ಪುಟ:ಭಾರತ ದರ್ಶನ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅನ್ವೇಷಣೆ

೩೭

ಮತ್ತು ಸಾಹಸದ ಸ್ಫೂರ್ತಿ ಕಡಮೆಯಾಯಿತು. ನಿರ್ಮಾಣ ನೈಪುಣ್ಯ ಮಾಸಿಹೋಗಿ ಅನುಕರಣ ಭಾವನೆ ಬೆಳೆಯಿತು. ಪ್ರಕೃತಿ ಮತ್ತು ವಿಶ್ವದ ರಹಸ್ಯವನ್ನು ಭೇದಿಸಲು ಹೊರಟ ಅದ್ಭುತ ಕ್ರಾಂತಿ ಕಾರಕ ಭಾವನೆಯ ಬದಲು ವಚನಶೂರ ಭಾಷ್ಯಕಾರರ ಟೀಕೆಗಳು, ಉದ್ದುದ್ದ ವ್ಯಾಖ್ಯಾನಗಳು ಹೆಚ್ಚಿದವು. ಭವ್ಯ ಕಲೆ ಮತ್ತು ಶಿಲ್ಪ ಕಲೆಯ ಸ್ಥಾನದಲ್ಲಿ ಭಾವನಾಗಾಂಭೀರ್ಯವೂ ರಚನಾ ಶ್ರೇಷ್ಠ ತೆಯೂ ಇಲ್ಲದ ಜಟಿಲವಿನ್ಯಾಸ ವಿವರಣೆಯು ಅತಿ ಸೂಕ್ಷ್ಮ ಕುಸುರಿ ಕೆತ್ತನೆಗೆ ಎಡೆಯಾಯಿತು. ಸರಳವೂ ಸ್ಫೂರ್ತಿದಾಯಕವೂ ಆದ ಭಾಷಾಶಕ್ತಿ ಮಾಧುರ್ಯಗಳು ಮಾಯವಾಗಿ ಸಾಹಿತ್ಯದಲ್ಲಿ ಜಟಿ ಲತೆಯೂ ಅಲಂಕಾರವೂ ಹೆಚ್ಚಿದವು. ದೂರದ ಹೊರ ರಾಷ್ಟ್ರಗಳಿಗೆ ಭಾರತೀಯರು ಹೋಗಿ ಭಾರತ ಸಂಸ್ಕೃತಿಯ ಪ್ರಚಾರಮಾಡಿ ವಲಸೆಹೋಗುವ ಮಹಾಯೋಜನೆಗಳಿಗೆ ಕಾರಣಭೂತವಾದ ಸಾಹಸ ಮತ್ತು ತುಂಬು ಜೀವನದ ಪ್ರವೃತ್ತಿಗಳು ಮಾಯವಾಗುತ್ತಿವೆ. ಸಂಕುಚಿತ ಮಡಿವಂತಿಕೆಯ ಮನೋ ಭಾವನೆಯಿಂದ ಸಮುದ್ರಯಾನವು ನಿಷೇಧವಾಗುತ್ತದೆ, ವಿಜ್ಞಾನದ ಬೆಳವಣಿಗೆಗೆ ಸಹಾಯವಾಗಬಹು ದಾಗಿದ್ದ ಪ್ರಾಚೀನರ ವಿಚಾರಶೂನ್ಯತೆ, ಹಿಂದಿನದರಲ್ಲಿ ಅಂಧಃ ಶ್ರದ್ದೆ ಬೇರೂರುತ್ತಿವೆ. ಭಾರತೀಯ ಜೀವನವಾಹಿನಿಯು ಗತಶತಮಾನಗಳ ರಾಶಿಯ ಮಧ್ಯೆ ಪುರಾತನತೆಯಲ್ಲಿ ಅಡಗಿ ಪಾಚಿಗಟ್ಟಿ ನಿಧಾನ ವಾಗಿ ತೆವಳಿ ಬರುವ ತೊರೆಯಂತೆ ಹರಿದು ಬರುತ್ತಿದೆ. ಗತಕಾಲದ ಭಾರದ ಹೊರೆ ಅದನ್ನು ಹಿಂಡುತ್ತಿದೆ.. ಒಂದು ಬಗೆಯ, ಮೂರ್ಛ ಬಂದಂತಾಗಿದೆ. ಈ ಬಗೆಯ ಮಾನಸಿಕ ಪ್ರಜ್ಞಾಶೂನ್ಯತೆಯಲ್ಲಿ, ದೈಹಿಕ ದೌರ್ಬಲ್ಯದಲ್ಲಿ ಪ್ರಪಂಚದ ಇತರ ಭಾಗಗಳು ಮುನ್ನುಗ್ಗಿದಾಗ ಭಾರತವು ಅವನತಿ ಮುಟ್ಟ ಅತಿ ನಿಷ್ಠೆಯ ಚಲನ ಶೂನ್ಯ ಜೀವನ ನಡೆಸಿದ್ದು ಆಶ್ಚರ್ಯವೇನು.

