾಪಿಸುತ್ತದೆ. ರಾಜ್ಯ ಯಾವನೇ ಪೌರನಿಗೆ ಕೇವಲ ಧರ್ಮ, ಜನಾಂಗ, ಜಾತಿ, ಲಿಂಗ, ಜನ್ಮಸ್ಥಳ ಮುಂತಾದವುಗಳ ಆಧಾರದ ಮೇಲೆ ಯಾವುದೇ ರೀತಿಯ ಪಕ್ಷಪಾತ ತೋರಿಸುವಂತಿಲ್ಲ. ಅಥವಾ ಈ ಅಂಶಗಳ ಆಧಾರದ ಮೇಲೆ ಸಾರ್ವಜನಿಕ ಸ್ಥಳಗಳ ಉಪಯೋಗದಲ್ಲಿ ಪಕ್ಷಪಾತ ಮಾಡುವಂತಿಲ್ಲ. ಆದರೆ ಸ್ತ್ರೀಯರಿಗೆ ಮತ್ತು ಮಕ್ಕಳಿಗೆ ವಿಶೇಷ ಸವಲತ್ತು ಕೊಡಬಹುದು. ಸರ್ಕಾರದ ಉದ್ಯೋಗಗಳಲ್ಲಿ ಎಲ್ಲ ಪೌರರಿಗೆ ಸಮಾನ ಅವಕಾಶ ಕಲ್ಪಿಸಲಾಗಿದೆ. ಆದರೆ ರಾಜ್ಯ ಸೇವೆಗಳಲ್ಲಿ ಸಾಕಷ್ಟು ಪ್ರಾತಿನಿಧ್ಯವಿರದ ಯಾವುದೇ ನಿಮ್ನವರ್ಗಗಳಿಗೆ ಸರ್ಕಾರಿ ಹುದ್ದೆಗಳಲ್ಲಿ ಮೀಸಲಾತಿ ಇಡಬಹುದು. ಅಂತೆಯೇ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗಾಗಿ ಅಥವಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಬುಡಕಟ್ಟುಗಳಿಗಾಗಿ ಅವರ ಪ್ರಗತಿಗೋಸ್ಕರ ಸರ್ಕಾರ ವಿಶೇಷ ಅವಕಾಶಗಳನ್ನು ಮಾಡಿಕೊಡಬಹುದು. ಮೀಸಲಾತಿ ಒಟ್ಟು ಸ್ಥಾನಗಳ ಶೇಕಡಾ 50ನ್ನು ಮೀರಬಾರದೆಂದೂ ಹಿಂದುಳಿದ ವರ್ಗಗಳ ಗುರುತಿಸುವಿಕೆ ಜಾತಿಯ ಅಂಶವನ್ನು ಮಾತ್ರ ಪರಿಗಣಿಸದೆ ಆರ್ಥಿಕ ಮತ್ತು ಸಾಮಾಜಿಕ ಅಂಶಗಳನ್ನು ಕೂಡ ಗಣನೆಗೆ ಪರಿಗಣಿಸಬೇಕೆಂದೂ ಮೀಸಲಾತಿಯಿಂದ ತುಂಬಲಾರದ ಸ್ಥಾನಗಳನ್ನು ಮುಂದಿನ ವರ್ಷಕ್ಕೆ ಶೇಖರಿಸಿಡಲು ಸಾಧ್ಯವಿಲ್ಲವೆಂದೂ ಸರ್ವೋಚ್ಚ ನ್ಯಾಯಾಲಯದ ನಿರ್ಣಯಗಳು ಹೇಳಿವೆ. ಆದರೆ ಉದ್ಯೋಗ ಬಡ್ತಿಯಲ್ಲಿ ಶೇಕಡಾ 50 ನಿಯಮ ಮತ್ತು ಶೇಖರಣೆ ವಿರೋಧ ನಿಯಮಗಳನ್ನು ಬಳಸಿಕೊಂಡಿಲ್ಲ. ಸಂವಿಧಾನ ಸ್ಪಷ್ಟವಾಗಿ ಅಸ್ಪೈಶ್ಯತೆಯನ್ನು ನಿಷೇಧಿಸಿದೆ ಮತ್ತು ಬಿರುದುಗಳನ್ನು ರದ್ದುಗೊಳಿಸಿದೆ. ಯಾವುದೇ ರೀತಿಯ ಅಸ್ಪೈಶ್ಯತಾಚರಣೆ ಕಾನೂನುರೀತ್ಯ ಅಪರಾಧ. ಒಟ್ಟಿನಲ್ಲಿ ಅಂತಸ್ಸತ್ವಪೂರ್ಣವಾದ ನೈಜ ಸಮಾನತೆಯನ್ನು ಸಾಧಿಸುವತ್ತ ಗುರಿಯಿಡಲಾಗಿದೆ.

ಸ್ವಾತಂತ್ರ್ಯದ ಹಕ್ಕು: ಪೌರರಿಗೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ, ಶಾಂತಿಯುತವಾಗಿ ಮತ್ತು ನಿರಾಯುಧರಾಗಿ ಸಭೆಸೇರುವ ಸ್ವಾತಂತ್ರ್ಯ, ಸಂಘಸಂಸ್ಥೆಗಳನ್ನು ರಚಿಸಿಕೊಳ್ಳುವ ಸ್ವಾತಂತ್ರ್ಯ. ಭಾರತಾದ್ಯಂತ ಸಂಚಾರ ಸ್ವಾತಂತ್ರ್ಯ, ಭಾರತದ ಪ್ರದೇಶದಲ್ಲಿ ಎಲ್ಲಿಬೇಕಾದರೂ ವಾಸಿಸುವ ಮತ್ತು ನೆಲಸುವ ಸ್ವಾತಂತ್ರ್ಯ, ಯಾವುದೇ ವೃತ್ತಿ ಹಿಡಿಯಲು ಅಥವಾ ಉದ್ಯೋಗ ಮಾಡಲು, ವ್ಯಾಪಾರ ಅಥವಾ ವಾಣಿಜ್ಯ ನಿರ್ವಹಿಸಲು ಸ್ವಾತಂತ್ರ್ಯ ಕೊಡಲಾಗಿದೆ. ಸರ್ಕಾರಗಳು ನಮೂದಿತ ನೆಲೆಗಳ ಮೇಲೆ ಕಾನೂನುರಿತ್ಯ ವಿಧಿಸುವ ವಿವೇಚನಾರ್ಹ ನಿರ್ಬಂಧಗಳಿಗೆ (ಸಮಂಜಸ ಪ್ರತಿಷೇಧ, ರಿ ಸನೆಬಲ್ ರೆಸ್ಟ್ರಿಕ್ಷನ್ಸ್) ಈ ಸ್ವಾತಂತ್ರ್ಯಗಳು ಒಳಪಡುತ್ತವೆ. ಉದಾಹರಣೆಗೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವು ರಾಷ್ಟ್ರೀಯ ಭದ್ರತೆ, ರಾಷ್ಟ್ರೀಯ ಐಕ್ಯ ಮತ್ತು ಸಾರ್ವಭೌಮತೆ, ಸಾರ್ವಜನಿಕ ಶಾಂತಿ, ನೈತಿಕತೆ ಮತ್ತು ನೆರೆರಾಷ್ಟ್ರಗಳೊಂದಿಗೆ ಸ್ನೇಹ ಸಂಬಂಧಗಳ ಊರ್ಜಿತದ ದೃಷ್ಟಿಯಿಂದ ಹಾಗೂ ನ್ಯಾಯಾಲಯ ನಿಂದೆ, ಮಾನನಷ್ಪ ಮತ್ತು ಅಪರಾಧ ಪ್ರಚೋದನೆಗಳನ್ನು ತಡೆಯುವ ಉದ್ದೇಶದಿಂದ ವಿವೇಚನಾರ್ಹ ನಿರ್ಬಂಧಕ್ಕೆ ಒಳಪಡುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಪತ್ರಿಕಾಸ್ವಾತಂತ್ರ್ಯವನ್ನೂ ಒಳಗೊಂಡಿದೆ.

ಅಪರಾಧಗಳಿಗೆ ದಂಡನೆ ನಿರ್ಣಯಿಸುವುದರ ಸಂಬಂಧವಾಗಿ ಕೆಲವು ರಕ್ಷಣೆಗಳನ್ನು ಕೊಡಲಾಗಿದೆ. ಶಿಕ್ಷಾರೂಪದ ಕಾನೂನನ್ನು ಪೂರ್ವಾನ್ವಯಗೊಳಿಸುವುದು, ಒಂದೇ ಅಪರಾಧಕ್ಕೆ ಜೋಡಿಶಿಕ್ಷೆ ವಿಧಿಸುವುದು ಮತ್ತು ಆ ಆರೋಪಿಯನ್ನು ಅವನ ವಿರುದ್ಧವೇ ಸಾಕ್ಷಿ ಹೇಳುವಂತೆ ಬಲಾತ್ಕರಿಸುವುದು ಇವನ್ನು ನಿಷೇಧಿಸಲಾಗಿದೆ.

ಜೀವ ಮತ್ತು ವ್ಯಕ್ತಿ ಸ್ವಾತಂತ್ರ್ಯದ ಪರಿಚ್ಛೇದ ಮಹತ್ತ್ವ ಪೂರ್ಣವಾದದ್ದು. ಯಾವ ವ್ಯಕ್ತಿಗೂ ಕಾನೂನು ಸ್ಥಾಪಿಸಿರುವ ವಿಧಾನದಿಂದಲ್ಲದೆ ಬೇರೆ ರೀತಿಯಾಗಿ ಜೀವವನ್ನಾಗಲೀ ವ್ಯಕ್ತಿಸ್ವಾತಂತ್ರ್ಯವನ್ನಾಗಲೀ ವಂಚಿಸತಕ್ಕದ್ದಲ್ಲ. ಸರ್ವೋಚ್ಚ ನ್ಯಾಯಲಯ ಇದನ್ನು ವ್ಯಾಖ್ಯಾನಿಸುತ್ತ ಕಾನೂನು ಸ್ಥಾಪಿಸಿರುವ ವಿಧಾನ ನ್ಯಾಯಬದ್ಧ, ಸಮಂಜಸ ಮತ್ತು ವಿವೇಚನಾರ್ಹವಿರಬೇಕೆಂದೂ ಜೀವಿಸುವ ಹಕ್ಕು ಘನತೆಯಿಂದೊಡಗೂಡಿದ್ದೆಂದೂ ವ್ಯಕ್ತಿಸ್ವಾತಂತ್ರ್ಯ ವ್ಯಕ್ತಿತ್ವವಿಕಾಸಕ್ಕಿರುವ ಎಲ್ಲ ರೀತಿಯ ಅವಕಾಶವಾದ್ದರಿಂದ ಅದು ವಿದೇಶಪ್ರಯಾಣದ ಹಕ್ಕು. ಸ್ವನಿವಾಸ ಏಕಾಂತತೆ, ಕ್ಷಿಪ್ರ ನ್ಯಾಯತೀರ್ಮಾನ, ಸಮಂಜಸ ಕಾರಾಗೃಹ ಸೌಕರ್ಯ ಮೊದಲಾದ ಹಕ್ಕುಗಳನ್ನು ಒಳಗೊಳ್ಳುವುದೆಂದೂ ನಿರ್ಣಯಗಳನ್ನು ನೀಡಿದೆ. ಮರಣ ದಂಡನೆಯನ್ನು ವಿರಳಾತಿ ವಿರಳ ಪ್ರಕರಣಗಳಲ್ಲಿ ಮಾತ್ರ ವಿಧಿಸಬಹುದೆಂದೂ ತೀರ್ಮಾನಿಸಿದೆ.

ಬಂಧನ ಮತ್ತು ಸೆರೆಮನೆವಾಸಗಳಿಗೆ ಸಂಬಂಧಿಸಿದಂತೆ ಬಂಧಿತನಿಗೆ ಕೆಲವು ರಕ್ಷಣೆಗಳನ್ನು ಕೊಡಲಾಗಿದೆ. ದಂಡನಾ ಸ್ಥಾನಬದ್ಧತೆಯಾದಾಗ (ಅಪರಾಧವನ್ನು ಗೈದಿದ್ದಾನೆ ಎಂಬ ಕಾರಣದಿಂದ ಬಂಧನ) 24 ಗಂಟೆಯೊಳಗೆ ಹತ್ತಿರದ ಮ್ಯಾಜಿಸ್ಟ್ರೇಟರ (ನ್ಯಾಯದಂಸನಾಧಿಕಾರಿ) ಮುಂದೆ ಹಾಜರುಪಡಿಸುವಿಕೆ ಬಂಧನದ ಕಾರಣ ತಿಳಿಯುವಿಕೆ ಮತ್ತು ತನ್ನ ವಕೀಲನ ಮೂಲಕ ತನ್ನನ್ನು ಸಮರ್ಥಿಸಿಕೊಳ್ಳುವಿಕೆ ಈ ಹಕ್ಕುಗಳನ್ನು ನೀಡಲಾಗಿದೆ. ಪ್ರತಿಬಂಧಕ ಸ್ಥಾನಬದ್ಧತೆ (ಅಪರಾಧ ಮಾಡುವುದರಿಂದ ತಡೆಗಟ್ಟುವ ಬಂಧನ) ಆದಾಗ ಬಂಧನದ ಕಾರಣ ತಿಳಿಯುವಿಕೆ, ನ್ಯಾಯಾಧೀಶರುಗಳುಳ್ಳ ಸಲಹಾಮಂಡಳಿಯ ಎದುರು ತನ್ನನ್ನು ಸಮರ್ಥಿಸುವಿಕೆ, ಕಾನೂನಿನ ಮಿತಿಯೊಳಗೆ ಮಾತ್ರ ಬಂಧನ ನಡೆಯುವಂಥ ರಕ್ಷಣೆ ಈ ಹಕ್ಕುಗಳನ್ನು ಕೂಡ ನೀಡಲಾಗಿದೆ.

ಶೋಷಣೆ ಅಥವಾ ದುಡಿಮೆಯ ದುರುಪಯೋಗದ ವಿರುದ್ಧ ಹಕ್ಕು: ವ್ಯಕ್ತಿ ವಿಕ್ರಯ, ಜೀತಪದ್ಧತಿ ಮತ್ತಿತರ ಬಲಾತ್ಕಾರಯುತ ದುಡಿಮೆಯನ್ನು ನಿಷೇಧಿಸಲಾಗಿದೆ. ಇದನ್ನು ಅರ್ಥವಿಸುತ್ತ ಕನಿಷ್ಠ ವೇತನಕ್ಕಿಂತ ಕಡಿಮೆ ಸಂಬಳಕೊಟ್ಟು ದುಡಿಸುವುದು ಕೂಡ ಬಲತ್ಕಾರದ ದುಡಿಮೆ ಅಥವಾ ಶೋಷಣೆ ಎಂದು ಸರ್ವೋಚ್ಚನ್ಯಾಯಲಯ ಹೇಳಿದೆ (1981). ಹದಿನಾಲ್ಕು ವರ್ಷಕ್ಕಿಂತ ಕೆಳಗಿನ ಮಕ್ಕಳನ್ನು ಯಾವುದೇ ಕಾರ್ಖಾನೆ ಗಣಿ ಅಥವಾ ಯಾವುದೇ ಬಗೆಯ ಅಪಾಯಕಾರಿ ದುಡಿಮೆಯಲ್ಲಿ ತೊಡಗಿಸುವುದನ್ನು ನಿಷೇಧಿಸಲಾಗಿದೆ.

ಧಾರ್ಮಿಕ ಸ್ವಾತಂತ್ರ್ಯ: ಭಾರತೀಯ ಸಂವಿಧಾನ ಜಾತ್ಯತೀತ ಪ್ರಜಾಪ್ರಭುತ್ವದ ವಿಶಿಷ್ಟ ಲಕ್ಷಣಗಳನ್ನು ಹೊಂದಿಕೊಂಡಿದೆ. ಯಾವುದೇ ಧರ್ಮದೊಂದಿಗೆ ಸಂವಾದಗೊಳ್ಳದಿರುವುದು ಮತ್ತು ಅದರ ನಿಯಂತ್ರಣಕ್ಕೊಳಗಾಗದಿರುವುದು, ಇಚ್ಛೆಯಿಂದ ಧರ್ಮವನ್ನು ಅನುಕರಿಸಲು ಅವಕಾಶ ಮಾಡಿಕೊಡುವುದು ಇಂಥ ಲಕ್ಷಣಗಳು. ಸಾರ್ವಜನಿಕ ಶಾಂತಿ, ನೈತಿಕತೆ, ಆರೋಗ್ಯ ಮತ್ತು ಇತರ ಮೂಲಭೂತ ಹಕ್ಕುಗಳಿಗೆ ಅಧೀನಪಟ್ಟು ಎಲ್ಲ ಜನರಿಗೂ ಸಮಾನವಾಗಿ ಸ್ವಂತ ಆತ್ಮಸಾಕ್ಷಿ ಹೊಂದುವ ಸ್ವಾತಂತ್ರ್ಯವನ್ನೂ ತನ್ನ ಧರ್ಮವನ್ನು ಬಹಿರಂಗವಾಗಿ ಹೇಳಿಕೊಳ್ಳುವ, ಆಚರಿಸುವ ಮತ್ತು ಪ್ರಸಾರ ಮಾಡುವ ಸ್ವಾತಂತ್ರ್ಯವನ್ನೂ ಕೊಡಲಾಗಿದೆ. ಆದರೆ ಲೌಕಿಕ, ಆರ್ಥಿಕ ಮತ್ತು ರಾಜಕೀಯ ಚಟುವಟಿಕೆಗಳನ್ನು ನಿಯಂತ್ರಿಸುವ, ಎಲ್ಲರಿಗೂ ಹಿಂದೂ (ಸಿಕ್, ಜೈನ ಮತ್ತು ಬೌದ್ಧ ಅನುಯಾಯಿಗಳು ಸೇರಿದಂತೆ) ದೇವಾಲಯಗಳ ಪ್ರವೇಶ ಮೊದಲಾದ ಸಾಮಾಜಿಕ ಸುಧಾರಣೆಗಳನ್ನು ತರುವ ಅಧಿಕಾರ ಸರ್ಕಾರಕ್ಕಿದೆ. ವ್ಯಕ್ತಿಗಳಿಗಿರುವಂತೆ ಧಾರ್ಮಿಕ ಪಂಗಡಗಳಿಗೂ ಧಾರ್ಮಿಕ ಸಂಸ್ಥೆ ಕಟ್ಟಿ ಆಡಳಿತ ನಡೆಸುವ ಹಕ್ಕನ್ನು ಕೊಡಲಾಗಿದೆ. ಸರ್ಕಾರೀ ಶಾಲೆಗಳಲ್ಲಿ ಮತ್ತು ಸರ್ಕಾರದ ನೆರವು ಪಡೆಯುವ ಶಾಲೆಗಳಲ್ಲಿ ಧಾರ್ಮಿಕ ಶಿಕ್ಷಣ ನೀಡುವಿಕೆಯನ್ನು ನಿಷೇಧಿಸಲಾಗಿದೆ.

