ವಿಷಯಕ್ಕೆ ಹೋಗು

ಪರಂತಪ ವಿಜಯ

ವಿಕಿಸೋರ್ಸ್ದಿಂದ
ಪರಂತಪ ವಿಜಯ (1914)
by ಎಂ. ವೆಂಕಟಕೃಷ್ಣಯ್ಯ
90850ಪರಂತಪ ವಿಜಯ1914ಎಂ. ವೆಂಕಟಕೃಷ್ಣಯ್ಯ (MV)

ಇದನ್ನು ಡೌನ್ಲೋಡ್ ಮಾಡಿ: Download this featured text as an EPUB file (suitable for most e-readers except Kindles). Download this featured text as a RTF file. Download this featured text as a PDF. Download this featured text as a MOBI file (suitable for Kindles).



PARANTHAPA VIJAYA

♦♦♦ ♦♦♦

ಪರಂತಪ ವಿಜಯ

BY

M. VENKATAKRISHNAYYA
(SECOND EDITION)
♦♦♦ ♦♦♦
MYSORE:
PRINTED AT THE G.T.A.PRESS
1914
(Copyright Registered)
PRICE: 9 ANNAS ...... ಕ್ರಯ ೯ ಆಣೆ


ಈ ಪುಟ ಕಾಲಿ ಇದೆ

PARANTHAPA VIJAYA


ಪರಂತಪ ವಿಜಯ

(SECOND EDITION)


BY

M. VENKATAKRISHNAYYA


MYSORE:

PRINTED AT THE G.T.A.PRESS

1914


(Copyright Registered)

ಪೀಠಿಕೆ

ದ್ಯೂತದಿಂದ ಪ್ರಪಂಚದಲ್ಲಿ ಅನೇಕ ಅನರ್ಥಗಳು ನಡೆಯುವುವು. ಸಂಸ್ಥಾನಗಳೇ ಮುಳುಗಿಹೋಗುವುವು. ಮಣ್ಣ, ಹೊನ್ನು, ಹೆಣ್ಣುಗಳ ನ್ನಪಹರಿಸಬೇಕೆಂಬ ದುರಾಶೆಯಿಂದ ಅನೇಕ ಅನರ್ಥಗಳಾಗುವುವು. ಇಂಥ ದುರಾಶಾಪ್ರತಿನಿವಿಷ್ಟರಾದವರು, ತಮ್ಮ ದುರಾಶೆಯ ಪರಿಣಾಮಾವಸ್ಥೆಯನ್ನು ಪರಾಲೋಚಿಸದೆ, ಆಶಾಗ್ರಹಪ್ರತಿನಿವಿಷ್ಟರಾಗಿ ಹೇಗೆ ಅನರ್ಥಕ್ಕೆ ಗುರಿಯಾಗುವರೋ, ಸನ್ಮಾರ್ಗಾವಲಂಬನೆಯು ಇಂಥ ಅನರ್ಥಗಳನ್ನು ಹೇಗೆ ತಪ್ಪಿಸುವುದೋ, ಅವುಗಳನ್ನು ವಿಶದಪಡಿಸುವುದು ಬಹಳ ಅವಶ್ಯಕವಾದುದು ಅತ್ಯುತ್ಕಟವಾದ ಪಾಪಗಳಗೆ ಈ ಜನ್ಮದಲ್ಲಿಯೇ ಶಿಕ್ಷೆಯಾಗುವುದೆಂಬುದಾಗಿಯ, ಅತ್ಯುತ್ತಮವಾದ ಧರ್ಮಗಳಿಗೂ ಫಲವು ಈ ಜನ್ಮದಲ್ಲಿಯೆ ಆಗುವುದೆಂಬುದಾಗಿಯೂ, ನಮ್ಮ ಹಿರಿಯರು ಹೇಳಿರುವರು. ಇಂಥ ಪಾಪ ಪುಣ್ಯಗಳ ಫಲಗಳು ಯಾವ ರೀತಿಯಲ್ಲಿ ಸಂಭವಿಸುವವೋ, ಅವುಗಳನ್ನು ಇತಿಹಾಸರೂಪವಾಗಿ ಪ್ರದರ್ಶನ ಮಾಡುವುದಕ್ಕೋಸ್ಕರ ಈ ಗ್ರಂಥವು ರಚಿಸಲ್ಪಟ್ಟಿತು. ಈ ವುದ್ದೇಶವನ್ನು ನೆರವೇರಿಸುವ ವಿಷಯದಲ್ಲಿ ಈ ಗ್ರಂಥವು ಸಾಧಕವಾದುದೆಂದು ವಾಚಕರಿಂದ ಗಣಿಸಲ್ಪಟ್ಟರೆ, ಈ ವಿಷಯ ದಲ್ಲಿ ಮಾಡಿದ ಪ್ರಯತ್ನವು ಸಂಪೂರ್ಣವಾದ ಫಲವನ್ನು ಹೊಂದಿತೆಂದು ಭಾವಿಸಲ್ಪಡುವುದು.


M.V.
|| ಶ್ರೀಃ ||

ಪರಂತಪ ವಿಜಯ

[ಸಂಪಾದಿಸಿ]

ಅಧ್ಯಾಯ . ೧.

[ಸಂಪಾದಿಸಿ]
ಈ ಭರತಖಂಡದ ಈಶಾನ್ಯ ಭಾಗದಲ್ಲಿ ಗಂಧರ್ವಪುರಿಯೆಂಬ ಒಂದು ಪಟ್ಟಣವಿರುವುದು. ಇದು, ದ್ಯೂತ ಪಾನ ವ್ಯಭಿಚಾರ ಮೊದಲಾದ ದುರ್ವೃತ್ತಿಗಳಿಗೆ ಮುಖ್ಯಸ್ಥಾನವಾಗಿದ್ದಿತು. ಇದರಲ್ಲಿ ಚೌರ್ಯ ಮೊದಲಾದ ದುರ್ವೃತ್ತಿಗಳಿಂದ ದ್ರವ್ಯವನ್ನಾರ್ಜಿಸಿ, ಅದನ್ನು ದ್ಯೂತ ವ್ಯಭಿಚಾರಗಳಲ್ಲಿ ಕಳೆಯತಕ್ಕವರು ಅನೇಕರಿದ್ದರು. ಇಲ್ಲಿನ ದ್ಯೂತಶಾಲೆಗಳು, ವಿಶಾಲವಾದ ಅರಮನೆಗಳಂತೆ ಕಾಣಿಸುತಿದ್ದುವು. ಈ ದ್ಯೂತಶಾಲೆಗಳಲ್ಲಿ, ಪ್ರತಿಕ್ಷಣದಲ್ಲಿಯೂ ಕೋಟ್ಯಂತರ ದ್ರವ್ಯಗಳು ಒಬ್ಬರಿಂದೊಬ್ಬರಿಗೆ ಸೇರುತಿದ್ದುವು. ಭಾಗ್ಯಲಕ್ಷ್ಮಿಯು ಅತಿ ಚಂಚಲೆ ಯೆಂಬುದಕ್ಕೆ ದೃಷ್ಟಾಂತಗಳು, ಈ ಪಟ್ಟಣದಲ್ಲಿ ವಿಶೇಷವಾಗಿ ಸಿಕ್ಕುತಿದ್ದುವು. ಈ ಪಟ್ಟಣದ ಮಧ್ಯ ಭಾಗದಲ್ಲಿ ಅತಿ ವಿಸ್ತಾರವಾಗಿಯೂ ಅತ್ಯುನ್ನತವಾದ ಉಪ್ಪರಿಗೆಗಳಿಂದ ಶೋಭಿತವಾಗಿಯೂ ಇದ್ದ ಒಂದಾ ನೊಂದು ಮನೆಯು, ಇಲ್ಲಿನ ದ್ಯೂತಶಾಲೆಗಳಲ್ಲೆಲ್ಲ ಪ್ರಧಾನವೆನ್ನಿಸಿಕೊಂಡಿದ್ದಿತು. ಈ ಗೃಹಕ್ಕೆ, ದುರ್ಲಲಿತನೆಂಬ ಒಬ್ಬ ಯಜಮಾನನಿದ್ದನು. ಇವನು, ತನ್ನ ಮನೆಯಲ್ಲಿ ದ್ಯೂತವಾಡಿ ಗೆದ್ದವರು ಗೆದ್ದ ಹಣದಲ್ಲಿ ತನಗೆ ಇಪ್ಪತ್ತರಲ್ಲೊಂದು ಪಾಲನ್ನು ಕೊಡಬೇಕೆಂದು ನಿರ್ಣಯಿಸಿದ್ದನು. ಈ ರೀತಿ ಯಲ್ಲಿ ತೆಗೆದುಕೊಳ್ಳಲ್ಪಡತಕ್ಕ ದ್ರವ್ಯವೇ, ತಿಂಗಳಿಗೆ ೨೫ ಲಕ್ಷ ರೂಪಾಯಿ ಗಳವರೆಗೆ ಆಗುತಿದ್ದಿತು. ಈ ದ್ರವ್ಯದಲ್ಲಿ ಇವನು ತನ್ನ ಸ್ವಂತಕ್ಕಾಗಿ ೫ ಲಕ್ಷ ರೂಪಾಯಿಗಳನ್ನು ತೆಗೆದಿಟ್ಟುಕೊಂಡು, ಉಳಿದ ೨೦ ಲಕ್ಷ ರೂಪಾಯಿ ಗಳನ್ನು ಆ ದ್ಯೂತಗೃಹಕ್ಕೆ ಬರತಕ್ಕವರ ಸಕಲ ಸೌಕರ್ಯಾರ್ಥವಾಗಿ ಉಪಯೋಗಿಸುತ್ತಿದ್ದನು. ಈ ಗೃಹದಲ್ಲಿ ಕ್ಷಣಮಾತ್ರ ವಾಸಮಾಡುವುದೂ ಅನೇಕ ವರ್ಷಗಳ ಸ್ವರ್ಗಸುಖಾನುಭವಕ್ಕೆ ಸಮಾನವಾದುದೆಂದು, ಅಲ್ಲಿಗೆ ಬರತಕ್ಕವರು ಭಾವಿಸುತಿದ್ದರು. ಈ ಮನೆಯ ಸುತ್ತಲೂ, ಫಲಪುಷ್ಪಭರಿತ ವಾಗಿ ಚಿತ್ರ ವಿಚಿತ್ರಗಳಾದ ಅನೇಕ ವೃಕ್ಷಗಳಿಂದ ರಮಣೀಯವಾಗಿರುವ ಉದ್ಯಾನವನವು ಪ್ರಕಾಶಿಸುತಿದ್ದಿತು. ಇದರೊಳಗೆ ಅಲ್ಲಲ್ಲಿಯೇ ಅಮೋದ ಭರಿತಗಳಾದ ಲತೆಗಳಿಂದ ಶೋಭಿತವಾಗಿರುವ ಲತಾಗೃಹಗಳೂ, ಅವುಗಳಲ್ಲಿ ವಿಶ್ರಮಿಸಿಕೊಳ್ಳುವುದಕ್ಕೆ ಅನುಕೂಲಗಳಾದ ಶಯನಾಸನಗಳೂ, ಅತಿ ಮನೋಹರಗಳಾಗಿ ಸಜ್ಜುಗೊಳಿಸಲ್ಪಟ್ಟಿದ್ದುವು. ಈ ಲತಾಗೃಹಗಳೊಳಗೊ೦ದರ ಬಳಿಯಲ್ಲಿ, ಒಂದುದಿನ ಸಂಧ್ಯಾಕಾಲದಲ್ಲಿ, ಮಾಧವನೆಂಬ ದೊಡ್ಡ ಮನುಷ್ಯನೊಬ್ಬನು ವಿಹಾರಾರ್ಥವಾಗಿ ಸಂಚರಿಸುತ್ತಿದ್ದನು. ಈತನ ಉಡುಗೆ ತೊಡುಗೆಗಳಿಂದಲೇ, ಇವನು ಕೋಟೀಶ್ವರನೆಂದು ತಿಳಿಯಬಹುದಾಗಿದ್ದಿತು. ಈತನ ಮುಖಭಾವವು, ಇವನು ವಿಚಾರಪರನೆಂಬುದನ್ನು ಪ್ರದರ್ಶನಮಾಡುತಿದ್ದಿತು. ಹೀಗಿರುವಲ್ಲಿ, ಅಲ್ಲಿಗೆ, ಸುಂದರಾಕಾರನಾಗಿಯ, ಯೌವನಸ್ಥನಾಗಿಯೂ, ಅಜಾನುಬಾಹುವಾಗಿಯೂ ಇದ್ದ, ಪರಂತಪನೆಂಬ ಮಹನೀಯನೊಬ್ಬನು ಬಂದನು. ಈತನಲ್ಲಿ, ಸತ್ಯ ಧರ್ಮ ಶಾಸ್ತಿಗಳೆಂಬ ಮೂರುಗುಣಗಳೂ ಮೂರ್ತಿಮತ್ತಾಗಿದ್ದಂತೆ ಕಾಣಬರುತಿದ್ದುವು. ಇವನು ಆ ಉಪವನದ ಸೊಬಗನ್ನು ನೋಡುತ ಆ ಲತಾಗೃಹದ ಬಳಿಗೆ ಬರಲು, ಅಲ್ಲಿ ಸಂಚರಿಸುತಿದ್ದ ಮಾಧವನು, ಇವನ ಸೌಂದರವನ್ನೂ ಇಂಗಿತಗಳನ್ನೂ ನೋಡಿ ವಿಸ್ಮಿತನಾಗಿ, ಈತನ ಗುಣಾತಿಶಯಗಳು ಇವನ ರೂಪ ಯೌವನಗಳಿಗೆ ಅನುರೂಪವಾಗಿರುವುವೆಂದು ತನ್ನ ಮನಸ್ಸಿನಲ್ಲಿ ನಿರ್ಧರಿಸಿಕೊಂಡು, ಪರಂತಪನನ್ನು ಕುರಿತು “ ಅಯ್ಯಾ ! ನೀನು ಯಾರು ? ನಿನ್ನನ್ನು ನೋಡಿದ ಮಾತ್ರದಿಂದಲೇ, ನನಗೆ ನಿನ್ನಲ್ಲಿ ಅನಿರ್ವಾಚ್ಯವಾದ ಒಂದುಬಗೆಯ ವಿಶ್ವಾಸವೂ, ಸಂತೋಷವೂ ಉಂಟಾಗಿರುವುವು.” ಎಂದು ಹೇಳಿದನು. 
ಅಧ್ಯಾಯ ೧


ಪರಂತಪ-ಅಯ್ಯಾ! ನಾನು ಪರದೇಸಿ. ದೇಶಾಟನಾರ್ಥವಾಗಿ ಬರು ತಿರುವಾಗ, ಈ ವುದ್ಯಾನದ ರಾಮಣೀಯಕವನ್ನು ನೋಡಿ, ನನ್ನ ಮನಸ್ಸು ನನ್ನನ್ನು ಇಲ್ಲಿಗೆ ಆಕರ್ಷಿಸಿತು. ಆದರೆ, ನಿನ್ನ ವಿಶ್ವಾಸೋಕ್ತಿಗಳಿಗೆ ನಾನು ಬಹಳ ಕೃತಜ್ಞನಾಗಿರುವೆನು. ನನ್ನ ಪೂರ್ವಾಪರಗಳನ್ನು ತಿಳಿದುಕೊಳ್ಳುವುದರಿಂದ, ನಿನಗೆ ಪ್ರಯೋಜನವೇನೂ ತೋರುವುದಿಲ್ಲ.

ಮಾಧವ-ಲೋಕದಲ್ಲಿ, ಯಾವ ಕಾರವನ್ನಾಗಲಿ, ಅಥವಾ ಯಾವ ಪದಾರ್ಥವನ್ನಾಗಲಿ ನಿಷ್ಪ್ರಯೋಜನವೆಂದು ಹೇಳುವುದಕ್ಕಾಗುವುದಿಲ್ಲ. ನಿನ್ನ ಆಕಾರ ಮಾತ್ರದಿಂದಲೆ, ನಿನ್ನ ಬುದ್ಧಿಯ ಚಾತುರ್ಯಾತಿಶಯವು ಪ್ರಕಟಿಸಲ್ಪಡುತಿರುವುದು. ಆದುದರಿಂದ, ನೀನು ಇಲ್ಲಿಗೆ ವೃಥಾ ಬಂದವನಂತೆ ತೋರುವುದಿಲ್ಲ. ನೀನು ಇಲ್ಲಿಗೆ ಬಂದುದಕ್ಕೆ ಉದ್ದೇಶವೇನು? -ಹೇಳು. ಇದೇ ನಮ್ಮಿಬ್ಬರಿಗೂ ಪ್ರಥಮ ಪರಿಚಯವಾದಾಗ್ಯೂ, ಯಾವುದೋ ಒಂದು ಅನಿರ್ವಚನೀಯವಾದ ಸಂದರ್ಭಸಂಯೋಗದಿಂದ, ನನ್ನ ಮನಸ್ಸು ನಿನ್ನಲ್ಲಿ ಪ್ರೇಮಾತಿಶಯವುಳ್ಳದಾಗಿರುವುದು.ನಾನು ನಿನ್ನನ್ನು ಹಿಂದೆ ಎಂದೂ ನೋಡಿದಂತೆ ತೋರುವುದಿಲ್ಲ; ಆದರೂ, ಈಗ ನಿನ್ನಲ್ಲಿ ನನಗೆ ಆಕಸ್ಮಿಕವಾಗಿ ಉಂಟಾಗಿರುವ ಪ್ರೇಮಾತಿಶಯವನ್ನು ನೋಡಿದರೆ, ನಮ್ಮಿಬ್ಬರಿಗೂ ಯಾವುದೋ ಒಂದು ಸಂಬಂಧವಿದ್ದರೂ ಇರಬಹುದೆಂಬ ಸಂಶಯವು ನನ್ನ ಮನಸ್ಸಿನಲ್ಲಿ ಅಂಕುರಿಸುತ್ತಿರುವುದು. ಆದುದರಿಂದ, ನನಗೆ ನಿನ್ನಲ್ಲಿ ಉಂಟಾಗುತಿರುವ ವಿಶ್ವಾಸಕ್ಕೆ ಕಾರಣವನ್ನು ತಿಳಿದುಕೊಳ್ಳುವುದಕ್ಕಾಗಿ, ನಾನು ನಿನ್ನ ಪೂರ್ವಾಪರಗಳನ್ನು ಕೇಳುತ್ತೇನೆ.-ಹೇಳು.

ಪರಂತಪ -ಹಾಗಾದರೆ, ನನ್ನ ವೃತ್ತಾಂತವನ್ನು ಹೇಳುವುದಕ್ಕೆ ಮೊದಲು ನಿನ್ನ ಪೂರ್ವೋತ್ತರಗಳನ್ನು ತಿಳಿಯಬೇಕೆಂಬ ಅಭಿಲಾಷೆ ನನಗುಂಟಾಗಿರುವುದರಿಂದ, ನೀನು ಮೊದಲು ನಿನ್ನ ವೃತ್ತಾಂತವನ್ನು ಹೇಳು.

ಮಾಧವ- ನಾನು ಕಲ್ಯಾಣಪುರ ನಿವಾಸಿ ; ನನ್ನ ತಂದೆ ಮಹೇಂದ್ರ ಪಾಲನೆಂಬವನು. ನನ್ನ ಒಡಹುಟ್ಟಿದವರಲ್ಲಿ ಒಬ್ಬನು ಸತ್ತನು. ಅವನಿಗೆ ಶಂಬರನೆಂಬ ಒಬ್ಬ ಮಗನಿರುವನು. ನನ್ನ ಹಿರಿಯಣ್ಣನು ಸುಮಿತ್ರನು. ನಾನೇ ಕಿರಿಯವನು. ರತ್ನಾಕರವೆಂಬ ದೇಶವು ನನ್ನ ಅಧೀನದಲ್ಲಿರುವುದು, 
ಪರಂತಪ ವಿಜಯ


ಪರಂತಪ-(ಆಶ್ಚರ್ಯದೊಡನೆ) ಅಹಹ ! ಹಾಗಾದರೆ, ನಿನ್ನ ವಿಶ್ವಾಸಕ್ಕೆ ಸಂಪೂರ್ಣವಾದ ಕಾರಣವುಂಟು. ನಾನು ನಿನ್ನ ಮಿತ್ರನಾದ ವೈರಿಸಿಂಹನ ಮಗನು. ಈಗ ನಿನ್ನಲ್ಲಿ ನನಗೆ ಪಿತೃಭಕ್ತಿ ನೆಲೆಗೊಂಡಿರುವುದು.

ಮಾಧವ- (ದುಃಖದಿಂದ ಕಣ್ಣೀರು ಸುರಿಸಿ) ಅಯ್ಯಾ ! ಪರಂತಪ ! ವೈರಿನಿಂಹನ ಅಕಾಲಮರಣದಿಂದುಂಟಾದ ಶೋಕಾಗ್ನಿಯು, ನನ್ನನ್ನು ಬಹಳವಾಗಿ ಬಾಧಿಸುತ್ತಿರುವುದು. ಆದರೆ, ನಿನ್ನನ್ನು ನೋಡಿದಕೂಡಲೆ, ನನಗೆ ನಷ್ಟನಾಗಿದ್ದ ಮಿತ್ರನು ಈಗ ಪುನಃ ಲಭಿಸಿದಷ್ಟು ಆನಂದವುಕ್ಕುತಿರುವುದು. ನೀನು ಆತನ ಮಗನೇದು ನನಗೆ ತಿಳಿಯದಿದ್ದ ಕಾರಣ, ನಿನ್ನೊಡನೆ ಈ ರೀತಿಯಾಗಿ ಮಾತನಾಡಿದೆನು. ನನ್ನ ಪ್ರಿಯಮಿತ್ರನಾದ ವೈರಿನಿಂಹನು, ತನ್ನ ಬುದ್ಧಿ ಬಲದಿಂದಲೂ, ದೇಹಶಕ್ತಿಯಿಂದಲೂ ಅತ್ಯದ್ಭುತವಾದ ಕಾರ್ಯಗಳನ್ನು ಮಾಡಿರುವನು. ನಿನ್ನನ್ನು ನೋಡಿದರೆ, ನೀನು ಆತನನ್ನು ಮರೆಯಿಸುವಂತೆ ತೋರುವೆ. (ಅವನನ್ನು ಗಾಢಾಲಿಂಗನ ಮಾಡಿಕೊಂಡು, ತನ್ನ ಬಿಡಾರಕ್ಕೆ ಕರೆದುಕೊಂಡು ಹೋಗಿ, ಅವನಿಗೆ ಅತ್ಯಾದರದಿಂದ ಭೋಜನಾದಿಗಳನ್ನು ಮಾಡಿಸಿ ಸತ್ಕರಿಸಿದನು.)

ಪರಂತಪ-ನಿನ್ನ ಪ್ರೀತಿಪೂರ್ವಕವಾದ ಆತಿಥ್ಯಕ್ಕೆ ಸಂತುಷ್ಟನಾದೆನು. ಆದರೆ, ನಾನು ಅತ್ಯವಶ್ಯವಾದ ಯಾವುದೋ ಒಂದು ಕಾರ್ಯಾಂತರದಿಂದ ಇಲ್ಲಿಗೆ ಬಂದಿರುವೆನು. ಅದಕ್ಕೆ ಕಾಲಾತಿಕ್ರಮವಾಗುವುದರಿಂದ, ನಿನ್ನ ಅಪ್ಪಣೆಯಾದರೆ ಹೋಗುವೆನು. ಆ ಕಾರ್ಯವನ್ನು ನಿರ್ವಹಿಸಿಕೊಂಡು ಹಿಂದಿರುಗಿ ಬರುವಾಗ, ಪುನಃ ನಿನ್ನ ದರ್ಶನವನ್ನು ತೆಗೆದುಕೊಳ್ಳುವೆನು.

ಮಾಧವ-ನಾನು ನಿನಗೆ ಅನ್ಯನೆಂದೆಣಿಸಬೇಡ. ನಿನ್ನ ಕಾರ್ಯವಾವುದು ? ಎಂತಹ ರಹಸ್ಯವಾಗಿದ್ದರೂ ನನ್ನೊಡನೆ ಹೇಳಬಹುದು. ಅದರಲ್ಲಿ ನನ್ನಿಂದಾಗತಕ್ಕುದೇನಾದರೂ ಇದ್ದರೆ, ನಿನಗೆ ಸಹಾಯನಾಗಿ ಅದನ್ನು ಮಾಡಿಕೊಡುವುದರಲ್ಲಿ ನಾನು ಸಿದ್ಧನಾಗಿರುವೆನು.

ಪರಂತಪ-ಅಯ್ಯಾ ! ಮಾಧವ ! ಈಗ ನಾನು ಮಾಡಬೇಕಾದ ಕಾರ್ಯವು ಅತಿರಹಸ್ಯವಾದುದು; ಅದನ್ನು ಪ್ರಕಟಿಸುವುದು, ಕಾರ್ಯಹಾನಿಗೆ ಹೇತುವಾಗುವುದೇ ಹೊರತು, ಮತ್ತೆ ಬೇರೆ ಇಲ್ಲ. ಆದರೂ, ನಿನಗೆ ನನ್ನಲ್ಲಿರುವ ವಿಶ್ವಾಸವನ್ನು ನೋಡಿದರೆ, ನಿನಗೆ ತಿಳಿಯಿಸುವುದರಿಂದ ಯಾವ
ಅಧ್ಯಾಯ ೧


ಬಾಧೆಯೂ ಇಲ್ಲವೆಂದು ತೋರುವುದು. ಹೇಳುತ್ತೇನೆ...ಕೇಳು. ಈ ಪಟ್ಟಣದಲ್ಲಿ, ರಾಜಶಾಸನಗಳನ್ನುಲ್ಲಂಘಿಸಿ ಉಚ್ಛೃಂಖಲಪ್ರವರ್ತನೆಯಿಂದ ಸಜ್ಜನರಿಗೆ ಕಂಟಕಭೂತರಾದವರು ಬಹುಮಂದಿಯಿರುವರೆಂದು, ರಾಜ್ಯಾಧಿಕಾರಿಗಳಿಗೆ ತಿಳಿಯಬಂದಿರುವುದು. ಇವನ ನಿಗ್ರಹಾರ್ಥವಾಗಿ, ಈ ದೇಶಾಧಿಪತಿಯು ನನಗೆ ಸರ್ವಾಧಿಕಾರವನ್ನು ಕೊಟ್ಟು ಇಲ್ಲಿಗೆ ಕಳುಹಿಸಿರುವನು. ಇದಲ್ಲದೆ, ಈ ಪಟ್ಟಣದಲ್ಲಿರುವ ದ್ಯೂತಶಾಲಾಧಿಕಾರಿಯೊಬ್ಬನು, ತನ್ನ ಕಡೆಯವರಾದ ಕೆಲವು ಜನಗಳೊಡನೆ ಅತಿ ಕ್ರೂರವಾದ ದುಷ್ಕೃತ್ಯಗಳನ್ನು ನಡೆಯಿಸುತ್ತಿರುವುದಾಗಿ ತಿಳಿಯಬಂದಿರುವುದು, ಅವನನ್ನು ಮೊದಲು ನಿಗ್ರಹಿಸಬೇಕಾಗಿರುವುದು.

ಮಾಧವ- ಭಾಪು! ಭಾಪು! ಪ್ರಿಯಮಿತ್ರನೆ ! ನಿನ್ನ ಕಾರ್ಯವು ನನ್ನ ಮನಸ್ಸಂಕಲ್ಪಕ್ಕೆ ಅನುಕೂಲವಾಯಿತು. ಈ ಕಾರ್ಯವನ್ನು ನೀನು ನಡೆಯಿಸಿದರೆ, ದುಷ್ಟನಿಗ್ರಹಾರ್ಥವಾಗಿ ನಿನ್ನ ತಂದೆ ಅನುಭವಿಸುತ್ತಿದ್ದ ಶ್ರಮ ಸಫಲವಾಗುವುದು. ಆದರೆ, ಆ ದ್ಯೂತಶಾಲಾಧಿಕಾರಿ ಬಹುದುಷ್ಟನು; ಅನೇಕ ಜನಗಳ ಸ್ವತ್ತನ್ನು ಅಪಹರಿಸಿರುವನು; ಇದಕ್ಕಾಗಿ ಅನೇಕ ಪಾಣಿಹತ್ಯೆಗಳನ್ನೂ ಮಾಡಿರುವನು. ಇವನ ದುಷ್ಕೃತ್ಯಗಳನ್ನು ಉದ್ಘಾಟಿಸುವುದಕ್ಕಾಗಿಯೇ ನಾನು ಇಲ್ಲಿಗೆ ಬಂದಿರುವೆನು. ಈ ನೀಚನು ನನ್ನ ಧನದಲ್ಲಿಯೂ ಕೂಡ ಅನೇಕ ಭಾಗವನ್ನು ಜೂಜಿನ ನೆಪದಿಂದ ವಂಚಿಸಿ ಗೆದ್ದುಕೊಂಡಿರುವನು. ಆದುದರಿಂದ, ಈ ದಿವಸರಾತ್ರಿ ನಾನು ಹಿಂದೆ ಕಳೆದುಕೊಂಡುದುದನ್ನೆಲ್ಲ ಗೆದ್ದು ಅವನ ಹೆಮ್ಮೆಯನ್ನು ಮುರಿಯಬೇಕೆಂದು ಶಪಥಮಾಡಿಕೊಂಡಿರುತ್ತೇನೆ.

ಪರಂತಪ - ಅಯ್ಯಾ ! ಮಾಧವನೇ ! ನೀನು ಶಪಥಮಾಡಿರುವಂತೆ ಅವನನ್ನು ಗೆಲ್ಲತಕ್ಕ ಉಪಾಯವೇನಾದರೂ ಉಂಟೋ?

ಮಾಧವ- ಈ ದಿವಸರಾತ್ರಿ ಆ ನೀಚನೊಡನೆ ನನ್ನ ಸರ್ವಸ್ವವನ್ನೂ ಪಣಮಾಡಿ ದ್ಯೂತವಾಡುತ್ತೇನೆ. ಬಹುಶಃ ಜಯಲಕ್ಷ್ಮಿಯು ನನಗೆ ಪ್ರಸನ್ನಳಾಗದಿರಲಾರಳೆಂದು ಭಾವಿಸಿದ್ದೇನೆ.

ಪರಂತಪ-ಅಯ್ಯಾ ! ಮಾಧವ! ನೀನು ಹೀಗೆ ಆಲೋಚಿಸಬೇಡ. ಸರ್ವಥಾ ಅದೃಷ್ಟವನ್ನು ಪರೀಕ್ಷಿಸಬಾರದು. ಲಕ್ಷ್ಮಿಯು ಬಹು ಚಂಚಲೆ. 
ಪರಂತಪ ವಿಜಯ


ಅವಳ ಪ್ರಸನ್ನತೆ ನಂಬತಕ್ಕುದಲ್ಲ. ಈ ದಿವಸವೆನಾದರೂ ಆ ದುಷ್ಟನೇ ಗೆದ್ದ ಪಕ್ಷದಲ್ಲಿ, ನೀನು ಬಹು ಶೋಚನಿಯವಾದ ಅವಸ್ಥೆಗೆ ಗುರಿಯಾಗುವೆ. ಆದುದರಿಂದ, ನೀನು ಮಾಡಿಕೊಂಡಿರುವ ಶಪಥವನ್ನು ಸರ್ವಥಾ ಬಿಟ್ಟು ಬಿಡುವುದೇ ಒಳ್ಳೆಯದು. ಇದಲ್ಲದೆ, ನಾನು ಇವನ ಸಿಗ್ರಹಾರ್ಥವಾಗಿಯೇ ಇಲ್ಲಿಗೆ ಬಂದಿರುವೆನಾದುದರಿಂದ, ಈ ಕಾಲದಲ್ಲಿ ನೀನು ಇವನೊಡನೆ ದ್ಯೂತವಾಡಿ ಸರ್ವಸ್ವವನ್ನೂ ಕಳೆದುಕೊಂಡು ನಿರ್ಗತಿಕನಾಗಬೇಡ.

ಮಾಧವ-ಈ ದ್ಯೂತದಲ್ಲಿ ಸೋಲುವೆನೆಂಬ ಭಯವು ಲೇಶವಾದರೂ ನನಗಿಲ್ಲ. ನಾನು ಧರ್ಮದ್ಯೂತವಿಶಾರದನೆಂಬ ಬಿರುದನ್ನು ಪಡೆದವನು. ಆದರೆ, ನಾನು ಹಿಂದಿನ ಆಟದಲ್ಲಿ ಸ್ವಲ್ಪ ಔದಾಸೀನ್ಯದಿಂದ ಸೋತೆನೇ ಹೊರತು, ಅಜ್ಞತೆಯಿಂದ ಸೋತವನಲ್ಲ. ಈ ರಾತ್ರಿಯೆನೋ ನಾನು ಗೆಲ್ಲುವುದೇ ದಿಟ. ಅಥವಾ ಒಂದುವೇಳೆ ಸೋತು ನಿರ್ಗತಿಕನಾದರೂ, ಅದೂ ನನಗೆ ಅಭಿಮತವೇಸರಿ. ಏಕೆಂದರೆ, -ಇನ್ನು ಮುಂದೆ ಜೀವಿಸಬೇಕೆಂಬ ಕುತೂಹಲವು ನನಗೆ ಸ್ವಲ್ಪವೂ ಇಲ್ಲ. ಈ ಕ್ಷಣವೇ ಅತ್ಮಹತ್ಯೆ ಮಾಡಿಕೊಂಡು ಪ್ರಾಣವನ್ನು ಕಳೆದುಕೊಳ್ಳುವುದರಲ್ಲಿ ಸಿದ್ಧನಾಗಿರುವೆನು. ನನಗೆ ದುಸ್ಸಹವಾದ ಒಂದು ಕ್ಲೇಶವುಂಟಾಗಿದೆ. ಇದು ಯಾವಾಗ ತಪ್ಪುವುದೋ ಎಂದು ಪರಿತಪಿಸುತಿರುವ ನನಗೆ, ನನ್ನ ಮನಸ್ಸಿನಲ್ಲಿರುವ ಕ್ಲೇಶದ ನಿವಾರಣೆಗೆ ಮರಣವಿನಾ ಇನ್ಯಾವ ಉಪಾಯವೂ ತೋರದಿರುವುದರಿಂದ, ಆ ಮರಣವನ್ನೇ ಎದುರು ನೋಡುತ್ತಿರುವೆನು.

ಪರಂತಪ-ನಿನ್ನ ಈ ಶಪಥವು ನನಗೆ ಬಹಳ ಸಂಕಟಕರವಾಗಿರುವುದು. ನಿನಗೆ ಪ್ರಾಣದಲ್ಲಿಯೂ ಜುಗುಪ್ಸೆಯುಂಟಾಗುವಷ್ಟು ಕ್ಲೇಶವೆನೋ ಗೊತ್ತಾಗಲಿಲ್ಲ. ಏನು ಹೋದರೂ ಹೋಗಲಿ, "ಜೀವನ್ ಭದ್ರಾಣಿ ಪಶ್ಯತಿ" ಎಂಬಂತೆ ಪ್ರಾಣರಕ್ಷಣೆಯನ್ನು ಮಾಡಿಕೊಂಡಿದ್ದರೆ, ಕಾಲಾನು ಕಾಲದಲ್ಲಿ ಇಹಪರಗಳಲ್ಲಿ ಸಕಲವಾದ ಇಷ್ಟಾರ್ಥಗಳನ್ನೂ ಪಡೆಯಬಹುದೆಂದು ಹಿರಿಯರು ಹೇಳಿರುವರು. ಇದು ನಿನಗೆ ತಿಳಿಯದ ಅಂಶವಲ್ಲ. ನಿನಗೆ ಮರಣವನ್ನು ಎದುರುನೋಡುವಷ್ಟು ದುಃಖಾತಿಶಯವೇನು? ಹೇಳು. ಸಾಧ್ಯ ವಾದರೆ ಅದಕ್ಕೆ ತಕ್ಕ ಪ್ರತೀಕಾರವನ್ನು ಪರ್ಯಾಲೋಚಿಸೋಣ. 
ಅಧ್ಯಾಯ ೧


ಮಾಧವ- ನನ್ನ ದುಃಖವು ಅತಿದುಸ್ಸಹವಾದುದು ಆದರೂ, ನೀನು ಸ್ವಕೀಯನಾದುದರಿಂದ, ನಿನ್ನೊಡನೆ ಹೇಳುವೆನು,ಕೇಳು. ನನ್ನ ಹಿರಿಯಣ್ಣನು,

ಕಾಮಮೋಹಿಸಿಯೆಂಬ ಒಬ್ಬ ಅನಾಥೆಯಾದ ಹುಡುಗಿಯನ್ನು ತಂದು ಸಾಕುತಿರುವನು. ಇವಳು, ತನ್ನ ರೂಪ ಲಾವಣ್ಯ ಸಂಪತ್ತುಗಳಿಂದ ರತಿಯನ್ನೂ ಜರಿಯುವಂತೆ ತೋರುವಳು. ಇವಳ ಬುದ್ಧಿ ಚಾತುರ್ಯವನ್ನು ನೋಡಿದರೆ, ಸರಸ್ವತಿಯೇ ಈ ರೂಪದಿಂದ ಅವತರಿಸಿರುವಳೆಂಬ ಭಾವವು ನೆಲೆಗೊಳ್ಳುವುದು. ಬ್ರಹ್ಮನು ತನ್ನ ಕೌಶಲ್ಯವನ್ನೆಲ್ಲ ವ್ಯಯಮಾಡಿ ಈ ಸ್ತ್ರೀರತ್ನವನ್ನು ಸೃಷ್ಟಿಸಿರುವನೇ ಹೊರತು ಮತ್ತೆ ಬೇರೆಯಿಲ್ಲ. ನನ್ನಣ್ಣನು ಪೋಷಣಾರ್ಥವಾಗಿ ಇವಳನ್ನು ತಂದಾರಭ್ಯ, ನನ್ನ ಅನುರಾಗವು ಇವಳಲ್ಲಿಯೇ ನೆಲೆಗೊಂಡಿತು. ದೈವಗತಿಯಿಂದ ಇವಳಿಗೂ ನನ್ನಲ್ಲಿ ಅನುರಾಗವಂಕುರಿಸುತಿದ್ದಿತು. ಆದರೆ, ನಮ್ಮಿಬ್ಬರ ಪರಸ್ಪರಾನುರಾಗವು ಸಫಲವಾಗುವುದಕ್ಕೆ ಮುಂಚೆಯೇ, ನನ್ನ ಹಿರಿಯಣ್ಣನ ಮಗನಾದ ಶಂಬರನು ದುರ್ಭೋಧನೆ ಮಾಡಿ, ಇವಳಿಗೆ ನನ್ನಲ್ಲುಂಟಾಗಿದ್ದ ಅನುರಾಗವನ್ನು ನಿರ್ಮೂಲ ಮಾಡಿದನು. ಹಸ್ತಗತಳಾಗಿದ್ದ ಈ ಸ್ತ್ರೀಯು, ನನ್ನಲ್ಲಿ ಪರಾಙ್ಮುಖಳಾದಳು. ಇವಳಿಗೆ ನನ್ನಲ್ಲಿ ಅನುರಾಗವು ಕಡಮೆಯಾದಷ್ಟೂ, ನನಗೆ ಐಶ್ವರ್ಯದಲ್ಲಿಯೂ ಪ್ರಾಣದಲ್ಲಿಯೂ ಜುಗುಪ್ಸೆ ಹೆಚ್ಚಾಗುತ ಬಂದಿತು. ಇದಲ್ಲದೆ, ನನಗೆ ಮುಖ್ಯವಾದ ಮತ್ತೊಂದು ಸಂಕಲ್ಪವಿರುವುದು. ಏನೆಂದರೆ :-ಒಂದುವೇಳೆ ನಾನು ಸತ್ತರೂ, ನನ್ನ ಅಪರಿಮಿತವಾದ ಧನವೆಲ್ಲವೂ ನನ್ನ ಮನೋರಥಭಂಗವನ್ನು ಮಾಡಿದ ಆ ನೀಚನಾದ ಶಂಬರನಿಗೆ ಸೇರುವುದು. ನಮ್ಮ ಹಿರಿಯಣ್ಣನಾದ ಸುಮಿತ್ರನಿಗೂ ಬೇಕಾದಷ್ಟು ಧನವಿರುವುದು. ಆದರೆ, ಅವನಿಗೆ ಸಂತಾನವಿಲ್ಲದ ಕಾರಣ, ನನ್ನ ದ್ರವ್ಯದ ಮೇಲೆ ಅವನಿಗೆ ಆಸೆಯಿಲ್ಲ. ಆದುದರಿಂದ, ಈ ನನ್ನ ಐಶ್ವರ್ಯವನ್ನೆಲ್ಲ ತನ್ನ ಸ್ವಾಧೀನಪಡಿಸಿಕೊಳ್ಳಬೇಕೆಂದು, ಶಂಬರನು ಬಹು ಸಾಹಸಮಾಡುತಿರುವನು. ಅದುಕಾರಣ, ನನ್ನ ಆಸ್ತಿಯಲ್ಲಿ ಲೇಶಮಾತ್ರವಾದರೂ, ಆ ದುರಾತ್ಮನಿಗೆ ಸೇರದಂತೆ ಮಾಡುವುದೇ ನನ್ನ ಮುಖ್ಯೋದ್ದೇಶವಾಗಿರುವುದು. ಇದಲ್ಲದೆ, ನನಗೆ ಸೇರಿದ ರತ್ನಾಕರವೆಂಬ ದೇಶದಲ್ಲಿ ಚಿನ್ನದ ಗಣಿಗಳೂ ರತ್ನದ ಗಣಿಗಳೂ ಅನೇಕವಾಗಿದ್ದರೂ, ನನಗೆ ದ್ರವ್ಯಸಂಪಾದನೆ ೮
ಪರಂತಪ ವಿಜಯ


ಯಲ್ಲಿ ಆಶೆ ತೊಲಗಿದಕಾರಣ, ನಾನು ಅವುಗಳನ್ನು ರೂಢಿಸುವುದಕ್ಕೂ ಪ್ರಯತ್ನ ಮಾಡಲಿಲ್ಲ. ಆ ಕಾಮಮೋಹಿನಿಗೆ ನನ್ನಲ್ಲಿ ಉಂಟಾದ ಅನುರಾಗವೇ, ನನಗೆ ಈ ಪ್ರಕಾರವಾಗಿ ಪ್ರಾಣದಮೇಲೂ ಐಶ್ವರ್ಯದಮೇಲೂ ಜುಗುಪ್ಸೆಯನ್ನುಂಟುಮಾಡಿರುವುದು. ಹೀಗಿರುವಲ್ಲಿ, ಇನ್ನು ಹೇಗೆತಾನೆ ನಾನು ಬದುಕಿರಲಿ?-ಹೇಳು.
ಪರಂತಪ- ಅಯ್ಯಾ ! ನೀನು ಹೇಳುವುದು ಸರ್ವಥಾ ಯುಕ್ತ ವಲ್ಲ. ನೀನು ನನಗಿಂತಲೂ ಹಿರಿಯವನು ; ಮತ್ತು ಪಿತೃಪ್ರಾಯನು. ಆದರೂ “ಯುಕ್ತಿಯುಕ್ತಂ ವಟೋ ಗ್ರಾಹ್ಯಂ ಬಾಲಾದಪಿ ಶುಕಾರಪಿ ” ಎಂಬ ನೀತಿಯು ನಿನಗೆ ತಿಳಿಯದ ಅಂಶವಲ್ಲವಾದುದರಿಂದ, ನಾನು ಧೈಯ್ಯದಿಂದ ನಿನಗೆ ವಿಜ್ಞಾವಿಸಿಕೊಳ್ಳುತ್ತೇನೆ. ಸ್ತ್ರೀ ಮಾತ್ರಕ್ಕೋಸ್ಕರ, ಕುಬೇರನ ಐಶ್ವರ್ಯಕ್ಕೆ ಸಮಾನವಾದ ಐಶ್ವರ್ಯವನ್ನೂ, ಇಹಪರಗಳಿಗೆ ಸಾಧಕವಾದ ದೇಹವನ್ನೂ ಕಳೆದುಕೊಳ್ಳುತ್ತೇನೆಂದು ನಿಷ್ಕರ್ಷಿಸಿರುವುದು ಯುಕ್ತವಲ್ಲ. ಸಾಕು, ಬಿಡು. ದ್ರವ್ಯವುಳ್ಳವರಿಗೆ ಯಾವುದು ತಾನೆ ಅಸಾಧ್ಯ ? ನೀನು ಮೋಹಿಸಿರುವ ಸ್ತ್ರೀಗೆ ಸಮಾನರಾದ ಸ್ತ್ರೀಯರು ಲೋಕದಲ್ಲಿ ಯಾರೂ ಇಲ್ಲವೆಂದು ನೀನು ಎಣಿಸಿರುವುದು ನಿನ್ನ ಅಜ್ಞಾನದ ಫಲವೇ ಹೊರತು ಮತ್ತೆ ಬೇರೆಯಲ್ಲ. ಈ ಚಿಂತೆಯನ್ನು ಬಿಡು. ಸಾಧ್ಯವಾದರೆ ನನ್ನ ಶಕ್ತಿಯಿಂದ ಆ ಸ್ತ್ರೀಗೆ ಪುನ: ನಿನ್ನಲ್ಲಿ ಅನುರಾಗವುಂಟಾಗುವಂತೆ ಮಾಡುವೆನು ; ತಪ್ಪಿದರೆ, ಅವಳಿಗಿಂತಲೂ ಉತ್ಕೃಷ್ಟರಾದ ಅನೇಕ ಸ್ತ್ರೀಯರುಗಳನ್ನು ಕರೆತರುವೆನು. ಅವರಲ್ಲಿ ನಿನಗೆ ಇಷ್ಟಳಾದವಳನ್ನು ವರಿಸಿ ಸುಖವಾಗಿ ಬದುಕಬಹುದು. ಇನ್ನು ಈ ವ್ಯಸನವನ್ನು ಬಿಡು.

ಮಾಧವ-ಅಯ್ಯಾ ! ಪರಂತಪ ! ನಿನ್ನೊಡನೆ ಸಂಭಾಷಣೆ ಮಾಡಿದ ಹಾಗೆಲ್ಲ ನಿನ್ನಲ್ಲಿ ನನಗೆ ವಿಶ್ವಾಸವು ಹೆಚ್ಚುತಿರುವುದು. ಆದರೆ, ಈ ಪ್ರಪಂಚದಲ್ಲಿ ನನ್ನ ಅನುರಾಗಕ್ಕೆ ಪೂರ್ಣಪಾತ್ರಳಾದವಳು ಆ ಕಾಮಮೋಹಿನಿಯೊಬ್ಬಳೇ. ಅವಳಿಗೆ ನನ್ನಲ್ಲಿ ಅನುರಾಗವುಂಟಾಗುವಂತೆ ಮಾಡಿದರೆ, ಅದಕ್ಕಿಂತ ಹೆಚ್ಚಾದ ಉಪಕಾರವಾವುದೂ ಇಲ್ಲ. ಈ ವುಪಕಾರವನ್ನು ನೀನು ಮಾಡಿದರೆ, ನನ್ನನ್ನೂ ನನ್ನ ಸಂಪತ್ತನ್ನೂ ನಿನಗೆ ಅಧೀನವನ್ನಾಗಿ ಮಾಡುವೆನು. ಅದು ಹಾಗಿರಲಿ; ಸಾಯಂಕಾಲವಾಗುತ ಬಂದಿತು. ಈ ದಿನ 
ಅಧ್ಯಾಯ ೧

ರಾತ್ರಿ ನಾನು ಆ ನೀಚನಾದ ದುರ್ಬುದ್ಧಿಯೊಡನೆ ದ್ಯೂತವಾಡಬೇಕೆಂದು ಸಂಕಲ್ಪಿಸಿರುವೆನಷ್ಟೆ : ಇದರಲ್ಲಿ ನಾನೇ ಗೆಲ್ಲಬಹುದೆಂಬ ಭರವಸವು ನನಗೆ ಸಂಪೂರ್ಣವಾಗಿರುವುದು. ಆದರೂ, ಜಯಾಪಜಯಗಳು ಪುಣ್ಯವಶ ವಾದುದರಿಂದ, ಅದನ್ನು ನಿರ್ಧರಿಸುವುದಕ್ಕಾಗುವುದಿಲ್ಲ. ಇದಲ್ಲದೆ, ಈ ದುರ್ಬುದ್ಧಿಯು ಬಹಳ ಕೃತಿಮವಾಗಿ ಆಟವಾಡತಕ್ಕವನು. ಇವನ ಕೃತಿಮವನ್ನು ಹೊರಪಡಿಸುವುದೂ ಕೂಡ ನನಗೆ ಮುಖ್ಯ ಕರ್ತವ್ಯವಾಗಿದೆ. ಒಂದುವೇಳೆ ಇವನ ಮೋಸವನ್ನು ಉದ್ಘಾಟಿಸಿದ ಕೂಡಲೆ ನಮ್ಮಿಬ್ಬರಿಗೂ ಕಲಹವುಂಟಾಗಬಹುದು. ಇದರಲ್ಲಿ ಅವನಿಗಾಗಲೀ ನನಗಾಗಲೀ ಅಪಾಯವೂ ಉಂಟಾಗಬಹುದು. ಹಾಗೇನಾದರೂ ಆಗುವ ಸಂದರ್ಭದಲ್ಲಿ, ಅಗ ನಿನ್ನಿಂದ ಆಗತಕ್ಕುದೊಂದು ಉಪಕಾರವಿರುವುದು. ಅದನ್ನು - ನೀನು ಮಾಡಬೇಕು.
ಪರಂತಪ -ನನ್ನಿಂದ ಏನು ಆಗಬೇಕಾದಾಗ್ಗೂ ಅದನ್ನು ನಾನು ಶಿರಸಾವಹಿಸಿ ಮಾಡುವುದರಲ್ಲಿ ಸಿದ್ಧನಾಗಿರುವೆನು : ಹೇಳು.
ಮಾಧವ-ಆ ನೀಚನು ತನ್ನನ್ನು ಸೋಲಿಸಿದವರನ್ನು ಕಠಾರಿ ಯಿಂದ ತಿವಿದು ಕೊಲ್ಲುವುದುಂಟು. ಹಾಗೆ ಅವನೇನಾದರೂ ನನ್ನನ್ನು ಕೊಲ್ಲುವುದಕ್ಕೆ ಯತ್ನಿಸಿ ನನಗೆ ಅಪಾಯ ಸಂಭವಿಸಿದ ಪಕ್ಷದಲ್ಲಿ, ಒಡ ನೆಯೇ ನನ್ನನ್ನು ಈ ನನ್ನ ವಾಸಗೃಹಕ್ಕೆ ಕರೆದುಕೊಂಡು ಬರಬೇಕು.
ಪರಂತಪ-ಅವಶ್ಯವಾಗಿ ಈ ಕೆಲಸ ಮಾಡುತ್ತೇನೆ.

ಮಾಧವ-ಬಹುಶಃ ಇವನು ನನ್ನನ್ನು ಕೊಲ್ಲಲಾರನು, ಒಂದು ವೇಳೆ ನನಗೆ ಪ್ರಾಣಹಾನಿಯುಂಟಾಗುವ ಸಂದರ್ಭದಲ್ಲಿ, ನೀನು ಮಾಡ ತಕ್ಕ ಕ್ರಮಗಳನ್ನು ಹೇಳುತ್ತೇನೆ ; ಕೇಳು. ನನ್ನ ಕೈ ಪೆಟ್ಟಿಗೆಯಲ್ಲಿ ನನ್ನ ಆಸ್ತಿಯ ವಿನಿಯೋಗದ ವಿಷಯದಲ್ಲಿ ಒಂದು ಉಯಲನ್ನು ಬರೆದು ಇಟ್ಟಿರುತ್ತೇನೆ. ನಾನು ಸತ್ತಪಕ್ಷದಲ್ಲಿ, ನನ್ನ ಶವವನ್ನು ನಮ್ಮ ಅಣ್ಣನ ವಶ ಮಾಡಬೇಕಲ್ಲದೆ, ಈ ಉಯಿಲೂ ಜಾರಿಗೆ ಬರುವಂತೆ ಮಾಡಬೇಕು. ನನ್ನ ಉತ್ತರಕ್ರಿಯಾದಿಗಳಿಗಾಗಿ ನನ್ನ ಕೈಪೆಟ್ಟಿಗೆಯಲ್ಲಿ ಬೇಕಾದಷ್ಟು ದ್ರವ್ಯವನ್ನು ಇಟ್ಟಿರುತ್ತೇನೆ. ೧೦
ಪರಂತಪ ವಿಜಯ

ಪರಂತಪ-ಅಯ್ಯಾ ! ನಿನ್ನ ಆಜ್ಞೆಗನುಸಾರವಾಗಿ ನಡೆಯುವುದ ರಲ್ಲಿ ಯಾವ ಸಂಶಯವೂ ಇಲ್ಲ. ಈ ವಿಷಯದಲ್ಲಿ ನಾನು ನಿನ್ನ ಆಜ್ಞೆ ಯನ್ನು ಕೃತಜ್ಞನಾಗಿ ನೆರವೇರಿಸುವೆನು. ಆದರೆ, ನೀನು ಹೇಳುವುದು ಅತಿ ಪ್ರಮಾದಕರವಾಗಿರುವುದರಿಂದ, ನೀನು ಹೀಗೆ ದುಡುಕುವುದು ಸರ್ವಥಾ ಯುಕ್ತವಲ್ಲ. ಈ ರಾತ್ರಿಯ ಜೂಜಿನ ವಿಷಯದಲ್ಲಿ ನೀನು ಮಾಡಿರುವ ಸಂಕಲ್ಪವನ್ನು ಬಿಡು ದ್ಯೂತದಿಂದ ನಳ ಯುಧಿಷ್ಠಿರಾದಿಗಳೂ ಕೂಡ ಬಹಳ ಕಷ್ಟವನ್ನು ಅನುಭವಿಸಿದ ಸಂಗತಿಯೂ, ಇನ್ನೂ ಅನೇಕರು ದುರ್ವಿಕಾರವಾದ ಅತಿ ಸಂಕಟಗಳಿಗೆ ಭಾಗಿಗಳಾದರೆಂಬುದೂ, ನಿನಗೆ ತಿಳಿಯದ ಅಂಶವಲ್ಲ. ಈಗ ನಷ್ಟವಾದ ದ್ರವ್ಯವು ಹೋದರೂಹೋಗಲಿ ; ಅದನ್ನು ಬೇರೆಯಾದ ಮಾರ್ಗಗಳಿಂದ ಸಂಪಾದಿಸಬಹುದು ; ನೀನು ಖಂಡಿತವಾಗಿ ಈ ರಾತ್ರಿ, ಅವನೊಡನೆ ಜೂಜಾಡಬೇಡ.

ಮಾಧವ-ನನ್ನ ಸಂಕಲ್ಬವು ದುರ್ಸಿವಾರವಾದುದು. ಒಂದುವೇಳೆ ಸೂರ್ಯನಾದರೂ ತನ್ನ ಗತಿ ಯನ್ನು ಬದಲಾಯಿಸಬಹುದೇ ಹೊರತು, ನಾನೆಂದಿಗೂ ನನ್ನ ಸಂಕಲ್ಪವನ್ನು ವ್ಯತ್ಯಸ್ತವನ್ನಾಗಿ ಮಾಡುವನಲ್ಲ. ಪ್ರಿಯ ಮಿತ್ರನೇ ! ಕೇಳು:-ನಾನು ದ್ರವಾರ್ಜನೆಗೋಸ್ಕರ ಖಂಡಿತವಾಗಿ ಜೂಜಾಡತಕ್ಕವನಲ್ಲ. ಅನೇಕ ಜನಗಳನ್ನು ಮೋಸಪಡಿಸಿ ಕೆಡಿಸಿರುವ ಆ ದುರಾತ್ಮನಾದ ದುರ್ಬುದ್ಧಿಯ ಕೃತ್ರಿಮವನ್ನ ಉದ್ಘಾಟಿಸುವುದೇ ನನ್ನ ಮುಖ್ಯ ಸಂಕಲ್ಪವು. ಅವನ ಕೃತ್ರಿಮವನ್ನು ಬಹಿರಂಗಪಡಿಸಿ ಅವನಿಗೆ ತಕ್ಕೆ ಶಿಕ್ಷೆಯನ್ನು ಮಾಡಿಸಿದರೆ, ಈ ನಮ್ಮ ದೇಶವನ್ನು ನಿರ್ಮೂಲಮಾಡುವ ಒಂದು ಒಗೆಯ ಸಾಂಕ್ರಾಮಿಕ ರೋಗವನ್ನು ಅಡಗಿಸಿದಂತಾಗುವುದು. ಆದುದರಿಂದ, ಈ ದಿವಸರಾತ್ರಿ ನಾನು ಇವನ ಕಾಪಟ್ಯವನ್ನು ಹೊರಡಿಸಿ ಇವನನ್ನು ಯಮಾಲಯಕ್ಕೆ ಕಳುಹಿಸುವ ಪ್ರಯತ್ನವನ್ನೇ ಮಾಡುವೆನು. ಅಥವಾ, ಈ ಕಾರ್ಯಕ್ಕಾಗಿ ನನ್ನ ಪ್ರಾಣವನ್ನಾದರೂ ಒಪ್ಪಿಸುವೆನು. ಇದೂ ನನಗೆ ಅಭಿಮತವೇ ಸರಿ. ಈ ಪ್ರತಿಜ್ಞೆಯ ವಿಷಯದಲ್ಲಿ, ಆ ಕಾಮ ಮೋಹಿನಿಯೇ ಬಂದು ನನ್ನನ್ನು ತಾನಾಗಿ ವರಿಸುವುದಾಗಿ ಹೇಳಿ ಅಡ್ಡಿಮಾಡಿದರೂ, ನನ್ನ ಪ್ರತಿಜ್ಞಾಪರಿಪಾಲನಾರ್ಥವಾಗಿ ಅವಳ ಪ್ರಾರ್ಥನೆಯನ್ನೂ ನಿರಾಕರಿಸುವೆನು. ನೀನು ನನ್ನ ಈ ಸಂಕಲ್ಪಕ್ಕೆ ಅಡ್ಡಿಯಾಗಬೇಡ. ಲೋಕ 
ಅಧ್ಯಾಯ ೧
೧೧

ಕಂಟಕನಾದ ಆ ದುರಾತ್ಮನನ್ನು ನಿಗ್ರಹಿಸಬೇಕೆಂಬ ನನ್ನ ಪ್ರಯತ್ನವು ಸಫಲವಾದರೂ ಆಗಲಿ ; ಅಥವಾ, ಇವನನ್ನು ನಿಗ್ರಹಿಸುವುದರಲ್ಲಿ ನನಗೆ ಪಾಣಹಾನಿಯುಂಟಾದರೂ ಆಗಲಿ. ಇವೆರಡೂ ನನಗೆ ಕೀರ್ತಿಕರವಾಗಿಯೇ ಇರುವುವು. ಈ ವಿಷಯದಲ್ಲಿ ನೀನು ಸ್ವಲ್ಪವೂ ವ್ಯಸನಪಡಬೇಡ. "ಜಾತಸ್ಯ ಮರಣಂ ಧ್ರುವಂ" ಎಂಬಂತೆ ಹುಟ್ಟಿದವರಿಗೆ ಮರಣವು ಸಿದ್ಧವಾಗಿರುವುದು. ಇಂಥ ಕಾರ್ಯಕೊಸ್ಕರ ಪ್ರಾಣವನ್ನು ಕೊಡುವವನೇ ಧನ್ಯನೆನ್ನಿಸಿಕೊಳ್ಳುವನಲ್ಲವೆ!
ಪರಂತಪ -ಅಯ್ಯಾ ! ಪೂಜ್ಯನಾದ ಮಾಧವನೆ ! ಈಗಿಗ ನಿನ್ನ ಸಂಕಲ್ಪವು ಅತ್ಯತ್ತಮವೆಂಬ ಭಾವವು ನನ್ನಲ್ಲಿ ನೆಲೆಗೊಂಡಿತು. ಇತರರ ಕ್ಷೇಮಕ್ಕೋಸ್ಕರ ದ್ಯೂತಾಸಕನಾಗಿರುವ ಈ ನಿನ್ನ ಲೋಕವಿಲಕ್ಷಣವಾದ ಅಭಿಪ್ರಾಯವು ನನಗೆ ತಿಳಿಯದಿದ್ದ ಕಾರಣ, ಆ ಕಾರ್ಯದಲ್ಲಿ ನಿನ್ನನ್ನು ನಾನು ವಿರೋಧಿಸಿದೆನು. ಲೋಕದಲ್ಲಿ ಪ್ರತಿದಿವಸವೂ ಎಷ್ಟೋ ಜನರು ಸಾಯುವರು. ಆದರೆ, ಲೋಕಕಂಟಕ ನಿವಾರಣೆಗೋಸ್ಕರ ತನ್ನ ಪ್ರಾಣವನ್ನಾದರೂ ಒಪ್ಪಿಸುವುದರಲ್ಲಿ ಸಿದ್ಧನಾಗಿರುವ ನಿನ್ನಂಥ ದೃಢಸಂಕಲ್ಪರನ್ನು ನಾನು ನೋಡಿರಲಿಲ್ಲ. ನೀನು ಹೋಗು. ಆ ದುರಾತ್ಮನನ್ನು ನಿಗ್ರಹಿಸುವುದಕ್ಕೆ ಪ್ರಯತ್ನಿಸು. ನಾನು ನಿನಗೆ ಬೆಂಬಲವಾಗಿ ಬರುವೆನು.
ಮಾಧವ-ಈ ನಿನ್ನಿಂದ ಹೇಳಲ್ಪಟ್ಟ ಮಾತುಗಳೇ ನಿನ್ನ ಧರ್ಮಾಸಕ್ತತೆಯನ್ನು ಪ್ರಕಟಿಸುವುವು. ಅದು ಹಾಗಿರಲಿ; ಇದೋ ಈ ವಜ್ರದ ಉಂಗುರವನ್ನು ತೆಗೆದುಕೊ, ಇದು ನಮಗೆ ವಂಶಪರಂಪರೆಯಾಗಿ ಬಂದಿರತಕ್ಕ ಅಭಿಜ್ಞಾನವಸ್ತು. ನಾನು ಒಂದುವೇಳೆ ಈ ದಿನ ರಾತ್ರಿ ಆ ದುರಾತ್ಮ ನಿಂದ ಸಂಹೃತನಾದ ಪಕ್ಷದಲ್ಲಿ, ಈ ಉಂಗುರವನ್ನು ನನ್ನ ಅಣ್ಣನಿಗೆ ತೋರಿಸು. ಆಗ ಅವನಿಗೆ ನಿನ್ನಲ್ಲಿ ಭಾತೃವಾತ್ಸಲ್ಯವುಂಟಾಗುವುದರಲ್ಲಿ ಸಂಶಯವಿಲ್ಲ: ಇದಲ್ಲದೆ, ನಿನಗೆ ಬೇಕಾದ ಇಷ್ಟಾರ್ಥಗಳನ್ನೆಲ್ಲ ಅವನಿಂದ ಪಡೆಯಬಹುದು. ಹೀಗಲ್ಲದೆ, ಈ ವುಂಗುರುವೇನಾದರೂ ನನ್ನಲ್ಲಿ ಜ್ಞಾತಿ ಮಾತ್ಸರ್ಯವನ್ನಿಟ್ಟಿರುವ ನನ್ನ ಅಣ್ಣನ ಮಗನಾದ ಶಂಬರನಿಗೆ ಸಿಕ್ಕಿದ ಪಕ್ಷದಲ್ಲಿ, ಆಗ ನೀನು ಮೃತ್ಯುವಶನಾಗುವೆ. ಆದುದರಿಂದ, ಈ ವಿಷಯದಲ್ಲಿ ನೀನು ಬಹು ಜಾಗರೂಕನಾಗಿರತಕ್ಕದು. ಈ ರಾತ್ರಿ ದ್ಯೂತಗೃಹಕ್ಕೆ ಬಾ;

೧೨
ಪರಂತಪ ವಿಜಯ

ಆದರೆ, ಈ ನಮ್ಮಗಳ ಆಟದ ವಿಷಯದಲ್ಲಾಗಲಿ-ನನ್ನ ಪ್ರಾಣರಕ್ಷಣೆಯ ವಿಷಯದಲ್ಲಾಗಲಿ-ನೀನು ಸ್ವಲ್ಪವೂ ಪ್ರವರ್ತಿಸಬೇಡ. ನಾನು ನಿನಗೆ ಹೇಳಿರುವ ಕಾರ್ಯಗಳನ್ನು ಮಾತ್ರ ಜಾಗ್ರತೆಯಿಂದ ನಡೆಯಿಸು. ಎಂದು ಹೇಳಿ, ಮಾಧವನು ದ್ಯೂತ ಗೃಹಕ್ಕೆ ಹೊರಟುಹೋದನು.

ಅಧ್ಯಾಯ ೨.

ಮಾಧವನು ಹೊರಟು ಹೋದಮೇಲೆ, ಪರಂತಪನ ಮನಸ್ಸಿನಲ್ಲಿ ಹೀಗೆ ಚಿತ್ರ ವಿಚಿತ್ರಗಳಾದ ಆಲೋಚನೆಗಳು ಅಂಕುರಿಸಿದವು.

ಮಾಧವನು ಹುಚ್ಚನೆ ? ಎಂದಿಗೂ ಹುಚ್ಚನಂತೆ ತೋರುವುದಿಲ್ಲ. ಅಥವಾ, ದ್ಯೂತವೆಂಬುದು, ಅದರಲ್ಲಿ ಆಸಕ್ತರಾದವರಿಗೆ ಮಿತಿಮೀರಿದ ಒಂದು ವಿಧವಾದ ಹುಚ್ಚು ಹಿಡಿಸುವುದುಂಟು. ಇಂಥ ಉನ್ಮಾದವೆನಾದರೂ ಇವನಲ್ಲಿ ಉದ್ಭವಿಸಿರಬಹುದೆ ? ಅದನ್ನೂ ಹೇಳು ವುದಕ್ಕಾಗುವುದಿಲ್ಲ. ಏಕೆಂದರೆ-ಇವನ ಐಶ್ವರ್ಯವು ಅಪರಿಮಿತವಾಗಿರು ವುದರಿಂದ, ನೀಚಕೃತ್ಯದಿಂದ ಧನಾರ್ಜನೆಯನ್ನು ಮಾಡಬೇಕೆಂಬ ಅಭಿಲಾಷೆ ಯಿವನಲ್ಲುಂಟಾಗಿರಲಾರದು. ಇದಲ್ಲದೆ, ಇವನು ದ್ಯೂತಾಸಕ್ತನಾಗಿದ್ದಾಗ್ಗೂ, ಕಪಟದ್ಯೂತವನನ್ನಾಡಿ ಜನಗಳನ್ನು ಕೆಡಿಸತಕ್ಕವರಲ್ಲಿ ಇವನ ದ್ವೇಷವು ಅನ್ಯಾದೃಶವಾಗಿರುವುದನ್ನು ನೋಡಿದರೆ ಪರಮಾಶ್ಚರ್ಯವಾಗುವುದು. ಇವನಿಗೆ ಧರ್ಮದ್ಯೂತವಿಶಾರದನೆಂಬ ಬಿರುದು ಒಪ್ಪುವುದು, ಇವನು ಅಧರ್ಮ ದ್ಯೂತಾಸಕ್ತರನ್ನು ನಿಗ್ರಹಿಸುವುದಕ್ಕೋಸ್ಕರ ತನ್ನ ಸರ್ವಸ್ವವನ್ನೂ ಕೊನೆಗೆ ಪ್ರಾಣವನ್ನೂ ಕಳೆದುಕೊಳ್ಳುವುದರಲ್ಲಿ ಸಿದ್ಧನಾಗಿರುವನು. 
ಅಧ್ಯಾಯ ೨
೧೩

ಆಹಾ ! ಇವನು ಲೋಕವಿಲಕ್ಷಣನಾವ ಮನುಷ್ಯನು. ಇವನ ಮಾತುಗಳಿಂದ, ದುರಾತ್ಮನಾದ ದುರ್ಬುದ್ಧಿಯು ಕಪಟ ದ್ಯೂತಾಸಕ್ತನೆಂಬುದಲ್ಲದೆ- ಘಾತುಕನಾಗಿಯೂ ಇರುವನೆಂದು ತಿಳಿಯಬರುವುದು. ಇದಲ್ಲದೆ, ಮಾಧವನು ಈ ರಾತ್ರಿಯ ದ್ಯೂತದಲ್ಲಿ ತನಗೇನಾದರೂ ಅಪಾಯ ಸಂಭವಿಸಬಹುದೆಂದು ಹೇಳಿರುವನು. ಆದುದರಿಂದ ಸರ್ವಪ್ರಯತ್ನದಿಂದಲೂ ಮಾಧವನಿಗೆ ಆ ವಿಪತ್ತನ್ನು ತಪ್ಪಿಸಬೇಕಲ್ಲದೆ, ಘಾತುಕನಾದ ಆ ದುರ್ಬುದ್ಧಿಯ ಸೊಕ್ಕನ್ನಡಗಿಸಿ ಅವನನ್ನು ಯಮಾಲಯಕ್ಕೆ ಕಳುಹಿಸಬೇಕಾಗಿರುವುದು. ಒಳ್ಳೆಯದಿರಲಿ ; ಇದಕ್ಕೆ ತಕ್ಕ ಕೃಷಿಯನ್ನು ಮಾಡುವೆನು.
ಹೀಗೆ ತನ್ನ ಮನಸ್ಸಿನಲ್ಲಿ ನಿರ್ಧರಿಸಿಕೊಂಡು, ಸಮೀಪದಲ್ಲಿದ್ದ ಭೋಜನಶಾಲೆಯಲ್ಲಿ ಭೋಜನವನ್ನು ತೀರಿಸಿಕೊಂಡು, ಪರಂತಪನು ದ್ಯೂತ ಗೃಹಕ್ಕೆ ಪ್ರವೇಶಿಸಿದನು. ಅಲ್ಲಿ ದುರ್ಬುದ್ಧಿಯೊಡನೆ ಮಾಧವನು ದ್ಯೂತವಾಡುವುದಕ್ಕೆ ಸಿದ್ಧನಾಗಿದ್ದನು. ದುರ್ಬುದ್ಧಿಯ ಕಡೆಯ ಕೆಲವು ಜನಗಳೂ, ಉದಾಸೀನರಾದ ಕೆಲವು ಜನಗಳೂ ಸೇರಿ ಇದ್ದರು. ಕೂಡಲೆ ಆಟಕ್ಕೆ ಉಪಕ್ರಮವಾಯಿತು. ಇತ್ತಲಾಗಿ, ಪರಂತಪನು ಬಾರುಮಾಡಲ್ಪಟ್ಟ ರಿವಾಲ್ವರನ್ನು ಸಿದ್ಧಪಡಿಸಿಕೊಂಡು ದ್ಯೂತವಾಡುತ್ತಿರುವ ಅವರಿಬ್ಬರ ಸಂಭಾಷಣೆಯನ್ನು ಕೇಳುತ್ತ ಸ್ವಲ್ಪ ದೂರದಲ್ಲಿ ಕುಳಿತಿದ್ದನು. ಮಾಧವನಾದರೋ, ಆಗಿನ ದ್ಯೂತದಲ್ಲಿ ದುರ್ಬುದ್ಧಿಯ ಮೋಸಕ್ಕೆ ಸ್ವಲ್ಪವೂ ಅವಕಾಶಕೊಡದೆ, ಪ್ರತಿಯೊಂದು ಆಟವನ್ನೂ ಅಲ್ಲಿದ್ದ ಸಮಸ್ತ ಜನರಿಗೂ ಸಮ್ಮತವಾಗಿರುವಂತೆ ಆಡುತ್ತಿದ್ದನು. ಇವನ ಕೌಶಲ್ಯದಿಂದಲೋ, ಅಥವಾ ದೈವಗತಿಯಿಂದಲೋ, ಜಯಲಕ್ಷ್ಮಿಯು ಇವನನ್ನೇ ವರಿಸಿದಳು. ಅನೇಕ ಜನಗಳಿಗೆ ಮೋಸಪಡಿಸಿ ಅಧರ್ಮದಿಂದ ಗೆದ್ದಿದ್ದ ಆ ದುರ್ಬುದ್ಧಿಯ ದ್ರವ್ಯದಲ್ಲಿ ಅರ್ಧ ಭಾಗವನ್ನು ಮಾಧವನು ಗೆದ್ದನು. ಒಡನೆಯೆ ದುರ್ಬುದ್ಧಿಗೆ ಸಂತಾಪವೂ ಮಾಧವನ ಮೇಲೆ ಕ್ರೋಧವೂ ಹೆಚ್ಚುತಬಂದುವು.

