ವಿಷಯಕ್ಕೆ ಹೋಗು

ರಂಗಮ್ಮನ ವಠಾರ/೨೦

ವಿಕಿಸೋರ್ಸ್ದಿಂದ

ಶೇಖರಯ್ಯನಿಗೆ ಅದನ್ನು ಕೊಡಬೇಕು; ಜಯರಾಮುಗೆ ಮದುವೆಯಾಗಿ ಆತ ಪ್ರತ್ಯೇಕ
ಸಂಸಾರ ಹೂಡುವವರೆಗೆ ಅವರೆಲ್ಲ ಜತೆಯಾಗಿ ಇದ್ದರೂ ಇದ್ದರೇ. ಅಂತೂ ಮೇಲಿನ
ಕೊಠಡಿ ಮನೆಗಳು ಖಾಲಿಯಾದರೆ ಅವುಗಳನ್ನೆಲ್ಲಾ ಓದುವ ಹುಡುಗರಿಗೇ ಬಿಟ್ಟುಬಿಡ
ಬೇಕು. ಬೇಸಗೆಯ ರಜಾದಲ್ಲಿ ಹುಡುಗರಿಂದ ಬಾಡಿಗೆ ಸಿಗುತ್ತಿರಲಿಲ್ಲ. ಹಾಗೆ ನಷ್ಟ
ವಾಗದಂತೆ, ತಿಂಗಳ ಬಾಡಿಗೆಯನ್ನೇ ಸ್ವಲ್ಪ ಹೆಚ್ಚಿಸಿದರಾಯ್ತು...
ಚಂದ್ರಶೇಖರಯ್ಯನೊಡನೆ ಇದನ್ನೆಲ್ಲ ಮಾತನಾಡಿ, ಇನ್ನೆರಡು ದಿನ ಬಿಟ್ಟು
ಕೊಂಡು 'ಮನೆ ಬಾಡಿಗೆಗೆ ಇದೆ' ಬೋರ್ಡನ್ನು ಹೊರಗೆ ತೂಗಹಾಕುವುದು ಮೇಲೆಂದು
ಅವರು ಅಂದುಕೊಂಡರು.
...ಚಂಪಾವತಿಗೆ ಬೇನೆ ಬರಿತ್ತಿತ್ತು. ವಠಾರದವರೆಲ್ಲಾ "ನಾವು ನೋಡ್ಕೋ
ತೇವೆ," "ನಾವು ನೋಡ್ಕೋತೇವೆ" ಎಂದು ಆಶ್ವಾಸನೆ ಕೊಟ್ಟರೂ ಶಂಕರನಾರಾ
ಯಣಯ್ಯ ದಾದಿಯೊಬ್ಬಳನ್ನು ಗೊತ್ತುಮಾಡಿದ. ಆ ದಾದಿ ತಮ್ಮ ಜನವಲ್ಲವೆಂದು
ತಿಳಿದರೂ ವಠಾರದವರು ಆಕ್ರೋಶ ಮಾಡಲಿಲ್ಲ.
ಆ ಸಂಜೆ ಪೋಲೀಸ್ ರಂಗಸ್ವಾಮಿ ಕೆಂಗಣ್ಣು ಉರಿಸಿಕೊಂಡು ಮನೆಗೆ ಬಂದ.
