ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕನ್ನಡ ಸಾಹಿತ್ಯ

ವಿಕಿಸೋರ್ಸ್ದಿಂದ

ಕನ್ನಡ ಸಾಹಿತ್ಯ : -ಶ್ರೀಮಂತವೂ ವೈವಿಧ್ಯಪೂರ್ಣವೂ ಆದ ಕನ್ನಡ ಸಾಹಿತ್ಯಕ್ಕೆ ೨ ಸಾವಿರ ವರ್ಷಗಳಿಗೂ ಮೇಲ್ಪಟ್ಟ ಸುದೀರ್ಘ ಇತಿಹಾಸವಿದೆ. ಅಧ್ಯಯನದ ದೃಷ್ಟಿಯಿಂದ ಕನ್ನಡ ಸಾಹಿತ್ಯವನ್ನು ಮತ ಪ್ರಾಬಲ್ಯ, ಭಾಷೆಯ ಅವಸ್ಥೆಗಳು, ಪ್ರಮುಖ ಕವಿಗಳು, ಸಾಹಿತ್ಯ ರೂಪಗಳು, ಆಯಾ ಯುಗಮನೋಧರ್ಮ, ಶತಮಾನಾನುಪೂರ್ವಿ - ಈ ಮುಂತಾದ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಅನೇಕ ವಿಧದಲ್ಲಿ ವಿಭಾಗಿಸಿ ವಿಶ್ಲೇಷಿಸುವ ಕಾರ್ಯ ಇದುವರೆಗೆ ಸಾಕಷ್ಟು ನಡೆದಿದೆ. ಮತೀಯ ದೃಷ್ಟಿಯನ್ನನುಸರಿಸಿ ಜೈನಯುಗ, ವೀರಶೈವಯುಗ, ಬ್ರಾಹ್ಮಣಯುಗವೆಂದೂ ಪ್ರಮುಖ ಕವಿಗಳನ್ನಾಧರಿಸಿ ಪಂಪಯುಗ, ಬಸವಯುಗ, ಹರಿಹರಯುಗ, ಕುಮಾರವ್ಯಾಸಯುಗವೆಂದೂ ಸಾಹಿತ್ಯ ರೂಪಗಳನ್ನಾಧರಿಸಿ ಚಂಪೂ, ವಚನ, ರಗಳೆ, ತ್ರಿಪದಿ, ಸಾಂಗತ್ಯ ಯುಗಗಳೆಂದೂ ಭಾಷಾವಸ್ಥೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಪೂರ್ವದ ಹಳಗನ್ನಡಕಾಲ, ಹಳಗನ್ನಡಕಾಲ, ನಡುಗನ್ನಡಕಾಲ, ಹೊಸಗನ್ನಡಕಾಲವೆಂದೂ ಆಯಾ ಯುಗಮನೋಧರ್ಮ ಮತ್ತು ಕವಿಕರ್ಮಕ್ಕೆ ಸಿಕ್ಕ ಮೂಲ ಪ್ರಚೋದನೆಯನ್ನು ಮುಖ್ಯವಾಗಿ ಆಧರಿಸಿ ಕ್ಷಾತ್ರ ಯುಗ, ಧರ್ಮಪ್ರಚಾರಯುಗ, ಸಾರ್ವಜನಿಕಯುಗ, ಆಧುನಿಕಯುಗವೆಂದೂ ಶತಮಾನಾನು ಪೂರ್ವಿಯನ್ನನುಸರಿಸಿ 10ನೆಯ ಶತಮಾನದ ಸಾಹಿತ್ಯ, 11ನೆಯ ಶತಮಾನದ ಸಾಹಿತ್ಯ - ಇತ್ಯಾದಿಯಾಗಿಯೂ -ಹೀಗೆ ಒಬ್ಬೊಬ್ಬ ವಿದ್ವಾಂಸರು ಒಂದೊಂದು ಕ್ರಮವನ್ನನುಸರಿಸಿದ್ದಾರೆ. ಪ್ರಸ್ತುತ ಲೇಖನದಲ್ಲಿ ಕನ್ನಡ ಸಾಹಿತ್ಯದ ಪ್ರಾಚೀನತೆ, ಪಂಪಯುಗ, ವಚನಯುಗ, ಹರಿಹರಯುಗ, ಕುಮಾರವ್ಯಾಸಯುಗ, ಆಧುನಿಕಯುಗ ಎಂಬ ಶೀರ್ಷಿಕೆಗಳ ಅಡಿಯಲ್ಲಿ ಕನ್ನಡ ವಾಙ್ಮಯವನ್ನು ಸ್ಥೂಲವಾಗಿ ಸಮೀಕ್ಷಿಸಲಾಗಿದೆ.

ಕನ್ನಡ ಸಾಹಿತ್ಯಕ್ಕೆ ಸಂಬಂದಿಸಿದ ಹೆಚ್ಚಿನ ವಿವರಗಳು ಮುಖ್ಯ ಕವಿಗಳನ್ನು ಕುರಿತ ಪ್ರತ್ಯೇಕ ಲೇಖನಗಳಲ್ಲಿ, ರಾಜವಂಶಗಳನ್ನು ಕುರಿತಾದ (ಉದಾ: ಚಾಳುಕ್ಯವಂಶ, ರಾಷ್ಟ್ರಕೂಟವಂಶ) ಸಮೀಕ್ಷ ಲೇಖನಗಳಲ್ಲಿ ಮತ್ತು ಈ ಕೆಳಕಂಡ ಸಮೀಕ್ಷ ಲೇಖನಗಳಲ್ಲಿ ನಿರೂಪಿತವಾಗಿವೆ. ಕನ್ನಡದಲ್ಲಿ ಕಾದಂಬರಿ ಸಾಹಿತ್ಯ; ಕನ್ನಡದಲ್ಲಿ ಗದ್ಯ ಸಾಹಿತ್ಯ; ಕನ್ನಡದಲ್ಲಿ ಗಾಂದೀ ಸಾಹಿತ್ಯ; ಕನ್ನಡದಲ್ಲಿ ಗ್ರಂಥಸಂಪಾದನೆ; ಕನ್ನಡದಲ್ಲಿ ಜೀವನ ಚರಿತ್ರೆಗಳು; ಕನ್ನಡದಲ್ಲಿ ನವ್ಯಕಾವ್ಯ; ಕನ್ನಡದಲ್ಲಿ ನಾಟಕ ಸಾಹಿತ್ಯ; ಕನ್ನಡದಲ್ಲಿ ಪ್ರಬಂಧ ಸಾಹಿತ್ಯ; ಕನ್ನಡದಲ್ಲಿ ಪ್ರವಾಸ ಸಾಹಿತ್ಯ; ಕನ್ನಡದಲ್ಲಿ ಭಾವಗೀತೆ; ಕನ್ನಡದಲ್ಲಿ ಭಾಷಾಂತರಗಳು; ಕನ್ನಡದಲ್ಲಿ ಮಕ್ಕಳ ಸಾಹಿತ್ಯ; ಕನ್ನಡದಲ್ಲಿ ವಿಚಾರ ಸಾಹಿತ್ಯ; ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ; ಕನ್ನಡದಲ್ಲಿ ವಿಡಂಬನ ಸಾಹಿತ್ಯ; ಕನ್ನಡದಲ್ಲಿ ವಿಮರ್ಶೆ; ಕನ್ನಡದಲ್ಲಿ ವಿಶ್ವಕೋಶಗಳು; ಕನ್ನಡದಲ್ಲಿ ಶತಕ ಸಾಹಿತ್ಯ; ಕನ್ನಡದಲ್ಲಿ ಶಾಸ್ತ್ರ ಸಾಹಿತ್ಯ; ಕನ್ನಡದಲ್ಲಿ ಸಂಕಲನ ಗ್ರಂಥಗಳು; ಕನ್ನಡದಲ್ಲಿ ಸಣ್ಣಕಥೆಗಳು; ಕನ್ನಡದಲ್ಲಿ ಹಾಸ್ಯ ಸಾಹಿತ್ಯ; ಕನ್ನಡ ಭಾಷೆ; ಕನ್ನಡ ಸಾಹಿತ್ಯ ಪರಿಷತ್ತು ಇತ್ಯಾದಿ.

ಕನ್ನಡ ಸಾಹಿತ್ಯದ ಪ್ರಾಚೀನತೆ : ಕನ್ನಡ ಸಾಹಿತ್ಯ ಕ್ರಿಸ್ತಶಕದಷ್ಟೇ ಪ್ರಾಚೀನ ವಾಗಿದ್ದಿರಬೇಕೆಂಬುದು ಹಲವು ವಿದ್ವಾಂಸರ ಅಬಿಮತ. ಬೌದ್ಧರು ಕನ್ನಡದ ಆದಿಕವಿಗಳೆಂದೂ ಬೌದ್ಧಧರ್ಮದ ನಾಶದೊಂದಿಗೇ ಬೌದ್ಧ ಗ್ರಂಥಗಳೂ ನಾಶವಾಗಿದ್ದಿರಬೇಕೆಂದೂ ವಿದ್ವಾಂಸರು ಊಹಿಸಿದ್ದಾರೆ. ಕನ್ನಡ ಭಾಷೆ ಸಾಹಿತ್ಯದ ಗದ್ದುಗೆಯೇರಿ ಬರೆಹ ರೂಪದಲ್ಲಿ ಪ್ರಪ್ರಥಮವಾಗಿ ಕಾಣಿಸಿಕೊಂಡಿರುವುದು ಸದ್ಯಕ್ಕೆ ತಿಳಿದಿರುವಂತೆ ಹಲ್ಮಿಡಿಯ ಶಾಸನದಲ್ಲಿ. ಇದರ ಮಂಗಳ ಶ್ಲೋಕ ಸಂಸ್ಕೃತದಲ್ಲಿದ್ದು, ಉಳಿದುದೆಲ್ಲ ಕನ್ನಡ ಲಿಪಿಯಲ್ಲಿ ಗದ್ಯ ರೂಪದಲ್ಲಿದೆ. ಭಾಷಾ ಶೈಲಿ ಸಂಸ್ಕೃತ ಪ್ರಚುರವಾಗಿ ಪ್ರೌಢವಾಗಿದೆ. ಇದನ್ನು ನೋಡಿದರೆ, ಇದಕ್ಕೂ ಪೂರ್ವದಲ್ಲಿಯೇ ಕನ್ನಡ ಸಾಹಿತ್ಯ ಸಾಕಷ್ಟು ಬೆಳೆದಿರಬೇಕೆಂದೂ ಈ ಶಾಸನ ಹುಟ್ಟುವ ವೇಳೆಗೆ ಕನ್ನಡದ ಮೇಲೆ ಸಂಸ್ಕೃತದ ಪ್ರಭಾವ ಗಾಢವಾಗಿದ್ದಿರಬೇಕೆಂದೂ ಊಹಿಸಲು ಅವಕಾಶವಿದೆ. ಹಾಗೆಯೇ ಪ್ರಾಚೀನಕಾಲದ ಇತರ ಹಲವು ಶಾಸನಗಳೂ ಅತ್ಯಂತ ಕಾವ್ಯಮಯವಾಗಿವೆ. ಸು.7ನೆಯ ಶತಮಾನದ ಬಾದಾಮಿಯ ಶಾಸನ ಕಪ್ಪೆ ಅರಭಟ್ಟ ಎಂಬ ಕಲಿಯ ಶಕ್ತಿ ಸಾಹಸಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತದೆ. ಅಚ್ಚಕನ್ನಡ ಛಂದಸ್ಸಾದ ತ್ರಿಪದಿಯಲ್ಲಿರುವ ಈ ಶಾಸನ ಭಾವಭಾಷೆಗಳ ವಿದ್ಯುದಾಲಿಂಗನದಿಂದ ಉದಿಸಿದ ಸುಂದರ ಭಾವಗೀತೆ ಯಂತಿದೆ. ಸುಮಾರು ಇದೇ ಕಾಲದಲ್ಲಿಯೇ ಹುಟ್ಟಿದ ಶ್ರವಣಬೆಳಗೊಳದ ಶಾಸನವೊಂದು ನಂದಿಸೇನನೆಂಬ ಜೈನಮುನಿಯ ವೈರಾಗ್ಯವನ್ನು ಹೃದಯಂಗಮವಾಗಿ ವರ್ಣಿಸುತ್ತದೆ. ಕವಿಹೃದಯವುಳ್ಳ ಇಂಥ ಶಾಸನಕರ್ತೃಗಳು ಕಾವ್ಯಕರ್ತೃಗಳಾಗಿಯೂ ಇದ್ದಿರಬಹುದು.

ಈಗ ದೊರಕಿರುವ ಕೆಲವು ಕನ್ನಡ ಗ್ರಂಥಗಳಲ್ಲಿ ಹಲವು ಕನ್ನಡ ಕೃತಿಕಾರರ ಪ್ರಸ್ತಾಪ ದೊರಕುತ್ತದೆ. ಅಂಥ ಕೆಲವು ಕೃತಿಕಾರರನ್ನು 7, 8, 9ನೆಯ ಶತಮಾನದವರೆಂದು ತೀರ್ಮಾನಿಸಬಹುದು. ಆದರೆ ಅವರ ಗ್ರಂಥಗಳು ಯಾವುವೂ ದೊರಕಿಲ್ಲ. ಈ ಸಂದರ್ಭದಲ್ಲಿ ತುಂಬಲೂರಾಚಾರ್ಯರು ಬರೆದ ಚೂಡಾಮಣಿ ಎಂಬ ತತ್ತ್ವಾರ್ಥ ಮಹಾಶಾಸ್ತ್ರದ ಮೇಲಿನ ವ್ಯಾಖ್ಯಾನ ಗ್ರಂಥವೂ ಗುಣಗಾಂಕಿಯಂ ಎಂಬ ಛಂದಶ್ಶಾಸ್ತ್ರದ ಗ್ರಂಥವೂ ಉಲ್ಲೇಖಾರ್ಹವಾದುವು. ತುಂಬಲೂರಾಚಾರ್ಯರ ಗ್ರಂಥ ತೊಂಬತ್ತಾರು ಸಹಸ್ರ ಗ್ರಂಥ ಪರಿಮಿತಿಯುಳ್ಳದ್ದೆಂದು ಭಟ್ಟಾಕಳಂಕನಿಂದ ತಿಳಿದುಬರುತ್ತದೆ. ಇಂಥ ಬೃಹತ್ತಾದ ಶಾಸ್ತ್ರಗ್ರಂಥವೊಂದು ಹುಟ್ಟಬೇಕಾದರೆ ಅದಕ್ಕೂ ಪೂರ್ವದಲ್ಲಿ ಸಾಹಿತ್ಯ ಸಮೃದ್ಧವಾಗಿ ಬೆಳೆದು ಬಂದಿರಬಹುದು. ‘ಗುಣಗಾಂಕಿಯಂ’ ಕವಿರಾಜಮಾರ್ಗದ ಸಮಕಾಲೀನ ವಾದುದೆಂದೂ ನಾಗವರ್ಮನ ಛಂದೋಂಬುದಿsಗೆ ಮಾದರಿಯೆಂದೂ ತಿಳಿದುಬರುತ್ತದೆ. ಇದು ಶಾಸ್ತ್ರಗ್ರಂಥವಾದುದರಿಂದ ಇದಕ್ಕೂ ಪೂರ್ವದಲ್ಲಿ ಸಾಹಿತ್ಯ ಬೆಳೆದಿರಬೇಕು. ತುಂಬಲೂರಾಚಾರ್ಯನ ಸಮಕಾಲೀನನಾದ ಶ್ಯಾಮಕುಂದಾಚಾರ್ಯ ಕನ್ನಡದಲ್ಲಿ ಪ್ರಾಭೃತವನ್ನು ರಚಿಸಿದನೆಂದು ತಿಳಿದುಬಂದಿದೆ. ಗಂಗರಾಜನಾದ ಸೈಗೊಟ್ಟ ಶಿವಮಾರ (ಸು.788-812) ಗಜಾಷ್ಟಕವನ್ನು ಕನ್ನಡದಲ್ಲಿ ಬರೆದಿದ್ದನೆಂದೂ ಅದು ಓವನಿಗೆಯೂ ಒನಕೆವಾಡೂ ಆಗಿದ್ದು ಜನಪ್ರಿಯವಾಗಿತ್ತೆಂದೂ ತಿಳಿದುಬರುತ್ತದೆ. ಇದು ದಾಖಲೆಗೊಂಡಿರುವ ಮೊಟ್ಟಮೊದಲ ಕನ್ನಡ ಜನಪದ ಕಾವ್ಯ.

ಈಗ ನಮಗೆ ದೊರೆತಿರುವ ಕನ್ನಡ ಗ್ರಂಥಗಳಲ್ಲಿ ಕವಿರಾಜಮಾರ್ಗ ಮೊಟ್ಟಮೊದಲನೆಯದು. ನೃಪತುಂಗನ ಆಸ್ಥಾನಕವಿ ಶ್ರೀ ವಿಜಯ ಇದರ ಕರ್ತೃ. ಇದು ಕನ್ನಡ ಭಾಷೆ ವ್ಯಾಕರಣ ಅಲಂಕಾರಗಳನ್ನು ನಿರೂಪಿಸುವ ಬಹುಮುಖ್ಯವಾದ ಲಕ್ಷಣ ಗ್ರಂಥವಾಗಿದ್ದು ಕನ್ನಡಿಗರ ಕೈಪಿಡಿಯಂತಿದೆ. ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿಗಳನ್ನು ಕುರಿತು ಇದರ ಕರ್ತೃ ಆಡಿರುವ ನುಡಿಗಳು ಅತ್ಯಮೂಲ್ಯವಾಗಿವೆ. ಕವಿರಾಜ ಮಾರ್ಗಕಾರ ಕೊಡುವ ಕೆಲವು ಉದಾಹರಣ ಪದ್ಯಗಳು ಕಾವ್ಯಮಯ ವಾಗಿವೆಯಾಗಿ ಶಾಸ್ತ್ರಗ್ರಂಥವೊಂದು ಆ ರೀತಿ ಇರಬೇಕಾದರೆ ಆ ವೇಳೆಗೆ ಸಾಹಿತ್ಯ ಸಾಕಷ್ಟು ಬೆಳೆದು, ಪಳಗಿ ಹದಗೊಂಡಿರ ಬೇಕೆಂಬುದು ಸ್ವಯಂವೇದ್ಯ ವಾಗುತ್ತದೆ. ಆದ್ದರಿಂದ ಕನ್ನಡ ಸಾಹಿತ್ಯ ಕವಿರಾಜಮಾರ್ಗ ಕ್ಕಿಂತಲೂ ನಾಲ್ಕೈದು ಶತಮಾನಗಳಷ್ಟಾದರೂ ಪ್ರಾಚೀನವಾಗಿರಬೇಕು. ಕವಿರಾಜಮಾರ್ಗಕಾರ ತನ್ನ ಗ್ರಂಥಗಳಲ್ಲಿ ತನಗಿಂತ ಹಿಂದಿನ ಅನೇಕ ಕವಿಗಳನ್ನು ಹೆಸರಿಸಿದ್ದಾನೆ. ವಿಮಳೋದಯ, ನಾಗಾರ್ಜುನ, ಜಯಬಂಧು, ದುರ್ವಿನೀತ ಮೊದಲಾದವರೂ ಗದ್ಯಕವಿಗಳೆಂದೂ ಪರಮ ಶ್ರೀವಿಜಯ, ಕವೀಶ್ವರ, ಪಂಡಿತ, ಚಂದ್ರ, ಲೋಕಪಾಲ ಪದ್ಯಕವಿಗಳೆಂದೂ ಹೇಳಿದ್ದಾನೆ. ಇವನ ಮಾತಿನ ಧೋರಣೆಯನ್ನು ನೋಡಿದರೆ ಈತ ಹೆಸರಿಸಿರುವ ಕವಿಗಳೆಲ್ಲರೂ ಪ್ರಸಿದ್ಧ ಕವಿಗಳಾಗಿದ್ದಂತೆ ತೋರುತ್ತದೆ. ಆದರೆ ಅವರು ಬರೆದ ಕಾವ್ಯಗಳಾವುವೆಂಬುದನ್ನು ಈತ ಹೇಳಿಲ್ಲ; ಅವರ ಗ್ರಂಥಗಳಾವುವೂ ಈಗ ನಮಗೆ ಸಮಗ್ರವಾಗಿ ದೊರೆತಿಲ್ಲ. ಆದರೂ ಇವರಲ್ಲಿ ಕೆಲವರ ಹೆಸರು ನಮಗೆ ಪರಿಚಿತವಾಗಿದೆ. ಗದ್ಯಕವಿಗಳಲ್ಲಿ ಒಬ್ಬನಾದ ದುರ್ವಿನೀತ (ಸು.529-79) ಗಂಗವಂಶದ ದೊರೆಯೆಂದೂ ಈತ ಬಹುಶ್ರುತನೂ ಮೇಧಾವಿಯೂ ಆಗಿದ್ದನೆಂದೂ ಶಾಸನಗಳಿಂದ ತಿಳಿಯುತ್ತದೆ. ಕಿರಾತಾರ್ಜುನೀಯದ ಹದಿನೈದನೆಯ ಸರ್ಗಕ್ಕೆ ಇವನು ಕನ್ನಡ ಟೀಕನ್ನು ಬರೆದಿರುವಂತೆ ತಿಳಿದುಬರುತ್ತದೆ. ಪೈಶಾಚೀ ಭಾಷೆಯಲ್ಲಿದ್ದ ಬೃಹತ್ಕಥೆಯನ್ನು ವಡ್ಡಕಥಾ ಎಂಬ ಹೆಸರಿನಿಂದ ಈತ ಕನ್ನಡಕ್ಕೆ ತಂದಿದ್ದಾನೆಂದೂ ಊಹೆ. ಕವಿರಾಜಮಾರ್ಗದಲ್ಲಿ ಹೇಳಿರುವ ಪದ್ಯಕವಿಗಳಲ್ಲಿ ಚಂದ್ರನನ್ನು ಹಲವು ಕನ್ನಡ ಕವಿಗಳು ಸ್ತುತಿಸಿದ್ದಾರೆ. ಇಷ್ಟೇ ಅಲ್ಲ, ಕವಿರಾಜಮಾರ್ಗದಲ್ಲಿ ಉದಾಹರಿಸಿರುವ ಹಲವಾರು ಪದ್ಯಗಳು ಎಲ್ಲಿಂದ ಎತ್ತಿಕೊಂಡವುಗಳೆಂಬ ವಿಷಯ ಗೊತ್ತಾಗುವುದಿಲ್ಲ. ಇವುಗಳಲ್ಲಿ ಹತ್ತಾರು ಪದ್ಯಗಳು ರಾಮಾಯಣದ ಹಲವಾರು ಸನ್ನಿವೇಶಗಳನ್ನು ಸೂಚಿಸುವುದರಿಂದ, ಆ ಕಾಲಕ್ಕಾಗಲೇ ಒಂದು ರಾಮಾಯಣ ಕನ್ನಡದಲ್ಲಿ ಹುಟ್ಟಿದ್ದಿತೆಂದು ಊಹಿಸಲವಕಾಶವಿದೆ. ಇದೇ ಗ್ರಂಥದಲ್ಲಿ ಕನ್ನಡ ಕಾವ್ಯ ಪ್ರಕಾರಗಳಲ್ಲಿ ಉನ್ನತ ಗುಣವುಳ್ಳ ಗದ್ಯಪದ್ಯ ಸಮ್ಮಿಶ್ರಣದ ಪ್ರಕಾರವನ್ನು ‘ಗದ್ಯ ಕಥೆ’ ಎಂಬ ಹೆಸರಿನಿಂದ ಪ್ರಾಚೀನ ಆಚಾರ್ಯರು ರಚಿಸಿದ್ದಾರೆ ಎಂದು ಹೇಳಿದೆ. ಅಲ್ಲದೆ ಕನ್ನಡಕ್ಕೇ ವಿಶಿಷ್ಟವಾದ ಚತ್ತಾಣ ಮತ್ತು ಬೆದಂಡೆಗಳಂಥ ಪದ್ಯಕಾವ್ಯಪ್ರಕಾರಗಳಿದ್ದುವೆಂದೂ ಇದರಲ್ಲಿ ಪ್ರಾಚೀನರಾದ ಕವಿಗಳು ಕೃತಿರಚನೆ ಮಾಡಿದ್ದರೆಂದೂ ತಿಳಿಯುತ್ತದೆ.

ಕವಿರಾಜಮಾರ್ಗ ಹುಟ್ಟಿದ ಹಿಂಚುಮುಂಚಿನಲ್ಲಿಯೇ ಅಸಗ, ಗುಣನಂದಿ ಮತ್ತು ಗುಣವರ್ಮ ಎಂಬ ಮೂವರು ಕವಿಗಳು ಕಾಣಬರುತ್ತಾರೆ. ಅಸಗನ ವರ್ಧಮಾನ ಚರಿತಂ ಎಂಬ ಸಂಸ್ಕೃತ ಗ್ರಂಥದಿಂದ ಈತ ಸು.853ರಲ್ಲಿ ಇದ್ದನೆಂಬುದು ಮಾತ್ರವಲ್ಲದೆ ಶ್ರೀ ಅಸಗಭೂಪಕೃತೇ ಎಂಬ ಅಲ್ಲಿನ ಹೇಳಿಕೆಯಿಂದ ಈತ ರಾಜನೂ ಆಗಿದ್ದಿರಬೇಕೆಂದು ಭಾವಿಸುವುದಕ್ಕೂ ಅವಕಾಶವಿದೆ. ಕನ್ನಡದ ಹಲವಾರು ಕವಿಗಳು ಈತನನ್ನು ಸ್ತುತಿಸಿದ್ದಾರೆ. ಈತನ ‘ಕರ್ನಾಟ ಕುಮಾರಸಂಭವ’ ಕನ್ನಡ ಕಾವ್ಯವೆಂದು ಜಯಕೀರ್ತಿಯ ಗ್ರಂಥದಿಂದ ತಿಳಿಯುತ್ತದೆ. ಗುಣನಂದಿಯನ್ನು ಭಟ್ಟಾಕಳಂಕ ಬಹು ಭಕ್ತಿಯಿಂದ ಭಗವಾನ್ ಗುಣನಂದಿ ಎಂದು ಕರೆದು ಗೌರವಿಸಿದ್ದಾನೆ. ಈತನ ಕಾವ್ಯದ ತುಣುಕೊಂದು ಕೇಶಿರಾಜನ ವ್ಯಾಕರಣದಲ್ಲಿದೆ. ಅದನ್ನು ನೋಡಿದರೆ ಈತ ಉತ್ತಮ ಕವಿಯೆಂದು ಭಾಸವಾಗುತ್ತದೆ. ಈತನ ಗ್ರಂಥವಾವುದೂ ಸಿಕ್ಕಿಲ್ಲ. ಗುಣವರ್ಮನು ಹರಿವಂಶ, ಶೂದ್ರಕ ಎಂಬ ಎರಡು ಉದ್ಗ್ರಂಥಗಳ ಕರ್ತೃವೆಂದು ಹೇಳುವುದಕ್ಕೆ ಅವಕಾಶವಿದೆ. ನಾಗವರ್ಮ, ಕೇಶಿರಾಜರು ಈತನ ಕಾವ್ಯಗಳನ್ನು ಹೆಸರಿಸಿದ್ದಾರೆ. ಮಲ್ಲಿಕಾರ್ಜುನ ಕವಿಯ ಸೂಕ್ತಿ ಸುಧಾರ್ಣವದಲ್ಲಿ ಗುಣವರ್ಮನ ಶೂದ್ರಕ ಕಾವ್ಯದ ಭಾಗಗಳು ದೊರೆಯುತ್ತವೆ. ಮೇಲಿನ ವಿವರಣೆಯಿಂದ ಕನ್ನಡ ಸಾಹಿತ್ಯ ಬಹುಶಃ ಕ್ರಿಸ್ತಶಕದ ಆರಂಭದಲ್ಲಿ ಪ್ರಾರಂಭವಾಗಿ ಐದು ಆರು ಶತಮಾನಗಳ ವೇಳೆಗಾಗಲೇ ಸಮೃದ್ಧಿಯಾಗಿ ಬೆಳೆದುಕೊಂಡು ಬಂದಿರಬಹುದೆಂದು ಹೇಳಬಹುದಾಗಿದೆ.

