ಪುಟ:ಭಾರತ ದರ್ಶನ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೬

ಭಾರತ ದರ್ಶನ

ಸೂಕ್ಷತಾತ್ವಿಕ ವಿಚಾರಗಳಲ್ಲಿ ಪರಸ್ಪರ ಜಗಳ ಮತ್ತು ನಿಂದೆಯಲ್ಲಿ ತಮ್ಮ ಶಕ್ತಿಯನ್ನು ಹಾಳು ಮಾಡಿಕೊಳ್ಳುತ್ತಿದ್ದ ಇಂಡಿಯದ ಸಮತಾವಾದಿಗಳನ್ನೂ ಕಂಡರೆ ನನಗೆ ಕೋಪ. ಜೀವನ ಬಹಳ ಜಟಿಲವಾದದ್ದು. ಇಂದು ಅದು ನಮಗೆ ಹಸ್ತಗತವಾಗಿರುವ ಜ್ಞಾನದೃಷ್ಟಿಯಲ್ಲ, ಯಾವುದೇ ಒಂದು ನಿರ್ದಿಷ್ಟ ಸಿದ್ಧಾಂತದ ಚೌಮೂಲೆಯಲ್ಲಿ ಬಂಧಿತವಾಗಿತ್ತೆನ್ನುವದು ತೀರ ತರ್ಕಶೂನ್ಯವಾದದ್ದು.

ನನಗೆ ನಿಜವಾದ ಸಮಸ್ಯೆಗಳೆಂದರೆ ವ್ಯಕ್ತಿಯ ಸಮಸ್ಯೆ, ಸಾಮಾಜಿಕ ಜೀವನದ ಸಮಸ್ಯೆ, ಸಮರಸ ಜೀವನದ ಸಮಸ್ಯೆ, ವ್ಯಕ್ತಿಗಳ ಮತ್ತು ಜನಸಮುದಾಯಗಳ ಮಧ್ಯೆ ಸಂಬಂಧಗಳ ಸಮೀಕರಣದ ಸಮಸ್ಯೆ, ವ್ಯಕ್ತಿಯ ಆಂತರಿಕ ಮತ್ತು ಬಾಹ್ಯ ಜೀವನದ ಯೋಗ್ಯ ಸಮತೂಕದ ಸಮಸ್ಯೆ, ನಿರಾತಂಕವಾಗಿ ಮೇಲ್ಮಟ್ಟದ ಉತ್ತಮ ಸ್ಥಿತಿಗೆ, ಸಾಮಾಜಿಕ ಅಭಿವೃದ್ದಿ ಯ ಸಮಸ್ಯೆ ಮತ್ತು ಮಾನವನ ಸತತ ಸಾಹಸದ ಸಮಸ್ಯೆ. ಈ ಸಮಸ್ಯೆಗಳ ಪರಿಹಾರದಲ್ಲಿ ವಿಜ್ಞಾನಮಾರ್ಗದ ರೀತ್ಯ ಪ್ರತ್ಯಕ್ಷ ಅವಲೋಕನ, ನಿಕರವಾದ ಜ್ಞಾನ, ಉದ್ದೇಶಪೂರ್ವಕ ತರ್ಕ ಇವುಗಳನ್ನು ಅನುಸರಿಸಬೇಕು. ಈ ಮಾರ್ಗ ನಮ್ಮ ಸತ್ಯಾನ್ವೇಷಣೆಯಲ್ಲಿ ಎಲ್ಲ ಸಮಯದಲ್ಲಿ ಅನುಕರಣೀಯವಿರಬಹುದು. ಏಕೆಂದರೆ ಕಲೆ, ಕಾವ್ಯ ಮತ್ತು ಕೆಲವು ಅಧ್ಯಾತ್ಮಿಕ ಅನುಭವಗಳು ಬೇರೆ ಗುಂಪಿಗೆ ಸೇರಿದವು, ವಿಜ್ಞಾನದ ಪ್ರತ್ಯಕ ಪ್ರಮಾಣಮಾರ್ಗದಿಂದ ನುಸುಳಿಕೊಳ್ಳುವಂತೆ ಇವೆ. ಆದ್ದರಿಂದ ಸತ್ಯ ಮತ್ತು ವಾಸ್ತವಿಕತೆಯನ್ನರಿಯಲು ಅಂತರ್ದೃಷ್ಟಿ ಮುಂತಾದ ಮಾರ್ಗಗಳನ್ನು ನಿರಾಕರಿಸದಿರೋಣ. ವಿಜ್ಞಾನದ ಉದ್ದೇಶಗಳಿಗೆ ಸಹ ಅವು ಅತ್ಯವಶ್ಯಕ. ಆದರೆ ನಮ್ಮ ನಿಲುವು ಮಾತ್ರ ವಿಚಾರದ ಒರೆಗೆ ಹಚ್ಚಿದ ಅದಕ್ಕೂ ಮಿಗಿಲಾಗಿ ಪ್ರಯೋಗ ಮತ್ತು ಅನುಷ್ಠಾನದ ಒರೆಗೆ ಸಿಲುಕುವ ನಿಕರವಾದ ವಾಸ್ತವಿಕ ಜ್ಞಾನದಲ್ಲಿರಬೇಕು; ಮತ್ತು ಜೀವನದ ದೈನಂದಿನ ಸಮಸ್ಯೆಗಳಿಗೆ ಸಂಬಂಧಪಡದ ಮತ್ತು ಸ್ತ್ರೀ ಪುರುಷರ ಅವಶ್ಯ ಕತೆಗಳಿಗೆ ದೂರವಾದ ಭಾವನಾ ಸಮುದ್ರದ ಅಲೆಗಳಿಗೆ ಸಿಕ್ಕದಂತೆ ಎಚ್ಚರದಿಂದ ಇರಬೇಕು. ಸಜೀವ ತತ್ವಶಾಸ್ತ್ರ ಪ್ರಸ್ತುತ ಸಮಸ್ಯೆಗಳಿಗೆ ಉತ್ತರಕೊಡಬೇಕು.

