ಪುಟ:ಭಾರತ ದರ್ಶನ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಹಮದ್ ನಗರದ ಕೋಟೆ

ಈ ಕ್ಷಣದಲ್ಲಿ ಇದೆ ಮರುಕ್ಷಣದಲ್ಲಿಯೇ ಇಲ್ಲ. ಮಾತೇನೋ ಮನೋಹರವಾಗಿದೆ ಆದರೆ ಅರ್ಥ ? ಭವಿಷ್ಯತ್ತಿನ ತೆರೆಯ ಮರೆಯಿಂದ ತನ್ನ ನಗ್ನ ಪರಿಶುದ್ಧತೆಯಲ್ಲಿ ನಮ್ಮ ಸಂಪರ್ಕ ಮಾಡಿ ಕ್ಷಣಮಾತ್ರದಲ್ಲಿಯೇ ಗತಕಾಲದ ಮಲಿನತೆಯಲ್ಲಿ ಹಳಸಿ ಮರೆಯಾಗುವ ಅಕ್ಷತಕಾಲ. ಅದನ್ನು ಮಲಿನಗೊಳಿಸುವವರು, ಅತಿಕ್ರಮಿಸುವವರು ನಾವೇನು ? ಅಥವ ಗತಕಾಲದ ದಾಂಪತ್ಯದಿಂದ ಕಲುಷಿತವಾಗಿರುವ ಆ ನಿಮಿಷವೇ ಅಷ್ಟು ಪರಿಶುದ್ದವಲ್ಲವೋ?

ತಾತ್ವಿಕ ಭಾವನೆಯಲ್ಲಿ ಮಾನವಸ್ವಾತಂತ್ರವೆಂಬುದು ಇದೆಯೊ? ಅಥವ ಎಲ್ಲವೂ ನಿಯತ ಪ್ರಾರಬ್ಧ ಕರ್ಮದಿಂದ ಬದ್ದವೊ ? ಅದು ನನಗೆ ತಿಳಿಯದು. ಆದರೂ ಗತಕಾಲದ ಘಟನೆಗಳ ಸಂಮಿಶ್ರ ಮನಃ ಪ್ರವೃತ್ತಿಯು ವ್ಯಕ್ತಿತ್ವವನ್ನು ಅದುಮಿ ಆವರಿಸುತ್ತದೆಂದು ಬಲ್ಲೆ. ಪ್ರಾಯಶಃ ಅವನು ಅನುಭವಿಸುವ ಅಂತಃಪ್ರೇರಣೆ ಸ್ವತಂತ್ರ ಭಾವನೆ ಎಂದು ಮೇಲೆ ತೋರಿದಾಗ್ಯೂ ಪ್ರಾಯಶಃ ಅದೂ ಗತಕಾಲದ ಅನುಭವಕ್ಕೆ ಅಧೀನವಾಗಿದೆ. ಷೋಪನ್ಸಾರ್ ಹೇಳುವಂತೆ “ ಮನುಷ್ಯ ಮನ ಬಂದಂತೆ ಮಾಡಬಹುದು, ಆದರೆ ತನ್ನ ಇಷ್ಟದಂತೆ ಮನಸ್ಸು ಮಾಡುವುದಿಲ್ಲ.” ಶುದ್ದ ವಿಧಿವಾದವನ್ನೇ ನಂಬಿದರೆ ನಾವು ಪೂರ್ಣ ಕ್ರಿಯಾವಿಹೀನರಾಗಿ ಜೀವಶ್ರವಗಳಂತಾಗುವುದೇ ಖಂಡಿತ, ನನ್ನ ಪ್ರತಿಯೊಂದು ರಕ್ತ ಕಣವೂ ಅದನ್ನು ಪ್ರತಿಭಟಿಸುತ್ತದೆ; ಆದರೆ ಪ್ರತಿಭಟನೆಯೇ ಗತ ಅನುಭವಗಳ ಫಲ ವಾಗಿದ್ದರೂ ಇರಬಹುದು.

ಬಗೆಹರಿಯದ ಈ ಬಗೆಯ ದಾರ್ಶನಿಕ, ಆಧ್ಯಾತ್ಮಿಕ ಸಮಸ್ಯೆಗಳ ಕಡೆ ಸಾಮಾನ್ಯವಾಗಿ ನನ್ನ ಮನಸ್ಸು ಓಡುವುದಿಲ್ಲ. ಕೆಲವು ವೇಳೆ ಸೆರೆಮನೆಯ ದೀರ್ಘ ಮೌನದಲ್ಲಿ, ಉಗ್ರ ಕಾರ್ಯಾಚರಣೆಯಲ್ಲಿ, ನನ್ನ ಮನಸ್ಸಿನಲ್ಲಿ ಮೂಡಿಬಂದು ಯಾವುದೋ ದುಃಖ ಸನ್ನಿವೇಶದಲ್ಲಿ ಮನಸ್ಸಿಗೊಂದು ಸಮಾಧಾನ ಅಥವ ನಿರ್ಲಿಪ್ತ ಭಾವನೆಯನ್ನುಂಟುಮಾಡುತ್ತದೆ. ಆದರೆ ಸಾಧಾರಣವಾಗಿ ನನ್ನ ಮನಸ್ಸೆಲ್ಲ ಕ್ರಿಯೆಯ ಕಡೆ ಅಥವ ಕಾರ್ಯಾಲೋಚನೆಯ ಕಡೆ; ಕ್ರಿಯೆ ಕೈಗೂಡದಿರುವ ವೇಳೆ ಕ್ರಿಯೆಗೆ ಸಿದ್ದತೆ ಮಾಡಿಕೊಳ್ಳುತ್ತಿದೇನೆ ಎಂದೇ ನನ್ನ ಭಾವನೆ.