ಪಂಪಯುಗ : ಸು.900-1150. ಕನ್ನಡ ಸಾಹಿತ್ಯದ ಪ್ರಥಮ ಘಟ್ಟ ಪಂಪ ಯುಗ. ಪಂಪನಿಂದ ಬಸವಣ್ಣನವರೆಗೆ ಈ ಯುಗದ ವ್ಯಾಪ್ತಿಯಿದೆ. ಕನ್ನಡ ಸಾಹಿತ್ಯ ವಿಚ್ಫಿತ್ತಿಯಿಲ್ಲದೆ ಹರಿದುಕೊಂಡು ಹೋಗಿರುವುದು 10ನೆಯ ಶತಮಾನದಿಂದ ಮುಂದೆ. ಈ ಯುಗದ ಪ್ರಮುಖ ಕೊಡುಗೆಯೆಂದರೆ ಚಂಪೂಕಾವ್ಯಗಳು. ಈ ಯುಗದಲ್ಲಿ ಪಂಪ, ರನ್ನ, ಪೊನ್ನ- ಈ ಮೂವರು ಮಹಾಕಾವ್ಯಗಳನ್ನು ರಚಿಸಿ ಮಹಾಕವಿಗಳು ಎಂಬ ಬಿರುದಿಗೆ ಪಾತ್ರರಾಗಿದ್ದಾರೆ. 10ನೆಯ ಶತಮಾನದ ಪೂರ್ವಾರ್ಧದಲ್ಲಿದ್ದ ಪಂಪ ಕನ್ನಡದ ಆದಿಕವಿಯೆಂದು ಪ್ರಸಿದ್ಧನಾಗಿದ್ದಾನೆ. ಚಾಳುಕ್ಯ ಅರಿಕೇಸರಿಯ ಆಸ್ಥಾನದಲ್ಲಿ ಕವಿಯೂ ಕಲಿಯೂ ಆಗಿದ್ದ ಈತ ಕಾಲದ ದೃಷ್ಟಿಯಿಂದ ಮಾತ್ರವಲ್ಲ, ಯೋಗ್ಯತೆಯ ದೃಷ್ಟಿಯಿಂದಲೂ ಕನ್ನಡದ ಆದಿಕವಿ. ಚಂಪೂ ಸಾಹಿತ್ಯಕ್ಕೆ ಭದ್ರವಾದ ಬುನಾದಿಯನ್ನು ಹಾಕಿ ಅದು ಸು. 2-3 ಶತಮಾನಗಳ ಕಾಲ ಪ್ರಭಾವೀ ಸಾಹಿತ್ಯ ಮಾಧ್ಯಮವಾಗಿ ಬಳಕೆಯಾಗುವಂತೆ ಮಾಡಿದವನು ಈತ. ಚಂಪೂ ಪರಂಪರೆಯಲ್ಲಿ ಲೌಕಿಕ ಧಾರ್ಮಿಕ ಎಂಬ ಎರಡು ರೀತಿಯ ಕಾವ್ಯಮಾರ್ಗಗಳಿಗೆ ಪಂಪನೇ ಸದ್ಯಕ್ಕೆ ಮೊದಲಿಗನೆನ್ನಬಹುದು. ಈತನ ಎರಡು ಕಾವ್ಯಗಳಾದ ವಿಕ್ರಮಾರ್ಜುನ ವಿಜಯ ಹಾಗೂ ಆದಿಪುರಾಣಗಳಿಗೆ ಕ್ರಮವಾಗಿ ವ್ಯಾಸರ ಮಹಾಭಾರತ ಮತ್ತು ಜಿನಸೇನಾಚಾರ್ಯರ ಪೂರ್ವಪುರಾಣ ಆಕರ ಗ್ರಂಥಗಳು. ವಿಕ್ರಮಾರ್ಜುನ ವಿಜಯದಲ್ಲಿ ತನ್ನ ಆಶ್ರಯದಾತ ಅರಿಕೇಸರಿಯನ್ನು ಮಹಾಭಾರತದ ಅರ್ಜುನನೊಂದಿಗೆ ಸಮೀಕರಿಸಿ ಪೌರಾಣಿಕ, ಐತಿಹಾಸಿಕ ಅಂಶಗಳನ್ನು ಸ್ವಾರಸ್ಯವಾಗಿ ಹೊಂದಿಸಿ ಮಹಾಭಾರತದ ಕಥೆಯನ್ನು ಮೆಯ್ಗಡಲೀಯದೆ ನಿರೂಪಿಸಿದ್ದಾನೆ. ಆದಿಪುರಾಣ ಪ್ರಥಮಜಿನನಾದ ವೃಷಭನಾಥನ ಕಥೆಯನ್ನೊಳಗೊಂಡ, ಕಾವ್ಯಧರ್ಮ ಹಾಗೂ ಧರ್ಮ ಎರಡೂ ಸಮರಸವಾಗಿ ಬೆರೆತಿರುವ ಧಾರ್ಮಿಕ ಕಾವ್ಯ. ವಸ್ತು, ಭಾಷೆ, ಭಾವ, ಶೈಲಿ ಈ ಎಲ್ಲ ರೀತಿಯಿಂದ ಪಂಪನ ಕಾವ್ಯಗಳು ಕನ್ನಡ ಭಾಷೆಗೆ ಕೊಟ್ಟ ಅದ್ವಿತೀಯ ಕೊಡುಗೆಗಳಾಗಿವೆ.

ಪಂಪನಿಂದ ಮುಂದೆ ಸು. 2 ಶತಮಾನಗಳಷ್ಟು ಕಾಲ ಕಾವ್ಯಕರ್ಮಕ್ಕೆ ಕೈಹಾಕಿದವರೆಲ್ಲರೂ ವಸ್ತು ರೀತಿಗಳಲ್ಲಿ, ಭಾವ ಭಾಷೆಗಳಲ್ಲಿ ಪಂಪನನ್ನೇ ಅನುಕರಿಸಿದ್ದಾರೆ; ಅನುಸರಿಸಿದ್ದಾರೆ. ಆದ್ದರಿಂದ ಈ ಕಾಲಮಾನವನ್ನು ಪಂಪಯುಗವೆಂದೇ ಕರೆಯುತ್ತಾರೆ. ಈ ಕಾಲದ ಸಾಹಿತ್ಯ ಅತ್ಯಂತ ಪ್ರೌಢವಾಗಿ, ಸತ್ತ್ವಯುಕ್ತವಾಗಿ, ರಸವತ್ತಾಗಿ ಇರುವುದರಿಂದ ಇದನ್ನು ಕನ್ನಡ ಸಾಹಿತ್ಯದ ಸುವರ್ಣಯುಗ ಎಂದೂ ಕರೆಯುವುದುಂಟು. ಈ ಯುಗದಲ್ಲಿ ಚಂಪೂಕಾವ್ಯಗಳು ಪ್ರಚುರವಾಗಿರುವುದರಿಂದ ಚಂಪೂಯುಗವೆಂದೂ ಈ ಕಾವ್ಯಗಳಲ್ಲಿ ಸಾಮಾನ್ಯವಾಗಿ ವೀರರಸ ನೊರೆಗಟ್ಟಿ ಹರಿಯುತ್ತಿರುವುದರಿಂದ ವೀರಯುಗವೆಂದೂ ಹೆಸರಿಸುವ ವಾಡಿಕೆಯಿದೆ. ಈ ಯುಗದ ಕವಿಗಳೆಲ್ಲರೂ ಬಹುಮಟ್ಟಿಗೆ ರಾಜಾಶ್ರಿತರು. ಪಂಪನಂತೆಯೇ ಜೈನಧರ್ಮಾನುಯಾಯಿಗಳಾದ ಮತ್ತಿಬ್ಬರು ಕವಿಗಳು ಪೊನ್ನ ಮತ್ತು ರನ್ನ. ಇಬ್ಬರೂ ರಾಜಪೂಜಿತರಾದ ಆಸ್ಥಾನಕವಿಗಳು. ಪಂಪನಂತೆಯೇ ತಮ್ಮ ಕಾವ್ಯಗಳಲ್ಲಿ ಒಂದನ್ನು ಧರ್ಮಕ್ಕೂ ಮತ್ತೊಂದನ್ನು ಲೌಕಿಕಕ್ಕೂ ಮೀಸಲು ಮಾಡಿದ್ದಾರೆ. ಲೌಕಿಕ ಕಾವ್ಯಗಳಲ್ಲಿ ಆಯಾ ಕವಿಗಳ ಪೋಷಕರು ಪುರಾಣಪುರುಷರ ವೇಷವನ್ನು ಧರಿಸಿ, ಆಯಾ ಕಾವ್ಯಗಳ ನಾಯಕರಾಗಿ ಮೆರೆದಿದ್ದಾರೆ. ರಾಷ್ಟ್ರಕೂಟ ಚಕ್ರವರ್ತಿ ಮುಮ್ಮಡಿ ಕೃಷ್ಣನ ಆಸ್ಥಾನಕವಿಯಾಗಿದ್ದ, ಕವಿಚಕ್ರವರ್ತಿ ಎಂಬ ಬಿರುದನ್ನು ಹೊಂದಿದ್ದ ಪೊನ್ನನ ಶಾಂತಿಪುರಾಣ ಜೈನ ಧಾರ್ಮಿಕ ಗ್ರಂಥ. ಈತನ ‘ಭುವನೈಕರಾಮಾಭ್ಯುದಯ’ ಈಗ ಉಪಲಬ್ಧವಿಲ್ಲ. ಇದು ರಾಮಾಯಣದ ಕಥೆಯನ್ನು ಆಧರಿಸಿ ರಚಿತವಾದ ಲೌಕಿಕ ಕಾವ್ಯವೆಂದು ಊಹಿಸಲು ಅವಕಾಶವಿದೆ.

ರನ್ನನೂ ಪಂಪನ ಮೇಲ್ಪಂಕ್ತಿಯಲ್ಲಿ ಕಾವ್ಯರಚನೆ ಮಾಡಿದವನಾದರೂ ತನ್ನ ಸ್ವಂತಿಕೆಯನ್ನು ಮೆರೆದಿದ್ದಾನೆ. ಈತನ ಸಾಹಸಬಿsೕಮವಿಜಯಕ್ಕೆ (ಗದಾಯುದ್ಧ) ಪಂಪನ ಕೃತಿಯೇ ಪ್ರಮುಖ ಆಕರವಾದರೂ ರನ್ನನ ವ್ಯಕ್ತಿತ್ವದ ಅಚ್ಚು ಈ ಕಾವ್ಯದಲ್ಲಿ ಮೂಡಿಬಂದಿದೆ. ಕಥಾವಸ್ತು ಬಿsೕಮ-ದುರ್ಯೋಧನರ ಗದಾಯುದ್ಧವಾದರೂ ಇಡೀ ಭಾರತದ ಕಥೆಯೇ ಸಿಂಹಾವಲೋಕನಕ್ರಮದಿಂದ ಇಲ್ಲಿ ದಿಗ್ದರ್ಶಿತವಾಗಿದೆ. ಇದಕ್ಕೆ ವಾಹಕವಾಗಿರುವ ನಾಟಕೀಯ ಶೈಲಿ ರನ್ನ ಕನ್ನಡಕ್ಕಿತ್ತಿರುವ ಕಾಣಿಕೆ. ಈತನ ಅಜಿತಪುರಾಣಕ್ಕೆ ಜೈನಧಾರ್ಮಿಕ ಕಾವ್ಯಗಳಲ್ಲಿ ಪಂಪನ ಆದಿಪುರಾಣವನ್ನು ಬಿಟ್ಟರೆ ಉನ್ನತಸ್ಥಾನ ದೊರಕಿದೆ.

ವಡ್ಡಾರಾಧನೆ ಇದೇ ಕಾಲದಲ್ಲಿ ರಚಿತವಾದ ಒಂದು ವಿಶಿಷ್ಟ ಕೃತಿ. ಶಿವಕೋಟ್ಯಾಚಾರ್ಯ (ಸು.920) ಇದರ ಕರ್ತೃ. ಗದ್ಯದಲ್ಲಿರುವ ಈ ಕೃತಿ ಈಗ್ಗೆ ಸಹಸ್ರ ವರ್ಷಗಳ ಹಿಂದಿನ ಭಾಷಾಸ್ವರೂಪಕ್ಕೂ ಜನಜೀವನಕ್ಕೂ ಕನ್ನಡಿ ಹಿಡಿಯುತ್ತದೆ. ಸರಳ ಸುಂದರ ಶೈಲಿ, ಪ್ರಾಸಾದಿಕ ಗುಣ, ಕಥನಕಲೆ- ಇವು ಈ ಕೃತಿಯ ವೈಶಿಷ್ಟ್ಯಗಳು. ಕನ್ನಡ ಗದ್ಯ ಇತಿಹಾಸದಲ್ಲಿ ವಡ್ಡಾರಾಧನೆ ಒಂದು ಮೈಲಿಗಲ್ಲು.

ಈ ಯುಗದ ಮತ್ತೊಬ್ಬ ಹಿರಿಯ ಕವಿ ಒಂದನೆಯ ನಾಗವರ್ಮ. ಕರ್ನಾಟಕ ಕಾದಂಬರಿ, ಛಂದೋಂಬುದಿಗಳು ಈತನ ಗ್ರಂಥಗಳು. ಈತನೂ ಪಂಪನಂತೆಯೇ ತನ್ನ ಸ್ವಾಮಿ ಚಂದ್ರರಾಜನನ್ನು ಕಾವ್ಯದ ಕಥಾನಾಯಕನೊಡನೆ ಸಮೀಕರಿಸಿ, ತನ್ನ ಕರ್ನಾಟಕ ಕಾದಂಬರಿಯನ್ನು ರಚಿಸಿದನೆಂದು ತೋರುತ್ತದೆ. ಆದರೆ ಇದನ್ನು ಸ್ಪಷ್ಟಪಡಿಸುವಷ್ಟು ಸಾಧನಗಳಿಲ್ಲ. ಈತನ ಛಂದೋಂಬುದಿs ಕನ್ನಡದ ಮೊಟ್ಟ ಮೊದಲ ಛಂದೋಗ್ರಂಥ. ಕರ್ನಾಟಕ ಕಾದಂಬರಿ ಬಾಣಭಟ್ಟನ ಸಂಸ್ಕೃತ ಕಾದಂಬರಿಯ ಅನುವಾದ. ಮೂಲವನ್ನು ಕವಿ ಕನ್ನಡ ಚಂಪೂರೂಪಕ್ಕೆ ತಿರುಗಿಸಿದ್ದಾನೆ. ಮೂಲದ ಪದಗಳು ಕನ್ನಡ ರೂಪಾಂತರದಲ್ಲಿ ಕಂಡುಬರುವುವಾದರೂ ನಾಗವರ್ಮ ಬರಿಯ ಭಾಷಾಂತರಕಾರನಲ್ಲ. ಸಂಸ್ಕೃತದ ಉತ್ತಮ ಕಾವ್ಯವೊಂದನ್ನು ಸ್ವತಂತ್ರ ಕೃತಿಯೆಂಬಂತೆ ಕನ್ನಡದಲ್ಲಿ ರಚಿಸಿ, ಅದೊಂದು ಸಂಪ್ರದಾಯವನ್ನು ಬೆಳೆಸಿದವರಲ್ಲಿ ಈತ ಮೊದಲಿಗ.

ಈ ಯುಗದಲ್ಲಿ 11ನೆಯ ಶತಮಾನದ ಕನ್ನಡ ಸಾಹಿತ್ಯ ಹಿಂದಿನದಷ್ಟು ಉಜ್ಜ್ವಲವಾಗಿಲ್ಲ. ಆದರೆ ಹೆಚ್ಚು ವೈವಿಧ್ಯಮಯವಾಗಿದೆ. ಕಾವ್ಯಗಳ ಜೊತೆಯಲ್ಲಿ ಇಲ್ಲಿ ಹಲವು ಶಾಸ್ತ್ರ ಗ್ರಂಥಗಳೂ ಕಾಣಿಸಿಕೊಂಡಿವೆ. ಅನೇಕ ವೇಳೆ ಈ ಶಾಸ್ತ್ರಗ್ರಂಥಗಳು ಕಾವ್ಯಮಯ ವಾಗಿಯೂ ಇರುತ್ತವೆ. ಚಾವುಂಡರಾಯನ (ಸು.1025) ಲೋಕೋಪಕಾರ ಇಂಥ ಒಂದು ಗ್ರಂಥ. ಜೋತಿಷ್ಯದಿಂದ ವಿಷವೈದ್ಯದವರೆಗೆ ಹಲವಾರು ವಿಷಯಗಳನ್ನು ಒಳಗೊಂಡ ಈ ಗ್ರಂಥ ತನ್ನ ಹೆಸರನ್ನು ಸಾರ್ಥಕ ಪಡಿಸಿಕೊಂಡಿದೆ. ಚಂದ್ರರಾಜನ (ಸು.1025) ಮದನತಿಲಕ ಎಂಬ ಕಾಮಶಾಸ್ತ್ರವೂ ಶ್ರೀಧರಾಚಾರ್ಯನ (ಸು.1049) ಜಾತಕತಿಲಕವೆಂಬ ಜೋತಿಷ್ಯ ಗ್ರಂಥವೂ ಇದೇ ಜಾತಿಗೆ ಸೇರಿದ ಶಾಸ್ತ್ರಗ್ರಂಥಗಳು. ಇವೆಲ್ಲವೂ ಚಂಪೂ ಶೈಲಿಯಲ್ಲಿವೆ. ನಾಗವರ್ಮಾಚಾರ್ಯನ (ಸು.1071) ಚಂದ್ರಚೂಡಾಮಣಿಶತಕ ಕನ್ನಡದ ಮೊಟ್ಟಮೊದಲ ಶತಕ ಗ್ರಂಥವಾಗಿದೆ. ಮೇಲಿನ ಕವಿಗಳಲ್ಲಿ ಶ್ರೀಧರಾಚಾರ್ಯನನ್ನು (ಜೈನಕವಿ) ಬಿಟ್ಟರೆ ಉಳಿದವರೆಲ್ಲ ವೈದಿಕ ಕವಿಗಳೆಂಬುದು ಗಮನಾರ್ಹ.

ಒಂದನೆಯ ಜಗದೇಕಮಲ್ಲನಲ್ಲಿ ಸಂದಿsವಿಗ್ರಹಿಯಾಗಿದ್ದ ದುರ್ಗಸಿಂಹ (ಸು.1031) ಪಂಚತಂತ್ರವೆಂಬ ಕಾವ್ಯವನ್ನು ಬರೆದಿದ್ದಾನೆ. ಇದು ಸಂಸ್ಕೃತದಲ್ಲಿ ಬರೆದ ಪಂಚತಂತ್ರದ ಕನ್ನಡ ಅನುವಾದ, ಚಂಪೂರೂಪದಲ್ಲಿದೆ. ಹಲವು ಉಪಕಥೆಗಳು ಇಲ್ಲಿ ಗದ್ಯರೂಪದಲ್ಲಿ ಕಾಣಿಸಿಕೊಂಡಿವೆ. ಕನ್ನಡ ಗದ್ಯ ಸಾಹಿತ್ಯದ ಇತಿಹಾಸದಲ್ಲಿ ದುರ್ಗಸಿಂಹನಿಗೆ ಒಂದು ಪ್ರಮುಖ ಸ್ಥಾನ ಸಲ್ಲುತ್ತದೆ.

ಹೊಯ್ಸಳ ಒಂದನೆಯ ಬಲ್ಲಾಳನ ಆಸ್ಥಾನ ಕವಿಯಾಗಿದ್ದನೆನ್ನಲಾದ ನಾಗಚಂದ್ರ ಈ ಯುಗದಲ್ಲಿ ಕೃತಿರಚನೆ ಮಾಡಿದ ಇನ್ನೊಬ್ಬ ಅತ್ಯುತ್ತಮ ಕವಿ. ತನ್ನನ್ನು ಅಬಿನವಪಂಪನೆಂದು ಕರೆದುಕೊಂಡಿರುವ ಈತ ಮಲ್ಲಿನಾಥಪುರಾಣ, ರಾಮಚಂದ್ರಚರಿತಪುರಾಣ ಎಂಬ ಎರಡು ಗ್ರಂಥಗಳನ್ನು ಬರೆದಿದ್ದಾನೆ. ಎರಡೂ ಧರ್ಮಗ್ರಂಥಗಳೇ. ಮೊದಲನೆಯದು 19ನೆಯ ತೀರ್ಥಂಕರನ ಕಥೆಯನ್ನೂ ಎರಡನೆಯದು ಜೈನ ಪುರಾಣಾನುಸಾರಿಯಾದ ರಾಮಾಯಣ ಕಥೆಯನ್ನೂ ನಿರೂಪಿಸುತ್ತದೆ. ಇಲ್ಲಿನ ಧರ್ಮನಿರೂಪಣೆ ಅತ್ಯಂತ ಕಾವ್ಯಮಯವಾಗಿದ್ದು ಅಬಿsನವಪಂಪನ ಆತ್ಮಸಾರ ಎಂಬ ಕೀರ್ತಿಗೆ ಪಾತ್ರವಾಗಿದೆ.

12ನೆಯ ಶತಮಾನದ ಮಧ್ಯಭಾಗದಲ್ಲಿ ಸಾಹಿತ್ಯದಲ್ಲಿ ಹೊಸ ತಿರುವು ಕಾಣಿಸಿಕೊಂಡಿತು. ನಯಸೇನ, ಬ್ರಹ್ಮಶಿವ ಮೊದಲಾದ ಜೈನಕವಿಗಳು ಸಂಸ್ಕೃತ ಭೂಯಿಷವಿವಾದ ಮಾರ್ಗೀ ಶೈಲಿಯನ್ನು ಪ್ರತಿಭಟಿಸಿ, ಸುಲಲಿತ ದೇಶೀ ಶೈಲಿಯಲ್ಲಿ ಕೃತಿರಚನೆ ಮಾಡತೊಡಗಿದರು. ನಯಸೇನನ ಧರ್ಮಾಮೃತ, ಬ್ರಹ್ಮಶಿವನ ಸಮಯ ಪರೀಕ್ಷೆ ಈ ಮಾದರಿಯಲ್ಲಿ ರಚಿತವಾದ ಮುಖ್ಯ ಗ್ರಂಥಗಳು. ಇವರ ಕಾವ್ಯಗಳಲ್ಲಿ ಪಂಪ ಹಾಕಿಕೊಟ್ಟ ಮಾರ್ಗದ ಪ್ರಭಾವವಿದ್ದರೂ ಇವರು ಭಾಷಾದೃಷ್ಟಿಯಿಂದ ಹೊಸದನ್ನು ಕಾವ್ಯದಲ್ಲಿ ತರಬೇಕೆಂದು ಹೊರಟು ಕಥೆಗಳ ಮೂಲಕ ತಮ್ಮ ಧರ್ಮಪ್ರಸಾರ ಮಾಡಿದರು. ಇವರ ಕಾವ್ಯಗಳಲ್ಲಿ ಪರಮತ ವಿಡಂಬನೆ ಎದ್ದು ಕಾಣುತ್ತದೆ. ಇದು ಬುದ್ಧಿಪೂರ್ವಕವಾದುದಾದರೂ ವಿವೇಚನಾ ರಹಿತವಾದುದಲ್ಲ.

12ನೆಯ ಶತಮಾನದ ಪೂರ್ವಾರ್ಧದಲ್ಲಿ ರಾಜಾದಿತ್ಯನ ವ್ಯವಹಾರ ಗಣಿತ, ಕೀರ್ತಿವರ್ಮನ ಗೋವೈದ್ಯ, ಜಗದ್ದಳ ಸೋಮನಾಥನ ಕಲ್ಯಾಣಕಾರಕ, ಉದಯಾದಿತ್ಯನ ಉದಯಾದಿತ್ಯಾಲಂಕಾರ, ಎರಡನೆಯ ನಾಗವರ್ಮನ ಕಾವ್ಯಾವಲೋಕನ, ಕರ್ನಾಟಕ ಭಾಷಾಭೂಷಣ, ವಸ್ತುಕೋಶ ಮುಂತಾದ ಗಮನಾರ್ಹ ಶಾಸ್ತ್ರಗ್ರಂಥಗಳು ರಚಿತವಾದವು. ಎರಡನೆಯ ನಾಗವರ್ಮನ ವರ್ಧಮಾನಪುರಾಣ ಎಂಬ ಕಾವ್ಯ ಸಿಕ್ಕಿದೆ. ವಚನಯುಗ: 12ನೆಯ ಶತಮಾನದ ಉತ್ತರಾರ್ಧ ಕನ್ನಡ ಸಾಹಿತ್ಯ ಜಗತ್ತಿನಲ್ಲಿ ನಡೆದ ದೊಡ್ಡದೊಂದು ವಿಪ್ಲವವನ್ನು ಒಳಗೊಂಡಿದೆ. ಇಲ್ಲಿಂದ ಮುಂದೆ ಕನ್ನಡ ಸಾಹಿತ್ಯ ಚರಿತ್ರೆಯ ನೂತನ ಯುಗವೊಂದು ಪ್ರಾರಂಭವಾಗುತ್ತದೆ. ಇಲ್ಲಿಯವರೆಗೆ ಕಾವ್ಯಕರ್ಮಕ್ಕೆ ಕೈಹಾಕಿದವರೆಲ್ಲರೂ ಬಹುಮಟ್ಟಿಗೆ ರಾಜಾಶ್ರಯದಲ್ಲಿದ್ದವರು. ಇವರ ಹೆಗ್ಗುರಿ ರಾಜಾನುಗ್ರಹ ಮತ್ತು ರಾಜಾಸ್ಥಾನ ಪಂಡಿತರ ಮೆಚ್ಚುಗೆ. ಇವರ ಕಾವ್ಯರಚನೆಗೆ ಸಂಸ್ಕೃತ ಕಾವ್ಯಗಳು ಆಧಾರ. ವಸ್ತುರೀತಿಗಳಲ್ಲಿ, ಭಾವ ಭಾಷೆಗಳಲ್ಲಿ ಇವರದು ಸಂಸ್ಕೃತ ಕಾವ್ಯಗಳ ಅನುಕರಣ. ಪಾಂಡಿತ್ಯ ಹೆಪ್ಪುಗಟ್ಟಿ ಕುಳಿತಿದ್ದ ಈ ಕಾವ್ಯಗಳು ಶ್ರೀಸಾಮಾನ್ಯನಿಗೆ ಎಟುಕುವಂತಿರಲಿಲ್ಲ. ಅವುಗಳ ಭಾಷಾಶೈಲಿಗಳಲ್ಲಿ ಪರಿಷ್ಕರಣವಾಗಬೇಕೆಂಬ ಕೂಗು ಕವಿರಾಜಮಾರ್ಗ ಕರ್ತೃವಿನ ಕಾಲದಿಂದಲೂ ಇತ್ತು. ಅದನ್ನು ಕಾರ್ಯತಃ ನೆರವೇರಿಸಿ, ಕನ್ನಡ ಸಾಹಿತ್ಯದಲ್ಲಿ ಕ್ರಾಂತಿಯನ್ನುಂಟುಮಾಡಿದ ಕೀರ್ತಿ ವೀರಶೈವ ಕವಿಗಳಿಗೆ ಸಲ್ಲಬೇಕು. ಈ ಕವಿಗಳಿಗೆ ಸ್ಫೂರ್ತಿಯನ್ನು ನೀಡಿದವರು ವೀರಶೈವ ವಚನಕಾರರು.

ವಚನವಾಙ್ಮಯದ ಹುಟ್ಟಿಗೆ ಅಂದಿನ ಕಾಲದ ಸಾಮಾಜಿಕ ಸ್ಥಿತಿಯೂ ಬಹುಮಟ್ಟಿಗೆ ಕಾರಣವಾಗಿದೆ. ಈ ವೇಳೆಗಾಗಲೇ ಕನ್ನಡ ನಾಡಿನಲ್ಲಿ ಜೈನಮತ ಅವನತಿ ಹೊಂದುತ್ತಿತ್ತು. ಅನಾದಿಕಾಲದಿಂದಲೂ ಹರಿದು ಬಂದಿದ್ದ ವೈದಿಕಮತ ತನ್ನ ಸತ್ತ್ವವನ್ನು ಕಳೆದುಕೊಂಡು ಮೂಢನಂಬಿಕೆ, ಅಂಧಶ್ರದ್ಧೆ, ಡಾಂಬಿಕತೆ, ಜಾತೀಯತೆ, ಮಡಿವಂತಿಕೆಗಳಲ್ಲಿ ಮುಳುಗಿಹೋಗಿತ್ತು. ಇದನ್ನು ಪ್ರತಿಭಟಿಸಿ ಸರ್ವಸಮಾನತೆ, ಮಾನವಪ್ರೇಮ, ದೈವಭಕ್ತಿ, ನೈತಿಕ ಜೀವನಗಳಿಗೆ ಸ್ಥಾನಕೊಡುವ ಹೊಸ ಸಮಾಜವೊಂದರ ಸೃಷ್ಟಿ ಅತ್ಯವಶ್ಯವಾಗಿತ್ತು. ಇದರ ಪೂರೈಕೆಯೋ ಎಂಬಂತೆ ಕರ್ನಾಟಕದಲ್ಲಿ ವೀರಶೈವ ಧರ್ಮ ಕಾಣಿಸಿಕೊಂಡಿತು. ಅಧ್ಯಾತ್ಮ ಪ್ರಜ್ಞೆ ವೆಲ್ಲ ಸಂಸ್ಕೃತದಲ್ಲಿದ್ದುದರಿಂದ ಅದು ಶ್ರೀಸಾಮಾನ್ಯನ ಸ್ವತ್ತಾಗುವಂತೆ ಮಾಡಲು ವಚನವಾಙ್ಮಯ ಹುಟ್ಟಿಕೊಂಡಿತು.

