ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಹಾದೇವಯ್ಯ ಕಂಸಾಳೆ

ವಿಕಿಸೋರ್ಸ್ದಿಂದ

ಮಹಾದೇವಯ್ಯ ಕಂಸಾಳೆ 1920-96. ಪ್ರಸಿದ್ಧ ಜನಪದ ಕಲಾವಿದ. ಇವರ ಮೂಲ ಹೆಸರು ಬಡಗಲಹುಂಡಿ ಮಹಾದೇವಯ್ಯ. ಕಂಸಾಳೆ ಜನಪದ ಕಲೆಗಾಗಿ ತಮ್ಮ ಬದುಕನ್ನು ಅರ್ಪಿಸಿಕೊಂಡದ್ದರಿಂದ ಇವರು ಕಂಸಾಳೆ ಮಹದೇವಯ್ಯ ಎಂದೇ ಪ್ರಸಿದ್ಧರು. ಮೂಲತಃ ಇವರು ಮೈಸೂರು ತಾಲ್ಲೂಕಿನ ವರಕೋಡು ಹೋಬಳಿಯ ಬಡಗಲಹುಂಡಿಯವರು. ಸು.1920ರಲ್ಲಿ ಜನಿಸಿದರು. ಕಂಸಾಳೆ ಕಲೆ ಇವರಿಗೆ ವಂಶಪಾರಂಪರ್ಯವಾಗಿ ಬಂದ ಆಸ್ತಿ. ಇವರ ತಂದೆ ನಂಜಯ್ಯನವರೂ ಕಂಸಾಳೆ ಕಲಾವಿದರಾಗಿದ್ದು ಮೈಸೂರಿಗೆ ಬಂದು ಹಾಲು ಮಾರುವ ವೃತ್ತಿಯಲ್ಲಿ ತಮ್ಮನ್ನುತೊಡಗಿಸಿ ಕೊಂಡಿದ್ದರು. ಬಾಲ್ಯದಲ್ಲಿ ಈ ಕಲೆಯನ್ನು ತಂದೆಯಿಂದ ಕಲಿಯಲು ಇವರು ಇಷ್ಟ ಪಡಲಿಲ್ಲ. ಇವರ ತುಂಟಾಟ ಸಹಿಸದ ತಂದೆ ಕಂಬಕ್ಕೆ ಕಟ್ಟಿ ಹಾಕುತ್ತಿದ್ದುದುಂಟು. ಅಂಥ ಒಂದು ಸಂದರ್ಭದಲ್ಲಿ ಮನೆ ಮುಂದಿನ ದಾರಿಯಲ್ಲಿಸಾಗುತ್ತಿದ್ದ ನೀಲಗಾರ ಜೋಗಿಯೊಬ್ಬರು ಈ ಬಾಲಕನನ್ನು ಕಂಬದಿಂದ ಬಿಡಿಸಿದರಂತೆ. ಆ ನೀಲಗಾರ ಜೋಗಿಯಿಂದ ಕಂಸಾಳೆ ಕಲಿತ ಮಹಾದೇವಯ್ಯ ಹತ್ತು ವರ್ಷಗಳ ತರುವಾಯ ಪುನಃ ಮನೆಯವರಿಗೆ ಕಾಣಿಸಿಕೊಂಡದ್ದು ನಂಜನಗೂಡಿನ ಜಾತ್ರೆಯಲ್ಲಿ. ಮನೆಬಿಟ್ಟು ಹೋದಾಗಿನಿಂದ ಅವಿರತವಾಗಿ ಈ ಕಲೆಯನ್ನು ಕಲಿತು ಸ್ವಂತ ತಂಡವೊಂದನ್ನು ಅಷ್ಟು ಹೊತ್ತಿಗೆ ಕಟ್ಟಿಕೊಂಡಿದ್ದರು.

