ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ವರದಕ್ಷಿಣೆ

ವಿಕಿಸೋರ್ಸ್ದಿಂದ

ವರದಕ್ಷಿಣೆ - ನಗ, ನಾಣ್ಯ, ವಸ್ತು, ಆಸ್ತಿಗಳ ರೂಪದಲ್ಲಿ ವಧುವಿನಿಂದ ವರ ಪಡೆಯುವ ಸಂಪತ್ತು (ಡೌರಿ). ಭಾರತೀಯ ಸಮಾಜಗಳಲ್ಲಿ ವಿವಾಹ ಒಂದು ಪವಿತ್ರವಾದ ಸಂಸ್ಥೆ. ಗಂಡು-ಹೆಣ್ಣು ಹಾಗೂ ಅವರ ಕುಟುಂಬಗಳ ನಡುವೆ ಅನುಬಂಧವನ್ನು ಕಲ್ಪಿಸುವ ವ್ಯವಸ್ಥೆ. ಈ ವಿವಾಹ ಸಂಸ್ಥೆಗೆ ಸಂಬಂಧಪಟ್ಟಂತೆ ಭಾರತಕ್ಕೆ ವಿಶಿಷ್ಟವಾಗಿರುವ ಪದ್ಧತಿ ವರದಕ್ಷಿಣೆ. ವಿವಾಹದ ಸಮಯದಲ್ಲಿ ವಧುವಿನ ಕಡೆಯವರು ವರ ಅಥವಾ ಅವನ ಪಾಲಕರಿಗೆ ಕೊಡುವ ಅಥವಾ ವಿವಾಹ ಸಮಯದಲ್ಲಿ ಹುಡುಗಿ ಗಂಡನ ಮನೆಗೆ ತರುವ ಹಣ, ಒಡವೆ, ಭೂಮಿ, ಮನೆ ನಿವೇಶನ ಮತ್ತು ಇತರ ಆಸ್ತಿಗಳನ್ನು ವರದಕ್ಷಿಣೆ ಎನ್ನಲಾಗಿದೆ. ಇದು ಹುಡುಗಿಯ ಕಡೆಯವರು ಸ್ವಇಚ್ಛೆಯಿಂದ ನೀಡಿದ್ದಾಗಿರಬಹುದು ಅಥವಾ ಹುಡುಗನ ಬಂಧುಗಳು ಬೇಡಿಕೆಯ ಮೂಲಕ ಪಡೆದುದಾಗಿರಬಹುದು.