ದುರ್ಬುದ್ಧಿ-(ಮಾಧವನ್ನು ಕುರಿತು) ಅಯ್ಯಾ ! ಮಾಧವನೆ : ಈ ದಿನ ಜಯಲಕ್ಷ್ಮಿಯು ನಿನ್ನ ಅಧೀನಳಾಗಿರುವಳು. ಆದರೂ ಚಿಂತೆಯಿಲ್ಲ. ಈಗ ನನ್ನ ಆಸ್ತಿಯಲ್ಲಿ ಅರ್ಧಭಾಗವು ನಿನಗೆ ಸೇರಿಹೋಯಿತು. ಇನ್ನು ಮುಂದೆ ಆಡಬೇಕಾದರೆ, ಸೋತವರು ಗೆದ್ದವರಿಗೆ ತನ್ನ ಸರ್ವಸ್ವ ೧೪
ಪರಂತಪ ವಿಜಯ

ವನ್ನೂ ಒಪ್ಪಿಸಿಬಿಡಬೇಕು. ಈ ನಿರ್ಣಯಕ್ಕೆ ಒಪ್ಪುವುದಾದರೆ, ಮುಂದಕ್ಕೆ ಆಡೋಣ ! ಇಲ್ಲವಾದರೆ ಈ ನಮ್ಮ ದ್ಯೂತವು ಇಷ್ಟಕ್ಕೇ ಸಮಾಪ್ತವಾಗಲಿ.
ಮಾಧವ-(ಸ್ಪಲ್ಪ ಯೋಚಿಸಿ) ಅಯ್ಯಾ ! ದುರ್ಬುದ್ಧಿಯೆ ! ನೀನು ಹೇಳುವುದು ನನಗೆ ಒಪ್ಪಿತು. ಮುಖ್ಯವಾಗಿ ಈ ದ್ಯೂತವೆಂಬುದೇ ಕೆಟ್ಟದ್ದು, ಆದರೂ, ಈ ಕೆಲಸದಲ್ಲಿ ಪ್ರವರ್ತಿಸಿದವರು ಅದರಿಂದಲೇ ಪೂರ್ಣವಾಗಿ ಕೆಡಬೇಕು ; ಅಥವಾ ಸಂಪೂರ್ಣವಾಗಿ ಅದರಿಂದಲೇ ಬದುಕಬೇಕು. ಈಗ ನನ್ನ ಧನವು ನಿನ್ನ ಧನಕ್ಕಿಂತಲೂ ಶತಾಂಶ ಅಧಿಕವಾಗಿರುವುದು. ಆದಾಗ್ಗೂ ಚಿಂತೆಯಿಲ್ಲ. ನೀನು ಗೆದ್ದ ಪಕ್ಷದಲ್ಲಿ, ಈಗ ನಿನ್ನಿಂದ ನಾನು ಗೆದ್ದಿರುವ ದ್ರವ್ಯದೊಡನೆ ನನ್ನ ಸರ್ವಸ್ವವನ್ನೂ ನಿನಗೆ ಒಪ್ಪಿಸಿ, ನಾನು ದೇಶಭ್ರಷ್ಟನಾಗಿ ಹೋಗುತ್ತೇನೆ. ಅಥವಾ ನಾನು ಗೆದ್ದ ಪಕ್ಷದಲ್ಲಿ, ಉಳಿದ ನಿನ್ನ ಆಸ್ತಿಯೆಲ್ಲವೂ ನನಗೆ ಸೇರಲಿ.
ಇದಕ್ಕೆ ಇಬ್ಬರೂ ಒಪ್ಪಿದರು. ಅದೇ ಅರ್ಥವನ್ನು ಕುರಿತು, ಅಲ್ಲಿದ್ದ ಸಭಿಕರ ಅನುಮತಿಯಿಂದ ಒಂದು ನಿರ್ಣಯ ಪತ್ರಿಕೆಯು ಬರೆಯಲ್ಪಟ್ಟಿತು. ಅದಕ್ಕೆ ಅಲ್ಲಿದ್ದ ಸಮಸ್ತ ಜನರೂ ಸ್ವಹಸ್ತ ಚಿಹ್ನೆಗಳನ್ನು ಹಾಕಿದರು. ಒಡನೆಯೇ ಆಟಕ್ಕೆ ಉಪಕ್ರಮವಾಯಿತು. ಆಗಲೂ ದೈವಗತಿಯಿಂದ ಮಾಧವನಿಗೇ ಜಯವಾಯಿತು. ಕೂಡಲೇ ದುರ್ಬುದ್ಧಿಯು ಅನಿರ್ವಚನೀಯವಾದ ಸಂತಾಪಕ್ಕೆ ಪರವಶನಾಗಿ, ಕೆಲವು ನಿಮಿಷಗಳವರೆಗೂ ಸ್ತಬ್ದನಾಗಿದ್ದು, ಸ್ವಲ್ಪ ಹೊತ್ತಿನಮೇಲೆ ಚೇತರಿಸಿಕೊಂಡು, ಮಾಧವನನ್ನು ಕುರಿತು "ಎಲಾ ದುರಾತ್ಮನಾದ ಮಾಧವನೆ ! ನೀನು ಬಹಳ ವಂಚಕನು. ನಾನಾದರೋ, ಅನೇಕಲಕ್ಷ ಜನಗಳೊಡನೆ ದ್ಯೂತವಾಡಿದವನು; ಆದರೂ ಇದು ವರೆಗೂ ಯಾರಿಗೂ ಸೋತವನಲ್ಲ. ಆದರೆ, ನೀನು ಯಾವದೋ ಒಂದು ವಿಧವಾದ ಚಮತ್ಕಾರದಿಂದ ನನ್ನನ್ನು ವಂಚಿಸಿ ಅಧರ್ಮದ್ಯೂತದಿಂದ ಈ ರೀತಿಯಾಗಿ ನನ್ನನ್ನು ಗೆದ್ದಿರುವಂತೆ ನನಗೆ ಸಂಶಯವುಂಟಾಗಿರುವುದು. ಆದುದರಿಂದ, ಈ ಆಟವು ನನಗೆ ಸರ್ವಥಾ ಸಮರ್ಪಕವಲ್ಲ. ನೀನು ಗೆದ್ದಿರುವುದರಲ್ಲಿ ಯಾವುದನ್ನೂ ನಿನಗೆ ನಾನು ಕೊಡತಕ್ಕವನಲ್ಲ.” ಎಂದನು.
ಮಾಧವ-ಎಲಾ ನೀಚನೆ ! ನಿನ್ನ ಹೆಸರಿಗೆ ಅನುರೂಪವಾದ ಮಾತುಗಳನ್ನಾಡಿದೆ. ನಾನು ವಂಚಕನೆಂಬುದನ್ನೂ, ಅಧರ್ಮದಿಂದ ಆಡತಕ್ಕವ

ಅಧ್ಯಾಯ ೨
೧೫

ನೆಂಬುದನ್ನೂ ನಿರ್ಣಯಿಸುವುದಕ್ಕೆ, ಈ ಸಭಿಕರೇ ಸಾಕ್ಷಿಭೂತರಾಗಿರುವ ರಲ್ಲವೆ! ನೀನು ಈಗ ಬರೆದಿರುವ ನಿರ್ಣಯಪತ್ರಿಕೆಯೇ ಪ್ರಬಲವಾದ ಸಾಕ್ಷಿಯಾಗಿರುವುದು. ನಮ್ಮಿಬ್ಬರಲ್ಲಿ ಯಾರು ವಂಚಕರೆಂಬುದನ್ನು ಈ ಸಭಿಕರೇ ನಿರ್ಣಯಿಸಲಿ. ಅಧರ್ಮದ್ಯೂತದಿಂದ ಅನೇಕ ಜನರನ್ನು ವಂಚಿಸಿ ಗಳಿಸಿಟ್ಟಿರುವ ನಿನ್ನ ದ್ರವ್ಯವು, ಎಷ್ಟು ದಿವಸ ನಿನಗೆ ಸಹಕಾರಿಯಾಗಿರುವುದು ? "ಅತ್ಯುತ್ಕಟೈಃ ಪುಣ್ಯಪಾಪೈಃ ಇಹೈವ ಫಲಮಶ್ನುತೇ ” ಎಂಬ ನ್ಯಾಯಕ್ಕನುಸಾರವಾಗಿ, ನೀನು ಮಾಡಿರುವ ಅತಿ ಕ್ರೂರವಾದ ಪಾಪಕೃತ್ಯ ಗಳಿಗೆ ಈಗಲೇ ತಕ್ಕ ಫಲವನ್ನನುಭವಿಸಬೇಕಾಗಿದೆ. ಆದುದರಿಂದ, ಇನ್ನು ಮೇಲೆ ಇಂಥ ಕಪಟಕೃತ್ಯಗಳನ್ನು ಬಿಡು. ಇಂಥ ಲೋಕಾಪವಾದದಲ್ಲಿ ಜೀವಿಸುವುದಕ್ಕಿಂತ ಮರಣವೇ ಉತ್ಕೃಷ್ಟವೆಂದು ಹಿರಿಯರು ಹೇಳುವರು. ಆದುದರಿಂದ, ಪೂರ್ವಾಪರಗಳನ್ನು ಯೋಚಿಸಿ ವಿವೇಕದಿಂದಿರು.
    ಈ ಮಾತನ್ನು ಕೇಳಿದೊಡನೆಯೆ ದುರ್ಬುದ್ಧಿಯು ಅತ್ಯಂತ ಕ್ರೋಧ ಪರವಶನಾಗಿ, ತಾನು ಬಚ್ಚಿಟ್ಟು ಕೊಂಡಿದ್ದ ಕಠಾರಿಯನ್ನು ತೆಗೆದು "ಎಲಾ ! ನೀಚನಾದ ಮಾಧವನೆ : ಸಾಕು. ನಿನ್ನ ನೀತಿಬೋಧನೆಯನ್ನು ಇಷ್ಟಕ್ಕೆ ನಿಲ್ಲಿಸು. ನಿನ್ನ ಆಯುಸ್ಸು ಇಂದಿಗೆ ಮುಗಿಯಿತು.” ಎಂದು ಅವನಮೇಲೆ ಅದನ್ನು ಪ್ರಯೋಗಿಸಿದನು. ಒಡನೆಯೇ ಮಾಧವನು ಮೂರ್ಛಿತನಾಗಿ ಕೆಳಕ್ಕೆ ಬಿದ್ದನು. ಇವನು ಬೀಳುವುದರೊಳಗಾಗಿಯೇ ದೊಡ್ಡ ಶಬ್ದ ವೊಂದು ಕೇಳಿಸಿತು. ಅಲ್ಲಿ ಸೇರಿದ್ದ ಜನರೆಲ್ಲರೂ ಗಾಬರಿಯಿಂದ ಅತ್ತಿತ್ತ ನೋಡುತ್ತಿರುವಷ್ಟರಲ್ಲಿ, ಆ ದುರ್ಬುದ್ಧಿಯು ಭಿನ್ನ ಗಾತ್ರನಾಗಿ ಕೆಳಗೆ ಬಿದ್ದಿದ್ದನು. ಅಷ್ಟರಲ್ಲಿಯೇ ಅಲ್ಲಿ ಕೋಲಾಹಲವು ಪ್ರಬಲವಾಯಿತು. ಬಹು ಜನಗಳು ಬಂದು ಸೇರಿದರು. ದುರ್ಬುದ್ಧಿಗೆ ಇಂಥ ಅಪಾಯವು ಯಾರಿಂದ ಸಂಭವಿಸಿತೆಂದು ಎಲ್ಲೆಲ್ಲಿ ನೋಡಿದರೂ ಗೊತ್ತಾಗದಿರಲು, ಚಿಂತಾಕ್ರಾಂತರಾಗಿ ಅವನ ಕಡೆಯವರು ಅವನನ್ನು ಎತ್ತಿಕೊಂಡು ಹೊರಟು ಹೋದರು.

೧೬
ಪರಂತಪ ವಿಜಯ

ಅಧ್ಯಾಯ ೩



   ಅಲ್ಲಿದ್ದ ಇತರ ಜನಗಳೆಲ್ಲರೂ ಮಾಧವನಿಗೆ ಸಂಭವಿಸಿದ ಆ ಅಪಾಯವನ್ನು ಕುರಿತು ದುಃಖಿಸುತ್ತಿರುವಷ್ಟರಲ್ಲಿಯೇ, ಪರಂತಸನು ಮಾಧವನ ಬಳಿಗೆ ಬಂದು ಶೈತೋಪಚಾರಗಳನ್ನು ಮಾಡಲು, ಮಾಧವನಿಗೆ ಸ್ವಲ್ಪ ಪ್ರಜ್ಞೆಯುಂಟಾಯಿತು. ಆಗ ಪರಂತಪನು ಇವನಿಗೆ ಬಿದ್ದಿರುವ ಪ್ರಹಾರವನ್ನು ಪರೀಕ್ಷಿಸುತ್ತ, ಸ್ವಲ್ಪ ವಿವರ್ಣವದನನಾಗಿ ಚಿಂತಿಸುತ್ತಿದ್ದನು.
ಮಾಧವ-ಅಯ್ಯಾ ಪರಂತಪನೆ : ಸಂತಾಪಪಡಬೇಡ. ನನಗೆ ಈ ಅವಸ್ಥೆ ಬರಬಹುದೆಂದು ನಾನು ಮೊದಲೇ ತಿಳಿಸಿದ್ದೆನಲ್ಲವೆ ! ನಾನು ಯೋಚಿಸಿದಂತೆಯೇ ದೈವಸಂಕಲ್ಪವೂ ಇದ್ದಿತು. ನಾನು ಇನ್ನು ಬಹಳ ಹೊತ್ತು ಬದುಕಲಾರೆನು. ಪ್ರಾಣೋತ್ಕ್ರಮಣ ಕಾಲವು ಸನ್ನಿಹಿತವಾಯಿತು. ಅದಕ್ಕೆ ಮುಂಚಿತವಾಗಿಯೇ ನಾನು ಮಾಡಬೇಕಾದ ಕಾರ್ಯವು ಬಹಳವಿರುವುದು. ಆದುದರಿಂದ ಈ ಕ್ಷಣದಲ್ಲಿಯೇ ನನ್ನನ್ನು ಆ ಭೋಜನ ಶಾಲೆಯಲ್ಲಿರುವ ನನ್ನ ವಾಸಗೃಹಕ್ಕೆ ಕರೆದುಕೊಂಡು ಹೊಗು.
   ಒಡನೆಯೇ ಪರಂತಪನು ಮಾಧವನನ್ನು ಪಲ್ಲಕ್ಕಿಯಲ್ಲಿ ಮಲಗಿಸಿ ಕೊಂಡು, ಅವನು ತೋರಿಸಿದ್ದ ವಾಸಗೃಹಕ್ಕೆ ಕರೆದುಕೊಂಡು ಹೋಗಿ, ಮಂಚದಮೇಲೆ ಮಲಗಿಸಿದನು.

ಮಾಧವ-ಅಯ್ಯಾ : ಪರಂತಪನೆ : ಆಪತ್ಕಾಲಕ್ಕೆ ಒದಗತಕ್ಕವನೇ ಬಂಧುವು ; ಅವನೇ ಪುತ್ರನು. ಆದುದರಿಂದ, ಪ್ರಕೃತದಲ್ಲಿ ನನಗೆ ನೀನೇ ಸಮಸ್ತ ಬಂಧುವೂ ಆಗಿರುವೆ. ಈಗ ವಿಶೇಷವಾಗಿ ಮಾತನಾಡುವುದಕ್ಕೆ ನನಗೆ ಶಕ್ತಿಯಿಲ್ಲ. ಅದು ಹಾಗಿರಲಿ; ನನಗೆ ಇಂಥ ಅಪಾಯವನ್ನುಂಟು ಮಾಡಿದ ದುರ್ಬುದ್ಧಿಗೆ ತಕ್ಕ ಪ್ರತೀಕಾರವನ್ನು ಮಾಡುವ ಭಾರವು ನಿನಗೆ ಸೇರಿದ್ದು. ನನ್ನನ್ನು ಹೊಡೆದಮೇಲೆ ಅವನು ಏನು ಮಾಡಿದನು ? ಈಗ ಎಲ್ಲಿರುವನು ?
೧೭

ಅಧ್ಯಾಯ ೩

ಪರಂತಪ- ಅವನ ಪ್ರಹಾರದಿಂದ ನೀನು ಮೂರ್ಛಿತನಾಗಿ ಕೆಳಗೆ ಬೀಳುವುದರೊಳಗಾಗಿಯೇ, ಅವನ ಶರೀರವು ಸಹಸ್ರ ಪ್ರಕಾರವಾಗಿ ಛೇದಿಸಿ ಉರುಳಿಸಲ್ಪಟ್ಟಿತು. ನಿನಗೆ ಉಂಟಾದ ಮೂರ್ಛೆಯೊಡನೆಯೇ, ಅವನಿಗೆ ದೀರ್ಘನಿದ್ರೆ ಪ್ರಾಪ್ತವಾಯಿತು. ಈಗ ಅವನು ತನ್ನ ದುಷ್ಕೃತ್ಯಗಳಿಗೆ ತಕ್ಕ ಶಿಕ್ಷೆಯನ್ನು ಯಮಪುರಿಯಲ್ಲಿ ಅನುಭವಿಸುತ್ತಿರುವನು.
ಮಾಧವ-ಹೀಗೆಯೇ ಆಗಬಹುದೆಂದು ನಾನು ಮೊದಲೇ ಭಾವಿಸಿದ್ದೆನು. ದೈವಾಧೀನದಿಂದ ನನ್ನ ಭಾವನೆಯಂತೆಯೇ ನಡೆಯಿತು. ಅಧರ್ಮ ದ್ಯೂತದಿಂದ ಅನೇಕ ಕುಟುಂಬಗಳನ್ನು ಹಾಳುಮಾಡಿದ ಈ ದುರಾತ್ಮನ ಪಾಪಕೃತ್ಯಕ್ಕೆ ತಕ್ಕ ಪ್ರತಿಫಲವನ್ನು ತೋರಿಸಿ ಈ ನೀಚನನ್ನು ನಿಗ್ರಹಿಸಬೇಕೆಂಬ ನನ್ನ ಸಂಕಲ್ಪವು ದೈವಗತಿಯಿಂದ ನೆರವೇರಿತು. ಅವನ ದುಷ್ಕೃತ್ಯಕ್ಕೆ ಈ ಶಿಕ್ಷೆಯ ಕೂಡ ಅಲ್ಪವಾದುದು. ಅದು ಹಾಗಿರಲಿ; ಒಬ್ಬ ವೈದ್ಯನನ್ನು ಕರೆಯಿಸು.
ಪರಂತಪ -ಅಪ್ಪಣೆ.
   ಹೊರಗೆ ಹೋಗಿ, ಪೂರ್ವದಲ್ಲಿಯೇ ತಾನು ಕರೆಸಿಟ್ಟಿದ್ದ ಜೀವಾನಂದನೆಂಬ ವೈದ್ಯನೊಡನೆ ಬಂದು, ಅಲ್ಲಿದ್ದವರನ್ನೆಲ್ಲ ಹೊರಗೆ ಕಳುಹಿಸಿದನು.
ಮಾಧವ - ವೈದ್ಯನನ್ನು ಕುರಿತು) ಅಯ್ಯಾ ! ಚಿಕಿತ್ಸಕನೆ ನನಗೆ ಬಿದ್ದಿರುವ ಪ್ರಹಾರವನ್ನು ಚೆನ್ನಾಗಿ ಪರೀಕ್ಷಿಸು. ನಾನು ಇನ್ನೆಷ್ಟು ನಿಮಿಷ ಗಳವರೆಗೆ ಬದುಕಿರಬಹುದು ?-ಹೇಳು.
ಜೀವಾನಂದ-(ಅವನನ್ನು ಚೆನ್ನಾಗಿ ಪರೀಕ್ಷಿಸಿ ನೋಡಿ) ಅಯ್ಯಾ ! ಮಾಧವನೆ ! ನಿನಗೆ ಸಂಭವಿಸಿರುವ ಅಪಾಯವು ಬಹಳ ಪ್ರಮಾದಕರವಾಗಿರುವುದು.

ಮಾಧವ-ಇದು ನನಗೆ ಮೊದಲೇ ಗೊತ್ತಾಗಿದ್ದಿತು. ಹುಟ್ಟಿದವರು ಎಂದಿಗಾದರೂ ಸಾಯಲೇ ಬೇಕು. ಸಾಯುವೆನೆಂಬ ವ್ಯಸನವು ಲೇಶ ಮಾತ್ರವೂ ನನಗಿಲ್ಲ. ಆದರೆ, ನನ್ನ ಆಸ್ತಿಯು ಅಪರಿಮಿತವಾಗಿರುವುದರಿಂದ, ನಾನು ಸಾಯುವಷ್ಟರೊಳಗಾಗಿ ಅದೆಲ್ಲವೂ ಸತ್ಪಾತ್ರದಲ್ಲಿ ವಿನಿಯೋಗವಾಗುವಂತೆ ಮಾಡಬೇಕೆಂಬ ಅಭಿಲಾಷೆಯು ನನಗೆ ಬಹಳವಾಗಿರು ೧೮
ಪರಂತಪ ವಿಜಯ

ವುದು. ಇನ್ನು ಎಷ್ಟು ಹೊತ್ತಿನವರೆಗೆ ನಾನು ಬದುಕಿರಬಹುದು ? ಅದನ್ನು ಭಯಪಡದೆ ಧೈರ್ಯವಾಗಿ ಹೇಳು.
ಜೀವಾನಂದ - ಅಯ್ಯಾ : ಮಾಧವನೆ ! ನಿನ್ನ ಅವಸ್ಥೆಯನ್ನು ನೋಡಿದರೆ, ಇನ್ನು ಅರ್ಧಘಂಟೆಯೊಳಗಾಗಿಯೇ ನಿನ್ನ ಪ್ರಾಣವು ಉತೃಮಿಸಿ ಹೋಗುವಂತೆ ತೋರುವುದು. ಆದರೂ, ನನ್ನ ಚಿಕಿತ್ಸಾ ಶಕ್ತಿಯಿಂದ ಇನ್ನು ಆರುಘಂಟೆಗಳ ಕಾಲ ನಿನ್ನನ್ನು ಬದುಕಿಸುವುದು ಸಾಧ್ಯವೆಂದು ತೋರುವುದು.
ಮಾಧವ-ಅಷ್ಟು ಮಾತ್ರವಾದರೆ ಸಾಕು. ಅಷ್ಟರೊಳಗೆ ನನ್ನ ಅಪರಿಮಿತವಾದ ಧನವೆಲ್ಲವನ್ನೂ ವಿನಿಯೋಗಿಸಬಹುದು. (ಪರಂತಪನನ್ನು ನೋಡಿ) ಅಯ್ಯಾ! ಪ್ರಿಯ ಮಿತ್ರನಾದ ಪರಂತಪನೆ! ನನ್ನ ಜೇಬಿನಲ್ಲಿ ಹತ್ತು ಸಾವಿರ ವರಹಾಗಳನ್ನು ಬಾಳ ಬಹುದಾದ ರತ್ನದ ಪದಕವೊಂದಿರುವುದು. ಅದನ್ನು ತೆಗೆದು ಇವನಿಗೆ ಕೊಡು. ಇತನು ಇಲ್ಲಿಯೇ ಇದ್ದುಗೊಂಡು ನನ್ನ ಧನವೆಲ್ಲವೂ ವಿನಿಯೋಗಿಸಲ್ಪಡುವವರೆಗೂ ನನ್ನ ಪ್ರಾಣ ಹೋಗದಂತೆ ಚಿಕಿತ್ಸೆಗಳನ್ನು ಮಾಡುತಿರಲಿ.
   ಪರಂತಪನು ಆ ಆಭರಣವನ್ನು ತೆಗೆದು ಜೀವಾನಂದ ವೈದ್ಯನಿಗೆ ಕೊಡಲು, ಅವನು ಅತ್ಯಂತ ಸಂತುಷ್ಟನಾಗಿ, ಮಾಧವನಿಗೆ ಯಾತನೆಯಿಲ್ಲದ ಹಾಗೆ ಆ ಗಾಯಗಳಿಗೆ ತಕ್ಕ ಔಷಧಗಳನ್ನು ಹಾಕುತ್ತ, ಅವನ ಪ್ರಜ್ಞೆಗೂ ಪ್ರಾಣಕ್ಕೂ ಶೈಥಿಲ್ಯ ಸಂಭವಿಸದಂತೆ ಚಿಕಿತ್ಸೆಯನ್ನು ಮಾಡುತಿದ್ದನು.
ಮಾಧವ -ಅಯ್ಯಾ ! ಪರಂತಪ ! ಆಚೆಯ ಕೊಠಡಿಯಲ್ಲಿ ಅರ್ಥಪರನೆಂಬ ಲಾಯರೊಬ್ಬನಿರುವನು. ಅವನನ್ನು ಕರೆದುಕೊಂಡು ಬಾ.
   ಹೀಗೆ ಹೇಳುತ್ತಿರುವಷ್ಟರಲ್ಲಿಯೇ ಅರ್ಥಪನು ಸಮೀಪಕ್ಕೆ ಬಂದು “ಅಯ್ಯಾ ! ಮಾಧವನೆ ! ನಾನು ಇಲ್ಲಿಯೇ ಬಂದಿರುವೆನು. ನೀನು ಈಗ ಅನುಭವಿಸುತ್ತಿರುವ ಅವಸ್ಥೆಯನ್ನು ನೋಡಿ ನನಗೆ ಬಹಳ ಸಂಕಟವಾಗುತ್ತಿರುವುದು” ಎಂದನು.

ಮಾಧವ-ನೀನು ಬಂದದ್ದು ಬಹಳ ಸಂತೋಷವಾಯಿತು. ಲೋಕದಲ್ಲಿ ಕಷ್ಟಕ್ಕೆ ಭಾಗಿಗಳಾಗದೆ ಇರತಕ್ಕವರು ಯಾರು ತಾನೆ ಇರುವರು? ಇದಕ್ಕಾಗಿ ನೀನು ಚಿಂತಿಸಬೇಡ. ಈಗ ನಿನ್ನಿಂದ ನನಗೆ ಕೆಲವು ಕಾರ್ಯಗಳಾಗಬೇಕಾಗಿರುವುದರಿಂದ, ಅವನ್ನು ನ್ಯಾಯಶಾಸ್ತ್ರಾನುಸಾರವಾಗಿ ನಡೆ
೧೯
ಅಧ್ಯಾಯ ೩

ಯಿಸು ಅದಕ್ಕೆ ತಕ್ಕ ದ್ರವ್ಯ ಲಾಭವನ್ನು ನೀನು ಪಡೆಯುವೆ. (ಪರಂತಪನನ್ನು ಕುರಿತು) ಅಯ್ಯಾ ! ಪರಂತಪನೆ ! ಇಲ್ಲಿರತಕ್ಕ ಪರಿಜನರೆಲ್ಲರನ್ನೂ ಕರೆದುಕೊಂಡು ಸ್ವಲ್ಪ ಹೊತ್ತು ಹೊರಗಿರು. ಇವನೊಡನೆ ಸ್ವಲ್ಪ ಮಾತನಾಡಬೇಕಾಗಿರುವುದು. ಅನಂತರ ನಿನ್ನನ್ನು ಕರೆಯಿಸಿಕೊಳ್ಳುವೆನು.
ಪರಂತಪ- ಅಪ್ಪಣೆ. (ಹೊರಕ್ಕೆ ಹೋಗುವನು.)
ಮಾಧವ-ಅಯ್ಯಾ ! ಅರ್ಥಪರನೆ ! ಈಗ ನನ್ನ ಆಸ್ತಿಯನ್ನೆಲ್ಲ ಸತ್ಪಾತ್ರದಲ್ಲಿ ವಿನಿಯೋಗಿಸುವುದಕ್ಕಾಗಿ ಒಂದು ಉಯಿಲನ್ನು ಬರೆಯಬೇಕಾಗಿರುವುದು. ಈ ಕಾರ್ಯವನ್ನು ಮಾಡುವುದಕ್ಕಾಗಿ ನಿನಗೆ ಕೊಡಬೇಕಾದುದೇನು ? ಸಂಕೋಚವಿಲ್ಲದೆ ಹೇಳು.
ಅರ್ಥಪರ-ಅಯ್ಯಾ ! ಮಾಧವ ! ನಿನ್ನ ವಿಷಯದಲ್ಲಿ ನಾನು ಇಷ್ಟೇ ಕೊಡಬೇಕೆಂದು ನಿರ್ಣಯಿಸಿ ಹೇಳುವುದಕ್ಕೆ ಶಕ್ತನಲ್ಲ. ನೀನು ಹೇಳಿದ ಕೆಲಸವನ್ನು ಕೃತಜ್ಞನಾಗಿ ನೆರವೇರಿಸುವೆನು. ನಿನಗೆ ತೋರಿದುದನ್ನು ಕೊಡಬಹುದು.
ಮಾಧವ- ಅಯ್ಯಾ ! ಹಾಗಲ್ಲ. ಒಂದುವೇಳೆ ನಿನಗೆ ಅಪರಿಚಿತರಾದವರು ಇಂಥ ಉಯಿಲನ್ನು ಬರೆದುಕೊಡಬೇಕೆಂದು ಪ್ರಾರ್ಥಿಸಿದ ಪಕ್ಷದಲ್ಲಿ, ಅವರಿಂದ ನೀನು ಎಷ್ಟು ಧನವನ್ನು ತೆಗೆದುಕೊಳ್ಳುವೆಯೋ, ಅದನ್ನಾದರೂ ಹೇಳು.
ಅರ್ಥಪರ-ಇದು ಆಯಾ ಕಾರ್ಯಗಳಿಗೆ ಅನುರೂಪವಾಗಿರುವುದು. ಹತ್ತು ವರಹಾಗಳು ಮೊದಲುಗೊಂಡು ನೂರು ವರಹಾಗಳ ವರೆಗೆ ತೆಗೆದು ಕೊಳ್ಳುವುದುಂಟು.
ಮಾಧವ- ಹಾಗಾದರೆ ಈ ಕೆಲಸಕ್ಕಾಗಿ ನಿನಗೆ ಹತ್ತು ಸಾವಿರ ವರಹಾಗಳನ್ನು ಕೊಡುತ್ತೇನೆ ಆ ಉಯಿಲನ್ನು ಬರೆಯುವುದು ಮಾತ್ರವಲ್ಲದೆ, ಅದರಂತೆ ಸ್ವಲ್ಪವೂ ಲೋಪವಿಲ್ಲದೆ ನಡೆಯಿಸತಕ್ಕ ಭಾರವು ನಿನ್ನದಾಗಿದೆ. ಈ ಕಾರ್ಯವನ್ನೆಲ್ಲ ಶ್ರದ್ಧೆಯಿಂದ ನಡೆಯಿಸು.

ಅರ್ಥಪರ-(ಸಂತೋಷದಿಂದ) ಅಯ್ಯಾ ! ಮಾಧವನೇ ! ಅನ್ಯತ್ರ ದೊರೆಯುವುದಕ್ಕಿಂತ ಸಹಸ್ರಾಂಶ ಅಧಿಕವಾದ ಧನವನ್ನು ನೀನು ಕೊಡು ೨೦
ಪರಂತಪ ವಿಜಯ

ವುದಾಗಿ ಹೇಳುವಾಗ, ಇಂಥ ಉದಾರಸ್ವಭಾವವುಳ್ಳ ನಿನ್ನ ವಿಷಯದಲ್ಲಿ ಯಾರುತಾನೆ ಶ್ರದ್ದೆಯಿಂದ ಕಾರ್ಯಗಳನ್ನು ನಡೆಯಿಸಲಾರರು ? ನೀನು ಹೇಳುವ ಕಾರ್ಯಗಳನ್ನೆಲ್ಲ ಕೃತಜ್ಞನಾಗಿ ನೆರವೇರಿಸುವೆನು.
   ಅರ್ಥಪರನು ಈರೀತಿಯಲ್ಲಿ ಒಪ್ಪಿಕೊಂಡ ಕೂಡಲೆ, ಮಾಧವನು ತನ್ನ ಆಸ್ತಿಯ ವಿನಿಯೋಗದ ವಿವರವನ್ನು ಬರೆಯಿಸಿ, ಆ ಉಯಿಲಿನಂತೆ ಜಾರಿ ಮಾಡತಕ್ಕ ಭಾರವನ್ನೂ ಆತನಿಗೇ ಒಪ್ಪಿಸಿದನು. ಅರ್ಥಪರನೂ ಕೂಡ ಈ ಕಾರ್ಯಗಳನ್ನೆಲ್ಲ ನೆರವೇರಿಸಿದ ಮೇಲೆ ತನಗೆ ಸಲ್ಲತಕ್ಕೆ ಧನವನ್ನು ತಾನು ತೆಗೆದುಕೊಳ್ಳುವುದಾಗಿ ಒಪ್ಪಿಕೊಳ್ಳಲು, ಮಾಧವನು ಅರ್ಥಪರನನ್ನು ಅವನ ಕೆಲಸಕ್ಕೆ ಕಳುಹಿಸಿ, ಪರಂತಪನನ್ನು ಕರೆಯಿಸಿಕೊಂಡು, ಅಯ್ಯಾ ! ಪರಂತಪನೆ ! ನನಗೆ ಪ್ರಾಣೋತ್ಕ್ರಮಣಕಾಲವು ಸಮಿಾಪಿಸಿತು. ನಾನು ಹೇಳಿದುದನ್ನೆಲ್ಲ ನೀನು ತಪ್ಪದೆ ನಡೆಯಿಸುವೆಯೆಂದು ನಾನು ನಂಬಿದ್ದೇನೆ ಎಂದನು.
ಪರಂತಪ-ಅಯ್ಯಾ ! ಮಾಧವನೆ ! ನೀನು ಹೇಳಿದುದನ್ನೆಲ್ಲ ಅವಶ್ಯವಾಗಿ ನಡೆಯಿಸುವೆನು ; ಅಥವಾ ಆ ಪ್ರಯತ್ನದಲ್ಲಿ ಪ್ರಾಣವನ್ನಾದರೂ ಒಪ್ಪಿಸುವೆನು.

ಮಾಧವ-ಇನ್ನು ಸ್ವಲ್ಪ ಹೊತ್ತಿನಲ್ಲಿಯೇ ನಾನು ಸ್ವರ್ಗಸ್ಥನಾಗುವೆನು. ನನ್ನ ಶವವನ್ನು ಕಲ್ಯಾಣನಗರಕ್ಕೆ ತೆಗೆಸಿಕೊಂಡು ಹೋಗು. ಅಲ್ಲಿ ನನ್ನ ಸಹೋದರನಾದ ಸುಮಿತ್ರನಿರುವನು. ನಾನು ನಿನ್ನ ಕೈಯಲ್ಲಿ ಕೊಟ್ಟಿರುವ ವಜ್ರದ ಉಂಗುರವನ್ನು ತೋರಿಸಿದರೆ, ಆಗ ಅವನು ನಿನ್ನನ್ನು ನನ್ನಂತೆಯ ವಿಶ್ವಾಸದಿಂದ ನೋಡುವನು. ನನ್ನ ಈ ವೃತ್ತಾಂತವನ್ನೆಲ್ಲ ಅವನಿಗೆ ತಿಳಿಯಿಸಿ, ನನ್ನ ಉತ್ತರಕ್ರಿಯಾದಿಗಳನ್ನು ಸಾಂಗವಾಗಿ ನೆರವೇರಿಸುವಂತೆ ಮಾಡು, ಇದೋ ಈ ಯೆರಡು ಕಾಗದಗಳನ್ನು ಅವನಿಗೆ ಕೊಡು. ಇದರಲ್ಲಿ ಒಂದು ನನ್ನ ಆಸ್ತಿಯ ವಿನಿಯೋಗ ವಿಷಯಕವಾದ ಉಯಿಲು ; ಮತ್ತೊಂದು ನಾನು ಅವನಿಗೆ ಬರೆದಿರುವ ಕಾಗದ. ಇವುಗಳನ್ನು ಅವನಿಗೆ ರಹಸ್ಯವಾಗಿ ತಲಪಿಸು. ನಾನು ಬರೆದಿರುವ ಅಂಶಗಳನ್ನು ಆತನೇ ನಿನಗೆ ತಿಳಿಯಿಸುವನು. ನನ್ನ ಕೈ ಪೆಟ್ಟಿಗೆಯಲ್ಲಿ ಒಂದು ಕೋಟಿ ವರಹಾಗಳನ್ನು ಇಟ್ಟಿರುವೆನು. ಇದರಲ್ಲಿ ನಿನ್ನ ಪ್ರಯಾಣ ನನ್ನ ದೇಹಸಂಸ್ಕಾರ ಮೊದ 
೨೧
ಅಧ್ಯಾಯ ೩

ಲಾದುವುಗಳಿಗೆ ೧ ಲಕ್ಷ ವರಹಾ ಗಳನ್ನು ಉಪಯೋಗಿಸಿಕೊಂಡು, ಅರ್ಥಪರನು ಉಯಿಲನ್ನು ಬರೆದು ಅದರಂತೆ ನಡೆಸಿದ ಮೇಲೆ ಅವನಿಗೆ ಹತ್ತು ಸಾವಿರ ವರಹಾಗಳನ್ನು ಕೊಡು. ಉಳಿದ ಹಣದಲ್ಲಿ ೫೦ ಲಕ್ಷವನ್ನು ನನ್ನ ಅನುರಾಗಕ್ಕೆ ವಿಷಯಳಾಗಿದ್ದ ಕಾಮಮೋಹಿನಿಗೆ ಕೊಡು. ಉಳಿದುದನ್ನು ನಿನ್ನ ಸ್ಪಂತಕ್ಕೆ ಉಪಯೋಗಿಸಿಕೊ. ಇದಲ್ಲದೆ, ದುರ್ಬುದ್ಧಿಯ ಆಸ್ತಿಯು ೫೦ ಕೋಟಿಗಳವರೆಗೂ ಆಗಬಹುದು. ದ್ಯೂತದಲ್ಲಿ ಮಾಡಿಕೊಂಡಿದ್ದ ನಿರ್ಣಯದ ಪ್ರಕಾರ, ಅದೆಲ್ಲವೂ ನನಗೆ ಸೇರತಕ್ಕುದಾಗಿದೆ. ಇದೆಲ್ಲವನ್ನೂ ರಾಜ್ಯಾಧಿಕಾರಿಗಳ ವಶಕ್ಕೆ ಮೂಲಧನವಾಗಿ ಕೊಟ್ಟು, ಅದರ ಬಡ್ಡಿಯನ್ನು, ದ್ಯೂತ, ವ್ಯಭಿಚಾರ, ಪರಸ್ವಾಪಹಾರ ಮೊದಲಾದ ದುಷ್ಕೃತ್ಯಗಳಿಂದ ಲೋಕ ಕಂಟಕಭೂತರಾದವರನ್ನು ನಿಗ್ರಹಿಸುವುದಕ್ಕೆ ಉಪಯೋಗಿಸಿಕೊಳ್ಳುವಂತೆ ಮಾಡಬೇಕು. ಇದಲ್ಲದೆ, ನನ್ನ ಮನೆಯಲ್ಲಿ ಕಬ್ಬಿಣದ ಪೆಟ್ಟಿಗೆಯೊಂದಿರುವುದು. ಅದರಲ್ಲಿ ೧೦ ಕೋಟಿ ದ್ರವ್ಯದವರೆಗೆ ಸಿಕ್ಕುವುದು; ಮತ್ತು, ನನಗೆ ಭೂಸ್ಥಿತಿಯೂ ಬೇಕಾದಷ್ಟಿರುವುದು. ನನಗೆ ಸೇರಿದ ರತ್ನಾಕರವೆಂಬ ಪ್ರದೇಶದಲ್ಲಿ, ವಿಶೇಷವಾಗಿ ಚಿನ್ನದ ಗಣಿಗಳ ರತ್ನದ ಖನಿಗಳೂ ಇರುವುವು. ಅವುಗಳಲ್ಲಿ ಕೆಲಸಮಾಡಿಸಿ ರತ್ನಗಳನ್ನು ತೆಗೆಯುವ ಪ್ರಯತ್ನಗಳನ್ನು ಮಾಡು, ಅದರಿಂದ ಕುಬೇರನ ಐಶ್ವರ್ಯವನ್ನು ಪಡೆಯಬಹುದು. ಈ ಸಮಸ್ತ ಆಸ್ತಿಯನ್ನೂ ಉಯಿಲಿನಲ್ಲಿ ನಿನ್ನ ಹೆಸರಿಗೆ ಬರೆದಿರುವೆನು. ಇದೆಲ್ಲವನ್ನೂ ನಿನ್ನ ಸ್ವಾಧೀನಪಡಿಸಿಕೊಂಡು, ಅದರಲ್ಲಿ ಒಂಭತ್ತು ಕೋಟಿ ದ್ರವ್ಯವನ್ನು, ದುಷ್ಟನಿಗ್ರಹ ಶಿಷ್ಟಪರಿಪಾಲನಕ್ಕಾಗಿಯೂ, ವರ್ತಮಾನಪತ್ರಿಕೆಗಳ ಮೂಲಕ ಪ್ರಜೆಗಳಲ್ಲಿ ಐಕಮತ್ಯವನ್ನು ಕಲ್ಪಿಸುವುದಕ್ಕಾಗಿಯೂ, ವಿದ್ವಜ್ಜನರನ್ನು ಪ್ರೋತ್ಸಾಹಿಸುವುದಕ್ಕಾಗಿಯೂ ವಿನಿಯೋಗಿಸು. ನನ್ನ ಹಿರಿಯಣ್ಣನ ಮಗನಾದ ಶಂಬರನು ಬಹಳ ದುರಾತ್ಮನು. ಇವನು, ತನ್ನ ಆಸ್ತಿಯನ್ನೆಲ್ಲ ದುರ್ವ್ಯಯದಿಂದ ಕಳೆದುಕೊಂಡು, ಈಗ ನನ್ನ ಸರ್ವಸ್ವಕ್ಕೂ ತಾನೇ ಭಾಗಿಯಾಗಬೇಕೆಂದು ಬಹುಸಾಹಸ ಮಾಡುತಿರುವನು. ಇವನೇ, ನನ್ನಲ್ಲಿ ಕಾಮಮೋಹಿನಿಗೆ ಇದ್ದ ಅನುರಾಗವನ್ನು ತಪ್ಪಿಸಿ ಇಂಥ ಅವಸ್ಥೆಯನ್ನು ನನಗೆ ಉಂಟುಮಾಡಿದವನು. ಆದುದರಿಂದ, ನಿನಗೆ ನನ್ನ ಆಸ್ತಿಯನ್ನೆಲ್ಲ ಬರೆದಿರುವೆನು. ಇದರಿಂದ, ಅವನಿಗೆ ನಿನ್ನ ಮೇಲೆ ೨೨
ಪರಂತಪ ವಿಜಯ

ಬಲವಾದ ದ್ವೇಷ ಹುಟ್ಟುವುದು, ನೀನು ಅಜಾಗರೂಕನಾಗಿದ್ದರೆ ನಿನಗೆ ಬಲವಾದ ಕೇಡುಂಟಾಗುವುದರಲ್ಲಿ ಸಂಶಯವಿಲ್ಲ. ಆದುದರಿಂದ, ನೀನು ಇವನ ವಿಷಯದಲ್ಲಿ ಮಾತ್ರ ಬಹಳ ಜಾಗರೂಕನಾಗಿರಬೇಕು. ಇದಲ್ಲದೆ, ರಹಸ್ಯವಾದ ಇನ್ನೊಂದು ವಿಷಯವನ್ನು ನಿನಗೆ ಹೇಳಬೇಕಾಗಿರುವುದು. ಏನೆಂದರೆ, ಆ ಕಾಮಮೋಹಿನಿಯು ಬಹಳ ಸುಂದರಿಯಾಗಿಯೈ ಗುಣಾಧ್ಯಳಾಗಿಯೂ ಇರುವಳಾದುದರಿಂದ, ಸಮಸ್ತ ವಿಷಯದಲ್ಲಿಯೂ ನಿನಗೆ ಅನುರೂಪಳಾಗಿರುವಳು. ಇವಳಿಗೆ ಶಂಬರನ ವಿಷಯದಲ್ಲಿ ಸ್ವಲ್ಪವೂ ಅನುರಾಗವಿಲ್ಲ. ಆದರೂ, ಆ ನೀಚನು ಇವಳನ್ನು ಬಲಾತ್ಕಾರದಿಂದ ವಿವಾಹ ಮಾಡಿಕೊಳ್ಳುವುದಕ್ಕಾಗಿ ಬಹುಪ್ರಯತ್ನ ಮಾಡುತ್ತಲಿದ್ದಾನೆ. ದೈವಗತಿ ಹೇಗಿರುವುದೋ ತಿಳಿಯುವುದಕ್ಕಾಗುವುದಿಲ್ಲ. ಒಂದುವೇಳೆ ದೈವಕೃಪೆಯಿಂದ ಅವಳೇ ನಿನಗೆ ಲಭಿಸಿದರೂ ಲಭಿಸಬಹುದು. ಅದು ದೈವಸಂಕಲ್ಪ ವಿದ್ದಂತಾಗಲಿ. ನೀನು ಮಾತ್ರ ನಾನು ಹೇಳಿರುವ ಕಾರ್ಯಗಳಲ್ಲಿ ಯಾವುದನ್ನೂ ಮರೆಯದೆ ನೆರವೇರಿಸಿ ನನ್ನನ್ನು ಕೃತಕೃತ್ಯನನ್ನಾಗಿ ಮಾಡು. (ಎಂದು ಹೇಳಿ, ತನ್ನ ಕೈಪೆಟ್ಟಿಗೆಯ ಬೀಗದ ಕೈಯನ್ನು ಅವನ ಕೈಯಲ್ಲಿ ಕೊಟ್ಟು,) ಇನ್ನು ನಾನು ಸ್ವಲ್ಪ ವಿಶ್ರಮಿಸಿಕೊಳ್ಳುವೆನು. ವೈದ್ಯನನ್ನು ಕರೆ. ಪರಂತಪನು ಒಡನೆಯೇ ಜೀವಾನಂದನನ್ನು ಕರೆತರುವನು.
ಮಾಧವ-(ಆತನನ್ನು ನೋಡಿ) ಅಯ್ಯಾ ! ಚಿಕಿತ್ಸಕನೆ ನನಗೆ ಮೈಮರೆತು ಸ್ವಲ್ಪ ಹೊತ್ತು ಸುಖನಿದ್ರೆಯುಂಟಾಗುವಂತೆ ಏನಾದರೂ ಔಷಧವನ್ನು ಕೊಡು.
ಜೀವಾನಂದ-ಅಪ್ಪಣೆ (ಔಷಧವನ್ನು ಕೊಡುವನು.)

ಮಾಧವನು ಆ ಔಷಧವನ್ನು ಪಾನಮಾಡಲು, ಕೂಡಲೆ ಅವನಿಗೆ ಚೆನ್ನಾಗಿ ನಿದ್ರೆ ಬಂದಿತು, ಜೀವಾನಂದನು ಅವನ ಹಾಸುಗೆಯ ಬಳಿಯಲ್ಲೇ ಕುಳಿತಿದ್ದನು. ಪರಂತಪನು, ತನ್ನ ದೂತನಾದ ಮಂಜೀರಕನನ್ನು ನೋಡುವುದಕ್ಕೋಸ್ಕರ ಬಾಗಲಿಗೆ ಬಂದು ನೋಡಿ, ಅವನನ್ನು ಕಾಣದೆ ಅಲ್ಲಿದ್ದ ಇತರ ಜನಗಳನ್ನು ಕೇಳಲು, ಅವರು “ ಅಯ್ಯಾ ! ಪರಂತಪನೆ! ಮಂಜೀರಕನು ತನ್ನ ಕೈಯಲ್ಲಿ ಒಂದು ಸಣ್ಣ ತುಪಾಕಿಯನ್ನೂ ಗುಂಡುಗಳನ್ನೂ ಹಿಡಿದುಕೊಂಡು ಹೋಗುತ್ತಿರುವಾಗ, ಯಾಮಿಕರು ಕಂಡು, ಇವನೇ ಆ
೨೩
ಅಧ್ಯಾಯ ೩

ದುರ್ಬುದ್ದಿಯನ್ನು ಸಂಹರಿಸಿರಬೇಕೆಂದು ನಿಶ್ಚಯಿಸಿ, ಅವನನ್ನು ನಗರಾಧ್ಯಕ್ಷನ ಬಳಿಗೆ ಕರೆದುಕೊಂಡು ಹೋದರು' ಎಂದು ಹೇಳಿದರು. ಕೂಡಲೆ ಪರಂತಪನು ಸ್ವಲ್ಪ ವ್ಯಾಕುಲನಾಗಿ, ಮಾಧವನು ಮಲಗಿರುವ ಸ್ಥಳಕ್ಕೆ ಬಂದು, ಅವನ ದೇಹಸ್ಥಿತಿಯ ವಿಷಯದಲ್ಲಿ ಜೀವಾನಂದ ವೈದ್ಯನನ್ನು ಕೇಳಲು, ಜೀವಾನಂದನು, ಇನ್ನು ೩-೪ ಘಂಟೆಗಳವರೆಗೆ ಇವನ ಪ್ರಾಣಕ್ಕೆ ಯಾವ ಅಪಾಯವೂ ಇಲ್ಲವೆಂದನು. ಆಗ ಪರಂತಪನು ವೈದ್ಯನನ್ನು ಎರಡು ಘಂಟೆಗಳ ಕಾಲ ಅವಕಾಶ ಕೇಳಿಕೊಂಡು, ತ್ವರೆಯಿಂದ ನಗರಾಧ್ಯಕ್ಷನ ಆಸ್ಥಾನಕ್ಕೆ ಬಂದು ವಿಚಾರಿಸಲು, ಮಂಜೀರಕನು ತಪ್ಪಿತಸ್ಥನೆಂದು ತಿಳಿದುದರಿಂದ ಅವನನ್ನು ಕಾರಾಗೃಹದಲ್ಲಿಟ್ಟಿರುವರೆಂದು ಅಲ್ಲಿದ್ದ ಸೇವಕರಿಂದ ತಿಳಿಯಬಂದಿತು. ಅಲ್ಲಿಂದ ಕಾರಾಗೃಹದ ಬಾಗಲಿಗೆ ಬಂದು ನೋಡಲು, ಬಾಗಿಲು ಬೀಗ ಹಾಕಿದ್ದಿತು. ಅಲ್ಲಿ ಕಾವಲಾಗಿದ್ದ ಯಾಮಿಕನೊಬ್ಬನು ಮಾತ್ರ ಬಾಗಿಲಲ್ಲಿ ನಿಂತಿದ್ದನು. ಪರಂತಪನು ಆ ಮಾರ್ಗವಾಗಿ ಬರಲು, ಅಲ್ಲಿದ್ದ ಕಾವಲುಗಾರನು ಇನನನ್ನು ನೋಡಿ 'ಯಾರು ? ಇಷ್ಟು ಹೊತ್ತಿನಲ್ಲಿ ಇಲ್ಲಿಗೆ ಬರಲು ಕಾರಣವೇನು ? ಹೊರಟುಹೋಗು , ಇಲ್ಲದಿದ್ದರೆ ನಿನ್ನನ್ನು ಈಗಲೇ ಗುಂಡಿನಿಂದ ಹೊಡೆಯುವನು' ಎಂದು ಗದರಿಸಿದನು. ಆಗ ಪರಂತಪನು 'ಅಯ್ಯಾ ; ನಾನು ಪರದೇಶಿ, ದಾರಿ ತಿಳಿಯದೆ ಇಲ್ಲಿಗೆ ಬಂದೆನು. ಮನ್ನಿಸು. ಹೊರಟುಹೋಗುತ್ತೇನೆ' ಎಂದು ಹೇಳಿ, ಬೇರೆ ಮಾರ್ಗದಿಂದ ಅವನ ಹಿಂದುಗಡೆಯಲ್ಲಿ ಬಂದು, ಥಟ್ಟನೆ ಅವನಮೇಲೆ ಬಿದ್ದು, ಅವನ ಕೈಯಲ್ಲಿದ್ದ ಬಂದೂಕವನ್ನು ಕಿತ್ತು ಬಿಸುಟು, ಅವನನ್ನು ನೆಲಕ್ಕೆ ಕೆಡವಿಕೊಂಡು, ಬಾಯಿಗೆ ಬಟ್ಟೆಯನ್ನು ತುರುಕಿ, ಕೈಕಾಲುಗಳನ್ನು ಬಿಗಿದು ಕಟ್ಟಿಹಾಕಿದನು. ಆಮೇಲೆ ಅವನ ಮೈಯನ್ನೆಲ್ಲ ಶೋಧಿಸುತಿರಲು, ಅವನ ಜೇಬಿನಲ್ಲಿ ಒಂದು ಬೀಗದಕೈ ಸಿಕ್ಕಿತು. ಅದನ್ನು ತಂದು ಕಾರಾಗೃಹದ ಬಾಗಿಲನ್ನು ತೆಗೆದು 'ಮಂಜೀರಕಾ ! ಎಲ್ಲಿರುವೆ ?' ಎಂದು ಗಟ್ಟಿಯಾಗಿ ಕೂಗಿದನು. ಆಗ ಒಳಗಿನಿಂದ 'ಸ್ವಾಮಿ ! ಇಲ್ಲಿರುವೆನು' ಎಂಬ ಶಬ್ದವು ಕೇಳಬಂದಿತು. ಆಗ ಒಳಮನೆಯ ಚಿಲುಕವನ್ನು ತೆಗೆಯಲು, ಮಂಜೀರಕನು ಅತಿ ವಿಸ್ಮಿತನಾಗಿ ಹೊರಕ್ಕೆ ಬಂದನು. ಅವನನ್ನು ಅತಿ ಸಂತೋಷದಿಂದ ಆಲಿಂಗಿಸಿಕೊಂಡು, ತಾನು ಮಾಡಿದ ಸಾಹಸ ೨೪
ಪರಂತಪ ವಿಜಯ

ಕಾರ್ಯಗಳನ್ನೆಲ್ಲ ಅವನಿಗೆ ರಹಸ್ಯವಾಗಿ ಹೇಳಿ, ಮೊದಲಿದ್ದಂತೆಯೇ ಆ ಬಾಗಿಲುಗಳನ್ನೆಲ್ಲ ಭದ್ರಪಡಿಸಿ, ಆ ಬೀಗದಕೈಯನ್ನು ಕಾವಲುಗಾರನ ಜೇಬಿನಲ್ಲಿಯೇ ಹಾಕಿ, ತನ್ನಲ್ಲಿದ್ದ ೧೦ ವರಹಗಳನ್ನು ಅವನ ಬಟ್ಟೆಯಲ್ಲಿ ಕಟ್ಟಿ, ಆತನ ಕ್ಷಮೆಯನ್ನು ಕೇಳಿಕೊಂಡು, ಅಧಿಕಾರಿಗಳಿಂದ ಅವನಿಗೆ ಯಾವ ತೊಂದರೆಯೂ ಬಾರದಿರಲೆಂದು ಅವನ ಕಟ್ಟುಗಳನ್ನು ಬಿಚ್ಚದೆ, ಮಂಜೀರಕನೊಡನೆ ಮಾಧವನಿದ್ದ ಸ್ಥಳಕ್ಕೆ ಹೊರಟುಬಂದು, ಮಂಜೀರಕನಿಗೆ ವೇಷಾಂತರವನ್ನು ಹಾಕಿ 'ನೀನು ಕಲ್ಯಾಣನಗರಕ್ಕೆ ಹೋಗಿ ಅಲ್ಲಿರು. ನಾನು ಕೂಡಲೆ ಅಲ್ಲಿಗೆ ಬರುವೆನು' ಎಂದು ಹೇಳಿ, ಕಳುಹಿಸಿದನು. ಮಾಧವನು ಆಗತಾನೆ ಎಚ್ಚರಗೊಂಡು, ಅರ್ಥಪರನನ್ನೂ ಪರಂತಪನನ್ನೂ ಸಮೀಪಕ್ಕೆ ಕರೆದು, ತನ್ನ ಹಾಸುಗೆಯ ಬಳಿಯಲ್ಲಿ ಕುಳ್ಳಿರಿಸಿಕೊಂಡು, ಜೀವಾನಂದನನ್ನು ನೋಡಿ 'ಅಯ್ಯಾ! ಮಿತ್ರನೆ ! ನೀನು ಮಾಡಿದ ಪರಮೋಪಕಾರಕ್ಕಾಗಿ ನಾನು ಬಹಳ ಕೃತಜ್ಞನಾಗಿರುವೆನು.' ಎಂದು ಹೇಳಿ, ತನ್ನ ಕತ್ತಿನಲ್ಲಿ ಹಾಕಿಕೊಂಡಿದ್ದ ಮುತ್ತಿನ ಸರವನ್ನು ತೆಗೆದು ಅವನ ಕೈಯಲ್ಲಿ ಕೊಟ್ಟು, 'ನಿನಗೆ ವಾಗ್ದಾನ ಮಾಡಿದ್ದುದಕ್ಕಿಂತ ಹೆಚ್ಚಾದ ದ್ರವ್ಯವನ್ನು ನಿನಗೆ ಕೊಟ್ಟಿರುವೆನು. ಈವೊಂದೊಂದು ಮುತ್ತನ್ನು ವಿಕ್ರಯಿಸಿಕೊಂಡರೂ, ನಿನಗೆ ಜೀವಾವಧಿ ರಾಜಭೋಗಗಳನ್ನು ಅನುಭವಿಸುವುದಕ್ಕೆ ಬೇಕಾದಷ್ಟು ದ್ರವ್ಯ ಲಭಿಸುವುದು. ಇನ್ನು ಮೇಲೆ ನೀನು ಸ್ವತಂತ್ರ ನಾಗಿ ಜೀವಿಸಿಕೊಳ್ಳಬಹುದು. ಇದುವರೆಗಿನಂತೆ ನೀನು ಜೀವನಾರ್ಥವಾಗಿ ಶ್ರಮಪಡಬೇಕಾದುದಿಲ್ಲ. ನಿನ್ನಿಂದ ನನಗೆ ಆಗಬೇಕಾದ ಕೆಲಸವಿನ್ನೊಂದಿರುವುದು. ಅದನ್ನು ನೆರವೇರಿಸಿಕೊಡುವುದಾಗಿ ನೀನು ವಾಗ್ದಾನ ಮಾಡಿದರೆ ಹೇಳುತ್ತೇನೆ.' ಎಂದನು.

ಜೀವಾನಂದ-ಅಯ್ಯಾ ! ನೀನು ನನಗೆ ಮಾಡಿರುವ ಉಪಕಾರಕ್ಕೆ, ನಾನು ಯಾವ ಕೆಲಸವನ್ನು ಮಾಡಿದರೆತಾನೆ ಸಾಕಾಗುವುದು ? ಜೀವನಾರ್ಥವಾಗಿ ಅಹೋರಾತ್ರಿಗಳಲ್ಲಿಯೂ ಶ್ರಮಪಡುತ್ತಿದ್ದ ನನಗೆ ಸುಖವಾದ ಬೇವಿಕೆಯನ್ನು ಕಲ್ಪಿಸಿದ ನಿನಗೆ, ನಾನೆಂದಿಗೂ ತಕ್ಕ ಪ್ರತ್ಯುಪಕಾರಮಾಡಲಾರೆನು, ನನ್ನ ಕೈಯಲ್ಲಿ ಸಾಧ್ಯವಾದುವುಗಳನ್ನೆಲ್ಲ ಶಿರಸಾ ವಹಿಸಿ ಮಾಡುವೆನು, ಹೇಳು. 
೨೫
ಅಧ್ಯಾಯ ೩

ಮಾಧವ-ನಿನ್ನ ಕೈಯಲ್ಲಿ ಕೊಟ್ಟಿರುವುದಲ್ಲದೆ ನನ್ನ ಪೆಟ್ಟಿಗೆಯಲ್ಲಿ ಉಳಿದಿರುವ ರತ್ನಗಳನ್ನು ವಿಕ್ರಯಿಸಿದರೆ, ೧೦ ಕೋಟಿ ವರಹಗಳಿಗಿಂತ ಹೆಚ್ಚಾಗಿಯೇ ಬರಬಹುದು. ಅದರಲ್ಲಿ ೨ ಕೊಟಿ ದ್ರವ್ಯಗಳಿಂದ, ವಿಶಾಲವಾಗಿಯೂ ಅನುಕೂಲವಾಗಿಯೂ ಇರುವ ಒಂದು ವೈದ್ಯಶಾಲೆಯನ್ನು ಕಟ್ಟಿಸಬೇಕು. ಉಳಿದುದನ್ನು ರಾಜ್ಯಾಧಿಕಾರಿಗಳಲ್ಲಿ ಮೂಲ ಧನವಾಗಿ ಕೊಟ್ಟು, ಅದರ ವೃದ್ಧ್ಯಾಂಶವನ್ನು, ದರಿದ್ರರಾಗಿಯೂ ರೋಗಪೀಡಿತರಾಗಿಯೂ ಇರುವ ಜನಗಳ ಅನ್ನ ಪಾನಗಳಿಗಾಗಿಯೂ ಔಷಧಗಳಿಗಾಗಿಯೂ ಉಪಯೋಗಿಸುವಂತೆ ಮಾಡಬೇಕು. ನೀನು ದುಡ್ಡು ಕೊಡತಕ್ಕವರಿಗೆ ಎಷ್ಟು ಆದರದಿಂದ ಚಿಕಿತ್ಸೆ ಮಾಡುತಿದ್ದೆಯೋ, ಹಾಗೆ ಆ ವೈದ್ಯ ಶಾಲೆಗೆ ಬರತಕ್ಕಂಥ ರೋಗಿಗಳಿಗೆ ಪಾರಮಾರ್ಥಿಕವಾಗಿ ಬೆಕಿತ್ಸೆ ಮಾಡುತಿರಬೇಕೆಂಬುದೇ ನನ್ನ ಪ್ರಾರ್ಥನೆ. ಈ ಧರ್ಮವು ಆಚಂದ್ರಾರ್ಕವಾಗಿ ನಡೆಯುವಂತೆ, ನೀನೂ ಪರಂತಪನೂ ಪರ್ಯಾಲೋಚಿಸಿ. ನಿಮ್ಮಿಬ್ಬರಿಗೂ ಸೂಕ್ತವಾದ ರೀತಿಯಲ್ಲಿ ನಡೆಯಿಸಬೇಕು. ಈ ರತ್ನಗಳನ್ನೆಲ್ಲ ಏತದರ್ಥವಾಗಿ ಈಗಲೇ ರಾಜ್ಯಾಧಿಕಾರಗಳಲ್ಲಿ ಒಪ್ಪಿಸಿ-ನನ್ನ ಮನೋರಥವು ಸಫಲವಾಗುವುದೆಂಬ ಪ್ರತ್ಯಯವನ್ನು ಉಂಟುಮಾಡಿದರೆ, ನಾನು ಸಂತೋಷದಿಂದ ಪ್ರಾಣಗಳನ್ನು ಬಿಡುವೆನು.
ಪರಂತಪ-ನಿನ್ನ ಮನೋರಥ ನೆರವೇರುವಂತೆ ಈಗಲೇ ಮಾಡುವೆವು, ಅಯ್ಯಾ ! ಚಿಕಿತ್ಸಕನೆ ! ಇವನನ್ನು ನೋಡಿಕೊಂಡಿರು. ನಾನು ಅಯ್ದು ನಿಮಿಷಗಳೊಳಗಾಗಿ ಈ ಪಟ್ಟಣದ ನ್ಯಾಯಾಧಿಪತಿಯನ್ನು ಕರೆದುಕೊಂಡು ಬರುವೆನು. ಮಾಧವನು ಈ ಅನ್ಯಾದೃಶವಾದ ಧರ್ಮವನ್ನು ತನ್ನ ಕೈಯಿಂದಲೇ ಮಾಡಲಿ.

  ಜೀವಾನಂದ-ಅಗಲಿ, ನೀನು ಜಾಗ್ರತೆಯಾಗಿ ಹೋಗಿ ಬಾ.


  ಪರಂತಪನು ಕೂಡಲೆ ನ್ಯಾಯಾಧಿಪತಿಯ ಬಳಿಗೆ ಹೋಗಿ, ಈ ಅಂಶ ಗಳನ್ನು ಅವನಿಗೆ ಸಂಕ್ಷೇಪವಾಗಿ ತಿಳಿಯಿಸಿ, ಅವನನ್ನು ಕರೆದುಕೊಂಡು ಬಂದನು. ಮಾಧವನು ಅವನಿಗೆ ಪ್ರತ್ಯುತ್ಥಾನಮಾಡಲಾರದೆ ಶ್ರಮಪಡುತಿದ್ದುದನ್ನು ನೋಡಿ, ಪರಂತಪನೂ ಜೀವಾನಂದನೂ ಅವನನ್ನು ಎತ್ತಿ ಕೂರಿಸಿದರು. ಆಗ ಮಾಧವನು ನ್ಯಾಯಾಧಿಪತಿಯನ್ನು ನೋಡಿ 'ಅಯ್ಯಾ! ೨೬
ಪರಂತಪ ವಿಜಯ

ನ್ಯಾಯಾಧಿಪತಿಯೇ ! ನೀನು ಸರಿಯಾದ ಕಾಲಕ್ಕೆ ಸಿಕ್ಕಿದುದು, ನನ್ನ ಸುಕೃತಾತಿಶಯವನ್ನು ತೋರಿಸುತ್ತದೆ. ನಾನು ಈಗ ಕೃತಕೃತ್ಯನಾದೆನು. ಇದೇ ಈ ರತ್ನಗಳನ್ನು ತೆಗೆದುಕೊ, ಈ ಪರಂತಪನನೂ ವೈದ್ಯನೂ ನನಗೆ ಪರ ಮಾಪ್ತರು. ನೀನು ಇವರೊಡನೆ ಸೇರಿಕೊಂಡು ಈ ಧರ್ಮವನ್ನು ನೆರವೇರಿಸಿದರೆ, ಇದರಿಂದ ಉಂಟಾಗತಕ್ಕ ಸುಕೃತಕ್ಕೆ ನೀವೂ ಭಾಗಿಗಳಾಗುವಿರಿ. ಇನ್ನು ನನಗೆ ಕಾಲ ಸಮೀಪಿಸಿತು. ಈ ಅಂಶಕ್ಕೆ ನೀನು ಒಪ್ಪಿದ ಪಕ್ಷದಲ್ಲಿ, ನಾನು ಸಂತುಷ್ಟನಾಗಿ ಪ್ರಾಣಬಿಡುವೆನು.
ನ್ಯಾಯಾಧಿಪತಿ--ನಾನು ಬಹು ಕಾಲದಿಂದ ನೀನು ಪರೋಪಕಾರಪರನೆಂಬುದನ್ನು ಕಿವಿಯಿಂದ ಕೇಳುತ್ತಿದ್ದೆನು. ಆದರೆ, ಈಗ ಅದೆಲ್ಲವೂ ನನಗೆ ಪ್ರತ್ಯಕ್ಷಾನುಭವಕ್ಕೆ ಬಂದಿತು. ಇಂಥ ಧರ್ಮಪರಾಯಣರನ್ನು ನಾನೆಲ್ಲಿಯೂ ನೋಡಿರಲಿಲ್ಲ. ನೀನೇ ಧನ್ಯನು. ಅಪರಿಮಿತವಾದ ಧನವನ್ನು ಸಂಪಾದಿಸಿ, ತಾವೂ ಅನುಭವಿಸದೆ, ಸತ್ಪಾತ್ರರಲ್ಲಿಯೂ ವಿನಿಯೋಗಿಸದೆ, ಧನಪಿಶಾಚಿಗಳಂತೆ ಬದುಕಿ, ಕೊನೆಗೆ ಚೋರರೇ ಮೊದಲಾದ ಅಪಾತ್ರಗಳಲ್ಲಿ ತಮ್ಮ ದ್ರವ್ಯವೆಲ್ಲ ಸೇರಿಹೋಗುವಂತೆ ಮಾಡಿದ, ಅನೇಕ ಜನ ಮೂಢರನ್ನು ನಾವು ನೋಡಿರುವೆವು. ಸಂಪಾದಿಸಿದ ದ್ರವ್ಯಕ್ಕೆ ದಾನ ಭೋಗಗಳೆರಡರಿಂದಲೇ ಸಾರ್ಥಕ್ಯವುಂಟಾಗುವುದು. ಇವೆರಡೂ, ಪುಣ್ಯವಂತರಿಗಲ್ಲದೆ ಇತರರಿಗೆ ಲಭಿಸಲಾರದು. ಈ ದಿವಸ ನೀನು ನಿನ್ನ ದ್ರವ್ಯ ವನ್ನು ವಿನಿಯೋಗಿಸಿರತಕ್ಕ ರೀತಿಯೇ ನಿನ್ನ ಪುಣ್ಯಾತಿಶಯವನ್ನು ತೋರಿಸುತ್ತಲಿದೆ. ಈ ವಿಷಯದಲ್ಲಿ ನಿನಗೆ ಯಾರು ತಾನೆ ಸಹಾಯಕರಾಗುವುದಿಲ್ಲ? (ಪರಂತಪನನ್ನು ನೋಡಿ) ಅಯ್ಯಾ! ಪರಂತಪ ! ಅದೋ ಅಲ್ಲಿ ನೋಡು, ಆ ಮಾರ್ಗದಲ್ಲಿ ಈ ದೇಶದ ಕೋಶಾಧ್ಯಕ್ಷನು ಹೋಗುತ್ತಿರು ವಂತೆ ಕಾಣುವುದು. ಪಾರಮಾರ್ಥಿಕರಾದವರಿಗೆ ಮನೋರಥ ಪರಿಪೂರ್ತಿಗೆ ಬೇಕಾದ ಸಾಧನೆಗಳೆಲ್ಲ ಅಪ್ರಾರ್ಥಿತವಾಗಿ ಒದಗುವುದು ಸಹಜವಾದುದೇ ಸರಿ : ಜಾಗ್ರತೆಯಾಗಿ ಹೋಗಿ ಅವನನ್ನು ಕರೆದು ಕೊಂಡು ಬಾ


  ಪರಂತಪನು ಅವನನ್ನು ಕರೆದುಕೊಂಡು ಬಂದನು. ಆಗ ಆ ಕೋಶಾಧ್ಯಕ್ಷನು ನ್ಯಾಯಾಧಿಪತಿಯನ್ನು ನೋಡಿ 'ಅಯ್ಯಾ ! ನ್ಯಾಯಾಧಿಪತಿಯೇ ! ನಾನು ನಿನ್ನನ್ನೇ ಹುಡುಕುತಿದ್ದೆನು. ಈ ದ್ಯೂತಶಾಲೆಯಲ್ಲಿ, 
೨೭
ಅಧ್ಯಾಯ ೩

ದುರ್ಬುದ್ಧಿಯೆಂಬವನು, ದ್ಯೂತದಲ್ಲಿ ಉಂಟಾದ ಕಲಹದಿಂದ ಕೋಪಪರವಶನಾಗಿ, ತನ್ನನ್ನು ದ್ಯೂತದಲ್ಲಿ ಸೋಲಿಸಿ ಸರ್ವಸ್ವವನ್ನೂ ಗೆದ್ದುಕೊಂಡ ಮಾಧವನೆಂಬ ಒಬ್ಬ ಮನುಷ್ಯನನ್ನು ಕಠಾರಿಯಿಂದ ತಿವಿದು ಕೊಂದನೆಂಬುದಾಗಿಯೂ, ಕೂಡಲೆ ಮಾಧವನ ಕಡೆಯವನಾದ ಯಾವನೂ ಒಬ್ಬನು ಒಬ್ಬರಿಗೂ ತಿಳಿಯದಂತೆ ತುಪಾಕಿಯನ್ನು ಹಾರಿಸಿ ದುರ್ಬುದ್ಧಿಯನ್ನು ಕೊಂದನೆಂಬುದಾಗಿಯೂ, ದುರ್ಬುದ್ಧಿಯನ್ನು ಕೊಂದವನೆಂಬ ಸಂಶಯದಿಂದ ಒಬ್ಬ ಮನುಷ್ಯನನ್ನು ಯಾಮಿಕರು ಹಿಡಿದು ಕಾರಾಗೃಹದಲ್ಲಿ ಇಟ್ಟಿದ್ದುದಾಗಿಯೂ, ಹಾಗೆ ಇಡಲ್ಪಟ್ಟ ಮನುಷ್ಯನ ಮಿತ್ರನಾವನೋ ಒಬ್ಬನು ಕಾರಾಗೃಹದ ಬಳಿಗೆ ಹೋಗಿ ಅಲ್ಲಿದ್ದ ಕಾವಲುಗಾರನನ್ನು ಹಿಡಿದು ಅವನ ಕೈಕಾಲುಗಳನ್ನು ಕಟ್ಟಿ ಕೆಡವಿ ಬಾಯಿಗೆ ಬಟ್ಟೆಯನ್ನು ತುರುಕಿ ಅವನನ್ನು ಬಿಡಿಸಿಕೊಂಡು ಹೋದುದಾಗಿಯೂ ವರ್ತಮಾನ ತಿಳಿಯಿತು. ಇದರ ನಿಜಾಂಶವನ್ನು ತಿಳಿಯುವುದಕ್ಕಾಗಿ, ನಗರಾಧ್ಯಕ್ಷನನ್ನು ಕರೆದುಕೊಂಡು ಆ ದ್ಯೂತಶಾಲೆಗೆ ಹೋಗಿ ನೋಡುವಲ್ಲಿ, ಅಲ್ಲಿ ದುರ್ಬುದ್ಧಿಯು ತಲೆಯು ಅನೇಕ ಶಕಲಗಳಾಗಿ ಬಿದ್ದಿದ್ದಿತು. ದುರ್ಬುದ್ಧಿಗೂ ಮಾಧವನಿಗೂ ದ್ಯೂತದಲ್ಲಿ ನಡೆದಿದ್ದ ನಿರ್ಣಯಪತ್ರಿಕೆಯು ಅಲ್ಲಿದ್ದ ಜನಗಳ ವಶದಲ್ಲಿದ್ದಿತು. ಅದಕ್ಕಾಗಿ ಅಲ್ಲಿದ್ದ ಪ್ರತಿಯೊಬ್ಬರ ವಾಙ್ಮೂಲಗಳನ್ನೂ ಆಮೂಲಾಗ್ರವಾಗಿ ಪತ್ರಿಕಾಮುಖೇನ ತೆಗೆದುಕೊಂಡು, ಆ ಜನರನ್ನೂ ಅವರಲ್ಲಿದ್ದ ಪತ್ರಿಕೆಯನ್ನೂ ದಂಡಾಧ್ಯಕ್ಷನ ಬಳಿಗೆ ಕಳುಹಿಸಿ, ದುರ್ಬುದ್ಧಿಯ ಅಸ್ತಿ ಯಾವುದೂ ಹೋಗದಂತೆ ನೋಡಿಕೊಳ್ಳುವುದಕ್ಕಾಗಿ ಅವನ ಮನೆಬಾಗಲಿಗೂ ದ್ಯೂತಾಲಯಕ್ಕೂ ಯಾಮಿಕರನ್ನು ಕಾವಲಿಟ್ಟು, ಆ ಯಾಮಿಕಾಧಿಕಾರಿಯು ದಂಡಾಧ್ಯಕ್ಷನೊಡನೆ ನಿನ್ನನ್ನೇ ಹುಡುಕಿಕೊಂಡು ನಿನ್ನ ಮನೆಯ ಕಡೆಗೆ ಹೋಗುತ್ತಿರುವನು.' ಎಂದು ಹೇಳಿದನು.

