ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬಿಹಾರ

ವಿಕಿಸೋರ್ಸ್ದಿಂದ

ಬಿಹಾರ ಭಾರತದ ಒಂದು ರಾಜ್ಯ. ಭಾರತದ ಉತ್ತರದಲ್ಲಿರುವ ಈ ರಾಜ್ಯವನ್ನು ದಕ್ಷಿಣದಲ್ಲಿ ಒರಿಸ್ಸಾ, ಪೂರ್ವದಲ್ಲಿ ಪಶ್ಚಿಮ ಬಂಗಾಲ, ನೈಋತ್ಯದಲ್ಲಿ ಮಧ್ಯಪ್ರದೇಶ, ಪಶ್ಚಿಮದಲ್ಲಿ ಉತ್ತರ ಪ್ರದೇಶ ರಾಜ್ಯಗಳೂ ಉತ್ತರದಲ್ಲಿ ನೇಪಾಲ ದೇಶವೂ ಸುತ್ತುವರಿದಿವೆ. ಒಟ್ಟು 31 ಜಿಲ್ಲೆಗಳಿಂದ ಕೂಡಿದ ಈ ರಾಜ್ಯದ ವಿಸ್ತೀರ್ಣ 1,73,876 ಚಕಮೀ, ಜನಸಂಖ್ಯೆ 69,914,734 (1981). ರಾಜಧಾನಿ ಪಟ್ನಾ.

ಮೇಲ್ಮೈಲಕ್ಷಣ: ಬಿಹಾರ ರಾಜ್ಯದ ಉತ್ತರಭಾಗ ಗಂಗಾನದಿ ಬಯಲಿನಿಂದಲೂ ದಕ್ಷಿಣ ಭಾಗ ಛೋಟಾನಾಗಾಪುರ ಪ್ರಸ್ಥಭೂಮಿಯಿಂದಲೂ ಕೂಡಿದೆ. ಮೇಲಿನ ಗಂಗಾನದಿ ಬಯಲು ಮಧ್ಯ ಗಂಗಾನದಿ ಬಯಲಿನ ಒಂದು ಭಾಗ. ಅದನ್ನು ಗಂಗಾನದಿ ಉತ್ತರ ಮತ್ತು ದಕ್ಷಿಣ ಬಯಲು ಪ್ರದೇಶವೆಂದು ವಿಂಗಡಿಸಿದೆ. ರಾಜ್ಯದ ವಾಯವ್ಯ ಪ್ರದೇಶ ಹಿಮಾಲಯ ಪರ್ವತ ಪಾದ ಪ್ರದೇಶದ ಇಳಿಜಾರು ಭೂಮಿಯಿಂದ ಕೂಡಿದೆ. ಇದನ್ನು ಬಿಟ್ಟು ಉಳಿದ ಗಂಗಾನದಿಯ ಉತ್ತರ ಬಯಲು ಸಮುದ್ರ ಮಟ್ಟಕ್ಕೆ 75 ಮೀಟರ್ ಎತ್ತರದಲ್ಲಿದ್ದು ನೆರೆಗೆ ಒಳಗಾಗುವುದಲ್ಲದೆ ಆ ಪ್ರದೇಶವೆಲ್ಲ ಮೆಕ್ಕಲು ಮಣ್ಣಿನಿಂದ ಕೂಡಿದೆ. ಘಾಗ್ರ, ಗಂಡಕ್, ಭಾಗಮತಿ, ಕೋಸಿ, ಮಹಾನಂದ ಮತ್ತು ಇತರ ನದಿಗಳು ಹಿಮಾಲಯ ಮತ್ತು ನೇಪಾಲಗಳಿಂದ ಹರಿದುಬಂದು ಗಂಗಾನದಿಯನ್ನು ಕೂಡಿಕೊಳ್ಳುತ್ತವೆ. ಇವು ಕೆಲವೊಮ್ಮೆ ತಮ್ಮ ಪ್ರವಾಹದ ಮಾರ್ಗ ಬದಲಾಯಿಸುವುದೂ ಉಂಟು. ಇದರಿಂದ ಅಲ್ಲಲ್ಲೆ ಸಣ್ಣ ಹಳ್ಳಗಳೂ ಸರೋವರಗಳೂ ಉಂಟಾಗುತ್ತದೆ. ಈ ಪ್ರದೇಶ ನಯವಾದ ಮೆಕ್ಕಲು ಮಣ್ಣಿನಿಂದ ಕೂಡಿರುತ್ತದೆ. ಚಕ್ಷಿಣ ಗಂಗಾನದಿಯ ಬಯಲು ಹೆಚ್ಚು ವೈವಿಧ್ಯಮಯವಾದದ್ದು. ಇಲ್ಲಿ ಅನೇಕ ಬೆಟ್ಟಗುಡ್ಡಗಳಿವೆ. ಸೋನ್ ನದಿ ಬಿಟ್ಟರೆ ಉಳಿದೆಲ್ಲ ಚಿಕ್ಕ ಪುಟ್ಟ ನದಿಗಳು. ಈ ನದಿಗಳ ನೀರನ್ನು ವ್ಯವಸಾಯಕ್ಕೆ ಬಳಸಿಕೊಳ್ಳಲಾಗಿದೆ. ದಕ್ಷಿಣಭಾಗದಲ್ಲಿ ಕಪ್ಪು ಜೇಡಿ ಮಣ್ಣು ಅಥವಾ ಹಳದಿ ಬಣ್ಣದ ಜೇಡಿ ಮತ್ತು ಮರಳು ಮಿಶ್ರಿತ ಮಣ್ಣು ಹೆಚ್ಚಾಗಿ ಕಂಡುಬರುತ್ತದೆ. ದಕ್ಷಿಣ ಬಿಹಾರಿನ ಅರ್ಧಭಾಗ ಛೋಟಾನಾಗಪುರ ಪ್ರಸ್ಥಭೂಮಿಯಿಂದ ಮತ್ತು ಬೆಟ್ಟ ಕಣಿವೆಗಳಿಂದ ಹಾಗೂ ಸಣ್ಣ ಹರಳಿನಂಥ ಕಲ್ಲುಗಳಿಂದ ಕೂಡಿದೆ. ನೆರೆಮಣ್ಣು ತುಂಬಿರುವ ದಾಮೋದರ ನದಿ ತಗ್ಗು ಪ್ರದೇಶ ಹಜಾರಿಬಾಗ್ ಮತ್ತು ರಾಂಚಿ ಪ್ರಸ್ಥಭೂಮಿಯನ್ನು ಬೇರ್ಪಡಿಸಿದೆ. ಸುಮಾರು 91 ಮೀಟರ್ ಎತ್ತರದ, ಮೇಲ್ಭಾಗ ಸಮತಟ್ಟಾಗಿರುವ 300 ಸಣ್ಣ ಬೆಟ್ಟಗುಡ್ಡಗಳಿವೆ. ಹಜಾರಿಬಾಗ್‍ನಲ್ಲಿರುವ ಪಾಶ್ರ್ವನಾಥ ಶಿಖರ 1365 ಮೀಟರ್ ಎತ್ತರವಾಗಿದ್ದು ಬಿಹಾರದ ಅತ್ಯಂತ ಎತ್ತರ ಶಿಖರವಾಗಿದೆ. ಇದು ಸಂತಾಲ ಜನಾಂಗದವರಿಗೂ ಜೈನರಿಗೂ ಬಹು ಪೂಜನೀಯವಾದದ್ದು. ಬಿಹಾರದ ಅತ್ಯಂತ ವಾಯವ್ಯದಲ್ಲಿ ಸೋನ್ ನದಿ ಕಣಿವೆಯ ಆಚೆ ಕೈಮುರ್ ಪ್ರಸ್ಥಭೂಮಿ ಇದೆ. ದಾಮೋದರ ನದಿ ಕಣಿವೆ ಪ್ರದೇಶ ಮರಳು ಮಣ್ಣಿನ ಭೂಮಿ. ಇಲ್ಲಿಯ ಪ್ರಸ್ಥಭೂಮಿಯಲ್ಲಿ ಕೆಂಪು ಮಣ್ಣೂ ಗುಡ್ಡ ಪ್ರದೇಶಗಳಲ್ಲಿ ಜಂಬುಮಣ್ಣೂ ಇವೆ.

ಗಂಗಾ ಬಿಹಾರದ ಪ್ರಮುಖ ನದಿ. ರಾಜ್ಯದ ಉತ್ತರದಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ಬಿಹಾರವನ್ನು ಉತ್ತರ-ದಕ್ಷಿಣವೆಂದು ವಿಂಗಡಿಸಿ ಈ ನದಿ ಹರಿಯುತ್ತದೆ. ಗಂಡಕಿ, ಬೂರಿ ಗಂಡಕಿ, ಕೋಸಿ, ಕಮಲ, ಮಹಾನಂದ ಮತ್ತು ಭಾಗಮತಿ ನದಿಗಳು ಬಿಹಾರದ ಉತ್ತರದ ನದಿಗಳು. ಇವು ನೇಪಾಳದಲ್ಲಿ ಹುಟ್ಟಿ ದಕ್ಷಿಣಾಭಿಮುಖವಾಗಿ ಹರಿದು ಬಿಹಾರದಲ್ಲಿ ಗಂಗಾನದಿಯನ್ನು ಕೂಡಿಕೊಳ್ಳುತ್ತವೆ. ದಕ್ಷಿಣದ ನದಿಗಳಲ್ಲಿ ದಾಮೋದರ, ಅಜಯ್, ಬರಕಾರ್ ಇವು ಪೂರ್ವಾಭಿಮುಖವಾಗಿ ಹರಿದು ಪಶ್ಚಿಮ ಬಂಗಾಲ ಸೇರುತ್ತದೆ. ಮೋಹನ, ಸೋನ್, ಕೋಯಿಲ್, ಬಾಂದುವ, ಚಂದನ್, ಪೂನ್‍ಪೂನ್ ಈ ನದಿಗಳು ಉತ್ತರಾಭಿಮುಖವಾಗಿ ಹರಿದು ಗಂಗಾನದಿಯನ್ನು ಕೂಡಿಕೊಳ್ಳುತ್ತವೆ. ಕೋಸಿನದಿ ನೇಪಾಲದಲ್ಲಿ ಹುಟ್ಟಿ ಬಿಹಾರದ ಭಾಗಲ್ಪುರ ಜಿಲ್ಲೆಯಲ್ಲಿ ಪ್ರವೇಶಿಸಿ ಗೌರಿ ನದಿಯನ್ನು ಕೂಡಿಕೊಂಡು ಪೂರ್ಣಿಯ ಜಿಲ್ಲೆಯಲ್ಲಿ ಗಂಗಾನದಿಯನ್ನು ಸೇರುತ್ತದೆ. ಕೋಸಿ ಅತಿ ಚಂಚಲ ನದಿ. ರಭಸದಿಂದ ಹರಿಯುತ್ತ ಸದಾ ತನ್ನ ಪಾತ್ರ ಬದಲಾಯಿಸುತ್ತಿರುತ್ತದೆ. ಕಟೀಹಾರ್ ಬಳಿ ಈ ನದಿಗೆ ರೇಲ್ವೆ ಸೇತುವೆ ನಿರ್ಮಿಸಲಾಗಿದೆ. ಬಿಹಾರದ ದುಃಖನದಿ ಎಂದು ಹೆಸರಾದ ಕೋಸಿಯ ಪ್ರವಾಹ ನಿಯಂತ್ರಣ ಮತ್ತು ವಿವಿಧೋದ್ದೇಶ ಯೋಜನೆಯೊಂದು ಕಾರ್ಯಗತವಾಗಿ ಅನೇಕ ಅಭಿವೃದ್ಧಿ ಕಾರ್ಯ ನಡೆದಿದೆ. ಗಂಡಕಿ ನೇಪಾಲದ ಹಿಮಾಲಯ ಪರ್ವತ ಭಾಗದಲ್ಲಿ ಹುಟ್ಟು ಬಿಹಾರದ ಚಂಪಾರಣ್, ಸಾರನ್ ಮತ್ತು ಮುಜಫರ್‍ಪುರ ಜಿಲ್ಲೆಗಳಲ್ಲಿ ಹರಿದು ಪಟ್ನಾದ ಬಳಿ ಗಂಗಾನದಿಯನ್ನು ಸೇರಿಕೊಳ್ಳುತ್ತದೆ. ಕೋಸಿ, ಗಂಡಕಿ, ಸೋನ್, ಬಾಂದುವ, ಚಂದನ್, ಉತ್ತರ ಕೋಯಿಲ್ ಮತ್ತು ಭಾಗಮತಿ ನದಿಗಳನ್ನು ಅವಲಂಬಿಸಿ ಮುಖ್ಯ ನೀರಾವರಿ ಯೋಜನೆ ರೂಪಿಸಲಾಗಿದೆ. ಬಾಂದುವ ಮತ್ತು ಚಂದನ್ ಯೋಜನೆಯ ಕಾರ್ಯ ಮುಗಿದಿದೆ. ಅನೇಕ ಪ್ರವಾಹ ನಿಯಂತ್ರಣ ಕಾರ್ಯಗಳನ್ನು ಯೋಜನೆಯಲ್ಲಿ ಕೈಗೊಳ್ಳಲಾಗಿದೆ. ವಿವಿಧೋದ್ದೇಶ ಯೋಜನೆಯ ದಾಮೋದರ ನದಿ ಕಣಿವೆ ಯೋಜನೆ ಬಿಹಾರದ ಒಂದು ಮಹತ್ತ್ವಪೂರ್ಣ ಯೋಜನೆ. ಇದು ಬಿಹಾರ ಮತ್ತು ಪಶ್ಚಿಮ ಬಂಗಾಲ ಎರಡೂ ರಾಜ್ಯಗಳ ನೀರಾವರಿ, ವಿದ್ಯುತ್ ಮತ್ತು ಪ್ರವಾಹ ನಿಯಂತ್ರಣ ಯೋಜನೆಯನ್ನು ಒಳಗೊಂಡಿದ್ದು, ಪತ್ರಾತು, ಬರೌನಿ, ಥರ್ಮಲ್ ವಿದ್ಯುತ್ ಯೋಜನೆ, ಸುಬರ್ನರೇಖಾ, ಕೋಸಿನದಿ ಜಲ ವಿದ್ಯುತ್ ಯೋಜನೆ, ಬಿಹಾರ್ ರಾಜ್ಯ ವಿದ್ಯುತ್ ಮಂಡಳಿಗೆ ಸೇರಿದೆ. ಬೊಕಾರೋ ಚಂದ್ರಪುರ ಶಾಖ ವಿದ್ಯುತ್ ಕೇಂದ್ರಗಳು ಮತ್ತು ತಿಲೈಯ ಮೈತಾನ್ ಮತ್ತು ನಾಂಬೆಟ್ ಜಲ ವಿದ್ಯುತ್ ಕೇಂದ್ರಗಳು ದಾಮೋದರ ಕಣಿವೆ ಸಂಸ್ಥೆಗೆ ಸೇರಿದ್ದು. ಒಟ್ಟು ವಿದ್ಯುತ್ ಉತ್ಪಾದನೆ 1,661 ಮಿಲಿಯನ್ ವಾಟ್ಸ್ (1976). 18,820 ಗ್ರಾಮಗಳಿಗೆ ವಿದ್ಯುತ್ ಒದಗಿಸಲಾಗಿತ್ತು (1978).

ಹವಾಗುಣ: ಬಿಹಾರ ರಾಜ್ಯದ ಹವಾಗುಣವನ್ನು ಮೂರು ಭಾಗಗಳಾಗಿ ವಿಂಗಡಿಸಬಹುದು. ಮಾರ್ಚ್‍ನಿಂದ ಜೂನ್ ಮಧ್ಯದ ತನಕ ಬೇಸಗೆಕಾಲ. ಮಧ್ಯ ಜೂನ್‍ನಿಂದ ಅಕ್ಟೋಬರ್ ತನಕ ಮಳೆಗಾಲ. ನವೆಂಬರ್‍ನಿಂದ ಫೆಬ್ರವರಿ ತನಕ ಚಳಿಗಾಲ. ಮೇ ಅತ್ಯಂತ ಹೆಚ್ಚು ಉಷ್ಣತೆಯ ಕಾಲ. ಆಗ ರಾಜ್ಯದ ಅತ್ಯಂದ ಉತ್ತರಭಾಗ, ರಾಂಚಿ ಹಾಗೂ ಹಜಾರಿಬಾಗ್ ಪ್ರಸ್ಥಭೂಮಿಯನ್ನು ಬಿಟ್ಟು ಉಳಿದ ಕಡೆಗಳಲ್ಲಿ 320 ಸೆ. ಮೀರಿ ಉಷ್ಣತೆ ಇರುತ್ತದೆ. ಜೂನ್ ನಿಂದ ಅಕ್ಟೋಬರ್ ಮಧ್ಯದ ತನಕ ಹೆಚ್ಚು ಮಳೆಯಾಗುತ್ತದೆ. ಉತ್ತರ ಮತ್ತು ದಕ್ಷಿಣದಲ್ಲಿ ವಾರ್ಷಿಕ ಸರಾಸರಿ ಮಳೆ ಸುಮಾರು 152.3 ಸೆಂಟಿಮೀಟರುಗಳಾದರೆ ಪ್ರಸ್ಥಭೂಮಿ ಪ್ರದೇಶಗಳ ಮೇಳೆ ಸುಮಾರು 126.9 ಸೆಂಮೀ ಮಳೆಯಾಗುತ್ತದೆ. ಉಳಿದ ಕಡೆ ಸಾಮಾನ್ಯವಾಗಿ 101.5 ಸೆಂಮೀ ಮಳೆ ಬೀಳುತ್ತದೆ. ರಾಜ್ಯದ ಒಟ್ಟು ವಿಸ್ತೀರ್ಣದಲ್ಲಿ ಶೇಕಡ್ 17 ಭಾಗ ಅರಣ್ಯಗಳಿಂದ ಕೂಡಿದೆ. ಒಟ್ಟು 33,668 ಚಕಿಮೀ ಇರುವ ಕಾಡು ಪ್ರದೇಶ ಹೆಚ್ಚಾಗಿ ಹಿಮಾಲಯ ತಪ್ಪಲು ಪ್ರದೇಶ ಮತ್ತು ಛೋಟಾನಾಗಪುರ ಪ್ರಸ್ಥಭೂಮಿ ಪ್ರದೇಶಗಳಲ್ಲಿದೆ. ಈ ಕಾಡುಗಳಲ್ಲಿ ಸಾಲವೃಕ್ಷ, ಬೊಂಬು, ಹುಲ್ಲು ಮತ್ತು ಜೊಂಡು ಹೆಚ್ದಾಗಿ ಬೆಳೆಯುತ್ತದೆ. ಇವಲ್ಲದೆ ಅರಗಿನ ಮರ, ತಾಳೆಜಾತಿಯ ಮರ ಹಾಗೂ ಆಲ, ಅರಳಿ ಮುಂತಾದ ಮರಗಳು ಕೂಡ ಬೆಳೆಯುತ್ತದೆ. ದಟ್ಟಕಾಡುಗಳಲ್ಲಿ ಹುಲಿ, ಚಿರತೆ, ಕರಡಿ, ಆನೆ ಮುಂತಾದ ಪ್ರಾಣಿಗಳ ಜೊತೆಗೆ ಇತರ ಕಾಡು ಪ್ರಾಣಿಗಳನ್ನೂ ಕಾಣಬಹುದು. ಬೆಲೆ ಬಾಳುವ ಮರ, ಅರಗು, ಬೊಂಬು, ಅಂಟು ಮುಂತಾದ ಅರಣ್ಯೋತ್ಪಾದನೆಗಳಿಂದ ರಾಜ್ಯಕ್ಕೆ ಆದಾಯವುಂಟು. ಛೋಟಾನಾಗಪುರ ಅರಣ್ಯದಿಂದ ಕಾಗದ ತಯಾರಿಕೆಗೆ ಬೇಕಾದ ಬೊಂಬು, ಸಬಾಯ್ ಅಥವಾ ಬಾಬರ್ ಹುಲ್ಲು ಒದಗಿಬರುತ್ತದೆ.

ಕೃಷಿ: ಬಿಹಾರ ರಾಜ್ಯ ಕೃಷಿ ಅವಲಂಬಿತವಾಗಿದ್ದು. ಈ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 82 ಭಾಗ ಕೃಷಿ ಆಧಾರಿತರು. ರಾಜ್ಯದ 10,383,000 ಹೆಕ್ಟೇರ್ ಜಮೀನಿನಲ್ಲಿ ಬೇಸಾಯ ನಡೆಯುತ್ತಿದ್ದು ಅದರಲ್ಲಿ 2,688,000 ಹೆಕ್ಟೇರ್ ಜಮೀನಿಗೆ ಮಾತ್ರ ನೀರಾವರಿ ಸೌಕರ್ಯ ದೊರೆತಿದೆ. ಈ ರಾಜ್ಯದ ಮುಖ್ಯ ಬೆಳೆ ಬತ್ತ. ಒಟ್ಟು 5,228,000 ಹೆಕ್ಟೇರ್‍ಗಳಲ್ಲಿ ಬತ್ತ, ಒಟ್ಟು 5,228,000 ಹೆಕ್ಟೇರುಗಳಲ್ಲಿ ಬತ್ತ 1,478,000 ಹೆಕ್ಟೇರುಗಳಲ್ಲಿ ಗೋದಿ, 10,000 ಹೆಕ್ಟೇರುಗಳಲ್ಲಿ ಜೋಳ, 8,80,000 ಹೆಕ್ಟೇರುಗಳಲ್ಲಿ ಗೋವಿನ ಜೋಳ 16,000 ಹೆಕ್ಟೇರುಗಳಲ್ಲಿ ಸಜ್ಜೆ, 1,60,000 ಹೆಕ್ಟೇರುಗಳಲ್ಲಿ ರಾಗಿ, 1,92,000 ಹೆಕ್ಟೇರುಗಳಲ್ಲಿ ದ್ವಿದಳ ಧಾನ್ಯಗಳು, 1,92,000 ಹೆಕ್ಟೇರುಗಳಲ್ಲಿ ಬಾರ್ಲಿ, 15,41,000 ಹೆಕ್ಟೇರುಗಳಲ್ಲಿ ಅವರೆ ಜಾತಿಯ ಕಾಳುಗಳು ಇಷ್ಟನ್ನೂ ಬೆಳೆಸುತ್ತಾರೆ. ಇವಲ್ಲದೆ ಕಬ್ಬು, ಹತ್ತಿ, ಆಲೂಗೆಡ್ಡೆ, ಸೆಣಬು, ನೆಲಗಡಲೆ ಹೊಗೆಸೊಪ್ಪು, ಔಡಲ ಮುಂತಾದವುನ್ನೂ ಬೆಳೆಸುವರು. 1977-78ರಲ್ಲಿ 98 ಲಕ್ಷ ಟನ್ನುಗಳ ಆಹಾರ ಧಾನ್ಯವನ್ನು ಬೆಳೆಸಲಾಗಿತ್ತು.

ಕೈಗಾರಿಕೆ: ಬಿಹಾರದಲ್ಲಿ ವಿಪುಲವಾಗಿ ದೊರೆಯುವ ವಿವಿಧ ಖನಿಜಗಳಿಂದ ಅಲ್ಲಿ ಅನೇಕ ದೊಡ್ಡ ಪ್ರಮಾಣ ಕೈಗಾರಿಕೆಗಳು ಬೆಳೆದಿವೆ. ಭಾರತದಲ್ಲಿ ದೊರೆಯುವ ಕಬ್ಬಿಣ ಅದುರಿನ ಶೇಕಡಾ 60ರಷ್ಪು ಭಾಗ ಬಿಹಾರ, ಒರಿಸ್ಸಾ ರಾಜ್ಯಗಳ ನಡುವಿರುವ ಪರ್ವತಮಯ ಪ್ರದೇಶದಲ್ಲಿ ದೊರೆಯುತ್ತದೆ. ಭಾರತದ ಒಟ್ಟು ಖನಿಜಸಂಪತ್ತಿನಲ್ಲಿ ಬಿಹಾರ ರಾಜ್ಯ ಒಂದರಲ್ಲಿ ಶೇಕಡಾ 40 ಭಾಗ ದೊರೆಯುತ್ತದೆ. ಮುಖ್ಯವಾಗಿ ತಾಮ್ರ, ಅಭ್ರಕ, ಚೀನಿಮಣ್ಣು, ಕಲ್ಲಿದ್ದಲು, ಕಬ್ಬಿಣ, ಮ್ಯಾಂಗನೀಸ್, ಸುಣ್ಣಕಲ್ಲು, ಗ್ರಾಫೈಟ್ ಕ್ರೋಮೈಟ್, ಕಲ್ನಾರು, ಡಾಲೊಮೈಟ್, ಸ್ಪಟಿಕ ಶಿಲೆ, ಗಾಜುಮರಳು, ಅಪಟೈಟ್, ಕಯನೈಟ್ ಮತ್ತು ವಿಕಿರಣ ಪಟು ಖನಿಜಗಳು ಇಲ್ಲಿ ದೊರೆಯುತ್ತವೆ. ದೊಡ್ಡ ಕಲ್ಲಿದ್ದಲ ಗಣಿಗಳಿದ್ದು ಸುಮಾರು 25 ಕೋಟಿ ಟನ್‍ಗಳಷ್ಟು ಕಲ್ಲಿದ್ದಲು ಪ್ರತಿ ವರ್ಷವೂ ಉತ್ಫಾದನೆ ಆಗುತ್ತದೆ. ಭಾರತದ ಕಲ್ಲಿದ್ದಲಿನ 2/3 ರಷ್ಟು ಭಾಗ ಈ ಒಂದು ರಾಜ್ಯದಲ್ಲಿಯೇ ಉತ್ಪಾದನೆಯಾಗುತ್ತದೆ. ಈ ರಾಜ್ಯದಲ್ಲಿ 3 ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಳು, 7 ಸಿಮೆಂಟ್ ಕಾರ್ಖಾನೆಗಳು, 5 ಗಾಜಿನ ಕಾರ್ಖಾನೆಗಳು, 2 ರಾಸಾಯನಿಕ ಗೊಬ್ಬರ ಕಾರ್ಖಾನೆಗಳು, 3 ಸೆಣಬಿನ ಗಿರಣಿಗಳು, 11 ಕಲ್ಲಿದ್ದಲು ಸಂಸ್ಕರಣ ಕಾರ್ಖಾನೆಗಳು, 29 ಸಕ್ಕರೆ ಕಾರ್ಖಾನೆಗಳು, 4 ರೇಷ್ಮೆ ಕಾರ್ಖಾನೆಗಳು, 130 ಶೀತಸಂಗ್ರಹಾಲಯಗಳು ಮತ್ತು 2 ಕಾಗದ ಕಾರ್ಖಾನೆಗಳು ಇವೆ. ತೈಲಶುದ್ಧೀಕರಣ, ತಾಮ್ರ ಸಂಸ್ಕರಣ, ಸೀಸ ಶುದ್ಧೀಕರಣ, ರೈಲು ಎಂಜಿನ್‍ಗಳ ನಿರ್ಮಾಣ, ತಂಬಾಕು, ಸ್ಪೋಟಕ ವಸ್ತುಗಳ ತಯಾರಿಕೆಯುಂಟು.

