ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಶ್ರೀಲಂಕಾ

ವಿಕಿಸೋರ್ಸ್ದಿಂದ

ಶ್ರೀಲಂಕಾ ಭಾರತದ ಆಗ್ನೇಯದಲ್ಲಿ ಹಿಂದೂ ಮಹಾಸಾಗರದಲ್ಲಿರುವ ಒಂದು ಸ್ವತಂತ್ರ ದ್ವೀಪ ರಾಷ್ಟ್ರ. ಇದು ಪ್ರಜಾಸತ್ತಾತ್ಮಕ ಸಮಾಜವಾದಿ ಗಣರಾಜ್ಯ. ಇದರ ರಾಜಧಾನಿ ಕೊಲಂಬೋ.

ದಕ್ಷಿಣ ಏಷ್ಯದ ಒಂದು ದ್ವೀಪರಾಷ್ಟ್ರವಾದ ಶ್ರೀಲಂಕಾವನ್ನು ಪಾಕ್ ಮತ್ತು ಮನ್ನಾರ್ ಜಲಸಂಧಿಗಳು ಬೇರ್ಪಡಿಸಿವೆ. ಇದು ಹಿಂದೂಹಾಸಾಗರದಲ್ಲಿರುವ ಅತಿ ದೊಡ್ಡ ದ್ವೀಪ. ಈ ದ್ವೀಪ 50 51 ಉ.ಅ. ದಿಂದ 90 511 ದವರೆಗೆ ಹಾಗೂ 790 421 ಪೂ. ರೇ. ದಿಂದ 810 521 ಪೂ. ರೇ. ರವರೆಗೆ ಪಸರಿಸಿದೆ. ಭಾರತದ ದಕ್ಷಿಣಕ್ಕೆ ಸು. 80 ಕಿ.ಮೀ. ದೂರದಲ್ಲಿರುವ ದಕ್ಷಿಣ ಏಷ್ಯದ ಪ್ರಮುಖ ರಾಷ್ಟ್ರಗಳಲ್ಲೊಂದಾಗಿದೆ. 65,610 ಚ.ಕಿ.ಮೀ. ಭೌಗೋಳಿಕ ವಿಸ್ತೀರ್ಣವನ್ನು ಹೊಂದಿದ್ದು, ಇದರಲ್ಲಿ 64,740 ಚ.ಕಿ.ಮೀ. ಭೂಭಾಗ ಮತ್ತು 870 ಚ. ಕಿ.ಮೀ. ಜಲಭಾಗವಾಗಿದೆ. ಇಲ್ಲಿ ಒಟ್ಟು 1,204 ಕಿ.ಮೀ. ತೀರವಿದೆ. ಈ ಸಮುದ್ರ ತೀರ ಹೆಚ್ಚಾಗಿ ಖ್ವಾರಿ, ಕೊಲ್ಲಿಗಳನ್ನು ಹೊಂದಿರದೆ ನೇರವಾಗಿರುವುದರಿಂದ ಇಲ್ಲಿ ಸ್ವಾಭಾವಿಕ ಬಂದರುಗಳು ಹೆಚ್ಚಿನ ಸಂಖ್ಯೆಯಲ್ಲಿಲ್ಲ.