ಸಾಂಸ್ಕøತಿಕ ಮತ್ತು ಶೈಕ್ಷಣಿಕ ಹಕ್ಕುಗಳು: ರಾಷ್ಟ್ರದ ಯಾವುದೇ ಭಾಗದಲ್ಲಿ ವಾಸಿಸುತ್ತಿರುವ ಯಾವುದೇ ಪ್ರಜಾವರ್ಗಕ್ಕೆ ತನ್ನದೇ ಆದ ವಿಶಿಷ್ಟ ಭಾಷೆ, ಲಿಪಿ ಅಥವಾ ಸಂಸ್ಕøತಿ ಇದ್ದರೆ, ಅವನ್ನು ರಕ್ಷಿಸಿಕೊಳ್ಳುವ ಹಕ್ಕನ್ನು ಕೊಡಲಾಗಿದೆ. ಸರ್ಕಾರೀ ನೆರವು ಪಡೆಯುವ ಇಲ್ಲವೇ ಸರ್ಕಾರದ ಶೈಕ್ಷಣಿಕ ಸಂಸ್ಥೆಗಳಿಗೆ ಪ್ರವೇಶಾವಕಾಶ ನೀಡುವಾಗ ಧರ್ಮ, ಜನಾಂಗ, ಜಾತಿ, ಭಾಷೆಗಳ ಆಧಾರದಲ್ಲಿ ಪಕ್ಷಪಾತ ಮಾಡುವುದನ್ನು ನಿಷೇಧಿಸಲಾಗಿದೆ. ಧರ್ಮ ಅಥವಾ ಭಾಷೆಯಮೇಲೆ ಆಧಾರಗೊಂಡ ಎಲ್ಲ ಅಲ್ಪಸಂಖ್ಯಾತರೂ ತಮ್ಮ ಇಚ್ಛೆಯ ಪ್ರಕಾರ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ನಡೆಸಲು ಹಕ್ಕು ಪಡೆದಿದ್ದಾರೆ. ಆದರೆ ದುರಾಡಳಿತವನ್ನು ತಡೆಯುವ ಅಧಿಕಾರ ಸರ್ಕಾರಕ್ಕಿದೆ. ಸರ್ಕಾರ ಧನಸಹಾಯ ನೀಡುವಾಗ ಅಲ್ಪ ಸಂಖ್ಯಾತತೆಯ ಕಾರಣದಿಂದ ತಾರತಮ್ಯ ಮಾಡುವಂತಿಲ್ಲ.

ಆಸ್ತಿಯ ಹಕ್ಕು: ಮೂಲ ಸಂವಿಧಾನದಲ್ಲಿ ದತ್ತವಾದ ಆಸ್ತಿ, ಹಕ್ಕನ್ನು 44ನೆಯ ಸಾಂವಿಧಾನದ ತಿದ್ದುಪಡಿಯ ಮೂಲಕ 1978 ಮೂರನೆಯ ಭಾಗದಿಂದ ರದ್ದುಗೊಳಿಸಿ ಬರಿಯ ಸಾಂವಿಧಾನಿಕ ಹಕ್ಕಾಗಿ ಮಾತ್ರ ಉಳಿಸಿಕೊಳ್ಳಲಾಗಿದೆ. 1978ರ ಮೊದಲು ಪೌರನಿಗೆ ಇದ್ದ ಆಸ್ತಿಗಳಿಸುವ, ಇಟ್ಟುಕೊಳ್ಳುವ ಮತ್ತು ವಿಲೆ ಮಾಡುವ ಹಕ್ಕನ್ನು ರಕ್ಷಿಸಲಾಗಿತ್ತು. ಆದರೆ, ಸಾರ್ವಜನಿಕ ಉದ್ದೇಶಕ್ಕೆ ವೈಯುಕ್ತಿಕ ಆಸ್ತಿಯನ್ನು ಕಾನೂನು ರೀತ್ಯ ಪರಿಹಾರದ ಮೊತ್ತ ಕೊಟ್ಟು ವಶಪಡಿಸಿಕೊಳ್ಳಲು ಸರ್ಕಾರಕ್ಕೆ ಅಧಿಕಾರ ನೀಡಲಾಗಿತ್ತು. ಸಂವಿಧಾನದ ಜಾರಿಯ ವೇಳೆ ಪ್ರಚಲಿತವಿದ್ದ ಭೂಸುಧಾರಣಾ ಕಾನೂನುಗಳಿಗೆ ಮೂಲಭೂತ ಹಕ್ಕುಗಳ ಆಧಾರದ ವ್ಯಾಜ್ಯಗಳಿಂದ ರಕ್ಷಣೆ ಒದಗಿಸಲಾಗಿತ್ತು. ಈ ರಕ್ಷಣೆ ಮುಂದಿನ ಕಾನೂನುಗಳಿಗೆ ಸಿಗದಾದಾಗ ತೊಡಕುಂಟಾಗಿ ಸಂವಿಧಾನಕ್ಕೆ ತಿದ್ದುಪಡಿ ಮಾಡಬೇಕಾಗಿ ಬಂತು. ಭೂಸುಧಾರಣಾ ಶಾಸನಗಳು ಮತ್ತು ಆರ್ಥಿಕ ಸುಧಾರಣಾ ಶಾಸನಗಳು ಸಂವಿಧಾನದ ಆಧಾರದ ಕಕ್ಷೆಗಳಿಂದ ಹೊರತಾಗುವಂತೆ ಒಂಬತ್ತನೆಯ ಪರಿಶಿಷ್ಟವನ್ನು ನಿರ್ಮಿಸಿ ರಕ್ಷಣೆ ಒದಗಿಸಲಾಯಿತು. ಆದರೂ ಹಲವು ರಾಷ್ಟ್ರೀಕರಣ ಯೋಜನೆಗಳಿಗೆ ಆಸ್ತಿ ಹಕ್ಕು ಅಡ್ಡ ಬರುತ್ತದೆ ಅಥವಾ ಅಡ್ಡಬಂದಿದೆ ಎಂಬ ನಂಬಿಕೆಯಿಂದ ಅದನ್ನು 3ನೆಯ ಭಾಗದಿಂದ ಕಿತ್ತುಹಾಕಿ ಆಸ್ತಿಹಕ್ಕನ್ನು ಸಾಮಾನ್ಯ ಶಾಸನಗಳ ಅಂಶಗೊಳಪಟ್ಟ ಹಕ್ಕಾಗಿ ಮಾತ್ರ ಮಾಡಲಾಗಿದೆ.

ಸಾಂವಿಧಾನಿಕ ಪರಿಹಾರಗಳ ಹಕ್ಕು: ಮೂರನೆಯ ಭಾಗದಲ್ಲಿ ನೀಡಿದ ಹಕ್ಕುಗಳನ್ನು ಯುಕ್ತ ವ್ಯವಹರಣೆಗಳ ಮೂಲಕ ಸರ್ವೋಚ್ಚ ನ್ಯಾಯಾಲಯ ಜಾರಿಗೆ ತರುವಂತೆ ಮಾಡುವ ಹಕ್ಕನ್ನು ರಕ್ಷಿಸಲಾಗಿದೆ. ಸರ್ವೋಚ್ಚ ನ್ಯಾಯಾಲಯಕ್ಕೆ ಯಾವುದೇ ಮೂಲಭೂತ ಹಕ್ಕನ್ನು ಜಾರಿಗೆ ತರುವುದಕ್ಕಾಗಿ ಹೇಬಿಯಸ್ ಕಾರ್ಪಸ್ (ಆಸಾಮಿ ಹಾಜರು ಆಜ್ಞೆ). ಮಂಡಾವಸ್ (ಪರಮಾದೆ ಶ), ಪ್ರಾಹಿಬಿಷನ್ (ನಿಷೇಧೆಲೇಖ), ಕೋವಾರಂಟೊ (ಅಧಿಕಾರ ಲೇಖ), ಮತ್ತು ಸರ್ಟಿಯೋರರಿ (ಉತ್ಪ್ರೇಷಣ ಲೇಖ)-ಈ ಯಾವುದೇ ಬಗೆಯ ರಿಟ್ ಅಥವಾ ಆದೇಶಲೇಖವನ್ನು ನೀಡುವ ಅಧಿಕಾರವಿದೆ. ಯಾವುದೇ ಮೂಲಭೂತ ಹಕ್ಕು ಉಲ್ಲಂಘನೆಯಾದಾಗ ಇಂಥ ಆದೇಶಲೇಖನಗಳನ್ನು ನೀಡುವ ಮೂಲಕ ಪರಿಹಾರ ದೊರೆಯುವಂತೆ ಏರ್ಪಡಿಸಿದೆ. ರಾಜ್ಯಗಳಲ್ಲಿರುವ ಉಚ್ಚನ್ಯಾಯಲಯಗಳನ್ನು ಇದಕ್ಕೆ ವೇದಿಕೆಯಾಗಿ ಉಪಯೋಗಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಸರ್ಕಾರೀ ಕಾರ್ಯದಿಂದಾಗಿ ಮೂಲಭೂತ ಹಕ್ಕಿನಿಂದ ವಂಚಿತನಾದವನಲ್ಲದೆ ಇತರರು ಅವನ ಪರವಾಗಿ ನ್ಯಾಯಾಲಯದಲ್ಲಿ ಹಕ್ಕುಸಾಧನೆ ಮಾಡುವಂತಿಲ್ಲವೆಂದು ನಿಲವು ತಳೆದಿದ್ದ ಸರ್ವೋಚ್ಚ ನ್ಯಾಯಾಲಯ ಇತ್ತೀಚಿನ ಹಲವಾರು ಪ್ರಕರಣಗಳಲ್ಲಿ (1981) ತನ್ನ ಉನ್ನತ ದಾರ್ಶನಿಕ ದೃಷ್ಟಿಯಿಂದ ಅಂಥ ನಿಲವನ್ನು ತಿರಸ್ಕರಿಸಿ ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆಗಳನ್ನು ನಿರ್ಣಯಿಸಿದೆ. ಇದರಂತೆ, ತೊಂದರೆಗೆ ಈಡಾದ ಬಡವರ ಮತ್ತು ಶೋಷಿತರಪವಾಗಿ ಇತರರು ದಾವೆ ಹೂಡಬಹುದಾಗಿದೆ. ಕಾನೂನಿನ ನೆರವು ಈ ಸಂದರ್ಭದಲ್ಲಿ ದೊರೆಯುವ ಅವಕಾಶವಿದೆ. ಆದೇಶಲೇಖಗಳ ವಿಧಾನದಲ್ಲಿ (ಅರ್ಜಿಯಕ್ರಮ ಇತ್ಯಾದಿ) ಸರಳೀಕರಣ ಮಾಡಲಾಗಿದೆ. ಹೀಗೆ ಸರ್ಕಾರಗಳು ಶಾಸಕೀಯ, ಕಾರ್ಯನಿರ್ವಾಹಕ ಮತ್ತು ನ್ಯಾಯತೀರ್ಮಾನ ಅಧಿಕಾರಿಗಳ ಚಲಾವಣೆಯ ಮೂಲಕ ಅಥವಾ ಅಲಕ್ಷ್ಯದ ಮೂಲಕ ಮಾಡುವ ಮೂಲಭೂತ ಹಕ್ಕುಗಳ ಉಲ್ಲಂಘನೆಗಳನ್ನು ಸರಿಪಡಿಸಲು ಸರಿಯಾದ ಮಾರ್ಗವಿದ್ದು, ಮೂಲಭೂತ ಹಕ್ಕುಗಳ ಭಾಗ ಸ್ವಯಂಪೂರ್ಣ ಕ್ರೋಡೀಕೃತ ನ್ಯಾಯಸೂತ್ರವಾಗಿದೆ.

ರಾಜ್ಯನೀತಿಯ ನಿರ್ದೇಶಕ ತತ್ತ್ವಗಳು: ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ನ್ಯಾಯ ಜನತೆಯ ಎಲ್ಲ ಸ್ತರಗಳಿಗೂ ತಲಪುವಂತೆ ರಾಜ್ಯಶಕ್ತಿಯನ್ನು ದುಡಿಸಲು ಮತ್ತು ಕಲ್ಯಾಣರಾಜ್ಯದ ಉನ್ನತ ಆದರ್ಶಗಳತ್ತ ರಾಜ್ಯವನ್ನು ಮಾರ್ಗದರ್ಶಿಸಲು ಸಂವಿಧಾನದ 4ನೆಯ ಭಾಗದಲ್ಲಿ ರಾಜ್ಯನೀತಿಯ ನಿರ್ದೇಶಕ ತತ್ತ್ವಗಳನ್ನು ಅಳವಡಿಸಲಾಗಿದೆ. ಆರ್ಥಿಕ ಪ್ರಜಾಪ್ರಭುತ್ವ, ಸಾರ್ವತ್ರಿಕ ಶಿಕ್ಷಣ ಮೊದಲಾದ ಸಾಮಾಜಿಕ ಹಕ್ಕುಗಳನು ನ್ಯಾಯಲಯದ ಮೂಲಕ ರಕ್ಷಿಸಿ ಪಡೆಯುವಂಥ ಪ್ರಯೋಗಿಕತೆಗೆ ಬೇಕಾದ ಭೂಮಿಕೆ ಭಾರತದಲ್ಲಿ ಇರಲಿಲ್ಲ. ಈ ವಾಸ್ತವಿಕ ಪ್ರಜ್ಞೆಯಿಂದ, ಐರಿಷ್ ಮತ್ತು ಸ್ಪ್ಯಾನಿಷ್ ಮಾದರಿಯಂತೆ, ನ್ಯಾಯಲಯಗಳ ಮೂಲಕ ಜಾರಿಗೊಳಿಸಲಾದ, ಆದರೆ ರಾಜ್ಯದ ಆಳ್ವಿಕೆಯಲ್ಲಿ ಮೂಲಭೂತವಾಗತಕ್ಕಂಥ ನಿರ್ದೇಶಕ ತತ್ತ್ವಗಳನ್ನು ರೂಪಿಸಲಾಗಿದೆ. ಜಾಗತಿಕ ಮಾನವ ಹಕ್ಕುಗಳ ಸನ್ನದು 3ನೆಯ ಭಾಗವನ್ನು ರಚಿಸುವಾಗ ಪ್ರಭಾವ ಬೀರಿದಂತೆ ಈ 4ನೆಯ ಭಾಗವನ್ನು ರಚಿಸುವಾಗಲೂ ಪ್ರಭಾವ ಬೀರಿತ್ತು. ಆದರೆ ಈ ಭಾಗ ಬರಿಯ ಪವಿತ್ರ ಘೋಷಣೆಯಲ್ಲ; ಆದರ್ಶಗಳ, ಕನಸುಗಳ ತುಣುಕುಗಳೂ ಅಲ್ಲ, ಬದಲಾಗಿ ಸಾಮಾಜಿಕ ಸುಧಾರಣೆಯ ಪ್ರಾಮಾಣಿಕ ಕಾಳಜಿಯನ್ನು ರಾಜ್ಯದ ಮೇಲೆ ಹೊರಿಸುವಂಥದು. (ಇಲ್ಲಿ ರಾಜ್ಯ ಎಂಬ ಪದವನ್ನು 3ನೆಯ ಭಾಗದಲ್ಲಿ ಯಂತೆಯೇ ಅರ್ಥವಿಸಲಾಗಿದೆ). ಜನರ ಹಿತರಕ್ಷಣೆಗಾಗಿರುವ ಸಾಮಾಜಿಕ ವ್ಯವಸ್ಥೆಯ ನಿರ್ಮಾಣ ಎಲ್ಲ ಪ್ರಜೆಗಳಿಗೂ ಸಾಕಷ್ಟು ಪ್ರಮಾಣದ ಜೀವನೋಪಾಯ, ದೇಶದ ಅಥವಾ ಸಮಾಜದ ಸಂಪನ್ಮೂಲಗಳನ್ನು ಸಾರ್ವತ್ರಿಕ ಒಳಿತಿಗೆ ಯುಕ್ತವಾಗಿ ಹಂಚುವುದು, ಸಂಪತ್ತು ಒಂದೇಕಡೆ ಕೇಂದ್ರೀಕೃತವಾಗಿ ಸಾರ್ವತ್ರಿಕ ವಿನಾಶಕ್ಕೆ ಕಾರಣವಾಗುವುದನ್ನು ನಿವಾರಿಸುವುದು, ಸಮಾನ ಕೆಲಸಕ್ಕೆ ಸಮಾನ ವೇತನ, ಕಾರ್ಮಿಕರ ಶಕ್ತಿ ಮತ್ತು ಆರೋಗ್ಯದ ರಕ್ಷಣೆ. ಸುಲಿಗೆಯ ವಿರುದ್ಧ ಬಾಲ್ಯವನ್ನೂ ಯೌವನವನ್ನೂ ರಕ್ಷಿಸುವುದು, ಗ್ರಾಮಪಂಚಾಯಿತಿ ಮೂಲಕ ಸ್ವಯಮಾಡಳಿತ, ವ್ಯಕ್ತಿ ಮತ್ತು ಶಿಕ್ಷಣಗಳ ಹಕ್ಕನ್ನು ದೊರಕಿಸುವುದು, ಕಾರ್ಮಿಕರ ಕಲ್ಯಾಣಕ್ಕಾಗಿ ಜೀವನವೇತನ, ಬಿಡುವು, ಪ್ರಸೂತಿ ಪರಿಹಾರ ಇತ್ಯಾದಿ ನೀಡಿಕೆ, ಹಿಂದುಳಿದ ವರ್ಗಗಳ ಉದ್ಧಾರ, ಸಾರ್ವಜನಿಕ ಆರೋಗ್ಯರಕ್ಷಣೆ, ಪಾನಪ್ರತಿಬಂಧ, ವೈಜ್ಞಾನಿಕ ಕೃಷಿ ಮತ್ತು ಪಶುಪಾಲನೆ, ಕಾರ್ಯಾಂಗದಿಂದ ನ್ಯಾಯಾಂಗದ ಬೇರ್ಪಡಿಕೆ ಮತ್ತು ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗಳನ್ನು ಕಾಪಾಡುವುದು-ಈ ತತ್ತ್ವಗಳು ನಾಲ್ಕನೆಯ ಭಾಗದಲ್ಲಿವೆ. ನೈಜ ಆಚರಣೆಯಲ್ಲಿ ಇವು ನಿರೀಕ್ಷಿಸಿದಷ್ಟು ಮಹತ್ತ್ವ ಪಡೆದಿವೆಯೇ ಅಥವಾ ಅನುಷ್ಠಾದಲ್ಲಿ 'ರಾಜ್ಯ ಸೋತಿದೆಯೇ ಎಂಬವನ್ನು ಕುರಿತು ಸಾಕಷ್ಟು ವಿವಾದವಿದೆ.

