ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೃಷ್ಣಶಾಸ್ತ್ರೀ, ಎ ಆರ್
"ಎ.ಆರ್.ಕೃಷ್ಣಶಾಸ್ತ್ರೀ":-- 1890-1968. ಹೊಸಗನ್ನಡದ ಅಶ್ವಿನೀದೇವತೆಗಳಲ್ಲಿ ಒಬ್ಬರೆಂದು ಕೀರ್ತಿತರಾದ ಇವರು ವಿರೋಧಿನಾಮ ಸಂವತ್ಸರದ ಮಾಘ ಬಹುಳ ಸಪ್ತಮಿ ಬುಧವಾರದಂದು (12-2-1890) ಮೈಸೂರು ನಗರದಲ್ಲಿ ಜನ್ಮವೆತ್ತಿದರು. ತಂದೆ ಅಂಬಳೆ ರಾಮಕೃಷ್ಣಶಾಸ್ತ್ರಿಗಳು ಮೈಸೂರಿನ ಮಹಾರಾಜರವರ ಸಂಸ್ಕøತ ಮಹಾಪಾಠಶಾಲೆಯಲ್ಲಿ ವ್ಯಾಕರಣ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದುದರಿಂದ, ಶಾಸ್ತ್ರಿಗಳಿಗೆ ಚಿಕ್ಕಂದಿನಲ್ಲಿಯೇ ಸಂಪ್ರದಾಯದ ರೀತಿಯಲ್ಲಿ ಸಂಸ್ಕøತ ಭಾಷಾ ಸಾಹಿತ್ಯಗಳ ಪ್ರವೇಶಕ್ಕೆ ಅನುಕೂಲವಾಯಿತು. ಪ್ರೌಢಶಾಲೆಯ ವಿದ್ಯಾಭ್ಯಾಸವನ್ನು ಮೈಸೂರಿನ ವೆಸ್ಲಿಯನ್ ಮಿಷನ್ ಹೈಸ್ಕೂಲಿನಲ್ಲಿ ಮುಗಿಸಿದ ಮೇಲೆ, ಇವರು ಅದೇ ನಗರದ ಮಹಾರಾಜರವರ ಕಾಲೇಜಿನಲ್ಲಿ ಪ್ರೊ. ಬಿ,ಎಂ. ಶ್ರೀಕಂಠಯ್ಯನವರಲ್ಲಿ ಇಂಗ್ಲಿಷ್ ಕನ್ನಡ ಭಾಷಾಸಾಹಿತ್ಯಗಳನ್ನೂ ಪ್ರೊ,. ಎಂ. ಹಿರಿಯಣ್ಣನವರಲ್ಲಿ ಸಂಸ್ಕøತ ಸಾಹಿತ್ಯವನ್ನೂ ಅಭ್ಯಾಸಮಾಡಿ, ಕನ್ನಡ ಸಂಸ್ಕøತಗಳಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಯದ ಬಿ.ಎ. (1913), ಎಂ.ಎ. (1915) ಪದವಿಗಳನ್ನು ಪಡೆದರು.
ಕೆಲವು ತಿಂಗಳಕಾಲ ಮೈಸೂರು ಜಿಲ್ಲಾ ಕಚೇರಿಯಲ್ಲಿ ಕೆಲಸ ಮಾಡಿದ ಮೇಲೆ, ಶಾಸ್ತ್ರಿಗಳು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಬೋಧಕರಾಗಿ ನೇಮಕಗೊಂಡರು (1915). ಕೇಳುವವರಿಲ್ಲದೆ ಮೂಲೆಗುಂಪಾಗಿದ್ದ ಕನ್ನಡವನ್ನು ಮೇಲೆತ್ತಲು ಅಲ್ಲಿ ಇವರು ಮಾಡಿದ ಮಹತ್ತ್ವಪೂರಿತವಾದ ಕೆಲಸಗಳು ಮೂರು: ಮೊದಲನೆಯದಾಗಿ ಇಂಗ್ಲಿಷ್ ಸಾಹಿತ್ಯಾಭ್ಯಾಸದಿಂದ ತಾವು ಪಡೆದ ಜ್ಞಾನದಿಂದ ಕನ್ನಡದ ಬೋಧನೆಗೆ ಹೊಸ ತಿರುವನ್ನು ಕೊಟ್ಟು, ಕನ್ನಡದ ವಿಷಯದಲ್ಲಿ ವಿದ್ಯಾರ್ಥಿಗಳಲ್ಲಿ ಉತ್ಸಾಹವನ್ನು