ಮಹಾಕ್ಷತ್ರಿಯ/ಮಹಾಪೂಜೆ
==೧೩.ಮಹಾಪೂಜೆ==
ಇಂದು ದಧೀಚಿ ಮಹರ್ಷಿಗಳ ಆಶ್ರಮದಲ್ಲಿ ಅವರಿಗೆ, ದೆವತೆಗಳೆಲ್ಲರೂ ಸೇರಿ ಒಂದು ಮಹಾಪೂಜೆಯನ್ನು ಒಪ್ಪಿಸುತ್ತಾರೆ. ದೇವಗುರುಗಳಾದ ಬೃಹಸ್ಪತ್ಯಾಚಾರ್ಯರು, ದೇವರಾಜನಾದ ಇಂದ್ರ, ದೇವಮುಖ್ಯರಾದ ಅಗ್ನಿ, ವಾಯು ಮೊದಲಾದವರು ಎಲ್ಲರೂ ಅಲ್ಲಿ ನೆರೆದಿದ್ದಾರೆ. ಆಶ್ರಮದ ಮರಮರ, ಗಿಡಗಿಡಗಳ ಎಲೆಎಲೆಯ ಮೇಲೂ ಒಬ್ಬೊಬ್ಬ ದೇವತೆಯು ಬಂದು ನೆಲೆಸಿದೆ. ವಿಚಿತ್ರವಾದ ಮಂಟಪವೊಂದು ಸಿದ್ಧವಾಗಿದೆ. ನಾನಾ ವರ್ಣಗಳ ಮಿಂಚುಗಳು, ಮೋಡಗಳು, ಅಲ್ಲಲ್ಲಿ ಇದ್ದು ಈ ಮಂಟಪಕ್ಕೆ ಶೋಭಾವಹವಾಗಿವೆ. ಒಂದು ಮೂಲೆಯಲ್ಲಿ ಅಪ್ಸರೋನರ್ತನವು ನಡೆಯುತ್ತಿದೆ. ಹಿಮ್ಮೇಳದ ಗಂಧರ್ವರ ಮದ್ದಳೆಯೊಡನೆ ಮೋಡಗಳ ಸಣ್ಣ ಗುಡುಗು ಸೇರಿದೆ. ನಂದನದ ಕಲ್ಪವೃಕ್ಷಗಳು ಅಲ್ಲಿನ ಮಹಾವೃಕ್ಷಗಳಲ್ಲಿ ನಿಂತು ಬೇಕಾದವರಿಗೆ ಬೇಕಾದುದನ್ನು ಕೊಡಲು ಸಿದ್ಧವಾಗಿದೆ. ಚಿಂತಾಮಣಿಯು ಬಂದು ಅಲ್ಲಿ ದೊಡ್ಡ ದೊಡ್ಡ ರತ್ನಸ್ತಂಭಗಳಾಗಿ, ಚಿನ್ನದ ತೊಲೆ, ಬೆಳ್ಳಿಯ ಹಲಗೆಗಳಿಂದ ಒಂದು ಮೂಲಮಂಟಪವನ್ನು ರಚಿಸಿದೆ. ಆ ವೈಭವಕ್ಕೆ ತಕ್ಕಂತೆ ಮಹರ್ಷಿಗಳು ಕುಳಿತುಕೊಳ್ಳಲು ವಿಚಿತ್ರ ರತ್ನಾಸನವೊಂದು ಸಿದ್ಧವಾಗಿದೆ. ದೇವಗುರುಗಳಿಗೂ ದೇವರಾಜನಿಗೂ ದೇವಮುಖ್ಯರಿಗೂ ಸೊಗಸಾದ ಆಸನಗಳು ಪ್ರತ್ಯೇಕ ಪ್ರತ್ಯೇಕವಾಗಿ ಏರ್ಪಟ್ಟಿವೆ.
