ಪ್ರಸ್ತಾವನೆ
ಶತಕ ಸಾಹಿತ್ಯ :
ಕನ್ನಡ ಸಾಹಿತ್ಯದ ರೂಪವೈವಿಧ್ಯಕ್ಕೆ ಕಾರಣವಾದ ಸಾಹಿತ್ಯ ಪ್ರಕಾರಗಳಲ್ಲಿ
'ಶತಕ'ವೂ ಒಂದು. ಇದು ಸಂಸ್ಕೃತ ಸಾಹಿತ್ಯದಿಂದ ಪಡೆದ ಒಂದು ವಿಶಿಷ್ಟ
ಕಿರಿಯ ಸಾಹಿತ್ಯ ಪ್ರಕಾರ. ಪದ್ಯ ಸಂಖ್ಯೆಯ ಹಿನ್ನೆಲೆಯಲ್ಲಿ ಸಾರ್ಥಕ ಹೆಸರನ್ನು
ಹೊಂದಿದ ಇದರಲ್ಲಿ ನೂರು ಪದ್ಯಗಳಿರುವುದು ಮೊದಲ ಲಕ್ಷಣ. ಭಕ್ತಿ, ಜ್ಞಾನ,
ವೈರಾಗ್ಯ, ತತ್ವ, ನೀತಿ, ಶೃಂಗಾರ, ಸ್ತುತಿ, ಮಹಾತ್ಮರ ಸ್ತೋತ್ರ, ಮಹಿಮಾತಿಶಯಗಳ
ವರ್ಣನೆ ಇದರ ವಸ್ತು. ಅಕ್ಷರ ಸಮವೃತ್ತಗಳ ಬಳಕೆ, ಸಂಸ್ಕೃತ ಭೂಯಿಷ್ಠ ಭಾಷೆ,
ಪ್ರತಿ ವೃತ್ತಾಂತ್ಯದಲ್ಲಿ ಅಂಕಿತವಿರುವುದು ಇದರ ಇತರ ಲಕ್ಷಣಗಳು. ವ್ಯಕ್ತಿಯ
ಚಾರಿತ್ರ್ಯ ಶುದ್ದಿ, ಸಮಾಜ ಸ್ವಾಸ್ಥ್ಯ, ಭಕ್ತಿಭಾವದ ಉದ್ದೀಪನ, ಅರಿವಿನ ವಿಸ್ತರಣೆ,
ತತ್ವದ ಪ್ರತಿಪಾದನೆ ಇದರ ಉದ್ದೇಶ.
ಕನ್ನಡದಲ್ಲಿ ಶತಕ ಸಾಹಿತ್ಯದ ಪರಂಪರೆ ೧೧ನೆಯ ಶತಮಾನದಿಂದ
ಆರಂಭವಾಗುತ್ತದೆ. ಜೈನಕವಿ ನಾಗವರ್ಮಾಚಾರ್ಯ (೧೦೭೦) ಬರೆದ
'ಚಂದ್ರಚೂಡಾಮಣಿ ಶತಕ'ವೇ ಈಗ ದೊರೆತ ಮೊದಲ ಶತಕಕೃತಿ. ಮುಂದೆ
ಕರ್ನಾಟಕದ ಪ್ರಮುಖ ಧರ್ಮಗಳಾದ ಜೈನ - ಲಿಂಗಾಯತ ಮತ್ತು ಬ್ರಾಹ್ಮಣ
ಕವಿಗಳಿಂದ ಈ ಪ್ರಕಾರದಲ್ಲಿ ವಿಪುಲ ಸಾಹಿತ್ಯ ಸೃಷ್ಟಿ ನಡೆಯಿತು. ಸು. ೪೦೦ಕ್ಕೂ
ಹೆಚ್ಚು ಕೃತಿಗಳು ಲಭ್ಯವಾಗಿರುವುದು ಅದರ ಸಂಖ್ಯಾಬಲ ಮತ್ತು ಜನಪ್ರಿಯತೆಯನ್ನು
ಸೂಚಿಸುತ್ತದೆ. ಅದರಲ್ಲಿಯೇ ಲಿಂಗಾಯತ ಕವಿಗಳ ಕೊಡುಗೆ ವಿಶೇಷ ಮತ್ತು
ವಿಶಿಷ್ಟವಾದುದು. ಇನ್ನೂರಕ್ಕೂ ಹೆಚ್ಚು ಶತಕ ಕೃತಿಗಳು ಅವರಿಂದ ರಚನೆಗೊಂಡಿವೆ.
ಅವು ವಸ್ತು - ರೂಪ - ಭಾಷೆ - ಆಶಯಗಳ ದೃಷ್ಟಿಯಿಂದ ವೈವಿಧ್ಯತೆಯನ್ನು ಸಾಧಿಸಿ,
ನೂತನ ಆವಿಷ್ಕಾರಕ್ಕೆ ಕಾರಣವಾಗಿವೆ.
ಪದ್ಯಗಳ ಸಂಖ್ಯೆ ೧೦೦ ರಿಂದ ೧೨೫ ರವರೆಗೆ ಬೆಳೆದಿದೆ. ಅಕ್ಷರ ಸಮವೃತ್ತಗಳ
ಜೊತೆಗೆ ಕಂದ, ಷಟ್ಪದಿ, ತ್ರಿಪದಿ, ಸಾಂಗತ್ಯ, ಚೌಪದಿ ಮೊದಲಾದ
ಛಂದೋರೂಪಗಳು ಎಡೆಪಡೆದಿವೆ. ಭಾಷೆಯಲ್ಲಿ ಸರಳತೆ, ದೇಶೀಯತೆ ಮೈದಾಳಿದೆ.
ವಸ್ತುವಿನಲ್ಲಿ ಭಕ್ತಿ - ಜ್ಞಾನ - ವೈರಾಗ್ಯ, ಶಿವಸ್ತುತಿ, ಶರಣಸ್ತುತಿ, ಶರಣತತ್ವ, ಲೋಕನೀತಿ
ಸ್ಥಾನಪಡೆದಿವೆ. ಬಸವಾದಿಶರಣರು ಪ್ರತಿಪಾದಿಸಿದ ಸಕಲಜೀವಾತ್ಮರಿಗೆ
xi