ವಾಲ್ಮೀಕಿ ರಾಮಾಯಣದ ಪ್ರಕಾರ ತ್ರೇತಾಯುಗದಲ್ಲಿ ಶ್ರೀಲಂಕಾ ರಾವಣನ ಆಳಿಕೆಯಲ್ಲಿದ್ದು ಶ್ರೀರಾಮನಿಂದ ರಾವಣ ಹತನಾದ ಮೇಲೆ ವಿಭೀಷಣ ಈ ಪ್ರದೇಶಕ್ಕೆ ಅಧಿಪತಿಯಾಗಿ ರಾಮನಿಂದ ನೇಮಕಗೊಂಡ ನೆಂದು ತಿಳಿದುಬರುತ್ತದೆ. 16ನೆಯ ಶತಮಾನದಲ್ಲಿ ಇದು ಪೋರ್ಚುಗೀಸರ ಆಳಿಕೆಯಲ್ಲಿದ್ದು ಅನಂತರ 17ನೆಯ ಶತಮಾನದಲ್ಲಿ ಡಚ್ಚರ ಸ್ವಾಧೀನದಲ್ಲಿತ್ತೆಂದು ತಿಳಿದುಬರುತ್ತದೆ. ಇದಾದ ಮೇಲೆ 1802ರಲ್ಲಿ ಬ್ರಿಟೀಷರು ಡಚ್ಚರನ್ನು ಸೋಲಿಸಿ ತಮ್ಮ ಅಧಿಕಾರ ಸ್ಥಾಪಿಸಿದರು. ಸು. 146 ವರ್ಷಗಳ ಕಾಲ ಈ ದೇಶ ಬ್ರಿಟೀಷರ ಅಧೀನದಲ್ಲಿದ್ದು 1948 ಫೆಬ್ರವರಿ 4ರಂದು ಸ್ವಾತಂತ್ರ್ಯ ಪಡೆಯಿತು. ಹಿಂದೆ ಈ ರಾಷ್ಟ್ರಕ್ಕೆ ಸಿಲೋನ್ ಎಂಬ ಹೆಸರಿದ್ದು 1972ರಲ್ಲಿ ಶ್ರೀಲಂಕಾ ಎಂದು ನಾಮಕರಣವಾಯಿತು. ಶ್ರೀಲಂಕಾದಲ್ಲಿ ಕಂಡುಬರುವ ಶಿಲೆಗಳಿಗೂ ಭಾರತದ ದಖನ್ ಪ್ರಸ್ಥಭೂಮಿಯಲ್ಲಿ ಕಂಡು ಬರುವ ಶಿಲೆಗಳಿಗೂ ಸಾಮ್ಯವಿರುವುದರಿಂದ ಬಹು ಹಿಂದೆ ಇದು ಪರ್ಯಾಯ ದ್ವೀಪದ ಅವಿಭಾಜ್ಯ ಅಂಗವಾಗಿದ್ದು ತದನಂತರ, ಇದು ಭಾರತದಿಂದ ಬೇರ್ಪಟ್ಟಿರಬಹುದೆಂದು ಭೂಗರ್ಭಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ. ರಾಮೇಶ್ವರ ಮತ್ತು ಮನ್ನಾರ್ ದ್ವೀಪಗಳನ್ನು ಶ್ರೀಲಂಕಾದ ಶೇಷಭಾಗಗಳೆಂದು ಪರಿಗಣಿಸಿದರೆ ಇವು ಮೇಲಿನ ಅಭಿಪ್ರಾಯಕ್ಕೆ ಒತ್ತು ಕೊಡುವ ಅಂಶಗಳಾಗಿವೆ. ಇದರ ಪಶ್ಚಿಮದಲ್ಲಿ ಮಾಲ್ಡೀವ್ಸ್ ದ್ವೀಪಗಳು ಪೂರ್ವ ಹಾಗೂ ಈಶಾನ್ಯದಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಇವೆ.