  ನ್ಯಾಯಾಧಿಪತಿ-ಅಯ್ಯಾ ! ಪರಂತಪ ! ಜಾಗ್ರತೆಯಾಗಿ ಹೋಗಿ ಅವರನ್ನೂ ಇಲ್ಲಿಯೇ ಕರೆದುಕೊಂಡು ಬಾ.


  ಪರಂತಪನು ಹೋದ ಕೂಡಲೆ ಕೋಶಾಧಿಕಾರಿಯನ್ನು ನೋಡಿ “ಅಯ್ಯಾ ! ಕೋಶಾಧ್ಯಕ್ಷನೆ ! ಇದೋ ಇವನೇ ಮಾಧವನು. ದುರ್ಬುದ್ಧಿಯ ಪ್ರಹಾರದಿಂದ ಮೂರ್ಭೆ ಹೋದ ಕೂಡಲೆ ಈ ವೈದ್ಯನೂ ನಿನ್ನನ್ನು ೨೮
ಪರಂತಪ ವಿಜಯ

ಕರೆಯುವುದಕ್ಕೆ ಬಂದಿದ್ದ ಆ ಪರಂತಪನೂ ಸೇರಿ ಇವನನ್ನು ಇಲ್ಲಿಗೆ ಎತ್ತಿ ಕೊಂಡು ಬಂದು ಉಪಚರಿಸುತ್ತಿದ್ದಾರೆ. ಈ ವೈದ್ಯನು, ತನ್ನ ಸರ್ವ ಪ್ರಯತ್ನದಿಂದಲೂ ಚಿಕಿತ್ಸೆ ಮಾಡಿ, ಇದುವರೆಗೂ ಇವನ ಪ್ರಾಣಕ್ಕೆ ಅಪಾಯ ಸಂಭವಿಸದಂತೆ ಇಟ್ಟುಕೊಂಡಿದ್ದನು. ಈತನಿಗೆ ಉತ್ಕ್ರಮಣ ಕಾಲವು ಸನ್ನಿಹಿತವಾಗುತ್ತಲಿದೆ. ಇವನು ೧೨ ಕೋಟಿ ವರಹಗಳು ಬಾಳ ತಕ್ಕ ರತ್ನಗಳನ್ನು ಒಂದು ಧರ್ಮಾರ್ಥವಾದ ವೈದ್ಯಶಾಲೆಯನ್ನು ಸ್ಥಾಪಿಸುವು ದಕ್ಕಾಗಿ ಕೊಟ್ಟಿರುತ್ತಾನೆ. ಈ ಧರ್ಮವು ಆಚಂದ್ರಾರ್ಕವಾಗಿ ನಡೆಯುವುದಕ್ಕೋಸ್ಕರ, ಈ ಹಣವನ್ನು ರಾಜ್ಯಾಧಿಕಾರಿಗಳಲ್ಲಿ ಒಪ್ಪಿಸಿ-ಅದನ್ನು ಲೋಪವಿಲ್ಲದೆ ನಡೆಯಿಸತಕ್ಕ ಪ್ರಯತ್ನವನ್ನು ಮಾಡಬೇಕೆಂದು, ನನ್ನನ್ನು ಇಲ್ಲಿಗೆ ಕರೆಯಿಸಿಕೊಂಡಿರುವನು. ಈ ವಿಷಯದಲ್ಲಿ ಸರಿಯಾದ ಕಾಗದಗಳನ್ನು ಬರೆಯಿಸಿ ತನಗೆ ನಂಬುಗೆಯುಂಟಾಗುವುದಕ್ಕಾಗಿಯೇ ಇವನು ಇದುವರೆಗೂ ಪ್ರಾಣಧಾರಣೆಯನ್ನು ಮಾಡಿಕೊಂಡಿರುವಂತೆ ತೋರುತ್ತದೆ. ಇದಕ್ಕೆ ನಿನೂ ಸಹಾಯನಾಗಿರಬೇಕೆಂದು, ನಿನ್ನನ್ನೂ ಇಲ್ಲಿಗೆ ಕರೆಯಸಿದೆನು.

  ಕೋಶಾಧ್ಯಕ್ಷ-ಇಂಥ ಧರ್ಮಗಳನ್ನು ಮಾಡುವುದಕ್ಕಂತೂ ನಮಗೆ ಶಕ್ತಿಯಿಲ್ಲ. ಅದು ಹಾಗಿರಲಿ; ಇಂಥ ಧರ್ಮಕಾರ್ಯಗಳಲ್ಲಿ ಸಹಾಯ ಮಾಡತಕ್ಕ ಸಂದರ್ಭ ದೊರಕಿದುದೇ ನಮ್ಮ ಪುಣ್ಯಪ್ರಭಾವವನ್ನು ತೋರಿಸುವುದು. ಹೀಗಿರುವಲ್ಲಿ, ಈ ಕಾರ್ಯದಲ್ಲಿ ಸಹಾಯಮಾಡುವುದಕ್ಕೆ ಯಾರು ತಾನೆ ಹಿಂಜರಿಯುವರು? ನನ್ನಿಂದ ಆಗಬೇಕಾದ ಕಾರವೇನಿದ್ದರೂ ಅದನ್ನು ಅವಶ್ಯವಾಗಿ ಮಾಡುತ್ತೇನೆ.
  ಅಷ್ಟರಲ್ಲಿಯೇ, ಯಾಮಿಕಾಧಿಕಾರಿಯೂ ದಂಡಾಧ್ಯಕ್ಷನೂ ಪರಂತಪನೊಡನೆ ಅಲ್ಲಿಗೆ ಬಂದರು. ಅವರು ಈ ವಿಷಯಗಳನ್ನೆಲ್ಲ ಆಮೂಲಾಗ್ರವಾಗಿ ಕೇಳಿ ವಿಸ್ಮಿತರಾಗಿ, ಅವನ ಔದಾರ್ಯಕ್ಕೆ ಮೆಚ್ಚಿ, ತಮ್ಮ ಕೈಲಾದ ಸಹಾಯವನ್ನು ತಾವೂ ಮಾಡುವುದಾಗಿ ಒಪ್ಪಿದರು. ಕೂಡಲೆ ನ್ಯಾಯಾಧಿಪತಿಯು ಈ ಧರ್ಮಕ್ಕೆ ಉಪಯೋಗಿಸತಕ್ಕ ದ್ರವ್ಯಗಳಿಗಾಗಿ ಒಂದು ಉಯಿಲನ್ನು ಬರೆಯಿಸಿ, ಅದಕ್ಕೆ ಮಾಧವನ ಅನುಮತಿ ಚಿಹ್ನೆಯನ್ನು ಹಾಕಿಸಿ, ಅವನು ಕೊಟ್ಟಿದ್ದ ರತ್ನಗಳನ್ನು ಕೋಶಾಧ್ಯಕ್ಷನ ವಶಕ್ಕೆ ಒಪ್ಪಿಸಿದನು.

ಅಧ್ಯಾಯ ೪
೨೯

ಮಾಧವ-ಎಲೈ ಮಹನೀಯರೇ ! ಇದುವರೆಗೂ ನಾನು ನನ್ನ ಧರ್ಮ ಸಂಕಲ್ಪವು ನೆರವೇರುವುದೋ ಇಲ್ಲವೋ ಎಂದು ಬಹಳವಾಗಿ ಚಿಂತಿಸುತಿದ್ದೆನು. ತಕ್ಕ ಕಾಲಕ್ಕೆ ನೀವೆಲ್ಲರೂ ಒದಗಿ ನನ್ನನ್ನು ಕೃತಕೃತ್ಯನನ್ನಾಗಿ ಮಾಡಿದ ವಿಷಯದಲ್ಲಿ ನಾನು ಬಹಳ ಕೃತಜ್ಞನಾಗಿರುವೆನು. ನೀವು ಮಾಡಿರುವ ಈ ಉಪಕಾರಕ್ಕೆ ತಕ್ಕ ಪ್ರತಿಫಲವನ್ನು ಭಗವಂತನೇ ನಿಮಗೆ ಉಂಟುಮಾಡುವನೆಂದು ನಂಬಿರುತ್ತೇನೆ. ನನ್ನ ಇತರ ಆಸ್ತಿಗಳಿಗೆಲ್ಲ ಸರಿಯಾದ ವಿನಿಯೋಗವನ್ನು ಮಾಡಿರುತ್ತೇನೆ. ನೀವು ಸ್ಥಾಪಿಸತಕ್ಕ ವೈದ್ಯ ಶಾಲೆಯಿಂದ ಅನೇಕ ಸಹಸ್ರ ಜನಗಳಿಗೆ ಅನಂತವಾದ ಕ್ಲೇಶ ನಿವಾರಣೆಯುಂಟಾಗುವುದು, ಇದರಿಂದುಂಟಾಗುವ ಪುಣ್ಯಕ್ಕೆ ನೀವೂ ಭಾಗಿಗಳಾಗಬೇಕೆಂದು, ನಾನು ಜಗದೀಶ್ವರನನ್ನು, ಪ್ರಾರ್ಥಿಸುತ್ತೇನೆ. ಹೀಗೆ ಹೇಳುತ, ಆತ್ಮ ಶುದ್ಧಿಯಿಂದ ದೇವತಾ ಧ್ಯಾನ ಮಾಡುತ, ಮಾಧವನು ಸ್ವರ್ಗಸ್ಥನಾದನು.

ಅಧ್ಯಾಯ ೪.



   ಕಲ್ಯಾಣಪುರವು, ಪೂರ್ವಕಾಲದಲ್ಲಿ ಗಂಧರ್ವಪುರಿಯಂತೆಯೇ

ಬಹಳ ಪ್ರಸಿದ್ಧವಾದ ರಾಜಧಾನಿಯಾಗಿದ್ದಿತು. ಈ ಪಟ್ಟಣವು ಸಪ್ತಕಕ್ಷ್ಯೆಗಳಿಂದ ಕೂಡಿರುವ ಅನೇಕ ಸೌಧಾಗ್ರಹಗಳಿಂದಲೂ, ಕುಬೇರೈಶ್ವರ್ಯವುಳ್ಳ ದೊಡ್ಡವರ್ತಕರಿಂದಲೂ, ಅಹೋರಾತ್ರಿಯೂ ತಮ್ಮ ತಮ್ಮ ಬುದ್ಧಿ ಬಲದಿಂದಲೂ ದೇಹಶ್ರಮದಿಂದಲೂ ಬಹು ದ್ರವ್ಯವನ್ನಾರ್ಜಿಸುವ ಶಿಲ್ಪಿಗಳಿಂದಲೂ, ಅತ್ಯುನ್ನತವಾದ ಗೋಪುರಗಳಿಂದ ಕೂಡಿದ ಶಿವಾಲಯಗಳಿಂದಲೂ, ಧರ್ಮಮಾರ್ಗೈಕ ಪಾರಾಯಣರಾಗಿ ರಾಜತಂತ್ರ ಧುರೀಣರಾಗಿರುವ ಅಧಿಕಾರಿಗಳಿಂದಲೂ, ಸಮಸ್ತ ವಿದ್ಯೆಗಳಲ್ಲಿಯೂ ಅದ್ವಿತೀಯರಾದ ವಿದ್ವಜ್ಜನಗಳಿಂದಲೂ, ಅತಿಮನೋಹರವಾಗಿದ್ದಿತು. ಮಾಧವನ ಅಣ್ಣನಾದ ಸುಮಿತ್ರನೂ, ಇವನ ಇನ್ನೊಬ್ಬ
೩೦
ಪರಂತಪ ವಿಜಯ

ಸಹೋದರನ ಪುತ್ರನಾದ ಶಂಬರನೂ, ಇದರಲ್ಲಿಯೇ ವಾಸಮಾಡುತಿದ್ದರು. ಪರಂತಪನು, ಮಾಧವನು ಹೇಳಿದ್ದ ಮೇರೆಗೆ, ಅವನ ಶವವನ್ನು ಪೆಟ್ಟಿಗೆಯಲ್ಲಿ ಹಾಕಿ ಭದ್ರಪಡಿಸಿಕೊಂಡು ಬಂದು, ಕಲ್ಯಾಣಪುರವನ್ನು ಸೇರಿದನು. ಅಪ್ಪರಲ್ಲಿಯೇ, ಅಲ್ಲಿ ಅವನನ್ನೇ ನಿರೀಕ್ಷಿಸುತ್ತಿದ್ದ ಇವನ ಭೃತ್ಯನಾದ ಮಂಜೀರಕನು ಇದಿರುಗೊಂಡು ಬಂದು, ಇವನನ್ನು ಕರೆದುಕೊಂಡು ಹೋಗಿ, ತಾನು ಮೊದಲು ಗೊತ್ತು ಮಾಡಿದ್ದ ಬಿಡಾರದಲ್ಲಿ ಇಳಿಸಿದನು. ಪರಂತಪನು, ತನ್ನಲ್ಲಿದ್ದ ದ್ರವ್ಯವನ್ನೆಲ್ಲ ರಹಸ್ಯವಾಗಿ ಅಲ್ಲಿಯೇ ಒಂದು ಸ್ಥಳದಲ್ಲಿಟ್ಟು, ಮಾಧವನ ಶವವನ್ನು ತೆಗೆಸಿಕೊಂಡು ಸುಮಿತ್ರನ ಮನೆಗೆ ಹೋದನು. ಆಗ ತಾನೆ ಕತ್ತಲೆಯಾಗುತಿದ್ದಿತು. ಆ ಸುಮಿತ್ರನ ಮನೆಯಲ್ಲಿ, ಮಹೋತ್ಸವ ಸೂಚಕವಾದ ಅನೇಕ ದೀಪಗಳನ್ನು ಹತ್ತಿಸಿದ್ದರು; ಅನೇಕ ಜನಗಳು ರಥಾ ರೂಢರಾಗಿ ಆ ಸುಮಿತ್ರನ ಮನೆಯ ಬಾಗಿಲಿಗೆ ಬರುತ್ತಿದ್ದರು. ಪರಂತಪನು ಇದನ್ನೆಲ್ಲ ನೋಡಿ, ಆ ಮಹೋತ್ಸವಕ್ಕೆ ಕಾರಣವೇನೆಂದು ಅಲ್ಲಲ್ಲಿ ವಿಚಾರಿಸಲು, ಆ ರಾತ್ರಿ ಚಂದ್ರಮುಖಿಯನ್ನು ಶಂಬರನಿಗೆ ಕೊಡುವುದಾಗಿ ನಿಶ್ಚಿತಾರ್ಥವಾಗುವುದೆಂದು ತಿಳಿಯಿತು. ಆಗ ಪರಂತಪನು, ಇಂಥ ಮಹೋತ್ಸವಕಾಲದಲ್ಲಿ ಸುಮಿತ್ರನಿಗೆ ಈ ಅಶುಭ ಸಮಾಚಾರವನ್ನು ಹೇಳಿ ಅವನ ಮನಸ್ಸನ್ನು ಸಂಕಟಪಡಿಸುವುದು ಸರಿಯಲ್ಲವೆಂದು ತನ್ನ ಮನಸ್ಸಿನಲ್ಲಿ ನಿಶ್ಚಯಿಸಿಕೊಂಡು, ಹಿಂದಿರುಗಿ ತನ್ನ ಬಿಡಾರಕ್ಕೆ ಹೋದನು. ಅದರೆ, ಇವನು ಮೊದಲೇ ಗ೦ಧರ್ವಪಯರಿಯಿಂದ-ಮಾಧವನು ಸ್ವರ್ಗಸ್ಥ ನಾದನೆಂದೂ, ಅವನ ಶವವನ್ನು ತಾನೇ ತೆಗೆದಕೊಂಡು ಬರುವುದಾಗಿಯ ಸುಮಿತ್ರನಿಗೆ ಬರೆದಿದ್ದ ಲೇಖನವು ಮಾತ್ರ ಆ ಕಾಲಕ್ಕೆ ಸರಿಯಾಗಿ ಸಮಿತ್ರನ ಕೈಗೆ ತಲುಪಿತು. ಅಷ್ಟರೊಳಗಾಗಿಯೇ, ನಿಶ್ಚಿತಾರ್ಥ ಮಹೋತ್ಸವಕ್ಕಾಗಿ ಅನೇಕ ಬಂಧುಮಿತ್ರರು ಬಂದು ಸೇರಿದರು. ಸುಮಿತ್ರನು, ಆಗತಾನೆ ಬಂದಿದ್ದ ಲೇಖನವನ್ನು ಒಡೆದು ನೋಡಿ, ಕೊಡಲೆ ಸಿಡಿಲಿನಿಂದ ಹೊಡೆಯಲ್ಪಟ್ಟ ವೃಕ್ಷದಂತೆ ಮೂರ್ಛೆಯಿಂದ ಕೆಳಗೆ ಬಿದ್ದನು. ಸಭೆಯಲ್ಲಿದ್ದವರೆಲ್ಲರೂ, ಕಾರಣ ತಿಳಿಯದೆ ಸಂಭ್ರಾಂತರಾಗಿ, ಹಾಹಾಕಾರಮಾಡುತಿದ್ದರು. ಆಗ ಆ ಶಂಬರನು, ಬಹಳ ಗಾಬರಿಯಿಂದ ಬಂದು ಆ ಕಾಗದವನ್ನು ಓದಿದನು. ಇವನಿಗೆ ಆ ಕಾಗದನ್ನು ನೋಡುವಾಗಲೇ, ಸಂತೋಷದಿಂದ ಮುಖವು ವಿಕ
ಅಧ್ಯಾಯ ೪
೩೧

ಸಿತವಾಗುತ್ತ ಬಂದಿತು. ಆದರೆ, ಆ ಸಂತೋಷವನ್ನು ತೋರ್ಪಡಿಸದೆ ಬಹಳ ದುಃಖವನ್ನಭಿನಯಿಸುತ "ಅಯ್ಯೋ ! ಇನ್ನೇನು ಗತಿ ! ನನ್ನ ಚಿಕ್ಕಪ್ಪನಿಗೆ ಇಂಥ ಅಪಮೃತ್ಯು ಸಂಭವಿಸಿತಲ್ಲಾ! ಹಾ!ಹಾ!"ಎಂದು ನೆಲದಮೇಲೆ ಬಿದ್ದು ಹೊರಳಿ ಹೊರಳಿ ಗಟ್ಟಿಯಾಗಿ ಅಳುವುದನ್ನುಪಕ್ರಮಿಸಿದನು. ಇದನ್ನು ಕೇಳಿದ ಕೂಡಲೆ, ಚಂದ್ರಮುಖಿಯು ಕೂಡ ಅತ್ಯಂತ ಶೋಕಾವೇಗದಿಂದ ಸ್ತಬ್ದಳಾಗಿ ಸ್ವಲ್ಪ ಹೊತ್ತಿನ ಮೇಲೆ ಚೇತರಿಸಿಕೊಂಡು ದುಃಖಿಸುತಿರಲು, ಸುಮಿತ್ರನು ಅವಳನ್ನು ಸಮಾಧಾನಪಡಿಸುತಿದ್ದನು. ಇದನ್ನೆಲ್ಲ ನೋಡಿ,

ಅಲ್ಲಿ ಬಂದಿದ್ದ ಜನರೆಲ್ಲರೂ ಸಂತಾಪ ಪಡುತ್ತ, ಸುಮಿತ್ರನಿಗೆ ದುಃಖೋಪಶಮನಾರ್ಥವಾಗಿ ಹೇಳಬೇಕಾದ ಮಾತುಗಳನ್ನೆಲ್ಲ ಹೇಳಿ, ತಮ್ಮ ತಮ್ಮ ಮನೆಗಳಿಗೆ ಹೊರಟುಹೋದರು. ಸುಮಿತ್ರನು ಸಹೋದರನ ಗುಣಾತಿಶಯಗಳನ್ನು ಆಗಾಗ್ಗೆ ಸ್ಮರಿಸಿಕೊಂಡು, ಆತನಿಗೆ ಉಂಟಾದ ಅಕಾಲ ಮರಣಕ್ಕಾಗಿ ದುಃಖಿಸುತ್ತ, ಇವನ ಮರಣವಿಷಯಕಗಳಾದ ಪೂರ್ವೋತ್ತರಗಳನ್ನು ಚೆನ್ನಾಗಿ ತಿಳಿದುಕೊಳ್ಳಬೇಕೆಂದು, ಪರಂತಪನನ್ನೇ ಇದಿರು ನೋಡುತಿದ್ದನು. ಪರಂತಪನು ಮಾರನೆಯ ದಿನ ಸುಮಿತ್ರನ ಬಳಿಗೆ ಹೋಗಿ, ಕಾಮಮೋಹಿನಿಯ ವೃತ್ತಾಂತ ವಿನಾ-ಗಂಧರ್ವಪುರಿಯಲ್ಲಿ ನಡೆವ ಇತರ ವೃತ್ತಾಂತವೆಲ್ಲವನ್ನೂ ಹೇಳಿ, ಮಾಧವನು ಕೊಟ್ಟಿದ್ದ ವಜ್ರದ ಉಂಗುರವನ್ನೂ ತೋರಿಸಿದನು. ಸುಮಿತ್ರನು ಅದನ್ನು ನೋಡಿ, ಅಂತಸ್ವಾಸದಿಂದ ಕಣ್ಣೀರನ್ನು ಸುರಿಯಿಸಿ, "ಅಯ್ಯಾ ! ಪರಂತಪ ! ನಾನು ಮಾಧವನ ಇಷ್ಟದಂತೆ ನಡೆಸುವುದಕ್ಕೆ ಯಾವ ಅಡ್ಡಿಯೂ ಇಲ್ಲ. ಆದರೆ, ಈಗ ನಿನ್ನಿಂದ ನನಗೆ ಒಂದು ಉಪಕಾರವಾಗಬೇಕಾಗಿದೆ. ನನಗೆ ಕಾಮಮೋಹಿನಿಯೆಂಬ ಸಾಕು ಮಗಳೊಬ್ಬಳಿರುವಳು. ಅವಳನ್ನು ನನ್ನ ತಮ್ಮನ ಮಗನಾದ ಶಂಬರನಿಗೆ ಕೊಟ್ಟು ವಿವಾಹ ಮಾಡಬೇಕೆಂದಿರುವೆನು. ಈ ಕಾರ್ಯವು ನೆರವೇರುವವರೆಗೂ, ಮಾಧವನು ತನ್ನ ಆಸ್ತಿಯೆಲ್ಲವನ್ನೂ ನಿನಗೆ ಬರೆದಿರುವ ಅಂಶವನ್ನು ಮಾತ್ರ ನೀನು ಹೊರಪಡಿಸಕೂಡದು. ಇಲ್ಲದಿದ್ದರೆ, ಈ ವಿವಾಹಕಾರ್ಯಕ್ಕೆ ವಿಘ್ನವಾಗುವುದು" ಎಂದು ಹೇಳಲು, ಅದಕ್ಕೆ ಪರಂತಪನು "ನಾನಾಗಿ ಈ ಪ್ರಸ್ತಾವವನ್ನು ಎಂದಿಗೂ ಮಾಡತಕ್ಕನಲ್ಲ; ಆದರೆ, ಈ ಮಾಧವನು ತನ್ನ ಆಸ್ತಿಯ ವಿಷಯದಲ್ಲಿ ಹೇಗೆ ವಿನಿಯೋಗ ಮಾಡಿರು 
೩೨
ಪರಂತಪ ವಿಜಯ

ವನೆಂದು ಯಾರಾದರೂ ಕೇಳಿದರೆ, ನಾನು ಸುಳ್ಳು ಹೇಳುವುದಕ್ಕಾಗುವುದಿಲ್ಲ” ಎಂದು ಹೇಳಿದನು. ಕೂಡಲೆ, ಸುಮಿತ್ರನು ತನ್ನ ಬಂಧು ಮಿತ್ರರೊಡನೆ ಸೇರಿ, ಯಥಾವಿಧಿಯಾಗಿ ಮಾಧವನಿಗೆ ಉತ್ತರಕ್ರಿಯೆಗಳನ್ನು ನಡೆಸಿ, ಪರಂತಪನನ್ನು ತನ್ನ ಸಹೋದರನೊಡನೆ ನಿರ್ವಿಶೇಷವಾಗಿ ನೋಡುತ್ತ ತನ್ನ ಮನೆಯಲ್ಲಿಟ್ಟುಗೊಂಡು ಉಪಚರಿಸುತ್ತಿದ್ದನು. ಶಂಬರನೂ ಕಾಮಮೋಹಿನಿಯೂ ಸಹ ಅಲ್ಲಿಯೇ ಇದ್ದರು. ಕ್ರಮ ಕ್ರಮವಾಗಿ ಪರಂತಪನಿಗೂ ಕಾಮಮೋಹಿನಿಗೂ ಪರಸ್ಪರ ಗೌರವವು ಹೆಚ್ಚುತಿದ್ದಿತು. ಅಲ್ಪ ಕಾಲದೊಳಗಾಗಿಯೇ ಈ ಗೌರವವು ಸ್ನೇಹ ರೂಪವಾಗಿ ಪರಿಣಮಿಸಿತು. ಕೊನೆಗೆ ಈ ಸ್ನೇಹವೇ ಇವರಿಬ್ಬರಲ್ಲಿಯ ಪರಸ್ಪರಾನುರಾಗ ರೂಪವನ್ನು ಹೊಂದಿತು. ಇವರಿಬ್ಬರಲ್ಲಿಯ ಶೃಂಗಾರ ಚೇಷ್ಟೆಗಳು ತರಂಗ ತರಂಗವಾಗಿ ಉದ್ಭವಿಸುತ್ತಿದ್ದುವು. ಹೀಗಿರುವಲ್ಲಿ, ಒಂದು ದಿನ ಪರಂತಪನು ಸಂಧ್ಯಾಕಾಲದಲ್ಲಿ ಸಂಚಾರಾರ್ಥವಾಗಿ ಹೋಗಿ ಬರುತ್ತಿರುವಾಗ, ಸುಮಿತ್ರನ ಉಪವನಕ್ಕೆ ಬಂದು ಅಲ್ಲಿ ಪುಷ್ಪಭರಿತಗಳಾದ ಲತೆಗಳ ರಾಮಣೀಯಕವನ್ನು ನೋಡಿ ಆನಂದಿಸುತ್ತಿರಲು, ಕಾಮಮೋಹಿನಿಯೂ ಪುಪ್ಪಾಪಚಯ ವ್ಯಾಜದಿಂದ ಅಲ್ಲಿಗೆ ಬಂದಳು.

ಕಾಮಮೋಹಿನಿ-ಮಹನೀಯನಾದ ಪರಂತಪನೆ! ನಾನು ನಿನ್ನಲ್ಲಿ ಕೆಲವು ವಿಜ್ಞಾಪನೆಗಳನ್ನು ತಿಳಿಯಿಸಬೇಕೆಂದು ಬಹು ದಿವಸಗಳಿಂದ ನಿರೀಕ್ಷಿಸುತಿದ್ದೆನು. ಆದರೆ ದೈವಕೃಪೆಯಿಂದ ಈಗ ಅವಕಾಶ ಸಿಕ್ಕಿರುವುದು. ನೀನು ಹೇಳಿದ ಮಾಧವನ ವೃತ್ತಾಂತವು ನನಗೆ ಬಹು ಸಂಕಟಕರವಾಗಿರುವುದು. ಆತನ ಅಕಾಲ ಮರಣಕ್ಕೆ, ಮಂದ ಭಾಗ್ಯಳಾದ ನಾನೇ ಮುಖ್ಯ ಕಾರಣ ಭೂತಳೆಂದು ಹೇಳಬೇಕಾಗಿದೆ. ಹೇಗೆಂದರೆ, ಅವನು ನನ್ನಲ್ಲಿ ಬಹು ಅನುರಾಗ ವುಳ್ಳವನಾಗಿದ್ದನು. ನನಗೂ ಅವನಲ್ಲಿ ಅನುರಾಗವು ಹೆಚ್ಚುತ್ತಿದ್ದಾಗ್ಗೂ ಶಂಬರನ ದುರ್ಬೋಧನೆಯಿಂದ ನಾನು ಅವನ ವಿಷಯದಲ್ಲಿ ಉದಾಸೀನೆಯಾದೆನು. ನನ್ನ ಭಾವವನ್ನು ತಿಳಿದಕೂಡಲೆ, ಅವನು ಈ ಪಟ್ಟಣವನ್ನು ಬಿಟ್ಟು ಹೊರಟುಹೋದನು. ಶಂಬರನು ಮಾಧವನ ವಿಷಯದಲ್ಲಿ ಜುಗುಪ್ಸೆ ಹುಟ್ಟಿಸಿದ್ದು ನನ್ನ ಮೃತ್ಯುವಿಗೇ ಎಂದು ಈಗ ನಿಜವಾಗಿ ನಂಬಬೇಕಾಗಿದೆ. ಈ ನೀಚನೇ ನನ್ನನ್ನು ವಿವಾಹ ಮಾಡಿಕೊಳ್ಳಬೇಕೆಂದು ಸಂಪೂರ್ಣ ಪ್ರಯತ್ನದಲ್ಲಿದ್ದಾನೆ. ಇದಕ್ಕನುಕೂಲವಾಗಿ, ಸುಮಿತ್ರನೂ ಇವನನ್ನೇ 
ಅಧ್ಯಾಯ ೪
೩೩

ವಿವಾಹಮಾಡಿಕೊಳ್ಳಬೇಕೆಂದು ನನ್ನನ್ನು ಬಲಾತ್ಕರಿಸುತ್ತಿದ್ದಾನೆ. ಈ ಶಂಬರನು ಬಹು ದುರಾತ್ಮನು. ಇವನನ್ನು ವರಿಸುವುದಕ್ಕಿಂತ ಮರಣವೇ ಉತ್ತಮವೆಂದು ನಾನು ಭಾವಿಸಿದ್ದೇನೆ. ಈಗಲೂ, ವಿವಾಹಕಾಲಕ್ಕೆ ಸರಿಯಾಗಿ ವಿಷಪಾನವನ್ನು ಮಾಡಿ ಈ ಜೀವವನ್ನು ಕಳೆದುಕೊಳ್ಳಬೇಕೆಂದು, ನಾನು ದೃಢಸಂಕಲ್ಪಳಾಗಿದ್ದೇನೆ. ಶಂಬರನು ಸರ್ವಥಾ ನನಗೆ ಅನುರೂಪನಲ್ಲ. ಆದುದರಿಂದ, ಅದರಲ್ಲಿ ನನಗೆ ಇಷ್ಟವಿಲ್ಲ. ಮಾಧವನು ಸತ್ಯಸಂಧನು ; ಸಕಲ ವಿದ್ಯಾವಿಶಾರದನು; ಧರ್ಮಿಷ್ಟನು; ಗುಣನಿಧಿ, ಇಂಥವನನ್ನು ಬಿಟ್ಟು, ಗುಣ ಹೀನನಾಗಿಯೂ ನಿರಕ್ಷರಕುಕ್ಷಿಯಾಗಿಯೂ ನೀಚನಾಗಿಯೂ ಇರುವ ಈ ಶಂಬರನನ್ನು ವಿವಾಹಮಾಡಿಕೊಳ್ಳ ತಕ್ಕ ದುರವಸ್ಥೆ ನನಗೆ ಪ್ರಾಪ್ತವಾಗಿದೆ. ಇದನ್ನು ತಪ್ಪಿಸಿಕೊಳ್ಳುವುದಕ್ಕೆ ಉಪಾಯವೇ ತೋರಲಿಲ್ಲ. ಆದುದರಿಂದ, ಈ ವಿಷಯದಲ್ಲಿ ನೀನೆನಗೆ ಸಹಾಯಮಾಡಿ ಪ್ರಾಣದಾನವನ್ನು ಮಾಡಿದ ಉಪಕಾರಕ್ಕೆ ಭಾಗಿಯಾಗಬೇಕೆಂದು ನಿನ್ನನ್ನು ಪ್ರಾರ್ಥಿಸಿಕೊಳ್ಳುತ್ತೇನೆ.
ಪರಂತಪ-ಅರ್ಯಳೇ! ಚಿಂತಿಸಬೇಡ. ನಿನ್ನನ್ನು ಈ ಕಷ್ಟದಿಂದ ಬಿಡಿಸುವ ಭಾರವು ನನ್ನದಾಗಿರಲಿ. ನೀನು ಮಾಧವನ ಗುಣಗಳ ವಿಷಯದಲ್ಲಿ ಹೇಳಿದ್ದೆಲ್ಲ ನಿಜ. ಅಂಥವನು ಲಭಿಸದೆ ಹೋದುದು ನಿನ್ನ ದೌರ್ಭಾಗ್ಯವೇ ಸರಿ. ಸ್ತ್ರೀಯರಿಗೆ ಅಂಥ ಪತಿಗಳು ದೊರೆಯಬೇಕಾದರೆ ಜನ್ಮಾಂತರಗಳಲ್ಲಿ ಬಹು ಸುಕೃತಗಳನ್ನು ಮಾಡಿರಬೇಕು. ಆದರೆ, ಮೀರಿದ ಕೆಲಸಕ್ಕೆ ಎಷ್ಟು ಚಿಂತಿಸಿದರೆ ತಾನೆ ಏನು ಪ್ರಯೋಜನ? ಮಾಧವನು ಲೋಕಾಂತರವನ್ನೈದಿದನು. ಆತನು ಮಾಡಿದ ಧರ್ಮಕಾರ್ಯಗಳು ಮಾತ್ರ ದಿಗಂತ ವಿಶ್ರಾಂತಗಳಾಗಿ ನಿಲ್ಲುವುವು. ಆತನು ಪ್ರಾಣೋತ್ಕ್ರಮಣ ಕಾಲದಲ್ಲಿಯೂ ನಿನ್ನ ಗುಣಾತಿಶಯಗಳನ್ನೇ ಸ್ಮರಿಸಿಕೊಂಡು, ನಿನ್ನ ಔದಾಸೀನ್ಯಕ್ಕೆ ಆ ನೀಚನಾದ ಶಂಬರನ ದುರ್ಬೋಧನೆಯೇ ಕಾರಣವೆಂದು ತಿಳಿದು, ನಿನಗೆ ಕೊಡುವುದಕ್ಕಾಗಿ ೫೦ ಲಕ್ಷ ದ್ರವ್ಯಗಳನ್ನು ನನ್ನ ವಶಕ್ಕೆ ಕೊಟ್ಟಿರುವನು. ಆ ದ್ರವ್ಯವನ್ನು ಕೊಡುವೆನು. ಅದರಿಂದ ನೀನು ಪರಾಧೀನಳಾಗದೆ ಸ್ವತಂತ್ರವಾಗಿ ಜೀವಿಸುತ್ತ ಸುಖವಾಗಿರಬಹುದು.

ಕಾಮಮೋಹಿನಿ-ನಾನು ನಿರ್ಭಾಗ್ಯಳು. ನನ್ನ ದೌರ್ಮಾತ್ಯಕ್ಕೂ ಔದಾಸೀನ್ಯಕ್ಕೂ ತಕ್ಕ ಫಲವನ್ನು ಈಗ ನಾನು ಅನುಭವಿಸಬೇಕಾಯಿತು. ಇವು
೩೪
ಪರಂತಪ ವಿಜಯ

ನಲ್ಲಿ ನಾನು ಮಾಡಿದ ಔದಾಸೀನ್ಯಕ್ಕೆ ಈಗ ಅವನು ತಕ್ಕ ಪ್ರತೀಕಾರವನ್ನು ಮಾಡಿದನು. ಇನ್ನಾವುದಕ್ಕೂ ನಾನು ಅಷ್ಟು ಚಿಂತಿಸಿ ಸಂತಾಪಪಡುವುದಿಲ್ಲ. ಮಾಧವನು ತನ್ನ ಪ್ರಾಣೋತ್ಕ್ರಮಣ ಕಾಲದಲ್ಲಿಯೂ ಕೂಡ, ನಿರ್ಘಣಳಾಗಿಯೂ ಪಾಪಿನಿಯಾಗಿಯೂ ಇರುವ ನನ್ನನ್ನು ಸ್ಮರಿಸಿಕೊಂಡು, ನಾನು ಅವನಿಗೆ ಮಾಡಿದ ತಿರಸ್ಕಾರವನ್ನು ಮನಸ್ಸಿನಲ್ಲಿಡದೆ, ಈ ದ್ರವ್ಯವನ್ನು ನಿನ್ನ ಮೂಲಕ ಕಳುಹಿಸಿರುವುದೇ, ನನಗೆ ಮರ್ಮೋದ್ಘಾಟನೆ ಮಾಡಿದಂತೆ ದುಸ್ಸಹವಾದ ಸಂತಾಪವನ್ನುಂಟು ಮಾಡುತಿರುವುದು. ಅಯ್ಯಾ ! ಪರಂತಪ ! ನನಗೆ ದ್ರವ್ಯದ ಮೇಲೆ ಸ್ವಲ್ಪವೂ ಅಪೇಕ್ಷೆಯಿಲ್ಲ. ಯಾವ ಸಂಪತ್ತೂ ನನಗೆ ಬೇಕಾಗಿಲ್ಲ. ಆ ದುರಾತ್ಮನಾದ ಶಂಬರನಿಗೆ ಅಧೀನಳಾಗದ ಹಾಗಾದರೆ, ಅದೇ ಸಾಕು. ಸೇವಾವೃತ್ತಿಯಿಂದಲಾದರೂ ಜೀವಿಸುತ್ತ ಕಾಲವನ್ನು ಕಳೆಯುವೆನು. ನನ್ನ ಆಯಃಪರಿಮಾಣ ಮುಗಿಯುವವರೆಗೂ ಮಾಧವನಿಗೆ ದ್ರೋಹ ಮಾಡಿದೆನೆಂಬ ಅನುತಾಪವು ನನಗೆ ಹೋಗತಕ್ಕುದಲ್ಲ. ಮಾಧವನು ನನಗೋಸ್ಕರ ಕೊಟ್ಟಿರ ತಕ್ಕ ದ್ರವ್ಯವನ್ನು ನಿನ್ನ ಶ್ರಮಕ್ಕೆ ಪ್ರತಿಫಲವನ್ನಾಗಿ ಮಾಡಿಕೊಂಡು, ನನಗೆ ಈ ಬಂಧಮೋಚನವನ್ನು ಮಾಡಿದರೆ, ನಾನು ನಿನಗೆ ಮರಣಾಂತವಾಗಿ ಕೃತಜ್ಞಳಾಗಿರುವೆನು.
ಪರಂತಪ-ಪ್ರತಿಫಲವನ್ನಪೇಕ್ಷಿಸದೆ ಪರೋಪಕಾರವನ್ನು ಮಾಡುವುದೇ ಧರ್ಮವು. ಹೀಗಿರುವಲ್ಲಿ, ನಾನು ದೃವ್ಯಾರ್ಥಿಯಾಗಿ ಎಂದಿಗೂ ಉಪಕಾರ ಮಾಡತಕ್ಕವನಲ್ಲ. ಮಾಧವನು ಕೊಟ್ಟಿರುವ ದ್ರವ್ಯವು ನಿನ್ನದಾಗಿದೆ. ಈ ದ್ರವ್ಯ ಸಹಾಯದಿಂದಲೇ ಬಂಧಮೋಚನವನ್ನು ಮಾಡಿಕೊಳ್ಳಬೇಕೆಂಬ ಸಂಕಲ್ಪವು ನಿನಗಿದ್ದರೆ, ಅಂಥ ಧನಾಕಾಂಕ್ಷಿಗಳಾದ ಇತರರು ಯಾರನ್ನಾದರೂ ನೋಡಬಹುದು. ನನ್ನಿಂದಲೇ ಈ ಕಾರ್ಯವಾಗಬೇಕಾಗಿದ್ದರೆ, ನಾನು ಧರ್ಮಾರ್ಥವಾಗಿ ಮಾಡತಕ್ಕವನೇ ಹೊರತು, ಎಂದಿಗೂ ಪ್ರತಿ ಫಲವನ್ನಪೇಕ್ಷಿಸತಕ್ಕವನಲ್ಲ.

ಕಾಮಮೋಹಿನಿ-ಆರ್ಯನೇ! ನನ್ನ ಮಾತುಗಳಿಂದ ನಿನಗೆ ಕ್ರೋಧವುಂಟಾದಂತೆ ತೋರುವುದು. ನನ್ನ ಅಪರಾಧವನ್ನು ಕ್ಷಮಿಸು, ದುಃಖಾತಿಶಯದಿಂದ ನಾನು ಯುಕ್ತಾಯುಕ್ತ ವಿವೇಚನೆಯಿಲ್ಲದೆ ಆಡಿದ ಮಾತಿಗೆ ನೀನು ಕೋಪಿಸಿಕೊಂಡರೆ, ನಿನ್ನ ದಯಾಳುತ್ವವೇನಾಯಿತು ? ಅನಾಥಳಾಗಿ ಸಂಕ
ಅಧ್ಯಾಯ ೪
೩೫

ಟಪಡುತ್ತಿರುವ ನನ್ನನ್ನು ಕಾಪಾಡು. ಸುಮಿತ್ರನು ಈ ನೀಚನಿಗೆ ನನ್ನನ್ನು ಕೊಡುವುದು ನಿಜ. ನಿನ್ನಲ್ಲಿ ನಾನು ಶರಣಾಗತಳಾಗಿರುವೆನು. ಮುಚ್ಚು ಮರೆಯೇಕೆ? ನನ್ನ ಅಂತರಂಗವನ್ನು ಹೇಳುವೆನು,ಕೇಳು. ನೀನು ಇಲ್ಲಿಗೆ ಬಂದುದು ಮೊದಲು, ನನಗೆ ನಿನ್ನ ವಿಷಯದಲ್ಲಿ ಅನುರಾಗವೂ ಗೌರವವೂ ದಿನೇದಿನೇ ವೃದ್ಧಿ ಹೊಂದುತ್ತಿರುವುವು. ಆದುದರಿಂದ, ನೀನು ನನ್ನನ್ನು ವರಿಸಿದ ಪಕ್ಷದಲ್ಲಿ, ನಾನು ಜೀವಿಸಿರುವವರೆಗೂ ಮನೋವಾಕ್ಕಾಯಕರ್ಮಗಳಲ್ಲಿಯೂ ನಿನ್ನ ಇಷ್ಟಾನುವರ್ತಿನಿಯಾಗಿರುವೆನು. ಹೀಗಲ್ಲದೆ ಶಂಬರನನ್ನೇ ವಿವಾಹ ಮಾಡಿಕೊಳ್ಳಬೇಕಾದ ಪಕ್ಷದಲ್ಲಿ, ನಾನು ಆತ್ಮಹತ್ಯೆ ಮಾಡಿಕೊಳ್ಳುವುದೇ ನಿಜ. ಆದುದರಿಂದ, ನನ್ನ ಕಷ್ಟವನ್ನು ನಿವಾರಣೆ ಮಾಡಿ ನನ್ನನ್ನು ಬದುಕಿಸುವುದು ನಿನಗೆ ಸೇರಿದೆ. ಇದು ಮೊದಲುಗೊಂಡು ನನ್ನ ಪ್ರಾಣಮಾನಗಳೆರಡಕ್ಕೂ ನೀನೇ ನಿಯಾಮಕನಾಗಿರುತ್ತೀಯೆ.
ಪರಂತಪ-ಶರಣಾಗತ ರಕ್ಷಣೆ ಮಾಡುವುದಕ್ಕಿಂತ ಉತ್ಕೃಷ್ಟವಾದ ಬೇರೆ ಧರ್ಮವಾವುದೂ ಇಲ್ಲ. ನಿನ್ನನ್ನು ಈ ಕಷ್ಟದಿಂದ ಬಿಡಿಸುವೆನು. ಈ ವಿಷಯದಲ್ಲಿ ನನಗೆ ಎಷ್ಟು ವಿಪತ್ತುಗಳು ಪ್ರಾಪ್ತವಾದಾಗ್ಗೂ ಆಗಲಿ. ಆದರೆ, ನಿನ್ನನ್ನು ವಿವಾಹ ಮಾಡಿಕೊಳ್ಳಬೇಕೆಂಬ ಅಭಿಲಾಷೆಯಿಂದ ನಾನು ಎಂದಿಗೂ, ಈ ಕೆಲಸವನ್ನು ಮಾಡತಕ್ಕವನಲ್ಲ. ಅದು ಹಾಗಿರಲಿ; ಪ್ರಕೃತದಲ್ಲಿ ನಾನು ನಿನ್ನ ಬಂಧನವನ್ನು ಬಿಡಿಸಿ ಕಷ್ಟನಿವಾರಣೆ ಮಾಡುವೆನು. ಅನಂತರದಲ್ಲಿ ನಿನಗೆ ನನಗಿಂತಲೂ ಉತ್ತಮನಾದವನು ಯಾವನಾದರೂ ದೊರೆಯುವನು. ಹಾಗೆ ಯಾರೂ ದೊರೆಯದ ಪಕ್ಷದಲ್ಲಿ, ಆಗ ಪರ್ಯಾಲೋಚಿಸೋಣ. ಆದರೆ ನನಗೆ ಇನ್ನೊಂದು ಅನುಮಾನವು ಭಾಧಿಸುತ್ತಿರುವುದು. ಏನೆಂದರೆ; ನೀನು ಶಂಬರನನ್ನು ವಿವಾಹ ಮಾಡಿಕೊಳ್ಳದಿದ್ದ ಪಕ್ಷದಲ್ಲಿ, ಬಾಲ್ಯದಿಂದ ಇದುವರೆಗೂ ನಿನ್ನನ್ನು ನೋಯಿಸದೆ ಸುಖದಿಂದ ಸಾಕುತ್ತಿದ್ದ ಸುಮಿತ್ರನಿಗೆ ಅತ್ಯಂತ ಕ್ಲೇಶವುಂಟಾಗುವುದು. ಆಗ ನೀನು ಕೃತಘ್ನುಳೆಂಬ ಲೋಕಾಪವಾದಕ್ಕೆ ಗುರಿಯಾಗಬೇಕಾಗುತ್ತದೆಯಲ್ಲವೆ?

ಕಾಮಮೋಹಿನಿ- ಈ ಸುಮಿತ್ರನು ನನಗೆ ಮಹೋಪಕಾರ ಮಾಡಿರತಕ್ಕವನೇ ಅಹುದು, ತಂದೆತಾಯಿಗಳ ಮುಖವನ್ನೇ ಕಾಣದ ನನ್ನನ್ನು ತಂದು ಇದುವರೆಗೂ ಅತಿ ಪ್ರೇಮದಿಂದ ಪೋಷಿಸಿದನು. ಇವನೇ ನನ್ನ ಭಾಗಕ್ಕೆ
೪೬
ಪರಂತಪ ವಿಜಯ

ತಾಯಿಯಾಗಿಯೂ ತಂದೆಯಾಗಿಯೂ ಇರುವನು. ಈ ವಿಷಯದಲ್ಲಿ ನಾನು ಎಷ್ಟು ಕೃತಜ್ಞಳಾಗಿದ್ದಾಗ್ಗೂ ಕಡಮೆಯೇ ಸರಿ. ಜೀವಾವಧಿ ಇವನಲ್ಲಿ ನಾನು ಸೇವೆ ಮಾಡುತ್ತಿದ್ದಾಗ್ಗೂ, ಇವನು ಮಾಡಿದ ಉಪಕಾರಕ್ಕೆ ಸರಿಯಾದ ಪ್ರತ್ಯುಪಕಾರವಾಗಲಾರದು. ಆದರೆ, ಮಕ್ಕಳಿಗೆ ತಾಯಿತಂದೆಗಳು ಸಮಸ್ತ ವಿಷಯದಲ್ಲಿಯೂ ಯಾಮಕರಾಗಿದ್ದಾಗ್ಗೂ, ಧರ್ಮಮಾರ್ಗವನ್ನು ಬಿಟ್ಟು ಹೋಗುವುದು ಅವರಿಗೂ ಉಚಿತವಲ್ಲ. ತಾಯಿ ತಂದೆಗಳು ಮಕ್ಕಳನ್ನು ಸಾಕಿದ ಮಾತ್ರದಿಂದಲೇ, ಯುಕ್ತಾಯಕ್ತ ವಿವೇಚನೆಯಿಲ್ಲದೆ ಅವರಿಗೆ ಅನುಚಿತ ಕಾರ್ಯಗಳನ್ನು ಹೇಳಿ ಅದನ್ನು ಮಾಡದಿದ್ದರೆ ಕೃತಘ್ನರೆಂದು ಹೇಳುವುದಕ್ಕಾದೀತೆ? ಈ ಶಂಬರನು ವ್ಯಭಿಚಾರಿಯು ; ಇದರಿಂದ ಅನೇಕ ರೋಗಗಳುಳ್ಳವನಾಗಿರುವನು. ಬಹಳ ಸುಳ್ಳುಗಾರನು, ಚೌರ ಮೊದಲಾದ ಅನೇಕ ದುಷ್ಕೃತ್ಯಗಳನ್ನು ಮಾಡಿ, ಅನೇಕಾವೃತ್ತಿ ರಾಜ್ಯಾಧಿಕಾರಿಗಳಿಂದ ಕ್ರೂರ ಶಿಕ್ಷೆಯನ್ನನುಭವಿಸಿರುತ್ತಾನೆ. ಇಂಥವನನ್ನು ವಿವಾಹಮಾಡಿಕೊಳ್ಳಬೇಕೆಂದು ನನ್ನ ತಂದೆ ನಿರ್ಬಂಧಿಸಬಹುದೆ? ಈ ಮಾತನ್ನು ನಾನು ಹೇಗೆ ತಾನೆ ನಡಯಿಸಲಿ! ಈ ವಿಷಯದಲ್ಲಿ ಇಷ್ಟವಿಲ್ಲವೆಂದು ಹೇಳಿದ ಮಾತ್ರಕ್ಕೆ ನಾನು ಕೃತಘ್ನಳಾಗುವೆನೆ? ಈ ಸುಮಿತ್ರನು ಮಾಡಿರತಕ್ಕೆ ಮಹೋಪಕಾರಗಳನ್ನು ನಾನು ಎಂದಿಗೂ ಮರೆಯತಕ್ಕವಳಲ್ಲ. ನ್ಯಾಯವಾದ ರೀತಿಯಲ್ಲಿ ಹೇಳಿದರೆ, ಅವನಿಗೊಸ್ಕರ ನನ್ನ ಪ್ರಾಣವನ್ನಾದರೂ ಒಪ್ಪಿಸುವುದರಲ್ಲಿ ಸಿದ್ಧಳಾಗಿರುವೆನು; ಆ ನೀಚನಾದ ಶಂಬರನ ಪತ್ನಿಯಾಗಿ ಮಾತ್ರ, ನಾನು ಎಂದಿಗೂ ಇರಲಾರೆನು.

ಪರಂತಪ -ನೀನು ಹೇಳುವ ಮಾತುಗಳು ನನಗೆ ಅತ್ಯಾಶ್ಚರ್ಯಕರಗ೪ಾಗಿರುವುವು. ಸುಮಿತ್ರನು ಬಹಳ ವಿವೇಕಿಯೆಂದು ಕೇಳಿರುತ್ತೇನೆ. ಇದಲ್ಲದೆ, ನಿನ್ನಲ್ಲಿ ಸಂಪೂರ್ಣವಾದ ವಿಶ್ವಾಸವುಳ್ಳವನೆಂದೂ ತೋರುತ್ತದೆ. ಶಂಬರನು ಅಂಥ ದುರ್ಗುಣವುಳ್ಳವನಾಗಿದ್ದರೆ, ಪ್ರಾಣಪ್ರಾಯಳಾದ ನಿನ್ನನ್ನು ಆತನಿಗೆ ಕೊಟ್ಟು ಮದುವೆಮಾಡಬೇಕೆಂದು ಸುಮಿತ್ರನೆಂದಿಗಾದರೂ ಸಂಕಲ್ಪ ಮಾಡುತಿದ್ದನೆ! ಆ ವಿಚಾರವು ಹೇಗಾದರೂ ಇರಲಿ, ನಿನ್ನ ಪ್ರಾರ್ಥನೆಯಂತೆ ಶಂಬರನಿಗೆ ನೀನು ಮದುವೆಯಾಗದಿರುವ ಹಾಗೆ ಮಾಡುವ ಭಾರವು ತನ್ನದಾಗಿದೆ. ಇನ್ನು ಚಿಂತಿಸಬೇಡ, ಹೋಗು.
ಅಧ್ಯಾಯ ೪
೩೭

ಕಾಮಮೋಹಿನಿ-ನನ್ನ ಪ್ರಾರ್ಥನೆಯು ಇಷ್ಟು ಮಾತ್ರವೇ ಅಲ್ಲ; ನನ್ನನ್ನು ನೀನೇ ವಿವಾಹ ಮಾಡಿಕೊಳ್ಳಬೇಕೆಂಬುದೂ ಕೂಡ ನನ್ನ ಮುಖ್ಯ ಕೋರಿಕೆಯಾಗಿರುವುದು. ನಿನ್ನ ಮಾತುಗಳಿಂದ, ನನ್ನನ್ನು ವರಿಸುವುದರಲ್ಲಿ ನಿನಗೆ ಸಮ್ಮತಿಯಿಲ್ಲವೆಂದು ತೋರುತ್ತದೆ. ಹಾಗಿದ್ದ ಪಕ್ಷದಲ್ಲಿ, ನಿನ್ನ ಸಹಾಯದಿಂದ ನನಗೆ ಆಗ ತಕ್ಕ ಉತ್ತರ ಫಲವೆನೂ ತೋರಲಿಲ್ಲ. ನೀನು ಇಲ್ಲಿಗೆ ಬಂದಾರಭ್ಯ, ದೇವರೇ ನಿನ್ನನ್ನು ಇಲ್ಲಿಗೆ ಕರೆದುಕೊಂಡು ಬಂದನೆಂದು, ತಂದೆ ತಾಯಿ ಬಂಧು ಬಳಗಗಳೆಲ್ಲರಿಂದಲೂ ಬಿಡಲ್ಪಟ್ಟು ಅನಾಥೆಯಾಗಿದ್ದಾಗ ನಿನ್ನನ್ನು ನೋಡಿ ನಾನು ಸನಾಥಳೆಂದು ಭಾವಿಸಿದ್ದೆನು. ಈಗ ಶಂಬರನನ್ನು ನಾನು ವರಿಸುವುದು ಇಷ್ಟಪಡದಿದ್ದರೆ, ನನ್ನ ಸಾಕು ತಂದೆಯಾದ ಸುಮಿತ್ರನಿಗೆ ನನ್ನಲ್ಲಿ ಔದಾಸೀನವೂ ಕ್ರೋಧವೂ ಉಂಟಾಗುವುವೇ ಹೊರತು ಮತ್ತೆ ಬೇರೆಯಿಲ್ಲ. ಸಾಮಾನ್ಯವಾಗಿ ಸ್ತ್ರೀಯರು ತಮ್ಮ ಅನುರಾಗಕ್ಕೆ ಪಾತ್ರರಾದ ಪುರುಷರಿಗೆ ಸ್ವಾಭಿಪ್ರಾಯವನ್ನು ವ್ಯಕ್ತವಾಗಿ ತಿಳಿಯಿಸುವುದೇ ಇಲ್ಲ.ಇಂಥ ಸಂಕೋಚವನ್ನೂ ಲಜ್ಜೆಯನ್ನೂ ಬಿಟ್ಟು, ನಿನ್ನ ಗುಣಾತಿಶಯಗಳಿಗೋಸ್ಕರ ನನ್ನನ್ನು ನಾನಾಗಿ ನಿನಗೆ ಒಪ್ಪಿಸಿದೆನು. ಇಂಥ ನನ್ನನ್ನು ನೀನು ತಿರಸ್ಕರಿಸುವ ಪಕ್ಷದಲ್ಲಿ, ನಿನ್ನಿಂದ ನಾನು ಉತ್ತರತ್ರ ವಿಶೇಷವಾದ ಅನರ್ಥಗಳಿಗೆ ಪಾತ್ರಳಾಗಬೇಕೇ ಹೊರತು, ಇತರ ಯಾವ ಪ್ರಯೋಜನವೂ ಆಗಲಾರದು. ಆದುದರಿಂದ, ಇನ್ನೊಂದು ನಿಮಿಷಾರ್ಧದಲ್ಲಿ ಆ ಸುಮಿತ್ರ ಶಂಭರರ ಸಂಕಲ್ಪಗಳನ್ನು ಭಗ್ನಮಾಡಿ ನಾನು ಪ್ರಾಣತ್ಯಾಗವನ್ನು ಮಾಡಿಕೊಳ್ಳುವೆನು.


  ಎಂದು ಹೇಳಿ, ತನ್ನ ಬಳಿಯಲ್ಲಿಟ್ಟುಕೊಂಡಿದ್ದ ವಿಷವನ್ನು ತೆಗೆದು ಬಾಯಿಗೆ ಹಾಕಿಕೊಂಡಳು. ಆ ಕ್ಷಣದಲ್ಲಿಯೇ, ಪರಂತಪ ಅವಳ ಗಂಟಲನ್ನು ಗಟ್ಟಿಯಾಗಿ ಹಿಡಿದುಕೊಂಡು, ಬಲಾತ್ಕಾರದಿಂದ ಆ ವಿಷವನ್ನು ತೆಗೆದು ಒಂದು ಕಾಗದದಲ್ಲಿ ಸುತ್ತಿ ತನ್ನ ಜೇಬಿನಲ್ಲಿ ಹಾಕಿಕೊಂಡು “ಎಲೌ ಮಂಗ೪ಾಂಗಿಯೇ ! ನಿನ್ನ ಸ್ಥೈರ್ಯವೂ ದೃಢಸಂಕಲ್ಪವೂ ನನಗೆ ಅತ್ಯಾಶ್ಚರ್ಯವನ್ನುಂಟುಮಾಡಿದವು. ನಿನ್ನನ್ನು ವರಿಸಕೂಡದೆಂದು ನಾನು ಸಂಕಲ್ಪಿಸಿದವನಲ್ಲ; ನಿನಗೆ ಪುರುಷಾಂತರನಲ್ಲಿ ಅನುರಾಗವಿದ್ದ ಪಕ್ಷದಲ್ಲಿ, ಅದಕ್ಕೆ ಪ್ರತಿ ಬಂಧಕನಾದ ಈ ನಿನ್ನ ವಿಪತ್ತನ್ನು ತಪ್ಪಿಸಿ ನಿನ್ನ ಕೋರಿಕೆಯನ್ನು ಸಫಲ 
೩೮
ಪರಂತಪ ವಿಜಯ

ಗೊಳಿಸಬೇಕೆಂದಿದ್ದೆನು. ನೀನು ಅನ್ಯಾದೃಶವಾದ ಸೌಂದರವುಳ್ಳವಳಾಗಿಯೂ ಅದಕ್ಕೆ ತಕ್ಕ ಗುಣಾತಿಶಯವುಳ್ಳವಳಾಗಿಯೂ ಇರುವೆ, ನನಗಿಂತಲೂ ರೂಪವಂತಾರಾಗಿಯೂ ವಿದ್ಯಾವಂತರಾಗಿಯೂ ಗುಣಾಢ್ಯರಾಗಿಯೂ ಇರತಕ್ಕ ಮಹಾತ್ಮರು ಲೋಕದಲ್ಲಿ ಎಷ್ಟೋ ಜನರಿರುವರು. ನೀನು ಅಂಥವರನ್ನು ವರಿಸಿ ಸಂತೋಷದಿಂದಿರಬಹುದೆಂದು ನಾನು ಹೀಗೆ ಹೇಳಿದೆನೇ ಹೊರತು ನೀನು ನನಗೆ ಅನುರೂಪಳಲ್ಲವೆಂಬುದಾಗಿಯೂ ನಿನಗಿಂತಲೂ ಹೆಚ್ಚಾದ ಬೆರೆ ಸ್ತ್ರೀಯು ನನಗೆ ದೊರಕುತ್ತಾಳೆಂಬ ಅಹಂಕಾರದಿಂದ ಹೇಳಿದವನಲ್ಲ. ಈಗಲೂ ಈ ವಿಷಯವನ್ನು ಚೆನ್ನಾಗಿ ಪರ್ಯಾಲೋಚಿಸು. ನೀನು ನನ್ನ ಆಪ್ತಳಾದ ಹೆಂಡತಿಯಾಗಿದ್ದರೆ ಹೇಗೋ- ಹಾಗೆಯೇ ನಿನ್ನ ವಿಷಯದಲ್ಲಿ ನಾನು ಮಾಡತಕ್ಕ ಸಹಾಯಗಳನ್ನೆಲ್ಲ ಮಾಡುವೆನು. ಈ ಸುಮಿತ್ರ ಶಂಬರರಿಂದ ಉಂಟಾಗಿರುವ ವಿಪತ್ತನ್ನು ತಪ್ಪಿಸುವೆನು. ತರುವಾಯ, ಪಾಣಿಗ್ರಹಣಾರ್ಥವಾಗಿ ನಿನ್ನನ್ನು ವರಿಸಬೇಕೆಂದು ಬರುವವರೆಲ್ಲರನ್ನೂ ಪರೀಕ್ಷಿಸು. ಅವರಲ್ಲಿ ನನಗಿಂತಲೂ ಉತ್ತಮರಾದವರು ಸಿಕ್ಕದಿದ್ದರೆ ನಾನೇ ನಿನ್ನನ್ನು ವರಿಸುತ್ತೇನೆ. ಈ ವಿಷಯದಲ್ಲಿ ಸಂದೇಹವಿಲ್ಲ. ಇದಕ್ಕಾಗಿ ನಿನಗೆ ಬೇಕಾದ ಪ್ರತಿಜ್ಞೆಗಳನ್ನು ಮಾಡಿಕೊಡುತ್ತೇನೆ. ಇನ್ನು ಮಃಖಿಸಬೇಡ.” ಎಂದು ಹೇಳಿದನು.

ಕಾಮಮೋಹಿನಿ - ಎಲೈ ಮಹನೀಯನೆ! ವಿವಾಹಕ್ಕೆ ಅನುರಾಗವೇ ಮುಖ್ಯವಾದುದು. ವಿದ್ಯಾವಂತರಾಗಿಯೂ ರೂಪವಂತರಾಗಿಯೂ ಇದ್ದ ಅನೇಕ ಸಹಸ್ರ ಜನರು, ನನ್ನ ವಿಚಾರವನ್ನು ಕೇಳಿ ಇಲ್ಲಿಗೆ ಬಂದು ಸುಮಿತ್ರನನ್ನು ಪ್ರಾರ್ಥಿಸಿದರು. ಅವರಲ್ಲಿ ಯಾರನ್ನೂ ನನ್ನ ಮನಸ್ಸು ಒಡಂಬಡಲಿಲ್ಲ. ಹೀಗಿರುವಲ್ಲಿ, ಶಂಬರನಿಗೆ ನನ್ನನ್ನು ಕೊಟ್ಟು ವಿವಾಹಮಾಡಬೇಕೆಂದು ಸುಮಿತ್ರನು ಪ್ರಯತ್ನ ಮಾಡಿದನು. ಈತನ ಪ್ರಯತ್ನಕ್ಕೆ ಪ್ರತಿಭಟಿಸುವುದಕ್ಕಿಂತ ದೇಹತ್ಯಾಗವನ್ನು ಮಾಡುವುದೇ ಉತ್ತಮವೆಂದು ನಿಷ್ಕರ್ಷೆ ಮಾಡಿ, ಈ ವಿಷವನ್ನು ತರಿಸಿಕೊಂಡೆನು. ನಿಶ್ಚಿತಾರ್ಥ ಕಾಲದಲ್ಲಿಯೇ ಈ ವಿಷವನ್ನು ತೆಗೆದುಕೊಳ್ಳಬೇಕೆಂದಿದ್ದೆನು. ಮಾಧವನ ಮರಣ ಸಮಾಚಾರ ಬಂದು ಈ ನಿಶ್ಚಿತಾರ್ಥೋತ್ಸವವು ನಿಂತುದುದರಿಂದಲೂ, ಮಾರನೆಯ ದಿವಸವೇ ನಿನ್ನ ದರ್ಶನ ಲಾಭವುಂಟಾಗಿ ಕ್ರಮಕ್ರಮವಾಗಿ ನೀನೇ ನನಗೆ ಅನು
ಅಧ್ಯಾಯ ೪
೩೯

ರೂಪನಾದ ಪತಿಯೆಂದು ಭಾವನೆಯುಂಟಾದುದರಿಂದಲೂ, ನನ್ನಿಂದ ಇದುವರೆಗೆ ದೇಹಧಾರಣೆ ಮಾಡಲ್ಪಟ್ಟಿತು. ನಾನು ಮನೋವಾಕ್ಕಾಯಗಳಿ೦ದಲೂ ನಿನ್ನನ್ನೇ ವರಿಸಿರುತ್ತೇನೆ. ನಿನಗಿದು ಸಮ್ಮತವಾದರೆ ನನ್ನ ಇಷ್ಟ ವನ್ನು ನೆರವೇರಿಸು; ಇಲ್ಲದಿದ್ದರೆ, ಬಲಾತ್ಕಾರದಿಂದ ಕಿತ್ತುಕೊಂಡಿರುವ ನನ್ನ ಶೋಕಪರಿಹಾರಕವಾದ ಈ ಸಿದ್ಧೌಷದವನ್ನು ಕೊಟ್ಟು ಇಲ್ಲಿಂದ ತೆರಳು.

ಪರಂತಪ-ನಿನ್ನ ಸ್ಥೈರ್ಯದಿಂದ ನಾನು ಜಿತನಾದೆನು. ಬಹು ಜನ್ಮ ಸುಕೃತಗಳಿಂದ ನಿನ್ನಂಥ ಗುಣವತಿಯರು ಲಭ್ಯರಾಗುವರು. ನೀನು ಈ ರೀತಿಯಲ್ಲಿ ನನ್ನನ್ನು ವರಿಸುವುದು ನನ್ನ ಭಾಗ್ಯಪರಿಪಾಕವೇ ಸರಿ. ಆದುದರಿಂದ ಈ ನಿಮಿಷ ಮೊದಲುಗೊಂಡು ನಾನು ನಿನ್ನ ಆಜ್ಞಾನುವರ್ತಿಯಾಗಿರುವೆನು. ಸುಮಿತ್ರ ಶಂಬರರಿಬ್ಬರಿಂದ ಉಂಟಾಗಿರುವ ಭಯವನ್ನು ಬಿಡು. ಈಗ ನಿನ್ನ ಅಭಿಮತವನ್ನು ಪ್ರದರ್ಶನಮಾಡಿ ಒಂದು ಕಾಗದವನ್ನು ಬರೆದು ಸುಮಿತ್ರನಿಗೆ ಕಳುಹಿಸಿ, ಈ ಪಟ್ಟಣದಲ್ಲಿ ನಿನಗೆ ಮಿತ್ರರಾದವರು ಯಾರಾದರೂ ಇದ್ದರೆ ಅವರ ಮನೆಯಲ್ಲಿ ಸ್ವಲ್ಪ ಕಾಲ ಅಜ್ಞಾತವಾಸ ಮಾಡಿಕೊ೦ಡಿರು. ನನಗೆ ಸುಮಿತ್ರನಿಂದ ಆಗಬೇಕಾದ ಕೆಲಸಗಳು ಕೆಲವಿವೆ. ಅವು ಗಳನ್ನು ಪೂರಯಿಸಿಕೊಂಡು, ನಾನು ನಿನ್ನ ವಿವಾಹಾರ್ಥವಾಗಿ ಬರುವೆನು.
<.p>

ಕಾಮಮೋಹಿನಿ-ಎಲೈ ಪೂಜ್ಯನೆ! ಆರ್ಯಕೀರ್ತಿಯೆಂಬ ನನ್ನ ಸ್ನೇಹಿತೆಯೊಬ್ಬಳು ಈ ಪಟ್ಟಣದಲ್ಲಿರುವಳು. ಈಕೆಗೆ ವೃದ್ಧರಾದ ತಂದೆ ತಾಯಿಗಳಿರುವರು. ಇವರು ಬಹಳ ಬಡವರು. ಅವರ ಮನೆಯಲ್ಲಿ ಅಜ್ಞಾತವಾಸ ಮಾಡುವುದು ಸುಲಭವೆಂದು ತೋರುತ್ತದೆ. ಅದು ಹಾಗಿರಲಿ : ಸುಮಿತ್ರನ ಮನೆಯಲ್ಲಿ ನಿನಗೇನು ಕೆಲಸ? ಅಲ್ಲಿದ್ದರೆ ನಿನಗೆ ಬಹು ವಿಪತ್ತುಗಳಿಗೆ ಅವಕಾಶವಾಗಬಹುದು. ನಾನು ನಿನ್ನ ಸಂಗಡ ಮಾತನಾಡುತಿದ್ದಾಗಲೆಲ್ಲ, ಶಂಬರನು ಬಹು ಸಂತಾಪಪಡುತ್ತ, ನಿನ್ನ ಮೇಲೆ ವಿಷವನ್ನು ಕಾರುತ್ತಿದ್ದನು. ನನ್ನ ಅಭಿಪ್ರಾಯವು ಅವನಿಗೆ ತಿಳಿದ ಕೂಡಲೆ, ನೀನು ಆ ಮನೆಯಲ್ಲಿದ್ದ ಪಕ್ಷದಲ್ಲಿ, ನಿನಗೆ ಅಪ್ರತಿಕಾರವಾದ ವಿಪತ್ತನ್ನು ಅವನುಂಟುಮಾಡಬಹುದು. ಆದುದರಿಂದ, ನನ್ನ ಈ ಅಭಿಪ್ರಾಯವು ಶಂಬರ ಸುಮಿತ್ರರಿಗೆ ತಿಳಿಯುವುದಕ್ಕೆ ಮುಂಚಿತವಾಗಿಯೇ ನಿನ್ನ ಕಾರ್ಯಗ

೪೦
ಪರಂತಪ ವಿಜಯ

ಳನ್ನು ಸಾಧಿಸಿಕೊಂಡು ಅವನು ಮಾಡುವ ಅನರ್ಥಪ್ರಯೋಗಗಳಿಗೆ ಗುರಿಯಾಗದಿರಬೇಕು.

ಪರಂತಪ-(ಸಾವಿರ ಪೌನುಗಳ ನೋಟನ್ನು ಕೊಟ್ಟು) ಈ ದ್ರವ್ಯವನ್ನು ಆರ್ಯಕೀರ್ತಿಯ ತಂದೆಗೆ ಕೊಡು. ಶೀಘ್ರವಾಗಿ ನಾನು ಬಂದು ಆತನಿಗೆ ಇನ್ನೂ ವಿಶೇಷವಾದ ಬಹುಮಾನಗಳನ್ನು ಮಾಡುವೆನು. ಶಂಬರ ಸುಮಿತ್ರರುಗಳಿಂದ ನಿನಗೆ ಯಾವ ಭಯ ಬಂದಾಗ್ಗೂ, ಅದನ್ನು ನಾನು ನಿಗ್ರಹಿಸಬಲ್ಲೆನು. ಮಾಧವನು ತನ್ನ ಆಸ್ತಿಯನ್ನೆಲ್ಲ ನನ್ನ ಹೆಸರಿಗೆ ಉಯಿಲ್ ಬರೆದು ಕಾಲಾಧೀನನಾದನು. ಈ ಆಸ್ತಿಯನ್ನೆಲ್ಲ ಸ್ವಾಧೀನ ಪಡಿಸಿಕೊಂಡು ಬರುತ್ತೇನೆ. ಕೂಡಲೆ ವಿವಾಹ ಪ್ರಯತ್ನವನ್ನು ಮಾಡೋಣ.