ಸಕಾಲವಾಗುತ್ತಲೂ ದಧೀಚಿಮಹರ್ಷಿಯು ದಯಮಾಡಿಸಿದನು. ದೇವಗುರುವು ಮಂತ್ರಗಳನ್ನು ಹೇಳುತ್ತಿರಲು, ದೇವರಾಜನು ಅವರಿಗೆ ದಿವ್ಯಗಂಗೋದಕದಿಂದ ಅಭಿಷೇಕವನ್ನು ಮಾಡಿದನು. ಕಾಮಧೇನುವಿನ ಹಾಲು, ಆ ಹಾಲಿನಿಂದಾದ ಮೊಸರು ತುಪ್ಪಗಳಿಂದ, ಕಲ್ಪವೃಕ್ಷವು ಒದಗಿಸಿದ ಮಧುಶರ್ಖರಗಳಿಂದ ಅಭಿಷೇಕವಾಯಿತು. ನಂದನವನದ ಹೂಮಾಲೆಗಳನ್ನು, ದಿವ್ಯಗಂಧಾನುಲೇಪನವನ್ನು ಒಪ್ಪಿಸಿದರು. ಅಮೃತ ಖಂಡವನ್ನು ತಂದು ನಿವೇದಿಸಿದರು. ಕರ್ಪೂರದ ಆರತಿಯನ್ನು ಎತ್ತಿದರು. “ಬ್ರಹ್ಮಜ್ಞನಿಗೆ ಜಯವಾಗಲಿ. ಪರಿಪೂರ್ಣಸ್ವರೂಪನಿಗೆ ಜಯವಾಗಲಿ, ಪೂರ್ಣಕಾಮನಾದ ಈ ಆತ್ಮಸ್ವರೂಪನಿಗೆ ಒಪ್ಪಿಸಿದ ಈ ನಮ್ಮ ಪೂಜೆಯು ಸಫಲವಾಗಲಿ” ಎಂದು ಪ್ರಾರ್ಥನೆಯನ್ನು ಸಲ್ಲಿಸಿ ಪೂಜೆಯನ್ನು ಮುಗಿಸಿದರು.
ದಧೀಚಿಯು ದೇಹಭಾವವನ್ನು ತ್ಯಜಿಸಿ ಕೇವಲ ಬ್ರಹ್ಮಸ್ವರೂಪನಾಗಿ ಕುಳಿತು ಪೂಜೆಯನ್ನೆಲ್ಲ ಸ್ವೀಕಾರಮಾಡಿದನು. ಪೂಜಾಂತ್ಯದಲ್ಲಿ ಬಹಿರ್ಮುಖವಾಗಿ “ದೇವತೆಗಳು ಸಲ್ಲಿಸಿದ ಈ ಪೂಜೆಯಿಂದ ಅವರು ಸಕಾಮರಾಗಲಿ, ಏನು ವರಬೇಕೋ ಕೇಳಿ” ಎಂದನು. ಕಲ್ಪವೃಕ್ಷ, ಕಾಮಧೇನು, ಚಿಂತಾಮಣಿ, ಅಮೃತಗಳನ್ನು ಪಡೆದಿರುವ ದೇವತೆಗಳು ಬ್ರಹ್ಮಜ್ಞನಾದ ದಧೀಚಿಯ ಮುಂದೆ ವರಗಳನ್ನು ಕೇಳಿಕೊಳ್ಳುತ್ತಿದ್ದಾರೆ. ಆತನು, ದೇಹದಲ್ಲಿರುವ ಜಡಭೂತಗಳ ತನ್ಮಾತ್ರೆಗಳು ಪರಿಪೂರ್ಣತೆಯನ್ನು ಕಕ್ಕುತ್ತಲಿರಲು, ಆಕಾಶದಲ್ಲಿರುವ ಶಬ್ದವೆಲ್ಲ ಪಿಂಡೀಕೃತವಾಗಿ ಸಂಚಲಿತವಾದಂತೆ, ದೇಹ ದೇಹದಲ್ಲಿಯೂ ಪ್ರತ್ಯೇಕ ಪ್ರತ್ಯೇಕವಾಗಿ ನಿಂತಿದ್ದರೂ, ವಿಶ್ವವನ್ನೆಲ್ಲ ವ್ಯಾಪಿಸಿರುವ ಪ್ರಾಣವೇ ಮೂರ್ತಿವೆತ್ತು ಬಂದು, ತನ್ನಿಂದ ಬಂದಿರುವ ದೇವತೆಗಳನ್ನು ಅನುಗ್ರಹಿಸುವಂತೆ, ವರವನ್ನು ಕೊಡುತ್ತಿದ್ದಾನೆ. ವಿಶ್ವವ್ಯಾಪಕಗಳಾಗಿ, ಬ್ರಹ್ಮಾಂಡವನ್ನೆಲ್ಲ ರಚಿಸಿರುವ ಪಂಚಭೂತಗಳು ತೃಪ್ತಗಳಾಗಿ, “ಶ್ರುತಿ ಭಗವತಿಯು ನುಡಿದಿದ್ದಳು. ‘ಬ್ರಹ್ಮಸ್ವರೂಪನಾದವನಿಗೆ ದೇವತೆಗಳೆಲ್ಲರೂ ಬಲಿಯನ್ನು ಒಪ್ಪಿಸುವರು’ ಎಂದು. ಅದನ್ನಿಂದು ಕಂಡೆವು. ದೇಹಾಭಿಮಾನ ಶೂನ್ಯವಾಗಿ ಪರಿಪೂರ್ಣ ವಸ್ತುವಿನಲ್ಲಿ ಅಪ್ಯಯವನ್ನು ಪಡೆದ ಮಹಾನುಭಾವನಿಂದ ದೇವತೆಗಳು ವರವನ್ನು ಪಡೆಯುವರೆಂದು ಇಂದು ಕಂಡೆವು. ಈ ಮಹಾತ್ಮನಿಗೆ ಪೂಜೆಯನ್ನು ಒಪ್ಪಿಸಿ, ಬ್ರಹ್ಮಾಂಡವನ್ನೇ ತೃಪ್ತಿಪಡಿಸಿದ ದೇವತೆಗಳಿಗೆ ಇಚ್ಛಾಪೂರ್ಣವಾಗದಿರುವುದೆಂತು ?” ಎಂಬ ಸಂತೋಷದಿಂದ ನರ್ತಿಸಿದುವು.
ಬ್ರಹ್ಮಾಂಡದಲ್ಲಿರುವ ಪಿಂಡಾಂಡವೊಂದೊಂದನ್ನೂ ಸಂಘಟಿಸುವ ಪಂಚ ಮಹಾಭೂತಗಳು ತಮ್ಮ ಸ್ಥೂಲಸೂಕ್ಷ್ಮಕಾರಣಾವಸ್ಥೆಗಳಲ್ಲಿಯೂ ತೃಪ್ತವಾದುವು ಎಂದ ಮೇಲೆ ಬ್ರಹ್ಮಾಂಡದಲ್ಲಿರುವ ಸ್ಥಾವರ ಜಂಗಮಗಳೆಲ್ಲವೂ ಖನಿಜ, ಉದ್ಭಿಜ, ಸ್ವೇದಜ, ಅಂಡಜ, ಜರಾಯಜ ಎಂಬ ಪಂಚವಿಧ ಪ್ರಾಣಿಗಳೂ ತೃಪ್ತಿಯನ್ನು ಪಟ್ಟವೆಂದು ಬೇರೆಯಾಗಿ ಹೇಳಬೇಕಾದುದೇನು?
ಆ ಬ್ರಹ್ಮರ್ಷಿಯ ಮುಂದೆ ದೇವರಾಜನು ಕೈ ಮುಗಿದು ನಿಂತಿದ್ದಾನೆ. ದೇವಗುರುವಿನ ಅಪ್ಪಣೆಯಿಂದ ನುಡಿಯುತ್ತಿದ್ದಾನೆ. “ದೇವ, ತಮ್ಮ ಮುಂದೆ ಕ್ಷುದ್ರರೆಂದು ಹೇಳಿಕೊಳ್ಳಲೂ ಆಗದ ಕ್ಷುದ್ರರು ನಾವು. ತಾವು ಈ ಬ್ರಹ್ಮಾಂಡವನ್ನು ತನ್ನೊಳಗಿರುವ ಅವ್ಯಕ್ತಕ್ಕಿಂತಲೂ ಆಚಿನದನ್ನು ಬಲ್ಲವರು. ಈ ಬ್ರಹ್ಮಾಂಡ ನಾಯಕನಾದ ಮಹಾವಿಷ್ಣುವಿನ ಅಪ್ಪಣೆಯೆಂದು ತಮ್ಮ ಸನ್ನಿಧಾನಕ್ಕೆ ಬಂದು ಬೇಡಿಕೊಳ್ಳುತ್ತಿರುವೆವು. ತಮ್ಮ ಮೈಯೆಲ್ಲವೂ ತಪಸ್ಸಿನಿಂದ ವಜ್ರವಾಗಿರುವುದು. ರಕ್ತಮಾಂಸಾದಿ ಸಪ್ತಧಾತುಗಳನ್ನು ತಮ್ಮ ತಪೋಬಲದಿಂದ ವಜ್ರಗಳನ್ನಾಗಿ ಮಾಡಿರುವವರು ತಾವು. ದೇವಗಣ ಸಂರಕ್ಷಣಾರ್ಥವಾಗಿ, ಬ್ರಹ್ಮಾಂಡದ ಪ್ರಯೋಜನಕ್ಕಾಗಿ ವರವನ್ನು ಕೊಡಬೇಕು.”