ಶ್ರೀಲಂಕಾ ಮಧ್ಯಭಾಗ ಉನ್ನತ ಪ್ರದೇಶವಾಗಿದ್ದು ಹೊರಮುಖವಾಗಿ ಎಲ್ಲ ದಿಕ್ಕಿನಲ್ಲೂ ಇಳಿಜಾರು ಪ್ರದೇಶದಿಂದ ಕೂಡಿದೆ. ಮಧ್ಯಭಾಗದಲ್ಲಿರುವ ಪಿಟಿರು ತಲಗಲ ಶಿಖರ ಇಲ್ಲಿನ (2,528 ಮೀ.) ಅತ್ಯಂತ ಎತ್ತರವಾದ ಭಾಗವಾಗಿದೆ. ಇಲ್ಲಿಂದ ಸಮುದ್ರ ತೀರದವರೆಗಿನ ಭಾಗ ಮೂರು ಹಂತಗಳಿಂದ ಕೂಡಿದೆ. ಈ ದೇಶದ ಎಲ್ಲ ನದಿಗಳು ಕೇಂದ್ರದ ಉನ್ನತ ಪ್ರದೇಶದಲ್ಲಿ ಉಗಮಗೊಂಡು ವಿವಿಧ ದಿಕ್ಕಿಗೆ ಹರಿಯುತ್ತವೆ. ಮೈದಾನತೀರ ಪಶ್ಚಿಮ ಹಾಗೂ ದಕ್ಷಿಣ ಭಾಗದಲ್ಲಿ ಕಿರಿದಾಗಿದ್ದು ಪೂರ್ವದ ಕಡೆಗೆ ಹೋದಂತೆಲ್ಲಾ ವಿಶಾಲವಾಗುತ್ತಾ ಹೋಗುತ್ತದೆ. ಉತ್ತರದ ಮೈದಾನ ದ್ವೀಪದ ಅರ್ಧ ಭಾಗದಷ್ಟು ಪ್ರದೇಶವನ್ನು ಆವರಿಸಿಕೊಂಡಿದೆ. ಮೈದಾನದಿಂದ ಒಳಮುಖವಾಗಿರುವ ಉನ್ನತ ಭಾಗ ಸೋಪಾನ ಮಾದರಿಯಲ್ಲಿದ್ದು ಸಮುದ್ರ ಮಟ್ಟದಿಂದ 488 ಮೀ. ಎತ್ತರದಲ್ಲಿದೆ. ಇದು ಅಲ್ಲಲ್ಲಿ ಕಡಿದಾದ ಇಳಿಜಾರುಗಳಿಂದ ಕೂಡಿದ್ದು ದಕ್ಷಿಣದ ಕೊಂಗಾರ ಜಿಲ್ಲೆಯಲ್ಲಿ ಇದ್ದಕ್ಕಿದ್ದಂತೆ ನೂರಾರು ಮೀಟರ್ ಎತ್ತರಕ್ಕೆ ಗೋಡೆಯೋಪಾದಿಯಲ್ಲಿ ನಿರ್ಮಾಣವಾಗಿದೆ. ಮಧ್ಯದ ಉನ್ನತ ಭಾಗ ಮೂರನೆಯ ಭೂಭಾಗವಾಗಿದ್ದು ಸಮುದ್ರಮಟ್ಟದಿಂದ ಸರಾಸರಿ 1,200 ಮೀ. ಎತ್ತರದಲ್ಲಿದೆ. ಈ ಮಧ್ಯದ ಉನ್ನತ ಪ್ರದೇಶದ ಪಶ್ಚಿಮದ ಹಟನ್ ಪ್ರಸ್ಥಭೂಮಿಯೂ ಪೂರ್ವದ ಲಿಮಾಡ ಪ್ರಸ್ಥಭೂಮಿಯೂ ಅನೇಕ ಜಲಪಾತಗಳ ರಮ್ಯ ತಾಣಗಳಾಗಿವೆ.