ಅಧ್ಯಾತ್ಮ, ಧರ್ಮ, ನೀತಿಗಳ ನಿರೂಪಣೆ ವಚನಗಳ ತಿರುಳು. ಚಿಲುಮೆಯಿಂದ ನೀರು ಉಕ್ಕುವಂತೆ ಸಂತರ ಅನುಭವದಿಂದ ಅಬಿsವ್ಯಕ್ತವಾಗುವ ಈ ವಾಙ್ಮಯಕ್ಕೆ ಪುರಸ್ಕಾರ ದೊರೆತಿರುವುದು ಇಲ್ಲಿನ ಪಾಂಡಿತ್ಯದಿಂದಲ್ಲ. ಧರ್ಮ ದರ್ಶನದಿಂದ ಮಹಾತತ್ತ್ವಗಳು ತಿಳಿಯಾದ ಭಾಷೆಯಲ್ಲಿ ಕಾಣಿಸಿಕೊಂಡಿರುವ ವಚನ ವಾಙ್ಮಯಕ್ಕೆ ಕನ್ನಡದ ಉಪನಿಷತ್ತುಗಳೆಂಬ ಹೆಸರೂ ಬಂದಿದೆ. ಸರಳ ಹಾಗೂ ಶಕ್ತಿಯುತವಾದ ಈ ವಾಙ್ಮಯ ಕನ್ನಡಕ್ಕೇ ಮೀಸಲಾದ, ಕನ್ನಡಕ್ಕೆ ಹೆಗ್ಗಳಿಕೆಯನ್ನು ತಂದುಕೊಟ್ಟಿರುವ, ಕನ್ನಡಿಗರ ಹಿರಿಯ ಸ್ವತ್ತು. ಇದರ ವಸ್ತು ರೀತಿಗಳು ಭಾವಭಾಷೆಗಳು ಕನ್ನಡ ನೆಲದಲ್ಲಿ ಹುಟ್ಟಿ ಅಪ್ಪಟ ಕನ್ನಡತನದಿಂದ ತುಂಬಿವೆ. ಈ ಕಾಲವನ್ನು ಕನ್ನಡ ಸಾಹಿತ್ಯದ ಪ್ರಜಾಪ್ರಭುತ್ವದ ಕಾಲ ಎಂದು ಕರೆದರೆ ತಪ್ಪಾಗಲಾರದು. ಸರ್ವಸಮತೆಯನ್ನು ಸಾರಿದ ವೀರಶೈವಧರ್ಮ ಎಲ್ಲ ಜಾತಿ, ಧರ್ಮ, ಪಂಥದ ಜನರಿಗೂ ತನ್ನ ಧರ್ಮಧ್ವಜದ ಅಡಿಯಲ್ಲಿ ಎಡೆಯಿತ್ತಿತು. ಗಂಡು ಹೆಣ್ಣುಗಳೆಂಬ ಭೇದಭಾವವಿಲ್ಲದೆ ಎಲ್ಲರೂ ಸತ್ಯ ಸಾಕ್ಷತ್ಕಾರಕ್ಕೆ ಅವಕಾಶ ಪಡೆದರು. ಬ್ರಾಹ್ಮಣನಿಂದ ಶೂದ್ರನವರೆಗೆ ಎಲ್ಲರೂ ಅನುಭಾವಿಗಳಾಗಿ ತಮಗೆ ಸ್ಫುರಿಸಿದುದನ್ನು ವಚನರೂಪದಲ್ಲಿ ಅಬಿವ್ಯಕ್ತಿಸಿದರು. ನೂರಾರು ಜನ ವಚನಕಾರರು ಏಕಕಾಲದಲ್ಲಿ ಕಾಣಿಸಿಕೊಂಡರು. ಇವರು ಕಾಯಕಕ್ಕೆ ಮನ್ನಣೆಯನ್ನು ಕೊಟ್ಟರೇ ಹೊರತು ಜಾತಿಗಲ್ಲ, ಐಶ್ವರ್ಯಕ್ಕಲ್ಲ, ಅದಿsಕಾರಕ್ಕಲ್ಲ. ಶೂನ್ಯಸಿಂಹಾನದ ಮೇಲೆ ಮಂಡಿಸಿದ್ದ ಪ್ರಭುದೇವನ ಅನುಭವಮಂಟಪದಲ್ಲಿ ಈ ವಚನಗಳು ಒಪ್ಪಿಗೆಯ ಮುದ್ರೆಯನ್ನು ಪಡೆದವು. ಈ ವಚನಕಾರರೆಲ್ಲರ ಆದರ್ಶ ಆಶೋತ್ತರಗಳು ಒಂದೇ ಆಗಿದ್ದರೂ ಅವರ ಬುದ್ಧಿ, ಪ್ರಜ್ಞೆನ, ಸಂಸ್ಕಾರ, ಸಂಸ್ಕೃತಿ, ಪ್ರತಿಭೆಗಳಲ್ಲಿ ಸಾಕಷ್ಟು ಏರುಪೇರುಗಳಿರುವುದು ಸಹಜವಾಗಿಯೆ ಇದೆ. ಆದ್ದರಿಂದ ವಚನವಾಙ್ಮಯದಲ್ಲಿ ಸಾಕಷ್ಟು ಭಾಗ ಸಂಪ್ರದಾಯಶೀಲವಾಗಿ, ಅನುಕರಣ ಲೋಲವಾಗಿ ಚರ್ವಿತಚರ್ವಣವಾಗಿದೆ.

ಮಾದಾರ ಚನ್ನಯ್ಯ, ಡೋಹರಕಕ್ಕಯ್ಯ ಕೊಂಡುಗುಳಿ ಕೇಶಿರಾಜ, ಕೆಂಭಾವಿ ಭೋಗಣ್ಣ ಇವರು ಆದ್ಯವಚನಕಾರರೆಂದು ಕೇಳಿಬರುತ್ತದೆ. ದೇವರ ದಾಸಿಮಯ್ಯನ ವಚನಗಳ ಮುಖ್ಯ ಲಕ್ಷಣ ಪ್ರಾಸಾದಿಕ ಗುಣ. ಬಸವಣ್ಣನ ಸಮಕಾಲೀನನಾದರೂ ಆತನಿಗಿಂತ ಹಿರಿಯನೆನಿಸಿದ ಸಕಲೇಶ ಮಾದರಸನ ವಚನಗಳು ಹೆಚ್ಚು ಸೂತ್ರಬದ್ಧವಾಗಿ ಮಾರ್ಮಿಕವಾಗಿವೆ. ವಚನಕಾರರ ಸಾಲಿನಲ್ಲಿ ಪ್ರಭುದೇವ ಅತ್ಯುನ್ನತ ಸ್ಥಾನವನ್ನು ಗಳಿಸಿದ್ದಾನೆ. ಈತನ ನುಡಿಗಳು ಪ್ರಾಮಾಣಿಕವಾದುವು, ಸತ್ಯನಿಷ್ಠವಾದುವು, ನಿರ್ದಾಕ್ಷಿಣ್ಯವಾದವು. ಬಸವಣ್ಣ ಈ ಯುಗದ ಮಹತ್ತ್ವದ ವಚನಕಾರ. ಈತ ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯಕ ಕ್ರಾಂತಿಯ ನೇತಾರನೂ ಹೌದು. ಪ್ರಭುದೇವನದು ಜ್ಞಾನ ಮಾರ್ಗವಾದರೆ ಬಸವಣ್ಣನದು ಭಕ್ತಿಮಾರ್ಗ. ಮಾನವ ಬಯಸಬಹುದಾದ ಅದಿಕಾರ, ಐಶ್ವರ್ಯ, ಕಾಮಿನಿ, ಕೀರ್ತಿ, ರೂಪು, ಯೌವನ, ವೈಭವಗಳ ಮಧ್ಯದಲ್ಲಿಯೂ ಈತನ ಚೇತನ ಊಧರ್ವ್‌ಮುಖವಾಯಿತು. ಸಾಧನೆಯ ಹೆದ್ದಾರಿಯಲ್ಲಿ ಹೆಜ್ಜೆ ಹೆಜ್ಜೆಯಾಗಿ ಮುಂದುವರೆದು ಈತ ಹೇಗೆ ದೇವಮಾನವನಾದನೆಂಬುದು ಈತನ ವಚನಗಳಲ್ಲಿ ಒಡಮೂಡಿದೆ. ಸಮಾಜದ ಕೊಳೆಕಸಗಳನ್ನು, ಅಂಧಕಾರ ಅಜ್ಞಾನಗಳನ್ನು, ಓರೆಕೋರೆಗಳನ್ನು ಕಂಡು ಬಸವಣ್ಣ ಕನಿಕರಯುಕ್ತವಾದ ರೋಷ ಉಕ್ಕಿ ಅವುಗಳನ್ನು ಖಂಡಿಸಿದ್ದಾನೆ. ಈತನ ಬೋಧನಾವಿಧಾನ ಸುಂದರವಾದ ಸಾಹಿತ್ಯದ ರೂಪದಲ್ಲಿದೆ.

ವೀರಶೈವ ಧರ್ಮದ ಉದಾರ ತತ್ತ್ವದಿಂದ ಮೂಡಿಬಂದ ಹಲವು ವಚನಕಾರ್ತಿಯರಲ್ಲಿ ಮಹಾದೇವಿಯಕ್ಕ ಅಗ್ರಗಣ್ಯಳು. ಬಸವಣ್ಣನ ವಚನಗಳಂತೆ ಈಕೆಯ ವಚನಗಳೂ ಸತ್ತ್ವಯುಕ್ತವಾಗಿ ಸಾಹಿತ್ಯಮಯವಾಗಿ, ಭಾವಗೀತೆಯ ಮಾಧುರ್ಯದಿಂದ ತುಂಬಿವೆ. ಮುಕ್ತಾಯಕ್ಕ, ಮಹಾದೇವಿಯಮ್ಮ, ಲಕ್ಕಮ್ಮ ಮೊದಲಾದ ವಚನಕಾರ್ತಿಯರ ಹೆಸರುಗಳೂ ಇಲ್ಲಿ ಸ್ಮರಣಾರ್ಹವಾದುವು. ಈ ಯುಗದಲ್ಲಿ ವಚನ ರಚನೆಗೆ ಕೈಹಾಕಿದ ವಚನಕಾರರ ಸಂಖ್ಯೆ ಅಪರಿಮಿತ. ಅವರಲ್ಲಿ ಚೆನ್ನಬಸವಣ್ಣ, ಆದಯ್ಯ, ಹಡಪದ ಅಪ್ಪಣ, ಮಡಿವಾಳ ಮಾಚಯ್ಯ, ಸೊಡ್ಡಳಬಾಚರಸ, ಅಂಬಿಗರ ಚೌಡಯ್ಯ, ಮೋಳಿಗೆ ಮಾರಯ್ಯ, ಮೇದರ ಕೇತಯ್ಯ, ಕೋಲ ಶಾಂತಯ್ಯ ಮೊದಲಾದ ಸಂತರು ತಮ್ಮ ವಚನ ರಚನೆಯಿಂದ ಕನ್ನಡದ ಆಧ್ಯಾತ್ಮಿಕ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಹರಿಹರ ಯುಗ : 12ನೆಯ ಶತಮಾನದ ಉತ್ತರಾರ್ಧದಿಂದ ಮುಂದಕ್ಕೆ ನಡೆದ ಸಾಹಿತ್ಯ ಸೃಷ್ಟಿಯಲ್ಲಿ ವಚನಕಾರರ ಪ್ರಭಾವ ನಿಚ್ಚಳವಾಗಿ ಕಂಡುಬರುತ್ತದೆ. ಇದೇ ಕಾಲದಲ್ಲಿ ಪಂಪ ಹರಿಯಬಿಟ್ಟ ಚಂಪುವಿನ ಚಕ್ರ ಮುಂದುವರಿಯುತ್ತ ಹೋಯಿತಾದರೂ ಶುದ್ಧ ಕನ್ನಡದ ದೇಶೀ ಶೈಲಿಯಲ್ಲಿ ಕನ್ನಡ ಕಾವ್ಯರಚನೆಯನ್ನು ಮಾಡುವ ಒಂದು ಹೊಸ ಹೆದ್ದಾರಿಯೂ ಆಗ ಹುಟ್ಟಿಕೊಂಡಿತು. ಭಾವ ಭಾಷೆ ವಸ್ತು ರೀತಿಗಳಲ್ಲಿ ಹಿಂದಿನ ಕಾವ್ಯಗಳಿಂದ ಬಿsನ್ನವಾಗಿ ಸರ್ವತಂತ್ರಸ್ವತಂತ್ರವಾದ ಚಿರನೂತನತೆಯನ್ನು ಮೆರೆದು ಅದ್ಭುತ ಕ್ರಾಂತಿಯೊಂದನ್ನು ನಡೆಸಿ ಕನ್ನಡ ಸಾಹಿತ್ಯದ ಸ್ವತಂತ್ರಯುಗವೊಂದನ್ನು ಸ್ಥಾಪಿಸಿದ ಕೀರ್ತಿ ಹರಿಹರನಿಗೆ ಸಲ್ಲುತ್ತದೆ. ಪಂಪಾಶತಕ, ರಕ್ಷಶತಕ, ಮುಡಿಗೆಯ ಅಷ್ಟಕ, ಗಿರಿಜಾ ಕಲ್ಯಾಣ, ಶಿವಶರಣರ ರಗಳೆಗಳು ಇವು ಈತನ ಕಾವ್ಯಗಳು.

‘ಮನುಜರ ಮೇಲೆ ಸಾವವರ ಮೇಲೆ ಕನಿಷವಿರ ಮೇಲೆ ಅಕ್ಕಟಾ ತನತನಗಿಂದ್ರಚಂದ್ರರವಿಕರ್ಣದದಿಚಿಬಲೀಂದ್ರರೆಂದು ಮೇಣ್ ಅನವರತಂ ಪೊಗಳ್ದು ಕೆಡಬೇಡೆಲೆ ಮಾನವ ನೀನಹರ್ನಿಶಂ ನೆನೆ ಪೊಗಳರ್ಚಿಸೆಮ್ಮ ಕಡು ಸೊಂಪಿನ ಪೆಂಪಿನ ಹಂಪೆಯಾಳ್ದನಂ’ ಎಂಬ ಮಾತುಗಳಲ್ಲಿ ಊಳಿಗದಲ್ಲಿ ಈತನಿಗಿದ್ದ ಜಿಹಾಸೆಯೊಡನೆ ಪಂಪಯುಗದ ಸಾಹಿತ್ಯ ಸ್ವರೂಪದ ಖಂಡನೆಯೂ ಕಂಡುಬರುತ್ತದೆ. ಈತನ ಸ್ವತಂತ್ರ ಮನೋವೃತ್ತಿ ಇಲ್ಲಿ ಸೂಚಿತವಾಗಿದೆ. ರಾಜಮಹಾರಾಜರನ್ನು ಕುರಿತು, ಮಹಾಕವಿಗಳನ್ನು ಕುರಿತು ನಡೆಯುತ್ತಿದ್ದ ಕಾವ್ಯರಚನೆ ಸಾಮಾನ್ಯವ್ಯಕ್ತಿಗಳನ್ನು ಕುರಿತು ನಡೆಯುವಂತಾದುದು ಹರಿಹರನಿಂದ. ಈತನ ಗಿರಿಜಾಕಲ್ಯಾಣದ ಕಥಾವಸ್ತು ಮತ್ತು ನಿರೂಪಣಾ ವಿಧಾನಗಳು ಹಳೆಯವಾದರೂ ಸಂಪ್ರದಾಯಕ್ಕೆ ವಿರುದ್ಧವಾಗಿ, ಸಿಡಿದೆದ್ದಿರುವ ಆತನ ಸ್ವತಂತ್ರ ಮನೋವೃತ್ತಿ ಇಲ್ಲಿ ಕಂಡುಬರುತ್ತದೆ. ಈತನ ಈ ಸ್ವತಂತ್ರ ಮನೋವೃತ್ತಿ ಸಂಪೂರ್ಣ ಅರಳಿರುವುದು ಇವನ ರಗಳೆಗಳಲ್ಲಿ.

ಹರಿಹರ ಬಳಸಿದ ರಗಳೆಯ ಛಂದಸ್ಸು ಒಂದು ರೀತಿಯಲ್ಲಿ ಅಚ್ಚ ಕನ್ನಡದ್ದು. ಸಾಹಿತ್ಯದಲ್ಲಿ ಕ್ವಚಿತ್ತಾಗಿ ಬಳಕೆಯಲ್ಲಿದ್ದ ಆ ಛಂದಸ್ಸನ್ನು ಸಮಗ್ರ ಗ್ರಂಥರಚನೆಗೆ ಬಳಸಿಕೊಂಡ ಕೀರ್ತಿ ಇವನಿಗೆ ಸಲ್ಲುತ್ತದೆ. ಇವನ ರಗಳೆಗಳನ್ನು ಸ್ಥೂಲವಾಗಿ ಭಾವಗೀತಾತ್ಮಕ ಮತ್ತು ಕಥನಾತ್ಮಕ ಎಂದು ವಿಭಾಗಿಸಬಹುದು. ಕವಿಯ ಭಾವಗೀತಾತ್ಮಕ ರಗಳೆಗಳಲ್ಲಿ ವಿಭೂತಿ, ರುದ್ರಾಕ್ಷಿ ಮೊದಲಾದವುಗಳ ಮಹಾತ್ಮೆಗಳು ವಸ್ತುನಿಷವಿ. ಪಿಂಡೋತ್ಪತ್ತಿ, ಪುಷ್ಪ ಇತ್ಯಾದಿ ಕೆಲವು ವ್ಯಕ್ತಿನಿಷ್ಠ. ಈ ವ್ಯಕ್ತಿನಿಷ್ಠವಿವಾದವುಗಳಲ್ಲಿ ಹರಿಹರನ ಆತ್ಮಕಥೆ ಸ್ವಲ್ಪಮಟ್ಟಿಗೆ ಸೇರಿಕೊಂಡಿದೆ. ಕಥನಾತ್ಮಕವಾದ ರಗಳೆಗಳು ವೀರಶೈವ ಧರ್ಮದ 63 ಪುರಾತನರ ಕಥೆಗಳನ್ನೂ ಬಸವಾದಿ ಪ್ರಮಥರ ಕಥೆಗಳನ್ನೂ ಒಳಗೊಂಡಿದೆ. ಈತನ ಕಥನಾತ್ಮಕ ರಗಳೆಗಳಲ್ಲಿ ಕಾಣಬರುವ ಜಗತ್ತು ವಿಶಾಲವಾಗಿ, ವೈವಿಧ್ಯಮಯವಾಗಿದೆ. ಅಮಿತ ಉತ್ಸಾಹದಿಂದ ಹೊರಹೊಮ್ಮಿದ ಕಥಾಪ್ರವಾಹ ಉತ್ಸಾಹಶೈಲಿಯ ತುಂಬುನೆಲೆಯಲ್ಲಿ ಓದುಗರನ್ನು ಸೆಳೆದೊಯ್ಯುತ್ತದೆ. ಬಸವರಾಜದೇವರ ರಗಳೆ, ನಂಬಿಯಣ್ಣನ ರಗಳೆ ಮುಂತಾದವುಗಳಲ್ಲಿ ಬರುವ ಭಕ್ತಿಯ ವರ್ಣನೆ ನಮ್ಮನ್ನು ಭವ್ಯತೆಗೆ ಒಯ್ಯುತ್ತದೆ. ಕಥೆ ದೀರ್ಘವಾದಾಗ ಅದನ್ನು ಸ್ಥಲಗಳಾಗಿ ವಿಂಗಡಿಸಿ ಒಂದು ಸ್ಥಲವನ್ನು ರಗಳೆಯಲ್ಲೂ ಮತ್ತೊಂದನ್ನು ಗದ್ಯದಲ್ಲೂ ಬರೆಯುತ್ತಾನೆ. ಈತನ ಗದ್ಯವೆಂದರೆ ಚಂಪೂ ಗದ್ಯವಲ್ಲ; ವಚನಕಾರರು ಬಳಸಿರುವ ಹೃದ್ಯವಾದ ಗದ್ಯ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಗದ್ಯ ಬಳಕೆಯಲ್ಲಿ ಈತನೊಂದು ಮೈಲಿಗಲ್ಲು.

ಸ್ವತಂತ್ರಯುಗಪ್ರವರ್ತಕನಾದ ಹರಿಹರನ ಕಾರ್ಯವನ್ನು ಅತ್ಯಂತ ಸಮರ್ಥವಾಗಿ ಮುಂದುವರಿಸಿದ ಕೀರ್ತಿ ಈತನ ಸೋದರಳಿಯನೂ ಶಿಷ್ಯನೂ ಆದ ರಾಘವಾಂಕನಿಗೆ (ಸು.1225) ಸಲ್ಲುತ್ತದೆ. ರಾಘವಾಂಕನಿಗಿಂತಲೂ ಮುಂಚೆಯೇ ಷಟ್ಪದಿ ಛಂದಸ್ಸಿನ ಬಳಕೆ ಕ್ವಚಿತ್ತಾಗಿ ಕಂಡುಬರುತ್ತಿದ್ದಿತಾದರೂ ಶುದ್ಧ ದೇಶೀಯ ಛಂದಸ್ಸಾದ ಇದರಲ್ಲಿ ಅಖಂಡ ಕಾವ್ಯಸೃಷ್ಟಿ ಮಾಡ ಹೊರಟವರಲ್ಲಿ ರಾಘವಾಂಕನೇ ಮೊದಲಿಗ. ಈತನ ಹರಿಶ್ಚಂದ್ರ ಕಾವ್ಯ ಈ ಯುಗದಲ್ಲಿ ಮೂಡಿಬಂದ ಒಂದು ಉತ್ಕೃಷ್ಟ ಕೃತಿ. ಈ ಕಾವ್ಯದಿಂದ ರಾಘವಾಂಕ ಷಟ್ಪದಿಯುಗಕ್ಕೆ ನಾಂದಿ ಹಾಡಿದನೆನ್ನಬಹುದು. ಮುಂದೆ ಬಂದ ಕವಿಗಳು ಈತನಿಂದ ಪ್ರಭಾವಿತರಾಗಿ ಇವನನ್ನು ಅನುಸರಿಸಿರುವುದು ಕಂಡುಬರುತ್ತದೆ. ಹರಿಹರ ಹರಿಯಬಿಟ್ಟ ದೇಶೀಯ ಛಂದಸ್ಸು 15ನೆಯ ಶತಮಾನದವರೆಗೆ ಹೆಚ್ಚು ವೇಗವನ್ನು ಪಡೆಯಲಿಲ್ಲ. ರಗಳೆಯ ಛಂದಸ್ಸಿನಲ್ಲಿ ಹರಿಹರ ಅದ್ವಿತೀಯನಾದಂತೆ ಮುಂದಿನ ಯಾವನೇ ಕವಿ ಆಗಲು ಸಾಧ್ಯವಾಗಲಿಲ್ಲ. ರಗಳೆ ಅಂದಿನ ಸಾಹಿತ್ಯ ಪ್ರಕಾರದಲ್ಲಿ ವಿಶಿಷ್ಟವಾಗಿಯೇ ಉಳಿಯಿತು. ಆದರೆ ಷಟ್ಪದಿಯಲ್ಲಿ ಹಲವಾರು ಗ್ರಂಥಗಳು ರಚನೆಗೊಂಡವು. ಕುಮಾರ ಪದ್ಮರಸ (ಸು.1180) ಸಾನಂದ ಚರಿತೆಯನ್ನು ಕುಸುಮ, ಭಾಮಿನೀಷಟ್ಪದಿಗಳಲ್ಲಿ ಬರೆದ. ಪಾಲ್ಕುರಿಕೆ ಸೋಮನಾಥ (ಸು.1200) ಹಲವು ಸ್ತೋತ್ರರೂಪದ ಪುಟ್ಟ ಕೈಹೊತ್ತಿಗೆಗಳನ್ನು ರಗಳೆಯಲ್ಲಿ ಬರೆದಿದ್ದಾನೆ. ಕುಮುದೇಂದು (ಸು.1275) ಎಂಬ ಜೈನಕವಿ ಮೊಟ್ಟಮೊದಲ ಬಾರಿಗೆ ತನ್ನ ರಾಮಾಯಣವನ್ನು ಷಟ್ಪದಿಯಲ್ಲಿ ಬರೆದ. ಈಗ ಉಪಲಬ್ಧವಾಗಿರುವ ಈ ಕಾವ್ಯದ ನಾಲ್ಕು ಸಂದಿಗಳಲ್ಲಿ ಒಂದೊಂದೂ ಒಂದೊಂದು ಬಗೆಯಾದ ಷಟ್ಪದಿಯಲ್ಲಿವೆ. ಬೀಮಕವಿ (ಸು.1370) ಪಾಲ್ಕುರಿಕೆ ಸೋಮನಾಥನ ಬಸವಪುರಾಣವನ್ನು ಭಾಮಿನೀಷಟ್ಪದಿಯಲ್ಲಿ ಕನ್ನಡಕ್ಕೆ ತಂದುಕೊಟ್ಟ ಲಲಿತವಾದ ಶೈಲಿಯಲ್ಲಿರುವ ಈ ಗ್ರಂಥ ಮುಂದಿನ ವೀರಶೈವ ಪುರಾಣಕರ್ತೃಗಳಿಗೆ ಮಾರ್ಗದರ್ಶಕವಾಯಿತು. ಈತ ನೂರೆಂಟು ಚರಣಗಳ ಭೀಮೇಶ್ವರ ರಗಳೆಯನ್ನೂ ಬರೆದಿದ್ದಾನೆ. ಪದ್ಮಣಾಂಕನ (ಸು.1420) ಪದ್ಮರಾಜಪುರಾಣ ಕೆರೆಯ ಪದ್ಮರಸನ ಜೀವನಕಥೆಯನ್ನೊಳಗೊಂಡಿದ್ದು ವಾರ್ಧಕ ಷಟ್ಪದಿಯಲ್ಲಿದೆ. ಆದರೆ ದೇಶೀ ಛಂದಸ್ಸಿನಲ್ಲಿರುವ ಈ ಗ್ರಂಥದಲ್ಲಿ ಮಾರ್ಗೀಶೈಲಿಯನ್ನು ಬಳಸಲಾಗಿದೆ.