ಕಾಮಮೋಹಿನಿ - ಎಲೈ ಪರಂತಪನೆ ! ನಿನ್ನ ಮಾತುಗಳು ಬಹಳ ಭಯವನ್ನುಂಟುಮಾಡುತ್ತವೆ. ಮಾಧವನ ಐಶ್ವರ್ಯವು ಕುಬೇರನ ಐಶ್ವರ್ಯಕ್ಕೆ ಸಮಾನವಾದುದು. ಲೋಕದಲ್ಲಿ ಸಂಪತ್ತುಗಳು ವಿಪತ್ತುಗಳಡನೆ ಸೇರಿರುವುವು. ಶಂಬರನು ಮಾಧವನ ಆಸ್ತಿಗೆಲ್ಲ ತಾನೆ ಹಕ್ಕುದಾರನೆಂದು ತಿಳಿದುಕೊಂಡಿದ್ದಾನೆ. ಸುಮಿತ್ರನು ಇವನ ಪಕ್ಷವಾಗಿದ್ದಾನೆ. ಈ ದ್ರವ್ಯಕ್ಕೆ ನೀನು ಆಸೆಪಟ್ಟರೆ, ದುಸ್ಸಹವಾದ ಕಷ್ಟಕ್ಕೆ ಗುರಿಯಾಗುವೆ. ನಮಗೆ ದ್ರವ್ಯದ ಮೇಲಿನ ಆಸೆ ಬೇಡ. ಐಶ್ವರ್ಯಗಳು ಹೆಚ್ಚಿದಹಾಗೆಲ್ಲ ತಾಪತ್ರಯಗಳು ಹೆಚ್ಚುವುವು. ಐಶ್ವರ್ಯವಂತರಾಗಿರುವುದಕ್ಕಿಂತ, ದೇಹಶ್ರಮದಿಂದಲೂ ಬುದ್ಧಿ ಚಾತುರ್ಯದಿಂದಲೂ ಧರ್ಮಲೋಪವಿಲ್ಲದೆ ದೊರೆತಷ್ಟು ಸಂಪಾದಿಸಿಕೊಂಡು ಬಡವರಂತೆ ಜೀವಿಸಿಕೊಂಡಿರುವುದುತ್ತಮ. ಈ ಸಂಪತ್ತನ್ನೆಲ್ಲ ಶಂಬರ ನಿಗೆ ಬಿಟ್ಟು ಬಿಡು. ಈ ಸಂಪತ್ತಿನಿಂದ ಉಂಟಾಗತಕ್ಕ ಸೌಖ್ಯಕ್ಕಿಂತ ಹೆಚ್ಚಾದ ಸೌಖ್ಯವನ್ನು ನಾನು ನಿನಗೆ ಉಂಟುಮಾಡುವೆನು.

ಪರಂತಪ-ಈ ವುಯಿಲಿನ ಸಮಾಚಾರವನ್ನು ನಾನು ಸುಮಿತ್ರನಿಗೆ ಹೇಳಿದೆನು. ಆತನು ಈ ಆಸ್ತಿಯನ್ನೆಲ್ಲ ನನ್ನ ವಶ ಮಾಡುವುದಕ್ಕೆ ಒಪ್ಪಿ ಕೊಂಡಿದ್ದಾನೆ. ಶಂಬರನಿಂದ ನನಗೆ ಯಾವ ಭಯವೂ ಇಲ್ಲ. ಈ ಸಂಪತ್ತುಗಳನ್ನು ಸಾಧಿಸುವೆನು. ಹೀಗೆ ಸಾಧಿಸುವುದು, ದ್ರವ್ಯದ ಮೇಲಣ ಆಶೆಯಿಂದಲ್ಲ; ಮಾಧವನು ಉತ್ಕ್ರಮಣಕಾಲದಲ್ಲಿ ನನ್ನಿಂದ ಮಾಡಿಸಿ ಕೊಂಡಿರುವ ಕೆಲವು ಪ್ರತಿಜ್ಞೆಗಳಿಗೋಸ್ಕರ ಈ ಕೆಲಸವನ್ನು ಮಾಡಬೇ

ಅಧ್ಯಾಯ ೫
೪೧

ಕಾಗಿದೆ. ಈ ವಿಷಯದಲ್ಲಿ ಯಾವ ಅಪಾಯವೂ ಬರದಂತೆ ನೋಡಿಕೊಳ್ಳುತ್ತೇನೆ. ನೀನು ಯಾವುದಕ್ಕೂ ಭಯಪಡದೆ ಅಜ್ಞಾತವಾಸವನ್ನು ಮಾಡುತ್ತಿರು. ಸುಮಿತ್ರನು ಬರತಕ್ಕ ವೇಳೆಯಾಯಿತು. ಸಲ್ಲಾಪಕ್ಕೆ ವಿಶೇಷ ಕಾಲವಿಲ್ಲ. ನೀನು ಜಾಗ್ರತೆಯಾಗಿ ನಿನ್ನ ಆಪ್ತ ಸ್ನೇಹಿತಳ ಮನೆಯನ್ನು ಸೇರು.

ಕಾಮಮೋಹಿನಿ-ನಿನ್ನ ಆಜ್ಞೆಯಂತೆ ನಡೆಯುವೆನು. ದೇವರು ನಿನಗೆ ಏನೂ ವಿಪತ್ತು ಬರದಂತೆ ಕಾಪಾಡಲಿ.
  

ಎಂದು ಹೇಳಿ, ಕಾಮಮೋಹಿನಿಯು ಯಾರಿಗೂ ತಿಳಿಯದಂತೆ ಆರ್ಯಕೀರ್ತಿಯ ಮನೆಗೆ ಹೊರಟುಹೋದಳು. ಪರಂತಪನೂ ಸುಮಿತ್ರನ ಮನೆಗೆ ಹೊರಟುಹೋದನು.

ಅಧ್ಯಾಯ ೫.



  

ಈ ರೀತಿಯಲ್ಲಿ ಕಾಮಮೋಹಿನಿಯು ಸಾಕುತಂದೆಯ ಮನೆ ಯನ್ನು ಬಿಟ್ಟು ಹೊರಟುಹೋದ ದಿನವೇ, ಶಂಬರನಿಗೆ ಇವಳನ್ನು ಕೊಟ್ಟು ವಿವಾಹಮಾಡುವುದಾಗಿ ನಿಶ್ಚಿತಾರ್ಥವನ್ನು ಗೊತ್ತುಮಾಡಿ, ಅನೇಕ ಬಂಧುಮಿತ್ರರು ಗಳಿಗೆ ಲಗ್ನಪತ್ರಿಕೆಗಳು ಕಳುಹಿಸಲ್ಪಟ್ಟಿದ್ದವು. ಇವಳು ಹೊರಟುಹೋದ ಸ್ವಲ್ಪ ಹೊತ್ತಿನೊಳಗಾಗಿ, ಈ ಶುಭಕಾರ್ಯಕ್ಕೋಸ್ಕರ ಕರೆಯಲ್ಪಟ್ಟಿದ್ದ ಜನಗಳು ಒಬ್ಬೊಬ್ಬರಾಗಿ ಬರುವದಕ್ಕುಪಕ್ರಮವಾಯಿತು.

ಪರಂತಪನು, ಹೀಗೆ ಬರುವ ಅತಿಥಿಗಳನ್ನು ಎದುರುಗೊಳ್ಳುತ್ತ ಅವರೊಡನೆ ಮಾತನಾಡುತ್ತಿದ್ದನು. ಆಗತಾನೆ ಒಬ್ಬ ಜವಾನನು ಎರಡು ಕಾಗದಗಳನ್ನು ತಂದು ಸುಮಿತ್ರನ ಜವಾನನ ಕೈಯಲ್ಲಿ ಕೊಟ್ಟು ಹೊರಟು ಹೋದನು. ಪರಂತಪನು, ಆ ಮೇಲುವಿಲಾಸಗಳನ್ನು ದೂರದಿಂದಲೇ ನೋಡಿ ಇವು ಕಾಮಮೋಹಿನಿಯ ಕಾಗದಗಳು; ಇವುಗಳನ್ನು ನೋಡಿದ

೪೩
ಪರಂತಪ ವಿಜಯ

ಕೂಡಲೆ, ಸುಮಿತ್ರ ಶಂಬರರಿಗೆ ಅನಿರ್ವಚನೀಯವಾದ ಖೇದವುಂಟಾಗುವುದಲ್ಲದೆ, ಇವರಿಗೆ ನನ್ನ ಮೇಲೂ ದ್ವೇಷವುಂಟಾಗಬಹುದು; ಈ ದ್ವೇಷವನ್ನು ತಪ್ಪಿಸಿಕೊಳ್ಳಬೇಕೆಂದು, ಕಾಮಮೋಹಿನಿಗೆ ಪಿತೃಭಕ್ತಿಯ ವಿಷಯದಲ್ಲಿಯೂ, ಕೃತಜ್ಞತೆಯ ವಿಷಯದಲ್ಲಿಯೂ ಶಂಬರನನ್ನು ವಿವಾಹ ಮಾಡಿಕೊಳ್ಳತಕ್ಕ ವಿಷಯದಲ್ಲಿಯೂ ಕೂಡಿದ ಮಟ್ಟಿಗೂ ಹೇಳಿದೆನು; ಅವಳು ಕೇಳಲಿಲ್ಲ. ಇವರ ದ್ವೇಷವು ಪ್ರಬಲವಾಗಿ, ನನ್ನ ಬಳಿಯಲ್ಲಿರತಕ್ಕೆ ಮಾಧವನ ಉಯಿಲು, ಉಂಗರ, ಕಾಗದಪತ್ರಗಳು, ದ್ರವ್ಯ ಮೊದಲಾದುವುಗಳಿಗೆ ಏನಾದರೂ ಅಪೋಹಬಂದರೆ ಕಷ್ಟ; ಅದಲ್ಲದೆ, ಅಪರಾಧಿಗಳನ್ನು ಪತ್ತೆ ಮಾಡುವ ವಿಷಯದಲ್ಲಿ ನನಗೆ ಪೂರ್ಣಾಧಿಕಾರವನ್ನು ಕೊಟ್ಟು ಸರಕಾರದವರು ಕೊಟ್ಟಿರತಕ್ಕ ಸನ್ನದೂ ನನ್ನ ಬಳಿಯಲ್ಲಿಯೇ ಇದೆ. ಈಗ ಇದನ್ನು ಭದ್ರಪಡಿಸದಿದ್ದರೆ ಬಹಳ ಅನರ್ಥಕ್ಕೆ ಕಾರಣವಾಗುವುದು" ಎಂದು ಯೋಚಿಸಿ, ಆ ಕ್ಷಣದಲ್ಲಿ ಅವುಗಳನ್ನು ತೆಗೆದುಕೊಂಡು ಯಾರಿಗೂ ತಿಳಿಯದಂತೆ ಆ ತೋಟದಲ್ಲಿ ಗಹನವಾದ ಒಂದು ಪ್ರದೇಶಕ್ಕೆ ಹೋಗಿ, ಅಲ್ಲಿ ಒಂದು ಬಂಡೆಯ ಬಳಿಯಲ್ಲಿ ಒಂದು ಹಳ್ಳವನ್ನು ತೆಗೆದು, ಆ ಗುಂಡಿಯಲ್ಲಿ ಇವುಗಳೆಲ್ಲ ಇಡಲ್ಪಟ್ಟಿದ್ದ ಒಂದು ತವರದ ಪೆಟ್ಟಿಗೆಯನ್ನು ಇಟ್ಟು ಮಣ್ಣು ಮುಚ್ಚಿ, ಗುಮಾನಿಗೆ ಆಸ್ಪದವಾಗದಂತೆ ಹೆಪ್ಪುಗಳನ್ನು ಕಟ್ಟಿ, ದಂಸು ಮಾಡಿ ಹೊರಟುಹೋಗಿ, ಅಲ್ಲಿದ್ದ ಅತಿಥಿಗಳ ಜತೆಯಲ್ಲಿ ಸೇರಿಕೊಂಡನು.
  ಹೀಗಿರುವಲ್ಲಿ, ಸುಮಿತ್ರನ ಜವಾನನು ಆ ಯೆರಡು ಕಾಗದಗಳನ್ನು ತೆಗೆದುಕೊಂಡು ಹೋಗಿ ತನ್ನ ಯಜಮಾನನಿಗೆ ಕೊಟ್ಟನು. ಸುಮಿತ್ರನು ಈ ಕಾಗದಗಳ ಮೇಲುವಿಲಾಸಗಳನ್ನು ನೋಡಿದ ಕೂಡಲೆ ಗಾಬರಿಬಿದ್ದು, ಕವರುಗಳನ್ನು ಕೂಡಲೇ ಒಡೆದು ನೋಡಿದನು. ಅದರಲ್ಲಿ ಬರೆದಿದ್ದ ಒಕ್ಕಣೆ ಯೇನೆಂದರೆ:-
  ತೀರ್ಥರೂಪು ಸುಮಿತ್ರರವರ ಚರಣ ಸನ್ನಿಧಾನಗಳಲ್ಲಿ:-
  ಸೇವಕಳಾದ ಕಾಮಮೋಹಿನಿಯ ಸಾಷ್ಟಾಂಗ ನಮಸ್ಕಾರಪೂರ್ವಕ ವಿಜ್ಞಾಪನೆಗಳು ; ಕ್ಷೇಮೋಪರಿ, ಸಂಪ್ರತಿ.


  ನಾನು ನನ್ನ ಮಾತಾಪಿತೃಗಳನ್ನು ಅರಿಯೆನು. ನನಗೆ ಬುದ್ದಿ ಬಂದುದು ಮೊದಲು ತಾವೇ ತಂದೆತಾಯಿಗಳೆಂದು ಭಾವಿಸಿದ್ದೇನೆ. ಬಾಲ್ಯ
ಅಧ್ಯಾಯ ೫
೪೩

ಮೊದಲುಗೊಂಡು, ನನ್ನನ್ನು ಸ್ವಂತ ಮಗಳಲ್ಲಿರತಕ್ಕ ಪ್ರೇಮಕ್ಕಿಂತಲೂ ಹೆಚ್ಚಾದ ಪ್ರೇಮದಿಂದ ಸಾಕಿ, ನನಗೆ ವಿದ್ಯೆ ಬುದ್ಧಿಗಳನ್ನು ಕಲಿಯಿಸಿದಿರಿ, ಇದಕ್ಕೆ ನಾನು ಎಷ್ಟು ಕೃತಜ್ಞಳಾಗಿದ್ದರೂ ಸಾಲದು; ಇದಕ್ಕಾಗಿ ನಾನು ಪ್ರಾಣವನ್ನು ಒಪ್ಪಿಸುವುದರಿಂದಲಾದರೂ ನನ್ನ ಕೃತಜ್ಞತೆಯನ್ನು ತೋರಿಸುವುದಕ್ಕೆ ಸಿದ್ಧಳಾಗಿರುವೆನು. ಆದರೆ, ಈ ದಿನ ನನ್ನನ್ನು ಬಲಾತ್ಕಾರವಾಗಿ ಶಂಬರನಿಗೆ ಕೊಟ್ಟು ವಿವಾಹಮಹೋತ್ಸವವನ್ನು ನಡೆಸುವುದಾಗಿ ನಿಷ್ಕರ್ಷೆಮಾಡಿ, ಇದಕ್ಕಾಗಿ ಅತಿಥಿಗಳನ್ನು ಕರೆಯಿಸುವ ಪ್ರಯತ್ನದಲ್ಲಿದ್ದೀರಿ. ಮೊದಲಿನಿಂದ ಈತನ ವಿಷಯದಲ್ಲಿ ನನಗಿರತಕ್ಕ ಅಭಿಪ್ರಾಯವನ್ನು ನಾನು ಧಾರಾಳವಾಗಿ ತಮಗೆ ತಿಳಿಯಿಸಿಯೇ ಇದ್ದೇನೆ. ಈತನ ಶೀಲಸ್ವಭಾವಗಳೂ ಗುಣಾತಿಶಯಗಳೂ ತಮಗೆ ತಿಳಿಯದವುಗಳಾಗಿಲ್ಲ. ಈತನನ್ನು ವಿವಾಹಮಾಡಿಕೊಂಡು-ಜೀವಿಸಿರುವವರೆಗೂ ದುಸ್ಸಹವಾದ ವ್ಯಥೆಯನ್ನು ಅನುಭವಿಸುವುದಕ್ಕಿಂತ ಈಗಲೆ ಪ್ರಾಣಹತ್ಯವನ್ನು ಮಾಡಿಕೊಳ್ಳುವುದುತ್ತಮವೆಂದು ಸಂಕಲ್ಪಿಸಿದ್ದೇನೆ. ಈತನಿಗೆ ಕೊಟ್ಟು ವಿವಾಹಮಾಡುವುದಕ್ಕಿಂತಲೂ, ಈ ದೇಹವನ್ನು ಬಿಡೆಂದು ತಾವು ಆಜ್ಞಾಪಿಸಿದ್ದರೆ, ಬಹಳ ಸಂತೋಷದಿಂದ ತನ್ನ ಆಜ್ಞೆಯನ್ನು ಶಿರಸಾ ವಹಿಸುತ್ತಿದ್ದನು. ತಾವು ಮಾಡತಕ್ಕೆ ಬಲಾತ್ಕಾರವನ್ನು ನೋಡಿದರೆ, ನನಗೆ ಬಹಳ ಸಂಕಟವಾಗುತ್ತದೆ. ತಮ್ಮ ಪ್ರಯತ್ನವನ್ನು ತಮ್ಮ ಮನಸ್ಸಿನಲ್ಲಿಯೇ ಯೋಚಿಸಬೇಕು. ನನ್ನನ್ನು ತಮ್ಮ ಮಗಳಿಗಿಂತಲೂ ಹೆಚ್ಚಾಗಿ ಸಾಕಿದಿರಿ. ನನಗೆ ಸರ್ವವಿಷಯ ದಲ್ಲಿಯ ಅನುರೂಪನಾದ ವರನಿಗೆ ಕೊಟ್ಟು ವಿವಾಹಮಾಡುವುದು ತಮ್ಮ ಕರ್ತವ್ಯವಲ್ಲವೆ? ಸರ್ವವಿಧದಲ್ಲಿಯೂ ನನಗೆ ಅನನುರೂಪನಾದವನಿಗೆ ನನ್ನ ಇಷ್ಟಕ್ಕೆ ವಿರೋಧವಾಗಿ ಬಲಾತ್ಕಾರದಿಂದ ನನ್ನನ್ನು ಕೊಟ್ಟು ವಿವಾಹ ಮಾಡಬೇಕೆಂಬ ಸಂಕಲ್ಪವು ತಮಗೆ ಉಂಟಾಗಬಹುದೆ? ಈ ತಮ್ಮ ಪ್ರಯತ್ನವು ನನಗೆ ಮಾತ್ರವೇ ಅನಭಿಮತವಾದುದಲ್ಲ; ನನ್ನನ್ನೂ ಶಂಬರನನ್ನೂ ನೋಡಿರತಕ್ಕ ಸರ್ವರಿಗೂ ಇದು ಅನಭಿಮತವಾಗಿದೆ. ಇದಲ್ಲದೆ, ಮೊದಲು ನೀವು ಈ ನಿಶ್ಚಿತಾರ್ಥವನ್ನು ಮಾಡಿದ ದಿವಸವೇ ಮಾಧವನು ಸ್ವರ್ಗಸ್ಥನಾದ ವರ್ತಮಾನವು ತಮಗೆ ಶ್ರುತವಾಗಿ ಈ ಉತ್ಸವಕ್ಕೆ ಭಂಗವಾದುದರಿಂದ, ಈ ಸಂಬಂಧವು ದೇವರಿಗೂ ಅಭಿಮತವಲ್ಲವೆಂದು ಗೊತ್ತಾಗುತ್ತದೆ. ಇಂಥ
೪೪
ಪರಂತಪ ವಿಜಯ


ಪ್ರಯತ್ನವನ್ನು ತಾವು ಮಾಡಿದ್ದರಿಂದ, ಅದರ ಫಲವನ್ನು ಅನುಭವಿಸುವುದಕ್ಕೆ ಇಷ್ಟವಿಲ್ಲದೆ, ನಾನು ತಮ್ಮ ಮನೆಯನ್ನು ಬಿಟ್ಟು ಹೊರಟುಹೋಗಿದ್ದೇನೆ. ಈ ವಿವಾಹವೊಂದು ವಿನಾ, ನನಗೆ ಏನು ಆಜ್ಞೆ ಮಾಡಿದಾಗ್ಗೂ, ನಾನು ಶಿರಸಾ ವಹಿಸಿ ನಡೆದುಕೊಳ್ಳಲು ಸಿದ್ಧಳಾಗಿರುತ್ತೇನೆ. ನನ್ನ ಅಪರಾಧವನ್ನು ಕ್ಷಮಿಸಬೇಕು. ತಮ್ಮ ವಿಧೇಯಳಾದ
                        ಕಾಮಮೋಹಿನಿ.
  ಈ ಕಾಗದವನ್ನು ಓದಿದಕೂಡಲೆ, ಸುಮಿತ್ರನು ವಿಸ್ಮಿತನಾಗಿ ಅತ್ಯಂತ ಸಂತಾಪಪರವಶನಾಗಿ "ಕರೆಯಲ್ಪಟ್ಟ ಬಂಧುಮಿತ್ರರೆದುರಿಗೆ ದುಸ್ಸಹವಾದ ಅಪಮಾನವುಂಟಾಯಿತಲ್ಲ!” ಎಂದು ಸಂತಪಿಸುತ್ತ, ಧಡೀಲನೆ ಎದ್ದು ಕಾಮಮೋಹಿನಿಯ ಕೊಠಡಿಗೆ ಹೋಗಿ, ಅವಳು ಅಲ್ಲಿ ಇಲ್ಲದಿದ್ದದ್ದರಿಂದ ಮನೆಯಲ್ಲಿ ಹುಡುಕಿ ಎಲ್ಲಿಯೂ ಕಾಣದೆ, ತನ್ನ ಉಪವನವನ್ನೆಲ್ಲ ತಿರುಗಿ, ಅಲ್ಲಿಯೂ ಕಾಣದೆ ಹೋದುದರಿಂದ, ಪರಂತಪನೇನಾದರೂ ಇವಳನ್ನು ಅಪಹರಿಸಿಕೊಂಡು ಹೋದನೇ ಎಂಬ ಗುಮಾನಿಯಿಂದ, ಆತನನ್ನು ನೋಡು ವುದಕ್ಕೋಸ್ಕರ ಪುನಃ ಮನೆಗೆ ಹಿಂದಿರುಗಿದನು. ಆಗ ಪರಂತಪನು ಅಲ್ಲಿದ್ದ ಅತಿಥಿಗಳೊಡನೆ ಸಲ್ಲಾಪಮಾಡುತಿದ್ದುದನ್ನು ನೋಡಿ, ತಾನು ಮಾಡಿದ ಊಹೆಯು ಅಸಂಭಾವಿತವೆಂದೆಣಿಸಿಕೊಂಡು, ಅತ್ಯಂತ ವ್ಯಸನದಿಂದ, ಶಂಬರನ ಕೊಠಡಿಗೆ ಹೋಗಿ, ನಿಶ್ಚಿತಾರ್ಥಕ್ಕೋಸ್ಕರ ಅಲಂಕರಿಸಿಕೊಂಡಿದ್ದ ಅವನ ಕೈಗೆ ಆ ಕಾಗದವನ್ನು ಕೊಟ್ಟು, ಮೌನದಿಂದ ತಲೆಬೊಗ್ಗಿಸಿ ಕೊಂಡು ನಿಶ್ಚಲವಾಗಿ ನಿಂತಿದ್ದನು. ಶಂಬರನು ಇವನ ಮುಖಭಾವದಿಂದ ಸ್ವಲ್ಪ ಗಾಬರಿಪಟ್ಟು, ತನ್ನ ಹೆಸರಿನ ವಿಲಾಸವಿದ್ದ ಆ ಕಾಗದವನ್ನು ಒಡೆದು ನೋಡಿ ಓದಿದನು. ಅದರಲ್ಲಿದ್ದ ಒಕ್ಕಣೆಯೇನೆಂದರೆ:-
  ಸಹೋದರನಿಗೆ ಸಮಾನನಾದ ಶಂಬರನಿಗೆ,
            ಕಾಮಮೋಹಿನಿಯ ವಿಜ್ಞಾಪನೆಗಳು.
   ನಿನ್ನ ಶೀಲಸ್ವಭಾವ, ನಿನ್ನ ಗುಣ, ನಿನ್ನ ಇಂದ್ರಿಯಪರವಶತೆ, - ಇವುಗಳನ್ನೆಲ್ಲ ನಾನು ಬಾಲ್ಯಾರಭ್ಯ ನೋಡುತ್ತಲಿದ್ದೇನೆ. ಸಹೋದರಭಾವ ದಿಂದ, ಇವುಗಳನ್ನು ನೋಡಿಯೂ ನೋಡದಂತೆ ಇರುತ್ತಿದ್ದನು. ಈ ವಿಷ

ಅಧ್ಯಾಯ ೫
೪೫

ಯವನ್ನು ತಿಳಿದುಕೊಳ್ಳದೆ, ನನ್ನಲ್ಲಿ ನೀನು ಅತ್ಯಂತಾನುರಾಗವನ್ನು ತೋರಿದುದು ನನಗೆ ಬಹಳ ಆಶ್ಚರ್ಯವನ್ನುಂಟುಮಾಡುತ್ತದೆ. ವಿವಾಹಮಾಡಿಕೊಳ್ಳುವ ವಧೂವರರು, ಪರಸ್ಪರಾನುರಕ್ತರಾಗಿರಬೇಕು; ಅಥವಾ, ಉದಾಸೀನರಾಗಿಯಾದರೂ ಇರಬೇಕು ನೀನು ನನ್ನಲ್ಲಿಟ್ಟಿರುವ ಅತ್ಯಂತಾನುರಾಗಕ್ಕೆ ಸರಿಯಾಗಿ ನಿನ್ನಲ್ಲಿ ನನಗೆ ಲೇಶಮಾತ್ರವಾದರೂ ಪ್ರೀತಿಯಿಲ್ಲ; ಕೊನೆಗೆ ಉದಾಸೀನತೆಯೂ ಕೂಡ ಇಲ್ಲ. ಪರಂತು, ನಿನ್ನ ಸಂಭಾಷಣೆಯನ್ನೂ, ಸಹವಾಸವನ್ನೂ, ಕೊನೆಗೆ ನೀನು ವಾಸಮಾಡುವ ಪಟ್ಟಣದಲ್ಲಿ ವಾಸವನ್ನೂ ಕೂಡ ಮಾಡಬಾರದೆಂದು, ನಾನು ದೃಢವಾಗಿ ಸಂಕಲ್ಪಿಸಿರುವೆನು. ಪ್ರಾಣವನ್ನಾದರೂ ಬಿಡುವೆನೇ ಹೊರತು, ನಾನು ನಿನ್ನನ್ನು ವಿವಾಹ ಮಾಡಿಕೊಳ್ಳುವವಳಲ್ಲ. ನನ್ನಲ್ಲಿ ವ್ಯಾಮೋಹವನ್ನು ಬಿಟ್ಟು ನಿನಗೆ ಅನುರೂಪಳಾದ ಸ್ತ್ರೀಯನ್ನು ಹುಡುಕಿ ವಿವಾಹ ಮಾಡಿಕೊಂಡು ಸುಖವಾಗಿರು. ಈ ನನ್ನ ಬುದ್ಧಿವಾದವನ್ನು ಕೇಳಿದರೆ, ಇದರಿಂದ ನಮ್ಮಿಬ್ಬರಿಗೂ ಒಳ್ಳೆಯದಾಗುವುದು; ಇಲ್ಲದ ಪಕ್ಷದಲ್ಲಿ, ನಾವಿಬ್ಬರೂ ನಮ್ಮ ಬಂಧು ಬಳಗಗಳೊಡನೆ ಬಹಳ ಸಂಕಟಕ್ಕೆ ಗುರಿಯಾಗಬೇಕಾಗುವುದು. ಚೆನ್ನಾಗಿ ಪರ್ಯಾಲೋಚಿಸಿ, ನನ್ನ ಮೇಲಿನ ಆಶೆಯನ್ನು ಪರಿತ್ಯಾಗಮಾಡಿ, ನಿನಗೆ ಅನುರೂಪಳಾದ ಸ್ತ್ರೀಯನ್ನು ಪಡೆದುಕೊಂಡು, ನೀನು ಸುಖವಾಗಿ ಬಾಳುವೆಯೆಂದು ನಂಬಿರತಕ್ಕ,
                      ನಿನ್ನ ಸಹೋದರಿಯಾದ
                         ಕಾಮಮೋಹಿನಿ.
  ಈ ಕಾಗದವನ್ನು ಓದಿದ ಕೂಡಲೆ, ಶಂಬರನಿಗೆ ಬಹುಕ್ಲೇಶವುಂಟಾಯಿತು. ಈ ಕ್ಷೇಶವು ಕ್ರಮಕ್ರಮವಾಗಿ ಪೂರ್ವಾಪರಜ್ಞತೆಯನ್ನು ತಪ್ಪಿಸಿತು.
ಶಂಬರ-ಸುಮಿತ್ರನೆ !ಇವಳಿಗೆ ನನ್ನಲ್ಲಿ ಇಷ್ಟು ದ್ವೇಷವಿರಲಿಲ್ಲ. ಈ ಲೇಖನವನ್ನು ನೋಡಿದರೆ, ಇವಳ ಮನಸ್ಸು ಬಹಳ ಕ್ರೂರವಾಗಿ ಮಾರ್ಪಡಿಸಲ್ಪಟ್ಟಿದೆಯೆಂದೂ ಇದಕ್ಕೆ ಪರಂತಪನು ಮುಖ್ಯ ಕಾರಣವೆಂದೂ ತೋರುತ್ತದೆ. ಇವನು ನಮ್ಮ ಮನೆಗೆ ಬಂದಾರಭ್ಯ, ಇವಳ ನಡತೆಯಲ್ಲಿ ಬಹಳ ಬದಲಾವಣೆಯುಂಟಾಗಿದೆ. ಇವನಿಗೆ ತಕ್ಕ ಪ್ರತೀಕಾರವನ್ನು ಮಾಡುತ್ತೇನೆ.
  ರೋಷವೇಶದಿಂದ ಪಿಸ್ತೂಲನ್ನು ತೆಗೆದು, ಅದನ್ನು ಸರಿಯಾಗಿ ಬಾರ್ಮಾಡಿಕೊಂಡು ಹೊರಡುವುದಕ್ಕೆ ಉದ್ಯುಕ್ತನಾದನು.

೪೬
ಪರಂತಪ ವಿಜಯ

ಸುಮಿತ್ರ-ಎಲೈ ಶಂಬರನೆ ! ನಿನ್ನ ಕೋಪವನ್ನು ಸಮಾಧಾನಮಾಡಿಕೊ. ಈ ವಿಷಯದಲ್ಲಿ ಪರಂತಪನು ನಿರಪರಾಧಿಯೆಂದು ತೋರುತ್ತದೆ.

ಶಂಬರ-ಅದು ಹೇಗೆ ?


ಸುಮಿತ್ರ-ಕಾಮಮೋಹಿನಿಯು, ನಿನ್ನನ್ನು ವಿವಾಹಮಾಡಿಕೊಳ್ಳುವುದಿಲ್ಲವೆಂದು, ನನಗೂ ಒಂದು ಕಾಗದವನ್ನು ಬರೆದಿರುತ್ತಾಳೆ. ಈ ಯೆರಡು ಕಾಗದಗಳೂ ನನ್ನ ಬಳಿಗೆ ಬಂದಕೂಡಲೆ, ನನ್ನ ಕಾಗದವನ್ನು ಓದಿ ನೋಡಿ ಕೊಂಡು, ಕಾಮಮೋಹಿನಿಯನ್ನು ಎಲ್ಲೆಲ್ಲಿಯೂ ಹುಡುಕಿದೆನು. ಎಲ್ಲಿಯೂ ಕಾಣದೆ ಇದ್ದುದರಿಂದ, ಪರಂತಪನ ವಿಷಯದಲ್ಲಿ ನನಗೂ ಅನುಮಾನಹುಟ್ಟಿತು. ಆದರೆ, ಮನೆಗೆ ಬಂದು ನೋಡುವಲ್ಲಿ, ಅವನು ಅತಿಥಿಗಳ ಜತೆಯಲ್ಲಿ ವಿನೋದವಾಗಿ ಸಲ್ಲಾಸ ಮಾಡುತ್ತಿದ್ದನು. ಈ ದುರಾಲೋಚನೆಗೆ ಸೇರಿದ್ದರೆ ಇವನೂ ಇವಳ ಜತೆಯಲ್ಲಿ ಹೊರಟುಹೋಗುತ್ತಿರಲಿಲ್ಲವೆ?

ಶಂಬರ-ಕಾಮಮೋಹಿನಿನ್ನು ಸಂಕೇತಮಾಡಿ ಯಾವುದಾದರೂ ಒಂದು ಸ್ಥಳಕ್ಕೆ ಕಳುಹಿಸಿ, ಈ ರೀತಿಯಲ್ಲಿ ಅಭಿನಯಿಸುತಿರಕೂಡದೋ?


ಸುಮಿತ್ರ-ಹಾಗೆ ಇದ್ದರೂ ಇರಬಹುದು; ಆದಾಗ್ಯೂ, ಈಗ ಅವನು ಬಹುಜನ ಅತಿಥಿಗಳ ಮಧ್ಯದಲ್ಲಿ ಇದ್ದಾನೆ. ಈ ಕಾಲದಲ್ಲಿ ದುಡುಕುವುದು ಸರಿಯಲ್ಲ. ಇದಲ್ಲದೆ, ಕಾಮಮೋಹಿನಿಯ ಪತ್ತೆಗಾಗಿ ಚಾರರನ್ನು ಕಳುಹಿಸಿದ್ದೇನೆ. ಜಾಗ್ರತೆಯಲ್ಲಿಯೇ ಅವಳನ್ನು ಬರಮಾಡಿ, ನಿನ್ನ ವಿಷಯದಲ್ಲಿ ಪ್ರಸನ್ನಳಾಗುವಂತೆ ಮಾಡುತ್ತೇನೆ. ನೀನು ದುಡುಕದಿರು.
  

ಅವನ ಪಿಸ್ತೂಲನ್ನೂ ಇತರ ಆಯುಧಗಳನ್ನೂ ಒಂದು ಕೊಠಡಿಯಲ್ಲಿ ಹಾಕಿ, ಅದಕ್ಕೆ ಬೀಗ ಹಾಕಿಕೊಂಡು, ಮುಂದಿನ ಕೆಲಸಗಳಿಗೆ ಪ್ರಯತ್ನ ಮಾಡುವುದಾಗಿ ಹೇಳಿ ಹೊರಟು ಹೋದನು. ಆದರೂ, ಶಂಬರನು ಉನ್ಮತ್ತ ಪ್ರಲಾಪವನ್ನು ಮಾಡುತ್ತ, ಹಾಗೆಯೇ ರೇಗುತ್ತ, ಪರಂತಪನನ್ನು ಬೈಯುತ್ತ ಹುಚ್ಚನಂತೆ ನಡೆಯುವುದಕ್ಕೆ ಉಪಕ್ರಮಿಸಿದನು. ಕೂಡಲೆ, ಸುಮಿತ್ರನು ಕೆಲವು ಜನ ಭೃತ್ಯರನ್ನು ಕರೆದು, ಅವನನ್ನು ಹೊರಗೆ ಬಿಡ ಕೂಡದೆಂದು ಏಕಾಂತವಾಗಿ ಅವರಿಗೆ ಹೇಳಿ, ತಾನು ತನ್ನ ಕೊಠಡಿಗೆ ಹೋಗಿ, ಪರಂತಪನಿಗೆ ಒಂದು ಚೀಟಿಯನ್ನು ಬರೆದು ಕಳುಹಿಸಿದನು. ಕೂಡಲೇ ಪರಂತವನು ಇವನ ಕೊಠಡಿಗೆ ಬಂದನು.

ಅಧ್ಯಾಯ ೫
೪೭

ಸುಮಿತ್ರ - ಅಯ್ಯ! ಪರಂತಪನೆ! ನಿನ್ನನ್ನು ಪುತ್ರನಿರ್ವಿಶೇಷವಾಗಿ ನಾನು ನೋಡುತ್ತಿದ್ದೆನು. ನೀನೇ ಮಾಧವನೆಂಬುದಾಗಿ ತಿಳಿದುಕೊಂಡು, ನಿನ್ನಲ್ಲಿ ಭ್ರಾತೃವಾತ್ಸಲ್ಯವನ್ನು ಇಟ್ಟಿರುವೆನು. ನನ್ನ ವಿಷಯದಲ್ಲಿಯೂ ನೀನು ಸೌಹಾರ್ದವುಳ್ಳವನಾಗಿರಬೇಕಾದುದು ಅವಶ್ಯಕವಲ್ಲವೆ ?

ಪರಂತಪ - ಇದೇನು ಹೀಗೆ ಹೇಳುವೆ? ಈಗ ನಿನ್ನ ಭಾವನೆ ಹೇಗಾದರೂ ಇರಲಿ; ನನಗೆ ನಿನ್ನ ಪಿತೃಭಕ್ತಿಯು ಅಕೃತ್ರಿಮವಾಗಿರುವುದು. ಈ ರೀತಿಯಲ್ಲಿ ನೀನು ಮಾತನಾಡುವುದು ನನಗೆ ಬಹಳ ವ್ಯಥೆಯನ್ನುಂಟು ಮಾಡುತ್ತದೆ.

ಸುಮಿತ್ರ - ನನ್ನಲ್ಲಿ ನಿನಗಿರತಕ್ಕ ವಿಶ್ವಾಸವು ಅಕೃತ್ರಿಮವಾಗಿದ್ದರೆ, ಈಗ ಕಾಮಮೋಹಿನಿ ಯೆಲ್ಲಿರುವಳು?-ಹೇಳು.

ಪರಂತಪ - ಅವಳಿಗೆ ಆಪ್ತರಾದವರ ಬಳಿಯಲ್ಲಿರುವಳು.

ಸುಮಿತ್ರ - ಅವಳನ್ನು ಚಿಕ್ಕಂದಿನಿಂದ ಸಾಕಿ ಸಲುಹಿ ಚಿಕ್ಕವಳನ್ನು ದೊಡ್ಡವಳನ್ನಾಗಿ ಮಾಡಿದ ನನಗಿಂತಲೂ ಆಪ್ತರು ಯಾರಿರುವರು ?

ಪರಂತಪ - ಇದಕ್ಕೆ ಉತ್ತರವನ್ನು ಅವಳೇ ಕೊಡಬೇಕು.

ಸುಮಿತ್ರ - (ಹುಬ್ಬುಗಳನ್ನು ಗಂಟುಹಾಕಿಕೊಂಡು, ಕಣ್ಣುಗಳಲ್ಲಿ ಕಿಡಿಗಳನ್ನು ಉದರಿಸುತ್ತ ಸರ್ವಾವಯವಗಳನ್ನೂ ನಡಗಿಸುತ) ಏನೆಂದೆ? ಈ ಪ್ರಶ್ನೆಗೆ ಅವಳೇ ಉತ್ತರಕೊಡಬೇಕೆ? ಅವಳಿಗೆ ದುರ್ಬೋಧನೆಯನ್ನು ಮಾಡಿ ಇಲ್ಲಿಂದ ರವಾನಿಸಿದ ನಿನಗೆ ಈ ಪ್ರಶ್ನೆಗೆ ಉತ್ತರ ಕೊಡುವುದು ಅಸಾಧ್ಯವೋ ? ಅವಳಿರುವ ಸ್ಥಳವನ್ನು ನೀನು ಬಲ್ಲೆ. ಕೂಡಲೇ ಅವಳನ್ನು ತೋರಿಸಿದರೆ ಸರಿ ; ಇಲ್ಲದಿದ್ದರೆ ನಿನ್ನ ದೌರಾತ್ಮ್ಯಕ್ಕೆ ತಕ್ಕ ಫಲವನ್ನು ಈಗಲೇ ಅನುಭವಿಸುವೆ.

ಪರಂತಪ - ಅವಳು ಇರತಕ್ಕೆ ಸ್ಥಳವನ್ನು ನಾನು ಬಲ್ಲೆನು. ಆದರೂ ಅದನ್ನು ನಾನು ತೋರಿಸುವುದಿಲ್ಲ. ನಿನ್ನ ಮನೆಗೆ ಬಂದಾರಭ್ಯ, ನಾನು ದೊಡ್ಡ ಮನಷ್ಯನಂತೆ ಇದ್ದೆನೇ ಹೊರತು, ದುರಾತ್ಮನಂತೆ ಎಂದಿಗೂ ನಡೆದು ಕೊಳ್ಳಲಿಲ್ಲ ; ದೌರಾತ್ಮ್ಯದ ಫಲವನ್ನು ನಾನು ಅನುಭವಿಸತಕ್ಕವನೂ ಅಲ್ಲ.

ಸುಮಿತ್ರ - ನೀನು ದುರಾತ್ಮನು ಮಾತ್ರವೇ ಅಲ್ಲ; ಕೃತಘ್ನುನು ಕೂಡ ಅಹುದು. ನೀನು ನನ್ನ ಮನೆಗೆ ಬಂದು, ನನ್ನಿಂದ ಸತ್ಕೃತನಾಗಿ,

೪೮
ಪರಂತಪ ವಿಜಯ

ಇಲ್ಲಿ ಗೃಹಚ್ಛಿದ್ರಗಳನ್ನುಂಟುಮಾಡಿ, ಕಾಮಮೋಹಿನಿಯನ್ನು ಮರುಳು ಮಾಡಿ, ಶಂಬರನ ವಿಷಯದಲ್ಲಿ ಆಕೆಗೆ ಜುಗುಪ್ಸೆಯನ್ನು ಹುಟ್ಟಿಸಿ, ಅವಳನ್ನು ಅಪಹರಣಮಾಡಿ, ಇಷ್ಟು ಜನ ಬಂಧುಮಿತ್ರರ ಮುಂದೆ ನನಗೆ ಅನಿರ್ವಚನೀಯವಾದ ಅಪಮಾನವನ್ನೂ ಕ್ಲೇಶವನ್ನೂ ಉಂಟುಮಾಡಿದ್ದೀಯೆ. ಶಂಬರನು ಇದರಿಂದ ಬುದ್ಧಿಭ್ರಂಶವನ್ನು ಹೊಂದಿ, ಉನ್ಮತ್ತಾವಸ್ಥೆಯಲ್ಲಿರುತ್ತಾನೆ. ನಾನು ಜೀವಿಸಿದ್ದರೂ ಸತ್ತವನಂತೆಯೇ ಇರುತ್ತೇನೆ. ಈ ಅನರ್ಥಗಳಿಗೆ ನೀನೇ ಕಾರಣಭೂತನು. ಕಾಮಮೋಹಿನಿಯನ್ನು ತೋರಿಸುತ್ತೀಯೋ? - ನಿನ್ನ ದೌರಾತ್ಮ್ಯಕ್ಕಾಗಿ ನಿನ್ನ ಪ್ರಾಣವನ್ನು ಬಲಿಯಾಗಿ ಒಪ್ಪಿಸುತ್ತಿಯೊ ?

ಪರಂತಪ- ಎಲೈ ಸುಮಿತ್ರನೇ ! ನೀನು ವೃದ್ದನು; ನನ್ನ ವಿಶ್ವಾಸಕ್ಕೆ ಪಾತ್ರನು ; ನನ್ನ ಮಿತ್ರನಾದ ಮಾಧವನಿಗೆ ಸಹೋದರನು. ಈ ಕಾರಣ ಗಳಿಂದ, ನೀನು ಕೋಪಪರವಶನಾಗಿ ಯಕ್ಷಾಯುಕ್ತ ವಿಚಾರಹೀನನಾಗಿ ಆಡತಕ್ಕ ದುರ್ಭಾಷೆಗಳನ್ನು ಮನ್ನಿಸುವೆನು. ನೀನು ನನ್ನಲ್ಲಿ ಆರೋಪಿಸಿರುವ ಅಪರಾಧಗಳ ಅಸತ್ಯಗಳು. ನಾನು ನಿನ್ನ ಮನೆಗೆ ಬಂದು ಸತ್ಕೃತನಾದದ್ದು ನಿಜ; ಆದರೆ, ಈ ಸತ್ಕಾರದ ಬಲದಿಂದ ನೀನು ಇಂಥ ಅಪರಾಧಗಳನ್ನು ಆರೋಪಿಸುವೆಯೆಂದು ತಿಳಿದಿದ್ದರೆ, ನಿನ್ನ ಮನೆಯಲ್ಲಿ ಗಂಗಾಮೃತಪಾನವನ್ನು ಕೂಡ ಮಾಡುತ್ತಿರಲಿಲ್ಲ. ಕಾಮಮೋಹಿನಿಗೆ ನಾನು ದುರ್ಬೋಧನೆಯನ್ನು ಮಾಡಿದವನೂ ಅಲ್ಲ; ನಿನ್ನ ಮನೆಯಲ್ಲಿ ಗೃಹಚ್ಛಿದ್ರವನ್ನುಂಟುಮಾಡಿದವನೂ ಅಲ್ಲ; ಆ ಚಂದ್ರಮುಖಿಯನ್ನು ಅಪಹರಿಸಿ ನಾನು ರವಾನಿಸಲೂ ಇಲ್ಲ. ಈ ಆರೋಪಣೆಗಳನ್ನು ನೀನು ವಾಪಸು ತೆಗೆದುಕೊಳ್ಳದಿದ್ದರೆ, ಈ ನಿಮಿಷದಲ್ಲಿ ನಿನಗೆ ತಕ್ಕ ಪ್ರತೀಕಾರವನ್ನು ಮಾಡುತ್ತೇನೆ.

ಸುಮಿತ್ರ- ಈ ಕಾಮಮೋಹಿನಿಯನ್ನು ಶಂಬರನಿಗೆ ಕೊಡಬೇಕೆಂದು ನಾನು ನಿಷ್ಕರ್ಷೆ ಮಾಡಿರುವುದು ನಿನಗೆ ತಿಳಿಯದೆ? ಈ ವಿವಾಹಕ್ಕೆ ವಿಘ್ನವನ್ನು ನೀನು ಮಾಡಿಲ್ಲವೆ? ಮಾಧವನ ಆಸ್ತಿಯು ನಿನಗೆ ಇರಲಿ; ಕಾಮಮೋಹಿನಿಯಾದರೂ ಶಂಬರನಿಗೆ ಇರಲೆಂದು ನಾನು ಸಂಕಲ್ಪಿಸಿದ್ದಾಗ, ನೀನು ಈ ವಿವಾಹಕ್ಕೆ ವಿಘ್ನವನ್ನು ಮಾಡಿಲ್ಲವೆ? ಇವಳು ಮನೆಯನ್ನು ಬಿಟ್ಟು ಹೋಗುವುದಕ್ಕೆ ನೀನೇ ಕಾರಣನು,

ಅಧ್ಯಾಯ ೫
೪೯

ಪರಂತಪ- ಕಾಮಮೋಹಿನಿಯು ಶಂಬರನಿಗೆ ವಿವಾಹವಾಗಕೂಡದೆಂದು ಅಭಿನಿವೇಶವು ನನಗಿಲ್ಲ ; ಇದಕ್ಕೆ ನಾನು ವಿಘ್ನವನ್ನೂ ಮಾಡಿಲ್ಲ. ಮಾಧವನ ಆಸ್ತಿಯ ವಿಷಯದಲ್ಲಿ ನಾನು ಅಪೇಕ್ಷೆಯುಳ್ಳವನಾಗಿದ್ದೆನೆ? ಸಂಪಾದಿಸುವುದಕ್ಕೆ ಶಕ್ತಿಯಿಲ್ಲದ ಹೇಡಿಗಳು ಅನ್ಯರ ಆಸ್ತಿಯನ್ನಪೇಕ್ಷಿಸಬೇಕು. ಮಾಧವನು-ಈ ಆಸ್ತಿಯನ್ನು ತೆಗೆದುಕೊಂಡು ಇದರಲ್ಲಿ ಕೆಲವು ವಿನಿಯೋಗಗಳನ್ನು ಮಾಡಬೇಕೆಂದು ಆಜ್ಞೆ ಮಾಡಿರುವುದರಿಂದಲೂ, ಈ ವಿಷಯದಲ್ಲಿ ನಿನ್ನನ್ನು ಕಾಣು ಎಂಬುದಾಗಿ ಹೇಳಿದುದರಿಂದಲೂ ನಾನು ನಿನ್ನ ಬಳಿಗೆ ಬಂದೆನು ನಿನ್ನ ತಾತ್ಪರ್ಯಕ್ಕನುಸಾರವಾಗಿ, ಮಾಧವನ ಉಯಿಲಿನ ವಿಚಾರವನ್ನು ಈ ವಿವಾಹವು ಪೂರಯಿಸುವವರೆಗೂ ಬಹಿರಂಗಪಡಿಸದೆ ಇದ್ದೆನೆ. ಹೀಗಿದ್ದಾಗ್ಯೂ, ಇಂಥ ದುರಾಲೋಚನೆಗಳನ್ನು ನೀನು ಮಾಡಿದ್ದೀಯೆ. ಇವುಗಳನ್ನು ವಾಪಸು ತೆಗೆದುಕೊ.

ಸುಮಿತ್ರ- ನೀನು ಕಳ್ಳ, ಸುಳ್ಳುಗಾರ, ಕೃತ್ರಿಮಿ; ಅಸಾಧಾರಣವಾದ ದೌರಾತ್ಮ್ಯವನ್ನು ಮಾಡಿ ನನ್ನನ್ನು ಹೆದರಿಸುತ್ತೀಯಾ ? ಶಂಬರನು, ನೀನು ಮಾಡಿರತಕ್ಕ ದೌರಾತ್ಮ್ಯದಿಂದ ರೌದ್ರಾವೇಶವುಳ್ಳವನಾಗಿದ್ದಾನೆ. ನಾನು ನಿರೋಧಿಸದಿದ್ದರೆ ಇಷ್ಟು ಹೊತ್ತಿಗೆ ನಿನ್ನನ್ನು ಸಂಹರಿಸುತ್ತಿದ್ದನು. ಈಗಲೂ ನಿನಗೆ ವಿಪತ್ತು ತಪ್ಪಲಿಲ್ಲ. ಕಾಮಮೋಹಿನಿಯನ್ನು ತೋರಿಸುವೆಯೋ ?- ಅಥವಾ ನಿನ್ನ ದೌರಾತ್ಮ್ಯಕ್ಕೆ ತಕ್ಕ ಫಲವನ್ನು ಪಡೆಯುತ್ತೀಯೋ ?
  

ಇದುವರೆಗೂ ಪ್ರಸನ್ನನಾಗಿ ಮಂದಹಾಸ ಪೂರ್ವಕವಾಗಿ ಮಾತನಾಡುತ್ತಿದ್ದ ಪರಂತಪನಿಗೆ, ಈ ಮಾತುಗಳನ್ನು ಕೇಳಿದ ಕೂಡಲೇ ಆಕ್ರೋಶ ಬಂದಿತು. ಆ ಕ್ಷಣದಲ್ಲಿಯೆ ಈತನ ಹುಬ್ಬುಗಳು ಗಂಟುಬಿದ್ದುವು; ಕಣ್ಣುಗಳು ಕೆಂಪಾದುವು. ನಿಗ್ರಹಿಸುವುದಕ್ಕಾಗದಷ್ಟು ಆಗ್ರಹವುಂಟಾಯಿತು. ಕೂಡಲೇ ಎದ್ದು -

ಪರಂತಪ- ಎಲೈ ಸುಮಿತ್ರನೇ! ಇದುವರೆಗೂ ನೀನು ಹಿರಿಯವನೆಂಬುದಾಗಿಯೂ, ಗೌರವಿಸುವುದಕ್ಕೆ ಪಾತ್ರನೆಂಬುದಾಗಿಯೂ ಭಾವಿಸಿ, ನಿನ್ನಲ್ಲಿ ವಿನೀತನಾಗಿದ್ದೆನು. ಈ ವಿನಯಕ್ಕೆ ನೀನು ಅರ್ಹನಲ್ಲವೆಂದು ಈಗ ಗೊತ್ತಾಗುತ್ತದೆ. ನೀನು ದೊಡ್ಡ ಮನುಷ್ಯನೆಂದು ಭಾವಿಸಿದ್ದೆನು, ದೊಡ್ಡ ಮನುಷ್ಯತನ ನಿನಗೂ ಬಹಳ ದೂರವೆಂದು ಈಗ ಗೊತ್ತಾಯಿತು. ನೀನು

೫೦
ಪರಂತಪ ವಿಜಯ

ಬೆದರಿಸುವುದನ್ನು ನೋಡಿದರೆ ನನಗೆ ಆಶ್ಚದ್ಯವಾಗುತ್ತದೆ. ನೀನೂ ನಿನ್ನ ಸಹೋದರನ ಪುತ್ರನೂ ಎಷ್ಟು ಮಟ್ಟಿನವರು ! ನಿಮ್ಮ ಯೋಗ್ಯತೆ ಯಂತ ಹುಡು ! ನೀವು ನನಗೆ ತೃಣಕ್ಕಿಂತಲೂ ಕಡೆಯಾಗಿದ್ದೀರಿ. ಇನ್ನು ವಿಕೇ ಪವಾಗಿ ದುಡುಕುಮಾತಾಡಿದ ಪಕ್ಷದಲ್ಲಿ, ನಿನ್ನ ದುರ್ವಿನಯಕ್ಕೆ ತಕ್ಕ ಫಲ ವನ್ನು ಅನುಭವಿಸುವಿರಿ. ಹುಷಾರಾಗಿರು. ನಿನ್ನ ಸ್ನೇಹದಮೇಲೆ ದೃಷ್ಟಿ ಯಿಟ್ಟು, ಮಾಧವನ ಉಯಿಲನ್ನು ಇದುವರೆಗೂ ನಾನು ಪ್ರಕಟಮಾಡಲಿಲ್ಲ. ನೀನು ಮಾಧವನ ಸಹೋದರನಾದುದರಿಂದ, ನಿನ್ನನ್ನು ಮಾಧವನಂತೆ ಭಾವಿ ಸಿದ್ದೆನು. ನನಗೆ ಮಾಡಿದ ಸತ್ಕಾರದ ವಿಷಯದಲ್ಲಿ ನೀನು ನಿನ್ನ ಪ್ರತಿಷ್ಠೆಯನ್ನು ಕೊಚ್ಚಿಕೊಂಡೆ. ಇದು ನಿನ್ನ ಯೋಗ್ಯತೆಯನ್ನು ಸ್ಪಷ್ಟಪಡಿಸುತ್ತದೆ. ಆದರೆ, ನೀನು ಮಾಡಿದ ಸತ್ಕಾರಕ್ಕೆ ನಾನು ಕೃತಜ್ಞನಾಗಿದ್ದೇನೆ. ಇದ ಕ್ಕಾಗಿ ನೀನು ನನ್ನಿಂದ ಯಾವಾಗ ಏನಾಗಬೇಕೆಂದು ಅಪೇಕ್ಷಿಸಿದಾಗ, ಅದನ್ನು ನಾನು ನನ್ನ ಶಕ್ತಿ,ಾರಿ ನಡೆಸಿ ನಿನ್ನ ಸಾಲವನ್ನು ತೀರಿಸುತ್ತೇನೆ. ನೀನು ಈಗ ಮಾಡಿರತಕ್ಕ ಅಸಮಾನವು ಬಹಳ ದುಸ್ಸಹವಾದುದು. ಇನ್ನು ಒಂದು ನಿಮಿಷವೂ ನಾನು ನಿನ್ನ ಮನೆಯಲ್ಲಿರತಕ್ಕವನಲ್ಲ ; ನಿನ್ನ ಸತ್ಕಾರವನ್ನು ಪರಿಗ್ರಹಿಸತಕ್ಕವನೂ ಅಲ್ಲ. ಮಾಧವನ ಉಯಿಲನ್ನು ಆಚರಣೆಗೆ ತರತಕ್ಕೆ ವಿಷಯದಲ್ಲಿ, ನೀನು ವಾಗ್ದಾನಮಾಡಿದಂತೆ ಸಹಾಯ ಮಾಡುವುದಾದರೆ ಮಾಡಬಹುದು ; ಇಲ್ಲ ದಪಕ್ಷದಲ್ಲಿ ಸರಾರದಮೂಲಕ ನಡೆಯತಕ್ಕ ಕೆಲಸಗಳನ್ನು ನಡೆಯಿಸುತ್ತೇನೆ. ಈ ಪಟ್ಟಣದ ಕಲ್ಪತರು ವೆಂಬ ಹೋಟಲಿನಲ್ಲಿ ನಾನು ಇರುತ್ತೇನೆ. ಆವಶ್ಯಕವಾದ ಪಕ್ಷದಲ್ಲಿ ನೀನು ನನ್ನನ್ನು ಅಲ್ಲಿ ನೋಡಬಹುದು.


  ಎಂಬುದಾಗಿ ಹೇಳಿ, ಕೂಡಲೆ ಆತನ ಸಾನ್ನಿಧ್ಯವನ್ನು ಬಿಟ್ಟು -ಪರಂತಪನು ಹೊರಟುಹೋದನು. ಸುಮಿತ್ರನು, ಈ ನಿಶ್ಚಿತಾರ್ಥ ಮಹೋತ್ಸವ ಕಾಲದಲ್ಲಿ ಕಾಮಮೋಹಿನಿ ಹೊರಟುಹೋದುದರಿಂದ ಉಂಟಾದ ದುಃಖವನ್ನೂ ಅಪಮಾನವನ್ನೂ ಸಹಿಸಲಾರದೆ, ಸ್ವಲ್ಪಹೊತ್ತು ಇತಿಕರ್ತವ್ಯತಾ ಮೂಢನಾಗಿ, ಅನಂತರದಲ್ಲಿ ತಾನು ಕಳುಹಿಸಿದ ಲಗ್ನಪತ್ರಿಕೆಗೆ ಅನುಸಾರವಾಗಿ ಬಂದಿದ್ದ ಅತಿಥಿಗಳನ್ನು ಭೋಜನ ತಾಂಬೂಲ ಪುಷ್ಪಹಾರಾದಿಗಳಿಂದ ಉಪಚರಿಸಿ, ಅನಂತರ ನಿಶ್ಚಿತಾರ್ಥ ವಿಷಯದಲ್ಲಿ ಸಂಭವಿಸಿದ ಅಸಂದರ್ಭಗ
ಅಧ್ಯಾಯ ೬
೫೧

ಳನ್ನು ಸೂಕ್ಷ್ಮವಾಗಿ ತಿಳಿಯಿಸಿದನು. ಎಲ್ಲರೂ ಅತ್ಯಂತ ವಿಸ್ಮಿತರಾಗಿ "ಅನನುರೂಪವಾದ ಘಟನವನ್ನು ಮಾಡಿಸಬೇಕೆಂದು ಮನುಷ್ಯನು ಯೋಚಿಸಿದರೆ, ದೈವವು ಈ ರೀತಿ ವಿಘ್ನು ಮಾಡುವುದು ಕೂಡ ಉಂಟೆಂಬುದು ಈಗ ವ್ಯಕ್ತವಾಯಿತು.” ಎಂದು ಹೇಳಿಕೊಂಡು ಹೊರಟುಹೋದರು.


ಅಧ್ಯಾಯ ೬.



  ಪರಂತಪನು ಕಲ್ಪತರುವೆಂಬ ಹೋಟಲಿಗೆ ಹೋಗಿ, ಅಲ್ಲಿನ ಯಜಮಾನನನ್ನು ಕರೆದು, ಅದರಲ್ಲಿ ತನಗೆ ಅನುಕೂಲವಾದ ಕೊಟಡಿಗಳಿಗೆ ಬಾಡಿಗೆಯನ್ನು ನಿಷ್ಕರ್ಷೆ ಮಾಡಿ, ಅಲ್ಲಿ ತನ್ನ ಸಾಮಾನುಗಳನ್ನು ಇಟ್ಟು ಬೀಗಗಳನ್ನು ಹಾಕಿಕೊಂಡು, ಆರ್ಯಕೀರ್ತಿಯ ಮನೆಯನ್ನು ಕುರಿತು ಹೊರಟನು. ಅಲ್ಲಿಗೆ ಹೋಗಿ ಬಾಗಿಲನ್ನು ತಟ್ಟಿದ ಕೂಡಲೆ, ಒಬ್ಬ ಹೆಂಗಸು ಬಂದು ಬಾಗಿಲನ್ನು ತೆಗೆದಳು. ಕಾಮಮೋಹಿನಿಯ ವೃತ್ತಾಂತವನ್ನು ವಿಚಾರಿಸಿದ ಕೂಡಲೆ, ಅವಳು ಇವನನ್ನು ಒಳಕ್ಕೆ ಕರೆದುಕೊಂಡು ಹೋದಳು. ಅಲ್ಲಿ ಆರ್ಯಕೀರ್ತಿಯೂ ಅವಳ ತಂದೆತಾಯಿಗಳೂ ಕಾಮಮೋಹಿನಿಯೂ ಮಾತನಾಡುತಿದ್ದರು. ಪರಂತಪನನ್ನು ನೋಡಿದಕೂಡಲೆ, ಕಾಮಮೋಹಿನಿಯು ಧಡಿಲ್ಲನೆ ಎದ್ದು, ಆತನಿಗೆ ವಂದನೆಯನ್ನು ಮಾಡಿ, ಆತನನ್ನು ಕರೆದುಕೊಂಡು ಹೋಗಿ, ತನ್ನ ಸ್ನೇಹಿತಳಿಗೂ ಆಕೆಯ ತಾಯಿತಂದೆಗಳಾದ ಸತ್ಯವತೀ ಸತ್ಯಶರ್ಮರುಗಳಿಗೂ ಭೇಟಿಮಾಡಿಸಿದಳು.

ಸತ್ಯಶರ್ಮ- ಅಯ್ಯಾ! ಪರಂತಪ! ಕಾಮಮೋನಿಯು ನನ್ನ ಮಗಳಿಗೆ ಪರಮಾಪ್ತಳು. ಆದುದರಿಂದಲೇ, ಈಕೆಯು ನನಗೆ ಮಗಳ ಸಮಾನಳು. ಈಕೆಯು, ತನ್ನ ಸಾಕುತಂದೆಯಿಂದ ಗೊತ್ತುಮಾಡಲ್ಪಟ್ಟ ದುರಾತ್ಮನಾದ ಶಂಬರನನ್ನು ಮದುವೆಮಾಡಿಕೊಳ್ಳುವುದಿಲ್ಲವೆಂದು ದೃಢಸಂಕಲ್ಪ ಮಾಡಿ, ಸುಮಿತ್ರನ ಪೋಷಣೆಯನ್ನು ಪರಿತ್ಯಜಿಸಿ ಇಲ್ಲಿಗೆ ಬಂದು ಇದ್ದಾಳೆ. ಈಕೆ ಮಾಡುತ್ತಿದ್ದ ನಿನ್ನ ಗುಣಕಥನಗಳನ್ನು ಕೇಳಿ ಸಂತುಷ್ಟರಾಗುತ್ತಿದ್ದೆವು.

೫೨
ಪರಂತಪ ವಿಜಯ

ಈಗ ಈ ಸರ್ವಗುಣಗಳಿಗೂ ನಿಧಿಯಾಗಿರುವ ನಿನ್ನನ್ನು ನೋಡಿ, ನಮಗೆ ಅತ್ಯಂತ ಸಂತೋಷವಾಯಿತು. ಈ ಕಾಮಮೋಹಿಸಿಯು ಅನಾಥಳು. ಇದುವರೆಗೂ ಸುಮಿತ್ರನು ಈಕೆಗೆ ಪಿತೃಪ್ರಾಯನಾಗಿದ್ದನು ದುಷ್ಟನಾದ ಶಂಬರನಿಗೆ ಈಕೆಯನ್ನು ಕೊಟ್ಟು ವಿವಾಹಮಾಡಬೇಕೆಂದು ಆತನು ಮಾಡಿದ ನಿಶ್ಚಿತಾರ್ಥ ಮಹೋತ್ಸವ ಪ್ರಯತ್ನ ಕಾಲದಲ್ಲಿ, ಮಾಧವನ ಮರಣ ಸಮಾಚಾರವು ವಿಘ್ನವಾಗಿ ಪರಿಣಮಿಸಿತು. ಇದಕ್ಕೂ ಲಕ್ಷ್ಯ ಮಾಡದೆ ಪುನಃ ಈ ಪ್ರಯತ್ನ ಮಾಡಲು, ಆತನಿಗೆ ಈ ಸ್ತ್ರೀರತ್ನದ ಅಧೀನತೆ ತಪ್ಪಿಹೋದುದು ಮಾತ್ರವಲ್ಲದೆ, ಆತನು ಜನಾಪವಾದಕ್ಕೂ ಗುರಿಯಾದನು.

ಪರಂತಪ- ಅಯ್ಯಾ! ಸತ್ಯಶರ್ಮನೆ! ನಿನ್ನ ಸೌಜನ್ಯಕ್ಕೆ ನಾನು ಕೃತಜ್ಞನಾಗಿರುವೆನು. ದೈವವ್ಯಾಪಾರವು ವಿಚಿತ್ರವಾದುದು. ಈಕೆಯನ್ನು ಶಂಬರನಿಗೆ ವಿವಾಹಮಾಡಬೇಕೆಂದು ಸುಮಿತ್ರನು ನಿಷ್ಕರ್ಷೆ ಮಾಡಿ, ಈ ಕಾರ್ಯಕ್ಕೆ ಸಹಾಯ ಮಾಡಬೇಕೆಂದು ನನಗೆ ಪ್ರೇರಣೆಮಾಡಿದನು. ಅದೇ ರೀತಿಯಲ್ಲಿ, ನಾನು ಸಹಾಯಮಾಡುವುದರಲ್ಲಿ ಉದ್ಯುಕ್ತನಾಗಿದ್ದೆನು. ಶಂಬರನ ದುಷ್ಟಸ್ವಭಾವಗಳನ್ನೂ ದುರ್ಗುಣಗಳನ್ನೂ ಈಕೆಯ ಮಾತುಗಳಿಂದ ನಾನು ಕೇಳಿದಾರಭ್ಯ, ಸುಮಿತ್ರನ ಪ್ರಯತ್ನಕ್ಕೆ ಸಹಾಯಮಾಡುವುದು ಧರ್ಮವಲ್ಲವೆಂದು ನನ್ನ ಮನಸ್ಸಿಗೆ ತೋರಿತು. ಸುಮಿತ್ರನು ಇವಳನ್ನು ನಾನೇ ಅಪಹರಿಸಿದ್ದೇನೆಂದು ನನ್ನ ಮೇಲೆ ಅನೇಕ ತಪ್ಪುಗಳನ್ನು ಆರೋಪಿಸಿದ್ದರಿಂದ, ನಾನು ಆತನ ಮನೆಯನ್ನು ಬಿಟ್ಟು ಕಲ್ಪತರುವಿನಲ್ಲಿ ವಾಸವಾಗಿರುವೆನು. ಈಗ ಈಕೆಯ ಅವಸ್ಥೆಯು ಬಹಳ ಶೋಚನೀಯವಾಗಿದೆ. ನೀನು ಈಕೆ ಯನ್ನು ಈಗ ಸನ್ನಿಹಿತವಾಗಿರುವ ವಿಪತ್ತು ಕಳೆಯುವವರೆಗೂ ಯಾರಿಗೂ ತಿಳಿಯದಂತೆ ಇಟ್ಟು ಕೊಂಡಿದ್ದರೆ, ದೇವರು ನಿನಗೆ ಒಳ್ಳೆಯದನ್ನು ಮಾಡುವನು; ನನ್ನ ಕೈಲಾದ ಉಪಕಾರವನ್ನು ನಾನೂ ಮಾಡುವೆನು.

