ಪುಟ:ಭಾರತ ದರ್ಶನ.djvu/೪೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೩೨

ಭಾರತ ದರ್ಶನ

ಇನ್ನು ಬ್ರಿಟಿಷ್ ಪ್ರತಿನಿಧಿ ವೈಸರಾಯನನ್ನು ಕಾಣುವುದೂ, ಮತ್ತು ಭಾರತದ ಸ್ವಾತಂತ್ರ್ಯಕ್ಕೆ ಮನ್ನಣೆ ಕೊಟ್ಟು, ಆಕ್ರಮಣಕಾರ ಅಕ್ಷರಾಷ್ಟ್ರಗಳ ವಿರುದ್ಧ ಹೋರಾಟದಲ್ಲಿ ಯುಕ್ತ ರಾಷ್ಟ್ರಗಳ ಧ್ಯೇಯಕ್ಕೆ ಸಹಾಯವಾಗುವಂತೆ ಭಾರತ ಮತ್ತು ಬ್ರಿಟನ್‌ಗಳಿಗೆ ಒಂದು ಗೌರವಯುತ ಒಪ್ಪಂದವಾಗುವಂತೆ ಮಧ್ಯಸ್ಥಿಕೆ ಮಾಡಿರೆಂದು ಪ್ರಮುಖ ಯುಕ್ತ ರಾಷ್ಟ್ರಗಳ ರಾಷ್ಟ್ರ ನಾಯಕರಿಗೆ ಕೇಳಿಕೊಳ್ಳುವುದೂ ಮುಂದಿನ ಹೆಜ್ಜೆ ಎಂದೂ ಗಾಂಧೀಜಿ ಮತ್ತು ಅಧ್ಯಕ್ಷ ಅಜಾದ್ ತಮ್ಮ ಅಂತ್ಯಭಾಷಣಗಳಲ್ಲಿ ತಿಳಿಸಿದರು.

೧೯೪೨ನೆಯ ಆಗಸ್ಟ್ ಎಂಟನೆ ರಾತ್ರಿ ಬಹಳ ಹೊತ್ತಾದ ಮೇಲೆ ಈ ನಿರ್ಣಯ ಅಂಗೀಕಾರವಾಯಿತು. ಕೆಲವೇ ಗಂಟೆಗಳ ನಂತರ ಆಗಸ್ಟ್ ಒಂಭತ್ತನೆಯ ಬೆಳಗಿನ ಜಾವ ಮುಂಬೈಯಲ್ಲೂ, ದೇಶಾದ್ಯಂತ ಇತರ ಕಡೆಗಳಲ್ಲೂ ಅಸಂಖ್ಯಾತ ಬಂಧನಗಳಾದುವು. ಅಹಮದ್ ನಗರ ಕೋಟೆಗೆ ನಾನು ಬಂದುದು ಈ ರೀತಿ.