ಈ ಯುಗದಲ್ಲಿ ಕಾಣಿಸಿಕೊಂಡ ಮತ್ತೊಂದು ಸಾಹಿತ್ಯ ಪ್ರಕಾರವಾದ ದಾಸವಾಙ್ಮಯ ಹಲವು ದೃಷ್ಟಿಯಿಂದ ಗಮನಾರ್ಹವಾದುದು. 12ನೆಯ ಶತಮಾನದ ಧಾರ್ಮಿಕ ಕ್ರಾಂತಿ ಸನಾತನವಾದ ವೈದಿಕಧರ್ಮವನ್ನು ಬುಡಮಟ್ಟ ಅಲ್ಲಾಡಿಸಿದಾಗ ಜನ ಸಾಮಾನ್ಯರು ತಂಡತಂಡವಾಗಿ ವೀರಶೈವಧರ್ಮವನ್ನು ಅವಲಂಬಿಸಿದರು; ಅದನ್ನು ಕಂಡು ವೈದಿಕಧರ್ಮ ಅಳಿದು ಹೋಗುವುದೆಂಬ ಭಯ ವೈದಿಕರಿಗೆ ಹುಟ್ಟಿರಬೇಕು. ವೀರಶೈವಧರ್ಮ ತನ್ನ ಅನುಭವಮಂಟಪ, ಶೂನ್ಯ ಸಿಂಹಾಸನಗಳ ಸ್ಥಾಪನೆಯಿಂದ ಸಂಘಟಿತವಾಗಿ ವಚನಗಳ ಪ್ರಚಾರ ಪ್ರಸಾರಗಳ ಮೂಲಕ ಜನಮನವನ್ನು ಆಕರ್ಷಿಸಿದುದನ್ನು ಕಂಡು, ಅಂಥದೆ ಒಂದು ಉಪಾಯದಿಂದ ಹರಿವ ಹೊಳೆಗೆ ಅಡ್ಡಗಟ್ಟೆ ಹಾಕುವ ಕಾರ್ಯ ವೈದಿಕರಿಗೆ ಅಗತ್ಯವೆನಿಸಿರಬೇಕು. ಇದರ ಫಲವೆ ದಾಸವಾಙ್ಮಯದ ಉದಯ. ವಚನಗಳಲ್ಲಿ ಹರಪಾರಮ್ಯ, ದಾಸರ ಹಾಡುಗಳಲ್ಲಿ ಹರಿಪಾರಮ್ಯ; ಅಲ್ಲಿನಂತೆ ಇಲ್ಲಿಯೂ ಭಕ್ತಿಗೆ ಪ್ರಥಮಸ್ಥಾನ; ಧರ್ಮಪ್ರಚಾರಕ್ಕೆ ಎರಡು ಕಡೆಯೂ ಜನರ ನುಡಿಯೇ ವಾಹಕ; ಅಲ್ಲಿ ಕಾವ್ಯಮಯವಾದ ಗದ್ಯದಲ್ಲಿ ವಚನಗಳನ್ನು ಹಾಡಿದರೆ, ಇಲ್ಲಿ ಕೀರ್ತನೆ ನರ್ತನಗಳು; ಶೂನ್ಯಸಿಂಹಾಸನ ಅನುಭವ ಮಂಟಪಗಳಿಗೆ ಬದಲು ವ್ಯಾಸಕೂಟ ದಾಸಕೂಟಗಳು ನಿರ್ಮಾಣಗೊಂಡವು. ವಚನಕಾರರಂತೆ ಹರಿದಾಸರೂ ತಮ್ಮ ಇಷ್ಟದೈವವನ್ನು ಕೃತಿಗಳಲ್ಲಿ ಅಂಕಿತವಾಗಿ ಬಳಸಿದರು; ಎರಡರ ಹೆಗ್ಗುರಿಯೂ ಧರ್ಮತತ್ತ್ವ ಪ್ರತಿಪಾದನೆ ಮತ್ತು ಪ್ರಚಾರ; ಸಂಸ್ಕೃತದಲ್ಲಿದ್ದ ಆಧ್ಯಾತ್ಮಿಕ ತತ್ತ್ವಗಳನ್ನು ಜನರ ಮಾತಿನಲ್ಲಿ ಅಳವಡಿಸಿಕೊಂಡು ಮನೆ ಮನೆಗೂ ಕೊಂಡೊಯ್ದು ಹಂಚುವ ಸತ್ಕಾರ್ಯದಲ್ಲಿ ಈ ಎರಡೂ ಬಗೆಯ ವಾಙ್ಮಯಗಳಿಗೆ ಸಮಾನವಾದ ಪ್ರಶಸ್ತಿ ಸಲ್ಲುತ್ತದೆ. ದ್ವೈತಮತ ಸ್ಥಾಪಕರಾದ ಮಧ್ವಾಚಾರ್ಯರೆ ದಾಸಪಂಥಕ್ಕೆ ಮೂಲಪುರುಷರೆಂದು ಹೇಳಲಾಗುತ್ತದೆ. ಅವರು ಪಶ್ಚಿಮ ಸಮುದ್ರತೀರದಿಂದ ಚಂದನದ ಗೆಡ್ಡೆಗಳನ್ನು ಉಡುಪಿಗೆ ಹೊತ್ತು ತರುತ್ತ ಆನಂದ ಮುಕುಂದ ಅರವಿಂದ ನಯನ ಇತ್ಯಾದಿಯಾಗಿ ಹಾಡಿದ ದ್ವಾದಶಸ್ತೋತ್ರಗಳೇ ದಾಸವಾಙ್ಮಯದ ಮೂಲವೆಂಬ ಅಬಿsಪ್ರಾಯವಿದೆ. ಕನ್ನಡದಲ್ಲಿ ಕೀರ್ತನೆಗಳನ್ನು ಮೊದಲು ಕಟ್ಟಿ ಹಾಡಿದವರು ನರಹರಿತೀರ್ಥರು (ಸು.1280). ಇವರ ಎರಡು ಕೃತಿಗಳು ಮಾತ್ರ ಈಗ ಉಪಲಬ್ಧವಾಗಿವೆ.

ಹರಿಹರ ದೇಶೀ ಶೈಲಿಯ ಹೊಸ ಹೆದ್ದಾರಿಯೊಂದನ್ನು ನಿರ್ಮಿಸುತ್ತಿರುವಾಗಲೇ ಹೆಚ್ಚು ಕಡಿಮೆ ಆತನ ಸಮಕಾಲೀನರೆನಿಸಿದ ನೇಮಿಚಂದ್ರ (12ನೆಯ ಶತಮಾನ), ರುದ್ರಭಟ್ಟ (ಸು.1185), ಅಗ್ಗಳ (12ನೆಯ ಶತಮಾನ), ಆಚಣ್ಣ (ಸು.1200), ಕವಿಕಾಮ (ಸು.1200), ಬಂಧುವರ್ಮ (ಸು.1200) ಮೊದಲಾದ ಕವಿಗಳು ಚಂಪೂ ಸಂಪ್ರದಾಯವನ್ನು ಮುಂದುವರಿಸುತ್ತಿದ್ದರು. ಇವರೆಲ್ಲರೂ ರಾಜಾಶ್ರಿತರೇ. ನೇಮಿಚಂದ್ರ ರಟ್ಟವಂಶದ ಲಕ್ಷ್ಮಣರಾಜನ ಆಶ್ರಯದಲ್ಲಿ ಲೀಲಾವತಿಯನ್ನೂ ಬಲ್ಲಾಳರಾಜನ ಪಡೆವಳ ಪದ್ಮನಾಭನ ಆಶ್ರಯದಲ್ಲಿ ನೇಮಿನಾಥ ಪುರಾಣವನ್ನೂ ಬರೆದ. ರುದ್ರಭಟ್ಟ ವೀರಬಲ್ಲಾಳನ ಮಂತ್ರಿ ಚಂದ್ರಮೌಳಿಯನ್ನು ಆಶ್ರಯಿಸಿ ಜಗನ್ನಾಥ ವಿಜಯವನ್ನು ಬರೆದಿದ್ದಾನೆ. ಶ್ರೀಕೃಷ್ಣನ ಜನನದಿಂದ ಬಾಣಾಸುರನ ವಧೆಯವರೆಗಿನ ಭಾಗವತ ಕಥೆ ಇಲ್ಲಿದೆ. ರುದ್ರಭಟ್ಟ ರಸಾಸ್ವಾದನೆಗಿಂತ ಪಾಂಡಿತ್ಯಾರ್ಜನೆಗೆ ಹೆಚ್ಚು ಗಮನ ನೀಡಿದ್ದಾನೆ. ನಿರ್ವಾಣ ಲಕ್ಷ್ಮೀಪತಿ ನಕ್ಷತ್ರಮಾಲಿಕೆ, ಗೊಮ್ಮಟಸ್ತುತಿ ಎಂಬ ಜಿನಸ್ತೋತ್ರಗಳನ್ನು ಬೊಪ್ಪಣಪಂಡಿತ ಬರೆದಿದ್ದಾನೆ. ಇವುಗಳಲ್ಲಿ ಅಸಾಧಾರಣವಾದ ಕವಿತಾಶಕ್ತಿ ಕಂಡುಬರುವುದರಿಂದ ಈತ ಉದ್ಗ್ರಂಥಗಳನ್ನೂ ಬರೆದಿರಬಹುದು. ಆದರೆ ಅವು ಉಪಲಬ್ಧವಾಗಿಲ್ಲ. ಅಗ್ಗಳ ಕವಿಯ ಚಂದ್ರಪ್ರಭಪುರಾಣ ಮತ್ತು ಆಚಣ್ಣನ ವರ್ಧಮಾನಪುರಾಣ ಇವೆರಡೂ ಸಂಸ್ಕೃತ ಭೂಯಿಷವಿವಾಗಿ ಪ್ರೌಢವಾಗಿವೆ. ಇವೆರಡೂ ತೀರ್ಥಂಕರರ ಕಥೆಗಳೆಂದು ಗೌರವಾರ್ಹವಾದವು. ಕವಿಕಾಮನ ಶೃಂಗಾರರತ್ನಾಕರ ಅಥವಾ ರಸವಿವೇಕ ರಸಪ್ರಕರಣವನ್ನು ವಿವರಿಸಹೊರಟ ಮೊದಲ ಗ್ರಂಥ. ಹರಿವಂಶಾಭ್ಯುದಯ, ಜೀವಸಂಬೋಧನೆಗಳನ್ನು ಬಂಧುವರ್ಮ ಬರೆದಿದ್ದಾನೆ. ಹರಿವಂಶಾಭ್ಯುದಯ 22ನೆಯ ತೀರ್ಥಂಕರನ ಕಥೆ. ಕಥೆ ಹಳೆಯದಾದರೂ ನಿರೂಪಣೆ ನವೀನವಾಗಿದೆ. ಜೀವಸಂಬೋಧನೆ ದ್ವಾದಶಾನುಪ್ರೇಕ್ಷೆಗಳ ಕನ್ನಡ ನಿರೂಪಣೆ. ಇದು ವೈರಾಗ್ಯ ಬೋಧಕವಾದರೂ ಲಲಿತಸುಂದರವಾಗಿದೆ.

13ನೆಯ ಶತಮಾನದ ಕವಿಗಳಲ್ಲಿ ಜನ್ನ (ಸು.1300) ಅಗ್ರಗಣ್ಯನಾದವನು. ಈತನ ಅನಂತನಾಥಪುರಾಣ ಜೈನಪುರಾಣಗಳ ಹಾದಿಯಲ್ಲೇ ಸಾಗುವ ಪ್ರೌಢಕಾವ್ಯವಾದರೂ ಗ್ರಂಥದ ಅಂತ್ಯದಲ್ಲಿ ಬರುವ ಸುನಂದೆ ಚಂಡಶಾಸನರ ಉಪಾಖ್ಯಾನ ಕಾವ್ಯದೃಷ್ಟಿಯಿಂದ ಅತ್ಯಂತ ರಮ್ಯವಾಗಿದೆ. ಈತನ ಮತ್ತೊಂದು ಕಾವ್ಯ ಯಶೋಧರಚರಿತೆ. ವಾದಿರಾಜನ ಸಂಸ್ಕೃತ ಯಶೋಧರಚರಿತೆ ಇದಕ್ಕೆ ಆಕರ. ಸಂಪೂರ್ಣವಾಗಿ ಕಂದದಲ್ಲಿ ರಚಿತವಾಗಿರುವ ಈ ಕೃತಿ ಜಿನಮತದ ಮುಖ್ಯ ತತ್ತ್ವವಾದ ಪ್ರಾಣಿದಯೆಯನ್ನು ಬೋದಿsಸುತ್ತದೆ. ಜನ್ನನ ವರ್ಣನಾ ಕೌಶಲ, ಸನ್ನಿವೇಶ ರಚನಾಸಾಮಥರ್ಯ್‌, ಪಾತ್ರಸೃಷ್ಟಿಯಲ್ಲಿ ಕಾಣಬರುವ ಕವಿಪ್ರತಿಭೆ ಇವನ ಕವಿಚಕ್ರವರ್ತಿಯೆಂಬ ಬಿರುದನ್ನು ಸಾರ್ಥಕಗೊಳಿಸಿವೆ. ಈ ಧರ್ಮಗ್ರಂಥ ಗಳೆರಡರಲ್ಲಿಯೂ ಪ್ರಣಯಜೀವನದ ಎರಡು ಮುಖಗಳು ಉಜ್ಜ್ವಲವಾಗಿ ಚಿತ್ರಿತವಾಗಿವೆ. ಅಮೃತಮತಿ ಮನ್ಮಥನಂಥ ಗಂಡ ಯಶೋಧರನನ್ನು ಬಿಟ್ಟು ಅಷ್ಟಾವಂಕನಂಥ ಪರಮಕುರೂಪಿಯಲ್ಲಿ ಅನುರಕ್ತಳಾಗಿ ದುರಂತವನ್ನು ಅಪ್ಪಿದರೆ, ಚಂಡಶಾಸನ ತನ್ನ ಪ್ರಿಯಸ್ನೇಹಿತ ವಸುಷೇಣನ ಹೆಂಡತಿ ಸುನಂದೆಯಲ್ಲಿ ಮೋಹಗೊಂಡು ಅವಳನ್ನು ಕದ್ದೊಯ್ದು ದುರಂತಕ್ಕೀಡಾಗುತ್ತಾನೆ. ಈ ಎರಡೂ ಕಾವ್ಯಗಳಲ್ಲಿರುವ ಮೂಲತತ್ತ್ವ ಒಂದೇ ‘ಮನಸಿಜನ ಮಾಯೆ ವಿದಿsವಿಳಸನದ ನೆರಂಬಡೆಯೆ ಕೊಂದು ಕೂಗದೆ ನರರಂ’ ಎಂಬುದು. ಕಾವ್ಯಧರ್ಮ ಹಾಗೂ ಧರ್ಮದ ಪ್ರತಿಪಾದನೆಯಲ್ಲಿ ಯಶೋಧರ ಚರಿತೆ ಕನ್ನಡದ ಮಹತ್ತ್ವಪೂರ್ಣ ಕಾವ್ಯಗಳಲ್ಲೊಂದಾಗಿದೆ.

ಎರಡನೆಯ ಗುಣವರ್ಮನ (ಸು.1215) ಪುಷ್ಪದಂತ ಪುರಾಣ, ಕಮಲಭವನ (ಸು.1235) ಶಾಂತೀಶ್ವರ ಪುರಾಣ ಇದೇ ಕಾಲದಲ್ಲಿ ರಚಿತವಾದ ಪಾಂಡಿತ್ಯ ಪೂರ್ಣವಾದ ಉದ್ಘಕೃತಿಗಳು. ಎರಡರಲ್ಲಿಯೂ ಪರಂಪರಾಗತವಾದ ವಸ್ತುವಿನ ಚರ್ವಿತಚರ್ವಣವಿದೆ. ಇದರ ಬೇಸರವನ್ನು ನೀಗುವಂತೆ ಇದೇ ಕಾಲದಲ್ಲಿದ್ದ ಆಂಡಯ್ಯ ಕಬ್ಬಿಗರಕಾವವನ್ನು ಬರೆದಿದ್ದಾನೆ. ಕನ್ನಡ ಕವಿಗಳು ಸಂಸ್ಕೃತವನ್ನು ಬಳಸದೆ ಕಾವ್ಯಸೃಷ್ಟಿ ಮಾಡಲಾರರೆಂಬ ಅಪವಾದವನ್ನು ನಿವಾರಿಸುವುದಕ್ಕಾಗಿ ಹುಟ್ಟಿದ ಈ ಕಾವ್ಯಕ್ಕೆ ಕಬ್ಬಿಗರ ಕಾವ (ಕವಿಗಳ ರಕ್ಷಕ) ಎಂದು ನಾಮಕರಣ ಮಾಡಿರುವುದು ಅರ್ಥವತ್ತಾಗಿದೆ. ಇದರಲ್ಲಿ ಸಂಸ್ಕೃತ ಪದಗಳ ಬಳಕೆ ಇಲ್ಲ, ಆದರೆ ತದ್ಭವಗಳು ಹೇರಳವಾಗಿವೆ. ಕವಿಯ ಸ್ವಕಪೋಲಕಲ್ಪಿತವಾದ ಈ ಕಾವ್ಯಕಥೆಯಲ್ಲಿ ಕನ್ನಡ ಭಾಷೆಯ ಬಗ್ಗೆ ಕವಿ ತಾಳಿದ ಅಬಿsಮಾನ ಕೆಚ್ಚು ಮೆಚ್ಚುವಂಥದ್ದು.

ವೀರಶೈವಕವಿಯೊಬ್ಬನು ಸ್ವತಂತ್ರ ಯುಗದಲ್ಲಿ ಚಂಪೂಕಾವ್ಯವನ್ನು ರಚಿಸಹೊರಟಿದ್ದು ಸಂಪ್ರದಾಯದ ಮಹತ್ತನ್ನು, ಪ್ರಭಾವವನ್ನು ಸೂಚಿಸುತ್ತದೆ. ಸೋಮರಾಜನ ಉದ್ಭಟದೇವನ ಕಥೆ ಇದಕ್ಕೆ ಉದಾಹರಣೆ. ಇದರ ಶೈಲಿ ಲಲಿತವಾಗಿದ್ದು ವರ್ಣನೆ ನವೀನವಾಗಿದೆ. ಅಲ್ಲಮಪ್ರಭುವನ್ನು ಸ್ತೋತ್ರ ಮಾಡುವ ಸಮಯದಲ್ಲಿ ಕವಿ ಧರ್ಮಸಮನ್ವಯ ದೃಷ್ಟಿಯನ್ನು ಮೆರೆದಿದ್ದಾನೆ.

ಇದೇ ಅವದಿಯಲ್ಲಿ ಜೀವಿಸಿದ್ದ ಮಲ್ಲಿಕಾರ್ಜುನ (ಸು.1240), ಕೇಶಿರಾಜ (ಸು.1260) ಈ ಇಬ್ಬರೂ ಕನ್ನಡಕ್ಕೆ ಸಲ್ಲಿಸಿರುವ ಸೇವೆ ಅಮೂಲ್ಯವಾದದ್ದು. ಮಲ್ಲಿಕಾರ್ಜುನಕವಿ ತನ್ನ ಕಾಲದವರೆಗೆ ಬೆಳೆದು ಬಂದಿದ್ದ ಕನ್ನಡ ಸಾಹಿತ್ಯದಿಂದ ಹದಿನೆಂಟು ಬಗೆಯಾದ ವರ್ಣನೆಗಳಿಗೆ ಸಂಬಂದಿsಸಿದ ಉತ್ತಮವಾದ ಪದ್ಯಗಳನ್ನು ಹದಿನೆಂಟು ಅಧ್ಯಾಯಗಳಲ್ಲಿ ಸೂಕ್ತಿಸುಧಾರ್ಣವ ಎಂಬ ಹೆಸರಿನಿಂದ ನೀಡಿದ್ದಾನೆ. ಇನ್ನೂ ಅಜ್ಞಾತವಾಗಿರಬಹುದಾದ ಎಷ್ಟೋ ಕವಿಗಳ ಕಾವ್ಯಭಾಗಗಳು ಇಲ್ಲಿ ದೊರೆಯುತ್ತವೆ. ಇದರಿಂದ ಕನ್ನಡ ಸಾಹಿತ್ಯ ಚರಿತ್ರೆಯ ನಿರ್ಮಾಣಕ್ಕೆ ಅಮೂಲ್ಯವಾದ ಸಾಧನಸಾಮಗ್ರಿ ದೊರೆತಂತಾಗಿದೆ. ಮಲ್ಲಿಕಾರ್ಜುನನಲ್ಲಿದ್ದ ಈ ಕವಿಕಾವ್ಯ ಸಂಪತ್ತನ್ನು ಸದುಪಯೋಗಪಡಿಸಿಕೊಂಡು ಕೇಶಿರಾಜ ಶಬ್ದಮಣಿದರ್ಪಣ ಎಂಬ ಸಪ್ರಮಾಣವಾದ ಹಳಗನ್ನಡ ವ್ಯಾಕರಣ ಗ್ರಂಥವನ್ನು ನೀಡಿದ್ದಾನೆ.

ಈ ಶತಮಾನದ ಕಡೆಯ ಭಾಗದಲ್ಲಿ ಕಾಣಬರುವ ಚೌಂಡರಸ (ಸು.13ನೆಯ ಶತಮಾನ) ಅಬಿsನವದಶಕುಮಾರಚರಿತೆ, ನಳಚರಿತೆ ಎಂಬ ಕಾವ್ಯಗಳನ್ನು ಬರೆದಿದ್ದಾನೆ. ಇವನ ಕೃತಿಗಳಿಗೆ ಸಂಸ್ಕೃತ ಕೃತಿಗಳೆ ಮೂಲ. ದಶಕುಮಾರಚರಿತೆಯಲ್ಲಿ ಹತ್ತು ಜನ ರಾಜಕುಮಾರರ ಕಾಮರಾಜ್ಯ ವಿಹಾರ ವರ್ಣಿತವಾಗಿದೆ. ಮೂಲದಲ್ಲಿ ಸಂಕ್ಷೇಪ ವಾಗಿರುವುದನ್ನು ಚೌಂಡರಸ ಹಿಗ್ಗಲಿಸಿದ್ದಾನೆ. ಇಲ್ಲಿನ ಕಥೆಗಳು ಬಿಡಿಬಿಡಿಯಾಗಿ ರಮ್ಯವಾಗಿವೆ. 14ನೆಯ ಶತಮಾನದಲ್ಲಿ ಕಾಣಬರುವ ನಾಗರಾಜ (ಸು.1331) ತನ್ನ ಪುಣ್ಯಾಸ್ರವದಲ್ಲಿ ಸ್ವರ್ಗಾಪವರ್ಗವನ್ನು ಪಡೆದ ಹಲವು ಪುಣ್ಯಪುರುಷರ ಕಥೆಗಳನ್ನು ಚಿತ್ರಿಸಿದ್ದಾನೆ. ವಡ್ಡಾರಾಧನೆಯಲ್ಲಿ ಬರುವ ಕೆಲವು ಕಥೆಗಳೂ ಇಲ್ಲಿವೆ. ಲಲಿತವಾದ ಶೈಲಿ, ನೈಜವಾದ ವರ್ಣನೆ, ನಿರೂಪಣಾಕೌಶಲದಿಂದ ಈ ಗ್ರಂಥ ಆದರಣೀಯವಾಗಿದೆ. ಬಾಹುಬಲಿ ಪಂಡಿತ (ಸು.1352), ಮಧುರಕವಿ (ಸು.1385) ಈ ಇಬ್ಬರೂ 15ನೆಯ ತೀರ್ಥಂಕರನಾದ ಧರ್ಮನಾಥನ ಪುರಾಣವನ್ನು ಬರೆದಿದ್ದಾರೆ. ಈ ಶತಮಾನದ ಕವಿಗಳಲ್ಲಿ ಖಗೇಂದ್ರಮಣಿದರ್ಪಣ ಎಂಬ ವಿಷವೈದ್ಯಗ್ರಂಥವನ್ನು ಬರೆದ ಒಂದನೆಯ ಮಂಗರಸ (ಸು.1350) ಕವಿ ಮಂಗಾಬಿsದಾನವೆಂಬ ನಿಘಂಟನ್ನು ಬರೆದ ಎರಡನೆಯ ಮಂಗರಸ (ಸು.1398) - ಇವರೂ ಉಲ್ಲೇಖಾರ್ಹರು.

ಕುಮಾರವ್ಯಾಸ ಯುಗ : 15-19ನೆಯ ಶತಮಾನದ ಅಂತ್ಯದವರೆಗೆ ಅಂದರೆ ಆಧುನಿಕ ಯುಗದ ಆರಂಭಕಾಲದವರೆಗೆ ಈ ಯುಗದ ವ್ಯಾಪ್ತಿಯಿದೆ.ಹರಿಹರ ಸಾಹಿತ್ಯಕ್ಷೇತ್ರದಲ್ಲಿ ಬಿತ್ತಿದ ಹೊಸ ಬೆಳೆ ಅತ್ಯಂತ ಹುಲುಸಾಗಿ ಬೆಳೆದು ಫಲಭರಿತವಾದುದು 15ನೆಯ ಶತಮಾನದಲ್ಲಿ. ಈ ಶತಮಾನದ ಪೂರ್ವಾರ್ಧದಲ್ಲಿ ಕಾಣಿಸಿಕೊಂಡ ಕುಮಾರವ್ಯಾಸನು ಮಹಾಕವಿ ಎಂಬ ಹೆಸರಿಗೆ ಪಾತ್ರನಾದವನು. ಈತನಿಂದ ಮುಂದೆ ಆಧುನಿಕ ಕನ್ನಡ ಸಾಹಿತ್ಯ ಉದಿಸುವವರೆಗೆ ಬಂದ ಎಲ್ಲ ಕವಿಗಳೂ ಈತನ ಪ್ರಭಾವಕ್ಕೆ ಒಳಗಾಗಿದ್ದಾರೆ. ಈ ಯುಗದಲ್ಲಿ ಎಲ್ಲ ಧರ್ಮದ ಕವಿಗಳೂ ಕಾಣಿಸಿಕೊಂಡಿರುವುದು ಇನ್ನೊಂದು ವೈಶಿಷ್ಟ್ಯ. ಹಾಗೆಯೇ ಷಟ್ಪದಿ, ಸಾಂಗತ್ಯ, ತ್ರಿಪದಿ - ಈ ಎಲ್ಲ ಬಗೆಯ ಛಂದಸ್ಸೂ ಬಳಕೆಯಾಗಿದೆ. ಆದ್ದರಿಂದ ಇದನ್ನು ಸಂಕೀರ್ಣಯುಗ ಎಂದೂ ಕರೆಯುವುದುಂಟು. ಈ ಯುಗದಲ್ಲಿ ದೇಶೀಯ ಛಂದಸ್ಸಾದ ಷಟ್ಪದಿಗೆ ಅಗ್ರಮಾನ್ಯತೆ ದೊರೆತಿರುವುದರಿಂದ ಇದನ್ನು ಷಟ್ಪದಿ ಯುಗವೆಂದೂ ಕರೆಯುವುದುಂಟು. ಷಟ್ಪದಿಯ ಜೊತೆಗೆ ಸಾಂಗತ್ಯವೂ ಈ ಯುಗದಲ್ಲಿ ಪ್ರಮುಖ ಕಾವ್ಯ ಮಾಧ್ಯಮವಾಗಿ ರತ್ನಾಕರವರ್ಣಿಯಲ್ಲಿ ತನ್ನ ಉನ್ನತಿಕೆಯನ್ನು ಕಂಡುಕೊಂಡಿತು.