ಮೂಲಭೂತ ಹಕ್ಕಿಗೂ ನಿರ್ದೇಶಕ ತತ್ತ್ವಕ್ಕೂ ಘರ್ಷಣೆಯಾದಾಗ ಯಾವುದು ನಿಲ್ಲಬೇಕು ಎನ್ನುವ ಪ್ರಶ್ನೆಗೆ ಸರ್ವೋಚ್ಚ ನ್ಯಾಯಾಲಯ ಯಾವುದು ನ್ಯಾಯಾಲಯದ ಮೂಲಕ ಜಾರಿಗೊಳ್ಳಲ್ಪಡುತ್ತದೋ-ಅಂದರೆ ಮೂಲಭೂತ ಹಕ್ಕುಗಳು-ಅದೇ ನಿಲ್ಲುವಂಥದು ಎಂಬ ತೀರ್ಪಿತ್ತಿತು (1952). ಅರ್ಥಾತ್, ಮೂಲಭೂತಹಕ್ಕುಗಳಿಗೆ ಚ್ಯುತಿಬಾರದಂತೆ ಅದರ ಚೌಕಟ್ಟಿನೊಳಗೆ ಅಥವಾ ಅದಕ್ಕೆ ಅಧೀನಪಟ್ಟು ಮಾತ್ರ ನಿರ್ದೇಶಕ ತತ್ತ್ವದ ಅನುಷ್ಠಾನಸಾಧ್ಯ, ನಿರ್ದೇಶಕ ತತ್ತ್ವವನ್ನು ಆಚರಣೆಗಿಳಿಸಲು ಮಾಡಿದಂಥ ಕಾನೂನು 3ನೆಯ ಭಾಗದಲ್ಲಿಬರುವ 'ವಿವೇಚನಾರ್ಹ ನಿರ್ಬಂಧಗಳು, 'ಸಾರ್ವಜನಿಕ ಹಿತೋದ್ದೇಶ ಎಂಬ ಶಬ್ದಗಳ ವ್ಯಾಖ್ಯಾನದ ವ್ಯಾಪ್ತಿಯೊಳಗೆ ಬರುವಲ್ಲಿ ಸಂಗತವಾದದ್ದೆಂದು ಹೇಳಲಾಗಿದೆ. 1972ರಲ್ಲಿ 25ನೆಯ ಸಾಂವಿಧಾನಿಕ ತಿದ್ದುಪಡಿ ತಂದು ಈ ಕೆಳಗಿನ ಎರಡು ನಿರ್ದೇಶಕ ತತ್ತ್ವಗಳನ್ನು-ಸಮಾಜದ ಸಂಪನ್ಮೂಲಗಳನ್ನು ಸಾರ್ವತ್ರಿಕ ಒಳಿತಿಗೆ ಸರಿಯಾಗಿ ಹಂಚುವುದು ಮತ್ತು ಸಂಪತ್ತು ಒಂದೇ ಕಡೆ ಕೇಂದ್ರೀಕೃತವಾಗಿ ಸಾರ್ವತ್ರಿಕ ವಿನಾಶಕ್ಕೆ ಕಾರಣವಾಗುವುದನ್ನು ನಿವಾರಿಸುವುದು-ಜಾರಿಗೆ ತರುವ ಯಾವುದೇ ಕಾನೂನು ಅದು ಸಮಾನತೆ, ಸ್ವಾತಂತ್ರ್ಯ ಮತ್ತು ಆಸ್ತಿಯ ಹಕ್ಕುಗಳನ್ನು ಉಲ್ಲಂಘಿಸಿದಾಗ್ಯೂ ಸಂವಿಧಾನಬದ್ಧವೆಂದು ಮಾಡಲಾಯಿತು. ಈ ತಿದ್ದುಪಡಿಯನ್ನು 1973ರಲ್ಲಿ ಸರ್ವೋಚ್ಚ ನ್ಯಾಯಾಲಯ ಸರಿಯೆಂದು ಪರಿಗಣಿಸಿದೆ. ಆದರೆ 1976ರಲ್ಲಿ ತಂದ 42ನೆಯ ಸಾಂವಿಧಾನಿಕ ತಿದ್ದುಪಡಿಯ ಮೂಲಕ ಅಬಾಧಿತವಾಗತಕ್ಕದ್ದೆಂದು ಮಾಡಿರುವುದನ್ನು 1980ರಲ್ಲಿ ಸರ್ವೋಚ್ಚ ನ್ಯಾಯಾಲಯ ಸಂವಿಧಾನವಿರೋಧಿಯೆಂದು ಪರಿಗಣಿಸಿ ನಿಷ್ಪರಿಣಾಮಗೊಳಿಸಿದೆ.

ಮೇಲೆ ಹೇಳಿದ 42ನೆಯ ಸಂವಿಧಾನ ತಿದ್ದುಪಡಿಯ ಮೂಲಕ ನೂತನ ವಿಧಿಯನ್ನು ರಚಿಸಿ ನಾಗರಿಕರ ಮೂಲಭೂತ ಕರ್ತವ್ಯಗಳನ್ನು ನಿಯಮಿಸಲಾಗಿದೆ. ಇವು ಮೂಲಭೂತವಾಗಿದ್ದರೂ ಇವುಗಳ ಪರಿಪಾಲನೆ ಮಾಡದಿರುವುದು ಶಿಕ್ಷಾರ್ಹವಲ್ಲ. ರಾಷ್ಟ್ರಗೀತೆ, ಧ್ವಜ, ಮುದ್ರೆ, ಸಂವಿಧಾನಗಳಿಗೆ ಗೌರವ ತೋರುವುದು, ಸಾಮರಸ್ಯ ಜೀವನ ನಡೆಸುವುದು, ವೈಜ್ಞಾನಿಕ ಮನೋಭಾವ ಬೆಳೆಸುವುದು ಇತ್ಯಾದಿ ಕರ್ತವ್ಯಗಳನ್ನು ವಿಧಿಸಲಾಗಿದೆ.

ಕೇಂದ್ರ ಸರ್ಕಾರದ ವ್ಯವಸ್ಥೆ: ಕಾರ್ಯಾಂಗ, ಸಂಪತ್ತು ಮತ್ತು ಸರ್ವೋಚ್ಚ ನ್ಯಾಯಾಲಯ-ಇವು ಮೂರು ಕೇಂದ್ರ ಸರ್ಕಾರದ ಅಂಗಗಳು. ಈ ಅಂಗಗಳ ರಚನೆ, ಅಧಿಕಾರ, ಕರ್ತವ್ಯ ಮತ್ತು ಪರಸ್ಪರ ಸಂಬಂಧಗಳನ್ನು ಸಂವಿಧಾನದಲ್ಲಿ ನಿಯಮಿಸಲಾಗಿದೆ.

ಕಾರ್ಯಾಂಗದ ವ್ಯವಸ್ಥೆ ಬ್ರಿಟಿಷ್ ಮಾದರಿಯ ಸಾಂಸತ್ತಿಕ (ಮಂತ್ರಿ ಸಂಪುಟ) ಸರ್ಕಾರ ಪದ್ಧತಿಯ ರೀತಿಯಲ್ಲಿದೆ. ಸಾಮಾಜಿಕ ಕ್ರಾಂತಿಗೆ ದಾರಿ ಯಾವುದೆಂದು ಅರಸುತ್ತಿದ್ದ ಸಂವಿಧಾನದ ರಚನಾಸಭೆಗೆ ಸಾಂಸತ್ತಿಕ ಸರ್ಕಾರವೇ ಯೋಗ್ಯವೆಂದು ಕಂಡು ಬಂದಿತು. ಶಕ್ತಿಯುತ ಮತ್ತು ಸ್ಥಿರ ಸರ್ಕಾರಕ್ಕಿಂತ ಜನಪ್ರತಿನಿಧಿಗಳ ಅಂಕುಶಕ್ಕೊಳಪಟ್ಟ ಸರ್ಕಾರವೇ ಯೋಗ್ಯ ಎಂದು ತೋರಿತು. ಇದರಂತೆ ನಾಮಮಾತ್ರ ಅಧಿಕಾರವುಳ್ಳ ರಾಷ್ಟ್ರಪತಿ ಇರುತ್ತಾನೆ. ಇವನು ಕಾರ್ಯಾಂಗ, ಶಾಸಕಾಂಗ ಮತ್ತು ಸೇನೆಗಳ ಮುಖ್ಯಸ್ಥ. ಸರ್ಕಾರದ ಎಲ್ಲ ಕೆಲಸಗಳ ನೇಮಕಾತಿಗಳು ಇವನ ಹೆಸರಲ್ಲಾಗುತ್ತವೆ. ಅಪರಾಧಿಗಳಿಗೆ ಕ್ಷಮಾದಾನ ನೀಡುವ ಅಧಿಕಾರ ಇವನಿಗಿದೆ. ಇವನನ್ನು ಚುನಾಯಿಸುವುದು ಕೇಂದ್ರ ಮತ್ತು ರಾಜ್ಯಗಳ ಚುನಾಯಿತು ಶಾಸಕರು. ಇವನ ಅಧಿಕಾರಾವಧಿ 5 ವರ್ಷ. ಒಬ್ಬ ಉಪರಾಷ್ಟ್ರಪತಿಯನ್ನು ಕೇಂದ್ರ ಸಂಸತ್ತು ಚುನಾಯಿಸುತ್ತದೆ. ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಇವರ ಕನಿಷ್ಠ ಅರ್ಹತೆ, ಪ್ರತಿಜ್ಞಾವಿಧಿ ಮತ್ತು ವೇತನಗಳ ಕುರಿತು ವಿವರವಾದ ನಿಯಮವಿದೆ. ರಾಷ್ಟ್ರಪತಿ ಪ್ರಧಾನಮಂತ್ರಿ ನಾಯಕತ್ವದ ಕೇಂದ್ರ ಮಂತ್ರಿಮಂಡಳದ ಸಲಹೆಯಂತೆ ಅಧಿಕಾರ ಚಲಾಯಿಸತಕ್ಕದ್ದೆಂದೂ ಅಂಥ ಸಲಹೆಯನ್ನು ಪುನಃ ಪರಿಶೀಲನೆಗೆ ಮಂತ್ರಿಮಂಡಳಕ್ಕೆ ಹಿಂತಿರುಗಿಸಿದರೂ ಕೊನೆಯಲ್ಲಿ ಅದು ನೀಡುವ ಸಲಹೆಗೆ ಅವನು ಬುದ್ಧನೆಂದೂ ನಿರೂಪಿಸಲಾಗಿದೆ. ರಾಷ್ಟ್ರಪತಿಯೇ ಪ್ರಧಾನಮಂತ್ರಿಯನ್ನು ನೇಮಿಸುವುದಾದರೂ ಮಂತ್ರಿಮಂಡಳ ಸಾಮುದಾಯಿಕವಾಗಿ ಚುನಾಯಿತ ಜನ ಪ್ರತಿನಿಧಿಗಳುಳ್ಳ ಲೋಕಸಭೆಗೆ ಜವಾಬ್ದಾರಿಯುತವಾಗಿರಬೇಕಾದ್ದರಿಂದ ಲೋಕಸಭೆಯಲ್ಲಿ ಬಹುಮತ ಹೊಂದಿದ ಪಕ್ಷದ ಅಥವಾ ಪಕ್ಷಗಳ ಗುಂಪಿನ ನೇತಾರವನ್ನು ಪ್ರಧಾನಮಂತ್ರಿಯಾಗಿ ನೇಮಕ ಮಾಡಲು ಅವನು ಬದ್ಧನಿರುತ್ತಾನೆ. ಲೋಕಸಭೆ ಮಂತ್ರಿಮಂಡಲದಲ್ಲಿ ವಿಶ್ವಾಸಮತ ಇಟ್ಟಿರುವ ತನಕ ಪ್ರಧಾನಮಂತ್ರಿಯೇ ಅಧಿಕಾರದಲ್ಲಿರುತ್ತಾನೆ (ಳೆ). ಆದರೆ ಲೋಕಸಭೆಯೇ ಮತ್ತೆ ಮಂತ್ರಿಮಂಡಲದ ರಚನೆಗೆ ಮೂಲವಾಗುತ್ತದೆ. ಕಾರ್ಯಾಂಗಾಧಿಕಾರ ಸಂವಿಧಾನದ ನಿಯಮಗಳಿಗೆ ಅಧೀನವಾಗಿರುತ್ತದೆ.

ಕೇಂದ್ರ ಶಾಸಕಾಂಗ ಅಥವಾ ಸಂಸತ್ತಿನಲ್ಲಿ ಎರಡು ಸದನಗಳಿವೆ: ಲೋಕಸಭೆ ಮತ್ತು ರಾಜ್ಯಸಭೆ. ಲೋಕಸಭೆಯಲ್ಲಿ ಪೌರರಿಂದ ನೇರವಾಗಿ ವಯಸ್ಕ (21 ವರ್ಷ ಮೀರಿದವರು) ಮತದಾನದ ಮೂಲಕ ಚುನಾಯಿತರಾದ ಪ್ರತಿನಿಧಿಗಳಿರುತ್ತಾರೆ. ಲೋಕಸಭಾ ಸದಸ್ಯರ ಸಂಖ್ಯೆ 542. ಮೇಲ್ಮನೆಯಾದ ರಾಜ್ಯ ಸಭೆಯಲ್ಲಿ 238ನ್ನು ಮೀರಿರದ (ಈಗ 232) ರಾಜ್ಯಶಾಸನ ಸಭೆಗಳಿಂದ ಚುನಾಯಿತರಾದ ಪ್ರತಿನಿಧಿಗಳೂ ರಾಷ್ಟ್ರಪತಿಯಿಂದ ನಾಮಕರಣಗೊಂಡ ವಿವಿಧ ಕ್ಷೇತ್ರಗಳಲ್ಲಿ ಪರಿಣತಿಹೊಂದಿದ 12 ಪ್ರತಿನಿಧಿಗಳೂ ಇರುತ್ತಾರೆ. ಈ ಸದಸ್ಯರ ಅಧಿಕಾರಾವಧಿ 6 ವರ್ಷ. 2 ವರ್ಷಕ್ಕೊಮ್ಮೆ ರಾಜ್ಯಸಭೆಯ 1/3 ರಷ್ಟು ಸದಸ್ಯರು ನಿವೃತ್ತಿ ಹೊಂದುತ್ತಾರೆ. ರಾಜ್ಯಸಭೆ ವಿಸರ್ಜನೆಗೊಳಪಡದ ಶಾಶ್ವತ ಸದನ. ಎರಡೂ ಸದನಗಳ ಸದಸ್ಯರ ಕನಿಷ್ಠ ಅರ್ಹತೆಯನ್ನು ನಿಗದಿಪಡಿಸಲಾಗಿದೆ. ಸಾಮಾನ್ಯ ಶಾಸನಗಳು ಎರಡೂ ಸದನಗಳಲ್ಲಿ ಅಂಗೀಕೃತವಾಗಿ ರಾಷ್ಟ್ರಪತಿಯ ಸಮ್ಮತಿ ಪಡೆಯಬೇಕು. ರಾಷ್ಟ್ರಪತಿ ಮಸೂದೆಯನ್ನು ಸಂಸತ್ತಿನ ಪುನಃಪರಿಶೀಲನೆಗೆ ಕಳುಹಿಸಬಹುದಾದರೂ ಮತ್ತೆ ಅಂಗೀಕೃತವಾದ ಮಸೂದೆಗೆ ಅವನು ಒಪ್ಪಿಗೆ ನೀಡಲೇಬೇಕಾಗುತ್ತದೆ. ಸದನಗಳೊಳಗೆ ಭಿನ್ನಾಭಿಪ್ರಾಯವಿದ್ದರೆ ಸಂಯುಕ್ತ ಅಧಿವೇಶನ ಕರೆದು ಬಹುಮತದ ಮೇರೆಗೆ ನಿರ್ಣಯಿಸಲಾಗುವುದು. ಹಣಕಾಸು ಮಸೂದೆ ಮತ್ತು ಆಯವ್ಯಯ ಅಂದಾಜು ಪತ್ರಗಳ ಮಟ್ಟಿಗೆ ಲೋಕಸಭೆಗೇ ನಿರ್ಣಯಾತ್ಮಕ ಅಧಿಕಾರವಿದೆ. ಎರಡೂ ಸದನಗಳಿಗೆ ತಮ್ಮ ಘನತೆ ಗೌರವ ರಕ್ಷಿಸಿಕೊಳ್ಳಲು ಮತ್ತು ಶಾಸಕಾಂಗದ ನಿಂದೆ ಶಿಕ್ಷಿಸಲು ಹಕ್ಕುಚ್ಯುತಿ ನಿರ್ಣಯದ ಮೂಲಕ ಅಧಿಕಾರವಿದೆ. ಸಂಸತ್ತಿನ ಅಧಿವೇಶನಗಳು ವರ್ಷಕ್ಕೆ ಕನಿಷ್ಠ ಪಕ್ಷ ಎರಡುಬಾರಿ ನಡೆಯಬೇಕು. ರಾಷ್ಟ್ರಪತಿಗೆ ಅಧಿವೇಶನ ಕರೆಯುವ, ಸದನಗಳನ್ನು ಉದ್ದೇಶಿಸಿ ಮಾತಾಡುವ ಮತ್ತು ಲೋಕಸಭೆಯನ್ನು ವಿಸರ್ಜಿಸುವ ಅಧಿಕಾರ ಇದೆ. ಇದಾದರೂ ಸ್ವವಿವೇಚನೆಯ ಅಧಿಕಾರವಲ್ಲ. ಸದನಗಳು ಅಧಿವೇಶನದಲ್ಲಿಲ್ಲದ ವೇಳೆ ಅವಶ್ಯವೆನಿಸಿದಾಗ ಸುಗ್ರೀವಾಜ್ಞೆ ಘೋಷಿಸುವ ಅಧಿಕಾರವೂ ಇದೆ. ಮುಂದಿನ ಅಧಿವೇಶನದಲ್ಲಿ ಶಾಸನರೂಪದಲ್ಲಿ ಅಂಗೀಕೃತವಾಗದ ಸುಗ್ರೀವಾಜ್ಞೆ ಕೊನೆಗೊಳ್ಳುತ್ತದೆ.