ರಾಜಾ ಮಿಲ್ಲಿನೆದುರು 'ಕೂಲಿಕಾರರ ಗಲಾಟೆ' ಆಗಿತ್ತು. ಸೇರಿದ್ದ ಗುಂಪನ್ನು ಚೆದುರಿ
ಸಲು ಪೋಲೀಸರು ಲಾಠೀ ಪ್ರಹಾರ ಮಾಡಿದ್ದರು. ರಂಗಸ್ವಾಮಿಯೂ ಲಾಠಿ ತಿರುಗಿಸಿ
ಬಡಜನರನ್ನು ಹೊಡೆದಿದ್ದ. ತನ್ನನ್ನು ಎಲ್ಲರೂ ವೈರಿಯಂತೆ ಕಾಣುವರೆಂಬ ತಿಳಿವಳಿಕೆ
ಯಿಂದಲೇ ಆತ ಮನೆಗೆ ಬಂದ. ಏನೋ ಕುಂಟು ನೆಪ ತೆಗೆದು ಹೆಂಡತಿಯ ಮೇಲೆ
ರೇಗಾಡಿದ .ಆಕೆಯನ್ನು ಹಿಡಿದು ಬಲವಾಗಿ ಥಳಿಸಿದ. ಗದ್ದಲವಾಯಿತು. ರಂಗಮ್ಮನ
ವಠಾರದಲ್ಲಿ ಏನೋ ಆಗುತ್ತಿದೆಯೆಂದು ಬೀದಿಯಲ್ಲಿ ನಡೆದು ಹೋಗುತ್ತಿದ್ದವರು ಕ್ಷಣ
ಕಾಲ ತಡೆದು ನಿಂತು, ಬರಿಯ ಮನೆ ಜಗಳವೆಂದು ಮುಂದುವರಿದರು.
ಎರಡು ದಿನಗಳಿಂದ ರಾಮಚಂದ್ರಯ್ಯ ಮರೆಮಾಡಿದ್ದ ಕೆಟ್ಟ ಸುದ್ದಿಯೂ ಆ
ಸಂಜೆ ಹೊರಬಂತು.
'ರಾಮಚಂದ್ರಯ್ಯನ ಕೆಲಸ ಹೋಯಿತಂತೆ' ಎಂಬ ಕಹಿವಾರ್ತೆ ಮನೆಯಿಂದ
ಮನೆಗೆ ಸಂಚಾರ ಮಾಡಿತು.
ನಿಜವಾಗಿ ಸುದ್ದಿ ಅಷ್ಟೇ ಆಗಿರಲಿಲ್ಲ. ದಾಸ್ತಾನುಗಳ ಲೆಕ್ಕ ಸರಿಯಾಗಿಲ್ಲವೆಂದು
ಎರಡು ಮೂರು ಸಾರೆ ಆಡಳಿತದವರು ರಾಮಚಂದ್ರಯ್ಯನಿಗೆ ಎಚ್ಚರಿಕೆ ಕೊಟ್ಟಿದ್ದರು.
ತನ್ನ ಸಹಾಯಕ ಏನಾದರೂ ಮಾಡುತ್ತಿರಬಹುದೆಂದು ರಾಮಚಂದ್ರಯ್ಯ ಸಂಶಯ
ಗ್ರಸ್ತನಾದ. ಆದರೆ ಸಂಶಯವನ್ನು ಸಿದ್ದಪಡಿಸಿಕೊಡುವ ಯಾವ ಪುರಾವೆಯೂ
ಸಿಗಲಿಲ್ಲ. ಆಡಳಿತದವರು ಒಮ್ಮಿಂದೊಮ್ಮೆಲೆ ರಾಮಚಂದ್ರಯ್ಯನನ್ನು ಕೆಲಸದಿಂದ
ವಜಾ ಮಾಡಿದರು. ಅದು ಅಕ್ರಮವೆಂದು ದೂರುವ ಹಾಗೂ ಇರಲಿಲ್ಲ. ತನ್ನ
ಮೇಲಿನ ಆಪಾದನೆಗಳನ್ನು ಆಡಳಿತದವರು ಸುಲಭವಾಗಿ ರುಜುಪಡಿಸುವರೆಂಬುದು
ಆತನಿಗೆ ಗೊತ್ತಿತ್ತು.
......ಇಷ್ಟೆಲ್ಲಾ ಗಲಿಬಿಲಿ ವಠಾರದಲ್ಲಿದ್ದರೂ ಹಂಗಸರೆಲ್ಲರ ಗಮನ ಕೊನೆಯ
ಮನೆಯ ಕಡೆಗೇ ಇತ್ತು.