ಕುಮಾರವ್ಯಾಸ (ಸು.1400) ಈ ಯುಗದ ಪ್ರತಿನಿದಿ. ಈತ ಸಂಸ್ಕೃತ ಮಹಾಭಾರತವನ್ನು ಸಂಗ್ರಹಿಸಿ ಅದರ ಮೊದಲ ಹತ್ತು ಪರ್ವಗಳನ್ನು ಕರ್ಣಾಟ ಭಾರತ ಕಥಾಮಂಜರಿ ಎಂಬ ಹೆಸರಿನಿಂದ ಕನ್ನಡಿಸಿದ್ದಾನೆ. ಪಂಪನ ಪ್ರಭಾವ ಇವನ ಮೇಲೆ ಆಗಿರುವಂತೆ ಕಂಡುಬಂದರೂ ಇಬ್ಬರ ದೃಷ್ಟಿಕೋನಗಳೂ ಜೀವನದ ಬಗ್ಗೆ ಅವರು ತಾಳುವ ಧೋರಣೆಗಳೂ ವಿಬಿsನ್ನವಾಗಿವೆ. ಇವನು ಮಹಾಭಾರತದ ಕಥೆಯನ್ನು ಹೇಳಹೊರಟಿದ್ದರೂ ತನ್ನ ಕಾವ್ಯ ಕೃಷ್ಣಕಥೆ ಎಂದಿದ್ದಾನೆ. ಇವರ ಭಾಷಾಶೈಲಿಗಳು ಅದ್ವಿತೀಯವಾದುವು ಮತ್ತು ಅನನುಕರಣೀಯವಾದುವು. ಇವನ ಕಾವ್ಯದಿಂದ ಕನ್ನಡ ಸಾಹಿತ್ಯ ಶ್ರೀಮಂತವಾಗಿದೆ; ಭಾಮಿನೀಷಟ್ಪದಿ ಹೆಚ್ಚು ಜೀವಂತವಾಗಿದೆ. ಈ ಯುಗದ ಕನ್ನಡ ಸಾಹಿತ್ಯ ಸಾಕಷ್ಟು ಹುಲುಸಾಗಿ ಬೆಳೆಯಲು ಕಾರಣರಾದವರು ಬಹುಮಟ್ಟಿಗೆ ವೀರಶೈವ ವಚನಕಾರರು ಮತ್ತು ಪುರಾಣಕರ್ತೃಗಳು. 12ನೆಯ ಶತಮಾನದ ಕೊನೆಯಲ್ಲಿ ಇದ್ದಕ್ಕಿದ್ದಂತೆಯೆ ಇಂಗಿಹೋಗಿದ್ದ ವಚನವಾಙ್ಮಯದ ಹೊಳೆ ವಿಜಯನಗರದ ಪ್ರೌಢದೇವರಾಯ (ಸು.1424-46) ಮತ್ತು ತೋಂಟದ ಸಿದ್ಧಲಿಂಗಯತಿ (ಸು.1530) ಇವರ ಅರಮನೆ ಗುರುಮನೆಗಳ ದಂಡೆಯನ್ನು ಆಶ್ರಯಿಸಿ ಮತ್ತೆ ಹರಿಯತೊಡಗಿತು. ಪ್ರೌಢದೇವರಾಯನ ದಂಡನಾಯಕನಾದ ಜಕ್ಕಣಾರ್ಯನೂ ರಾಜಕೃಪಾಪೋಷಿತರಾದ ನೂರೊಂದು ವಿರಕ್ತರೂ ವೀರಶೈವ ಧರ್ಮದ ಪ್ರಚಾರದಲ್ಲಿ ಪ್ರವೃತ್ತರಾಗಿ, ವಚನವಾಙ್ಮಯದ ಪುರುಜ್ಜೀವನಕ್ಕಾಗಿ ಶ್ರಮಿಸಿದರು. ಹೊಸ ವಚನಗಳ ಸೃಷ್ಟಿಗಿಂತಲೂ ಹಳೆಯ ವಚನಗಳ ಸಂಕಲನ ಸಂಪಾದನೆಗಳೂ ಅವುಗಳ ಟೀಕೆ ಟಿಪ್ಪಣಿ ವ್ಯಾಖ್ಯಾನಗಳೂ ಹುಟ್ಟಿಕೊಂಡಿದ್ದು ಈ ಕಾಲದ ವೈಶಿಷ್ಟ್ಯ. ಮಹಲಿಂಗದೇವ (ಸು.1425), ಕುಮಾರ ಬಂಕನಾಥ (ಸು.1430), ಕಲ್ಲುಮಠದ ಪ್ರಭುದೇವ (ಸು.1430), ಗುಬ್ಬಿಯ ಮಲ್ಲಣ್ಣ (ಸು.1475) ಇವರು ಪುರಾತನ ವಚನಗಳ ಸಂಗ್ರಹಕಾರರು ಅಥವಾ ಭಾಷ್ಯಕಾರರು, ಈ ಕಾಲದ ಕಿರೀಟಪ್ರಾಯ ಕೃತಿಯಾಗಿ ಶೂನ್ಯಸಂಪಾದನೆ ಕಾಣಿಸಿಕೊಂಡಿತು. 12ನೆಯ ಶತಮಾನದಲ್ಲಿ ಕಲ್ಯಾಣದಲ್ಲಿ ಶರಣರ ಗೋಷ್ಠಿ ನಡೆಯುತ್ತಿದ್ದ ಅನುಭವಮಂಟಪವನ್ನು 300 ವರ್ಷಗಳ ಆಚೆ ನಿಂತು ಛಯಾಚಿತ್ರ ತೆಗೆದುಕೊಳ್ಳುವ ಕಾರ್ಯ ಇಲ್ಲಿ ನಡೆದಿದೆ. ಶೂನ್ಯಸಿಂಹಾಸನದಲ್ಲಿ ಪ್ರಭುದೇವ, ಬಸವಣ್ಣ ಮೊದಲಾದ ಅಸಂಖ್ಯಾತ ಶಿವಶರಣರು, ಅವರ ವಿಚಾರದಲ್ಲಿ ಮೂಡಿರುವ ಸತ್ಯದ ನವನೀತ - ಇದು ಈ ಗ್ರಂಥದ ತಿರುಳು. ವೀರಶೈವ ಧರ್ಮಯಾತ್ರಿಕರಿಗೆ ಬೆಳಗುಗಂಬದಂತಿರುವ ಈ ಗ್ರಂಥವನ್ನು 15ನೆಯ ಶತಮಾನದಲ್ಲಿದ್ದ ಶಿವಗಣಪ್ರಸಾದಿ ಮಹಾದೇವಯ್ಯ ರಚಿಸಿದ. ಹಲವು ಹಿರಿಯ ಶರಣರ ವಚನಗಳನ್ನು ಸಂಕಲಿಸಿ ಈ ಕೃತಿ ರಚನೆಯಾಗಿದೆ. ತೋಂಟದ ಸಿದ್ಧಲಿಂಗಯತಿ ಹಾಗೂ ಆತನ ಶಿಷ್ಯರಲ್ಲಿ ಕೆಲವರು ಸ್ವತಂತ್ರವಾಗಿ ವಚನ ರಚನೆ ಮಾಡಿದ್ದಾರೆ. ಇವುಗಳಲ್ಲಿ ಭಕ್ತನ ನಿಷ್ಠೆ, ಶ್ರದ್ಧಾಭಾವಗಳಿಗೆ ಲೋಪವಿಲ್ಲವಾದರೂ ಪುರಾತನ ವಚನಗಳ ಸಾಹಿತ್ಯಗುಣ, ಕಾವು, ಸ್ವಾರಸ್ಯಗಳು ಅಷ್ಟಾಗಿ ಕಂಡುಬರುವುದಿಲ್ಲ. ಈ ಶತಮಾನದಲ್ಲಿ ಹುಟ್ಟಿದ ವೀರಶೈವ ಗ್ರಂಥಗಳೆಲ್ಲವೂ ಬಹುಮಟ್ಟಿಗೆ ಪುರಾಣಗಳೆ. ಈ ನಿಯಮಕ್ಕೆ ಹೊರತಾದುದೆಂದರೆ ದೇಪರಾಜನ (ಸು.1410) ಸೊಬಗಿನ ಸೋನೆ. ಸಾಂಗತ್ಯದಲ್ಲಿ ರಚಿತವಾದ ಮೊಟ್ಟಮೊದಲನೆಯ ಗ್ರಂಥವೆಂಬ ದೃಷ್ಟಿಯಿಂದ ಇದಕ್ಕೆ ಪ್ರಾಮುಖ್ಯತೆ ದೊರಕಿದೆ. ಇದೇ ಕಾಲದಲ್ಲಿ ರಚಿತವಾದ ಷಟ್ಪದಿ ಕಾವ್ಯಗಳಲ್ಲಿ ಲಕ್ಕಣ್ಣದಂಡೇಶನ ಶಿವತತ್ತ್ವಚಿಂತಾಮಣಿ, ಚಾಮರಸನ ಪ್ರಭುಲಿಂಗಲೀಲೆ ಗಮನಾರ್ಹವಾದುವು. ಚಾಮರಸನಲ್ಲಿ ಅದ್ಭುತವಾದ ಕವಿತಾಶಕ್ತಿಯಿದೆ. ಪ್ರಭುಲಿಂಗಲೀಲೆ ಅಲ್ಲಮನ ಜೀವನಚರಿತ್ರೆಯನ್ನು ಆದರ್ಶಯುತವಾಗಿ ಚಿತ್ರಿಸಹೊರಟ ಮಹಾಗ್ರಂಥ. ಅತ್ಯಂತ ಜನಪ್ರಿಯವಾದ ಈ ಕಾವ್ಯ ತೆಲುಗು, ತಮಿಳು, ಮರಾಠಿ, ಸಂಸ್ಕೃತಗಳಿಗೆ ಭಾಷಾಂತರವಾಗಿದೆ. ಕಾವ್ಯ ಧರ್ಮ, ಧರ್ಮಗಳು ಸಮರಸವಾಗಿ ಬೆರೆತು ಸಾಗುವ ಈ ಕಥಾಪ್ರವಾಹ ಇತರ ಪುರಾಣಕರ್ತರ ಕಾವ್ಯಗಳಂತೆ ಕವಲೊಡೆದು ಕಥಾಕೋಶವಾಗದೆ, ನೇರವಾಗಿ ಹರಿದು ಹೆಗ್ಗುರಿಯನ್ನು ಮುಟ್ಟುತ್ತದೆ. ಹಿತಮಿತವಾದ ವರ್ಣನೆ, ಸಜೀವವಾದ ಪಾತ್ರರಚನೆ, ಸರಳವಾದರೂ ಶಿಥಿಲವಲ್ಲದ ದೀರಗಂಭೀರ ಶೈಲಿ - ಇವುಗಳಿಂದ ಕೂಡಿದ ಈತನ ಭಾಮಿನೀಷಟ್ಪದಿ ಹಿತವಾಗಿದೆ, ಮನೋಹರವಾಗಿದೆ. ಸೌಂದರಪುರಾಣವನ್ನು ಬರೆದ ಬೊಮ್ಮರಸ (ಸು.1450), ಆರಾಧ್ಯ ಚಾರಿತ್ರವನ್ನು ಬರೆದ ನೀಲಕಂಠಾಚಾರ್ಯ (ಸು.1488), ರೇವಣಸಿದ್ದೇಶ್ವರ ಪುರಾಣವನ್ನು ಬರೆದ ಚತುರ್ಮುಖ ಬೊಮ್ಮರಸ (ಸು.1500). ಅಮಲಬಸವಚಾರಿತ್ರ್ಯ ಅಥವಾ ಸಿಂಗಿಪುರಾಣವನ್ನು ಬರೆದ ಸಿಂಗಿರಾಜ (ಸು.1500), ಇವರು ಈ ಶತಮಾನದ ಪುರಾಣಕರ್ತರಲ್ಲಿ ಪ್ರಮುಖರಾದವರು. ಸುರಂಗನನ್ನು ಬಿಟ್ಟು ಉಳಿದವರೆಲ್ಲ ವಾರ್ಧಕಷಟ್ಪದಿಯ ಛಂದಸ್ಸಿನಲ್ಲಿ ತಮ್ಮ ಕಾವ್ಯಗಳನ್ನು ಬರೆದಿದ್ದಾರೆ. ತ್ರಿಪಷ್ಟಿಪುರಾತನಚರಿತೆ ಚಂಪೂರೂಪದಲ್ಲಿದೆ, 63 ಪುರಾತನರ ಕಥೆಗಳು ಅರುವತ್ತು ಮೂರು ಅಧ್ಯಾಯಗಳಲ್ಲಿ ಕಾಣಿಸಿಕೊಂಡಿವೆ. ಇಲ್ಲಿನ ಕಥೆಗಳು ರಮ್ಯವಾಗಿವೆ.

ಈ ಶತಮಾನದ ಉಳಿದ ವೀರಶೈವ ಕವಿಗಳಲ್ಲಿ ಮಗ್ಗೆಯ ಮಾಯಿದೇವ, ಗುರುಬಸವ, ನಿಜಗುಣಶಿವಯೋಗಿ ಇವರು ಮುಖ್ಯರು. ಮಗ್ಗೆಯ ಮಾಯಿದೇವ ನಾನಾ ಛಂದಸ್ಸಿನಲ್ಲಿ ಹಲವಾರು ಗ್ರಂಥಗಳನ್ನು ರಚಿಸಿರುವನೆಂದು ತಿಳಿದುಬಂದಿದೆಯಾದರೂ ಈಗ ಉಪಲಬ್ಧವಾಗಿರುವುದು ಮೂರು ಶತಕಗಳು ಮಾತ್ರ. ಗುರುಬಸವ (ಸು.1430) ಕವಿಯೂ ಗುರುಶಿಷ್ಯಸಂವಾದ ರೂಪದಲ್ಲಿರುವ ಕೆಲವು ವೇದಾಂತ ಗ್ರಂಥಗಳನ್ನು ಷಟ್ಪದಿಗಳಲ್ಲಿ ರಚಿಸಿದ್ದಾನೆ. ನಿಜಗುಣಶಿವಯೋಗಿಯ ಗ್ರಂಥಗಳು ವಸ್ತುರೀತಿಗಳಲ್ಲಿ ವೈವಿಧ್ಯಮಯವಾಗಿವೆ. ತ್ರಿಪದಿ, ಸಾಂಗತ್ಯ, ರಗಳೆ, ಹಾಡು, ಗದ್ಯಗಳಲ್ಲಿ ಈತನ ಆಧ್ಯಾತ್ಮಿಕ ಜ್ಞಾನ ಹೊರಹೊಮ್ಮಿದೆ. ಈತನ ಗ್ರಂಥಗಳಲ್ಲೆಲ್ಲ ವಿವೇಕಚಿಂತಾಮಣಿ ವಿಶ್ವಕೋಶದ ಮಾದರಿಯಲ್ಲಿರುವ ಅತ್ಯಮೂಲ್ಯವಾದ ಗ್ರಂಥ. ಈತನ ಸಮಕಾಲೀನನಾದ ಮುಪ್ಪಿನ ಷಡಕ್ಷರಿಯ (ಸು.1500) ಸಂಬೋಧನಸಾರದಲ್ಲಿರುವ ಹಾಡುಗಳು ಸುಂದರವಾದ ಭಾವಗೀತೆಗಳಾಗಿದ್ದು ಧರ್ಮಸಮನ್ವಯದಿಂದ ಕೂಡಿದವುಗಳಾಗಿವೆ. 16ನೆಯ ಶತಮಾನದ ವೀರಶೈವ ಕವಿಗಳಲ್ಲಿ ಗುಬ್ಬಿಯ ಮಲ್ಲಣಾರ್ಯನ ಭಾವಚಿಂತಾರತ್ನ ಭಕ್ತಿರಸ ಭರಿತವಾಗಿದ್ದು ಪ್ರೌಢವಾಗಿದೆ.

ಈ ಕಾಲದಲ್ಲಿ ರಚಿತವಾದ ಸಾಂಗತ್ಯಗ್ರಂಥಗಳಲ್ಲಿ ನಂಜುಂಡಕವಿಯ (ಸು.1525) ರಾಮನಾಥ ಚರಿತೆ ಅಥವಾ ಕುಮಾರರಾಮನ ಸಾಂಗತ್ಯ ಒಂದು ವಿಶಿಷ್ಟ ಐತಿಹಾಸಿಕ ಕಾವ್ಯ. ದೆಹಲಿಯ ಸುಲ್ತಾನನಾದ ಮಹಮ್ಮದ್ ಬಿನ್ ತುಗಲಕನ ಸೈನ್ಯದೊಡನೆ ಹೋರಾಡಿ ಮಡಿದ ದುರಂತ ವೀರನೊಬ್ಬನ ಕಥೆ ಇದರ ವಸ್ತು. ಒಬ್ಬ ಸಾಮಾನ್ಯ ವ್ಯಕ್ತಿಯನ್ನು (ಐತಿಹಾಸಿಕ ವೀರನನ್ನು) ಕುರಿತು ಕಾವ್ಯರಚನೆಯಾದುದು ಇದೇ ಮೊದಲು. ಕವಿಯ ವರ್ಣನೆಗಳು ಮನೋಹರವಾಗಿದ್ದು ಅಂದಿನ ಇತಿಹಾಸದ ಮೇಲೂ ಜನಜೀವನದ ಮೇಲೂ ಬೆಳಕನ್ನು ಚೆಲ್ಲುತ್ತವೆ. ಪಾಂಚಾಳಗಂಗನ (ಸು.1650) ಚನ್ನರಾಮನ ಸಾಂಗತ್ಯ ನಂಜುಂಡನ ಕಾವ್ಯಕ್ಕಿಂತ ಐತಿಹಾಸಿಕ ದೃಷ್ಟಿಯಿಂದ ಹೆಚ್ಚು ವಾಸ್ತವಿಕವಾಗಿಯೂ ಆತ್ಮೀಯವಾಗಿಯೂ ಇದೆ. ಆದರೆ ಕಾವ್ಯಶಕ್ತಿಯಲ್ಲಿ ನಂಜುಂಡನದೇ ಮೇಲುಗೈ.

16ನೆಯ ಶತಮಾನದ ಕವಿಗಳಲ್ಲಿ ಚೇರಮಾಂಕ, ವೀರಭದ್ರ ಕವಿ, ಗುರುಲಿಂಗವಿಭು, ಕಿಕ್ಕೇರಿ ಆರಾಧ್ಯ ನಂಜುಂಡ, ಶಾಂತೀಶ, ಅದೃಶ್ಯಕವಿ, ವಿರೂಪಾಕ್ಷ ಪಂಡಿತ - ಇವರು ಮುಖ್ಯರು. ಕಿಕ್ಕೇರಿ ಆರಾಧ್ಯ ನಂಜುಂಡನ ಭೈರವೇಶ್ವರ ಕಾವ್ಯದ ಕಥಾಮಣಿಸೂತ್ರರತ್ನಾಕರ 127 ಸಾಂಗತ್ಯ ಪದ್ಯಗಳ ಚಿಕ್ಕ ಕಾವ್ಯ. ವೀರಶೈವ ಪುರಾಣವೊಂದನ್ನು ಸಾಂಗತ್ಯದಲ್ಲಿ ಬರೆದ ಕವಿಗಳಲ್ಲಿ ಈತ ಅಗ್ರಗಣ್ಯ. ಕಾವ್ಯದೃಷ್ಟಿಗಿಂತಲೂ ಪುರಾಣ ದೃಷ್ಟಿಯಿಂದ ಇದಕ್ಕೆ ಮಹತ್ತ್ವ ಹೆಚ್ಚು. ಶಾಂತೇಶ ಭಾಮಿನೀಷಟ್ಪದಿಯಲ್ಲಿ ಸಿದ್ಧೇಶ್ವರ ಪುರಾಣವನ್ನು ಬರೆದಿದ್ದಾನೆ. ಅದೃಶ್ಯಕವಿಯ ಪ್ರೌಢರಾಯನ ಕಾವ್ಯ ಹಲವು ಶಿವಶರಣರ ಕಥೆಗಳನ್ನು ಒಳಗೊಂಡಿದೆ. ಪ್ರೌಢರಾಯನ ಕಾಲದ ಸಾಹಿತ್ಯೇತಿಹಾಸದ ಮೇಲೆ ಇಲ್ಲಿ ಸಾಕಷ್ಟು ಬೆಳಕು ಬಿದ್ದಿದೆ. ಈ ಶತಮಾನದ ಕವಿಗಳಲ್ಲಿ ಕಡೆಯವನಾದ ವಿರೂಪಾಕ್ಷಪಂಡಿತ ವಾರ್ಧಕಷಟ್ಪದಿಯಲ್ಲಿ ರಚಿಸಿರುವ ಚೆನ್ನಬಸವಪುರಾಣ ಹಲವು ದೃಷ್ಟಿಗಳಿಂದ ಗಮನಾರ್ಹವಾದುದು. ಇದು ಬರಿಯ ಚೆನ್ನಬಸವಣ್ಣನ ಜೀವನ ಚರಿತ್ರೆಯನ್ನಲ್ಲದೆ, ಹಲವಾರು ಶರಣರ ಕಥೆಗಳನ್ನೂ ವೀರಶೈವಧರ್ಮದ ಆಚಾರಗಳನ್ನೂ ಒಳಗೊಂಡಿದೆ. ವೀರಶೈವ ಪುರಾತನರ ಮತ್ತು ಕವಿಗಳ ಕಾಲವನ್ನು ನಿರ್ಣಯಿಸುವುದಕ್ಕೆ ಈ ಗ್ರಂಥ ಬಹು ಉಪಯುಕ್ತವಾಗಿದೆ. 17ನೆಯ ಶತಮಾನದಲ್ಲಿ ಸಿದ್ಧನಂಜೇಶ (ಸು.1650), ಷಡಕ್ಷರದೇವ (ಸು.1655), ಸರ್ವಜ್ಞ (ಸು.1700) ಎಂಬ ಮೂವರು ದೊಡ್ಡಕವಿಗಳು ಕಂಡುಬರುತ್ತಾರೆ. ಸಿದ್ಧನಂಜೇಶನ ರಾಘವಾಂಕಚಾರಿತ್ರ, ಗುರುರಾಜಚಾರಿತ್ರಗಳು ವಾರ್ಧಕಷಟ್ಪದಿಯಲ್ಲಿವೆ. ಇವುಗಳಲ್ಲಿ ಕಾವ್ಯಾಂಶಕ್ಕಿಂತ ವೀರಶೈವ ಧರ್ಮಬೋಧನೆಯೇ ಹೆಚ್ಚಾಗಿದೆ. ಕವಿಯ ಕಾವ್ಯಗಳೆರಡೂ ಸಾಹಿತ್ಯ ಚರಿತ್ರೆಗೆ ತುಂಬ ಸಹಾಯಕವಾಗಿವೆ. ಹಲವಾರು ಕವಿಗಳು ಇಲ್ಲಿ ಸ್ತುತ್ಯರಾಗಿರುವುದರಿಂದ ಕವಿಕಾಲ ನಿರ್ಧಾರಕ್ಕೆ ಈ ಕಾವ್ಯಗಳು ಒಂದು ಗಡಿಕಲ್ಲನ್ನು ಒದಗಿಸಿಕೊಟ್ಟಿವೆ.

ಷಡಕ್ಷರದೇವ ಬಳಕೆ ತಪ್ಪಿಹೋಗಿದ್ದ ಚಂಪೂವನ್ನು ಮತ್ತೆ ಬಳಕೆ ಮಾಡಿ ಅದಕ್ಕೆ ಹೊಸ ಶಕ್ತಿಯನ್ನು ತಂದುಕೊಟ್ಟವನು. ಈತ ಕನ್ನಡ ಸಂಸ್ಕೃತಗಳೆರಡರಲ್ಲಿಯೂ ಕಾವ್ಯರಚನೆ ಮಾಡಿದ್ದಾನೆ. ಈತನ ಕೃತಿಗಳಲ್ಲಿ ರಾಜಶೇಖರವಿಲಾಸ ಒಂದು ಉತ್ಕೃಷ್ಟಕೃತಿ. ವಚನಸಾಹಿತ್ಯದ ಬಗ್ಗೆ ಹೇಳುವಾಗ ಸರ್ವಜ್ಞ ಅದ್ವೀತಿಯನಾಗಿ ನಿಲ್ಲುತ್ತಾನೆ. ಆಡುಭಾಷೆಯನ್ನು ಬಳಸಿಕೊಂಡು ವಚನ ರಚನೆ ಮಾಡಿ ತ್ರಿಪದಿ ಛಂದಸ್ಸಿಗೆ ಹೆಚ್ಚಿನ ಪ್ರಸಿದ್ಧಿ ದೊರಕೊಳ್ಳುವಂತಾದುದು ಈತನಿಂದ. ಈತನ ಪದ್ಯಗಳಲ್ಲಿ ಕಾಣಬರುವ ವಸ್ತುವಿಪುಲತೆ, ಸರಳತೆ, ಸೌಲಭ್ಯಗಳಂತೆಯೆ ಈತನ ವಾಗ್ಧಾರೆ, ಅಪಾರ ಜ್ಞಾನ, ನಿಶಿತಮತಿಗಳು ಅದ್ವಿತೀಯವಾದುವು.

ಕುಮಾರವ್ಯಾಸಯುಗದ ವೀರಶೈವ ಕವಿಗಳಲ್ಲಿ ಬೊಂಬೆಯ ಲಕ್ಕನ ಹರಿಶ್ಚಂದ್ರ ಸಾಂಗತ್ಯ, ಓದುವಗಿರಿಯನ (ಸು.1525) ಸಾನಂದಗಣೇಶ ಸಾಂಗತ್ಯ, ಹರಿಶ್ಚಂದ್ರ ಸಾಂಗತ್ಯ, ಚನ್ನಬಸವಾಂಕನ ಮಹಾದೇವಿಯಕ್ಕನ ಪುರಾಣ, ಅಣ್ಣಾಜಿಯ (17ನೆಯ ಶತಮಾನ) ಸೌಂದರ್ಯವಿಳಾಸ, ಉತ್ತರದೇಶದ ಬಸವಲಿಂಗನ (ಸು.1600) ಬಸವೇಶ್ವರ ಪುರಾಣದ ಕಥಾಸಾಗರ, ಭೈರವೇಶ್ವರ ಕಾವ್ಯದ ಕಥಾಸಾಗರ ಮತ್ತು ಉಚಿತ ಕಥೆಗಳು, ಹರೀಶ್ವರ ಕವಿಯ (ಸು.1606) ಪ್ರಭುದೇವರ ಪುರಾಣ, ಚನ್ನಣ್ಣನ (ಸು.1650) ವೀರೇಶ್ವರ ಚರಿತೆ ಇವು ಗಮನಾರ್ಹವಾಗಿವೆ. ನರಹರಿತೀರ್ಥರ ಅನಂತರ ಸುಮಾರು ಒಂದು ಶತಮಾನಕ್ಕೂ ಹೆಚ್ಚು ಕಾಲ ಸ್ಥಗಿತಗೊಂಡಿದ್ದ ದಾಸಪಂಥ 15ನೆಯ ಶತಮಾನದಲ್ಲಿ ಮತ್ತೆ ಮೇಲೆದ್ದು ದಾಂಗುಡಿಯಿಟ್ಟು, ಹಬ್ಬಿ ಹರಡಿತು. ಅದನ್ನು ಮುಂದುವರಿಸಿದ ಕೀರ್ತಿ ಶ್ರೀಪಾದರಾಜರದು (ಸು.1450). ಇವರ ಕೀರ್ತನಾಬಿಮಾನ ಸ್ತುತ್ಯವಾದುದು. ಇವರು ಕನ್ನಡ ಗೀತೆಗಳಿಗೆ ಆಧ್ಯಾತ್ಮಿಕ ತತ್ತ್ವಗಳ ಸ್ಥಾನಮಾನಗಳನ್ನು ಕಲ್ಪಿಸಿದರು. ಹಾಡುವುದರ ಜೊತೆಗೆ ನರ್ತನವನ್ನೂ ಅಳವಡಿಸಿದವರು ಇವರೇ. ನರ್ತನಕ್ಕಾಗಿಯೆ ವಿಶಿಷ್ಟವಾದ ಕೃತಿಗಳನ್ನು ಸಹ ಇವರು ರಚಿಸಿದ್ದಾರೆ. ಇವರ ಶಿಷ್ಯ ವ್ಯಾಸರಾಯರು ಮಠದ ಸ್ವಾಮಿಯಾಗಿದ್ದು ರಾಜಗುರುವಾಗಿದ್ದು ಅನೇಕ ಸಂಸ್ಕೃತ ಗ್ರಂಥಗಳನ್ನೂ ನೂರಾರು ಕನ್ನಡ ಕೀರ್ತನೆಗಳನ್ನೂ ರಚಿಸಿದ್ದಾರೆ. ಕೊಳಲನೂದುವ ಚದುರನಾರೆ ಪೇಳಮ್ಮಯ್ಯ ಎಂಬ ಸುಪ್ರಸಿದ್ಧ ಕೀರ್ತನೆ ಇವರದೇ. ಮುಂದೆ 16ನೆಯ ಶತಮಾನದಲ್ಲಿ ವ್ಯಾಸರಾಯರ ನೇತೃತ್ವದಲ್ಲಿ ಪುರಂದರದಾಸರು, ಕನಕದಾಸರು, ವಾದಿರಾಜರು ಮೊದಲಾದವರು ದಾಸವಾಙ್ಮಯವನ್ನು ಉಳಿಸಿ ಬೆಳೆಸಿದರು. ಪುರಂದರದಾಸ ಕನಕದಾಸರಂತೂ ದಾಸವಾಙ್ಮಯದಲ್ಲಿ ಅದ್ವಿತೀಯರಾಗಿ ನಿಂತರು. ಪುರಂದರದಾಸರ ಲೋಕಾನುಭವ ಆಳವಾದುದು, ವಿಸ್ತಾರವಾದುದು. ಇವರ ಕೀರ್ತನೆಗಳಲ್ಲಿ ವೈವಿಧ್ಯವಿದ್ದು ಅವು ರಸಸ್ಯಂದಿಯಾಗಿವೆ. ಸಂಗೀತಶಾಸ್ತ್ರಕ್ಕೆ ಇವರು ನೀಡಿರುವ ಕೊಡುಗೆಯೂ ಅಸಾಮಾನ್ಯವಾದುದು. ಪಿಳ್ಳಾರಿಗೀತಗಳೆಂದು ಪ್ರಸಿದ್ಧವಾಗಿರುವ ಕೀರ್ತನೆಗಳು ಇವರವೇ. ಸಂಗೀತಕ್ಕೆ ಭಕ್ತಿಯುಕ್ತವಾದ ಸಾಹಿತ್ಯವನ್ನು ಒದಗಿಸಿದುದಲ್ಲದೆ ಅದಕ್ಕೆ ಕರ್ಣಾಟಕ ಸಂಗೀತ ಎಂಬ ಕೀರ್ತಿಯ ಕೋಡನ್ನೂ ಇವರು ಮೂಡಿಸಿದರು. ಅದ್ವಿತೀಯ ಕೀರ್ತನಕಾರರಾದ ತ್ಯಾಗರಾಜರಿಗೆ ಪ್ರೇರಣೆ ಪೋಷಣೆಗಳನ್ನು ನೀಡಿದ ಕೀರ್ತಿಯೂ ಇವರದೇ. ಇವರ ಸಮಕಾಲೀನರೇ ಆಗಿದ್ದ ಕನಕದಾಸರು ಹಲವು ಕೀರ್ತನೆಗಳನ್ನು ಮಾತ್ರವೇ ಅಲ್ಲದೆ, ಮೋಹನ ತರಂಗಿಣಿ (ಸಾಂಗತ್ಯ), ರಾಮಧಾನ್ಯ ಚರಿತ್ರೆ (ಭಾಮಿನೀಷಟ್ಪದಿ), ನಳಚರಿತ್ರೆ (ಭಾಮಿನೀಷಟ್ಪದಿ), ಹರಿಭಕ್ತಿಸಾರ (ಭಾಮಿನೀ ಷಟ್ಪದಿ) ಎಂಬ ಕಾವ್ಯಗಳನ್ನು ರಚಿಸಿದ್ದಾರೆ. ಇವರ ಕಾವ್ಯಗಳ ನಿರೂಪಣೆ ತಿಳಿಯಾಗಿ, ಸರಳವಾಗಿ, ಹೃದಯಸ್ಪರ್ಶಿಯಾಗಿದೆ; ಹಿತಮಿತವಾದ ವರ್ಣನೆಗಳಿಂದ ಕೂಡಿ ಸರಸವಾಗಿದೆ.