ನ್ಯಾಯಾಂಗದ ಉತ್ತುಂಗ ಶಿಖರವೇ ಸರ್ವೋಚ್ಚ ನ್ಯಾಯಾಲಯ. ಒಬ್ಬ ಮುಖ್ಯ ನ್ಯಾಯಾಧೀಶ ಮತ್ತು ಹದಿನೇಳು ನ್ಯಾಯಧೀಶರು ರಾಷ್ಟ್ರಪತಿಯಿಂದ ನೇಮಕಗೊಂಡು 65 ವರ್ಷ ಪ್ರಾಯದ ತನಕ ಅಧಿಕಾರದಲ್ಲಿರುವರು. ಯಾವುದೇ ರಾಜ್ಯದ ಉಚ್ಚ ನ್ಯಾಯಾಲಯದ ನ್ಯಾಯಾಧೀಶನಾಗಿ 5 ವರ್ಷ ಉಚ್ಚ ನ್ಯಾಯಾಲಯದ ವಕೀಲನಾಗಿ 10 ವರ್ಷ ಅಥವಾ ಪ್ರಗಲ್ಭನ್ಯಾಯಪಂಡಿತನಾಗಿ ಸಾಕಷ್ಟು ಅನುಭವ ಇರುವಾತ ಈ ಸ್ಥಾನಕ್ಕೆ ಅರ್ಹ. ಮುಖ್ಯನ್ಯಾಯಾಧೀಶನ ನೇಮಕಾತಿಯಲ್ಲಿ ಸೇವಾಹಿರಿತನವೇ ಗಣನೀಯ ಅಂಶವಾದರೂ ನಿರ್ಣಯಾತ್ಮಕ ಅಂಶವಿಲ್ಲ. ಇತರ ನ್ಯಾಯಾಧೀಶರ ಮತ್ತು ಉಚ್ಚ ನ್ಯಾಯಾಲಯಗಳ ನ್ಯಾಯಾಧೀಶರುಗಳ ನೇಮಕಾತಿಯ ಸಂದರ್ಭದಲ್ಲಿ ಮುಖ್ಯನ್ಯಾಯಾಧೀಶರ ಜೊತೆ ಸಮಾಲೋಚಿಸಬೇಕೆಂಬ ನಿಯಮವಿದೆ. ನ್ಯಾಯಾಂಗವು ಶಾಸಕಾಂಗ ಮತ್ತು ಕಾರ್ಯಾಂಗಗಳಿಂದ ಸ್ವತಂತ್ರವಾಗುವಂತೆ ವೇತನ ಮತ್ತು ಇತರ ಸೌಲಭ್ಯಗಳ ರಕ್ಷಣೆ, ನಿವೃತ್ತಿತನಕ ಹುದ್ದೆಯ ರಕ್ಷಣೆ ಇತ್ಯಾದಿ ಕಲ್ಪಿಸಲಾಗಿದೆ. ಸರ್ವೋಚ್ಚ ನ್ಯಾಯಾಲಯಕ್ಕೆ ವಿಶಾಲವಾದ ಅಧಿಕಾರ ವ್ಯಾಪ್ತಿ ಉಂಟು. ಮೂಲಭೂತ ಹಕ್ಕುಗಳ ರಕ್ಷಣೆಗೆ ಆದೇಶಲೇಖ ನೀಡುವುದು. ರಾಜ್ಯ-ರಾಜ್ಯ, ಕೇಂದ್ರ-ರಾಜ್ಯಗಳೊಳಗಿನ ಸಾಂವಿಧಾನಿಕ ಬಿಕ್ಕಟನ್ನು ಪರಿಹರಿಸುವುದು, ಉಚ್ಚನ್ಯಾಯಾಲಯಗಳು ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆಗಳಲ್ಲಿ ನೀಡಿದ ತೀರ್ಮಾನಗಳ ಬಗೆಗಿನ ಮೇಲರ್ಜಿಯನ್ನು ತೀರ್ಮಾನ ಮಾಡುವುದು. ಯಾವುದೇ ನ್ಯಾಯಾಲಯ ಅಥವಾ ನ್ಯಾಯಮಂಡಳಿಯ ತೀರ್ಮಾನವನ್ನು ಪುನಃಪರೀಶೀಲನೆ ಮಾಡುವುದು. ರಾಷ್ಟ್ರಪತಿ ಕೇಳಿದಲ್ಲಿ ಸಲಹಾ ತೀರ್ಪುಗಳನ್ನು ಕೊಡುವುದು ಮೊದಲಾದ ಅಧಿಕಾರ ಉಂಟು. ಸರ್ವೋಚ್ಚ ನ್ಯಾಯಾಲಯ ಕೊಟ್ಟ ತೀರ್ಪುಗಳು ಕೆಳಗಿನ ಎಲ್ಲೂ ನ್ಯಾಯಾಲಯಗಳಿಗೂ ಬದ್ಧ. ಈ ರೀತಿ ಸಂವಿಧಾನದ ಮತ್ತು ಕಾನೂನುಗಳ ನಿಜ ವ್ಯಾಖ್ಯಾನ ಕೊಡುವ ಮತ್ತು ಸಂವಿಧಾನದ ತತ್ತ್ವಗಳನ್ನು ಎತ್ತಿಹಿಡಿಯುವ ಕಾರ್ಯವನ್ನು ಸರ್ವೋಚ್ಚ ನ್ಯಾಯಾಲಯ ಮಾಡುತ್ತದೆ; ಕಾರ್ಯಾಂಗ ಮತ್ತು ಶಾಸಕಾಂಗಗಳು ಸಂವಿಧಾನದ ಉಲ್ಲಂಘನೆ ಮಾಡಿದ್ದನ್ನು ನಿಷ್ಕ್ರಿಯಗೊಳಿಸಿ ಅವನ್ನು ಹದ್ದುಬಸ್ತಿನಲ್ಲಿಡುತ್ತದೆ.

ರಾಜ್ಯಸರ್ಕಾರದ ವ್ಯವಸ್ಥೆ: ರಾಜ್ಯಗಳಲ್ಲೂ ಕೇಂದ್ರದಲ್ಲಿರುವಂತೆ ಸಾಂಸತ್ತಿಕ ಪದ್ಧತಿಯ ಮತ್ತು ಶಾಸಕಾಂಗಕ್ಕೆ ಅಧೀನವಾದ ಕಾರ್ಯಾಂಗವಿರುತ್ತದೆ. ಇದರ ಮುಖ್ಯಾಧಿಕಾರಿಯಾಗಿ ರಾಷ್ಟ್ರಪತಿಯಿಂದ ನೇಮಕಗೊಂಡ ರಾಜ್ಯಪಾಲನಿರುತ್ತಾನೆ. ಇವನು ರಾಜ್ಯ ಮಂತ್ರಿಮಂಡಳದ ಸಲಹೆಯಂತೆ ಕಾರ್ಯನಿರ್ವಹಿಸುತ್ತಾನೆ. ಮುಖ್ಯಮಂತ್ರಿ ನೇತಾರನಾಗಿರುವ ಮಂತ್ರಿಮಂಡಳ ರಾಜ್ಯದ ವಿಧಾನಸಭೆಯಲ್ಲಿ ಬಹುಮತದ ವಿಶ್ವಾಸ ಪಡೆದಿರಬೇಕು. ಅಂಥ ವಿಶ್ವಾಸಮತ ಪಡೆದಿರುವ ತನಕ ಆ ಮಂತ್ರಿಮಂಡಳ ಅಧಿಕಾರದಲ್ಲಿರುತ್ತದೆ. ವಿಧಾನಸಭೆಯ ಮತ್ತು ಮಂತ್ರಿಮಂಡಳದ ಗರಿಷ್ಠ ಅಧಿಕಾರಾವಧಿ 5 ವರ್ಷ. ರಾಜ್ಯಶಾಸಕಾಂಗ ಕೆಲವು ರಾಜ್ಯಗಳಲ್ಲಿ ದ್ವಿಸಭಾಸದನವಾಗಿದ್ದು ಕೆಳಮನೆ ವಿಧಾನಸಭೆ ಮತ್ತು ವಿಧಾನ ಪರಿಷತ್ತನ್ನು (ಮೇಲ್ಮನೆ) ಹೊಂದಿಕೊಂಡಿದ್ದರೆ ಮತ್ತೆ ಕೆಲವು ರಾಜ್ಯಗಳಲ್ಲಿ ಏಕಸಭಾಸದನವಾಗಿರುವುದು. ಕೆಳಮನೆಗೆ ಮತ್ತು ಏಕಾಸಭಾ ಸನದನಗಳಿಗೆ ಜನರಿಂದ ನೇರಮತದಾನ ನಡೆಯುತ್ತದೆ. ಮೇಲ್ಮನೆಗೆ ಶಿಕ್ಷಣ, ಪದವೀಧರ, ವಾಣಿಜ್ಯ,ಅಧಿಕಾರವಿದೆ. ವಿಧಾನಸಭೆ ಮತ್ತು ವಿಧಾನಪರಿಷತ್ತಿನ ನಡುವೆ ಸಾಮಾನ್ಯ ಮಸೂದೆಯ ಅಂಗೀಕಾರವಿದೆ. ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ನಡುವೆ ಸಾಮಾನ್ಯ ಮಸೂದೆಯ ಅಂಗೀಕಾರ ಕುರಿತು ತಲೆದೋರಬಹುದಾದ ಬಿಕ್ಕಟ್ಟು ಮುಂದಿನ ಅಧಿವೇಶನದಲ್ಲಿ ವಿಧಾನಸಭೆ ಮಸೂದೆಯನ್ನು ಅಂಗೀಕಾರಮಾಡುವ ಮೂಲಕ ಪರಿಹರಿಸಲ್ಪಡುತ್ತದೆ. ವಾರ್ಷಿಕ ಆಯವ್ಯಯದ ಪಟ್ಟಿಯ ಅಂಗೀಕಾರ, ಹಣಕಾಸಿನ ಅನುದಾನ ಇತ್ಯಾದಿಗಳಲ್ಲಿ ವಿಧಾನಸಭೆಗೆ ನಿರ್ಣಯಾತ್ಮಕ ಅಧಿಕಾರವಿದೆ. ರಾಜ್ಯಗಳಲ್ಲಿ ಒಂದು ಉಚ್ಚನ್ಯಾಯಾಲಯ ಮತ್ತು ಬೇರೆಬೇರೆಸ್ತರದ ಕೆಳಗಿನ ನ್ಯಾಯಾಲಯಗಳು ಮತ್ತು ನ್ಯಾಯಲಯ ಮಂಡಳಿಗಳು ಇರುತ್ತವೆ. ಉಚ್ಚನ್ಯಾಯಾಲಯದ ನ್ಯಾಯಾಧೀಶರ ನೇಮಕಾತಿ ರಾಷ್ಟ್ರಪತಿಯಿಂದಲೇ ಮಾಡಲ್ಪಡುತ್ತದೆ. ಒಂದು ಉಚ್ಚನ್ಯಾಯಲಯದಿಂದ ಇನ್ನೊಂದಕ್ಕೆ ನ್ಯಾಯಾಧೀಶರುಗಳ ವರ್ಗಾವಣೆಗೆ ಅವಕಾಶವಿದೆ. 62 ವರ್ಷದ ತನಕ ಸೇವಾವಧಿ ವೇತನ ಮತ್ತು ಇತರ ಸೌಲಭ್ಯಗಳ ರಕ್ಷಣೆ ಕೊಡಲಾಗಿದೆ. ಉಚ್ಚನ್ಯಾಯಾಲಯಗಳಿಗೆ ಕೆಳಗಿನ ಅಧೀನ ನಾಯಾಲಯಗಳ ಮೇಲೆ ಮೇಲ್ವಿಚಾರಣೆ ಅಧಿಕಾರ ಕೊಡಲಾಗಿದೆ. ಮೂಲಭೂತ ಹಕ್ಕುಗಳ ಸಂರಕ್ಷಣೆಗೆ ಮತ್ತು ಇತರ ಉದ್ದೇಶಗಳಿಗೆ ಉಚ್ಚನ್ಯಾಯಾಲಯಗಳು ಆದೇಶಲೇಖ ಕೊಡುವ ಅಧಿಕಾರವನ್ನು ಕಲ್ಪಿಸಲಾಗಿದೆ. ಉಚ್ಚನ್ಯಾಯಲಯ ಮತ್ತು ನ್ಯಾಯಮಂಡಳಿಗಳ ತೀರ್ಮಾನುಗಳ ಪುನಃ ಪರಿಶೀಲನೆಗೆ ಅಧಿಕಾರಕೊಡಲಾಗಿದೆ.

ಕೇಂದ್ರ ರಾಜ್ಯ ನಡುವಿನ ಸಂಬಂಧ: ಆವಶ್ಯಕ ಸ್ಥಳೀಯ ವೈಶಿಷ್ಟ್ಯ ಕಾಪಾಡಿಕೊಂಡು ಬರುವ ಪ್ರಾಂತೀಯ ಸರ್ಕಾರ ಮತ್ತು ದೇಶದ ಐಕ್ಯ ಉಳಿಸಿಕೊಂಡು ರಾಷ್ಟ್ರ ಶಕ್ತಿಯನ್ನು ಒಗ್ಗೂಡಿಸುವ ಬಲಿಷ್ಠ ಕೇಂದ್ರಸರ್ಕಾರ ಇವುಗಳ ನಡುವೆ ಸಾಮರಸ್ಯ ಮತ್ತು ಹೊಂದಾಣಿಕೆ ಸಾಧಿಸಲು ಭಾರತೀಯ ಸಂವಿಧಾನದಲ್ಲಿ ಸೂಕ್ಷ್ಮವಾಗಿ ಯತ್ನಿಸಲಾಗಿದೆ. ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರದೇಶಗಳನ್ನೂ ಗಡಿಗಳನ್ನೂ ಹೆಸರುಗಳನ್ನೂ ಕಾನೂನು ಮೂಲಕ ಬದಲಾಯಿಸುವ ಅಧಿಕಾರ ಸಂಸತ್ತಿಗೆ ಇದೆ. ಶಾಸಕೀಯ, ಆಡಳಿತಾತ್ಮಕ, ಹಣಕಾಸಿನ ಮತ್ತು ಇತರ ಸಂಬಂಧಗಳ ಕುರಿತ ವಿವರವಾದ ನ್ಯಾಯನಿಯಮಗಳು ಸಂವಿಧಾನದಲ್ಲಿವೆ.

ಶಾಸಕೀಯ ಅಧಿಕಾರಗಳನ್ನು ಮೂರು ಸೂಚಿಗಳಲ್ಲಿ ವಿಂಗಡಿಸಲಾಗಿದೆ: ಕೇಂದ್ರ ಸೂಚಿ, ರಾಜ್ಯ ಸೂಚಿ, ಸಹಗಾಮಿ ಸೂಚಿ, ಕೇಂದ್ರಸೂಚಿಯಲ್ಲಿ ರಾಷ್ಟ್ರೀಯ ಪ್ರಾಮುಖ್ಯದ ಅಧಿಕಾರಿಗಳನ್ನು ಸೇರಿಸಲಾಗಿದ್ದು ಅದರಲ್ಲಿ ಕೇಂದ್ರ ಸರ್ಕಾರವೂ ರಾಜ್ಯಸೂಚಿಯಲ್ಲಿ ಸ್ಥಳೀಯ ಪ್ರಾಮುಖ್ಯದ ಅಧಿಕಾರಿಗಳನ್ನು ಗುರುತಿಸಲಾಗಿದ್ದು ಅದರಲ್ಲಿ ರಾಜ್ಯ ಸರ್ಕಾರವೂ ಶಾಸನಗಳನ್ನು ಮಾಡಬಹುದು. ಸಹಗಾಮಿ ಸೂಚಿಯಲ್ಲಿ ಕಾಣಿಸಿದ ವಿಷಯಗಳ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಾಸನಗಳನ್ನು ಮಾಡಬಹುದು; ಆದರೆ ಕೇಂದ್ರ ಶಾಸನ ರಾಜ್ಯಶಾಸನವನ್ನು ಮೀರಿನಿಲ್ಲುತ್ತದೆ. ಯಾವುದೇ ಸರ್ಕಾರ ಸಂವಿಧಾನದ ಕಟ್ಟುಪಾಡಿನೊಳಗೆ ಮಾತ್ರ ಶಾಸನ ಮಾಡಲು ಸಾಧ್ಯ. ಸಾಮಾನ್ಯ ಸಂದರ್ಭಗಳಲ್ಲಿ ಕೇಂದ್ರಸರ್ಕಾರಕ್ಕೆ ರಾಜ್ಯಪಟ್ಟಿಯಮೇಲೆ ಶಾಸನಮಾಡಲು ಸಾಧ್ಯವಿಲ್ಲದಿದ್ದರೂ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ರಾಷ್ಟ್ರಪತಿ ಆಡಳಿತದ ಸಂದರ್ಭದಲ್ಲಿ, ಅಂತಾರಾಷ್ಟ್ರೀಯ ಒಪ್ಪಂದಗಳನ್ನು ಜಾರಿಮಾಡುವ ಸಂದರ್ಭದಲ್ಲಿ ಮತ್ತು ರಾಜ್ಯಸಭೆ ವಿಶೇಷ ನಿರ್ಣಯದ ಮೂಲಕ ಅಧಿಕಾರವಹಿಸಿಕೊಟ್ಟ ಸಂದರ್ಭದಲ್ಲಿ ಆ ಅಧಿಕಾರ ಇದೆ.

ರಾಜ್ಯದ ಕಾಯಾಂಗಾಧಿಕಾರವನ್ನು ಚಲಾಯಿಸುವಾಗ ಕೇಂದ್ರದ ಕಾರ್ಯಾಂಗಾಧಿಕಾರಕ್ಕೆ ಬಾಧಿ ಆಗಬಾರದು. ಕೇಂದ್ರಶಾಸನಗಳ ಅನುಷ್ಠಾನವಾಗುವಂತೆ ರಾಜ್ಯಗಳು ಕಾರ್ಯಾಂಗಾಧಿಕಾರವನ್ನು ಚಲಾಯಿಸಬೇಕು. ರಾಷ್ಟ್ರೀಯ ಹೆದ್ದಾರಿ. ಸಂಪರ್ಕ ಮತ್ತು ರೇಲ್ವೆಗಳ ಕಾರ್ಯಕ್ಕೆ ರಾಜ್ಯಗಳು ಅನುವು ಮಾಡಿಕೊಡಬೇಕು. ಈ ಉದ್ದೇಶಗಳಿಗಾಗಿ ರಾಜ್ಯಗಳಿಗೆ ಕೇಂದ್ರ ಯುಕ್ತ ನಿರ್ದೇಶನಗಳನ್ನು ಕೊಡಬಹುದು. ಇವನ್ನು ಪಾಲಿಸದಿದ್ದರೆ ರಾಜ್ಯಗಳು ಅಸಂವೈಧಾನಿಕ ರೀತಿಯಲ್ಲಿ ನಡೆಯುತ್ತವೆಂದು ಅರ್ಥ. ಅಂಥ ಸಂದರ್ಭದಲ್ಲಿ ಆ ರಾಜ್ಯದಮೇಲೆ ರಾಷ್ಟ್ರಪತಿ ಆಡಳಿತ ಹೇರಬಹುದು. ಕೇಂದ್ರ ಸರ್ಕಾರ ರಾಜ್ಯದ ಕಾರ್ಯಾಂಗದ ಮುಖ್ಯಾಧಿಕಾರಿಯಾದ ರಾಜ್ಯಪಾಲನನ್ನು ನೇಮಕಮಾಡುತ್ತದೆ. ಈ ಮೂಲಕ ರಾಜ್ಯದ ರಾಜಕೀಯದಲ್ಲಿ ಕೇಂದ್ರ ಹಸ್ತಕ್ಷೇಪ ಮಾಡುವ ಸಾಧ್ಯತೆ ಇದೆ. ರಾಜ್ಯಸರ್ಕಾರಗಳು ಸಂವಿಧಾನದ ರೀತಿಯಲ್ಲಿ ನಡೆಯುವಂತೆ ಮಾಡುವ ಜವಾಬ್ದಾರಿ ಕೇಂದ್ರ ಸರ್ಕಾರಕ್ಕಿದೆ. ರಾಜ್ಯಗಳಲ್ಲಿ ಸಾಂವಿಧಾನಿಕ ಯಂತ್ರ ವಿಫಲಗೊಂಡಿದೆಯೆಂದು ರಾಜ್ಯಪಾಲರ ವರದಿಯಿಂದ ಅಥವಾ ಇನ್ನಿತರರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವರಿಕೆಯಾದಲ್ಲಿ ರಾಜ್ಯದ ಯಾವುದೇ ಅಥವಾ ಎಲ್ಲ ಅಧಿಕಾರಗಳನ್ನು ರಾಷ್ಟ್ರಪತಿ ಘೋಷಣೆ ಮೂಲಕ ವಹಿಸಿಕೊಳ್ಳಬಹುದು. ಕೇಂದ್ರಶಾಸನಗಳ ಜಾರಿಗೆ ಪ್ರತ್ಯೇಕ ಸರ್ಕಾರೀ ಯಂತ್ರವಿರುವುದಿಲ್ಲ. ಆ ಕಾರ್ಯ ನಿರ್ವಹಿಸುವ ಹೊಣೆಗಾರಿಕೆ ರಾಜ್ಯ ಸರ್ಕಾರಗಳದ್ದು.