ನಾರಾಯಣಿ ಮಲಗಿದ್ದ ಕಡೆಯೆಲ್ಲ,-ಅದಕ್ಕಿದಿರು ಗೋಡೆಯ ಬಳಿ ಚಂಪಾವತಿ
ಯನ್ನು ಮಲಗಿಸಿದ್ದರು.
ವಠಾರದಲ್ಲಿ ದೀಪ ಆರಿಸದೇ ಇದ್ದ ಆ ರಾತ್ರೆಯೆಲ್ಲ ಸಣ್ಣನೆ ನೋವು ನರಳಾಟ
ಕೊನೆಯ ಮನೆಯಿಂದ ಕೇಳಿಸುತ್ತಿತ್ತು.
ಬಹಳ ಹೊತ್ತು ರಂಗಮ್ಮನಿಗೆ ನಿದ್ದೆ ಬರಲಿಲ್ಲ. ನಡುರಾತ್ರೆಯಲ್ಲೊಮ್ಮೆ
ಅವರೆದ್ದು ಗೋಡೆ ಮುಟ್ಟಿಕೊಂಡು ಓಣಿಯುದ್ದಕ್ಕೂ ಹೋಗಿ ಬಂದರು. ವಠಾರದಿಂದ
ಹೊರಡುತ್ತಿದ್ದ ನಿದ್ದೆಯ ಉಸಿರಾಟದ ಗೊರಕೆಯ ಸ್ವರಗಳು ಯಾವುವೂ ಅವರಿಗೆ
ಅಪರಿಚಿತವಾಗಿರಲಿಲ್ಲ.
...ಒಮ್ಮೆಲೆ ಕಾಮಾಕ್ಷಿ ಕೂಗಿಕೊಂಡಳು. ಆಕೆಗೆ ಕೆಟ್ಟ ಕನಸು ಬಿದ್ದಿತ್ತು.
ನಾರಾಯಣನಿಗೂ ಎಚ್ಚರವಾಯಿತು.
"ಕಾಮೂ, ಕಾಮೂ, ಏನೇ ಅದು?"
ಬೆವತು ಹೋಗಿತ್ತು ಆಕೆಯ ಮೈ. ಗಂಟಲು ಆರಿತ್ತು.
"ನಾರಾಯಣಿ ಕಾಹಿಲೆ ಮಲಗಿದ್ದ ಕನಸು ಬಿತ್ತು."
"ಅಷ್ಟೇ ತಾನೆ? ಹಗಲೆಲ್ಲಾ ಅದೇ ಯೋಚ್ನೇ ಮಾಡ್ತಾ ಇದ್ದೆಯೋ
ಏನೋ....."
"ಚಂಪಾವತಿಗೆ ಹೆರಿಗೆ ನೋವು ಅಲ್ವೆ?"
"ಹೌದು. ನಾಳೆ ಬೆಳಿಗ್ಗೆ ಪುತ್ಥಳಿಯಂಥ ಒಂದು ಹೊಸ ಮಗು ವಠಾರಕ್ಕೆ ಬರುತ್ತೆ."
ಕಾಮಾಕ್ಷಿ ಗಂಡನ ಸಮೀಪಕ್ಕೆ ಸರಿದಳು. ಏನನ್ನೂ ಮಾತನಾಡಲಿಲ್ಲ.
"ಅವರಾದ್ಮೇಲೆ ನಿನ್ನ ಸರದಿ ಕಾಮೂ..."
...ರಾತ್ರಿ ಕಳೆದು ಬೆಳಗಾಯಿತು. ಹೆರಿಗೆಯಾಗಿರಲಿಲ್ಲ
ವಠಾರದವರು ದಿನನಿತ್ಯದ ಕೆಲಸ ಕಾರ್ಯಗಳನ್ನೆಲ್ಲ ಮರೆತಂತೆ ವರ್ತಿಸಿದರು.
ಚಂದ್ರಶೇಖರಯ್ಯ ಲೇಡಿ ಡಾಕ್ಟರೊಬ್ಬರನ್ನು ಕರೆತಂದ.
ಹೆಂಗಸರು ಹೆಬ್ಬಾಗಿಲಿನಾಚೆ ಹೊರ ಅಂಗಳದಲ್ಲಿ ಗುಂಪು ಕಟ್ಟಿ ನಿಂತು ಗುಸು
ಗುಸು ಮಾತನಾಡಿದರು.
ರಂಗಮ್ಮ ಹಲ್ಲು ಕಡಿಯುತ್ತ, ಗಂಟಲಿನಿಂದ ಸ್ವರ ಹೊರಡಿಸುತ್ತಾ, ಏದುಸಿರು
ಬಿಟ್ಟುಕೊಂಡು, ನಡೆಗೋಲಿನಿಂದ ಟಕ್ ಟಕ್ ಸದ್ದು ಮಾಡುತ್ತ, ಅತ್ತಿತ್ತಾ ಬೆನ್ನು
ಬಾಗಿಸಿ ನಡೆದರು.
ಬಹಿರಂಗವಾಗಿ ಅವರೇನನ್ನೂ ಹೇಳಲಿಲ್ಲವಾದರೂ ಅವರ ಅಂತರ್ಯದ ಧ್ವನಿ
ನುಡಿಯುತ್ತಿತ್ತು:
"ಅದೇ ಮನೆಯಲ್ಲಿ ಹೆರಿಗೆಗೆ ತಾನು ಬಿಡಬಾರದಾಗಿತ್ತು.ಆಸ್ಪತ್ರೆಗೇ ಕಳಿಸ್ಬೇ
ಕಾಗಿತ್ತು." ಬೇಡ ಬೇಡವೆಂದರೂ, ಒಂದು ವರ್ಷದ ಹಿಂದೆ ನಾರಾಯಣಿ ಆ ಮನೆಯಲ್ಲಿ
ಸುಮಾರು ಅದೇ ಹೊತ್ತಿಗೆ ಪ್ರಾಣಸಂಕಟದಿಂದ ನರಳುತ್ತಿದ್ದ ನೆನಪು ಅವರನ್ನು ಕಾಡಿತು.
ಮೀನಾಕ್ಷಮ್ಮ ತನ್ನ ಮನೆಯ ಬಾಗಿಲಲ್ಲೆ, ಕೊನೆಯ ಮನೆಗೆ ಸಮೀಪವಾಗಿಯೆ,
ನಿಂತಳು.
ರಂಗಮ್ಮ ಕೊಳಾಯಿಯ ಬೀಗ ತೆಗೆದರು. ಆದರೆ ವಠಾರದವರು ಬಿಂದಿಗೆ-
ಬಕೀಟು-ತಟ್ಟೆಗಳ ಸಾಲನ್ನು ಕಟ್ಟಿರಲಿಲ್ಲ.
ವಠಾರದ ಜೀವನ ಅಸ್ತವ್ಯಸ್ತವಾಗಿತ್ತು.
ಚಂಪಾವತಿಯ ನರಳಾಟ ಹೆಚ್ಚಿದಂತೆ ಹೆಂಗಸರೆಲ್ಲಾ ಓಣಿಗೇ ಬಂದಿಳಿದರು.
ನರಳಾಟ ನಿಂತಿತು.'ಸುಖಪ್ರಸವ'ವಾಗಿತ್ತು ಚಂಪಾವತಿಗೆ.
ಆವರೆಗೂ ಮಗಳೊಡನೆ ಅಡುಗೆ ಮನೆಯಲ್ಲಿ ನಿಂತಿದ್ದ ಶಂಕರನಾರಾಯಣಯ್ಯ
ನಿಗೆ ದಾದಿ ಸುದ್ದಿ ಮುಟ್ಟಿಸಿದಳು.