ಬ್ರಹ್ಮರ್ಷಿಯು ನಕ್ಕು ಕೇಳಿದನು : “ವರವು ಬೇಕು. ಕೊಟ್ಟಿದ್ದೇನೆ. ಈಗ ಬಾಯಿಬಿಟ್ಟು ಹೇಳು.”
ಇಂದ್ರನು ನಡುಗುತ್ತಾ ಹೇಳಿದನು : “ದೇವ, ತಮ್ಮ ಬೆನ್ನು ಮೂಳೆಯು ಬೇಕು.”
“ಈ ದೇಹದಲ್ಲಿ ಇನ್ನೂ ಪ್ರಾಣವಿದ್ದಾಗಲೇ ಬೇಕೋ ? ಅಥವ ಅನಂತರ ತೆಗೆದುಕೊಳ್ಳುವಿರೋ ?”
“ದೇವಾ, ತಾವು ಈ ದೇಹವನ್ನು ಬಿಟ್ಟರೆ ಅಸ್ಥಿಯು ಹತತೇಜವಾಗುವುದು. ಅದು ಆಗ ವಜ್ರವಾಗುವುದಿಲ್ಲ. ನಾವು ತಮ್ಮ ಬೆನ್ನುಮೂಳೆಯಿಂದ ವಜ್ರವನ್ನು ಮಾಡಬೇಕೆಂದಿರುವೆವು. ವಜ್ರವು ಸರ್ವಶಸ್ತ್ರಗಳಲ್ಲೂ ಉತ್ತಮವಾಗುವುದು. ಅದರಿಂದ ಅನುಗ್ರಹ ಮಾಡಿ ತಾವು ಸಜೀವರಾಗಿರುವಾಗಲೇ ಆಸ್ಥಿಯನ್ನು ದಾನ ಮಾಡಬೇಕು.”
ದಧೀಚಿಯು ನಕ್ಕನು. ಎಲ್ಲರೂ ತಾನು ತಾನು ಎಂದುಕೊಳ್ಳುವ ದೇಹದ ಮೇಲೆ ಅಭಿಮಾನವಿಲ್ಲದ ಆತನಿಗೆ ದೇವರಾಜನ ಪ್ರಾರ್ಥನೆಯಲ್ಲಿ ಅಂತಹ ವಿಶೇಷವೇನೂ ಕಾಣಲಿಲ್ಲ. ``ಆತನು ತನ್ನ ಬೆನ್ನುಮೂಳೆಯನ್ನು ಕೇಳುತ್ತಿದ್ದಾನೆ. ಅದನ್ನು ಕೊಟ್ಟುಬಿಟ್ಟರೆ ದೇಹವುಳಿಯುವಂತಿಲ್ಲ ; ಅಥವಾ ದೇಹವುಳಿಯಬೇಕೆಂದರೆ, ಇನ್ನೊಂದು ಬೆನ್ನುಮೂಳೆಯನ್ನು ಬೆಳೆಸಬೇಕು. ಆತನಿಗೆ ಈ ಎರಡನೆಯ ಅಭಿಪ್ರಾಯವು ಹಿಡಯಲಿಲ್ಲ. ಯಾವೊತ್ತಾದರೂ ಎಸೆಯಬೇಕಾದ ದೇಹವಿದು. ಇವೊತ್ತೇ ಹೋದರೆ ಏನು ಮಹಾ ! ಈಗ ಈ ದೇಹವನ್ನು ದೇವಕಾರ್ಯಾರ್ಥವಾಗಿ ಬಿಡುವುದಕ್ಕಿಂತ ಇನ್ನೇನು ಬೇಕು ?” ಎಂದುಕೊಂಡನು. ದೇಹಾಭಿಮಾನಿಯಾದ ಕ್ಷರಪುರುಷನನ್ನು ಕರೆದು, “ಇದೋ, ಈ ದೇವರಾಜನ ಪ್ರಾರ್ಥನೆಯನ್ನು ಸಲ್ಲಿಸು. ಅದುವರೆಗೆ ನಾನು ಇಲ್ಲಿರುವೆನು” ಎಂದನು. ಕ್ಷರಪುರುಷನು “ದೇವ, ನನ್ನದೊಂದು ಪ್ರಾರ್ಥನೆಯುಂಟು. ಸರ್ವದೇವತಾತ್ಮಕವಾದ ಕಾಮಧೇನವು ಬೆನ್ನನ್ನು ನೆಕ್ಕಿ ಮೂಳೆಯನ್ನು ಬಿಡಿಸಲಿ. ಈ ನನ್ನ ಪ್ರಾರ್ಥನೆಯನ್ನು ದೇವರಾಜನು ನಡೆಸಿಕೊಡಲಿ” ಎಂದು ಕೈಮುಗಿದನು. ದಧೀಚಿಯು ಅದಕ್ಕೂ ನಕ್ಕೂ “ಅಂತೂ ಇಂತೂ ಮುಗಿಯಿತೆಂದು ಕಂತೆ ಒಗೆಯಬೇಕು. ಹಾಗೆ ಬಿದ್ದರೆ ಹೆಚ್ಚೇನು ? ಹೀಗೆ ಬಿದ್ದರೆ ಕಡಿಮೆಯೇನು ? ಆಗಲಿ, ನಿನ್ನ ಕೋರಿಕೆಯೂ ನೆರವೇರಲಿ” ಎಂದು ಇಂದ್ರನನ್ನು ಕರೆದು ಕ್ಷರಪುರುಷನ ಇಷ್ಟವನ್ನು ತಿಳುಹಿದನು. ಇಂದ್ರನು ಆಗಲೆಂದು ಕಾಮಧೇನುವನ್ನು ಕರೆದು ಹೇಳಿದನು. ಕಾಮಧೇನವು “ನನಗೆ ಅದರಿಂದ ಕೆಟ್ಟ ಹೆಸರು ಬರದಿರಲಿ. ನಾನು ಆ ಕಾರ್ಯವನ್ನು ಏಕಾಂತದಲ್ಲಿ ಮಾಡಲು ಅಪ್ಪಣೆಯಾಗಬೇಕು” ಎಂದಳು. ಇಂದ್ರನು ಆಗಲೆಂದನು. ಇಂದ್ರನು ಕಾಮಧೇನುವಿನ ರಕ್ಷಣೆಗೂ, ಆ ಬೆನ್ನುಮೂಳೆಯನ್ನು ತೆಗೆದುಕೊಂಡು ಹೋಗಿ, ವಿಶ್ವಕರ್ಮನಿಗೆ ಕೊಟ್ಟು ಅದನ್ನು ವಿಶೇಷ ಅಯುಧವನ್ನಾಗಿ ಮಾಡಲೂ ತಕ್ಕ ಪರಿವಾರವನ್ನು ಅಲ್ಲಿ ಗೊತ್ತುಮಾಡಿ ತಾನು ತನ್ನವರನ್ನು ಕರೆದುಕೊಂಡು ಬ್ರಹ್ಮರ್ಷಿಯ ಅಪ್ಪಣೆ ಪಡೆದು ಹೊರಟುಹೋದನು.