ತುಂಬಿ, ಕನ್ನಡಕ್ಕೆ, ಕನ್ನಡದ ಉಪಾಧ್ಯಾಯರಿಗೆ ಒಂದು ಗೌರವದ ಸ್ಥಾನವನ್ನು ತಂದುಕೊಟ್ಟರು. ಎರಡನೆಯದಾಗಿ ಕನ್ನಡ ವಿಷಯದಲ್ಲಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಅರಳಿಸಲು ಯೋಗ್ಯವಾದ, ನಾಡಿನ ಕರ್ಣಾಟಕ ಸಂಘಗಳಿಗೆ ಮಾತೃಪ್ರಾಯವಾದ ಕರ್ಣಾಟಕ ಸಂಘವೊಂದನ್ನು 1918ರಲ್ಲಿ ಸ್ಥಾಪಿಸಿದರು. ವಿಜ್ಞಾನವನ್ನು ಕನ್ನಡದ ಮೂಲಕ ಬೋಧಿಸಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟದ್ದು ಸೆಂಟ್ರಲ್ ಕಾಲೇಜಿನ ಕರ್ಣಾಟಕ ಸಂಘ; ತಮ್ಮ ಸಹೋದ್ಯೋಗಿಗಳ ನೆರವಿನಿಂದ ಹಾಗೆ ತೋರಿಸಿಕೊಟ್ಟವರು ಶಾಸ್ತ್ರಿಗಳು. ಐವತ್ತು ವರ್ಷಗಳಿಗೂ ಮಿಕ್ಕು ನಡೆದು ಬಂದು, ಕನ್ನಡದ ಉತ್ಕøಷ್ಟ ತ್ರೈಮಾಸಿಕವಾಗಿ ಮೈಸೂರು ವಿಶ್ವವಿದ್ಯಾನಿಲಯದಿಂದ ಹೊರಡುತ್ತಿರುವ ಪ್ರಬುದ್ಧ ಕರ್ಣಾಟಕವನ್ನು ಹೊಸಗನ್ನಡದ ಪುನರುಜ್ಜೀವನ ಕಾರ್ಯಕ್ಕೆ ವೇದಿಕೆಯಾಗಿ ಹೊರಡಿಸಿದ್ದು (1919) ಶಾಸ್ತ್ರಿಗಳೇ. ಅದೇ ವರ್ಷ ಇವರಿಗೆ ಮೈಸೂರಿನ ಓರಿಯಂಟಲ್ ಲೈಬ್ರರಿಗೆ ವರ್ಗವಾಗಲು, ಅಲ್ಲಿ ಶಾಮಶಾಸ್ತ್ರಿಗಳ ನೇತೃತ್ವದಲ್ಲಿ ನಯಸೇನನ ಧರ್ಮಾಮೃತವನ್ನು ಸಂಪಾದಿಸಿ, ಪೀಠಿಕೆಯೊಡನೆ ಅಚ್ಚಿಗೆ ಸಿದ್ದಪಡಿಸಿದರು. 1927ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಎಂ.ಎ. ತರಗತಿಗಳು ತೆರೆಯುವಂತಾಗಲು ಶಾಸ್ತ್ರಿಗಳು ತೆರೆಯ ಮರೆಯಲ್ಲಿ ಕೆಲಸಮಾಡಿ ಅದು ಅಸ್ತಿತ್ವಕ್ಕೆ ಬಂದಾಗ ಕೆಲವು ತಿಂಗಳ ಕಾಲ ಆ ತರಗತಿಗಳಿಗೆ ಪಾಠ ಹೇಳಿದರು. 1927ರಲ್ಲಿ ಮತ್ತೆ ಸೆಂಟ್ರಲ್ ಕಾಲೇಜಿಗೆ ಕನ್ನಡದ ಉಪ ಪ್ರಾಧ್ಯಾಪಕರಾಗಿ ಹೋಗಿದ್ದು 1939ರಲ್ಲಿ ವೆಂಕಣ್ಣಯ್ಯನವರು ದಿವಂಗತರಾದಾಗ ಮೈಸೂರಿನ ಮಹಾರಾಜರವರ ಕಾಲೇಜಿಗೆ ಕನ್ನಡ ಪ್ರಾಧ್ಯಾಪಕರೂ ಇಲಾಖೆಯ ಮುಖ್ಯಾಧಿಕಾರಿಗಳೂ ಆಗಿ ಬಂದು, 1946ನೆಯ ಆಗಸ್ಟ್ ತಿಂಗಳವರೆಗೂ ಕನ್ನಡ ವಿಭಾಗದ, ಕನ್ನಡ ಭಾಷಾಸಾಹಿತ್ಯಗಳ, ಪ್ರಬುದ್ಧ ಕರ್ಣಾಟಕದ ಏಳಿಗೆಗಾಗಿ ದುಡಿದರು.
