ವಿಷಯಕ್ಕೆ ಹೋಗು

ಪುಟ:ಕನ್ನಡದ ಬಾವುಟ.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಬಲ್ಲವರಿಗೆ ಬೆರಗೆ ಇಲ್ಲಿ ?
ಅರಿಯದವರು ನಾಲ್ವರಲ್ಲಿ
ಕಳೆಯ ಬೆಳಕು ಹೊಳೆಯಲಂದು
ದಣಿದುಹೋದೆನು.
ಬಡವನಳಿಲುಸೇವೆಯೆಂದು
ಧನ್ಯನಾದೆನು.

ಶ್ರೀ


೨. ಸ್ವಾಗತ ಗೀತ

ಗೆಳೆಯ ಕನ್ನಡಿಗರೇ, ಸ್ವಾಗತವು ನಿಮಗೆ!
ಬೆಳೆವ ಸಿರಿಗನ್ನಡದ ಬಳ್ಳಿ ಪಡೆದರಳುಗಳೆ,
ಸ್ವಾಗತವು ನಿಮಗೆ!

ಒಬ್ಬ ಕನ್ನಡ ದೇವಿಯುದರದಿಂದೊಗೆದು,
ಒಬ್ಬ ಕನ್ನಡ ಜನನಿಯೆದೆಹಾಲ ಮೊಗೆದು,
ಒಬ್ಬ ಮಾತೆಯ ಮಡಿಲು ತೊಡೆಗಳಲ್ಲಿ ಕುಣಿದು,
ಒಬ್ಬ ತಾಯುಲಿಗಳನೆ ತೊದಲಿ ನುಡಿದು,
ಬೆಳೆದ ಕನ್ನಡಿಗರೇ, ಬಂಧು ಕನ್ನಡಿಗರೇ
ಇನಿಯ ಕನ್ನಡಿಗರೇ, ಸ್ವಾಗತವು ನಿಮಗೆ!
ಪಡುಗಡಲ ತೆರೆ ಮೊಳಗಿ, ಹಲವು ಹೊಳೆಗಳು ಮಿನುಗಿ,
ಸೊಬಗು ಸುಳಿಯುವ, ಸುಖದ ಬೀಡಿನಿಂದ,
ತುಳು ನೆರೆಯ ನಾಡಿನಿಂದ-
ಕನ್ನಡದ ಕಲಿಗಳನು, ಕನ್ನಡದ ಕವಿಗಳನು
ತನ್ನ ಬಸಿರಲಿ ಮುನ್ನ ಹೊರೆದು, ಜಗದಲ್ಲಿ ಮೆರೆದು
ಮತ್ತೆ ಮಗುವುತ್ಸಹದ ಕೊಯಲಿನಿಂದ,
ಬೆಳವಲದ ಬಯಲಿನಿಂದ-
ವನದೇವಿ ಜಲದೇವಿಯರಿಗೆ ತೌರೂರೆನಿಸಿ,
ಜನದ ಕಣ್ ಮನಗಳನ್ನು ಸೆಳೆದು ಸೆರೆಸಿಕ್ಕಿಸುವ
ಪ್ರಕೃತಿರಚನೆಯ ಬೆಗಡು ಬೆಡಗಿನಿಂದ,
ಮಲೆನಾಡು ಕೊಡಗಿನಿಂದ-