ನಮ್ಮ ಪೂರ್ವಿಕರು ಮತ್ತು ಮಧ್ಯಯುಗದ ಸ್ತ್ರೀ ಪುರುಷರು ಅವರವರ ಕಾಲದ ಸೆರೆಯಾಳುಗಳಾದಂತೆ, ಪ್ರಾಯಶಃ ಸಾಧನೆಗಳಲ್ಲಿ ಹೆಮ್ಮೆಪಡುವ ಆಧುನಿಕ ಯುಗದ ನಾವೂ ನಮ್ಮ ಕಾಲದ ಸೆರೆಯಾಳುಗಳಾಗಿದ್ದೇವೆ. ನಮಗಿಂತ ಮೊದಲು ನಮ್ಮ ಪೂರ್ವಿಕರು ಯೋಚಿಸುತ್ತಿದ್ದಂತೆ ಸತ್ಯಾನ್ವೇಷಣೆಯಲ್ಲಿ ನಮ್ಮ ದೃಷ್ಟಿಕೋಣ, ನಮ್ಮ ಮಾರ್ಗವೇ ಸರಿ ಎಂದು ನಾವೂ ಮೋಸಹೋಗಬಹುದು. ಆ ಸೆರೆಯಿಂದ ತಪ್ಪಿಸಿಕೊಳ್ಳಲು ಅಥವ ಅದು ಒಂದು ಭ್ರಮೆಯಾದರೆ ಆ ಭ್ರಮೆಯನ್ನು ಬಿಡಲು ಸಾಧ್ಯವಿಲ್ಲ.