ವರದಕ್ಷಿಣೆಯ ಸಮರ್ಥನೆಗೆ ಅನೇಕ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕøತಿಕ ಕಾರಣಗಳ ಪ್ರತಿಪಾದನೆಯಿದೆ. ಪ್ರಾಚೀನ ಸಮಾಜದಲ್ಲಿ ವಧುದಕ್ಷಿಣೆ ಪದ್ಧತಿ ರೂಢಿಯಲ್ಲಿತ್ತು. ಇದಕ್ಕೆ ತೆರ, ತಿರ ಎಂಬ ಹೆಸರುಗಳಿವೆ. ಗಂಡಿನ ಕಡೆಯವರೆ ಹಣಕೊಟ್ಟು ಹುಡುಗಿಯನ್ನು ಮದುವೆ ಮಾಡಿಕೊಳ್ಳಬೇಕಾಗಿತ್ತು. ಇದು ಬುಡಕಟ್ಟು ಜನರಲ್ಲಿ ಹೆಚ್ಚಾಗಿ ಕಂಡುಬರುತ್ತಿತ್ತು. ಆದಿವಾಸಿಗಳಲ್ಲಿ ಇಂದಿಗೂ ಈ ಪದ್ಧತಿ ಉಳಿದಿದೆ. ವಧು ದಕ್ಷಿಣೆಯು ನಗದು ರೂಪದಲ್ಲಿ ಅಥವಾ ಬಟ್ಟೆ, ಒಡವೆ, ಅಡುಗೆ ಪಾತ್ರೆ, ಧಾನ್ಯ, ಸರಾಯಿಗಳ ರೂಪದಲ್ಲಿ, ಹಸು, ಆಡು, ಎಮ್ಮೆ ಮುಂತಾದ ಪ್ರಾಣಿ ರೂಪದಲ್ಲಿರುತ್ತಿತ್ತು. ಇದು ಒಂದು ರೀತಿಯ ವಿನಿಮಯ. ಗಂಡಿನ ತಂದೆ, ಹುಡುಗಿಯ ಮೇಲಿನ ಹಕ್ಕನ್ನು ಪಡೆಯಲು ಹೆಣ್ಣಿನ ತಂದೆಗೆ ನೀಡಬೇಕಾದ ಬೆಲೆ ಇದು. ಕೃಷಿಕ ಸಮಾಜದಲ್ಲಿ ಹೆಣ್ಣು ಉತ್ಪಾದಕ ದುಡಿಮೆಗಾರಳಾಗುತ್ತಿದ್ದಳು. ಬೇರೆ ಮನೆಗೆ ಹೋಗುವು ದರಿಂದ ಆಗುತ್ತಿದ್ದ ನಷ್ಟವನ್ನು ತುಂಬಲು ಗಂಡಿನ ತಂದೆ ಪರಿಹಾರ ನೀಡಬೇಕಾಗುತ್ತಿತ್ತು. ಈ ಪದ್ಧತಿಯಿಂದ ಹುಡುಗಿಯು ತಂದೆ ತಾಯಿಗೆ ಹೊರೆಯಾಗುತ್ತಿರಲಿಲ್ಲ ಬದಲಿಗೆ ಆದಾಯ ಮೂಲವಾಗಿರುತ್ತಿದ್ದಳು. ಆದರೆ ಹೆಣ್ಣನ್ನು ಒಂದು ವಸ್ತುವಿನಂತೆ ಖರೀದಿ ಮಾಡುವಂತಾಗುತ್ತಿತ್ತು. ಗಂಡನನ್ನು ಬಿಡಬೇಕಾದ ಸಂದರ್ಭ ಬಂದರೆ ವಧುದಕ್ಷಿಣೆಯನ್ನು ಹಿಂದಿರುಗಿಸಬೇಕಾಗುತ್ತಿತ್ತು. ವಧುದಕ್ಷಿಣೆ ಗಂಡನ ಮನೆಯಲ್ಲಿ ಹೆಣ್ಣಿಗೆ ಮನ್ನಣೆ ಸ್ಥಾನವನ್ನು ತಂದುಕೊಡುತ್ತಿತ್ತು. ಮೊದಲನೆಯ ಹೆಂಡತಿ ಬಿಟ್ಟುಹೋದರೆ ಗಂಡು ಮತ್ತೊಂದು ಹೆಣ್ಣು ತರಲು ಮತ್ತೆ ವಧುದಕ್ಷಿಣೆ ಕೊಡಬೇಕಾಗುತ್ತಿತ್ತು. ಆದರೆ ಆರ್ಥಿಕ ಸಂಪತ್ತಿನಿಂದ ಸಾಮಾಜಿಕ ಸ್ಥಾನ ಉತ್ತಮಗೊಂಡಂತೆ, ಪುರುಷರು ಆದಾಯ ಬರುವ ಕೆಲಸದಲ್ಲಿ ತೊಡಗಿದಂತೆ ಹಾಗೂ ಪುರುಷ ಪ್ರಧಾನತೆಯ ಪ್ರಭಾವ ಅಧಿಕವಾದಂತೆ ವಧುದಕ್ಷಿಣೆಗೆ ಬದಲಾಗಿ ವರದಕ್ಷಿಣೆ ಪದ್ಧತಿ ಜಾರಿಗೆ ಬಂತು.

