ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ವ್ಯಾಕರಣ
ವ್ಯಾಕರಣ -
ಭಾಷೆಯ ನಿಯಮಗಳನ್ನು ತಿಳಿಸುವ ಶಾಸ್ತ್ರ (ಗ್ರಾಮರ್). ಆರು ವೇದಾಂಗಗಳ ಪೈಕಿ ಒಂದು. ವ್ಯಾಕರಣ ಎಂದರೆ ವಿ+ಆ+ಕರಣ. ವಿಶೇಷವಾಗಿ ಮತ್ತು ಸಮಗ್ರವಾಗಿ ಶಬ್ದಸ್ವರೂಪವನ್ನು ವಿವರಿಸುವುದು ಎಂದರ್ಥ. ಇದು ಭಾಷಾವೈಭವವನ್ನು ಸವಿಸ್ತಾರವಾಗಿ ವಿವರಿಸುವಂಥದು. ವ್ಯಾಕರಣ ಭಾಷೆಯ ಕೇಂದ್ರ. ಪ್ರತಿಯೊಂದು ಭಾಷೆಗೂ ತನ್ನ ರಚನೆಯಲ್ಲಿರುವ ಅಂಶಗಳನ್ನು ನಿಯಂತ್ರಿಸಿಕೊಳ್ಳಲು ತನ್ನದೇ ಆದ ಸಿದ್ಧಾಂತಗಳ, ನಿಯಮಗಳ ವ್ಯವಸ್ಥೆಯುಂಟು. ಈ ಸಿದ್ಧಾಂತ ಮತ್ತು ನಿಯಮಗಳೇ ಆಯಾ ವ್ಯಾಕರಣಗಳ ಉಸಿರು. ವ್ಯಾಕರಣಾತ್ಮಕ ವ್ಯವಸ್ಥೆಯಿಂದಾಗಿಯೇ ಯಾವುದೇ ಒಂದು ಭಾಷಿಕ ಸಮೂಹದಲ್ಲಿ ಸಂವಹನ ಕ್ರಿಯೆ ಅಭಿವ್ಯಕ್ತಿ ಸಾಧ್ಯವಾಗಿದೆ. ಭಾಷೆಯ ಈ ಸಂಕೀರ್ಣ ವ್ಯವಸ್ಥೆಯನ್ನು ಶೋಧಿಸಿ ವಿವರಣಾತ್ಮಕವಾಗಿ ತಿಳಿಸಿಕೊಡುವುದೇ ವ್ಯಾಕರಣ:
ವ್ಯಾಕರಣದಿಂದೆ ಪದಮಾ
ವ್ಯಾಕರಣದ ಪದದಿನರ್ಥಮರ್ಥದೆ ತತ್ವಾ
ಲೋಕಂ ತತ್ವಾಲೋಕದಿ
ನಾಕಾಂಕ್ಷಿಪ ಮುಕ್ತಿಯಕ್ಕುಮಿದೆ ಬುಧರ್ಗೆ ಫಲಂ (ಸೂತ್ರ 10) ಇದು ಶಬ್ದಮಣಿ ದರ್ಪಣದಲ್ಲಿ ಕೇಶಿರಾಜನ ವಿವರಣೆ (ಸು. 1260).