ಆದರೆ ಈ ದೃಷ್ಟಿಯು ಸಂಪೂರ್ಣವೂ ಅಲ್ಲ ಪೂರ್ಣ ಸರಿಯೂ ಅಲ್ಲ. ಆದರೆ ಈ ಅತಿನಿಷ್ಠೆಯ ಜಡ ಜೀವನ ತಡೆಯಿಲ್ಲದೆ ಬಹುಕಾಲದಿಂದ ನಡೆದು ಬಂದಿದ್ದರೆ ಗತಕಾಲದ ಸಂಬಂಧ ಪೂರ್ಣ ಕಡಿದುಹೋಗಿ, ಆ ಯುಗವೇ ಲಯವಾಗಿ, ಅದರ ಸಮಾಧಿಯ ಮೇಲೆ ನೂತನ ಯುಗವೇ ಒಂದು ಸೃಷ್ಟಿಯಾಗುತ್ತಿತ್ತು. ಆದರೆ ಹಾಗೆ ಹಿಂದಿನ ಸಂಬಂಧ ಕಡಿದುಹೋಗಿಲ್ಲ. ಒಂದು ಸ್ಪಷ್ಟ ವಾಹಿನಿ ಹರಿದು ಬಂದಿದೆ. ಆಗಾಗ ಪುನರುಜ್ಜಿವನದ ಕಿಡಿಗಳಿದ್ದು, ಕೆಲವುವೇಳೆ ಜಾಜ್ವಲ್ಯಮಾನ ವಾಗಿ ತಕ್ಕಷ್ಟು ಕಾಲ ಬೆಳಗಿವೆ. ಹೊಸದನ್ನು ಅರ್ಥಮಾಡಿಕೊಂಡು ಪ್ರಾಚೀನತೆಯೊಂದಿಗೆ ಅಥವ ಪ್ರಾಚೀನತೆಯಲ್ಲಿ ಉಳಿಸಿಕೊಳ್ಳಬಹುದಾದ್ದರೊಂದಿಗೆ ಹೊಂದಿಸಿಕೊಳ್ಳುವ, ಸಮರಸಮಾಡಿಕೊಳ್ಳುವ ಪ್ರಯತ್ನ ವನ್ನು ಕಾಣಬಹುದು. ಅನೇಕವೇಳೆ ಹಳೆಯ ರೂಪ ಸಂಕೇತಮಾತ್ರವಾಗಿದ್ದು ಅದರ ಆ೦ತರಿಕವಸ್ತುವೇ ಬೇರೆಯಾಗಿದೆ. ಆದರೆ ಸತ್ವಪೂರಿತವೂ ಸಜೀವವೂ ಆದದ್ದು ಉಳಿದಿದೆ ; ಯಾವುದೋ ಉತ್ಸಾಹವು ಪೂರ್ಣ ಅರಿಯದ ದಾರಿಯಲ್ಲಿ ಜನತೆಯನ್ನು ಕೊಂಡೊಯ್ದಿದೆ ; ಹೊಸದು ಹಳತು ಎರಡನ್ನೂ ಒಟ್ಟು ಗೂಡಿಸುವ ಆಶೆಯನ್ನು ವ್ಯಕ್ತ ಪಡಿಸಿದೆ. ಈ ಒಂದು ಉತ್ಸಾಹ ಮತ್ತು ಆಶೆಯಿಂದ ಜೀವನ ಮುಂದುವರಿದಿದೆ ; ಹಿಂದಿನದನ್ನೂ ಬಹುಭಾಗ ಉಳಿಸಿಕೊಂಡು ಹೊಸ ಭಾವನೆ ಗಳನ್ನು ರಕ್ತಗತಮಾಡಿಕೊಳ್ಳುವ ಶಕ್ತಿ ದೊರೆತಿದೆ. ಕೆಲವುವೇಳೆ ಸ್ಪಷ್ಟವೂ ಚೈತನ್ಯಪೂರ್ಣವೂ ಇದ್ದು ಇನ್ನೂ ಕೆಲವುವೇಳೆ ಅರೆನಿದ್ರೆಯ ಅಸ್ಪಷ್ಟ ಧ್ವನಿಯಂತೆ ಕುಗ್ಗಿದ ಯುಗಯುಗಾಂತರದ ಭಾರತದ ಕನಸೊಂದು ಇದೆಯೊ ಇಲ್ಲವೊ ನನಗೆ ತಿಳಿಯದು. ಪ್ರತಿಯೊಂದು ಜನತೆಗೆ ಪ್ರತಿಯೊಂದು ಜನಾಂಗಕ್ಕೆ ಅಂತಹ ಒಂದು ರಾಷ್ಟ್ರ ಧೈಯದ ನಂಬಿಕೆ ಅಥವ ಕಲ್ಪನೆ ಇದ್ದೇ ಇದೆ. ಪ್ರತಿಯೊಂದು ಧೈಯದಲ್ಲಿ ಸ್ವಲ್ಪ ಸತ್ಯವಿದ್ದರೂ ಇರಬಹುದು. ಭಾರತೀಯನಾಗಿ ಭಾರತದ ಈ ಧೈಯ ಅಥವ ಕಲ್ಪನೆಯು ನನ್ನ ಮೇಲೆಯೂ ಪ್ರಭಾವ ಬೀರಿದೆ. ತಡೆಯಿಲ್ಲದೆ ನೂರಾರು ತಲೆಮಾರುಗಳಿಗೆ ಒಂದು ರೂಪಕೊಡುವ ಶಕ್ತಿ ಯಾವುದಕ್ಕೇ ಇರಲಿ ಅಂತಹ ಒಂದು ಶಾಶ್ವತ ಶಕ್ತಿ ದೊರೆಯಬೇಕಾದರೆ ಅದರ ಮೂಲ ಬಹಳ ಆಳವಾಗಿರಬೇಕು ಮತ್ತು ಕಾಲಕಾಲಕ್ಕೆ ಆ ಶಕ್ತಿಯನ್ನು ಪುನರುಜ್ಜಿವಿಸುವ ಸಾಮರ್ಥ್ಯ ಅದಕ್ಕಿರ ಬೇಕೆಂದು ನನ್ನ ಭಾವನೆ.