ಧನಬಾದ್ ಹಜಾರಿಬಾಗ್ ಜಿಲ್ಲೆಯೊಳಗಿನ ರಾಮಗಡ, ಬೊಕಾರೊ, ಕರಣಪುರ ಇತ್ಯಾದಿ ಸ್ಥಳಗಳಲ್ಲಿಯೂ ಕಲ್ಲಿದ್ದಲ ಗಣಿಗಳಿವೆ. ಹಜಾರಿಬಾಗ್, ಗಯಾ ಮತ್ತು ಮೋಂಘಿರ್ ಜಿಲ್ಲೆಗಳಲ್ಲಿರುವ ಅಭ್ರಕ ಧಾತುವಿನ ಸಂಚಯವಂತೂ ಪ್ರಪಂಚದಲ್ಲಿಯೇ ಅದ್ವಿತೀಯವೆನಿಸಿದೆ. ಬಿಹಾರದ ದಕ್ಕಿಣ ಭಾಗದಲ್ಲೂ ಸಿಂಘ್ ಭೂಮ್ ಜಿಲ್ಲೆಯಲ್ಲೂ ಇರುವ ಕಬ್ಬಿಣ ಅದುರಿನ ಸಂಚಯದಿಂದಾಗಿ ಬಿಹಾರ ರಾಜ್ಯಕ್ಕೆ ಅಧಿಕ ಮಹತ್ತ್ವ ಪ್ರಾಪ್ತವಾಗಿದೆ. ಸಿಂಘ್‍ಭೂಮ್ ಜಿಲ್ಲೆ ಅನೇಕ ಖನಿಜ ಪದಾರ್ಥಗಳ ತವರು ಮನೆಯೆನಿಸಿದೆ. ರಾಂಚಿಯಲ್ಲಿರುವ ದೊಡ್ಡ ಪ್ರಮಾಣದ ಎಂಜಿನಿಯರಿಂಗ್ ಕಾರ್ಖಾನೆ, ಡಾಲ್ಮಿಯಾ ನಗರದ ಕಾಗದ ಕಾರ್ಖಾನೆ ಸಿಂದ್ರಿಯಲ್ಲಿರುವ ರಾಸಾಯನಿಕ ಗೊಬ್ಬರ ಕಾರ್ಖಾನೆ, ಗೋಮಿಯಾದಲ್ಲಿರುವ ಸ್ಪೋಟಕ ವಸ್ತುಗಳ ಕಾರ್ಖಾನೆ ಮತ್ತು ಬೇರೆ ಬೇರೆ ಸ್ಥಳಗಳಲ್ಲಿರುವ ಸಿಮೆಂಟ್ ಕಾರ್ಖಾನೆಗಳು, ಜೆಮ್‍ಷೆಡ್‍ಪುರದಲ್ಲಿರುವ ತಾತ ಕಬ್ಬಿಣ ಮತ್ತು ಉಕ್ಕು ಹಾಗೂ ರೇಲ್ವೆ ಎಂಜಿನ್ ತಯಾರಿಕೆಯ ಕಾರ್ಖಾನೆಗಳು ಬರೌನಿ ತೈಲಶುದ್ಧೀಕರಣ ಕಾರ್ಖಾನೆ, ಮುರಿಯ ಅಲ್ಯೂಮಿನಿಯವ್ ಕಾರ್ಖಾನೆ, ದಾಲ್ಮಿಯಾ ನಗರದಲ್ಲಿರುವ ಕಾಗದದ ಕಾರ್ಖಾನೆ, ಘಾಟ್‍ಸಿಲದ ಹಿಂದೂಸ್ಥಾನ್ ತಾಮ್ರ ಸಂಸ್ಥೆ ಮುಂತಾದ ಮಹತ್ತ್ವದ ಉದ್ಯಮಗಳಿದ್ದು ಈ ರಾಜ್ಯದ ಜನರಿಗೆ ವಿಪುಲವಾದ ಉದ್ಯೋಗಾವಕಾಶ ಒದಗಿಸುವುದರ ಜೊತೆಗೆ ರಾಜ್ಯದ ಆರ್ಥಿಕ ಪ್ರಗತಿಗೂ ಸಹಾಯಕವಾಗಿದೆ. ಬಿಹಾರ ರಾಜ್ಯದ ಕೈಗಾರಿಕಾಭಿವೃದ್ಧಿ ಕಾರ್ಪೊರೇಷನ್ ಪರವಾಗಿ ಸ್ಥಾಪಿಸಿದ ಸ್ಕೂಟರ್ ಕಾರ್ಖಾನೆಯಿಂದ ಪ್ರತಿವರ್ಷ ಸರಾಸರಿ 30,000 ಸ್ಕೂಟರುಗಳು ಉತ್ಪಾದನೆ ಆಗುತ್ತವೆ. ಬಿಳಿ ಸಕ್ಕರೆ ಉತ್ಪಾದನೆಯಲ್ಲಿ ಉತ್ತರ ಪ್ರದೇಶದ ತರುವಾಯ ಬಿಹಾರದ್ದೇ ಪ್ರಮುಖ ಸ್ಥಾನ. ಭಾರತದ ಒಟ್ಟು ಬಿಳಿಸಕ್ಕರೆಯಲ್ಲಿ 1/4 ಭಾಗ ಬಿಹಾರ ರಾಜ್ಯವೊಂದರಲ್ಲೇ ಉತ್ಪಾದನೆ ಆಗುತ್ತದೆ. ಸಾರಿಗೆ ಸಂಪರ್ಕ: ಬಿಹಾರದಲ್ಲಿ ಮೊದಲು ಜಲ ಮಾರ್ಗಾವಲಂಬಿತ ಸಾರಿಗೆ ಸಂಪರ್ಕ ಪ್ರಧಾನವಾಗಿತ್ತು. ಅದಕ್ಕೆ ಅಲ್ಲಿರುವ ಅನೇಕ ನದಿಗಳೇ ಕಾರಣವಾಗಿ ಅಲ್ಲಿಯ ವ್ಯಾಪಾರ. ವಸ್ತು ಸಾಗಣೆಗಳೆಲ್ಲ ಈ ನದೀ ಮಾರ್ಗಗಳ ಮೂಲಕವೇ ನಡೆಯುತ್ತಿತ್ತು. ಮುಂದೆ ಒಳ್ಳೆಯ ರಸ್ತೆಗಳ ನಿರ್ಮಾಣವಾದಂತೆ, ರೈಲುಗಳ ಬಳಕೆ ಹೆಚ್ಚಾದಂತೆ ಈ ನದೀ ಮಾರ್ಗ ಪ್ರಾಮುಖ್ಯ ಕಳೆದುಕೊಂಡಿತು. ಉತ್ತರ ಬಿಹಾರ ಪ್ರದೇಶದಲ್ಲಿ ನ್ಯಾರೊ ಗೇಜ್ ರೈಲುಮಾರ್ಗವಿದೆ. ಹೆಚ್ಚು ಸೇತುವೆಗಳ ನಿರ್ಮಾಣದ ಶ್ರಮಕ್ಕೆ ಬದಲು ಈ ರೈಲು ಮಾರ್ಗಗಳು ನದಿಗಳ ಪಕ್ಕದಲ್ಲೇ ಹರಿದು ಹೋಗಿವೆ. ದಕ್ಷಿಣ ಬಿಹಾರ ಪ್ರದೇಶದಲ್ಲಿ ಉತ್ತಮ ರೈಲು ಸಂಪರ್ಕವಿದೆ. ಇದರಲ್ಲಿ ಮೂರು ಮಾರ್ಗಗಳು ಕಲ್ಕತ್ತದಲ್ಲಿ ಪ್ರಾರಂಭವಾಗಿ ಸಾಹಿಬ್ ಗಂಜ್, ಮಾಧುಷಾರ್ ಮತ್ತು ಗೋಮಾಹ್ ಮೂಲಕ ಹಾದುಹೋಗುತ್ತದೆ. ಸೋನ್ ನದಿಗೆ ದೆಹ್ರಿ, ಕೊಯಲ್‍ವರ್ ಎಂಬಲ್ಲೂ ಗಂಗಾನದಿಗೆ ಮೊಕಮೆಹ್ ಎಂಬಲ್ಲೂ ರಸ್ತೆ ಮತ್ತು ರೈಲು ಮಾರ್ಗಗಳ ಸೇತುವೆಗಳನ್ನು ನಿರ್ಮಿಸಲಾಗಿದೆ. ಗಂಗಾನದಿಗೆ ಕಟ್ಟಿರುವ ಸೇತುವೆಯಿಂದ ಉತ್ತರ ದಕ್ಷಿಣ ಬಿಹಾರ ಸಂಪರ್ಕಕ್ಕೆ ಅನುಕೂಲವಾಗಿದೆ. ದಾಮೋದರ ಕಣಿವೆಯ ಕಲ್ಲಿದ್ದಲು ಗಣಿಪ್ರದೇಶದಲ್ಲಿ ಹೆಚ್ಚು ರೈಲು ರಸ್ತೆಗಳ ನಿರ್ಮಾಣವಾಗಿ ಇದರಲ್ಲಿ ಒಂದು ಮಾರ್ಗ ಜೆಮ್‍ಷೆಡ್‍ಪುರ ಮುಖಾಂತರ ಕಲ್ಕತ್ತವನ್ನು ಸೇರುತ್ತದೆ. ಬಿಹಾರದಲ್ಲಿ ಒಟ್ಟು 1913 ಕಿಮೀ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ. ರಾಜ್ಯದ ಒಳಗೆ ಇರುವ ಸುಮಾರು 43,470 ಕಿಮೀ ರಸ್ತೆಯಲ್ಲಿ ಸುಮಾರು 11,270 ಕಿಮೀ ಪಕ್ಕಾ ರಸ್ತೆಯಾಗಿದ್ದು ಉಳಿದದ್ದು ಕಚ್ಚಾ ರಸ್ತೆಯಾಗಿ ಉಳಿದಿದೆ. ಉತ್ತರ ಬಿಹಾರದಲ್ಲಿ ಹೆಚ್ಚು ಕಚ್ಚಾ ರಸ್ತೆಗಳಿದ್ದು ದಕ್ಷಿಣ ಬಿಹಾರದಲ್ಲಿ ಹೆಚ್ಚು ಪಕ್ಕಾ ರಸ್ತೆಗಳಿವೆ. ಪಟ್ನಾ ಗಯಾ ಸುತ್ತಮುತ್ತಲಿನಲ್ಲಿ ಒಳ್ಳೆಯ ರಸ್ತೆಯ ಸಂಪರ್ಕವಿದೆ. ಛೋಟಾನಾಗಪುರ ಪ್ರಸ್ಥಭೂಮಿಯಲ್ಲಿ ಎರಡನೆಯ ಮಹಾಯುದ್ಧದ ಕಾಲದಲ್ಲಿ ನಿರ್ಮಿಸಿದ ಮುಖ್ಯ ರಸ್ತೆಗಳಿವೆ. ಈ ಪ್ರಸ್ಥಭೂಮಿಯ ಮೂಲಕ ಹಾದು ಹೋಗಿರುವ ಎರಡು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಒಂದು ಧನಬಾದ್ ಮತ್ತು ದೆಹ್ರಿ ಮುಖಾಂತರವೂ ಇನ್ನೊಂದು ಪಟ್ನಾ, ರಾಂಚಿ ಮತ್ತು ಜೆಮ್‍ಷೆಡ್‍ಪುರ ಮುಖಾಂತರವೂ ಹಾದುಹೋಗುತ್ತದೆ. ರಾಂಚಿ, ಪಟ್ನಾ ನಗರಗಳಿಗೆ ವಿಮಾನ ಸಂಪರ್ಕವಿದೆ.

ಶಿಕ್ಷಣ: ಮೊದಲಿನಿಂದಲೂ ಉದ್ಧಂತಪುರ, ನಾಲಂದಾ ಮತ್ತು ವಿಕ್ರಮಶಿಲಾ ವಿಶ್ವವಿದ್ಯಾಲಯಗಳಿಂದಾಗಿ ಪ್ರಸಿದ್ಧವಾದ ಈ ರಾಜ್ಯ ಬರುಬರುತ್ತ ಶೈಕ್ಷಣಿಕ ರಂಗದಲ್ಲಿ ಹಿಂದುಳಿಯಿತು. ಕೆಲಕಾಲ ಈ ರಾಜ್ಯದ ವಿದ್ಯಾರ್ಥಿಗಳಿಗೆಲ್ಲಾ ಕಲ್ಕತ್ತಾ ವಿಶ್ವವಿದ್ಯಾಲಯ ಆಶ್ರಯವಾಗಿತ್ತು. 1917ರಲ್ಲಿ ಪಟ್ನಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು. ಸ್ವಾತಂತ್ರ್ಯಾನಂತರ ಭರದಿಂದ ಬೆಳೆದ ಶಾಲಾ-ಕಾಲೇಜು ವಿದ್ಯಾರ್ಥಿಗಳ ಹೆಚ್ಚಳದಿಂದಾಗಿ 1952ರಲ್ಲಿ ಬಿಹಾರ ವಿಶ್ವವಿದ್ಯಾಲಯ, 1960ರಲ್ಲಿ ಭಾಗಲಪುರ ವಿಶ್ವವಿದ್ಯಾಲಯ, ಅದೇ ವರ್ಷ ರಾಂಚಿ ವಿಶ್ವವಿದ್ಯಾಲಯ, 1961ರಲ್ಲಿ ಗಯಾದಲ್ಲಿ ಮಗಧ ವಿಶ್ವವಿದ್ಯಾಲಯವನ್ನೂ ದರಬಂಗಾಲದಲ್ಲಿ ಸಂಸ್ಕøತ ವಿಶ್ವವಿದ್ಯಾಲಯವನ್ನೂ ಸ್ಥಾಪಿಸಲಾಯಿತು. ನಲಂದಾ ಅನುಸಂಧಾನ ಸಂಸ್ಥೆ ಜೈನ ದರ್ಶನದ ಅಧ್ಯಯನಕ್ಕಾಗಿ ಮತ್ತು ಬಿಹಾರ ರಾಷ್ಟ್ರ ಭಾಷಾ ಪರಿಷತ್ತು ಹಿಂದಿ ಭಾಷೆ ಮತ್ತು ಸಾಹಿತ್ಯಗಳ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿವೆ. ಭಾಗಲಪುರದಲ್ಲಿರುವ ಭಾರತೀಯ ಸಾಂಸ್ಕøತಿಕ ಅಧ್ಯಯನ ಸಂಸ್ಥೆಯಲ್ಲಿ ಭಾರತೀಯ ಸಂಸ್ಕøತಿಯ ಸಂಶೋಧನ ಮತ್ತು ಅಧ್ಯಯನಕ್ಕೆ ಅನುಕೂಲತೆಗಳನ್ನು ಕಲ್ಪಿಸಲಾಗಿದೆ. ಶಿಕ್ಷಣದ ವಿವಿಧ ಹಂತಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಶಾಲಾ ಕಾಲೇಜುಗಳಿವೆ.

ಸಾಮ್ರಾಟ ಅಶೋಕನ ಕಾಲದಿಂದಲೂ ಭಾರತದ ಇತಿಹಾಸದಲ್ಲಿ ಬಿಹಾರ ರಾಜ್ಯ ಪ್ರಸಿದ್ಧ. ಇದರ ರಾಜಧಾನಿ ಪಟ್ನಾ, ಅಶೋಕನ ಕಾಲದ ಪಾಟಲೀಪುತ್ರ. ಬ್ರಿಟಿಷರ ಕಾಲದಲ್ಲಿ ಇದು ಬಂಗಾಳದ ಒಂದು ಭಾಗವಾಗಿತ್ತು. 1912ರಲ್ಲಿ ಬಿಹಾರ ಮತ್ತು ಒರಿಸ್ಸಾಗಳನ್ನು ಬಂಗಾಳದಿಂದ ಪ್ರತ್ಯೇಕಿಸಲಾಯಿತಲ್ಲದೆ, 1936ರಲ್ಲಿ ಬಿಹಾರ ಒರಿಸ್ಸಾಗಳೆರಡೂ ಪ್ರತ್ಯೇಕ ಪ್ರಾಂತ್ಯಗಳೆಂದು ಸಾರಲಾಯಿತು ಕೂಡ. ಮಧ್ಯ ಪ್ರದೇಶದ ಅನಂತರ ಅತ್ಯಧಿಕ ಕಾಡುನಿವಾಸಿಗಳಿರುವ ರಾಜ್ಯ ಬಿಹಾರ, ಭಾರತದ ಒಟ್ಟು ಕಾಡು ನಿವಾಸಿಗಳ ಪೈಕಿ ಶೇಕಡಾ 10 ಈ ರಾಜ್ಯದಲ್ಲಿದ್ದಾರೆ. ರಾಜ್ಯದ ಪುರುಷ ಸ್ತ್ರೀ ಪ್ರಮಾಣ 1000ಕ್ಕೆ 954ರಷ್ಟಿದೆ. ಪುರುಷರಲ್ಲಿ 30.69 ಮತ್ತು ಸ್ತ್ರೀಯರಲ್ಲಿ ಕೇವಲ 8.7ರಷ್ಟು ಸಾಕ್ಷರರು. ರಾಜ್ಯದ ಮುಖ್ಯ ಭಾಷೆ ಹಿಂದಿ, ಗುಡ್ಡಗಾಡು ಪ್ರದೇಶದಲ್ಲಿ ಬಿಹಾರಿ ಭಾಷೆಯ ಬಳಕೆಯಿದೆ. ಜೊತೆಗೆ ಉರ್ದು ಬಂಗಾಲಿ ಭಾಷೆಗಳೂ ಬಳಕೆಯಲ್ಲಿವೆ.

ಈಗಿನ ಬಿಹಾರ ರಾಜ್ಯವನ್ನು ಆಡಳಿತಾನುಕೂಲಕ್ಕಾಗಿ 31 ಜಿಲ್ಲೆಗಳಿರುವ 7 ಆಡಳಿತ ವಿಭಾಗಗಳಾಗಿ ಮತ್ತು 70 ಉಪವಿಭಾಗಗಳಾಗಿ ವಿಂಗಡಿಸಲಾಗಿದೆ. 587 ಸಾಮೂಹಿಕ ವಿಕಾಸ ಕೇಂದ್ರಗಳೂ 77,967 ಗ್ರಾಮಗಳೂ ಇವೆ. ಈ ರಾಜ್ಯದ ಜಿಲ್ಲಾವಾರು ವಿವರಗಳು ಕೆಳಗಿನಂತಿವೆ ಜಿಲ್ಲೆಯ ಹೆಸರು ಮುಖ್ಯ ಪಟ್ಟಣ ಕ್ಷೇತ್ರ ಫಲ ಚ. ಕಿಮೀ ಜನಸಂಖ್ಯೆ (1981)

ಔರಂಗಬಾದ್ ಔರಂಗಬಾದ್ 3,319.0 1237,072

ಬೇಗುಸರಾಯ್ ಬೇಗುಸರಾಯ್ 1,899.4 1456,343

ಭಾಗಲಪುರ ಭಾಗಲಪುರ 5,656.0 2621,427

ಭೋಜಪುರ ಆರಾ 4023.8 2407,600

ದರಬಾಂಗಾ ದರಬಾಂಗಾ 2296,0 2008,193

ಧನಬಾದ್ ಧನಬಾದ್ 2,994.0 2115.010

ಪೂರ್ವಚಂಪಾರಣ್ ಮೋತಿಹರಿ 4,333.8 2425.501

ಪಶ್ಚಿಮ ಚಂಪಾರಣ್ ಬಿಟ್ಟಿಯಾ 4,862.2 1972.610

ಗಯಾ ಗಯಾ 6,525.0 3134,175

ಗಿರಿಧಿ ಗಿರಿದಿ 6,907.5 1731,462

ಗೋಪಾಲಗಂಜ್ ಗೋಪಾಲಗಂಜ್ 2,019.0 1362.123

ಹಜಾರಿಬಾಗ್ ಹಜಾರಿಬಾಗ್ 11,152.5 2198,310

ಕಟಿಹಾರ್ ಕಟಿಹಾರ್ 3,101.0 1428,622

ಮಧುಬನಿ ಮಧುಬನಿ 3,524.6 2325,844

ಮೋಂಘಿರ್ ಮೋಂಘಿರ್ 7,927.6 3315.427

ಮುಝಫರಪುರ ಮುಝಫರಪುರ 3,160.0 2357,388

ನಾಲಂದಾ ಬಿಹಾರಶರೀಫ್ 2,346.1 1641,325

ನಾವಧ ನಾವಧ 2,500.0 1099,177

ಪಲಮಾವ್ ಡಾಲ್ಟನ್ ಗಂಜ್ 12677.0 1917.528

ಪಟ್ನಾ ಪಟ್ನಾ 3181.9 3019,201

ಪೂರ್ಣಿಯಾ ಪೂರ್ಣಿಯಾ 7004.0 3595,707

ರಾಂಚಿ ರಾಂಚಿ 18,331.0 3070,432

ರೋಹಟಾಸ್ ಸಸರಮ್ 7,296.2 2366,325

ಸಹರ್ಸಾ ಸಹರ್ಸಾ 5,885.0 2953,803

ಸಮಸ್ತೀಪುರ್ ಸಮಸ್ತೀಪುರ್ 2,856.4 2116,876

ಸಂತಾಲ್ ಪರಗಣಗಳು ದುಮ್ಕಾ 14,129.0 3717,528

ಸರನ್ ಛಾಪ್ರಾ 2,623.0 2084,322

ಸಿಂಘ್‍ಭೂಮ್ ವೈಭಾಸಾ 13,447.0 2861,799

ಸೀತಾಮರಿ ಸೀತಾಮರಿ 2,659.2 1932,147

ಸಿವನ್ ಸಿವನ್ 2,230.0 1778,930

ವೈಶಾಲಿ ಹಾಜೀಪುರ 2,080.0 1662,527


ದರಬಾಂಗಾ, ಕೋಸಿ, ಭಾಗಲಪುರ, ಉತ್ತರ ಛೋಟಾನಾಗಪುರ ಮತ್ತು ದಕ್ಷಿಣ ಛೋಟಾನಾಗಪುರ ಇವು 7 ವಿಭಾಗಗಳು. ರಾಜ್ಯದ ಪ್ರಮುಖ ಮಹಾನಗರಗಳು ಮತ್ತು ಜನಸಂಖ್ಯೆ (1981)ರಂತೆ ಪಟ್ನಾ ಮಹಾನಗರ- 918,903, ಜಮ್‍ಷಡ್‍ಪುರ 669,580, ಗಯಾ 344,941, ರಾಂಚಿ 502,771, ಭಾಗಲಪುರ 225,062, ದರಬಾಂಗಾ 315,571, ಮುಝಫರಪುರ 190,416 ಮೋಂಘಿರ್ 129,230 ಮತ್ತು ಬಿಹಾರ 151,343. ರಾಜ್ಯದ ಒಟ್ಟು ಜನಸಂಖ್ಯೆಯ ಶೇಕಡಾ 12 ರಷ್ಟು ಜನ ಪಟ್ಟಣವಾಸಿಗಳಾಗಿದ್ದು ಉಳಿದವರೆಲ್ಲ ಗ್ರಾಮಗಳಲ್ಲಿಯೂ ಗುಡ್ಡಗಾಡು ಭಾಗಗಳಲ್ಲಿಯೂ ವಾಸಿಸುತ್ತಾರೆ. ಈ ರಾಜ್ಯದಲ್ಲಿ ಒಟ್ಟು 29 ಬುಡಕಟ್ಟಿನ ಆದಿವಾಸಿ ಜನರು ವಾಸಿಸುತ್ತಿದ್ದು, ಅವರಲ್ಲಿ ಸಂತಾಲ್, ಔರಾಂವ, ಮುಂಡಾ, ಹೋ, ಖರಿಯಾ, ಭೂಯಿ ಮುಂತಾದ ಗುಂಪುಗಳಿವೆ.

