ಪುಟ:ಕ್ರಾಂತಿ ಕಲ್ಯಾಣ.pdf/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೧೪

ಕ್ರಾಂತಿ ಕಲ್ಯಾಣ

ಗಲಭೆ ಹೆಚ್ಚಬಹುದೆಂದು ತಿಳಿದು ಸಭಿಕನು ಗದ್ದಿಗೆಯಿಂದ ಎದ್ದು ಬಂದು, ಹಾಡುಗಾರನ ಕೈಗೊಂದು ಹಣ ಕೊಟ್ಟು ಹೊರಗೆ ಹೋಗಲು ಹೇಳುತ್ತಿದ್ದಂತೆ ನಗರದ ತಳವಾರ ನಾಯಕ ಇಬ್ಬರು ಭಟರೊಡನೆ ಅಲ್ಲಿಗೆ ಬಂದ.

ಹಾಡುಗಾರ ಜನರ ನಡುವೆ ನುಸುಳಿಕೊಂಡು ಹೋಗಲು ಹವಣಿಸಿದ. ತಳವಾರ ನಾಯಕನು ಅವನನ್ನು ತಡೆದು ನಿಲ್ಲಿಸಿ,

"ಆ ಪದ ಇನ್ನೊಂದ್ಸಾರಿ ಹೇಳು ಕೇಳೋಣ," ಎಂದ.

ಹಾಡುಗಾರ ತಬ್ಬಿಬ್ಬಾಗಿ, "ಯಾವ ಪದ, ನಾಯಕರೆ?" ಎಂದ.

"ನೀನು ಹಾಡುತಿದ್ದೆಯಲ್ಲ, ಆ ಪದ."

"ಗಾಳಿ ಸುಳಿದ ಹಾಂಗ ನನ್ನ ಬಾಯಿಂದ ಪದಗಳು ಬರ್ತಾವ್ರಿ. ಏನ್ ಹಾಡಿದೆನೋ ನೆನಪಿದ್ರ ತಾನೆ ತಿರುಗಿ ಹೇಳೋದು,"–ಎಂದು ಹಾಡುಗಾರ ಜಾರಿಕೊಳ್ಳಲು ನೋಡಿದ.

ನಾಯಕ ಬಿಡಲಿಲ್ಲ. "ಚಾಲುಕ್ಯರಾಣಿ ಕಾಮೇಶ್ವರೀದೇವಿಯವರನ್ನು ಹಾಸ್ಯ ಮಾಡಿ ಹಾಡು ಕಟ್ಟಿ ಹಾಡಲಿಲ್ವೆ ನೀನು?" ಎಂದು ಗದರಿಸಿ ಕೇಳಿದ. "ಚಾಲುಕ್ಯ ರಾಜ್ಯಲಕ್ಷ್ಮಿಬಿಜ್ಜಳರಾಯರಿಗೆ ಒಲಿದಾಳ ಅಂತ ಹಾಡಿದ್ದುಂಟು ನಾಯಕರೆ. ಚಾಲುಕ್ಯರಾಣೀ ಇಚಾರ ನಂಗೇಕೆ?"

"ಬಿಜ್ಜಳರಾಯರು ಚಾಲುಕ್ಯರಾಜ್ಯಾನ ಅಪಹರಿಸಿದ್ರು ಎಂತ ನೀ ಹೇಳಿಲ್ಲೆ? ಚಾಲುಕ್ಯ ರಾಣಿಯನ್ನು ಹಾಸ್ಯಮಾಡಿದ್ದು, ಬಿಜ್ಜಳರಾಯರನ್ನ ದೂರಿದ್ದು, ಹಿಂಗ ಎರಡು ರಾಜದ್ರೋಹ ಮಾಡಿದ್ದೀಯ ನೀನು. ನಡೆ ನನ್ನ ಸಂಗಡ."

ನಾಯಕನ ಸನ್ನೆಯಂತೆ ಭಟರು ಹಾಡುಗಾರನನ್ನು ಹಿಡಿದು ಹಿಂಗಟ್ಟು ಮುರಿಕಟ್ಟಿ ಎಳೆದುಕೊಂಡು ಹೋದರು. ಹಾಡುಗಾರನ ಸಂಗಡಿದ್ದವರು ಭಟರನ್ನು ನೋಡಿದಾಗಲೆ ಚದುರಿದ್ದರು. ಕಣ್ಣ ಮುಂದೆ ಇದೆಲ್ಲ ನಡೆದರೂ ಕಾಣದವರಂತೆ ಕುಳಿತಿದ್ದರು ಪಾನಿಕರು. ರಾಜಕೀಯ ಅನಾಸಕ್ತಿ ಆಗಿನ ಎಲ್ಲ ವರ್ಗದ ಜನರ ರಕ್ಷಾಕವಚವಾಗಿತ್ತು.

ಪಾತ್ರೆಯನ್ನು ಕೆಳಗಿಟ್ಟು ಬೆಬ್ಬೆರಗಾಗಿ ನೋಡುತ್ತಿದ್ದ ಶೆಟ್ಟಿ, "ಅವನನ್ನ ಹಿಡಕೊಂಡು ಹೋದದ್ದೇಕೆ, ರಂಗಣ್ಣ?" ಎಂದು ಗೆಳೆಯನನ್ನು ಕೇಳಿದ.

"ಇದನ್ನು ಕುಡಿದು ಮುಗಿಸಿರಿ, ಶೆಟ್ರ. ಹೊರಗೆ ಹೋದ ಮೇಲೆ ಹೇಳ್ತೇನು," -ಎಂದ ರಂಗಣ್ಣ.

ಅವರು ಹೊರಗೆ ಬಂದಾಗ ಉದ್ಯಾನದ ಎಲ್ಲ ಕಡೆ ರಾಜಭಟರು, ರಾಹುತರು ಪಹರೆ ಕೊಡುತ್ತಿದ್ದರು. ರಾಜಮಾರ್ಗದ ಇಕ್ಕೆಲಗಳಲ್ಲಿ ಜನ ಕಿಕ್ಕಿರಿದಿತ್ತು.