ಸತ್ಯಶರ್ಮ- ಬಹುಕಾಲದಿಂದ ನಾವುಗಳು ಆಕೆಯ ಉಪಕಾರಗಳನ್ನು ಆಗಾಗ್ಗೆ ಹೊಂದುತ್ತಲಿದ್ದೇವೆ. ಈಕೆಯ ಈ ಕಷ್ಟ ಕಾಲದಲ್ಲಿ ನಮ್ಮ ಕೈಲಾದ ಉಪಕಾರವನ್ನು ಮಾಡುವುದು ನಮಗೆ ಕರ್ತವ್ಯವಾಗಿದೆ. ಈಕೆಯು, ರೂಪಯಯೌವನಗಳಲ್ಲಿಯೂ ವಿದ್ಯಾವೈದುಷ್ಯಗಳಲ್ಲಿಯ ಸೌಶೀಲ್ಯಾದಿ ಗುಣಗಳಲ್ಲಿಯೂ ಅಸಾಧಾರಣಳಾಗಿರುತ್ತಾಳೆ. ಇಂಥ ಅಮೂಲ್ಯ

ಅಧ್ಯಾಯ ೬
೫೩

ವಾದ ರತ್ನವನ್ನು ಬಡವರಾದ ನಮ್ಮ ಆಶ್ರಯದಲ್ಲಿಡುವುದಕ್ಕಿಂತ ಎಲ್ಲಾ ಭಾಗದಲ್ಲಿಯೂ ಅನುರೂಪನಾದ ನೀನು ಶೀಘ್ರದಲ್ಲಿ ವಿವಾಹಮಾಡಿ ಕೊಂಡು ಅನಾಥಳಾದ ಈಕೆಯನ್ನು ಸನಾಥಳ ನ್ನಾಗಿ ಮಾಡುವುದು ಸಂತೋಷಕರವೆಂದು ನಾನು ಕೋರುತ್ತೇನೆ.
ಪರಂತಪ - ನಿಮ್ಮ ಪ್ರಾರ್ಥನೆಗೆ ನಾನು ಪ್ರತಿ ಹೇಳುವುದಿಲ್ಲ; ಆದರೆ, ವಿವಾಹಕ್ಕೆ ಸರಿಯಾದ ಸಂದರ್ಭಗಳ ಕಾಲವೂ ಇನ್ನೂ ಒದಗಿಬಂದಿಲ್ಲ. ಇದಕ್ಕೆ ಬೇಕಾದ ಏರ್ಪಾಡುಗಳನ್ನು ಮಾಡಿಕೊಂಡು ಈ ಕಾರ್ಯವನ್ನು ನೆರವೇರಿಸಬೇಕಾಗಿದೆ.
ಸತ್ಯಶರ್ಮ--ಮಾಧವನ ಆಸ್ತಿಯು ನಿನಗೆ ಉಯಿಲು ಬರೆಯಲ್ಪಟ್ಟಿದೆ ಯೆಂದು ಕೇಳುತ್ತೇವೆ; ಇದು ವಾಸ್ತವವೆ ?
ಪರಂತಪ - ವಾಸ್ತವ; ಈತನ ಮನೆ ಮಠ ಮೊದಲಾದ ಆಸ್ತಿಗಳನೆಲ್ಲ ಸ್ವಾಧೀನಪಡಿಸಿಕೊಂಡು ಅನಂತರ ಈ ವಿವಾಹವನ್ನು ಮಾಡಿಕೊಳ್ಳಬೇಕೆಂದು ಸಂಕಲ್ಪಿಸಿದ್ದೇನೆ.
ಸತ್ಯಶರ್ಮ-ಮಾಧವನ ಆಸ್ತಿಯು ಅಪಾರವಾದುದು; ಆತನ ಮನೆಯ ಅರಮನೆಗೆ ಸಮಾನವಾದುದು. ಆದಾಗ್ಯೂ ಇದು ಅಪೇಕ್ಷಣೀಯವಾದು ದಲ್ಲ. ಈ ಆಸ್ತಿಯನ್ನು ಹೊಂದಿದವರು ಕ್ಷೇಮವಾಗಿಯೂ ಸೌಖ್ಯವಾಗಿಯ ಇರುವುದು ಕಷ್ಟ. ನನ್ನ ಅನುಭವದಲ್ಲಿ, ಈ ಆಸ್ತಿಯನ್ನು ಹೊಂದಿದವರೆಲ್ಲರೂ ಬಹು ಕಷ್ಟಪಟ್ಟಿದ್ದಾರೆ. ಅಂಥ ಕಷ್ಟಗಳೇನೂ ನಿನಗೆ ಬಾರದಿರಬೇಕೆಂದು ನಾನು ದೇವರನ್ನು ಪ್ರಾರ್ಥಿಸುತ್ತೇನೆ.
ಪರಂತಪ-ಮಾಧವನ ಗೃಹಾರಾಮಗಳ ವಿಷಯದಲ್ಲಿ ನಿನ್ನ ಹಾಗೆಯೇ ಅನೇಕರು ಅನೇಕ ವಿಧವಾಗಿ ಕಥೆಗಳನ್ನು ಹೇಳುವರು. ಇದನ್ನು ನಿನ್ನ ಮುಖದಿಂದ ವಿಶದವಾಗಿ ಕೇಳಬೇಕೆಂದು ನನಗೆ ಕುತೂಹಲವಿದೆ.
ಸತ್ಯಶರ್ಮ-ಹಾಗೆ ಕುತೂಹಲವಿದ್ದ ಪಕ್ಷದಲ್ಲಿ ಹೇಳುವೆನು, ಕೇಳು. ಈ ಮಾಧವನ ಅರಮನೆಯು, ಇಲ್ಲಿಂದ ಅರ್ಧ ಮೈಲಿ ದೂರದಲ್ಲಿ ಪರ್ವತಗಳಿಂದ ಸುತ್ತಲ್ಪಟ್ಟ ಒಂದು ಕಲ್ಲು ಕಟ್ಟಡವಾಗಿದೆ. ಇದು ಸಾವಿರಾರು ವರ್ಷಗಳ ಮುಂಚೆ ಒಬ್ಬ ಪ್ರಬಲನಾದ ಚೋರನು ಕಟ್ಟಿದ ಕಟ್ಟಡವೆಂದು ಹೇಳುತ್ತಾರೆ. ಈ ಕಟ್ಟಡದ ಸುತ್ತಲೂ ಅತ್ಯಂತ ಫಲವತ್ತಾದ ಹತ್ತು ಸಾ 

೫೪
ಪರಂತಪ ವಿಜಯ

ವಿರ ಎಕರೆ ಭೂಮಿಯಿರುವುದು. ಈ ಕಟ್ಟಡವು ಅನೇಕ ಉಪ್ಪರಿಗೆಗಳುಳ್ಳದ್ದಾಗಿದೆ. ಸುತ್ತಮುತ್ತಲೂ ಇರತಕ್ಕ ಬೆಟ್ಟಗಳನ್ನೂ, ಅಲ್ಲಿ ವಾಸವಾಗಿರತಕ್ಕ ದುಷ್ಟಮೃಗಗಳನ್ನೂ, ಮಧ್ಯೆ ಇರತಕ್ಕ ಈ ಕಟ್ಟಡವನ್ನೂ ನೋಡಿದರೆ, ನಗರವಾಸಿಗಳಾದ ಜನರಿಗೆ ಬಹಳ ಭಯವುಂಟಾಗುವುದು. ಈ ಅರಮನೆಯ ವಿಷಯದಲ್ಲಿ ಕೆಲವು ಕಥೆಗಳನ್ನು ಹೇಳುತ್ತಾರೆ. ಈ ಕಟ್ಟಡದಲ್ಲಿ ಅನೇಕ ನೆಲಮಾಳಿಗೆಗಳು ಇರುತ್ತವೆ. ಅಲ್ಲಿಗೆ ಹೋಗಿಬಂದವರು, ಈ ಕಟ್ಟಡದಲ್ಲಿ ಅನೇಕ ಪಿಶಾಚಿಗಳಿರುತ್ತವೆಯೆಂದೂ, ಮಧ್ಯಾಹ್ನ ವೇಳೆಯಲ್ಲಿಯೂ ಕೂಡ ಅತ್ಯಂತ ಭಯಂಕರವಾದ ಪಿಶಾಚಧ್ವನಿಗಳು ಅಲ್ಲಿ ಕೇಳಿಸುತ್ತವೆಯೆಂದೂ, ಅಲ್ಲಿರತಕ್ಕ ಅದೃಶ್ಯವಾದ ಭೂತಾದಿಗಳು ಒಂದು ಕಡೆಯಲ್ಲಿರತಕ್ಕೆ ಮನುಷ್ಯರನ್ನು ದೂರವಾದ ಮತ್ತೊಂದು ಕಡೆಗೆ ತೆಗೆದುಕೊಂಡು ಹೋಗುತ್ತವೆಯೆಂದೂ, ಈ ಭೂತಗಳು ಒಂದೊಂದು ವೇಳೆಯಲ್ಲಿ ಮನುಷ್ಯರ ದೃಷ್ಟಿಗೆ ಗೋಚರವಾಗುವುದುಂಟೆಂದೂ, ಇವುಗಳಲ್ಲಿ ಕೆಲವು ಮನು ಷ್ಯಮುಖವುಳ್ಳ ವ್ಯಾಘೃಗಳಾಗಿಯೂ ವ್ಯಾಘೃ ಮುಖವುಳ್ಳ ಮನುಷ್ಯರಾಗಿಯೂ ಹಾಗೆಯೆ ಕರಡಿ ಸಿಂಹ ಕೋತಿಗಳ ಮುಖವೂ ಶರೀರವೂ ಉಳ್ಳವಾಗಿಯೂ ಇರುವುವೆಂದೂ, ಇವುಗಳನ್ನು ನೋಡಿ ಅನೇಕರು ಭಯ ಪಟ್ಟು ಓಡಿ ಹೋಗಿ ಭೀತಿಯಿಂದ ಜ್ವರಾದಿಗಳು ಬಂದು ಸತ್ತಿರುವರೆಂದೂ ಹೇಳುವರು. ಇದು ವಾಸ್ತವವಾಗಿರಬಹುದು. ಪ್ರಥಮತಃ ಈ ಕಟ್ಟಡವನ್ನು ಕಟ್ಟಿಸಿದ ಚೋರನು ಬಹು ದುರಾತ್ಮನೆಂಬುದಾಗಿಯೂ, ಅನೇಕ ಲಕ್ಷ ಜನರನ್ನು ಹಿಡಿದು ಇಲ್ಲಿಗೆ ತಂದು ಅವರ ಸರ್ವಸ್ವವನ್ನೂ ಕಿತ್ತುಕೊಂಡು ಅವರಲ್ಲಿ ಅನೇಕರನ್ನು ಕೊಂದು ಸಮಿಾಪ ಭೂಮಿಗಳಲ್ಲಿಯೇ ಅವರನ್ನು ಹೂಳಿದನೆಂಬುದಾಗಿಯೂ, ಹೀಗೆ ಮೃತರಾದವರೆಲ್ಲರೂ ಪಿಶಾಚಗಳಾಗಿ ಆ ಕಟ್ಟಡದಲ್ಲಿ ವಾಸ ಮಾಡುತ್ತಾರೆಂಬುದಾಗಿಯೂ ಹೇಳುತ್ತಾರೆ. ಇದಲ್ಲದೆ, ಈ ಕಟ್ಟಡಕ್ಕೆ ರತ್ನಾಕರವೆಂಬ ಅಭಿಧಾನವೂ ಉಂಟಾಗಿದೆ. ಇದು ಅನ್ವರ್ಥ ನಾಮವೆಂದು ತೋರುತ್ತದೆ. ಈ ದುರ್ಗದ ಪ್ರಾಂತದಲ್ಲಿ ಚಿನ್ನದ ಗಣಿಗಳು ಅನೇಕವಾಗಿರುತ್ತವೆ; ಈ ಮನೆಯ ಕೆಳಗೆ ರತ್ನಗಳ ಗಣಿಗಳು ಇರುತ್ತವೆ. ಈ ಮನೆಯ ನೆಲಮಾಳಿಗೆಗಳಲ್ಲೊಂದರ ಕೆಳಗೆ, ವಿವಿಧ ರತ್ನ ಗಳನ್ನು ತೆಗೆದುಕೊಳ್ಳುವುದಕ್ಕೋಸ್ಕರ, ಒಂದು ಸುರಂಗವನ್ನು ಹೊಡೆದು, 
ಅಧ್ಯಾಯ ೬
೫೫

ವಜ್ರ ಮೊದಲಾದ ಅಮೂಲ್ಯವಾದ ರತ್ನದ ಹಲ್ಲೆಗಳನ್ನು ಇಲ್ಲಿಂದ ತೆಗೆಯುತ್ತಾರೆಂಬ ಕಿಂವದಂತಿಯೂ ಇದೆ. ಮಾಧವನು, ಆಗಾಗ್ಗೆ ಅಮೂಲ್ಯವಾದ ವಜ್ರಗಳನ್ನು ವಿಕ್ರಯಿಸುತ್ತಿದ್ದನು. ಇವುಗಳೆಲ್ಲ ಈ ಗಣಿಗಳಿಂದ ತೆಗೆಯಲ್ಪಟ್ಟುವೆಂದು ನಂಬ ಬಹುದಾಗಿದೆ. ಈ ಆಸ್ತಿಯು ನಿನಗೆ ಬಂದುದು, ಒಂದು ವಿಧದಲ್ಲಿ ಸಂತೋಷ ಜನಕವಾಗಿರುವುದು; ಇನ್ನೊಂದು ವಿಧದಲ್ಲಿ ನಮಗೆಲ್ಲ ಭಯಾವಹವಾಗಿದೆ.

ಪರಂತಪ- ಮನುಷ್ಯರ ಮುಖವುಳ್ಳ ಹುಲಿ ಕರಡಿಗಳನ್ನು ನೀನು ನೋಡಿದ್ದೀಯಾ ?

ಸತ್ಯಶರ್ಮ- ನಾನು ಒಂದಾವೃತ್ತಿ ಹೋಗಿದ್ದೆನು. ಇವುಗಳ ದರ್ಶನವಾದ ಕೂಡಲೇ ನನಗೆ ಪ್ರಜ್ಞೆ ತಪ್ಪಿತು. ದೈವಾಧೀನದಿಂದ, ನನಗೆ ಮಿತ್ರರಾದ ಕೆಲವರು ನನ್ನನ್ನು ಈ ದುರ್ಗದಿಂದ ಹೊರಗೆ ಕರೆತಂದು ಬಿಟ್ಟರು.

ಪರಂತಪ-ಈಚೆಗೆ ಯಾರಾದರೂ ಹೋಗಿ ಈ ಕಟ್ಟಡವನ್ನು ನೋಡಿ ಕೊಂಡು ಬಂದಿದ್ದಾರೆಯೋ ?

ಸತ್ಯಶರ್ಮ-ನನಗೆ ತಿಳಿಯದು.

ಪರಂತಪ-ಈ ಕಟ್ಟಡಕ್ಕೆ ಸುತ್ತಲೂ ಫಲವತ್ತಾದ ಭೂಮಿಯು ಬಹಳವಿದೆಯೆಂದು ಹೇಳಿದೆಯಲ್ಲ! ಇದು ಸಾಗುವಳಿಯಾಗಿದೆಯೊ ?

ಸತ್ಯಶರ್ಮ- ಈ ಕಟ್ಟಡಕ್ಕೆ ದೂರದಲ್ಲಿರುವ ಭೂಮಿಗಳನ್ನೆಲ್ಲ ಜನರು ಸಾಗುವಳಿ ಮಾಡುತ್ತಾರೆ. ಇದರ ಸಮೀಪದಲ್ಲಿ ಭೂಮಿಯು ಪಾಳುಬಿದ್ದಿದೆ.
  ಹೀಗೆ ಮಾತನಾಡುತ್ತಿರುವದರೊಳಗಾಗಿ, ಸತ್ಯವತಿಯೂ ಆರ್ಯಕೀರ್ತಿಯೂ ಕಾಮಮೋಹಿನಿಯೂ ಬೇರೆ ಕೊಠಡಿಗೆ ಹೋಗಿ, ವಿವಾಹಕ್ಕನುರೂಪವಾದ ಉಡುಗೆ ತೊಡುಗೆಗಳನ್ನು ಧರಿಸಿಕೊಂಡು, ಪುರೋಹಿತರನ್ನು ಕರೆಯಿಸಿ ಮುಹೂರ್ತವನ್ನು ನಿಶ್ಚಯಿಸಿಕೊಂಡು, ಮಂಗಳದ್ರವ್ಯವನ್ನು ಸಿದ್ಧಪಡಿಸಿಕೊಂಡು, ತಮ್ಮ ಕಾರ್ಯಗಳನ್ನು ಸತ್ಯಶರ್ಮನಿಗೆ ತಿಳಿಸಿದರು.

ಸತ್ಯಶರ್ಮ-ಅಯ್ಯಾ ! ಪರಂತಪ ! ಸತ್ಯವತಿ ಮೊದಲಾದವರು, ಈ ದಿನ ನಿನಗೆ ಕಾಮಮೋಹಿನಿಯನ್ನು ಕೊಟ್ಟು ವಿವಾಹ ಮಹೋತ್ಸವವನ್ನು ನೆರವೇರಿಸಬೇಕೆಂದು ಸಿದ್ಧರಾಗಿರುತ್ತಾರೆ. ಇದಕ್ಕೆ ಏನು ಹೇಳುತ್ತೀಯೆ ?

೫೬
ಪರಂತಪ ವಿಜಯ

ಪರಂತಪ- ಇದು ಅಸಾಧ್ಯ. ಈ ಪಟ್ಟಣದಲ್ಲಿ ನಾನು ಬಂಧು ಮಿತ್ರರೊಬ್ಬರೂ ಇಲ್ಲದೆ ಒಬ್ಬನೇ ಬಂದಿರುತ್ತೇನೆ. ನಿಲ್ಲುವುದಕ್ಕೆ ಮನೆಯಿಲ್ಲ; ಬೇಕಾದ ಸಾಮಗ್ರಿಗಳಿಲ್ಲ. ಶತ್ರುಗಳ ಮಧ್ಯದಲ್ಲಿರುತ್ತೇನೆ. ಹೀಗೆ ದುಡುಕುವುದು ಸರಿಯಲ್ಲ.

ಸತ್ಯಶರ್ಮ- ವಿವಾಹಕ್ಕೆ ಇವುಗಳಾವುವೂ ಆವಶ್ಯಕವಿಲ್ಲ. ಸಂಕಲ್ಪವೇ ಮುಖ್ಯವಾದುದು, ಕಾಮಮೋಹಿನಿಯು, ದೈವಪ್ರೇರಣೆಯಿಂದ ನಿನ್ನನ್ನು ವರಿಸಿರುವಳು. ನೀನು ವಿವಾಹ ಮಾಡಿಕೊಳ್ಳದಿದ್ದರೆ, ಅವಿವಾಹಿತಳೆಂದು ಇತರರು ಇವಳನ್ನು ಪರಿಗ್ರಹಿಸುವುದಕ್ಕೆ ಅವಕಾಶವಾಗುವುದು ; ಒಂದು ವೇಳೆ ಸುಮಿತ್ರ ಶಂಬರರು ಈಕೆಯನ್ನು ಬಲಾತ್ಕಾರದಿಂದ ಎಳೆದುಕೊಂಡು ಹೋಗಿ ಶಂಬರನಿಗೆ ವಿವಾಹಮಾಡಿಕೊಳ್ಳುವುದಕ್ಕೂ ಅವಕಾಶವಾಗುವುದು. ನಿನಗೆ ವಿವಾಹವಾಯಿತೆಂದು ತಿಳಿದರೆ, ಇವರು ಈ ರೀತಿಯಲ್ಲಿ ಮಾಡುವುದಕ್ಕೆ ಪ್ರತಿಬಂಧಕವಾಗುವುದು.

ಪರಂತಪ- ನೀನು ಹೇಳುವುದೆಲ್ಲ ಸತ್ಯವಾದಾಗ್ಗೂ, ಈಗ ವಿವಾಹಕ್ಕೆ ಸಮಯವಲ್ಲ. ಈ ಪ್ರಯತ್ನವನ್ನು ಮಾನಸಿಕ ಮಾಡಬೇಕು.
  ಹೀಗೆ ಹೇಳುತ್ತಿರುವಾಗ, ಸತ್ಯವತಿಯು ಅಲ್ಲಿಗೆ ಬಂದು “ಎಲೈ ಪರಂತಪನೆ! ನೀನು ವಿದ್ವಾಂಸನು ; ಪೂರ್ವಾಪರಜ್ಞನು ; ಊಹಾಪೋಹಗಳನ್ನು ತಿಳಿಯದವನಲ್ಲ. ನಮ್ಮ ಮಾತುಗಳನ್ನು ನೀನು ಈಗ ಉಲ್ಲಂಘಿಸಿದರೆ, ಕಾಮನೋಹಿನಿಯು ಶಂಬರನ ಪಾಲಾಗುವಳು; ಕೂಡಲೆ ಯಮನ ಪಾಲಾಗುವುದಕ್ಕೆ ಸಂದೇಹವಿಲ್ಲ. ಇದರಿಂದ ಉಂಟಾಗುವ ಅನರ್ಥಗಳಿಗೆ ನೀನೇ ಕಾರಣನಾಗುವೆ. ಸುಮಿತ್ರ ಶಂಬರರು, ಈಕೆಯನ್ನು ಪತ್ತೆಮಾಡುವುದಕ್ಕೆ ಜನರನ್ನು ಬಿಟ್ಟಿದ್ದಾರೆ. ನಾಳೆಯೋ-ನಾಡಿದ್ದೋ ಈಕೆಯನ್ನು ಪತ್ತೆಮಾಡುವರು. ವಿವಾಹವಾಗಿದ್ದ ಪಕ್ಷದಲ್ಲಿ ಭಯವೇನೂ ಇರುವುದಿಲ್ಲ ನಮ್ಮ ಮಾತುಗಳನ್ನು ಉಲ್ಲಂಘಿಸಬೇಡ. ಮಂಗಳ ಸ್ನಾನಕ್ಕೆ ಏಳು ” ಎಂದಳು.

ಅರ್ಯಕೀರ್ತಿ- ಎಲೈ ಪರಂತಪನೆ! ನನ್ನ ತಾಯಿ ಹೇಳತಕ್ಕುದನ್ನು ಕೇಳು. ಈ ಅನಾಥಳಾದ ನನ್ನ ಸಖಿಗೆ ನಾಥನಾಗು. ಈಗ ನೀನು ಉದಾಸೀನ ಮಾಡಿದರೆ, ನನ್ನ ಸಖಿಯು ಶಂಬರನ ಕೈವಶವಾಗುವುದನ್ನು

ಅಧ್ಯಾಯ ೬
೫೭

ಬಿಟ್ಟು ಯಮನ ಅತಿಥಿಯಾಗುವುದಕ್ಕೆ ಸಿದ್ಧಳಾಗುವಳು; ನನ್ನ ಪ್ರಿಯ ಸಖಿಯನ್ನು ನಾನು ಅನುಸರಿಸದೆ ಇರಲಾರೆನು; ನನ್ನ ಮಾತಾಪಿತೃಗಳು ನನ್ನನ್ನೇ ಅನುಸರಿಸುವುದಕ್ಕೆ ಸಂಶಯವಿಲ್ಲ. ಈ ಪಾತಕಗಳಿಗೆಲ್ಲ ನೀನೇ ಕಾರಣ ಭೂತನಾಗುವೆ. ಆದುದರಿಂದ ಸಾವಕಾಶಮಾಡಬೇಡ, ಮಂಗಳ ಸ್ನಾನಕ್ಕೆ ಏಳು ; ಹೋಗೋಣ-ಏಳು.

ಪರಂತಪ-(ಸ್ವಗತ) ಈ ಆರ್ಯಕೀರ್ತಿಯೂ ಇವಳ ತಂದೆ ತಾಯಿಗಳೂ ಹೇಳುವ ಮಾತುಗಳೆಲ್ಲ ಸತ್ಯವಾಗಿ ಕಾಣುತ್ತವೆ. ಸುಮಿತ್ರ ಶಂಬರರು, ಪ್ರಬಲರಾಗಿಯೂ ಧನಿಕರಾಗಿಯೂ ಇದ್ದಾರೆ. ಶಂಬರನು, ಸರ್ವತ್ರ ಯತ್ನದಿಂದಲೂ ಈಕೆಯನ್ನು ಮದುವೆ ಮಾಡಿಕೊಳ್ಳಬೇಕೆಂದು ಇದ್ದಾನೆ. ಈಕೆಯಾದರೋ, ಶಂಬರನಲ್ಲಿ ಸ್ವಲ್ಪವೂ ಅನುರಕ್ತಳಾಗಿಲ್ಲ. ಬಲಾತ್ಕಾರ ದಿಂದ ಆತನಿಗೆ ವಿವಾಹಮಾಡಲ್ಪಟ್ಟರೆ, ಇವಳು ದೇಹವನ್ನು ಬಿಡುವುದರಲ್ಲಿ ಸಂದೇಹ ತೋರುವುದಿಲ್ಲ. ಇಷ್ಟು ಅನರ್ಥಗಳಿಗೂ ನಾನೇ ಕಾರಣ ಭೂತನಾದೇನು. ನಾನು ಈ ಸುಮಿತ್ರನ ಮನೆಗೆ ಬಾರದೇ ಇದ್ದಿದ್ದರೆ, ಬಹುಶಃ ಇವಳು ಶಂಬರನಿಗೆ ಘಟನೆಯಾಗುತ್ತಿದ್ದಳೋ ಏನೋ ತಿಳಿಯದು. ಈಗ ಕೆಲಸ ಮೀರಿತು. ಈಕೆಯನ್ನು ಈಗ ವಿವಾಹ ಮಾಡಿಕೊಂಡರೆ, ನಾನು ಸುಮಿತ್ರ ಶಂಬರರಿಗೆ ವಿರೋಧಿಯಾಗುವುದಲ್ಲದೆ, ಜನರ ಅಪವಾದಕ್ಕೂ ಗುರಿಯಾಗುತ್ತೇನೆ. ವಿವಾಹಮಾಡಿಕೊಳ್ಳದಿದ್ದರೆ, ನನ್ನಲ್ಲಿ ಅನುರಕ್ತಳಾದ ಇವಳನ್ನು ಶಂಬರನು ಆಸುರವಿವಾಹದಿಂದ ಪರಿಗ್ರಹಿಸುವನು. ಕೂಡಲೆ ಇವಳು ದೇಹತ್ಯಾಗವನ್ನು ಮಾಡುವಳು. ಮಾಧವನು ಉತ್ಕ್ರಮಣ ಕಾಲದಲ್ಲಿ ಹೇಳಿದ ಮಾತು ನಿಜವಾಯಿತು. ಅಪ್ರಾರ್ಥಿತವಾಗಿ ತನ್ನನ್ನು ಧರ್ಮಪತ್ನಿಯಾಗಿ ಪರಿಗ್ರಹಿಸೆಂದು ಪ್ರಾರ್ಥಿಸತಕ್ಕ ಬಾಲೆಯನ್ನು ನಿರಾಕರಿಸುವುದು ಧರ್ಮವಾಗಿಲ್ಲ. ಇದಲ್ಲದೆ, ಈಕೆಯು ಅನಾಥಳು ; ನನ್ನನ್ನು ನಾಥನನ್ನಾಗಿಯೂ ಪತಿಯನ್ನಾಗಿಯೂ ವರಿಸಿ ಇದ್ದಾಳೆ. ಈ ಆರ್ಯಕೀರ್ತಿ ಮೊದಲಾದವರು, ಈ ಪ್ರಾರ್ಥನೆಯನ್ನು ವಿಶೇಷವಾಗಿ ಅನುಮೋದಿಸುತಲಿದ್ದಾರೆ. ಇವಳನ್ನು ವಿವಾಹಮಾಡಿಕೊಳ್ಳುವುದು, ಅನೇಕ ಅಪಾಯಗಳಿಗೆ ಆಸ್ಪದವಾಗುತ್ತದೆ. ಆದರೂ ಚಿಂತೆಯಿಲ್ಲ. ಹಿರಿಯರಾದ ಸತ್ಯವತೀ ಸತ್ಯಶರ್ಮರ ಪ್ರಾರ್ಥನೆಯನ್ನು ಉಲ್ಲಂಘಿಸುವದು ಧರ್ಮವಲ್ಲ. ಬಂದ ಕಷ್ಟ

೫೮
ಪರಂತಪ ವಿಜಯ

ಗಳನ್ನೆಲ್ಲ ಅನುಭವಿಸಲೇಬೇಕು. ನಾನು ಸತ್ಯವಂತನಾಗಿದ್ದರೆ, ಈಶ್ವರನೇ ನನ್ನನ್ನು ರಕ್ಷಿಸಲಿ. ಆತನ ಮೇಲೆ ಭಾರವನ್ನು ಹಾಕಿ, ಇವರ ಇಷ್ಟಕ್ಕನುಸಾರವಾಗಿ ನಡೆದುಕೊಳ್ಳುತ್ತೇನೆ. ಎಂದು ಮನಸ್ಸಿನಲ್ಲಿ ನಿಶ್ಚಯಿಸಿಕೊಂಡು, ಸತ್ಯಶರ್ಮಾದಿಗಳನ್ನು ಕುರಿತು “ಎಲೈ ಸತ್ಯವತೀ ಸತ್ಯಶರ್ಮರೆ ! ಎಲೈ ಆರ್ಯಕೀರ್ತಿಯೇ ! ನಿಮ್ಮ ಪ್ರಾರ್ಥನೆಗೆ ಪ್ರತಿ ಹೇಳುವುದಕ್ಕೆ ನನಗೆ ಮನಸ್ಸು ಬರುವುದಿಲ್ಲ. ಈ ವಿವಾಹದಿಂದ ಉಂಟಾಗುವ ಅನರ್ಥಗಳನ್ನು ಈಶ್ವರನು ತಪ್ಪಿಸಬೇಕು. ನಿಮ್ಮ ಇಷ್ಟ ಪ್ರಕಾರ ನಡೆಯುವುದಕ್ಕೆ ಸಿದ್ಧನಾಗಿದ್ದೇನೆ' ಎಂದು ಹೇಳಿದನು.
ಸತ್ಯವತೀ, ಸತ್ಯಶರ್ಮ, ಅರ್ಯಕೀರ್ತಿಗಳು – ಧರ್ಮಪ್ರವರ್ತಕರಾದವರಿಗೆ ಬರತಕ್ಕ ಅನರ್ಥಗಳನ್ನು ತಪ್ಪಿಸುವುದಕ್ಕೆ ಈಶ್ವರನು ಬದ್ಧ ಸಂಕಲ್ಪನಾಗಿರುವನು. ಈ ವಿಷಯದಲ್ಲಿ ವಿಚಾರಪಡಬೇಡ, ” ಎಂದು ಹೇಳಿ, ಕಾಮಮೋಹಿನೀ ಪರಂತಪರಿಗೆ ಮಂಗಳ ಸ್ನಾನವನ್ನು ಮಾಡಿಸಿ, ಅನೇಕ ಬ್ರಾಹ್ಮಣ ಸುಮಂಗಲಿಯರನ್ನು ಕರೆದುಕೊಂಡು, ಮಂಗಳ ವಾದ್ಯ ಪುರಸ್ಸರವಾಗಿ ಸಮೀಪದಲ್ಲಿರುವ ಈಶ್ವರ ದೇವಸ್ಥಾನಕ್ಕೆ ಹೋಗಿ, ವಿವಾಹ ಮಹೋತ್ಸವವನ್ನು ನೆರವೇರಿಸಿದರು. ವಧೂವರರಿಬ್ಬರೂ, ಬ್ರಾಹ್ಮಣ ಸುಮಂಗಲಿಯರ ಇದುರಿಗೆ, ಅಗ್ನಿಸಾಕ್ಷಿಯಾಗಿ, ದೇವರ ಸಾನ್ನಿಧ್ಯದಲ್ಲಿ, ಧರ್ಮಾರ್ಥಕಾಮ ವಿಚಾರಗಳಲ್ಲಿ ವ್ಯಭಿಚರಿಸಿ ನಡೆಯುವುದಿಲ್ಲವೆಂದು ಪ್ರತಿಜ್ಞೆ ಮಾಡಿದರು. ಕಾಮಮೋಹಿನಿಗೂ ಪರಂತಪನಿಗೂ ವಿವಾಹ ಮಹೋತ್ಸವವು ಈ ರೀತಿಯಲ್ಲಿ ಪೂರಯಿಸಿತು.


ಪರಿಚ್ಛೇದ ೭.


ಪರಂತಪನು ಸುಮಿತ್ರನ ಮನೆಯಿಂದ ಹೊರಟು ಹೋದಕೂಡಲೆ, ಸುಮಿತ್ರನು ಸ್ವಲ್ಪಹೊತ್ತು ಮುಂದೆ ಮಾಡತಕ್ಕ ಕಾರ್ಯವನ್ನು ಯೋಚಿಸಿ, ಕಾಮಮೋಹಿನಿಯ ಪತ್ತೆಗಾಗಿ ಇನ್ನೂ ಕೆಲವು ಜನಗಳನ್ನು ಕಳುಹಿಸಿ, ಅಲ್ಲಿಂದ ಶಂಬರನ ಬಳಿಗೆ ಹೋದನು. ಶಂಬರನು ಅತ್ಯಂತ ವ್ಯಾಕುಲತೆಯಿಂದ ಸಂತಪಿಸುತ್ತಿದ್ದನು. 
ಅಧ್ಯಾಯ ೭
೫೯

ಸುಮಿತ್ರ-ಎಲೈ ಶಂಬರನೆ ! ನಿನ್ನ ಸಂತಾಪವನ್ನು ನೋಡಿದರೆ ನನಗೆ ಬಹಳ ವ್ಯಸನವಾಗುತ್ತದೆ. ಕಾಮಮೋಹಿನಿಯು ಮೊದಲಿಂದಲೂ ನಿನ್ನಲ್ಲಿ ಅನುರಕ್ತಳಾಗಿರಲಿಲ್ಲ. ಅವಳಲ್ಲಿ ನಿನಗಿದ್ದ ಅಭಿಮಾನವನ್ನು ನೋಡಿ, ನಿಮ್ಮಿಬ್ಬರಿಗೂ ಘಟನೆ ಮಾಡಬೇಕೆಂದು ನಾನು ಬಹಳ ಪ್ರಯತ್ನ ಪಟ್ಟೆನು. ಇದೆಲ್ಲ ನಿಪ್ಪಲವಾಯಿತು.
ಶಂಬರ- ಎಂದಿಗೂ ನಿಪ್ಪಲವಾಗುವುದಿಲ್ಲ. ಪರಂತಪನನ್ನು ನೋಡಿ ಅವಳು ನನ್ನನ್ನು ತಿರಸ್ಕಾರ ಮಾಡಿದ್ದಾಳೆ. ಇವನನ್ನು ಹಿಡಿದು ಕಾರಾಗೃಹದಲ್ಲಾದರೂ ಇಡುತ್ತೇನೆ; ಅಥವಾ ಯಮಪುರಿಗಾದರೂ ಕಳುಹಿಸುತ್ತೇನೆ. ಕೂಡಲೇ ಅವಳು ವಿನೀತಳಾಗುವಳು.
ಸುಮಿತ್ರ- ಇದು ಅಸಾಧ್ಯ. ಪರಂತಪನು ಸಾಮಾನ್ಯನಲ್ಲ. ಇವನ ಬುದ್ದಿಯೂ, ಶಕ್ತಿಯೂ, ಊಹಾಪೋಹಜ್ಞಾನವೂ ಅಸಾಧಾರಣವಾಗಿರುವುವು. ಇವನ ಗುಣಾತಿಶಯಗಳ ಹಾಗೆಯೇ, ಇವನನ್ನು ನೋಡಿದವರೂ, ಇವನ ಸಂಗಡ ಸಂಭಾಷಣೆಯನ್ನು ಮಾಡಿದವರೂ ಸಹ, ಇವನಲ್ಲಿ ಅತ್ಯಂತ ವಿಶ್ವಾಸಪಡುತ್ತಾರೆ. ಇವನನ್ನು ಪ್ರತಿಭಟಿಸಿದರೆ, ನಮ್ಮ ಪರಿಣಾಮ ಹೇಗಾಗುವುದೋ ಕಾಣೆನು.
ಶಂಬರ- ಯಾರಿಗೂ ತಿಳಿಯದಂತೆ ಇವನನ್ನು ಹಿಡಿದು ಕಾರಾಗೃಹದಲ್ಲಿಡುವೆನು. ಮರಣಾವಧಿ ಬಿಡುವುದಿಲ್ಲ.
ಸುಮಿತ್ರ- ನೀನು ಲೋಕ ವ್ಯವಹಾರಜ್ಞನಲ್ಲ. ಪ್ರಪಂಚದಲ್ಲಿ ನಾವು ಒಂದು ವಿಧವಾಗಿ ಯೋಚಿಸುತ್ತಿದ್ದರೆ, ಅದು ನೆರವೇರದಂತೆ ಮಾಡುವುದಕ್ಕೆ ದೈವವು ಯೋಚಿಸುತ್ತಿರುವುದು. ಕೊನೆಗೆ “ಯತೋಧರ್ಮಸ್ತತೋಜಯಃ" ಎಂಬಂತೆ, ಧರ್ಮವಿದ್ದ ಕಡೆ ಜಯವುಂಟಾಗುವುದು ನಾವು ಮಾಡಿದ ಅನೇಕ ಅಧರ್ಮಗಳ ಫಲವನ್ನು ಈ ಜನ್ಮದಲ್ಲಿ ಅನುಭವಿಸುತ್ತಿರುವೆವು, ಈರೀತಿಯನ್ನು ತಿಳಿದೂ, ಪುನಃ ಅಧರ್ಮದಲ್ಲಿ ಪ್ರವರ್ತಿಸಬಹುದೆ?

ಶಂಬರ- ಈ ವೈದಿಕೋಕ್ತಿಗಳಿಂದ ಪ್ರಯೋಜನವಿಲ್ಲ. ಕಾರ್ಯ ಸಾಧನೆಗಾಗಿ ಪ್ರವರ್ತಿಸತಕ್ಕವರು ವೈದಿಕೋಕ್ತಿಗಳಿಗೆ ಕಿವಿಗೊಟ್ಟರೆ, ಅವರಿಗೆ ಯಾವ ಕಾರ್ಯವೂ ಕೈಗೂಡುವುದಿಲ್ಲ. ನಿನ್ನ ಧರ್ಮೋಪದೇಶಗಳು, ಪುರಾಣ
೬೦
ಪರಂತಪ ವಿಜಯ

ಕಾಲಕ್ಕೆ ತಕ್ಕುವುಗಳಾಗಿರುವುವು. ನನಗೆ ತೋರಿದ ರೀತಿಯಲ್ಲಿ ನಾನು ನಡೆಸುತೇನೆ. ಈ ವಿಷಯದಲ್ಲಿ ನಿನ್ನ ಧರ್ಮೋಪದೇಶಗಳನ್ನು ಕೇಳತಕ್ಕವನಲ್ಲ.
ಸುಮಿತ್ರ- ಯಾವ ಕೆಲಸವನ್ನು ಮಾಡಬೇಕಾದರೂ, ಪೂರ್ವಭಾವಿಯಾಗಿಯೇ ಪರಿಣಾಮವನ್ನು ಯೋಚಿಸಬೇಕು. ಹಾಗಿಲ್ಲದಿದ್ದರೆ, ಅನರ್ಥ ವುಂಟಾಗುವುದೇ ನಿಜ. ಅದು ಹಾಗಿರಲಿ ; ಈ ಪರಂತಪನು ಸಾಮಾನ್ಯನಲ್ಲ. ದುಷ್ಟರನ್ನು ಹೇಗಾದರೂ ಅಡಗಿಸುವನು. ಮಾಧವನು, ಈತನಲ್ಲಿ ಪುತ್ರವಾತ್ಸಲ್ಯದಿಂದ ತನ್ನ ಸರ್ವಸ್ವವನ್ನೂ ಈತನಿಗೇ ಕೊಟ್ಟರುವನು. ಅವನು ಬರೆದ ಉಯಿಲಿನಂತೆ, ಈ ಆಸ್ತಿಯನ್ನೆಲ್ಲ ಸ್ವಾಧೀನ ಪಡಿಸಿಕೊಳ್ಳುವುದಕ್ಕಾಗಿ ಈತನು ಇಲ್ಲಿಗೆ ಬಂದಿರುವನು. ನಿನಗೂ ಕಾಮಮೋಹಿನಿಗೂ ವಿವಾಹವಾದ ಮೇಲೆ ಈ ಸಂಗತಿಯನ್ನು ತಿಳಿಯಿಸಬೇಕೆಂದು ನಿಶ್ಚಯಿಸಿದ್ದೆನು; ಇದಕ್ಕೆ ಅವನೂ ಒಪ್ಪಿದ್ದನು. ಇದಲ್ಲದೆ, ಇನ್ನೊಂದು ರಹಸ್ಯವುಂಟು. ಇವನು ಕೈಪೆಟ್ಟಿಗೆಯನ್ನು ತೆಗೆದಾಗ, ದೊಡ್ಡ ಮೊಹರುಳ್ಳ ಒಂದು ಕಾಗದವು ಕಾಣಬಂದಿತು. ಅದನ್ನು ಮಾತ್ರ ಮರೆಸಿ, ಉಯಿಲು ಮೊದಲಾದುವುಗಳನ್ನೆಲ್ಲ ತೋರಿಸಿದನು. ಆದಿನ ರಾತ್ರಿಯೇ ಈತನು ನಿದ್ದೆ ಮಾಡುವ ಕಾಲದಲ್ಲಿ ಬೇರೆ ಬೀಗದ ಕೈಯನ್ನು ತಂದು ಆ ಕಾಗದವನ್ನು ಪರೀಕ್ಷಿಸಿದೆನು. ಇವನು ದುಷ್ಟನಿಗ್ರಹದ ವಿಷಯದಲ್ಲಿ ಸರಕಾರದಿಂದ ಸರ್ವಾಧಿಕಾರವನ್ನು ಹೊಂದಿರುವನೆಂದು ಆ ಕಾಗದದಿಂದ ಗೊತ್ತಾಯಿತು. ಇಂಥವನ ಮೇಲೆ ಪ್ರತಿಭಟಿಸುವುದು ಉಚಿತವಲ್ಲ.
  ಈ ಮಾತನ್ನು ಕೇಳಿದಕೂಡಲೆ, ಶಂಬರನು ಚಿಂತಾಪರವಶನಾಗಿ ಮೂರ್ಛೆಬಿದ್ದು, ಶೈತ್ಯೋಪಚಾರಗಳಿಂದ ಪ್ರಜ್ಞೆಯನ್ನು ಹೊಂದಿ, ಸುಮಿತ್ರ ತನನ್ನು ಕುರಿತು 'ಅಯ್ಯೋ ! ಸರ್ವಪ್ರಕಾರದಿಂದಲೂ ನಾನು ಕೆಟ್ಟೆನು. ಮಾಧವನಿಗೆ ಹಕ್ಕುದಾರನೆಂದೂ, ಅವನ ಐಶ್ವರ್ಯವೆಲ್ಲ ನನ್ನದೆಂದೂ ತಿಳಿದಿದ್ದೆನು. ಅದೆಲ್ಲವೂ ಪರಾಧೀನವಾಯಿತು. ಕಾಮಮೋಹಿನಿಯಾದರೂ ದೊರಕಬಹುದೆಂದಿದ್ದನು. ಇವಳೂ ಪರಾಧೀನಳಾದಳು. ನಾನು ಬಹು ನಿರ್ಭಾಗ್ಯನು. ಇನ್ನು ನಾನು ಜೀವಿಸಿರಬಾರದು. ಈ ಕ್ಷಣವೇ ಪರಂತಪನನ್ನು ಯಾವ ವಿಧದಿಂದಲಾದರೂ ಕೊಂದು, ಮಾಧವನ ಐಶ್ವರ್ಯವನ್ನೂ ಕಾಮಮೋಹಿನಿಯನ್ನೂ ಹೊಂದುವ ಪ್ರಯತ್ನವನ್ನು ಮಾಡುವೆನು ;

ಅಧ್ಯಾಯ ೭
೬೧

ಅಥವಾ, ಈ ಪ್ರಯತ್ನದಲ್ಲಿಯೇ ಪ್ರಾಣವನ್ನಾದರೂ ಬಿಡುವೆನು. ' ಎಂದು ಹೇಳಿದನು.
ಸುಮಿತ್ರ- ಅಯ್ಯಾ! ಪುತ್ರನೇ! ದುಡುಕಬೇಡ; ದುಡುಕಬೇಡ. ಮಾಧವನ ಆಸ್ತಿಯೂ ಹೋಗಲಿ; ಕಾಮಮೋಹಿನಿಯೂ ಹೋಗಲಿ. ನನಗೆ ಗಂಡುಮಕ್ಕಳಿಲ್ಲ. ನನ್ನ ಸ್ವತ್ತಿಗೆಲ್ಲ ನೀನೇ ಬಾಧ್ಯನಾಗಿರು. ನನ್ನ ಸೋದರ ಸೊಸೆಯಾದ ಕಲಾವತಿಗೆ ನಿನ್ನಲ್ಲಿ ಅನುರಾಗವುಂಟಾಗುವಂತೆ ಮಾಡಿರುತ್ತೇನೆ. ನನ್ನ ಆಸ್ತಿಯನ್ನೆಲ್ಲ ಅವಳ ಹೆಸರಿಗೆ ಉಯಿಲು ಬರೆದಿರುತ್ತೇನೆ. ಅವಳನ್ನು ಪರಿಗ್ರಹಿಸಿ, ನನ್ನ ಆಸ್ತಿಯನ್ನೆಲ್ಲ ಅನುಭವಿಸಿ ಕೊಂಡು ಸುಖವಾಗಿ ಬಾಳು. ಪ್ರಬಲರಲ್ಲಿ ವಿರೋಧವನ್ನು ಬೆಳಸಬೇಡ.
ಶಂಬರ- ನನ್ನ ಭಾಗಕ್ಕೆ, ನನ್ನ ತಂದೆಯ ಸಹೋದರರಾದ ನೀವಿಬ್ಬರೂ ಮಿತ್ರರಾಗಿ ಪರಿಣಮಿಸಲಿಲ್ಲ. ಮಾಧವನು, ತನ್ನ ಅಸ್ತಿಯನ್ನೆಲ್ಲ ಅಜ್ಞಾತ ಕುಲಗೋತ್ರನಾದ ಪರಂತಪನಿಗೆ ಒಪ್ಪಿಸಿದನು. ನೀನು ನಿನ್ನ ಆಸ್ತಿಯನ್ನೆಲ್ಲ ಕಲಾವತಿಗೆ ಕೊಟ್ಟೆ. ನನ್ನ ತಂದೆಯಾದರೂ, ನನಗೆ ಅನ್ನವಸ್ತ್ರಗಳಿಗೂ ಗತಿಯಿಲ್ಲದಂತೆ, ತನ್ನ ಸರ್ವಸ್ವವನ್ನೂ ದ್ಯೂತ ವ್ಯಭಿಚಾರಗಳಲ್ಲಿ ಕಳೆದು, ಅಕಾಲ ಮರಣವನ್ನು ಹೊಂದಿ, ನನ್ನ ಭಾಗಕ್ಕೆ ಶತ್ರುವಾಗಿ ಪರಿಣಮಿಸಿದನು. ನಿನ್ನ ವಂಶದಲ್ಲಿ ಹುಟ್ಟಿದ ನನಗೆ ಈರೀತಿ ನಿರ್ಗತಿಯಾಯಿತು. ಕಲಾವತಿಯಲ್ಲಿ ನನಗೆ ಅನುರಾಗವಿಲ್ಲ. ನಿನ್ನ ಆಸ್ತಿಯೂ ನನಗೆ ಅವಶ್ಯಕವಿಲ್ಲ. ನನ್ನ ಮನಸ್ಸಿಗೆ ತೋರಿದಂತೆ ನಾನು ನಡೆದುಕೊಳ್ಳುವೆನು.

ಸುಮಿತ್ರ- ಎಲೈ ಶಂಬರನೆ! ದುಡುಕಬೇಡ; ದುಡುಕಬೇಡ. ನಿಧಾನಿಸು. ಮಾಧವನು ಮಾಡಿದ ಕೆಲಸವು ಪೂರಯಿಸಿಹೋಯಿತು. ಅವನ ಆಸ್ತಿಯು ಪುನಃ ನಿನಗೆ ಸೇರಲಾರದು. ಆದರೆ, ನಾನು ನನ್ನ ಆಸ್ತಿ ನನ್ನ ಜೀವನಾನಂತರ ಕಲಾವತಿಗೆ ಸೇರತಕ್ಕುದೆಂದು ಉಯಿಲು ಬರೆದಿರುತ್ತೇನೆ. ಈ ಸಂಗತಿ ಅವಳಿಗೆ ಚೆನ್ನಾಗಿ ತಿಳಿಯದು. ಅವಳನ್ನು ನೀನು ಮದುವೆ ಮಾಡಿಕೊಂಡಪಕ್ಷದಲ್ಲಿ, ಈ ವುಯಿಲನ್ನು ರದ್ದು ಮಾಡಿ, ನಿನ್ನನ್ನೇ ನನ್ನ ಆಸ್ತಿಗೆಲ್ಲ ಬಾಧ್ಯನನ್ನಾಗಿ ಮಾಡುತ್ತೇನೆ. ಚಿಂತಿಸಬೇಡ; ಚೆನ್ನಾಗಿ ಪರ್ಯಾಲೋಚಿಸು.
೬೨
ಪರಂತಪ ವಿಜಯ


ಶಂಬರ- ನಾನು, ಪರಂತಪನಿಗೆ ಪ್ರತೀಕಾರವನ್ನು ಮಾಡದೆ ಎಂದಿಗೂ ಬಿಡತಕ್ಕವನಲ್ಲ. ನಾಳೆಯೇ ಅವನನ್ನು ಕಲಹಕ್ಕಾಗಿ ಕರೆದು, ಅವನೊಡನೆ ಯುದ್ಧವನ್ನು ಮಾಡುವೆನು. (ಪೂರ್ವ ಕಾಲದಲ್ಲಿ, ವಾದಿ ಪ್ರತಿವಾದಿಗಳಲ್ಲಿ ನ್ಯಾಯವು ಯಾರ ಪಕ್ಷವಾಗಿದೆಯೆಂಬುದನ್ನು ಪರೀಕ್ಷಿಸುವುದಕ್ಕಾಗಿ, ಇಬ್ಬರು ಪಂಚಾಯಿತರ ಮುಂದೆ ದ್ವಂದ್ವ ಯುದ್ಧವನ್ನು ಮಾಡಿ ಅದರಲ್ಲಿ ಗೆದ್ದವನ ಪಕ್ಷವು ನ್ಯಾಯವೆಂದೂ ಸೋತವನದು ಅಧರ್ಮವೆಂದೂ ನಿರ್ಣಸುತ್ತಿದ್ದರು)
ಸುಮಿತ್ರ- ಇದು ಅಪಾಯಕರವಾದುದು. ನೀನು ಬಲಿಷ್ಟನಾದರೂ ಅವನನ್ನು ಸೋಲಿಸಲಾರೆ. ಹಾಗೂ ಆಗಲಿ; ನೀನು ಯಾವ ರೀತಿಯಲ್ಲಿ ಅವನನ್ನು ಸೋಲಿಸಬೇಕೆಂದು ಯೋಚಿಸಿರುತ್ತೀಯೆ?
ಶಂಬರ-ಪಿಸ್ತೂಲಿನಿಂದ ಸುಟ್ಟು ಅವನನ್ನು ಕೊಂದುಬಿಡುವೆನು.
ಸುಮಿತ್ರ- ಪಿಸ್ತೂಲನ್ನು ಉಪಯೋಗಿಸುವುದರಲ್ಲಿ ಅವನಿಗಿಂತ ನೀನು ಸಮರ್ಥನೋ ?
ಶಂಬರ - ಅವನು ಮಾತ್ರವೇ ಅಲ್ಲ. ಈ ವಿಷಯದಲ್ಲಿ ಯಾರೂ ನನಗೆ ಎದುರಿಲ್ಲ.
ಸುಮಿತ್ರ- ಪರಂತಪನು ಸರಕಾರದಿಂದ ಹೊಂದಿರುವ ಸನ್ನದಿನ ವಿಷಯವನ್ನು ನಾನು ಮೊದಲೇ ತಿಳಿಸಿರುತ್ತೇನಷ್ಟೆ ! ನಾನಾವಿಧವಾದ ಆಯುಧಗಳ ಉಪಯೋಗದಲ್ಲಿ ಅದ್ವಿತೀಯವಾದ ಪಾಂಡಿತ್ಯವಿದ್ದ ಹೊರತು, ಇಂಥ ಅಧಿಕಾರವನ್ನು ಎಂದಿಗೂ ಕೊಡಲಾರರು.
ಶಂಬರ- ಅವನು ಒಳ್ಳೆಯ ಪಂಡಿತನಾಗಿಯೇ ಇರಬಹುದು; ಆದರೆ ನನ್ನ ಸಾಮರ್ಥ್ಯವೂ ಸರಕಾರದವರಿಗೆ ಚೆನ್ನಾಗಿ ತಿಳಿದಿರುವುದು. ಅವನಿಗಿಂತಲೂ ಹೆಚ್ಚಾದ ಅಧಿಕಾರವನ್ನು ಸರಕಾರದವರು ಕಾಲಕ್ರಮೇಣ ನನಗೂ ಕೊಡಬಹುದು.

ಸುಮಿತ್ರ- ಎಷ್ಟು ಹೇಳಿದರೇನು? ಪರಂತಪನ ಕಡೆಗೆ ನ್ಯಾಯವಿರುವುದು. ಉಯಿಲಿನ ಪ್ರಕಾರ ಅವನು ಮಾಧವನ ಆಸ್ತಿಯನ್ನು ಅಪೇಕ್ಷಿಸುವನು. ಕಾಮಮೋಹಿನಿಗೂ ಈತನಲ್ಲಿ ಅನುರಾಗ ವಿಶೇಷ ವುಂಟಾದುದರಿಂದಲೇ, ಅವಳು ಆತನಿಗೆ ಸ್ವಾಧೀನಳಾಗಿರುವಳು. ಅವಳಿಗೆ ನಿನ್ನಲ್ಲಿ
ಅಧ್ಯಾಯ ೮
೬೩

ಅನುರಾಗವಿಲ್ಲ; ಅಲ್ಲದೆ, ಮಾಧವನ ಆಸ್ತಿಗೆ ನಿನಗೆ ಹಕ್ಕೂ ಇಲ್ಲ. ಹೀಗಿರುವಲ್ಲಿ, ಅವನ ಧರ್ಮವು ಅವನನ್ನು ಕಾಪಾಡಲಾರದೆ? ನೀನು ಎಷ್ಟು ಬಲಿಷ್ಟನಾದರೂ, ನಿನ್ನ ಅಧರ್ಮವು ನಿನ್ನನ್ನು ಕೆಡಿಸಲಾರದೆ?
ಶಂಬರ- ಆಡಿದ್ದರಿಂದ ಪ್ರಯೋಜನವೇನು? ಈ ವಿಷಯವು ಕಾರ್ಯತಃ ಗೊತ್ತಾಗುವುದು.
ಸುಮಿತ್ರ- ಹಾಗಾದರೆ ನಿನ್ನ ಇಷ್ಟ ಬಂದಂತೆ ಮಾಡು. ನಾನು ಕಲಾವತಿಯ ಹೆಸರಿಗೆ ಬರೆದಿರುವ ಉಯಿಲನ್ನು ಸ್ಥಿರಪಡಿಸುವೆನು. (ಎಂದು ಹೇಳಿ ಹೊರಟುಹೋದನು.)


ಅಧ್ಯಾಯ ೮.



   ಪರಂತಪನು, ತನಗೂ ಕಾಮಮೋಹಿನಿಗೂ ವಿವಾಹ ಪೂರಯಿಸಿದ ಕೂಡಲೆ, ಮುಂದೆ ನಡೆಯ ಬೇಕಾದ ಕಾರ್ಯ ನಿರ್ವಾಹಕೊಸ್ಕರ ಕಲ್ಪತರುವಿಗೆ ಹೋದನು. ಅಲ್ಲಿಗೆ ಹೋದಕೂಡಲೆ, ಶಂಬರನ ಕಡೆಯ ಸೇವಕನೊಬ್ಬನು ಒಂದು ಕಾಗದವನ್ನು ತಂದುಕೊಟ್ಟನು. ಅದನ್ನು ಪರಂತಪನು ಒಡೆದು ಓದಿದನು,
        ಪರಂತಪನ ಸನ್ನಿಧಿಯಲ್ಲಿ,
           ಶಂಬರನ ವಿಜ್ಞಾಪನೆ,


  ಮಾಧವನ ಅವಸಾನಕಾಲದಲ್ಲಿ, ನೀನು ಉಪಾಯಾಂತರದಿಂದ ಅವನ ಕೈಪೆಟ್ಟಿಗೆ ಮೊದಲಾದುವುಗಳನ್ನು ಸ್ವಾಧೀನಪಡಿಸಿಕೊಂಡು, ಕೃತ್ರಿಮವಾದ ಒಂದು ಉಯಿಲನ್ನು ಸೃಷ್ಟಿಸಿ, ಆತನ ಆಸ್ತಿಯನ್ನೆಲ್ಲ ಸ್ವಾಧೀನ ಪಡಿಸಿ ಕೊಳ್ಳುವುದಕ್ಕಾಗಿ ಇಲ್ಲಿಗೆ ಬಂದುದಲ್ಲದೆ, ಇಲ್ಲಿ ನನ್ನಲ್ಲಿ ಪೂರ್ಣಾನುರಾಗವುಳ್ಳ ಕಾಮಮೋಹಿನಿಗೆ ದುರ್ಬೋಧನೆಯನ್ನು ಮಾಡಿ, ನಮ್ಮಿಬ್ಬರ ವಿವಾಹಕ್ಕೆ ವಿಫಾತವನ್ನುಂಟುಮಾಡಿದೆ. ಈ ತಪ್ಪಿತವನ್ನು ನೀನು ಒಪ್ಪಿ
೬೪
ಪರಂತಪ ವಿಜಯ

ಕೊಳ್ಳುವ ಪಕ್ಷದಲ್ಲಿ, ಆ ಸ್ವತ್ತುಗಳನ್ನೂ ಉಯಿಲನ್ನೂ ಆ ಸುಂದರಿಯನ್ನೂ ತಂದು ಒಪ್ಪಿಸಿ ಶರಣಾಗತನಾಗು. ಇಲ್ಲದಿದ್ದರೆ, ನಾಳೆ ಪ್ರಾತಃ ಕಾಲ ಎಂಟು ಘ೦ಟೆಯ ವೇಳೆಗೆ, ನಿನ್ನ ಕಡೆಯ ಪಂಚಾಯಿತರೊಡಗೊಂಡು, ಆಯುಧಪಾಣಿಯಾಗಿ ಊರಿನ ಹೊರಗಿರುವ ಉದ್ಯಾನಕ್ಕೆ ಯುದ್ಧ ಸನ್ನದ್ಧನಾಗಿ ಬರತಕ್ಕದ್ದು. ಆ ಯುದ್ಧದಲ್ಲಿ ಆಗುವ ಜಯಾಪಜಯಗಳೇ, ನಮ್ಮಿಬ್ಬರಲ್ಲಿರುವ ನ್ಯಾಯಾನ್ಯಾಯಗಳನ್ನು ತೋರ್ಪಡಿಸಲಿ. ಈ ವಿಷಯದಲ್ಲಿ ಮನಃಪೂರ್ವಕವಾಗಿ ನಾನು ಒಪ್ಪಿ ಈ ಲೇಖನವನ್ನು ಬರೆದಿರುತ್ತೇನೆ.
               ಶಂಬರ.
  ಅದನ್ನು ಓದಿದ ಕೂಡಲೆ, ಪರಂತಪನು ಕೆಳಗೆ ಬರೆದಿರುವಂತೆ ಪ್ರತ್ಯುತ್ತರವನ್ನು ಕಳುಹಿಸಿದನು.
        ಶಂಬರನ ಸನ್ನಿಧಿಯಲ್ಲಿ,
          ಪರಂತಪನ ವಿಜ್ಞಾಪನೆ...
  ನಿನ್ನ ಲೇಖನವನ್ನು ಓದಿಕೊಂಡೆನು. ಅದರಲ್ಲಿ ಕಂಡಂತೆ ನೀನು ನನ್ನ ಮೇಲೆ ಆಪಾದನೆ ಮಾಡಿರುವ ತಪ್ಪಿತಗಳೆಲ್ಲ ಸುಳ್ಳು. ನಿನ್ನ ಲೇಖನದಂತೆ ನೀನು ನಿರ್ಣಯಿಸಿರುವ ಸಂಕೇತ ಸ್ಥಾನಕ್ಕೆ ಸಿದ್ಧನಾಗಿ ನಾನು ಬರುವೆನು. ನೀನೂ ನಿನ್ನ ಕಡೆಯ ಪಂಚಾಯಿತರೊಡನೆ ಸಿದ್ಧನಾಗಿ ಬಾ. ನಮ್ಮಿಬ್ಬರ ನ್ಯಾಯಾನ್ಯಾಯಗಳು, ಈ ಯುದ್ಧದಿಂದಲೇ ಪ್ರಕಟವಾಗಲಿ.
               ಪರಂತಪ.


  ಈ ನಿರ್ಣಯಕ್ಕನುಸಾರವಾಗಿ, ಮರುದಿನವೇ ಆ ಪುರದ ಬಹಿರುದ್ಯಾನದಲ್ಲಿ ಇಬ್ಬರೂ ತಮ್ಮ ತಮ್ಮ ಕಡೆಯ ಪಂಚಾಯಿತರೊಡಗೊಂಡು ಬಂದು ಸೇರಿದರು. ಸುಮಿತ್ರನೂ ಅತ್ಯಾತುರನಾಗಿ ಬಂದು ಸೇರಿದನು. ಸಮರ ನಿಂಹನೆಂಬ ಆ ಪಟ್ಟಣದ ಯಜಮಾನನೂ ಅಲ್ಲಿಗೆ ಬಂದನು. ಎರಡು ಕಡೆಯ ಪಂಚಾಯಿತರೂ, ಆತನನ್ನು ಸಭಾಧ್ಯಕ್ಷನನ್ನಾಗಿ ನಿರ್ಣಯಿಸಿದರು. ಇವರಿಬ್ಬರ ಪಿಸ್ತೂಲಿನಲ್ಲಿಯೂ ಒಂದೊಂದು ಗುಂಡು ಇರುವಂತೆಯೂ, ಅದನ್ನು ಒಂದಾವೃತ್ತಿ ಹಾರಿಸಿ ಅದರಲ್ಲಿ ಜಯಾಪಜಯಗಳು ಗೊತ್ತಾಗದಿದ್ದರೆ ಪಂಚಾಯಿತರ ಅನುಮತಿಯಿಂದ ಮತ್ತೊಂದಾವೃತ್ತಿ ಪ್ರಯೋಗಿಸಬೇಕೆಂದೂ ನಿರ್ಣಯಿಸಿಕೊಂಡರು. ಕೂಡಲೆ, ಇವರಿಬ್ಬರನ್ನೂ ಮಧ್ಯದಲ್ಲಿ ಮುವ್ವತ್ತು
ಅಧ್ಯಾಯ ೮
೬೫

ಗಜ ಅಂತರಾಳವನ್ನು ಬಿಟ್ಟು ನಿಲ್ಲಿಸಿದರು. ಎರಡು ಕಡೆಯ ಪಂಚಾಯಿತರ ಅನುಮತಿಯಿಂದ, ಸಭಾಧ್ಯಕ್ಷನಾದ ಸಮರಸಿಂಹನು ಯುದ್ದ ನಿಯಮಗಳನ್ನು ಓದಿದನು. ಭಟರಿಬ್ಬರೂ ನಿಯಮಕ್ಕನುಸಾರವಾಗಿ ನಡೆಯುವುದಾಗಿ ಒಪ್ಪಿದರು. ಆಗ ಸಮರಸಿಂಹನು ಅವರಿಬ್ಬರನ್ನೂ ನೋಡಿ “ಎಲೈ ವೀರರೇ! ನಿಮ್ಮಿಬ್ಬರಲ್ಲಿ ಯಾರೇ ಆಗಲಿ- ಈಗ `ಪಂಚಾಯಿತರಿಂದ ನಿರ್ಣಯಿಸಲ್ಪಟ್ಟ ನಿಯಮಗಳಿಗನುಸಾರವಾಗಿ ನಡೆಯದೆ ಅತಿಕ್ರಮಿಸಿದಲ್ಲಿ, ಈ ವಿಷಯವನ್ನು ಪಂಚಾಯಿತರ ತೀರ್ಪಿಗೆ ಹಾಕಿ ಅವರಲ್ಲಿ ಹೆಚ್ಚು ಜನರ ಅನುಮತಿಯಂತೆ ಯಾರು ತಪ್ಪಿತವುಳ್ಳವರೋ ಅವರನ್ನು ಕೊಲ್ಲುತ್ತೇನೆ. ಇದೋ ಅದಕ್ಕಾಗಿಯೇ ನಾನು ಕೈಯಲ್ಲಿ ಪಿಸ್ತೂಲನ್ನು ಹಿಡಿದಿರುತ್ತೇನೆ. ಜೋಕೆ! ಎಚ್ಚರವಾಗಿರಿ!” ಎಂದು ಹೇಳಲು, ಅದಕ್ಕೆ ಅವರಿಬ್ಬರೂ ಅನುಮತಿಸಿ, ಪಂಚಾಯಿತರ ತೀರ್ಮಾನದಂತೆ ಅಧರ್ಮ ಪ್ರವೃತ್ತರಾದವರು ಶಿಕ್ಷೆಗೆ ಗುರಿಯಾಗುವುದಾಗಿ ಒಪ್ಪಿಕೊಂಡು, ಯುದ್ಧ ಸನ್ನದ್ದರಾಗಿ ನಿಂತರು. ಆಗ ಶಂಬರನು ಪರಂತಪನನ್ನು ನೋಡಿ "ಎಲೈ ದುರಾತ್ಮನಾದ ಪರಂತಪನೆ! ನೀನು ಬಹು ದುಷ್ಟನು ಏನೋ ತಂತ್ರಗಳನ್ನು ಮಾಡಿ ಮಾಧವನ ಸ್ವತ್ತುಗಳನ್ನು ಅಪಹರಿಸಿದ್ದಲ್ಲದೆ, ನನಗೊಸ್ಕರ ನಿಶ್ಚಯಿಸಲ್ಪಟ್ಟಿದ್ದ ಕಾಮಮೋಹಿನಿಗೆ ದುರ್ಬೋಧನೆಯನ್ನು ಮಾಡಿ ಅವಳನ್ನೂ ಸ್ವಾಧೀನಪಡಿಸಿಕೊಂಡು ವಿವಾಹ ಕಂಟಕನಾದೆ. ಈ ದುಷ್ಕೃತ್ಯಕ್ಕೆ ತಕ್ಕ ಶಿಕ್ಷೆಗೆ ಗುರಿಯಾಗುವೆ.” ಎಂದನು.

ಪರಂತಪ- ಎಲೈ ನೀಚನೇ ! ವೃಥಾ ವಾಗಾಡಂಬರದಿಂದ ಪ್ರಯೋಜನವೇನು ? ನಮ್ಮಿಬ್ಬರ ನ್ಯಾಯಾನ್ಯಾಯಗಳು ಇನ್ನು ಸ್ವಲ್ಪ ಹೊತ್ತಿನೊಳಗಾಗಿಯೇ ಗೊತ್ತಾಗುವುವು. ಮಾಧವನು ಸ್ವಹಸ್ತದಿಂದ ರುಜು ಹಾಕಿ ಬರೆದಿರುವ ಉಯಿಲನ್ನೂ, ಅದಕ್ಕೆ ಸಾಕ್ಷಿಭೂತರಾಗಿ ರುಜು ಮಾಡಿರುವ ಅಧಿಕಾರಿಗಳ ವಾಙ್ಮೂಲವನ್ನೂ ತೆಗೆದು ಚೆನ್ನಾಗಿ ಪರಿಶೀಲನೆ ಮಾಡಿದರೆ, ಮಾಧವನ ಆಸ್ತಿಯು ನನಗೆ ತಂತ್ರದಿಂದ ಪ್ರಾಪ್ತವಾಯಿತೋ ಅಥವಾ ಮಾಧವನ ವಿಷಯದಲ್ಲಿ ನೀನು ಮಾಡಿದ ಕೃತಘ್ನತೆಯಿಂದ ನನಗೆ ಲಭ್ಯವಾಯಿತೋ - ಚೆನ್ನಾಗಿ ಗೊತ್ತಾಗುವುದು. ಇದಿರಲಿ; ಕಾಮಮೋಹಿನಿಯನ್ನು ನಾನು ಅಪಹರಿಸಿಕೊಂಡು ಬಂದೆನೆ? ನಿನ್ನ ಕೆಟ್ಟ ಶೀಲಸ್ವಭಾವಗಳೇ ಅವ 
೬೬
ಪರಂತಪ ವಿಜಯ

ಳಿಗೆ ನಿನ್ನಲ್ಲಿ ಜುಗುಪ್ಪೆಯುಂಟಾಗುವಂತೆ ಮಾಡಿದುವಲ್ಲವೆ? ಈಕೆಯಲ್ಲಿ ಮಾಧವನು ಅನುರಕ್ತನಾಗಿರಲಿಲ್ಲವೆ? ಪಿತೃದ್ರೋಹಿಯಾದ ನೀನು, ಅವರಿಬ್ಬರಿಗೂ ವೈಮನಸ್ಯವನ್ನುಂಟುಮಾಡಿ ಅವನ ಅಕಾಲ ಮರಣಕ್ಕೂ ಮುಖ್ಯ ಕಾರಣಭೂತನಾದೆ. ಈ ಪಾಪಕ್ಕೆ ತಕ್ಕ ಫಲವನ್ನು ಅನುಭವಿಸದಿರುವುದಿಲ್ಲ. ಅವಳನ್ನು ನಿನ್ನ ದುರ್ಬುದ್ಧಿಯಿಂದಲೇ ನೀನು ಕಳೆದುಕೊಂಡು, ಈಗ ಪುನಃ ನನ್ನನ್ನು ಪ್ರಾರ್ಥಿಸುವುದು ಬಹಳ ವಿಸ್ಮಯಾವಹವಾಗಿದೆ. ನಾನು ನಿನಗೆ ಶರಣಾಗತನಾಗಬೇಕೋ? ಆಗಲಿ, ನಿನ್ನ ಕೃತ್ಯಕ್ಕೆ ತಕ್ಕ ಫಲವನ್ನು ಈಗಲೇ ತೋರಿಸುವೆನು.

ಶಂಬರ- ಎಲಾ ದುರಾತ್ಮನೆ! ಮಾಧವನ ಮರಣಕಾಲದಲ್ಲಿ ಅವನ ಸಮೀಪದಲ್ಲಿದ್ದವನು ನೀನು. ನೀನೇ ಅವನ ಮರಣಕ್ಕೆ ಕಾರಣಭೂತನು. ನಿನಗೆ ಇಂಥ ದುರ್ಬುದ್ಧಿ ಹುಟ್ಟುವುದಕ್ಕೂ ಅವನ ಅನ್ಯಾದೃಶವಾದ ಸಂಪತ್ತುಗಳೇ ಕಾರಣವು. ನಿನ್ನ ವಂಚನೆಗೆ ಒಳಪಟ್ಟು ಕಾಮಮೋಹಿನಿಯು ನಿನಗೆ ಸ್ವಾಧೀನಳಾದುದಕ್ಕೆ, ನನ್ನ ಶೀಲಸ್ವಭಾವಗಳಲ್ಲಿ ದೋಷವನ್ನು ಕಲ್ಪಿಸುವೆಯೋ? ಎಲೈ ನೀಚನೇ! ನಿನ್ನೊಡನೆ ವೃಥಾಲಾಪಗಳಿಂದ ಪ್ರಯೋಜನವೇನು? ಅಯ್ಯಾ! ಸಮರಸಿಂಹ! ಈ ನೀಚನ ಪ್ರಲಾಪವನ್ನು ನಿಲ್ಲಿಸುವೆನು; ಆಜ್ಞೆಯನ್ನು ಕೊಡು.

ಪರಂತಪ- ಎಲೈ ಸಮರಸಿಂಹನೆ! ಈ ನೀಚನೊಡನೆ ವೃಥಾ ವಾಕ್ಕಲಹದಿಂದ ಪ್ರಯೋಜನವೇನು? ನಮ್ಮ ನಮ್ಮ ನ್ಯಾಯಾನ್ಯಾಯಗಳಿಗೆ ನಮ್ಮ ನಮ್ಮ ಮನಸ್ಸೇ ಕಾರಣಭೂತವಾಗಿರುತ್ತದೆ. ಅಲ್ಲದೆ, ನಮ್ಮಿಬ್ಬರ ಧರ್ಮಾಧರ್ಮಗಳನ್ನು ಸರ್ವಾಂತರ್ಯಾಮಿಯಾದ ಜಗದೀಶ್ವರನೊಬ್ಬನೇ ಬಲ್ಲನು. ನಾನು ಮಾಧವನ ಆಸ್ತಿಯ ವಿಷಯದಲ್ಲಾಗಲಿ ಕಾಮಮೋಹಿನಿಯ ವಿಷಯದಲ್ಲಾಗಲಿ ದುರಾಶೆಪಟ್ಟು ಪ್ರವರ್ತಿಸಿದ್ದರೆ, ಶಂಬರನ ಪ್ರಹಾರವು ನನಗೆ ತಗುಲಲಿ; ಹಾಗಿಲ್ಲದೆ ಈತನು ಪಿತೃದ್ರೋಹಿಯೂ ಕೃತಘ್ನುನೂ ಆಗಿದಲ್ಲಿ, ನನ್ನ ಪ್ರಹಾರಕ್ಕೆ ಈತನೇ ಗುರಿಯಾಗಲಿ. ಧರ್ಮವಿದ್ದ ಕಡೆ ಜಯವೆಂಬುದು ಈಗ ಸ್ಥಿರಪಡುವುದು. ಇನ್ನು ನಮಗೆ ಆಜ್ಞೆಯನ್ನು ಕೊಡು.