ಧರ್ಮ ಸಂಸ್ಕøತಿ: 2ನೆಯ ಚಂದ್ರಗುಪ್ತನ ಆಳ್ವಿಕೆಯಲ್ಲಿ (380-415) ಅವಧಿಯಲ್ಲಿ ಭಾರತದ ಯಾತ್ರೆಗೆ ಬಂದ ಚೀಣದ ಬೌದ್ಧ ಯಾತ್ರಿಕ ಫಾ-ಹಿಯೆನ್ ಮತ್ತು ಹರ್ಷನ ಆಳ್ವಿಕೆಯಲ್ಲಿ (606-647) ಬಂದ ಹ್ಯುಯನ್‍ತ್ಸಾಂಗ್ (643) ಅವರು ಬಿಹಾರ ಪ್ರದೇಶದಲ್ಲಿ ಸಂಚರಿಸಿ ಅಲ್ಲಿಯ ಧರ್ಮಸಂಸ್ಕøತಿ ಗಳನ್ನು ಕುರಿತು ಕೊಂಡಾಡಿದ್ದುಂಟು. ಇದು ಬುದ್ದನ ಕಾರ್ಯಕ್ಷೇತ್ರವಾಗಿತ್ತೆಂಬುದು ಒಳ ಹೊರಗಿನವರೆಲ್ಲ ಈ ಪ್ರದೇಶದ ಮೇಲೆ ಅಭಿಮಾನವಿಡಲು ಮುಖ್ಯ ಕಾರಣ. ಬುದ್ಧನಿಗೆ ಜ್ಞಾನೋದಯವಾದ ಬುದ್ಧಗಯಾ, ರಾಜಗೀರ, ಬಿಹಾರ ಶರೀಫ್‍ಗಳು ಇಂದಿಗೂ ಯಾತ್ರಿಕರಿಗೆ ಪುಣ್ಯ ಕ್ಷೇತ್ರಗಳೆನಿಸಿದೆ. ಗಯಾದಲ್ಲಿರುವ ವಿಷ್ಣು ಮಂದಿರ ಜಾತ್ರೆ ಪ್ರಸಿದ್ಧ ವೈದ್ಯನಾಥಧಾಮದಲ್ಲಿಯ ಶಿವಲಿಂಗ ಮಂದಿರ, ಸೋನ್‍ಪುರದಲ್ಲಿಯ ಹರಿಹರಮಂದಿರ, ಪಾರಸನಾಥ್ ಬೆಟ್ಟದ ಮೇಲಿರುವ ಪಾರಸನಾಥ್ ಮಂದಿರ, ಪಟ್ನಾದಲ್ಲಿರುವ ಸಿಖ್ಖರ ಗುರುದ್ವಾರ-ಇವೆಲ್ಲವೂ ಆಯಾ ಧರ್ಮನುಯಾಯಿಗಳ ಯಾತ್ರಾಕ್ಷೇತ್ರಗಳೆನಿಸಿವೆ. ರಾಜಗಿರಿ, ನಾಲಂದಾ, ಬುದ್ಧಗಯಾ, ಸಹಸರಾಮ್, ಬರಾಬರ, ಪಹಾಡಿ, ವೈಶಾಲಿ, ಸುಲ್ತಾನ್‍ಗುಂಜ್, ಕಹಲಗಾಂವ, ರಾಜಮಹಲ್, ಪಟ್ನಾ, ಮೋಂಘಿರ್ ಮುಂತಾದವು ಐತಿಹಾಸಿಕ ಪ್ರಸಿದ್ಧಿ ಪಡೆದಿದೆ. ಬಿಹಾರಶರೀಫ್ ಮತ್ತಿತರ ಸ್ಥಳಗಳಲ್ಲಿರುವ ಮಸೀದಿಗಳೂ ಸ್ಮಾರಕಗಳೂ ನೋಡತಕ್ಕವು. ಮುಖ್ಯವಾಗಿ ಬಿಹಾರ ರಾಜ್ಯ ಬೌದ್ಧ ಧರ್ಮದ ತವರು ಮನೆಯೆನಿಸಿಕೊಂಡರೂ ಇತರ ಧರ್ಮಗಳನ್ನೂ ಪೋಷಿಸಿಕೊಂಡು ಬಂದಿದೆ. ಬಿಹಾರದ ವೈಶಾಲಿಯಲ್ಲಿ ಜನಿಸಿದ ಮಹಾವೀರ ಜೈನ ಮತ ಸ್ಥಾಪಿಸಿದ. ಈ ಬಗೆಯಲ್ಲಿ ಬಿಹಾರ ಜೈನಮತ ಮತ್ತು ಬೌದ್ಧಮತ ಸ್ಥಾಪಕರ ಜನ್ಮಭೂಮಿಯಾಗಿ ಪ್ರಪಂಚದಲ್ಲೆಲ್ಲ ಹೆಸರು ಪಡೆದಿದೆ.

ಬುದ್ಧಗಯಾ ಬಿಹಾರದ ರಾಜಧಾನಿಯಾದ ಪಟ್ನಾದಿಂದ 92ಕಿಮೀ ಮತ್ತು ಗಯಾದಿಂದ 11 ಕಿಮೀ ಅಂತರದ ಮೇಲಿದ್ದು ಜಪಾನ್, ಥಾಯ್‍ಲೆಂಡ್, ವಿಯೆಟ್ನಾಮ್, ಕಾಂಬೋಡಿಯಾ, ತಿಬೇಟ್, ನೇಪಾಲ ಮತ್ತು ಯುರೊಪಿನ ದೇಶಗಳಿಂದ ಯಾತ್ರಿಕರನ್ನು ಆಕರ್ಷಿಸುತ್ತಿದೆ. ಇಲ್ಲಿರುವ ಅನೇಕ ಬೌದ್ಧಮಂದಿರಗಳಲ್ಲಿ ಮಹಾಬೋಧಿ ಮಂದಿರ ಬಲು ಮಹತ್ತ್ವದ್ದು. ಒಂಬತ್ತು ಮಹಡಿಗಳುಳ್ಳ ಈ ಮಂದಿರಕ್ಕೆ 48.75 ಮೀಟರ್ ಎತ್ತರದ ಪಿರಮಿಡ್ ಆಕಾರದ ಗೋಪುರವಿದೆ ಇದರಲ್ಲಿ ಬುದ್ಧನಿಗೆ ಜ್ಞಾನೋದಯವಾದ ಪವಿತ್ರ ಕ್ಷಣದ ಪ್ರತೀಕವೆನಿಸುವ ಬುದ್ಧನ ಪ್ರತಿಮೆಯಿದೆ. ನಾಲ್ಕನೆಯ ಶತಮಾನದಲ್ಲಿ ರಚಿಸಿರಬಹುದಾದ ಈ ಮಂದಿರವನ್ನು ಅನೇಕ ಬಾರಿ ಜೀರ್ಣೋದ್ಧಾರ ಮಾಡಲಾಗಿದೆ. (ಬಿ.ಎ.ಎಸ್.) ಪುರಾತತ್ತ್ವ: ಬಿಹಾರಿನ ಪುರಾತತ್ತ್ವಕ್ಕೆ ಸಂಬಂಧಿಸಿದಂತೆ 1845 ಮತ್ತು 1867ರಲ್ಲಿ ಬಾಲ್ ಅವರು ನಡೆಸಿದ ಸಂಶೋಧನೆಯಲ್ಲಿ ಧನಬಾದ್ ಜಿಲ್ಲೆಯ ಗೋವಿಂದಪುರದ ಸಮೀಪದ ಕುಂಕುನೆ ಗ್ರಾಮದಲ್ಲಿ ಹಸಿರು ಬೆಣಚುಕಲ್ಲಿನ ಆಯುಧಗಳೂ ಹಜಾರಿಬಾಗ್ ಮತ್ತು ಬುದ್ರ್ವಾನ್ ಜಿಲ್ಲೆಗಳಲ್ಲಿ ಸ್ಲೇಟುಗಲ್ಲಿನ ಕೊಡಲಿಗಳೂ ದೊರಕಿದವು. ಈ ಶತಮಾನದ ಎರಡನೆಯ ದಶಕದಲ್ಲಿ ಎಮ್. ಘೋಷ್‍ರವರು ಚಕ್ರಧರಪುರದ ಸಮೀಪದಲ್ಲಿ ನಡೆಸಿದ ಉತ್ಖನನದಲ್ಲಿ ಪೂರ್ವ ಶಿಲಾಯುಗದ ಹಲವಾರು ಕೈ ಕೊಡಲಿ, ಅಗಲವಾದ ಚೂಪುಕೊಡಲಿ ಒರೆಗಳು ಇತ್ಯಾದಿ ಸಿಕ್ಕಿವೆ. ಬಿಹಾರದ ವಿಶ್ವವಿದ್ಯಾಲಯಗಳು ನಡೆಸಿದ ಕೆಲವುಶೋಧನೆಗಳಲ್ಲಿ ಆದಿ, ಮಧ್ಯ ಮತ್ತು ಅಂತಿಮ ಶಿಲಾಯುಗಗಳಿಗೆ ಸೇರಿದ ಹಲವಾರು ಆಯುಧಗಳು ಕಂಡುಬಂದಿವೆ. ರಾಜ್ಯ ಸರ್ಕಾರದ ಪುರಾತತ್ತ್ವ ಇಲಾಖೆ ಸಹ ಉತ್ಖನನ ಕಾರ್ಯವನ್ನು ಅಲ್ಲಲ್ಲಿ ಕೈಗೊಂಡಿವೆ. ಗಯಾಜಿಲ್ಲೆಯ ಸೋನೆಪುರದಲ್ಲಿ ನವ ಶಿಲಾಯುಗಕ್ಕೆ ಸೇರಿದವುಗಳೆನ್ನಬಹುದಾದ ಶಿಲಾಯುಧಗಳು ಲಭಿಸಿವೆ. ಬಾಣದ ಮೊನೆಗಳು, ಗಡಾರಿ ಗಳು, ಮೂಳೆಗಳ ಕೊಡಲಿಗಳು, ಲೋಲಕಗಳು ಅಮಿತವಾಗಿ ಸೂಚಿ ಕಲ್ಲುಗಳೂ ದೊರೆಕಿವೆ. ಅಂದಿನ ಜನ ಬತ್ತ, ಗೋದಿ, ಬಾರ್ಲಿ, ಬಟಾಣಿಗಳನ್ನು ಬೆಳೆಸುತ್ತಿದ್ದರು. ಒಂದೇ ಕಡೆ ಸಾಲಾಗಿರುವ ಒಲೆಗಳು ಅವರು ಒಟ್ಟಾಗಿ ಜೀವಿಸುತ್ತಿದ್ದರೆಂಬುದನ್ನು ಸೂಚಿಸುತ್ತವೆ. ದನಗಳು, ಆಡುಗಳು, ಕುರಿಗಳು ಸಾಕುಪ್ರಾಣಿಗಳಾಗಿದ್ದುವು. ಖಡ್ಗಮೃಗದ ಪರಿಚಯವಿತ್ತು. ಕಲ್ಲಿನಮಣಿಗಳ ತಯಾರಿಕೆಯಲ್ಲಿ ನಿಪುಣ ರಾಗಿದ್ದರು. ಬೃಹತ್ ಶಿಲಾಯುಗಕ್ಕೆ ಸಂಬಂಧಿಸಿದಂತೆ ಸಿಂಘ್‍ಭೂಮ್ ಜಿಲ್ಲೆಯಲ್ಲಿ ಹಲವಾರು ನಿವೇಶನಗಳನ್ನು ನಿದರ್ಶನಗಳನ್ನೂ 1870ರಿಂದೀಚೆಗೆ ಗುರುತಿಸಲಾಗಿದೆ. ವಿಶೇಷವಾಗಿ ಪಾಂಡುಕುಳಿಗಳು ಹಲವಾರು ಕಡೆ ಕಂಡು ಬಂದಿವೆ. ಅಸುರ ಎಂದು ಹೆಸರಿಸಲಾದ ನಿವೇಶನಗಳಲ್ಲಿ ಮೃತ್ಪಾತ್ರೆಗಳನ್ನೊಳಗೊಂಡ ಪಾಂಡುಕುಳಿಗಳಿವೆ. ದೊಡ್ಡಕಲ್ಲು ಚಪ್ಪಡಿಗಳ ಕೆಳಗೆ ಘಡ ಎಂದು ಕರೆಯಲಾದ ದೊಡ್ಡ ಮಣ್ಣಿನ ಜಾಡಿಗಳಿವೆ. ಇವುಗಳ ಮೇಲೆ ಬೋಗುಣಿಯಾಕಾರದ ಮುಚ್ಚಳಗಳನ್ನಿಟ್ಟು ಜೇಡಿಮಣ್ಣಿನಿಂದ ಮೊಹರು ಮಾಡಲಾಗಿದೆ. ಇವು ಒಂದು ಕುಟುಂಬಕ್ಕೆ ಸೇರಿದ ಆಸ್ಥಿಪಾತ್ರೆಗಳು, ಮುಂಭಾಗದಲ್ಲಿ ಕಲ್ಲಿನ ಶವಸಂಪುಟಗಳನ್ನೊಳಗೊಂಡ ಮನ್‍ಹಿರ್‍ಗಳು ರಾಂಚಿಜಿಲ್ಲೆಯಲ್ಲಿ ಹರ್ಗರಿಶ್ ಎಂದು ಕರೆಯಲಾದ ಶ್ಮಶಾನ ಭೂಮಿಗಳಲ್ಲಿ ಕಂಡುಬಂದಿತು. ಬಜ್ಪುರ ಎಂಬಲ್ಲಿ ಆಮಲಕದ ಅಲಂಕಾರ ಒಳಗೊಂಡ ಕಲ್ಲುಕಂಬಗಳನ್ನು ಬೃಹತ್ ಶಿಲಾಗೋರಿಗಳಂತೆ ಬಳಸಲಾಗಿದೆ. ತಾಮ್ರಶಿಲಾಯುಗಕ್ಕೆ ಸೇರಿದ ಐದು ತಾಮ್ರಕೊಡಲಿಗಳು 1871ರಲ್ಲಿ ಹಜಾರಿಬಾಗ್‍ನಲ್ಲಿ ದೊರೆಕಿವೆ. ಆ ಬಳಿಕ ಅಂಥ ಆಯುಧಗಳು ರಾಂಚಿಜಿಲ್ಲೆಯಲ್ಲಿಯ ಅಸುರ ನಿವೇಶನಗಳಲ್ಲಿ ಬರ್ತೊಲ ಗ್ರಾಮದಲ್ಲಿ ವಲಮಾ ಮತ್ತು ಧನಬಾದ್ ಜಿಲ್ಲೆಗಳಲ್ಲೂ ದೊರೆಕಿವೆ. ಆದರೆ ಇಂಥ ಉಪಕರಣಗಳನ್ನು ರೂಪಿಸಿ ಬಳಸಿದ ಜನರ ಬಗ್ಗೆ ಹೆಚ್ಚು ತಿಳಿದುಬಂದಿಲ್ಲ. ಸೋನ್ ಪುರದ ಇತ್ತೀಚಿನ ಉತ್ಖನನದಲ್ಲಿ ಕಪ್ಪು-ಕೆಂಪು ಬಣ್ಣದ ಮಡಕಿಗಳು, ತಾಮ್ರದ ತಂತಿ, ಮೂಳೆಗಳು, ಕಲ್ಲಿನ ಬಾಣ, ಬಾಯಿ ಇರುವ ಪಾತ್ರೆಗಳು ಮತ್ತು ಕರಕಾದ ಅಕ್ಕಿ ಸಿಕ್ಕಿದ್ದು ಇವು ಕ್ರಿ.ಪೂ.ಸು. 800-600 ಅವಧಿಗೆ ಸೇರಿದವೆಂದು ಹೇಳಬಹುದಾಗಿದೆ. ಗೋರಥಗಿರಿ, ರಾಜಗೃಹ ವೈಶಾಲಿ, ಲೌರಿಯ ನಂದನಘಢ, ಕುಮ್ರಹರ್ ಮುಂತಾದೆಡೆಗಳಲ್ಲಿ ಕ್ರಮಬದ್ಧ ಉತ್ಖನನ, ಪರಿವೀಕ್ಷಣ ಕಾರ್ಯಗಳು ನಡಿದಿವೆ ಮತ್ತು ನಡೆಯುತ್ತಿವೆ.

ಇತಿಹಾಸ: ಬಿಹಾರದಮೇಲೆ (ಪ್ರಾಚೀನ ಒದಂತಪುರಿ-ಈಗಿನ ಬಿಹಾರ್ ಷರೀಫ್) ಮಹಮದೀಯರು ದಂಡೆತ್ತಿಬಂದಾಗ ಅಲ್ಲಿದ್ದ ಅನೇಕ ವಿಹಾರಗಳನ್ನು ಕಂಡು ಇದು ವಿಹಾರಗಳ ನಾಡು ಎಂದು ಈ ಪ್ರದೇಶಕ್ಕೆ ವಿಹಾರ, ಬಿಹಾರ ಎಂದು ಕರೆದರು. ವೇದಗಳ ಕಾಲದಿಂದಲೂ ಇಲ್ಲಿ ರುಷ, ಮಗಧ, ಅಂಗ, ವೈಶಾಲಿ, ವಿದೇಹ ರಾಜ್ಯಗಳು ಅಸ್ತಿತ್ವದಲ್ಲಿದ್ದುವು. ಈಗಿನ ತಿರ್ಹತ್ ಪ್ರಾಂತವನ್ನೊಳಗೊಂಡ ವಿದೇಹದ ರಾಜಧಾನಿ ಈಗ ನೇಪಾಲದ ತರೈನ್ ನಲ್ಲಿರುವ ಜನಕಪುರಿ ಎನಿಸಿದ ಮಿಥಿಲಾ. ಕ್ರಮೇಣ ದಕ್ಷಿಣ ವಿದೇಹಕ್ಕೆ ವೈಶಾಲಿ ರಾಜಧಾನಿಯಾಗಿತು. ವೈಶಾಲಿಯ ಉತ್ತರಕ್ಕೆ ಹಿಮಾಲಯದವರೆಗೂ ಕಾಡು ಪ್ರದೇಶವಿದ್ದು ಬೌದ್ಧಸಾಹಿತ್ಯದಲ್ಲಿ ಇದನ್ನು ಮಹಾವನ ಎಂದು ವರ್ಣಿಸಲಾಗಿದೆ. ಕಾರುಷ ಈಗಿನ ಷಹಬಾದ್ ಜಿಲ್ಲೆಯನ್ನೊಳಗೊಂಡಿದ್ದು ರಾಮಾಯಣದಲ್ಲಿ ಬರುವ ತಾಟಕಿ ಇಲ್ಲಿದ್ದವಳೆಂದು ಹೇಳಲಾಗಿದೆ. ಇದಕ್ಕೆ ಪೂರ್ವದಲ್ಲಿ ಮಗಧ, ದಕ್ಷಿಣ ಬಿಹಾರದ ಪಟ್ನಾ ಗಯಾ ಜಿಲ್ಲೆಗಳನ್ನೊಳಗೊಂಡ ಪ್ರಸಿದ್ಧ ರಾಜ್ಯ. ಇದರ ಪೂರ್ವಕ್ಕೆ ಈಗಿನ ಬಾಗಲ್ಪುರವನ್ನು (ಚಂಪಾ) ರಾಜಧಾನಿ ಯಾಗಿ ಹೊಂದಿದ್ದ ಅಂಗರಾಜ್ಯ. ಇದು ಬಾಗಲ್ಪುರ, ಮೋಂಘಿರ್ ಜಿಲ್ಲೆಗಳು ಮತ್ತು ಸುತ್ತಲ ಭಾಗಗಳನ್ನೊಳಗೊಂಡಿತ್ತು. ಆದರೆ ಈ ರಾಜ್ಯಗಳು ತಮ್ಮ ಸ್ವರೂಪಗಳನ್ನು ಬದಲಿಸಿದಂತೆಲ್ಲ ಇವುಗಳ ಗಡಿಗಳೂ ಬದಲಾದವು. ಮೇಲೆ ಹೇಳಿದಂತೆ ಮಗಧದ ಪ್ರದೇಶ ಕ್ರಿ.ಪೂ. 700ರ ಸುಮಾರಿನದು. ಆದರೆ 400ರ ವೇಳೆಗೆ ಮಗಧ ಈಗಿನ ಮೋಂಘಿರ್, ಬಾಗಲ್ಪುರ, ಗಯಾ, ಪಟ್ನಾ, ಷಹಬಾದ್ ಜಿಲ್ಲೆಗಳನ್ನೊಳಗೊಂಡಿತ್ತು. 487ರಲ್ಲಿ ಪಾಟಲೀಪುತ್ರ ನಗರದ ಆಸ್ತಿಭಾರವಾಗಿ 475ರಲ್ಲಿ ಅದು ರಾಜಧಾನಿಯಾಯಿತು. ಇದರ ಈ ಮೊದಲಿನ ರಾಜಧಾನಿ ರಾಜಗೃಹ ಈಗಿನ ರಾಜಗೀರ್. ಈ ಮೊದಲಿನ ರಾಜ್ಯಗಳಲ್ಲಿ ಕೆಲವು ಗಣರಾಜ್ಯಗಳಾದವು ಇನ್ನು ಕೆಲವು ಅಸ್ತಿತ್ವ ಕಳೆದುಕೊಂಡು ನೆರೆಯ ರಾಜ್ಯಗಳಲ್ಲಿ ಲೀನವಾದವು. ಕ್ರಿ.ಶ. 300ರ ವೇಳೆಗೆ ಮಗಧ ಭುಕ್ತಿ ಮತ್ತು ತಿರಭುಕ್ತಿ ಎಂಬ ಆಡಳಿತ ವಿಭಾಗಗಳು ಕಾಣಿಸಿಕೊಂಡವು. ತಿರಭುಕ್ತಿ ಬಹುಮಟ್ಟಿಗೆ ಬಿಹಾರದ ಉತ್ತರ ಭಾಗಗಳನ್ನೊಳಗೊಂಡಿತ್ತು. ಏಳನೆಯ ಶತಮಾನದ ಆರಂಭದ ದಶಕಗಳಲ್ಲಿ ಪಾಟಲೀಪುತ್ರ ಗಂಗಾನದಿಗೆ ಸೇರುವ ಸೋನ್ ನದಿಯ ನೆರೆಯಿಂದ ಹಾಳಾಗಿತ್ತು. ಆ ಬಳಿಕ ಬಲುಮಟ್ಟಿಗೆ ಅದು ಒಂದು ಉಪರಾಜಧಾನಿಯಾಗಿ ಉಳಿಯಿತು. ಬಂಗಾಲದ ಪಾಲರು ಆಳುತ್ತಿದ್ದಾಗ ಮಗಧಭುಕ್ತಿ ಶ್ರೀನಗರಭುಕ್ತಿಯಾಯಿತು. ನೆರೆಯ ಪುಂಡ್ರವರ್ಧನಭುಕ್ತಿ ಹಿಂದಿನ ಅಂಗರಾಜ್ಯದ ಪ್ರದೇಶ. ರಾಮಗಢ, ಛೋಟಾನಾಗಪುರ, ಪಲಮಉ ಮುಂತಾದ ಗುಡ್ಡಗಾಡು ಪ್ರದೇಶಗಳನ್ನು ಅಲ್ಬರೂನಿ ಕೊಕ್ರಾ ಎಂದೇ ಹೆಸರಿಸಿದ್ದಾನೆ. ಭಕ್ತಿಯಾರ್ ಖಲ್ಜಿ ಬಿಹಾರ, ಬಂಗಾಲಗಳ ಪೂರ್ವಭಾಗಗಳನ್ನು ಗೆದ್ದುಕೊಂಡು ಹಿಸರ್-ಎ-ಬಿಹಾರ್ ಎಂಬ ಕೋಟೆಯನ್ನು ಹಾಳುಗೆಡಹಿದ. ಹಿಂದಿನ ಒದಂತಪುರಿ ಬಿಹಾರವಾಗಿತ್ತು. ಮಧ್ಯಕಾಲೀನ ಬಿಹಾರ, ಬಂಗಾಲಗಳಲ್ಲಿ ಹಲವಾರು ಸಣ್ಣ ಪುಟ್ಟ ರಾಜ್ಯಗಳಿದ್ದು ಅವು ಯಾವುದಕ್ಕೂ ಖಚಿತವಾದ ಗಡಿಗಳಿರಲಿಲ್ಲ. ಉತ್ತರ ಬಿಹಾರದಲ್ಲಿ ಮಿಥಿಲಾದ ಕರ್ನಾಟಕ ಮನೆತನದ ಅರಸರು ಪ್ರಬಲರಾಗಿದ್ದರು. ದೆಹಲಿಯ ಸುಲ್ತಾನನಾದ ಇಲ್ತಮಷನು ಬಿಹಾರವನ್ನು ಬಂಗಾಲದಿಂದ ಪ್ರತ್ಯೇಕಿಸಲು ಯೋಚಿಸಿದ್ದನಾದರೂ ಅದು ಕಾರ್ಯಗತವಾಗಲಿಲ್ಲ. ಬಿಹಾರ್ ಷರೀಫನ್ನು ರಾಜಧಾನಿಯಾಗಿ ಮಾಡಿಕೊಂಡು ಕೆಲವು ಮಹಮದೀಯ ಸುಲ್ತಾನರು ದಕ್ಷಿಣ ಭಾಗದಲ್ಲಿ ಸ್ವತಂತ್ರವಾಗಿ ಆಳುತ್ತಿದ್ದರು. ಘಯಾಸುದೀನ್ ತುಘಲಕ್ ಕರ್ನಾಟಕ ವಂಶಜರನ್ನು ಸೋಲಿಸಿ ಓನಿವಾರ ಮನೆತನದ ಸ್ಥಾಪಕನಾದ ಠಾಕುರನಿಗೆ ಮಿಥಿಲೆಯನ್ನು ಕೊಟ್ಟ. 14ನೆಯ ಶತಮಾನದ ಅಂತಿಮದಶಕದಲ್ಲಿ ಬಿಹಾರದ ಔನ್‍ಪುರದ ಷಾಖಿ ಮನೆತನದವರ ವಶವಾಯಿತು. ಮೂರು ನಾಲ್ಕು ಮಹಮದೀಯ ಪಾಳೆಯಗಾರರಲ್ಲಿ ಅಂತಃಕಲಹಗಳೂ ಏರ್ಪಟ್ಟವು. ಸೂರ್ ವಂಶದ ಷೇರ್‍ಶಹ ಬಿಹಾರವನ್ನು ವಶಪಡಿಸಿಕೊಂಡು ಅದನ್ನು ಪ್ರತ್ಯೇಕ ಪ್ರಾಂತವಾಗಿ (ಸುಬಿ) ಮಾಡಿದ. ಇದು ಅಕ್ಬರನ ಕಾಲದಲ್ಲಿ ಖಚಿತ ರೂಪತಾಳಿತು. ಇದು ಪೂರ್ವಪಶ್ಚಿಮವಾಗಿ ಗರ್ಹಿಯಿಂದ ರೊಹ್ರ ಮತ್ತು ಉತ್ತರದಕ್ಷಿಣ ತಿರ್ಹತ್‍ನಿಂದ ಬೆಟ್ಟ ಸಾಲುಗಳವರೆಗೆ ವಿಸ್ತರಿಸಿತು. ಇಲ್ಲಿಯ ವಜ್ರದ ಗಣಿಗಳು ಎಲ್ಲರನ್ನೂ ಆಕರ್ಷಿಸಿದ್ದುವು. ಜಹಾಂಗೀರನು ತನ್ನ ಚರಿತ್ರೆಯಲ್ಲಿ ಕೊಕ್ರಾ ಎಂದೇ ಈ ಪ್ರದೇಶವನ್ನು ವರ್ಣಿಸಿ ಇದನ್ನು ಬಿಹಾರದ ಪ್ರಾಂತಾಧಿಕಾರಿಯಾದ ಇಬ್ರಾಹಿಂಖಾನನು ಮುತ್ತಿ ವಶಪಡಿಸಿಕೊಂಡಿದ್ದನೆಂದು ಹೇಳಿದ್ದಾನೆ. 18ನೆಯ ಶತಮಾನದ ಉತ್ತರಾರ್ಧದಲ್ಲಿ ಬಂಗಾಲ, ಒರಿಸ್ಸಾಗಳೊಂದಿಗೆ ಇದೂ ಬ್ರಿಟಿಷರ ಕೈಸೇರಿತು. 1765ರಲ್ಲಿ ಪಟ್ನಾ ಮುಖ್ಯಾಧಿಕಾರಿ ಬಿಹಾರಿನ ಆದಾಯಗಳನ್ನು ವಸೂಲು ಮಾಡುವ ಮೇಲ್ವಿಚಾರಕನಾದ. 1781ರಲ್ಲಿ ರಾಜ್ಯದ ಕಂದಾಯಗಳ ಮುಖ್ಯಸ್ಥನಾಗಿ ಒಬ್ಬನ ನೇಮಕವಾಯಿತು. ಕ್ರಮೇಣ ಇದನ್ನು ಜಿಲ್ಲೆಗಳಾಗಿ ವಿಂಗಡಿಸಿ ಅವುಗಳಿಗೆ ಅಧಿಕಾರಿಗಳನ್ನು ನೇಮಿಸುವ ಏರ್ಪಾಡುಗಳಾದುವು. 1912ರಲ್ಲಿ ಬಿಹಾರ, ಒರಿಸ್ಸಾಗಳನ್ನು ಬಂಗಾಲದಿಂದ ಬೇರ್ಪಡಿಸಲಾಗಿದ್ದು ಅವೆರಡೂ ಕೂಡಿದಂತೆ ಒಂದು ಪ್ರಾಂತ ಅಸ್ತಿತ್ವದಲ್ಲಿದ್ದಿತಾದರೂ 1937 ರಲ್ಲಿ ಒರಿಸ್ಸಾ ಪ್ರತ್ಯೇಕ ಪ್ರಾಂತವಾಗಿ, ಬಿಹಾರ ಇನ್ನೊಂದು ಸ್ವತಂತ್ರ ಪ್ರಾಂತವಾಯಿತು. 1953ರ ರಾಜ್ಯಗಳ ಪುನರ್ವಿಂಗಡಣಾ ಆಯೋಗದ ಶಿಫಾರಸು 1912ರ ವ್ಯವಸ್ಥೆಗೆ ಹೆಚ್ಚಿನ ಮಾರ್ಪಾಡುಗಳನ್ನೇನೂ ಮಾಡಲಿಲ್ಲ. ಪೂರ್ಣಿಯ ಮತ್ತು ಮನ್‍ಭುವ್ ಜಿಲ್ಲೆಗಳ ಕೆಲವು ಭಾಗಗಳನ್ನು ಮಾತ್ರ ಬಂಗಾಲಕ್ಕೆ ಸೇರಿಸಲಾಯಿತು.

