ಪುಟ:ಭಾರತ ದರ್ಶನ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೬

ಭಾರತ ದರ್ಶನ

ಬೌದ್ಧ ಮತ, ಜೈನಮತ ನಿಶ್ಚಯವಾಗಿಯೂ ಹಿಂದೂ ಮತಗಳಲ್ಲ; ವೈದಿಕ ಧರ್ಮವಂತೂ ಖಂಡಿತ ಅಲ್ಲ. ಆದರೂ ಅವು ಹುಟ್ಟಿದ್ದು ಇಂಡಿಯದಲ್ಲಿ, ಭಾರತದ ಜನಜೀವನ, ಸಂಸ್ಕೃತಿ ಮತ್ತು ದರ್ಶನಗಳ ಮುಖ್ಯ ಅಂಗಗಳಾಗಿವೆ. ಭಾರತದ ಯಾವ ಬೌದ್ದ ಅಥವ ಜೈನರೇ ಆದರೂ ಹದಿನಾರಾಣೆ - ಭಾರತೀಯ ಭಾವನೆ ಮತ್ತು ಸಂಸ್ಕೃತಿಯ ಶಿಶುಗಳು. ಆದರೂ ಅವರು ಇಬ್ಬರೂ ಹಿಂದೂ ಧರ್ಮಿಗಳಲ್ಲ. ಆದ್ದರಿಂದ ಭಾರತೀಯ ಸಂಸ್ಕೃತಿಯನ್ನು ಹಿಂದೂ ಸಂಸ್ಕೃತಿ ಎಂದು ಕರೆಯುವುದು ತಪ್ಪು. ಬಹು ಕಾಲದ ನಂತರ ಇಸ್ಲಾಂ ಧರ್ಮದ ಘರ್ಷಣೆಯಿಂದ ಈ ಸಂಸ್ಕೃತಿಯು ಬಹುಮಟ್ಟಿಗೆ ಮಾರ್ಪಾಟಾ ಯಿತು ; ಆದರೂ ಮೂಲತಃ ಭಾರತೀಯ ಸಂಸ್ಕೃತಿಯಾಗಿಯೇ ಉಳಿದು ತನ್ನ ವೈಶಿಷ್ಟವನ್ನು ಳಿಸಿ ಕೊಂಡಿತು. ಈಗ ಪಾಶ್ಚಾತ್ಯ ಔದ್ಯೋಗಿಕ ನಾಗರಿಕತೆ ನೂರಾರು ವಿಧದಲ್ಲಿ ಹಿಂದೂ ಧರ್ಮದ ಮೇಲೆ ಮಹತ್ಪರಿಣಾಮ ಮಾಡುತ್ತಿದೆ. ಇದರ ಅಂತಿಮ ಪರಿಣಾಮ ಏನು ಎಂದು ಖಚಿತ ಹೇಳಲು ಯಾರಿಗೂ ಸಾಧ್ಯವಿಲ್ಲ.

ಹಿಂದೂಧರ್ಮ ಮತ ದೃಷ್ಟಿ ಯಿ೦ದ ಅಸ್ಪಷ್ಟ, ಅನಿರ್ದಿಷ್ಟ, ಬಹುಮುಖ ; ಯಾರಿಗೆ ಏನು ಬೇಕಾ ದರೂ ಆಗಿ ಕಾಣಬಹುದು. ಖಚಿತವಾಗಿ ವಿವರಿಸಲೂ ಸಾಧ್ಯವಿಲ್ಲ. ಸಾಮಾನ್ಯವಾಗಿ ಮತ ಎನ್ನುವ ಅರ್ಥದೃಷ್ಟಿಯಿಂದ ಅದನ್ನು ಒಂದು ಮತ ಎಂದು ಹೇಳುವುದೂ ಕಷ್ಟ. ಒಂದಕ್ಕೊಂದಕ್ಕೆ ವಿರೋಧ ವಿರುವ ಅನೇಕ ನಂಬಿಕೆಗಳು ಸಂಪ್ರದಾಯಗಳು ಅದರಲ್ಲಿ ಅಡಗಿವೆ. ಅವುಗಳಲ್ಲಿ ಕೆಲವು ಅತ್ಯುತ್ಕೃಷ್ಟ ಇನ್ನು ಕೆಲವು ಅತಿ ನಿಕೃಷ್ಟ. ಆದರೆ ಮುಖ್ಯ ತಿರುಳು ಮಾತ್ರ ತಾನೂ ಬಾಳಿ ಇತರರೂ ಬಾಳಲೆ೦ದು. ಮಹಾತ್ಮಾ ಗಾಂಧಿ ಅದನ್ನು ಈ ರೀತಿ ವರ್ಣಿಸಿದ್ದಾರೆ “ಹಿಂದೂ ಧರ್ಮವೆಂದರೆ ಅಹಿಂಸಾ ಮಾರ್ಗ ದಲ್ಲಿ ಸತ್ಯಶೋಧನೆ ಎಂದು ಹೇಳುತ್ತೇನೆ. ದೇವರಲ್ಲಿ ನಂಬಿಕೆಯೇ ಇಲ್ಲದಿರುವವನೂ ಹಿಂದೂ ಎಂದು ಕರೆದುಕೊಳ್ಳಬಹುದು. ಧರ್ಮ ಎಂದರೆ ಅವಿಚ್ಛಿನ್ನ ಸತ್ಯಾನ್ವೇಷಣೆ, ಹಿಂದೂ ಧರ್ಮ ಸತ್ಯ ಧರ್ಮ, ಸತ್ಯವೇ ದೇವರು. ದೇವರಿಲ್ಲವೆಂದು ಹೇಳುವವರನ್ನು ನಮ್ಮಲ್ಲಿ ನೋಡಿದ್ದೇವೆ. ಆದರೆ ಸತ್ಯದ ನಿರಾಕರಣೆಯನ್ನು ನಾವು ಕಂಡಿಲ್ಲ.” ಹಿಂದೂ ಧರ್ಮವೆಂದರೆ ಸತ್ಯ ಮತ್ತು ಅಹಿಂಸೆ ಎಂದು ಗಾಂಧಿಯ ಮತ. ಆದರೆ ಅನೇಕ ಶ್ರೇಷ್ಠ ವಿದ್ವಾಂಸರು ಗಾಂಧಿಜಿ ಹೇಳುವ ಅಹಿ೦ಸೆ ಹಿಂದೂ ಧರ್ಮಕ್ಕೆ ಮುಖ್ಯವಲ್ಲ ಎಂದು ಹೇಳುತ್ತಾರೆ. ಅಂದರೆ ಹಿಂದೂ ಧರ್ಮದ ಹೆಗ್ಗುರುತು ಸತ್ಯ ಎ೦ಬುದೊಂದೇ, ಇದು ಖಂಡಿತವಾಗಿಯೂ ಲಕ್ಷಣನಿರೂಪಣೆಯಲ್ಲ.