ಕ್ರಿಯೆಯ ಕರೆ ಬಹಳದಿ೦ದಲೂ ನನಗೆ ಅಂಟಿಕೊಂಡಿದೆ. ಆದರೆ ಆ ಕ್ರಿಯೆ ಭಾವನಾರಹಿತ ವಾದುದಲ್ಲ; ಅದರಿಂದಲೇ ಅವಿಚ್ಛಿನ್ನ ವಾಗಿ ಹರಿದು ಬಂದ ಒಂದು ಪ್ರವಾಹ, ಮತ್ತು ಕೆಲವುಬಾರಿ ಎರಡೂ ಸಮರಸವಾದಾಗ ಭಾವನೆಯಿಂದ ಕ್ರಿಯೆ ಉದ್ಭವಿಸಿ ಕ್ರಿಯೆಯಲ್ಲೇ ಸಾಫಲ್ಯತೆ ಪಡೆದಾಗ, ' ಕ್ರಿಯೆಯಿಂದ ಪುನಃ ಭಾವೋದ್ರೇಕವಾಗಿ ಅರ್ಥಪೂರ್ಣತೆ ಪಡೆದಾಗ ನಾನು ಆಗೊ೦ದು ಜೀವನದ ಪೂರ್ಣತೆಯನ್ನು ಅನುಭವಿಸಿದ್ದೇನೆ; ಆ ಒಂದು ಗಳಿಗೆಯಲ್ಲಿ ಉಜ್ವಲ ಶ್ರದ್ದೆ ಯನ್ನು ತಾಳಿದ್ದೇನೆ. ಆದರೆ ಅಂತಹ ರಸನಿಮಿಷಗಳು ವಿರಳ, ಬಹುವಿರಳ, ಸಾಮಾನ್ಯವಾಗಿ ಒಂದಕ್ಕೊಂದು ಸಮರಸ ವಾಗುವುದೇ ಇಲ್ಲ; ಎರಡನ್ನೂ ಒಂದೇ ದಾರಿಗೆ ತರಲು ಮಾಡುವ ಪ್ರಯತ್ನವೆಲ್ಲ ವಿಫಲ. ಅನೇಕ ವರ್ಷಗಳ ಹಿಂದೆ ಕ್ರಿಯಾ ಬಾಹುಳ್ಯದಲ್ಲಿ ಮಗ್ನನಾಗಿ ಭಾವೋದ್ರೇಕದ ಆನಂದಾತಿಶಯದಲ್ಲಿ ಬಹು ಕಾಲ ಕಳೆದ ಸಮಯವೂ ಒ೦ದು ಇತ್ತು. ನನ್ನ ಯೌವನದ ಆ ದಿನಗಳು ಈಗ ಬಹಳ ದೂರವಾದಂತಿವೆ. ನನಗೆ ವಯಸ್ಸಾಗುತ್ತ ಬಂದಿದೆ ಎಂದು ಮಾತ್ರವಲ್ಲ; ಆದರೆ ಅಪಾರ ಸಮದ್ರದಂತಿರುವ ಪ್ರಪಂಚದ ಅನುಭವ ಮತ್ತು ಇಂದಿಗೂ ಅ೦ದಿಗೂ ಮಧ್ಯೆ ಇರುವ ದುಃಖಮಯ ಭಾವನಾತರಂಗ. ಆ ತುಂಬಿ ತುಳುಕುವ ಉತ್ಸಾಹ ಈಗಿಲ್ಲ; ಆ ಸಂಯಮರಹಿತ ಆವೇಗ ತಗ್ಗಿದೆ ; ಮನಸ್ಸಿನ ಉದ್ವೇಗ, ಅನುಕಂಪ ಹೆಚ್ಚು ಹಿಡಿತದಲ್ಲಿವೆ. ಯೋಚನೆಯ ಹೊರೆ ಅನೇಕವೇಳೆ ಒಂದು ಆತಂಕ; ಎಲ್ಲಿ ಒಂದು ಕಾಲದಲ್ಲಿ ಒಂದು ಮನೋನಿಶ್ಚಯವಿತ್ತೊ ಅಲ್ಲಿ ಈಗ ಅನುಮಾನ ತಲೆಹಾಕುತ್ತಿದೆ. ಪ್ರಾಯಶಃ ಅದು ವಯೋಧರ್ಮವಿರಬಹುದು; ಅಥವ ನಮ್ಮ ತಲೆಮಾರಿನ ಸಾಮಾನ್ಯ ಮಿತಿಯಿದ್ದರೂ ಇರಬಹುದು.

ಆದರೂ ಈಗಲೂ ಸಹ ಆಲೋಚನಾ ಪರಂಪರೆಯಲ್ಲಿ ಅಲ್ಪ ಕಾಲ ಹೋರಾಡಿದಮೇಲೆ ಕ್ರಿಯೆಯ ಕರೆಯಿಂದ ನನ್ನ ಹೃದಯಾಂತರಾಳದಲ್ಲಿ ವಿಚಿತ್ರ ಅನುಭವವುಂಟಾಗುತ್ತದೆ. ಅಪಾಯ ಸಂಕಟಗಳ ಕಡೆ ತಿರುಗಿ ಸಾವನ್ನೆದುರಿಸಿ ಅಪಹಾಸ್ಯ ಮಾಡುವ ಆನಂದೋನ್ಮಾದದ ಸುಂದರ ಅನುಭವವನ್ನು ಪುನಃ