ಹಣಕಾಸು ವಿಷಯದಲ್ಲಿ ಕೇಂದ್ರ ಸರ್ಕಾರದ ಮತ್ತು ರಾಜ್ಯಸರ್ಕಾರಗಳ ಆದಾಯ ಮೂಲವನ್ನೂ ತೆರಿಗೆ ಕ್ಷೇತ್ರಗಳನ್ನೂ ವಿವರವಾಗಿ ವ್ಯಾಖ್ಯಿಸಲಾಗಿದೆ. ರಾಷ್ಟ್ರದ ಯೋಜನಾಬದ್ದ ಮತ್ತು ಏಕರೀತಿ ಬೆಳೆವಣಿಗೆಗಾಗಿ ಮತ್ತು ರಕ್ಷಣೆ, ದೊಡ್ಡ ಉದ್ಯಮ ಇತ್ಯಾದಿ ಖರ್ಚಿನ ಕ್ಷೇತ್ರಗಳ ಆವಶ್ಯಕತೆಗಳ ಪೂರೈಕೆಗಾಗಿ ಹೆಚ್ಚು ಸಂಪನ್ಮೂಲಗಳನ್ನು ಕೇಂದ್ರಕ್ಕೆ ವಹಿಸಲಾಗಿದೆ. ರಾಜ್ಯಗಳು ಕೇಂದ್ರ ಶಾಸನದಡಿಯಲ್ಲಿ ಸಂಗ್ರಹಿಸುವ ಕರವನ್ನು ಹಣಕಾಸು ಆಯೋಗದ ನಿರ್ಣಯದ ಮೂಲಕ ಕೇಂದ್ರ ಮತ್ತು ರಾಜ್ಯಗಳೊಳಗೆ ಹಂಚಲಾಗುತ್ತದೆ. ಈ ಆಯೋಗ ರಾಷ್ಟ್ರಪತಿ ನೇಮಕಮಾಡಿದ ಆರ್ಥಿಕ ತಜ್ಞರನ್ನು ಒಳಗೊಂಡಿದೆ. ಹಣಕಾಸು ವಿಷಯದಲ್ಲಿ ರಾಜ್ಯ ಸರ್ಕಾರಗಳು ಕೇಂದ್ರವನ್ನು ಅತಿಯಾಗಿ ಅವಲಂಬಿಸಬೇಕಾಗಿದೆಯೆಂಬ ಆರೋಪ ಉಂಟು. ಕೇಂದ್ರರಾಜ್ಯಗಳ ಹಲವುನಿಟ್ಟಿನ ಸಂಬಂಧಗಳು ರಾಜ್ಯಗಳನ್ನು ಅತಿ ಕ್ಷೀಣವಾಗಿಸಿವೆ ಎಂಬ ಆರೋಪ ಪ್ರಚಲಿತವಿದ್ದು 1983ರಲ್ಲಿ ರಚಿಸಲಾದ ಸರ್ಕಾರಿಯಾ ಆಯೋಗದ ಪರಿಶೀಲನೆಯಲ್ಲಿ ಈ ವಿಷಯವಿದೆ. ಆದರೆ ಕೇಂದ್ರ ರಾಜ್ಯಸಂಬಂಧಗಳನ್ನು ರೂಪಿಸುವಲ್ಲಿ ಆರ್ಥಿಕ ಸಾಮಾಜಿಕ ಯೋಜನೆಗಳ ಅನುಷ್ಠಾನ ಮತ್ತು ರಾಷ್ಟ್ರೈಕ್ಯದ ಆವಶ್ಯಕತೆಗಳು ಸಂಬಂಧಿತ ಸಂವಿಧಾನರಚನಾ ಸಭೆಯ ಗಮನದ ಕೇಂದ್ರವಾಗಿತ್ತು ಎಂಬುದು ಸಂವಿಧಾನರಚನಾಸಭೆಯ ಕಲಾಪ ಮತ್ತು ಚರ್ಚೆಯಿಂದ ಕಂಡುಬರುತ್ತದೆ.

ಅಧಿಕಾರ ಬೇರ್ಪಡೆ: ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳ ಅಧಿಕಾರಗಳು ಅಥವಾ ಯಾವುದಾದರೂ ಎರಡರ ಅಧಿಕಾರಗಳು ಒಂದೇ ಕೈಯಲ್ಲಿ ಇದ್ದರೆ ನಿರಂಕುಶಪ್ರಭುತ್ವಕ್ಕೆ ಎಡೆಮಾಡುವುದಾದ್ದರಿಂದ ಅಧಿಕಾರ ಬೇರ್ಪಡೆ ಇರಬೇಕೆಂಬ ರಾಜಕೀಯ ಸಿದ್ಧಾಂತವನ್ನು ಭಾರತೀಯ ಸಂವಿಧಾನ ಅಳವಡಿಸಿಕೊಂಡಿವೆ. ಈ ಮೂರು ಅಂಗಗಳೊಳಗೆ ನಿಕಟ ಸಂಬಂಧವೂ ಪರಸ್ಪರ ನಿಯಂತ್ರಕ ವ್ಯವಸ್ಥೆಯೂ ಇವೆ. ಶಾಸಕಾಂಗವು ಕಾರ್ಯಾಂಗವನ್ನೂ ನ್ಯಾಯಾಂಗವು ಶಾಸಕಾಂಗ ಮತ್ತು ಕಾರ್ಯಾಂಗ ಎರಡನ್ನೂ ನಿಯಂತ್ರಿಸಿ ಸಂವಿಧಾನದ ಶ್ರೇಷ್ಠತೆಯನ್ನು ಸ್ಥಾಪಿಸುತ್ತವೆ. ಕಾರ್ಯಾಂಗ ಇದು ಅಧೀನ ಶಾಸನಗಳನ್ನು ಮಾಡುವುದು ಮತ್ತು ಆಡಳಿತಾತ್ಮಕವಾಗಿ ನ್ಯಾಯ ತೀರ್ಮಾನಮಾಡುವುದು ಪ್ರಚಲಿತವಿದ್ದರೂ ಅಂಥ ಅಧಿಕಾರ ಪ್ರಕೃತಿ ನ್ಯಾಯದ ನಿಯಮಗಳ ಅನುಷ್ಠಾನದಿಂದ ಸ್ವೇಜ್ಛಾ ರೀತಿಯ ಅಧಿಕಾರ ಅಸಾಧ್ಯವಾಗಿದೆ.

ಸಂವಿಧಾನದ ತಿದ್ದುಪಡಿ: ಸಾಂವಿಧಾನಿಕ ಕಾನೂನಿಗೆ ಸ್ಥಿರತೆ ಒಂದು ಆವಶ್ಯಕ ಲಕ್ಷಣವಾದರೂ ಕೆಲವೊಂದು ತೀವ್ರವಾಗಿ ನಡೆದ ಸಾಮಾಜಿಕ ಬದಲಾವಣೆ ಮತ್ತು ಹೊಸಮೌಲ್ಯಗಳಿಗೆ ಹೊಂದಿಕೊಳ್ಳಲು ಅಥವಾ ಕೆಲವೊಂದು ತೊಡಕುಗಳನ್ನು ನಿವಾರಿಸಲು ಸಂವಿಧಾನದ ತಿದ್ದುಪಡಿಯ ಅಗತ್ಯವಿದೆ. ತಿದ್ದುಪಡಿಯ ವಿಧಾನ ಮತ್ತು ಅಧಿಕಾರವನ್ನು ಸಂವಿಧಾನದಲ್ಲಿ ತಿಳಿಸಲಾಗಿದೆ. ಸಂವಿಧಾನದ ನಿಯಮಗಳನ್ನು ಬದಲಾಯಿಸಲು ಮೂರು ವಿಧಾನಗಳಿವೆ: 1 ಹೊಸರಾಜ್ಯಗಳ ರಚನೆ, ರಾಜ್ಯಗಳ ಪುನರ್ವಿಂಗಡಣೆ ಮತ್ತು ಹೆಸರು ಬದಲಾವಣೆ; ರಾಜ್ಯಗಳಲ್ಲಿ ಮೇಲ್ಮನೆಗಳ ರಚನೆ ಅಥವಾ ರದ್ದುಮಾಡುವಿಕೆ ಹಾಗೂ ಪರಿಶಿಷ್ಟಪ್ರದೇಶ ಮತ್ತು ಬುಡಕಟ್ಟು ಜನಾಂಗದ ಆಡಳಿತ-ಈ ಕುರಿತಾಗಿ ಸಂವಿಧಾನದ ನಿಯಮ ಬದಲಾಗಬೇಕಿದ್ದಲ್ಲಿ ಸಂಸತ್ತು ಸಾಮಾನ್ಯ ಬಹುಮತದ ಮೂಲಕ ಶಾಸನಮಾಡಿ ಬದಲಾಯಿಸಬಹುದು. 2 ರಾಷ್ಟ್ರಪತಿ ಚುನಾವಣೆ, ಕೇಂದ್ರ ಮತ್ತು ರಾಜ್ಯಸರ್ಕಾರಗಳ ಕಾರ್ಯಾಂಗಾಧಿಕಾರದ ವ್ಯಾಪ್ತಿ, ಕೇಂದ್ರ ನ್ಯಾಯಾಂಗ, ರಾಜ್ಯದ ಉಚ್ಚ ನ್ಯಾಯಾಲಯಗಳು, ಕೇಂದ್ರ-ರಾಜ್ಯ ಸಂಬಂಧ, ಅಧಿಕಾರ ಪಟ್ಟಿಗಳು ಸಂಸತ್ತಿನಲ್ಲಿ ರಾಜ್ಯಗಳ ಪ್ರಾತಿನಿಧ್ಯ ಮತ್ತು ಸಂವಿಧಾನ ತಿದ್ದುಪಡಿಯ ನಿಯಮಗಳು-ಈ ಕುರಿತಾಗಿ ಏನಾದರೂ ಸಂವಿಧಾನ ಬದಲಾವಣೆ ಆಗಬೇಕಾದರೆ ಸಂವಿಧಾನದ ತಿದ್ದುಪಡಿ ಮಸೂದೆ ಸಂಸತ್ತಿನ ಸದನವೊಂದರಲ್ಲಿ ಮಂಡಿತವಾಗಿ ಎರಡೂ ಸದನಗಳಲ್ಲಿಯೂ ಹಾಜರಿದ್ದು ಮತಹಾಕಿದ ಸದಸ್ಯರ ಸಂಖ್ಯೆಯ 2/3 ಮತ್ತು ಪ್ರತಿಸದನದ ಸದಸ್ಯರ ಸಂಖ್ಯೆಯಲ್ಲಿ ಅರ್ಧಕ್ಕಿಂತ ಹೆಚ್ಚು ಬಹುಮತ ಪಡೆದು ರಾಷ್ಟ್ರಪತಿಯಿಂದ ಅಂಗೀಕೃತವಾಗಿರಬೇಕು. ಈ ತನಕ (1984) ಒಟ್ಟು 46 ಬಾರಿ ಸಂವಿಧಾನದ ತಿದ್ದುಪಡಿ ಮಾಡಲಾಗಿದೆ.

ಸಂಸತ್ತಿಗೆ ಸಂವಿಧಾನ ತಿದ್ದುಪಡಿಮಾಡಲು ಇರುವ ಅಧಿಕಾರದ ವ್ಯಾಪ್ತಿ ಕುರಿತು ಸಾಕಷ್ಟು ಬೆಳೆವಣಿಗೆಯಾಗಿದೆ. ಸರ್ವೋಚ್ಚ ನ್ಯಾಯಾಲಯ 1951 ಮತ್ತು 65ರಲ್ಲಿ ತೀರ್ಪು ನೀಡುತ್ತ ಸಂವಿಧಾನದ ತಿದ್ದುಪಡಿಯ ಅಧಿಕಾರ ಸಾಮಾನ್ಯ ಶಾಸನಾಧಿಕಾರಕ್ಕಿಂತ ಭಿನ್ನವಾದ ಉಚ್ಚತಮ ಅಧಿಕಾರವಾದ್ದರಿಂದ ಮತ್ತು ಸಂವಿಧಾನ ತಿದ್ದುಪಡಿ ಶಾಸನ ಸಾಮಾನ್ಯ ಶಾಸನವಲ್ಲದ್ದರಿಂದ ಮೂಲಭೂತ ಹಕ್ಕುಗಳನ್ನು ಕೂಡ ತಿದ್ದುಪಡಿ ಮಾಡಬಹುದೆಂದು ಹೇಳಿತು. 1969ರಲ್ಲಿ ಗೊಲಕ್‍ನಾಥ ನಿರ್ಣಯದಲ್ಲಿ ಸರ್ವೋಚ್ಚ ನ್ಯಾಯಾಲಯ ಇದಕ್ಕೆ ತೀರ ವ್ಯತಿರಿಕ್ತನಿಲವನ್ನು ತಾಳಿ ಸಂಸತ್ತಿಗೆ ಮೂಲಭೂತ ಹಕ್ಕುಗಳನ್ನು ತಿದ್ದುಪಡಿಮಾಡುವ ಅಧಿಕಾರ ಇಲ್ಲವೆಂದು ಹೇಳಿತು. 24ನೆಯ ತಿದ್ದುಪಡಿ ಮಾಡಿ ಈ ಕುರಿತು ಸಂಶಯ ಪರಿಹಾರ ಮಾಡಿ ಸಂಸತ್ತಿಗೆ ಸಂವಿಧಾನದ ಯಾವುದೇ ನಿಯಮದ ತಿದ್ದು ಪಡಿ ಮಾಡುವ ಅಧಿಕಾರವಿದೆಯೆಂದು ಹೇಳಲಾಯಿತು. 24ನೆಯ ತಿದ್ದುಪಡಿಯ ಸಂವಿಧಾನಬದ್ಧತೆಯನ್ನು ತೀರ್ಮಾನಿಸುತ್ತ 1973ರಲ್ಲಿ ಸರ್ವೋಚ್ಚ ನ್ಯಾಯಾಲಯ ಕೇಶವಾನಂದ ಭಾರತಿ ನಿರ್ಣಯದಲ್ಲಿ ಸಂಸತ್ತಿಗೆ ಸಂವಿಧಾನದ ಯಾವುದೇ ನಿಯಮವನ್ನು ತಿದ್ದುಪಡಿ ಮಾಡುವ ಅಧಿಕಾರವಿದೆಯಾದರೂ ಸಂವಿಧಾನದ ಮೂಲಸ್ವರೂಪವನ್ನು ಅಥವಾ ಅವಶ್ಯ ಲಕ್ಷಣಗಳನ್ನು ನಾಶಮಾಡುವ ಅಥವಾ ವಿರೂಪಗೊಳಿಸುವ ಅಧಿಕಾರವಿಲ್ಲವೆಂದು ಹೇಳಿದೆ. ಈ ಪ್ರಕಾರ ಪ್ರಜಾಪ್ರಭುತ್ವ, ನಾಗರಿಕ ಹಕ್ಕುಗಳ ಪದ್ಧತಿ, ಒಕ್ಕೂಟ ಪದ್ಧತಿ, ಸ್ವತಂತ್ರ ನ್ಯಾಯಾಂಗ, ಅಧಿಕಾರ ಬೇರ್ಪಡಿಕೆ, ಸಾಂವಿಧಾನಿಕವಾಗಿ ಸೀಮಿತ ಸರ್ಕಾರ ಈ ಮೂಲಲಕ್ಷಣಗಳನ್ನು ವಿರೂಪಗೊಳಿಸುವಂತಿಲ್ಲ. ನ್ಯಾಯಾಂಗದ ಅಧಿಕಾರವನ್ನು ಮೊಟಕುಗೊಳಿಸುವುದು, ಸ್ವತಂತ್ರ ಮತ್ತು ಕ್ರಮಬದ್ಧ ಚುನಾವಣಾಪದ್ಧತಿಗೆ ತೊಡಕುಮಾಡುವುದು, ಮೂಲಭೂತ ಹಕ್ಕುಗಳ ಪ್ರಾಮುಖ್ಯವನ್ನು ಕೆಳಗಿಳಿಸುವುದು ಇತ್ಯಾತಿ ರೀತಿಯ ತಿದ್ದುಪಡಿಗಳನ್ನು ಕೇಶವಾನಂದ ತತ್ತ್ವದ ಆಧಾರದಲ್ಲಿ ಇಂದಿರಾಗಾಂಧೀ ಮೊಕದ್ದಮೆ (1976) ಮತ್ತು ಮಿನರ್ವಾ ಮಿಲ್ಸ್ ಮೊಕದ್ದಮೆಗಳಲ್ಲಿ (1980) ಸಂವಿಧಾನವಿರೋಧಿ ಎಂದು ಪರಿಗಣಿಸಿ ನಿಷ್ಪರಿಣಾಮಗೊಳಿಸಲಾಗಿದೆ.

ತುರ್ತುಪರಿಸ್ಥಿತಿಯ ನಿಯಮಗಳು: ಮೂರು ರೀತಿಯ ತುರ್ತುಪರಿಸ್ಥಿತಿಗಳನ್ನು ಸಂವಿಧಾನದಲ್ಲಿ ಗುರುತಿಸಲಾಗಿದೆ. 1 ರಾಷ್ಟ್ರೀಯ ತುರ್ತುಪರಿಸ್ಥಿತಿ; 2 ರಾಜ್ಯಗಳಲ್ಲಿ ಸಾಂವಿಧಾನಿಕ ಯಂತ್ರದ ವೈಫಲ್ಯ; 3 ಹಣಕಾಸಿನ ತುರ್ತುಪರಿಸ್ಥಿತಿ.