ಮೂವತ್ತು ವರ್ಷಗಳ ಕಾಲ ಶಾಸ್ತ್ರಿಗಳು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಬೋಧಕರಾಗಿ ಹೊಸ ಪೀಳೆಗೆಯನ್ನು ಸೃಷ್ಟಿಮಾಡಿದರಲ್ಲದೆ, ಕನ್ನಡದ ಮುನ್ನಡೆಗಾಗಿ ಹಲವು ಸಂಘಸಂಸ್ಥೆಗಳ ಸದಸ್ಯರಾಗಿ ಕೆಲಸಮಾಡಿದರು. 1942ರಿಂದ 1946ರವರೆಗೆ ಶಾಸ್ತ್ರಿಗಳೂ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಗ್ರಂಥಮಾಲೆಯ ಪ್ರಧಾನ ಸಂಪಾದಕರಾಗಿದ್ದುದಲ್ಲದೆ, ಕುಮಾರವ್ಯಾಸ ಭಾರತದ ಯುದ್ಧಪಂಚಕದ ಪರಿಷ್ಕರಣ ಸಮಿತಿಯ ಸದಸ್ಯರಾಗಿದ್ದು ಕರ್ಣಶಲ್ಯಗದಾಪರ್ವಗಳು ಕ್ಷಿಪ್ರವಾಗಿ ಹೊರಬೀಳಲು ಕಾರಣರಾದರು. ಮೈಸೂರು ವಿಶ್ವವಿದ್ಯಾನಿಲಯಕ್ಕೆ ಪ್ರಬುದ್ಧ ಕರ್ಣಾಟಕ ವರ್ಗವಾಗುವವರೆಗೂ ಅದರ ಸಂಪಾದಕರಾಗಿದ್ದುದಲ್ಲದೆ ಮೈಸೂರಿನಲ್ಲಿ ಅವರು ಪ್ರಾಧ್ಯಾಪಕರಾದಾಗಲೂ ಅದರ ಸಂಪಾದಕತ್ವವನ್ನು ವಹಿಸಿಕೊಂಡು ಅದು ಕಾಲಕ್ಕೆ ಸರಿಯಾಗಿ ಬರುವಂತೆ ಮಾಡಿ ಪತ್ರಿಕೆಯ ಮಟ್ಟವನ್ನು ಘನತೆಗೇರಿಸಿದರು. ಈ ಪತ್ರಿಕೆಯ ಮೂಲಕ ವಿದ್ವತ್ತಿಗೆ, ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ಬರೆಯುವ ತರುಣ ಲೇಖಕರಿಗೆ ಪ್ರೋತ್ಸಾಹ ಕೊಟ್ಟಂತೆ ಶಾಸ್ತ್ರಿಗಳು ತಮ್ಮ ಲೇಖನಗಳಿಂದ ಕಾವ್ಯ ಪರೀಕ್ಷೆಯ ಹೊಸ ವಿಮರ್ಶನ ಮಾರ್ಗವನ್ನು ನಿರ್ಮಿಸಿದರು. ಹಾಗೆಯೇ ಆದರ್ಶವಾದಿಗಳ ಮಧ್ಯದಲ್ಲಿದ್ದುಕೊಂಡು ಕರ್ಣಾಟಕ ಸಾಹಿತ್ಯ ಪರಿಷತ್ ಪತ್ರಿಕೆಯ ಸಂಪಾದಕರಾಗಿ ಅದರ ಮಟ್ಟವನ್ನು ಕಾಯ್ದುಕೊಂಡು ಬಂದದ್ದಲ್ಲದೆ, ಅದನ್ನು ಏರಿಸಿದರು. ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್-ಕನ್ನಡ ನಿಘಂಟು ಪ್ರಾರಂಭವಾದಂದಿನಿಂದ ಅದು ಮುಗಿಯುವವರೆಗೆ ಅದರ ಸದಸ್ಯರಾಗಿದ್ದರು. ಎಲ್ಲಕ್ಕೂ ಮಿಗಿಲಾಗಿ ಕನ್ನಡ ಸಾಹಿತ್ಯಪರಿಷತ್ತು ಪ್ರಕಟಿಸುತ್ತಿರುವ ಕನ್ನಡ ನಿಘಂಟಿನ ಪ್ರಥಮ ಸಂಪಾದಕರಾಗಿದ್ದು (1943-1957) ಅದಕ್ಕೆ ಒಂದು ಖಚಿತರೂಪವನ್ನು ಕೊಟ್ಟವರು ಶಾಸ್ತ್ರಿಗಳು. ಶಾಸ್ತ್ರಿಗಳ ಸಾರ್ವಜನಿಕ ಸೇವೆ ಎಲೆ ಮರೆಯ ಕಾಯಿನಂತಿರುತ್ತಿತ್ತು; ಆದರದು ಬಹುಫಲಗಳನ್ನು ಕೊಡುತ್ತಿತ್ತು.
ಶ್ರೇಷ್ಠ ಅಧ್ಯಾಪಕರಾಗಿ ಶಾಸ್ತ್ರಿಗಳು ಹೊಸ ಪೀಳಿಗೆಯ ಲೇಖಕರನ್ನು ಗುರುತಿಸಿ, ಅವರನ್ನು ಕೃತಿರಚನೆಗೆ ಪ್ರೋತ್ಸಾಹಿಸಿದುದು ಮಾತ್ರವಲ್ಲದೆ ತಾವೇ ಕನ್ನಡದಲ್ಲಿ ಘನವಾದ ಗದ್ಯಕೃತಿಗಳನ್ನು ನಿರ್ಮಿಸಿದ್ದಾರೆ. ಆ ಗ್ರಂಥಗಳು ಇವು: 1 ಶ್ರೀರಾಮಕೃಷ್ಣಪರಮಹಂಸರ ಚರಿತ್ರೆ (ವೆಂಕಣ್ಣಯ್ಯನವರೊಡನೆ, 1957), 2 ಸ್ವಾಮಿ-ಶಿಷ್ಯ ಸಂವಾದ, ಭಾಗ-1(ವೆಂಕಣ್ಣಯ್ಯನವರೊಡನೆ, 1923), 3. ಕನ್ನಡ ಕೈಪಿಡಿ-ಭಾಗ-1 ಕಾವ್ಯಲಕ್ಷಣ ವಿಭಾಗ (1928), 4. ಹರಿಶ್ಚಂದ್ರ ಕಾವ್ಯ ಸಂಗ್ರಹ (ವೆಂಕಣ್ಣಯ್ಯನವರೊಡನೆ, 1931), 5 ಭಾಸಕವಿ (1933), 6 ಸಂಸ್ಕøತ ನಾಟಕ (1937), 7 ನಾಗಮಹಾಶಯ (1939), 8 ಸರ್ವಜ್ಞಕವಿ (1948), 9 ಭಾಷಣಗಳು ಮತ್ತು ಲೇಖನಗಳು (ಭಾಗ-1, 1948, ಭಾಗ-2, 1949, ಸಂಯುಕ್ತ ಸಂಪುಟ 1960), 10 ಶ್ರೀಪತಿಯ ಕಥೆಗಳು (1948), 11 ವಚನಭಾರತ (1950), 12 ಕಥಾಮೃತ (1952), 13 ಕವಿಜಿಹ್ವಾಬಂಧನಂ (1952), 14 ಬಂಕಿಮಚಂದ್ರ (1960), 15 ನಿರ್ಮಲಭಾರತೀ (1960), 16 ನಿಬಂಧಮಾಲಾ (1963).