ಮಹದೇಶ್ವರನ ಒಕ್ಕಲೆಂದೇ ಕರೆಯಲಾಗುವ ದಕ್ಷಿಣ ಕರ್ನಾಟಕದ ಈ ಜನ ದೀಪಾವಳಿಯಂಥ ಹಬ್ಬಗಳ ಸಂದರ್ಭದಲ್ಲಿ ದೇವರ ಹೆಸರಿನಲ್ಲಿ ಮಹದೇಶ್ವರನ ಕಾವ್ಯವನ್ನು ಹಾಡುತ್ತ ಕಂಸಾಳೆ ಕುಣಿಯುತ್ತ ಬೆಟ್ಟಕ್ಕೆ ಹೋಗುವುದೊಂದು ವಾಡಿಕೆ. ಮಹಾದೇವಯ್ಯನವರು ಈ ಪರಂಪರೆಗೆ ಸೇರಿದವರು. ನಂಜನಗೂಡಿನಲ್ಲಿ ಪತ್ತೆಯಾದ ಮಹಾದೇವಯ್ಯ ಪುನಃ ಓಡಿಹೋಗಬಹುದೆಂದು ಹೆದರಿದ ಮನೆಯವರು ಏಳರ ಬಾಲೆ ಪುಟ್ಟಮಾದಮ್ಮನವರ ಜೊತೆ ವಿವಾಹ ಮಾಡಿಸಿದರು. ಅನಂತರ ಇವರಿಗೆ ರೈಲ್ವೆ ಇಲಾಖೆಯಲ್ಲಿ ಕೆಲಸವೊಂದನ್ನು ಕೊಡಿಸಿದರು. ಕಂಸಾಳೆ ಪ್ರದರ್ಶನ ನೀಡಲು ಕಚೇರಿ ನಿಯಮಾವಳಿಗಳು ಅಡ್ಡ ಬರುತ್ತಿದ್ದುವು. ಇದರಿಂದ ಬೇಸತ್ತ ಇವರು ತಮ್ಮ ನೌಕರಿ ತ್ಯಜಿಸಿ ಸ್ವತಂತ್ರ ಕಲಾವಿದರಾದರು. ಇವರ ಕಲಾಸಾಧನೆಯನ್ನು ಗುರುತಿಸಿದ ಮೈಸೂರು ವಿಶ್ವವಿದ್ಯಾನಿಲಯ ಇವರನ್ನು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಗೆ ಸಂದರ್ಶಕ ಕಲಾವಿದರನ್ನಾಗಿ ನೇಮಿಸಿಕೊಂಡಿತು. ಇಲ್ಲಿನ ಜಾನಪದ ವಸ್ತುಸಂಗ್ರಹಾಲಯದಲ್ಲಿ ಹಲವಾರು ವರ್ಷ ದುಡಿದು ಮಹಾದೇವಯ್ಯನವರು ಸ್ಥಳೀಯ ಹಾಗೂ ಹೊರರಾಜ್ಯಗಳ ವಿದ್ಯಾರ್ಥಿಗಳಿಗೆ, ಅಧ್ಯಾಪಕರಿಗೆ, ಆಸಕ್ತರಿಗೆ, ಕಂಸಾಳೆಕಲೆ ಕಲಿಸಿದರು. ಗಂಡುಕಲೆ ಕಂಸಾಳೆಯನ್ನು ಮಹಿಳೆಯರಿಗೆ ಮೊದಲು ಕಲಿಸಿದ ಕೀರ್ತಿಯೂ ಇವರದು. ದೇಶದ ನಾನಾ ಕಡೆಗಳಲ್ಲಿ ತರಬೇತಿಗಳನ್ನು ನೀಡಿದ ಇವರು ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ, ಮೈಸೂರಿನ ರಂಗಾಯಣ ಮುಂತಾದ ಪ್ರತಿಷ್ಠಿತ ಸಂಸ್ಥೆಗಳ ಕಲಾವಿದರಿಗೆ ಕಂಸಾಳೆ ತರಬೇತಿ ನೀಡಿದರು. 1950ರ ದಶಕದಲ್ಲಿ ಎಂ.ವಿ.ಗೋಪಾಲಸ್ವಾಮಿಯವರು ಮೈಸೂರಿನಲ್ಲಿ ಆಕಾಶವಾಣಿ ಆರಂಭಿಸಿದಾಗ ಬಿತ್ತರವಾದ ಮೊದಲ ಜನಪದ ಗೀತೆ ಮಹಾದೇವಯ್ಯನವರದು.

ಅಪ್ಪಟ ಜನಪದ ಕಲಾವಿದರಾದ ಇವರು ಕಂಸಾಳೆ ಕಲೆಯನ್ನು ದೇಶಾದ್ಯಂತ ಪ್ರದರ್ಶಿಸಿದರು. 1974ರಲ್ಲಿ ಅಂತಾರಾಷ್ಟ್ರೀಯ ಜನಪದ ಕಲಾ ಮೇಳದಲ್ಲಿ ಭಾರತವನ್ನು ಪ್ರತಿನಿಧಿಸಿ ಇಟಲಿ, ಟರ್ಕಿ, ಸೈಪ್ರಸ್ ಮುಂತಾದ ಹೊರದೇಶಗಳಲ್ಲೂ ತಮ್ಮ ತಂಡದ ಪ್ರದರ್ಶನ ನೀಡಿ ಪ್ರತಿಭೆ ಪ್ರದರ್ಶಿಸಿದರು. ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಭಾಗವಹಿಸಿದ ಇವರ ಕಲಾತಂಡದ ಪ್ರದರ್ಶನವನ್ನು ಅಂದಿನ ಪ್ರಧಾನಿಗಳಾಗಿದ್ದ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಮೆಚ್ಚಿಕೊಂಡಿದ್ದರು.

ಇವರಿಗೆ ಅನೇಕ ಪ್ರಶಸ್ತಿ ಗೌರವಗಳು ದೊರೆತಿವೆ. ಅವುಗಳಲ್ಲಿ ಮುಖ್ಯವಾದವು- ಕರ್ನಾಟಕ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (1968), ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ (1982), ಇಂದಿರಾಗಾಂಧಿ ಫೆಲೋಶಿಪ್ (1988), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1990), ಕರ್ನಾಟಕ ಸರ್ಕಾರದ ಅತ್ಯುನ್ನತ ಪ್ರಶಸ್ತಿಗಳಲ್ಲೊಂದಾದ 1995ನೆಯ ಸಾಲಿನ ಜಾನಪದಶ್ರೀಯನ್ನು ಮರಣೋತ್ತರವಾಗಿ ಇವರಿಗೆ ಪ್ರದಾನ ಮಾಡಲಾಗಿದೆ. ಇವರ ಸಿರಿಕಂಠದಲ್ಲಿ ಮಲೆಯ ಮಹದೇಶ್ವರ ಕಾವ್ಯದ ಇಪ್ಪತ್ತೈದು ಧ್ವನಿಸುರುಳಿಗಳು ಹೊರಬಂದಿವೆ. ಇವರ ಕಂಸಾಳೆ ಪ್ರದರ್ಶನಗಳನ್ನು ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಚಲನಚಿತ್ರಗಳಲ್ಲೂ ಬಳಸಿಕೊಳ್ಳಲಾಗಿದೆ. ಏಕತಾರಿ ಹಾಗೂ ಕಂಜರಿಗಳನ್ನೂ ನುಡಿಸುತ್ತಿದ್ದ ಇವರ ಸಂಗೀತವನ್ನು ವಂಶವೃಕ್ಷ ಚಲನಚಿತ್ರದಲ್ಲಿ ಅಳವಡಿಸಿಕೊಂಡಿದೆ. ಮಹಾದೇವಯ್ಯ ಸಂಪ್ರದಾಯ ನಿಷವಿರಾಗಿದ್ದರು. ಸೋಮವಾರ ಹಾಗೂ ಶುಕ್ರವಾರ ಕ್ವಾರಣ್ಯ(ಭಿಕ್ಷೆ)ಕ್ಕಾಗಿ ಕಂಸಾಳೆ ನುಡಿಸುತ್ತ ಮನೆ ಮನೆಗೆ ತೆರಳುತ್ತಿದ್ದುದುಂಟು. ಈ ಕಾಯಕವನ್ನು ಸಾಯುವವರೆಗೂ ನಿಲ್ಲಿಸಲಿಲ್ಲ. ನೋಡುಗರ ಮೈನವೀರೇಳುವಂತೆ ಕಂಸಾಳೆ ನೃತ್ಯ ಪ್ರದರ್ಶನ ನೀಡುತ್ತಿದ್ದ ಮಹಾದೇವಯ್ಯನವರ ಕಲೆಯಲ್ಲಿ ನೈಪುಣ್ಯ ಹಾಗೂ ಜನಪದ ಸೊಗಡು ಹದವಾಗಿ ಬೆರೆತಿರುತ್ತಿದ್ದುವು. ಕುಣಿತದ ಭಂಗಿ ಹಾಗೂ ಗತ್ತುಗಳಿಂದ ಇವರು ನಾಡಿನ ಅಪರೂಪದ ಕಲಾವಿದರಾಗಿದ್ದರು. ಇವರು 1996 ಏಪ್ರಿಲ್ 21ರಂದು ಮೈಸೂರಿನಲ್ಲಿ ನಿಧನರಾದರು.

ಇವರ ಮಗ ಕುಮಾರಸ್ವಾಮಿ ತಂದೆಯಂತೆಯೇ ಕಂಸಾಳೆ ಕಲೆಯಲ್ಲಿ ಪ್ರಾವೀಣ್ಯ ಪಡೆದಿದ್ದಾರೆ. ಮೊಮ್ಮಕ್ಕಳಾದ ಕೆ.ರವಿಚಂದ್ರ ಹಾಗೂ ಕೆ.ಮಹದೇವ ಕೂಡ ಈ ಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. (ಎಸ್.ಬಿಎಚ್‍ಎ.)