ಪುಟ:ಭಾರತ ದರ್ಶನ.djvu/೪೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೊನೆಯ ಅ೦ಕ ೩

೪೩೧

ಮಾಡಿತು. ಆ ಮಹಾ ನಿರ್ಣಯದಲ್ಲಿ ಎಲ್ಲ ವಿಷಯಗಳೂ ಅಡಗಿದ್ದು ವಲ್ಲದೆ, ಭಾರತದ ಸ್ವಾತಂತ್ರ್ಯಕ್ಕೆ ಕೂಡಲೇ ಮನ್ನಣೆ ದೊರೆಯಬೇಕೆಂದೂ, “ಭಾರತದ ಹಿತದೃಷ್ಟಿಯಿಂದ ಮತ್ತು ಮಿತ್ರರಾಷ್ಟ್ರಗಳ ಜಯದ ದೃಷ್ಟಿಯಿಂದ” ಭಾರತದಲ್ಲಿ ಬ್ರಿಟಿಷರ ಆಡಳಿತವು ಕೊನೆಗಾಣಬೇಕೆಂದೂ ಸಕಾರಣ ಘೋಷಿಸಲಾಗಿತ್ತು, “ಆ ಆಡಳಿತ ಮುಂದುವರಿದರೆ ಭಾರತವನ್ನು ಅಧೋಗತಿಗೆ ತಳ್ಳಿದಂತೆ, ದುರ್ಬಲಗೊಳಿಸದಂತೆ, ಸ್ವರಕ್ಷಣೆಗೆ ಮತ್ತು ಪ್ರಪಂಚದ ಸ್ವಾತಂತ್ರ್ಯ ರಕ್ಷಣೆಗೆ ಸಹಾಯಮಾಡಲು ಅದಕ್ಕೆ ಇರುವ ಶಕ್ತಿಯನ್ನು ದಿನೇ ದಿನೇ ಕುಗ್ಗಿಸಿದಂತೆ”; “ಸಾಮ್ರಾಜ್ಯ ಸ್ವಾಮ್ಯವು ತನ್ನ ಅಧೀನ ಜನಾಂಗದ ಶಕ್ತಿಯನ್ನು ಹೆಚ್ಚಿಸುವ ಬದಲು ಒಂದು ಹೊರೆಯಾಗಿ ಶಾಪವಾಗಿದೆ; ಆಧುನಿಕ ಸಾಮ್ರಾಜ್ಯ ನೀತಿಗೆ ಉತ್ತಮ ನಿದರ್ಶನವಾದ ಭಾರತದ ಸ್ವಾತಂತ್ರವೇ ಈ ಪ್ರಶ್ನೆಯ ಮುಖ್ಯ ತಿರುಳು; ಬ್ರಿಟನ್ನಿನ ಮತ್ತು ಯುಕ್ತ ರಾಷ್ಟ್ರಗಳ ಪರೀಕ್ಷೆ ಭಾರತದ ಸ್ವಾತಂತ್ರದಿಂದ; ಭಾರತ ಸ್ವತಂತ್ರವಾದರೆ ಮಾತ್ರ ಏಷ್ಯ ಮತ್ತು ಆಫ್ರಿಕದ ಜನರಲ್ಲಿ ಆಸೆ ಮತ್ತು ಉತ್ಸಾಹ ಉತ್ಪನ್ನವಾಗುತ್ತವೆ.” ಎಂದೆವು. ಒಂದು ತಾತ್ಕಾಲಿಕ ಸರಕಾರ ಏರ್ಪಡಿಸಬೇಕೆಂದೂ, ಜನತೆಯ ಎಲ್ಲ ಮುಖ್ಯ ಪಂಗಡಗಳ ಪ್ರತಿನಿಧಿಗಳೂ ಅದರಲ್ಲಿ ಇರಬೇಕೆಂದೂ, ಅದರ ಪ್ರಥಮ ಕರ್ತವ್ಯವು ಮಿತ್ರ ರಾಷ್ಟ್ರಗಳೊಂದಿಗೆ ಸಹಕರಿಸಿ ತನ್ನ ಎಲ್ಲ ಶಸ್ತ್ರಸಜ್ಜಿತ ಸೈನ್ಯ ಮತ್ತು ಅಹಿಂಸಾ ಶಕ್ತಿಗಳ ಸಹಾಯ ದಿಂದ ಪರಾಕ್ರಮಣ ಎದುರಿಸಿ ಭಾರತ ರಕ್ಷಣೆ ನೋಡಿಕೊಳ್ಳುವುದೇ ಎಂದೂ,” ತಿಳಿಸಿದೆವು. “ಭಾರತದ ಎಲ್ಲ ಪಂಗಡಗಳಿಗೆ ಒಪ್ಪಿಗೆಯಾದ ಒಂದು ಸಂವಿಧಾನ ರಚಿಸಲು ಈ ಸರಕಾರ ಒಂದು ಸಂವಿಧಾನ ಸಭೆ ಏರ್ಪಡಿಸಲು ಯೋಚಿಸಬೇಕೆಂದೂ; ಆ ಸಂವಿಧಾನವು ಹೆಚ್ಚಿನ ಸ್ವಾತಂತ್ರ್ಯವಿರಬೇಕೆಂದೂ ಕಳೆದುಳಿದ ಅಧಿಕಾರ ಸಹ ಸಂಯೋಜಿತ ಪ್ರಾಂತ್ಯಗಳೇ ಇರಬೇಕೆಂದೂ ತಿಳಿಸಿದೆವು.” “ಜನತೆಯ ಸುಸಂಘಟಿತ ಇಚ್ಛೆ ಮತ್ತು ಶಕ್ತಿಯ ಬೆಂಬಲದಿಂದ ಯಶಸ್ವಿಯಾಗಿ ಪರಾಕ್ರಮಣ ಎದುರಿಸಬೇಕಾದರೆ ಭಾರತ ಸತಂತ್ರವಾದರೆ ಮಾತ್ರ ಸಾಧ್ಯ” ಎಂದು ಹೇಳಿದೆವು.