ಶಬ್ದ ಮತ್ತು ಶಬ್ದಗಳ ಸಂಬಂಧ ನಿರ್ದಿಷ್ಟವಾಗಿಯೇ ಇರಬೇಕೆಂಬುದನ್ನು ವ್ಯಾಕರಣ ಗೊತ್ತುಪಡಿಸುವುದು. ಆದುದರಿಂದ ಶುದ್ಧವಾಗಿ, ಅರ್ಥಪೂರ್ಣವಾಗಿ ಮಾತನಾಡುವ ಮತ್ತು ಬರೆಯುವ ಶಕ್ತಿಯನ್ನು ಗಳಿಸಬೇಕಾದರೆ ಅವಶ್ಯವಾಗಿ ವ್ಯಾಕರಣವನ್ನು ಅಭ್ಯಾಸ ಮಾಡಲೇಬೇಕು. ಪ್ರಪಂಚದ ಎಲ್ಲ ಭಾಷೆಗಳಲ್ಲೂ ಆಯಾಯ ಭಾಷೆಗಳ ಸ್ವರೂಪವನ್ನು ಅವುಗಳ ವ್ಯಾಕರಣ ತಿಳಿಯ ಪಡಿಸುತ್ತದೆ. ಆ ಭಾಷೆಗಳನ್ನು ಕಲಿಯುವ ವರು ಆ ಭಾಷೆಯ ವ್ಯಾಕರಣವನ್ನು ಅಭ್ಯಸಿಸಬೇಕು. ಭಾಷೆ ಬಲ್ಲವನೆನಿಸಿಕೊಳ್ಳಬೇಕಾದರೆ ಕೂಲಂಕಷವಾಗಿ ವ್ಯಾಕರಣವನ್ನು ತಿಳಿದಿರಬೇಕು. ಭಾಷೆಯ ರಚನೆ ವ್ಯಾಕರಣ ನಿಯಮಗಳಿಗೆ ಬದ್ಧವಾಗಿದ್ದಾಗ, ಆ ಭಾಷೆ ವ್ಯಾಕರಣ ಬದ್ಧ ಭಾಷೆ ಎನಿಸಿಕೊಳ್ಳುತ್ತದೆ. ಪ್ರಪಂಚದಲ್ಲಿ ಪ್ರತಿಯೊಂದು ಭಾಷೆಯ ರಚನೆಯೂ ನಿಯಮಬದ್ಧವಾಗಿಯೇ ಇರುವುದ ರಿಂದ, ವ್ಯಾಕರಣಬದ್ಧವಲ್ಲದ ಯಾವುದೇ ಮಾನವ ಭಾಷೆ ಇಲ್ಲ.
ವ್ಯಾಕರಣದ ವಿಚಾರದಲ್ಲಿ ಕೆಲವು ತಪ್ಪು ಗ್ರಹಿಕೆಗಳಿವೆ. ಅವುಗಳನ್ನು ಹೀಗೆ ಉಲ್ಲೇಖಿಸಬಹುದು:
1. ವ್ಯಾಕರಣ, ಲಿಪಿಯಿರುವ ಭಾಷೆಗಳಿಗೆ ಮಾತ್ರ ಸಂಬಂಧಿಸಿದ್ದು, ಆಡುಭಾಷೆಗಳಿಗೆ ಸಮಗ್ರ ವ್ಯಾಕರಣವೆಂಬುದಿಲ್ಲ. ಇದ್ದರೂ ಅದು ಅಪೂರ್ಣವಾದುದು.
2. ವ್ಯಾಕರಣ ಕೆಲವು ಭಾಷೆಗೆ ಮಾತ್ರ ಇರುವಂಥದು. ಕೆಲವು ಭಾಷೆಗಳಿಗೆ ಇಲ್ಲವೇ ಇಲ್ಲ.
3. ಭಾಷೆಯನ್ನು ಕಲಿಯಲು ವ್ಯಾಕರಣ ಅನಿವಾರ್ಯ.
4. ಭಾಷೆಯ ಸರಿ-ತಪ್ಪುಗಳನ್ನು ಕಂಡುಕೊಳ್ಳಲೆಂದೇ ವ್ಯಾಕರಣ ರಚಿತವಾಗಿರುವಂಥದು.
5. ಪ್ರಪಂಚದ ಎಲ್ಲ ಭಾಷೆಗಳಿಗೂ ಅನ್ವಯವಾಗುವುದು ವ್ಯಾಕರಣ ಮಾತ್ರ.