ಆತ ಎಲ್ಲಾ ಆಯಾಸವನ್ನೂ ಮರೆತು ಮುಖವರಳಿಸಿಕೊಂಡು ಡಾಕ್ಟರರ ಅನು
ಮತಿ ಪಡೆದು ಮನೆಯಿಂದ ಹೊರಬಂದ.
ಆತನ ಮುಖ ನೋಡುತ್ತಲೆ ಎಲ್ಲರಿಗೂ ಸಮಾಧಾನವಾಯಿತು.
ರಂಗಮ್ಮ ಮನಸ್ಸಿನಲ್ಲೆ ಅಂದುಕೊಂಡರು:
"ಗಂಡು ಮಗೂಂತ ತೋರುತ್ತೆ. ಅದಕ್ಕೇ ಇಷ್ಟು ಖುಶಿಯಾಗಿದಾನೆ."
ಮಗು ಎಂತಹದೆಂದು ಕೇಳುವ ಕುತೂಹಲ ಎಲ್ಲರಿಗೂ ಇತ್ತು. ಆದರೆ
ತಮ್ಮೆಲ್ಲರಿಗಿಂತಲೂ ಹಿರಿಯರಾದ ರಂಗಮ್ಮ ಅಲ್ಲಿ ನಿಂತಿದ್ದಾಗ ಬೇರೆ ಹೆಂಗಸರು
ಕೇಳುವ ಹಾಗಿರಲಿಲ್ಲ.
ಏನನ್ನೂ ಹೇಳದೆ ಆ ಗಂಡಸು ಹಾಗೆಯೇ ನಿಂತಿದ್ದುದನ್ನು ಕಂಡು ರಂಗಮ್ಮ
ನಿಗೆ ರೇಗಿತು. ಆದರೆ ಅದನ್ನು ಅವರು ಹೊರಗೆ ತೋರ್ಪಡಿಸಲಿಲ್ಲ. ಪ್ರಕಾಶವಾಗಿ
ನಗುತ್ತಲೇ ಅವರು ಹೇಳಿದರು:
"ಎಂಥದಪ್ಪಾ ಮಗು? ರಾಜಕುಮಾರ ತಾನೇ?"
ಶಂಕರನಾರಾಯಣಯ್ಯ ನಗುತ್ತ ಹೇಳಿದ:
"ಇಲ್ಲ ರಂಗಮ್ನೋರೆ. ಸೌಭಾಗ್ಯಲಕ್ಷ್ಮಿ!"
ಆ ಹೆಂಗಸರೆಲ್ಲ ಒಂದು ಕ್ಷಣ ನಿರಾಶೆಯಾದಂತೆ ತೋರಿತು. ಆದರೆ ಆ ಗಂಡ
ಸಿನ ಉತ್ಸಾಹ ಕಂಡು ಭ್ರಮೆಗೊಂಡು, ಸುಖಪ್ರಸವದ ಸುವಾರ್ತೆಯನ್ನು ಸ್ವಾಗತಿಸಿ,
ಅವರೆಲ್ಲ ಮುಗುಳ್ನಕ್ಕರು. ಅವರಿಗನಿಸಿತು: ಈತ ವಿಚಿತ್ರ ಮನುಷ್ಯ. ಅಳುಮೋರೆ
ಹಾಕಿ 'ಹೆಣ್ಣು' ಅನ್ನೋ ಬದಲು, ನಗುನಗುತ್ತ 'ಸೌಭಾಗ್ಯಲಕ್ಷ್ಮಿ',ಅನ್ನೋದೆ?
ಗಂಭೀರ ಧ್ವನಿಯಲ್ಲಿ ವಠಾರದ ಒಡತಿ ರಂಗಮ್ಮನೆಂದರು:
"ಸೌಭಾಗ್ಯಲಕ್ಷ್ಮಿಯೇ ಸರಿ. ಹೆಣ್ಣು ಯಾವುದರಲ್ಲೂ ಗಂಡಸಿಗೆ ಕಮ್ಮಿ ಇಲ್ಲ.
ಸಂತೋಷ-ಸಂತೋಷ!"