ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಶೈಲಿವಿಜ್ಞಾನ

ವಿಕಿಸೋರ್ಸ್ದಿಂದ

ಶೈಲಿವಿಜ್ಞಾನ ಭಾಷಾವಿಜ್ಞಾನದ ಒಂದು ಪ್ರಮುಖ ಶಾಖೆ; ಭಾಷೆಯಲ್ಲಿ ಬಳಸಲ್ಪಡುವ ಭಿನ್ನ ಭಿನ್ನ ರೂಪಗಳು ಹೇಗೆ ಸಾಹಿತ್ಯದಲ್ಲಿ ಪ್ರಯೋಗವಾಗಿವೆ ಎಂಬುದನ್ನು ಕುರಿತು ಅಧ್ಯಯನ ಮಾಡುವ ಶಿಸ್ತು (ಸ್ಟೈಲಿಸ್ಟಿಕ್ಸ್). ಇದು ಇತರ ಅನೇಕ ಜ್ಞಾನ ಶಾಖೆಗಳಾದ ಸಾಹಿತ್ಯ, ಸಾಹಿತ್ಯ ವಿಮರ್ಶೆ, ಕಲೆ, ವಿಜ್ಞಾನ, ಸಂಸ್ಕøತಿ ಮುಂತಾದ ಎಲ್ಲ ಕ್ಷೇತ್ರಗಳೊಂದಿಗೆ ಸಂಬಂಧವನ್ನು ಪಡೆದುಕೊಂಡಿದೆ.

ಎಫ್.ಡಬ್ಲ್ಯು. ಬೇಟ್ಸ್‍ಮನ್ ಎಂಬ ವಿದ್ವಾಂಸ ಸಾಹಿತ್ಯದ ಅಧ್ಯಯನ ಕ್ಕೆ ಭಾಷಾವಿಜ್ಞಾನ ನೀಡಿರುವ ಮಹತ್ವದ ಕೊಡುಗೆಯೆಂದರೆ ಶೈಲಿವಿಜ್ಞಾನ ಎಂದು ಅಭಿಪ್ರಾಯಪಡುತ್ತಾನೆ. ಶೈಲಿವಿಜ್ಞಾನ 20ನೆಯ ಶತಮಾನದಲ್ಲಿ ಹೆಚ್ಚು ಪ್ರಾಚುರ್ಯವನ್ನು ಪಡೆದುಕೊಂಡಿದೆ. ಇದರ ಬಗ್ಗೆ ಐ.ಎ.ರಿಚಡ್ರ್ಸ್, ರೆನೆವೆಲಕ್ ಮೊದಲಾದ ಸಾಹಿತ್ಯ ವಿಮರ್ಶಕರು, ಕ್ರೋಬರ್, ಹರ್ಸ್ಕೋವಿಟ್ಸ್ ಎಂಬ ಮಾನವ ಶಾಸ್ತ್ರಜ್ಞರು; ಹಾಕೆಟ್, ರೋಮನ್ ಯಾಕೋಬ್‍ಸನ್, ಟರ್ನರ್, ಫೌಲರ್, ಹ್ಯಾಲಿಡೆ, ಚಾಲ್ರ್ಸ್ ಬ್ಯಾಲಿ ಮೊದಲಾದ ಭಾಷಾವಿಜ್ಞಾನಿಗಳು ಅಧ್ಯಯನ ನಡೆಸಿದ್ದಾರೆ.

ಶೈಲಿವಿಜ್ಞಾನವನ್ನು ಕುರಿತು ಅಧ್ಯಯನ ಮಾಡಿದವರಲ್ಲಿ ಪ್ರಾಚೀನ ಭಾರತೀಯರೇ ಮೊತ್ತ ಮೊದಲಿಗರು. ಭಾರತದ ಬೇರೆ ಬೇರೆ ವಿದ್ವಾಂಸರು ಬಹು ಹಿಂದೆಯೇ ಕಾವ್ಯದ ವಿವಿಧ ಶೈಲಿಗಳನ್ನು ಕುರಿತು ವಿವೇಚಿಸಿದ್ದಾರೆ ಎಂಬುದಕ್ಕೆ ಸಾಕಷ್ಟು ಆಧಾರಗಳು ದೊರೆಯುತ್ತವೆ. ಇವರು ಸಾಹಿತ್ಯದ ಶೈಲಿಯನ್ನು ಮಾತ್ರ ವಿವೇಚಿಸಿದರೇ ಹೊರತು ಯಾರೂ ಭಾಷಿಕ ಶೈಲಿಯನ್ನು ಗಮನಿಸಿದಂತೆ ಕಂಡುಬರುವುದಿಲ್ಲ. ಆದರೆ ಕುಂತಕನಂತಹ (ವಕ್ರೋಕ್ತಿಜೀವಿತಕಾರ, ಕಾಲ 10 ಮತ್ತು 11ನೆಯ ಶತಮಾನದ ನಡುವೆ) ಕೆಲವು ಮೀಮಾಂಸಕರು ಸಾಹಿತ್ಯವನ್ನು ಕುರಿತು ಮಾತನಾಡುವಾಗ ಭಾಷಿಕ ಶೈಲಿಯನ್ನೂ ಹೇಳಿದ್ದಾರೆ ಎಂಬುದನ್ನು ಗಮನಿಸಬೇಕು. ಭಾರತೀಯ ಆಲಂಕಾರಿಕರಲ್ಲಿ ಭಾಮಹ, ದಂಡಿ ಮೊದಲಾದವರೂ ಕುಂತಕನಿಗಿಂತ ಹಿಂದೆಯೇ ಕಾವ್ಯದಲ್ಲಿ ವಕ್ರೋಕ್ತಿ ಹೇಗೆ ಕಾವ್ಯದ ಜೀವಿತವಾಗುತ್ತದೆ ಎಂದು ಚರ್ಚಿಸಿದ್ದಾರೆ. ಕುಂತಕ “ವರ್ಣವಿನ್ಯಾಸದಿಂದ ಹಿಡಿದು ಪೂರ್ಣ ಪ್ರಬಂಧದವರೆಗೆ ಕಾವ್ಯದ ಎಲ್ಲ ಅಂಶಗಳಲ್ಲೂ ವಕ್ರೋಕ್ತಿ ಅಗತ್ಯವಾಗಿ ಇರಲೇಬೇಕೆಂದು ಪ್ರತಿಪಾದಿಸಿದ ಅಂಶವು ನಾವಿಂದು ವಿವರಿಸಿಕೊಳ್ಳುವ ಭಾಷಿಕ ಶೈಲಿಯನ್ನು ಹೋಲುತ್ತದೆ. ಆತನೇ ವರ್ಣವಿನ್ಯಾಸ, ಪ್ರಕೃತಿ, ಪ್ರತ್ಯಯ ಮೊದಲಾದವುಗಳ ಪ್ರಯೋಗ, ವಾಕ್ಯದಲ್ಲಿ ಅಲಂಕಾರಗಳನ್ನು ಅಳವಡಿಸುವುದು, ಯಾವುದಾದರೊಂದು ಕಥಾಭಾಗವು ರಮ್ಯವಲ್ಲದಿದ್ದರೆ ರಸವನ್ನಾಗಲಿ, ಪಾತ್ರಸ್ವಭಾವವನ್ನಾಗಲಿ, ಗೌರವವನ್ನಾಗಲಿ ಭಂಗಪಡಿಸುವಂತಿದ್ದರೆ ಅದನ್ನು ತಿದ್ದುವುದು, ಒಟ್ಟು ಪ್ರಬಂಧದಿಂದ ಒಂದು ರಸವಾಗಲಿ ವಿಶೇಷಾರ್ಥವಾಗಲಿ ಹೊಮ್ಮುವಂತೆ ಮಾಡುವುದು ಇವೆಲ್ಲವೂ ಕವಿವ್ಯಾಪಾರ ವಕ್ರತೆಯ ಬೇರೆ ಬೇರೆ ಪ್ರಕಾರಗಳು ಎಂದು ಹೇಳುವ ಮಾತುಗಳು ಮೇಲಿನ ಹೇಳಿಕೆಗೆ ಪುಷ್ಟಿಯನ್ನು ಕೊಡುತ್ತವೆ.