ಶ್ರೀಲಂಕಾ ನದಿಗಳ ವಿನ್ಯಾಸ ಅಲ್ಲಿನ ಶಿಲಾರಚನೆ ಮತ್ತು ಮೇಲ್ಮೈ ಗುಣವನ್ನು ಪ್ರತಿಬಿಂಬಿಸುತ್ತದೆ. ಇಲ್ಲಿನ ಎಲ್ಲ ನದಿಗಳೂ ಕೇಂದ್ರದ ಉನ್ನತ ಭಾಗದಲ್ಲಿ ಉಗಮಗೊಂಡು ಹರಿದು ಹೋಗುತ್ತವೆ. ಪಶ್ಚಿಮ ಹಾಗೂ ದಕ್ಷಿಣಾಭಿಮುಖವಾಗಿ ಹರಿಯುವ ನದಿಗಳು ಉತ್ತರ ಹಾಗೂ ಈಶಾನ್ಯಕ್ಕೆ ಹರಿಯುವ ನದಿಗಳಿಗಿಂತ ಚಿಕ್ಕವು. ಮಹಾವೆಲ್ ಗಂಗಾ ಅತ್ಯಂತ ದೊಡ್ಡ ನದಿಯಾಗಿದೆ. ಈಶಾನ್ಯ ದಿಕ್ಕಿಗೆ ಹರಿದು ಅನಂತರ ಕೊಡಿಯಾ ಕೊಲ್ಲಿಯನ್ನು ಕೂಡಿಕೊಳ್ಳುತ್ತದೆ. ಇದು ವಿದ್ಯುತ್ ಉತ್ಪಾದನೆ ಹಾಗೂ ನೀರಾವರಿ ದೃಷ್ಟಿಯಿಂದ ಬಹಳ ಪ್ರಾಮುಖ್ಯ ಪಡೆದಿದೆ. ಕಲ, ಯಾನ್, ಕುಂಬುಕಮ್, ವಲವಿ, ಜಿನ್, ಕೆಲಿನಿ, ಪರಂಜಿ ಇತರೇ ನದಿಗಳು.

ಶ್ರೀಲಂಕಾದ ವಾಯುಗುಣದಲ್ಲಿ ಪ್ರಾದೇಶಿಕ ವ್ಯತ್ಯಾಸ ಬಹಳವಾಗಿ ಕಂಡುಬರುತ್ತದೆ. ಇಲ್ಲಿನ ವಾರ್ಷಿಕ ಉಷ್ಣಾಂಶದಲ್ಲಿ ಅಷ್ಟೇನೂ ವ್ಯತ್ಯಾಸ ಕಂಡುಬಾರದಿದ್ದರೂ ದೈನಂದಿನ ಉಷ್ಣಾಂಶದಲ್ಲಿ ನಿಯತಕಾಲಿಕ ಮಾರುತಗಳಿಗುಣವಾಗಿ ಸ್ವಲ್ಪಮಟ್ಟಿನ ವ್ಯತ್ಯಾಸ ಕಂಡುಬರುತ್ತದೆ. ಇದು ಉಷ್ಣವಲಯದ ವ್ಯಾಪ್ತಿಯಲ್ಲಿದ್ದರೂ ಸುತ್ತಲೂ ಇರುವ ಸಾಗರಗಳ ಪ್ರಭಾವವಿದೆ. ತಗ್ಗು ಪ್ರದೇಶಗಳಲ್ಲಿ ಸರಾಸರಿ ಉಷ್ಣಾಂಶ 26.5ಲಿ ಸೆಂ.ನಷ್ಟಿದ್ದು ಅಧಿಕ ತೇವಾಂಶವನ್ನು ಹೊಂದಿದ ವಾತಾವರಣವಿರುತ್ತದೆ. ಮಳೆಯ ಹಂಚಿಕೆಯಲ್ಲಿ ಗಮನಾರ್ಹ ಬದಲಾವಣೆ ಕಂಡು ಬರುತ್ತದೆ. ಪಶ್ಚಿಮ ಹಾಗೂ ದಕ್ಷಿಣ ಭಾಗಗಳಿಗೆ ನೈರುತ್ಯ ಮಾನ್‍ಸೂನ್ ಮಾರುತಗಳಿಂದ ಮಳೆಯಾದರೆ ಉತ್ತರ ಹಾಗೂ ಈಶಾನ್ಯ ಭಾಗಗಳಿಗೆ ನವೆಂಬರ್ ತಿಂಗಳಿನಲ್ಲಿ ಈಶಾನ್ಯ ಮಾರುತಗಳಿಂದ ಅಧಿಕ ಪ್ರಮಾಣದಲ್ಲಿ ಮಳೆಯಾಗುತ್ತದೆ. ಇಲ್ಲಿನ ಮಳೆಯ ಹಂಚಿಕೆಯಲ್ಲಿ ವೈಪರೀತ್ಯ ಕಂಡು ಬರುತ್ತದೆ. ಕೆಲವು ಕಡೆಗಳಲ್ಲಿ ವಾರ್ಷಿಕ ಸರಾಸರಿ 250 ಸೆಂ.ಮೀ. ಮಳೆಯಾದರೆ ಮತ್ತೆ ಕೆಲವು ಕಡೆಗಳಲ್ಲಿ 500 ಸೆಂ.ಮೀ. ಗಳವರೆಗೂ ಮಳೆಯಾಗುತ್ತದೆ.