ಹಿಂದುಧರ್ಮದಲ್ಲಿ ಹಿಂದೆ ಇದನ್ನು ಸ್ತ್ರೀಧನ ಎಂದು ಕರೆಯಲಾಗು ತ್ತಿತ್ತು. ಅವಿಭಕ್ತ ಕುಟುಂಬದಲ್ಲಿ ಹೆಣ್ಣುಮಗಳಿಗೆ ಜೀವನಾಂಶ ತೆಗೆದಿಟ್ಟಾಗ ಅದನ್ನು ವಿವಾಹ ಮಾಡಿಕೊಡಲು ಅಥವಾ ಒಡವೆ, ಬಟ್ಟೆ, ಪಾತ್ರೆ, ದವಸಧಾನ್ಯ ಮತ್ತು ಸಾಕು ಪ್ರಾಣಿಗಳ ರೂಪದಲ್ಲಿ ನೀಡಲಾಗುತ್ತಿತ್ತು. ಈ ಸ್ತ್ರೀಧನ ಸಂಪೂರ್ಣವಾಗಿ ಹುಡುಗಿಗೆ ಸೇರಿರುತ್ತಿತ್ತು. ಇದು ಅವಳ ಹಕ್ಕಾಗಿತ್ತು. ಗಂಡನ ಮನೆಯವರು ಇವನ್ನು ಬಳಸಬಹುದಾಗಿತ್ತು. ಆದರೆ ಇವುಗಳ ಮೇಲೆ ಹಕ್ಕಿರಲಿಲ್ಲ. ಸ್ತ್ರೀಧನಕ್ಕೆ ಪ್ರತಿಯಾಗಿ ಗಂಡಿನಕಡೆ ಯವರು ಹೆಣ್ಣಿಗೆ ಒಡವೆಗಳನ್ನು ನೀಡುತ್ತಿದ್ದರು. ಭವಿಷ್ಯದಲ್ಲಿ ಮಗಳೇನಾ ದರೂ ಸಂಕಷ್ಟಕ್ಕೊಳಗಾದರೆ ಅಥವಾ ಸ್ವತಂತ್ರವಾಗಿ ಸಂಸಾರ ಹೂಡುವಾಗ ಸಹಾಯವಾಗಲಿ ಎಂದು ಸ್ತ್ರೀಧನವನ್ನು ನೀಡಲಾಗುತ್ತಿತ್ತು. ಯಾವುದೇ ಸಂದರ್ಭದಲ್ಲಿ ಆರ್ಥಿಕ ಸುಭದ್ರತೆ ನೀಡುವ ಚಿನ್ನದ ಒಡವೆಗಳನ್ನು ನೀಡುತ್ತಿದ್ದರು. ಭೂಮಾಲಿಕರು ಭೂಮಿಯನ್ನೂ ಕೊಡುತ್ತಿದ್ದರು.

ಕ್ರಮೇಣ ಹುಡುಗಿಯ ಪಾಲಕರು ಸಂತೋಷದಿಂದ ನೀಡುತ್ತಿದ ಕಾಣಿಕೆ ಒತ್ತಾಯದಿಂದ ಕೇಳಿ, ಪೀಡಿಸಿ ಪಡೆಯುವ ವರದಕ್ಷಿಣೆಯಾಗಿ ಪರಿಣಮಿಸಿತು. ಕೊಡದಿದ್ದ ಸಂದರ್ಭದಲ್ಲಿ ಗಂಡನ ಮನೆಯಲ್ಲಿ ಹೆಣ್ಣುಮಕ್ಕಳಿಗೆ ಕಿರುಕುಳ ನೀಡುವ, ಕೊಲ್ಲುವ ಮಟ್ಟಕ್ಕೂ ಹೋಗಿ ಒಂದು ಸಾಮಾಜಿಕ ಪಿಡುಗಾಯಿತು; ಇದರ ಪರಿಣಾಮ ಹೆಣ್ಣು ಭ್ರೂಣ ಹತ್ಯೆ ಮತ್ತು ಹೆಣ್ಣುಶಿಶು ಹತ್ಯೆಗೆ ದಾರಿ ಮಾಡಿಕೊಟ್ಟತು.