ವ್ಯಾಕರಣದ ಬಗೆಗಳು: ತಮ್ಮದೇ ಆದ ಚಿಂತನೆಗಳಿಂದ ರೂಪುಗೊಂಡ ಸಿದ್ಧಾಂತಗಳನ್ನು ಪ್ರತಿಪಾದಿಸುವ ವ್ಯಾಕರಣ ಸಂಖ್ಯೆ ಸಾಕಷ್ಟಿದೆ. ಈ ಪೈಕಿ ಕೆಲವನ್ನು ಗಮನಿಸಬಹುದು.
1. ವಿವರಣಾತ್ಮಕ ವ್ಯಾಕರಣ: ಯಾವುದಾದರೊಂದು ಭಾಷೆ ಅಥವಾ ಉಪಭಾಷೆಯ ಆಂತರಿಕ ರಚನೆಗೆ ಸಂಬಂಧಿಸಿದ ಧ್ವನಿ, ಪದ, ವಾಕ್ಯಗಳ ವಿಚಾರ ಮತ್ತು ಕಾರ್ಯವನ್ನು ಆ ಭಾಷೆ ಅಥವಾ ಉಪಭಾಷೆಗಳಲ್ಲಿರು ವಂತೆಯೇ ವಿಶ್ಲೇಷಿಸಿ ವಿವರಿಸಿ ತೋರಿಸುವುದು. ಪಂಪನ ವಿಕ್ರಮಾರ್ಜುನ ವಿಜಯದ ಭಾಷೆಯ ವಿಶ್ಲೇಷಣೆಯ ನಿರೂಪಣೆಯನ್ನು ಒಳಗೊಂಡ ಕೃತಿ, ವಿಕ್ರಮಾರ್ಜುನ ವಿಜಯದಲ್ಲಿ ಬಳಕೆಯಾಗಿರುವ ಕನ್ನಡ ವಿವರಣಾತ್ಮಕ ವ್ಯಾಕರಣ ಎನಿಸಿಕೊಳ್ಳುತ್ತದೆ. ನಂಜನಗೂಡಿನ ಒಕ್ಕಲಿಗರಾ ಡುವ ಭಾಷಾ ರೂಪವನ್ನು ಭಾಷಾ ವಿಜ್ಞಾನಿಯೊಬ್ಬ ವಿಶ್ಲೇಷಿಸಿದರೆ, ಆ ವಿಶ್ಲೇಷಣೆಯ ನಿರೂಪಣೆಯನ್ನೊಳಗೊಂಡ ಕೃತಿ ನಂಜನಗೂಡಿನ ಒಕ್ಕಲಿಗರ ಕನ್ನಡದ ವಿವರಣಾತ್ಮಕ ವ್ಯಾಕರಣವೆನಿಸಿಕೊಳ್ಳುತ್ತದೆ. ವಿವರಣಾ ತ್ಮಕ ವ್ಯಾಕರಣಕಾರ ತಾನು ವಿಶ್ಲೇಷಿಸಿ ವಿವರಿಸಿದ ಭಾಷೆಯ (ಗ್ರಾಂಥಿಕ ಅಥವಾ ಆಡುನುಡಿ) ರಚನೆ ಹೇಗಿದೆ ಎಂಬುದನ್ನು ತಿಳಿಸಲು ಪ್ರಯತ್ನಿಸು ತ್ತಾನೆಯೇ ಹೊರತು ಹೇಗಿರಬೇಕು ಎಂಬುದನ್ನು ಹೇಳುವುದಿಲ್ಲ.