ಶ್ರೀಲಂಕಾದ ಸಸ್ಯ ವರ್ಗಗಳು ಮಳೆಯ ಹಂಚಿಕೆಯ ಪ್ರಮಾಣವನ್ನು ಪ್ರತಿಬಿಂಬಿಸುತ್ತವೆ. ಹೆಚ್ಚು ಮಳೆ ಬೀಳುವ, ಅಂದರೆ ವಾರ್ಷಿಕ 350 ಸೆಂ.ಮೀ. ಗಿಂತ ಅಧಿಕ ಮಳೆಯಾಗುವ ಕಡೆಗಳಲ್ಲಿ ಉಷ್ಣ ವಲಯದ ನಿತ್ಯ ಹರಿದ್ವರ್ಣ ಕಾಡುಗಳು ಕಂಡುಬರುತ್ತವೆ. ಹಾಗೆಯೇ 250 ಸೆಂ.ಮೀ.ಗೂ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಎಲೆಯುದುರುವ ಮಾನ್‍ಸೂನ್ ಕಾಡುಗಳು ಕಂಡು ಬರುತ್ತವೆ. ಇವು ಲಾಭದಾಯಕ ಕಾಡುಗಳಾಗಿದ್ದು ಉಪಯುಕ್ತ ಮರದ ದಿಮ್ಮಿಗಳ ಉತ್ಪಾದನೆಯಾಗುತ್ತದೆ. ವಾರ್ಷಿಕ 125 ಸೆಂ.ಮೀ. ಗಳಿಗಿಂತಲೂ ಕಡಿಮೆ ಮಳೆ ಬೀಳುವ ಕಡೆಗಳಲ್ಲಿ ಕುರುಚಲು ಕಾಡುಗಳು ಕಂಡುಬರುತ್ತವೆ.

ವ್ಯವಸಾಯ ಈ ದೇಶದ ಪ್ರಮುಖ ಕಸುಬು. ಈ ದೇಶದ ಒಟ್ಟು ಭೌಗೋಳಿಕ ವಿಸ್ತೀರ್ಣದಲ್ಲಿ ಸು. 2 ದಶಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸಾಗುವಳಿ ಮಾಡಲಾಗುತ್ತದೆ. ಬತ್ತ, ಟೀ, ರಬ್ಬರ್, ತೆಂಗು ಇಲ್ಲಿನ ಮುಖ್ಯ ಬೆಳೆಗಳು. ಅಕ್ಕಿ ಇಲ್ಲಿನ ಜನರ ಮುಖ್ಯ ಆಹಾರ. ಇಲ್ಲಿ ಉತ್ಪಾದನೆಯಾಗುವ ಅಕ್ಕಿ ಸ್ಥಳೀಯ ಬೇಡಿಕೆಯನ್ನು ಪೂರೈಸಲು ಸಾಲುವುದಿಲ್ಲವಾದ್ದರಿಂದ ನೆರೆಯ ರಾಷ್ಟ್ರಗಳಿಂದ ಅಧಿಕ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲಾಗುತ್ತಿದೆ. ಹಿಂದೆ ಕಾಫಿ ಈ ದೇಶದ ಪ್ರಮುಖ ತೋಟಗಾರಿಕೆ ಹಾಗೂ ವಾಣಿಜ್ಯ ಬೆಳೆಯಾಗಿತ್ತು. ಆದರೆ ಕಾಫಿ ಗಿಡಗಳಿಗೆ ಅಂಟಿದ ರೋಗಗಳಿಂದ ಕಾಫಿ ಸಂಪೂರ್ಣವಾಗಿ ನಾಶವಾಯಿತು. ಇದಾದ ಅನಂತರ ಟೀ ಬೆಳೆಗೆ ಬಹಳ ಉತ್ತೇಜನ ನೀಡಲಾಯಿತು. ಪ್ರಪಂಚದ ಪ್ರಮುಖ ಟೀ ಉತ್ಪಾದನಾ ರಾಷ್ಟ್ರಗಳಲ್ಲಿ ಇದೂ ಒಂದು. ಇಲ್ಲಿಂದ ಅಧಿಕ ಪ್ರಮಾಣದಲ್ಲಿ ವಿದೇಶಗಳಿಗೆ ಟೀಯನ್ನು ರಫ್ತು ಮಾಡಲಾಗುತ್ತಿದೆ. ಟೀ ಬೆಳೆಯ ಅನಂತರ ರಬ್ಬರ್ ಬೆಳೆಗೆ ಇಲ್ಲಿನ ವಾಯುಗುಣ ಉತ್ತೇಜನಕಾರಿಯಾಗಿದೆ.