ಸಾಮಾಜಿಕ ಆರ್ಥಿಕ ಅಸಮಾನತೆಯಿಂದ ಕೂಡಿದ ಸಮಾಜದಲ್ಲಿ ತಂದೆತಾಯಿಗಳು ತಮ್ಮ ಪ್ರತಿಷ್ಠೆಯನ್ನು ಕಾಪಾಡಿಕೊಳ್ಳಲು ಮತ್ತು ಮಕ್ಕಳನ್ನು ಅದೇ ಮಟ್ಟದಲ್ಲಿಡಲು ಪ್ರಯತ್ನಿಸುತ್ತಿರುತ್ತಾರೆ. ಮಗನಿಗೆ ಆಸ್ತಿ ಮಾಡಿಟ್ಟರೆ ಮಗಳನ್ನು ತಮ್ಮ ಅಂತಸ್ತಿಗೆ ತಕ್ಕಂತಹ ಕುಟುಂಬಕ್ಕೆ ವಿವಾಹ ಮಾಡಿಕೊಟ್ಟು, ಅವಳು ಮೊದಲಿನ ಜೀವನ ಮಟ್ಟವನ್ನು ಕಾಯ್ದುಕೊಳ್ಳಲು ಕೆಲವು ಕಾಣಿಕೆಗಳನ್ನು ನೀಡುತ್ತಾರೆ. ಸಾಮಾನ್ಯವಾಗಿ ಅದು ಚರಾಸ್ತಿಯಾಗಿರುತ್ತದೆ.

ಭಾರತೀಯ ಸಮಾಜದಲ್ಲಿ ಕನ್ಯಾದಾನ ಪರಿಕಲ್ಪನೆ ವರದಕ್ಷಿಣೆಗೆ ದಾರಿ ಮಾಡಿಕೊಡುತ್ತದೆ. ಕನ್ಯಾದಾನ ತಂದೆತಾಯಿಗೆ ಪುಣ್ಯ ತಂದುಕೊಡುತ್ತದೆ, ಕನ್ಯಾದಾನ ಮಾಡುವಾಗ ಕನ್ಯೆಗೆ ಒಡವೆ ತೊಡಿಸಿರಬೇಕೆಂದು ಶಾಸ್ತ್ರ ಹೇಳುತ್ತದೆ. ಇದರ ಹಿಂದೆ ಗಂಡನ ಮನೆಯಲ್ಲಿ ಮಗಳಿಗೆ ಭದ್ರತೆ ಹಾಗೂ ಒಳ್ಳೆಯ ಸ್ಥಾನ ಸಿಗಲಿ ಎಂಬ ಆಶಯವಿದ್ದಂತೆ ತೋರುತ್ತದೆ. ಅಲ್ಲದೆ ದಾನ ತೆಗೆದುಕೊಳ್ಳುವವರಿಗೆ ದಕ್ಷಿಣೆ ಕೊಡದ ಹೊರತು ದಾನಕ್ರಿಯೆ ಶಾಸ್ತ್ರೀಯವಾಗಿ ಪೂರ್ಣವಾಗುವು ದಿಲ್ಲ. ಹೀಗಾಗಿ ಗಂಡಿಗೆ ಹೆಣ್ಣನ್ನು ದಾನವಾಗಿ ಕೊಡುವಾಗ ಆತನಿಗೆ ವಸ್ತು ಅಥವಾ ಹಣದ ರೂಪದಲ್ಲಿ ದಕ್ಷಿಣೆ ನೀಡಬೇಕಾಗುತ್ತದೆ. ಗಂಡಿನ ಮನೆಯವರು ಹೆಣ್ಣನ್ನು ತಂದುಕೊಳ್ಳಲು ಒಪ್ಪಿಕೊಂಡು ಹುಡುಗಿಯನ್ನು ಅವಳ ತಂದೆ ತಾಯಿಗಳನ್ನು ಉದ್ಧಾರ ಮಾಡಿರುವುದರಿಂದ ದಕ್ಷಿಣೆ ನೀಡಿ ಅವರನ್ನು ಗೌರವಿಸಬೇಕು ಎಂಬ ಭಾವನೆ ಇಲ್ಲಿ ಕಂಡುಬರುತ್ತದೆ.