ಆದ್ದರಿಂದ ಭಾರತೀಯ ಸಂಸ್ಕೃತಿಗೆ ಅಥವ ಅದರ ಮೂಲ ರೂಪಕ್ಕೆ ಸಹ ಹಿಂದೂ ಅಥವ ಹಿಂದೂ ಧರ್ಮ ಎಂದು ಕರೆಯುವುದು ತಪ್ಪು ಮತ್ತು ಉಚಿತವೂ ಅಲ್ಲ. ಪುರಾತನ ಗ್ರಂಥಗಳಲ್ಲಿ ಕಾಣುವ ವಿವಿಧ ಭಾವನೆಗಳೇ ಆ ಸಂಸ್ಕೃತಿಯ ಮುಖ್ಯ ಸಂದೇಶವಾದರೂ ಅವನ್ನು ಹಿಂದೂ ಎನ್ನುವುದು ಸರಿಯಲ್ಲ. ಹಿಂದೂ, ಹಿಂದೂ ಧರ್ಮ ಎಂಬ ಶಬ್ದ ಗಳನ್ನು ಈಗಿನ ಕಾಲದಲ್ಲಿ ಆ ಅರ್ಥದಲ್ಲಿ ಉಪಯೋಗಿಸುವುದಂತೂ ಇನ್ನೂ ತಪ್ಪು. ಎಲ್ಲಿಯವರೆಗೆ ಸನಾತನಧರ್ಮ ಮತ್ತು ದರ್ಶನಗಳು ಜೀವನದ ಮುಖ್ಯ ಮಾರ್ಗ ಸೂಚಿಗಳಾಗಿ, ಪ್ರಪಂಚವನ್ನೆ ದುರಿಸಲು ಒಂದು ದೃಷ್ಟಿ ಪಥವಾಗಿತ್ತು, ಅಲ್ಲಿಯವರೆಗೆ ಬಹುಮಟ್ಟಿಗೆ ಹಿಂದೂಧರ್ಮ ಮತ್ತು ಭಾರತೀಯ ಸಂಸ್ಕೃತಿ ಒಂದೇ ಎನ್ನಬಹುದು. ಆದರೆ ಅನೇಕ ರೀತಿಯ ಕಟ್ಟು ನಿಟ್ಟು ಗಳ, ನಿಯಮಗಳ ಒಂದು ವಿಧಿ ಬದ್ದ ಮತ ಎಂದಿನಿಂದ ಆರಂಭವಾಯಿತೋ, ಅಂದಿನಿಂದ ಹಿಂದೂಧರ್ಮ ಆ ಸಮಷ್ಟಿ ಸಂಸ್ಕೃತಿಯನ್ನು ಮೀರಿ ಒಂದು ವಿಧದಲ್ಲಿ ಉತ್ತಮವಾಯಿತು. ಇನ್ನೊಂದು ರೀತಿಯಿಂದ ಸಂಕುಚಿತವಾಯಿತು. ಒಬ್ಬ ಕ್ರೈಸ್ತ ಅಥವ ಮುಸ್ಲಿ ಮನು ಭಾರತೀಯ ಜೀವನ ಮತ್ತು ಸಂಸ್ಕೃತಿಯನ್ನು ಅವಲಂಬಿಸಿದರೂ ಧರ್ಮನಿಷ್ಠ ಕ್ರೈಸ್ತನಾಗಿ ಅಥವ ಮುಸ್ಲಿ೦ ಆಗಿ ಇರಬಹುದಿತ್ತು. ಆಗ ಭಾರತೀಯನಾಗಿಬಿಡುತ್ತಿದ್ದ. ತನ್ನ ಧಮದಲ್ಲಿದ್ದು ಕೊಂಡು ಭಾರತೀಯನಾಗುತ್ತಿದ್ದ.

ದೇಶ, ಸಂಸ್ಕೃತಿ ಮತ್ತು ಇತಿಹಾಸ ಪರಂಪರೆಯ ದೃಷ್ಟಿಯಿಂದ ಇಂಡಿಯನ್ ಎಂಬ ಶಬ್ದಕ್ಕೆ ಸರಿಯಾದ ಅರ್ಥ ಹಿಂದೂಸ್ಥಾನದ ಸಂಕೇತ ಶಬ್ದ ವಾದ 'ಹಿಂದ್' ನಿಂದ ಬಂದ ಹಿಂದಿ ಎಂದು,