ವಾದಿರಾಜರು ಹಯವದನ ಎಂಬ ಅಂಕಿತದಿಂದ ಕೀರ್ತನೆಗಳನ್ನು ರಚಿಸಿರುವರಲ್ಲದೆ ವೈಕುಂಠವರ್ಣನೆ, ಸ್ವಪ್ನಗದ್ಯ, ಲಕ್ಷ್ಮಿಯ ಶೋಭಾನೆ, ಭಾರತತಾತ್ಪರ್ಯನಿರ್ಣಯಟೀಕೆ ಮುಂತಾದ ಗ್ರಂಥಗಳನ್ನೂ ರಚಿಸಿದ್ದಾರೆ. ಇವೆಲ್ಲದರ ಹೆಗ್ಗುರಿಯೂ ದ್ವೈತಮತ ತತ್ತ್ವನಿರೂಪಣೆಯೇ. ವಾದಿರಾಜರು ಮೇಧಾವಿಯಾದ ತಾರ್ಕಿಕರು. ಇವರ ಕವಿತೆಯೂ ತರ್ಕಬದ್ಧವಾದುದೇ ಇವರ ಸಮಕಾಲೀನರಾದ ವೈಕುಂಠದಾಸರು ಶ್ರೀವೈಷ್ಣವರಾದರೂ ದಾಸಪಂಥಕ್ಕೆ ಸೇರಿ ವೈಕುಂಠಕೇಶವ ಎಂಬ ಅಂಕಿತದಿಂದ ಹಲವು ಹಾಡುಗಳನ್ನು ಬರೆದಿದ್ದಾರೆ. ಇಲ್ಲಿಂದ ಮುಂದೆ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಪ್ರತಿಭಾಶಾಲಿಗಳಾಗಿ ಅಪರೋಕ್ಷ ಜ್ಞಾನಿಗಳಾದ ದಾಸರಾರೂ ಕಾಣಿಸಿಕೊಳ್ಳುವುದಿಲ್ಲ. ಮಂತ್ರಾಲಯದ ರಾಯರು ಎಂದು ಪ್ರಸಿದ್ಧರಾಗಿರುವ ರಾಘವೇಂದ್ರತೀರ್ಥರೂ ಪ್ರಸನ್ನ ವೆಂಕಟದಾಸ, ವಿಜಯದಾಸ, ಗೋಪಾಲದಾಸ ಮೊದಲಾದವರೂ ದಾಸಸಾಹಿತ್ಯದ ಹೊಳೆ ತಡೆಯಿಲ್ಲದೆ ಹರಿದುಕೊಂಡು ಹೋಗಲು ಸಹಾಯಕರಾದರು. ಈ ಹರಿದಾಸರ ಸಾಲಿನಲ್ಲಿ ಕಾಣಬರುವ ಕಡೆಯ ಹಿರಿಯ ಹೆಸರೆಂದರೆ ಜಗನ್ನಾಥದಾಸರದು (ಸು.1728-1809). ಇವರು ಕೀರ್ತನೆಗಳನ್ನಲ್ಲದೆ ಹರಿಕಥಾಮೃತಸಾರವೆಂಬ ಷಟ್ಪದಿ ಗ್ರಂಥವನ್ನು ಬರೆದಿದ್ದಾರೆ. ಹರಿದಾಸ ಕೀರ್ತನೆಯ ರಚನೆ ಅಂದಿನಿಂದ ಇಂದಿನವರೆಗೆ ಬಂದು ಇಂದು ಕೂಡ ವಿಚ್ಫಿತ್ತಿಯಿಲ್ಲದೆ ಹರಿದುಕೊಂಡು ಹೋಗುತ್ತಿದೆ. ಕುಮಾರವ್ಯಾಸ ಯುಗದ ವೈದಿಕ ಕವಿಗಳಲ್ಲಿ ಕುಮಾರವ್ಯಾಸನನ್ನು ಬಿಟ್ಟರೆ ನಮಗೆ ಕಾಣಬರುವ ಪ್ರಮುಖ ಕವಿ ಕುಮಾರವಾಲ್ಮೀಕಿಯೊಬ್ಬನೆ. ಈತ ರಾಮಾಯಣ ಕಥೆಯನ್ನು ಸರಳವಾದ ಭಾಷೆಯಲ್ಲಿ ನಿರರ್ಗಳವಾಗಿ ನಿರೂಪಿಸಿದ್ದಾನೆ. ಈತ ಕುಮಾರವ್ಯಾಸನಿಂದ ಸಾಕಷ್ಟು ಪ್ರಭಾವಿತನಾಗಿದ್ದಾನೆ. ಆದರೆ ಕುಮಾರವ್ಯಾಸನ ದರ್ಶನ, ಧ್ವನಿಗಳು ಇವನಲ್ಲಿ ಕಂಡುಬರುವುದಿಲ್ಲ. ಭಾಸ್ಕರ ಕವಿ (ಸು.1424) ಜೀವಂಧರಚರಿತೆ ಎಂಬ ಗ್ರಂಥವನ್ನು ಬರೆದಿದ್ದಾನೆ. ಈತನ ಕಾವ್ಯದ ಮೇಲೆ ಕುಮಾರವ್ಯಾಸನ ಪ್ರಭಾವ ನಿಚ್ಚಳವಾಗಿ ಬಿದ್ದಿದೆ. ಕಲ್ಯಾಣಕೀರ್ತಿ (ಸು.1439) ಎಂಬುವನು ಜ್ಞಾನಚಂದ್ರಾಭ್ಯುದಯ, ಕಾಮನ ಕಥೆ ಮೊದಲಾದ ಗ್ರಂಥಗಳನ್ನು ದೇಶೀ ಛಂದಸ್ಸಿನಲ್ಲಿ ರಚಿಸಿದ್ದಾನೆ. ವಿಜಯನಗರದ ಕೃಷ್ಣದೇವರಾಯನ ಆಶ್ರಯದಲ್ಲಿದ್ದ ತಿಮ್ಮಣ್ಣಕವಿ (ಸು.1550) ಕುಮಾರವ್ಯಾಸ ಬರೆಯದೇ ಬಿಟ್ಟ ವ್ಯಾಸಭಾರತದ ಭಾಗವನ್ನು ಕೃಷ್ಣರಾಯ ಭಾರತ ಕಥಾಮಂಜರೀ ಎಂಬ ಹೆಸರಿನಿಂದ ಬರೆದಿದ್ದಾನೆ. ಷಟ್ಪದಿಯಲ್ಲಿ ಬರೆದಿದ್ದರೂ ಕುಮಾರವ್ಯಾಸನ ಕಾವ್ಯದಲ್ಲಿ ಕಂಡುಬರುವ ಎತ್ತರ ಬಿತ್ತರಗಳು ಇವನಲ್ಲಿ ಕಂಡುಬರುವುದಿಲ್ಲ.

ಷಟ್ಪದಿ ಕಾವ್ಯಗಳಲ್ಲಿ ಲಕ್ಷ್ಮೀಶನ (ಸು.1550) ಜೈಮಿನಿ ಭಾರತಕ್ಕೆ ಒಂದು ಪ್ರಮುಖ ಸ್ಥಾನ ಸಂದಿದೆ. ಈತ ಸಂಸ್ಕೃತದ ಜೈಮಿನಿ ಭಾರತದ ಕಥೆಯನ್ನು ಕನ್ನಡದಲ್ಲಿ, ವಾರ್ಧಕ ಷಟ್ಪದಿಯಲ್ಲಿ ಸುಂದರವಾಗಿ ಬರೆದಿದ್ದಾನೆ. ಈತನ ಕಾವ್ಯ ನವರಸಭರಿತವಾಗಿದ್ದು ಕಥನಕಲೆಗೆ, ವಾರ್ಧಕ ಷಟ್ಪದಿಯ ಉತ್ಕೃಷ್ಟ ಶೈಲಿಗೆ ಉದಾಹರಣೆಯಾಗಿದೆ. ಈತನ ವರ್ಣನೆಗಳಲ್ಲಿ ಕಣ್ಣಿಗೆ ಕಟ್ಟಬಲ್ಲ ಚಿತ್ರಕಾರನ ಕಲಾಕುಶಲತೆಯ ಜೊತೆಗೆ ಕಿವಿಗೆ ಹಿತವನ್ನುತರುವ ಸಂಗೀತಗಾರನ ಸ್ವರಜ್ಞಾನವೂ ಸೇರಿದೆ. ಮನೋಜ್ಞನವಾದ ಉಪಮೆಗಳ ಬಳಕೆಯಿಂದ ಈತ ಉಪಮಾಲೋಲನೆಂಬ ಕೀರ್ತಿಗೆ ಪಾತ್ರನಾಗಿದ್ದಾನೆ.

16ನೆಯ ಶತಮಾನದ ಉಳಿದ ಕವಿಗಳೆಂದರೆ ಶ್ರೀರಂಗಮಾಹಾತ್ಮ್ಯವನ್ನು ಬರೆದ ರಂಗಾಚಾರ್ಯ (ಸು.1570), ನಂದಿಮಾಹಾತ್ಮ್ಯ ಮತ್ತು ಚಿತ್ರಭಾರತ ಎಂಬ ಎರಡು ಬೃಹದ್ಗ್ರಂಥಗಳನ್ನು ರಚಿಸಿರುವ ಗೋವಿಂದಕವಿ, ಶಿವಗೀತೆಯನ್ನು ವಾರ್ಧಕ ಷಟ್ಟದಿಯಲ್ಲಿ ಬರೆದ ತಿರುಮಲಭಟ್ಟ, ಅಕ್ರೂರಚರಿತೆಯನ್ನು ಭಾಮಿನೀಷಟ್ಪದಿಯಲ್ಲಿ ಬರೆದ ಸೋಮನಾಥಕವಿ (ಸು.1600). ರಂಗಾಚಾರ್ಯ ಕನ್ನಡದಲ್ಲಿ ಕಾವ್ಯರಚನೆ ಮಾಡಹೊರಟ ಶ್ರೀವೈಷ್ಣವರಲ್ಲಿ ಮೊದಲನೆಯವನು. ಗೋವಿಂದನ ಕಾವ್ಯಬಂಧ ಪ್ರೌಢ, ಬಿಗಿ, ಬಿರುಸು. ಈತನ ಚಿತ್ರಭಾರತ ದೈವಭಕ್ತಿಯಿಂದ ತುಂಬಿದೆ. ತಿರುಮಲಭಟ್ಟನ ಕವಿತೆ ಪ್ರಸಾದಗುಣದಿಂದ ತುಂಬಿದೆ. ಸೋಮನಾಥನ ಅಕ್ರೂರ ಚರಿತೆಯಲ್ಲಿ ಅಕ್ರೂರನ ಕಥೆಗಿಂತ ಶ್ರೀಕೃಷ್ಣನ ಕಥೆಯೇ ಪ್ರಮುಖವಾಗಿದೆ. ಕಾವ್ಯವನ್ನು ಮನೋಹರವಾಗಿ ಬರೆಯಲು ಸಾಕಷ್ಟು ರಸಸ್ಥಾನಗಳಿದ್ದರೂ ಅದಕ್ಕೆ ಅಗತ್ಯವಾದ ಪ್ರತಿಭೆ ಕಲ್ಪನಾ ಶಕ್ತಿಗಳು ಈ ಕವಿಗಳಲ್ಲಿ ಇಲ್ಲ.

17ನೆಯ ಶತಮಾನದ ವೈದಿಕ ಕವಿಗಳಲ್ಲಿ ಭಾಮಿನೀ ಷಟ್ಪದಿಯಲ್ಲಿ ಪ್ರಹ್ಲಾದ ಚರಿತೆಯನ್ನು ಬರೆದ ನರಹರಿ (ಸು.1650), ವೆಂಕಟೇಶ್ವರ ಪ್ರಬಂಧವನ್ನು ಚಂಪೂವಿನಲ್ಲಿ ಬರೆದ ವೆಂಕಕವಿ (ಸು.1650), ಭಗವದ್ಗೀತೆಯನ್ನು ವಾಸುದೇವ ಕಥಾಮೃತ ಎಂಬ ಹೆಸರಿನಿಂದ ಭಾಮಿನೀ ಷಟ್ಪದಿಯಲ್ಲಿ ಬರೆದ ನಾಗರಸ ಮುಖ್ಯರು. ಮಹಲಿಂಗರಂಗ (ಸು.1675) ಇದೇ ಅವದಿsಯಲ್ಲಿ ಗ್ರಂಥರಚನೆ ಮಾಡಿದ ಇನ್ನೊಬ್ಬ ಪ್ರಮುಖ ಕವಿ. ಇವನ ಅನುಭವಾಮೃತ ಭಾಮಿನೀಷಟ್ಪದಿಯಲ್ಲಿದೆ. ಇದರಲ್ಲಿ ಅಖಿಲ ವೇದಾಂತಾರ್ಥವನ್ನು ಸಂಗ್ರಹಿಸಿಕೊಟ್ಟಿದ್ದಾನೆ. ಈತನ ಕನ್ನಡಾಬಿಮಾನ ಸ್ತೋತ್ರಾರ್ಹವಾದುದು. ಸುಲಿದ ಬಾಳೆಯ ಹಣ್ಣಿನಂದದಿ ಅತ್ಯಂತ ಸುಲಭವಾದ, ಮನೋಹರವಾದ ಕನ್ನಡದಲ್ಲಿ ಆತ್ಮಜ್ಞಾನವನ್ನು ಪಡೆದುಕೊಂಡರೆ ಸಾಲದೇನು ಸಂಸ್ಕೃತದಲ್ಲಿನ್ನೇನು ಎಂದು ಸವಾಲು ಹಾಕಿದ ಮಹಲಿಂಗರಂಗ ಒಳ್ಳೆಯ ಕವಿಹೃದಯವುಳ್ಳವನು. ವಸ್ತು ಮತ್ತು ನಿರೂಪಣೆ ಎರಡರಲ್ಲೂ ಕವಿಯು ಅಪೂರ್ವವಾದ ಪ್ರತಿಭೆಪಾಂಡಿತ್ಯಗಳನ್ನು ಮೆರೆದಿದ್ದಾನೆ. ಬಾಲಕೃಷ್ಣ ಬ್ರಹ್ಮಾನಂದ ಯೋಗಿ ಎಂಬುವರು ಈ ಕಾವ್ಯವನ್ನು ಸಂಸ್ಕೃತಕ್ಕೆ ಭಾಷಾಂತರಿಸಿದ್ದಾರೆ.

ಬೊಬ್ಬೂರು ರಂಗ (ಸು.1750) ಮತ್ತು ಚಿದಾನಂದಾವಧೂತ (ಸು.1750) ಹೆಸರಿಸಬೇಕಾದ ಮತ್ತಿಬ್ಬರು ಕವಿಗಳು. ಬೊಬ್ಬೂರು ರಂಗ ಭಾಮಿನೀಷಟ್ಪದಿಯಲ್ಲಿ ಅಂಬಿಕಾವಿಜಯವನ್ನೂ ವಾರ್ಧಕದಲ್ಲಿ ಪರಶುರಾಮ ರಾಮಾಯಣವನ್ನು ಬರೆದಿದ್ದಾನೆ. ಚಿದಾನಂದವಧೂತ ಜ್ಞಾನಸಿಂಧು ಎಂಬ ಗ್ರಂಥದಲ್ಲಿ ಅದ್ವೈತ ವೇದಾಂತವನ್ನು ಪ್ರತಿಪಾದಿಸಿದ್ದಾನೆ. ಈ ಗ್ರಂಥ ಮಹಲಿಂಗರಂಗನ ಅನುಭವಾಮೃತವನ್ನು ಬಹುಮಟ್ಟಿಗೆ ಅನುಸರಿಸಿರುವುದಲ್ಲದೆ ಅದರಂತೆಯೇ ಲಲಿತವಾಗಿದೆ. ಇದು ಭಾಮಿನೀ ಷಟ್ಪದಿಯಲ್ಲಿದೆ. ಈತ ಇನ್ನು ಅನೇಕ ಗ್ರಂಥಗಳನ್ನು ಬರೆದಿದ್ದಾನೆ. ಇದೇ ಅವದಿಯಲ್ಲಿ ಲಿಂಗಣ್ಣ ಕವಿ (ಸು.1750) ಚಂಪೂ ರೂಪದಲ್ಲಿ ಕೆಳದಿ ನೃಪವಿಜಯವನ್ನು ಬರೆದಿದ್ದಾನೆ. ಇದರಲ್ಲಿ ಕಾವ್ಯಾಂಶಕ್ಕಿಂತ ಚರಿತ್ರಾಂಶವೆ ಹೆಚ್ಚು.

ವಿಜಯನಗರ ಪತನಾನಂತರ ಮೈಸೂರೊಡೆಯರ ಕಾಲದಲ್ಲಿ ಸಾಹಿತ್ಯ ರಚನೆಗೆ ಹೆಚ್ಚಿನ ಆಶ್ರಯ ದೊರಕಿತು. ಈ ಕಾಲದಲ್ಲಿ ಹಳೆಯ ಚಂಪೂಶೈಲಿಯನ್ನೂ ಹಳಗನ್ನಡ ಗದ್ಯವನ್ನೂ ಪುನರುಜ್ಜೀವಿಸುವ ಕಾರ್ಯ ನಡೆಯಿತು. ರಾಜಒಡೆಯರ ಕಾಲದಲ್ಲಿ ಅವರ ದಂಡನಾಯಕನಾದ ತಿರುಮಲಾರ್ಯ ಕರ್ಣವೃತ್ತಾಂತ ಕಥೆಯನ್ನು ಸಾಂಗತ್ಯದಲ್ಲಿ ಬರೆದ. ರಾಜ ಒಡೆಯರ ಅನಂತರ ಪಟ್ಟಕ್ಕೆ ಬಂದ ಚಾಮರಾಜ ಒಡೆಯರು (1617-37) ಸ್ವತಃ ಕವಿಯಾಗಿದ್ದು ಚಾಮರಾಜೋಕ್ತಿ ವಿಳಾಸ, ಮಣಿಪ್ರಕಾಶ ಎಂಬೆರಡು ಗ್ರಂಥಗಳನ್ನು ಬರೆದಂತೆ ಪ್ರತೀತಿ. ಈ ರಾಜನ ಆಸ್ಥಾನದಲ್ಲಿದ್ದ ರಾಮಚಂದ್ರನೆಂಬ ಕವಿ ಶಾಲಿಹೋತ್ರನ ಅಶ್ವಶಾಸ್ತ್ರವನ್ನು ಗದ್ಯರೂಪದಲ್ಲಿ ಕನ್ನಡಕ್ಕೆ ಭಾಷಾಂತರಿಸಿದ. ರಾಜನ ಮತ್ತೊಬ್ಬ ಆಶ್ರಿತನಾದ ಪದ್ಮಣಪಂಡಿತ ಚಾಮರಾಜೀಯ ಎಂಬ ಹೆಸರಿನಿಂದ ಹಯಸಾರ ಸಮುಚ್ಚಯವನ್ನು ಕಂದದಲ್ಲಿ ಬರೆದಿದ್ದಾನೆ. ಕಂಠೀರವ ನರಸರಾಜ (1638-59) ಕವಿ, ಗಮಕಿ, ವಾದಿ, ವಾಗ್ಮಿಗಳಿಗೆ ಆಶ್ರಯದಾತನಾಗಿದ್ದ. ಈತನ ಆಸ್ಥಾನ ಕವಿಯಾದ ಭಾಸ್ಕರಕವಿ ಬೇಹಾರಗಣಿತವನ್ನು ರಚಿಸಿದ. ಮತ್ತೊಬ್ಬ ಕವಿ ಗೋವಿಂದವೈದ್ಯ ಕಂಠೀರವನರಸರಾಜ ವಿಜಯವನ್ನು ಸಾಂಗತ್ಯದಲ್ಲಿ ಬರೆದಿದ್ದಾನೆ. ಇದರಲ್ಲಿ ಕನ್ನಡ ಭಾಷೆಯ ಮೇಲೆ ಉರ್ದು ಭಾಷೆಯ ಪ್ರಭಾವ ಬಿದ್ದಿರುವುದನ್ನು ಕಾಣಬಹುದು.

ಚಿಕ್ಕದೇವರಾಜ ಒಡೆಯರ (1673-1704) ಕಾಲ ಮೈಸೂರಿನ ಇತಿಹಾಸದಲ್ಲಿ, ಒಡೆಯರ ಕಾಲದ ಸಾಹಿತ್ಯ ಚರಿತ್ರೆಯಲ್ಲಿ ಒಂದು ಸುವರ್ಣಯುಗ. ಸಂಗೀತ ಸಾಹಿತ್ಯಗಳೆರಡರಲ್ಲಿಯೂ ಅಪಾರವಾದ ಆದರ, ಅಬಿರುಚಿ, ಪರಿಶ್ರಮಗಳಿದ್ದ ಇವರು ಕನ್ನಡದಲ್ಲಿ ಚಿಕದೇವರಾಯ ಬಿನ್ನಪ, ಗೀತಗೋಪಾಲ, ಭಾರತ, ಭಾಗವತ, ಶೇಷಧರ್ಮ ಎಂಬ ಗ್ರಂಥಗಳನ್ನು ಬರೆದಿರುವರೆಂದು ಪ್ರತೀತಿ.

ಚಿಕ್ಕದೇವರಾಜ ಒಡೆಯರ ಆಶ್ರಯದಲ್ಲಿ ತಿರುಮಲಾರ್ಯ, ಚಿಕುಪಾಧ್ಯಾಯ, ಸಿಂಗರಾರ್ಯ, ತಿಮ್ಮಕವಿ, ಮಲ್ಲಿಕಾರ್ಜುನ, ವೇಣುಗೋಪಾಲ, ವರಪ್ರಸಾದ ಕವಿ, ಚಿದಾನಂದ, ಮಲ್ಲರಸ ಮೊದಲಾದವರು ಕಾವ್ಯರಚನೆ ಮಾಡಿದರು. ಇದೇ ಸಂದರ್ಭದಲ್ಲಿ ಹೊನ್ನಮ್ಮ, ಶೃಂಗಾರಮ್ಮ ಮೊದಲಾದ ಕಬ್ಬಿಗಿತ್ತಿಯರೂ ಸಾಹಿತ್ಯ ರಚನೆಯಲ್ಲಿ ಕೈಹಾಕಿದ್ದು ಗಮನಾರ್ಹವಾದ ಸಂಗತಿ. ತಿರುಮಲಾರ್ಯನು ಚಿಕದೇವರಾಜವಿಜಯ, ಚಿಕದೇವರಾಜ ವಂಶಾವಳಿ, ಚಿಕದೇವರಾಜಶತಕ, ಅಪ್ರತಿಮವೀರ ಚರಿತೆ ಎಂಬ ಗ್ರಂಥಗಳನ್ನು ಬರೆದಿದ್ದಾನೆ. ಅಪ್ರತಿಮವೀರ ಚರಿತೆ ನಾಲ್ಕು ಪ್ರಕರಣಗಳನ್ನುಳ್ಳ ಒಂದು ಅಲಂಕಾರ ಗ್ರಂಥ. ಚಿಕುಪಾಧ್ಯಾಯ ಚಿಕ್ಕದೇವರಾಜನ ಕರಣಿಕಾಗ್ರೇಸರನೂ ಮಂತ್ರಿಯೂ ಆಗಿದ್ದವನು. ಈತ ಗದ್ಯ ಪದ್ಯಗಳಲ್ಲಿ ವಿಪುಲ ಗ್ರಂಥರಚನೆ ಮಾಡಿದ್ದಾನೆ.ಈತನ ಕಾವ್ಯವಸ್ತುವಿನಲ್ಲಿ, ಛಂದಸ್ಸಿನಲ್ಲಿ ವೈವಿಧ್ಯ ಕಂಡುಬರುತ್ತದೆ. ಇವನ ಕೃತಿಗಳು ವೈಷ್ಣವ ಧರ್ಮವನ್ನು ಕುರಿತವು. ಈತನ ಗದ್ಯ ಮನೋಹರವಾಗಿದೆ. ಕನ್ನಡ ಗದ್ಯಚರಿತ್ರೆಯಲ್ಲಿ ಈತನಿಗೆ ಒಂದು ಪ್ರಮುಖಸ್ಥಾನ ಸಲ್ಲುತ್ತದೆ. ಸಿಂಗರಾರ್ಯ ಬರೆದಿರುವ ಮಿತ್ರವಿಂದಾಗೋವಿಂದ ಕನ್ನಡದ ಮೊಟ್ಟಮೊದಲ ನಾಟಕವೆಂಬ ಪ್ರಶಸ್ತಿಗೆ ಪಾತ್ರವಾಗಿದೆ. ರಾಜನ ಸಂಚಿಯ ಊಳಿಗದವಳಾಗಿದ್ದ ಹೊನ್ನಮ್ಮನ ಹದಿಬದೆಯ ಧರ್ಮ ಸರಳ ಸುಂದರವಾದ ಸಾಂಗತ್ಯಕಾವ್ಯ. ನೀತಿಬೋಧೆಯನ್ನು ಗುರಿಯಾಗಿಟ್ಟುಕೊಂಡು ಕಾವ್ಯರಚನೆಮಾಡಿದ ಕವಯಿತ್ರಿಯರಲ್ಲಿ ಈಕೆ ಅಗ್ರಗಣ್ಯಳಾಗಿದ್ದಾಳೆ. ಶೃಂಗಾರಮ್ಮನ ಪದ್ಮಿನೀಕಲ್ಯಾಣ ಸಾಂಗತ್ಯದಲ್ಲಿದೆ. ದೊಡ್ಡಕೃಷ್ಣರಾಜನ (1713-32) ಆಳಿಕೆಯಲ್ಲಿ ರಚಿತವಾದ ಶಾಸ್ತ್ರಗ್ರಂಥಗಳಲ್ಲಿ ಬಾಲವೈದ್ಯದ, ಚೆಲುವನ ಕನ್ನಡ ಲೀಲಾವತೀ ಎಂಬ ಗಣಿತಶಾಸ್ತ್ರ (ಕಂದ ಮತ್ತು ವಾರ್ಧಕ), ರತ್ನಶಾಸ್ತ್ರ ಷಟ್ಪದಿ ಪ್ರಮುಖವಾದವುಗಳು. ರಾಜನ ಪಟ್ಟಮಹಿಷಿಯಾದ ಚೆಲುವಾಂಬೆ ಎಂಬ ಕವಯಿತ್ರಿ ಇದೇ ಕಾಲದಲ್ಲಿ ವರನಂದೀ ಕಲ್ಯಾಣವನ್ನು ರಚಿಸಿದ್ದಾಳೆ. ಈಕೆಯ ಶೈಲಿ ಲಲಿತಮಧುರವಾಗಿದೆ.

ದೊಡ್ಡಕೃಷ್ಣರಾಜನ ಅನಂತರ ಕೆಲಕಾಲ ಮಂಕಾಗಿದ್ದ ಸಾಹಿತ್ಯರಚನೆ 19ನೆಯ ಶತಮಾನದ ಆದಿಭಾಗದಲ್ಲಿ ಮುಮ್ಮಡಿ ಕೃಷ್ಣರಾಜರ ಕಾಲದಲ್ಲಿ ಮತ್ತೆ ಪ್ರಜ್ಜ್ವಲಿಸಿತು. ಮುಮ್ಮಡಿ ಕೃಷ್ಮರಾಜ ಸ್ವತಃ ಕವಿಯಾಗಿದ್ದು ಅನೇಕ ಗ್ರಂಥಗಳನ್ನು ರಚಿಸಿದ್ದಾನೆ. ಈತನ ಆಶ್ರಯದಲ್ಲಿದ್ದ ಅನೇಕ ಕವಿಗಳು ಸಂಸ್ಕೃತ ಕನ್ನಡಗಳಲ್ಲಿ ನೂರಾರು ಗ್ರಂಥಗಳನ್ನು ಬರೆದಿದ್ದಾರೆ. ಅಂದಿನ ಕೃತಿಗಳಲ್ಲಿ ಕೆಂಪುನಾರಾಯಣನ ಮುದ್ರಾಮಂಜೂಷ ಎಂಬ ಗದ್ಯಕೃತಿ ಅತ್ಯಂತ ಜನಪ್ರಿಯವಾಗಿದ್ದು ಗಮನಾರ್ಹವಾದುದಾಗಿದೆ. ನಡುಗನ್ನಡ ಹೊಸಗನ್ನಡವಾಗಿ ಮಾರ್ಪಾಟಾಗುತ್ತಿದ್ದ ಸಂಕ್ರಮಣಕಾಲವನ್ನು ಈ ಕೃತಿ ಪ್ರತಿನಿದಿಸುತ್ತದೆ. ಈ ಕೃತಿಯ ಗದ್ಯ ಪ್ರೌಢವಾದರೂ ಲಲಿತವಾಗಿ ಶಕ್ತಿಯುತವಾಗಿ ಸಾರವತ್ತಾಗಿದೆ. ಗದ್ಯಸಾಹಿತ್ಯದ ಬೆಳೆವಣಿಗೆಯಲ್ಲಿ ಆಧುನಿಕ ಸಾಹಿತ್ಯದ ಹಿಂದಿನ ಮಜಲೇ ಮುದ್ರಾಮಂಜೂಷ ವೆಂದು ಹೇಳಬಹುದು.