ಸಮರಸಿಂಹನು “ಅಯ್ಯಾ! ಇನ್ನು ನಿಮ್ಮಿಬ್ಬರ ಸಲ್ಲಾಪಗಳನ್ನು ನಿಲ್ಲಿಸಿರಿ. ಯುದ್ಧಕ್ಕೆ ಸಿದ್ಧರಾಗಿರಿ. ನಾನು ಒಂದರಿಂದ ಮೂರರವರೆಗೆ

ಅಧ್ಯಾಯ ೮
೬೭

ಎಣಿಸಿದಕೂಡಲೆ, ನಿಮ್ಮ ಪಿಸ್ತೂಲನ್ನು ಏಕಕಾಲದಲ್ಲಿ ಹಾರಿಸತಕ್ಕುದು” ಎಂದು ಹೇಳಲು, ಪ್ರತ್ಯರ್ಥಿಗಳಿಬ್ಬರೂ, ತಮ್ಮ ತಮ್ಮ ಆಯುಧಗಳನ್ನು ಸಿದ್ಧ ಪಡಿಸಿಕೊಂಡು ಸನ್ನದ್ಧರಾದರು. ಸುಮಿತ್ರನು, ಶಂಬರನ ಜಯವನ್ನು ನಿರೀಕ್ಷಿಸುತ್ತ ಪರಂತಪನ ಬಲಗಡೆಯಲ್ಲಿ ನಿಂತಿದ್ದನು.
ಸಮರಸಿಂಹ- ಇನ್ನು ಸಿದ್ಧರಾಗಿ, ಒಂದು! ಎರಡು! ಮೂರು!!!
   ಕೂಡಲೇ ಎರಡು ಪಿಸ್ತೂಲುಗಳು ಹಾರಿಸಲ್ಪಟ್ಟುವು. ಶಂಬರನ ಗುಂಡು ಗುರಿತಪ್ಪಿ, ಪರಂತಪನ ಬಲಗಡೆಯಲ್ಲಿ ನಿಂತಿದ್ದ ಸುಮಿತ್ರನಿಗೆ ತಗುಲಿ, ಕೂಡಲೆ ಅವನು ಕೆಳಕ್ಕೆ ಬಿದ್ದು ಒದ್ದಾಡಿ ಮೃತನಾದನು. ಪರಂತಪನ ಗುಂಡು ಶಂಬರನ ಬಲಭುಜಕ್ಕೆ ತಗುಲಿ ಅವನೂ ಕೆಳಗೆ ಬಿದ್ದನು. ಕೂಡಲೇ ಪಂಚಾಯಿತರಲ್ಲಿ ಒಬ್ಬನಾಗಿದ್ದ ವೈದ್ಯನೊಬ್ಬನು, ಶಂಬರನಿಗೆ ಬಿದ್ದ ಏಟನ್ನು ಪರೀಕ್ಷಿಸಿ, ಕೂಡಲೇ ಬಾಹುಚ್ಛೇದವನ್ನು ಮಾಡಿ ಚಿಕಿತ್ಸೆ ಮಾಡಿದರೆ ಅವನು ಬದುಕಬಹುದೆಂದು ಹೇಳಿದನು. ಸ್ವಲ್ಪ ಹೊತ್ತಿನಲ್ಲಿಯೇ ಶಂಬರನು ಪ್ರಜ್ಞೆ ಹೊಂದಿ, ವೈದ್ಯನ ಅಭಿಪ್ರಾಯವನ್ನು ಕೇಳಿ, ಅವನ ಹೇಳಿಕೆಯಂತೆ ತನ್ನ ಬಾಹುಚ್ಛೇದಕ್ಕೆ ಒಪ್ಪಿಕೊಂಡನು. ಕೂಡಲೇ ಆ ವೈದ್ಯನು ಅವನನ್ನು ವೈದ್ಯಶಾಲೆಗೆ ಕರೆದುಕೊಂಡು ಹೋಗಿ, ಇತರ ವೈದ್ಯರ ಅಭಿಪ್ರಾಯವನ್ನೂ ಕೇಳಿ, ಇವನ ಬಲದ ಭುಜವನ್ನು ತೆಗೆಸಿದನು. ಮೂರು ತಿಂಗಳೊಳಗಾಗಿ ಆ ವ್ರಣವು ವಾಸಿಯಾಯಿತು. ಅದುವರೆಗೂ ಆ ಯಾತನೆಯಿಂದ ಅವನು ಬಹಳ ಕೃಶನಾಗಿದ್ದನು. ಆಮೇಲೆ ಪಂಚಾಯಿತರೆಲ್ಲರೂ ಸೇರಿ, ಪರಂತಪನನ್ನು ಮುಂದಿರಿಸಿಕೊಂಡು, ಶಂಬರನನ್ನು ನೋಡಿ,ಅಯ್ಯಾ! ಶಂಬರ! ನಿಮ್ಮಿಬ್ಬರ ಯುದ್ಧವೂ ಪೂರಯಿಸಿ ಮೂರು ತಿಂಗಳುಗಳಾದುವು. ನೀನು ಅವನ ಪ್ರಹಾರದಿಂದ ಮೃತನಾಗಿಯೇ ಹೋಗಿದ್ದ ಪಕ್ಷದಲ್ಲಿ, ಆ ಪರಂತಪನು ನಿರ್ದೋಷಿಯೆಂದು ಆಗಲೇ ತೀರ್ಮಾನಿಸುತ್ತಿದ್ದೆವು. ಈಗಲೂ ಹಾಗೆ ತೀರ್ಮಾನಿಸುವ ವಿಚಾರದಲ್ಲಿ ಯಾವ ಅಭ್ಯಂತರವೂ ಇಲ್ಲ. ಆದರೂ ನಿನ್ನ ಅಭಿಪ್ರಾಯವೇನು?-ಹೇಳು,

ಶಂಬರ- ಈ ನೀಚನಾದ ಪರಂತಪನು, ನನ್ನನ್ನು ಕೊಲ್ಲದೆ, ನಾನು ಜೀವಿಸಿದ್ದು ಮನಃಕ್ಲೇಶವನ್ನು ಅನುಭವಿಸಬೇಕೆಂಬ ಅಭಿಪ್ರಾಯದಿಂದ, ಜೀವಚ್ಛವವನ್ನಾಗಿ ಮಾಡಿದನು. ಆದರೂ ಚಿಂತೆಯಿಲ್ಲ; ಈ ಯುದ್ದದಿಂ
೬೮
ಪರಂತಪ ವಿಜಯ

ದಲೇ ನ್ಯಾಯ ನಿರ್ಣಯವಾಗುವುದಾಗಿಲ್ಲ. ಕಲಿಪ್ರಚುರವಾದ ಈ ಕಾಲವು ವ್ಯತ್ಯಸ್ತಸ್ಥಿತಿಯುಳ್ಳದಾದುದರಿಂದ, ಪಾಪಶೀಲರಿಗೆ ಉತ್ತಮ ಸ್ಥಿತಿಯನ್ನೂ ಸುಕೃತಿಗಳಿಗೆ ಅಧೋಗತಿಯನ್ನೂ ಉಂಟುಮಾಡುವುದು ಸ್ವಭಾವ ಸಿದ್ಧವಾಗಿದೆ. ಮಾಡತಕ್ಕುದೇನು?
ಸಮರಸಿಂಹ- ನ್ಯಾಯನಿರ್ಣಯಕ್ಕಾಗಿ ಈ ಯುದ್ಧವನ್ನು ಏರ್ಪಡಿಸಿದವನೇ ನೀನು. ಇದರಲ್ಲಿ ನಿರಾಕ್ಷೇಪವಾಗಿ ಧರ್ಮವ್ಯವಸ್ಥೆಯಾಗುವುದೆಂದು ನಿಷ್ಕರ್ಷಿಸಿದವನೂ ನೀನು, ಈಗ ಯುದ್ದದಿಂದ ನ್ಯಾಯನಿರ್ಣಯವಾಗುವುದಿಲ್ಲವೆಂದು ನೀನೇ ಹೇಳುತ್ತೀಯಾ? ಇಂಥ ಅಸಂಬದ್ಧ ಪ್ರಲಾಪಗಳಿಗೆ ಯಾರಿಂದ ತಾನೆ ಪ್ರತ್ಯುತ್ತರವನ್ನು ಕೊಡಲಾದೀತು? ನಿನ್ನ ಶತ್ರುವಿಗೆ ತಗುಲ ಬೇಕಾಗಿದ್ದ ನಿನ್ನ ಗುಂಡು, ನಿನ್ನ ಕಡೆಯವನಾದ ಸುಮಿತ್ರನಿಗೆ ತಗುಲಿ, ಅವನೇ ಸಾಯಬೇಕಾದರೆ, ನಿನ್ನ ಅಧರ್ಮವು ಇದರಿಂದಲೇ ಸ್ಪಷ್ಟವಾಗುವುದಲ್ಲವೆ? ಇದೆಲ್ಲ ಹಾಗಿರಲಿ; ಈಗ ಸುಮಿತ್ರನನ್ನು ಕೊಂದ ತಪ್ಪಿತಕ್ಕೆ ಗುರಿಯಾಗತಕ್ಕವರು ಯಾರು?
ಶಂಬರ - ಯುದ್ಧ ನಿರ್ಣಯಕ್ಕನುಸಾರವಾಗಿ ಪಂಚಾಯಿತರು ತೀರ್ಮಾನವನ್ನು ಕೊಡುವ ವಿಷಯದಲ್ಲಿ ಯಾವ ಅಡ್ಡಿಯೂ ಇಲ್ಲ. ಆ ವಿಷಯದಲ್ಲಿ ನಾನು ಬದ್ಧನಾಗಿಯೇ ಇರುತ್ತೇನೆ. ಸುಮಿತ್ರನನ್ನು ಕೊಲ್ಲುವ ವಿಷಯದಲ್ಲಿ ನಾನು ಮನಃಪೂರ್ವಕವಾಗಿ ಪ್ರವರ್ತಿಸಿದವನಲ್ಲ. ಆದುದರಿಂದ, ಆ ವಿಚಾರದಲ್ಲಿ ಮಾತ್ರ ನಾನು ತಪ್ಪಿತಸ್ಥನಾಗಲಾರೆನು.
ಪಂಚಾಯಿತರು - ಇದು ನಮ್ಮ ಪಂಚಾಯಿತರ ತೀರ್ಮಾನಕ್ಕೆ ಒಳ ಪಟ್ಟುದುದಲ್ಲ. ಆ ವಿಷಯವು ಹೇಗಾದರೂ ಇರಲಿ, ಈಗಲೂ ನೀನು ಪರಂತಪನಲ್ಲಿ ಶರಣಾಗತಿಯನ್ನು ಹೊಂದಿ ಅವನ ಮೇಲೆ ನೀನು ಹೊರಿಸಿರುವ ದೋಷಗಳೆಲ್ಲ ಅಸತ್ಯವಾದುವುಗಳೆಂದು ಒಪ್ಪಿಕೊ; ಅದರಿಂದ ನಿನಗೆ ಕ್ಷೇಮವುಂಟು. ಈ ವಿಷಯದಲ್ಲಿ ನಾವು ಅನುಮತಿಸಿರುತ್ತೇವೆ. ನಮ್ಮ ಮಾತನ್ನು ಕೇಳು.

ಶಂಬರ- ಮಹನೀಯರೇ! ನಿಮ್ಮ ಆಜ್ಞೆಯನ್ನು ಶಿರಸಾ ವಹಿಸಿದೆನು. ಅಯ್ಯಾ! ಪರಂತಪನೇ! ನಾನು ದುರಭಿಪ್ರಾಯದಿಂದ ಇದುವರೆಗೂ ನಿನ್ನ ಮೇಲೆ ದೋಷಾರೋಪಣೆಗಳನ್ನು ಮಾಡಿ ನಿನ್ನನ್ನು ಯುದ್ಧಕ್ಕೆ ಕರೆದೆನು.
ಅಧ್ಯಾಯ ೮
೬೯

ಇದರ ಫಲಿತಾಂಶದಿಂದಲೇ, ನಾನು ಮಾಡಿದ ಆಪಾದನೆಗಳೆಲ್ಲ ಅಸತ್ಯಗಳೆಂದು ವ್ಯಕ್ತಪಡುವುದು. ನನ್ನ ದುರ್ಬುದ್ಧಿಗಾಗಿ ನಾನೇ ವಿಷಾದಿಸಬೇಕಾಗಿದೆ. ಈ ನನ್ನ ಅಪರಾಧಗಳನ್ನು ಕ್ಷಮಿಸುವನಾಗು.
ಪರಂತಪ -ಅಯ್ಯಾ! ಶಂಬರನೆ! ಅಪಕಾರ ಮಾಡಿಸಿಕೊಂಡವರಿಗಿಂತಲೂ ಅಪಕಾರ ಮಾಡಿದವರಿಗೆ ದ್ವೇಷವು ದೀರ್ಘವಾಗಿರುವುದು ಲೋಕ ಸ್ವಭಾವವು. ಹೀಗಿರುವಲ್ಲಿ, ನೀನೇ ದ್ವೇಷವನ್ನು ಬಿಟ್ಟು ಸಮಾಧಾನವನ್ನು ಹೊಂದುವಾಗ, ನಾನು ಮನಃಕಾಲುಷ್ಯವನ್ನು ಬಿಡುವುದೇನು ಅಸಾಧ್ಯ? ನಿನ್ನ ಪ್ರಾರ್ಥನೆಯಿಂದ ನಾನು ಬಹಳ ಸಂತೋಷಿಸಿದೆನು. ಸ್ನೇಹದಿಂದಾಗ ತಕ್ಕ ಅನುಕೂಲ್ಯಗಳು ದ್ವೇಷದಿಂದ ಆಗುವುದಿಲ್ಲ. ಈ ಯುದ್ಧದಿಂದ ನಿನಗೆ ಆಗಿರತಕ್ಕ ನಷ್ಟಗಳನ್ನು ನೋಡಿ, ನಾನು ತುಂಬ ವಿಷಾದಿಸಬೇಕಾಗಿದೆ. ಮಾಧವನ ಆಸ್ತಿಗೆ ನಾನು ಆಸೆ ಪಟ್ಟು ಪ್ರವರ್ತಿಸಿದವನೆಂದು ತಿಳಿಯಬೇಡ. ಅವನು ಬರೆದಿರುವ ಉಯಿಲಿನಲ್ಲಿಯೇ, ಆ ದ್ರವ್ಯದ ವಿನಿಯೋಗಗಳೆಲ್ಲ ವ್ಯಕ್ತ ಪಡುವುವು. ಅದರಂತೆ ಆ ಪತ್ರವನ್ನು ರಿಜಿಸ್ಟರ್ ಮಾಡಿಸುವುದಕ್ಕಾಗಿ ಮಾಧವನ ಕಡೆ ಲಾಯರಾದ ಅರ್ಥಪರನು ಬರುತ್ತಾನೆ. ಆ ವುಯಿಲು ರಿಜಿಸ್ಟರಾದ ಕೂಡಲೆ, ಅದರಲ್ಲಿ ಕಾಣಿಸಿರುವಂತೆ ನನ್ನ ಭಾಗಕ್ಕೆ ಬರತಕ್ಕ ದ್ರವ್ಯಗಳನ್ನು ನಿನಗೇ ಒಪ್ಪಿಸುತ್ತೇನೆ. ಅದನ್ನೂ, ನಿನ್ನ ದೊಡ್ಡಪ್ಪನಾದ ಸುಮಿತ್ರನ ಆಸ್ತಿಯನ್ನೂ ಸ್ವಾಧೀನ ಪಡಿಸಿಕೊಂಡು, ಕಲಾವತಿಯನ್ನು ವರಿಸಿ, ಅವಳೊಡನೆ ಸೌಖ್ಯವಾಗಿ ಬದುಕು. ಇನ್ನು ನಾನು ಹೋಗುತ್ತೇನೆ. ಅನುಮತಿಯನ್ನು ಕೊಡು.
ಶಂಬರ- "ಅಯ್ಯಾ! ವಂದಿಸುವೆನು, ನೀನು ಹೇಳಿದ ವಿಷಯವನ್ನೆಲ್ಲ ಮುಂದೆ ಪರ್ಯಾಲೋಚಿಸಿ ಸೂಕ್ತವಾದಂತೆ ನಡೆಸೋಣ," ಎಂದು ಹೇಳಿ, ಆತನನ್ನೂ ಪಂಚಾಯಿತರನ್ನೂ ಬಹುಮಾನಪುರಸ್ಸರನಾಗಿ ಕಳುಹಿಸಿಕೊಟ್ಟನು.
  ಸಮರಸಿಂಹನು, ಪಂಚಾಯಿತರೊಡನೆ ದಾರಿಯಲ್ಲಿ ಹೋಗುತ್ತ, ಪರಂತಪನನ್ನು ನೋಡಿ - 'ಅಯ್ಯಾ ! ಪರಂತಪ ! ನೀನೇ ಅದೃಷ್ಟಶಾಲಿ. ಶಂಬರನ ಗುಂಡು ನಿನಗೆ ತಗುಲಿದ್ದರೆ, ನಿನ್ನ ಗತಿಯೇನಾಗುತಿತ್ತು?

ಪರಂತಪ- (ಹುಸಿನಗೆಯೊಡನೆ) ನಾನು ಇಂಥ ನೂರಾರು ವಿಪತ್ತುಗಳಿಗೆ ಗುರಿಯಾಗಿದ್ದೇನೆ. ಅವೆಲ್ಲ ದೈವಯೋಗದಿಂದ ಪರಿಹಾರವಾಗಿವೆ.
೭೦
ಪರಂತಪ ವಿಜಯ

ಸಮರಸಿಂಹ- ಅದು ಹಾಗಿರಲಿ; ಶಂಬರನು ಗುರಿಹಿಡಿದು ಹೊಡೆಯುವ ವಿಷಯದಲ್ಲಿ ಸಮರ್ಥನೆಂದು ನೀನು ನಂಬಿರುವೆಯೋ?

ಪರಂತಪ- ಎಂದಿಗೂ ಇಲ್ಲ; ಹಾಗೆ ಅವನು ಶಕ್ತನಾಗಿದ್ದ ಪಕ್ಷದಲ್ಲಿ, ನನ್ನ ಪಾರ್ಶ್ವದಲ್ಲಿ ಬಹುದೂರದಲ್ಲಿ ನಿಂತಿದ್ದ ಸುಮಿತ್ರನಿಗೆ ಎಂದಿಗೂ ಗುಂಡು ತಗುಲುತ್ತಿರಲಿಲ್ಲ. ಅವನ ಗಂಡು ಅಕಸ್ಮಾತ್ತಾಗಿ ಸುಮಿತ್ರನಿಗೆ ತಗುಲಿರಬಹುದು.

ಸಮರಸಿಂಹ- ಅವನು ಮನಃಪೂರ್ವಕವಾಗಿ ಕ್ಷಮಾಪಣೆಯನ್ನು ಕೇಳಿಕೊಂಡಿರುವನೆಂದು ನಂಬಿರುವೆಯೋ?

ಪರಂತಪ- ಆ ಅಭಿಪ್ರಾಯವೂ ವ್ಯಕ್ತವಾಗಿಯೇ ಇರುವುದು. ನಾನು ಏನು ಮಾಡಿದ್ದಾಗ್ಯೂ, ಅವನಿಗೆ ನನ್ನಲ್ಲಿ ಮನಃಪೂರ್ವಕವಾಗಿ ಪ್ರೀತಿಯು ಎಂದಿಗೂ ಉಂಟಾಗುವುದಿಲ್ಲ. ಸಾಧ್ಯವಾದ ಪಕ್ಷದಲ್ಲಿ ಅವನು ನನ್ನನ್ನು ಕೊಲ್ಲುವುದಕ್ಕೂ ಹಿಂಜರಿಯುವವನಲ್ಲ. ಸುಮಿತ್ರನು ತನ್ನ ಆಸ್ತಿಯು ಕಲಾವತಿಗೆ ಸೇರತಕ್ಕುದೆಂದು ಉಯಿಲಿನಲ್ಲಿ ಕಾಣಿಸಿರುತ್ತಾನೆ. ಮಾಧವನ ಆಸ್ತಿಯು ನನಗೆ ಸೇರತಕ್ಕುದಾಗಿದೆ. ಇವೆರಡೂ ಈತನಿಗೆ ಪಿತ್ರಾರ್ಜಿತವು. ಇವು ಹೊರತು ಈತನಿಗೆ ಇನ್ನೇನೂ ಗತಿಯಿಲ್ಲ. ಇವನ ದುರವಸ್ಥೆಯನ್ನು ನೋಡಿ, ನಾನು ನನ್ನ ಭಾಗಕ್ಕೆ ಬಂದ ಮಾಧವನ ಆಸ್ತಿಯನ್ನು ಈತನಿಗೇ ಕೊಡಬೇಕೆಂದು ಯೋಚಿಸಿದೆನು. ಆದರೆ ಇವನು ಇವುಗಳನ್ನು ಪರಿಗ್ರಹಿಸಿ ಬದುಕತಕ್ಕವನಲ್ಲ. ಏನಾದರೂ ದುರ್ವೃತ್ತಗಳನ್ನು ನಡೆಸಿ ತಕ್ಕ ಫಲ ವನ್ನು ಅನುಭವಿಸುವನೆಂದು ತೋರುತ್ತದೆ.

ಸಮರಸಿಂಹ- ನೀನು ಹೇಳುವುದೆಲ್ಲ ನಿಜ. ಶಂಬರನ ಪೂರ್ವಾಪರಗಳನ್ನೆಲ್ಲ ನಾನು ಕೇಳಿರುವೆನು. ಅವನು ಕಾಲಾಂತರದಲ್ಲಿ ನಿನಗೆ ಮೃತ್ಯುವಾಗುವನೆಂದು ಊಹಿಸುವೆನು.

ಪರಂತಪ- ಮನುಷ್ಯ ಯತ್ನದಂತೆಯೇ ದೈವವು ನಡೆಸುವುದೆಂದು ನಂಬುವುದು ಹೇಗೆ? ದೈವವು ನನ್ನ ಕಡೆಗೆ ಅನುಕೂಲವಾಗಿರಬಾರದೆ? ನಾವು ಇದಕ್ಕೆ ಚಿಂತಿಸುವುದೇಕೆ?
  

ಹೀಗೆ ಪರಸ್ಪರ ಸಲ್ಲಾಪಗಳನ್ನು ಮಾಡುತ, ಎಲ್ಲರೂ ಪುರಪ್ರವೇಶವನ್ನು ಮಾಡಿ, ತಮ್ಮ ತಮ್ಮ ವಾಹನಗಳನ್ನಿಳಿದು, ಆ ಪುರದ ಒಂದು

ಅಧ್ಯಾಯ ೯
೭೧


ಭೋಜನಾಲಯದಲ್ಲಿ ಸ್ನಾನಭೋಜನಾದಿಗಳನ್ನು ತೀರಿಸಿಕೊಂಡು, ಸ್ವಲ್ಪ ಹೊತ್ತು ವಿನೋದವಾಗಿ ಮಾತನಾಡುತಿದ್ದು, ವಿಶ್ರಮಾರ್ಥವಾಗಿ ಎಲ್ಲರೂ ಅವರವರ ವಾಸಸ್ಥಾನಗಳಿಗೆ ಹೊರಟುಹೋದರು.

ಅಧ್ಯಾಯ ೯.



  ಮಾರನೆಯ ದಿವಸ ಅರುಣೋದಯ ಕಾಲಕ್ಕೆ ಎದ್ದು ಪರಂತಪನು ಸುಮಿತ್ರನ ಉಪವನಕ್ಕೆ ಏಕಾಂತವಾಗಿ ಪ್ರವೇಶಿಸಿ ತಾನು ಅಲ್ಲಿ ಹೂತಿಟ್ಟಿದ್ದ ಪೆಟ್ಟಿಗೆಯನ್ನು ತೆಗೆದುಕೊಂಡು ಹೋಗುತ್ತಿರುವಾಗ, ಕಲಾವತಿಯು ಎದುರಿಗೆ ಬಂದಳು.

ಕಲಾವತಿ-ಎಲೈ ಪರಂತಪನೇ! ಇದೇನು - ಇಷ್ಟು ಹೊತ್ತಿಗೆ ಮುಂಚೆ ಇಲ್ಲಿಗೆ ಬಂದಿರುವೆ? ರಾತ್ರಿ ಮನೆಯಲ್ಲಿದ್ದೆಯಾ? ನಿನ್ನನ್ನು ನಾನು ನಿನ್ನೆ ಕಾಣಲೇ ಇಲ್ಲ! ಇದೇನು ಪೆಟ್ಟಿಗೆ?

ಪರಂತಪ- ಇಲ್ಲ. ನೆನ್ನೆ ನಾನು ಇರಲಿಲ್ಲ. ಇದು ನನ್ನ ಕಾಗದ ಪತ್ರಗಳ ಪೆಟ್ಟಿಗೆ, ಇದನ್ನು ನನ್ನ ಮಿತ್ರನೊಬ್ಬನ ಬಳಿಗೆ ತೆಗೆದುಕೊಂಡು ಹೋಗ ಬೇಕಾಗಿರುವುದು.

ಕಲಾವತಿ- ನೆನ್ನೆ ನಿನಗೂ ನನ್ನ ಮಾವನಿಗೂ ಮನಸ್ತಾಪ ನಡೆದು ಅದರ ಮೇಲೆ ನೀನು ಮನೆಯನ್ನು ಬಿಟ್ಟು ಹೊರಟುಹೋದಂತೆ ಕೇಳಿದೆನು. ಇದು ನಿಜವೆ? ಇದಕ್ಕೆ ಕಾರಣವೇನು?

ಪರಂತಪ- ಇನ್ನೇನೂ ಇಲ್ಲ. ಕಾಮಮೋಹಿನಿಯನ್ನು ದುರ್ಬೊಧನೆಯಿಂದ ನನ್ನ ಸ್ವಾಧೀನ ಮಾಡಿಕೊಂಡೆನೆಂದು, ನಿಮ್ಮ ಮಾವನು ನನ್ನ ಮೇಲೆ ದೋಷಾರೋಪಣೆಯನ್ನು ಮಾಡಿದನು. ಇದು ನನಗೆ ವಿಷಾದವನ್ನುಂಟು ಮಾಡಿದ್ದರಿಂದ, ನಾನು ಬೇರೆ ಬಿಡಾರಕ್ಕೆ ಹೊರಟುಹೋದೆನು.

ಕಲಾವತಿ- ಕಾಮಮೋಹಿನಿಯಲ್ಲಿರುವಳು? - ಬಲ್ಲೆಯಾ?

ಪರಂತಪ- ಬಲ್ಲೆನು; ಆದರೆ ಅದು ಈಗ ಹೇಳ ತಕ್ಕುದಲ್ಲ.

೭೨
ಪರಂತಪ ವಿಜಯ

ಕಲಾವತಿ- ಅದನ್ನು ತಿಳಿದುಕೊಳ್ಳಬೇಕೆಂಬ ಅಭಿಪ್ರಾಯವು ನನಗಿಲ್ಲ. ಅನುರೂಪನಾದ ಪತಿಯನ್ನು ಸೇರಿ ಅವಳು ಇಲ್ಲಿಂದ ಹೊರಟು ಹೋಗಿ ಸುಖವಾಗಿ ಬಾಳಲಿ ಎಂಬುದೇ ನನ್ನ ಮುಖ್ಯಾಶಯವು.


ಪರಂತಪ- ಹೀಗೆ ನೀನು ಬಯಸುವುದಕ್ಕೆ ಕಾರಣವೇನು?


ಕಲಾವತಿ- ಬೇರೆ ಯಾವ ಕಾರಣವೇಕೆ? ಅವಳಿಗೆ ಶಂಬರನಲ್ಲಿ ಸ್ವಲ್ಪವೂ ಅನುರಾಗವಿಲ್ಲ; ಅವಳ ತಂದೆಯು ಅವಳನ್ನು ಶಂಬರನಿಗೇ ಕೊಟ್ಟು ವಿವಾಹ ಮಾಡಬೇಕೆಂದಿದ್ದಾನೆ. ಅದು ಅವಳಿಗೆ ಸರ್ವಾತ್ಮನಾ

ಇಷ್ಟವಿಲ್ಲ.

ಪರಂತಪ- ಹಾಗಾದರೆ, ನಿನಗೆ ಶಂಬರನನ್ನು ವರಿಸುವುದರಲ್ಲಿ ಇಷ್ಟ ವುಂಟೋ?

ಕಲಾವತಿ- ನನಗೇನೋ ಇಷ್ಟವುಂಟು. ನಮ್ಮ ಮಾವನೂ ಅವನನ್ನು ಬಹಳವಾಗಿ ಶ್ಲಾಘಿಸಿರುವನು.

ಪರಂತಪ- ಹಾಗಾದರೆ ನಿಶ್ಚಿಂತಳಾಗಿರು. ಕಾಮಮೋಹಿನಿಯು ಶಂಬರನನ್ನು ಎಂದಿಗೂ ಒಪ್ಪತಕ್ಕವಳಲ್ಲ. ನೀನು ಸರ್ವಪ್ರಯತ್ನದಿಂದಲೂ ಅವನಿಗೆ ಅನುರಾಗವುಂಟಾಗುವಂತೆ ಮಾಡಿಕೋ. ಕಾಮಮೋಹಿನಿಯು ಎಂದಿಗೂ ನಿನ್ನ ಪ್ರಯತ್ನವನ್ನು ಮುರಿಯತಕ್ಕವಳಲ್ಲ; ಇನ್ನೂ ಬೇಕಾದ ಸಹಾಯವನ್ನು ಮಾಡಿಕೊಡುವಳು.

ಕಲಾವತಿ - ಹಾಗಿದ್ದರೆ, ಆ ವಿಷಯದಲ್ಲಿ ನಾನು ಪ್ರಯತ್ನಿಸುವೆನು. ನಿಮ್ಮಿಬ್ಬರ ಸಹಾಯದಿಂದಲೇ ಈ ಕೆಲಸವು ನಡೆಯಬೇಕಾಗಿರುವುದು. ನೀನೇ ಕಾಮಮೋಹಿನಿಗೆ ಅನುರೂಪನಾದ ವರನು. ನಿಮ್ಮ ವಿವಾಹಕ್ಕೆ ತಕ್ಕ ಸಹಾಯವನ್ನು ಕೈಲಾದಮಟ್ಟಿಗೂ ನಾನು ಮಾಡುವೆನು, ನನ್ನ ಮಾವನಾದರೋ ಬೆಳಗ್ಗೆ ಏಳು ಘಂಟೆಯ ಮೇಲೆ ಏಳುವನು. ನಾನು ಐದು ಘಂಟೆಗೆ ಮೊದಲೇ ನಿತ್ಯವೂ ಎದ್ದು ವ್ಯಾಯಾಮವ್ಯಾಜದಿಂದ ಇಲ್ಲಿಗೆ ಬರುವೆನು. ಈ ಯೆರಡು ವಿವಾಹಗಳು ನಡೆಯುವವರೆಗೂ, ನನ್ನಿಂದಾಗ ಬೇಕಾದ ಸಹಾಯ ಯಾವುದಿದ್ದರೂ ನಡೆಸಿಕೊಡುವೆನು. ನಿತ್ಯವೂ ಈ ಹೊತ್ತಿಗೆ ಸರಿಯಾಗಿ ನೀನು ಬಂದರೆ ಇಲ್ಲಿ ಸಿಕ್ಕುವೆನು.

ಪರಂತಪ-ನೀನು ನಮ್ಮಲ್ಲಿಟ್ಟಿರುವ ಪ್ರೀತಿಗಾಗಿ ನಾವು ಬಹಳ ಕೃತಜ್ಞರಾಗಿರುತ್ತೇವೆ. ಆದರೆ, ನಿನ್ನ ನಿಸರ್ಗವಾದ ಈ ಪ್ರೀತಿಯೇ ನಮ್ಮ

ಅಧ್ಯಾಯ ೯
೭೩

ಲ್ಲಿರುವ ರಹಸ್ಯಗಳನ್ನೆ ಉದ್ಘಾಟಿಸುವಂತೆ ಪ್ರೇರಿಸುವುದು. ನಿಜಸ್ಥಿತಿಯನ್ನು ಹೇಳುವೆನು. ನನಗೂ ಕಾಮಮೋಹಿನಿಗೂ ವಿವಾಹವು ನೆರವೇರಿ ಹೋಯಿತು. ನಾವಿಬ್ಬರೂ ನಿಮ್ಮ ವಿವಾಹಕ್ಕೆ ತಕ್ಕ ಸಹಾಯವನ್ನು ಮಾಡುವುದರಲ್ಲಿ ಸಿದ್ಧರಾಗಿರುತ್ತೇವೆ. ಆದರೆ, ನಿನಗೆ ಯಾವ ಕ್ಲೇಶಗಳು ಬಂದಾಗ್ಗೂ ಧೈರ್ಯಗೆಡದಿರು. ಹೋಗು; ಪುನಃ ನಾನು ನಿನ್ನನ್ನು ಕಾಣುವೆನು. (ಎಂದು ಹೇಳಿ, ಪರಂತಪನು ಹೊರಟುಹೋದನು.)


  

ಮಾವನ ಮರಣವಾರ್ತೆಯನ್ನು ಕೇಳಿ ಇವಳು ಸಂಕಟ ಪಡುವಳೆಂದು ತಿಳಿದು, ಅವಳಿಗೆ ಧೈರ್ಯವನ್ನು ಹೇಳಿ, ಪರಂತಪನು ಭೋಜನ ಶಾಲೆಗೆ ಹೋದನು. ಅಷ್ಟರಲ್ಲಿಯೇ ಅಲ್ಲಿಗೆ ಅರ್ಥಪರನೂ ಬಂದನು.

ಪರಂತಪ- ಓಹೋ! ನಿನ್ನನ್ನೇ ಇದಿರು ನೋಡುತ್ತಿದ್ದೆನು. ಯಾವಾಗ ಬಂದೆ?

ಅರ್ಥಪರ- ಈಗ ತಾನೆ ಎಂದೆನು. ಅದೇನು ಅಷ್ಟು ಆತುರದಿಂದ ನನ್ನನ್ನು ನಿರೀಕ್ಷಿಸಬೇಕಾದ ಅವಶ್ಯಕ?

ಪರಂತಪ- ಅ೦ತಹುದೇನೂ ಇಲ್ಲ. ನೀನು ಬಹಳ ದಿವಸ ಇಲ್ಲಿ ನಿಲ್ಲಬೇಕಾದ ಅವಶ್ಯಕವೂ ಇಲ್ಲ. ಮಾಧವನು ಬರೆದಿಟ್ಟಿರುವ ಉಯಿಲನ್ನು ರಿಜಿಸ್ಟರು ಮಾಡಿಸಿಕೊಟ್ಟು ನೀನು ಹೊರಟುಹೋಗಬಹುದು.

ಅರ್ಥಪರ- ಈ ಪಟ್ಟಣದ ರಾಮಣೀಯಕವನ್ನು ನೋಡಿದರೆ, ಇದನ್ನು ಬಿಟ್ಟು ಹೋಗುವುದಕ್ಕೆ ಮನಸ್ಸು ಬರುವುದಿಲ್ಲ. ನೀನು ಕೊಡತಕ್ಕ ದ್ರವ್ಯದಿಂದ ಜೀವನ ಮಾಡಿಕೊಂಡು ಇಲ್ಲಿಯೇ ಇರಬೇಕೆಂದು ನಿಷ್ಕರ್ಷೆ ಮಾಡಿಕೊಂಡಿದ್ದೇನೆ.

ಪರಂತಪ- ಬಹಳ ಸಂತೋಷ. ಈ ವುಯಿಲನ್ನು ರಿಜಿಸ್ಟರ್ ಮಾಡಿಸಿ ಕೊಂಡು ಬರೋಣ; ಬಾ, ಆ ಕೆಲಸವನ್ನು ಮುಗಿಯಿಸಿಕೊಂಡು ನಾನು ರತ್ನಾಕರಕ್ಕೆ ಹೋಗಿ ಅದನ್ನು ನೋಡಿಕೊಂಡು ಬರಬೇಕೆಂದಿದ್ದೇನೆ.

ಅರ್ಥಪರ - ನೀನೊಬ್ಬನೇ ಹೊರಡುವೆಯಾ ?

ಪರಂತಪ- ನೀನೂ ಬರುವುದಾದರೆ ನನಗೆ ಬಹಳ ಸಂತೋಷ.

ಅರ್ಥಪರ- ಅದರ ವಿಷಯವಾಗಿ ನಾನು ಚಿತ್ರ ವಿಚಿತ್ರವಾದ ಕಥೆಗಳನ್ನು ಕೇಳಿರುವೆನು. ಅದನ್ನು ಪ್ರತ್ಯಕ್ಷವಾಗಿ ನೋಡಿಕೊಂಡು ಬರಬೇಕೆಂಬ ಕುತೂಹಲವು ನನಗೆ ಬಹಳವಾಗಿರುತ್ತದೆ.

೭೪
ಪರಂತಪ ವಿಜಯ

ಪರಂತಪ-ಸರಿ, ಹಾಗಾದರೆ ನಾವಿಬ್ಬರೂ ಹೋಗೋಣ.
  ಹೀಗೆಂದು ನಿಷ್ಕರ್ಷಿಸಿಕೊಂಡು, ಸ್ನಾನಭೋಜನಾದಿಗಳನ್ನು ತೀರಿಸಿಕೊಂಡು, ರಿಜಿಸ್ಟ್ರಾರ್ ಆಫೀಸಿಗೆ ಹೊರಟರು. ಇವರು ಹೋಗಿ ನೋಡಿದಾಗ, ಅಲ್ಲಿನ ನೌಕರರು ಯಾರೂ ಬಂದಿರಲಿಲ್ಲ. ಅಲ್ಲಿನ ಅಧಿಕಾರಿ ಮಾತ್ರ ಬಂದಿದ್ದನು. ಅರ್ಥಪರನ ಹೇಳಿಕೆಯಮೇಲೆ, ಆ ವುಯಿಲನ್ನು ಅಲ್ಲಿನ ಅಧಿಕಾರಿಯ ವಶಕ್ಕೆ ಕೊಟ್ಟು, ಅದರ ಪೂರ್ವಾಪರಗಳನ್ನು ತಿಳಿಸಿ, ಪುನಃ ಬರುವುದಾಗಿ ಹೇಳಿ ಇಬ್ಬರೂ ಹೊರಟು ಹೋದರು. ಅಷ್ಟರೊಳಗಾಗಿ ಸುಮಿತ್ರನ ಶವವು ಪಟ್ಟಣಕ್ಕೆ ತರಲ್ಪಟ್ಟಿತು. ಪರಂತಪ ಶಂಬರರಿಗೆ ನಡೆದ ಯುದ್ದದ ವೃತ್ತಾಂತವು, ಎಲ್ಲೆಲ್ಲಿಯ ಪ್ರಕಟವಾಯಿತು. ಸುಮಿತ್ರನ ಕೊಲೆಗೆ ಪರಂತಪನೇ ಕಾರಣಭೂತನೆಂದು ಜನಗಳೆಲ್ಲ ಅಲ್ಲಲ್ಲಿ ಅಡಿಕೊಳ್ಳುತಿದ್ದರು. ಇದನ್ನು ಕೇಳಿ, ಸಮರಸಿಂಹನೇ ಮೊದಲಾದ ಪಂಚಾಯಿತರೆಲ್ಲರೂ ನಿಜಸ್ಥಿತಿಯನ್ನು ಪ್ರಕಟ ಪಡಿಸಿದರು. ಆಗ ಜನರಿಗೆಲ್ಲ ಶಂಬರನ ವಿಷಯದಲ್ಲಿ ದೋಷವು ಪ್ರಬಲವಾಗಿ ಕಂಡುಬಂದಿತು. ಶಂಬರನು ಸುಮಿತ್ರನ ಉತ್ತರಕ್ರಿಯೆಗಳನ್ನು ಮುಗಿಸಿಕೊಂಡು ಆ ಪಟ್ಟಣದಲ್ಲಿದ್ದ ಒಂದಾನೊಂದು ವಿಹಾರ ಶಾಲೆಗೆ ಹೋಗಲು, ಅಷ್ಟರೊಳಗಾಗಿ ಅಲ್ಲಿಗೆ ಅರ್ಥಪರನೂ ಬಂದನು. ಇಬ್ಬರಿಗೂ ಸ್ವಾಗತ ಸಂಭಾಷಣೆಗಳಲ್ಲ ನಡೆದುವು.
ಶಂಬರ- ಓಹೋ! ಮಿತ್ರನೆ! ಸಕಾಲಕ್ಕೆ ನೀನು ಬಂದೆ.
ಅರ್ಥಪರ- ನಾನು ಎಂದಿಗೂ ಕ್ಲುಪ್ತಕಾಲವನ್ನು ಮೀರತಕ್ಕವನಲ್ಲ. ಇದೇನು - ಕೈಗೆ ಬಟ್ಟೆಯನ್ನು ಸುತ್ತಿಕೊಂಡಿರುವೆ?
ಶಂಬರ- ಪಾಪಿಯಾದ ಪರಂತಪನೊಡನೆ ನಾನು ಯುದ್ಧವನ್ನು ಮಾಡಬೇಕೆಂದಿದ್ದ ಸಂಗತಿಯನ್ನು ನಿನಗೆ ಮೊದಲೇ ತಿಳಿಸಿದ್ದೆನಷ್ಟೆ! ಇದೇ ಅದರ ಫಲ!
ಅರ್ಥಪರ- ಓಹೋ! ಇದಕ್ಕಾಗಿ ನಾನು ಬಹಳ ವಿಷಾದಿಸುತ್ತೇನೆ. ನಿಮ್ಮ ಕಲಹದಲ್ಲಿ ಅವನಿಗೆ ಯಾವ ಅಪಾಯವೂ ಸಂಭವಿಸಿದಂತೆ ಕಾಣುವುದಿಲ್ಲವಲ್ಲ !

ಶಂಬರ-ಅವನಿಗೆ ದೈವವು ಅನುಕೂಲವಾಗಿರುವುದು. ನನಗೆ ಏಟು ಬಿದ್ದುದಲ್ಲದೆ, ಆ ಪರಂತಪನಿಗೋಸ್ಕರ ಪ್ರಯೋಗಿಸಿದ ಗುಂಡು ಸುಮಿತ್ರನಿಗೆ ತಗುಲಿ ಆತನೂ ಮೃತನಾದನು.
ಅಧ್ಯಾಯ ೯
೭೫

ಅರ್ಥಪರ- ಆತನ ಮರಣವು ನಿನಗೆ ಅಭಿಮತವಾಗಿಯೇ ಇರುವುದಷ್ಟೆ! ಇನ್ನು ಅವನ ಆಸ್ತಿಯೆಲ್ಲ ನಿನಗೇ ಸೇರುವುದು. ಇದಕ್ಕಾಗಿ ನಾನು ಸಂತೋಷಿಸುವೆನು.
ಶಂಬರ- ಅದೇನೋ ನಿಜವೆ ! ಆದರೆ, ಸುಮಿತ್ರನು, ತನ್ನ ಆಸ್ತಿಯನ್ನೆಲ್ಲ ಕಲಾವತಿಯ ಹೆಸರಿಗೆ ಉಯಿಲು ಬರೆದಿರುವುದಾಗಿಯೂ, ಅವಳನ್ನು ವಿವಾಹವಾದರೆ ಅವನ ಆಸ್ತಿಯನ್ನು ಅನುಭವಿಸಬಹುದೆಂಬುದಾಗಿಯ ನನಗೆ ಹೇಳಿದ್ದನು.
ಅರ್ಥಪರ-ಹಾಗೋ! ಹಾಗಾದರೆ ಈ ವಿಷಯವನ್ನು ಯಾರಿಗೂ ಹೇಳಬೇಡ. ಆ ವುಯಿಲನ್ನು ಉಪಾಯಾಂತರದಿಂದ ತೆಗೆದು ಸುಟ್ಟುಬಿಡು. ಅವನ ಆಸ್ತಿಯೆಲ್ಲ ನಿನ್ನ ವಶವಾಗುವುದು.
ಶಂಬರ- ಹಾಗಾದರೆ, ಈ ಕೆಲಸವು ಮೊದಲು ಮಾಡತಕ್ಕುದಾಗಿದೆ. ಅದು ಹಾಗಿರಲಿ; ಇನ್ನೇನು ಸಮಾಚಾರ?
ಅರ್ಥಪರ - ಪರಂತಪನಿಗೂ ಕಾಮಮೋಹಿನಿ ಉಪವನದಲ್ಲಿ ನಡೆದ ಸಂಭಾಷಣೆಯನ್ನು ನಿನಗೆ ಮೊದಲೇ ತಿಳಿಸಿರುವೆನಷ್ಟೆ! ಈಚೆಗೆ ಆಕೆಯು ಸತ್ಯಶರ್ಮನ ಮನೆಯಲ್ಲಿರುವುದಾಗಿ ಕೇಳಿ, ವೇಷಾಂತರದಿಂದ ಹೋಗಿ, ಅವನ ಮನೆಯನ್ನು ಪತ್ತೆ ಮಾಡಿ, ಅಲ್ಲಿಯೇ ತಿರುಗಾಡುತ್ತಿದ್ದನು. ಅಷ್ಟರಲ್ಲಿ ಪರಂತಪನು ಬಂದು ಆ ಮನೆಯನ್ನು ಪ್ರವೇಶಿಸಿದನು. ಕೂಡಲೇ ಸತ್ಯಶರ್ಮ ಮೊದಲಾದವರು ಈತನನ್ನು ಕರೆದುಕೊಂಡು ಹೋಗಿ ಕೂರಿಸಿ ಕೊಂಡು, ಅನೇಕ ವಿಷಯಗಳನ್ನು ಕುರಿತು ಮಾತನಾಡುತಿದ್ದರು.
ಶಂಬರ- ಶಹಬಾಸ್! ಮಿತ್ರನೇ!! ಶಹಬಾಸ್ !!! ನೀನು ಬಹಳ ಚತುರನು. ಇದಕ್ಕಾಗಿ ನಿನಗೆ ನಾನು ಎಷ್ಟು ಬಹುಮಾನ ಮಾಡಿದಾಗ್ಗೂ ಕಡಮೆಯಾಗಿರುವುದು. ಇದಕ್ಕೆ ತಕ್ಕಂತೆ ನಾನು ಕೈಲಾದ ಮಟ್ಟಿಗೂ ಕೃತಜ್ಞತೆಯನ್ನು ತೋರಿಸುವೆನು. ಅವರ ಸಂಭಾಷಣೆಯಲ್ಲಿ ನೀನು ಗ್ರಹಿಸಿದ ಸಾರಾಂಶಗಳನ್ನು ಹೇಳು.

ಅರ್ಥಪರ- ಇನ್ನೇನೂ ಇಲ್ಲ ; ಸತ್ಯಶರ್ಮನು ರತ್ನಾಕರದ ಮಾಹಾತ್ಮ್ಯವನ್ನೂ ಅಲ್ಲಿನ ಭಯಾವಹವಾದ ಸಂಗತಿಗಳನ್ನೂ ವಿಸ್ತಾರವಾಗಿ ಹೇಳುತ್ತಿದ್ದನು.
೭೬
ಪರಂತಪ ವಿಜಯ

ಶಂಬರ- ಅದಕ್ಕೆ ಪರಂತಪನೇನು ಹೇಳಿದನು ?
ಅರ್ಥಪರ - ಅದನ್ನು ವಿಸ್ಮಯದಿಂದ ಕೇಳುತ್ತ ಇದ್ದರೂ-ಭೀತಿಪಡದೆ, ತಾನು ಕೆಲವು ದಿವಸಗಳವರೆಗೂ ರತ್ನಾಕರದಲ್ಲೇ ವಾಸಮಾಡುತ್ತಿರುವುದಾಗಿ ಹೇಳಿದನು.
ಶಂಬರ- ಅದಾಗತಕ್ಕುದಲ್ಲ. ರತ್ನಾಕರವು ಇವನ ವಶವಾಗದಂತೆ ಮಾಡತಕ್ಕ ಕೆಲಸವು ನನ್ನದಾಗಿರಲಿ. ಇನ್ನೇನು ವಿಶೇಷ?
ಅರ್ಥಪರ- ಆ ದಿವಸವೇ ಕಾಮಮೋಹಿನಿಗೂ ಪರಂತಪನಿಗೂ ವಿಧಿ ಪೂರ್ವಕವಾಗಿ ವಿವಾಹವು ನಡೆಯಿತು.
ಈ ಮಾತನ್ನು ಕೇಳಿದಕೂಡಲೆ, ಶಂಬರನು ಮೂರ್ಛಿತನಾಗಿ, ಸ್ವಲ್ಪ ಹೊತ್ತಿನ ಮೇಲೆ ಚೇತರಿಸಿಕೊಂಡು, ಮಿತಿಮೀರಿದ ಕೋಪಾವೇಶದೊಡನೆ, ಅರ್ಥಪರನನ್ನು ನೋಡಿ “ಎಲೈ ಕಪಟಿಯೆ! ನೀನು ನನಗೆ ಬಹಳ ಮೋಸವನ್ನು ಮಾಡಿದೆ. ಇವರ ವಿವಾಹ ಪ್ರಾರಂಭ ಕಾಲದಲ್ಲಿ ನೀನು ನನಗೇಕೆ ತಿಳಿಸದೆ ಹೋದೆ? ನಾನು ಆ ಕ್ಷಣದಲ್ಲಿ ವಿವಾಹವನ್ನು ನಿಲ್ಲಿಸುತಿದ್ದೆನು ಈಗ ನನ್ನ ಪ್ರಯತ್ನಗಳೆಲ್ಲವೂ ನಿಪ್ಪಲವಾದುವಲ್ಲಾ! ಅವರಿಬ್ಬರಿಗೂ ವಿವಾಹವಾದುದು ನಿಜವೇ? ನೀನು ನೋಡಿದೆಯಾ? ಎಂದನು.
ಅರ್ಥಪರ- ಅಯ್ಯಾ! ಕೋಪಿಸಬೇಡ; ಕೇಳು. ವಿವಾಹ ಪ್ರಾರಂಭದಲ್ಲಿ ನಾನು ನಿನಗೆ ತಿಳಿಸಬೇಕೆಂದು ಬಂದೆನು. ಆಗ ನೀನು ಮನೆಯಲ್ಲಿರಲಿಲ್ಲ. ಒಂದು ಚೀಟಿಯನ್ನು ಬರೆದು ನಿನ್ನ ಮೇಜಿನ ಮೇಲೆ ಇಟ್ಟು, ಮುಂದಿನ ಸಂಗತಿಗಳನ್ನು ಪರೀಕ್ಷಿಸುವುದಕ್ಕಾಗಿ ನಾನು ಹೊರಟುಹೋದೆನು. ಇವರಿಬ್ಬರ ವಿವಾಹವೂ ನಿರ್ವಿಘ್ನವಾಗಿ ನೆರವೇರಿತು. ನೆರೆಹೊರೆಯವರೆಲ್ಲರೂ ಬಂದಿದ್ದರು. ವಿವಾಹದ ಕರಾರೂ ಬರೆಯಲ್ಪಟ್ಟಿತು. ಅದನ್ನು ಸತ್ಯಶರ್ಮನೇ ಬರೆದು, ಇನ್ನೂ ತನ್ನ ಬಳಿಯಲ್ಲೇ ಇಟ್ಟುಕೊಂಡಿರುವನು.

ಶಂಬರನು ಈ ಮಾತನ್ನು ಕೇಳಿದಕೂಡಲೆ ತನ್ನ ಮೇಜನ್ನು ಹುಡುಕಲು, ಅರ್ಥಪರನು ಬರೆದಿಟ್ಟಿದ್ದ ಕಾಗದವು ಸಿಕ್ಕಿತು. ಇದನ್ನು ನೋಡಿ, ತನ್ನನ್ನೇ ತಾನು ನಿಂದಿಸಿಕೊಂಡು "ಎಲೈ ಅರ್ಥಪರನೇ! ಈಗ ಕೆಲಸವು ಕೈ ಮೀರಿತು. ಈ ವಿವಾಹದ ಸಂಗತಿಯು ಯಾರಿಗೂ ತಿಳಿಯಕೂಡದು. ಪರಂತಪನನ್ನು ಕೂಡಲೇ ಕೊಂದು, ಕಾಮಮೋಹಿನಿಗೆ ನನ್ನಲ್ಲಿ ಅನುರಾಗ
ಅಧ್ಯಾಯ ೯
೭೭

ವುಂಟಾಗುವಂತೆ ಮಾಡಿಕೊಳ್ಳುವೆನು ಈ ವಿಷಯದಲ್ಲಿ ನಿನ್ನ ಅಭಿಪ್ರಾಯವೇನು? " ಎಂದನು.
ಅರ್ಥಪರ- ಇದು ಕಷ್ಟಸಾಧ್ಯವು. ಆ ವಿವಾಹದ ಸಂಗತಿಯು ನೆರೆ ಹೊರೆಯವರಾದ ಐದಾರು ಮನೆಯವರಿಗೆ ತಿಳಿದುಹೋಗಿದೆ.
ಶಂಬರ- ಹಾಗಾದರೆ, ಅದನ್ನು ಬಲ್ಲವರನ್ನೆಲ್ಲ ಒಟ್ಟಿಗೆ ಕೊಂದುಬಿಟ್ಟರೆ, ನನ್ನ ಮನೋರಥವು ಸಿದ್ಧಿಸುವದಲ್ಲವೆ?
ಅರ್ಥಪರ- ಅದು ಹೇಗೆ ಸಾಧ್ಯವಾಗುವುದು? ಪರಂತಪನು ಸಾಧಾರಣನಲ್ಲ. ಈ ನಮ್ಮ ಪ್ರಯತ್ನವೇನಾದರೂ ಪ್ರಕಟವಾದರೆ, ನಮ್ಮನ್ನು ಮರಣ ದಂಡನೆಗೆ ಗುರಿಮಾಡುವನು.
ಶಂಬರ - ಹೆದರಬೇಡ, ನಿನಗೆ ಹತ್ತು ಲಕ್ಷ ವರಹಗಳನ್ನು ಕೊಡುವೆನು. ನನ್ನ ಪ್ರಯತ್ನಕ್ಕೆ ಸಹಾಯಕನಾಗಿರು.
ಅರ್ಥಪರ- ಅಯ್ಯಾ! ಶಂಬರ 'ಹಾಗಾದರೆ, ನೀನು ಕೊಡತಕ್ಕ ಹಣವನ್ನು ಮೊದಲು ಕೊಡಬೇಕು. ಈ ಪ್ರಯತ್ನದಲ್ಲಿ ನಾನು ಒಂದು ವೇಳೆ ಸಿಕ್ಕಿಕೊಂಡರೂ, ಲ೦ಚವನ್ನಾದರೂ ಕೊಟ್ಟು ಬಿಡಿಸಿಕೊಂಡು ಬರಬೇಕಲ್ಲವೆ! ಆದುದರಿಂದ, ನೀನು ಮೊದಲು ಹಣವನ್ನು ಕೊಟ್ಟರೆ ಸಹಾಯಕನಾಗಿರುವೆನು, ಇಲ್ಲದಿದ್ದರೆ ನನ್ನನ್ನು ಅಪೇಕ್ಷಿಸಬೇಡ.
ಕೂಡಲೆ ಶಂಬರನು ಆ ಹಣಕ್ಕಾಗಿ ತನ್ನ ವಶದಲ್ಲಿದ್ದ ಸುಮಿತ್ರನ ಅಮೂಲ್ಯವಾದ ಕೆಲವು ರತ್ನಾಭರಣಗಳನ್ನು ಕೊಡಲು, ಅರ್ಥಪರನು ಅವನ್ನೆಲ್ಲ ತೆಗೆದುಕೊಂಡು ಹೋಗಿ ಮನೆಯಲ್ಲಿ ಬಚ್ಚಿಟ್ಟು ಬಂದು "ಅಯ್ಯಾ ! ಮಿತ್ರನೆ ! ಇನ್ನು ನೀನು ಹೇಳಿದ ಕೆಲಸವನ್ನು ಮಾಡುವುದರಲ್ಲಿ ಬದ್ಧನಾಗಿರುತ್ತೇನೆ. ಅದರಿಂದ ಯಾವ ವಿಪತ್ತುಗಳು ಬಂದರೂ ಅನುಭವಿಸುವುದಕ್ಕೂ ಸಿದ್ಧನಾಗಿದ್ದೇನೆ.” ಎಂದು ಕೇಳಿದನು.
ಶಂಬರ-ನೀನು ಮನಃಪೂರ್ವಕವಾಗಿ ಮಾಡುವೆಯೋ?
ಅರ್ಥಪರ-ಸತ್ಯವಾಗಿಯೇ ನೀನು ಏನು ಹೇಳಿದರೂ ಮಾಡುವೆನು, ಹೇಳು.

ಶಂಬರ- ಹಾಗಾದರೆ ಆ ನೀಚನಾದ ಪರಂತಪನನ್ನು ಕೊಲ್ಲಬೇಕು.
೭೮
ಪರಂತಪ ವಿಜಯ

ಅರ್ಥಪರ-ಇದು ಸಾಧ್ಯವಲ್ಲ. ಇದಕ್ಕೆ ಮಾತ್ರ, ನಾನು ಪ್ರಯತ್ನಿಸಿದರೆ ನನ್ನ ತಲೆ ಹೋಗುವುದು,
ಶಂಬರ- ಅದೂ ಬೇಡ. ಅವನನ್ನು ಹಿಡಿದುತಂದು ಸೆರೆಯಲ್ಲಿಟ್ಟು ನಾನಾವಿಧವಾದ ಹಿಂಸೆಯನ್ನುಂಟುಮಾಡಿ ಕಾಮಮೋಹಿನಿಯನ್ನೂ ಆ ವಿವಾಹದ ಕರಾರನ್ನೂ ಸ್ವಾಧೀನಪಡಿಸಿಕೊ. ಇದನ್ನು ನೋಡಲಾರದೆ, ಅವನು ತಾನಾಗಿಯೇ ಸಾಯುವನು. ಅವನು ಸಾಯದೆ ಇದ್ದರೆ ಅವನನ್ನು ಕೊಂದುಬಿಡು.
ಅರ್ಥಪರ- ಪ್ರಾಣಹಿಂಸೆಗೆ ಮಾತ್ರ ಎಂದಿಗೂ ನಾನು ಒಪ್ಪತಕ್ಕವನಲ್ಲ. ಅವನನ್ನು ಉಪಾಯದಿಂದ ಹಿಡಿದು ಯಾವಜ್ಜೀವವೂ ಸೆರೆಯಲ್ಲಿಡುತ್ತೇನೆ. ಮಾಧವನ ಉಯಿಲನ್ನು ಅಪಹರಿಸಿ ರತ್ನಾಕರವನ್ನು ನಿನ್ನ ಸ್ವಾಧೀನಕ್ಕೆ ಬರುವಂತೆಯೂ ಮಾಡುತ್ತೇನೆ. ಕಾಮಮೋಹಿನಿಗೆ ಪರಂತಪನು ಸತ್ತನೆಂದು ಪ್ರತ್ಯಯವನ್ನುಂಟುಮಾಡಿ, ಅವಳಿಗೆ ಪುನಃ ನಿನ್ನೊಡನೆ ವಿವಾಹವಾಗುವಂತೆಯೂ ಮಾಡಬಹುದು. ಇಷ್ಟಲ್ಲದೆ, ಪ್ರಾಣಹಿಂಸೆಗೆ ಪ್ರಯತ್ನ ಪಡುವ ಪಕ್ಷದಲ್ಲಿ, ನಿನ್ನ ಸಹವಾಸವೇ ನನಗೆ ಬೇಡ. ಇದು ನಿನಗೆ ಅಭಿಮತವಲ್ಲದಿದ್ದರೆ, ನೀನು ಕೊಟ್ಟಿರುವ ಆಭರಣಗಳನ್ನೆಲ್ಲ ಹಿಂದಿರುಗಿ ಕೊಟ್ಟು ಬಿಡುವೆನು.
ಇದನ್ನು ಕೇಳಿ ಶಂಬರನು ಭಗ್ನಮನೋರಥನಾದುದಲ್ಲದೆ, ತನ್ನ ಪ್ರಯತ್ನವನ್ನು ಹೊರಪಡಿಸುವನೋ ಏನೋ ಎಂದು ಬಹಳ ಭೀತಿಯನ್ನು ಹೊಂದಿ, ಈ ಕೊಲೆಯ ವಿಷಯವಾಗಿ ಈತನೊಡನೆ ಪ್ರಸ್ತಾಪ ಮಾಡಬಾರದಾಗಿತ್ತೆಂದು ಕೊಂಡು, ಮುಂದೆ ತನ್ನ ಯಾವ ಕೊಲೆಯ ವಿಷಯವಾದ ಪ್ರಯತ್ನವನ್ನೂ ಇವನೊಡನೆ ಹೇಳಬಾರದೆಂದು ನಿಷ್ಕರ್ಷಿಸಿಕೊಂಡನು.
ಅರ್ಥಪರ- ಅಯ್ಯಾ! ಇದೇನು ಯೋಚಿಸುತ್ತಿರುವೆ?

ಶಂಬರ- ಏನೂ ಇಲ್ಲ; ನೀನು ಹೇಳಿದಂತೆಯೇ ಮಾಡುವುದು ಯುಕ್ತ, ಪರಂತಪನನ್ನು ಕೊಲ್ಲುವುದಕ್ಕಿಂತ ಸೆರೆಯಲ್ಲಿಡುವುದೇ ಮೇಲು. ಇನ್ನು ಮುಂದೆ ನಿನ್ನ ಇಷ್ಟದಂತೆ ನಡೆಸೋಣ, ಮಾಧವನ ಉಯಿಲಿನ ವಿಷಯದಲ್ಲಿ ಹೇಗೆ ಮಾಡೋಣ ?
ಅಧ್ಯಾಯ ೯
೭೯

ಅರ್ಥಪರ- ಈ ದಿನ ಹನ್ನೊಂದುಘಂಟೆಯ ವೇಳೆಯಲ್ಲಿ ಆ ವುಯಿಲನ್ನು ರಿಜಿಸ್ಟರ್ ಮಾಡಿಸುವುದಕ್ಕಾಗಿ ಹೋಗಿದ್ದೆವು. ಇದಕ್ಕೆ ಮೊದಲೇ ನಾನು ಕಛೇರಿಯ ನೌಕರರಿಗೆಲ್ಲ ಅಲ್ಪಸ್ವಲ್ಪ ದ್ರವ್ಯವನ್ನು ಕೊಟ್ಟು, ಆ ದಿನ ಸಾವಕಾಶ ಮಾಡಿಕೊಂಡು ಬರುವಂತೆ ಹೇಳಿದ್ದನು. ಇದರಂತೆ ಅವರೂಬ್ಬರೂ ಕಾಲಕ್ಕೆ ಸರಿಯಾಗಿ ಬಂದಿರಲಿಲ್ಲ. ಅಲ್ಲಿನ ಅಧಿಕಾರಿ ಮಾತ್ರ ಬಂದಿದ್ದನು. ಆ ಪರಂತಪನೂ ನಾನೂ ಹೋಗಿ ಅವನ ವಶಕ್ಕೆ ಉಯಿಲನ್ನು ಕೊಟ್ಟೆವು. ಪರಂತಪನ ಪ್ರತ್ಯಮಾರ್ಥವಾಗಿ, ನಾನು ಆ ವುಯಿಲಿನ ಪೂರ್ವಾಪರಗಳನ್ನೆಲ್ಲ ಅಲ್ಲಿನ ಅಧಿಕಾರಿಗೆ ತಿಳಿಸಿ, ಪುನಃ ಬರುವುದಾಗಿ ಹೇಳಿ, ಅವನನ್ನು ಕರೆದುಕೊಂಡು ಹೊರಟು ಬಂದೆನು. ಈಗ ಒಂದು ಲಕ್ಷ ರೂಪಾಯಿಗಳಾದರೆ, ಅದನ್ನು ರಿಜಿಸ್ಟ್ರಾರಿಗೆ ಕೊಟ್ಟು ಆ ಕಾಗದವನ್ನು ತೆಗೆದುಕೊಂಡು ಬರಬಹುದು.
ಶಂಬರ- ನಗದು ಹಣವು ನನ್ನ ಹತ್ತಿರದಲ್ಲಿಲ್ಲ. ಜವಾಹಿರಿನಗಗಳನ್ನು ಕೊಡುತ್ತೇನೆ. ಇದನ್ನು ಎಲ್ಲಾದರೂ ಇಟ್ಟು ಹಣವನ್ನು ತೆಗೆದುಕೊಂಡು ಹೋಗು (ಎರಡು ಲಕ್ಷ ರೂಪಾಯಿ ಬೆಲೆಯುಳ್ಳ ಪದಕವನ್ನು ಕೊಟ್ಟನು).
ಅರ್ಥಪರನು ಅದನ್ನೂ ತೆಗೆದುಕೊಂಡು ಹೋಗಿ ಬಚ್ಚಿಟ್ಟು, ರಿಜಿಸ್ಟ್ರಾರರ ಬಳಿಗೆ ಹೋಗಿ, ದಾಖಲೆಗೋಸ್ಕರ ಆ ವುಯಿಲು ಬೇಕಾಗಿದೆಯೆಂದು ಹೇಳಿ, ಅದನ್ನು ತಂದು ಶಂಬರನ ವಶಕ್ಕೆ ಕೊಡಲು, ಶಂಬರನು ಅದನ್ನು ಪೆಟ್ಟಿಗೆಯಲ್ಲಿ ಭದ್ರಪಡಿಸಿಟ್ಟನು.
ಅನಂತರ, ಅರ್ಥಪರನು, ಆ ದಿನ ಮಧ್ಯಾಹ್ನಾತ್ಪರ ತಾನು ಪರಂತಪನನ್ನು ರತ್ನಾಕರಕ್ಕೆ ಕರೆದುಕೊಂಡು ಬರುವುದಾಗಿಯೂ ಅಲ್ಲಿ ತಕ್ಕ ಸನ್ನಾಹಗಳನ್ನು ಮಾಡಿಕೊಂಡಿದ್ದು ಅವನನ್ನು ಹಿಡಿದು ಏಕಾಂತವಾದ ಸ್ಥಳದಲ್ಲಿಡಬೇಕೆಂಬುದಾಗಿಯ ಶಂಬರನಿಗೆ ತಿಳಿಸಲು, ಅವನು ಅದಕ್ಕೆ ತಕ್ಕ ಸನ್ನಾಹಗಳನ್ನು ಮಾಡಿಸಿದನು.

♠♠ ♠♠

೮೦
ಪರಂತಪ ವಿಜಯ

ಅಧ್ಯಾಯ ೧೦.

ಅರ್ಥಪರನು, ಅಲ್ಲಿಂದ ಪರಂತಪನ ಬಿಡಾರಕ್ಕೆ ಹೋಗಿ, ಆತನನ್ನು ಕರೆದುಕೊಂಡು ರತ್ನಾಕರಕ್ಕೆ ಹೊರಟನು. ಆ ಮಾರ್ಗದಲ್ಲಿ ಸತ್ಯಶರ್ಮನ ಮನೆಯು ಸಿಕ್ಕಿತು, ಪರಂತಪನು, ಅರ್ಥಪರನನ್ನು ಮೆಲ್ಲಗೆ ಹೋಗುತ್ತಿರುವಂತೆ ಹೇಳಿ, ತಾನು ಆ ಮನೆಯನ್ನು ಪ್ರವೇಶಿಸಿ, ಸತ್ಯಶರ್ಮನಿಗೂ ತನ್ನ ಪ್ರಿಯೆಯಾದ ಕಾಮಮೋಹಿನಿಗೂ ತನ್ನ ಪ್ರಯಾಣದ ಸಂಗತಿಯನ್ನು ತಿಳಿಸಿದನು. ಅದನ್ನು ಕೇಳಿ, ಕಾಮಮೋಹಿನಿಯು ಭಯಗ್ರಸ್ತೆಯಾಗಿ, ಆತನ ಕೈಯನ್ನು ಹಿಡಿದುಕೊಂಡು "ಇದು ಅಪಾಯಕರವಾದ ಸ್ಥಳ; ಹೋಗಕೂಡದು.” ಎಂದು ನಿರ್ಬಂಧಿಸಿ ಪ್ರಾರ್ಥಿಸಿಕೊಳ್ಳಲು, ಪರಂತಪನು "ಎಲೆ ಪ್ರಿಯೆ! ಹೆದರಬೇಡ, ನಾನು ಆಯುಧಪಾಣಿಯಾಗಿರುತ್ತೇನೆ. ನನಗೆ ಯಾವ ಅಪಾಯವೂ ಸಂಭವಿಸುವುದಿಲ್ಲ. ಅಲ್ಲಿ ಜನಗಳಿಗೆ ಉಂಟಾಗಿರುವ ಭಯವೆಲ್ಲ ನಿರರ್ಥಕವಾದುದು. ಅದನ್ನು ನಿನಗೆ ವಾಸಗೃಹವನ್ನಾಗಿ ಮಾಡಬೇಕೆಂದಿದ್ದೇನೆ. ಅದು ವಾಸಕ್ಕೆ ಬಹು ಅನುಕೂಲವಾಗಿದೆ. ಅದರಲ್ಲಿ ಇನ್ನೂ ಕೆಲವು ಬೇಕಾದ ಆನುಕೂಲ್ಯಗಳನ್ನುಂಟುಮಾಡಿ, ನಿಮ್ಮೆಲ್ಲರನ್ನೂ ಅಲ್ಲಿಗೆ ಕರೆಸಿಕೊಳ್ಳುತ್ತೇನೆ. ಹೆದರಬೇಡ." ಎಂದು ಹೇಳಲು, ಸತ್ಯಶರ್ಮನೇ ಮೊದಲಾದವರೆಲ್ಲರೂ ಅವಳಿಗೆ ಧೈರ್ಯ ಹೇಳಿದರು.
ಕಾಮಮೋಹಿನಿ- ಪ್ರಿಯನೇ! ನಿನ್ನ ಧೈರ್ಯ ಸಾಹಸಗಳು ನನಗೆ ಭಯಾವಹಗಳಾಗಿರುವುವು. ಅದು ನಮಗೆ ವಾಸಾರ್ಹವೆಂಬುದರಲ್ಲಿ ನನಗೆ ನಂಬುಗೆ ತೋರುವುದಿಲ್ಲ. ಅಂತೂ, ಆ ಪ್ರದೇಶವು ಅಪಾಯಕರವಾದುದೇ ಸರಿ, ಪುನಃ ನಿನ್ನನ್ನು ನಾನು ನೋಡುವೆನೋ ಇಲ್ಲವೋ ಎಂಬ ಸಂಶಯವೂ ಸಹ ನನ್ನಲ್ಲಿ ನೆಲೆಗೊಂಡಿರುವುದು.

ಪರಂತಪ- ಎಲೆ ಪ್ರಿಯೆ ! ಇದೇನು ನೀನೂ ಹೀಗೆ ಹೆದರುವೆ? ಈ ಭಯವು ನಿನಗೆ ಯೋಗ್ಯವಾದುದಲ್ಲ, ನಾಳೆ ಮಧ್ಯಾಹ್ನದೊಳಗಾಗಿ ನಾನು ಇಲ್ಲಿಗೆ ಬರುವೆನು, ನೋಡು.
ಅಧ್ಯಾಯ ೯
೮೧

ಸತ್ಯಶರ್ಮ- ಅಯ್ಯಾ! ನೀನು ಬಹು ಜಾಗರೂಕನಾಗಿರು. ಆ ಪ್ರದೇಶವು ಭೂತಪ್ರೇತಾದಿಗಳಿಗೂ ಅನೇಕ ದುರ್ದೇವತೆಗಳಿಗೂ ಆಶ್ರಯವಾಗಿರುವುದೆಂದು ಕೇಳುತ್ತೇನೆ. ಜೋಕೆ! ಜೋಕೆ!!
ಪರಂತಪ -(ನಸುನಕ್ಕು) ಇದೀಗ ಅತ್ಯಾಶ್ಚರ್ಯಕರವಾಗಿದೆ. ಭೂತ ಪ್ರೇತ ಪಿಶಾಚಾದಿಗಳು ಯಾವುವಿದ್ದರೂ, ಅವುಗಳನ್ನೆಲ್ಲ ಹೊರಡಿಸಿ ಅದನ್ನು ವಾಸಾರ್ಹವಾಗಿ ಮಾಡುತ್ತೇನೆ; ಚಿಂತಿಸಬೇಡ. ಆದರೆ, ನಾನು ಬರುವವರೆಗೂ ಈ ನನ್ನ ಪ್ರಿಯೆಯನ್ನೂ ನಮ್ಮಿಬ್ಬರ ವಿವಾಹದ ಕರಾರನ್ನೂ ಕಾಪಾಡಿಕೊಂಡಿರು.
ಸತ್ಯಶರ್ಮ - ಈ ವಿಷಯದಲ್ಲಿ ನೀನು ಹೆದರದೆ ಧೈರ್ಯವಾಗಿರು ನಾನು ನೋಡಿಕೊಳ್ಳುವೆನು.
ಪರಂತಪ - (ತನ್ನ ಕೈಪೆಟ್ಟಿಗೆಯನ್ನು ಕಾಮಮೋಹಿನಿಯ ವಶಕ್ಕೆ ಕೊಟ್ಟು) ಪ್ರಿಯೆ! ಇದರಲ್ಲಿ ೨೦ ಲಕ್ಷ ಪೌನುಗಳ ಬ್ಯಾಂಕು ನೋಟುಗಳಿರುತ್ತವೆ. ಇದನ್ನು ನೀನು ಭದ್ರವಾಗಿಟ್ಟುಕೊಂಡಿರು. ನಿನಗೆ ಬೇಕಾದಷ್ಟನ್ನು ತೆಗೆದುಕೊ. ಸತ್ಯಶರ್ಮಾದಿಗಳಿಗೆ ಬೇಕಾದಷ್ಟು ಖರ್ಚಿಗೆ ಕೊಡು. ಇದರ ವಿನಿಯೋಗದ ವಿಷಯದಲ್ಲಿ ನಿನಗೆ ಸರಸ್ವಾತಂತ್ರವನ್ನೂ ವಹಿಸುವೆನು, ಹೋಗು.
ಅದರ ಬೀಗದ ಕೈಯನ್ನು ಅವಳ ವಶಕ್ಕೆ ಕೊಟ್ಟು, ಅವರೆಲ್ಲರ ಅನುಮತಿಯನ್ನೂ ತೆಗೆದುಕೊಂಡು, ಕುದುರೆಯನ್ನು ಹತ್ತಿ ಹೊರಟು, ತನ್ನ ನಿರೀಕ್ಷಣೆಯಿಂದಲೇ ಮೆಲ್ಲನೆ ನಡೆಯುತ್ತಿದ್ದ ಅರ್ಥಪರನನ್ನು ಸೇರಿದನು. ಸೂರ್ಯಾಸ್ತಮಯದೊಳಗಾಗಿಯೇ ಕಣಿವೆಗಳ ಮಾರ್ಗವಾಗಿ ರತ್ನಾಕರದ ಕಟ್ಟಡದ ಸಮೀಪಕ್ಕೆ ಸೇರಿ ಅದರ ರಾಮಣೀಯಕವನ್ನು ನೋಡಿ ಮನಸ್ಸಿನಲ್ಲಿ ಅತ್ಯಾಶ್ಚರ್ಯ ಪಡುತ್ತಿರುವ ಪರಂತಪನು, ಅರ್ಥಪರನನ್ನು ನೋಡಿ “ಅಯ್ಯಾ! ಇದರ ಅಂದವನ್ನು ನೋಡಿದೆಯಾ? ಇದನ್ನು ನಿರ್ಮಿಸಿದ ಶಿಲ್ಪಿಯ ಚಾತುರ್ಯವು ಅನ್ಯಾದೃಶವಾದುದೆಂದು ವ್ಯಕ್ತಪಡುವುದು"ಎಂದನು.