ರಾಷ್ಟ್ರೀಯ ತುರ್ತುಪರಿಸ್ಥಿತಿ: ಯುದ್ಧದಿಂದಲೋ ಹೊರಗಿನವರ ಆಕ್ರಮಣದಿಂದಲೋ ಶಸ್ತ್ರಸಹಿತ ಆಂತರಿಕಕ್ಷೋಭೆಯಿಂದಲೋ ಗಂಭೀರ ತುರ್ತುಪರಿಸ್ಥಿತಿ ಉಂಟಾಗಿ ಅದರಿಂದ ದೇಶದ ಯಾವುದೇ ಭಾಗದ ಭದ್ರತೆಗೆ ಅಪಾಯವುಂಟಾಗಿದೆಯೆಂದು ರಾಷ್ಟ್ರಪತಿಗೆ ಮನವರಿಕೆಯಾದಲ್ಲಿ ತುರ್ತುಪರಿಸ್ಥಿತಿಯನ್ನು ಘೋಷಿಸಬಹುದು. ಈ ಘೋಷಣೆಯನ್ನು ಮಂತ್ರಿಮಂಡಳದ ಲಿಖಿತ ಶಿಫಾರಸಿನ ಮೇಲೆ ಮಾತ್ರ ಮಾಡಬಹುದು. ತುರ್ತುಪರಿಸ್ಥಿತಿಯನ್ನು ಜಾರಿಗೊಳಿಸುವ ಘೋಷಣೆಯ ದಿನದ ಒಂದು ತಿಂಗಳೊಳಗೆ ಸಂಸತ್ತಿನ ಎರಡೂ ಸದನಗಳ ಅಂಗೀಕಾರ ಪಡೆಯದಿದ್ದಲ್ಲಿ ಆ ಘೋಷಣೆ ನಿಷ್ಪರಿಣಾಮವಾಗುವುದು. ತುರ್ತುಪರಿಸ್ಥಿತಿ ಜಾರಿಯಲ್ಲಿರುವಾಗ ಕೇಂದ್ರಕ್ಕೆ ಒಕ್ಕೂಟ ಪದ್ಧತಿಯನ್ನು ಮೀರಿ ರಾಜ್ಯಗಳ ಮೇಲೆ ಅಧಿಕಾರ ದೊರೆಯುತ್ತದೆ. ಯಾವುದೇ ರಾಜ್ಯದ ಕಾರ್ಯಾಂಗಾಧಿಕಾರಿಗೆ ನಿರ್ದೇಶನ ಮತ್ತು ಆಜ್ಞೆ ನೀಡುವ ಅಧಿಕಾರ ಮತ್ತು ರಾಜ್ಯಸೂಚಿಯಲ್ಲಿ ನಮೂದಿಸಲಾದ ವಿಷಯಗಳ ಮೇಲೆ ಶಾಸನಾಧಿಕಾರ ದೊರೆಯುತ್ತವೆ. ಇದರಿಂದಾಗಿ ಒಟ್ಟು ರಾಷ್ಟ್ರಶಕ್ತಿಯನ್ನು ಒಟ್ಟುಗೂಡಿಸಿ ತುರ್ತುಪರಿಸ್ಥಿತಿಯನ್ನು ಎದುರಿಸಲು ಅವಕಾಶವಾಗುತ್ತದೆ. ಆಂತರಿಕ ಕ್ಷೋಭೆಯಿಂದಲ್ಲದೆ ರಾಷ್ಟ್ರೀಯ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಸಂವಿಧಾನದ 19ನೆಯ ಪ್ರಕರಣದಲ್ಲಿ ಕೊಡಲಾದ ಸ್ವಾತಂತ್ರ್ಯಗಳು ಅಮಾನತುಗೊಳ್ಳುತ್ತವೆ ಮತ್ತು 'ರಾಜ್ಯ ವಿಧಿಸಬಹುದಾದ ಪ್ರತಿಷೇಧಗಳಿಗೆ ಪ್ರಕರಣ 19 ಅಡ್ಡಿ ಬರುವುದಿಲ್ಲ. ರಾಷ್ಟ್ರೀಯ ತುರ್ತುಪರಿಸ್ಥಿತಿ ಜಾರಿಯಲ್ಲಿರುವಾಗ ರಾಷ್ಟ್ರಪತಿ ವ್ಯಕ್ತಿ ಸ್ವಾತಂತ್ರ ಹೊರತಾಗಿ ಇತರ ಯಾವುದೇ ಮೂಲಭೂತ ಹಕ್ಕುಗಳ ಸಂರಕ್ಷಣೆಗಾಗಿ ನ್ಯಾಯಾಲಯಗಳ ಮೊರೆಹೋಗುವ ಹಕ್ಕನ್ನು ಅಮಾನತು ಮಾಡಬಹುದು. ಇಂಥ ಅಮಾನತುಗೊಳ್ಳಿಸಿಕೆ ತುರ್ತುಪರಿಸ್ಥಿತಿಯ ಸಮಯದಲ್ಲಿ ಮಾತ್ರ ಇರಬಹುದಷ್ಟೆ. 1975ರಲ್ಲಿ ವಿಧಿಸಲಾದ ಆಂತರಿಕ ತುರ್ತುಪರಿಸ್ಥಿತಿಯ ಸಮಯದಲ್ಲಿ ಅಧಿಕಾರ ದುರುಪಯೋಗಮಾಡಿದ ಅನುಭವದ ಮೇರೆಗೆ 1978ರಲ್ಲಿ ಕೆಲವು ತಿದ್ದುಪಡಿಗಳನ್ನು ತಂದು ಅಂಥ ಸಾಧ್ಯತೆಗಳನ್ನು ನಿವಾರಿಸಲಾಗಿದೆ.

2. ರಾಜ್ಯಪಾಲರಿಂದ ಬಂದ ವರದಿಯ ಮೂಲಕ ಇಲ್ಲವೇ ಬೇರಾವುದೇ ವಿಧಾನದಿಂದ ರಾಷ್ಟ್ರಪತಿಗೆ ಒಂದು ರಾಜ್ಯದಲ್ಲಿ ಸಂವಿಧಾನದ ಅವಕಾಶಗಳಿಗೆ ಅನುಗುಣವಾಗಿ ಸರ್ಕಾರ ನಿರ್ವಹಿಸುವುದು ಸಾಧ್ಯವಾಗದ ಪರಿಸ್ಥಿತಿಯುಂಟಾಗಿದೆ ಎಂದು ಮನವರಿಕೆಯಾದರೆ ರಾಷ್ಟ್ರಪತಿ ಒಂದು ಘೋಷಣೆ ಹೊರಡಿಸಿ ರಾಜ್ಯ ಸರ್ಕಾರದ ಎಲ್ಲ ಕಾರ್ಯಭಾರಗಳನ್ನು ಅಥವಾ ಕೆಲವನ್ನು ತಾನೇ ನೇರವಾಗಿ ನಿರ್ವಹಿಸಬಹುದು ಅಥವಾ ರಾಜ್ಯಪಾಲರಿಗೋ ಇತರ ಅಧಿಕಾರಿಗಳಿಗೋ ವಹಿಸಬಹುದು ರಾಜ್ಯಶಾಸನ ಸಭೆಯ ಅಧಿಕಾರವನ್ನು ಲೋಕಸಭೆ ವಹಿಸಿಕೊಳ್ಳುವಂತೆ ಮಾಡಬಹುದು ಅಥವಾ ಘೋಷಣೆಯ ಉದ್ದೇಶವನ್ನು ಕಾರ್ಯಗತಗೊಳಿಸುವ ಇತರ ಅವಕಾಶಗಳನ್ನು ಮಾಡಬಹುದು. ಆದರೆ ಉಚ್ಚನ್ಯಾಯಾಲಯದ ಅಧಿಕಾರವನ್ನು ಬದಲಾಯಿಸುವುದಿಲ್ಲ. ಇಂಥ ಘೋಷಣೆಯೂ ತುರ್ತು ಘೋಷಣೆಯಂತೆ ಉಭಯ ಸದನಗಳ ಅನುಮೋದನೆ ಪಡೆಯಬೇಕು. ಆರು ತಿಂಗಳ ಅವಧಿ ಇರುವ ಈ ಘೋಷಣೆಯನ್ನು ರಾಷ್ಟ್ರಪತಿ ಮತ್ತೆ ಮತ್ತೆ ಮುಂದುವರಿಸಬಹುದಾದರೂ ಇದರ ಗರಿಷ್ಠ ಕಾಲಮಿತಿ ಮೂರು ವರ್ಷ. ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವೆಂದು ಕರೆಯಲ್ಪಡುವ ಇಂಥ ಘೋಷಣೆಗಳನ್ನು 60ಕ್ಕೂ ಹೆಚ್ಚುಬಾರಿ ಮಾಡಲಾಗಿದ್ದು ಕೇಂದ್ರ ಈ ಅಧಿಕಾರವನ್ನು ದುರುಪಯೋಗಪಡಿಸಿದೆ ಎಂಬ ಆಪಾದನೆಯಿದೆ. ಕೆಟ್ಟ ಉದ್ದೇಶಗಳಿಗಾಗಿ ಇಂಥ ಘೋಷಣೆ ಮಾಡಿದಲ್ಲಿ ಅದನ್ನು ನಿಷ್ಪರಿಣಾಮಗೊಳಿಸಲಾಗುವುದೆಂದೂ ಸರ್ವೋಚ್ಚನ್ಯಾಯಾಲಯ ಹೇಳಿದೆ (1978).

3 ಆರ್ಥಿಕ ತುರ್ತುಪರಿಸ್ಥಿತಿ: ಭಾರತದ ಅಥವಾ ಯಾವುದೇ ಭಾಗದ ಆರ್ಥಿಕ ಸುಸ್ಥಿತಿ ಅಪಾಯಕ್ಕೊಳಗಾಗಿದೆ ಎಂದು ಮನವರಿಕೆಯಾದಾಗ ರಾಷ್ಟ್ರಪತಿ ಆರ್ಥಿಕ ತುರ್ತುಪರಿಸ್ಥಿತಿಯನ್ನು ಘೋಷಿಸಬಹುದು. ಇದೂ ಕೂಡ ಸಂಸತ್ತಿನ ಅನುಮೋದನೆ ಪಡೆಯಬೇಕು. ಆರ್ಥಿಕ ತುರ್ತುಪರಿಸ್ಥಿತಿ ಜಾರಿಯಲ್ಲಿರುವಾಗ ರಾಜ್ಯಕ್ಕೆ ಕೇಂದ್ರ ನಿರ್ದೇಶನ ಕೊಡುವುದು, ಹಣಕಾಸು ಮಸೂದೆಯ ಪರಿಶೀಲನೆ ತಡೆಹಿಡಿಯುವುದು, ಸರ್ಕಾರೀ ಸೇವಕರ ವೇತನ ಕಡಿಮೆ ಮಾಡುವುದೇ ಮೊದಲಾದ ಆಜ್ಞೆಗಳನ್ನು ಕೊಡಬಹುದು.

ನಿಮ್ನವರ್ಗಗಳಿಗಾಗಿ ವಿಶೇಷ ನಿಯಮಗಳು: ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು ಇತರ ನಿಮ್ನವರ್ಗಗಳ ಊಧ್ರ್ವಾಭಿವೃಧ್ಧಿಗೆ ಸರ್ಕಾರಿ ಸೇವೆಗಳಲ್ಲಿ ಮೀಸಲಾತಿ ಇತ್ಯಾದಿ ಸವಲತ್ತುಗಳನ್ನು ಅವಕಾಶ ಮಾಡಿಕೊಡುವ ಅಧಿಕಾರವನ್ನು 'ರಾಜ್ಯಕ್ಕೆ (ಮೂರನೆಯ ಭಾಗದಲ್ಲಿ ಅರ್ಥವಿಸಿದಂತೆ) ಕೊಡಲಾಗಿದೆಯಲ್ಲದೆ ಕೇಂದ್ರ ಮತ್ತು ರಾಜ್ಯಶಾಸನಸಭೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನಸಂಖ್ಯೆಯ ಅನುಪಾತಕ್ಕೆ ಸರಿಯಾಗಿ ಅವರಿಗೆ ಸದಸ್ಯತ್ವವನ್ನೂ ಮೀಸಲಿರಿಸಲಾಗಿದೆ. ಪ್ರಥಮ 10 ವರ್ಷದತನಕ (ಅಂದರೆ 1960) ಜಾರಿಯಲ್ಲಿರುವಂತೆ ಮಾಡಿದ ಈ ನಿಯಮವನ್ನು ಸಾಂವಿಧಾನದ ತಿದ್ದುಪಡಿಗಳ ಮೂಲಕ 1990ರ ತನಕ ವಿಸ್ತರಿಸಲಾಗಿದೆ. ಪರಿಶಿಷ್ಟಪಂಗಡಗಳ ಸೂಚಿಯಲ್ಲಿ ಜಾತಿ, ಜನಾಂಗಗಳನ್ನು ಸೇರಿಸುವ ಮತ್ತು ಅದರಿಂದ ಕೈಬಿಡುವ ಅಧಿಕಾರವನ್ನು ರಾಷ್ಟ್ರಪತಿಗೆ ಕೊಡಲಾಗಿದೆ. ನಿಮ್ನವರ್ಗಗಳ ಸ್ಥಿತಿ, ಉದ್ಧಾರಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪರಿಶೀಲಿಸಲು ಆಯೋಗ ರಚಿಸುವ ಅಧಿಕಾರವನ್ನು ರಾಷ್ಟ್ರಪತಿಗೆ ಕೊಡಲಾಗಿದೆ. ಹಾಗೆಯೇ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡಗಳ ಸಂಬಂಧ ವಿಶೇಷ ಅಧಿಕಾರಿಯನ್ನು ನೇಮಿಸಲಾಗಿದೆ.

ಅಧಿಕೃತ ಭಾಷೆ: ಕೇಂದ್ರ ಸರ್ಕಾರದ ಅಧಿಕೃತ ಭಾಷೆ ಹಿಂದಿ. ಆದರೆ 15 ವರ್ಷಗಳ ತನಕ (1965) ಅಥವಾ ಅದರ ತರುವಾಯ ಸಂಸತ್ತು ಶಾಸನ ಮೂಲಕ ಅನುಮತಿಸುವಂತೆ (ಅಧಿಕೃತ ಭಾಷೆಗಳ ಶಾಸನ 1963) ಇಂಗ್ಲಿಷ್ ಭಾಷೆಯೂ ಹಿಂದಿಯೊಂದಿಗೆ ಅಧಿಕೃತ ಭಾಷೆಯಾಗಿರುವುದು. ರಾಜ್ಯ ಸರ್ಕಾರಗಳು ಶಾಸನ ಮೂಲಕ ಯಾವುದೇ ಭಾಷೆಯನ್ನು ಆಯಾ ರಾಜ್ಯಗಳಲ್ಲಿ ಅಧಿಕೃತ ಭಾಷೆಯಾಗಿಮಾಡಲು ಅವಕಾಶವಿದೆ. ಸರ್ವೋಚ್ಚ ಮತ್ತು ಉಚ್ಚನ್ಯಾಯಾಲಯಗಳ ಅಧಿಕೃತಭಾಷೆ ಇಂಗ್ಲಿಷ್. ಭಾಷಾ ಅಲ್ಪಸಂಖ್ಯಾತರಿಗೆ ಅವರ ಮಾತೃಭಾಷೆಯಲ್ಲಿ ಬೋಧನೆ ಕೊಡಿಸುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ನಿರ್ದೇಶನ ನೀಡಬಹುದು. ಹಿಂದಿಯ ಪ್ರಚಾರ ಕೇಂದ್ರದ ಕರ್ತವ್ಯ. ಮನ್ನಿಸಲಾದ ಅಧಿಕೃತ ಭಾಷೆಗಳನ್ನು ಎಂಟನೆಯ ಪರಿಶಿಷ್ಟದಲ್ಲಿ ಸೂಚಿಸಲಾಗಿದೆ. ಸಂವಿಧಾನಸಭೆಯಲ್ಲಿ ಭಾಷಾ ಸೌಹಾರ್ದ ಕುರಿತು ಸಾಕಷ್ಟು ಚರ್ಚೆಯಾದ ಬಳಿಕ ಈ ನಿಯಮಗಳನ್ನು ಅಳವಡಿಸಿಕೊಳ್ಳಲಾಗಿದೆ.

ಸಾರ್ವಜನಿಕ ಸೇವಾ ಆಯೋಗಗಳು: ಕೇಂದ್ರ ಸಾರ್ವಜನಿಕ ಸೇವಾ ಆಯೋಗ ಮತ್ತು ರಾಜ್ಯಸಾರ್ವಜನಿಕ ಸೇವಾ ಆಯೋಗಗಳನ್ನು ರಚಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಿ ಯೋಗ್ಯ ಅಭ್ಯರ್ಥಿಗಳನ್ನು ಸರ್ಕಾರೀ ಸೇವೆಗಳಿಗೆ ಶಿಫಾರಸು ಮಾಡುವುದು, ತರಬೇತಿಯ ಪದ್ಧತಿಯನ್ನು ರೂಪಿಸುವುದು, ಸರ್ಕರೀ ಸೇವೆಗಳಲ್ಲಿರುವ ತಪ್ಪಿತಸ್ಥ ವ್ಯಕ್ತಿಗಳ ಮೇಲೆ ಶಿಸ್ತಿನ ಕ್ರಮಕೈಗೊಳ್ಳುವಲ್ಲಿ ನೆರವಾಗುವುದು ಮತ್ತು ರಾಷ್ಟ್ರಪತಿ ಅಥವಾ ರಾಜ್ಯಪಾಲರು ಸೂಚಿಸಿದ ವಿಚಾರದಲ್ಲಿ ಸಲಹೆ ಕೊಡುವುದು ಈ ಸೇವಾ ಆಯೋಗಗಳ ಕರ್ತವ್ಯ. ಆದರೆ ನ್ಯಾಯಾಂಗಾಧಿಕಾರಿಗಳ ಮೇಲೆ ಇವರಿಗೆ ಅಧಿಕಾರ ವ್ಯಾಪ್ತಿ ಇರುವುದಿಲ್ಲ. ಸಾರ್ವಜನಿಕ ಸೇವಾ ಆಯೋಗದಲ್ಲಿ ಸರ್ಕಾರದಿಂದ (ರಾಷ್ಟ್ರಪತಿ ಅಥವಾ ರಾಜ್ಯಪಾಲ) ನೇಮಕಗೊಂಡ ಒಬ್ಬ ಅಧ್ಯಕ್ಷ ಮತ್ತು ಇತರ ಸದಸ್ಯರು ಇರುತ್ತಾರೆ. ಇವರ ಅಧಿಕಾರಾವಧಿ 6 ವರ್ಷ. ಕೇಂದ್ರ ಮತ್ತು ರಾಜ್ಯಸರ್ಕಾರಗಳ ಕೆಳಗೆ ನಾಗರಿಕ ಸೇವೆ (ಸಿವಿಲ್‍ಸರ್ವಿಸ್) ಮಾಡುತ್ತಿರುವ ವ್ಯಕ್ತಿಯನ್ನು ವಜಾಮಾಡುವಾಗ ಅಥವಾ ಅವನಿಗೆ ಹಿಂಬಡ್ತಿ ಕೊಡುವಾಗ ನೈಸರ್ಗಿಕ ನ್ಯಾಯದ ನಿಯಮಗಳನ್ನು ಅನುಸರಿಸುವಂತೆ ವಿಧಿಸಲಾಗಿದೆ.