ಇದೇ ಕಾಲದಲ್ಲಿ ಅಳಿಯ ಲಿಂಗರಾಜ ಸು. 50 ಗ್ರಂಥಗಳನ್ನು ಬರೆದಿದ್ದಾನೆ. ವಿವಿಧ ಛಂದಸ್ಸಿನಲ್ಲಿರುವ ಈ ಗ್ರಂಥಗಳು ಕವಿಯ ಸರ್ವತೋಮುಖವಾದ ಪ್ರತಿಭೆಗೆ ಸಾಕ್ಷಿಯಾಗಿವೆ. ಈತನ ನರಪತಿಚರಿತೆ ಒಂದು ಅಲಂಕಾರ ಗ್ರಂಥ. ಮುಮ್ಮಡಿ ಕೃಷ್ಣರಾಜ ಒಡೆಯರ ಅನಂತರ ಪಟ್ಟಕ್ಕೆ ಬಂದ ಚಾಮರಾಜರ ಕಾಲದಲ್ಲಿ ಕನ್ನಡ ಸಾಹಿತ್ಯದ ಆಧುನಿಕ ಯುಗ ಪ್ರಾರಂಭವಾಯಿತು. ಕುಮಾರವ್ಯಾಸ ಯುಗದ ಜೈನಕವಿಗಳು ಈ ಯುಗದಲ್ಲಿ ಯುಗಧರ್ಮಕ್ಕೆ ಶರಣಾಗಿ ದೇಶೀಯ ಛಂದಸ್ಸಿನಲ್ಲಿ ಕಾವ್ಯಸೃಷ್ಟಿಯನ್ನು ಕೈಕೊಂಡರು. ಪಾಂಡಿತ್ಯ ಪ್ರಚುರವಾಗಿ ರಾಜಸಭೆಯ ಮನ್ನಣೆ ಪಡೆಯುತ್ತಿದ್ದ ಅವರ ಕಾವ್ಯಶಕ್ತಿ ಅಂದು ಷಟ್ಪದಿ ಸಾಂಗತ್ಯಗಳ ಧಾಟಿಯನ್ನು ಪಡೆದು ಜನಸಾಮಾನ್ಯರ ಸ್ವತ್ತಾಯಿತು. ಈ ಯುಗದಲ್ಲಿ ಜೈನಕವಿಗಳ ಪ್ರಭಾವ ಇತರ ಕವಿಗಳ ಮೇಲಾಗುವುದಕ್ಕಿಂತ, ಇತರ ಕವಿಗಳ ಪ್ರಭಾವ ಇವರ ಮೇಲೆ ಬಿದ್ದಿದೆ. ಈ ಯುಗದಲ್ಲಿ ಜೈನಕವಿಗಳ ಸಂಖ್ಯೆ ಕಡಿಮೆ. ಅವರಲ್ಲಿಯೂ ಕೆಲವರನ್ನು ಬಿಟ್ಟರೆ ಉಳಿದವರೆಲ್ಲ ಕಾವ್ಯರಚನೆಯ ದೃಷ್ಟಿಯಿಂದ ಸಾಮಾನ್ಯರು.

ಈ ಯುಗದ ಜೈನಕವಿಗಳಲ್ಲಿ ರತ್ನಾಕರವರ್ಣಿ (16ನೆಯ ಶತಮಾನ) ಅದ್ವಿತೀಯನಾದವನು. ಈತನ ಭರತೇಶ ವೈಭವ ಸಾಂಗತ್ಯದಲ್ಲಿ ರಚಿತವಾದ ಕನ್ನಡದ ಮಹಾಕಾವ್ಯಗಳಲ್ಲೊಂದು. ಭೋಗಮೂಲವಾದ ಶೃಂಗಾರವೂ ಯೋಗಮೂಲವಾದ ತ್ಯಾಗವೂ ಇಲ್ಲಿ ಪರಸ್ಪರ ವಿರುದ್ಧವಾಗದೆ ಭೋಗಯೋಗಗಳ ಸಮನ್ವಯ ತತ್ತ್ವ ಈ ಕಾವ್ಯದಲ್ಲಿ ಪ್ರತಿಪಾದಿತವಾಗಿದೆ. ಇಲ್ಲಿ ಬರುವ ನಿರ್ದಿಷ್ಟ ಶೃಂಗಾರ ಚಿತ್ರಣವೂ ಸಂಗೀತ ನರ್ತನಗಳ ವರ್ಣನೆಯೂ ಕನ್ನಡದಲ್ಲಿಯೆ ಅದ್ವಿತೀಯವಾದುವು.

ಶಿಶುಮಾಯಣನ (ಸು.1472) ಅಂಜನಾಚರಿತ್ರೆ, ತ್ರಿಪುರದಹನ ಸಾಂಗತ್ಯಗಳೆರಡೂ ಸಾಂಗತ್ಯದಲ್ಲಿವೆ. ಸಾಂಗತ್ಯದ ಇತಿಹಾಸದಲ್ಲಿ ಈ ಕವಿಗೆ ಒಂದು ಉನ್ನತ ಸ್ಥಾನವಿದೆ. ತೆರಕಣಾಂಬಿಯ ಬೊಮ್ಮರಸ (ಸು.1485) ಸನತ್ಕುಮಾರ ಚರಿತೆ ಮತ್ತು ಜೀವಂಧರ ಚರಿತೆಗಳ ಕರ್ತೃ. ಮೊದಲನೆಯದು ಭಾಮಿನೀ ಷಟ್ಪದಿಯಲ್ಲೂ ಎರಡನೆಯದು ಸಾಂಗತ್ಯದಲ್ಲೂ ಇದೆ.

16ನೆಯ ಶತಮಾನದ ಆರಂಭದಲ್ಲಿ ಕಾಣಬರುವ ಮೂರನೆಯ ಮಂಗರಸ (ಸು.1508) ಜಯನೃಪಕಾವ್ಯ, ಸೂಪಶಾಸ್ತ್ರಗಳನ್ನು ವಾರ್ಧಕ ಷಟ್ಪದಿಯಲ್ಲಿ ಬರೆದಿದ್ದಾನೆ. ಇವನ ಉಳಿದಗ್ರಂಥಗಳು ಸಾಂಗತ್ಯದಲ್ಲಿವೆ. ಜಯನೃಪಕಾವ್ಯದಲ್ಲಿ ಕಥೆಗಿಂತಲೂ ವರ್ಣನೆ ಹೆಚ್ಚು. ಅಬಿನವವಾದಿವಿದ್ಯಾನಂದನ (ಸು.1533) ಕಾವ್ಯಸಾರ, ಸಾಳ್ವಕವಿಯ (ಸು.1560) ಸಾಳ್ವ ಭಾರತ ಈ ಕಾಲದ ಪ್ರಮುಖ ಗ್ರಂಥಗಳು. ಸಾಳ್ವಭಾರತ ಭಾಮಿನೀಷಟ್ಪದಿಯಲ್ಲಿದೆ. ಸಾಳ್ವನು ರಸರತ್ನಾಕರ, ವೈದ್ಯಸಾಂಗತ್ಯ ಎಂಬ ಇನ್ನೆರಡು ಗ್ರಂಥಗಳನ್ನು ಬರೆದಿದ್ದಾನೆ. ರಸರತ್ನಾಕರ ರಸಪ್ರಕ್ರಿಯೆಯನ್ನು ಪ್ರತಿಪಾದಿಸುವ ಒಂದು ಅಲಂಕಾರ ಗ್ರಂಥ. ಈ ಗ್ರಂಥದಲ್ಲಿ ನವರಸಗಳ ಸ್ವರೂಪವನ್ನು ದಿಗ್ದರ್ಶಿಸಿದ್ದಾನೆ. ದೊಡ್ಡಯ್ಯ (ಸು.1550) ಮತ್ತು ಬಾಹುಬಲಿ (ಸು.1560) ಕ್ರಮವಾಗಿ ಚಂದ್ರಪ್ರಭಚರಿತೆ, ನಾಗರಕುಮಾರಚರಿತೆ ಎಂಬ ಗ್ರಂಥಗಳನ್ನು ಸಾಂಗತ್ಯದಲ್ಲಿ ಬರೆದಿದ್ದಾರೆ.

17ನೆಯ ಶತಮಾನದಿಂದ ಮುಂದಕ್ಕೆ ಜೈನಕವಿಗಳು ಕಾವ್ಯಕರ್ಮಕ್ಕೆ ಕೈಹಾಕಿರುವುದು ವಿರಳವಾಗಿ ಕಂಡುಬರುತ್ತದೆ. ಇದೇ ಶತಮಾನದ ಜೈನಗ್ರಂಥಕರ್ತರಲ್ಲಿ ಶಬ್ದಾನುಶಾಸನವನ್ನು ಬರೆದ ಭಟ್ಟಾಕಳಂಕ ಬಹುಮುಖ್ಯನಾದವನು. ಮುಮ್ಮಡಿ ಕೃಷ್ಣರಾಜ ಒಡೆಯರ ಆಶ್ರಿತನಾಗಿದ್ದ ದೇವಚಂದ್ರ (ಸು.1770-1841) ರಾಜಾವಳೀ ಕಥೆಯನ್ನು ಬರೆದಿದ್ದಾನೆ. ಇದರಲ್ಲಿ ಜೈನಮತಕ್ಕೆ ಸಂಬಂದಿಸಿದ ಹಲವು ಇತಿಹಾಸಗಳೂ ರಾಜರ ಮತ್ತು ಕವಿಗಳ ಚರಿತೆಗಳೂ ಇವೆ. ಮೈಸೂರು ರಾಜರ ವಂಶಾವಳಿಯೂ ಇಲ್ಲಿ ಸಂಗ್ರಹವಾಗಿ ಬಂದಿದೆ. ಕವಿ ಚರಿತ್ರೆಯ ದೃಷ್ಟಿಯಿಂದ ಇದು ಬಹುಮುಖ್ಯವಾದುದು.

ಆಧುನಿಕ ಯುಗ : ಕನ್ನಡ ಸಾಹಿತ್ಯವಾಹಿನಿ 19ನೆಯ ಶತಮಾನದ ಮಧ್ಯಭಾಗದ ಹೊತ್ತಿಗೆ ಬತ್ತಿಯೇ ಹೋಗುವುದೇನೊ ಎನ್ನುವಷ್ಟು ತೆಳುವಾಯಿತು. ಆ ವೇಳೆಗಾಗಲೇ ಕರ್ನಾಟಕ ಬ್ರಿಟಿಷರ ಆಳಿಕೆಗೆ ಸೇರಿಹೋಗಿತ್ತು. ಇಂಗ್ಲಿಷ್ ಶಿಕ್ಷಣದ ಮೂಲಕ ಕನ್ನಡ ಭಾಷೆಯ ಅಭ್ಯಾಸ ಕುಂಠಿತಗೊಂಡಿತು. ಬುದ್ಧಿಜೀವಿಗಳ ಮಾತೃಭಾಷಾಪ್ರೇಮ ಇಂಗ್ಲಿಷ್ ಭಾಷೆಯ ಮೋಹದಲ್ಲಿ ಮುಳುಗಿ ಹೋಯಿತು. ಆದರೆ ಅದೇ ಇಂಗ್ಲಿಷ್ ಭಾಷೆ ಸಾಹಿತ್ಯಗಳ ಅಧ್ಯಯನವೇ ಕನ್ನಡ ಜನರ ಆತ್ಮಾಬಿಮಾನವನ್ನು ಕೆರಳಿಸಿ, ದೇಶಭಾಷೆಗಳ ಅದ್ಭುತ ಕ್ರಾಂತಿಗೂ ಮೂಲವಾಯಿತು. ಇಂಗ್ಲಿಷ್ ಸಾಹಿತ್ಯದಲ್ಲಿನ ಸ್ವಾತಂತ್ರ್ಯ, ಸೌಲಭ್ಯ, ರೀತಿ, ರಸಪುಷ್ಟಿಗಳನ್ನು ಕಂಡು ಕನ್ನಡದಲ್ಲಿಯೂ ಅಂಥ ಸಾಹಿತ್ಯವನ್ನು ಸೃಷ್ಟಿಸಬೇಕೆಂಬ ಉತ್ಸಾಹ ಮೂಡಿತು. ಮೊದಲಿಗೆ ಈ ಕಾರ್ಯ ಅನುವಾದಗಳ ಮೂಲಕ ನಡೆಯಿತು. ಕಾಲಕ್ರಮದಲ್ಲಿ ಕನ್ನಡ ಸಾಹಿತ್ಯದೊಡನೆ ಅದನ್ನು ಸಮನ್ವಯಗೊಳಿಸಿಕೊಳ್ಳುವ ಶಕ್ತಿ ಪರಿಣತಗೊಂಡು, ಅರ್ಧ ಶತಮಾನದಿಂದ ಈಚೆಗೆ ಉತ್ತಮ ಕಾವ್ಯಗಳು ರಚನೆಗೊಳ್ಳುತ್ತ ಬಂದಿವೆ. ಆಧುನಿಕ ಕನ್ನಡ ಸಾಹಿತ್ಯದ ಆರಂಭದೆಸೆಯಲ್ಲಿ ಪಾಶ್ಚಾತ್ಯ ವಿದ್ವಾಂಸರಿಂದ ಕನ್ನಡಕ್ಕೆ ದೊರೆತ ಪ್ರೇರಣೆ, ಪ್ರಯೋಜನಗಳು ಚಿರಸ್ಮರಣೀಯವಾದುವು. ಇವರು ಕರ್ನಾಟಕದ ಜನಜೀವನದಲ್ಲಿ ಸಮರಸವಾಗಿ ಬೆರೆತು, ಇಲ್ಲಿನ ಸಾಹಿತ್ಯ ಸಂಸ್ಕೃತಿಗಳನ್ನು ಆಳವಾಗಿ ಅಧ್ಯಯನ ಮಾಡಿ, ಹಲವು ಪ್ರಾಚೀನ ಗ್ರಂಥಗಳನ್ನು ಸಂಪಾದಿಸಿ ಪ್ರಕಟಿಸಿದುದಲ್ಲದೆ, ಕನ್ನಡ ಭಾಷಾಸ್ವರೂಪವನ್ನು ದಿಗ್ದರ್ಶಿಸಬಲ್ಲ ವ್ಯಾಕರಣ, ಛಂದಸ್ಸು, ನಿಘಂಟು ಮೊದಲಾದ ಗ್ರಂಥಗಳ ರಚನೆಗೆ ಕೈಹಾಕಿದರು. ಜಾನ್ಹ್ಯಾಂಡ್, ವಿಲಿಯಂ ರೀವ್, ಕಿಟ್ಟೆಲ್, ಜೀಗ್ಲರ್, ಬಿ.ಎಲ್.ರೈಸ್, ಇ.ಪಿ.ರೈಸ್ ಮೊದಲಾದವರಿಂದ ಕನ್ನಡ ಭಾಷಾಸಾಹಿತ್ಯಗಳಿಗೆ ಆಗಿರುವ ಸೇವೆ ಅಪಾರ. ಪಾದ್ರಿಗಳು ಕನ್ನಡ ಸಾಹಿತ್ಯದ ಹಲವು ಹೊಸಮುಖಗಳಿಗೆ ಅಂಕುರಾರ್ಪಣೆ ಮಾಡಿದರು: ವಸ್ತುನಿಷ್ಠವಾದ ಆಧುನಿಕ ಸಾಹಿತ್ಯ ವಿಮರ್ಶೆಗೆ ತಳಹದಿ ಹಾಕಿದರು. ಮೊಟ್ಟಮೊದಲ ಕನ್ನಡ ಸಾಹಿತ್ಯ ಚರಿತ್ರೆ ಬರೆದ ಕೀರ್ತಿ ಇ.ಪಿ.ರೈಸ್ (ಮೊದಲ ಮುದ್ರಣ 1915) ಅವರಿಗೆ ಸಲ್ಲುತ್ತದೆ. ಕನ್ನಡ ಶಾಸನಗಳನ್ನು ಕಲೆಹಾಕಿದ ಕೀರ್ತಿ ಫ್ಲೀಟ್ (ಮೊದಲ ಮುದ್ರಣ 1878) ಅವರದಾದರೆ, ಮೈಸೂರು ಗೆಜೆಟಿಯರಿನ ಎರಡು ಸಂಪುಟಗಳನ್ನೂ ಎಪಿಗ್ರಾಪಿಯ ಕರ್ನಾಟಿಕದ 12 ಸಂಪುಟಗಳನ್ನೂ ಹೊರತಂದ ಕೀರ್ತಿ ಬಿ.ಎಲ್.ರೈಸ್ ಅವರಿಗೆ ಸಲ್ಲುತ್ತದೆ. ದ್ರಾವಿಡ ಭಾಷೆಗಳ ತುಲನಾತ್ಮಕ ವ್ಯಾಕರಣ ನೀಡಿದ ಕಾಲ್ಡ್‌ವೆಲ್ಲರು ಹಲವು ದೃಷ್ಟಿಗಳಿಂದ ಚಿರಸ್ಮರಣೀಯರು.

ಆಧುನಿಕ ಸಾಹಿತ್ಯದ ಅಂಕುರಾರ್ಪಣೆಗೆ ಮೈಸೂರು ಅರಸರಿಂದ ದೊರೆತ ಸಹಾಯವೂ ಬಹುಮುಖ್ಯವಾದದ್ದು. ಚಾಮರಾಜ ಒಡೆಯರು ತಮ್ಮ ಆಶ್ರಯದಲ್ಲಿ ಶ್ರೀ ಚಾಮರಾಜೇಂದ್ರ ಕರ್ನಾಟಕ ನಾಟಕ ಸಭಾವನ್ನು ಸ್ಥಾಪಿಸಿ, ತಮ್ಮ ಆಸ್ಥಾನಪಂಡಿತರನ್ನು ನಾಟಕ ರಚನೆಗೆ ಕೈ ಹಾಕುವಂತೆ ಪ್ರೋತ್ಸಾಹಿಸಿದರು. ಅಬಿsನವ ಕಾಳಿದಾಸರೆಂದು ಪ್ರಸಿದ್ಧರಾಗಿದ್ದ ಬಸವಪ್ಪಶಾಸ್ತ್ರಿಗಳು ಶಾಕುಂತಲ ಮೊದಲಾದ ಸಂಸ್ಕೃತ ನಾಟಕಗಳ ಭಾಷಾಂತರಗಳನ್ನೂ ಶೂರಸೇನಚರಿತೆ ಎಂಬ ಹೆಸರಿನಿಂದ ಒಥೆಲೊ ಎಂಬ ಇಂಗ್ಲಿಷ್ ನಾಟಕದ ಭಾಷಾಂತರ ವನ್ನೂ ಕನ್ನಡಕ್ಕೆ ಕೊಟ್ಟರು. ಆಸ್ಥಾನಕವಿಗಳಾದ ಜಯರಾಯಾಚಾರ್ಯ, ಸುಬ್ಬಾಶಾಸ್ತ್ರಿ, ಅನಂತನಾರಾಯಣ ಶಾಸ್ತ್ರಿ ಮೊದಲಾದವರೂ ಈ ಕಾರ್ಯರಂಗದಲ್ಲಿ ದುಡಿದು ಕೀರ್ತಿಶೇಷ ರಾದರು. ಚಾಮರಾಜರ ಅನಂತರ ಪಟ್ಟಕ್ಕೆ ಬಂದ ನಾಲ್ವಡಿ ಕೃಷ್ಣರಾಜರು ಆಧುನಿಕ ಕನ್ನಡದ ಸ್ವರ್ಣಯುಗಕ್ಕೆ ತಳಹದಿ ಹಾಕಿದವರೆಂದು ಹೇಳಬಹುದು. ಅವರ ಆಸ್ಥಾನಕವಿಗಳಾದ ಶ್ರೀಕಂಠಶಾಸ್ತ್ರಿಗಳೂ ನರಹರಿಶಾಸ್ತ್ರಿಗಳೂ ನೂರಾರು ಸ್ವತಂತ್ರ ನಾಟಕಗಳನ್ನು ರಚಿಸಿ ನಾಟಕ ರಂಗಸ್ಥಳಗಳ ದಿಗ್ವಿಜಯಕ್ಕೆ ಕಾರಣರಾದುದಲ್ಲದೆ ಹಲವು ಕಾವ್ಯಗಳ ಕರ್ತೃಗಳಾಗಿ ಸಾಹಿತ್ಯದ ಶ್ರೀಮಂತಿಕೆಯನ್ನು ಹೆಚ್ಚಿಸಿದರು. ಅದರಲ್ಲಿಯೂ ಶ್ರೀಕಂಠಶಾಸ್ತ್ರಿಗಳ ಬಹುಮುಖ ಪ್ರತಿಭೆ ಅಚ್ಚರಿಯನ್ನುಂಟುಮಾಡುತ್ತದೆ. ಹಲವು ಕಾದಂಬರಿಗಳು, ವ್ಯಂಗ್ಯಚಿತ್ರಗಳು, ವಿಡಂಬನಾತ್ಮಕ ಪ್ರಬಂಧಗಳು, ಸಂಸ್ಕೃತ, ತೆಲುಗು ಗ್ರಂಥಗಳ ಅನುವಾದಗಳು ಇವರಿಂದ ಮೂಡಿಬಂದವು. ಇದೇ ಸಂದರ್ಭದಲ್ಲಿ ಶ್ರೀಕೃಷ್ಣರಾಜ ಒಡೆಯರು ಕನ್ನಡ ನವೋದಯಕ್ಕಾಗಿ ನೀಡಿದ ಎರಡು ಮುಖ್ಯ ಕಾಣಿಕೆಗಳೆಂದರೆ ಕನ್ನಡ ಸಾಹಿತ್ಯ ಪರಿಷತ್ತು (1915) ಮತ್ತು ಮೈಸೂರು ವಿಶ್ವವಿದ್ಯಾನಿಲಯ (1916). ಈ ಎರಡು ಸಂಸ್ಥೆಗಳಿಂದ ಆಧುನಿಕ ಕನ್ನಡ ಸಾಹಿತ್ಯಕ್ಕೆ ಸಂದಿರುವ ಸೇವೆ ಅಪಾರ. ಕನ್ನಡ ಸಾಹಿತ್ಯದಲ್ಲಾದ ನವೋದಯ ಕ್ರಾಂತಿ ನಮಗೆ ನಿಚ್ಚಳವಾಗಿ ಕಾಣುವುದು 20ನೆಯ ಶತಮಾನದ ಆದಿಭಾಗದಿಂದ. ಈ ಕ್ರಾಂತಿ 12ನೆಯ ಶತಮಾನದಲ್ಲಿ ಆದ ಕನ್ನಡಸಾಹಿತ್ಯದ ಕ್ರಾಂತಿಯಿಂದ ಸಂಪೂರ್ಣ ಬಿsನ್ನವಾದುದು. ಅಂದಿನ ಕ್ರಾಂತಿ ಬಹುಮುಖ್ಯವಾದ ಧರ್ಮಮೂಲವಾದುದಾಗಿದ್ದರೆ ಇಂದಿನದು ವಿಶ್ವವಿಶಾಲವಾದ ಲೌಕಿಕ ಜ್ಞಾನ ಸಾಧನೆಯನ್ನು ಹೆಗ್ಗುರಿಯಾಗಿಟ್ಟುಕೊಂಡಿತು. ಇದರ ಮುಖ್ಯ ಲಕ್ಷಣ ವೈಜ್ಞಾನಿಕ ಮನೋಭಾವನೆ. ಈ ಮನೋಭಾವನೆಗೆ ಬೀಜಭೂತವಾದುದು ಸ್ವತಂತ್ರ ವಿವೇಚನೆ. ಬುದ್ಧಿಗೆ ಇಲ್ಲಿ ಪ್ರಾಧಾನ್ಯ. ಮತಸೂಚಕ ಭಾವನೆಗಳಿಗೆ ಪ್ರಾಧಾನ್ಯತೆ ತಗ್ಗಿ ವಿಶಾಲ ಭಾವನೆಗಳಿಗೆ ಇಂಬು ದೊರಕಿತು. ನಮ್ಮ ಪ್ರಾಚೀನ ಸಾಹಿತ್ಯದ ಸತ್ತ್ವದೊಡನೆ ಪಾಶ್ಚಾತ್ಯ ವಿದ್ಯಾಭ್ಯಾಸದಿಂದ ಬಂದ ನೂತನ ಭಾವನೆಗಳನ್ನು ಅಳವಡಿಸಿಕೊಂಡು ಹೊಸತು ಹಳತು, ನಮ್ಮದು ಹೆರರದು ಎಲ್ಲವನ್ನೂ ಹೊಂದಿಸಿಕೊಂಡು, ಸಮನ್ವಯಗೊಳಿಸಿಕೊಂಡು ಆಧುನಿಕ ಸಾಹಿತ್ಯ ಶ್ರೀಮಂತವಾಯಿತು. ಹಿಂದೆಂದೂ ಕಾಣಬರದಷ್ಟು ಅಪಾರ ಸಂಖ್ಯೆಯ ಕವಿಗಳೂ ಗ್ರಂಥಕರ್ತರೂ ಈ ಯುಗದಲ್ಲಿ ಕಾಣಿಸಿಕೊಂಡರು. ಇಲ್ಲಿನ ಸಾಹಿತ್ಯದ ವೈಪುಲ್ಯ ವೈವಿಧ್ಯ. ವೈಶಾಲ್ಯಗಳು ಚಕಿತಗೊಳ್ಳುವಷ್ಟು ಅಪಾರವಾದುವು. ಈ ಸಾಹಿತ್ಯ ರಾಶಿಯನ್ನು ಪದ್ಯ ಮತ್ತು ಗದ್ಯ ಎಂದು ಎರಡು ವಿಧವಾಗಿ ವಿಂಗಡಿಸಬಹುದು. ಹೊಸ ಸಾಹಿತ್ಯ ಬೆಳೆಯುವುದರ ಜೊತೆ ಜೊತೆಯಲ್ಲೇ ಸಂಪ್ರದಾಯಬದ್ಧವಾದ ಕಾವ್ಯಪ್ರಕಾರ - ವಸ್ತು, ರೀತಿಗಳಲ್ಲಿ ಪ್ರಾಚೀನ ಸಾಹಿತ್ಯವನ್ನು ಅನುಸರಿಸುತ್ತಿರುವ ಕಾವ್ಯಗಳು ಬೆಳೆದುಕೊಂಡು ಬಂದುವು. ಸೋಸಲೆ ಅಯ್ಯಾಶಾಸ್ತ್ರಿ, ಹೊಸಕೆರೆ ಚಿದಂಬರಯ್ಯ, ನಂಜನಗೂಡು ಶ್ರೀಕಂಠಶಾಸ್ತ್ರಿ, ಬೆಳ್ಳಾವೆ ನರಹರಿಶಾಸ್ತ್ರಿ, ಶ್ರೀನಿವಾಸ ರಂಗಾಚಾರ್ಯ, ಡಿ.ವಿ.ಗುಂಡಪ್ಪ, ಹೆಮ್ಮಿಗೆ ದೇಶಿಕಾಚಾರ್ಯ, ಘನಪಾಠಿ ನಾರಾಯಣ ಮೊದಲಾದವರು ಚಂಪೂಕಾವ್ಯಗಳನ್ನು ರಚಿಸಿದ್ದಾರೆ. ಮುದ್ದಣನ ಶ್ರೀ ರಾಮಪಟ್ಟಾಬಿsಷೇಕ, ವೆಂಕಟಸುಬ್ಬಯ್ಯನವರ ವಿನಾಯಕವಿಜಯ, ಸೋಸಲೆ ಅಯ್ಯಾಶಾಸ್ತ್ರಿಗಳ ಶೇಷರಾಮಾಯಣಂ, ಮುಳಿಯ ತಿಮ್ಮಪ್ಪಯ್ಯನವರ ಸೊಬಗಿನ ಬಳ್ಳಿ, ಸೇಡಿಯಾಪು ಕೃಷ್ಣಭಟ್ಟರ ಕೃಷ್ಣಾಕುಮಾರಿ, ಮೈ.ಶೇ.ಅನಂತ ಪದ್ಮನಾಭರಾಯರ ಶ್ರೀಕೃಷ್ಣಾಚರಿತಾಮೃತಂ, ಆಸೂರಿ ರಾಮಸ್ವಾಮಿ ಅಯ್ಯಂಗಾರ್ಯರ ಶ್ರೀನಿವಾಸ ಲೀಲಾವಾಸ ಇತ್ಯಾದಿ ಗ್ರಂಥಗಳು ವಿವಿಧ ಷಟ್ಪದಿಗಳಲ್ಲಿವೆ. ಜಯದೇವಿತಾಯಿ ಲಿಗಾಡೆಯವರು ಸಿದ್ಧರಾಮಪುರಾಣವನ್ನು ಸಾಂಗತ್ಯದಲ್ಲಿ ಬರೆದಿದ್ದಾರೆ. ಕಾವ್ಯಗುಣದ ದೃಷ್ಟಿಯಿಂದಲೂ ಇವು ಗಮನಾರ್ಹವಾಗಿವೆ. ಆಧುನಿಕ ಸಾಹಿತ್ಯಪ್ರಕಾರದಲ್ಲಿ ಬಹುಮಟ್ಚಿಗೆ ಭಾವಗೀತೆ ಪ್ರಮುಖವಾಯಿತು. ಖಂಡಕಾವ್ಯಗಳು, ಕಥನಕವನಗಳು, ಗೀತನಾಟಕಗಳು ಇತ್ಯಾದಿ ಕಾವ್ಯಮುಖಗಳು ಕಾಣಿಸಿಕೊಂಡಿದ್ದರೂ ಅವುಗಳ ಸಂಖ್ಯೆ ಅಲ್ಪ. ವಸ್ತುರೀತಿಗಳಲ್ಲಿ ಹಿಂದಿನ ಕಾವ್ಯಗಳು ಅನುಸರಿಸಬೇಕಾಗಿದ್ದ ಕಠಿಣವಾದ ನಿಯಮಗಳ ಶೃಂಖಲೆಗಳನ್ನು ಈ ಸಾಹಿತ್ಯ ಪ್ರಕಾರ ಸಡಿಲಗೊಳಿಸಿತು. ಚ.ವಾಸುದೇವಯ್ಯ, ಶ್ರೀನಿವಾಸರಾವ್, ಎಸ್.ಜಿ.ನರಸಿಂಹಾಚಾರ್, ಪಂಜೆ ಮಂಗೇಶರಾವ್ ಮೊದಲಾದ ಕವಿಗಳು ಈ ಶತಮಾನದ ಆರಂಭ ಕಾಲದಲ್ಲಿಯೆ ಈ ಪ್ರಕಾರಕ್ಕೆ ಕೈಹಾಕಿದ್ದರೂ ಇವುಗಳ ಪ್ರಭಾವವನ್ನು ಜನರ ಮೇಲೆ ಅಚ್ಚೊತ್ತಿ, ಹೊಸ ಹೆದ್ದಾರಿಯೊಂದನ್ನು ನಿರ್ಮಿಸಿದ ಕೀರ್ತಿ ಬಿ.ಎಂ.ಶ್ರೀ ಅವರಿಗೆ ಸಲ್ಲುತ್ತದೆ. ಇಂಗ್ಲಿಷ್ ರೊಮ್ಯಾಂಟಿಕ್ ಕವಿಗಳ ಕವನಗಳ ಭಾಷಾಂತರಗಳನ್ನು ಒಳಗೊಂಡ ಅವರ ಇಂಗ್ಲಿಷ್ ಗೀತಗಳು ಸ್ವಭಾವ ಸುಂದರವಾಗಿವೆ, ಲಲಿತ ರಮಣೀಯವಾಗಿವೆ. ಅಸಂಖ್ಯಾತ ಕವಿಗಳು ಈ ಪ್ರಕಾರಕ್ಕೆ ಕೈಹಾಕಿರುವರಾದರೂ ಕುವೆಂಪು, ಬೇಂದ್ರೆ ಇವರಿಬ್ಬರೂ ಆಧುನಿಕ ನವೋದಯ ಸಾಹಿತ್ಯಕ್ಕೆ ಒತ್ತುಕೊಟ್ಟ ಕವಿಗಳು. ಕುವೆಂಪು ಅವರು ಕನ್ನಡಕ್ಕೆ ನೀಡಿರುವ ಕೊಡುಗೆ ಅಸದೃಶವಾದುದು. ಅವರ ಶ್ರೀ ರಾಮಾಯಣದರ್ಶನಂ ಆಧುನಿಕ ಕನ್ನಡ ಸಾಹಿತ್ಯದ ಮೇರುಕೃತಿ. ಈ ಕಾವ್ಯದಲ್ಲಿ ಕುವೆಂಪು ಅವರ ಕಾವ್ಯಾಸಕ್ತಿ ಅಪೂರ್ವವಾದುದು. ಆಧುನಿಕ ಕನ್ನಡ ಕವಿಗಳಲ್ಲಿ ಅಗ್ರಗಣ್ಯರಾದ ಇವರ ಭಾವಗೀತೆಗಳನ್ನು ಕುರಿತು ವಿವೇಚಿಸುವಾಗ ಮಾತ್ರ ಇವರ ಕಾವ್ಯಶಕ್ತಿ ಇಂಗ್ಲಿಷ್ನಲ್ಲಿ ಮೊದಲು ಇಣಿಕಿ ಹಾಕಿ, ಆಮೇಲೆ ಕನ್ನಡದ ಭಾವಗೀತೆಗಳಲ್ಲಿ ಅಬಿವ್ಯಕ್ತವಾಗಿದೆ ಎನ್ನಬೇಕು. ಇವರ ಕವಿತೆಗಳಲ್ಲಿ ಸರ್ವತೋಮುಖವಾದ ಆಸಕ್ತಿ ಕಂಡುಬರುವುದಾದರೂ ಪ್ರಕೃತಿ ಪ್ರೇಮ, ಅಧ್ಯಾತ್ಮ, ಭಕ್ತಿ -ಇವು ಸ್ಥಾಯೀಭಾವವನ್ನು ಪಡೆದಿವೆ. ಇವರ ನಾಟಕಗಳು ಕೂಡ ಭಾವ ಗೀತಾತ್ಮಕವಾದುವು. ದ.ರಾ.ಬೇಂದ್ರೆಯವರು ಅಂಬಿಕಾತನಯದತ್ತ ಎಂಬ ಕಾವ್ಯನಾಮದಿಂದ ವಿಪುಲವಾಗಿ ಕವನಗಳನ್ನು ಬರೆದಿರುವರು. ಇವರ ಕವನಗಳಲ್ಲಿ ವಿಷಯ ಮತ್ತು ಅದರ ನಿರೂಪಣೆಯಲ್ಲಿ ಕಾಣಬರುವ ವೈವಿಧ್ಯ, ಮಾತಿನ ಚಮತ್ಕಾರ, ಅಧ್ಯಾತ್ಮ ವಿಚಾರ ಲಹರಿ, ಜನಪದ ಧಾಟಿ, ನಾದಮಾಧುರ್ಯಗಳು ಅತ್ಯಂತ ಹೃದ್ಯವಾಗಿವೆ. ಇವರಿಬ್ಬರೂ ಆಧುನಿಕ ಕನ್ನಡ ಸಾಹಿತ್ಯದ ಎರಡು ವಿಶಿಷ್ಟ ಪಂಥಗಳ ನಿರ್ಮಾತೃಗಳು. ಪು.ತಿ.ನ. ಅವರು ಪ್ರಕೃತಿವರ್ಣನೆಯಲ್ಲಿ, ಭಕ್ತಿಪಾರಮ್ಯದಲ್ಲಿ, ಭಾರತಸಂಸ್ಕೃತಿಯ ದಿಗ್ದರ್ಶನದಲ್ಲಿ, ಭಾವಭಾಷೆಗಳ ಕುಸುರಿಗೆಲಸ ಮಾಡುವುದರಲ್ಲಿ ಅಗ್ರಗಣ್ಯರು. ವಿ.ಸೀ., ಡಿ.ವಿ.ಜಿ., ಶ್ರೀನಿವಾಸ, ವಿನಾಯಕ, ರಾಜರತ್ನಂ. ಕೆ.ಎಸ್.ನರಸಿಂಹಸ್ವಾಮಿ, ಗೋಪಾಲಕೃಷ್ಣ ಅಡಿಗ, ಚೆನ್ನವೀರ ಕಣವಿ, ಜಿ.ಎಸ್.ಶಿವರುದ್ರಪ್ಪ, ನಿಸಾರ್ ಅಹಮದ್, ಚಂದ್ರಶೇಖರ ಕಂಬಾರ ಮೊದಲಾದ ಹಿರಿಯ ಕಿರಿಯ ಕವಿಗಳು ಒಬ್ಬೊಬ್ಬರೂ ತಮ್ಮ ವ್ಯಕ್ತಿತ್ವವನ್ನು ಸ್ಥಾಪಿಸಿಕೊಂಡಿರುವ ಶ್ರೇಷ್ಠ ಕವಿಗಳಾಗಿದ್ದಾರೆ.