ಆದರೂ ಸುದೀರ್ಘವಾದ ಇತಿಹಾಸ ಪರಂಪರೆಯಲ್ಲಿ ಎಂದೂ ಆಗದಷ್ಟು ಕ್ರಾಂತಿಕಾರಕ ಪರಿಣಾಮವನ್ನು ಮಾಡಿ ವೈಜ್ಞಾನಿಕ ರೀತಿ ಮತ್ತು ದೃಷ್ಟಿ ಮಾನವ ಜೀವನವನ್ನು ಪರಿವರ್ತನಗೊಳಿಸಿದೆ ಎಂದು ನನ್ನ ನಂಬುಗೆ ಮತ್ತು ಇದುವರೆಗೆ ನಾವು ಯಾವುದನ್ನು ಅಗೋಚರ, ಅಜೇಯವೆಂದು ಭಾವಿಸಿದ್ದೆವೊ ಅದರ ಹೆಬ್ಬಾಗಿಲ ಹತ್ತಿರಕ್ಕೆ ಒಯ್ಯುವ ಮುನ್ನೋಟದ ಮತ್ತು ಇನ್ನೂ ಹೆಚ್ಚಿನ ಕ್ರಾಂತಿಕಾರಕ ಬದಲಾವಣೆಗೆ ಹೊಸಮಾರ್ಗಗಳನ್ನು ತೋರಿಸಿ ಬಾಗಿಲು ತೆರೆದುಕೊಟ್ಟಿದೆ. ವಿಜ್ಞಾನದ ಪರಿಕರ್ಮದ ಸಾಧನೆಗಳು ಸ್ವತಸ್ಸಿದ್ಧವಿವೆ ; ಅಭಾವದ ಆರ್ಥಿಕಸ್ಥಿತಿಯನ್ನು ಸಮೃದ್ಧಿ ಸ್ಥಿತಿಗೆ ಪರಿವರ್ತಿಸುವ ಶಕ್ತಿಯೂ ವಿದಿತವಾಗಿದೆ ; ಇದುವರೆಗೂ ತತ್ವಶಾಸ್ತ್ರಕ್ಕೆ ಮೀಸಲಾಗಿದ್ದ ಅನೇಕ ಸಮಸ್ಯೆಗಳ ಮೇಲಿನ ವಿಜ್ಞಾನದ ದಾಳಿಯೂ ಹೆಚ್ಚು ಪರಿಣಾಮಕಾರಿಯಾಗುತ್ತಿದೆ. ದೇಶ-ಕಾಲ ಮತ್ತು ಕ್ವಾಂಟಮ್ ಸಿದ್ಧಾಂತವು ವಾಸ್ತವಿಕ ಪ್ರಪಂಚದ ಚಿತ್ರವನ್ನೇ ವ್ಯತ್ಯಾಸಮಾಡಿದೆ. ವಸ್ತುಸ್ವಭಾವ, ಅಣುರಚನೆ, ಮೂಲಭೂತ ವಸ್ತುಗಳ ಪರಿವರ್ತನೆ, ಬೆಳಕು ಮತ್ತು ವಿದ್ಯುಚ್ಛಕ್ತಿಗಳ ಪರಸ್ಪರ ಪರಿವರ್ತನ ವಿಷಯಗಳ ಮೇಲಿನ ಇತ್ತೀಚಿನ ಸಂಶೋಧನೆಗಳು ಮಾನವನ ಜ್ಞಾನಭಂಡಾರವನ್ನು ಇನ್ನೂ ಮುಂದೆ ಮುಂದೊಯ್ದಿವೆ. ಪ್ರಕೃತಿ ತನ್ನಿಂದ ದೂರವಾದ ಒಂದು ಭಿನ್ನ ವಸ್ತು ಎಂದು ಈಗ ಮನುಷ್ಯ ಭಾವಿಸುತ್ತಿಲ್ಲ. ಮನುಷ್ಯನ ಪ್ರಗತಿ ಪ್ರಕೃತಿಯ ಲಯಬದ್ಧ ಶಕ್ತಿಯ ಒಂದು ಅಂಗವಿರುವಂತೆ ಕಾಣುತ್ತಿದೆ.