ರಾಷ್ಟ್ರಪತಿ, ಸರ್ವೋಚ್ಚ ಮತ್ತು ಉಚ್ಚ ನ್ಯಾಯಾಲಯದ ನ್ಯಾಯಾಧೀಶರುಗಳು ಹಾಗೂ ಸಾರ್ವಜನಿಕ ಸೇವಾ ಆಯೋಗದ ಸದಸ್ಯರು ಇವರ ಮೇಲೆ ತಪ್ಪು ನಡವಳಿಕೆಗಾಗಿ ದೋಷಾರೋಪಣಾ ನಿರ್ಣಯವನ್ನು ಕೇಂದ್ರ ಸಂಸತ್ತಿನ ಎರಡೂ ಸದನಗಳು ಬಹುಮತದಿಂದ ಅಂಗೀಕರಿಸುವುದರ ಮೂಲಕ ಮಾತ್ರ ಇವರನ್ನು ಸ್ಥಾನಭ್ರಷ್ಟರಾಗಿ ಮಾಡಬಹುದು.

ಆಡಳಿತಾನುಕೂಲತೆ ಮತ್ತು ಐತಿಹಾಸಿಕ ಕಾರಣಗಳಿಂದಾಗಿ ಕೆಲವು ಪ್ರದೇಶಗಳು ರಾಜ್ಯಗಳ ಸ್ಥಾನ ಪಡೆಯದೆ ಕೇಂದ್ರದಿಂದಲೇ ನಡೆಸುವ ಆಡಳಿತಕ್ಕೆ ಒಳಪಟ್ಟ 9 ಕೇಂದ್ರಾಡಳಿತ ಪ್ರದೇಶಗಳು ಇವೆ. ಈ ಪ್ರದೇಶಗಳಮೇಲೆ ಕೇಂದ್ರ ಸರ್ಕಾರಕ್ಕೆ ಶಾಸನಾಧಿಕಾರ ಮತ್ತು ಕಾರ್ಯಾಂಗಾಧಿಕಾರ ಇದೆ. ಕೇಂದ್ರಶಾಸನದ ಮೂಲಕ ಈ ಕ್ಷೇತ್ರಗಳಲ್ಲಿ ಸ್ವಯಮಾಡಳಿತ ಪ್ರಜಾಪ್ರಭುತ್ವ ಪದ್ಧತಿಯ ಅನುಷ್ಠಾನಕ್ಕಾಗಿ ಶಾಸನಸಭೆ ರಚಿಸಿ ಅದಕ್ಕೆ ಸೀಮಿತ ಅಧಿಕಾರ ಕೊಡಲಾಗಿದೆ.

ಸಂವಿಧಾನದತ್ತವಾದ ಕೆಲವು ಅವಕಾಶಗಳು (ಮತದಾನ ಮಾಡುವುದು, ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಯಾವುದಾದರೂ ಉನ್ನತ ಸ್ಥಾನ ಅಲಂಕರಿಸುವುದು, ಕೆಲವು ವಿಶಿಷ್ಟ ಮೂಲಭೂತ ಹಕ್ಕುಗಳನ್ನು ಹೊಂದುವುದು) ಪೌರರಿಗೆ ಮಾತ್ರ ಇರುವುದರಿಂದ ಯಾರು ಪೌರರೆಂಬ ವಿಚಾರ ಅಗತ್ಯವುಳ್ಳದ್ದು. ಸಂವಿಧಾನಪ್ರಾರಂಭದ ಸಂದರ್ಭದಲ್ಲಿಯ ಪೌರುತ್ವ ಕುರಿತು ಸಂವಿಧಾನವೂ 1955ರ ತರುವಾಯದ ಮಟ್ಟಿಗೆ ಭಾರತೀಯ ಪೌರುತ್ವಕಾಯಿದೆಯೂ (1956) ತೀರ್ಮಾನಿಸುತ್ತವೆ. ಭಾರತದಲ್ಲಿ ದ್ವಿಪೌರುತ್ವ ಪದ್ಧತಿ ಇರುವುದಿಲ್ಲ.

ಒಕ್ಕೂಟ ರಾಜ್ಯವಾದ ಭಾರತದಲ್ಲಿ ಬೇರೆ ಬೇರೆ ರಾಜ್ಯಗಳಿರುವ ಕಾರಣಕ್ಕೆ ವ್ಯಾಪಾರ, ವಾಣಿಜ್ಯ ಮತ್ತು ಪರಸ್ಪರ ಹೊಕ್ಕುಬಳಕೆ ಸ್ವತಂತ್ರವಾಗಿರತಕ್ಕದ್ದು ಎಂದು ಹೇಳಲಾಗಿದೆ.

ಸಾಂವಿಧಾನಿಕಯಂತ್ರದ ಮುನ್ನಡೆಗೆ ಅಗತ್ಯವಾದ ಅಧಿಕಾರ ಸ್ಥಾನಗಳ ಕುರಿತು ನಿಯಮಗಳನ್ನು ಮಾಡಲಾಗಿದೆ. ಚುನಾವಣಾ ಆಯೋಗ, ಆಟಾರ್ನಿಜನರಲ್, ಮಹಾಲೆಕ್ಕಿಗ ಮತ್ತು ಮಹಾಲೆಕ್ಕಪರಿಶೋಧಕ-ಈ ಸ್ಥಾನಗಳನ್ನು ರಚಿಸಿ ಅವುಗಳ ಅಧಿಕಾರ ಮತ್ತು ಕರ್ತವ್ಯಗಳನ್ನು ಹೇಳಲಾಗಿದೆ. ಕೇಂದ್ರ ಮತ್ತು ರಾಜ್ಯಗಳು ಹಣಸಾಲ ಪಡೆಯುವ ವಿಧಾನ, ಕೆಂದ್ರ ಮತ್ತು ರಾಜ್ಯಗಳು ಅಥವಾ ಅವುಗಳ ವಿರುದ್ಧ ದಾವೆ ಹೂಡುವ ವಿಧಾನ, ಚುನಾವಣಾ ಪದ್ಧತಿ ಮತದಾರತ ಹಕ್ಕು (21 ವರ್ಷದಾಟಿದ ವಯಸ್ಕ ಪೌರರಿಗೆ ಮತ ನೀಡುವ ಹಕ್ಕು ಕೊಡಲ್ಪಟ್ಟಿದೆ.), ಮತದಾರರ ಪಟ್ಟಿಯ ರೂಪಿಸುವಿಕೆಗೆ ಶಾಸನ ಮೂಲಕ ನಿಯಮಿಸುವುದು, ಖಾಸಗಿಯವರೊಂದಿಗೆ ಅಥವಾ ಕಾರ್ಪೊರೇಶನ್ನುಗಳೊಂದಿಗೆ ಒಪ್ಪಂದ (ಕಂಟ್ರಾಕ್ಟ್) ಮಾಡಿಕೊಳ್ಳುವ ವಿಧಾನ, ಟ್ರಿಬ್ಯೂನಲ್ ರಚನೆ-ಈ ಎಲ್ಲ ವಿಷಯಗಳ ಕುರಿತು ಸವಿವರ ನಿಯಮಗಳಿವೆ. ಅಲ್ಲದೆ ತಾತ್ಕಾಲಿಕ ಕ್ರಮವಾಗಿ (ಅಂದರೆ ಸಂವಿಧಾನಪೂರ್ವ ಸ್ಥಿತಿಯಿಂದ ಸಂವಿಧಾನೋತ್ತರ ಸ್ಥಿತಿಗೆ ಹೊಂದಿಕೊಳ್ಳುವ ಯತ್ನವಾಗಿ) ಸಂಸತ್ತಿಗೆ ರಾಜ್ಯಸೂಚಿಯ ಕೆಲವು ವಿಷಯಗಳಮೇಲೆ 5 ವರ್ಷಗಳ ತನಕ (1955) ಶಾಸನಾಧಿಕಾರ ಕೊಡಲಾಗಿದೆ. ಹಾಗೆಯೇ 'ತಾತ್ಕಾಲಿಕ ಕ್ರಮವಾಗಿ' (ಅವಧಿಯನ್ನು ಸೂಚಿಸಲಾಗಿಲ್ಲ) ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಸಂವಿಧಾನ ಒಕ್ಕೂಟ ಪದ್ಧತಿಯ ಕೆಲವು ನಿಯಮಗಳು ಅನ್ವಯವಾಗೆ ಅದಕ್ಕೆ ವಿಶೇಷ ಸ್ಥಾನ ಸಿಗುವಂತೆ ಮಾಡಲಾಗಿದೆ. ಜಮ್ಮು ಮತ್ತು ಕಾಶ್ಮೀರ ಭಾರತಕ್ಕೆ ಸೇರ್ಪಡೆಯಾಗುವ ಒಪ್ಪಂದದ ಮೇರೆಗೆ ಆ ರಾಜ್ಯದ ಮೇಲೆ ರಕ್ಷಣೆ, ಸಂಪರ್ಕ ಮತ್ತು ವಿದೇಶವ್ಯವಹಾರ ಕುರಿತು ಮಾಡಲಾಗಿದೆ (ಆದರೆ ಇದು ತಾತ್ಕಲಿಕ ಕ್ರಮವೆಂದು ಸೂಚಿಸಲಾಗಿದೆ). ನಾಗಾಲ್ಯಾಂಡ್, ಅಸ್ಸಾಮ್ ಆಂಧ್ರ, ಸಿಕ್ಕಿಮುಗಳ ಆಡಳಿತ ಕುರಿತು ಕೂಡ ಕೆಲವು ನಿಯಮಗಳನ್ನು ಮಾಡಲಾಗಿದೆ.

ಸಂವಿಧಾನದಲ್ಲಿ ಒಂಬತ್ತು ಪರಿಶಿಷ್ಟಗಳಿದ್ದು ಇವುಗಳಲ್ಲಿ ಈ ಕೆಳಗಿನವು ಅಡಕವಾಗಿವೆ:

1 ರಾಜ್ಯದ ಮತ್ತು ಕೇಂದ್ರಾಡಳಿತ ಪ್ರದೇಶಗಳ ಹೆಸರುಗಳು ಮತ್ತು ಅವುಗಳ ಪ್ರದೇಶಮಿತಿ (ಗಡಿ) ಗಳ ಸೂಚಿ; 2 ರಾಷ್ಟ್ರಪತಿ, ರಾಜ್ಯಪಾಲ ಮತ್ತಿತರರ ವೇತನ ಮತ್ತು ಸೌಲಭ್ಯಗಳ ವಿವರ; 3 ಕೇಂದ್ರ ಮತ್ತು ರಾಜ್ಯಗಳ ಮಂತ್ರಿಗಳು, ಶಾಸಕರು ಮತ್ತು ಸರ್ವೋಚ್ಚನ್ಯಾಯಾಲಯ ಹಾಗೂ ಉಚ್ಚನ್ಯಾಯಾಲಯಗಳ ನ್ಯಾಯಾಧೀಶರುಗಳು ಕೈಗೊಳ್ಳಬೇಕಾದ ಪ್ರತಿಜ್ಞಾ ಸ್ವೀಕಾರದ ನಮೂನೆ; 4 ರಾಜ್ಯಸಭೆಯ ಸದಸ್ಯ ಸ್ಥಾನಗಳನ್ನು ರಾಜ್ಯಗಳೊಳಗೆ ಹಂಚಿಕೊಂಡ ವಿವರ; 5 ಪರಿಶಿಷ್ಟ ಕ್ಷೇತ್ರಗಳ ಮತ್ತು ಪರಿಶಿಷ್ಟ ಪಂಗಡಗಳ ವಿಶೇಷಾಭಿವೃದ್ಧಿತಯ ಉದ್ದೇಶದ ಆಡಳಿತ ಕುರಿತು ನಿಯಮಗಳು; 6 ಅಸ್ಸಾಮ್, ಮೇಘಾಲಯ ಮತ್ತು ಮಿಜೋರಾಮ್‍ಗಳಲ್ಲಿಯ ಗುಡ್ಡಗಾಡು ಪ್ರದೇಶಗಳ ಸ್ವಾಯತ್ತಪೂರ್ಣ ಜಿಲ್ಲೆ ಹಾಗೂ ಕ್ಷೇತ್ರಗಳ ಆಡಳಿತ ಕುರಿತು ವಿಶೇಷ ನಿಯಮಗಳೂ; 7 ಕೇಂದ್ರ ರಾಜ್ಯ ಮತ್ತು ಸಹಗಾಮೀ ಶಾಸನಾಧಿಕಾರಿಗಳ ಸೂಚಿ; 8 ಮನ್ನಿಸಲ್ಪಟ್ಟ ಭಾರತೀಯ ಭಾಷೆಗಳು; 9 ಮೂಲಭೂತ ಹಕ್ಕುಗಳ ಆಧಾರದಿಂದ ಪ್ರಶ್ನಿಸಲಾಗದಂಥ ಭೂಸುಧಾರಣೆಗಳ ಪಟ್ಟಿ. (ಪಿ.ಇ.ಬಿ.)

