ಪುಟ:ಭಾರತ ದರ್ಶನ.djvu/೪೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪುನಃ ಅಹಮದ್ ನಗರದ ಕೋಟೆಯಲ್ಲಿ

೪೩೩

ವಸ್ತುಗಳ ಕಲುಸುಮೇಲೋಗರವೆಂದೂ, ಇದು ಒಂದು ನಿಜವಾದ ವಿಶ್ಲೇಷಣಗ್ರಂಥ ಆಗಿರಬೇಕೆಂದು ಆರಂಭಿಸಿದ್ದು ನನ್ನ ವೈಯಕ್ತಿಕ ಪ್ರಭಾವದಿಂದ ಬೇರೊಂದು ಬಣ್ಣ ತಾಳಿದೆ ಎಂದೂ ನಾನು ಬಲ್ಲೆ. ನಾನು ಎಷ್ಟೇ ಬಿಗಿಹಿಡಿದರೂ ನನ್ನ ವ್ಯಕ್ತಿತ್ವವು ಅದರೊಳಗೆ ಬೆರೆತುಹೋಗಿದೆ; ಎಷ್ಟೋ ವಿರೋಧಿಸಿ ಅದನ್ನು ತಡೆದೆ; ಆದರೆ ಕೆಲವುವೇಳೆ ಸುಮ್ಮನೆ ಹರಿಬಿಟ್ಟಾಗ ನನ್ನ ಲೇಖನಿಯಿಂದ ಅದು ನಿರರ್ಗಳವಾಗಿ ಹರಿದು ಕೆಲವು ಮಟ್ಟಗೆ ನನ್ನ ಮನೋಭಾವನೆಯನ್ನು ಅದರಲ್ಲಿ ಪ್ರತಿಬಿಂಬಿಸಿದೆ.

ಗತಕಾಲದ ಕತೆ ಬರೆದು ನನ್ನ ಮೇಲಿನ ಪ್ರಾಚೀನತೆಯ ಹೊರೆ ಕಳೆದುಕೊಳ್ಳಲು ಯತ್ನಿಸಿದ್ದೇನೆ; ಆದರೆ ವರ್ತಮಾನಕಾಲದ ಜಟಿಲತೆ ಮತ್ತು ಅಸಂಬದ್ದತೆ ಎಲ್ಲವೂ ಹಾಗೇ ಉಳಿದಿವೆ; ಎದುರಿನಲ್ಲಿ ಭವಿಷ್ಯದ ಕಾರ್ಗತ್ತಲೆ ಕವಿದಿದೆ. ಇವುಗಳ ಹೊರೆ ಪ್ರಾಚೀನತೆಯ ಹೊರೆಗಿಂತ ಕಡಮೆ ಏನೂ ಇಲ್ಲ. ಚಂಚಲಮನಸ್ಸು ಯಾವ ನೆಲೆಯೂ ಇಲ್ಲದೆ ಅಶಾಂತಿಯಿಂದ ಅಲೆಯುತ್ತ ನನಗೂ ಇತರರಿಗೂ ಕಿರಿಕಿರಿ ಪಡಿಸುತ್ತಿದೆ. ಯಾವ ಯೋಚನೆ ಹೊಡೆತಕ್ಕೂ ಸಿಕ್ಕು ತಳಮಳಗೊಳ್ಳದೆ, ಯಾವ ಸಂಶಯದ ನೆರಳನ್ನೂ ಕಾಣದೆ, ಒಂದು ಸಂಜಯನ್ನೂ ಬರೆಯದೆ ಇರುವ ಅಕೃಷ್ಟ ಮನಸ್ಸುಳ್ಳ ಜನರನ್ನು ಕಂಡು ಸ್ವಲ್ಪ ಕರುಬು ಹುಟ್ಟುವುದು ನಿಜ. ಕೆಲವು ಬಾರಿ ಸ್ವಲ್ಪ ಕೋಭೆ ಮತ್ತು ನೋವು ಉಂಟಾದರೂ ಅವರ ಜೀವನ ಎಷ್ಟೋ ಸುಲಭವಿರಬೇಕು.

