ಪುಟ:ಭಾರತ ದರ್ಶನ.djvu/೪೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೬೬

ಭಾರತ ದರ್ಶನ

ಕಡೆಗೇ ಎಲ್ಲ ದೃಷ್ಟಿ ಇಡುವ ಅವಶ್ಯಕವೂ ಇಲ್ಲ, ಅದು ಯೋಗ್ಯವೂ ಅಲ್ಲ. ಪ್ರಪಂಚದ ಸೌಂದರ್ಯಾನುಭವ ಮಾತ್ರವಲ್ಲದೆ ಅನಂತ ನೂತನ ಸಂಶೋಧನೆಗಳ ಹೊಸ ಜೀವನದ ಬಾಳಿನ ಹೊಸ ಪ್ರಪಂಚದ ನೋಟದ ಮತ್ತು ಹೆಚ್ಚಿನ ಜೀವನ ಪೂರ್ಣತೆ ಮತ್ತು ಸವಿಯ, ಉತ್ಸಾಹಭರಿತ ಸಾಹಸಗಳು ಜೀವನದಲ್ಲಿ ಇನ್ನೂ ಅನೇಕ ಇವೆ.

ಆದ್ದರಿಂದ ವೈಜ್ಞಾನಿಕ ಪ್ರವೇಶ ಮತ್ತು ಮನೋಭಾವಗಳನ್ನು ದಾರ್ಶನಿಕ ದೃಷ್ಟಿಯೊಡನೆ ಅಳವಡಿಸಿಕೊಂಡು, ನಮ್ಮ ಜ್ಞಾನಕ್ಕೆ ನಿಲುಕದ ಅವ್ಯಕ್ತದಲ್ಲಿ ಗೌರವವನ್ನಿಟ್ಟು ನಾವು ಜೀವನ ಎದುರಿಸಬೇಕು. ಈ ರೀತಿ ಹಿಂದಿನ ಮತ್ತು ಇಂದಿನ ಉನ್ನತಿ ಮತ್ತು ಅವನತಿಗಳೆಲ್ಲವನ್ನು ಅರಿತು ಗಾಂಭೀರ್ಯದಿಂದ ಭವಿಷ್ಯದ ಕಡೆ ನೋಡುವ ಜೀವನದ ಪೂರ್ಣ ದೃಷ್ಟಿ ನಮಗೆ ದೊರೆಯಬಹುದು. ಹಳ್ಳಗಳು ಇದ್ದೇ ಇವೆ ಎಂದಿಗೂ ಅವನ್ನು ಮರೆಯುವಂತಿಲ್ಲ. ನಮ್ಮ ಸುತ್ತಲಿನ ಪ್ರಪಂಚದ ಸೌಂದರ್ಯದ ಪಕ್ಕದಲ್ಲಿಯೇ ಸಾವು ನೋವು. ಮಾನವನ ಜೀವನ ಯಾತ್ರೆಯಲ್ಲಿ ಸುಖದ ಹಿಂದೆಯೇ ದುಃಖ, ಅವನು ಅರಿತು ಮುಂದುವರಿಯುವುದೂ ಅಂತೆಯೇ. ಆತ್ಮದ ತಳಮಳವೂ ಒಂದು ದುರಂತ ಏಕಾಂತ ವಿಷಯ. ಬಾಹ್ಯ ವಿಷಯಗಳು ಮತ್ತು ಅವುಗಳ ಪರಿಣಾಮಗಳಿಂದ ನಮ್ಮ ಮೇಲೆ ಮಹತ್ತ್ವಭಾವ ಆಗುವುದು ದಿಟ; ಆದರೆ ನಮ್ಮ ಮನಸ್ಸಿಗೆ ದೊಡ್ಡ ಆಘಾತ ಬರುವುದು ನಮ್ಮ ಆಂತರಿಕ ಭಯ ಮತ್ತು ಘರ್ಷಣೆಗಳಿಂದ ಜೀವಂತ ಉಳಿಯಬೇಕಾದರೆ ಬಾಹ್ಯ ಪ್ರಪಂಚದಲ್ಲಿ ನಾವು ಪ್ರಗತಿ ಸಾಧಿಸಲೇಬೇಕು; ಆದರೆ ನಮಗೆ ವೈಯಕ್ತಿಕ ಆತ್ಮಶಾಂತಿ, ಸಾಮೂಹಿಕ ಪರಸ್ಪರ ಶಾಂತಿ, ನಮ್ಮ ಸುತ್ತಲಿನ ಪ್ರಪಂಚದೊಂದಿಗೆ ಶಾಂತಿ ಅತ್ಯವಶ್ಯಕ. ಆಗಮಾತ ನಮ್ಮ ದೈಹಿಕ ಮತ್ತು ವಿಷಯ ತೃಪ್ತಿ ದೊರೆಯುವುದಲ್ಲದೆ, ಭಾವನಾ ಮತ್ತು ಕ್ರಿಯಾ ಪ್ರಪಂಚಗಳ ಕಡೆಗಿನ ತನ್ನ ಘೋರತನ ಯಾತ್ರೆಯಲ್ಲಿ ಮಾನವನ ವೈಶಿಷ್ಟಗಳಾದ ಭಾವಪರವಶತೆಯ ಆತ್ಮಪ್ರೇರಣೆ ಮತ್ತು ಸಾಹಸ ಮನೋವೃತ್ತಿಗೂ ತೃಪ್ತಿ ದೊರೆಯುತ್ತದೆ. ಆ ಯಾತ್ರೆಗೆ ಒಂದು ಅಂತಿಮ ಧ್ಯೇಯ ಇದೆಯೋ ಇಲ್ಲವೋ ನಾನು ಅರಿಯೆ; ಆದರೆ ಅದರಿಂದ ಕೆಲವು ಲಾಭಗಳೇನೋ ಇವೆ. ಅನೇಕರಿಗೆ ಸುಲಭ ಸಾಧ್ಯವಾದ ಒಂದು ಹತ್ತಿರದ ಗುರಿ ತೋರಿಸುತ್ತದೆ. ಆ ಹಂತವೇ ಮತ್ತೊಂದು ಹೊಸ ಪ್ರಗತಿಗೆ ಒಂದು ಹೊಸ ಮೂಲವಾಗಬಹುದು.