2. ಐತಿಹಾಸಿಕ ವ್ಯಾಕರಣ: ಇದು ಭಾಷೆ ನಡೆದು ಬಂದ ದಾರಿಯನ್ನು ಗುರುತಿಸುತ್ತದೆ. ಐತಿಹಾಸಿಕ ವ್ಯಾಕರಣಕಾರ, ಕಾಲಾನುಕ್ರಮದಲ್ಲಿ ಭಾಷೆಯ ಸ್ವರೂಪದಲ್ಲಿ ಆದ ಪರಿವರ್ತನೆಗಳನ್ನು ಗುರುತಿಸಿ, ಭಾಷೆಯ ಇತಿಹಾಸವನ್ನು ನಿರೂಪಿಸುತ್ತಾನೆ. ಪ್ರಪಂಚದ ಪ್ರತಿಯೊಂದು ಭಾಷೆಯೂ ಕಾಲಾನುಕ್ರಮದಲ್ಲಿ ಬದಲಾವಣೆಯನ್ನು ಹೊಂದಿರುತ್ತದೆ. ಈ ಬದಲಾ ವಣೆ, ಭಾಷೆಗೆ ಇತಿಹಾಸವನ್ನು ತಂದುಕೊಡುತ್ತದೆ.
3. ತೌಲನಿಕ ವ್ಯಾಕರಣ: ಎರಡು ಅಥವಾ ಅದಕ್ಕಿಂತ ಹೆಚ್ಚು ಭಾಷೆಗಳ ರಚನಾವಿನ್ಯಾಸಗಳನ್ನು ಹೋಲಿಸಿ ನೋಡುವಂಥದು. ಹೀಗೆ ಹೋಲಿಸಿ ನೋಡುವುದರಿಂದ ಗೊತ್ತಾಗುವ ಸಾಮ್ಯ ವೈಷಮ್ಯಗಳನ್ನು ತೌಲನಿಕ ವ್ಯಾಕರಣಕಾರ ಪಟ್ಟಿ ಮಾಡುತ್ತಾನೆ. ಭಾಷಾ ವರ್ಗೀಕರಣ ಮತ್ತು ಭಾಷಿಕ ಪುನಾರಚನೆ, ಆಂತರಿಕ ಪುನಾರಚನೆ ಮತ್ತು ಬಾಹ್ಯ ಪುನಾರಚ ನೆಗಳ ಸಂದರ್ಭಗಳಲ್ಲಿ ಐತಿಹಾಸಿಕ ಮತ್ತು ತೌಲನಿಕ ವ್ಯಾಕರಣಗಳು ಹೆಚ್ಚು ಉಪಯುಕ್ತವೆನಿಸಿವೆ. ಎ.ಎನ್. ನರಸಿಂಹಯ್ಯನವರ ಎ ಗ್ರಾಮರ್ ಆಫ್ ದಿ ಓಲ್ಡೆಸ್ಟ್ ಕ್ಯಾನರೀಸ್ ಇನ್ಸ್‍ಕ್ರಿಪ್‍ಶನ್ಸ್ (1941), ಜಿ.ಎಸ್. ಗಾಯಿ ಅವರ ಹಿಸ್ಟಾರಿಕಲ್ ಗ್ರಾಮರ್ ಆಫ್ ಒಲ್ಡ್ ಕನ್ನಡ (1946)-ಇವು ಐತಿಹಾಸಿಕ ವ್ಯಾಕರಣಗಳಾದರೆ, ರೆವರೆಂಡ್ ಕಾಲ್ಡ್ವೆಲ್ ಅವರ ಎ ಕಂಪ್ಯಾರಿಟಿವ್ ಗ್ರಾಮರ್ ಆಫ್ ದಿ ದ್ರವಿಡಿಯನ್ ಆರ್ ಸೌತ್ ಇಂಡಿಯನ್ ಫ್ಯಾಮಿಲಿ ಆಫ್ ಲ್ಯಾಂಗ್ವೇಜಸ್ (1866) ಎಂಬುದು ತೌಲನಿಕ ವ್ಯಾಕರಣ ಗ್ರಂಥ.