ಒಂದು ಕಾಲದಲ್ಲಿ ಈ ಬಗ್ಗೆ ಅರಿಯದ ಸಮುದಾಯಗಳಿಗೂ ಇದು ಹರಡಿರುವುದು ಕಂಡುಬರುತ್ತದೆ. ಮುಸ್ಲಿಮ್ ಮತ್ತು ಕ್ರಿಶ್ಚಿಯನ್ ಸಮುದಾಯಗಳಲ್ಲಿ ವರದಕ್ಷಿಣೆ ಇರಲಿಲ್ಲ. ಆದರೆ ಇಲ್ಲಿಯೂ ಇದು ವ್ಯಾಪಕವಾಗಿ ಹರಡಿ ಪ್ರಸ್ತುತ ದೊಡ್ಡ ಸಾಮಾಜಿಕ ಸಮಸ್ಯೆಯಾಗಿದೆ. ಕೇರಳದ ಕ್ರೈಸ್ತ ಕುಟುಂಬಗಳಲ್ಲಿ ವರದಕ್ಷಿಣೆ ಮೊತ್ತವನ್ನು ಕೂಡಿಸಲು ಹೆಣ್ಣುಮಕ್ಕಳನ್ನು ಕೆಲಸಕ್ಕೆ ಕಳುಹಿಸಲಾಗುತ್ತದೆ.

ಹೆಣ್ಣುಮಕ್ಕಳಿಗೆ ಹಿಂದೆ ಆಸ್ತಿಯ ಹಕ್ಕು ಇಲ್ಲದಿದ್ದುದರಿಂದ ತಂದೆ ತಾಯಿಗಳು ವರದಕ್ಷಿಣೆ ನೀಡಿ ಆಡಂಬರವಾಗಿ ಮದುವೆ ಮಾಡಿಕೊಡಲು ಮುಂದಾಗುತ್ತಿದ್ದರು. ಆದರೆ ವರದಕ್ಷಿಣೆ ಮೊತ್ತಕ್ಕೂ ತಂದೆ ಆಸ್ತಿಯ ಪ್ರಮಾಣಕ್ಕೂ ಸಂಬಂಧವಿರುವುದಿಲ್ಲ. ಕೆಲವೊಮ್ಮೆ ಇದರ ಮೊತ್ತ ಗಂಡುಮಕ್ಕಳ ಪಾಲಿಗೆ ಸೇರುವ ಆಸ್ತಿಯ ಚಿಕ್ಕಭಾಗವಾಗಿರುತ್ತದೆ. ಇನ್ನು ಕೆಲವೊಮ್ಮೆ ತಂದೆ ಆಸ್ತಿಯ ಮಿತಿಯನ್ನು ಮೀರಬಹುದು.