ಕೃಷ್ಣಶಾಸ್ತ್ರಿಗಳ ಕೃತಿಗಳನ್ನು ಸಂಪಾದಿತ, ಅನುವಾದಿತ, ಸ್ವತಂತ್ರ ಎಂದು ಮೂರು ಭಾಗವಾಗಿ ವಿಂಗಡಿಸಬಹುದು. ಪೀಠಿಕೆಯೊಡನೆ ಕೂಡಿದ ನಯಸೇನನ ಧರ್ಮಾಮೃತ (ಮೈಸೂರಿನ ಓರಿಯಂಟಲ್ ಲೈಬ್ರರಿಗಾಗಿ), ಕವಿಜಿಹ್ವಾಬಂಧನಗಳು ಇವರಿಂದ ಸಂಪಾದಿತವಾದ ಗ್ರಂಥಗಳು. ಶರಶ್ಚಂದ್ರ ಚಕ್ರವರ್ತಿಯವರ ಪ್ರಸಿದ್ಧ ಬಂಗಾಳೀ ಮೂಲಕೃತಿಯ ಅನುವಾದ ನಾಗಮಹಾಶಯ. ರವೀಂದ್ರ ಶತಮಾನೋತ್ಸವ ಸಂದರ್ಭದಲ್ಲಿ ದೆಹಲಿಯ ಸಾಹಿತ್ಯ ಅಕಾಡಮಿಗಾಗಿ ಬಂಗಾಳಿಯಿಂದ ಅನುವಾದಗೊಂಡ ಕವಿವರ್ಯ ಠಾಕೂರರ ಲೇಖನಗಳ ಸಂಗ್ರಹವೇ ನಿಬಂಧಮಾಲಾ. ಇದು ಶಾಸ್ತ್ರಿಗಳ ಕೊನೆಯ ಗ್ರಂಥ. ಸ್ವತಂತ್ರ ಕೃತಿಯನ್ನು ಓದಿದಷ್ಟು ಸೊಗಸಾಗಿರುವುದೇ ಈ ಅನುವಾದಗಳ ವೈಶಿಷ್ಠ್ಯ. ಧ್ವನಿ ತತ್ತ್ವದ ವಿಸ್ತಾರವಾದ ವಿವೇಚನೆಯೊಂದನ್ನು ಬಿಟ್ಟರೆ ಅಲಂಕಾರಶಾಸ್ತ್ರದ ಎಲ್ಲ ವಿಷಯಗಳನ್ನೂ ಸಂಗ್ರಹವಾಗಿ ಸಾರವತ್ತಾಗಿ ತಿಳಿಸುವ ಕೈಪಿಡಿಯ ಭಾಗವೇ ಕಾವ್ಯಲಕ್ಷಣ ವಿಭಾಗ. ರಾಘವಾಂಕನ ಕೃತಿಗಳ, ಅದರಲ್ಲೂ ಹರಿಶ್ಚಂದ್ರ ಕಾವ್ಯದ, ಘನವಾದ ವಿಮರ್ಶೆ ಹರಿಶ್ಚಂದ್ರ ಕಾವ್ಯಸಂಗ್ರಹದ ಪೀಠಿಕೆ. ಭಾಸಕವಿ ಶಾಸ್ತ್ರಿಗಳ ಮೊದಲ ಪಂಡಿತಕೃತಿ. ಭಾಸನ ಕಾಲ, ದೇಶ, ಕೃತಿ ಕರ್ತೃತ್ವಗಳ ವಿಚಾರವಾಗಿ ಅದುವರೆಗೂ ನಡೆದ ವಿದ್ವಾಂಸರ ವಾದಗಳನ್ನು ನಿರೂಪಿಸಿ, ಅವನ್ನು ತೂಗಿ ನೋಡಿ, ತಮ್ಮ ಅಭಿಪ್ರಾಯವನ್ನು ಹೇಳಿ, ಸ್ವಪ್ನವಾಸವದತ್ತ, ಪ್ರತಿಮಾ, ಪಂಚರಾತ್ರ ನಾಟಕಗಳ ಕಲಾಸೌಂದರ್ಯವನ್ನು ವಿಸ್ತಾರವಾಗಿ ತಿಳಿಸಿ, ಮಿಕ್ಕ ನಾಟಕಗಳನ್ನು ಪರಿಚಯಮಾಡಿಕೊಡುವ ಗ್ರಂಥವದು. ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಗ್ರಂಥಮಾಲೆಯ ಹತ್ತನೆಯ ಕುಸುಮವಾಗಿ ಅರಳಿದ ಅಪೂರ್ವವೂ ಅದ್ವಿತೀಯವೂ ಆದ ಗ್ರಂಥ ಸಂಸ್ಕøತ ನಾಟಕ. ಪಂಡಿತ ಪತ್ರಿಕೆಗಳಲ್ಲಿ ಚದರಿಹೋಗಿದ್ದ ಅಸಂಖ್ಯಾತ ಲೇಖನಗಳನ್ನು ಪರಿಶೀಲಿಸಿ, ಸಂಸ್ಕøತನಾಟಕಗಳನ್ನು