ಶ್ರೀಲಂಕಾದಲ್ಲಿ ಖನಿಜ ಸಂಪನ್ಮೂಲಗಳ ನಿಕ್ಷೇಪ ಅಷ್ಟಾಗಿ ಕಂಡು ಬರುವುದಿಲ್ಲ. ಅಲ್ಪ ಪ್ರಮಾಣದಲ್ಲಿ ಉತ್ತಮ ದರ್ಜೆಯ ಕಬ್ಬಿಣದ ಅದುರಿನ ನಿಕ್ಷೇಪವಿದ್ದರೂ ಕಲ್ಲಿದ್ದಿಲಿನ ಕೊರತೆಯಿಂದಾಗಿ ಕಬ್ಬಿಣದ ಅದುರಿನ ಉತ್ಪಾದನೆಯಾಗುತ್ತಿಲ್ಲ. ಈ ದೇಶದ ಕೈಗಾರಿಕೆಗಳ ಹಿನ್ನೆಡೆಗೆ ಇದೂ ಒಂದು ಕಾರಣ. ಗ್ರಾಫೈಟ್ ಇಲ್ಲಿನ ಪ್ರಮುಖ ಖನಿಜ. ದೇಶದಲ್ಲಿ ಒಟ್ಟು 46 ಗ್ರಾಫೈಟ್ ಗಣಿಗಳಿದ್ದು ಅಧಿಕ ಪ್ರಮಾಣದಲ್ಲಿ ಈ ಖನಿಜ ಉತ್ಪಾದನೆಯಾಗುತ್ತಿದೆ. ಇಲ್ಲಿ ಉತ್ಪಾದನೆಯಾಗುವ ಗ್ರಾಫೈಟನ್ನು ಅಮೆರಿಕ ಸಂಯುಕ್ತ ಸಂಸ್ಥಾನಗಳಿಗೆ ರಫ್ತು ಮಾಡಲಾಗುತ್ತಿದೆ. ಇದಲ್ಲದೆ ರತ್ನ, ಪಚ್ಚೆ, ವಜ್ರ ಮುಂತಾದ ಬೆಲೆಬಾಳುವ ಹರಳುಗಳ ಉತ್ಪಾದನೆಗೆ ಶ್ರೀಲಂಕಾ ಪ್ರಖ್ಯಾತಿ ಪಡೆದಿದೆ.