ಶೈಕ್ಷಣಿಕ ವಿಚಾರಗಳು ಹಾಗೂ ವೈಚಾರಿಕತೆ ಈ ಪದ್ಧತಿಯ ಮೇಲೆ ಪ್ರಭಾವ ಬೀರದಿರುವುದು ದುರದೃಷ್ಟಕರ. ಹುಡುಗ ಹೆಚ್ಚು ಓದಿದಷ್ಟೂ ವರದಕ್ಷಿಣೆಯ ಮೊತ್ತ ಹೆಚ್ಚಾಗುತ್ತದೆ. ಹೆಣ್ಣು ಓದಿ ಗಳಿಸುತ್ತಿದ್ದರೂ ವರದಕ್ಷಿಣೆ ನೀಡಿಯೇ ವಿವಾಹವಾಗಬೇಕಾಗುತ್ತದೆ. ಹೆಚ್ಚು ಓದಿದ ಹುಡುಗಿಯರು ತಮಗಿಂತ ಹೆಚ್ಚು ಓದಿದ ಹುಡುಗನನ್ನು ಬಯಸುವು ದಾದರೆ ವರದಕ್ಷಿಣೆ ನೀಡಲೇಬೇಕಾಗುತ್ತದೆ. ತಂದೆ-ತಾಯಿಗಳು ಹೆಣ್ಣುಮಕ್ಕಳನ್ನು ಹೆಚ್ಚು ಓದಿಸಿದುದಕ್ಕೆ ಪಶ್ಚಾತ್ತಾಪಡುವಂಥ ಪರಿಸ್ಥಿತಿ ಸಮಾಜದಲ್ಲಿ ಉಂಟಾಗುತ್ತಿದೆ.

ಕಪ್ಪುಹಣ ಮತ್ತು ಅಕ್ರಮವಾಗಿ ಸಂಪಾದಿಸಿದ ಸಂಪತ್ತು ವರದಕ್ಷಿಣೆ ಪದ್ಧತಿಗೆ ಪ್ರೇರಣೆಯಾಗಿದೆ. ಕಪ್ಪುಹಣದಿಂದ ಮುಕ್ತರಾಗಲು, ತಮ್ಮ ಪ್ರತಿಷ್ಠೆ ಹೆಚ್ಚಿಸಿಕೊಳ್ಳಲು ಮದುವೆಯನ್ನು ಒಂದು ಸಾಧನವನ್ನಾಗಿಸಿ ಕೊಂಡು ವರದಕ್ಷಿಣೆ ನೀಡಿ ಆಡಂಬರದ ವಿವಾಹ ನಡೆಸುವ ಉದಾಹರಣೆ ಗಳು ಸಮಾಜದಲ್ಲಿ ಇಲ್ಲದಿಲ್ಲ. ವಾಣಿಜ್ಯೀಕರಣ ಗೊಳ್ಳುತ್ತಿರುವ ಪ್ರಸ್ತುತ ಸಮಾಜದಲ್ಲಿ ಸುಲಭವಾಗಿ ಅತಿಶೀಘ್ರವಾಗಿ ಹಣಗಳಿಸುವುದಕ್ಕೆ ಈ ಪದ್ಧತಿ ಪೂರಕವಾಗಿದೆ.

ಈ ಪದ್ಧತಿಯ ಪರಿಣಾಮ ಅತ್ಯಂತ ಘನಘೋರ. ಇದು ಕುಟುಂಬ ದಲ್ಲಿ ಹೆಣ್ಣುಮಕ್ಕಳನ್ನು ಹೊರೆಯಾಗಿ ಕಾಣುವಂತೆ ಮಾಡುತ್ತದೆ. ಹೆಣ್ಣುಗಂಡು ಮಕ್ಕಳ ನಡುವೆ ಕುಟುಂಬದಲ್ಲಿ ತರತಮ ಉಂಟಾಗುವಂತೆ ಮಾಡುತ್ತದೆ. ಸಂಪತ್ತಿನ ಕೊರತೆಯಿದ್ದಾಗ ಇವರಿಬ್ಬರ ನಡುವೆ ಶಿಕ್ಷಣ, ಆಹಾರ, ಆರೋಗ್ಯದ ವಿಷಯಗಳಲ್ಲಿ ಗಂಡುಮಕ್ಕಳು ಆದ್ಯತೆ ಪಡೆಯುತ್ತಾರೆ. ಈ ಪದ್ಧತಿ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ದೊಡ್ಡ ಅಡ್ಡಿಯಾಗಿದೆ. ಈ ಕಾರಣದಿಂದ ಹೆಣ್ಣುಮಕ್ಕಳು ಅವಿವಾಹಿತರಾಗಿ ಉಳಿಯುವಂತಾಗಿದೆ. ಆದಾಯ ಸಂಪತ್ತು ಕಡಿಮೆಯಿರುವ ಕುಟುಂಬ ಗಳಲ್ಲಿ ಇದು ಹೆಣ್ಣುಮಕ್ಕಳ ಮೇಲೆ ಅಧಿಕ ಒತ್ತಡ ಹೇರುತ್ತದೆ. ಇಂಥ ಒತ್ತಡಗಳಿಂದಾಗಿ ಕೆಲವೊಮ್ಮೆ ಹೆಣ್ಣುಮಕ್ಕಳು ಆತ್ಮಹತ್ಯೆಗೆ ಶರಣಾಗುವ ಪ್ರವೃತ್ತಿಯೂ ಕಂಡುಬರುತ್ತಿದೆ.