ಅರ್ಥಪರ - ನಿವಾಸಾರ್ಹವಲ್ಲದ ಈ ಕಟ್ಟಡವು, ನನಗೆ ಸ್ಮಶಾನದಲ್ಲಿರುವ ಗೋರಿಯಂತೆ ಕಾಣುವುದು. ಇದನ್ನು ನೋಡಿ ನೀನೇನೋ ಬಹಳ ಅಶ್ಚರ್ಯ ಪಡುವೆಯಲ್ಲ!
೮೨
ಪರಂತಪ ವಿಜಯ

ಪರಂತಪ- ನಿನ್ನ ಕಣ್ಣಿಗೆ ಏನೋ ರೋಗವು ಪ್ರಾಪ್ತವಾಗಿರಬಹುದು. ಈ ಪರ್ವತಗಳ, ಈ ಕೋಟೆಯ, ಈ ಕಟ್ಟಡದಲ್ಲಿ ತೋರಿಸಲ್ಪಟ್ಟಿರುವ ಶಿಲ್ಪ ಚಾತುರ್ಯಗಳೂ ಸಹ, ದೇವತೆಗಳ ಮನಸ್ಸನ್ನೂ ಆಕರ್ಷಿಸುವಂತಿರುವುವಲ್ಲ! ಇದು ನಿನಗೆ ಸ್ಮಶಾನದಂತೆ ಕಾಣಬೇಕಾದರೆ, ನಿನ್ನ ವಿವೇಕ ಶೂನ್ಯತೆಯನ್ನು ಎಷ್ಟೆಂದು ಹೇಳೋಣ!
ಅರ್ಥಪರ- "ಹೆತ್ತವರಿಗೆ ಹೆಗ್ಗಣ ಮುದ್ದು” ಎಂಬ ಗಾದೆಯು ನಿನ್ನಲ್ಲಿ ಸಾರ್ಥಕವಾಯಿತು. ಬಾ; ಒಳಗೆ ನೋಡೋಣ,

ಇಬ್ಬರೂ ಮಾತನಾಡುತ್ತ ಬಾಗಿಲ ಬಳಿಗೆ ಹೋಗಿ, ತಮ್ಮ ತಮ್ಮ ಕುದುರೆಗಳನ್ನು ಬಾಗಿಲಲ್ಲಿ ಕಟ್ಟಿಹಾಕಿ, ಬಾರುಮಾಡಿದ ಪಿಸ್ತೂಲ್‌ಗಳನ್ನೂ ದೀಪಗಳನ್ನೂ ತರಿಸಿಕೊಂಡು, ಒಳಕ್ಕೆ ಪ್ರವೇಶಿಸಿದರು. ಸ್ವಲ್ಪ ದೂರ ಹೋದಮೇಲೆ, ಅಲ್ಲಿ ಸಾವಿರಾರು ಗಜ ವಿಸ್ತಾರವುಳ್ಳ ಒಂದಾನೊಂದು ಹಜಾರವು ಕಾಣಿಸಿತು. ಈ ಕಟ್ಟಡವು ಕರಿಕಲ್ಲುಗಳಿಂದ ಅತಿ ಮನೋಹರವಾಗಿ ಕಟ್ಟಲ್ಪಟ್ಟಿತ್ತು. ಅದರ ಮುಂಭಾಗದ ಉಭಯ ಪಾರ್ಶ್ವಗಳಲ್ಲಿಯೂ, ಊಳಿಗದವರು ಇರುವುದಕ್ಕೆ ಯೋಗ್ಯಗಳಾದ ಹನ್ನೆರಡು ಹನ್ನೆರಡು ಕೊಟಡಿಗಳಿದ್ದವು. ಅದರ ಒಳಭಾಗಕ್ಕೆ ಪ್ರವೇಶಿಸಿ ನೋಡಲು, ಚಿತ್ರ ವಿಚಿತ್ರ ವಾದ ಪ್ರತಿಮೆಗಳ ಕಂದಿಲ್ ಗುಳೂಫ್ ಮೊದಲಾದುವುಗಳೂ ಕಟ್ಟಲ್ಪಟ್ಟಿದ್ದುವು. ಇನ್ನೂ ಮುಂದೆ ಹೋಗಿ ಹಿತ್ತಲು ಬಾಗಿಲನ್ನು ದಾಟಿ ನೋಡಲು, ಅಲ್ಲಿ ಅತಿ ಮನೋಹರವಾದ ಉಪವನವೊಂದು ಗೋಚರವಾಯಿತು. ಅದರ ನಾಲ್ಕು ಕಡೆಗಳಲ್ಲಿಯೂ ಇವರು ಮೊದಲು ನೊಡಿದ ತೊಟ್ಟಿಗೆ ಸಮಾನಗಳಾದ ನಾಲ್ಕು ತೊಟ್ಟಿಗಳಿದ್ದುವು. ಇವುಗಳು, ಏಳು ಉಪ್ಪರಿಗೆಗಳುಳ್ಳವಾಗಿ ಅತಿ ವಿಚಿತ್ರಗಳಾಗಿದ್ದುವು. ಅದನ್ನೂ ದಾಟಿಹೋಗಲು, ಮತ್ತೊಂದು ಉಪವನವು ಗೋಚರವಾಯಿತು. ಅದನ ಮಧ್ಯದಲ್ಲಿ ದೊಡ್ಡ ಕಟ್ಟಡವೊಂದು ಕಾಣಬಂದಿತು. ಆದರೆ, ಅದು ಎರಡು ಅಂತಸ್ತುಗಳು ಮಾತ್ರ ಉಳ್ಳುದಾಗಿದ್ದಿತು. ಅದನ್ನು ಪರೀಕ್ಷಿಸಿ ನೋಡಲು, ಅದರಲ್ಲಿರುವ ಪ್ರತಿಯೊಂದು ಕೊಠಡಿಯೂ ಕ್ಷುದ್ರಮೃಗಗಳನ್ನೂ ಅಥವಾ ಸೆರೆ ಹಾಕಲ್ಪಟ್ಟವರನ್ನೂ ಇಡುವುದಕ್ಕಾಗಿ ಮಾಡಲ್ಪಟ್ಟಿರುವಂತೆ ಕಾಣಬಂದಿತು. ಅವುಗಳನ್ನೆಲ್ಲಾ ನೋಡುತ್ತ, ಈ ಕಟ್ಟಡಗಳಿಗಾಗಿ ಎಷ್ಟು ಕೋಟಿ ದ್ರವ್ಯಗಳು
ಅಧ್ಯಾಯ ೯
೮೩

ಖರ್ಚಾಗಿರಬಹುದೆಂದು ಅತ್ಯಾಶ್ಚರ್ಯಪಡುತ್ತ, ಎಲ್ಲಾ ಕಟ್ಟಡಗಳನ್ನೂ ಒಂದೊಂದಾಗಿ ಪರೀಕ್ಷಿಸುತ್ತಿದ್ದರು. ಇದೆಲ್ಲವೂ ಪೂರಯಿಸುವುದರೊಳಗಾಗಿ, ರಾತ್ರಿ ಹನ್ನೆರಡು ಗಂಟೆಯ ಹೊತ್ತಾಯಿತು.
ಪರಂತಪ- ಅಯ್ಯಾ! ಅರ್ಥಪರನೆ! ಈ ಕಟ್ಟಡವನ್ನು ಹತ್ತಿ ಇಳಿದು ಬಹಳ ಆಯಾಸವಾಗಿರುವುದು. ಇಲ್ಲೆಲ್ಲಾದರೂ ಸ್ವಲ್ಪ ವಿಶ್ರಮಿಸಿಕೊಳ್ಳೋಣವೇ?
ಅರ್ಥಪರ- ಚೆನ್ನಾಯಿತು! ಚೆನ್ನಾಯಿತು!! ಈ ಪ್ರದೇಶವು ಭೂತ ಪ್ರೇತ ಪಿಶಾಚಾದಿಗಳಿಗೆ ಮುಖ್ಯಾಶ್ರಯವಾದುದು. ಈ ಮಧ್ಯರಾತ್ರಿಯಲ್ಲಿ - ಪಿಶಾಚಗಳು ಸಂಚರಿಸುವ ವೇಳೆಯಲ್ಲಿ - ಇಲ್ಲಿರತಕ್ಕುದು ಸರ್ವಥಾ ತರವಲ್ಲ. ಇದಕ್ಕಿಂತ, ಕಾಡಿನಲ್ಲಾದರೂ ಮಲಗಬಹುದು.
ಪರಂತಪ - ಇದೇನು - ವಿದ್ಯಾವಂತನಾಗಿಯೂ ಲೋಕ ವ್ಯವಹಾರಜ್ಞನಾಗಿಯೂ ಇರುವ ನೀನೇ ಈ ರೀತಿಯಲ್ಲಿ ಹೆದರುವೆ? ಯುಕ್ತಾಯುಕ್ತ ವಿವೇಕವಿಲ್ಲದ ಎಳೆಯ ಮಕ್ಕಳ ರೀತಿಯಲ್ಲಿ, ವಿವೇಕಶೂನ್ಯವಾದ ಮಾತುಗಳನ್ನು ಆಡುವೆಯಲ್ಲಾ!
ಅರ್ಥಪರ-ಹಾಗೋ? ಹಾಗಾದರೆ ನಾನು ಹೇಳುವುದು ನಿಜವೋ ಸುಳ್ಳೋ ಎಂಬುದು, ನಿನಗೆ ಇನ್ನು ಕ್ಷಣಕಾಲದೊಳಗಾಗಿ ವ್ಯಕ್ತವಾಗುವುದು.

ಹೀಗೆ ಮಾತನಾಡುತ್ತಿರುವಷ್ಟರಲ್ಲಿಯೇ, ಶಂಬರನ ಸಹಾಯದಿಂದ ಅರ್ಥಪರನು ಮೊದಲೇ ನಿರ್ಮಿಸಿದ್ದ ಮನುಷ್ಯ ಮುಖವುಳ್ಳುದಾಗಿಯೂ ಸರ್ಪಾಕಾರವಾಗಿಯೂ ಇರುವ ಒಂದಾನೊಂದು ಯಂತ್ರವು, ಅತ್ಯಾರ್ಭಟದೊಡನೆ ಪರಂತಪನ ಅಭಿಮುಖವಾಗಿ ಬಂದಿತು. ಅರ್ಥಪರನು ಭಯವನ್ನು ನಟಿಸುತ ದೂರಕ್ಕೆ ಓಡಿಹೋಗಲು, ಪರಂತಪನು ಬಾರುಮಾಡಿದ ಪಿಸ್ತೂಲನ್ನು ಹಾರಿಸಿದನು. ಕೂಡಲೇ ಶಂಬರನಿಂದ ನಿಯಮಿತರಾದ ಕೆಲ ಭಟರು ಹಿಂದುಗಡೆಯಿಂದ ಬಂದು ಅವನ ಕೈಲಿದ್ದ ಪಿಸ್ತೂಲನ್ನು ಕಿತ್ತುಕೊಂಡು, ಕೈಕಾಲುಗಳಿಗೆ ಸಂಕಲೆಯನ್ನು ಹಾಕಿ, ಶಂಬರನ ಬಳಿಗೆ ಕರೆದುಕೊಂಡು ಹೋದನು. ಆಗ ಪರಂತಪನು ಸ್ವಲ್ಪ ಹೊತ್ತು ದಿಗ್ಭ್ರಾಂತನಾಗಿದ್ದು, ಕೂಡಲೇ ಚೇತರಿಸಿಕೊಂಡು, ಶಂಬರನನ್ನೂ ಅವನ ದೂತ
೮೪
ಪರಂತಪ ವಿಜಯ

ರನ್ನೂ ನೋಡಿ "ಓಹೋ! ಮೋಸಹೋದೆನು! ನನ್ನನ್ನು ಕೊಲ್ಲುವುದಕ್ಕಾಗಿ ಶಂಬರನ ಪ್ರೇರಣೆಯಿಂದ ಅರ್ಥಪರನು ಈ ತಂತ್ರಗಳನ್ನು ನಡೆಸಿರಬಹುದು. ಇವರ ಕೈಗೆ ನಾನು ಸಿಕ್ಕಿಬಿದ್ದಿರುವನು. ಇನ್ನೇನು ಮಾಡುತ್ತಾರೋ ತಿಳಿಯದು." ಎಂದು ನಾನಾವಿಧವಾಗಿ ಚಿಂತಿಸುತ್ತ ಸ್ತಬ್ದನಾದನು.
ಶಂಬರ- ಎಲೆ ದುರಾತ್ಮನೆ! ನನ್ನ ಪ್ರೇಮಪಾತ್ರಳನ್ನು ಉಪಾಯಾಂತರದಿಂದ ಸ್ವಾಧೀನ ಪಡಿಸಿಕೊಂಡೆಯಲ್ಲ! ಈಗ ಏನುಹೇಳುತ್ತೀಯೆ?
ಪರಂತಪ- ಹೇಳುವುದೇನು? ನೀನು ದುರಾತ್ಮನು. ನನ್ನನ್ನು ಸಿಕ್ಕಿಸಿಕೊಂಡೆನೆಂದು ಗರ್ವ ಪಡಬೇಡ. ಈ ನಿನ್ನ ಸಂತೋಷವು ಸ್ಥಿರವಾಗಿರಲಾರದು. ನಿನಗೆ ಈಗ ತೋರುವ ಪ್ರತಿಕಾರಗಳನ್ನೆಲ್ಲ ಮಾಡು, ಅದಕ್ಕೆ ತಕ್ಕ ಫಲವನ್ನು ನೀನು ಕೂಡಲೇ ಅನುಭವಿಸುವೆ. ನಿನ್ನ ಹೆದರಿಕೆಗಳಿಗೆಲ್ಲ ನಾನು ಹೆದರತಕ್ಕವನು. ನನ್ನನ್ನು ಜೀವಸಹಿತವಾಗಿ ಬಿಟ್ಟಲ್ಲಿ, ನಾನೇ ನಿನಗೆ ತಕ್ಕ ಪ್ರತೀಕಾರವನ್ನು ಮಾಡುವೆನು; ಅಥವಾ ನನ್ನ ಪ್ರಾಣವನ್ನು ನೀನು ತೆಗೆದರೂ, ಬೇರೇ ಜನರಿಂದ ನಿನಗೆ ಅಪಾಯ ಸಂಭವಿಸದೆ ಇರಲಾರದು.
ಶಂಬರ- ನೀನು ನನ್ನ ಪ್ರಾಣ ಪ್ರಿಯಳನ್ನು ಅಪಹರಿಸಿದ್ದಕ್ಕೆ ತಕ್ಕ ಪ್ರತೀಕಾರವನ್ನು ಈಗ ನಾನು ನಿನಗೆ ಮಾಡದೆ ಬಿಡತಕ್ಕವನಲ್ಲ. ನಿಮ್ಮ ವಿವಾಹದ ಕರಾರನ್ನು ನಾಶಪಡಿಸುತ್ತೇನೆ; ಆ ಕಾಮಮೋಹಿನಿಯನ್ನು ಕೂಡಲೇ ನನ್ನ ಸ್ವಾಧೀನ ಪಡಿಸಿಕೊಳ್ಳುತ್ತೇನೆ. ಮಾಧವನ ಉಯಿಲು ಈಗ ನನ್ನ ವಶದಲ್ಲಿದೆ. ರತ್ನಾಕರವು ತನ್ನದೆಂಬ ದುರಭಿಮಾನದಿಂದ, ನೀನು ಅತಿಗರ್ವ ಪಡುತ್ತಿದ್ದೆ. ಈಗ ಆ ರತ್ನಾಕರವೂ ಕಾಮಮೋಹಿನಿಯೂ ನನ್ನ ಸ್ವಾಧೀನವಾದಂತೆ ತಿಳಿ. ಇನ್ನು ಹೆಚ್ಚಾಗಿ ಹೇಳಿ ಪ್ರಯೋಜನವೇನು? ನೀನೇ ನನ್ನ ಕೈವಶವಾಗಿರುವೆ. ನಿನ್ನ ಹೆಂಡತಿಗೆ ಗಂಡನಾಗಿಯೂ ನನಗೆ ಸೇರತಕ್ಕ ಮಾಧವನ ಆಸ್ತಿಗೆ ಯಜಮಾನನಾಗಿಯೂ ಇದ್ದುಗೊಂಡು, ಪ್ರತಿಕ್ಷಣದಲ್ಲಿಯೂ ನಿನ್ನನ್ನು ಹಿಂಸಿಸುತ್ತ, ಅದರಿಂದ ನಾನು ಸರ್ವದಾ ಸಂತುಷ್ಟನಾಗಿರಬೇಕೆಂಬ ಅಭಿಲಾಷೆ ನನಗಿರುವುದು.

ಪರಂತಪ- ಎಲಾ ನರಾಧಮನೇ! ನಿನ್ನ ಪೊಳ್ಳು ಹರಟೆಗಳನ್ನು ನಿಲ್ಲಿಸು. ಭಗವತ್ಕೃಪೆಯಿಂದ ನನಗೆ ಬಂಧ ವಿಮೋಚನೆಯಾದರೆ, ನಿನ್ನ
ಅಧ್ಯಾಯ ೯
೮೫

ನಾಲಗೆಯನ್ನು ಸೀಳಿ ಭೂತಗಳಿಗೆ ಔತಣಮಾಡುವೆನು. ನನಗೆ ಬಂಧ ವಿಮೋಚನೆಯಾಗದ ಪಕ್ಷದಲ್ಲಿ, ನಿನ್ನ ದುಷ್ಕೃತ್ಯಗಳೇ ನಿನ್ನನ್ನು ಸುಡುವುವು.
ಶಂಬರ- ಎಲೆ ಕರಾಳ! ಈ ನೀಚನನ್ನು ಸೆರೆಯಲ್ಲಿಟ್ಟು, ನಿತ್ಯವೂ ಇವನಿಗೆ ಎರಡು ಡಜನ್ ಛಡಿಯೇಟುಗಳನ್ನು ಹಾಕು. ಇವನಿಗೆ ಒಂದೇ ಹೊತ್ತು ಆಹಾರವನ್ನು ಹಾಕು. ಇವನಿಗೆ ಹೊಡೆಯುವಾಗ ಮಾತ್ರ, ಜಾಗರೂಕನಾಗಿ ಪ್ರಾಣ ಹೋಗದಂತೆ ನೋಡಿಕೋ; ಇವನ ಆತ್ಮಹತ್ಯಕ್ಕೆ ಅವಕಾಶ ಕೊಡದಂತೆ ಜಾಗರೂಕನಾಗಿರು. ಕರಾಳನು "ಅಪ್ಪಣೆ" ಎಂದು ಕರೆದುಕೊಂಡು ಹೋಗುವಷ್ಟರಲ್ಲಿ, ಅರ್ಥಪರನು ಬಂದನು.
ಶಂಬರ - ಎಲೈ ಅರ್ಥಪರನೆ! ಕಾರಾಗೃಹವನ್ನು ಸಿದ್ಧಪಡಿಸಿರುವೆಯಾ?
ಅರ್ಥಪರ- ದೃಢವಾದ ಸಲಾಕಿಗಳಿಂದ ಅಭೇದ್ಯವಾಗಿರುವಂತೆ ಮಾಡಿಸಿರುವೆನು.
ಶಂಬರ- ಈತನ ಉಡುಪುಗಳನ್ನು ತೆಗೆಸಿ, ಕಾರಾಗೃಹಕ್ಕೆ ಯೋಗ್ಯವಾದ ಉಡುಪುಗಳನ್ನು ತೊಡಿಸು. ಅರ್ಥಪರನು ಅದರಂತೆಯೇ ಅವನಿಗೆ ಮೊದಲಿನ ಉಡುಪುಗಳನ್ನು ತೆಗೆಸಿ, ಬೇರೆ ಉಡುಗೆಗಳನ್ನು ತೊಡಿಸಿದನು.
ಶಂಬರ - ಇವನ ಜೇಬಿನಲ್ಲಿ ವಿವಾಹದ ಕರಾರು ಇರುವುದೇನೋ ನೋಡು.
ಅರ್ಥಪರ- (ನೋಡಿ) ಇಲ್ಲ.
ಶಂಬರ- ಎಲಾ ನೀಚನೇ ! ಆ ಕಾಗದವೇನಾಯಿತು?
ಪರಂತಪ- ನಾನು ಹೇಳತಕ್ಕವನಲ್ಲ.
ಶಂಬರ-ಬಳ್ಳೆಯದು. ನಿನ್ನಿಂದಲೇ ನಾನು ಹೇಳಿಸುತ್ತೇನೆ. (ಬಾರು ಮಾಡಿದ ಪಿಸ್ತೂಲನ್ನು ಅವನಿಗೆ ಇದಿರಾಗಿ ಹಿಡಿದನು.)

ಪರಂತಪ -ಛೀ! ಹೇಡಿಯೇ! ಬಿಡು. ಈ ಗೊಡ್ಡು ಬೆದರಿಕೆಗೆ ನಾನು ಹೆದರತಕ್ಕವನಲ್ಲ. ಈ ಕಾರಾಗೃಹವಾಸಕ್ಕಿಂತ ಮರಣವೇ ಉತ್ತಮವೆಂದು ಭಾವಿಸಿರುವೆನು. ನೀನು ಹೊಡೆದರೂ ಸರಿ, ನಾನು ಹೇಳ ತಕ್ಕವಲ್ಲ.
೮೬
ಪರಂತಪ ವಿಜಯ

ಶಂಬರ - ಹಾಗೋ? ಹಾಗಾದರೆ ನಿನ್ನನ್ನು ಕೊಲ್ಲುವುದಕ್ಕಿಂತ, ಜೀವಚ್ಛವವನ್ನಾಗಿ ಮಾಡಿ ಹಿಂಸಿಸುವುದೇ ನನಗೆ ಆಪ್ಯಾಯನಕರವಾದುದು. ಎಲೈ ಅರ್ಥಪರನೆ! ನೀನು ಈ ಕರಾಳನ ಸಹಾಯದಿಂದ ಇವನನ್ನು ಕಾರಾಗೃಹಕ್ಕೆ ಸೇರಿಸು. (ಎಂದು ಹೇಳಿ, ತಾನು ವಿಶ್ರಮಾರ್ಥವಾಗಿ ಹೊರಟು ಹೋದನು. ಅವರಿಬ್ಬರೂ ಇವನನ್ನು ಕಾರಾಗೃಹಕ್ಕೆ ಸೇರಿಸಿ ಬೀಗ ಹಾಕಿಕೊಂಡು ಬರುವಷ್ಟರಲ್ಲಿ ಪುನಃ ಅಲ್ಲಿಗೆ ಬಂದು) ಎಲಾ! ದುರಾತ್ಮನಾದ ಪರಂತಪನೆ! ಈ ಛಡಿಯೇಟುಗಳೂ ಕಾರಾಗೃಹವಾಸವೂ ನಿನಗೆ ಯೋಗ್ಯ ವಾದುವಲ್ಲ. ಈಗಲೂ ನನ್ನ ಪ್ರಿಯಳನ್ನು ನನ್ನ ವಶಕ್ಕೆ ಒಪ್ಪಿಸಿ ನೀನು ಈ ದೇಶವನ್ನೇ ಬಿಟ್ಟು ಹೊರಟು ಹೋಗುವುದಾಗಿ ಒಪ್ಪಿದರೆ, ನೀನು ನಿರಾತಂಕವಾಗಿ ಜೀವಿಸಿಕೊಂಡಿರಬಹುದು; ಇಲ್ಲದಿದ್ದರೆ ನಿನಗೆ ಬಂಧವಿಮೋ ಚನೆಯಾಗಲಾರದು. ಏನು ಹೇಳುತ್ತೀಯೆ?

ಪರಂತಪ- ನನಗೆ ಬಂಧವಿಮೋಚನೆಯಾದರೆ, ನಿನ್ನನ್ನು ಜೀವ ಸಹಿತವಾಗಿ ಬಿಡುವೆನೆ? ನಿನ್ನ ತಲೆಯನ್ನು ಸಹಸ್ರಭಾಗವಾಗಿ ಛೇದಿಸುವೆನು.

ಶಂಬರ-ಹಾಗಿದ್ದರೆ, ನಿನಗೆ ಈ ಬಂಧನವು ತಪ್ಪತಕ್ಕದ್ದಲ್ಲ. ಎಲೈ ಅರ್ಥಪರನೇ ! ಈತನ ಕೈಕಾಲುಗಳ ಸಂಕಲೆಯನ್ನು ಬಿಡಿಸು, ಕರಾಳನೇ! ಇವನು ಈ ಕಬ್ಬಿಣದ ಸಲಾಕಿಗಳಿಗೆ ಕೈಹಾಕಿದರೆ ಇವನ ಕೈಬೆರಳುಗಳನ್ನು ಕತ್ತರಿಸಿಬಿಡುವಂತೆ ಯಾಯಿಕರಿಗೆಲ್ಲಾ ಹೇಳು. ಎಲಾ ಪರಂತಪ! ಜೋಕೆ! ವಿಧೇಯನಾಗಿರು!! ಅವಿಧೇಯತೆಯನ್ನು ತೋರಿಸಿದರೆ ಕೇಡಿಗೆ ಗುರಿಯಾಗುವೆ!!!

ಪರಂತಪ- ಎಲೆ ನೀಚನೇ! ಸಾಯುವುದಕ್ಕೆ ಅಂಜುವ ಹೇಡಿಗಳಿಗೆ ಈ ಭಯೋತ್ಪಾತವನ್ನುಂಟುಮಾಡು; ಹೋಗು. ಇಷ್ಟು ಮಾತ್ರಕ್ಕೆ ಏಕೆ ಹಿಗ್ಗುವೆ ? ಕ್ಷಿಪ್ರದಲ್ಲಿಯೇ ತಕ್ಕ ಫಲವನ್ನು ಅನುಭವಿಸುವೆ.

ಇದನ್ನು ಕೇಳಿ, ಅರ್ಥಪರ ಶಂಬರರಿಬ್ಬರೂ ನಗುತ್ತ ಹೊರಟು ಹೋದರು. ಪರಂತಪನು ಕಾರಾಗೃಹದಲ್ಲಿ ತನ್ನ ದುರದೃಷ್ಟಕ್ಕೂ ಅರ್ಥಪರನ ಮೋಸಕ್ಕೂ ಚಿಂತಿಸುತ್ತಿದ್ದನು.
  ಮಾರನೆಯ ದಿವಸ, ಪರಂತಪನು ತಪ್ಪಿಸಿಕೊಳ್ಳುವುದಕ್ಕೆ ಅವಕಾಶವಿಲ್ಲದಂತೆ ರತ್ನಾಕರದಲ್ಲಿ ಕಾವಲು ಇಟ್ಟು, ಅರ್ಥಪರನಿಗೆ ಮೇಲುವಿಚಾರ

ಅಧ್ಯಾಯ ೯
೮೭

ಣೆಯನ್ನು ವಹಿಸಿ, ಅವನಿಗೆ ಅಲ್ಲಿಯೇ ಸ್ವಲ್ಪ ದ್ರವ್ಯವನ್ನು ಕೊಟ್ಟು, ಮುಂದೆ ವಿಶೇಷವಾಗಿ ಕೊಡುವಂತೆ ವಾಗ್ದಾನಮಾಡಿ, ಶಂಬರನು ಸುಮಿತ್ರನ ಉತ್ತರಕ್ರಿಯೆಗಳನ್ನು ನಡೆಸುವುದಕ್ಕೋಸ್ಕರ ಅಲ್ಲಿಂದ ಹಿಂದಿರುಗಿದನು. ಆ ದಿನ ಮಧ್ಯಾಹ್ನಕ್ಕೆ ಉತ್ತರಕ್ರಿಯೆಗಳು ಪೂರಯಿಸಿದುವು. ಆ ಕಾಲದಲ್ಲಿ ಬಹುಜನಗಳು ಉತ್ತರಕ್ರಿಯೆಗಳಿಗೆ ಹೋಗಿದ್ದರು. ಶಂಬರನು ಮಾತ್ರ, ದೇಹ ಸ್ವಸ್ಥವಿಲ್ಲದಂತೆ ವೇಷವನ್ನು ಹಾಕಿಕೊಂಡು, ಸುಮಿತ್ರನ ಭಂಡಾರದಲ್ಲಿ ಉಯಿಲು ಮೊದಲಾದ ಕಾಗದ ಪತ್ರಗಳನ್ನು ಹುಡುಕುವುದರಲ್ಲಿ ಉದ್ಯುಕ್ತನಾಗಿದ್ದನು. ಕಲಾವತಿಯನ್ನು ಮದುವೆ ಮಾಡಿಕೊಳ್ಳುವುದಕ್ಕೆ ಇವನಿಗೆ ಇಷ್ಟವಿರಲಿಲ್ಲ. ಆದರೆ, ಸುಮಿತ್ರನು ಕಲಾವತಿಯನ್ನು ಮದುವೆ ಮಾಡಿಕೊಂಡವನಿಗೆ ತನ್ನ ಆಸ್ತಿಯನ್ನು ಕೊಡುವಂತೆ ಉಯಿಲು ಬರೆದಿದ್ದನು.
  ಆ ವುಯಿಲನ್ನು ಅಪಹರಿಸಿ ಸಮಸ್ತ ಆಸ್ತಿಯನ್ನೂ ಸುಮಿತ್ರನು ತನಗೇ ಕೊಟ್ಟಿರುವಂತೆ ಅರ್ಥಪರನಿಂದ ಒಂದು ಹೊಸ ಉಯಿಲನ್ನು ನಿರ್ಮಾಣ ಮಾಡಿಸಿದರೆ ತನಗೆ ಸುಮಿತ್ರನ ಆಸ್ತಿಯೆಲ್ಲಾ ದಕ್ಕುವುದೆಂದು ಯೋಚಿಸಿದನು. ಪರಂತಪನನ್ನು ಕೊಂದು, ಕಾಮಮೋಹಿನಿಯನ್ನು ಮದುವೆ ಮಾಡಿಕೊಂಡು, ಸುಮಿತ್ರನ ಆಸ್ತಿಯನ್ನು ಅಪಹರಿಸಿ, ಕಲಾವತಿಗೆ ಏನೂ ಇಲ್ಲದಂತೆ ಮಾಡಿದರೆ, ತನ್ನ ಇಷ್ಟಾರ್ಥ ಪರಿಪೂರ್ತಿಯಾಗುವುದೆಂದು ಶಂಬರನು ಭಾವಿಸಿದನು. ದುರಾತ್ಮರ ಸಂಕಲ್ಪವು ಒಂದು ವಿಧವಾಗಿದ್ದರೆ ದೈವ ಸಂಕಲ್ಪವು ಮತ್ತೊಂದು ವಿಧವಾಗಿರುವುದೇನಾಶ್ಚರ್ಯ? ಉತ್ತರಕ್ರಿಯೆಗಳಿಗೋಸ್ಕರ ಬಂದಿದ್ದ ಜನಗಳು ಇನ್ನೂ ಸುಮಿತ್ರನ ಮನೆಯಲ್ಲಿರುವಾಗಲೇ, ಶಂಬರನು ಸುಮಿತ್ರನ ಭಂಡಾರವನ್ನು ಪ್ರವೇಶಿಸಿ ಉಯಿಲನ್ನು ಹುಡುಕುತ್ತಿದ್ದ ನಷ್ಟೆ! ಹಾಗೆ ಅವನು ಹುಡುಕುತ್ತಿದ್ದಾಗ, ದೈವಾಧೀನದಿಂದ ಕಲಾವತಿಯ ಅಲ್ಲಿಗೆ ಹೋದಳು ಶಂಬರನು ಅನೇಕ ಕಾಗದ ಪತ್ರಗಳನ್ನು ತೆಗೆದು "ಇದೇ ಸುಮಿತ್ರನ ಆಖೈರ್ ಉಯಿಲು; ದೈವಾಧೀನದಿಂದ ನನ್ನ ಕೈಗೆ ಸಿಕ್ಕಿತು; ಇನ್ನು ನಾನು ಕೃತಕೃತ್ಯನಾದೆನು.” ಎಂಬುದಾಗಿ, ಆನಂದ ಪರವಶತೆಯಿಂದ ಗಟ್ಟಿಯಾಗಿ ಅಂದನು.

ಕಲಾವತಿ- ಏನೆಂದೆ?

ಶಂಬರ- ಯಾರು, ಕಲಾವತಿಯೇ?

೮೮
ಪರಂತಪ ವಿಜಯ

ಕಲಾವತಿ- ಹೌದು, ನಾನು, ಕಲಾವತಿ!!!
  ಇವರಿಬ್ಬರೂ ಭಂಡಾರದ ಮಧ್ಯಭಾಗದಲ್ಲಿದ್ದರು. ಕಲಾವತಿಯು, ಸುಮಿತ್ರನ ಮರಣದ ದೆಸೆಯಿಂದ ಉಂಟಾದ ದುಃಖದಿಂದಲೂ, ಶಂಬರನು ಏಕಾಂತವಾಗಿ ಭಂಡಾರವನ್ನು ಪ್ರವೇಶಿಸಿ ಕಾಗದಪತ್ರಗಳನ್ನು ತೆಗೆದು ಕೊಂಡದ್ದರಿಂದುಂಟಾದ ಆಗ್ರಹದಿಂದಲೂ, ಬಹಳ ಭಯಂಕರಳಾಗಿದ್ದಳು. ಆಕೆಯ ಕಣ್ಣಿನಲ್ಲಿ ಪಿತೃವಿಯೋಗದಿಂದ ಉಂಟಾದ ನೀರೂ, ಶಂಬರನ ದೌರಾತ್ಮ್ಯದಿಂದ ಉಂಟಾದ ಕೋಪವೂ, ಒಂದಕ್ಕಿಂತ ಒಂದು ಅತಿಶಯವಾಗಿದ್ದುವು. ಕೈಯಲ್ಲಿ ಪಿಸ್ತೂಲನ್ನು ಹಿಡಿದುಕೊಂಡು ಇದ್ದಳು. ಶಂಬರನನ್ನು ಯಮಪುರಿಗೆ ಕಳುಹಿಸಬೇಕೆಂದು ಸಂಕಲ್ಪ ಮಾಡಿಕೊಂಡು ಬಂದಿರತಕ್ಕ ಮೃತ್ಯದೇವತೆಯೋಪಾದಿಯಲ್ಲಿ ಕಾಣಬಂದ ಕಲಾವತಿಯನ್ನು ನೋಡಿ ಶಂಬರನು ಭಯಪರವಶನಾದನು.

ಶಂಬರ- ಕಲಾವತಿ! ಇದೇಕೆ ಇಷ್ಟು ಕೋಪವುಳ್ಳವಳಾಗಿರುತ್ತೀಯೆ? ಪಿಸ್ತೂಲನ್ನು ಬೀಸಾಕು. ಸ್ತ್ರೀಯರ ಕೈಗೆ ಪಿಸ್ತೂಲು ಭೂಷಣವಾದುದಲ್ಲವೆಂಬುದು, ನಿನಗೆ ತಿಳಿಯದೆ? ಅದೆಲ್ಲಾದರೂ ಅಕಸ್ಮಾತ್ತಾಗಿ ಹತ್ತಿ ಕೊಂಡು ಯಾರಿಗಾದರೂ ತಗುಲೀತು.

ಕಲಾವತಿ- ಸ್ತ್ರೀಯರ ಕೈಗೆ ಪಿಸ್ತೂಲು ಹೇಗೆ ಅನರ್ಹವಾದುದೊ, ಪುರುಷರ ಕೈಗೆ ಪರಸ್ವಾಪಹರಣವೂ ಹಾಗೆಯೇ ಅನರ್ಹವಾದುದು. ಈ ಕಾಗದ ಪತ್ರಗಳನ್ನು ಕಳುವುಮಾಡಿ, ನಿನ್ನ ಕೈಗಳು ಬಹಳ ದುಷ್ಟವಾಗಿ ಪರಿಣಮಿಸಿವೆ. ಕಾಗದ ಪತ್ರಗಳನ್ನು ಮೊದಲಿದ್ದ ಸ್ಥಾನದಲ್ಲಿ ಇಟ್ಟು ಇಲ್ಲಿಗೆ ಹೇಗೆ ಕಳ್ಳತನದಿಂದ ಬಂದೆಯೋ ಹಾಗೆಯೇ ಹೊರಟು ಹೋದರೆ, ನಿನಗೆ ಇನ್ನೂ ಸ್ವಲ್ಪ ದಿವಸ ಆಯುಸ್ಸಿರುವುದು. ಹಾಗಿಲ್ಲದ ಪಕ್ಷದಲ್ಲಿ, ನಿನ್ನ ದೌರಾತ್ಮ್ಯಕ್ಕೆ ತಕ್ಕ ಪ್ರತಿಫಲವನ್ನು ಅನುಭವಿಸುವೆ. ಯಮಪುರಿಗೆ ಮಾರ್ಗವನ್ನು ಹುಡಕಬೇಡ. ನನ್ನ ತಂದೆಯನ್ನು ಕೊಂದುದಲ್ಲದೆ, ನನ್ನ ಮನೆಗೆ ಕಳವು ಮಾಡುವುದಕ್ಕೋಸ್ಕರವೂ ಬಂದಿದ್ದೀಯೆ. ಕಾಗದಪತ್ರಗಳನ್ನು ಕೆಳಗೆ ಹಾಕಿ ಹೋಗುವೆಯೋ?-ಯಮಪುರಿಗೆ ಕಳುಹಿಸಲೋ?

ಶಂಬರ-ಹುಚ್ಚಳ ಹಾಗೆ ಮಾತನಾಡಬೇಡ. ನನ್ನ ಮಾತನ್ನು ಕೇಳು. ಪಿಸ್ತೂಲನ್ನು ಬೀಸಾಕು. ಹಾಗಿಲ್ಲದ ಪಕ್ಷದಲ್ಲಿ ನೀನು ಬಹಳ ಕಷ್ಟಕ್ಕೆ ಗುರಿಯಾಗುವೆ. 

ಅಧ್ಯಾಯ ೯
೮೯

ಕಲಾವತಿ- ನೀನು ಪರಮನೀಚನು. ನಾನು ನಿನ್ನ ಮಾತನ್ನು ಕೇಳತಕ್ಕವಳಲ್ಲ. ಈ ಕಾಗದ ಪತ್ರಗಳನ್ನು ಕೊಟ್ಟು ಇಲ್ಲಿಂದ ತೆರಳಿದರೆ ಸರಿ; ಇಲ್ಲ ದ ಪಕ್ಷದಲ್ಲಿ, ನನ್ನ ಕೆಲಸವನ್ನು ನಾನು ಮಾಡುವೆನು.

ಶಂಬರ -ಎಲೈ ನೀಚಳೇ! ಕಾಗದಗಳು ನಿನ್ನವಲ್ಲ; ಅವು ನನ್ನವು.

ಕಲಾವತಿ -ಸಾಮಾನ್ಯರಾದ ಕಳ್ಳರು ತಾವು ಅಪಹರಿಸಿದ ಪದಾರ್ಥಗಳನ್ನು ತಮ್ಮವೆಂದು ಹೇಳಿಕೊಳ್ಳುವುದು ಅಪೂರ್ವ, ನೀನು ಸಾಮಾನ್ಯನಾದ ಕಳ್ಳನಲ್ಲ; ನಿನ್ನನ್ನು ಚೋರಶಿಖಾಮಣಿಯೆಂದೇ ಹೇಳಬಹುದು. ವ್ಯರ್ಥವಾದ ಮಾತುಗಳನ್ನು ಏತಕ್ಕೆ ಆಡುವೆ? ಆ ಕಾಗದಗಳನ್ನು ಕೆಳಗೆ ಹಾಕಿದರೆ ಸರಿ; ಸಾವಕಾಶ ಮಾಡಿದರೆ, ಪಿಸ್ತೂಲನ್ನು ಹಾರಿಸಿ ನಿನ್ನನ್ನು ಈ ಕ್ಷಣದಲ್ಲಿಯೇ ಯಮಪುರಿಗೆ ಕಳುಹಿಸುವೆನು.
  

ಇವಳ ಸ್ಥೈರ್ಯವನ್ನು ನೋಡಿ, ಸಾವಕಾಶ ಮಾಡಿದರೆ ಕೊಲ್ಲುವಳೆಂದು ತಿಳಿದುಕೊಂಡು, ಶಂಬರನು ಕಾಗದ ಪತ್ರಗಳನ್ನು ಅವಳ ಕಾಲಿನ ಬಳಿಯಲ್ಲಿಟ್ಟು, ವಿನೀತನಾಗಿ ಹೊರಟು ಹೋಗುವಂತೆ ಅಭಿನಯಿಸಿದನು. ಕಲಾವತಿಯು ಪಿಸ್ತೂಲನ್ನು ಒಂದು ಕೈಯಲ್ಲಿಟ್ಟುಕೊಂಡು, ಮತ್ತೊಂದು ಕೈಯಲ್ಲಿ ಆ ಕಾಗದಗಳನ್ನು ತೆಗೆದುಕೊಂಡು, ಅವುಗಳು ಯಾವ ವಿಷಯವಾದ ಕಾಗದಗಳೋ ಎಂದು ನೋಡುತಿದ್ದಳು.

ಶಂಬರ- ಕಲಾವತಿ! ಇನ್ನಾದರೂ ಕೋಪವನ್ನು ಬಿಡು. ನಿನ್ನ ತಂದೆಯು ಉಯಿಲಿನಲ್ಲಿ ನನಗೆ ಯಾವ ಆಸ್ತಿಯನ್ನು ಕೊಟ್ಟಿರುತ್ತಾನೆ?

ಕಲಾವತಿ- ನಿನಗೆ ಆಸ್ತಿಯೆಲ್ಲಿಯದು? ನೀನು ಉಲ್ಲಂಘಿಸಿರತಕ್ಕ ಷರತ್ತನ್ನು ನೆರವೇರಿಸಿದ ಪಕ್ಷದಲ್ಲಿ, ಎಲ್ಲಾ ಆಸ್ತಿಯನ್ನೂ ನಿನಗೇ ಬಿಟ್ಟಿರುತ್ತಾನೆ.

ಶಂಬರ-ಅದು ಯಾವ ಷರತ್ತು ?

ಕಲಾವತಿ-ದುರಾತ್ಮರಿಗೆ, ಆಡಿದ ಮಾತೂ, ಮಾಡಿದ ಪ್ರತಿಜ್ಞೆಗಳೂ ಎಂದಿಗೂ ಜ್ಞಾಪಕವಿರುವುದಿಲ್ಲ.

ಶಂಬರ-ನಿನ್ನನ್ನು ಮದುವೆಮಾಡಿಕೊಂಡರೆ ತನ್ನ ಆಸ್ತಿಗೆ ನಾನು ಅರ್ಹನೆಂದು ಬರೆದಿರುತ್ತಾನೋ ?


೯೦
ಪರಂತಪ ವಿಜಯ

ಕಲಾವತಿ- ನನ್ನನ್ನು ನೀನು ಮದುವೆ ಮಾಡಿಕೊಂಡರೆ, ನನ್ನ ತಂದೆಯ ಆಸ್ತಿಯಲ್ಲಿ ಅರ್ಧ ಆಸ್ತಿಯು ನಿನಗೆ ಬರುವುದು. ತಿರಸ್ಕರಿಸಿದರೆ ನಿನಗೆ ಒಂದು ಕಾಸೂ ಬರುವುದಿಲ್ಲ.
ಶಂಬರ- ನಿನ್ನ ತಂದೆಯು ಈ ರೀತಿಯಲ್ಲಿ ಎಂದಿಗೂ ಏರ್ಪಾಡು ಮಾಡಿರಲಾರನು. ಅವನು ಬರೆದಿರತಕ್ಕ ಉಯಿಲನ್ನು ನಾನು ಪ್ರತ್ಯಕ್ಷ ವಾಗಿ ನೋಡಿದ ಹೊರತು, ನಿನ್ನ ಮಾತನ್ನು ನಾನು ನಂಬಲಾರೆನು. ಅದು ಹಾಗಿರಲಿ; ನಾನು ನಿನ್ನನ್ನು ಮದುವೆ ಮಾಡಿಕೊಳ್ಳುವೆನೆಂಬ ಆಶೆಯನ್ನು ಬಿಡು. ಪ್ರಪಂಚದಲ್ಲಿ ನನಗೆ ಅನುರೂಪಳಾದ ಸ್ತ್ರೀರತ್ನವು ಒಬ್ಬಳೆ ಒಬ್ಬಳು. ಅವಳೇ ಕಾಮಮೋಹಿನಿಯು.
ಕಲಾವತಿ- ಕಾಮಮೋಹಿನಿಯನ್ನು ಮದುವೆ ಮಾಡಿಕೊಳ್ಳತಕ್ಕ ಆಶೆಯನ್ನು ನೀನು ಬಿಡು. ಅವಳು ತನಗೆ ಅನುರೂಪನಾದ ಸತಿಯನ್ನು ವರಿಸಿರುವಳು. ಅವರಿಗೆ ವಿವಾಹವು ಪೂರಯಿಸಿರುವುದು.
ಶಂಬರ- ವ್ಯರ್ಥವಾದ ಮಾತುಗಳನ್ನು ಏತಕ್ಕೆ ಅಡುವೆ ? ಕಾಮಮೋಹಿನಿಯು ನನ್ನ ಕರಗತಳಾಗಿರುತ್ತಾಳೆ. ಆ ಚಂಡಾಲನಾದ ಪರಂತಪನ ಅವತಾರವು ಒಂದು ನಿಮಿಷದಲ್ಲಿ ಪೂರಯಿಸುವುದು, ಕಾಮಮೋಹಿನಿಯು ನನ್ನ ದಾಸಿಯಾಗಿಯಯೂ ನಾಯಕಿಯಾಗಿಯೂ ಇರುವಳು.
ಕಲಾವತಿ- ಹಾಗೋ? ನಿನ್ನ ಬಡಾಯಿಯನ್ನು ನೋಡಿದರೆ, ನೀನು ಪರಂತಪನನ್ನು ಖೂನಿಮಾಡಿರಬಹುದೆಂದು ತೋರುತ್ತದೆ.
ಶಂಬರ- ಪರಂತಪನು ಶೀಘ್ರದಲ್ಲಿ ದೇಹತ್ಯಾಗವನ್ನೇ ಮಾಡಬಹುದು. ಅಥವಾ, ಜೀವಂತನಾಗಿದ್ದಾಗ್ಯೂ, ನನಗೂ ಕಾಮಮೋಹಿನಿಗೂ ಶೀಘ್ರದಲ್ಲಿ ಉಂಟಾಗತಕ್ಕ ಸಂಬಂಧವನ್ನು ತಪ್ಪಿಸುವುದಕ್ಕೆ ಅವನಿಗೆ ಸ್ವಲ್ಪವೂ ಶಕ್ತಿಯಿರುವುದಿಲ್ಲ.
   ಈ ಮಾತನ್ನು ಕೇಳಿದಕೂಡಲೆ, ಕಲಾವತಿಗೆ ಬಹಳ ಕೋಪವುಂಟಾಯಿತು. ಈ ದುರಾತ್ಮನನ್ನು ಕೊಲ್ಲೋಣವೇ ಬೇಡವೇ ಎಂದು ಯೋಚಿಸುತಿದ್ದಳು.

ಕಲಾವತಿ- ಎಲಾ ದುರಾತ್ಮನಾದ ಶಂಬರನೇ! ನನ್ನನ್ನು ಮದುವೆ ಮಾಡಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿ ವಂಚಿಸಿದ್ದೀಯೆ. ನೀನು ಮಹಾ
ಅಧ್ಯಾಯ ೧೨
೯೧



ಪಾಪಿ ನಿನ್ನಲ್ಲಿ ಸ್ವಲ್ಪವೂ ಅನುರಾಗವಿಲ್ಲದಿರತಕ್ಕ ಪರಸ್ತ್ರೀಯಾದ ಕಾಮಮೋಹಿನಿಯ ಗಂಡನನ್ನು ಸಂಹರಿಸಿ ಅವಳನ್ನು ಕೆಡಿಸಬೇಕೆಂಬ ಉದ್ಯೋಗದಲ್ಲಿ ಇರುತ್ತಿಯೆ. ಇದು ಘೋರವಾದ ಪಾಪಕೃತ್ಯವು, ಕಾಮಮೋಹಿನಿಯು ಪ್ರಾಣವನ್ನಾದರೂ ಬಿಡುವಳೆ ಹೊರತು, ನಿನ್ನಂಥ ದುರಾತ್ಮನನ್ನು ದೃಷ್ಟಿಸಿ ಕೂಡ ನೋಡಳು. ನಿನ್ನಂಥ ಚಂಡಾಲನಿಗೆ, ಪರಿಶುದ್ಧಳಾಗಿಯೂ ಪತಿವ್ರತಾ ಶಿರೋಮಣಿಯಾಗಿಯೂ ಇರುವ ಕಾಮಮೋಹಿನಿಯು ಹೆಂಡತಿಯಾಗುವಳೆ ? ಅತ್ಯುತ್ಕಟವಾದ ಪಾಪಗಳಿಗೆ ಪ್ರತೀಕಾರವು ಈ ಜನ್ಮದಲ್ಲಿ ಬಹಳ ಶೀಘ್ರದಲ್ಲಿಯೇ ಸಂಭವಿಸಬಹುದೆಂದು ಮಹಾಪುರುಷರು ಹೇಳುತ್ತಾರೆ. ನಿನ್ನ ಪಾಪಕರ್ಮಗಳ ಫಲವನ್ನು ನೀನು ಅನುಭವಿಸದಿರು ವುದಕ್ಕಾಗುವುದಿಲ್ಲ. ನಿನ್ನಂಥ ದುರಾತ್ಮನನ್ನು ಕೊಲ್ಲುವುದು ಪುಣ್ಯಕರವಾದುದು. ಕಾಮಮೋಹಿನಿಯನ್ನು ಕೆಡಿಸುವುದಕ್ಕೆ ನಿನಗೆ ಅವಕಾಶವಿಲ್ಲದಂತೆ, ಇಲ್ಲಿಯೆ ನಿನ್ನನ್ನು ಯಮಪುರಿಗೆ ಕಳುಹಿಸುವೆನು.
ಅವಳು ಪಿಸ್ತೂಲಿನಿಂದ ಅವನನ್ನು ಹೊಡೆಯಬೇಕೆಂದು ಪ್ರಯತ್ನ ಮಾಡುವುದರೊಳಗಾಗಿಯೇ, ಶಂಬರನು ಏಟು ತಿಂದ ಹುಲಿಯಂತೆ ನುಗ್ಗಿ, ಅವಳನ್ನು ಕೆಡವಿ, ಪಿಸ್ತೂಲನ್ನು ಅವಳ ಕೈಯಿಂದ ಕಿತ್ತುಕೊಂಡು, ಅವಳ ಕತ್ತನ್ನು ಕಿವಿಚಿದನು. ಅವಳು ಉಸಿರು ಸಿಕ್ಕಿಕೊಂಡು ಸತ್ತಂತೆ ಬಿದ್ದಳು. ಅಲ್ಲಿಂದ ಕಾಗದ ಪತ್ರಗಳನ್ನು ತೆಗೆದುಕೊಂಡು ಶಂಬರನು ಹೊರಟು ಹೋದನು.


ಅಧ್ಯಾಯ ೧೨
ರಂತಪನು ರತ್ನಾಕರಕ್ಕೆ ಹೊರಟುಹೋದ ರಾತ್ರಿ ಕಾಮಮೋಹಿನಿಯು, ತನ್ನ ಗಂಡನಿಗೆ ಏನು ಅನರ್ಥಗಳುಂಟಾಗುವುವೋ ಎಂದು, ಅಸಾಧಾರಣವಾದ ಭಯದಿಂದ ಪೀಡಿತಳಾಗಿದ್ದಳು. ಬೆಳಗಾಗುತ್ತಲೂ ನನ್ನ ಗಂಡನು ಬರುವನೆಂದು, ಅವನ ಆಗಮನವನ್ನು ನಿರೀಕ್ಷಿಸುತ್ತ ಇದ್ದಳು. ಸೂರ್ಯೋದಯವಾಯಿತು. ಸೂರ್ಯನು ನೆತ್ತಿಯ ಮೇಲಕ್ಕೆ ಬಂದನು. ಪರಂತಪನು ಮಾತ್ರ 
೯೨
ಪರಂತಪವಿಜಯ



ಹಿಂದಕ್ಕೆ ಬರಲಿಲ್ಲ. ಆತನು ಬರಲಿಲ್ಲವೆಂದು ನಿಟ್ಟುಸಿರು ಬಿಡುತ ಶೋಕಪರವಶಳಾಗಿರುವ ಕಾಮಮೋಹಿನಿಯನ್ನು, ಸತ್ಯಶರ್ಮನನ್ನು ನೋಡಿ “ಇಲ್ಲಿಗೂ ರತ್ನಾಕರಕ್ಕೂ ಬಹಳ ದೂರವಿರುವುದು. ನಿನ್ನ ಗಂಡನು ಇದನ್ನು ತಿಳಿದುಕೊಳ್ಳದೆ, ಜಾಗ್ರತೆಯಾಗಿ ಬರುವುದಾಗಿ ಹೇಳಿಹೋದನು. ಜಾಗ್ರತೆಯಾಗಿ ಬರುವನು. ದುಃಖವನ್ನು ಸಮಾಧಾನವಾಡಿಕೊ” ಎಂದು ಹೇಳಿ, ಸಮಾಧಾನಪಡಿಸುವುದಕ್ಕೆ ಪ್ರಯತ್ನ ಮಾಡಿದನು.
ಕಾಮಮೋಹಿನಿ -ವಿಚಾರ ಪಡದೆ ಇರುವುದು ಅಸಾಧ್ಯ. ನನ್ನ ಗಂಡನಿಗೆ ಏನೋ ಒಂದು ವಿಪತ್ತು ಸಂಭವಿಸಿರಬಹುದು. ಹಾಗಿಲ್ಲದ ಪಕ್ಷದಲ್ಲಿ ಇಷ್ಟು ಸಾವಕಾಶವಾಗುತ್ತಿರಲಿಲ್ಲ. ನಾನು ಬಹಳ ನಿರ್ಭಾಗ್ಯಳು. ಏನೋ ಪಾಪಶೇಷದ ಫಲವನ್ನು ಅನುಭವಿಸತಕ್ಕ ಕಾಲವು ನನಗೆ ಬಂದಿರುವಂತೆ ಕಾಣುತ್ತದೆ.
ಸತ್ಯಶರ್ಮ - ಎಲಾ ಪ್ರಿಯಳಾದ ಮಗುವೆ! ಈ ಶೋಕಾತಿಶಯದಿಂದ ಪರಿತಪಿಸಬೇಡ ಸ್ವಲ್ಪ ನಿಧಾನಿಸಿಕೋ, ಆತನು ಬಾರದೆ ಹೋದ ಪಕ್ಷದಲ್ಲಿ, ನಾನೇ ಹೋಗಿ ಅವನನ್ನು ಕರೆದುಕೊಂಡು ಬರುತ್ತೇನೆ.
ಕಾಮಮೋಹಿನಿ- ಎಲೈ ತಂದೆಯೇ! ನನ್ನ ಗಂಡನು ಒಂದು ವೇಳೆ ಹಿಂದಿರುಗಿ ಬಾರದೆ ಇದ್ದರೆ, ನನ್ನನ್ನು ನಿನ್ನ ಮಗಳೆಂದು ತಿಳಿದುಕೊಂಡು ನೀನೇ ಕಾಪಾಡಬೇಕು. ನೀನೇ ನನ್ನ ತಂದೆ, ಈಕೆಯೇ ನನ್ನ ತಾಯಿ. ನನ್ನ ಗಂಡನು ಕೊಟ್ಟಿರತಕ್ಕ ಈ ದ್ರವ್ಯವನ್ನು ಇಟ್ಟುಕೊಂಡು, ನನ್ನನ್ನು ಮಾನದಿಂದ ಕಾಪಾಡಬೇಕು.
ಸತ್ಯಶರ್ಮ-ಎಲೌ ಪತಿವ್ರತಾ ಶಿರೋಮಣಿಯೇ! ಇಂಥ ಕೆಟ್ಟ ಯೋಚನೆಗಳನ್ನು ಏತಕ್ಕೆ ಮಾಡುತ್ತೀಯೆ ? ನಿನ್ನ ಗಂಡನು ಶೀಘ್ರದಲ್ಲಿಯೇ ಬರುವನು. ಆತನು ಹಾಗೆ ಬಾರದಿದ್ದರೆ, ನಾನೆ ಹೋಗಿ ಅವನನ್ನು ಕರೆದು ಕೊಂಡು ಬರುವ ಪ್ರಯತ್ನವನ್ನು ಮಾಡುವೆನು. ಕ್ಲೇಶಪಡಬೇಡ.


  ಈ ವುಪದೇಶದಿಂದ, ಕಾಮಮೋಹಿನಿಯು ನಾಲ್ಕು ಘಂಟೆಯ ವರೆಗೂ ಸಮಾಧಾನವನ್ನು ವಹಿಸಿದಳು. ಪರಂತಪನು ಬರಲಿಲ್ಲ. ಅವಳ ಶೋಕವು ಇಮ್ಮಡಿಯಾಯಿತು. ಉಪಶಮನದ ಮಾತುಗಳು ಪ್ರಯೋಜನಕರವಾಗಲಿಲ್ಲ. ಹೊಸದಾಗಿ ಪಂಜರದಲ್ಲಿ ಕೂಡಲ್ಪಟ್ಟ ಪಕ್ಷಿಯಂತಿದ್ದಳು.
ಅಧ್ಯಾಯ ೧೨
೯೩



ಇವಳ ತಾಪವನ್ನು ನೋಡಿ, ಸತ್ಯಶರ್ಮನು ರತ್ನಾಕರಕ್ಕೆ ಪ್ರಯಾಣಮಾಡಿದನು. ಸತ್ಯಶರ್ಮನು ಹೊರಟುಹೋದ ಸ್ವಲ್ಪ ಹೊತ್ತಿನಲ್ಲಿ, ಕಾಮಮೋಹಿನಿಗೆ ಬರೆಯಲ್ಪಟ್ಟ ಮೇಲು ವಿಳಾಸವುಳ್ಳ ಒಂದು ಲಕೋಟು ಕಿಟಕಿಯಿಂದ ಮನೆಯೊಳಕ್ಕೆ ಬಿದ್ದಿತು. ಸತ್ಯಶರ್ಮನ ಹೆಂಡತಿಯು, ಅದನ್ನು ತೆಗೆದುಕೊಂಡು ಮೇಲುವಿಳಾಸವನ್ನು ನೋಡಿ, ಕಾಮಮೋಹಿನಿಗೆ ಕೊಟ್ಟಳು. ಅವಳು ಬಹಳ ಆತುರದಿಂದ ಲಕ್ಕೋಟನ್ನು ಒಡೆದು ಓದಿ, ಸಿಡಿಲಿನಿಂದ ಹೊಡೆಯಲ್ಪಟ್ಟಂತೆ ಮೂರ್ಛಿತಳಾದಳು. ಅದರಲ್ಲಿ ಬರೆದಿದ್ದುದೇನೆಂದರೆ:-
    ಕಾಮಮೋಹಿನಿ!
   ನಿನ್ನ ಗಂಡನು ರತ್ನಾಕರಕ್ಕೆ ಹೋಗಬೇಕೆಂದು ನನ್ನನ್ನು ಕರೆದನು. ಈ ಸ್ಥಳವು ಭೂತ ಪ್ರೇತ ಪಿಶಾಚಗಳಿಂದ ತುಂಬಲ್ಪಟ್ಟಿದೆಯೆಂಬುದಾಗಿಯೂ ಅಲ್ಲಿಗೆ ಹೋದರೆ ಪ್ರಾಣವೇ ಉಳಿಯಲಾರದೆಂಬುದಾಗಿಯೂ ನಾನು ಹೇಳಿದೆನು. ನನ್ನ ಮಾತುಗಳನ್ನು ಅವನು ನಿರಾಕರಿಸಿದನು. ರತ್ನಾಕರದ ಬಂಗಲೆಗೆ ಇವನು ಪ್ರಥಮತಃ ಪ್ರವೇಶಿಸಿದನು. ಕೂಡಲೆ ಒಂದು ಭಯಂಕರವಾದ ಭೂತವು ಬಂದಿತು. ಅದನ್ನು ನೋಡಿದ ಕೂಡಲೆ, ನಾನು ಭಯಪಟ್ಟು ಓಡಿಹೋದೆನು. ಪರಂತಪನು ಅದರೊಡನೆ ಕಾದುವುದಕ್ಕೆ ಉದ್ಯೋಗಮಾಡಿದನು. ಅದು ಅವನನ್ನು ಅಂತರಿಕ ಕೈ ಎತ್ತಿಕೊಂಡು ಹೋಗಿ ಅವನನ್ನು ಕೊಂದು ಬಿಸುಟಿತು. ಅವನ ಶವವು ರತ್ನಾಕರದ ಪಶ್ಚಿಮದಲ್ಲಿರುವ ಸಮುದ್ರಕ್ಕೆ ಬಿದ್ದು ಜಲಚರಗಳಿಗೆ ಆಹಾರ ವಾಯಿತು. ಮಿತ್ರನನ್ನು ಕಳೆದುಕೊಂಡ ನನಗೆ ಎಷ್ಟೋ ಸಂಕಟವಾಗುತ್ತದೆ. ಇಂಥ ಪತಿಯನ್ನು ಕಳೆದುಕೊಂಡ ನಿನ್ನ ದುಃಖಕ್ಕೆ ಪಾರವೇ ಇಲ್ಲ. ದೇವರು ನಿನ್ನನ್ನು ಕಾಪಾಡಬೇಕು. ಅವನಿಗೆ ಕ್ರಿಯಾದಿಗಳನ್ನು ಮಾಡಿ ಸದ್ಗತಿಯನ್ನು ಕಾಣಿಸು. ನಾನು ನನ್ನ ದೇಶಕ್ಕೆ ಹೋಗುವೆನು.


               ಅರ್ಥಪರ
  ಮೂರ್ಛೆ ಹೋಗಿದ್ದ ಕಾಮಮೋಹಿನಿಗೆ, ಸತ್ಯಶರ್ಮನ ಹೆಂಡತಿಯು ಅನೇಕ ಶೈತ್ಯೋಪಚಾರಗಳನ್ನು ಮಾಡಿದಳು. ಅವಳು ಸ್ವಲ್ಪ ಚೇತರಿಸಿ ಕೊಳ್ಳುತಲೂ, ಪುನಃ ಮೂರ್ಛೆ ಹೊಂದುತಲೂ, ರಾತ್ರಿ ಹನ್ನೆರಡು ಘಂಟೆಯ ವರೆಗೂ ಬಹಳ ವ್ಯಾಕುಲಪಡುತ, ಗಳಿಗೆಗೊಂದು ಸಲ ಮೂರ್ಛೆಯನ್ನೂ ಪ್ರಜ್ಞೆಯನ್ನೂ ಅನುಭವಿಸುತಿದ್ದಳು. ಕೊನೆಗೆ ಸತ್ಯಶರ್ಮನು ಪರಂತಪನ
೯೪
ಪರಂತಪ ವಿಜಯ

ಪೂರ್ವಾಪರಗಳನ್ನು ಭೇದಿಸಲಸಾಧ್ಯವಾದುದರಿಂದ, ರತ್ನಾಕರದಿಂದ ಹಿಂದಕ್ಕೆ ಬಂದನು. ಆಗ ಅವನ ಹೆಂಡತಿಯು, ಆ ಕಾಗದದ ವೃತ್ತಾಂತವನ್ನು ತಿಳಿಯಿಸಿದಳು. ಆಗ ಸತ್ಯಶರ್ಮನು ಆ ಕಾಗದವನ್ನು ತೆಗೆದು ನೋಡಿ “ ಇದು ಅರ್ಥಪರನ ಅಕ್ಷರವೂ ಅಲ್ಲ; ಅವನ ರುಜುವೂ ಅಲ್ಲ. ಯಾರೋ ದುರಾತ್ಮರು ಇವಳನ್ನು ಕ್ಲೇಶಪಡಿಸುವುದಕ್ಕೆ ಹೀಗೆ ಬರೆದಿರಬಹುದು. ” ಎಂದು ಗೊತ್ತುಮಾಡಿ, ಈ ಅಂಶವನ್ನು, ಪ್ರಜ್ಞೆ ಬಂದಾಗ ಕಾಮಮೋಹಿನಿಗೆ ತಿಳಿಸಿದನು. ಅದರಿಂದ ಪ್ರಯೋಜನವಾಗಲಿಲ್ಲ. ಆಗ ಸತ್ಯಶರ್ಮನು ಒಬ್ಬ ವೈದ್ಯನನ್ನು ಕರೆತಂದು ತೋರಿಸಿದನು. ಅವನು ಇವಳ ದೇಹಸ್ಥಿತಿಯನ್ನು ಪರೀಕ್ಷಿಸಿ, ಸದ್ಯಕ್ಕೆ ನಿದ್ದೆ ಬರುವ ಔಷಧಿಯನ್ನು ಕೊಟ್ಟು, ಬೆಳಗ್ಗೆ ನೋಡಿ ಚಿಕಿತ್ಸೆ ಮಾಡುವಂತೆ ಹೇಳಿ, ಹೊರಟುಹೋದನು.
ಅಷ್ಟರಲ್ಲೇ ಬಾಗಿಲು ಬಲವಾಗಿ ತಟ್ಟಲ್ಪಟ್ಟಿತು. ಸರಂತಸನು ಬಂದನೆಂದು, ಸತ್ಯಶರ್ಮನು ಜಾಗ್ರತೆಯಾಗಿ ಹೋಗಿ ಬಾಗಿಲು ತೆಗೆದನು. ವೇಷ ಧಾರಿಗಳಾದ ಹನ್ನೆರಡು ಜನಗಳೊಡನೆ ಶಂಬರನು ಒಳಕ್ಕೆ ಪ್ರವೇಶಿಸಿದನು.
ಸತ್ಯಶರ್ಮ-ಅಯ್ಯಾ! ನೀನಾರು ? ಇಲ್ಲಿಗೆ ಇಷ್ಟು ಅವೇಳೆಯಲ್ಲಿ ಏಕೆ ಬಂದೆ ? ನಿನಗೇನು ಬೇಕು?
ಶಂಬರ-ಕಳ್ಳ! ನನ್ನನ್ನು ನೀನು ಕಾಣೆಯೋ? ನಾನು ಶಂಬರ; ಕಾಮಮೋಹಿನಿಯ ಪೋಷಕ, ನೀನು ಅವಳನ್ನು ಕಳ್ಳತನದಿಂದ ತಂದು ಇಲ್ಲಿಟ್ಟು ಕೊಂಡಿರುವುದು ನನಗೆ ಗೊತ್ತಾಯಿತು. ನಿನ್ನ ಅಪರಾಧಕ್ಕೆ ತಕ್ಕ ಶಿಕ್ಷೆಯನ್ನು ಶೀಘ್ರದಲ್ಲೇ ಹೊಂದುವೆ.

ಸತ್ಯಶರ್ಮ-ಓಹೋ! ಶಂಬರನೆ ? ಈಗ ಗೊತ್ತಾಯಿತು. ದ್ರವ್ಯಾರ್ಥವಾಗಿ ದೊಡ್ಡಪ್ಪನನ್ನು ಕೊಂದ ಪುತ್ರಾಧಮನು ನೀನಲ್ಲವೆ! ಕಲಾವತಿಯ ಕತ್ತು ಮಿಸುಕಿ ಸುಮಿತ್ರನ ಉಯಿಲನ್ನು ಅಪಹರಿಸಿದ ಚಂಡಾಲನು ನೀನಲ್ಲವೆ! ಕಲಾವತಿಯನ್ನು ವಿವಾಹಮಾಡಿಕೊಳ್ಳುವುದಾಗಿ ಮಾತು ಕೊಟ್ಟು ಅದಕ್ಕೆ ತಪ್ಪಿ ಪರಸ್ತ್ರೀಯಾದ ಕಾಮಮೋಹಿನಿಯನ್ನು ಅಪಹರಿಸ ಬೇಕೆಂದು ಈ ಕಾಗದವನ್ನು ಬರೆದು ಕಿಟಕಿಯಿಂದ ಹಾಕಿ ಅವಳು ವ್ಯಾಕುಲಳಾಗಿ ಮೂರ್ಛಿತಳಾಗುವಂತೆ ಮಾಡಿರುವ ದುರಾತ್ಮನು ನೀನಲ್ಲವೆ! ನೀನೇ ಪರಂತಪನನ್ನು ಕೊಂದು, ಅರ್ಥಪರ ಬರೆದಂತೆ ಈ ಕಾಗದವನ್ನು ಬರೆದಿರ 
ಅಧ್ಯಾಯ ೧೨
೯೫

ಬಹುದು. ಶೀಘ್ರದಲ್ಲಿ ದೇವರು ನಿನ್ನ ಪಾಪಕೃತ್ಯಗಳಿಗೆ ತಕ್ಕ ಪ್ರತೀಕಾರವನ್ನು ಮಾಡುವನು. ನಾನು ಕಳ್ಳನೆ? ದುರಾತ್ಮನೆ! ಇಲ್ಲಿಂದ ಆಚೆಗೆ ತೆರಳು. ಇಲ್ಲದಿದ್ದರೆ ಪೋಲೀಸಿನವರಿಗೆ ನಿನ್ನನ್ನು ಕೊಡುವೆನು. ನೀನು ಕಾಮಮೋಹಿನಿಯ ಪೋಷಕನಲ್ಲ, ಅವಳ ಭಾಗದ ಮೃತ್ಯುವೇ ನೀನು.
ಶಂಬರ-ಅವಳಲ್ಲಿದ್ದಾಳೆ? - ತಿಳಿಸು. ಹಾಗಿಲ್ಲದಿದ್ದರೆ, ನಿನ್ನ ಭಾಗಕ್ಕೂ ನಾನು ಮೃತ್ಯುವಾಗುವೆನು.
ಸತ್ಯಶರ್ಮ- ನನ್ನ ಪ್ರಾಣವಿರುವವರೆಗೂ ಅವಳು ನಿನಗೆ ಸಿಕ್ಕಳು.
ಶಂಬರ-ಹಾಗಾದರೆ, ನಿನ್ನ ಪ್ರಾಣವು ಈಗಲೇ ಹೋಗುವುದು. ಅದು ಹಾಗಿರಲಿ; ನಿನಗೆ ಪ್ರಾಣದಾನವನ್ನು ಮಾಡುವುದಲ್ಲದೆ, ತುಂಬ ಉಪಕಾರವನ್ನೂ ಮಾಡುವೆನು. ಕಾಮಮೋಹಿನಿಯು ಪರಸ್ತ್ರೀಯೆಂದೆಯಲ್ಲಾ! ಅದು ಹೇಗೆ?
ಸತ್ಯಶರ್ಮ-ಅವಳನ್ನು ಪರಂತಪನು ವಿವಾಹವಾಡಿಕೊಂಡಿರುವನು.
ಶಂಬರ- ಈ ವಿವಾಹವು ಎಲ್ಲಾಯಿತು? ಯಾರು ಮಾಡಿಸಿದವರು? ಯಾವಾಗ?
ಸತ್ಯಶರ್ಮ-ಕಳೆದ ತಿಂಗಳು, ನಾನೇ ಈ ಮನೆಯಲ್ಲೇ ಮಾಡಿಸಿದೆನು.
ಶಂಬರ- ಎಲಾ ದುಷ್ಟನೆ! ಈ ದುಷ್ಕೃತ್ಯಕ್ಕೆ ತಕ್ಕ ಫಲವನ್ನು ಹೊಂದುವೆ.
ಸತ್ಯಶರ್ಮನನ್ನೂ ಅವನ ಹೆಂಡತಿಯನ್ನೂ ಹಿಡಿಸಿ, ಬಾಯಿಗೆ ಬಟ್ಟೆ ತುರುಕಿ, ಕೈಕಾಲುಗಳನ್ನು ಕಟ್ಟಿ ಕೆಡವಿ, ಕಾಮಮೋಹಿನಿಯನ್ನು ಹುಡುಕಿ ಎತ್ತಿಕೊಂಡು ಗಾಡಿಯಲ್ಲಿ ಹಾಕಿಸಿ, ಸತ್ಯಶರ್ಮನ ಮನೆಗೆ ಅನೇಕ ಭಾಗಗಳಲ್ಲಿ ಬೆಂಕಿಯನ್ನು ಹಾಕಿಸಿ, ಅದು ಹೊತ್ತಿಕೊಂಡು ಉರಿಯುವುದಕ್ಕೆ ಉಪಕ್ರಮವಾದ ಮೇಲೆ, ಶಂಬರನು ರತ್ನಾಕರದ ಕಡೆಗೆ ಹೊರಟುಹೋದನು. ಮಾರನೆಯ ದಿನ ಬೆಳಗಾಗುವುದರೊಳಗಾಗಿ, ಮನೆಯು ಬೆಂದು ನೆಲ ಸಮವಾಗಿತ್ತು. ಸರಕಾರದವರೂ ಪಂಚಾಯಿತರೂ ಸೇರಿ ಪರೀಕ್ಷಿಸಿ, ಮನೆಗೆ ಬೆಂಕಿ ಬಿದ್ದು ಮನೆಯಲ್ಲಿದ್ದ ಸತ್ಯ ಶರ್ಮಾದಿಗಳು ಸತ್ತು ಹೋದರೆಂದು ಮಹಜರ್‌ ಮಾಡಿದರು!

♠♠ ♠♠


೯೬
ಪರಂತಪವಿಜಯ

ಅಧ್ಯಾಯ ೧೩.

ಮಾರನೆಯ ದಿನ ಸಾಯಂಕಾಲ, ಶಂಬರನು ರತ್ನಾಕರದಲ್ಲಿ ಕಾಮಮೋಹಿನಿಯನ್ನು ಇಟ್ಟು, ಅಲ್ಲಿಂದ ತನ್ನ ಮನೆಗೆ ಬಂದನು.ಅವನು, ತಾನು ಮಾಡಿದ ದುಷ್ಕೃತ್ಯಗಳಿಗೆ ಏನು ಪ್ರತಿಕಾರವಾಗುವುದೋ ಎಂದು ಭಯಪಡುತ್ತಲೇ ಇದ್ದನು. ಆಗ ಕಲಾವತಿಯು ತಾನು ಕತ್ತು ಮಿಸುಗಿದ್ದರಿಂದ ಸಾಯಲಿಲ್ಲವೆಂಬುದಾಗಿ ಗೊತ್ತಾಯಿತು. ಬಳಿಕ ಬಹಳ ವ್ಯಸನಾಕ್ರಾಂತನಾಗಿ ನಿಟ್ಟುಸಿರನ್ನು ಬಿಟ್ಟು, ತಾನು ಮಾಡಿದ ಕೃತ್ಯವನ್ನು ಇವಳು ಬೈಲುಮಾಡುವಳೆಂಬುದಾಗಿಯೂ, ಅದರಿಂದ ತನಗೆ ತೊಂದರೆಯುಂಟಾಗುವುದೆಂಬುದಾಗಿಯೂ ಭಯಪಟ್ಟನು.
  ಆಗ “ ಕಲಾವತಿ ಸಾಯಲಿಲ್ಲ. ಅವಳು ಸತ್ತಿದ್ದರೆ ಚೆನ್ನಾಗಿತ್ತು ಅವಳು ಜೀವಂತಳಾಗಿರುವವರೆಗೂ ನನಗೆ ಬಹಳ ವಿಪತ್ತುಂಟು. ನಾನು ಅವಳಿಗೆ ಮಾಡಿದ ಅಪಕಾರವನ್ನು ಅವಳು ಎಂದಿಗೂ ಮರೆಯಳು. ಇನ್ನೇನು ಪ್ರಮಾದ ಬರುವುದೊ ತಿಳಿಯದು. ನಾನು ಮಾಡಿದ ಸಂಕಲ್ಪವು ಘಟಿಸಲಿಲ್ಲ. ದೈವಚಿತ್ತವು ಬೇರೆಯಾಯಿತು. ಈಗ ಭಯಪಟ್ಟು ಪ್ರಯೋಜನವಿಲ್ಲ. ನನ್ನ ಕರ್ಮಫಲವನ್ನು ನಾನೇ ಅನುಭವಿಸಬೇಕು!" ಇತ್ಯಾದಿ ರೀತಿಯಲ್ಲಿ ಚಿಂತಿಸುತ್ತಿದ್ದನು.
  ಈ ರೀತಿಯಾಗಿ ತನ್ನಲ್ಲಿ ತಾನೆ ಮಾತನಾಡಿಕೊಳ್ಳುತ್ತಿರುವಾಗ, ಕಲಾವತಿಯ ಜವಾನನು ಬಂದನು.
ಶಂಬರ-ಏನಯ್ಯ : ನಿನ್ನ ಯಜಮಾನತಿಯು ಎಲ್ಲಿರುವಳು?
ಜವಾನ- ಅವಳು ಹೊರಟುಹೋದಳು, ಸ್ವಾಮಿ!
ಶಂಬರ -ಹೊರಟುಹೋದಳೇ! ಎಲ್ಲಿಗೆ ಹೋದಳು?
ಜವಾನ-ನನಗೆ ತಿಳಿಯದು. ಆಕೆ ನನಗೆ ಹೇಳಲಿಲ್ಲ. ಹೊರಟು ಹೋಗುವಾಗ, ಆಕೆಯು ಒಂದು ಚೀಲವನ್ನು ತೆಗೆದುಕೊಂಡು ಹೋದಳು.