ಪಾಶ್ಚಾತ್ಯ ದೇಶಗಳ ಬೇರೆ ಬೇರೆ ವಿದ್ವಾಂಸರು ಶೈಲಿಯನ್ನು ಕುರಿತು ವಿವಿಧ ಬಗೆಯಲ್ಲಿ ವಿವೇಚಿಸಿದ್ದಾರೆ. ಫರ್ಡಿನಾಂಡ್ ಡಿ. ಸಸ್ಸೂರ್ ಮಹಾಶಯನ ಶಿಷ್ಯ ಚಾಲ್ರ್ಸ್‍ಬ್ಯಾಲಿ ಎಂಬಾತ ಭಾಷಿಕ ಶೈಲಿಯನ್ನು ಕುರಿತು ಆಳವಾಗಿ ಅಧ್ಯಯನ ನಡೆಸಿದ್ದಾನೆ. ಭಾಷೆಯ ಅಭಿವ್ಯಕ್ತಿಶೀಲತೆ ಯ ಮೌಲ್ಯವನ್ನು ಕುರಿತು ವಿವೇಚಿಸಿದವರಲ್ಲಿ ಈತನೇ ಮೊತ್ತಮೊದಲಿಗ. ಇವನು ಭಾಷೆಯ ಅಭಿವ್ಯಕ್ತಿ ಮಾಧ್ಯಮದ ವೈವಿಧ್ಯವನ್ನೇ ಶೈಲಿ ಎಂದು ಕರೆದಿದ್ದಾನೆ. ಇಷ್ಟೇ ಅಲ್ಲದೆ ರ್ಯಾಷನಲ್ ಸ್ಟೈಲಿಸ್ಟಿಕ್ಸ್ ಕ್ಷೇತ್ರದಲ್ಲಿ ಇವನು ಮಾಡಿರುವ ಸಾಧನೆ ಹೆಚ್ಚು ಹೆಸರುವಾಸಿಯಾಗಿದೆ. ಶೈಲಿವಿಜ್ಞಾನ ಕ್ಕೆ ಚಾಲ್ರ್ಸ್‍ಬ್ಯಾಲಿ ಸಲ್ಲಿಸಿರುವ ಮಹತ್ತರ ಸೇವೆಯಿಂದಾಗಿ ಈತನನ್ನು ಶೈಲಿವಿಜ್ಞಾನದ ಪಿತಾಮಹನೆಂದು ಕರೆಯಲಾಗಿದೆ.

ಫ್ರಾನ್ಸ್ ದೇಶದ ಮಾರ್ಸೆಲ್ ಕ್ರೆಸೆಟ್ ಎಂಬಾತ ಶೈಲಿವಿಜ್ಞಾನದಲ್ಲಿ ಸಾಕಷ್ಟು ಕೆಲಸಮಾಡಿ “ಲಾ ಸ್ಟೈಲ್ ಎಟ್ ಸೆಸ್ ಟೆಕ್ನಿಕ್ಸ್” ಎಂಬ ಗ್ರಂಥವನ್ನು ಹೊರತಂದ(1947). ಇದು ಪ್ರಸಿದ್ಧ ಕೃತಿ. ಈತ ಭಾಷಿಕ ಹಾಗೂ ಸಾಹಿತ್ಯಕ ಶೈಲಿಗಳನ್ನು ಕುರಿತು ವಿವೇಚಿಸಿದ್ದಾನೆ. ಫ್ರಾಂಜ್‍ಬಾಪ್ ಎಂಬುವನು ವ್ಯಕ್ತಿಗತವಾದ ಶೈಲಿಯೇ ಸಾಹಿತ್ಯಕ ಹಾಗೂ ಭಾಷಿಕ ಶೈಲಿಗಳು ಬೇರೆ ಬೇರೆಯಾಗಿ ಕಾಣಿಸಿಕೊಳ್ಳಲು ಕಾರಣವಾಗಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ. ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಆದ ಶೈಲಿಯನ್ನು ಹೊಂದಿರುತ್ತಾನೆ. ಈ ವ್ಯಕ್ತಿಗತವಾದ ಶೈಲಿ ಭಾಷೆ ಮತ್ತು ಸಾಹಿತ್ಯಗಳ ಮುಖಾಂತರ ವ್ಯಕ್ತವಾಗುವುದೆಂದು ಈತನ ಅಭಿಪ್ರಾಯ. ವ್ಯಕ್ತಿಶೈಲಿಗೆ ಪ್ರಾಮುಖ್ಯವನ್ನು ತಂದುಕೊಟ್ಟಿದ್ದು ಇವನ ಬಹುಮುಖ್ಯವಾದ ಸಾಧನೆ. ಥಾಮಸ್ ಎ. ಸೀಬಿಯಾಕ್ ಸಂಪಾದಿಸಿ ಪ್ರಕಟಿಸಿದ ಸ್ಟೈಲ್ ಇನ್ ಲಾಂಗ್ವೇಜ್(1960), ರೋಜರ್ ಫೌಲರ್ ಎಂಬಾತ ಪ್ರಕಟಿಸಿದ “ಎಸ್ಸೇಸ್ ಆನ್ ಸ್ಟೈಲ್ ಅಂಡ್ ಲಾಂಗ್ವೇಜ್” (1966), ಡೊನಾಲ್ಡ್ ಎಲ್. ಫ್ರೀಮನ್ ಪ್ರಕಟಿಸಿದ ಲಿಂಗ್ವಿಸ್ಟಿಕ್ಸ್ ಅಂಡ್ ಲಿಟರರಿ ಸ್ಟೈಲ್ಸ್(1970) ಮತ್ತು ಜಿ.ಡಬ್ಲ್ಯು. ಟರ್ನರ್ ಎಂಬ ನ್ಯೂಜಿಲೆಂಡಿನ ವಿದ್ವಾಂಸ ಬರೆದ ಸ್ಟೈಲಿಸ್ಟಿಕ್ಸ್(1973) ಇತ್ಯಾದಿ ಗ್ರಂಥಗಳು ಭಾಷಿಕ, ಸಾಹಿತ್ಯಕ ಹಾಗೂ ವ್ಯಕ್ತಿಗತ ಶೈಲಿಗಳ ಬಗೆಗೆ ಹೆಚ್ಚಿನ ಮಾಹಿತಿಗಳನ್ನು ಒದಗಿಸಿಕೊಡುತ್ತವೆ.

ಶೈಲಿ ಪದದ ಅರ್ಥ ಮತ್ತು ನಿಷ್ಪತ್ತಿ: ಶೈಲಿ ಎಂದರೇನು, ಭಾಷಿಕ ಶೈಲಿಗೂ ಸಾಹಿತ್ಯಕ ಶೈಲಿಗೂ ಇರುವ ವ್ಯತ್ಯಾಸವೇನು, ಅವು ಹೇಗೆ ಒಂದಕ್ಕೊಂದು ಪೂರಕವಾಗಿವೆ, ಅವುಗಳ ಸ್ವರೂಪವೇನು ಎಂಬ ವಿಚಾರವಾಗಿ ಶೈಲಿವಿಜ್ಞಾನದಲ್ಲಿ ವಿವೇಚಿಸಲಾಗಿದೆ. ಶೈಲಿಯನ್ನು ಕುರಿತಂತೆ ಅನೇಕ ಭಾರತೀಯ ಮತ್ತು ಪಾಶ್ಚಾತ್ಯ ವಿದ್ವಾಂಸರು ಬಗೆಬಗೆಯಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಇವುಗಳಲ್ಲಿ ಪ್ರಮುಖವಾದ ಕೆಲವನ್ನು ಇಲ್ಲಿ ವಿವೇಚಿಸಬಹುದು.