ಅಭ್ಯಾಸಮಾಡಿ, ತಮ್ಮ ಸ್ವಂತ ಅನುಭವವನ್ನು ಸೇರಿಸಿ, ರಚಿಸಿದ ಈ ಗ್ರಂಥದಲ್ಲಿ ಸಂಸ್ಕøತನಾಟಕದ ಉತ್ಪತ್ತಿ ಮತ್ತು ಬೆಳವಣಿಗೆಯನ್ನು ಹೇಳಿರುವುದಲ್ಲದೆ, ಅಶ್ವಘೋಷನಿಂದ ಹಿಡಿದು ಕೃಷ್ಣಮಿಶ್ರನವರೆಗೆ ರಚಿತವಾದ ನಾಟಕಗಳ ವಿಮರ್ಶೆಯನ್ನೂ ಕೊಟ್ಟಿದೆ. ಕವಿಯ ಕಲಾ ಸೌಂದರ್ಯವನ್ನು ಹಿಡಿದಿಡುವ ಸೂತ್ರಪ್ರಾಯವಾದ ಮಾತುಗಳು, ವಾಕ್ಯಗಳು ಇಲ್ಲಿ ಪುಟಪುಟಗಳಲ್ಲಿ ಕಂಗೊಳಿಸುತ್ತಿವೆ. ವಿಷಯವನ್ನು ಸಮರ್ಥಿಸಲು ನಾಟಕಗಳಿಂದ ವಾಕ್ಯಗಳನ್ನೂ ಪದ್ಯಗಳನ್ನೂ ಅಲ್ಲಲ್ಲಿ ಉದ್ಧರಿಸಿದೆ. ಗ್ರಂಥದ ಕೊನೆಯಲ್ಲಿ 650 ನಾಟಕಗಳ ಹೆಸರಿನ ಪಟ್ಟಿ ಇದೆ. ಹತ್ತು ವರ್ಷಗಳ ಲೇಖಕರ ಪರಿಶ್ರಮದಿಂದ ರಚಿತವಾದ ಈ ಗ್ರಂಥ ಅವರ ವಿದ್ವತ್ತಿಗೂ ರಸಜ್ಞತೆಗೂ ಸಾಕ್ಷಿಯಾಗಿದೆ. ಇಂಥ ಗ್ರಂಥ ಭಾರತೀಯ ಭಾಷೆಗಳ ಮಾತು ಹಾಗಿರಲಿ, ಇಂಗ್ಲಿಷಿನಲ್ಲಿಯೂ ಇಲ್ಲವೆಂದು ವಿದ್ವಾಂಸರ ಮತ. ಅಂಗೈಯಗಲದ ಅರವತ್ತುನಾಲ್ಕು ಪುಟಗಳಲ್ಲಿ ಅವನ ಮಾತುಗಳಿಂದಲೇ ಸರ್ವಜ್ಞನ ಜೀವನ ಹಾಗೂ ವಚನಗಳನ್ನು ಪರಿಚಯಮಾಡಿಕೊಡುವ, ಪ್ರಚಾರೋಪನ್ಯಾಸ ಮಾಲೆಯ ಚಿಕ್ಕಪುಸ್ತಕ ಸರ್ವಜ್ಞಕವಿ. ಭಾಷಣಗಳು ಮತ್ತು ಲೇಖನಗಳು ಎಂಬ ಗ್ರಂಥದಲ್ಲಿ ಹೈದರಾಬಾದಿನ ಸಾಹಿತ್ಯ ಸಮ್ಮೇಳನದ (1941) ಅಧ್ಯಕ್ಷ ಭಾಷಣವೂ ವಿಶೇಷ ಸಾಹಿತ್ಯೋತ್ಸವದ ಆರಂಭಭಾಷಣವೂ (1947) ನಾಲ್ಕು ಲೇಖನಗುಚ್ಛಗಳೂ ಇವೆ. ಮೊದಲ ಎರಡು ಲೇಖನಗುಚ್ಛಗಳಲ್ಲಿ ಹಿಂದಿನ ಮತ್ತು ಇಂದಿನ ಕವಿಗಳ ಹಾಗೂ ಅವರ ಕೃತಿಗಳಿಗೆ ಸಂಬಂಧಪಟ್ಟ ಲೇಖನಗಳೂ ತರುಣ ಸಾಹಿತಿಗಳಿಗೆ ಮಾರ್ಗದರ್ಶನ ಮಾಡತಕ್ಕ ಲೇಖನಗಳೂ ಮೂರನೆಯ ಗುಚ್ಛದಲ್ಲಿ ಹನ್ನೆರಡು ಗ್ರಂಥಗಳ ಮೇಲೆ ಲೇಖಕರು ಬರೆದಿರುವ ವಿಮರ್ಶೆಗಳೂ ನಾಲ್ಕನೆಯದರಲ್ಲಿ ಪ್ರಬುದ್ಧ ಕರ್ಣಾಟಕದ ಸಂಪಾದಕರಾಗಿ ಅವರು ಬರೆದ ವಿವಿಧ ವಿಷಯಗಳ ಮೂವತ್ತೆರಡು ಸಂಪಾದಕೀಯಗಳೂ ಇವೆ. ಭಾಷಣಗಳಲ್ಲಿ ಶಾಸ್ತ್ರಿಗಳ ಉಜ್ವಲವಾದ ಕನ್ನಡದ ಅಭಿಮಾನ, ಲೇಖನಗಳಲ್ಲಿ ಅವರು ಕನ್ನಡ ಸಾಹಿತ್ಯಕ್ಕೆ ತಂದುಕೊಟ್ಟ ಹೊಸದೃಷ್ಟಿ ಸುಸ್ಪಷ್ಟವಾಗಿ ಗೋಚರಿಸುತ್ತವೆ. ಶ್ರೀಪತಿ ಎಂಬ ಕಾವ್ಯನಾಮದಿಂದ ಪ್ರಬುದ್ಧ ಕರ್ಣಾಟಕಕ್ಕೆ ಶಾಸ್ತ್ರಿಗಳು ಬರೆದ ಹದಿಮೂರು ಸಣ್ಣಕಥೆಗಳೇ ಶ್ರೀಪತಿಯ ಕಥೆಗಳು. ಮಧ್ಯಮವರ್ಗದ ಜನರ ಕಷ್ಟಕಾರ್ಪಣ್ಯಗಳನ್ನೂ ನಂಬಿಕೆಗಳನ್ನೂ ಕಣ್ಣಿಗೆ ಕಟ್ಟುವಂತೆ ಈ ಕಥೆಗಳು ಚಿತ್ರಿಸುವುವಲ್ಲದೆ, ಸ್ತ್ರೀಯರ ವಿಷಯದಲ್ಲಿ ಲೇಖಕರ ಅಭಿಪ್ರಾಯಗಳನ್ನು ಪ್ರತಿಬಿಂಬಿಸುತ್ತವೆ. ಇದೊಂದೇ ಶಾಸ್ತ್ರಿಗಳ ಸ್ವತಂತ್ರ ಸೃಷ್ಟ್ಯಾತ್ಮಕಕೃತಿ. ಇವೆಲ್ಲಕ್ಕೂ ಮಿಗಿಲಾಗಿ ಕೃಷ್ಣಶಾಸ್ತ್ರಿಗಳಿಗೆ ಕೀರ್ತಿತಂದ ಕೃತಿ ವಚನಭಾರತ. ಇಂದಿನ ಜೀವನಕ್ಕೆ ಅಗತ್ಯವಾದ ಧರ್ಮ ನೀತಿಗಳನ್ನೊಳಗೊಂಡು ವ್ಯಾಸಭಾರತದ ಹದಿನೆಂಟು ಪರ್ವಗಳ ಕಥೆ ಸರಳಸುಂದರ ಗದ್ಯದಲ್ಲಿ ಮೂಲಕ ಗಾಂಭೀರ್ಯವನ್ನು ಬಿಟ್ಟುಕೊಡದೆ ಹೊಸಗನ್ನಡದಲ್ಲಿ ಬಟ್ಟಿಯಿಳಿದು ಬಂದಿದೆ, ಈ ಭಾರತ ಸಾರಸಂಗ್ರಹದಲ್ಲಿ. ಹಲವು ಸಂಸ್ಕರಣಗಳನ್ನು ಓದಿ ನೋಡಿ, ತೂಗಿ ವಿಮರ್ಶೆಮಾಡಿ ಆರು ತಿಂಗಳಲ್ಲಿ ಬರೆಗ ಗ್ರಂಥ ಇದು. ನಾನೂರು ಪುಟಗಳ ಕಥೆ ಒಂದು ತೂಕವಾದರೆ ಇದರ ವಿದ್ವತ್ಪೂರ್ಣವಾದ ಪೀಠಿಕೆಯೇ ಒಂದು ತೂಕ. ಮಹಾಭಾರತದ ಹುಟ್ಟು, ಬೆಳವಣಿಗೆ, ಅದು ಪ್ರತಿಪಾದಿಸುವ ತತ್ತ್ವ, ಆಧುನಿಕ ಯುಗಕ್ಕೆ ಅದರ ಸಂದೇಶ-ಇವೇ ಮೊದಲಾದ ಬಹು ವಿಷಯಗಳನ್ನೊಳಗೊಂಡ ಪೀಠಿಕೆ ಪ್ರೌಢವೂ ಸರಳವೂ ಆಗಿದೆ. ಇಷ್ಟು ಸರಳಸುಂದರವಾದ ಗದ್ಯಭಾರತ ಇನ್ನಾವ ಭಾಷೆಯಲ್ಲಿಯೂ ಇರಲಾರದು. ಸಂಸ್ಕøತಭಾಷೆಯಲ್ಲಿ ಸೋಮದೇವನಿಂದ ರಚಿತವಾದ ಕಥಾಸರಿತ್ಸಾಗರದ ಸಾರಸಂಗ್ರಹವೇ ಕಥಾಮೃತ. ಬೃಹತ್ಕಥೆ, ಗುಣಾಢ್ಯ, ಸಮಾಜ, ನೀತಿ ಇವೇ ಮೊದಲಾದ ಹಲವು ವಿಷಯಗಳನ್ನೊಳಗೊಂಡ ಪ್ರೌಢವಾದ ಪೀಠಿಕೆ ಈ ಗ್ರಂಥಕ್ಕೂ ಇದೆ. ಸ್ತ್ರೀಯರ ವಿಷಯದಲ್ಲಿ ಲೇಖಕರು ಇಲ್ಲಿ ಮಾಡಿರುವ ವಿಮರ್ಶೆ ಸ್ವಲ್ಪ ಹೆಚ್ಚಾಯಿತೇನೋ. ಬಂಕಿಮಚಂದ್ರನ ಕೃತಿಗಳನ್ನು ಕಾದಂಬರಿ ಮತ್ತು ಇತರ ಲೇಖನ ಹಾಗೂ ಗ್ರಂಥಗಳನ್ನು ಮೂಲದಲ್ಲಿಯೇ ಅಭ್ಯಾಸಮಾಡಿ, ಕವಿಯ ಮತ್ತು ಅವನ ಕೃತಿಗಳನ್ನು ಪರಿಶೀಲಿಸುವ ಸಮಗ್ರಗ್ರಂಥ ಬಂಕಿಮಚಂದ್ರ.. ಸಂಕ್ಷಿಪ್ತ ಬಂಗಾಳೀ ಸಾಹಿತ್ಯಚರಿತ್ರೆ ಮತ್ತು ಬಂಕಿಮರ ಜೀವನಚರಿತ್ರೆಯಾದ ಮೇಲೆ, ಕಾದಂಬರಿಗಳ ಕಥಾಸಾರವನ್ನು ಸಂಕ್ಷೇಪವಾಗಿ ನಿರೂಪಿಸಿ ಆ ಬಳಿಕ ಶಾಸ್ತ್ರಿಗಳು ವಿಸ್ತಾರವಾಗಿ ಕೃತಿ ವಿಮರ್ಶೆ ಮಾಡುತ್ತಾರೆ. ಅವನ ಇತರ ಕೃತಿಗಳ, ಲೇಖನಗಳ ಹಕ್ಕಿನೋಟವೂ ಇಲ್ಲಿದೆ. ಬಂಕಿಮಚಂದ್ರ ಗ್ರಂಥ ವಿಮರ್ಶೆಯ ಒಂದು ರಸದೂಟ. ಇದರ ರಚನೆಗೆ ಶಾಸ್ತ್ರಿಗಳಿಗೆ ಎಂಟು ವರ್ಷಕಾಲ ಹಿಡಿಯಿತು. ಕನ್ನಡದ ಮಾತಿರಲಿ, ಇಂಥ ಕೃತಿ ಬಂಗಾಳೀ ಭಾಷೆಯಲ್ಲಿಯೂ ಇಲ್ಲವೆಂದು ತಿಳಿದವರು ಹೇಳುತ್ತಾರೆ. ದೆಹಲಿ ಸಾಹಿತ್ಯ ಅಕಾಡಮಿಯ ಬಹುಮಾನ ಪಡೆದ ಕೃತಿ ಇದು. ನಿರ್ಮಲ ಭಾರತೀ ಎಂಬ ಸಚಿತ್ರ ಕಿರುಹೊತ್ತಗೆ ಮಕ್ಕಳಿಗಾಗಿ ಸರಳವಾದ ಭಾಷೆಯಲ್ಲಿ ಮಹಾಭಾರತದ ಇಡೀ ಕಥೆಯನ್ನು ತಿಳಿಸುತ್ತದೆ. ಈ ಪುಸ್ತಕದಲ್ಲಿ ದೊಡ್ಡಚಿತ್ರಗಳೊಡನೆ ಮಕ್ಕಳ ಕುತೂಹಲವನ್ನು ಕೆರಳಿಸುವ ಬಿಲ್ಲು ಬಾಣ ಗದೆ ಈಟಿ ಚತುರಂಗಸೇನೆ ಶಂಖ ಕೊಂಬು ಕಹಳೆ ಮುಂತಾದ ಚಿಕ್ಕಚಿಕ್ಕ ಚಿತ್ರಗಳಿರುವುದು ಒಂದು ವೈಶಿಷ್ಟ್ಯ.
ಹೈದರಾಬಾದಿನಲ್ಲಿ 1941ರಲ್ಲಿ ಸೇರಿದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶಾಸ್ತ್ರಿಗಳು ಅಧ್ಯಕ್ಷರಾಗಿದ್ದರು. 1956ರಲ್ಲಿ ಶಾಸ್ತ್ರಿಗಳ ಶಿಷ್ಯರೂ ಮಿತ್ರರೂ ಅಭಿವಂದನೆ ಎಂಬ ವಿದ್ವತ್ ಪ್ರಬಂಧಗಳ ಸಂಪುಟವನ್ನು ಇವರಿಗೆ ಅರ್ಪಿಸಿದರು. ಮೈಸೂರು ವಿಶ್ವವಿದ್ಯಾನಿಲಯ 1960ರಲ್ಲಿ ಶಾಸ್ತ್ರಿಗಳಿಗೆ ಡಿ.ಲಿಟ್. ಪದವಿಯನ್ನು ಕೊಟ್ಟು ಗೌರವಿಸಿತು. ಬಂಕಿಮಚಂದ್ರಕ್ಕೆ ದೆಹಲಿ ಸಾಹಿತ್ಯ ಅಕಾಡಮಿಯ ಬಹುಮಾನ 1963ರಲ್ಲಿ ದೊರಕಿತು.