ಸಾಂಪ್ರದಾಯಿಕ ಹೇಳಿಕೆಗಳಂತೆ ಬಿಹಾರಕ್ಕೆ ವೈವಸ್ವತ ಮನುವಿನ ಕಾಲದಿಂದಲೂ ಆರಂಭಿಸಿದಂತೆ ದೀರ್ಘ ಇತಿಹಾಸವಿದೆ. ಆತನ ಮಕ್ಕಳಲ್ಲೊಬ್ಬನಾದ ನಭನೇ (ಗೋ) ದಿಷ್ಠ ಉತ್ತರ ಬಿಹಾರದ ರಾಜಮನೆತನವೊಂದರ ಮೂಲ ಪುರುಷ. ಇವರು ವೈಶಾಲಿ ರಾಜ್ಯವನ್ನು ಆಳಿದರು. ಇನ್ನೊಬ್ಬ ಮಗನಾದ ಕಾರುಷನಿಂದ ಆರಂಭವಾದ ಕ್ಪ್ಷತ್ರಿಯ ಪಂಗಡಗಳು ಕಾರುಷ್ಯದಿಂದ ಈಗಿನ ರೀವಾದವರೆಗಿನ ಪ್ರದೇಶದ ಅಧಿಪತಿಗಳಾದರು. ಮನುವಿನ ಮೊಮ್ಮಗ ಇಕ್ಷ್ವಾಕುವಿನ ಮಗನಾದ ನಿಮಿ ವಿದೇಹ ರಾಜ್ಯದ ಮೊದಲ ಅರಸ. ಆತನ ಅನಂತರ ಬಂದ ಮಥಿಜನಕನಿಂದ ರಾಜಧಾನಿಗೆ ಮಿಥಿಲಾ ಎಂಬ ಹೆಸರು ಬಂದಿತು. ಸೌದ್ಯುಮ್ನನೆಂಬ ನಾಲ್ಕನೆಯ ಮಗನು ಪೂರ್ವ ಮತ್ತು ದಕ್ಷಿಣ ಬಿಹಾರಗಳಲ್ಲಿ ನೆಲಸಿದ. ಮಗಳಾದ ಇಲಾಗೆ ಬುದ್ಧನಿಂದ ಜನಿಸಿದ ಪುರೂರವ ಐಲನ ವಂಶಸ್ಥನಾದ ಅನು ಅನವ ರಾಜ್ಯದ ಮೂಲಪುರುಷ. ಈ ರಾಜ್ಯ ತರುವಾಯದ ಕಾಲದಲ್ಲಿ ಬಲಿಯ ಐವರು ಮಕ್ಕಳಲ್ಲಿ ಹಂಚಿಹೋಗಿ ಅವು ಅಂಗ, ವಂಗ, ಕಲಿಂಗ, ಪುಂಡ್ರ ಮತ್ತು ಸುಹ್ಮ ರಾಜ್ಯಗಳಾದುವು. ಈ ಪೌರಾಣಿಕ ಕಥೆಗಳಿಂದ ವ್ಯಕ್ತವಾಗುವ ಅಂಶವೆಂದರೆ ಬಿಹಾರ ಪ್ರದೇಶದಲ್ಲಿ ಹಲವಾರು ಪ್ರಬಲ ರಾಜ್ಯಗಳು ತಲೆ ಎತ್ತಿದುವೆಂಬುದು.

ಆದರೆ ವೈದಿಕ ಸಾಹಿತ್ಯದಲ್ಲಿ, ಪುರಾಣಗಳಲ್ಲಿ ಈ ಪ್ರದೇಶದ ಉಲ್ಲೇಖ ಹೆಚ್ಚಾಗಿ ಕಾಣಿಸಿಕೊಂಡಿಲ್ಲ ಎಂಬುದನ್ನು ಗಮನಿಸಿದರೆ ಈ ಮೇಲಿನ ಸಾಂಪ್ರದಾಯಿಕ ಹೇಳಿಕೆಗಳು ಎಷ್ಟರಮಟ್ಟಿಗೆ ನಂಬಲರ್ಹವೆಂಬ ಸಂದೇಹ ಉಂಟಾಗುತ್ತದೆ. ಮಹಾಭಾರತದಲ್ಲಿ ಮಾತ್ರ ಬಿಹಾರಿಗೆ ಪ್ರಾಧಾನ್ಯವಿದೆ. ಆ ಬೃಹತ್ಸಮರದ ಸಮಯದಲ್ಲಿ ವಿಶಾಲ ರಾಜ್ಯವನ್ನೊಳಗೊಂಡ ವಿದೇಹ ಮತ್ತು ದಕ್ಷಿಣದಲ್ಲಿ ಮಗಧಗಳು ಪ್ರಮುಖ ಪಾತ್ರವಹಿಸಿದ್ದುವು. ಮಗಧದಲ್ಲಿ ಬೃಹದ್ರಥನ ವಂಶಜನಾದ ಜರಾಸಂಧ ಆಳುತ್ತಿದ್ದು ಭೀಮ ಅವನನ್ನು ಕೊಂದ ಬಳಿಕ ಅವನ ಮಗ ಸಹದೇವ ಒಂದು ಭಾಗದಲ್ಲೂ ಕರ್ಣ ಇನ್ನೊಂದು ಭಾಗದಲ್ಲೂ ರಾಜ್ಯ ಆಳಿದರು. ಈ ವಂಶದ ಕೊನೆಯ ಅರಸ ರಿಪುಂಜಯ ಅನಂತರ ಆಳಿದ ಪ್ರದ್ಯೋತ ವಂಶಜರಲ್ಲಿ ಕೊನೆಯವನನ್ನು ಕಾಶಿಯ ಶಿಶುನಾಗ ಕೊಂದ. ಗಿರಿವ್ರಜವನ್ನು ಅವನು ರಾಜಧಾನಿ ಮಾಡಿಕೊಂಡು ತನ್ನ ಮಗನೊಬ್ಬನನ್ನು ಕಾಶಿಯಲ್ಲಿ ನೆಲೆಗೊಳಿಸಿದ. ಈತನ ವಂಶಜರೇ ಖ್ಯಾತರಾದ ಬಿಂಬಸಾರ ಮತ್ತು ಅಜಾತ ಶತ್ರುಗಳು.

ಬೌದ್ಧ ಸಾಹಿತ್ಯದಲ್ಲಿ ಷೋಡಶ ರಾಜ್ಯಗಳ ಪ್ರಸ್ತಾಪ ಬಂದಿದೆ. ಅವುಗಳಲ್ಲಿ ಹೆಸರಾದ ಮಗಧ ಮತ್ತು ಅಂಗ (ಈಗಿನ ಬಾಗಲ್ಪುರ ಜಿಲ್ಲೆಯ ಪ್ರದೇಶ) ಈಗಿನ ಬಿಹಾರದ ಭಾಗಗಳಾಗಿದ್ದುವು. ವ್ರಿಜ್ಜೆ ಗಣರಾಜ್ಯ ಈಗಿನ ತಿರ್ಹತ್ ಮಂಡಲವನ್ನೊಳಗೊಂಡಿತ್ತು. ಜೈನತೀರ್ಥಂಕರ ಮಹಾವೀರನೊಂದಿಗೆ ಸಂಬಂಧಿಸಿದ ಮಲ್ಲರು ರಾಜಗೃಹದ ಸಮೀಪದ ಪಾವಾ ಮತ್ತು ಈಗಿನ ಉತ್ತರ ಪ್ರದೇಶದ ಗೊರಖಪುರ ಜಿಲ್ಲೆಯ ಕುಶೀನಗರಗಳಲ್ಲಿ ಪ್ರಬಲರಾಗಿದ್ದರು. ಗೌತಮ ಬುದ್ಧ ಭಿಂಬಸಾರ ಮತ್ತು ಅಜಾತಶತ್ರುಗಳ ಸಮಕಾಲೀನ, ಅವರಿಂದ ಪೂಜಿಸಲ್ಪಟ್ಟ ಗುರು. ಬಿಂಬಸಾರನಿಂದ (ಕ್ರಿ.ಪೂ. 545-44 ರಿಂದ 493) ಮಗಧರಾಜ್ಯ ಅಭಿವೃದ್ಧಿಗೊಳಿಸಲ್ಪಟ್ಟಿತು. ಅಂಗಾಧೀಶರೊಡನೆ ಮಗಧ ಅರಸರದು ಅನುವಂಶಿಕವಾಗಿ ಬೆಳೆದು ಬಂದ ಶತ್ರುತ್ವ. ಬಿಂಬಸಾರನ ತಂದೆಯಾದ ಭಟ್ಟಿಯನನ್ನು ಅಂಗ ರಾಜ್ಯದ ಬ್ರಹ್ಮದತ್ತ ಕೊಂದಿದ್ದ. ಇದರ ಸೇಡನ್ನು ಬಿಂಬಸಾರ ತೀರಿಸಿಕೊಂಡ. ಅಂಗದ ಅರಸ ಸಂಪೂರ್ಣವಾಗಿ ಸೋತು ಆ ರಾಜ್ಯ ಮಗಧದಲ್ಲಿ ಲೀನವಾಯಿತು. ಇದಕ್ಕಾಗಿ ಬಿಂಬಸಾರ ಕೋಸಲ ಪ್ರಸೇನಜಿತನ ಮಗಳಾದ ಕೋಸಲದೇವಿಯನ್ನು ವರಿಸಿ ಆ ಅರಸನ ಸಹಾಯ ಪಡೆದ. ವರದಕ್ಷಿಣೆಯ ರೂಪದಲ್ಲಿ ಕಾಶಿ ಈತನಿಗೆ ಸೇರಿತು. ವೈಶಾಲಿಯ ಲಿಚ್ಛವಿ ಜನಾಂಗದ ಚೇತಕನ ಮಗಳಾದ ಚೆಲ್ಲನಾ ಎಂಬ ಕುಮಾರಿಯನ್ನು ಲಗ್ನವಾಗಿ ಅವರ ಬಾಂಧವ್ಯದಿಂದ, ಅವಂತಿಯ ಅರಸನ ರೋಗನಿವಾರಣೆಗಾಗಿ ತನ್ನ ವೈದ್ಯನಾದ ಜೀವಕನನ್ನು ಕಳುಹಿಸಿದ್ದುದರಿಂದ ಆ ಅರಸನೊಡನೆ ಉಂಟಾದ ಸ್ನೇಹದಿಂದ ತನ್ನ ಬಲ ವೃದ್ಧಿಪಡಿಸಿಕೊಂಡ. ದೂರದ ಪಂಜಾಬಿನ ಮದ್ರದೇಶಕ್ಕೆ ಗಾಂಧಾರದ ಪುಕ್ಕು ಸಾತಿಯ ಆಸ್ಥಾನಕ್ಕೆ ರಾಜಪ್ರತಿನಿಧಿಗಳನ್ನು ಕಳುಹಿಸಿದ. ಇವನ ಮಕ್ಕಳ ಪೈಕಿ ಅಜಾತಶತ್ರು (493-146) ಉತ್ಕಟಾಕಾಂಕ್ಷೆ ಉಳ್ಳವ. ಕ್ರಮಬದ್ಧವಾಗಿ ಅಧಿಕಾರ ಲಭಿಸುವವರೆವಿಗೂ ಕಾಯದೆ ಅಸಹನೆಯಿಂದ ತಂದೆಯನ್ನು ಸೆರೆಯಲ್ಲಿಟ್ಟು, ಆತ ವಿಷಪ್ರಾಶನದಿಂದ ಸಾಯಲು ಕಾರಣನಾದ. ತಂದೆಯ ಮಿತ್ರರಾಗಿದ್ದ ಕೋಸಲರು, ಲಿಚ್ಛವಿಗಳೊಡನೆ ಅಲ್ಪ ಕಾರಣಗಳ ನೆಪದಿಂದ ಕಾದಿದ. ಲಿಚ್ಛವಿಯರ ಒಗ್ಗಟ್ಟನ್ನು ಕುಟಿಲತನದಿಂದ ಭೇದಿಸಿ ಆ ಬಳಿಕ ಅವರನ್ನು ಸೋಲಿಸಿದ. ಆದರೆ ಇದು ಶ್ರಮದಾಯಕವಾದುದ್ದಾಗಿತ್ತು. ಈತ ಮಗಧರಾಜ್ಯ ವಿಸ್ತರಣೆಗೂ ಅದರ ಕೀರ್ತಿ ಪ್ರಸಾರಕ್ಕೂ ಕಾರಣನಾದ. ಗೌತಮಬುದ್ಧ, ಮಹಾವೀರರನ್ನು ಗೌರವದಿಂದ ಕಂಡ. ಬುದ್ಧನ ಮರಣಾನಂತರ ರಾಜಗೃಹದಲ್ಲಿ ಮೊದಲನೆಯ ಬೌದ್ಧ ಮಹಾಸಭೆ ಸೇರಲು ನೆರನಾದ.

ಅಜಾತ ಶತ್ರುವಿನ ಬಳಿಕ ರಾಜ್ಯವಾಳಿದವರಾರೂ ಹೆಸರುಗಳಿಸಲಿಲ್ಲ. ಬೇಸತ್ತ ಪ್ರಜೆಗಳು ಅಮಾತ್ಯನಾಗಿದ್ದ ಶಿಶುನಾಗನನ್ನು ಅಧಿಕಾರಕ್ಕೆ ತಂದರು. ಈತನ ಉತ್ತರಾಧಿಕಾರಿಯಾದ ಕಾಕವರ್ಣನ ಕಾಲದಲ್ಲಿ ಎರಡನೆಯ ಬೌದ್ಧಸಭೆ ವೈಶಾಲಿಯಲ್ಲಿ ಸುಮಾರು 394-93ರಲ್ಲಿ ಜರಗಿತು. ಅನಂತರ ಹೆಸರಿಸ ಬೇಕಾದುದು ನಂದವಂಶದ ಅರಸರನ್ನು (364-24). ಮಹಾಪದ್ಮ ಈ ವಂಶದ ಮೂಲಪುರುಷ. ಆದರೆ ಈ ವಂಶಸ್ಥರನ್ನು ಕುರಿತ ವಿವರಗಳಲ್ಲಿ ಗೋಜಲುಗಳಿವೆ. ಹೇಗೊ ಅಲೆಕ್ಸಾಂಡರನ ದಂಡಯಾತ್ರೆಯ ಕಾಲದಲ್ಲಿ (326) ನಂದರು ಅಪಾರ ಸೈನ್ಯ ಬಲದೊಂದಿಗೆ ಅವನನ್ನೆದುರಿಸಲು ಸಿದ್ಧರಾಗಿದ್ದರಾದರೂ ಅವನು ಪಂಜಾಬನ್ನು ದಾಟಿ ಮುಂದಕ್ಕೆ ಬರಲೇ ಇಲ್ಲ. ಆಗ ಆಳುತ್ತಿದ್ದಾತ ಧನನಂದನೆನ್ನಲಾಗಿದೆ. ಈತನನ್ನು 324ರಲ್ಲಿ ಮೌರ್ಯವಂಶದ ಚಂದ್ರಗುಪ್ತ ಸೋಲಿಸಿ ಪದಚ್ಯುತಿಗೊಳಿಸಿದ. ನಂದರ ಕಾಲದಲ್ಲಿ ಅವರ ರಾಜ್ಯ ಬಹುಶಃ ಕರ್ನಾಟಕದವರೆವಿಗೂ ವಿಸ್ತರಿಸಿತ್ತು. ಇದಕ್ಕೆ ಉತ್ತರಾಧಿಕಾರಿಯಾದ ಚಂದ್ರಗುಪ್ತ (322-298) ಸೆಲ್ಯೂಸಿಡ್ ಮನೆತನದ ಸೆಲ್ಯೂಕಸನನ್ನು ಸೋಲಿಸಿದ. ಅವನಿಂದ ಪಡೆದ ಕಾಣಿಕೆಗಳೊಡನೆ ಮೆಗಸ್ತನೀಸ್ ಸಹ ಆತನ ರಾಯಭಾರಿಯಾಗಿ ಮಗಧಕ್ಕೆ ಬಂದ. 313ರಲ್ಲಿ ಮಾಲವವನ್ನು ಗೆದ್ದುಕೊಂಡ. ಈತನ ಕಾಲದಲ್ಲಿ ದೇಶ ಘೋರ ಕ್ಷಾಮಕ್ಕೆ ತುತ್ತಾಗಿ ಜನತೆ ಬಳಲಿತು. ಚಂದ್ರಗುಪ್ತ ತನ್ನ ಅಂತಿಮ ವರ್ಷಗಳನ್ನು ಜೈನ ಸನ್ಯಾಸಿಯಾಗಿ ಶ್ರವಣಬೆಳಗೊಳದಲ್ಲಿ ಕಳೆದನೆಂಬುದೊಂದು ಪ್ರತೀತಿ ಇದೆ. ಚಂದ್ರಗುಪ್ತನ ಮೊಮ್ಮಗ ಅಶೋಕ (273-32) ಭಾರತದ ಇತಿಹಾಸದಲ್ಲಿ ಅವರನಾದ ರಾಜರ್ಷಿ. ಸಾಮ್ರಾಜ್ಯದ ಹೊರಗುಳಿದಿದ್ದ ಕಲಿಂಗ ದೇಶವನ್ನು ಭೀಕರ ಕದನದ ಬಳಿಕ ಆಕ್ರಮಿಸಿದ. ಆದರೆ ಆಗ ನಡೆದ ರಕ್ತಪಾತ, ಹತ್ಯೆಗಳು ಅವನ ಬಾಳಿನಲ್ಲಿ ಮಹತ್ತರ ಬದಲಾವಣೆಗೆ ಕಾರಣವಾದವು. ಬೌದ್ಧಧರ್ಮ ಸ್ವೀಕರಿಸಿ, ಜನಸಾಮಾನ್ಯರಲ್ಲಿ ಧರ್ಮಪ್ರಜ್ಞೆ ಉಂಟಾಗಲು ಶ್ರಮಿಸಿದ. ಎಲ್ಲೆಲ್ಲೂ ಧರ್ಮಶಾಸನಗಳನ್ನು ಹಾಕಿಸಿದ. ಆದರೆ ಈತನ ಅನಂತರ ಬಂದ ಅರಸರು ದಕ್ಷರಾಗಿರದೆ 184ರಿಂದ ಶುಂಗ ಮನೆತನದ ಪುಷ್ಯ ಮಿತ್ರ ಹಾಗೂ ಇನ್ನೂ ಎಂಟು ಜನ ಕ್ರಮವಾಗಿ ಆಳಿದ ಬಳಿಕ 75-72 ರಲ್ಲಿ ಕಾಣ್ವ ಎಂಬ ಬ್ರಾಹ್ಮಣ ಮನೆತನದ ವಾಸುದೇವ ಮತ್ತು ಆತನ ಉತ್ತರಾಧಿಕಾರಿಗಳು 30ರ ತನಕವೂ ಆಳಿದರು. ಆ ವರ್ಷ ಮಗಧದ ಕೊನೆಯ ಅರಸನನ್ನು ಆಂಧ್ರಕುಲದ ಸಿಮುಕ ಸೋಲಿಸಿ ಹೊಡೆದೋಡಿಸಿದ. ಅಂದಿನಿಂದ ಮುಂದಿನ ಮೂರು ಶತಮಾನಗಳ ಕಾಲ ಮಗಧರಾಜ್ಯ ಪ್ರಾಮುಖ್ಯ ಕಳೆದುಕೊಂಡಿತು. ಕ್ರಿ.ಶ. ಮೊದಲ ಶತಮಾನದ ಕೊನೆಯಲ್ಲಿ ಕುಷಾಣರು ಸ್ವಲ್ಪಕಾಲ ಬಿಹಾರವನ್ನು ಆಕ್ರಮಿಸಿದ್ದರು. ಅನಂತರ ಬಹುಶಃ ಲಿಚ್ಛವಿಗಳೂ ಮೌಖರಿಗಳೂ ಈ ಪ್ರದೇಶದ ಮೇಲೆ ಹಿಡಿತ ಪಡೆದಿದ್ದರು. ಆದರೆ ಬಿಹಾರ ಪುನಃ ಬೆಳಕಿಗೆ ಬಂದುದು ಗುಪ್ತವಂಶಜರ ಕಾಲದಲ್ಲಿ.