19ನೆಯ ಶತಮಾನದ ಆರಂಭದಲ್ಲಿ ಜರ್ಮನರು ಸ್ಟೈಲಿಸ್ಟಿಕ್ ಎಂಬ ಶಬ್ದವನ್ನು ಶೈಲಿಯ ಅಧ್ಯಯನ ಎಂಬರ್ಥದಲ್ಲಿ ಬಳಕೆಗೆ ತಂದರು. ಇವರ ಅನಂತರ ಇಂಗ್ಲಿಷರು ಸ್ಟೈಲಿಸ್ಟಿಕ್ಸ್ ಎಂಬ ಶಬ್ದವನ್ನು ಶೈಲಿ ವಿಜ್ಞಾನ ಎಂಬರ್ಥದಲ್ಲಿ ಬಳಸಿದರು(1846). ಇಂಗ್ಲಿಷಿನಲ್ಲಿ ಈ ಶಬ್ದ 1846ರಲ್ಲಿಯೇ ಬಳಕೆಗೆ ಬಂದಿತಾದರೂ 1882ರಲ್ಲಿ ಇದು ಹೆಚ್ಚು ಪ್ರಚಾರಕ್ಕೆ ಬಂದಿತು. ಫ್ರೆಂಚರು ಸ್ಟೈಲಿಸ್ಟಿಕ್ ಎಂಬ ಶಬ್ದವನ್ನು ಶೈಲಿಯ ಅಧ್ಯಯನ ಎಂಬ ಅರ್ಥದಲ್ಲಿ ಬಳಸಿದರು(1872). ಇವರ ಪರಿಶ್ರಮದಿಂದ ಸ್ಟೈಲಿಸ್ಟಿಕ್ಸ್ ಎಂಬ ಶಬ್ದ ಹೆಚ್ಚು ಪ್ರಾಚುರ್ಯಕ್ಕೆ ಬಂದಿತು.

ಭಾಷಣದಲ್ಲಾಗಲಿ, ಬರೆವಣಿಗೆಯಲ್ಲಾಗಲಿ ಭಾಷೆಯನ್ನು ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಹಾಗೂ ಪರಿಣಾಮಕ್ಕಾಗಿ ಬಳಸುವ ಕಲೆಯನ್ನು ಪಾಶ್ಚಾತ್ಯ ವಿಮರ್ಶಕರು `ಸ್ಟೈಲ್ ಎಂದು ಕರೆದಿದ್ದಾರೆ. `ಸ್ಟೈಲ್ ಎಂದರೆ ಮೂಲತಃ `ಬರೆವಣಿಗೆಯ ಒಂದು ಸಾಧನ ಎಂದು ಅರ್ಥ. ಇಂಗ್ಲಿಷಿನ `ಸ್ಟೈಲ್ ಎಂಬುದು ಲ್ಯಾಟಿನ್ ಭಾಷೆಯ ಸ್ಟಿಲಸ್ ಎಂಬ ಪದದಿಂದ ನಿಷ್ಪನ್ನವಾಗಿದೆ. ಸ್ಟಿಲಸ್ ಎಂದರೆ ಪ್ರಾಚೀನ ರೋಮನ್ನರು ಜೇನುಮೇಣದ ಹಲಗೆಗಳ ಮೇಲೆ ಬರೆಯುವುದಕ್ಕೆ ಬಳಸುತ್ತಿದ್ದ ಲೋಹದಿಂದಲೋ ಮೂಳೆಯಿಂದಲೋ ತಯಾರಿಸಸಿದ ಒಂದು ಲೇಖನಿ ಯಾಕಾರದ ಬರೆಯುವ ಸಾಧನ. ಕ್ರಮೇಣ ಈ ಮಾತಿನ ಅರ್ಥ ವಿಸ್ತøತವಾಗಿ ಒಬ್ಬನ ಬರೆವಣಿಗೆಯ ರೀತಿ ಎಂದೂ ತದನಂತರ ಒಬ್ಬನು ತನ್ನನ್ನು ತಾನು ವಿಶಿಷ್ಟವಾದ ರೀತಿಯಲ್ಲಿ ಅಭಿವ್ಯಕ್ತಿಸಿಕೊಳ್ಳುವ ಕ್ರಮ ಎಂದೂ ಅನ್ವಯವಾಗತೊಡಗಿತು.

ಶೈಲಿ ಎನ್ನುವುದು ಯಾವುದನ್ನಾದರೂ ಮಾಡುವ ವಿಶೇಷ ವ್ಯಕ್ತಿತ್ವ ಅಥವಾ ವಿಧಾನ. ಲೇಖಕ ಅಥವಾ ಕಲಾವಿದ ತನ್ನ ಆಲೋಚನೆ ಅಥವಾ ಅಭಿಪ್ರಾಯಗಳನ್ನು ಸಾಹಿತ್ಯ ಅಥವಾ ಕಲೆಗಳಲ್ಲಿ ಅಭಿವ್ಯಕ್ತಪ ಡಿಸುವ ಒಂದು ವಿಧಾನವೇ ಶೈಲಿ. ಡೆಲ್.ಎಚ್.ಹೈಮ್ಸ್ ಎಂಬಾತ “ರೂಢಿಯಿಂದ ಮಾರ್ಗಾಂತರ ಹೊಂದಿದ ಮತ್ತು ವಸ್ತುಗಳನ್ನು ತಯಾರಿಸುವ ವಿಧಾನ ಅಥವಾ ಸುಸಂಬದ್ಧವಾದ ಮಾರ್ಗದ ಒಂದು ವ್ಯವಸ್ಥೆಯೇ ಶೈಲಿ” ಎಂದಿದ್ದಾನೆ. ಎ.ಎಲ್.ಕ್ರೋಬರ್ ಎಂಬ ಮಾನವ ಶಾಸ್ತ್ರಜ್ಞ ಈ ಮೇಲಿನ ವ್ಯಾಖ್ಯೆಯನ್ನು ಒಂದು ಸೂಚಿ ಪಾಯಿಂಟರ್ ಆಗಿ ಪರಿಗಣಿಸುತ್ತಾನೆಯೇ ವಿನಾ ಸ್ಪಷ್ಟವಾದ ವ್ಯಾಖ್ಯೆ ಎಂದಲ್ಲ. ಇವನು “ಒಂದು ಶೈಲಿ ಎಂಬುದು ಸಂಸ್ಕøತಿ ಅಥವಾ ನಾಗರಿಕತೆಯಲ್ಲಿಯ ಒಂದು ತೀರ” ಎಂದು ಹೇಳುತ್ತಾನೆ. “ಶೈಲಿ ಎಂದರೆ ಕವಿಯೊಬ್ಬ ಭಾಷೆಯನ್ನು ತನ್ನ ಭಾವಾಭಿವ್ಯಕ್ತಿಗೆ ಬಳಸುವ ಒಂದು ವಿಶಿಷ್ಟವಾದ ಕ್ರಮ, ಅತ್ಯುತ್ತಮವಾದ ಪದಗಳು ಅತ್ಯುತ್ತಮವಾದ ಕ್ರಮದಲ್ಲಿ ಜೋಡಣೆಗೊಳ್ಳುವುದೇ ನಿಜವಾದ ಶೈಲಿಯ ಲಕ್ಷಣ” ಎಂದು ಕೋಲ್ ರಿಜ್ ಹೇಳುತ್ತಾನೆ. ಇದನ್ನೇ 18ನೆಯ ಶತಮಾನದಲ್ಲಿ ಜೊನಾಥನ್ ಸ್ವಿಫ್ಟ್ ಎಂಬಾತ ಪ್ರಾಪರ್ ವಡ್ರ್ಸ್ ಇನ್ ಪ್ರಾಪರ್ ಪ್ಲೇಸಸ್ ಎಂದು ಹೇಳಿದ.