ಭಾರತದ ಈ ಸ್ವಾತಂತ್ರ್ಯ ಏಷ್ಯದ ಇತರ ರಾಷ್ಟ್ರಗಳ ಸ್ವಾತಂತ್ರ್ಯಕ್ಕೆ ಸಂಕೇತವೂ ಆರಂಭವೂ ಆಗ ಬೇಕೆಂದೆವು. ಯುಕ್ತ ರಾಷ್ಟ್ರ ಸಂಸ್ಥೆಯನ್ನೇ ಮೂಲಾಧಾರ ಇಟ್ಟು ಕೊಂಡು, ಇಡೀ ಪ್ರಪಂಚಕ್ಕೊಂದು ಸ್ವತಂತ್ರ ರಾಷ್ಟ್ರಗಳ ಸಂಯುಕ್ತ ರಾಜ್ಯ ಪದ್ಧತಿ ಇರಬೇಕೆಂದೆವು.

ಚೀನಾ ಮತ್ತು ರಷ್ಯದ ಉದಾಹರಣೆಗಳಿಂದ ಸ್ವಾತಂತ್ರದ ಬೆಲೆ ಅರಿತಿರುವೆವೆಂದೂ, ಆ ಸ್ವಾತಂತ್ರ್ಯವನ್ನು ರಕ್ಷಿಸಬೇಕೆಂದೂ, ಆದ್ದರಿಂದ ಆ ರಾಷ್ಟ್ರಗಳು ರಕ್ಷಣೆಗೆ ಯಾವ ವಿಧದಲ್ಲೂ ಅಡ್ಡಿ ಬರಲು ಕಾರ್ಯ ಸಮಿತಿಗೆ ಇಷ್ಟವಿಲ್ಲವೆಂದೂ, ಮತ್ತು ಯುಕ್ತ ರಾಷ್ಟ್ರಗಳ ರಕ್ಷಣಾಶಕ್ತಿಯನ್ನು ಸಹ ಯಾವ ವಿಧದಲ್ಲೂ ಅಪಾಯಕ್ಕೀಡುಮಾಡಲು ಇಷ್ಟವಿಲ್ಲವೆಂದೂ ತಿಳಿಸಿದೆವು (ಆಗ ಚೀನಾ ಮತ್ತು ರಷ್ಯಗಳ ಪರಿಸ್ಥಿತಿ ಬಹಳ ಚಿಂತಾಜನಕವಿತ್ತು.) "ಆದರೆ ಭಾರತಕ್ಕೂ, ಈ ದೇಶಗಳಿಗೂ ಅಪಾಯ ಹೆಚ್ಚುತ್ತಿದೆ. ಈ ಕಾಲದಲ್ಲಿ ನಿಚ್ಚೇತನರಾಗಿ ಪರಾಡಳಿತಕ್ಕೆ ಅಧೀನವಾಗಿರುವುದು ಭಾರತಕ್ಕೆ ಅಪಮಾನ ಮಾತ್ರವಲ್ಲದೆ, ಭಾರತದ ಆತ್ಮ ರಕ್ಷಣೆಯ ಮತ್ತು ಪರಧಾಳಿ ಎದುರಿಸುವ ಶಕ್ತಿಯನ್ನು ಕಡಿಮೆಮಾಡಿದಂತಾಗುತ್ತದೆ, ನಮ್ಮೆದುರು ಬೆಳೆದು ಕವಿಯುತ್ತಿರುವ ವಿಪತ್ತಿಗೆ ಅದು ಉತ್ತರವಲ್ಲ. ಯುಕ್ತ ರಾಷ್ಟ್ರಗಳ ಜನರ ಸೇವೆ ಸಲ್ಲಿಸಿದಂತೆ ಆಗುವುದಿಲ್ಲ" ಎಂದೆವು.