ಮೊದಲನೆಯ ಚಂದ್ರಗುಪ್ತ (ಕ್ರಿ.ಶ. 320-40) ಲಿಚ್ಛವಿ ವಂಶದ ಕುಮಾರ ದೇವಿಯನ್ನು ಲಗ್ನವಾದುದು ಅವನಿಗೆ ಲಾಭದಾಯಕವಾಗಿ ಪರಿಣಮಿಸಿತು. ಲಿಚ್ಛವೀದೌಹಿತ್ರನೆಂದು ಹೆಮ್ಮೆಯಿಂದ ಕರೆದುಕೊಂಡ ಈತ ಮಹಾರಾಜಾಧಿ ರಾಜನೆಂಬ ಬಿರುದಿನಿಂದ ಪಾಟಲೀಪುತ್ರವನ್ನು ರಾಜಧಾನಿಯಾಗಿ ಮಾಡಿಕೊಂಡು ಆಳತೊಡಗಿದ. ತನ್ನ ವಂಶದ ಹೆಸರಿನಲ್ಲಿ ಗುಪ್ತಶಕೆಯನ್ನು 320ರಲ್ಲಿ ಆರಂಭಿಸಿದ. ತಂದೆ ಮತ್ತು ಮಾತಾಮಹರ ರಾಜ್ಯವನ್ನು ಒಟ್ಟುಗೂಡಿಸಿ ಆಳಿದ ಸಮುದ್ರ ಗುಪ್ತ ಈತನ ಮಗ. ಇವನ ಉತ್ತರಾಧಿಕಾರತ್ವವನ್ನು ಕಷಗುಪ್ತನೆಂಬಾತ ಪ್ರಶ್ನಿಸಿ ದಂಗೆ ಎದ್ದಂತೆ ತೋರುತ್ತದೆ. ಆದರೂ ಸುಮಾರು 340ರಿಂದ 40 ವರ್ಷಗಳ ಕಾಲ ಆಳಿದ ಸಮುದ್ರಗುಪ್ತ ಉತ್ತರ ಭಾರತಾದ್ಯಂತ ಹಾಗೂ ದಕ್ಷಿಣ ಭಾರತದ ಹಲವಾರು ಪ್ರದೇಶಗಳ ಮೇಲೆ ದಂಡೆತ್ತಿ ಕೆಲವನ್ನು ವಶಪಡಿಸಿಕೊಂಡು, ಇನ್ನು ಕೆಲವು ಅರಸರು ತನ್ನ ಸಾಮಂತರಾಗಿರುವಂತೆ ಮಾಡಿ ಮತ್ತೊಮ್ಮೆ ಮಗಧ ಸಾಮ್ರಾಜ್ಯವಾಗಿ ಮೆರೆಯದಂತೆ ಮಾಡಿ ಅಶ್ವಮೇಧ ಯಜ್ಞ ಮಾಡಿದ. ಈತನ ಕಾಲದಲ್ಲಿ ಸಾಮ್ರಾಜ್ಯ ಆರ್ಥಿಕವಾಗಿ ಸಮೃದ್ಧವಾಗಿದ್ದು ಇದನ್ನು ಸುವರ್ಣಯುಗವೆಂದು ವರ್ಣಿಸಲಾಗಿದೆ. ವೈವಿಧ್ಯಮಯ ಚಿನ್ನದ ನಾಣ್ಯಗಳನ್ನು ಈತ ಟಂಕಿಸಿದ. ಈತನ ಮಗ ಇಮ್ಮಡಿ ಚಂದ್ರಗುಪ್ತನೂ ತಂದೆ ಹಾಕಿದ ತಳಪಾಯದ ಮೇಲೆ ಭವ್ಯವಾದ ಕಟ್ಟಡವನ್ನು ಎಬ್ಬಿಸಿದ. ಶಾಂತಿ, ಸುಭಿಕ್ಷೆಗಳ ಈ ಕಾಲದಲ್ಲಿ ಕಲೆ ಕಾವ್ಯಗಳಿಗೆ ರಾಜಾಶ್ರಯ ಲಭಿಸಿತು. 455-56ರಲ್ಲಿ ಪಟ್ಟಕ್ಕೆ ಬಂದ ಸ್ಕಂದಗುಪ್ತ ಹೂಣರ ಧಾಳಿಗಳನ್ನೆದುರಿಸಬೇಕಾಯಿತು. ರಾಜ್ಯದಲ್ಲಿ ಕೋಲಾಹಲ ಪರಿಸ್ಥಿತಿ ಏರ್ಪಟ್ಟು ಆರ್ಥಿಕ ಸ್ಥಿತಿ ಹದಗೆಟ್ಟಿತು. ಅನಂತರದ ವರ್ಷಗಳು ಇಳಿಮುಖವನ್ನು ಕಂಡವು. ಚೀನಾದೇಶದ ಬೌದ್ಧ ಯಾತ್ರಿಕನಾದ ಫಾಹಿಯಾನನ್ನು 401 ರಿಂದ 410ರ ತನಕ ಭಾರತದಲ್ಲಿ ಯಾತ್ರೆ ಮಾಡಿದನು. 550ರ ವೇಳೆಗೆ ಗುಪ್ತರ ಮನೆತನ ಅಳಿಯಿತು.

ಮುಂದೆ ಬಿಹಾರದಲ್ಲಿ ಸಾಮಂತರ ಪ್ರಾಬಲ್ಯ ಹೆಚ್ಚಿತು. ಮೊದಲು ಮೌಖರಿ ಮನೆತನದ ಯಜ್ಞವರ್ಮ, ಶಾರ್ದೂಲವರ್ಮ ಮತ್ತು ಅನಂತವರ್ಮರು ಗಯೆಯ ಸುತ್ತಲಿನ ಪ್ರದೇಶದಲ್ಲಿ ಆಳಿದರು. ಇವರ ಉತ್ತರಾಧಿಕಾರಿಗಳಾಗಿ ಗುಪ್ತವಂಶದ ಕಿರಿಯ ಶಾಖೆಯ ಅನಂತರದ ಗುಪ್ತರು ಅಧಿಕಾರಕ್ಕೆ ಬಂದರು. ಹೂಣರ ಮಿಹಿರ ಕುಲನನ್ನು ಪಾಟಲೀಪುತ್ರದ ಮುತ್ತಿಗೆಯಲ್ಲಿ ಎದುರಿಸಿದವರಲ್ಲಿ ಈ ಶಾಖೆಯ ಕೃಷ್ಣಗುಪ್ತ ಹರ್ಷಗುಪ್ತರು ಗಮನಾರ್ಹರು. ಕೃಷ್ಣಗುಪ್ತನ ಮಗಳಾದ ರಾಜ್ಯಶ್ರೀಯನ್ನು ಮೌಖರಿ ಆದಿತ್ಯವರ್ಮ ಲಗ್ನವಾಗಿದ್ದ. ಆದರೆ ಮುಂದೆ ತಮ್ಮ ಆಕಾಂಕ್ಷೆಗಳು ತೀವ್ರವಾದಾಗ ಎರಡು ವಂಶಸ್ಥರೂ ಶತ್ರುಗಳಾದರು. ಕುಮಾರಗುಪ್ತ ಮತ್ತು ಈಶಾನ್ಯವರ್ಮರ ನಡುವೆ ತೀವ್ರ ಹೋರಾಟಗಳಾದವು. ಮಹಾಸೇನಗುಪ್ತನ ಕಾಲದಲ್ಲಿ ಮೌಖರಿ ಶರ್ಮವರ್ಮ ಅವನನ್ನು ಸೋಲಿಸಿ ಮಾಲವಕ್ಕೆ ಅಟ್ಟಿದ (ಸುಮಾರು 580). ಈಗ ಮಗಧ ಮೌಖರಿವಂಶದವರಿಗೆ ಸೇರಿತು. ಕನೂಜ್ ಇವರ ರಾಜಧಾನಿಯಾಯಿತು. ಆದರೆ ಗೃಹವರ್ಮ ದಾಯಾದಿ ಕಲಹಗಳಲ್ಲಿ ತೊಡಗಿದ. ಮಗಧದ ಬಲ ಕ್ಷೀಣಿಸಿ ಪೂರ್ವದ ನೆರೆಯಲ್ಲಿದ್ದ ಗೌಡರ ಶಶಾಂಕ ಮಗಧವನ್ನು ಗೆದ್ದುಕೊಂಡ (600). ಬಿಹಾರವಲ್ಲದೆ ಬಂಗಾಲ ಮತ್ತು ಉತ್ಕಲಗಳ ಮೇಲೂ ಅಧಿಪತ್ಯ ಸ್ಥಾಪಿಸಿದ್ದ ಶಶಾಂಕನಿಗೆ ಥಾನೇಶ್ವರದ ಹರ್ಷ ಪ್ರತಿಸ್ಪರ್ಧಿಯಾದ. ಈತನ ಹಿರಿಯ ಸೋದರನಾದ ಪ್ರಭಾಕರವರ್ಧನನ ಮಗಳಾದ ರಾಜಶ್ರೀಯನ್ನು ಗೃಹವರ್ಮನಿಗೆ ಮದುವೆ ಮಾಡಿ ಕೊಡುವುದರ ಮೂಲಕ ಶಶಾಂಕನನ್ನು ಸೋಲಿಸಲು ಅವನ ಸ್ನೇಹ ಸಂಪಾದಿಸಿದ. ಆದರೂ ಶಶಾಂಕ ಬದುಕಿದ್ದ ತನಕ (625) ಹರ್ಷವರ್ಧನಿಗೆ ಆತನನ್ನು ಸೋಲಿಸಲು ಆಗಲಿಲ್ಲ. ಆ ಬಳಿಕ ಮಗಧ ಮೌಖರಿ ಮನೆತನದ ಪೂರ್ಣವರ್ಮನ ಅಧೀನಕ್ಕೆ ಬಂದಿತು. ಆದರೆ ಪೂರ್ಣವರ್ಮ ಮರಣ ಹೊಂದಿದ ಮೇಲೆ ಮಗಧ ಹರ್ಷನದಾಯಿತು. ಪೂರ್ಣವರ್ಮ ಬೌದ್ಧಧರ್ಮಕ್ಕೆ ಪ್ರೋತ್ಸಾಹ ನೀಡಿದ. ಬುದ್ಧಗಯೆಯಲ್ಲಿ ಬೋಧಿ ವೃಕ್ಷವನ್ನು ಉಜ್ಜೀವನಗೊಳಿಸಿ ಸುಮಾರು 3 ಮೀಟರ್ ಎತ್ತರದ ಕಟಾಂಜನ ಕಟ್ಟಿಸಿದ. ಹರ್ಷನಾಲಂದಾದಲ್ಲಿ ವಿಹಾರ ಕಟ್ಟಿಸಿದ. ಕೆಲವರ್ಷಗಳ ಬಳಿಕ ಮಗಧರಾಜ್ಯವನ್ನು ತನ್ನ ವಿಧೇಯ ಮಿತ್ರನಾಗಿದ್ದ ವೈಶಾಲಿಯ ಮಾಧವಗುಪ್ತನಿಗೆ ಬಿಟ್ಟುಕೊಟ್ಟ. ಮುಂದೆ ಮಾಧವ ಗುಪ್ತನ ವಂಶಜರಾದ ಅಧಿತ್ಯಸೇನ, ದೇವಗುಪ್ತ ಮತ್ತು ಜೀವಿತಗುಪ್ತ (2) ಅನುಕ್ರಮವಾಗಿ ಆಳಿದರು. 725ರ ಬಳಿಕ ಕನೂಜಿನ ಯಶೋವರ್ಮ ಮಗಧವನ್ನು ಆಕ್ರಮಿಸಿದ. ಈತನನ್ನು ಕಾಶ್ಮೀರದ ಲಲಿತಾದಿತ್ಯ ಮುಕ್ತಾಪೀಡ ಸೋಲಿಸಿದ. ಹೀಗೆ ಬಿಹಾರಿನ ರಾಜಕೀಯದಲ್ಲಿ ಅವ್ಯವಸ್ಥೆ ಉಂಟಾಗಿ ಪಾಲ ಮನೆತನದ ಗೋಪಾಲ 755ರ ಸುಮಾರಿಗೆ ಅವರ ನೆರವಿಗೆ ಬರುವ ತನಕವೂ ಮುಂದುವರಿಯಿತು.

ಗೋಪಾಲ ಒದಂತಪುರ ವಿಹಾರವನ್ನು (ಈಗಿನ ಬಿಹಾರ ಷರೀಫ್) ನೆಲೆಗೊಳಿಸಿದ. ಈತನ ಮಗ ಧರ್ಮಪಾಲ ಉತ್ತರ ಭಾರತವನ್ನೆಲ್ಲಾ ಅಧೀನಕ್ಕೆ ತಂದುಕೊಳ್ಳುವ ವೇಳೆಗೆ ಖ್ಯಾತಿ ಪಡೆದಿದ್ದ. ಕನೂಜನ್ನು ತನ್ನದಾಗಿಸಿಕೊಳ್ಳುವ ಬಯಕೆ ಹೊಂದಿದ್ದನಾದರೂ ಅವನಿಗೆ ಮಾಲವದ ಗೂರ್ಜರ ಪ್ರತೀಹಾರ ಮನೆತನದ ವತ್ಸರಾಜ ಮತ್ತು ನಾಗಭಟರು ಪ್ರತಿಸ್ಪರ್ಧಿಗಳಾದರು. ಇವರಿಬ್ಬರ ನಡುವೆ ರಾಷ್ಟ್ರಕೂಟರ ಧ್ರುವ ಮತ್ತು ಮುಮ್ಮುಡಿ ಗೋವಿಂದರು ತಲೆಹಾಕಿ ಇಬ್ಬರನ್ನೂ ಸೋಲಿಸಿದರು. ರಾಷ್ಟ್ರಕೂಟರಿಗೆ ಕನೂಜನ್ನು ಆಕ್ರಮಿಸಿಕೊಳ್ಳುವ ಉದ್ದೇಶವಿರಲಿಲ್ಲವಾದ ಕಾರಣ ಅವರು ಕಣ್ಮರೆಯಾದ ಕೂಡಲೇ ಈ ಇಬ್ಬರೂ ಕಾದುತ್ತಿದ್ದರು. ಸೋಲು ಗೆಲುವುಗಳ ಕಣ್ಣುಮುಚ್ಚಾಲೆಯಲ್ಲಿ ನಾಲ್ಕಾರು ದಶಕಗಳೇ ಕಳೆದುವು. ಧರ್ಮಪಾಲನ ಮಗ ದೇವಪಾಲನೂ ಖ್ಯಾತಿವೆತ್ತವನೇ. ಈ ಮಧ್ಯೆ ಇತರತ್ರ ಪಟ್ಟಕ್ಕೆ ಬಂದು ರಾಜ್ಯ ವಿಸ್ತರಿಸಿದ. 858ರಲ್ಲಿ ದೇವಪಾಲನು ಅಸುನೀಗಿದ. ಆ ಬಳಿಕ ಅಂತಃಕಲಹಗಳು ಏರ್ಪಟ್ಟು, ನಾರಾಯಣಪಾಲನ ಕಾಲದಲ್ಲಿ ಮತ್ತೊಮ್ಮೆ ಪಾಲ ಅರಸರು ಬಿಹಾರದ ಮೇಲಿನ ತಮ್ಮ ಹಿಡಿತವನ್ನು ಬಿಗಿಗೊಳಿಸಿದರು. ಪ್ರತೀಹಾರ ಮಹೇಂದ್ರಪಾಲ ನಾರಾಯಣಪಾಲನನ್ನು ಸೋಲಿಸಿದನಾದರೂ ಸುಮಾರು 910ರಲ್ಲಿ ಆತ ದಿವಂಗತನಾದ ಬಳಿಕ ನಾರಾಯಣಪಾಲ ಮಗಧವನ್ನು ಮತ್ತೊಮ್ಮೆ ಗೆದ್ದುಕೊಂಡ. ಈತನ ಮಗ ರಾಜ್ಯಪಾಲ 950ರ ತನಕವೂ ಆ ಬಳಿಕ ಇಮ್ಮಡಿ ಗೋಪಾಲ 970ರ ತನಕವೂ ಆಳಿದರು. ಇವರ ಶಾಸನಗಳು ಗಯಾ, ನಾಲಂದಾಗಳಲ್ಲಿ ದೊರೆತಿವೆ. ನಯಪಾಲನ (1030-45) ಕಾಲದಲ್ಲಿ ಕಲಚುರಿಗಳೊಡನೆ ತೀವ್ರ ಕದನಗಳಾದ ಕಾರಣ ಮಗಧದ ಮೇಲಿನ ಈತನ ಹಿಡಿತ ಸಡಿಲವಾಯಿತು. ವಿಗ್ರಹಪಾಲನ (3 1045-71) ಕಾಲದಲ್ಲಿ ಚಾಲುಕ್ಯ ಆರ್ವಡಿ ವಿಕ್ರಮಾದಿತ್ಯ ಈ ಪ್ರದೇಶವನ್ನು ಮುತ್ತಿದನೆಂದು ಹೇಳಿದೆ. ಆಗ ಆತನೊಡನೆ ಬಂದ ಕರ್ನಾಟಕದ ಕೆಲವು ಸೈನಿಕರು ಮಿಥಿಲೆಯಲ್ಲಿ ನೆಲೆ ನಿಂತು ತದನಂತರ ಅಲ್ಲಿ ಕರ್ನಾಟಕ ವಂಶ ಅಸ್ತಿತ್ವಕ್ಕೆ ಬರಲು ಕಾರಣರಾದರು. ಇಮ್ಮಡಿ ಮಹೀಪಾಲನ ಆಳ್ವಿಕೆಯಲ್ಲಿ ಸಾಮಂತರು ದಂಗೆ ಎದ್ದು ಕೈವರ್ತ ದಿವ್ಯ ಮತ್ತು ಭೀಮರು ಮಹೀಪಾಲನನ್ನು ಕೊಂದರು. ಬೊಕ್ಕೋರ ವಂಶದ ದೇವರಕ್ಷಿತನನ್ನು ಶಾಸನಗಳಲ್ಲಿ ಮಗಧನಾಥ ಎಂದು ಕರೆದಿದೆ. ರಾಷ್ಟ್ರಕೂಟಮಥನ ಅಂಗ ದೇಶದಲ್ಲಿ ಆಳಿದ. ಗಾಹಡವಾಲ ವಂಶಸ್ಥರು ಕಾಶಿಯ ಸುತ್ತಲಿನ ಪ್ರದೇಶದಲ್ಲಿ ಪ್ರಬಲರಾದರು. 1097ರಲ್ಲಿ ಕರ್ನಾಟವಂಶದ ನಾನ್ಯದೇವ ಮಿಥಿಲೆಯಲ್ಲಿ ರಾಜ್ಯವಾಳಲು ಆರಂಭಿಸಿದಾಗ ಉತ್ತರದ ಬಿಹಾರ (ತೀರಭುಕ್ತಿ) ಹಾಗೂ ದಕ್ಷಿಣದ ಬಿಹಾರ (ಮಗಧ ಮತ್ತು ಅಂಗ) ಗಳೆಂದು ಬಿಹಾರ ಒಡೆಯಿತು. ದಕ್ಷಿಣದಲ್ಲಿ ಪಾಲರು ರಾಮಪಾಲ, ಕುಮಾರಪಾಲ, 3ನೆಯ ಗೋಪಾಲ ಇವರು ಆಳಿದರು. ಮದನಪಾಲನ (1120-46) ಕಾಲದಲ್ಲಿ ಗಾಹಡವಾಲ ಗೋವಿಂದಚಂದ್ರನು ಪಟ್ನಾ ಮೋಂಘಿರ್ ಜಿಲ್ಲೆಗಳನ್ನು ತನ್ನದಾಗಿಸಿಕೊಂಡಿದ್ದ.

ಸೇನಮನೆತನದ ವಿಜಯಸೇನ ಗೌಡ ಮದನಪಾಲನನ್ನು ಸೋಲಿಸಿ ಪೂರ್ವ ಮತ್ತು ದಕ್ಷಿಣ ಬಂಗಾಲವನ್ನು ವಶಪಡಿಸಿಕೊಂಡ. ಆನಂತರದ ಅವ್ಯವಸ್ಥಿತ ಪರಿಸ್ಥಿತಿಗಳಲ್ಲಿ ಗಾಹಡವಾಲರು ಷಹಾಬಾದ್ ಮತ್ತು ಗಯಾ ಪ್ರದೇಶಗಳನ್ನೂ ಆಕ್ರಮಿಸಿದರು. ಆದರೆ ಲಕ್ಷ್ಮಣಸೇನ ಅಲಹಾಬಾದ್ ಕಾಶಿಗಳನ್ನು ಕಸಿದಂತೆ ತೋರುತ್ತದೆ. ಭಕ್ತಿಯಾರ್ ಖಲ್ಜಿ ದಕ್ಷಿಣ ಬಿಹಾರವನ್ನು ಮುತ್ತಿದಾಗ ಹಿಂದೂಗಳ ಪ್ರಾಬಲ್ಯ ಕಡಿಮೆಯಾಯಿತು. ಉತ್ತರ ಬಿಹಾರದ ತೀರಭುಕ್ತಿಯಲ್ಲಿ ಕರ್ನಾಟರು 1097ರಿಂದ ಆಳಿದರು. ಚಂಪಾರಣ್ (ಈಗಿನ ಸಿಮರಾವ್) ನಾನ್ಯದೇವನ ರಾಜಧಾನಿಯಾಗಿತ್ತು. ಈತನ ಬಳಿಕ (1147) ಇವರ ರಾಜ್ಯ ಇಬ್ಭಾಗವಾಗಿ ನೇಪಾಲದಲ್ಲಿ ಒಬ್ಬ ಆಳತೊಡಗಿದ. ನರಸಿಂಹದೇವ ಭಕ್ತಿಯಾರ್ ಖಲ್ಜಿಯ ಧಾಳಿಗೆ ಸಿಕ್ಕಿದ. ಕ್ರಮೇಣ ಇಲ್ಲೆಲ್ಲ ಮಹಮ್ಮದೀಯರ ಆಳ್ವಿಕೆ ಆರಂಭವಾಯಿತು.

ಖಲ್ಜಿ ಮೊದಲು ದೆಹಲಿಯ ಗುಲಾಮಿಸಂತತಿಯ ಸುಲ್ತಾನರ ಆಶ್ರಯ ಬಯಸಿ ವಿಫಲನಾದಾಗ ಔಧ್ ಪ್ರಾಂತಾಧಿಕಾರಿಯ 1197ರಲ್ಲಿ ಮಿರ್ಜಾಪುರದ ಒಂದು ಜಹಗೀರನ್ನಿತ್ತ. ಖಲ್ಜಿ ಬಿಹಾರದ ಮೇಲೆ ಮತ್ತೆ ಮತ್ತೆ ಧಾಳಿ ಮಾಡಿ 1199ರಲ್ಲಿ ಹಿಸಾರ್-ಇ-ಬಿಹಾರನ್ನು ಗೆದ್ದುಕೊಂಡು ಕ್ರಮೇಣ ದಕ್ಷಿಣ ಬಿಹಾರ, ಮಿಥಿಲಾಗಳನ್ನೂ ಗೆದ್ದುಕೊಂಡ. ಇವರು ಟಿಬೆಟನ್ನು ಮುತ್ತಿದನಾದರೂ ಯಶಸ್ವಿಯಾಗಲಿಲ್ಲ. 1206ರಲ್ಲಿ ಈತ ದೇವಕೋಟೆಯಲ್ಲಿ ಮೃತನಾದ. 1216ರಲ್ಲಿ ಮಲಿಕ್ ಹುಸಾಮುದ್ದೀನ ಇವಾಜನು ಸುಲ್ತಾನ್ ಘಿಯಾಸುದ್ದೀನ್ ಎಂಬ ಬಿರುದಿನಿಂದ ಬಿಹಾರದಲ್ಲಿ ಸ್ವತಂತ್ರನಾದ ಸುಲ್ತಾನನೆಂದು ಘೋಷಿಸಿಕೊಂಡ. 1225ರಲ್ಲಿ ದೆಹಲಿ ಸುಲ್ತಾನ ಇಲ್ತಮಷ್ ಇವರ ವಿರುದ್ಧ ಸೈನ್ಯಾಚರಣೆ ಕೈಗೊಂಡು ಕಪ್ಪ ಸಲ್ಲಿಸಿ ಸಾಮಂತನಾಗಿರಲು ಒಪ್ಪುವಂತೆ ಮಾಡಿದ. ಇವಾಜನಿಗೆ ಹಲವಾರು ಪ್ರತಿಸ್ಪರ್ಧಿಗಳು ಹುಟ್ಟಿಕೊಂಡರು. ಅದರೊಡನೆ ಕಾದುವಾಗ 1227ರಲ್ಲಿ ಸೋತು ಕೊಲ್ಲಲ್ಪಟ್ಟ. ದೆಹಲಿಯ ನಾಸಿರುದ್ದೀನನ್ನು ಔಧ್, ಬಿಹಾರ, ಬಂಗಾಲಗಳನ್ನೊಟ್ಟುಗೂಡಿಸಿ ಪ್ರಾಂತ ರಚಿಸಿ ಲಖನೌತಿಯನ್ನು ಅದರ ರಾಜಧಾನಿಯಾಗಿ ಹೆಸರಿಸಿದ. ಈ ಪ್ರಾಂತಗಳ ಅಧಿಪತಿಗಳಲ್ಲಿ ತುಘ್ರಿಲ್ ತುಘಾನ್ (1232-44) ಪ್ರಮುಖ. ತುಘಲಕ್ ಮನೆತನದ ಘಿಚಿiÀiÁಸುದ್ದೀನ್ 1324-25ರಲ್ಲಿ ಬಂಗಾಲದ ವಿರುದ್ಧ ನಡೆದಾಗ ಉತ್ತರ ಬಿಹಾರದ ತಿರ್ಹತ್ತನ್ನು ನೃಸಿಂಹದೇವನಿಂದ ಗೆದ್ದುಕೊಂಡ. ಅಲ್ಲಿ ಒಂದು ಟಂಕಸಾಲೆ ಸ್ಥಾಪಿಸಿದ (ತಿರ್ಹತ್ ತುಘಲಕಾಬಾದ್). ದಕ್ಷಿಣ ಬಿಹಾರ ಪ್ರಾಂತಾಧಿಕಾರಿಗಳ ಆಡಳಿತದಲ್ಲಿಯೇ ಇದ್ದಿತು. ಫಿರೂಜ್ ತುಘಲಕ ಬಿಹಾರದಲ್ಲಿ ಜನಪ್ರಿಯ ಸುಲ್ತಾನನಾಗಿದ್ದ. ಮಹಮ್ಮದ್ ತುಘಲಕನ ಕಾಲದಲ್ಲಿ ಜೌನ್‍ಪುರದ ಷಾರ್ಕಿ ಮನೆತನದ ಸುಲ್ತಾನರು ಬಿಹಾರವನ್ನು ಆಳಿದರು (1374-1495). ಇವರು ಸ್ವಲ್ಪ ಮಟ್ಟಿಗೆ ಸ್ವತಂತ್ರವಾಗಿದ್ದುದನ್ನು ದೆಹಲಿಯ ಸುಲ್ತಾನರರು ಸಹಿಸಲಿಲ್ಲ. ಲೋದಿ ಮನೆತನದ ಸುಲ್ತಾನರು 1495ರಲ್ಲಿ ಬಿಹಾರವನ್ನು ದೆಹಲಿಯ ಪ್ರಾಂತವಾಗಿ ಸೇರಿಸಿಕೊಂಡರು. ಮುಗಲರ ಆಳ್ವಿಕೆಯೊಡನೆ ಬಿಹಾರದ ಇತಿಹಾಸದಲ್ಲಿ ಹೊಸದೊಂದು ಘಟ್ಟ ಆರಂಭವಾಯಿತು. ಅಕ್ಬರ ಇದನ್ನೊಂದು ಆಡಳಿತ ವಿಭಾಗವಾಗಿ ರೂಪಿಸಿದಾಗಿನಿಂದ (1575-76) ಔರಂಗಜೇಬ ಸಾಯುವತನಕ (1707) ಬಿಹಾರದಲ್ಲಿ ಶಾಂತಿ ನೆಲೆಸಿತ್ತು. ಆಫ್‍ಘನರ ಷೇರ್‍ಷಹನು ಮುಗಲರನ್ನು ಕೆಲಕಾಲ ಹಿಂದೂಡಿದ್ದಾಗ ಬಿಹಾರದಲ್ಲಿ ಉತ್ತಮವಾದ ಆಡಳಿತಕ್ಕೆ ತಳಹದಿ ಹಾಕಿದ. ನ್ಯಾಯಪರಿಪಾಲನೆ, ಕ್ರಮಬದ್ಧ ಕಂದಾಯಗಳ ಮಸೂಲಿಗಳಿಂದ ಪ್ರಜೆಗಳು ನೆಮ್ಮದಿ ಕಂಡರು. ಷೇರ್‍ಷಹ ಮತ್ತು ಆತನ ಮಗ ಇಸ್ಲಾಮ್ ಷಹರು ಹಲವಾರು ಸಾರ್ಮಜನಿಕ ಉಪಯೋಗ ಯೋಜನೆ ಕೈಗೊಂಡರು. ಸಸಾರಾಮಿನಲ್ಲಿರುವ ಅವರಿಬ್ಬರ ಸಮಾಧಿ ಕಟ್ಟಡಗಳು ವಾಸ್ತು ಶೈಲಿಯ ಉತ್ತಮ ನಿದರ್ಶನಗಳು. ಮುಗಲರ ಕಾಲದಲ್ಲಿ ಬಿಹಾರ ಮುಗಲ್ ಸಾಮ್ರಾಜ್ಯದ ಒಂದು ಸುಬಾ ಆಗಿ ರೂಪುಗೊಂಡಿತು. ಆಗಿಂದಾಗ್ಗೆ ಪ್ರಾಂತಾಧಿಕಾರಿಗಳು ಚಕ್ರವರ್ತಿಗಳಿಂದ ನೇಮಕಗೊಳ್ಳುತ್ತಿದ್ದರು. ಸೈಫ್‍ಖಾನ್ (ಮಿರ್ಜಾಸಫೀ) ನಂಥ ಅಧಿಕಾರಿಗಳು (1628-32) ಪ್ರಜಾನುರಾಗಿಗಳಾಗಿ ಆಡಳಿತ ನಡೆಸಿದರು. 1707ರ ಬಳಿಕ ಮತ್ತೆ ಅನಿಶ್ಚಿತ ವಾತಾವರಣ ಏರ್ಪಟ್ಟಿತು. ಅನಂತರದ ಮುಗಲರ ಆದಕ್ಷತೆ, ಅಂತಃಕಲಹಗಳ ಪರಿಣಾಮವಾಗಿ ಆಡಳಿತದಲ್ಲಿ ಬಿಗಿತಪ್ಪಿತು. ಆಗ ಪ್ರಾಂತಧಿಕಾರಿಗಳಾಗಿದ್ದವರಲ್ಲಿ ಹುಸೇನ್ ಆಲಿಖಾನ್‍ನ (1507-12) ಆಡಳಿತದ ಕೊನೆಯ ಭಾಗದಲ್ಲಿ ರಾಜಕುಮಾರನಾದ ಫರುಕ್ ಸಿಯರ್ ಬಿಹಾರಕ್ಕೆ ಬಂದು ಖಲ್ಸ ಭೂಮಿಗಳನ್ನು ವಶಪಡಿಸಿಕೊಂಡು ಆಕ್ರಮವಾದ ತೆರಿಗೆ ಸುಂಕಗಳನ್ನು ಪ್ರಜೆಗಳಿಂದ ಸೆಳೆದ. 1740ರಿಂದ 48ರ ತನಕ ಸಿರಾಜುದೌಲ ಉಪಪ್ರಾಂತಾಧಿಕಾರಿಯಾಗಿ ಅಲಿವರ್ದಿಖಾನನ ಪ್ರತಿನಿಧಿಯಾಗಿ ಬಿಹಾರದಲ್ಲಿ ಆಡಳಿತ ನಡೆಸಿದ. 1752ರಿಂದ ಹನ್ನೆರಡು ವರ್ಷಗಳ ಕಾಲ ರಾಜರಾಮ ನಾರಾಯಣ ಈ ಅಧಿಕಾರದಲ್ಲಿದ್ದ. ಈತ ಪಂಡಿತನೂ ಪರ್ಷಿಯನ್ ಭಾಷೆಯ ಕವಿಯೂ ಆಗಿದ್ದ. 1757ರಲ್ಲಿ ನಡೆದ ಪ್ಲಾಸಿ ಕದನ ಪರಿಣಾಮವಾಗಿ ಬ್ರಿಟಿಷರು ಈ ಪ್ರದೇಶದ ಆಡಳಿತದಲ್ಲಿ ನೇರವಾಗಿ ತಲೆಹಾಕಿದರು. ರಾಮನಾರಾಯಣ ಮೀರ್‍ಜಾಫರ್ ಮತ್ತು ಮೀರ್ ಕಾಸಿಮರ ನಡುವಣ ಕಲಹಗಳಲ್ಲಿ ತೊಂದರೆಗಳಿಗೀಡಾದ. ರಾಬರ್ಟ್ ಕ್ಲೈವನ ನೆರವಿದ್ದ ತನಕ ಈತ ಅಧಿಕಾರದಲ್ಲಿ ಮುಂದುವರೆದಿದ್ದ. ಆದರೆ ಆ ಬಳಿಕ ಮೀರ್‍ಕಾಸಿಮ್ ಇವನನ್ನು ಸೆರೆಹಿಡಿದು 1763ರಲ್ಲಿ ಈತನ ಅನುಯಾಯಿಗಳೊಡನೆ ಕೊಲ್ಲಿಸಿದ. ಪಟ್ನಾದಲ್ಲಿ ಪ್ರಾಂತಾಧಿಕಾರಿಯಾಗಿದ್ದ ಮೀರ್‍ಕಾಸಿಮ್ ಬ್ರಿಟಿಷರೊಡನೆ ಸೆಣಸಬೇಕಾಯಿತು. ಅಂತಿಮವಾಗಿ 1777 ರಲ್ಲಿ ಈತ ಸತ್ಯ. ಆಗ ನಡೆದ ಬಕ್ಸರ್ ಕದನದಲ್ಲಿ ಔಧ ನವಾಬ ದೆಹಲಿಯ ಮುಗಲರು ಸಂಪೂರ್ಣವಾಗಿ ಸೋತು ಬಂಗಾಲ, ಬಿಹಾರ, ಒರಿಸ್ಸಾಗಳು ಈಸ್ಟ್ ಇಂಡಿಯಾ ಕಂಪನಿಗೆ ಸೇರಿದುವು.

1781ರ ತನಕ ರೆವಿನ್ಯೂ ಕೌನ್ಸಿಲಿನ ಆಡಳಿತಕ್ಕೊಳಪಟ್ಟ ಬಿಹಾರ, ಅನಂತರ ಷಿತಬ್‍ರಾಯನ ಮಗನಾದ ಕಲ್ಯಾಣಸಿಂಹನ ಆಡಳಿತಕ್ಕೆ ಬಂದಿತು. ಆದರೆ ನಿಗದಿಗೊಳಿಸಿದ ಭೂಕಂದಾಯವನ್ನು ವಸೂಲು ಮಾಡಲಿಲ್ಲವೆಂಬ ಕಾರಣದಿಂದ ಕಲ್ಯಾಣಸಿಂಹನ ಅಧಿಕಾರವನ್ನು ಕ್ರಮೇಣ ಮೊಟಕುಗೊಳಿಸಲಾಯಿತು. ಈಸ್ಟ್ ಇಂಡಿಯಾ ಕಂಪೆನಿಯ ಅಧಿಕಾರ ಧಿಕ್ಕರಿಸಿದ ಹಲವು ಶಕ್ತಿಗಳನ್ನು ವಾರನ್ ಹೇಸ್ಟಿಂಗ್ಸ್ ನಿವಾರಿಸಿದ. ರಾಜಮಹಲ್‍ನ ಗುಡ್ಡಗಾಡಿನ ಜನರನ್ನು ಹುರಿದುಂಬಿಸಿದ ಲಕ್ಷ್ಮೀಪುರದ ಜಗನ್ನಾಥದೇವನ ದಂಗೆ ಅಡಗಿಸಲು ಬ್ರಿಟಿಷರು ಶ್ರಮಿಸಬೇಕಾಯಿತು. ಸನ್ಯಾಸಿ ದಂಗೆ ಎಂಬುದೊಂದು ಬ್ರಿಟಿಷರ ವಿರುದ್ಧ ನಡೆದ ಇಂಥ ಕಾರ್ಯಾಚರಣೆ. 18ನೆಯ ಶತಮಾನದ ಕೊನೆಯ ದಶಕದಲ್ಲಿ ಇದೂ ಅಡಗಿತು. ಬಂಗಾಲ, ಬಿಹಾರಗಳಲ್ಲಿ ಕೋಠಿಗಳನ್ನು ಕಟ್ಟಿಕೊಂಡು ನೆಲಸಿದ್ದ ಫ್ರೆಂಚರು, ಡಚ್ಚರು ಸಹ ಕ್ರಮೇಣ ಕಾಲ್ತೆಗೆದರು. ಡಚ್ಚರು 1824-25ರಲ್ಲಿ ತಮ್ಮ ಆಸ್ತಿಗಳನ್ನು ಬ್ರಿಟಿಷರಿಗೆ ಮಾರಿದರು. 19ನೆಯ ಶತಮಾನದ ಆರಂಭ ದಶಕದಲ್ಲಿ ಬ್ರಿಟಿಷರು ಮರಾಠರ ಮತ್ತು ಪಿಂಡಾರಿಗಳ ಧಾಳಿ ಎದುರಿಸಬೇಕಾಯಿತು. ರಾಜಮಹಲಿನ ಗುಡ್ಡಗಾಡಿನ ಜನರು, ನೆರೆಯ ಸಂತಾಲರು ಬ್ರಿಟಿಷರ ಆಡಳಿತಕ್ಕೊಳಪಟ್ಟರೂ ಬ್ರಿಟಿಷ್ ಅಧಿಕಾರಿಗಳ ಹಾಗೂ ಅವರ ಅಧೀನದಲ್ಲಿದ್ದ ಜಮಿನ್ದಾರರು, ಗುಮಾಸ್ತರು, ಮಹಾಜನರು ಮುಂತಾದವರಿಂದ ಸುಲಿಗೆಗಳಿಗೊಳಗಾಗಿ ಆರ್ಥಿಕ ತೊಂದರೆಗಳಿಂದ ಬೇಸತ್ತು 1855ರಲ್ಲಿ ದಂಗೆ ಎದ್ದರು. ದಂಗೆಯನ್ನು ಅಡಗಿಸಿದರೂ ಅದರ ಪರಿಣಾಮವಾಗಿ 1855ರಿಂದ ಸಂತಾಲ ಪರಗಣ ಎಂಬ ಆಡಳಿತ ವಿಭಾಗ ಅಸ್ತಿತ್ವಕ್ಕೆ ಬಂದಿತು. ಭಾಗಲ್ಪುರದ ಕಮಿಷನರ ಅಧೀನದ ಈ ಪರಗಣವನ್ನು ಅದು ಆರು ಉಪಭಾಗಗಳಾಗಿ ವಿಂಗಡಿಸಿ ಡುಮ್ಕದಲ್ಲಿ ಒಬ್ಬ ಡೆಪ್ಯುಟಿ ಕಮಿಷನರ್ ಮತ್ತು ಐವರು ಉಪಕಮಿಷನರುಗಳನ್ನು ನೇಮಿಸಲಾಯಿತು. ಇಲ್ಲಿಯೂ ಇತರ ಕಡೆಗಳಲ್ಲಿಯೂ ಸಣ್ಣಪುಟ್ಟ ರಾಜರು, ಜಮೀನ್ದಾರರು ಆಗಾಗ ಕಿರುಕುಳ ಉಂಟುಮಾಡುತ್ತಿದ್ದರು. ಛೋಟಾನಾಗಾಪುರದ ರಾಜ, ಅಲ್ಲಿಯ ಆದಿವಾಸಿಗಳು, ರಾಮಘಡದ ರಾಜ, ಖಲಿಯ ಫಲದ ಜನಗೀರ್ ದಾರ, ಸಿಂಘಭೂಮಿಯ ಹೋಗಳು, ಕೋಲರು ಮುಂತಾದವರು. ಇವೆಲ್ಲದರ ಪರಿಣಾಮವಾಗಿ ಹೆಚ್ಚು ವ್ಯವಸ್ಥಿತ ಆಡಳಿತ ಬದಲಾವಣೆಗಳಾದುವು. ಪುರುಟಿಯವನ್ನು ಕೇಂದ್ರ ಸ್ಥಳವಾಗಿ ಪಡೆದಿದ್ದ ಮಾನ್ ಭುಮ್ ಜಿಲ್ಲೆ (1837) ತಲೆ ಎತ್ತಿತು. 1956ರಲ್ಲಿ ಇದು ಪಶ್ಚಿಮ ಬಂಗಾಲಕ್ಕೆ ಸೇರಿತು. 1854ರಲ್ಲಿ ಛೋಟಾನಾಗಪುರದ ವಿಭಾಗವನ್ನು ರಚಿಸಲಾಯಿತು. ಸ್ವಾತಂತ್ರ್ಯ ಸಂಗ್ರಾಮದ (1857) ಬಳಿಕ ನೇರವಾಗಿ ಬ್ರಿಟಿಷರ ಆಡಳಿತಕ್ಕೆ ಸೇರಿದ ಬಿಹಾರದಲ್ಲಿ ಹಲವಾರು ಆಡಳಿತ ಬದಲಾವಣೆಗಳೂ ಉಂಟಾದುವು. ಬಂಗಾಲ ಒರಿಸ್ಸಾ, ಅಸ್ಸಾಮುಗಳೊಡನೆ ಬಿಹಾರವೂ ಸೇರಿ ಒಬ್ಬ ಲೆಫ್ಟಿನೆಂಟ್ ಗವರ್ನರನ ಆಡಳಿತ ವಿಭಾಗ ಏರ್ಪಟ್ಟಿತು. 1874ರಲ್ಲಿ ಅಸ್ಸಾಮ್ ಪ್ರತ್ಯೇಕ ಪ್ರಾಂತವಾಗಿ ವಿಂಗಡವಾಯಿತಾದರೂ 1905ರ ತನಕ ಬಿಹಾರ ಇನ್ನಿತರ ಎರಡು ಭಾಗಗಳೊಡನೆ ಸೇರಿತ್ತು. ಕರ್ಜನನ ಬಂಗಾಲದ ವಿಭಜನೆಯಿಂದ (1905) ಆಡಳಿತ ಸಮಸ್ಯೆಗಳುಂಟಾಗಿ, ಅನಂತರ (1912) ಬಿಹಾರ, ಒರಿಸ್ಸಾಗಳು ಸೇರಿದಂತೆ ಒಂದು ಪ್ರತ್ಯೇಕ ಪ್ರಾಂತ ರೂಪುಗೊಂಡಿತು. 1935ರಲ್ಲಿ ಈ ಹೊಸ ಪ್ರಾಂತ ಮತ್ತೆ ಒಡೆದು ಬಿಹಾರ ಪ್ರತ್ಯೇಕ ಪ್ರಾಂತವಾಯಿತು.

ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೂ ಪೂರ್ವದಲ್ಲಿಯೇ ಬಿಹಾರದಲ್ಲಿ ಬ್ರಿಟಿಷರ ವಿರುದ್ಧ ದಂಗೆಗಳಾಗಿದ್ದುವು. 1857ರಲ್ಲಿ ಜಗದೀಶಪುರದ ಕುನ್ವರ್ ಸಿಂಹನ ನೇತೃತ್ವದಲ್ಲಿ ಬ್ರಿಟಿಷರ ವಿರುದ್ಧ ನಡೆದ ದಂಗೆ ಹೆಸರುವಾಸಿಯಾಗಿದೆ. ದೀನಪುರ, ಆರಾಗಳನ್ನು ಇವನ ಸೈನ್ಯ ಆಕ್ರಮಿಸಿತ್ತು. ಆದರೆ ಮೇಜರ್ ಐರ್ ಈ ದಂಗೆಯನ್ನು ಅಡಗಿಸಲು ಯತ್ನಿಸಿದ. 1858ರಲ್ಲಿ ಕುನ್ವರಸಿಂಹ ಬ್ರಿಟಿಷರ ಸೈನ್ಯವನ್ನು ಸೋಲಿಸಿದರೂ ನಿರಂತರ ಕದನಗಳಿಂದ ಜರ್ಝರಿತನಾಗಿ ಆತ ಕೊನೆಯುಸಿರಿಳೆದ. ವಹಾಬಿ ಚಳುವಳಿ ಮತ್ತೊಂದು ಗಮನಾರ್ಹ ಘಟನೆ. ಅರೇಬಿಯದ ಅಬ್ದುಲ್ ವಹೀಬನ ಶಿಷ್ಯರು ವಹಾಬಿಗಳು. ಇವರು ಬ್ರಿಟಿಷರ ಆಳ್ವಿಕೆ ಧರ್ಮವಿರೋಧವೆಂದು ಭಾವಿಸಿದವರು. ಸೈಯದ್ ಅಹಮದ್ ಈ ಚಳುವಳಿಯ ನಾಯಕ. ಬಿರ್ಸಾ ಅವರ ಸೈನ್ಯದ ಮುಖ್ಯಸ್ಥ. ಆತನನ್ನು ಸೋಲಿಸಲು ಛೋಟಾನಾಗಪುರ ವಿಭಾಗದ ಅಧಿಕಾರ ವರ್ಗ ಬಹಳ ಶ್ರಮಿಸಬೇಕಾಯಿತು. ರಾಂಚಿಯ ಸೆರೆಮನೆಯಲ್ಲಿ ಆತ ಕಾಲರಾಬೇನೆಯಿಂದ ಸತ್ತ (1900).

ಭಾರತೀಯ ಕಾಂಗ್ರೆಸ್ಸಿನ ಮೊದಲ ಪ್ರಾಂತೀಯ ಸಮ್ಮೇಳನ ಪಟ್ನಾದಲ್ಲಿ 1908ರಲ್ಲಿ ನಡೆಯಿತು. ಸರ್ ಆಲಿ ಇಮಾಮ್ ಅದರ ಅಧ್ಯಕ್ಷತೆ ವಹಿಸಿದ್ದ. 1912ರಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮ್ಮೇಳನ ಜರುಗಿತು. 1916ರಿಂದ ಹೋಮ್ ರೂಲ್ ಚಳುವಳಿ ಆರಂಭವಾಯಿತು. ಚಂಪಾರಣ್ಯದ ರೈತರ ದಾರುಣ ಪರಿಸ್ಥಿತಿಗಳ ಪರಿಶೀಲನೆಗಾಗಿ ರಾಜಕುಮಾರ್ ಶುಕ್ಲ ಮಹಾತ್ಮಾ ಗಾಂಧಿಯವರನ್ನು ಮುಝಫರಪುರಕ್ಕೆ ಕರೆತಂದ (1917). ಸರ್ಕಾರ ಅವರನ್ನು ಹಳ್ಳಿಗಳಿಗೆ ಹೋಗಲು ಬಿಡಲಿಲ್ಲ. ರಾಂಚಿಯಲ್ಲಿ ಲೆಫ್ಟಿನೆಂಟ್‍ಗವರ್ನರ್ ಎಡ್ವರ್ಡ್‍ಗೈಟ್ ಗಾಂಧಿಯವರನ್ನು ಭೇಟಿಮಾಡಿದ. ಸರ್ಕಾರ ಒಂದು ವಿಚಾರಣಾ ಸಮಿತಿ ರಚಿಸಿತು. ಈ ಸಂದರ್ಭದಲ್ಲಿ ರಾಜೇಂದ್ರ ಪ್ರಸಾದರು ಗಾಂಧಿಯವರೊಡನೆ ವಿಶಿಷ್ಟ ಪಾತ್ರ ನಿರ್ವಹಿಸಿದರು. ರೌಲಟ್ ಕಾನೂನಿನ ವಿರುದ್ಧ 1918ರಲ್ಲಿ ನಡೆದ ಚಳುವಳಿಯಲ್ಲಿ ಬಿಹಾರದ ಜನತೆ ಪಾಲುಗೊಂಡು ಜೈಲುಗಳನ್ನು ತುಂಬಿದರು. ಕರನಿರಾಕರಣೆ ಹಾಗೂ ಇತರ ಅಹಿಂಸಾತ್ಮಕ ಸತ್ಯಾಗ್ರಹ ಹಾಗೂ ಚಳುವಳಿಗಳಲ್ಲಿ ಬಿಹಾರ ಪ್ರಮುಖ ಪಾತ್ರವಹಿಸಿತು. 1930ರ ಉಪ್ಪಿನ ಸತ್ಯಾಗ್ರಹದ ಸಂದರ್ಭದಲ್ಲಿ ಜವಾಹರಲಾಲರು ಸರನ್, ಚಂಪಾರಣ್, ಮುಝಫರಪುರ ಜಿಲ್ಲೆಗಳಲ್ಲಿ ಪ್ರವಾಸ ಮಾಡಿದರು. ಸೈನಿಕರು ಹಿಂಸೆ, ಅತ್ಯಾಚಾರಗಳಿಗೆ ತೊಡಗಿದರು. ಅಬ್ದುಲ್ ಬಾರಿ, ಆಚಾರ್ಯ ಕೃಪಲಾನಿ ಮೊದಲಾದವರು ಪಟ್ನಾನಗರದಲ್ಲಿ ಪೋಲಿಸರ ಏಟಿಗೆ ತುತ್ತಾದರು. ಅನೇಕ ಕಡೆಗಳಲ್ಲಿ ಗೋಲಿಬಾರುಗಳಾದುವು.

1937ರ ಚುನಾವಣೆಗಳಲ್ಲಿ ಬಿಹಾರದಲ್ಲಿ ಕಾಂಗ್ರೆಸ್ ವಿಜಯ ಸಾಧಿಸಿ ಶ್ರೀ ಕೃಷ್ಣಸಿಂಹರ ನೇತೃತ್ವದ ಮಂತ್ರಿಮಂಡಲ ಅಧಿಕಾರಕ್ಕೆ ಬಂತು. 1939ರಲ್ಲಿ ಈ ಮಂತ್ರಿ ಮಂಡಲ ರಾಜೀನಾಮೆ ನೀಡಿತು. 1942-43ರ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಇಲ್ಲಿಯ ಹಲವಾರು ನಾಯಕರು ಸೆರೆಮೆನೆ ಸೇರಿದರು. ವಿದ್ಯಾರ್ಥಿಗಳ ಸತ್ಯಾಗ್ರಹ ಉಗ್ರರೂಪ ತಾಳಿ ಹಲವಾರು ವಿದ್ಯಾರ್ಥಿಗಳು ಕೊಲ್ಲಲ್ಪಟ್ಟರು. 1945ರ ಕೊನೆಯಲ್ಲಿಯ ಚುನಾವಣೆಗಳಲ್ಲಿ ಬಿಹಾರದ 152 ಪ್ರತಿನಿಧಿಗಳ ಸಭೆಯಲ್ಲಿ 98 ಜನ ಕಾಂಗ್ರೆಸ್ ಪ್ರತಿನಿಧಿಗಳು ಚುನಾಯಿತರಾದರು. 1946ರ ಮಾರ್ಚಿಯಲ್ಲಿ ಶ್ರೀ ಕೃಷ್ಣಸಿಂಹ ಮುಖ್ಯ ಮಂತ್ರಿಯಾದರು. 1947ರಲ್ಲಿ ಬಿಹಾರ ಮತೀಯ ಗಲಭೆಗಳಿಗೆ ತುತ್ತಾಯಿತು. ರಾಜೇಂದ್ರ ಪ್ರಸಾದ್, ಜವಾಹರಲಾಲ್, ಮಹಾತ್ಮ ಗಾಂಧಿ ಇವರು ಪ್ರವಾಸ ಕೈಗೊಂಡು ಸೌಹಾರ್ದ ಸಾಧಿಸಿದರು. ಆಗಸ್ಟ್ 1947ರಿಂದ ಬಿಹಾರ ಸ್ವತಂತ್ರ ಭಾರತದ ಒಂದು ರಾಜ್ಯವಾಗಿದೆ.

ವಾಸ್ತು, ಮೂರ್ತಿ ಶಿಲ್ಪ: ಬಿಹಾರದ ವಾಸ್ತು ಮತ್ತು ಮೂರ್ತಿಶಿಲ್ಪ ಕಲೆಗಳ ಮೇಲೆ ಬೌದ್ಧಮತದ ಪ್ರಭಾವವಿರುವುದರೊಂದಿಗೆ ಅವುಗಳ ಪ್ರಾಚೀನತೆಯನ್ನೂ ಗುರುತಿಸಬಹುದಾಗಿದೆ. ಗೌತಮಬುದ್ಧನ ಕಾಲದಲ್ಲಿಯೇ ಚೈತ್ಯಗಳಿದ್ದುವೆಂಬ ಬಗೆಗೆ ಬೌದ್ಧ ಸಾಹಿತ್ಯದಲ್ಲಿ ಆಧಾರಗಳಿವೆ. ಪಾಷಣಕ ಚೈತ್ಯವೊಂದು ರಾಜಗೃಹದಲ್ಲಿದ್ದಿತೆಂದು ಸುತ್ತನಿಪಾತದಲ್ಲಿ ಹೇಳಿದೆ. ವಿಹಾರ, ಪ್ರಾಸಾದ, ಹಮ್ಮ್ರ್ಯ ಮತ್ತು ಗುಹಾಗಳೂ ಉಲ್ಲೇಖಗೊಂಡಿವೆ. ಪ್ರಾಸಾದ ಎಂಬುದು ಹಲವು ಅಂತಸ್ತುಗಳ ವಾಸಗೃಹವಾದರೆ ಹಮ್ಮ್ರ್ಯವೆಂಬುದು ಚಪ್ಪಟೆಯ ಚಾವಣಿಯನ್ನೊಳಗೊಂಡದ್ದು. ಮೌರ್ಯರ ರಾಜಧಾನಿ ರಾಜಗೃಹದಲ್ಲಿಯೇ ಹಲವಾರು ಬೌದ್ಧ ಕಟ್ಟಡಗಳ ವೇಣುವನ ವಿಹಾರ, ಅಜಾತಶತ್ರು ಕಟ್ಟಿಸಿದ ಸ್ತೂಪ ಮತ್ತು ಜೀವಕ ಕಟ್ಟಿಸಿದವೆನ್ನಲಾದ ಮಾವಿನ ತೋಪಿನ ವಿಹಾರ ಅವಶೇಷಗಳು ಕಂಡುಬಂದಿವೆ. ರಾಜಗೃಹಕ್ಕ್ಕೆ 32 ದೊಡ್ಡ ಪ್ರವೇಶದ್ವಾರಗಳೂ ನಾಲ್ಕು ಸಣ್ಣ ದ್ವಾರಗಳೂ ಇದ್ದು ಆ ವಿಶಾಲವಾದ ಕೋಟೆಯಲ್ಲಿ ವಾಸಗೃಹಗಳೂ ಪಾಕಶಾಲೆಗಳೂ ಸ್ನಾನಗೃಹಗಳೂ ಕಚೇರಿಗಳೂ ಇತ್ಯಾದಿ ಇದ್ದುವೆಂದು ತಿಳಿದುಬಂದಿದೆ.