“ಶೈಲಿಯೆನ್ನುವುದು ಆಲೋಚನೆಯ ಉಡುಪು” ಎಂದು ಪೋಪ್ ಕವಿಯೂ “ಆಲೋಚನೆಗೆ ಸಾಕಷ್ಟು ಸಮರ್ಪಕವಾದ ಭಾಷೆಯನ್ನು ತೊಡಿಸುವ ಸಮಾರಂಭವೇ ಶೈಲಿ” ಎಂದು ಸಿಂಪ್ಸನ್ನನೂ “ಶೈಲಿ ಲೇಖಕನ ಅಂಗಿಯ ತೊಗಲು” ಎಂದು ಕಾರ್ಲೈಲನೂ ಹೇಳಿದ್ದಾರೆ. “ಪರ್ಯಾಯವಾದ ಅಭಿವ್ಯಕ್ತಿ ರೂಪಗಳನ್ನು ಆಯ್ಕೆಮಾಡಿಕೊಳ್ಳುವ ಸಾಧ್ಯತೆ ಭಾಷೆಯಲ್ಲಿಯ ಶೈಲಿಯಲ್ಲಿ ಕಂಡುಬರುತ್ತದೆ” ಎಂದು ಚಾಲ್ರ್ಸ್‍ಬ್ಯಾಲಿ ಅಭಿಪ್ರಾಯಪಟ್ಟಿದ್ದಾನೆ. ಇದಕ್ಕೆ ಒಂದು ನಿದರ್ಶನವನ್ನು ಕೊಡಬಹುದು. ರನ್ನನ ಗದಾಯುದ್ಧದ ಒಂದು ಪದ್ಯ: “ಕಂದಾ ನಿಜಾನುಜರೆಲ್ಲಿದರೆಂದೆನ್ನಂ ಜನನಿ ಬಂದು ಬೆಸಗೊಂಡೊಡದೇನೆಂದುಮಮಾತುಗುಡುವೆಂ ಕೊಂದರ್ ಕೌಂತೇಯರೆಂದು ಬಿನ್ನೈಸುವೆನೋ” ಎಂಬ ಈ ಪದ್ಯದಲ್ಲಿ “ಕಂದ” ಎಂಬುದಕ್ಕೆ ಮಗು, ಪುತ್ರ, ಕೂಸು ಮುಂತಾದ ಅನೇಕ ಪರ್ಯಾಯ ಪದಗಳಿದ್ದರೂ ಈ ಸಂದರ್ಭದಲ್ಲಿ `ಕಂದಾ ಎಂಬ ಶಬ್ದ ಹೇಗೆ ಉಚಿತವಾಗಿ ಅರ್ಥವಂತಿಕೆಯನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಗಮನಿಸಬೇಕು. ಆದ್ದರಿಂದ `ಶೈಲಿ ಎಂಬುದು ಆಯ್ಕೆ, ಬಹುಸಂಯೋ ಗಶಕ್ತಿ ಮತ್ತು ಭಾಷೆಯಲ್ಲಿಯ ಮಾರ್ಗಾಂತರವನ್ನು ಅವಲಂಬಿಸಿರುತ್ತದೆ. ಮತ್ತೊಬ್ಬ ವಿದ್ವಾಂಸನಾದ ಬಫೂನ್ ತನ್ನ ಡಿಸ್ಕೋಸ್ ಸುರ್-ಲೆ-ಸ್ಟೈಲ್ (1753) ಎಂಬ ಪುಸ್ತಕದಲ್ಲಿ “ವ್ಯಕ್ತಿಯೇ ಶೈಲಿ” ಎಂದೂ ಎಡ್‍ಮಂಡ್ ಗಾಸಸ್ ಎಂಬಾತ “ಬರೆಯುವ ವ್ಯಕ್ತಿಯ ಮಾನಸಿಕ ಚಿತ್ರ” ಎಂದೂ ಹೇಳುತ್ತಾರೆ.

ಶೈಲಿಯನ್ನು ಕುರಿತು ರೋಮನ್ ಯಾಕೋಬ್‍ಸನ್ ಹೇಳಿರುವ ಪ್ರಕಾರ “ಕಾವ್ಯದಲ್ಲಿಯ ಒಂದು ವರ್ಣ ಅದೇ ಸಂದರ್ಭದ ಬೇರೊಂದು ವರ್ಣದೊಂದಿಗೆ, ಒಂದು ಬಲಾಘಾತ ಅದೇ ಸಂದರ್ಭದ ಬೇರೊಂದು ಬಲಾಘಾತದೊಂದಿಗೆ, ಒಂದು ದೀರ್ಘ ಅದೇ ಸಂದರ್ಭದ ಬೇರೊಂದು ದೀರ್ಘದೊಂದಿಗೆ ಹಾಗೆಯೇ ಒಂದು ಹ್ರಸ್ವ ಅದೇ ಸಂದರ್ಭದ ಮತ್ತೊಂದು ಹ್ರಸ್ವದೊಂದಿಗೆ ಏಕರೂಪತೆಯನ್ನು ಪಡೆದುಕೊಳ್ಳುತ್ತದೆ.”

ಶೈಲಿಯನ್ನು ಕುರಿತ ಈ ಮೇಲಿನ ಅಭಿಪ್ರಾಯಗಳು ಕವಿ ಬಳಸುವ ಭಾಷೆ ಹೇಗಿರಬೇಕು ಮತ್ತು ಅವನ ಆಲೋಚನೆಗಳು, ಅನುಭವಗಳು ಭಾಷೆಯ ಮೂಲಕ ಅಭಿವ್ಯಕ್ತವಾಗುವಾಗ ಭಾಷೆ ಯಾವ ರೀತಿಯಲ್ಲಿ ಬಳಕೆಯಾಗುತ್ತದೆ, ಕವಿ ಮತ್ತು ಭಾಷೆ, ಆಲೋಚನೆ, ಅನುಭವ ಮತ್ತು ಭಾಷೆ ಹೇಗೆ ಒಂದಕ್ಕೊಂದು ಹೊಂದಿಕೊಂಡು ಒಂದು ವಿಶಿಷ್ಟ ವಾದ ಪದಗಳ ಜೋಡಣೆಯಿಂದಾಗಿ ಸಾಹಿತ್ಯ ಸೃಷ್ಟಿಯಾಗುತ್ತದೆ ಮತ್ತು ವ್ಯಕ್ತಿತ್ವ ಹಾಗೂ ಸಾಂಸ್ಕøತಿಕ ವಿಚಾರಗಳು ಶೈಲಿಯಲ್ಲಿ ಹೇಗೆ ಪ್ರತಿಬಿಂಬಿತವಾಗುತ್ತವೆ ಎಂಬ ಅಂಶಗಳನ್ನು ಮನಗಾಣಿಸುತ್ತವೆ.