ದಧೀಚಿಯು ತನ್ನ ಧ್ಯಾನಾನಂದದಲ್ಲಿ ತಾನಿದ್ದಾನೆ. ಆತನ ಆನಂದವು ಘನವಾಗಿ ಜ್ಞಾನಸ್ವರೂಪವಾಗಿ ತಾನೇತಾನಾಗಿದೆ. ಆಗ, ತ್ವಷ್ಟೃವು ಅಲ್ಲಿಗೆ ಬಂದನು. ದಧೀಚಿಯು ನಾಮರೂಪಾತ್ಮಕ ಪ್ರಪಂಚವನ್ನು ಬಿಟ್ಟು ಆನಂದಮಯ ಕೋಶವನ್ನು ದಾಟಿ, ಆರೂಢನಾಗಿ ಸಮುದ್ರನಾಗಿ ಸಮುದ್ರದ ಜಲದಲ್ಲಿ ಬೆರೆತುಹೋಗುವ ನದೀಜಲದಂತೆ ಅಷ್ಟಷ್ಟಾಗಿ ಕರಗುತ್ತಿದ್ದಾನೆ. ಆಕಾಶದಲ್ಲಿ ತುಂಬಿರುವ ಪ್ರಣವದಲ್ಲಿ ತನ್ನ ಜ್ಞಾತೃಭಾವವನ್ನು ಬಿಟ್ಟು ಸ್ವಭಾವರಹಿತವಾದ ಭವದಲ್ಲಿ ಲೀನವಾಗುವ ಪ್ರಯತ್ನದಲ್ಲಿದ್ದಾನೆ. ಒಟ್ಟಿನಲ್ಲಿ ಆತನದು ಬೇಲೀ ಹಾರುವ ಪ್ರಯತ್ನ. ದೇಹತತ್ವವನ್ನು ದಾಟಿದ್ದಾನೆ. ಮನಸ್ಸತ್ವವನ್ನು ದಾಟಿದ್ದಾನೆ. ಬುದ್ಧಿಯಲ್ಲಿರುವ ಅಹಂಕಾರ ತತ್ವದಿಂದ ಪರಾಙ್ಮುಖನಾಗುತ್ತಿದ್ದಾನೆ. ಇನ್ನೂ ಪ್ರತ್ಯಭಿಜ್ಞೆಯು ಅಳಿದಿಲ್ಲ. ಆಗ ತ್ವಷ್ಟೃವು ‘ದಧೀಚಿ’ ಎಂದು ಕೂಗುತ್ತ ಒಳಗೆ ಬಂದನು. ಆತನ ಸನ್ನಿಧಾನವೂ, ಆತನು ನಾಮನಿರ್ದೇಶ ಪೂರ್ವವಾಗಿ ಕೂಗಿದುದೂ ಸೇರಿ, ದಧೀಚಿಯನ್ನು ಹಿಂದಕ್ಕೆ ಕರೆಯಿತು. ಮತ್ತೆ ಜ್ಞಾತೃಭಾವವು ಪ್ರಬಲವಾಯಿತು. ಅಲ್ಲಿಂದ ಶುದ್ಧಾಕಾಶ ಮಂಡಲದಿಂದ ಕ್ರಮಕ್ರಮವಾಗಿ ಪಂಚಭೂತಗಳನ್ನೆಲ್ಲಾ ಪ್ರವೇಶಿಸಿ, ಸಂಘಾತ ರೂಪಕವಾದ ಕ್ಷೇತ್ರವನ್ನು ಪ್ರವೇಶಿಸಿ, ಮತ್ತೆ ಎಚ್ಚರಗೊಂಡು, “ಯಾರು ?” ಎಂದನು. ತ್ವಷ್ಟೃವು ಗೋತ್ರಸೂತ್ರಾತ್ಮಕವಾಗಿ ಪ್ರವರವನ್ನು ಹೇಳಿ ಅಭಿವಂದಿಸಿದನು.
ದಧೀಚಿಯು ಮತ್ತೆ ಮಿತಪ್ರಜ್ಞನಾಗಿ ಪಂಚಭೂತಸಂಘಾತವಾದ ಕ್ಷರ ಪುರುಷನ ಕ್ಷೇತ್ರಕ್ಕೆ ಪ್ರವೇಶಿಸಬೇಕಾಗಿ ಬಂತೆಂದು ಆಶ್ಚರ್ಯಪಡುತ್ತ ಅವೆಲ್ಲವೂ ಮಾಯಾಶಖಲವಾಗಿದ್ದರೂ, ಅಗ್ನಿಸಂಪರ್ಕದಿಂದ ಬಿಸಿಯನ್ನು ಕೆಂಪನ್ನು ಪಡೆದ ಲೋಹಪಿಂಡದಂತೆ, ಚೇತನಚೈತನ್ಯನಾದ ತನ್ನ ಸಂಪರ್ಕದಿಂದ ತಾವೂ ಚೇತನವಾಗಿರುವ ಆಶ್ಚರ್ಯಕರವಾದ ದೃಶ್ಯದಿಂದ ಸಂತೋಷಪಡುತ್ತ ಆತನನ್ನು ಮಾತನಾಡಿಸಿದನು : “ಏನು ತ್ವಷ್ಟೃ ? ಇಲ್ಲಿಯವರೆಗೆ ಬಂದೆಯಲ್ಲ ?” ತ್ವಷ್ಟೃವು ಹೇಳಿದನು “ಇಂದ್ರನಿಲ್ಲಿಗೆ ಬಂದಿದ್ದನಂತೆ ! ನೀನು ಅವನಿಗೆ ವಜ್ರಸಾರವಾದ ನಿನ್ನ ಬೆನ್ನಮೂಳೆಯನ್ನು ಕೊಟ್ಟೆಯಂತೆ!