ಸು. 1950ರಿಂದ ಈಚೆಗೆ ನವ್ಯಕಾವ್ಯ ಎಂಬ ಹೆಸರಿನಿಂದ ಹೊಸದೊಂದು ಶಾಖೆ ಕನ್ನಡ ಸಾಹಿತ್ಯದಲ್ಲಿ ಕಾಣಿಸಿಕೊಂಡಿತು. ಟಿ.ಎಸ್.ಎಲಿಯೆಟ್, ಆಡೆನ್, ಸೆಸಿಲ್ ಡೆ ಲೂಯಿ ಮೊದಲಾದ ಸಮಕಾಲೀನ ಇಂಗ್ಲಿಷ್ ಕವಿಗಳಿಂದ ಸ್ಫೂರ್ತಿಗೊಂಡ ಹಲವು ಕವಿಗಳು ಹೊಸರೀತಿಯ ಪ್ರಯೋಗಗಳ ಮೂಲಕ ಹೊಸ ಹಾದಿಯೊಂದನ್ನು ನಿರ್ಮಿಸಲು ಹೊರಟರು. ವ್ಯಕ್ತಿನಿಷ್ಠವಾಗಿ ಹೊಸ ವಸ್ತು, ಹೊಸ ಭಾಷೆ, ಹೊಸ ಶೈಲಿ, ಹೊಸ ಧೋರಣೆಗಳಿಂದ ಹೊರಟಿರುವ ಈ ಕವಿ ಕಾವ್ಯಗಳಲ್ಲಿ ಕವಿಮನದ ಸಂಕೀರ್ಣತೆಯನ್ನು ಅಬಿವ್ಯಕ್ತಗೊಳಿಸಲು ಬಳಸುವ ರೂಪಕಗಳೂ ಸಾಮತಿಗಳೂ ಅನೇಕ ವೇಳೆ ಓದುಗರನ್ನು ಚಕಿತಗೊಳಿಸುತ್ತವೆ. ಸಾಂಕೇತಿಕವಾಗಿರುವ ಹಲವು ಮಾತುಗಳು ಅವುಗಳ ಪರಿಚಯ ವಿಲ್ಲದವರಿಗೆ ಕ್ಲಿಷ್ಟವೆನಿಸಿವೆ. ಈ ಪರಂಪರೆಯನ್ನು ಪ್ರಾರಂಬಿsಸಿದ ಕೀರ್ತಿ ವಿ.ಕೃ. ಗೋಕಾಕರಿಗೆ ಸಲ್ಲುತ್ತದೆ. ಆದರೆ ಇವರ ಕವನಗಳಲ್ಲಿ ಸಂಪ್ರದಾಯ, ನವ್ಯತೆಗಳು ಸಮರಸವಾಗಿ ಬೆರೆತಿವೆ. ನವ್ಯಮಾರ್ಗದಲ್ಲಿ ಗೋಪಾಲಕೃಷ್ಣ ಅಡಿಗರ ಹೆಸರು ಅತ್ಯಂತ ಗಣ್ಯವಾದುದು. ಇವರ ಕವಿತೆಗಳು ಪ್ರತಿಭೆ, ಕಲ್ಪನಾಶಕ್ತಿಗಳ ಮಹತ್ತಿಗೆ ಸಾಕ್ಷಿಗಳಾಗಿವೆ. ಗಂಗಾಧರ ಚಿತ್ತಾಲ, ಶಂಕರ ಮೊಕಾಶಿ, ಕೆ.ಎಸ್.ನ., ರಾಮಚಂದ್ರ ಶರ್ಮ, ಎ.ಕೆ.ರಾಮಾನುಜನ್, ಜಿ.ಎಸ್.ಸಿದ್ಧಲಿಂಗಯ್ಯ, ಅರವಿಂದನಾಡಕರ್ಣಿ, ಪಿ.ಲಂಕೇಶ್, ಎಚ್.ಎಂ.ಚನ್ನಯ್ಯ, ಸುಮತೀಂದ್ರ ನಾಡಿಗ, ಕೆ.ಎಸ್.ನಿಸಾರ್ ಅಹಮದ್, ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ, ಶ್ರೀಕೃಷ್ಣ ಅಲನಹಳ್ಳಿ ಮೊದಲಾದವರು ನವ್ಯಕಾವ್ಯ ಜಗತ್ತಿನಲ್ಲಿ ಗಣ್ಯರಾದವರು. ನವ್ಯರೆಂದು ಮುದ್ರೆಯೊತ್ತದ ಕವಿ ಕುವೆಂಪು, ಬೇಂದ್ರೆ, ಪುತಿನ ಇವರಲ್ಲಿಯೂ ಈಚಿನ ಕೆಲವು ಕೃತಿಗಳಲ್ಲಿ ನವ್ಯತೆಯ ಸೊಗಡನ್ನು ಕಾಣಬಹುದು.

ಇಂಗ್ಲಿಷ್ ಶಿಕ್ಷಣದ ಪ್ರಭಾವದಿಂದ ನಮ್ಮಲ್ಲಿ ಜಾನಪದದತ್ತ ಆಸಕ್ತಿ ಮೂಡಿ ಜನಪದ ಸಾಹಿತ್ಯ ಸಂಗ್ರಹದ ಕೃಷಿ ಕಳೆದ ಏಳು ದಶಕಗಳ ಹಿಂದಿನಿಂದ ಪ್ರಾರಂಭವಾಯಿತು. ಹಲಸಂಗಿ ಸೋದರರಾದ ರೇವಪ್ಪ, ಮಧುರ ಚೆನ್ನ, ಸಿಂಪಿ ಲಿಂಗಣ್ಣ- ಈ ಮೂವರು ಹೊರತಂದ "ಗರತಿಯ ಹಾಡು"ಕನ್ನಡದ ಮೊಟ್ಟಮೊದಲ ಜನಪದ ಸಂಗ್ರಹ. ರೇವಪ್ಪನವರು ಹೊರತಂದ ಮಲ್ಲಿಗೆ ದಂಡೆ ಜನಪದ ಸಾಹಿತ್ಯದ ಎಲ್ಲ ಮುಖಗಳನ್ನೂ ಒಳಗೊಂಡ ಅಮೂಲ್ಯ ಸಂಗ್ರಹ. ಇವೆರಡೂ ತ್ರಿಪದಿಗಳಲ್ಲಿವೆ. ಸಿಂಪಿ ಲಿಂಗಣ್ಣ, ಅರ್ಚಕ ರಂಗಸ್ವಾಮಿ, ಗೊರೂರು ರಾಮಸ್ವಾಮಿಅಯ್ಯಂಗಾರ್, ಮತಿಘಟ್ಟ ಕೃಷ್ಣಮೂರ್ತಿ, ಗದ್ದಗಿಮಠ, ಕರಾಕೃ, ಜೀ.ಶಂ.ಪ., ರಾಗೌ, ಧವಳಶ್ರೀ, ಪಿ.ಕೆ.ರಾಜಶೇಖರ ಮೊದಲಾದ ನೂರಾರು ಜನ ತಮ್ಮ ಸಂಗ್ರಹಗಳಿಂದ ಈ ಸಾಹಿತ್ಯ ಪ್ರಕಾರವನ್ನು ಶ್ರೀಮಂತಗೊಳಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಜಾನಪದ ಅಧ್ಯಯನಕ್ಕೆ ಅವಕಾಶ ದೊರೆತು ಜಾನಪದ ವಸ್ತುಸಂಗ್ರಹಾಲಯವೂ ಸ್ಥಾಪನೆಯಾಗಿದ್ದು ಜಾನಪದದ ವೈಜ್ಞಾನಿಕ ಅಧ್ಯಯನ ನಡೆಯುತ್ತಿದೆ.

ಪಾಶ್ಚಾತ್ಯ ಸಾಹಿತ್ಯದ ಪ್ರೇರಣೆಯಿಂದ ಉದಿಸಿದ ಆಧುನಿಕ ಕನ್ನಡ ಸಾಹಿತ್ಯದ ಇನ್ನೊಂದು ವಿಶೇಷ ಪ್ರಕಾರವೆಂದರೆ ಗದ್ಯಸಾಹಿತ್ಯ. ಪಾಶ್ಚಾತ್ಯ ಸಾಹಿತ್ಯದಲ್ಲಿ ಕಾಣಬರುವ ಎಲ್ಲ ಗದ್ಯಪ್ರಕಾರಗಳೂ - ಕಾದಂಬರಿ, ಸಣ್ಣಕಥೆ, ಜೀವನಚರಿತ್ರೆ, ನಾಟಕ, ವ್ಯಕ್ತಿಚಿತ್ರ, ಪ್ರಬಂಧ - ಹರಟೆ, ಪ್ರವಾಸ ಸಾಹಿತ್ಯ, ಪತ್ರ ಸಾಹಿತ್ಯ, ವೈಜ್ಞಾನಿಕ ಸಾಹಿತ್ಯ, ಮಕ್ಕಳ ಸಾಹಿತ್ಯ, ವಿಮರ್ಶೆ, ಹಾಸ್ಯ ಪ್ರಬಂಧ ಇತ್ಯಾದಿ - ಆಧುನಿಕ ಕನ್ನಡ ಸಾಹಿತ್ಯದಲ್ಲಿಯೂ ಬೆಳೆದು ನಿಂತಿವೆ. ಹೊಸಗನ್ನಡ ಗದ್ಯ ಸಾಹಿತ್ಯಕ್ಕೆ ಕೆಂಪುನಾರಾಯಣ (ಸು.1823) ತನ್ನ ಮುದ್ರಾಮಂಜೂಷದಿಂದ ನಾಂದಿ ಹಾಡಿದನೆಂದು ಹೇಳಬಹುದು. ಇದೇ ಸಂದರ್ಭದಲ್ಲಿ ಸಂಪ್ರದಾಯಕ್ಕೂ ಆಧುನಿಕತೆಗೂ ಕಟ್ಟಿದ ರಸಸೇತುವೆಯಂತಿರುವ ಮುದ್ದಣನನ್ನು ಹೆಸರಿಸಬಹುದು. ಈತ ಅದ್ಭುತ ರಾಮಾಯಣ, ರಾಮಾಶ್ವಮೇಧ ಎಂಬ ಎರಡು ಗದ್ಯಗ್ರಂಥಗಳನ್ನು ಬರೆದಿದ್ದಾನೆ. ಹಳಗನ್ನಡ-ನಡುಗನ್ನಡ ಬೆರೆತ ಇವನ ಗದ್ಯಶೈಲಿ ಹೊಸಗನ್ನಡಕ್ಕೆ ನಾಂದಿ ಹಾಡಿತೆಂದು ಹೇಳಬಹುದು. ಭಾಷಾಶೈಲಿಯ ದೃಷ್ಟಿಯಿಂದ ಈತನ ಗದ್ಯ ವಿಶಿಷ್ಟವಾಗಿದೆ. ಇವೆರಡರ ವಸ್ತುವೂ ಹಳೆಯದು. ಬಳಸಿರುವ ಭಾಷೆ ಹಳಗನ್ನಡ, ಆದರೆ ಕವಿಯ ಮನೋಭಾವ ಆಧುನಿಕ. ರಾಮಾಶ್ವಮೇಧದ ಮುದ್ದಣ ಮನೋರಮೆಯರ ಸಂಭಾಷಣೆ ಸ್ವಾರಸ್ಯಪೂರ್ಣವಾಗಿದೆ.

ಆಧುನಿಕ ಕನ್ನಡ ಗದ್ಯ ಪ್ರಕಾರಗಳಲ್ಲಿ ಕಾದಂಬರಿ ಅತ್ಯಂತ ಜನಪ್ರಿಯವಾದುದು. ಈ ಪ್ರಕಾರ ಕನ್ನಡದಲ್ಲಿ 19ನೆಯ ಶತಮಾನದ ಪೂರ್ವಾರ್ಧದಲ್ಲಿಯೆ ಕ್ವಚಿತ್ತಾಗಿ ಕಾಣಿಸಿಕೊಂಡಿತಾದರೂ ನಮ್ಮ ಜನರಲ್ಲಿ ಇದರ ವಾಚನಾಬಿರುಚಿಯನ್ನು ನೆಲೆಗೊಳಿಸಿದವರು ಬಿ.ವೆಂಕಟಾಚಾರ್ಯ ಮತ್ತು ಗಳಗನಾಥರು. ಗುಲ್ವಾಡಿ ವೆಂಟರಾಯ, ಬೋಳಾರ ಬಾಬುರಾಯ, ಕೆರೂರ ವಾಸುದೇವಾಚಾರ್ಯ ಮೊದಲಾದವರು ಸುಂದರವಾದ ಸ್ವತಂತ್ರ ಕಾದಂಬರಿಗಳನ್ನು ರಚಿಸಿದ್ದಾರೆ. ಅವು ಕೇವಲ ಒಂದೋ ಎರಡೋ ಅಷ್ಟೇ. ವಾಸ್ತವಿಕತೆಯನ್ನು ಕಾದಂಬರಿಯಲ್ಲಿ ತರುವ ಸಂಪ್ರದಾಯಕ್ಕೆ ಎಂ.ಎಸ್.ಪುಟ್ಟಣ್ಣನವರು ಆದ್ಯರಾದರು. 1930ರಿಂದ ಈಚೆಗೆ ಕಾದಂಬರಿಕಾರರ ಸಂಖ್ಯೆ ಅಪರಿಮಿತವಾಗಿದೆ. ಇವರ ಸಾಲಿನಲ್ಲಿ ಶಿವರಾಮ ಕಾರಂತ, ಕುವೆಂಪು, ರಾವಬಹಾದ್ದೂರ ಇವರ ಹೆಸರುಗಳು ಅಗ್ರಗಣ್ಯವಾದವು. ಆಧುನಿಕ ಕಾದಂಬರಿಕಾರರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾದಂಬರಿಗಳನ್ನು ಬರೆದವರಲ್ಲಿ ಅ.ನ.ಕೃ. ಪ್ರಸಿದ್ಧರು. ಅ.ನ.ಕೃ. ಅವರ ಪರಂಪರೆಗೆ ಸೇರಿದವರು ತ.ರಾ.ಸು. ಚಿತ್ರದುರ್ಗದ ಇತಿಹಾಸವನ್ನು ಆಧರಿಸಿ ಬರೆದಿರುವ ಇವರ ಐತಿಹಾಸಿಕ ಕಾದಂಬರಿಗಳು ಸುಪ್ರಸಿದ್ಧವಾಗಿವೆ. ವಿನಾಯಕ, ಮಿರ್ಜಿ ಅಣ್ಣಾರಾಯ, ಶ್ರೀರಂಗ, ಶ್ರೀನಿವಾಸ, ಕೆ.ವಿ.ಅಯ್ಯರ್, ಬಿ.ಪುಟ್ಟಸ್ವಾಮಯ್ಯ, ಕೃಷ್ಣಮೂರ್ತಿ ಪುರಾಣಿಕ, ಎಸ್.ಎಲ್.ಭೈರಪ್ಪ, ತ್ರಿವೇಣಿ, ಎಂ.ಕೆ.ಇಂದಿರಾ ಮೊದಲಾದ ಕಾದಂಬರಿಕಾರರು ಈ ಸಾಹಿತ್ಯ ಪ್ರಕಾರವನ್ನು ಶ್ರೀಮಂತಗೊಳಿಸಿದ್ದಾರೆ.

ಹೊಸಗನ್ನಡ ಗದ್ಯಸಾಹಿತ್ಯದಲ್ಲಿ ಕಾದಂಬರಿಯನ್ನು ಬಿಟ್ಟರೆ ಎರಡನೆಯ ಸ್ಥಾನ ಸಣ್ಣಕಥೆಗೆ ಸಲ್ಲುತ್ತದೆ. ಈ ಪ್ರಕಾರದಲ್ಲಿ ಕೆಲಸ ಮಾಡಿರುವವರ ಸಂಖ್ಯೆಯೂ ಅಪಾರ. ಕನ್ನಡದಲ್ಲಿ ಸಣ್ಣಕಥೆಯನ್ನು ಆರಂಬಿಸಿದವರು ಯಾರೇ ಆಗಲಿ ಅದನ್ನು ಸ್ಥಾಯಿಯಾಗಿ ಮಾಡಿದವರು ಶ್ರೀನಿವಾಸರು. ಕೆರೂರ ವಾಸುದೇವಾಚಾರ್ಯ, ಎಂ.ಎನ್.ಕಾಮತ್, ಪಂಜೆಮಂಗೇಶರಾವ್ - ಇವರು ಶ್ರೀನಿವಾಸರ ಸಮಕಾಲೀನರು. ಈ ಪ್ರಕಾರವನ್ನು ಕುವೆಂಪು, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಚದುರಂಗ, ಯಶವಂತ ಚಿತ್ತಾಲ, ಶಾಂತಿನಾಥ ದೇಸಾಯಿ, ಅಶ್ವತ್ಥ, ಅ.ನ.ಕೃ. ಗೌರಮ್ಮ, ಯು.ಆರ್.ಅನಂತಮೂರ್ತಿ, ಪೂರ್ಣಚಂದ್ರ, ತೇಜಸ್ವಿ, ಸದಾಶಿವ, ಬಿ. ಶಾಮಸುಂದರ, ದೇವನೂರು ಮಹಾದೇವ, ಮೊಗಳ್ಳಿಗಣೇಶ ಮೊದಲಾದವರು ಸಮರ್ಥವಾಗಿ ಮುಂದುವರಿಸಿದರು.

ಗದ್ಯಪ್ರಕಾರಗಳಲ್ಲಿ ಜೀವನಚರಿತ್ರೆ ಮತ್ತೊಂದು. ಕನ್ನಡದಲ್ಲಿ ಇದುವರೆಗೆ ಸುಮಾರು ಒಂದು ಸಾವಿರದಷ್ಟು ಜೀವನಚರಿತ್ರೆಗಳು ಪ್ರಕಟಗೊಂಡಿವೆ. ಈ ಸಾಹಿತ್ಯ ಪ್ರಕಾರ ಅತ್ಯಂತ ಹುಲುಸಾಗಿ ಬೆಳೆದಿದೆ. ಈ ಪ್ರಕಾರವನ್ನು ಜನಪ್ರಿಯವಾಗಿ ಮಾಡಿದವರು ಸುಬೋಧ ರಾಮರಾಯರು. ಡಿ.ವಿ.ಜಿ., ಕುವೆಂಪು, ಸಿ.ಕೆ.ವೆಂಕಟರಾಮಯ್ಯ, ದೇಜಗೌ ಮೊದಲಾದ ಅನೇಕರು ಶ್ರೇಷ್ಠವಾದ ಜೀವನಚರಿತ್ರೆಗಳನ್ನು ಬರೆದಿದ್ದಾರೆ. ಇಂಗ್ಲಿಷ್ ಸಾಹಿತ್ಯದ ಸಂಪರ್ಕದಿಂದ ಕನ್ನಡದಲ್ಲಿ ಕಾಣಿಸಿಕೊಂಡ ಸಾಹಿತ್ಯ ಪ್ರಕಾರಗಳಲ್ಲಿ ನಾಟಕ ಬಹುಮುಖ್ಯವಾದುದು. 19ನೆಯ ಶತಮಾನದ ಕಡೆಯ ಭಾಗದಿಂದ ಮುಂದೆ ಈ ಪ್ರಕಾರ ಅತ್ಯಂತ ಹುಲುಸಾಗಿ ಬೆಳೆಯುತ್ತಾ ಬಂದಿದೆ. ಮೊದಮೊದಲು ಸಂಸ್ಕೃತದಿಂದ ಭಾಷಾಂತರ ಮಾಡಿಕೊಳ್ಳುವ ಪರಿಪಾಠವಿದ್ದುದು ಈ ಶತಮಾನದ ಆರಂಭದಿಂದ ಸ್ವತಂತ್ರ ನಾಟಕ ರಚನೆಗೆ ಎಡೆಮಾಡಿಕೊಟ್ಟಿತು. ಶುದ್ಧ ಗದ್ಯದಲ್ಲಿ ಸಾಮಾಜಿಕ ನಾಟಕಗಳನ್ನು ರಚಿಸಿ, ಹೆದ್ದಾರಿಯೊಂದನ್ನು ನಿರ್ಮಿಸಿದ ಕೀರ್ತಿ ಕೈಲಾಸಂ ಅವರಿಗೆ ಸಲ್ಲುತ್ತದೆ. ನಾಟಕದ ಎಲ್ಲ ಪ್ರಕಾರಗಳಲ್ಲಿಯೂ ಗದ್ಯ ಬಳಕೆಯಾಗಿರುವ ನಾಟಕಗಳು ವಿಪುಲ ಸಂಖ್ಯೆಯಲ್ಲಿ ಈಗ ಕಾಣಿಸಿಕೊಂಡಿವೆ. ಶ್ರೀರಂಗ, ಕುವೆಂಪು, ಮಾಸ್ತಿ, ಶಿವರಾಮ ಕಾರಂತ, ಪರ್ವತವಾಣಿ, ಪು.ತಿ.ನ., ವಿ.ಸೀತಾರಾಮಯ್ಯ, ಎಚ್.ಕೆ.ರಂಗನಾಥ, ಗಿರೀಶಕಾರ್ನಾಡ ಮೊದಲಾದ ನಾಟಕ ಕರ್ತೃಗಳು ಪ್ರಸಿದ್ಧರಾಗಿದ್ದಾರೆ. (ಟಿ.ಎಸ್.ಎಸ್.)