ಶೈಲಿಯ ಸ್ವರೂಪ ಮತ್ತು ಲಕ್ಷಣ: ಶೈಲಿಯಲ್ಲಿ ಪ್ರಮುಖವಾಗಿ ಎರಡು ಬಗೆ. ಒಂದು ಸಾಹಿತ್ಯಕ ಶೈಲಿ (ಲಿಟರರಿ ಸ್ಟೈಲ್) ಇನ್ನೊಂದು ಭಾಷಿಕ ಶೈಲಿ (ಲಿಂಗ್ವಿಸ್ಟಿಕ್ ಸ್ಟೈಲ್). ಇವಲ್ಲದೆ ವ್ಯಕ್ತಿಗತ ಶೈಲಿ (ಪರ್ಸನಲ್ ಸ್ಟೈಲ್) ಎಂಬುದನ್ನೂ ಗುರುತಿಸಿಕೊಳ್ಳಬಹುದು. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕಂಡುಬರುವ ಶೈಲಿಯನ್ನೇ ಸಾಹಿತ್ಯಕ ಶೈಲಿಯೆಂ ದೂ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕಾಣಿಸಿಕೊಳ್ಳುವ ಭಾಷಾವೈವಿಧ್ಯಕ್ಕೆ ಸಂಬಂಧಿಸಿದ ಶೈಲಿಯನ್ನೇ ಭಾಷಿಕ ಶೈಲಿ ಎಂದೂ ವ್ಯಕ್ತಿ ತನ್ನ ಅಭಿರುಚಿಗೆ ಅನುಗುಣವಾಗಿ ಸಂದರ್ಭ ಹಾಗೂ ಸನ್ನಿವೇಶಗಳಿಗೆ ತಕ್ಕಂತೆ ಭಾಷೆಯನ್ನು ಬಳಸುವ ಬಗೆಯನ್ನು ವ್ಯಕ್ತಿಗತ ಶೈಲಿ ಎಂದೂ ಸ್ಥೂಲವಾಗಿ ಕರೆಯಬಹುದು. ಈ ಬೇರೆ ಬೇರೆ ಶೈಲಿಗಳು ಮೇಲುನೋಟ ಕ್ಕೆ ಎಷ್ಟೇ ಭಿನ್ನವಾಗಿ ಗೋಚರವಾದರೂ ಪರಸ್ಪರ ಒಂದನ್ನೊಂದು ಅವಲಂಬಿಸಿವೆ, ಇವುಗಳಲ್ಲಿ ಒಂದಿಲ್ಲದೆ ಮತ್ತೊಂದರ ಅಸ್ತಿತ್ವ ಸಾಧ್ಯವಾಗುವುದಿಲ್ಲ.

ಸಾಹಿತ್ಯದಲ್ಲಿ ಕಾವ್ಯ, ಕಥೆ, ಕಾದಂಬರಿ, ಪ್ರಬಂಧ, ನಾಟಕ ಇತ್ಯಾದಿ ಅನೇಕ ಪ್ರಕಾರಗಳಿವೆ. ಇವುಗಳಲ್ಲಿ ಬಳಕೆಯಾಗುವ ಭಾಷೆ ಆಯಾ ಪ್ರಕಾರಗಳಿಗೆ ವಿಶಿಷ್ಟವಾಗಿರುತ್ತದೆ. ಗದ್ಯಪ್ರಕಾರಗಳಲ್ಲಿ ಬಳಸುವ ಭಾಷೆಯ ರೀತಿಯನ್ನು ಪದ್ಯಪ್ರಕಾರಗಳಲ್ಲಿ ಬಳಸುವುದಿಲ್ಲ. ಹಾಗೆಯೇ ಚಂಪೂವಿನ ಭಾಷೆಗೂ ವಚನದ ಭಾಷೆಗೂ ಭಿನ್ನತೆಯಿದೆ. ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಬಳಕೆಯಾಗುವ ಭಾಷೆ ವ್ಯಕ್ತಿ, ಕಾಲ ಮತ್ತು ಪರಿಸರಗಳಿಗೆ ಬದ್ಧವಾಗಿರುತ್ತದೆಯಲ್ಲದೆ ಭಿನ್ನಭಿನ್ನವಾಗಿ ಕಂಡುಬರುತ್ತದೆ. ಸಾಹಿತ್ಯಕ ಶೈಲಿ ಕಾವ್ಯಶಾಸ್ತ್ರಕ್ಕೆ ಸಂಬಂಧಿಸಿದುದು. ಸಾಹಿತ್ಯದ ವಿವಿಧ ಪ್ರಕಾರಗಳ ಸ್ವರೂಪವನ್ನು ಕಾವ್ಯಶಾಸ್ತ್ರದಲ್ಲಿ ವಿವೇಚಿಸಲಾಗುತ್ತದೆ. ಕಾವ್ಯಶಾಸ್ತ್ರ, ಭಾಷಾಶಾಸ್ತ್ರಗಳು ಸಾಕಷ್ಟು ನಿಕಟವಾದ ಸಂಬಂಧವನ್ನು ಪಡೆದುಕೊಂಡಿವೆ. ಇವುಗಳ ಸಹಾಯದಿಂದ ಸಾಹಿತ್ಯಕ ಹಾಗೂ ಭಾಷಿಕ ಶೈಲಿಗಳಿಗೆ ಇರುವ ವ್ಯತ್ಯಾಸವನ್ನು ಅರಿಯಲು ಸುಲಭವಾಗುವುದು. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಬಳಕೆಯಾಗಿರುವ ಭಾಷಾವೈವಿಧ್ಯವನ್ನು ಕುರಿತು ವಿವೇಚಿಸಬಹುದಾದುದನ್ನೇ ಭಾಷಿಕಶೈಲಿ ವಿಜ್ಞಾನ (ಲಿಂಗ್ವಿಸ್ಟಿಕ್ ಸ್ಟೈಲಿಸ್ಟಿಕ್ಸ್) ಎಂದು ಕರೆಯುವರು. ಕಾವ್ಯಶಾಸ್ತ್ರ, ಭಾಷಾಶಾಸ್ತ್ರ ಹಾಗೂ ಶೈಲಿವಿಜ್ಞಾನಗಳ ಸಹಾಯದಿಂದ ಈ ವಿವಿಧ ಬಗೆಯ ಶೈಲಿಗಳನ್ನು ಹೆಚ್ಚು ಖಚಿತ ಹಾಗೂ ವೈಜ್ಞಾನಿಕವಾಗಿ ವಿವೇಚಿಸಲು ಸಾಧ್ಯವಿದೆ.

ಭಾಷಿಕ ಶೈಲಿಯಲ್ಲಿ ಮುಖ್ಯವಾಗಿ ಎರಡು ಬಗೆ: ಬರೆಹದ ಭಾಷೆಗೆ ಸಂಬಂಧಿಸಿದುದು ಗ್ರಾಂಥಿಕ (ಲಿಖಿತ) ಶೈಲಿ (ರಿಟನ್ ಸ್ಟೈಲ್) ಮತ್ತು ಆಡುಮಾತಿಗೆ ಸಂಬಂಧಿಸಿದುದು ಅಲಿಖಿತ (ನುಡಿ) ಶೈಲಿ (ಸ್ಪೋಕನ್ ಸ್ಟೈಲ್). ಅಲಿಖಿತ ಶೈಲಿ ಲಿಖಿತ ಶೈಲಿಗಿಂತ ಭಿನ್ನವಾಗಿರುತ್ತದೆ. ಈ ಬಗೆಯ ವ್ಯತ್ಯಾಸಕ್ಕೆ ಆಡುಭಾಷೆ ಮತ್ತು ಬರೆಹದ ಭಾಷೆಗಳು ಮತ್ತು ಇವುಗಳ ಬಳಕೆ ಕಾರಣವಾಗಿವೆ. ಇದರಿಂದಾಗಿ ಅಭಿಜಾತ ಸಾಹಿತ್ಯ ಮತ್ತು ಜನಪದ ಸಾಹಿತ್ಯಗಳು ಬೇರೆ ಬೇರೆಯಾಗಿ ಕಾಣಿಸಿಕೊಳ್ಳಲು ಸಾಧ್ಯವಾಗಿದೆ.