19,238,575 ಜನಸಂಖ್ಯೆಯಿದ್ದು ಇದರಲ್ಲಿ ಸಿಂಹಳೀಯರು ಅಧಿಕ ಸಂಖ್ಯೆಯಲ್ಲಿದ್ದಾರೆ. ತಮಿಳರು ಎರಡನೆಯ ಸ್ಥಾನದಲ್ಲಿದ್ದಾರೆ. ಇಲ್ಲಿನ ಜನಸಾಂದ್ರತೆ ಚ. ಕಿ.ಮೀ.ಗೆ 270 ರಷ್ಟಾಗಿದ್ದು ಸಾಕ್ಷರತಾ ಪ್ರಮಾಣ ಶೇ. 91 ರಷ್ಟಿದೆ. ಏಷ್ಯದ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಇಲ್ಲಿನ ಸಾಕ್ಷರತಾ ಪ್ರಮಾಣ ತೃಪ್ತಿಕರವಾಗಿದೆ. ಇಲ್ಲಿನ ಜನಸಂಖ್ಯೆಯಲ್ಲಿ ಶೇ. 73 ರಷ್ಟು ಬೌದ್ಧರು, ಶೇ. 15 ರಷ್ಟು ಹಿಂದುಗಳು ಹಾಗೂ ಶೇ. 7 ರಷ್ಟು ಮುಸ್ಲಿಮರು, ಶೇ. 5 ರಷ್ಟು ಕ್ರಿಶ್ಚಿಯನ್ ಸಮೂಹದವರಿದ್ದಾರೆ. ಶ್ರೀಲಂಕಾದ ಆರ್ಥಿಕತೆಯಲ್ಲಿ ಪ್ರಮುಖವಾಗಿ ವ್ಯವಸಾಯದಿಂದ ಶೇ. 21, ಕೈಗಾರಿಕೆಗಳಿಂದ ಶೇ. 27.5 ಹಾಗೂ ಸೇವಾಕಾರ್ಯಗಳಿಂದ ಶೇ. 51.5 ಉತ್ಪಾದನೆಯಿದೆ. ಈ ದೇಶದಲ್ಲಿ ನಡೆಯುತ್ತಿರುವ ಪ್ರತ್ಯೇಕತಾ ಸಂಘರ್ಷದಿಂದ ಆರ್ಥಿಕ ಬೆಳೆವಣಿಗೆಗೆ ಕುಂದುಂಟಾಗಿದೆಯೆನ್ನುವರು.

ದೇಶದಲ್ಲಿ ಉತ್ತಮ ಸಾರಿಗೆ ಜಾಲವಿದ್ದು ಸು. 1,500 ಕಿ.ಮೀ. ಉದ್ದ ಬ್ರಾಡ್‍ಗೇಜ್ ರೈಲು ಮಾರ್ಗಗಳನ್ನು ಹೊಂದಿದೆ. ಅಲ್ಲದೆ ಇಲ್ಲಿ 11,285 ಕಿ.ಮೀ. ರಾಷ್ಟ್ರೀಯ ಹೆದ್ದಾರಿಗಳಿದ್ದು ರಾಷ್ಟ್ರದ ಆರ್ಥಿಕ ಬೆಳೆವಣಿಗೆಗೆ ಸಹಕಾರಿಯಾಗಿವೆ. ಕೊಲೊಂಬೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಪಂಚದ ಇತರ ಭಾಗಗಳಿಗೆ ವಿಮಾನಯಾನ ಸೌಲಭ್ಯವಿದೆ. ಅನುರಾಧಪುರ, ಟ್ರಿಂಕಾಮಲೈ, ಪುತ್ತಲಮ್, ಚಿಲಾ, ಕುರುನೆಗಲ, ನೆಗೊಮ್‍ಬೊ, ಕ್ಯಾಂಡಿ, ಮತಲೆ, ಬದುಲ್ಲ, ರತ್ನಪುರ, ಕಲುತರ, ಮೊರಟವು ಇವು ಇಲ್ಲಿಯ ಮುಖ್ಯ ಪಟ್ಟಣಗಳೂ ಸುಂದರ ಸ್ಥಳಗಳೂ ಆಗಿವೆ. ತಲೈಮನ್ನಾರ್, ಜಾಫ್ನ ಸುಂದರ ದ್ವೀಪಗಳೂ ಬಂದರೂ ಆಗಿವೆ.