“ಹೌದು.”
“ಅದರಿಂದಾಗುವ ಅನರ್ಥವನ್ನು ಬಲ್ಲೆಯಾ ?”
“ನನಗೆ ಅರ್ಥವೂ ಅನರ್ಥವೇ! ಅನರ್ಥವೂ ಅರ್ಥವೇ! ಈಗ ಬಹುಕಷ್ಟದಿಂದ ನಾನು ನೀನು ಎಂಬ ಭೇದವನ್ನು ಕಲ್ಪಿಸಿಕೊಂಡು ಮಾತನಾಡುವ ಅವಸ್ಥೆಯಲ್ಲಿ ಇದ್ದೇನೆ. ನಿನಗೇನಾಗಬೇಕು ಹೇಳು?”
ತ್ವಷ್ಟೃವು ಆ ಮಾತು ಕೇಳಿ ದಿಗಿಲಿನಿಂದ ಹೇಳಿದನು : “ದೇವ, ನಾನು ಈ ಇಂದ್ರನನ್ನು ಕೊಲ್ಲಲು ಒಂದು ಕೃತ್ಯ ಮಾಡಿದ್ದೇನೆ. ಅದನ್ನು ಈಗ ಯಾವ ಅಸ್ತ್ರಶಸ್ತ್ರಗಳಿಂದಲೂ ಹೊಡೆಯಲಾಗುವುದಿಲ್ಲವೆಂದು ಈ ಕಳ್ಳನು ನಿನ್ನ ಬಳಿಗೆ ಬಂದು, ತಪಃಪವಿತ್ರವಾದ ನಿನ್ನ ಶರೀರದಿಂದ ಮೂಳೆಯನ್ನು ಕೇಳಿದ್ದಾನೆ. ಅದರಿಂದ ಅವನು ಅದನ್ನು ಹೊಡೆದರೆ ನನ್ನ ಕಷ್ಟವೆಲ್ಲ ವ್ಯರ್ಥವಾಗುವುದು.”
ದಧೀಚಿಗೆ ಆ ಮಾತು ಹಿಡಿಸಲಿಲ್ಲ “ತ್ವಷ್ಟೃ. ನೀನು ಬ್ರಹ್ಮನಾಗಿರುವುದು ಲೋಕವನ್ನು ಸಂತಾನದಿಂದ ತುಂಬುವುದಕ್ಕೆ. ನಿನ್ನ ಕೆಲಸದಲ್ಲಿ ನೀನಿರು. ಈ ಕೃತ್ಯ ಮೊದಲಾದವುಗಳನ್ನು ಮಾಡಿ, ಇರುವ ಸ್ಥಿತಿಯನ್ನು ಕೆಡಿಸಬೇಡ. ಈ ದ್ವೇಷಭಾವವನ್ನು ಇಲ್ಲಿಗೇ ಬಿಡು. ಇಷ್ಟು ದಿವಸ ಈ ಭಾವದಲ್ಲಿದ್ದುದು ಸಾಕು” ಎಂದನು.