ಸಾಹಿತ್ಯದಲ್ಲಿ ಅಲಂಕಾರ, ಛಂದಸ್ಸು, ರಸ, ಧ್ವನಿ ಮುಂತಾದವು ಬಹಳ ಮುಖ್ಯ. ಇವು ಕಾವ್ಯದ ಸೌಂದರ್ಯವನ್ನು ಹೆಚ್ಚಿಸುತ್ತವೆ. ಭಾವ, ವಿಭಾವ, ಶಬ್ದಾರ್ಥ, ಲಕ್ಷಣಾರ್ಥ, ಗುಣ, ಶಬ್ದಶಕ್ತಿ ಮುಂತಾದವು ಭಾಷೆಯನ್ನು ಬಳಸುವ ರೀತಿನೀತಿಗಳಿಗೆ ಅನುಗುಣವಾಗಿರುತ್ತವೆ. ಇವು ಭಾಷೆಯ ಸ್ವಭಾವ ಹಾಗೂ ಸ್ವರೂಪವನ್ನು ತಿಳಿಸುತ್ತವೆ. ಈ ಎಲ್ಲ ಬಗೆಯ ವಿಚಾರಗಳನ್ನು ಶೈಲಿ ವಿಜ್ಞಾನದಲ್ಲಿ ವಿವೇಚಿಸಲು ಸಾಧ್ಯ.

ಭಾಷೆಯ ವಿಚಾರದಲ್ಲಿ ಶೈಲಿ ಎಂಬುದು ಅದರ ಅಭಿವ್ಯಕ್ತಿಗೆ ಸಂಬಂಧಿಸಿದ್ದಾಗಿರುತ್ತದೆ. ಪ್ರತಿಯೊಂದು ಭಾಷೆಯೂ ತನ್ನದೇ ಆದ ಧ್ವನಿ, ಶಬ್ದ, ವಾಕ್ಯ ರಚನೆಗಳನ್ನು ಹೊಂದಿರುತ್ತದೆ. ಇವುಗಳ ಮೂಲಕ ಭಾಷೆ ಅಭಿವ್ಯಕ್ತಗೊಳ್ಳುತ್ತದೆ. ಯಾವ ವ್ಯಕ್ತಿ ತನ್ನ ಬರೆಹದಲ್ಲಿ ಅಥವಾ ಮಾತಿನಲ್ಲಿ ತನ್ನತನವನ್ನು ಭಾಷೆಯ ಮೂಲಕ ಪ್ರತಿಬಿಂಬಿಸಬಲ್ಲನೋ ಅದು ಅವನ ಶೈಲಿಯಾಗಿ ಕಾಣಿಸಿಕೊಳ್ಳುತ್ತದೆ. ಹೀಗೆ ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಆದ ಶೈಲಿಯನ್ನು ಹೊಂದಿರುತ್ತಾನೆ. ಈ ವ್ಯಕ್ತಿಗತವಾ ದ ಶೈಲಿಯನ್ನು ಸಾಮಾನ್ಯ ಶೈಲಿ (ಕಾಮನ್ ಸ್ಟೈಲ್) ಮತ್ತು ವಿಶಿಷ್ಟ ಶೈಲಿ (ಸ್ಪೆಷಲ್ ಸ್ಟೈಲ್) ಎಂದು ವರ್ಗೀಕರಿಸಿಕೊಳ್ಳಬಹುದು. ಯಾವ ವ್ಯಕ್ತಿ ಭಾಷೆಯನ್ನು ಸಾಮಾನ್ಯ ರೀತಿಯಲ್ಲಿ ಬಳಸುತ್ತಾನೋ ಅದು ಅವನ ಸಾಮಾನ್ಯಶೈಲಿ ಎನಿಸಿಕೊಂಡರೆ ಭಾಷೆಯನ್ನು ಸಾಮಾನ್ಯ ಶೈಲಿಗಿಂತ ಭಿನ್ನವಾಗಿ ಬಳಸುವುದು ಅವನ ವಿಶಿಷ್ಟ ಶೈಲಿಯಾಗುತ್ತದೆ. ಸಾಮಾನ್ಯಶೈಲಿ ರೂಢಿಯಲ್ಲಿರುವಂತಹ ಶೈಲಿ. ಅದರಲ್ಲಿ ಸ್ವಂತಿಕೆ ಎಂಬುದೇನೂ ಇರುವುದಿಲ್ಲ. ವಿಶಿಷ್ಟಶೈಲಿಯಲ್ಲಿ ಸ್ವಂತಿಕೆಯಿರುತ್ತದೆ. ಅದು ಕಾಲ, ಪರಿಸರ, ಸಂದರ್ಭ, ವ್ಯಕ್ತಿ ಇವೆಲ್ಲವನ್ನೂ ಅವಲಂಬಿಸಿರುತ್ತದೆ. ಭಾಷೆಯಲ್ಲಿ ಕಂಡುಬರುವ ಧ್ವನಿ, ಶಬ್ದ, ಅರ್ಥ, ವಾಕ್ಯ ಮುಂತಾದವನ್ನು ಸಂದರ್ಭ ಹಾಗೂ ಸನ್ನಿವೇಶಗಳಿಗೆ ಅನುಗುಣವಾಗಿ ವಿಶಿಷ್ಟವಾದ ರೀತಿಯಲ್ಲಿ ಮಾರ್ಪಡಿಸಿಕೊಂಡು ಬಳಸುವುದು ಶೈಲಿಯ ವಿಶೇಷತೆಯಲ್ಲಿ ಕಂಡುಬರುವ ಮುಖ್ಯ ಅಂಶ. ಹಾಗಿಲ್ಲದಿದ್ದರೆ ಅಂತಹ ಭಾಷೆ ಸಾಮಾನ್ಯವಾಗಿ ಒಂದೇ ಆಗಿರುತ್ತಿತ್ತು.

ಸಾಮಾನ್ಯವಾಗಿ ಅಭಿವ್ಯಕ್ತಿಯಲ್ಲಿ ಭಾಷೆ ಒಂದೇ ರೀತಿಯಲ್ಲಿರುತ್ತದೆ ಯಾದರೂ ವಿಶಿಷ್ಟಶೈಲಿಯಲ್ಲಿ ವ್ಯಕ್ತಿಗತವಾದ ಶೈಲಿ ಕಂಡುಬರುತ್ತದೆ. ಇದನ್ನು ಆಯಾ ವ್ಯಕ್ತಿಯ ಬರೆಹದಲ್ಲಿ ಸುಲಭವಾಗಿ ಗುರುತಿಸಬಹುದು. ಭಾರತೀಯ ಆಲಂಕಾರಿಕನಾದ ಕುಂತಕನು ರೀತಿಯು ಕವಿಸ್ವಭಾವಾನು ಸಾರಿ ಎಂದು ಹೇಳಿದ ಮಾತು ವ್ಯಕ್ತಿಗತವಾದ ಶೈಲಿಯನ್ನು ಕುರಿತದ್ದೇ ಆಗಿದೆ. ಸಾಹಿತ್ಯದಲ್ಲಿ ಒಬ್ಬ ಕವಿಯನ್ನು ಮತ್ತೊಬ್ಬ ಕವಿಯಿಂದ ಬೇರ್ಪಡಿಸಿ ತೋರಿಸುವಲ್ಲಿ ಶೈಲಿ ಪ್ರಮುಖ ಪಾತ್ರವಹಿಸುತ್ತದೆ. ಸಾಹಿತ್ಯವನ್ನು ಗಮನಿಸಿದಾಗ ಇದು ಪಂಪನ ಶೈಲಿ, ಇದು ರಾಘವಾಂಕನ ಶೈಲಿ, ಇದು ಕುವೆಂಪು ಶೈಲಿ, ಇದು ಬೇಂದ್ರೆ ಶೈಲಿ ಎಂದು ತಕ್ಷಣ ಮೇಲುನೋಟಕ್ಕೇ ಗುರುತಿಸಲು ಸಾಧ್ಯವಾಗುವುದು. ಇದು ಅವರವರು ಬಳಸುವ ಪದರಚನಾಕ್ರಮದಲ್ಲಿ ಮಾತ್ರವಲ್ಲದೆ ಅವರ ಭಾಷೆಗಿರುವ ವಿಶಿಷ್ಟ ಲಯದಲ್ಲಿ ಮತ್ತು ಅವರು ವಸ್ತುವನ್ನು ನೋಡುವ ಹಾಗೂ ಗ್ರಹಿಸುವ ಮನೋಧರ್ಮದಿಂದಲೂ ಸ್ಫುಟವಾಗುತ್ತದೆ.