ಅಧ್ಯಾಯ ಹತ್ತು: ಪುನಃ ಅಹಮದ್ ನಗರ ಕೋಟೆಯಲ್ಲಿ

೧. ಘಟನಾ ಪರಂಪರೆ

ಅಹಮದ್ ನಗರದ ಕೋಟೆ : ಆಗಸ್ಟ್ ಹದಿಮೂರು : ೧೯೪೪

ಇಲ್ಲಿಗೆ ಬಂದು ಈಗ ಎರಡು ವರ್ಷಗಳ ಮೇಲೆ ಆಯಿತು; ಒಂದೇ ಸ್ಥಳದಲ್ಲಿ ಎರಡು ವರುಷಗಳ ಕನಸಿನ ಬಾಳು; ಎತ್ತ ನೋಡಿದರೂ ಅದೇ ಜನ, ಅದೇ ಸಂಕುಚಿತ ವಾತಾವರಣ, ನಿತ್ಯವೂ ಒಂದೇ ಕಾರ್ಯಕ್ರಮ, ಮುಂದೆ ಎಂದೋ ಒಂದು ದಿನ ಈ ಕನಸು ಕೊನೆಗಂಡಾಗ ವಿಶಾಲ ಪ್ರಪಂಚದ ಜೀವನವನ್ನೂ, ಕಾರ್ಯ ಚಟುವಟಿಕೆಯನ್ನೂ ಕಾಣುತ್ತೇವೆ; ಆಗ ಒಂದು ಹೊಸ ಪ್ರಪಂಚವನ್ನೇ ನೋಡುತ್ತೇವೆ. ಕಣ್ಣಿಗೆ ಬೀಳುವ ವಸ್ತುಗಳು, ಜನರು, ಎಲ್ಲ ಹೊಸಬರಾಗುತ್ತಾರೆ; ಪುನಃ ಜ್ಞಾಪಕಕ್ಕೆ ತಂದು ಕೊಳ್ಳಲು ಯತ್ನಿಸುತ್ತೇವೆ; ಹಿಂದಿನ ಸವಿನೆನಪುಗಳು ನಮ್ಮ ಸ್ಮೃತಿಪಥ ತುಂಬುತ್ತವೆ ; ಅದರೂ ಅವು ಅವೇ ಇರುವುದಿಲ್ಲ, ಇರಲು ಸಾಧ್ಯವೂ ಇಲ್ಲ; ಅವುಗಳ ಜೊತೆಗೆ ಹೊಂದಿಕೊಳ್ಳುವುದೂ ಕಷ್ಟವಾಗುತ್ತದೆ. ಅನೇಕ ವೇಳೆ, ಒಂದೇ ದಿನಚರ್ಯೆಯ ಈ ನಿತ್ಯಜೀವನವೇ ಒಂದು ನಿದ್ರೆಯಲ್ಲವೆ, ಎಂದೋ ಒಂದು ದಿನ ಏಕಾಏಕಿ ಒಡೆದೇಳಬಹುದಾದ ಕನಸಲ್ಲವೆ ಎಂದು ಯೋಚನೆ ಹುಟ್ಟುತ್ತದೆ. ಇದರಲ್ಲಿ ಕನಸು ಯಾವುದು ಮತ್ತು ಎಚ್ಚರ ಯಾವುದು? ಎರಡೂ ಸತ್ಯ ಇರಬಹುದೆ? ಏಕೆಂದರೆ ಎರಡರ ತೀಕ್ಷ್ಣ ಅನುಭವದ ಅರಿವೂ ನಮಗೆ ಇದೆ. ಅಥವಾ ಎರಡೂ ಮಿಥ್ಯವೋ? ಅಥವ ಮುಸುಕು ಚಿತ್ರ ಮಾತ್ರ ಬಿಟ್ಟು ಮಾಯವಾಗುವ ಕ್ಷಣಿಕ ಕನಸಿನಂತೆ ತೋರುವ ಭ್ರಮೆಯೋ?

ಸೆರೆಮನೆ, ಅದರ ಏಕಾಂತ ಜೀವನ, ಮತ್ತು ಕಾರ್ಯಶೂನ್ಯತೆಗಳ ಮಧ್ಯೆ ಆಲೋಚನೆಗೆ ಬೇಕಾದಷ್ಟು ಅವಕಾಶ ದೊರೆಯುತ್ತದೆ; ತನ್ನ ಮತ್ತು ಮಾನವ ಜೀವನದ ಕಾರ್ಯಪರಂಪರೆಯ ದೀರ್ಘ ಇತಿಹಾಸದ ಹಳೆಯ ನೆನಪುಗಳಿಂದ ಜೀವನದ ಶೂನ್ಯತೆಯನ್ನು ತುಂಬಲು ಒಳ್ಳೆಯ ಅವಕಾಶ ದೊರೆಯುತ್ತದೆ. ಅದರಂತೆ ಕಳೆದ ನಾಲ್ಕು ತಿಂಗಳಲ್ಲಿ ಈ ಗ್ರಂಥರಚನೆಯಲ್ಲಿ ಭಾರತದ ಹಿಂದಿನ ಐತಿಹಾಸಿಕ ಘಟನೆಗಳನ್ನೂ ಅನುಭವಗಳನ್ನೂ ಕುರಿತು ಯೋಚಿಸುತ್ತಿದ್ದೇನೆ. ನನ್ನ ಮನಸ್ಸಿಗೆ ಹೊಳೆದ ಅನೇಕ ಚಿತ್ರಗಳಲ್ಲಿ ಕೆಲವನ್ನು ಆಯ್ದು ಈ ಗ್ರಂಥ ರಚಿಸಿದ್ದೇನೆ. ಈಗ ಪುನಃ ನನ್ನ ಈ ಬರವಣಿಗೆ ನೋಡಿದರೆ ಅದು ಅಪೂರ್ಣವೆಂದೂ, ಅಸಂಬದ್ಧವೆಂದೂ, ಸಮರಸವಿಲ್ಲದ ಅನೇಕ