ಮಾತು ಮೃದುವಾಗಿ ಆಡುತ್ತಿದ್ದರೂ ಆ ನುಡಿಗಳಲ್ಲಿ ಏನೋ ವಜ್ರಸಾರವಿದ್ದಂತೆ ತ್ವಷ್ಟೃವಿಗೆ ಹಿಡಿದು, ಹೃದಯದಲ್ಲಿ ತುಂಬಿದ್ದ ಕರಾಳವಾದ ಇಂದ್ರದ್ವೇಷವೆಂಬ ಕತ್ತಲೆಯನ್ನು ತೊಳೆದು ಶುದ್ಧಮಾಡಿದಂತಾಯಿತು. ಇಂದ್ರನಿಗೆ ಸಹಾಯ ಮಾಡಕೂಡದು ಎಂದು ಕೇಳಿಕೊಳ್ಳಲು ಬಂದಿದ್ದವನು, ಈಗ ತದ್ವಿರುದ್ಧ ಭಾವವನ್ನು ಹಿಡಿದಂತಾಗಿ, “ನಿಜ, ದಧೀಚಿಯು ಹೇಳಿದುದು ಸರಿ. ಸ್ಥಿತಿರಕ್ಷೆಗಳಿಗೆ ನಿಯಮಿತನಾಗಿರುವವನು ತನ್ನ ಅಧಿಕಾರವನ್ನು ಉಪಯೋಗಿಸಿದರೆ ನಾನೇಕೆ ಅಡ್ಡವಾಗಬೇಕು?” ಎನ್ನಿಸಿತು. ತಾನು ಕೃತ್ಯವನ್ನು ಸೃಷ್ಟಿಸಿದುದು ಒಂದು ಅಪರಾಧವಾದರೆ ಅದು ತನ್ನ ಕಾರ್ಯವನ್ನು ಮಾಡಲೇಬೇಕೆಂದು ಹಟ ತೊಡುವುದು ಇನ್ನೂ ಮಹತ್ತರವಾದ ಅಪರಾಧವೆನಿಸಿ, ಕೃತ್ಯವು ಗೆದ್ದರೆ ಗೆಲ್ಲಲಿ, ಸೋತರೆ ಸೋಲಲಿ, ಅದರ ವಿಚಾರವಾಗಿ ಅಭಿಮಾನ ಪಡುವುದು ಹೆಡ್ಡತನ ಎನ್ನಿಸಿತು. ಎದ್ದು “ಬ್ರಹ್ಮಜ್ಞನ ದರ್ಶನದಿಂದ ನನಗೆ ಚಿತ್ತಶುದ್ಧಿಯಾಯಿತು. ಇನ್ನು ಮೇಲೆ ಇಂತಹ ದುಷ್ಕೃತ್ಯಗಳಿಗೆ ಮನಸ್ಸು ಹೋಗದಿರಲಿ” ಎಂದು ಪ್ರಾರ್ಥನೆ ಮಾಡಿ ಆತನಪ್ಪಣೆಯನ್ನು ಪಡೆದು ಕ್ರೋಧದುಃಖಗಳಿಂದ ಸಂತಪ್ತವಾಗಿ ಬಂದಿದ್ದವನು ಆನಂದದಿಂದ ಸಂತೃಪ್ತನಾಗಿ ಹೊರಟು ಹೋದನು.
ಮತ್ತೆ ದಧೀಚಿಯು ಮುಂಚಿನಂತೆ ಚತುರ್ಭೂತಗಳನ್ನು ಒಂದೊಂದಾಗಿ ದಾಟಿ ಆಕಾಶಕ್ಕೆ ಬಂದು ಅದರ ವಿಲಯನ ಗತಿಯನ್ನು ದಾಟಿ, ಅಲ್ಲಿ ಜ್ಞಾತೃ ಭಾವವನ್ನು ಬಿಟ್ಟು ಬ್ರಹ್ಮಾಂಡಗತಿಯನ್ನು ಮೀರಿದನು. ಇತ್ತ ಕ್ಷರಪುರುಷನು ಕಾಮಧೇನುವಿಗೆ ಆಜ್ಞೆಯನ್ನು ಕೊಟ್ಟನು. ಆಕೆಯು ನೆಕ್ಕಿ ನೆಕ್ಕಿ ಬೆನ್ನುಮೂಳೆಯನ್ನು ಬಿಡಿಸಿದಳು. ದೇವರಾಜನ ಕಡೆಯವರು ಆ ಮೂಳೆಯನ್ನು ಅಲ್ಲಿಂದ ತೆಗೆದುಕೊಂಡು ಹೋಗಿ ವಿಶ್ವಕರ್ಮನಿಗೆ ಒಪ್ಪಿಸಿದರು. ಆತನು ಅದು ಒಣಗುವುದರೊಳಗೆ ಅದನ್ನು ಕಡೆದು, ಅಸ್ತ್ರಶಸ್ತ್ರರಾಜನಾದ ಆಯುಧವನ್ನು ಸಿದ್ಧಮಾಡಿ ಅದಕ್ಕೆ ವಜ್ರವೆಂದು ಹೆಸರಿಟ್ಟನು. ದೇವರಾಜನು ಅದರ ತೇಜಸ್ಸು ನೋಡಿ ಸಂತೋಷಪಟ್ಟು ಅದನ್ನು ಧರಿಸಿ ವಜ್ರಹಸ್ತನೆಂದು ಹೊಗಳಿಸಿಕೊಂಡನು.
* * * *