ಶೈಲಿಯ ವಿಧಗಳು: ಭಾಷಿಕ ಶೈಲಿವಿಜ್ಞಾನದಲ್ಲಿ ಭಾಷಾ ವೈವಿಧ್ಯವನ್ನು ಆಧರಿಸಿ ಪ್ರಮುಖವಾಗಿ ನಾಲ್ಕು ಬಗೆಯ ಶೈಲಿಗಳನ್ನು ಗುರುತಿಸಿಕೊಳ್ಳ ಬಹುದು (ಇವನ್ನು ರೋಮನ್ ಯಾಕೋಬ್‍ಸನ್ನನು ಶೈಲಿಯ ಮಾರ್ಗಾಂತರಗಳೆಂದು(ಡೀವಿಯೇಶನ್ಸ್ ಆಫ್ ಸ್ಟೈಲ್) ಪರಿಭಾಷಿಸಿ ಕೊಂಡಿದ್ದಾನೆ). 1. ಧ್ವನಿಶೈಲಿ (ಫೋನೋ ಸ್ಟೈಲ್), 2. ಪದಶೈಲಿ (ಮಾರ್ಫೋ ಸ್ಟೈಲ್/ ವರ್ಡ್ ಸ್ಟೈಲ್), 3.ಅರ್ಥಶೈಲಿ (ಸೆಮಾನ್‍ಟೊ ಸ್ಟೈಲ್) ಮತ್ತು 4. ವಾಕ್ಯಶೈಲಿ (ಸಿಂಟ್ಯಾಕ್ಟೋ ಸ್ಟೈಲ್).

1. ಧ್ವನಿಶೈಲಿ: ಸಾಹಿತ್ಯದಲ್ಲಿ ಬಳಕೆಯಾಗುವ ಧ್ವನಿಗಳು ವೈಶಿಷ್ಟ್ಯವನ್ನು ಪಡೆದುಕೊಂಡಿರುತ್ತವೆ. ದಿನನಿತ್ಯದಲ್ಲಿ ಕೂಗುವ ಕೋಳಿಯ ಕೊಕ್ಕೊಕ್ಕೋ ಎಂಬ ಕೂಗಾಗಲಿ, ಬೌಬೌ ಎಂಬ ನಾಯಿಯ ಬೊಗಳುವಿಕೆಯಾಗಲಿ, ಅವುಗಳ ಧ್ವನಿ ವೈಶಿಷ್ಟ್ಯವನ್ನೇ ಪ್ರಚುರಪಡಿಸುತ್ತವೆ. ಆಹಾ ಪ್ರಾತಃಕಾಲ ದಲ್ಲಿ ಬೆಳಕಿನ ದಾಹಾ ಈ ಸಾಲಿನ ಪ್ರಾರಂಭದ ಆಹಾ ಮತ್ತು ಕೊನೆಯ ದಾಹಾ ಈ ಶಬ್ದಗಳು ಮತ್ತು ಇವುಗಳಲ್ಲಿಯ ಧ್ವನಿಗಳು ಏಕರೂಪತೆಯನ್ನು ಪಡೆದುಕೊಂಡು ಓದುಗನ ಮೇಲೆ ಪರಿಣಾಮ ಬೀರುವಲ್ಲಿ ಮಹತ್ತ್ವದ ಪಾತ್ರವಹಿಸುತ್ತವೆ. ಧ್ವನಿಶೈಲಿಗೆ ಅತ್ಯುತ್ತಮ ಉದಾಹರಣೆಯಾಗಿ ರನ್ನನ ಗದಾಯುದ್ಧದಲ್ಲಿಯ ಒಂದು ಪ್ರಸಂಗವನ್ನು ಗಮನಿಸಬಹುದು: ದುರ್ಯೋಧನನು ಭೀಷ್ಮರ ಸಲಹೆಯಂತೆ ಒಂದು ದಿನದ ಮಟ್ಟಿಗೆ ಕಾಲಯಾಪನೆಗಾಗಿ ಜಲಸ್ತಂಭನ ವಿದ್ಯೆಯ ಬಲದಿಂದ ವೈಶಂಪಾಯನ ಸರೋವರದಲ್ಲಿ ಅಡಗಿ ಕುಳಿತುಕೊಂಡಿರುತ್ತಾನೆ. ಇದರ ಸುಳಿವನ್ನು ತಿಳಿದ ಪಾಂಡವರು ಕೊಳದ ಬಳಿಗೆ ಬಂದು ದುರ್ಯೋಧನ ನನ್ನು ಹೊರಹೊರಡಿಸಲು ಪ್ರಯತ್ನಮಾಡುತ್ತಾರೆ. ಎಲ್ಲರ ಮೂದಲಿಕೆಗಳು ನಿಷ್ಪ್ರಯೋಜನವಾದ ಬಳಿಕ ಭೀಮಸೇನನು ಉಪಹಾ ಸೋಕ್ತಿಗಳಿಂದ ದುರ್ಯೋಧನನನ್ನು ಹಂಗಿಸಿ, ಸಿಂಹನಾದ ಮಾಡುತ್ತಾನೆ.

ಆ ರವಮಂ ನಿರ್ಜಿತ ಕಂ ಠೀರವರವಮಂ ನಿರಸ್ತಘನರವಮಂ ಕೋ ಪಾರುಣನೇತ್ರಂ ಕೇಳ್ದಾ ನೀರೊಳಗಿರ್ದುಂ ಬೆಮರ್ತನುರಗಪತಾಕಂ (7-21)

ಕೊನೆಯ ಸಾಲಿನಲ್ಲಿ ಉಂ ಎಂಬ ಸಮುಚ್ಚಯಧ್ವನಿ ಭೀಮನ ಸಿಂಹಗರ್ಜನೆ, ಮೋಡದ ಮೊಳಗನ್ನು ಕೇಳಿದ ದುರ್ಯೋಧನನು ಎಷ್ಟರ ಮಟ್ಟಿಗೆ ಕ್ರೋಧಗೊಂಡ ಎಂಬುದನ್ನು ಅರ್ಥವತ್ತಾಗಿ, ಧ್ವನಿಪೂರ್ಣವಾಗಿ ಅಭಿವ್ಯಕ್ತಿಸುತ್ತದೆ.

ಹೀಗೆ ಸ್ವರಗಳು, ಸಂಯುಕ್ತ ಸ್ವರಗಳು, ವ್ಯಂಜನಗಳು, ಸಂಯುಕ್ತ ವ್ಯಂಜನಗಳು ಮುಂತಾದವುಗಳ ಮೂಲಕ ಬಗೆಬಗೆಯ ಧ್ವನಿ ಶೈಲಿ ವ್ಯಕ್ತವಾಗಬಲ್ಲದು.