ಪಟ್ನಾದಲ್ಲಿ ದೊರೆತಿರುವ ಎರಡು ಕಲ್ಲಿನ ವಿಗ್ರಹಗಳು ಅತಿ ಪ್ರಾಚೀನವೆಂಬುದರಲ್ಲಿ ಸಂಶಯವಿಲ್ಲವಾದರೂ ಅವುಗಳ ಕಾಲದ ಬಗೆಗೆ ಖಚಿತ ಅಭಿಪ್ರಾಯವಿಲ್ಲ. ಅವು ಶಿಶುನಾಗ ಮನೆತನದ ಉದಯನಂದಿ ಮತ್ತು ವತ್ಸನಂದಿಗಳ ವಿಗ್ರಹಗಳೆಂದು ಅವುಗಳ ಮೇಲಿನ ಶಾಸನಗಳನ್ನಾಧರಿಸಿ ಕೆ.ಪಿ.ಜಯಸ್ವಾಲ್ ಸೂಚಿಸಿದ್ದಾರಾದರೂ ಆ ಶಾಸನ ಪಾಠಗಳ ಬಗೆಗೇ ಭಿನ್ನಾಭಿಪ್ರಾಯಗಳಿವೆ. ಅವು ಯಕ್ಷವಿಗ್ರಹಗಳಾಗಿರಬಹುದೆಂಬ ಸೂಚನೆಯೂ ಬಹುಶಃ ಅಶೋಕನ ಅನಂತರದ ಕಾಲದ್ದೆಂಬ ಅಭಿಪ್ರಾಯವೂ ಇದೆ. ಒಂದು ವಿಗ್ರಹದ ರುಂಡ ಸಿಕ್ಕಿಲ್ಲ. ಆ ವಿಗ್ರಹದ ಬಲಭುಜದಲ್ಲಿ ಒಂದು ಚೌರಿಯನ್ನು ಬಿಡಿಸಿದೆ. ಇನ್ನೊಂದು ಹಸ್ತಚೌರಿಯನ್ನು ಹಿಡಿದಿದೆ. ಎಡಭುಜದ ಮೇಲೆ ವಸ್ತ್ರ (ದುಪಟ್ಟು) ಹೊದ್ದು ಭಾರವಾದ ಕಂಠಾಭರಣಗಳನ್ನು ಧರಿಸಿದೆ. ದೈಹಿಕ ಶಕ್ತಿಯ ಬಿಗುಪ್ರದರ್ಶನವನ್ನು ಇವುಗಳಲ್ಲಿ ಗುರುತಿಸಬಹುದು. ಯಾವ ವಿಧದ ಹೊಳಪನ್ನೂ ಇವುಗಳಿಗೆ ಕೊಟ್ಟಿಲ್ಲ. ಮೌರ್ಯರ ಕಾಲದ ಸ್ತಂಭಗಳೂ ವಿಗ್ರಹಗಳೂ ಹೊಳಪಾಗಿರುತ್ತಿದ್ದುದೊಂದು ವೈಶಿಷ್ಟ್ಯ. ಆದರೂ ಇವು ಮೌರ್ಯನಂತರದ ಕಾಲದವೆನ್ನಲಾಗದು. ಇವು ಕ್ರಿ.ಪೂ. 3ನೆಯ ಶತಮಾನದ್ದೆಂದು ಆನಂದಕುಮಾರಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ. ಲೋಹನಿಪುರದಲ್ಲಿ ದೊರೆತ ಜೈನತೀರ್ಥಂಕರನ ವಿಗ್ರಹವೂ ಸ್ವಲ್ಪ ಮಟ್ಟಿಗೆ ಇಂತಹುದೇ. ಎದೆಯ ಭಾಗದಲ್ಲಿ ಮಾಂಸಖಂಡಗಳನ್ನು ರೂಪಿಸಿರುವುದು ಗಮನಾರ್ಹ. ದೀದರ್ ಗಂಜಿನ ಸ್ತ್ರೀ ವಿಗ್ರಹ ಯಕ್ಷಿಯೊಬ್ಬಳದೋ ಶ್ರೀದೇವಿಯದೋ ಆಗಿದ್ದಿರಬಹುದೆಂದು ಹೇಳಿದೆ. ಬೋಧಗಯಾದ ದೇವಾಲಯ ದೊಳಗಿನ ವಜ್ರಾಶನದ ವಿಗ್ರಹದಲ್ಲಿಯ ಹೊಳಪನ್ನು ಗಮನಿಸಿದರೆ ಅದು ಅಶೋಕನ ಕಾಲದ್ದೆಂಬುದರಲ್ಲಿ ಸಂದೇಹವಿಲ್ಲವಾದರೂ ಅದರ ಮೇಲಿನ ಶುಂಗರ ಕಾಲಕ್ಕೆ ಸೇರಿದ್ದೆನ್ನಲಾದ ಶಾಸನ ಅದರ ಕಾಲದ ಬಗೆಗೆ ಶಂಕೆ ಉಂಟುಮಾಡುತ್ತದೆ. ಆದರೆ ಆ ಶಾಸನವೇ ಅನಂತರ ಬರೆಯಲಾಗಿರಬಹುದೆ? ಎನ್ನುವ ಪ್ರಶ್ನೆಯನ್ನೂ ಮುಂದಿಡಲಾಗಿದೆ.

ಅಶೋಕ ಶಾಸನಗಳನ್ನು ಬರೆಸಲು ಸ್ತಂಭಗಳನ್ನು ಬಳಸಿದ. ಹಲವು ಸಂದರ್ಭಗಳಲ್ಲಿ ಮೊದಲೇ ಇದ್ದ ಕಂಬಗಳ ಮೇಲೆ ಶಾಸನಗಳನ್ನು ಬರೆಸಿದ. ಆ ಕಂಬಗಳ ಬೋದಿಗೆಗಳು ಅಶೋಕನೇ ನಿಲ್ಲಿಸಿದ ಕಂಬಗಳ ಬೋದಿಗೆಗಳಿಗಿಂತಲೂ ಕಲಾದೃಷ್ಟಿಯಿಂದ ಕೀಳುಮಟ್ಟದ್ದಾಗಿವೆ. ಲೌರಿಯ ಅರರಾಜದ ಸ್ತಂಭದ ಮೇಲೆ ಮೂಲತಃ ಗರುಡ ವಿಗ್ರಹವಿತ್ತೆನಿಸುತ್ತದೆ. ಬಸರ್ (ವೈಶಾಲಿ) ಯಲ್ಲಿಯ ಒಂದು ಸ್ತಂಭ ಅಶೋಕನಿಗೂ ಹಿಂದಿನದ್ದೆನ್ನಬಹುದು. ವೃತ್ತಾಕಾರದ ಈ ಕಂಬ ಮೇಲೆ ಚೂಪಾಗುತ್ತ ಹೋಗಿದೆ. ಬೋದಿಗೆಯ ಕೆಳಗೆ ಮಣಿಗಳ ರಾಟೆಗಳ ಅಲಂಕರಣವಿದೆ. ಬೋದಿಗೆ ತಲೆಕೆಳಗಾದ ಕಮಲದ ಆಕಾರದಲ್ಲಿ ಇದೆ. ಬೋದಿಗೆಯ ಮೇಲಿನ ಚೌಕಟ್ಟು ಅಶೋಕ ಸ್ತಂಭಗಳಲ್ಲಿದ್ದಂತೆ ವೃತ್ತಾಕಾರದಲ್ಲಿರದೆ ದೀರ್ಘ ಚತುರಸ್ರಾಕಾರದಲ್ಲಿದೆ.

ಅಶೋಕ ಸ್ತಂಭಗಳೆನಿಸಿದ ರಾಮಪೂರ್ವದ ಸ್ತಂಭಗಳಲ್ಲಿ ಒಂದರ ಬೋದಿಗೆಯ ಮೇಲೆ ಗೂಳಿಯ ಚಿತ್ರವಿದೆ. ಇನ್ನೊಂದರಲ್ಲಿ ಸಿಂಹ. ಸಿಂಹ ಬೋದಿಗೆಯ ಚೌಕಟ್ಟಿನಲ್ಲಿ ಹೆಬ್ಬಾವುಗಳ ಅಲಂಕರಣವಿದ್ದರೆ, ಮೊದಲದರಲ್ಲಿ ಮಕರಂದದ ಬಳ್ಳಿಗಳ ಹಾಗೂ ತಾಳೆಮರದ ವಿನ್ಯಾಸಗಳಿವೆ. ಬಿಹಾರದಲ್ಲಿ ಅಶೋಕನ ಕಾಲದ ಶಿಲ್ಪಕಲೆಗೆ ಈ ಎರಡು ಕಂಬಗಳು ಶ್ರೇಷ್ಟ ಮಾದರಿಗಳು. ಅಶೋಕನ ಹಾಗೂ ಅನಂತರದ ಕಾಲದ ಹಲವಾರು ಗುಹಾಲಯಗಳು ಬಿಹಾರದಲ್ಲಿವೆ. ಬರಾಬರ ಬೆಟ್ಟಗಳಲ್ಲಿಯ ಗುಹೆಗಳಲ್ಲಿ ಅಶೋಕ ಶಾಸನಗಳಿವೆ. ಇಲ್ಲಿಯ ಗುಹೆಗಳು ಆಜೀವಿಕರಿಗಾಗಿ ಅಶೋಕ ಕೊರೆಯಿಸಿದವು. ಸುದಾಮ ಗುಹೆಯ ಹೊರಕೋಣೆಯನ್ನು ಕಿರಿದಾದ ಒಂದು ಓಣಿ ಒಳಗಿನ ವೃತ್ತಾಕಾರದ ಕೊಠಡಿಗೆ ಸಂಪರ್ಕ ಕಲ್ಪಿಸುತ್ತದೆ. ಸಾಂಚಿಯ ಶಿಲ್ಪವೊಂದರಲ್ಲಿ ಇದರ ಪ್ರತಿಕೃತಿಯನ್ನು ಕಾಣಬಹುದು. ಬರಾಬರದ ಲೋಮಷ ಋಷಿಯ ಗುಹೆಯೂ ಅಶೋಕನ ಕಾಲದ್ದೆಂದು ಅದರ ದ್ವಾರದ ಚೌಕಟ್ಟಿನಲ್ಲಿರುವ ಆನೆಗಳ ಅರೆಯುಬ್ಬು ಚಿತ್ರಗಳು ಸೂಚಿಸುತ್ತವೆ. ವಿನ್ಯಾಸದಲ್ಲಿ ಸುದಾಮಗುಹೆಯನ್ನು ಹೋಲುತ್ತಾದರೂ ಒಳಕೋಣೆ ವೃತ್ತಾಕಾರವಾಗಿರದೆ ಅಂಡಾಕಾರವಾಗಿದೆ. ದ್ವಾರದ ಮೇಲೆ ಅರ್ಧ ವೃತ್ತಾಕಾರದ ತ್ರಿಕೋನಾಕೃತಿಯಲ್ಲಿ ಆನೆಗಳ ಅಲಂಕೃತಪಟ್ಟಿ ಮತ್ತು ವಜ್ರಾಕೃತಿಯ ವಿನ್ಯಾಸವಿದೆ. ಈ ಗುಹೆಗಳು ಮೂಲತಃ ಮರದಲ್ಲಿ ರೂಪಿಸಿದ ಆ ಕಾಲದ ವಾಸ್ತುಗಳ ಪ್ರತಿಕೃತಿಗಳೆಂದು ಸ್ವಸ್ಟವಾಗಿ ಕಂಡುಬರುತ್ತದೆ. ನಾಗಾರ್ಜುನಿ ಬೆಟ್ಟಗಳಲ್ಲಿ ಅಶೋಕನ ಮೊಮ್ಮಗ ದಶರಥನ ಶಾಸನಗಳುಳ್ಳ, ವಹಿಯಾಕಾ, ಗೋಪಿಕಾ ಮತ್ತು ವಧತಿಕಾ ಎಂಬ ಹೆಸರುಗಳ ಗುಹೆಗಳಿವೆ.

ಕುಮ್ರಹರದ ನಿವೇಶದಲ್ಲಿ ಅಳಿದುಳಿದಿರುವ ದೊಡ್ಡ ಏಕಶಿಲಾಸ್ತಂಭ ಅಶೋಕನ ಕಾಲಕ ಲೌಕಿಕ ಕಟ್ಟಡಗಳ ಏಕೈಕ ಅವಶೇಷ. ಇಲ್ಲಿರುವ ಇತರ ತುಂಡುಗಳನ್ನು ಪರೀಕ್ಷಿಸಿ ಇವೆಲ್ಲವನ್ನೂ ಒಳಾಂಗಣದಲ್ಲಿ ಸಾಲಿಗೆ ಹತ್ತರಂತೆ 8 ಸಾಲುಗಳಲ್ಲಿ ಬಳಸಲಾಗಿತ್ತೆಂದು ಊಹಿಸಲಾಗಿದೆ. ಮರದ ದಿಮ್ಮಿಗಳಿಂದ ನಿರ್ಮಿಸಿದ ಚೌಕಾಕಾರದ ವೇದಿಕೆಯ ಮೇಲೆ ಇವನ್ನು ನಿಲ್ಲಿಸಲಾಗಿತ್ತು. ಕಂಬಗಳ ಮೇಲ್ಕಟ್ಟಡವೂ ಮರದ ದಿಮ್ಮಿಗಳಿಂದ ರೂಪಿತವಾದುದೇ ಆಗಿದ್ದು ಅವನ್ನು ನೇರಾಗಿ ಕಂಬಗಳ ಮೇಲೆಯೇ ದಪ್ಪವಾದ ಗುಂಡನೆಯ ಸರಳುಗಳು ಅಥವಾ ಉದ್ದದ ಮರದ ಮೊಳೆಗಳಿಂದ ಕೂಡಿಸಿತ್ತು. ಇದು ಅಶೋಕನ ಅರಮನೆಯ ಒಂದು ಭಾಗವಾಗಿತ್ತೆಂದು ಊಹಿಸಲಾಗಿದ್ದರೂ ಈ ಕಂಬಗಳ ಮೇಲೆ ಯಾವುದೇ ತೆರದ ಬೋದಿಗೆಗಳೂ ಇಲ್ಲದಿರುವುದು ಗಮನಾರ್ಹ. ಅಲ್ಲದೆ ಇದು ಪಾಟಲೀಪುತ್ರದ ಅರಮನೆ ಇದ್ದಂತೆ ನಗರದ ಮಧ್ಯೆ ಇರದೆ ಹೊರವಲಯದಲ್ಲಿ ನಗರದ ಕೋಟೆ ಗೋಡೆಗೆ ಹೊಂದಿದಂತಿದೆ. ಆದಕಾರಣ ಇದು ಅರಮನೆಯ ಒಂದು ಭಾಗವಾಗಿತ್ತೆನ್ನುವುದು ಸರಿಯಾಗಲಾರದು.

ಮೌರ್ಯರ ತರುವಾಯ ಆಳಿದ ಶುಂಗರು ಬ್ರಾಹ್ಮಣರಾಗಿದ್ದರೂ ಅವರ ಕಾಲದಲ್ಲಿ ಬಾರ್ಹುತ್ ಸಾಂಚಿಗಳ ಬೌದ್ಧಸ್ತೂಪಗಳೂ ಬೋಧಗಯಾದ ಕಟಾಂಜನಗಳೂ ರಚಿಸಲ್ಪಟ್ಟುವೆಂಬುದೊಂದು ವಿಶೇಷ ಅಂಶ. ಈ ಕಟಾಂಜನಗಳ ಮೇಲೆ ಜಾತಕ ಕತೆಗಳ ದೃಶ್ಯಾವಳಿಗಳನ್ನು ಕೆತ್ತಿದೆ. ಬಾರ್ಹುತ್ ಸ್ತೂಪದನಂತರ, ಸಾಂಚೀಸ್ತೂಪದ ಮೊದಲು ಇದು ಅಸ್ತಿತ್ವಕ್ಕೆ ಬಂದಿರಬಹುದೆನಿಸುತ್ತದೆ. ಮಧ್ಯ ಅಲ್ಲಲ್ಲಿ, ನಿಶ್ಚಿತ ಅಂತರಗಳಲ್ಲಿ ಕಲ್ಲಿನ ಅರಳಿದ ಕಮಲದ ಉಬ್ಬುಚಿತ್ರವಿದೆ. ಈ ವೇಳೆಗೆ ಈಗಿನ ಬೋಧಗಯಾ ದೇವಾಲಯ ಇನ್ನೂ ಕಟ್ಟಿರಲಿಲ್ಲ. ಬದಲಾಗಿ ಒಂದು ಸರಳವಾದ ಚೈತ್ಯಾಲಯ ಅಲ್ಲಿತ್ತು. ಲೌರಿಯ ನಂದನಗಡದಲ್ಲಿ ಸುಟ್ಟ ಇಟ್ಟಿಗೆಯ ಸ್ತೂಪಗಳ ಅವಶೇಷಗಳು ಕಾಣಿಸಿಕೊಂಡಿವೆ. ಮೂರ್ತಿಶಿಲ್ಪಗಳನ್ನು ಬೋಧಗಯಾ ದೇವಾಲಯದ ಕಟಾಂಜನಗಳಲ್ಲಿಯ ಉಬ್ಬು ಚಿತ್ರಗಳಲ್ಲಿ ಕಾಣಬಹುದು. ನಾಲ್ಕು ಕುದುರೆಗಳ, ಒಂದು ಗಾಲಿಯ ರಥದಲ್ಲಿಯ ಸೂರ್ಯನ ವಿಗ್ರಹ ಇವುಗಳಲ್ಲಿ ಗಮನಾರ್ಹ. ಸೂರ್ಯನ ಎರಡೂ ಕಡೆಗಳಲ್ಲಿ ಉಷಾ ಮತ್ತು ಪ್ರತ್ಯುಷಾ ಬಿಲ್ಲುಬಾಣಗಳನ್ನು ಹಿಡಿದು ಕತ್ತಲ್ಲನ್ನು ಹೊರದೂಡುತ್ತಿದಂತೆ ತೋರಿಸಿದೆ. ಕಟಾಂಜನದ ಕಂಬದಲ್ಲಿಯ ಆಳೆತ್ತರದ ಯಕ್ಷಿಣಿಯ ವಿಗ್ರಹ ಇನ್ನೊಂದು ಗಣನೀಯ ಶಿಲ್ಪ.

ಗುಪ್ತರ ಕಾಲಕ್ಕೆ ಸೇರಿದ ಆರೋಗ್ಯ ವಿಹಾರವೆಂಬ ಹೆಸರಿನ ಒಂದು ಕಟ್ಟಡ ಕುಮ್ರಹಾರದಲ್ಲಿ 1951ರ ಉತ್ಖನನದಲ್ಲಿ ಬೆಳಕು ಕಂಡಿದೆ. ಈ ವಿಹಾರ ಕಳ್ಳರ ದರೋಡೆಗೆ ತುತ್ತಾಗಿದ್ದು ಬಹಳಷ್ಟು ಹಾಳಾಗಿದೆ. ಸ್ವಲ್ಪ ಭಾಗವನ್ನು ಮಾತ್ರ ಅಗೆದಾಗ 30.47 ಮೀಟರ್ ಉದ್ದದ ಕಟ್ಟಡದ ಒಂದು ಪಕ್ಕ ಮಾತ್ರ ಕಾಣಿಸಿಕೊಂಡಿತು. ಇಲ್ಲಿಯ ಕೋಣೆಗಳು ಊಟದ ಆಥವಾ ಪ್ರಾರ್ಥನೆಯ ಕೋಣೆಗಳಾಗಿರಬಹುದೆನ್ನುವರು.

ಕ್ರಿ.ಶ. 5ನೆಯ ಶತಮಾನದ ಮಧ್ಯಭಾಗದಲ್ಲಿ, ಸ್ಕಂದಗುಪ್ತನ ಕಾಲದಲ್ಲಿ ನಾಲಂದಾ ವಿಶ್ವವಿದ್ಯಾಲಯ ಸ್ಥಾಪಿತವಾಯಿತು. ಮೊದಲು ಸಣ್ಣ ಸ್ತೂಪವಾಗಿದ್ದ ಇದು ಅನಂತರ ಬೃಹದ್ ವಿದ್ಯಾಲಯವಾಗಿ ಮಾರ್ಪಟ್ಟಿದೆ. ಹಾಗೆಯೆ ಹಲವಾರು ಬದಲಾವಣೆಗಳನ್ನೂ ಜೀರ್ಣೋದ್ಧಾರಗಳನ್ನೂ ಇಲ್ಲಿ ಗುರುತಿಸಬಹುದು. ಮೊದಲಿನ ಸ್ತೂಪವನ್ನು ಸುತ್ತುವರಿದಂತೆ ಇನ್ನೊಂದು ಸ್ತೂಪ ಹೀಗೆ ಆರು ಸ್ತೂಪಗಳನ್ನು ಕಟ್ಟಿದ ಬಳಿಕ ಬೃಹತ್ ಸ್ತೂಪವೊಂದು ಅಂತಿಮವಾಗಿ ರೂಪುಗೊಂಡಿದೆ. ಐದನೆಯ ಸ್ತೂಪದ ನಾಲ್ಕು ಮೂಲೆಗಳಲ್ಲೂ ಗೋಪುರಗಳಿದ್ದು ಇವುಗಳ ಸಾಲುಗೂಡುಗಳಲ್ಲಿ ಬುದ್ಧನ, ಬೋಧಿಸತ್ವರ ಗಾರೆಯ ವಿಗ್ರಹಗಳನ್ನು ಅಳವಡಿಸಲಾಗಿದೆ. ಇದನ್ನು ಸುತ್ತುವರಿದಂತೆ ನಾನಾ ತರದ ಸಣ್ಣ ಹರಕೆಯ ಸ್ತೂಪಗಳಿದ್ದು ಅವುಗಳಲ್ಲಿಯ ಕೆಲವು ಇಟ್ಟಿಗೆಗಳಲ್ಲಿ ಆರನೆಯ ಶತಮಾನದ ಲಿಪಿಯಲ್ಲಿ ಬೌದ್ಧ ಸೂತ್ರಗಳನ್ನು ಕಂಡರಿಸಿದೆ.

ಭೋಜಪುರ ಜಿಲ್ಲೆಯ ದೇವ್‍ಬನಾರಕದಲ್ಲಿಯ ಸೂರ್ಯಾಲಯ ಜೀವಿತಗುಪ್ತನ ಕಾಲದ್ದೆಂದು ಹೇಳಬಹುದು. ಆತನ ಶಾಸನದಲ್ಲಿ ವರುಣಸ್ವಾಮಿ ಪ್ರಸ್ತಾಪವಿದ್ದು ಅದು ಬಹುಶಃ ಈ ದೇವಾಲಯಕ್ಕೆ ಸಂಬಂಧಿಸಿದುದಾಗಿದೆ. ಇದರ ಗರ್ಭ ಗೃಹದ ಗೋಡೆಗಳು ಮತ್ತು ಮೇಲಿನ ಎರಡಂತಸ್ತಿನ ವಿಮಾನ ಸುಟ್ಟ ಇಟ್ಟಿಗೆಗಳಿಂದಾದುದು. ರಾಜಗೃಹದಲ್ಲಿ ಮಣಿಯಾರ ಮಠ ಎಂಬ ಹೆಸರಿನ ಮಣಿನಾಗನ ವರ್ತುಲಾಕಾರದ ಆಲಯವೂ ಇಟ್ಟಿಗೆಯಿಂದಾದುದೇ. ಇದು ಅನಂತರದ ಶತಮಾನಗಳಲ್ಲಿ ಮಾರ್ಪಾಡುಗಳಿಗೆ ಒಳಗಾಗಿದೆ. ಹೊರಗೋಡೆಗಳಲ್ಲಿ ಗಾರೆಯ ಸುಂದರ ವಿಗ್ರಹಗಳು ಬಹಳ ಹಿಂದೆ ನಡೆದ ಉತ್ಖನನಗಳ ಸಮಯದಲ್ಲಿ ಇದ್ದುವಾದರೂ ಈಗ ಎಲ್ಲ ಹಾಳಾಗಿವೆ. ಸುಮಾರು 60 ಸೆಂಮೀ ಎತ್ತರದ ವಿಷ್ಣು, ಗಣೇಶ, ನಟರಾಜ, ನಾಗನಾಗಿಣಿ ಇವರ ವಿಗ್ರಹಗಳು ಆ ಗೋಡೆಗಳನ್ನಲಂಕರಿಸಿದ್ದುವು.