ಕೊಲಂಬೋ ಈ ದೇಶದ ಪ್ರಮುಖ ಬಂದರು ನಗರ. ಜನಸಂಖ್ಯೆ 6,83,000. ಶ್ರೀಲಂಕಾದ ಪಶ್ಚಿಮ ತೀರದಲ್ಲಿರುವ ಈ ನಗರವನ್ನು ಸು. 1300ರಲ್ಲಿ ಸ್ಥಾಪಿಸಲಾಯಿತೆನ್ನುವರು. 1505ರಲ್ಲಿ ಇಲ್ಲಿಗೆ ಬಂದ ಪೋರ್ಚುಗೀಸರು ಪ್ರಥಮ ಯುರೋಪಿಯನ್ನರು. 1656 ರಿಂದ 1796 ರವರೆಗೆ ಡಚ್ಚರು ಈ ನಗರವನ್ನು ಆಕ್ರಮಿಸಿಕೊಂಡಿದ್ದರು. ಇವರ ಕಾಲದಲ್ಲಿ ಕಟ್ಟಿದ ಅನೇಕ ಕಟ್ಟಡಗಳು ಇಂದಿಗೂ ಇವೆ. ಇದರಲ್ಲಿ 1749ರಲ್ಲಿ ನಿರ್ಮಿಸಿದ ವುಲ್ಫೆನ್‍ಡಾಲ್ ಚರ್ಚ್ ಪ್ರಸಿದ್ಧ. ಕೊಲಂಬೋ ಹತ್ತಿರದ ಕಲನೀಯ ದೇಗುಲಕ್ಕೆ ಬುದ್ಧ ಭೇಟಿ ನೀಡಿದ್ದನೆನ್ನುವರು. ಇಂದು ಈ ನಗರ ಒಂದು ದೊಡ್ಡ ವ್ಯಾಪಾರ ವಾಣಿಜ್ಯ ಕೇಂದ್ರ. ಶ್ರೀಲಂಕಾ ವಿಶ್ವವಿದ್ಯಾಲಯವಿರುವ ವಿದ್ಯಾಕೇಂದ್ರವೂ ಆಗಿದೆ.

ಶ್ರೀಲಂಕಾವಿರುವ ಭೌಗೋಳಿಕ ಸ್ಥಾನ ಹಾಗೂ ಸಂಪನ್ಮೂಲಗಳಿಂದಾಗಿ ದಕ್ಷಿಣ ಏಷ್ಯದ ಮುಖ್ಯ ರಾಷ್ಟ್ರಗಳಲ್ಲೊಂದಾಗಿದ್ದು ಹೆಚ್ಚು ಆರ್ಥಿಕ ಹಾಗೂ ರಾಜಕೀಯ ಪ್ರಾಬಲ್ಯ ಪಡೆಯಲು ಪ್ರಯತ್ನಿಸುತ್ತಿದೆ. ಇಲ್ಲಿ ನಡೆಯುತ್ತಿರುವ ಆಂತರಿಕ ಕಲಹ ನಿಂತರೆ, ಮುಂದೆ ಈ ದೇಶವೂ ಆರ್ಥಿಕ ಪ್ರಾಬಲ್ಯ ಸಾಧಿಸುವುದರಲ್ಲಿ ಸಂಶಯವಿಲ್ಲ. 2004 ಡಿಸೆಂಬರ್ 26ರಂದು ಅಪ್ಪಳಿಸಿದ ಸುನಾಮಿ ಅಲೆಗಳಿಂದಾಗಿ ಕಷ್ಟನಷ್ಟಗಳಿಗೆ ಗುರಿಯಾದ ದೇಶಗಳಲ್ಲಿ ಶ್ರೀಲಂಕಾ ಸಹ ಸೇರಿದೆ.

(ಆರ್.ಎಸ್.ಇ.)