ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜಯರಾಂ, ಕೆ ವಿ

ವಿಕಿಸೋರ್ಸ್ದಿಂದ

ಜಯರಾಂ, ಕೆ ವಿ

ಅತಿಹೆಚ್ಚು ಕಾದಂಬರಿ ಆಧಾರಿತ ಚಿತ್ರಗಳನ್ನು ನಿರ್ದೇಶಿಸಿದವರು ಕೆ.ವಿ.ಜಯರಾಂ. ಇದು ಇವರ ಹೆಗ್ಗಳಿಕೆ. ಮೈಸೂರಿನವರಾದ ಕೆ.ವಿ.ಜಯರಾಂ ಚಿಕ್ಕವಯಸ್ಸಿನಿಂದಲೂ ಕಥೆ-ಕಾದಂಬರಿ ಪ್ರಿಯರು. ವ್ಯಾಸಂಗದ ದಿನಗಳಲ್ಲಿ ಚಿತ್ರೀಕರಣ ವೀಕ್ಷಿಸಲು ಆಗಾಗ ಹೋಗುತ್ತಿದ್ದ ಜಯರಾಂ ಕಾಲೇಜು ವಿದ್ಯಾಭ್ಯಾಸವನ್ನು ತ್ಯಜಿಸಿ ಚಿತ್ರರಂಗದತ್ತ ಧಾವಿಸಿ ಬಂದವರು. ಆರಂಭದಲ್ಲಿ ``ವಂಶವೃಕ್ಷ ಚಿತ್ರದಲ್ಲಿ ಸಹಾಯಕರಾಗಿ ಕೆಲಸ ಮಾಡಿದರು ಹಿರಿಯ ನಿರ್ದೇಶಕ ಎಂ.ಆರ್.ವಿಠಲ್‍ರ ಸಹಾಯಕರಾಗಿ ಪಳಗಿದರು. ``ವಂಶವೃಕ್ಷ ಚಿತ್ರದಲ್ಲಿ ಸಂಕಲನ ತಜ್ಞೆ ಅರುಣಾ ವಿಕಾಸ್ ದೇಸಾಯಿಯವರಿಗೂ ಸಹಾಯಕರಾಗಿ ದುಡಿದು ಸಂಕಲನದಲ್ಲಿಯೂ ಪರಿಣತಿ ಪಡೆದರು. ನಿರ್ದೇಶನದೊಂದಿಗೆ ಸಂಭಾಷಣೆ ಚಿತ್ರಕÀಥಾ ರಚನೆ, ಸಂಕಲನ ಕಾರ್ಯಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡು ಅನುಭವಪಡೆದವರು. ಇವರ ಪ್ರಥಮ ನಿರ್ದೇಶನದ ಚಿತ್ರ ಟಿ.ಕೆ.ರಾಮರಾಯರ ಕಾದಂಬರಿ ಆಧಾರಿತ ``ಮರಳು ಸರಪಣಿ. ಇವರ ನಿರ್ದೇಶನದಲ್ಲಿ ತೆರೆಕಂಡ ಚಿತ್ರಗಳಲ್ಲಿ ಕಾದಂಬರಿ ಆಧಾರಿತವಾದವೇ ಅಧಿಕ. ಬಾಡದಹೂ, ಬೆತ್ತಲೆಸೇವೆ, ಇಬ್ಬನಿ ಕರಗಿತು, ಅರುಣರಾಗ, ವರ್ಣಚಕ್ರ, ಶರವೇಗದ ಸರದಾರ, ರಂಜಿತಾ-ಇವು ಜಯರಾಂ ನಿರ್ದೇಶಿಸಿದ ಚಿತ್ರಗಳಲ್ಲಿ ಕೆಲವು. 16 ಎಂ.ಎಂ.ಗಾತ್ರದಲ್ಲಿ ಚಿತ್ರೀಕರಿಸಿ, 35 ಎಂ.ಎಂ.ಗೆ ಹಿಗ್ಗಿಸಿ ಮಾಡಿ, 35 ಎಂ.ಎಂ.ನಲ್ಲಿ ಚಿತ್ರಿಸಿದಲ್ಲಿ ಕಂಡುಬರುವ ತಾಂತ್ರಿಕ ಮಟ್ಟವನ್ನೇ 16 ಎಂ.ಎಂ.ಚಿತ್ರೀಕರಣದಲ್ಲಿಯೂ ಉಳಿಸಿಕೊಳ್ಳುವ ಪ್ರಯೋಗದಲ್ಲಿ ಯಶಸ್ವಿಯಾದವರು.

1981-82ರಲ್ಲಿ ``ಬಾಡದ ಹೂ 1985-86ರಲ್ಲಿ ``ಹೊಸನೀರು ಚಿತ್ರಗಳಿಗಾಗಿ ರಾಜ್ಯ ಪ್ರಶಸ್ತಿ ಪುರಸ್ಕøತರಾದರು. ನಿರ್ಮಾಪಕರಾಗಿಯೂ ಉತ್ತಮಗುಣಮಟ್ಟದ ಚಿತ್ರಗಳನ್ನು ನೀಡಿದ್ದಾರೆ. ``ಹೊಸರಾಗ, ``ರಂಜಿತ ಈ ನಿಟ್ಟಿನಲ್ಲಿ ಒಂದೆರಡು ಉದಾಹರಣೆಗಳು. ಕಡಿಮೆ ವೆಚ್ಚದಲ್ಲಿ ಮನೆಮಂದಿಯೆಲ್ಲಾ ಕೂಡಿ ಕುಳಿತು ನೋಡುವಂಥ-ಸದಭಿರುಚಿಯ ಯಶಸ್ವಿಚಿತ್ರಗಳನ್ನು ನೀಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ನಿರ್ದೇಶಕರಾಗಿ ಜಯರಾಂ ಅವರು ನೀಡಿರುವ ಸಮಗ್ರಕಾಣಿಕೆಗಳನ್ನು ಕರ್ನಾಟಕ ರಾಜ್ಯಸರ್ಕಾರವು ಗುರುತಿಸಿ 2000-2001ನೇ ಸಾಲಿನ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಂiÀiನ್ನು ಇವರಿಗೆ ನೀಡಿ ಪುರಸ್ಕರಿಸಿದೆ. ಕೆ.ವಿ.ಜಯರಾಂರವರ ಸೋದರ ಕೆ.ವಿ.ರಾಜು ಅವರೂ ಕನ್ನಡ ಚಿತ್ರರಂಗದಲ್ಲಿ ಮಿಂಚಿದ ನಿರ್ದೇಶಕ ಹಾಗೂ ಚಿತ್ರಕಥಾ ಲೇಖಕ. (ಶ್ರೀಕೃಪಾ)