ವಿವಾಹದ ಅನಂತರವೂ ವರದಕ್ಷಿಣೆ ತೃಪ್ತಿದಾಯಕವಾಗಿಲ್ಲವೆಂದರೆ ಹೆಣ್ಣುಮಕ್ಕಳು ಗಂಡನ ಮನೆಯಲ್ಲಿ ದೈಹಿಕ ಮತ್ತು ಮಾನಸಿಕ ಹಿಂಸೆಗೆ ಗುರಿಯಾಗುತ್ತಾರೆ. ಪ್ರತಿ ಏಳು ಗಂಟೆಗಳಿಗೊಮ್ಮೆ ಒಂದು ವರದಕ್ಷಿಣೆ ಸಾವು ಸಂಭವಿಸುತ್ತದೆ ಎಂದು ಸರ್ಕಾರದ ಅಧಿಕೃತ ಮಾಹಿತಿ ತಿಳಿಸುತ್ತದೆ. ವರದಕ್ಷಿಣೆಗಾಗಿ ಹೆಣ್ಣುಮಕ್ಕಳನ್ನು ಹೊಡೆಯುವುದು, ಕೊಲೆಮಾಡುವುದು, ದೇಹ ಮತ್ತು ಮನಸ್ಸುಗಳನ್ನು ಘಾಸಿಗೊಳಿಸುವ ಕೃತ್ಯಗಳು ನಡೆಯುತ್ತಿವೆ. ಪೊಲೀಸ್ ಇಲಾಖೆ ಹಾಗೂ ನ್ಯಾಯಾಲಯ ದಲ್ಲಿ ನೂರಾರು ವರದಕ್ಷಿಣೆ ಪ್ರಕರಣಗಳು ದಾಖಲಾಗುತ್ತಿದ್ದರೆ ದಾಖಲಾಗದ ಅಸಂಖ್ಯ ಘಟನೆಗಳೂ ಇವೆ. ಈ ಪದ್ಧತಿಯಿಂದಾಗಿ ಸ್ತ್ರೀ-ಪುರುಷ ಅನುಪಾತ ಗಣನೀಯವಾಗಿ ವ್ಯತ್ಯಾಸ ಪಡೆದಿದೆ.

