ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಡವಿ ಬಾಪಿರಾಜು

ವಿಕಿಸೋರ್ಸ್ದಿಂದ

ಅಡವಿ ಬಾಪಿರಾಜು

ಪ್ರಸಿದ್ಧ ತೆಲುಗು ಲೇಖಕ. 1895ನೆಯ ಇಸವಿಯಲ್ಲಿ ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮವರವೆಂಬ ಗ್ರಾಮದಲ್ಲಿ ಹುಟ್ಟಿ ರಾಜಮಹೇಂದ್ರಿ (ಆಟ್ರ್ಸ್) ಕಲಾಶಾಲೆಯಲ್ಲಿ ಪದವೀಧರರಾದರು. ಸ್ವರಾಜ್ಯೋದ್ಯಮದಲ್ಲಿ ಕಾರಾಗೃಹವಾಸವನ್ನು ಅನುಭವಿಸಿದರು. ಗೂಢವಾಗಿ ಅವರಲ್ಲಿ ನೆಲೆಸಿದ್ದ ಕಲೆ ಬೇಗ ಅರಳಿ ಪ್ರಖ್ಯಾತರಾದರು. ಬಂದರ್ ಕಲಾಶಾಲೆಯಲ್ಲಿ ಪ್ರಮೋದಕುಮಾರ ಚಟರ್ಜಿ ಅವರಲ್ಲಿ ಚಿತ್ರಲೇಖನವನ್ನೂ ಅಭ್ಯಸಿಸಿ ಸಿದ್ಧಹಸ್ತರಾದರು. ಮದರಾಸು ಲಾ ಕಾಲೇಜಿನಲ್ಲಿ ಬಿ.ಎಲ್. ಪದವಿಯನ್ನು ಪಡೆದು ಸ್ವಲ್ಪಕಾಲ ವಕೀಲಿವೃತ್ತಿಯಲ್ಲಿದ್ದರು. ಆಂಧ್ರಜಾತೀಯ ಕಲಾಶಾಲೆಗೆ ಅಧ್ಯಕ್ಷರಾಗಿಯೂ ತ್ರಿವೇಣಿ ಸಂಪಾದಕರಾಗಿಯೂ ಹೆಸರುಗಳಿಸಿದರು.

ಕಲೆಯೇ ಜೀವನದ ಉಸಿರು. ಕವಿತ್ವ, ಅಭಿನಯ, ಚಿತ್ರಲೇಖನ ಹೀಗೆ ಅವರು ಅನುಸರಿಸದೇ ಇರುವ ಕಲೆಯೇ ಇಲ್ಲ. ಅವರ ನಾರಾಯಣರಾವ್ ಎಂಬ ಕಾದಂಬರಿಗೂ ತಿಕ್ಕನಸೋಮಯಾಜಿ ಎಂಬ ಚಿತ್ರಕ್ಕೂ ಆಂಧ್ರ ವಿಶ್ವವಿದ್ಯಾನಿಲಯದ ಬಹುಮಾನಗಳು ಬಂದುವು. ಕೇಂದ್ರ ಸಾಹಿತ್ಯ ಅಕೆಡಮಿಯಿಂದಾಗಿ ನಾರಾಯಣರಾವ್ ಕನ್ನಡಕ್ಕೆ ಭಾಷಾಂತರವಾಯಿತು. ಹಿಮಬಿಂದು, ತುಫಾನು, ಗೋನಗನ್ನಾರೆಡ್ಡಿ, ಜಾಜಿಮಲ್ಲೆ, ಕೋನಂಗಿ-ಇವು ಇವರ ಇತರ ಕಾದಂಬರಿಗಳು. ಅಂಜಲಿ, ಹಂಪೀ ಶಿಥಿಲಾಲು ಇವರ ಕಥಾನಕಗಳು. ಗೋಧೂಳಿ, ರಾತಿರಥ, ಶಶಿಕಲಾ, ತೊಲಕರಿ, ಹಾರತಿ-ಇವು ಪದ್ಯಸಂಕಲನಗಳು. ಭೋಗಿಲೋಯ, ಉಷಾ ಸುಂದರಿ ಇವರ ರೇಡಿಯೋ ನಾಟಕಗಳು.

ಬಾಪಿರಾಜುರವರದು ರಸಾತ್ಮಕ ಹೃದಯ, ಮಧುರವಾಣಿ, ಆಕರ್ಷಣೀಯ ಆಕೃತಿ. ಜನ್ಮಾಂತರ ಸಂಸ್ಕಾರಸಿದ್ಧವಾದ ಪಾಂಡಿತ್ಯ, ಪ್ರಾಚ್ಯ, ಪಾಶ್ಚಾತ್ಯಕಲೆಗಳ ಸಂಸ್ಕಾರ ಇವನ್ನು ಅವರಲ್ಲಿ ಕಾಣಬಹುದು. ಅವರ ವ್ಯಾಖ್ಯಾನದ ಮಾರ್ಗವೇ ಅಪೂರ್ವ ಮತ್ತು ನವೀನ. ಅವರ ಗೋದಾವರೀ ಪ್ರಸಿದ್ಧವಾದ ಗೇಯ. ಅವರ ತೊಲಕರಿ ಜಾನಪದ ಜೀವನಮಾಧುರ್ಯವನ್ನೂ ಶಶಿಕಲಾ ಭಾವತೀವ್ರತೆಯನ್ನೂ ನಾರಾಯಣ ರಾವ್ ಜನಜೀವನವನ್ನೂ ಬಣ್ಣಿಸುತ್ತವೆ. ರವೀಂದ್ರರ ಊರ್ವಶಿಯಾಗಿ ಅವರ ಶಶಿಕಲಾ ಅತೀಂದ್ರಿಯ ಭೋಗ್ಯವಾದ ಯಕ್ಷಿಣಿಯಂತೆ ಕೈಗೆ ಸಿಕ್ಕದೆ ಮೆರೆಯುತ್ತದೆ.

ಕಾದಂಬರಿಗಳೇ ಬಾಪಿರಾಜುರನ್ನು ಅಜರಾಮರ ಸ್ಥಾನಕ್ಕೆ ಏರಿಸಿವೆ. ಪ್ರಾಚೀನ ಭಾರತ ಧರ್ಮಕ್ಕೆ ಹಿಮಬಿಂದು, ಕಾಕತೀಯರ ಆಚಾರವ್ಯವಹಾರಗಳಿಗೆ ಗೋನಗನ್ನಾರೆಡ್ಡಿ, ಆದುನಿಕ ಗಾಂಧೀಯುಗಕ್ಕೆ ನಾರಾಯಣರಾವ್ ಎಂಬ ಕಾದಂಬರಿಗಳು ಪ್ರತಿ ಬಿಂಬಗಳು. ಆಧುನಿಕ ತೆಲಗು ಸಾಹಿತ್ಯದಲ್ಲಿ ವೀರೇಸಲಿಂಗಂ ಪಂತಲು ನವಯುಗ ಕರ್ತ, ಅಭ್ಯುದಯಗಾಮಿ; ವಿಶ್ವನಾಥ್ ಸತ್ಯನಾರಾಯಣ ಪ್ರಾಚೀನತಾವಾದಿ. ಬಾಪಿರಾಜು ಮಧ್ಯಮಾರ್ಗದಲ್ಲಿ ನಡೆಯುವ ಸಮನ್ವಯಶೀಲರು; ಆಂಧ್ರನಾಗಿ ಹುಟ್ಟಿ ಭಾರತೀಯನಾಗಿ ಬಾಳಿದ ಖ್ಯಾತ ಪುರುಷರು. (ಬಿ.ಆರ್.)