ಭಾರತ ಒಕ್ಕೂಟ: ಕಾರ್ಯಾಂಗ, ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ; ರಾಷ್ಟ್ರಪತಿ ಭಾರತ ಒಕ್ಕೂಟದ ಕಾರ್ಯಂಗಾಧಿಪತಿ; ರಕ್ಷಣಾ ಪಡೆಗಳ ಪರಮೋಚ್ಚ ಆಧಿಪತ್ಯವೂ ಸೇರಿದಂತೆ ಕೇಂದ್ರಸರ್ಕಾರದ ನಿರ್ವಾಹಕಶಕ್ತಿ ರಾಷ್ಟ್ರಪತಿಯಲ್ಲಿ ನಿಹಿತವಾಗಿದೆ. ಆತ ಅದನ್ನು ನೇರವಾಗಿ ಇಲ್ಲವೇ ಅಧೀನ ಅಧಿಕಾರಿಗಳ ಮೂಲಕ ಚಲಾಯಿಸುತ್ತಾನೆ. ಸಂಸತ್ತಿನ ಉಭಯ ಸದನಗಳ ನಿರ್ವಾಚಿತ ಸದಸ್ಯರು ಮತ್ತು ರಾಜ್ಯಗಳ ವಿಧಾನಸಭೆಗಳ ನಿರ್ವಾಚಿತ ಸದಸ್ಯರು ಸೇರುವ ಚುನಾಯಿತ ಗಣದಿಂದ (ಎಲೆಕ್ಟೊರಲ್ ಕಾಲೇಜ್) ಪ್ರಾತಿನಿಧ್ಯ ಪದ್ಧತಿಗೆ ಅನುಸಾರ ಅವರ ನಿರ್ವಾಚನೆ ನಡಿಯುತ್ತದೆ. ಅಧಿಕಾರಾವಧಿ ಐದು ವರ್ಷ. ಅವರು ಮರುಚುನಾವಣೆಗೆ ಅರ್ಹರು. ಸಂವಿಧಾನದ 16ನೆಯ ವಿಧಿಯಲ್ಲಿ ಹೇಳಿರುವ ವಿಧಾನದನ್ವಯ ಅವರನ್ನು ಸಂವಿಧಾನದ ಉಲ್ಲಂಘನೆಗಾಗಿ ಮಹಾಭಿಯೋಗಕ್ಕೆ ಗುರಿಪಡಿಸಬಹುದು. 35 ವರ್ಷ ಪೂರ್ತಿಯಾದ ಮತ್ತು ಲೋಕಸಭೆಗೆ ನಿರ್ವಾಚಿತನಾಗಲು ಅರ್ಹನಾದ ಭಾರತದ ಪ್ರಜೆ ಮಾತ್ರ ರಾಷ್ಟ್ರಪತಿಯ ಸ್ಥಾನಕ್ಕೆ ಸ್ಪರ್ಧಿಸಲು ಅರ್ಹ. ಆತ ಸಂಸತ್ತಿನ ಉಭಯ ಸದನಗಳ ಇಲ್ಲವೆ ರಾಜ್ಯ ವಿಧಾನ ಮಂಡಲಗಳ ಸದಸ್ಯ ಆಗಿರಬಾರದು. ಹಾಗೆ ಸದಸ್ಯನಾಗಿರುವಾತ ರಾಷ್ಟ್ರಪತಿಯಾಗಿ ಆಯ್ಕೆಗೊಂಡಲ್ಲಿ ಆತ ಆ ಸದಸ್ಯತ್ವವನ್ನು ತೆರಪು ಮಾಡಿದನೆಂದು ಗಣಿಸಲಾಗುತ್ತದೆ. ಭಾರತ ಸರ್ಕಾರದ ಎಲ್ಲ ನಿರ್ವಾಹಕ ಕಾರ್ಯಗಳೂ ರಾಷ್ಟ್ರಪತಿಯ ಹೆಸರಿನಲ್ಲಿ ನಡೆಯುವಂತೆ ವ್ಯಕ್ತಪಡಿಸಬೇಕಾಗುತ್ತದೆ. ಆತನಿಗೆ ಯುದ್ಧ ಮತ್ತು ಶಾಂತಿಗಳನ್ನು ಘೋಷಿಸುವ ಅಧಿಕಾರ ಇರುತ್ತದೆ. ಆತನ ನಿರ್ವಾಹಕ ಅಧಿಕಾರಿಗಳು ಒಕ್ಕೂಟದ ಚಟುವಟಿಕೆಗಳ ಇಡೀ ಕ್ಷೇತ್ರಕ್ಕೆ ವ್ಯಾಪಿಸುತ್ತವೆ. ಆತ ಪ್ರಧಾನ ಮಂತ್ರಿಯನ್ನೂ ಮಂತ್ರಿಮಂಡಲದ ಇತರ ಸದಸ್ಯರನ್ನೂ ನೇಮಿಸುತ್ತಾನೆ. ಭಾರತ ಸರ್ಕಾರದ ವ್ಯವಹಾರ ನಡೆಯುವುದಕ್ಕೆ ನಿಯಮಗಳನ್ನು ರಚಿಸುತ್ತಾನೆ ಮತ್ತು ಮಂತ್ರಿಗಳಲ್ಲಿ ಆ ವ್ಯವಹಾರವನ್ನು ಹಂಚುತ್ತಾನೆ. ಭಾರತದ ಮಹಾನ್ಯಾಯವಾದಿ, ಉಚ್ಚತಮ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು, ಮತ್ತು ಉಳಿದ ನ್ಯಾಯಾಧೀಶರು, ಉಚ್ಚನ್ಯಾಯಾಲಯಗಳ ನ್ಯಾಯಾಧೀಶರು ಒಕ್ಕೂಟದ (ಕೇಂದ್ರದ) ಲೋಕಸೇವಾ ಆಯೋಗದ ಸದಸ್ಯರು, ಭಾರತದ ನಿಯಂತ್ರಕ ಮಹಾಲೇಖಾ ಪರೀಕ್ಷಕ, ಮುಖ್ಯ ಚುನಾವಣಾ ಕಮಿಷನರ್, ರಾಯಭಾರಿಗಳು ಮತ್ತು ಭಾರತದ ಇತರ ಪ್ರತಿನಿಧಿಗಳು, ಅನುಸೂಚಿತ ಜಾತಿ ಮತ್ತು ಬುಡಕಟ್ಟುಗಳ ಕಮಿಷನರ್, ರಾಜ್ಯಗಳ ಗವರ್ನರರು ಮೊದಲಾದ ಅಧಿಕಾರಿಗಳನ್ನು ನೇಮಿಸುತ್ತಾನೆ. ವಾಸ್ತವವಾಗಿ ಕೇಂದ್ರ ಸರ್ಕಾರದ ಪ್ರತಿಯೊಂದು ನೇಮಕಾತಿಯನ್ನೂ ರಾಷ್ಟ್ರಪತಿಯ ಹೆಸರಿನಲ್ಲಿ ಇಲ್ಲವೇ ಆತನ ಪ್ರಾಧಿಕಾರದ ಕೆಳಗೆ ಮಾಡಲಾಗುತ್ತದೆ. ಸೈನಿಕ ನ್ಯಾಯಾಲಯದ ಮೊಕದ್ದಮೆಗಳಲ್ಲಿ ಮತ್ತು ಕೇಂದ್ರ ಕಾಯಿದೆಯ ಉಲ್ಲಂಘನೆಯ ಸಂದರ್ಭದಲ್ಲಿ ವ್ಯಕ್ತಿಗಳಿಗೆ ದಂಡನೆಯನ್ನು ಇಲವೇ ದಂಡಾದೇಶವನ್ನು ನಿಲಂಬನ ಮಾಡುವ, ಮುಂದಕ್ಕೆ ತಳ್ಳುವ, ಲಘುವಾಗಿ ಮಾಡುವ ಇಲ್ಲವೇ ಪರಿವರ್ತಿಸುವ ಅಧಿಕಾರ ರಾಷ್ಟ್ರಪತಿಗಿದೆ. ಕೇಂದ್ರದ ಯಾವ ವಿಧೇಯಕವೂ ಆತಆಗಲಾರದು. ಆತ ಸಂಸತ್ತಿನ ಅಧಿವೇಶನ ಕರೆಯಬಹುದು, ಮುಂದೂಡಬಹುದು, ಸಂಬೋಧಿಸಬಹುದು, ಸಂಸತ್ತಿಗೆ ಸಂದೇಶ ಕಳುಹಿಸಬಹುದು ಮತ್ತು ಲೋಕಸಭೆಯನ್ನು ವಿಘಟನೆ ಮಾಡಬಹುದು. ರಾಜ್ಯಸಭೆಗೆ ಆತ 12 ಸದಸ್ಯರನ್ನು ನಾಮಕರಣ ಮಾಡುತ್ತಾನೆ. ಲೋಕಸಭೆಗೆ ಆಂಗ್ಲೋ ಇಂಡಿಯನ್ ಸಮಾಜದ ಇಬ್ಬರು ಸದಸ್ಯರನ್ನು ನಾಮಕರಣಮಾಡಬಹುದು. ಸಂಸತ್ತು ಅಂಗೀಕರಿಸುವ ಪ್ರತಿಯೊಂದು ವಿಧೇಯಕವನ್ನೂ ರಾಷ್ಟ್ರಪತಿಯ ಅನುಮತಿಗೆ ಕಳುಹಿಸಬೇಕಾಗುತ್ತದೆ. ಆತ ಅನುಮತಿ ನೀಡಬಹುದು ಇಲ್ಲವೇ ಪುನಃ ಪರಿಶೀಲನೆಗಾಗಿ ಆ ವಿಧೇಯಕವನ್ನು ಸಂಸತ್ತಿಗೆ ಉಭಯಸದನಗಳ ಮುಂದೆ ಆ ವರ್ಷ ಅಂದಾಜು ಆಯವ್ಯಯಗಳ ವಿವರಣೆ ಇಡುವುದಕ್ಕೆ ಏರ್ಪಾಡು ಮಾಡುತ್ತಾನೆ. ವಿತ್ತೀಯ ಮತ್ತು ಹಣಕಾಸಿನ ವಿಧೇಯಕಗಳನ್ನು ಶಿಫಾರಸು ಮಾಡುತ್ತಾನೆ. ಸಂಸತ್ತಿನಲ್ಲಿ ಆತನ ಶಿಫಾರಸಿಲ್ಲದೆ ವಿತ್ತೀಯ ಅನುದಾನದ ಬೇಡಿಕೆಯನ್ನು ಮಂಡಿಸಲಾಗುವುದಿಲ್ಲ. ಸಂಸತ್ತಿನ ಉಭಯ ಸದನ ಅಧಿವೇಶನಗಳು ನಡೆಯುತ್ತಿರುವ ಕಾಲ ಬಿಟ್ಟು ಉಳಿದ ಯಾವುದೇ ಕಾಲದಲ್ಲಿ ಆತ ಅವಶ್ಯವೆಂದು ಮನಗಂಡಲ್ಲಿ ಅಧ್ಯಾದೇಶಗಳನ್ನು ಹೊರಡಿಸಬಹುದು. ಅಂಥ ಅಧ್ಯಾದೇಶ ಸಂಸತ್ತಿನ ಅಧಿನಿಯಮದಷ್ಟೇ ಪರಿಣಾಮಕಾರಿ ಆಗಿರುತ್ತದೆ. ಅದನ್ನು ಸಂಸತ್ತಿನ ಅಧಿವೇಶನ ಪ್ರಾರಂಭವಾಗಿ ಆರು ವಾರಗಳೊಳಗೆ ಉಭಯ ಸದನಗಳ ಎದುರಿಗೆ ಇಡಬೇಕಾಗುತ್ತದೆ. ರಾಷ್ಟ್ರಪತಿ ತಮ್ಮ ಇಷ್ಟ ಪ್ರಕಾರ ಅಧ್ಯಾದೇಶವನ್ನು ಹಿಂತೆಗೆದುಕೊಳ್ಳಬಹುದು. ಯುದ್ಧ ಇಲ್ಲವೇ ಬಾಹ್ಯ ಆಕ್ರಮಣದ ಇಲ್ಲವೇ ಆಂತರಿಕ ಅಶಾಂತಿಯ ಭಯವಿದೆಯೆಂದು ಆತನಿಗೆ ಮನವರಿಕೆಯಾದರೆ ಆತ ತುರ್ತು ಪರಿಸ್ಥಿತಿಯನ್ನು ಘೋಷಿಷಬಹುದು. ಯಾವುದೊಂದು ರಾಜ್ಯದಲ್ಲಿ ಸಾಂವಿಧಾನಿಕ ವ್ಯವಸ್ಥೆ ವಿಫಲವಾದಗಲೂ ತುರ್ತುಪರಿಸ್ಥಿತಿಯನ್ನು ಘೋಷಿಸುವ ಅಧಿಕಾರ ಅವನಿಗಿರುತ್ತದೆ. ಭಾರತದ ವಿತ್ತೀಯ ಸ್ವಾಯತ್ತತೆಗೆ ಭಯತಟ್ಟುವಂತಿದೆಯೆಂದು ಮನಗಂಡಲ್ಲಿ ಆತ ವಿತ್ತೀಯ ತುರ್ತುಪರಿಸ್ಥಿತಿಯನ್ನು ಘೋಷಿಷಬಹುದು. ಮರಣ, ಪದತ್ಯಾಗ, ಪದಚ್ಯುತಿ ಮೊದಲಾದ ಯಾವುದೇ ಕಾರಣದಿಂದ ರಾಷ್ಟ್ರಪತಿಯ ಸ್ಥಾನದಲ್ಲಿ ತೆರಪುಂಟಾದಲ್ಲಿ ಉಪರಾಷ್ಟ್ರಪತಿ ಆ ಸ್ಥಾನವನ್ನು ವಹಿಸಿಕೊಳ್ಳುತ್ತಾನೆ. ಆರು ತಿಂಗಳುಕಾಲ ಆ ಸ್ಥಾನದಲ್ಲಿ ಆತ ಮುಂದುವರಿಯಬಹುದು. ಉಪರಾಷ್ಟ್ರಪತಿ ರಾಜ್ಯಸಭೆಯ ಪದನಿಮಿತ್ತ ಸಭಾಪತಿಯಾಗಿದ್ದು ಅದರ ಅಧ್ಯಕ್ಷತೆ ವಹಿಸುತ್ತಾನೆ.

ಮಂತ್ರಿ ಸಂಪುಟ ಮತ್ತು ಪ್ರಧಾನಮಂತ್ರಿ: ರಾಷ್ಟ್ರಪತಿಗೆ ತನ್ನ ಕರ್ತವ್ಯನಿರ್ವಹಿಸುವುದಕ್ಕೆ ಸಹಾಯ, ಸಲಹೆ ನೀಡಲು ಪ್ರಧಾನಮಂತ್ರಿ ಮುಖ್ಯನಾಗಿರುವ ಮಂತ್ರಿ ಸಂಪುಟ ಇದೆ. ರಾಷ್ಟ್ರಪತಿ ಇದರ ಸಲಹೆಯಂತೆ ನಡೆದುಕೊಳ್ಳುತ್ತಾನೆ. ಇವನು ಪ್ರಧಾನಮಂತ್ರಿಯನ್ನೂ ಪ್ರಧಾನಮಂತ್ರಿಯ ಸಲಹೆಯಮೇರೆಗೆ ಸಂಪುಟದ ಇತರ ಮಂತ್ರಿಗಳನ್ನೂ ನೇಮಿಸುತ್ತಾನೆ. ಸಂಪುಟದ ಮಂತ್ರಿಗಳು ರಾಷ್ಟ್ರಪತಿಯ ಇಷ್ಟಪ್ರಕಾರ ಪದಧಾರಣೆ ಮಾಡುತ್ತಾರೆ ಮತ್ತು ಸಾಮೂಹಿಕವಾಗಿ ಲೋಕಸಭೆಗೆ ಉತ್ತರದಾಯಿಯಾಗಿರುತ್ತಾರೆ. ಮಂತ್ರಿಸಂಪುಟದ ಎಲ್ಲ ನಿರ್ಣಯಗಳನ್ನೂ ಪ್ರಧಾನ ಮಂತ್ರಿ ರಾಷ್ಟ್ರಪತಿಗೆ ತಿಳಿಸಬೇಕಾಗುತ್ತದೆ. ರಾಷ್ಟ್ರಪತಿ ಇಚ್ಛಿಸಿದಲ್ಲಿ ಆ ತನಕ ಮಂತ್ರಿ ಸಂಪುಟ ಪರ್ಯಾಲೋಚಿಸಿದ ಯಾವನೊಬ್ಬ ಮಂತ್ರಿಯ ಯಾವುದೇ ನಿರ್ಣಯವನ್ನು ಮಂತ್ರಿಸಂಪುಟ ಪರ್ಯಾಯಲೋಚನೆಗೆ ರವಾನಿಸಬಹುದು.

ಸಂಸತ್ತು: ಭಾರತ ಒಕ್ಕೂಟದ ವಿಧಾನಮಂಡಲಕ್ಕೆ ಸಂಸತ್ತು ಎಂದು ಹೆಸರು. ಲೋಕಸಭೆ ಮತ್ತು ರಾಜ್ಯಸಭೆಗಳೆಂಬ ಎರಡು ಸದನಗಳೂ ಸೇರಿ ಸಂಸತ್ತು ಇದು ವರ್ಷದಲ್ಲಿ ಎರಡು ಸಲವಾದರೂ ಸೇರಲೇಬೇಕು. ರಾಜ್ಯಸಭೆಯ ಸದಸ್ಯರ 250ಕ್ಕೆ ಸೀಮಿತವಾಗಿದೆ. ಇವರಲ್ಲಿ 238ಕ್ಕೂ ಮೀರದ ಸಂಖ್ಯೆಯ ಸದಸ್ಯರು ರಾಜ್ಯಗಳ ಮತ್ತು ಒಕ್ಕೂಟದ ಪ್ರದೇಶಗಳ ವಿಧಾನಸಭೆಗಳ ಸದಸ್ಯರಿಂದ ಚುನಾಯಿತರಾದವರು. 12 ಸದಸ್ಯರನ್ನು ರಾಷ್ಟ್ರಪತಿ ಸಾಹಿತ್ಯ, ವಿಜ್ಞಾನ, ಕಲೆ ಮತ್ತು ಸಮಾಜ ಸೇವೆ ಮುಂತಾದ ವಿಷಯಗಳಲ್ಲಿ ವಿಶೇಷ ಜ್ಞಾನ ಇಲ್ಲವೇ ಪ್ರಾಯೋಗಿಕ ಅನುಭವವುಳ್ಳ ವ್ಯಕ್ತಿಗಳಿಂದ ನಾಮಕರಣ ಮಾಡುತ್ತಾರೆ. ರಾಜ್ಯ ಸಭೆ ಸ್ಥಾಯೀ ನಿಕಾಯವಾಗಿದ್ದು, ಇದರ ಮೂರನೆಯ ಒಂದು ಸಂಖ್ಯೆಯ ಸದಸ್ಯರು ಪ್ರತಿ ಎರಡು ವರ್ಷಗಳ ಅನಂತರ ನಿವೃತ್ತರಾಗುತ್ತಾರೆ. ಲೋಕಸಭೆಯಲ್ಲಿ 525ಕ್ಕೂ ಮೀರದ ಸಂಖ್ಯೆಯಲ್ಲಿ ರಾಜ್ಯಗಳ ಚುನಾವಣಾಕ್ಷೇತ್ರಗಳಿಂದ ನೇರ ಚುನಾವಣೆಗಳ ಮೂಲಕ ಆಯ್ಕೆಗೊಂಡ ಸದಸ್ಯರೂ 25ಕ್ಕೂ ಮೀರದ ಸಂಖ್ಯೆಯಲ್ಲಿ ಒಕ್ಕೂಟದ ಪ್ರದೇಶಗಳಿಂದ ಚುನಾಯಿತ ಸದಸ್ಯರೂ ಇರುತ್ತಾರೆ. ಅದಕ್ಕೆ ಒಬ್ಬ ಸಭಾಪತಿಯೂ ಒಬ್ಬ ಉಪಸಭಾಪತಿಯೂ ಇರುತ್ತಾರೆ. ಲೋಕಸಭೆಯ ಅವಧಿ 5 ವರ್ಷಗಳು. ಆದರೆ ತುರ್ತುಪರಿಸ್ಥಿತಿಯ ಉದ್ಘೋಷಣೆ ಜಾರಿಯಲ್ಲಿರುವಾಗ ಅದರ ಅವಧಿಯನ್ನು ಒಂದು ಸಲ ಒಂದು ವರ್ಷಕ್ಕೆ ಮೀರದ ಅವಧಿಯಿಂದ ಹಾಗೂ ಅನಂತರ ಆರು ತಿಂಗಳ ಪರಮಾವಧಿಯಿಂದ ಹೆಚ್ಚಿಸಬಹುದು. ಸಂಸತ್ತಿನ ಸದಸ್ಯರಿಗೆ ಸಂವಿಧಾನದ ಉಪಬಂಧಗಳಿಗೆ ಒಳಪಟ್ಟು ಸಂಸತ್ತಿನೊಳಗೆ ವಾಕ್‍ಸ್ವಾತಂತ್ರ್ಯವಿರುತ್ತದೆ. ಅವರು ಸಂಸತ್ತಿನಲ್ಲಿ ನೀಡಿದ ಯಾವುದೇ ಹೇಳಿಕೆ ಇಲ್ಲವೇ ಮತ ಇವುಗಳ ಸಂಬಂಧದಲ್ಲಿ ಅವರನ್ನು ನ್ಯಾಯಾಲಯಗಳಲ್ಲಿ ವಿಚಾರಣೆಗೆ ಗುರಿಪಡಿಸಲಾಗುವುದಿಲ್ಲ. ಒಬ್ಬ ವ್ಯಕ್ತಿ ಲೋಕಸಭೆಯ ಸದಸ್ಯತ್ವಕ್ಕೆ ಸ್ಪರ್ಧಿಸಬೇಕಾದರೆ ಅವನು ಭಾರತೀಯ ಪ್ರಜೆಯಾಗಿರಬೇಕು ಮತ್ತು 25 ವರ್ಷ ವಯಸ್ಸಿನವರಾಗಿರಬೇಕು. ರಾಜ್ಯಸಭೆಗೆ ಸ್ಪರ್ಧಿಸಬೇಕಾದರೆ 35 ವರ್ಷ ವಯಸ್ಸಿನವನಾಗಿರಬೇಕು.

ಭಾರತದ ಸಂವಿಧಾನ ರಾಷ್ಟ್ರದ ಐಕ್ಯತೆಯ ಹೆಗ್ಗುರುತು. ರಾಷ್ಟ್ರದ ಎಲ್ಲ ಆಗುಹೋಗುಗಳೂ ಸಂವಿಧಾನವನ್ನು ಅನುಸರಿಸಿ ನಡೆಯುತ್ತವೆ. ಸಂವಿಧಾನವೇ ಭಾರತದ ಮೂಲಭೂತ ಹಾಗೂ ಪರಮೋಚ್ಚ ಕಾಯಿದೆಯೆಂದು ಭಾರತೀಯರು ಒಪ್ಪುತ್ತಾರೆ. ಸಂವಿಧಾನದ ಪಿತರೆನ್ನಿಸಿಕೊಳ್ಳುವ ಅಂಬೇಡ್ಕರರ ನುಡಿಗಳನ್ನು ಇಲ್ಲಿ ಸ್ಮರಿಸಬಹುದು.

"ಒಂದು ಸಂವಿಧಾನ ಎಷ್ಟೇ ಉತ್ತಮವಾಗಿದ್ದರೂ ಅದನ್ನು ನಡೆಸುವವರು ಮತ್ತು ಕಾರ್ಯಗತ ಮಾಡುವವರು ಕೆಟ್ಟವರಾಗಿದ್ದರೆ ಸಂವಿಧಾನವೂ ಕೆಟ್ಟದಾಗುತ್ತದೆ. ಒಂದು ಸಂವಿಧಾನ ಎಷ್ಟೇ ಕೆಟ್ಟದ್ದಾಗಿದ್ದರೂ ಅದನ್ನು ಕಾರ್ಯಗತ ಮಾಡುವವರು ಒಳ್ಳೆಯವರಾಗಿದ್ದರೆ ಆ ಸಂವಿಧಾನ ಒಳ್ಳೆಯದೇ ಆಗುತ್ತದೆ. ಒಂದು ಸಂವಿಧಾನದ ಕಾರ್ಯಸಾಧಕತೆ ಪೂರ್ಣವಾಗಿ ಆ ಸಂವಿಧಾನದ ಸ್ವರೂಪವನ್ನೇ ಅವಲಂಬಿಸಿರುವುದಿಲ್ಲ". (ಜಿ.ಕೆ.ಯು.)