ಘಟನೆಗಳು ಒಂದರಮೇಲೊಂದು ಒದಗುತ್ತವೆ. ಅಂತ್ಯವಿಲ್ಲದ ಅಪಾರವಿಷಯ ಪರಂಪರೆ ನಿರಾತಂಕ ಮುಂದುವರಿಯುತ್ತಲೇ ಇದೆ. ಯಾವುದೋ ಒಂದು ನಿರ್ದಿಷ್ಟ ವಿಷಯವನ್ನು ಮಾತ್ರ ಪ್ರತ್ಯೇಕಿಸಿ, ಅದೇ ಆದಿ ಮತ್ತು ಅಂತ್ಯವೆಂದು ಭಾವಿಸಿ, ಅದು ಅದರ ಹಿಂದಿನ ಯಾವುದೋ ಬೇರೊಂದು ಘಟನೆಯ ಪರಿ ಣಾಮವೆಂದು ಭಾವಿಸಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇವೆ. ಆದರೂ ಅದಕ್ಕೆ ಆದಿ ಇಲ್ಲ; ಹಿಂದೆ ಆಗಿಹೋದ ಎಲ್ಲ ಕಾರಣಗಳ ಪರಿಣಾಮವಾಗಿ, ಅಸಂಖ್ಯಾತ ಮಾನವ ಜೀವನಗಳ ಮನೋನಿಶ್ಚಯ, ಪ್ರೇರಣೆಗಳು ಮತ್ತು ಆಸೆಗಳು ಒಂದಕ್ಕೊಂದು ತಾಕಲಾಡಿ ಸೇರಿ ಪರಿಣಾಮವಾಗಿ ಹೊರಹೊಮ್ಮಿದ ಅನಂತ ಸರಪಣಿಯಲ್ಲಿ ಅದು ಒಂದು ಕೊಂಡಿ ಮಾತ್ರ, ಪರಿಣಾಮವು ಯಾವ ಒಬ್ಬ ವ್ಯಕ್ತಿಯ ಮನೋಗತ ಅಭಿಲಾಷೆಗಿಂತಲೂ ತೀರ ಭಿನ್ನವಾದುದು. ಆ ಮನೋ ನಿಶ್ಚಯ, ಪ್ರೇರಣೆ ಮತ್ತು ಆಸೆಗಳೇ ಗತ ವಿಷಯಗಳ ಮತ್ತು ಅನುಭವಗಳ ಪ್ರಭಾವದಿಂದ ರೂಪುಗೊಂಡುವು; ಈ ಹೊಸ ವಿಷಯ ಸಹ ಭವಿಷ್ಯದ ನಿರ್ಧಾರದಲ್ಲಿ ಮತ್ತೊಂದು ಕೊಂಡಿಯಾಗುತ್ತದೆ. ಜನಮನದಮೇಲೆ ಪ್ರಭಾವ ಬೀರುವ ಯುಗಪುರುಷನು ಈ ಪರಂಪರೆಯಲ್ಲಿ ಒಂದು ಪ್ರಮುಖ ಪಾತ್ರವಹಿಸುತ್ತಾನೆಂಬುದು ನಿಶ್ಚಯ. ಆದರೆ ಆತನೇ ಗತವಿಷಯಗಳ ಮತ್ತು ಶಕ್ತಿಗಳ ಒಂದು ಶಿಶು ಮತ್ತು ಆ ಗತ ಶಕ್ತಿಗಳೇ ಪ್ರಭಾವವನ್ನೂ ಮಿತಿಗೊಳಿಸುತ್ತವೆ.

೨ ಎರಡು ಹಿನ್ನೆಲೆಗಳು : ಭಾರತೀಯ ಮತ್ತು ಬ್ರಿಟಿಷ್

೧೯೪೨ನೇ ಆಗಸ್ಟ್ ತಿಂಗಳಲ್ಲಿ ಭಾರತದಲ್ಲಿ ನಡೆದ ಘಟನೆಗಳು ಏಕಾ ಏಕಿ ಉದ್ಭವಿಸಿದುದಲ್ಲ; ಅವು ಹಿಂದಿನ ಎಲ್ಲ ಘಟನೆಗಳ ಪರಿಣಾಮ. ಆ ಘಟನೆಗಳನ್ನು ವಿರೋಧಿಸಿ, ಟೀಕೆಮಾಡಿ, ಸಮರ್ಥಿಸಿ ಎಷ್ಟೋ ಲೇಖನಗಳೂ, ಅನೇಕ ವಿವರಣೆಗಳೂ ಬಂದುವು. ಆದರೆ ಈ ಅನೇಕ ಲೇಖಕರು ಆ ಘಟನೆಗಳ ನಿಜವಾದ ಅರ್ಥ ಗ್ರಹಿಸಿಲ್ಲ. ಏಕೆಂದರೆ ಅವೆಲ್ಲವೂ ಎಲ್ಲ ರಾಜಕೀಯವನ್ನೂ ಮೀರಿದ ಒಂದು ಗಾಢವಾದ ಪ್ರಶ್ನೆಗೆ ಕೇವಲ ರಾಜಕೀಯ ಬಣ್ಣ ಕೊಡುವ ಲೇಖನಗಳು. ಆ ಎಲ್ಲ ಘಟನೆಗಳ ಹಿಂದೆ ಇನ್ನು ಮುಂದೆ ವಿದೇಶೀಯರ ನಿರಂಕುಶ ಅಧಿಕಾರದ ಅಧೀನ ಬಾಳಲು ಸಾಧ್ಯವಿಲ್ಲ; ಆ ದಾಸ್ಯಜೀವನ ಶಕ್ಯವಿಲ್ಲ ಎಂಬ ಪ್ರಚಂಡ ಪ್ರತಿಜ್ಞೆ ಇತ್ತು. ಉಳಿದ ಎಲ್ಲ ಪ್ರಶ್ನೆಗಳೂ ಆ ಆಡಳಿತದಲ್ಲಿ ಕೆಲವು ಕಡೆ ಸುಧಾರಣೆ, ಅಥವ ಪ್ರಗತಿ ಸಾಧ್ಯವಿತ್ತೇ ಇಲ್ಲವೆ; ಪ್ರತಿಭಟನೆಯ ಪರಿಣಾಮ ಹೆಚ್ಚು ಹಾನಿಕರವೆ ಎಂಬುದಾವುದೂ ಪ್ರಾಮುಖ್ಯವಲ್ಲ. ಏನು ತ್ಯಾಗಮಾಡಬೇಕಾಗಿ ಬಂದರೂ ಮಾಡಿ ದಾಸ್ಯಜೀವನದಿಂದ ಪಾರಾಗಬೇಕು, ಏನೇ ಆಗಲಿ ಇನ್ನು ಮುಂದೆ ಒಂದು ನಿಮಿಷವೂ ಅದನ್ನು ಸಹಿಸಲು ಸಾಧ್ಯವಿಲ್ಲ ಎಂಬ ದೃಢಸಂಕಲ್ಪವಿತ್ತು.