ವರದಕ್ಷಿಣೆ ಪದ್ಧತಿಯನ್ನು ಒಂದು ಸಾಮಾಜಿಕ ಪಿಡುಗು ಎಂದು ಘೋಷಿಸಿದ ಭಾರತ ಸರ್ಕಾರ 1961ರಲ್ಲಿ ವರದಕ್ಷಿಣೆ ನಿಷೇಧ ಕಾಯಿದೆಯನ್ನು ಜಾರಿಗೆ ತಂದಿತು. ತರುವಾಯ ಈ ಕಾಯಿದೆಗೆ ಕೆಲವು ತಿದ್ದುಪಡಿಗಳಾದುವು (1986). ಈ ಕಾಯಿದೆ ಪ್ರಕಾರ ವರದಕ್ಷಿಣೆ ಎಂದರೆ ಹೆಣ್ಣು ಮತ್ತು ಗಂಡಿನ ಕಡೆಯವರು ವಿವಾಹದ ನಿಮಿತ್ತ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೊಟ್ಟಿರುವ ಅಥವಾ ಕೊಡಲು ಒಪ್ಪಿರುವ ಯಾವುದೇ ಆಸ್ತಿ ಅಥವಾ ಬೆಲೆಬಾಳುವ ವಸ್ತು. ಇದು ವಿವಾಹದಲ್ಲಿ ಒಂದು ಕಡೆಯವರು ಇನ್ನೊಂದು ಕಡೆಯವರಿಗೆ ಕೊಡುವಂಥದ್ದು. ವಧು ಅಥವಾ ವರನ ಪಾಲಕರು ಅಥವಾ ಯಾವುದೇ ವ್ಯಕ್ತಿ ವಿವಾಹ ಸಮಯದ ಮೊದಲು ಅಥವಾ ಅನಂತರ ಪರಸ್ಪರ ನೀಡಲು ಒಪ್ಪಿಕೊಂಡಿರುವಂಥದ್ದು. ಇದರಲ್ಲಿ ಮುಸ್ಲಿಮ್ ವೈಯಕ್ತಿಕ ಕಾನೂನಿನಲ್ಲಿ ಬರುವ ಮೆಹರ್ ಸೇರುವುದಿಲ್ಲ. ಹಾಗೂ ವಿವಾಹದ ಸಮಯದಲ್ಲಿ ವಧೂವರರಿಗೆ ನೀಡುವ ಕಾಣಿಕೆಯ ವಸ್ತುಗಳು ಸೇರುವುದಿಲ್ಲ.

ವರದಕ್ಷಿಣೆ ನಿಷೇಧ ಕಾಯಿದೆ ಅಸ್ತಿತ್ವದಲ್ಲಿದ್ದರೂ ವರದಕ್ಷಿಣೆ ಕೊಡುವವರು ಮತ್ತು ತೆಗೆದುಕೊಳ್ಳುವವರಿಬ್ಬರೂ ಅಪರಾಧಿಗಳೆಂದು ಪರಿಗಣಿಸಿದ್ದರೂ ಸಮಾಜದಲ್ಲಿ ಈ ಬಗೆಯ ಶೋಷಣೆ ನಿರಂತರವಾಗಿ ಮುಂದುವರಿದುಕೊಂಡು ಹೋಗುತ್ತಿದೆ. 1986ರ ತಿದ್ದುಪಡಿಯಲ್ಲಿ ವಿವಾಹವಾದ 7 ವರ್ಷದೊಳಗೆ ಯಾವುದೇ ಮಹಿಳೆ ಅಸಹಜ ಸಾವಿಗೆ ತುತ್ತಾದರೆ ಅದನ್ನು ವರದಕ್ಷಿಣೆ ಸಾವೆಂದು ಪರಿಗಣಿಸಬೇಕೆಂದು ಹೇಳಲಾಗಿದೆ. ಲೋಪದೋಷಗಳಿಂದ ಅಥವಾ ಇದನ್ನು ಜಾರಿಗೊಳಿಸುವ ವ್ಯವಸ್ಥೆಯ ದೋಷಗಳಿಂದ ಕಾಯಿದೆ ಯಶಕಾಣುತ್ತಿಲ್ಲವೆಂಬ ಆರೋಪ ಗಳೂ ಇವೆ. ಈ ನಿಟ್ಟಿನಲ್ಲಿ ಸಾಮಾಜಿಕ ಜಾಗೃತಿಯನ್ನುಂಟುಮಾಡುವ ಕೆಲಸವನ್ನು ಸರ್ಕಾರ ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳು ಕೈಗೊಳ್ಳುತ್ತಿವೆ. (ಎಚ್.ಎಮ್.ಎಚ್.)