ಪಾಶ್ಚಾತ್ಯ ಪ್ರಪಂಚದಲ್ಲಿ ವಿಜ್ಞಾನದ ಸರ್ವಾಧಿಕಾರ ನಡೆಯುತ್ತಿದೆ, ಎಲ್ಲರೂ ಅದಕ್ಕೆ ಕಾಣಿಕೆ ಸಲಿಸುತ್ತಿದಾರೆ. ಆದರೂ ಪಾಶ್ಚಾತ್ಯರಲ್ಲಿ ವೈಜ್ಞಾನಿಕ ಮನೋಪ್ರವೃತ್ತಿ ಬೆಳೆದಿದೆ ಎಂದು ನಾನು ಹೇಳಲಾರೆ. ದೇಹ ಮತ್ತು ಆತ್ಮಗಳ ಸಮರಸ ಜೀವನ ಅಲ್ಲಿ ಇನ್ನೂ ಬಂದಿಲ್ಲ. ಭಾರತದಲ್ಲಿ ನಾವು ಬಹುಮುಖವಾಗಿ ಬಹಳ ಮುಂದುವರಿಯಬೇಕಾಗಿದೆ. ನಮ್ಮ ದಾರಿಯಲ್ಲಿ ಅಗಾಧ ಆತಂಕಗಳು ಯಾವುವೂ ಬರಲಾರವೆಂದು ನನ್ನ ಭಾವನೆ. ಏಕೆಂದರೆ ಇತ್ತೀಚೆಗೆ ಇಲ್ಲದಿದ್ದರೂ ಪ್ರಾಚೀನ ಕಾಲದಲ್ಲಿ ಬಹುಕಾಲದ ಭಾರತೀಯ ಭಾವನೆಯ ಮುಖ್ಯ ಮೂಲತತ್ತ್ವವು ಈ ವೈಜ್ಞಾನಿಕ ಮನೋವೃತ್ತಿ ಮತ್ತು ಪ್ರವೇಶವಾಗಿತ್ತು ಮತ್ತು ಅಂತರ ರಾಷ್ಟ್ರೀಯ ಭಾವನೆಗಳೊಂದಿಗೂ ಅದು ಸರಿಹೊಂದಿಕೊಳ್ಳುತ್ತದೆ. ನಿರ್ಭಯ ಸತ್ಯಾನ್ವೇಷಣೆ, ಮಾನವನ ಅಸ್ತಿತ್ವ, ಸರ್ವ ಜೀವಗಳಲ್ಲಿ ಈಶ್ವರ ಪ್ರತಿಪಾದನೆ, ವ್ಯಕ್ತಿ ಮತ್ತು ಸಮಾಜದ ಸ್ವತಂತ್ರ ಸಹಕಾರ ಜೀವನ, ಸದಾ ಹೆಚ್ಚಿನ ಸ್ವಾತಂತ್ರ್ಯದ ಮತ್ತು ಉನ್ನತ ಮಟ್ಟದ ಮಾನವ ಪ್ರಗತಿ ಇವೇ ಅದರ ತಳಹದಿಯಾಗಿದ್ದವು.

೧೦. ರಾಷ್ಟ್ರೀಯ ಭಾವನೆಯ ಪ್ರಾಮುಖ್ಯತೆ: ಭಾರತದಲ್ಲಿ ಅವಶ್ಯ ಬದಲಾವಣೆಗಳು

ಪುರಾತನವೆಂದುದನ್ನೆಲ್ಲ ಕುರುಡು ಭಕ್ತಿಯಿಂದ ಪೂಜಿಸುವುದು ತಪ್ಪು; ಹಾಗೆಯೇ ಅದನ್ನು ತೃಣೀಕರಿಸುವುದೂ ತಪ್ಪು. ಈ ಎರಡು ಮಾರ್ಗದಿಂದಲೂ ನಮ್ಮ ಭವಿಷ್ಯ ರಚಿಸಲು ಸಾಧ್ಯವಿಲ್ಲ. ವರ್ತಮಾನ ಮತ್ತು ಭವಿಷ್ಯಗಳೆರಡರ ಹುಟ್ಟು ಪುರಾತನದಿಂದ; ಪ್ರಾಚೀನತೆಯ ಮುದ್ರೆ ಇವುಗಳ ಮೇಲೆ ಇದ್ದೇ ಇರುತ್ತದೆ. ಅದನ್ನು ಮರೆಯುವುದೆಂದರೆ ತಳಪಾಯವಿಲ್ಲದೆ ಮನೆ ಕಟ್ಟಿದಂತೆ; ಮತ್ತು ರಾಷ್ಟ್ರೀಯ