2. ಪದಶೈಲಿ: ಪ್ರತಿಯೊಂದು ಭಾಷೆಯೂ ತನ್ನದೇ ಆದ ಪದಗಳ ಸಮೂಹವನ್ನು ಸಂಪಾದಿಸಿಕೊಂಡಿರುತ್ತದೆ. ಸಮಾನಾರ್ಥಕ ಹಾಗೂ ಭಿನ್ನಾರ್ಥಕ ಪದಗಳು ಕಾಣಿಸಿಕೊಳ್ಳಲು ಪದಗಳು ಬಳಕೆಯಾಗುವ ಸಂದರ್ಭ ಹಾಗೂ ಸನ್ನಿವೇಶಗಳು ಮುಖ್ಯ ಕಾರಣ. ಕೆಲವರು ಅಪೂರ್ವ ಪದಗಳನ್ನು ಹೆಚ್ಚು ಬಳಸಿದರೆ, ಮತ್ತೆ ಕೆಲವರು ಸಾಮಾನ್ಯ ಪದಗಳನ್ನು ಹೆಚ್ಚು ಬಳಸಬಹುದು. ಮತ್ತೆ ಕೆಲವರು ತಮ್ಮ ಪ್ರತಿಭೆಯಿಂದ ಹೊಸ ಹೊಸ ಶಬ್ದಗಳನ್ನು ಸೃಷ್ಟಿಸಬಹುದು. ಹೀಗೆ ಪದಗಳನ್ನು ಅಭಿರುಚಿ, ಸಂದರ್ಭ ಹಾಗೂ ಸನ್ನಿವೇಶಗಳಿಗೆ ಅನುಗುಣವಾಗಿ ಬಳಸುವುದರಿಂದ ವಿವಿಧ ಶೈಲಿಗಳು ಕಾಣಿಸಿಕೊಳ್ಳುತ್ತವೆ. ಈ ಬಗೆಯ ಪದವೈಶಿಷ್ಟ್ಯವನ್ನು ಕುರಿತು ವಿವೇಚಿಸಬಹುದಾದುದನ್ನೇ ಪದಶೈಲಿವಿಜ್ಞಾನ ಎನ್ನುವರು.

ಉದಾಹರಣೆಗೆ: ಜಾಮೂನುನಾದ (ಸ್ವೀಟ್ ವಾಯ್ಸ್, ಸಾಫ್ಟ್ ವಾಯ್ಸ್) ಕಾಬಳ್ಳಿ (ಕಾಗುಣಿತ); ಗೆಲುಮೋರೆ (ಲವಲವಿಕೆಯುಳ್ಳ ಮುಖ) ಇತ್ಯಾದಿ.

3. ಅರ್ಥಶೈಲಿ: ಪ್ರತಿಯೊಬ್ಬ ಸಾಹಿತಿಯೂ ತನ್ನ ಕೃತಿಯಲ್ಲಿ ಶಬ್ದಗಳನ್ನು ಸಂದರ್ಭ ಹಾಗೂ ಸನ್ನಿವೇಶಗಳಿಗೆ ಅನುಗುಣವಾಗಿ ಬೇರೆ ಬೇರೆ ಅರ್ಥಗಳಲ್ಲಿ ಬಳಸುತ್ತಾನೆ. ಇಂಥ ಶಬ್ದಗಳಿರುವ ಅರ್ಥವೈಶಿಷ್ಟ್ಯ ವನ್ನು ಕುರಿತು ಅಧ್ಯಯನ ಮಾಡುವ ವಿಜ್ಞಾನವನ್ನೇ ಅರ್ಥಶೈಲಿ ವಿಜ್ಞಾನ ಎಂದು ಕರೆಯುವರು.

ಉದಾಹರಣೆಗೆ: ಬೇಂದ್ರೆಯವರ ನಾನು ಬಡವಿ ಎಂಬ ಪದ್ಯದ ಈ ಸಾಲುಗಳನ್ನು ಗಮನಿಸಬಹುದು.

“ಆತ ಕೊಟ್ಟ ವಸ್ತು ಒಡವೆ ನನಗೆ ಅವಗೆ ಗೊತ್ತು ತೋಳುಗಳಿಗೆ ತೋಳಬಂದಿ ಕೆನ್ನೆ ತುಂಬ ಮುತ್ತು”

ಈ ಮೇಲಿನ ನಾಲ್ಕು ಸಾಲುಗಳಲ್ಲಿ ಕೊನೆಯ ಎರಡು ಸಾಲುಗಳಿಗೆ ಮೊದಲು ಎರಡು ಸಾಲುಗಳು ಪೂರಕವಾಗಿವೆ. ತೋಳುಗಳಿಗೆ ತೋಳಬಂದಿ ಎಂಬಲ್ಲಿ ವಾಚ್ಯವಾಗಿ ಆಭರಣ ಎಂದು ಅರ್ಥವಾದರೆ ಇಡೀ ಕವಿತೆಯು ಧ್ವನಿಸುವ ಅರ್ಥದಿಂದ ನಲ್ಲನ ಅಪ್ಪುಗೆ ಎಂಬರ್ಥ ಬರುತ್ತದೆ.

4. ವಾಕ್ಯಶೈಲಿ: ಪ್ರತಿಯೊಂದು ಭಾಷೆಯೂ ತನ್ನದೇ ಆದ ವಾಕ್ಯರಚನೆ ಗಳನ್ನು ಹೊಂದಿರುತ್ತದೆ. ವ್ಯಾಕ್ಯಗಳನ್ನು ನಾನಾ ರೀತಿಯಲ್ಲಿ ಬಳಸುವುದು ಸಾಹಿತ್ಯದಲ್ಲಿ ಸರ್ವೇಸಾಮಾನ್ಯ. ಗಾದೆಗಳು, ನುಡಿಗಟ್ಟುಗಳು, ವಿಶಿಷ್ಟ ಶಬ್ದ ಪ್ರಯೋಗಗಳು ವಾಕ್ಯ ವೈಶಿಷ್ಟ್ಯಕ್ಕೆ ದಾರಿಮಾಡಿಕೊಡುತ್ತವೆ. ಈ ವಾಕ್ಯ ವೈಶಿಷ್ಟ್ಯವನ್ನೇ ಸಂದರ್ಭ ಹಾಗೂ ಸನ್ನಿವೇಶಕ್ಕೆ ತಕ್ಕಂತೆ ವಾಕ್ಯಶೈಲಿ ಎಂದು ವಿವರಿಸಿಕೊಳ್ಳುವರು. ಈ ಬಗೆಯ ವಾಕ್ಯ ವೈಶಿಷ್ಟ್ಯಗಳ ಅಧ್ಯಯನವನ್ನೇ ಶೈಲಿವಿಜ್ಞಾನದಲ್ಲಿ ವಾಕ್ಯಶೈಲಿ ವಿಜ್ಞಾನ ಎಂದು ಕರೆಯುವರು. ಈ ವಾಕ್ಯ ಶೈಲಿಯೇ ಪದ್ಯವನ್ನು ಗದ್ಯದಿಂದ ಬೇರ್ಪಡಿಸಲು ಸಹಾಯಕವಾಗುವ ಮೊತ್ತಮೊದಲ ಅಂಶ.

ನಿದರ್ಶನಕ್ಕೆ ಕುವೆಂಪುರವರ ಹೋಗುವೆನು ನಾ ಕವನದ ಈ ಸಾಲುಗಳನ್ನು ನೋಡಬಹುದು. “ಹೋಗುವೆನು ನಾ ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ ಹೋಗುವೆನು ನಾ ಮಧುರ ಸುಂದರ ಶೈಲವನ ಲಲಿತಾಂಗಕೆ........”

ಈ ಸಾಲುಗಳನ್ನೇ ಗದ್ಯವಾಗಿ ನಾನು ಹೋಗುವೆನು, ನಾನು ಹೋಗುವೆನು.....ಇತ್ಯಾದಿ ಬರೆಯಬಹುದು. ಆಗ ಪದ್ಯದ ಸೊಗಸು ಮಾಯವಾಗುತ್ತದೆ.

(ಬಿ.ಜಿ.ಕೆ.)