ಬೋಧಗಯಾದ ದೇವಾಲಯ ಬಹಳ ಬಾರಿ ಜೀರ್ಣೊದ್ಧಾರಗಳಿಗೆ, ಮಾರ್ಪಾಡುಗಳಿಗೆ ಈಡಾಗಿ ಅದರ ಮೂಲ ವಿನ್ಯಾಸವನ್ನು ನಿರ್ಧರಿಸುವುದೇ ಕಷ್ಟವಾಗಿದೆ. ಈ ದೇವಾಲಯವನ್ನು ಸ್ವಲ್ಪ ಎತ್ತರಿಸಿದ ಜಗತಿಯ ಮೇಲೆ ಕಟ್ಟಿದೆ. ಎತ್ತರದ ನೇರಾದ ತುದಿಗಳ ಪಿರಿಮಿಡ್ಡಿನಾಕಾರದ ಶಿಖರದ ಮೇಲಿನ ಮೂಲೆಗಳಲ್ಲಿ ಆಮಲಕಗಳು ಅಧಿಷ್ಟಾನದಿಂದ ಶಿಖರದ ತುದಿಯವರೆಗಿನ ಇದರ ಎತ್ತರ 48.76 ಮೀಟರುಗಳು. ಪಿರಿಮಿಡ್ಡಿನ ನಾಲ್ಕು ಮುಖಗಳಲ್ಲಿ ಸಮತಲದ ಅಂತಸ್ತುಗಳು ಮೆದುಗಾರೆಯ ಗೂಡುಗಳಲ್ಲಿ ಹಿಂದೊಮ್ಮೆ ಬುದ್ಧನ ಗಾರೆಯ ವಿಗ್ರಹಗಳಿದ್ದುವು. ಈಗಿರುವಂತೆ ದೇವಾಲಯ ಹ್ಯೂಯೆನ್‍ತ್ಸಾಂಗ್ ವರ್ಣಿಸಿದ ಮಹಾ ಬೋಧಿ ವಿಹಾರವನ್ನು ಹೋಲುತ್ತದೆ. ನಾಲಂದಾದಲ್ಲಿ ನರಸಿಂಹ ಗುಪ್ತ ಬಾಲಾದಿತ್ಯ ಕಟ್ಟಿಸಿದ 91.43 ಮೀಟರ್ ಎತ್ತರದ ಆಲಯದ ವರ್ಣನೆಯೂ ಹ್ಯೂಯೆನ್‍ತ್ಸಾಂಗ್‍ನ ಬರವಣಿಗೆಯಲ್ಲಿ ಕಂಡುಬಂದಿದೆ. ಆದರೆ ಈಗ ಎಲ್ಲವೂ ಭಗ್ನವಾಗಿವೆ.

ಷಹಾಬಾದ್ ಜಿಲ್ಲೆಯ ರಾಮಗಡದಲ್ಲಿ 243.83 ಮೀಟರ್ ಎತ್ತರದ ದಿಬ್ಬದ ಮೇಲಿನ ಮಂಡಲೇಶ್ವರ (ಮುಂಡೇಶ್ವರಿ) ಶಿವಾಲಯ ಗುಪ್ತರ ಕಲೆಯ ಅತ್ಯುತ್ತಮ ಮಾದರಿ. ಅಷ್ಟಕೋನ ವಿನ್ಯಾಸದ ಇದರ ನಾಲ್ಕು ಕಡೆ ದ್ವಾರಗಳಿದ್ದು ದ್ವಾರಬಂಧಗಳಲ್ಲಿ ಗಂಗಾ ಯಮುನೆಯರ ವಿಗ್ರಹಗಳೂ ಪೂರ್ವದಲ್ಲಿ ಶಿವನ ಎರಡು ವಿಗ್ರಹಗಳೂ ಎರಡು ಸ್ತ್ರೀ ವಿಗ್ರಹಗಳೂ ಉತ್ತರದಲ್ಲಿ ದ್ವಾರಪಾಲಕರ ವಿಗ್ರಹಗಳೂ ಇದ್ದುವು.

ಅಪ್‍ಸಾದಿನ ವಿಷ್ಣು ದೇವಾಲಯದಲ್ಲಿಯ ಗಾರೆಯ ವಿಗ್ರಹಗಳು ರಾಜಗೃಹದ (ಈಗ ನಾಲಂದಾ ವಸ್ತು ಸಂಗ್ರಹಾಲಯದ) ಗರುಡಾಸೀನ ವಿಷ್ಣು, ವೈಶಾಲಿಯ ಚತುರ್ಮುಖಲಿಂಗ ಮತ್ತು ಕಾರ್ತಿಕೇಯ ವಿಗ್ರಹಗಳೂ ಬಿಹಾರದ ಗುಪ್ತರ ಕಾಲದ ಮೂರ್ತಿಶಿಲ್ಪಗಳ ಉತ್ಕøಷ್ಟ ಮಾದರಿಗಳು.

ಪಾಲರು ಆಳುತ್ತಿದ್ದಾಗ ನಾಲಂದಾ, ಒದಂತಪುರೀ ಮತ್ತು ವಿಕ್ರಮ ಶಿಲಾಗಳ ಬೌದ್ಧವಿಹಾರಗಳಿಗೆ ರಾಜಾಶ್ರಯ ಲಭಿಸಿತ್ತು. ಶಿಲೆಯ, ಕಂಚಿನ ವಿಗ್ರಹಗಳು ಈ ಕಾಲದಲ್ಲಿ ಹೇರಳವಾಗಿ ಕಾಣಿಸಿಕೊಂಡವು. ಶಿಲಾವಿಗ್ರಹಗಳಿಗೆ ಕಪ್ಪು ಅಗ್ನಿಶಿಲೆ ಮತ್ತು ಬಳಪದ ಕಲ್ಲುಗಳನ್ನು ಬಳಸಲಾಗಿದೆ. ಶಿಲಾವಿಗ್ರಹಗಳು ಬಹು ಮಟ್ಟಿಗೆ ಉಬ್ಬು ವಿಗ್ರಹಗಳೇ. ವರದ ಮುದ್ರೆಯಲ್ಲಿ ಕುಳಿತು ಅವಲೋಕಿತೇಶ್ವರ, ತಾರಾ, ಬೋಧಗಯಾದ ಶಿವನ ಚತುರ್ಮುಖ ಲಿಂಗ, ಮೋಂಘಿರ್‍ನಲ್ಲಿಯ ಸೂರ್ಯ, ಅಷ್ಟಭುಜಗಳ ನೃತ್ಯ ಗಣಪತಿ. ಕೃಷ್ಣಗಂಜದ ವಿಷ್ಣು (ಗೋವಿಂದ) ಇವು ಪಾಲರ ಕಾಲದ ಮೂರ್ತಿ ಶಿಲ್ಪಕ್ಕೆ ಉತ್ತಮ ಉದಾಹರಣೆಗಳು.

ಶಾಸನಗಳು: ಬಿಹಾರದ ಅತಿ ಪ್ರಾಚೀನ ಶಾಸನಗಳು ಅಶೋಕನ ಕಾಲದವು. ರಾಜಗೃಹದಲ್ಲಿ ಶಂಖು ಲಿಪಿಯಲ್ಲಿ ಬರೆದ ಕೆಲವು ಶಾಸನಗಳು ದೊರೆತಿದ್ದರೂ ಅವನ್ನು ಯಶಸ್ವಿಯಾಗಿ ಅರ್ಥವಿಸುವುದಾಗಿಲ್ಲ. ಅಶೋಕನ ಶಾಸನಗಳು ಚಂಪಾರಣ್ ಜಿಲ್ಲೆಯ ಲೌರಿಯ ಅರರಾಜ, ಲೌರಿಯ ನಂದನಗಡ ಮತ್ತು ರಾಮಪೂರ್ವಗಳಲ್ಲಿ ಸ್ತಂಭಗಳ ಮೇಲೂ ಸಸಾರಂನ ಬಂಡೆಯ ಮೇಲೂ ಕೆತ್ತಲ್ಪಟ್ಟಿವೆ. ಇತರ ಕಡೆಗಳಲ್ಲೂ ಇಂಥ ಶಾಸನಗಳು ಸಿಕ್ಕಿವೆ. ಅಶೋಕ ತನ್ನ ಪಟ್ಟಾಭಿಷೇಕವಾದ (ಕ್ರಿ.ಪೂ.269) ಹನ್ನೆರಡು ವರ್ಷಾನಂತರ ಎಂದರೆ ಕ್ರಿ.ಪೂ.257 ರಿಂದ ತಾನು ಧರ್ಮ ಶಾಸನಗಳನ್ನು ಕೆತ್ತಿಸತೊಡಗಿದುದಾಗಿಯೂ ನಾಲ್ಕು ಸ್ತಂಭಶಾಸನಗಳನ್ನು ಆಳ್ವಿಕೆಯ 27ನೆಯ ವರ್ಷದಲ್ಲೂ ಒಂದನ್ನು 28ನೆಯ ವರ್ಷದಲ್ಲೂ ಕೆತ್ತಿಸಿದುದಾಗಿ ಹೇಳಿಕೊಂಡಿದ್ದಾನೆ. ಒಂದರಲ್ಲಿ ತಾನು ಕಲ್ಪಿಸಿದ ಧರ್ಮ ಎಂತಹುದು ಎಂಬುದನ್ನು ವಿಶದಗೊಳಿಸಿದ್ದಾನೆ. ಬಹುಕಲ್ಯಾಣ, ಸತ್ಯ, ದಯ, ದಾನ, ಶುಚಿ, ಆನುಕಂಪಗಳು ಧರ್ಮಕಾರ್ಯಗಳು. ಇವನ್ನು ರಾಜ್ಯದಲ್ಲಿ ನೆಲೆಗೊಳಿಸಲು ತಾನು ರಜ್ಜುಕ ಎಂಬ ಆಧಿಕಾರಿಗಳನ್ನು ನೇಮಿಸಿದ್ದೇನೆ. ದ್ವಿಪಾದಿಗಳಿಗೆ ಚತುಷ್ಪಾದಿಗಳಿಗೆ, ಪಕ್ಷಿಗಳಿಗೆ ಜಲಚರಗಳಿಗೆ ತಾನು ಅನೇಕ ರೀತಿಯಲ್ಲಿ ಒಳಿತನ್ನು ಕಲ್ಪಿಸಿದ್ದೇನೆ. ಅನ್ಯಧರ್ಮಗಳನ್ನು ಗೌರವದಿಂದ ಕಂಡಿದ್ದೇನೆ. ಅನ್ಯಧರ್ಮಿಯರನ್ನು ಸ್ವಂತದವರಂತೆ ಕಾಣಬೇಕೆಂಬುದು ನನ್ನ ಆದ್ಯಕರ್ತವ್ಯ; ಎಂಬುದಾಗಿ ತನ್ನ ಶಾಸನಗಳಲ್ಲಿ ಕೆತ್ತಿದ್ದಾನೆ.

ಗಯೆಯ ಸಮೀಪದ ಬರಾಬರ್ ಬೆಟ್ಟಗಳಲ್ಲಿ ಅಶೋಕನ ಉತ್ತರಾಧಿಕಾರಿಗಳ ಶಾಸನಗಳು ಕೆಲವು ದೊರೆತಿದ್ದು ಮಗಧದಲ್ಲಿ ಅವರು ಅಜೀವಿಕರಿಗೆ ವಿಶೇಷ ಬಲವನ್ನು ತೋರಿಸಿದುದು ಆವುಗಳಿಂದ ಸ್ವಷ್ಟವಾಗಿದೆ. ಶುಂಗ, ಕಾಣ್ವ, ಕುಷಾಣ ಮನೆತನದವರು ಬಿಹಾರದಲ್ಲಿ ಆಳಿದರೂ ಅವರ ಶಾಸನಗಳಾವೂವೂ ಕಂಡುಬರದಿರುವುದೊಂದು ವಿಶೇಷ. ಬೋಧಗಯದ ಸ್ತೂಪದಲ್ಲಿ ಪಟ್ಟಿಗಳ ಮೇಲೆ ಕ್ರಿ.ಪೂ. ಸುಮಾರು 1ನೆಯ ಶತಮಾನದ ಕೆಲವು ಶಾಸನಗಳಿದ್ದರೂ ಅವು ಬಿಹಾರದ ಚರಿತ್ರೆಗೆ ಹೊಸತೇನನ್ನೂ ನೀಡುವುದಿಲ್ಲ. ಗುಪ್ತರ ಕಾಲಕ್ಕೆ ಸೇರಿದಂತೆ ಸ್ಕಂದಗುಪ್ತನ ಬಿಹಾರದ ಶಿಲಾಶಾಸನವಿದೆ. ಅದು ಬಹಳಷ್ಟು ಸವೆದಿದ್ದರೂ ಕೆಲವು ಸ್ವಷ್ಟಭಾಗಗಳಿಂದ ಅಂದಿನ ಆಡಳಿತ ಮತ್ತು ಆರ್ಥಿಕಸ್ಥಿತಿಯ ಪರಿಚಯ ಪಡೆಯಬಹುದಾಗಿದೆ. ಗಯ ಮತ್ತು ನಾಲಂದಾಗಳಲ್ಲಿ ದೊರೆತ ಎರಡು ಶಿಲಾ ಶಾಸನಗಳು ಸಮುದ್ರ ಗುಪ್ತನವೆಂದು ಅದರಲ್ಲಿ ಹೇಳಿದ್ದರೂ ಅವುಗಳ ಲಿಪಿ ಕ್ರಿ.ಶ. 7-8ನೆಯ ಶತಮಾನಕ್ಕೆ ಸೇರಿದ್ದು, ಅವು ಕೃತಕ ಶಾಸನಗಳೆಂಬುದು ಸ್ವಷ್ಟವಾಗಿದ್ದರೂ ಗುಪ್ತರ ಅನಂತರದ ಕಾಲದ ಭೂವಿವರಣಾ ವ್ಯವಸ್ಥೆಯನ್ನು ಅರಿಯಲು ಸಹಾಯಕವಾಗಿವೆ.

ಗುಪ್ತರ ತರುವಾಯದ ಕಾಲದ ಹಾಗೂ ಪಾಲ ಮನೆತನದ ಅರಸರ ಶಾಸನಗಳಲ್ಲಿ ಕೆಲವು ವಿಧಗಳನ್ನು ಗುರುತಿಸಬಹುದು. ವೈಶಾಲಿ ಹಾಗೂ ನಾಲಂದಾಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಲಭಿಸಿರುವ ಮುದ್ರಿಕೆಗಳ ಮೇಲಿನ ಶಾಸನಗಳು ಒಂದು ವಿಧ. ವೈಶಾಲಿಯ ಮುದ್ರಿಕೆಗಳು ಬಲುಮಟ್ಟಿಗೆ ಗುಪ್ತರ ಕಾಲದ್ದಾಗಿದ್ದು ವಿವಿಧ ಅಧಿಕಾರಿಗಳ ಹಾಗೂ ವ್ಯಾಪಾರ ಶ್ರೇಣಿಗಳ ಅಧಿಕಾರ ಸೂಚಕಗಳಾಗಿವೆ. ವೈಶಾಲಿ ತೀರಭುಕ್ತಿಯ ರಾಜಧಾನಿಯಾಗಿದ್ದು ಈ ಮುದ್ರಿಕೆಗಳು ಆ ಪಟ್ಟಣ ವ್ಯಾಪಾರ ಕೇಂದ್ರವಾಗಿತ್ತೆಂಬುದನ್ನು ಸೂಚಿಸುತ್ತದೆ. ನಾಲಂದಾದಲ್ಲಿ ದೊರೆತ ಮುದ್ರಾಶಾಸನಗಳು ವಿಶೇಷವಾಗಿ ಆ ಬೌದ್ಧ ಕೇಂದ್ರಕ್ಕೆ ಭೇಟಿ ನೀಡಿದ ಅರಸರು, ಸಾಮಂತರು, ಅಧಿಕಾರಿಗಳು ಸಲ್ಲಿಸಿದ ಕಾಣಿಕೆಗಳಿಗೆ ಸಂಬಂಧಿಸಿದುವು. ಆದರೆ ಅವುಗಳಲ್ಲಿ ಹಲವು ಬಿಹಾರದ ರಾಜಕೀಯ ಇತಿಹಾಸ ಮತ್ತು ಆಡಳಿತ ವ್ಯವಸ್ಥೆಗಳನ್ನರಿಯಲು ಸಹಾಯಕವಾಗಿವೆ. ಅವಂತಿವರ್ಮ ಮತ್ತು ಆತನ ಉತ್ತರಾಧಿಕಾರಿಯಾದ ಸೂಚನ ಮುದ್ರಾಶಾಸನದಲ್ಲಿ ಮೌಖರಿಯ ವಂಶಾವಳಿ ಇದೆ. ಅನೇಕ ಜನಪದಗಳ, ಗ್ರಾಮೀಣ ಸಂಸ್ಥೆಗಳ ಇಂಥ ಮುದ್ರೆಗಳು ಅಂದಿನ ರಾಜಕೀಯ ವ್ಯವಸ್ಥೆಗೆ ಸಂಬಂಧಿಸಿದ ವಿವರಗಳನ್ನು ತಿಳಿಸುತ್ತವೆ. ಬಿಹಾರದಲ್ಲಿ ಶಿಲಾಶಾಸನಗಳು ದೊರಕಿರುವುದು ಕಡಿಮೆ. ಬರಾಬರದ ಶಿಲಾಶಾಸನ ಮೌಖರಿಗಳ ಇತಿಹಾಸಕ್ಕೆ ಪ್ರಮುಖ ಆಧಾರಗಳಲ್ಲೊಂದು. ಆದರೆ ಬಹುತೇಕ ಶಾಸನಗಳು, ವಿಶೇಷವಾಗಿ ಪಾಲರ ಕಾಲದಲ್ಲಿ ವಿಗ್ರಹಗಳ ಪೀಠಗಳ ಮೇಲೆ ಕೊರೆಯಲ್ಪಟ್ಟಿದ್ದು ಅವು ಹೆಚ್ಚಿನ ವಿಷಯಗಳನ್ನು ತಿಳಿಸುವುದಿಲ್ಲ. ಪಟ್ನಾ, ಗಯ, ಮೋಘಿಂರ್‍ಗಳಲ್ಲಿಯ ಇಂಥ ಶಾಸನಗಳು ಬೌದ್ಧವಿಗ್ರಹಗಳ ಪೀಠಗಳ ಮೇಲಿದ್ದು ಗೃಹಸ್ಥ ಅಥವಾ ಸನ್ಯಾಸಿಯಾದ ದಾನಿಯ ಹೆಸರು, ಆಗ ಆಳುತ್ತಿದ್ದ ಅರಸನ ಆಳ್ವಿಕೆಯ ವರ್ಷಗಳನ್ನು ಸೂಚಿಸುತ್ತವೆ. ಇವುಗಳಲ್ಲಿ ಪ್ರಖ್ಯಾತವಾದ ಯೇ ಧರ್ಮಾ ಹೇತು ಪ್ರಭವಾ ಎಂಬ ಬೌದ್ಧ ಸೂತ್ರವನ್ನು ಕಂಡರಿಸಿದೆ. ಬೌದ್ಧಧರ್ಮದ ವ್ಯಾಪ್ತಿ ಹಾಗೂ ಪ್ರಭಾವಗಳನ್ನು ಇವುಗಳಿಂದ ತಿಳಿಯಬಹುದು.

ಗಯೆ ಒಂದು ತೀರ್ಥವಾಗಿ ಭಾರತೀಯರಿಂದ ಪರಿಗಣಿಸಲ್ಪಟ್ಟಿದ್ದು ಅಲ್ಲಿ ಹೋಗಿ ಪಿತೃಗಳ ಶಾಂತಿಗಾಗಿ ಪಿಂಡದಾನ ಮಾಡುವುದು ಹಿಂದುಗಳ ಕರ್ತವ್ಯವೆಂದು ಭಾವಿಸಲಾಗಿದೆ. ದೂರಪ್ರದೇಶಗಳಿಂದ ಹಲವಾರು ಅರಸರೋ ಅವರ ಪ್ರತಿನಿಧಿಗಳೋ ಅಲ್ಲಿಗೆ ಹೋಗುತ್ತಿದ್ದರೆನ್ನಲು ಶಾಸನಧಾರಗಳಿವೆ. ಕಾಕತೀಯ ಪ್ರತಾಪರುದ್ರನ (1) ರಾಜಗುರುವಾದ ತ್ರಿಭುವನೀವಿದ್ಯಾ ಚಕ್ರವರ್ತಿ ಎನಿಸಿದ ಮಲ್ಲಿಕಾರ್ಜುನನ ಆತ್ಮಶಾಂತಿಗಾಗಿ ಆತನ ಪತ್ನಿ ಗೌರಿ ಗಯಾಶ್ರಾದ್ಧ ಮಾಡಿದಳೆಂದು ಗಯೆಯ ಒಂದು ಸಂಸ್ಕøತ ಶಾಸನ ತಿಳಿಸುತ್ತದೆ. ಹೊಯ್ಸಳ ಇಮ್ಮಡಿ ನರಸಿಂಹನ ಕಾಲದಲ್ಲಿ ಆಚಾರ್ಯ ಪದ್ಮನಾಭ ಭಟ್ಟೋಪಾಧ್ಯಾಯನ ಮಗನಾದ ಅಪ್ಪಣ್ಣ ಗಯೆಯಲ್ಲಿ ಗಯಾವಜ್ರನ ಮಠ ಒಂದನ್ನು ಕಟ್ಟಿಸಿ ದೇವ-ಪಿತೃ-ಮನುಷ್ಯ ವಿಮಾನಗಳನ್ನು ಕಳೆದುಕೊಂಡನೆಂದು ಅಲ್ಲಿಯ ಒಂದು ಕನ್ನಡ ಶಾಸನ ತಿಳಿಸುತ್ತದೆ. ಕೃಷ್ಣದೇವರಾಯನ ಆಸ್ಥಾನಕವಿಯಾದ ಮುಕ್ಕು. ತಿಮ್ಮಣ್ಣನು ತನ್ನ ಸ್ವಾಮಿಯ ಪರವಾಗಿ ಗಯಾಯಾತ್ರೆ ಮಾಡಿದನೆಂದು ಕ್ರಿ.ಶ. 1521ನೆಯ ವರ್ಷದ ತೆಲುಗು ಶಾಸನವೊಂದು ತಿಳಿಸುತ್ತದೆ.

ಮೌಖರಿಗಳು ಮಗಧದ ಅನಂತರದ ಗುಪ್ತರು ಮತ್ತು ಪಾಲಮನೆತನದ ಅರಸರು ನೀಡಿದ ಹಲವಾರು ತಾಮ್ರಶಾಸನಗಳು ವಿಶೇಷವಾಗಿ ಸಹಸ್ತ, ಭಾಗಲ್ಪುರ, ಮೋಂಘಿರ್ ಮತ್ತು ಪಟ್ನಾ ಜಿಲ್ಲೆಗಳಲ್ಲಿ ದೊರಕಿರುವ ಭೂದಾನ ಪತ್ರಗಳು ಧರ್ಮಪಾಲನ ನಾಲಂದಾ, ದೇವಪಾಲನ ನಾಲಂದಾ ಮತ್ತು ಮೋಂಘಿರ್, ನಾರಾಯಾಣಪಾಲನ ಭಾಗಲ್ಪುರ ಮತ್ತು ವಿಗ್ರಹಪಾಲನ ಬನ್‍ಫಟ ತಾಮ್ರ ಶಾಸನಗಳು ಹೆಸರಿಸತಕ್ಕವು. ಅವುಗಳಲ್ಲಿ ಹಲವಾರು ಅಧಿಕಾರಿಗಳ ಹೆಸರು ಉಲ್ಲೇಖವಾಗಿದ್ದು, ಗ್ರಾಮೀಣ ಪ್ರದೇಶಗಳಿಂದ ವಸೂಲು ಮಾಡುವ ಹಲವಾರು ತೆರಿಗೆಗಳ ವಿವರಗಳು ತಿಳಿದುಬರುತ್ತವೆ. ಪ್ರತಿಗ್ರಹಿಗಳ ಗೋತ್ರ, ಸೂತ್ರ, ಪ್ರವರಗಳು, ಅವರ ಮೂಲಸ್ಥಳಗಳು, ಸಮಾಜದಲ್ಲಿ ಅವರ ಸ್ಥಾನಮಾನಗಳು ಇತ್ಯಾದಿ ಸಹ ಅವುಗಳಲ್ಲಿ ಉಪಲಬ್ಧ ಅಂಶಗಳು. ಬಿಹಾರದಲ್ಲಿ ಪಾಲರ ಆಳ್ವಿಕೆಯ ಕಾಲದಲ್ಲಿಯ ಸಾಮಾಜಿಕ, ಆರ್ಥಿಕ ಮತ್ತು ಆಡಳಿತ ಪರಿಸ್ಥಿತಿಗಳನ್ನರಿಯಲು ಇವು ಉಪಯುಕ್ತ ಆಧಾರಗಳು. ಪಾಲರ ಉತ್ತರಾಧಿಕಾರಿಗಳಾದ ಸೇನರ ಶಾಸನಗಳು ಬಿಹಾರದಲ್ಲಿ ದೊರೆತಿರುವುದು ಅತ್ಯಲ್ಪ. ಆದರೆ ಪ್ರತೀಹಾರರ, ಗಾಹಡವಾಲರ ಶಾಸನಗಳು ಮಹೇಂದ್ರಪಾಲನ, ದಿಘ್ವಾದುಭೌಲಿ ತಾಮ್ರಶಾಸನ, ಷಹಬಾದ್ ಜಿಲ್ಲೆಯ ವಿಜಯಪಾಲನ ಶಾಸನಗಳು ಇತ್ಯಾದಿ. ಪಶ್ಚಿಮ ಬಿಹಾರದ ಇತಿಹಾಸದ ಪುನರಚನೆಗೆ ಸಹಾಯಕಾರಿ. 12ನೆಯ ಶತಮಾನದಲ್ಲಿ ಪಟ್ನಾ ಜಿಲ್ಲೆಯ ಕಂದಾಯ ವ್ಯವಸ್ಥೆಯನ್ನು ಮಾನೇರ್‍ನ ಗಾಹಡವಾಲರ ತಾಮ್ರಪಟ ವಿವರಿಸುತ್ತದೆ. 13ನೆಯ ಶತಮಾನದ ಸಂಗ್ರಾಮಗುಪ್ತನ ಪಂಚೋಭಾ ಶಾಸನ ಒಂದು ಪ್ರಮುಖ ಆಧಾರವೆನ್ನಬಹುದು. (ಜಿ.ಬಿ.ಆರ್.)