4. ವಿಧಾಯಕ ವ್ಯಾಕರಣ: ಇದು ಭಾಷೆಯನ್ನು ನಿರ್ದಿಷ್ಟ ರೀತಿಯಲ್ಲೇ ಬಳಸಬೇಕು ಎಂದು ವಿಧಿಸುತ್ತದೆ. ಪ್ರಸಿದ್ಧ ಪ್ರಾಚೀನ ಕವಿಗಳೂ ವಿದ್ವಾಂಸರೂ ಬಳಸಿರುವ ಭಾಷೆಯನ್ನು ಆಧಾರವಾಗಿಟ್ಟುಕೊಂಡು, ಉಳಿದವರ ಭಾಷೆಯೂ ಹಾಗೆಯೇ ಇರಬೇಕು ಎಂದು ವಿಧಾಯಕ ವ್ಯಾಕರಣಕಾರ ಹೇಳುತ್ತಾನೆ. ಇವನು ಭಾಷೆಯ ಸ್ವರೂಪದಲ್ಲಿ ಕಾಲಾನುಕ್ರಮದಲ್ಲಿ ಆದ ಪರಿವರ್ತನೆಗಳನ್ನು ಗುರುತಿಸಿ, ಅವನ್ನೆಲ್ಲಾ ತಪ್ಪುಗಳು ಎಂದು ಪರಿಗಣಿಸುತ್ತಾನೆ. ಹೀಗೆ ಪರಿಗಣಿಸುವುದು ಆಡು ಮಾತಿನಲ್ಲುಂಟಾದ ಬದಲಾವಣೆಗಳನ್ನು ಹಿಂದಿನ ಕಾಲದ ಸಂಪ್ರದಾಯ ಬದ್ಧ ವ್ಯಾಕರಣಕಾರರು ರಚಿಸಿರುವ ವ್ಯಾಕರಣಗಳಲ್ಲಿ ವಿಧಾಯಕ ವ್ಯಾಕರಣದ ಲಕ್ಷಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ ತಿಂದಿತು, ಬಂದಿತು ಎಂಬ ಪದಗಳನ್ನು ತಿಂತು, ಬಂತು ಎಂದು ಬಳಸಿದರೆ ವಿಧಾಯಕ ವ್ಯಾಕರಣಕಾರ ಒಪ್ಪುವುದಿಲ್ಲ. ಶುದ್ಧ ಪ್ರಯೋಗ ವನ್ನೇ ಬಳಸಬೇಕೆನ್ನುವವರು ತಿಂದಿತು, ಬಂದಿತು ಎಂದೇ ಬಳಸಬೇಕು ಎಂದು ವಿಧಿಸುತ್ತಾರೆ.
ಈ ವ್ಯಾಕರಣ ಬಗೆಗಳೇ ಅಲ್ಲದೆ, ಬೋಧನಾತ್ಮಕ ವ್ಯಾಕರಣ, ನಿರ್ದೇಶಾತ್ಮಕ ವ್ಯಾಕರಣ, ಪರಾಮರ್ಶನ ವ್ಯಾಕರಣ, ಸೈದ್ಧಾಂತಿಕ ವ್ಯಾಕರಣ, ವೈದೃಶ್ಯಾತ್ಮಕ ವ್ಯಾಕರಣ, ವ್ಯವಸ್ಥಿತ ವ್ಯಾಕರಣ, ಕಾರಕ ವ್ಯಾಕರಣ, ಸ್ತರಾತ್ಮಕ ವ್ಯಾಕರಣ, ಪ್ರರೂಪಾತ್ಮಕ ವ್ಯಾಕರಣ, ರೂಪಾಂತರಣ ವ್ಯಾಕರಣ, ಉತ್ಪಾದನಾತ್ಮಕ ವ್ಯಾಕರಣ, ಸಾರ್ವತ್ರಿಕ ವ್ಯಾಕರಣ ಮೊದಲಾದ ಪ್ರಭೇದಗಳಿವೆ.
- (ಆರ್.ಎಮ್.ಕೆ.)