“ಪ್ರಪಂಚದ ಸ್ವಾತಂತ್ರ್ಯದ ಹೆಸರಿನಲ್ಲಿ ಈ ರೀತಿ ಬ್ರಿಟನ್ ಮತ್ತು ಯುಕ್ತ ರಾಷ್ಟ್ರಗಳಿಗೆ ಕಾರ್ಯ ಸಮಿತಿ ವಿನಯದಿಂದ ಪ್ರಾರ್ಥಿಸಿತು. ಆಮೇಲೆ ಆ ನಿರ್ಣಯದಲ್ಲಿ ಮುಂದೆ ಒಂದು ಕಹಿಯೂ ಇತ್ತು. “ರಾಷ್ಟ್ರ ಜೀವನವನ್ನೆಲ್ಲ ಆಕ್ರಮಿಸಿ, ರಾಷ್ಟ್ರದ ಹಿತಕ್ಕೆ ಮತ್ತು ಮಾನವೀಯತೆಯ ಹಿತಕ್ಕೆ ಶ್ರಮಿಸಲು ಅಡ್ಡಿ ಬರುತ್ತಿರುವ ನಿರಂಕುಶ ಸಾಮ್ರಾಜ್ಯ ಸರಕಾರವನ್ನು ಪ್ರತಿಭಟಿಸಿ ರಾಷ್ಟ್ರದ ಇಚ್ಛೆ ಪೂರ್ಣಮಾಡಲು ಕಾತರಗೊಂಡ ಜನತೆಯನ್ನು ಹಿಡಿದು ನಿಲ್ಲಿಸಲು ಈ ಕಾಂಗ್ರೆಸ್ ಸಮಿತಿಗೆ ಇನ್ನು ಮುಂದೆ ಸಾಧ್ಯವಿಲ್ಲ. ಆದ್ದರಿಂದ ಭಾರತದ ಆಜನ್ಮಸಿದ್ದ ಸ್ವಾತಂತ್ರ್ಯದ ಹಕ್ಕನ್ನು ಸ್ಥಾಪಿಸಲು ಗಾಂಧೀಜಿಯ ನೇತೃತ್ವದಲ್ಲಿ ಅಹಿಂಸಾತ್ಮಕ ಜನತಾಚಳುವಳಿ ಹೂಡಲು ಗಾಂಧೀಜಿಗೆ ಅಧಿಕಾರ ಕೊಡುತ್ತದೆ;” ಗಾಂಧಿಜಿಗೆ ಸೂಕ್ತ ಕಂಡಾಗ ಮಾತ್ರ ಈ ಅಧಿಕಾರ ಉಪಯೋಗಿಸತಕ್ಕದ್ದು. ಕೊನೆಯಲ್ಲಿ ಕಾಂಗ್ರೆಸ್ಸಿಗೆ ಅಧಿಕಾರದ ಆಸೆ ಇಲ್ಲವೆಂದೂ, ಅಧಿಕಾರ ದೊರೆತರೆ ಅದು ಭಾರತದ ಎಲ್ಲ ಜನರಿಗೆ ಎಂದೂ ತಿಳಿಸಿದೆವು.