ಸಂಸ್ಕøತ, ಕನ್ನಡ, ಇಂಗ್ಲಿಷ್, ಬಂಗಾಳೀ ಭಾಷೆಗಳಲ್ಲಿ ಘನವಾದ ಪಾಂಡಿತ್ಯವನ್ನೂ ತಮಿಳು ತೆಲುಗು ಭಾಷೆಗಳಲ್ಲಿ ಸಲಿಗೆಯನ್ನೂ ಹೊಂದಿದ್ದ ಶಾಸ್ತ್ರಿಗಳು ಕನ್ನಡ ಬರವಣಿಗೆಯ ವಿಷಯದಲ್ಲಿ ನಿಷ್ಕøಷ್ಟವಾದ ಅಭಿಪ್ರಾಯವನ್ನು ಹೊಂದಿದ್ದರು. ವಿಷಯವನ್ನು ಚೆನ್ನಾಗಿ ತಿಳಿಯದೆ ಏನನ್ನೂ ಬರೆಯಬಾರದು. ತಿಳಿದ ವಿಷಯವನ್ನು ತಿಳಿಯಾದ ಬಿಗಿಯಾಗಿ ಅಡಕವಾದ ಭಾಷೆಯಲ್ಲಿ ಹೇಳಬೇಕು. ಅನಾವಶ್ಯಕವಾದ ಸಂಸ್ಕøತ ಪದಗಳಿಂದ ಭಾಷೆಯನ್ನು ಹೊರೆಯಾಗಿಸಬಾರದು. ವಿಷಯ ನಿರೂಪಣೆ ಸರಳವೂ ಸ್ಪಷ್ಟವೂ ಅಸಂದಿಗ್ಧವೂ ಆಗಿರಬೇಕು. ಶಾಸ್ತ್ರಿಗಳ ಬರವಣಿಗೆಯಲ್ಲಿ ಈ ಗುಣಗಳನ್ನು ಸಂಪೂರ್ಣವಾಗಿ ಕಾಣುತ್ತೇವೆ. ತಮ್ಮ ಪಾಂಡಿತ್ಯದಿಂದ ಶಾಸ್ತ್ರಿಗಳು ಬರವಣಿಗೆಯನ್ನು ಎಲ್ಲಿಯೂ ಹೊರೆಯಾಗಿಸಿಲ್ಲ. ಶಾಸ್ತ್ರಿಗಳ ಗದ್ಯಶೈಲಿ ಸುಂದರ, ಸರಳ, ವಾಕ್ಯಗಳು ಸಾಮಾನ್ಯವಾಗಿ ಚಿಕ್ಕವಾಗಿರುತ್ತವೆ. ಆದರೆ ನಡೆ ಎಲ್ಲಿಯೂ ಕುಂಟುವುದಿಲ್ಲ. ಆಡುಮಾತಿನ ಬಳಕೆ ಯಥೇಚ್ಛ.. ಆದರೂ ಭಾಷೆ ಬಿಗಿಯಾದುದು. ಸ್ವಾನುಭವದಿಂದ ಉಕ್ಕಿಬಂದ ಸೂಕ್ತಿಗಳು ಹೇರಳವಾಗಿ ಸಿಗುತ್ತವೆ. ಅಲ್ಲಲ್ಲಿ ಬರುವ ಸಹಜವಾದ ಉಪಮಾನ ರೂಪಕಗಳಂತೂ ಮೋಹಕ.
ಸಂಪ್ರದಾಯದಲ್ಲಿ ಹುಟ್ಟಿ ಬೆಳೆದು, ಅದಕ್ಕೆ ವಿರೋಧಿಯಲ್ಲದಿದ್ದರೂ ಧರ್ಮ ನೀತಿ ನಡತೆ ಮುಂತಾದ ವಿಚಾರಗಳನ್ನು ಧಾರಾಳವಾಗಿ ಸ್ವತಂತ್ರವಾದ ವಾತಾವರಣದಲ್ಲಿ ನಡೆಸಬೇಕು ಎಂದು ನಂಬಿ ಅದರಂತೆ ಮನೋವೃತ್ತಿಯನ್ನು ಬೆಳೆಸಿಕೊಂಡು ಜೀವನ ನಡೆಸಿದ ಕೃಷ್ಣಶಾಸ್ತ್ರಿಗಳು 'ಕನ್ನಡ ನಾಡಿಗೆ ಕನ್ನಡವೇ ಗತಿ. ದೇಶದಲ್ಲಿ ಅದು ಮೊದಲ ಸ್ಥಾನವನ್ನು ಪಡೆದು ರಾಣಿಯಂತೆ ಮೆರೆಯಬೇಕು. ಇಂಗ್ಲಿಷ್ ಸಂಸ್ಕøತಗಳಿಂದ ಕನ್ನಡಕ್ಕೆ ಆಗತಕ್ಕ ಸಹಾಯ ಅಪಾರವಾಗಿದೆ. ಹಿಂದಿಯಿಂದ ಎಂದಿದ್ದರೂ ಕನ್ನಡಕ್ಕೆ ಅಪಾಯ. ಅವಕಾಶ ಕೊಟ್ಟರೆ ಕನ್ನಡ ಮಿಕ್ಕ ಭಾಷೆಗಳನ್ನು ಮೀರಿಸಿ ಬೆಳೆಯಬಲ್ಲದು-ಎಂದು ಸಾರಿ ಹೇಳಿ, ಇದೇ ಮಂತ್ರವನ್ನು ತಮ್ಮ ಬಾಳಿನ ಉದ್ದಕ್ಕೂ ಜಪಿಸುತ್ತ ತಮ್ಮ ಎಪ್ಪತ್ತೆಂಟನೆಯ ವಯಸ್ಸಿನಲ್ಲಿ 1968ರ ಫೆಬ್ರುವರಿ 1ರಂದು ಇಹಲೋಕದ ವ್ಯಾಪಾರವನ್ನು ಮುಗಿಸಿದರು.
(ಎಚ್.ಎಂ.ಎಸ್.ಎನ್.)