ಶಂಬರ-ಹೊರಟುಹೋಗುವಾಗ ನನಗೆ ಏನಾದರೂ ಸಮಾಚಾರವನ್ನು ಹೇಳಿ ಹೋದಳೊ ? 
ಅಧ್ಯಾಯ ೧೧
೯೭

ಜವಾನ- ತಮಗೆ ಕೊಡಬೇಕೆಂದು ಒಂದು ಕಾಗದವನ್ನು ಕೊಟ್ಟಿರುತ್ತಾಳೆ.
  ಎಂದು ಹೇಳಿ, ಕಲಾವತಿಯ ಕಾಗದವನ್ನು ಒಪ್ಪಿಸಿ ಹೊರಟು ಹೋದನು. ಶಂಬರನು ಲಕ್ಕೋಟನ್ನು ಒಡೆದು ಓದಿದನು. ಅದರಲ್ಲಿ ಬರೆದಿದ್ದುದೇನೆಂದರೆ:-
  ಖೂನಿಗಳನ್ನು ಮಾಡುವುದರಲ್ಲಿ ಸಮರ್ಥನಾದ ಕೃತಘ್ನ ಶಂಬರನೇ! ಈದಿನ ನಾನು ತಂದೆಯ ಮನೆಯನ್ನು ಬಿಟ್ಟು ಹೊರಟು ಹೋಗಿರುತ್ತೇನೆ. ಇನ್ನೆಷ್ಟು ದಿವಸಗಳು ನಿನಗೆ ಆಯುಸ್ಸು ಇರುತ್ತದೆಯೋ, ಅಷ್ಟು ದಿವಸಗಳು ನನ್ನ ಮನೆಯನ್ನೂ ಆಸ್ತಿಯನ್ನೂ ನೀನು ಅನುಭವಿಸಬಹುದು. ಆದರೆ, ನಿನ್ನ ಆಯುಸ್ಸು ಮಿತವಾಗಿರುವುದು. ನಿನ್ನ ದೇಹವು ಜೀವವನ್ನು ಧರಿಸಿಕೊಂಡಿರುವಾಗಲೇ, ನೀನು ನಿನ್ನ ದುಷ್ಕೃತ್ಯಗಳಿಗೆ ಪರಿಹಾರವನ್ನು ಮಾಡಿಕೊಳ್ಳಲು ಶಕ್ತಿಯಿದ್ದರೆ ಮಾಡಿಕೋ, ನನಗಿದ್ದ ದ್ರವ್ಯವನ್ನೆಲ್ಲ ನಾನು ತೆಗೆದುಕೊಂಡಿರುವೆನು. ಇದರಲ್ಲಿ ಒಂದು ಕಾಸೂ ನಿನಗೆ ಸಿಕ್ಕುವುದಿಲ್ಲ. ಜಾಗರೂಕನಾಗಿರು. ಕಲಾವತಿಯು ಸಾಮಾನ್ಯಳಲ್ಲ. ದುರ್ಮಾರ್ಗರನ್ನು ಯಮಪುರಿಗೆ ಕಳುಹಿಸುವುದಕ್ಕೋಸ್ಕರ ಹುಟ್ಟಿರತಕ್ಕ ಮೃತ್ಯುವೇ ಕಲಾವತಿ ಎಂದು ತಿಳಿದುಕೋ, ನಿನ್ನ ಪಾಪಕೃತ್ಯಗಳಿಗೆ ಅನುರೂಪವಾದ ಯಾತನೆಗಳನ್ನನುಭವಿಸುವುದಕ್ಕೋಸ್ಕರ-ನಿನ್ನನ್ನು ಕೆಲವು ಘಂಟೆಗಳೊಳಗಾಗಿಯೇ ನರಕಕ್ಕೆ ಕಳುಹಿಸದಿದ್ದರೆ, ನಾನು ಸತ್ಯಶರ್ಮನ ಮಗಳೇ ಅಲ್ಲ.

-ಕಲಾವತಿ


  ಈ ಕಾಗದವನ್ನು ಓದಿ, ಅತ್ಯಂತ ಆಗ್ರಹದಿಂದ, ಅದನ್ನು ಶಂಬರನು ಛಿದ್ರಛಿದ್ರವಾಗಿ ಹರಿದು ಬಿಸುಟನು. ಆಮೇಲೆ ಆತ್ಮಗತವಾಗಿ “ಇವಳು ಮಹಾ ಪಾಪಿಷ್ಠ ಹೆಂಗಸು. ನೂರುಜನ ಕಿರಾತರೊಡನೆ ಯುದ್ದ ಮಾಡುವುದು ಸುಲಭ; ಈ ಚಂಡಾಲ ಸ್ತ್ರೀಗೆ ಪ್ರತಿಭಟನಾಗಿರುವುದು ಕಷ್ಟ. ಇರಲಿ, ಇವಳನ್ನೇ ಯಮಪುರಿಗೆ ಕಳುಹಿಸುವೆನು.” ಎಂದು ಆಲೋಚಿಸಿದನು.


  ಕಲ್ಯಾಣಪುರದ ಭೋಜನಶಾಲೆಯಲ್ಲಿ, ಪರಂತಪನ ಭೃತ್ಯನಾದ ಮಂಜೀರಕನು ಆಗತಾನೆ ಬಂದು ಇಳಿದನು. ಆ ಭೋಜನ ಗೃಹದ ಎಲ್ಲಾ ಕೊಟ್ಟಡಿಗಳಿಗೂ ಹೋಗಿ ಹುಡುಕಿ, ತಾನು ಯಾರನ್ನು ಹುಡುಕುತಿದ್ದನೋ

೯೮
ಪರಂತಪ ವಿಜಯ

ಆ ಮನುಷ್ಯನು ಸಿಕ್ಕದೆ ಹೋದುದರಿಂದ, ಆ ಭೋಜನಶಾಲೆಯ ಯಜಮಾನನ ಕೊಟ್ಟಡಿಗೆ ಹೋದನು.
ಮಂಜೀರಕ- ಈ ಭೋಜನಶಾಲೆಯ ಯಜಮಾನನು ನೀನೇ ಅಲ್ಲವೆ?
ಯಜಮಾನ- ಅಹುದು ! ನೀನು ಯಾರನ್ನೋ ಹುಡುಕಿಕೊಂಡು ಬಂದಿರುವಂತೆ ಕಾಣುತ್ತದೆ. ಯಾರನ್ನು ಹುಡುಕುತ್ತೀಯೆ?
ಮಂಜೀರಕ-ಈಗ ಕೆಲವು ದಿವಸಗಳ ಕೆಳಗೆ ನಾನೂ ನನ್ನ ಯಜಮಾನನೂ ಇಲ್ಲಿಗೆ ಬಂದಿದ್ದೆವು. ನನ್ನ ಯಜಮಾನನು ಒಂದು ಶವವನ್ನು ತಂದು ಇಲ್ಲಿ ಇಳಿದಿದ್ದನು. ಅವನ ಪೂರ್ವೋತ್ತರಗಳನ್ನು ಬಲ್ಲೆಯಾ? ಯಜಮಾನ -ಮಾಧವನ ಶವವನ್ನು ತಂದಿದ್ದವನೋ?
ಮಂಜೀರಕ - ಅಹುದು.
ಯಜಮಾನ - ಅವನ ಹೆಸರು ಪರಂತಪನೋ?
ಮಂಜೀರಕ -ಅಹುದು.
ಯಜಮಾನ - ಅವನು ಸುಮಿತ್ರನ ಮನೆಯಲ್ಲಿ ಇಳಿದಿದ್ದನು. ಅವನಿಗೂ ಶಂಬರನಿಗೂ ದ್ವಂದ್ವ ಯುದ್ಧವಾಯಿತು, ನಾನು ಅವನ ಸಕ್ಷವಾಗಿ ಪಂಚಾಯಿತನಾಗಿದ್ದನು. ಅವನು ಶಂಬರನನ್ನು ಗುಂಡಿನಿಂದ ಹೊಡೆದು ಅವಯವ ಹೀನನನ್ನಾಗಿ ಮಾಡಿದನು ಶಂಬರನ ಗುಂಡು ಸುಮಿತ್ರನಿಗೆ ತಗುಲಿ ಅವನನ್ನು ಕೊಂದಿತು.
ಮಂಜೀರಕ-ಈ ಪರಂತಪನು ಈಗ ಎಲ್ಲಿರುವನು ?
ಯಜಮಾನ-ಅವನು ರತ್ನಾಕರಕ್ಕೆ ಹೋದನು. ತದಾರಭ್ಯ ಅವನ ವಿಷಯವೇ ನನಗೆ ತಿಳಿಯದು.
ಮಂಜೀರಕ- ಅವನ ಜತೆಯಲ್ಲಿ ಯಾರಾದರೂ ಹೋದರೋ?
ಯಜಮಾನ-ಅರ್ಥಪರನೆಂಬ ಲಾಯರು ಅವನ ಜತೆಯಲ್ಲಿ ಹೋದನು.
ಮ೦ಜೀರಕ-ಆ ಅರ್ಥಪರನು ವಾಪಸು ಬಂದನೋ ?

ಯಜಮಾನ-ಅವನನ್ನು ನಾನು ಕಾಣಲಿಲ್ಲ. ಅಲ್ಲಿಗೆ ಹೋಗುವಾಗ, ಪರಂತಪನು “ ನಾನು ರತ್ನಾಕರದಿಂದ ವಾಪಸು ಬಾರದಿದ್ದರೆ ಶಂಬರನಿಂದ ಮರಣವನ್ನು ಹೊಂದಿರುವೆನೆಂದು ನೀನು ತಿಳಿದುಕೊಳ್ಳಬಹುದು ” ಎಂಬು 
ಅಧ್ಯಾಯ ೧೩
೯೯

ದಾಗಿ ನನ್ನ ಸಂಗಡ ಹೇಳಿದ್ದನು. ನೀನು ನಾಳೆ ಬೆಳಗ್ಗೆ ಬಂದರೆ, ಪರಂತಪನ ಪೂರ್ವಾಪರಗಳನ್ನು ವಿಚಾರಿಸಿ ವಿಶದವಾಗಿ ನಿನಗೆ ಹೇಳುವೆನು. ಮಂಜೀರಕನು ಅವನ ಅಪ್ರಣೆಯನ್ನು ತೆಗೆದುಕೊಂಡು ತನ್ನ ಕೊಟ್ಟಡಿಗೆ ಹೋಗುತ್ತಿರುವಾಗ, ಒಬ್ಬ ಯವನಸ್ಸನು ಇವರ ಮಾತುಗಳನ್ನು ಕೇಳುತಿದ್ದು ಇವನೊಡನೆ ಮಾತನಾಡುವುದಕ್ಕೆ ಉಪಕ್ರಮಿಸಿದನು.
ಯೌವನಸ್ಥ -ನೀನು ಭೋಜನಶಾಲೆಯ ಯಜಮಾನನೊಡನೆ ಆಡುತಿದ್ದ ಮಾತುಗಳನ್ನು ಕೇಳುತಿದ್ದೆನು. ನೀನು ಪರಂತಪನನ್ನು ಹುಡುಕಿಕೊಂಡು ಬಂದಿರುವೆಯಲ್ಲವೆ?
ಮಂಜೀರಕ - ಅಹುದು! ಆತನ ಪೂರೋತ್ತರಗಳೇನಾದರೂ ನಿನಗೆ ತಿಳಿಯುವುದೆ?
ಯೌವನಸ್ಥ - ನನಗೆ ಬಹಳ ಸ್ಪಲ್ಪ ತಿಳಿಯುವುದು. ಅವನು ಈ ಕಲ್ಯಾಣಪುರಕ್ಕೆ ಬಂದಾಗ, ನನಗೂ ಅವನಿಗೂ ಸರಿಚಯವಾಯಿತು. ಕಳೆದ ಎಂಟು ದಿವಸಗಳಿಂದ ಅವನ ಸಮಾಚಾರವೇ ಇಲ್ಲ. ಅವನಿಗೇನೋ ವಿಪತ್ತು ಸಂಭವಿಸಿರುವುದೆಂದು ತೋರುತ್ತದೆ.
ಮಂಜೀರಕ- ಹಾಗೆಂದರೇನು! ಮಹಾತ್ಕರಿಗೆ ವಿಪತ್ತು ಸಂಭವಿಸುವುದೇ? ಇದನ್ನು ನಾನು ಎಂದಿಗೂ ನಂಬಲಾರೆನು.
ಯೌವನಸ್ಥ - ನೀನು ನನ್ನ ಕೊಟ್ಟಡಿಗೆ ಬಂದರೆ, ಈ ವಿಷಯವನ್ನು ಕುರಿತು ವಿಸ್ತಾರವಾಗಿ ಮಾತನಾಡಬಹುದು.
ಮಂಜೀರಕ- ಆವಶ್ಯಕವಾಗಿ ಆಗಬಹುದು. (ಇಬ್ಬರೂ ಯೌವನಸ್ಥನ ಕೊಟ್ಟಡಿಗೆ ಹೋಗುವರು.
ಯೌವನಸ್ಥ- ನಿನ್ನ ಹೆಸರೇನು?
ಮಂಜೀರಕ- ಪರಂತಪನ ಸೇವಕನಾದ ಮಂಜಿರಕನು.
ಯೌವನಸ್ಥ- ನಿನ್ನ ವಿಷಯವನ್ನು ನನಗೆ ಪರಂತಪನು ಹೇಳಿದ್ದನು. ನೀನು ಬಹಳ ಸಾಹಸಿ. ಇಂಥ ಭೃತ್ಯರುಳ್ಳವನಿಗೆ, ವಿಪತ್ತುಗಳು ಬಂದಾಗ ದೈವಯೋಗದಿಂದ ಪರಿಹಾರವಾಗಬಹುದು.

ಮಂಜೀರಕ- ಅದು ಹಾಗಿರಲಿ: ಪರಂತಪನ ಪೂರ್ವೋತ್ತರಗಳನಾದರೂ ತಿಳಿದಿದ್ದರೆ ಹೇಳು. 
೧೦೦
ಪರಂತಪವಿಜಯ

ಯೌವನಸ್ಥ- ಪರಂತವನು ಸ್ವರ್ಗಸ್ಥನಾಗಿರಬಹುದು.
ಮಂಜೀರಕ-ಈ ಮಾತನ್ನು ನಾನು ನಂಬುವುದಿಲ್ಲ. ಚಿಂತೆಯಿಲ್ಲ, ನಿನ್ನ ಹೆಸರೇನು?
ಯೌವನಸ್ಥ -ಕಲಾವತಿ.
ಮಂಜೀರಕ- ಓಹೋ! ಪುರುಷವೇಷವನ್ನು ಧರಿಸಿರತಕ್ಕ ಹುಡುಗಿಯೋ- ನೀನು?
ಕಲಾವತಿ - ಅಹುದು. ಈ ವಿಷಯವನ್ನು ನೀನು ಯಾರಿಗೂ ತಿಳಿಸಕೂಡದು. ಮಹಾನೀಚನಾದ ಶತ್ರುವನ್ನು ನಾನು ಯಮಾಲಯಕ್ಕೆ ಕಳುಹಿಸುವುದಕ್ಕೋಸ್ಕರ ಈ ವೇಷವನ್ನು ಧರಿಸಿಕೊಂಡು ಬಂದಿರುವೆನು. ಈ ಶತ್ರುವನ್ನು ಈ ಭೋಜನಾಲಯದಲ್ಲಿ ನೋಡಿದೆನು. ಅವನಿಗೆ ನನ್ನ ಗುರುತು ಸಿಕ್ಕಲಿಲ್ಲ.
ಮಂಜೀರಕ - ಈ ಶತ್ರು ಯಾರು?
ಯೌವನಸ್ಥ- ಮಹಾನುಭಾವನಾದ ಪರಂತಪನ ಮರಣಕ್ಕೆ ಯಾವನು ಕಾರಣಭೂತನಾಗಿರಬಹುದೋ, ಆ ದುರಾತ್ಮನಾದ ಶಂಬರನೇ ನನಗೂ ಶತ್ರುವಾಗಿರುವನು. ನನ್ನ ಸಹೋದರಿಯಾದ ಕಾಮಮೋಹಿನಿಯನ್ನು ವಿವಾಹ ಮಾಡಿಕೊಳ್ಳಬೇಕೆಂದು, ಪರಂತಪನೂ ಇವನೂ ಇಬ್ಬರೂ ಅನುರಕ್ತರಾದರು. ಕಾಮಮೋಹಿನಿಯು ಈ ದುರಾತ್ಮನನ್ನು ತಿರಸ್ಕರಿಸಿ ಪರಂತಪನನ್ನು ವರಿಸಿದಳು. ಈ ದ್ವೇಷದಿಂದ ಶಂಬರನು ಪರಂತಪನನ್ನು ಕೊಂದಿರಬಹುದು; ಅಥವಾ ರತ್ನಾಕರದ ಕಾರಾಗೃಹದಲ್ಲಿಟ್ಟು ಕೊಂಡಿರಬಹುದು. ಕಾಮಮೋಹಿನಿಯನ್ನು ಕೂಡ ಈ ದುರಾತ್ಮನು ಬಲಾತ್ಕಾರದಿಂದ ಅಪಹರಿಸಿಕೊಂಡು ಹೋಗಿರುವಂತೆ ತೋರುತ್ತದೆ. ಕಳೆದವಾರ ಎರಡು ಮೂರು ವೇಳೆ ಪರಂತಪನು ರತ್ನಾಕರಕ್ಕೆ ಹೋಗಿದ್ದನು. ಈಚೆಗೆ ಪರಂತಪನ ಪೂರ್ವಾಪರಗಳನ್ನು ವಿಚಾರಿಸುವುದಕ್ಕೋಸ್ಕರ ರತ್ನಾಕರಕ್ಕೆ ದೂತರನ್ನು ಕಳುಹಿಸಿದ್ದೆನು. ಶಂಬರನು ಯಾರಿಗೂ ಅವಕಾಶವಿಲ್ಲದಂತೆ ಎಲ್ಲಾ ಕಡೆಗಳಲ್ಲಿಯೂ ಪಹರೆಯನ್ನಿಟ್ಟಿರುವನು. ರತ್ನಾಕರವು ಈಗ ದುಷ್ಪ್ರವೇಶವಾಗಿರುವುದು.

ಮಂಜೀರಕ- ಪರಂತಪನೂ ಕಾಮಮೋಹಿನಿಯೂ ರತ್ನಾಕರದಲ್ಲಿರುವುದು ನಿಜವಾದ ಪಕ್ಷದಲ್ಲಿ, ಯಮನೇ ಬಂದು ಅಲ್ಲಿ ಕಾವಲಾಗಿದ್ದಾಗ್ಗೂ 
ಅಧ್ಯಾಯ ೧೪
೧೦೧

ಅವನನ್ನು ಜಯಿಸಿ ಶಂಬರನನ್ನು ವಧಿಸಿ ನನ್ನ ಯಜಮಾನನನ್ನು ಕರೆದು ಕೊಂಡು ಬರುವೆನು. ಈ ಪ್ರತಿಜ್ಞೆಗೆ ತಪ್ಪಿದರೆ, ನಾನು ಪರಂತಪನ ನೃತ್ಯ ನಾಗುವುದಕ್ಕೆ ಅರ್ಹನಲ್ಲವೆಂದು ತಿಳಿದುಕೋ.
ಕಲಾವತಿ- ಈ ವಿಷಯದಲ್ಲಿ ನಿನಗೆ ನಾನು ಸಹಾಯಮಾಡುವೆನು. ಶಂಬರನು ಜೀವಂತನಾಗಿರುವವರೆಗೂ, ನಾನು ಆಹಾರವನ್ನೂ ವಿಶ್ರಾಂತಿಯನ್ನೂ ಹೊಂದುವುದಿಲ್ಲ. ಆದರೆ, ಶಂಬರನ ಕಾವಲುಗಾರರು ಬಹಳ ಸಮರ್ಥರು. ರತ್ನಾಕರದ ಬಂಗಲೆಯು ದಿಗ್ಬ್ರಮೆಯನ್ನುಂಟು ಮಾಡತಕ್ಕ ಚಕ್ರಬಿಂಬನ ಕೋಟೆಯಂತಿರುವುದು. ಇಂಥ ಸ್ಥಳದಲ್ಲಿ ಅವನಿರುವ ಸ್ಥಳವನ್ನು ಗೊತ್ತು ಮಾಡುವುದು ಕಷ್ಟ.
ಮಂಜೀರಕ- ಈ ವಿಷಯದಲ್ಲಿ ಭಯಪಡಬೇಡ. ಈ ದುರ್ಗಕ್ಕೆ ದಾರಿಯನ್ನು ತೋರಿಸು. ಪರಂತಪನನ್ನು ಪತ್ತೆಮಾಡಿ ಶಂಬರನನ್ನು ನರಕಕ್ಕೆ ಪ್ರಯಾಣ ಮಾಡಿಸತಕ್ಕ ಕೆಲಸವನ್ನು ನನಗೆ ಬಿಡು. ಈ ದಿನ ಬಹಳ ದೂರ ಪ್ರಯಾಣಮಾಡಿ ತುಂಬ ದಣಿದಿದ್ದೇನೆ. ನಡೆಯುವುದಕ್ಕೆ ಸ್ವಲ್ಪವೂ ಶಕ್ತಿಯಿಲ್ಲ. ಈ ರಾತ್ರಿ ವಿಶ್ರಮಿಸಿಕೊಂಡು, ಬೆಳಗ್ಗೆ ಪ್ರಯಾಣಮಾಡುವುದಕ್ಕೆ ಸಿದ್ಧನಾಗುತ್ತೇನೆ. ನೀನೂ ಹೊರಡುವುದಕ್ಕೆ ಸಿದ್ಧಳಾಗು. ದೇವರು, ದು‍‍ಷ್ಟ ನಿಗ್ರಹ ಶಿಷ್ಟಪರಿಪಾಲನೆಗಳನ್ನು ಮಾಡುವುದಕ್ಕೆ, ನಮ್ಮಂಥವರನ್ನಲ್ಲದೆ, ಇನ್ನಾರನ್ನುಪಯೋಗಿಸುವನು?

ಅಧ್ಯಾಯ ೧೪


ತ್ನಾಕರದ ವರ್ತಮಾನವು ಈಗ ಪರ್ಯಾಲೋಚನೀಯವಾದದ್ದು. ಇಲ್ಲಿ ದುರ್ಗಪ್ರಾಯವಾದ ಒಂದು ಕಟ್ಟಡವುಂಟೆಂದು ಹೇಳಿದ್ದೆವಷ್ಟೆ! ಈ ಕಟ್ಟಡವು, ಪರಿಷ್ಕೃತವಾಗಿ ಸುಣ್ಣ ಬಣ್ಣಗಳ ಕೆಲಸಗಳಿಂದ ಬಹಳ ರಮಣೀಯವಾಗಿ ಮಾಡಲ್ಪಟ್ಟಿತ್ತು. ರಾಜಯೋಗ್ಯವಾದ ಕುರ್ಚಿ, ಮಂಚ, ಸೋಫಾ, ಚಿತ್ರ ವಿಚಿತ್ರವಾದ ಗಾಜಿನಗಿಡ, ಕಂದೀಲು ಮೊದಲಾದುವುಗಳಿಂದ 
೧೦೨
ಪರಂತಪವಿಜಯ

ಅಲಂಕರಿಸಲ್ಪಟ್ಟಿತ್ತು. ನೆಲದಮೇಲೆ ಹಾಸಲ್ಪಟ್ಟಿದ್ದ ಜಂಖಾನ ಮೊದಲಾದುವುಗಳು ಬಹಳ ಮನೋಹರವಾಗಿದ್ದುವು. ಈ ಕಟ್ಟಡದ ಬಾಗಿಲಿನಲ್ಲಿ, ಆಯುಧಪಾಣಿಗಳಾದ ಇಬ್ಬರು ಭೃತ್ಯರಿದ್ದರು. ಕಟ್ಟಡದ ಒಳಗೆ ಎಲ್ಲೆಲ್ಲಿಯೂ ಬಹಳ ನಿರ್ಮಲವಾಗಿತ್ತು. ಈ ಕಟ್ಟಡದ ಒಂದು ಕೊಟ್ಟಡಿಯಲ್ಲಿ ೧೮-೧೯ ವಯಸ್ಸುಳ್ಳ ಒಬ್ಬ ಹುಡುಗಿಯಿದ್ದಳು. ಇವಳು ಬಹಳ ಸುಂದರಿಯಾಗಿದ್ದಾಗ್ಗೂ, ಆಗತಾನೆ ಖಾಹಿಲೆಯಿಂದ ಎದ್ದಂತೆಯೂ, ಅನಿರ್ವಚನೀಯವಾದ ದುಃಖವನ್ನು ಅನುಭವಿಸುತ್ತಲಿರುವಂತೆಯೂ ಕಾಣಬರುತ್ತಿದ್ದಳು. ಅವಳೇ ಕಾಮಮೋಹಿನಿ. ಆಗತಾನೆ ಅವಳಿಗೆ ದೇಹದಮೇಲೆ ಸ್ಮೃತಿ ಬಂದಿತ್ತು. ಅವಳಿಗೆ ಶೈತೋಪಚಾರಗಳನ್ನು ಮಾಡುವುದಕೋಸ್ಕರ, ಶಂಬರನು ದುರ್ಮತಿಯೆಂಬ ಸ್ತ್ರೀಯನ್ನು ನಿಯಮಿಸಿದ್ದನು. ಪ್ರಜ್ಞೆ ಬಂದ ಕೂಡಲೆ ಕಾಮಮೋಹಿನಿಯು, ಅಮ್ಮಾ ನೀನು ಯಾರು? ಎಂದಳು.
ದುರ್ಮತಿ-ನಾನು ನಿನ್ನ ದಾದಿಯು.
ಕಾಮಮೋಹಿನಿ-ನಿನ್ನ ಹೆಸರೇನು?
ದುರ್ಮತಿ-ದುರ್ಮತಿ.
ಕಾಮಮೋಹಿನಿ-ನನ್ನ ದಾದಿಯಾಗಿರುವುದಕ್ಕೆ ನಿನ್ನನ್ನು ನಿಯಮಿಸಿದವರು ಯಾರು?
ದುರ್ಮತಿ-ಶಂಬರನು.

ಕಾಮಮೋಹಿನಿ-(ಆತ್ಮಗತ) ಓಹೋ! ಈ ಚಂಡಾಲನು ಸತ್ಯಶರ್ಮಾದಿಗಳಿಗೇನೋ ಅಪಾಯವನ್ನುಂಟುಮಾಡಿ ನನ್ನನ್ನು ಅಪಹರಿಸಿಕೊಂಡು ಬಂದಿರಬಹುದು. ಈ ಕಿರಾತನಿಗೆ ನಾನು ಅಧೀನಳಾಗಿರುವಂತೆ ತೋರುತ್ತದೆ. ಈ ಸ್ತ್ರೀಯು ಅವನಿಂದ ನಿಯಮಿಸಲ್ಪಟ್ಟಿರ ತಕ್ಕವಳು. ನಾನು ಶತ್ರು ಗಳ ಮಧ್ಯದಲ್ಲಿರುವೆನು. ಇನ್ನು ನನಗೆ ಏನು ಗತಿ ! ನನ್ನಂಥ ಅನಾಥರಿಗೆ ದೇವರೇ ಗತಿಯಲ್ಲವೆ! ಇರಲಿ. ಮನುಷ್ಯರನ್ನು ನಂಬಿ ಪ್ರಯೋಜನವಿಲ್ಲ. ನಾನು ಸತ್ಯವಂತಳಾಗಿದ್ದರೆ ಈ ನನ್ನ ಕಷ್ಟಗಳನ್ನು ದೇವರೇ ಪರಿಹರಿಸಲಿ. ಹಾಗೆ ದೇವರು ಸಹಾಯ ಮಾಡದಿದ್ದರೆ, ಈ ಚಂಡಾಲನ ಅಧೀನದಲ್ಲಿರುವುದಕ್ಕಿಂತ ಹೇಗಾದರೂ ಪ್ರಾಣವನ್ನು ಬಿಟ್ಟು ದೇವರ ಸನ್ನಿಧಿಯನ್ನೇ ಹೊಂದುವನು. ಇರಲಿ, ಇಲ್ಲಿನ ವಿದ್ಯಮಾನಗಳನ್ನು ಸರಿಯಾಗಿ ತಿಳಿದು 
ಅಧ್ಯಾಯ ೧೪
೧೦೩

ಕೊಳ್ಳುವೆನು. (ಪ್ರಕಾಶ) ಎಲೈ ದುರ್ಮತಿಯೇ! ನಾನು ಇದುವರೆಗೂ ಮೈಮೇಲೆ ಪ್ರಜ್ಞೆಯಿಲ್ಲದಂತೆ ಕಾಯಿಲೆ ಇದ್ದೆನಲ್ಲವೆ?
ದುರ್ಮತಿ- ಹೌದಮ್ಮಾ! ನೀನು ಬಹಳ ಕಾಯಿಲೆಯಾಗಿದ್ದೆ. ನಿನಗೆ ತಿರುಗಿ ಪ್ರಜ್ಞೆ ಬರುವುದಿಲ್ಲವೆಂಬುದಾಗಿ ನಾವು ಯೋಚಿಸಿದ್ದೆವು. ದೈವಾಧೀನದಿಂದ ಬದುಕಿದೆ.
ಕಾಮಮೋಹಿನಿ- (ಆತ್ಮಗತ) ಯಮನಿಗೆ ಕರುಣವಿಲ್ಲವೆಂಬುದು ಈಗ ನಿಶ್ಚಯವಾಯಿತು. ಶಂಬರನ ವಶವಾಗಿರುವುದಕ್ಕಿಂತ ಮರಣವು ಉತ್ತಮವಲ್ಲವೆ ? ಪಾಪಿ ವಿಧಿಯು ನನಗೆ ಈ ಅವಸ್ಥೆಯನ್ನು ತಂದನು. (ಪ್ರಕಾಶ) ನಾವು ಈಗ ರತ್ನಾಕರದಲ್ಲಿರುತ್ತೇವಲ್ಲವೆ?
ದುರ್ಮತಿ- ಹೌದಮ್ಮಾ! ನಾವು ರತ್ನಾಕರದಲ್ಲಿರುತ್ತೇವೆ.
ಕಾಮಮೋಹಿನಿ- ನಾನು ಸತ್ಯಶರ್ಮನ ಮನೆಯಲ್ಲಿದೆ. ಇಲ್ಲಿಗೆ ನನ್ನನ್ನು ತಂದವರು ಯಾರು?
ದುರ್ಮತಿ - ಅದು ನನಗೆ ತಿಳಿಯದು ನಾನು ನಿನ್ನ ಪೋಷಣೆಗೊಸ್ಕರ ನಿಯಮಿಸಲ್ಪಟ್ಟಾಗ ನೀನು ಇಲ್ಲಿ ಇದ್ದೆ. ಕಾಮಮೋಹಿನಿ-ನಾನು ಇಲ್ಲಿ ಶಂಬರನ ಬಂದೀವಾನಳಾಗಿರುವೆನು:ಅಲ್ಲವೆ ?
ದುರ್ಮತಿ-ನೀನು ಬಂದೀವಾನಳಲ್ಲ: ಆದರೆ, ಯಜಮಾನನ ಆಜ್ಞೆಯಿಲ್ಲದೆ ಇಲ್ಲಿಂದ ಆಚೆಗೆ ನೀನು ಹೋಗುವುದಕ್ಕಾಗುವುದಿಲ್ಲ.
ಕಾಮಮೋಹಿನಿ- ನನ್ನನ್ನು ನಿರ್ಬಂಧಮಾಡತಕ್ಕ ದುರಾತ್ಮನಾದ ಯಜಮಾನನು ಯಾರು ?
ದುರ್ಮತಿ- ಈ ವಿಷಯವನ್ನು ನಾನು ಮೊದಲೇ ವಿಜ್ಞಾಪಿಸಿದೆನು. ಈ ಕಟ್ಟಡಕ್ಕೂ ಇಲ್ಲಿರತಕ್ಕ ಸಮಸ್ತರಿಗೂ ಯಜಮಾನನಾದವನು ಶಂಬರನು.
ಕಾಮಮೋಹಿನಿ-ಯಜಮಾನನೆಂದು ಹೇಳಬೇಡ; ಈ ಜೈಲಿಗೆ ಅಧಿಕಾರಿಯೆಂದು ಹೇಳು. ಅದು ಹಾಗಿರಲಿ, ಆ ದುಷ್ಟನು ಎಲ್ಲಿರುವನು?

ದುರ್ಮತಿ- ಈಗ ಕೆಲವು ದಿವಸಗಳಿಂದ ಆತನು ಇಲ್ಲಿಗೆ ಬಂದಿಲ್ಲ. ಯಾವ ನಿಮಿಷದಲ್ಲಿ ಅಪೇಕ್ಷಿಸಿದರೂ ಹಾಜರಾಗುವನು. ಅವನು ನಿನ್ನ 
ಪರಂತಪವಿಜಯ
೧೦೪

ವಿಷಯದಲ್ಲಿ ಬಹಳ ದಯೆಯುಳ್ಳವನಾಗಿದ್ದಾನೆ. ನಿನ್ನ ರೋಗವು ವಾಸಿಯಾಗಿ ನೀನು ಸ್ವಲ್ಪ ಚೇತರಿಸಿಕೊಳ್ಳುವವರೆಗೂ, ಕಣ್ಣೀರು ಬಿಡುತ್ತ ನಿನ್ನ ಹಾಸುಗೆಯ ಸಮೀಪದಲ್ಲಿಯೇ ಔಷಧ ಪಥ್ಯಗಳನ್ನು ಕೊಡಿಸುತಿದ್ದನು. ನಿನಗೆ ಪ್ರಾಣಭಯವಿಲ್ಲವೆಂದು ತಿಳಿದ ಕೂಡಲೆ, ಕಾರ್ಯಾರ್ಥವಾಗಿ ಹೋಗಿ ಇರುವನು. ಕಾಮಮೋಹಿನಿ- (ಆತ್ಮಗತ) ಆಹಾ! ಪಾಪಿ ವಿಧಿಯೇ! ಈ ದುರಾತ್ಮನ ಸೇವೆಗೆ ನನ್ನನ್ನು ಗುರಿಮಾಡಿದೆಯಲ್ಲಾ! ಇವನು ಮಾಡಿದ ಚಿಕಿತ್ಸೆಯಿಂದ ನನ್ನ ವ್ಯಾಧಿಯು ವಾಸಿಯಾಗಿ ಪ್ರಜ್ಞೆ ಬರುವಂತೆ ಮಾಡಿದೆಯಲ್ಲಾ! ನಿನಗೆ ಸ್ವಲ್ಪವೂ ಕರುಣವಿಲ್ಲ. ನಿನ್ನನ್ನು ಬಯ್ದು ಪ್ರಯೋಜನವೇನು? ನಾನು ಮಾಡಿರುವ ಪಾಪದ ಫಲವನ್ನೆ ನಾನು ಅನುಭವಿಸುತ್ತಲಿರುವೆನು. (ಪ್ರಕಾಶ) ಈ ದುರಾತ್ಮನು, ನಾನು ವಶಳಾಗಿ ಇವನ ದುರಾಗತಗಳನ್ನು ಮರೆತು ನನ್ನ ಪಾತಿವ್ರತ್ಯವನ್ನು ಈ ವುಪಚಾರಗಳಿಗೂಸ್ಕರ ವಿಕ್ರಯಿಸುವೆನೆಂದು ತಿಳಿದುಕೊಂಡಿರಬಹುದು. ಈ ಪ್ರಪಂಚದ ಸೃಷ್ಟಿ ಸ್ಥಿತಿಲಯಗಳಿಗೆ ಕರ್ತನಾದ ದೇವರಿದ್ದರೆ,- ದುಷ್ಟನಿಗ್ರಹ ಶಿಷ್ಟಪರಿಪಾಲನೆಗಳನ್ನು ಮಾಡತಕ್ಕದ್ದು ಅವನ ಬಿರುದಾಗಿದ್ದರೆ,-ಅತ್ಯುತ್ಕಟವಾದ ಪಾಪಗಳಿಗೆ ಈ ಜನ್ಮದಲ್ಲೇ ಶಿಕ್ಷೆಯಾಗುವುದೆಂಬ ಧರ್ಮಶಾಸ್ತ್ರ ವಚನವು ನಿಜವಾದದ್ದಾದರೆ,-ಈ ಶಂಬರನ ದೌರಾತ್ಮ್ಯಕ್ಕೆ ತಕ್ಕ ಫಲವು ಬಹಳ ಜಾಗ್ರತೆಯಾಗಿ ಆಗುವುದು.

ದುರ್ಮತಿ- ನೀನು ಬಹಳ ಕೃತಘ್ನುಳು. ಶಂಬರನು ಮಾಡಿರುವ ಉಪಕಾರಕ್ಕೆ ಪ್ರತ್ಯಪಕಾರವನ್ನು ಬಯಸುತ್ತಲಿದ್ದಿಯೆ; ಸಾಧ್ಯವಾದರೆ ಮಾಡಲೂ ಮಾಡುವೆ. ನೀನು ಪರಂತಪನನ್ನು ಮದುವೆಮಾಡಿಕೊಳ್ಳುವುದರಲ್ಲಿ ದುಡುಕಿದೆ. ಪರಂತಪನು ಬಹಳ ದುರಾತ್ಮನು. ಮೊದಲೇ ಬಂದು ವಿವಾಹವನ್ನು ಮಾಡಿಕೊಂಡಿದ್ದು, ಅದನ್ನು ನಿನ್ನಲ್ಲಿ ಆಚ್ಛಾದಿಸಿ ವಿವಾಹವನ್ನು ಮಾಡಿಕೊಂಡು, ಮೊದಲನೆಯ ಹೆಂಡತಿಯೊಡನೆ ಈ ದೇಶವನ್ನು ಬಿಟ್ಟು ಹೊರಟುಹೋದನು. ಅವನ ದೌರಾತ್ಮವನ್ನು ದೇವರು ಕೂಡ ಮೆಚ್ಚಲಿಲ್ಲ. ಅವನು ಇಲ್ಲಿಂದ ಪ್ರಯಾಣ ಮಾಡುವಾಗ, ರೈಲಿನಲ್ಲಿ ಅಪಾಯವುಂಟಾಗಿ ಅವರಿಬ್ಬರೂ ಮೃತಪಟ್ಟರು. ಅನಾಥಳಾದ ನಿನ್ನನ್ನು ಅನ್ಯಾಯ 
ಅಧ್ಯಾಯ ೧೨
೧೦೫

ದೃಶವಾದ ಅನುರಾಗದಿಂದ ಕಾಪಾಡುತ್ತಲಿರುವ ಶಂಬರನ ವಿಷಯದಲ್ಲಿ ನೀನು ಈರೀತಿಯಲ್ಲಿ ನಡೆದುಕೊಳ್ಳುವುದು ಯಾವ ಧರ್ಮ?
ಕಾಮಮೋಹಿನಿ-(ಆತ್ಮಗತ) ಆಹಾ ! ಪಾಪಿ ವಿಧಿಯೇ ! ನನ್ನ ಪಾಣಕ್ಕಿಂತಲೂ ಹೆಚ್ಚಾದ ಪರಂತಪನನ್ನು ಕರೆದುಕೊಂಡೆಯಾ? ನನ್ನನ್ನು ಏತಕ್ಕೆ ಉಪೇಕ್ಷಿಸಿಬಿಟ್ಟೆ? ಪರಂತಪನು ಒಂದು ವೇಳೆ ಮದುವೆಮಾಡಿ ಕೊಂಡು ಇದ್ದರೂ ಇರಬಹುದು. ಮೊದಲನೆಯ ಹೆಂಡತಿಯು ಸತ್ತಳೆಂದು ತಿಳಿದುಕೊಂಡು ನನ್ನನ್ನು ವಿವಾಹ ಮಾಡಿಕೊಂಡಿರಬಹುದು. ಅವಳು ಜೀವಂತಳಾಗಿದ್ದುದನ್ನು ನೋಡಿ ಸತ್ಯಶರ್ಮನ ಮನೆಯಲ್ಲಿದ್ದಾಗ ನನಗೆ ತಲುಪಿದ ಕಾಗದವನ್ನು ಬರೆದು ಹೊರಟುಹೋಗಿರಬಹುದು. ಆತನ ಎಂದಿಗೂ ದುರಾತ್ಮನಲ್ಲ. ಸತ್ತಳೆಂದು ತಿಳಿದುಕೊಂಡಿದ್ದ ಹೆಂಡತಿಯನ್ನು ಪರಿತ್ಯಾಗ ಮಾಡಿ ನನ್ನಲ್ಲಿ ಅನುರಕ್ತನಾಗಿದ್ದರೆ, ಅಂಥ ತಪ್ಪನ್ನು ಅವನ ಮೇಲೆ ಹೊರಿಸಬಹುದು. ನನ್ನನ್ನು ಬಿಟ್ಟು ಮೊದಲನೆಯ ಹೆಂಡತಿಯ ಪಕ್ಷವಾಗಿ ಅವನು ಹೊರಟು ಹೋದದ್ದು, ಅವನು ಸತ್ಯವ್ರತನೆಂದು ವ್ಯಕ್ತಮಾಡುವುದಿಲ್ಲವೆ? ಅಂಥ ಮಹಾತ್ಮನನ್ನು ದುರಾತ್ಮನೆಂದು ಹೇಳತಕ್ಕ ಈ ದುರ್ಮತಿಯು ಚಂಡಾಲಿಯಲ್ಲವೆ? (ಪ್ರಕಾಶ) ಹಾಗಾದರೆ, ಪರಂತಪನು ಸತ್ತುಹೋದನೇ?
ದುರ್ಮತಿ - ಅವನು ಸತ್ತು ಬಹಳ ದಿವಸವಾಯಿತು. ಅವನ ಯೋಚನೆಯನ್ನು ಬಿಡು. ನಿನ್ನಲ್ಲಿ ಅನ್ಯಾದೃಶವಾದ ಅನುರಾಗವನ್ನಿಟ್ಟಿರತಕ್ಕ ಶಂಬರನನ್ನು ವರಿಸಿ ಸುಖವಾಗಿ ಬಾಳು.

ಕಾಮಮೋಹಿನಿ- ಎಲೆ ದುರ್ಮತಿಯೇ! ನಿನ್ನ ದುಷ್ಟವಚನಗಳು ನನ್ನ ಕಿವಿಗೆ ಶಲ್ಯಪ್ರಾಯಗಳಾಗಿವೆ. ಪರಂತಪನು ಸತ್ತಿರುವುದು ನಿಜವಾದರೆ, ನಾನು ವಿತಂತುವಾದೆನು. ನಿಜವಾದ ಪತಿವ್ರತೆಯರು ದುಷ್ಟ ಸ್ತ್ರೀಯರಂತೆ ಭೋಗಾಕಾಂಕ್ಷೆಯಿಂದ ಮತ್ತೊಬ್ಬ ಪತಿಯನ್ನು ವರಿಸುವುದಿಲ್ಲ. ಶಂಬರನು ನನ್ನ ಪಾತಿವ್ರತ್ಯವನ್ನು ಕೆಡಿಸಬೇಕೆಂಬ ಭಾವನೆಯನ್ನು ಇಟ್ಟು ಕೊಂಡಿದ್ದರೆ, ಅಂಥ ಕೆಟ್ಟ ಯೋಚನೆಗೆ ತಕ್ಕ ಫಲವನ್ನು ಶೀಘ್ರದಲ್ಲಿಯೇ ಅನುಭವಿಸುವನು. ಇದಲ್ಲದೆ, ಮಹಾತ್ಮರಿಗೆ ಅಕಾಲಮರಣವು ಸಂಭವಿಸುವುದಿಲ್ಲ. ಪರಂತಪನು ಸತ್ತಿರುವನೆಂದು ನಾನು ನಂಬಲಾರೆನು, ದೈವಯೋಗದಿಂದ
೧೦೬
ಪರಂತಪ ವಿಜಯ

ನನ್ನ ಬಿಡುಗಡೆಗೂ ಶಂಬರನನ್ನು ಶಿಕ್ಷಿಸುವುದಕ್ಕೂ ಅವನೇ ಏತಕ್ಕೆ ಕಾರಣ ನಾಗಕೂಡದು?
ದುರ್ಮತಿ- ನಿನ್ನ ಮನೋರಥವು ವ್ಯರ್ಥವಾದದ್ದು. ಪರಂತಪನು ಅವನ ದುಷ್ಕೃತ್ಯಕ್ಕೆ ಅನುರೂಪವಾದ ನರಕವನ್ನು ಹೊಂದಿರುವನು.
ಕಾಮಮೋಹಿನಿ- ಶಂಬರನು ಶೀಘ್ರದಲ್ಲಿಯೇ ತನ್ನ ದುಷ್ಕೃತ್ಯಗಳಿಗನುರೂಪವಾದ ನರಕವನ್ನು ಹೊಂದಿಯೇ ಹೊಂದುವನು. ಅದು ಹಾಗಿರಲಿ; ಈ ದುರಾತ್ಮನಾದ ಶಂಬರನು ಸರ್ವಪ್ರಯತ್ನದಿಂದ ನನ್ನನ್ನು ನಿನ್ನ ಸಹಾಯದಿಂದ ವಂಚಿಸಬೇಕೆಂದು ಸಂಕಲ್ಪ ಮಾಡಿರುವಂತೆ ತೋರುತ್ತದೆ. ಉದರಭರಣಕ್ಕಾಗಿ ಇಂಥ ದುಷ್ಕೃತ್ಯವನ್ನು ಮಾಡುವುದಕ್ಕೆ ನೀನು ಒಪ್ಪಿರುವೆ. ಇದು ಮಹಾ ಪಾಪಕೃತ್ಯವು. ಇದರಿಂದ ನಿನ್ನ ಜೀವನಕ್ಕೂ ಯಶಸ್ಸಿಗೂ ಕೇಡುಂಟಾಗುವುದು. ವಾಸ್ತವವಾದ ಅಂಶಗಳನ್ನು ನನಗೆ ಹೇಳು. ನಿನ್ನ ಭಕ್ತಿಗೆ ಅನುರೂಪವಾದ ಫಲವನ್ನು ದೇವರು ಕೊಡುವನು. ಪರಂತಪನು ನಿಜವಾಗಿ ಸತ್ತಿರುವನೇ? ಇದನ್ನು ನೀನು ಸಾಕ್ಷಾತ್ತಾಗಿ ನೋಡಿಬಲ್ಲೆಯಾ? ಸತ್ಯವಾಗಿ ಹೇಳು.

ದುರ್ಮತಿ - ನಾನು ಸಾಕ್ಷಾತ್ತಾಗಿ ಇದನ್ನು ನೋಡಿದವಳಲ್ಲ. ಆದರೆ, ಈ ವರ್ತಮಾನವು ಜನಜನಿತವಾಗಿರುವುದು. ಇದು ಸುಳ್ಳೆಂದು ನಾನು ಎಂದಿಗೂ ಹೇಳಲಾರೆನು, ಉದರಭರಣಾರ್ಥವಾಗಿ ಮಾಡಬಾರದ ಕೆಲಸಗಳನ್ನು ಮಾಡುವುದಕ್ಕೆ ನಾನು ಇಲ್ಲಿ ಬಂದಿಲ್ಲ. ನಿನ್ನ ಪೋಷಣಾರ್ಥವಾಗಿ ನಾನು ನಿಯಮಿಸಲ್ಪಟ್ಟಿರುತ್ತೇನೆ ನನ್ನ ಕೆಲಸವನ್ನು ನಾನು ವಿಶ್ವಾಸದಿಂದ ಮಾಡುತ್ತಿದ್ದೇನೋ ಇಲ್ಲವೋ ಅದನ್ನು ನೀನೇ ಬಲ್ಲೆ. ನನಗೆ ಶಂಬರನು ಇನ್ನು ಯಾವ ವಿಷಯದಲ್ಲಿಯೂ ಯಾವ ಬೋಧನೆಯನ್ನೂ ಮಾಡಿಲ್ಲ, ಇಲ್ಲದ ದೋಷವನ್ನು ನೀನು ಅವನಿಗೆ ಆರೋಪಣೆ ಮಾಡುವೆ. ಅವನು ನಿನ್ನಲ್ಲಿ ನಿಜವಾದ ವಿಶ್ವಾಸವುಳ್ಳವನು. ಪರಂತಪನ ಆಶೆಯನ್ನು ಇನ್ನು ಬಿಡು. ಪರಂತಪನನ್ನು ಅನುಸರಿಸಿ ಲೋಕಾಂತರವನ್ನು ಐದಬೇಕೆಂದು ನಿನಗೆ ಇಷ್ಟವಿದ್ದರೆ, ಮನಸ್ಸು ಬಂದಂತೆ ನಡೆದುಕೊ, ಹಾಗಿಲ್ಲದ ಪಕ್ಷದಲ್ಲಿ, ಶಂಬರನ ಇಷ್ಟಾರ್ಥವನ್ನು ನೆರವೇರಿಸಿ, ಈ ಪ್ರಪಂಚದ ಸುಖಸಾಮ್ರಾಜ್ಯವನ್ನು ಚೆನ್ನಾಗಿ ಅನುಭವಿಸು. ನಿನ್ನ ಕಷ್ಟ ಸುಖಗಳು ನಿನ್ನ ಹಸ್ತಗತವಾಗಿ 
ಅಧ್ಯಾಯ ೧೨
೧೦೭

ರುವುವು. ನೀನು ಕೃತಘ್ನಳೆಂದು ನಾನು ಮೊದಲೇ ಹೇಳಿದ್ದೆನಷ್ಟೆ! ಶಂಬರನು ನಿನಗೆ ಮಾಡಿರತಕ್ಕ ಒಂದು ಮಹೋಪಕಾರವಿರುವುದು: ಅದು ಇನ್ನೂ ನಿನಗೆ ತಿಳಿಯದು. ಅದು ತಿಳಿದಪಕ್ಷದಲ್ಲಿ, ನಿನಗೆ ಶಂಬರನಲ್ಲಿರತಕ್ಕ ದ್ವೇಷವು ಅಕೃತ್ರಿಮವಾದ ಅನುರಾಗವಾಗಿ ಪರಿಣಮಿಸುವುದು.
ಕಾಮಮೋಹಿನಿ -(ಆತ್ಮಗತ) ಇವಳು ಬಹಳ ದುಷ್ಟೆ ; ಶಂಬರನ ಆಜ್ಞೆಗೆ ಅನುಸಾರವಾಗಿ ನಡೆದುಕೊಳ್ಳತಕ್ಕವಳು. ಇದಾವುದೋ ಒಂದು ಹೊಸ ವಿಷಯವನ್ನು ಉಪಕ್ರಮಿಸಿರುವಳು ಒಳ್ಳೆಯದು; ತಿಳಿದುಕೊಳ್ಳೋಣ. (ಪ್ರಕಾಶ) ಶಂಬರನು ನನಗೆ ಮಾಡಿರತಕ್ಕ ಅಂಥ ಮಹೋಪಕಾರವೇನು?
ದುರ್ಮತಿ - ಹೇಳುವೆನು, ಕೇಳು. ಸುಮಿತ್ರನು ಸತ್ತು ಹೋಗಿರತಕ್ಕ ಸಂಗತಿಯು ನಿನಗೆ ತಿಳಿದೇ ಇದೆ. ಅವನು ಸತ್ತ ಮೇಲೆ, ಅವನು ಮಹಾ ಪಾಪಿಷ್ಠನೆಂದು ಕೆಲವು ಕಾಗದಪತ್ರಗಳಿಂದ ಗೊತ್ತಾಗಿದೆ. ಅವನು ಒಂದು ದಿವಸ ತನ್ನ ದ್ವೇಷಿಗಳಾದ ಮೂರು ಜನಗಳನ್ನು ಖೂನಿ ಮಾಡಿದನು. ಇದನ್ನು ನೋಡಿ ನಿನ್ನ ತಂದೆ ಅಸಹ್ಯಪಟ್ಟು, ಅವನನ್ನು ಸರಕಾರಕ್ಕೆ ಒಪ್ಪಿಸಬೇಕೆಂದು ಪ್ರಯತ್ನ ಮಾಡಿದನು. ಅದಕ್ಕಾಗಿ ನಿಮ್ಮ ತಂದೆಯನ್ನು ಹಿಡಿದು ಇದೇ ಕಟ್ಟಡದಲ್ಲಿ ಸೆರೆಯಲ್ಲಿಟ್ಟನು. ಸುಮಿತ್ರನು ಕಾಲವಾದುದರಿಂದ, ನಿನ್ನ ತಂದೆಯನ್ನು ಶಂಬರನು ನಿನಗೋಸ್ಕರ ಬಿಡುಗಡೆಮಾಡಿ, ಈ ಕಟ್ಟಡದಲ್ಲಿಯೆ ಇಟ್ಟಿರುವನು.
ಕಾಮಮೋಹಿನಿ - ಈಗ ನನ್ನ ತಂದೆಯೆಲ್ಲಿದ್ದಾನೆ?
ದುರ್ಮತಿ- ನಿನ್ನ ತಂದೆಯು ಈ ಕಟ್ಟಡದಲ್ಲಿಯೇ ಇರುತ್ತಾನೆ. ಶಂಬರನ ಆಜ್ಞೆಯಿಲ್ಲದೆ ಇಲ್ಲಿಂದ ಆಚೆಗೆ ಹೋಗುವುದಕ್ಕೆ ಮಾತ್ರ ಇವನಿಗೆ ಅವಕಾಶವಿಲ್ಲ.

ಕಾಮಮೋಹಿನಿ-(ಆತ್ಮಗತ) ಈಗ ಈ ದುರಾತ್ಮನಾದ ಶಂಬರನ , ತನ್ನ ಇಷ್ಟಾರ್ಥ ಪರಿಪೂರ್ತಿಗೆ, ನನ್ನ ತಂದೆಯು ಕೈಗೆ ಸಿಕ್ಕಿದ್ದು ಬಲವಾದ ಸಾಧಕವೆಂದು ತಿಳಿದುಕೊಂಡಿರಬಹುದು. ಪತಿವ್ರತೆಯರು, ದುಷ್ಟರು ಒಡ್ಡ ತಕ್ಕ ಇಂಥ ಬಲೆಗಳಿಗೆ ಎಂದಿಗೂ ಬೀಳರು. ನಮ್ಮ ತಂದೆಯೂ ಕೂಡ ತನಗೋಸ್ಕರ ಈ ದುರಾತ್ಮನಿಗೆ ನನ್ನ ಪಾತಿವ್ರತ್ಯ ವಿಕ್ರಯವನ್ನು ಮಾಡಬೇ 
ಪರಂತಪವಿಜಯ
೧೦೮

ಕೆಂದು ಎಂದಿಗೂ ಅಪೇಕ್ಷಿಸಲಾರನು. ಇರಲಿ; ಉಳಿದ ವಿದ್ಯಮಾನಗಳನ್ನು ತಿಳಿದುಕೊಳ್ಳೋಣ. (ಪ್ರಕಾಶ) ಈ ವುಪಕಾರಕ್ಕೆ ಪ್ರತಿಯಾಗಿ ನನ್ನ ಪಾತಿವ್ರತ್ಯಭಂಗಕ್ಕೆ ನಾನು ಒಪ್ಪಬೇಕೆಂದು ಶಂಬರನಿಗೆ ತಾತ್ಪರ್ಯವಿರುವುದಲ್ಲವೆ?
ದುರ್ಮತಿ -ನಿನ್ನ ಗಂಡನು ಜೀವಂತನಾಗಿದ್ದರೆ, ನೀನು ಪರಪುರುಷ ಗಮನವನ್ನು ಮಾಡುವುದು ವ್ಯಭಿಚಾರವೆನ್ನಿಸಿಕೊಳ್ಳುವುದು. ನಿನ್ನ ಗಂಡನು ಸ್ವರ್ಗಸ್ಥನಾಗಿರುವನು. ನೀನು ಅನ್ಯನಾದ ಪತಿಯನ್ನು ವರಿಸುವುದಕ್ಕೆ ಪ್ರತಿಬಂಧಕವಾವುದೂ ಇರುವುದಿಲ್ಲ. ಇದು ಎಂದಿಗೂ ದೇಹವಿಕ್ರಯವಲ್ಲ. ಶಂಬರನು ನಿನಗೆ ಇಂಥ ಮಹೋಪಕಾರವನ್ನು ಮಾಡಿರುವುದಲ್ಲದೆ, ನಿನ್ನಲ್ಲಿ ಅತ್ಯಂತ ಅನುರಕ್ತನಾಗಿರುತ್ತಾನೆ. ಇವನ ಇಷ್ಟಾರ್ಥವನ್ನು ನೆರವೇರಿಸಿ ಪ್ರತ್ಯಕ್ಷವಾದ ಐಹಿಕ ಸುಖಗಳನ್ನು ಅನುಭವಿಸದೆ, ಬುದ್ದಿಹೀನಳಂತೆ ಈ ಲೋಕವನ್ನೇ ಪರಿತ್ಯಾಗ ಮಾಡಿ ಅಪ್ರತ್ಯಕ್ಷವಾದ ಆಮುಷ್ಮಿಕ ಸುಖವನ್ನು ಅಪೇಕ್ಷಿಸುವುದು ಯುಕ್ತಿ ಯುಕ್ತವಾದುದೆ ? ನೀನು ಚೆನ್ನಾಗಿ ಪರ್ಯಾಲೋಚಿಸು.
ಕಾಮಮೋಹಿನಿ -ನಿನ್ನ ಉಪದೇಶವು ಸ್ವೈರಿಣಿಯರಲ್ಲಿ ಪ್ರಯೋಜನಕಾರಿಯಾಗಬಹುದು. ಅದು ಹಾಗಿರಲಿ ; ನನ್ನ ತಂದೆಯು ನನ್ನನ್ನು ನೋಡಿರುವನೇ?
ದುರ್ಮತಿ- ನಿನಗೆ ಪ್ರಜ್ಞೆಯಿಲ್ಲದಿದ್ದಾಗ ನಿನ್ನ ತಂದೆಯು ನಿನ್ನನ್ನು ಅನೇಕಾವೃತ್ತಿ ನೋಡಿದನು.
ಕಾಮಮೋಹಿನಿ- ನೀನು, ಹೋಗಿ ಅವನನ್ನು ಕರೆದುಕೊಂಡು ಬಾ; ನೋಡೋಣ.
ದುರ್ಮತಿ - ಶಂಬರನ ಆಜ್ಞೆಯಿಲ್ಲದೆ ನಾನು ಕರೆದುಕೊಂಡು ಬರುವುದಕ್ಕಾಗುವುದಿಲ್ಲ.
ಕಾಮಮೋಹಿನಿ - ನಾನು ಆಜ್ಞೆಯನ್ನು ಕೊಡುತ್ತೇನೆ; ಹೋಗಿ ಕರೆದುಕೊಂಡು ಬಾ. ಈ ಆಜ್ಞೆಯನ್ನು ಉಲ್ಲಂಘಿಸಿದರೆ, ನಿನಗೆ ತಕ್ಕ ಶಿಕ್ಷೆಯನ್ನು ಮಾಡುವೆನು.
  ದುರ್ಮತಿಯು, ಕಾಮಮೋಹಿನಿಯ ಸ್ಥೈರ್ಯವನ್ನೂ ಆಕೃತಿಯನ್ನೂ ನೋಡಿ, ಅವಳ ಆಜ್ಞೆಯನ್ನು ಉಲ್ಲಂಘಿಸಿದರೆ ಆಗತಕ್ಕ ಫಲ 

ಅಧ್ಯಾಯ ೧೨
೧೦೯

ವನ್ನು ತಿಳಿದುಕೊಂಡು, ಅವನನ್ನು ಕರೆದುಕೊಂಡು ಬರುವುದಕ್ಕೋಸ್ಕರ ಹೊರಟಳು.
  ಕಾಮಮೋಹಿನಿಗೆ ಪಿತೃವಿಯೋಗವಾದಾಗ ಹತ್ತು ವರುಷ ವಯಸ್ಸಾಗಿತ್ತು. ಆದಾಗ್ಯೂ, ಆತನ ಚಹರೆಯ ಜ್ಞಾಪಕವು ಸಂಪೂರ್ಣವಾಗಿತ್ತು. ಅವಳು ತಂದೆಯನ್ನು ನೋಡಬೇಕೆಂಬ ಕುತೂಹಲದಿಂದ ಇದ್ದಳು. ಅಷ್ಟ ರಲ್ಲಿಯೇ ಸುಮಾರು ಐವತ್ತು ವಯಸ್ಸುಳ್ಳ ಒಬ್ಬ ಮನುಷ್ಯನನ್ನು ದುರ್ಮತಿಯು ಕರೆದುಕೊಂಡು ಬಂದಳು. ಅವನು ಕಾರಾಗೃಹವಾಸದಿಂದಲೂ ವ್ಯಸನದಿಂದಲೂ ಕೃಶನಾಗಿದ್ದನು. ಇವನ ಮುಖದಲ್ಲಿ ಮೂಳೆಗಳು ಕಾಣುತಿದ್ದುವು. ಕಣ್ಣುಗಳು ಗುಣಿಬಿದ್ದಿದ್ದುವು. ಗಡ್ಡವೂ ತಲೆಯ ಕೂದಲುಗಳೂ ಬೆಳ್ಳಗಾಗಿದ್ದುವು. ಅವನು ಚಿಂದಿಬಟ್ಟೆಗಳನ್ನು ಹಾಕಿಕೊಂಡಿದ್ದನು. ಇವನ ಕೈಗೆ ಬೇಡಿ ಹಾಕಲ್ಪಟ್ಟಿತ್ತು. ಕಾಮಮೋಹಿನಿಯು, ಇವನನ್ನು ನೋಡಿದ ಕೂಡಲೇ ತನ್ನ ತಂದೆಯೆಂದು ಗೊತ್ತುಮಾಡಿಕೊಂಡು, ಮೇಲಕ್ಕೆ ಎದ್ದು ನಮಸ್ಕಾರವನ್ನು ಮಾಡಿದಳು. ಇವರಿಗೆ ಪರಸ್ಪರ ದರ್ಶನವಾದಕೂಡಲೇ ಉಭಯರ ಕಣ್ಣುಗಳಿಂದಲೂ ನೀರು ಧಾರಾಸಂಪಾತವಾಗಿ ಸುರಿಯಿತು. ತಂದೆಯ ಅವಸ್ಥೆಯನ್ನು ನೋಡಿ, ಕಾಮಮೋಹಿನಿಯು ಅವನನ್ನು ಅಪ್ಪಿ ಕೊಂಡು, ಮಾತನಾಡುವುದಕ್ಕೂ ಶಕ್ತಿಯಿಲ್ಲದೆ ಕೆಲವು ನಿಮಿಷಗಳನ್ನು ಕಳೆದಳು. ಅವನೂ ಅನಿರ್ವಚನೀಯವಾದ ಕಷ್ಟಕ್ಕೆ ಗುರಿಯಾಗಿದ್ದಾಗ್ಯೂ, ಮಗಳನ್ನು ನೋಡಿದ ಸಂತೋಷದಿಂದ ಸ್ವಲ್ಪ ಹೊತ್ತು ಪರವಶನಾಗಿದ್ದನು.
ಕಾಮಮೋಹಿನಿ- ಅಪ್ಪಾ ! ನಮಗೆ ವಿಯೋಗವಾಗಿ ಬಹಳ ಕಾಲವಾಯಿತು. ಈಗ ನಮ್ಮಿಬ್ಬರಿಗೂ ಸಮಾಗಮವಾಗಿರುವುದು ನಿಜವೋ?- ಅಥವಾ ನಾನು ಸ್ವಪ್ನ ಸುಖವನ್ನು ಅನುಭವಿಸುತ್ತಿರುವೆನೋ ?
ತಂದೆ- ವತ್ಸೇ! ಕಾಮಮೋಹಿನಿ! ಇದು ಸ್ವಪ್ನವಲ್ಲ. ನಾನೇ ನಿನ್ನ ತಂದೆ ; ನಿನ್ನನ್ನು ಪುನಃ ನೋಡಿ ಸಂತೋಷಪಡುವ ಲಾಭವು ಈ ಜನ್ಮದಲ್ಲಿ ಉಂಟಾಗುವುದೆಂದು ನಾನು ಭಾವಿಸಿರಲಿಲ್ಲ. ಏನೋ ಪುಣ್ಯ ವಿಶೇಷದಿಂದ, ದೇವರು ಈ ಭಾಗ್ಯವನ್ನು ನನಗೆ ಉಂಟುಮಾಡಿದನು. ನಿನ್ನ ತಾಯಿಯು, ನೀನು ಚಿಕ್ಕ ಮಗುವಾಗಿರುವಾಗಲೇ ಸ್ವರ್ಗಸ್ಥಳಾದಳು, ನನಗೂ ಅನಿರ್ವಚನೀಯವಾದ ದುಃಖಗಳು ಪ್ರಾಪ್ತವಾದುವು. ಇಂಥ ಕಷ್ಟ

| 
೧೧೦
ಪರಂತಪವಿಜಯ

ಗಳನ್ನು ಹತ್ತು ವರುಷ ಅನುಭವಿಸಿ, ನಿಮ್ಮ ತಾಯಿಯ ರೂಪಲಾವಣ್ಯಗಳು ನಿನ್ನಲ್ಲಿ ಪ್ರತಿಬಿಂಬಿಸಿರುವುದನ್ನು ನೋಡತಕ್ಕ ಸಂಪತ್ತನ್ನು ಹೊಂದುವೆನೆಂದು ನಾನು ಎಣಿಸಿರಲಿಲ್ಲ. ಈಗ ನನ್ನ ಕಷ್ಟಗಳೆಲ್ಲಾ ಪರಿಹಾರವಾಗಿ ತೋರುವುದಲ್ಲದೆ, ಏನೋ ಒಂದು ಸಂತೋಷ ವಿಶೇಷದಿಂದ ನಾನು ಪರವಶನಾಗಿರುವೆನು. ಆದಾಗ್ಯೂ, ನಿನಗೆ ಉಂಟಾಗಿರತಕ್ಕೆ ಪರಾಧೀನತೆಯು ನನಗೆ ಬಹಳ ಸಂಕಟವನ್ನುಂಟು ಮಾಡುತ್ತಲಿರುವುದು. ಈ ಸುಖದುಃಖ ದ್ವಂದ್ವಗಳು, ಒಂದು ವಿಚಿತ್ರವಾದ ಮನೋವಿಕವನ್ನುಂಟುಮಾಡುತ್ತಲಿವೆ. ಈ ನಿರ್ಬಂಧದಿಂದ ಬಿಡುಗಡೆಯಾಗದಿರುವ ಪಕ್ಷದಲ್ಲಿ, ನಮ್ಮಿಬ್ಬರಿಗೂ ಸಾವಕಾಶವಿಲ್ಲದೆ ಮರಣವುಂಟಾದರೆ- ಅದೇ ದೊಡ್ಡ ಕ್ಷೇಮವೆಂದು ಭಾವಿಸುತ್ತೇನೆ.
ಕಾಮಮೋಹಿನಿ- ಎಲೈ ತಂದೆಯೆ! ಕಷ್ಟ ಸುಖಗಳು ಶಾಶ್ವತವಲ್ಲ. ನಾವು ಅನುಭವಿಸಿರುವ ಕಷ್ಟಗಳಿಗಿಂತಲೂ ಹೆಚ್ಚಾದ ಕಷ್ಟವು ಯಾವುದೂ ಇಲ್ಲ. ಮರಣವನ್ನು ಏತಕ್ಕೆ ಬಯಸುತ್ತಿಯೆ? ಹತ್ತು ವರುಷ ವಿಯೋಗಾನಂತರ ನಾವು ಒಬ್ಬರನ್ನೊಬ್ಬರು ನೋಡುವ ಸಂಭವವುಂಟಾದುದರಿಂದಲೇ, ನಮ್ಮ ಕಷ್ಟಗಳಿಗೆ ಅವಸಾನ ಸಮಿಾಪಿಸಿರುವುದೆಂದು ತೋರುವುದಿಲ್ಲವೆ? ನಮ್ಮನ್ನು ಇಂಥ ಅವಸ್ಥೆಗೆ ಗುರಿಮಾಡಿದವರಲ್ಲಿ, ಕೆಲವರು ಲೋಕಾಂತರವನ್ನು ಹೊಂದಿರಬಹುದು; ಮತ್ತೆ ಕೆಲವರಿಗೆ ನರಕದಲ್ಲಿ ಅನಿರ್ವಚನೀಯವಾದ ಯಾತನಾಸ್ಥಳಗಳು ಸಿದ್ದವಾಗುತ್ತಲಿರಬಹುದು. ಮರಣವನ್ನು ಬಯಸಬೇಡ. ಈ ಲೋಕಸುಖವನ್ನು ಇನ್ನೂ ಕೆಲವು ವರುಷ ನಾವು ಅನುಭವಿಸಬೇಕಾಗಿರುವದು. ಕಷ್ಟದ ಸರದಿಯು ಮುಗಿದುಹೋಯಿತು; ಸೌಖ್ಯದ ಸರದಿಯು ಬರುತ್ತಿದೆ. ಇದುವರೆಗೂ ಕೃಷ್ಣ ಪಕ್ಷದಲ್ಲಿದ್ದೆವು; ಈಗ ಶುಕ್ಲಪಕ್ಷವು ನಮ್ಮನ್ನು ಎದುರುನೋಡುತ್ತಲಿದೆ.

ತಂದೆ- ನನ್ನ ಪ್ರಿಯಳಾದ ಮಗುವೆ! ನಿನ್ನ ಅವಸ್ಥೆಯನ್ನು ನೀನು ಸಂಪೂರ್ಣವಾಗಿ ತಿಳಿದುಕೊಂಡಂತೆ ತೋರುವುದಿಲ್ಲ. ಈಗ ತಾನೆ ದೈವಾಧೀನದಿಂದ ರೋಗವೆಂಬ ಮೃತ್ಯುವಿನಿಂದ ನೀನು ಬಿಡುಗಡೆ ಮಾಡಲ್ಪಟ್ಟಿರುವೆ. ಆದರೆ, ಈ ಮೃತ್ಯುವು ನಿನ್ನನ್ನು ಪರಿಗ್ರಹಿಸಿದ್ದರೆ ನಾನು ವಿಶೇಷ ಸಂತಾಪ ಪಡುತ್ತಿರಲಿಲ್ಲ. ಮೃತ್ಯುವಿಗಿಂತಲೂ ಹೆಚ್ಚಾದ ಕ್ರೌರ್ಯವುಳ್ಳ ದುರಾತ್ಮನೊ 
ಅಧ್ಯಾಯ ೧೨
೧೧೧

ಬ್ಬನಿಗೆ ನಾವಿಬ್ಬರೂ ಅಧೀನರಾಗಿರುವೆವು. ನಮ್ಮ ಕಷ್ಟಗಳಿಗೆ ಅವಸಾನವೆಲ್ಲಿಯದು? ಶುಕ್ಲಪಕ್ಷವನ್ನು ಎದುರು ನೋಡುವ ಸಂತೋಷವು ನಮಗೆ ಎಲ್ಲಿ ಬರುವದು? ಈ ಕೃಷ್ಣ ಪಕ್ಷದಲ್ಲಿಯೇ ನಾವಿಬ್ಬರೂ ಲೋಕಾಂತರವನ್ನು ಹೊಂದುವಂತೆ ತೋರುತ್ತದೆ. ನಿನ್ನನ್ನು ನೋಡಿ ಮಾತನಾಡಿದ ಸಂತೋಷವು ನನಗೆ ಸಾಕು. ಯಮನು ನಮ್ಮಲ್ಲಿ ಕರುಣವನ್ನಿಟ್ಟು ಈ ನಮ್ಮ ದೇಹಗಳನ್ನ ಬಿಡುವಂತೆ ಮಾಡಿದರೆ ಕೃತಕೃತ್ಯರಾಗುವೆವು. ನಿನ್ನ ಸ್ಥಿತಿಯು ನನ್ನ ಸ್ಥಿತಿಗಿಂತಲೂ ಶೋಚನೀಯವಾದುದು. ನಾನು ಅನುಭವಿಸುತ್ತಲಿರುವ ಕಷ್ಟಗಳು, ನನ್ನ ದೇಹಕ್ಕೆ ಮನಸ್ಸಿಗೂ ವ್ಯಥೆಯನ್ನುಂಟು ಮಾಡುತ್ತಲಿರುವೆವು ; ನಿನಗೆ ಉಂಟಾಗಿರತಕ್ಕೆ ಕಷ್ಟಗಳೋ, ನಿನ್ನ ಪಾತಿವ್ರತ್ಯ ಕ್ಕೂ ಭಂಗವನ್ನು ತರುವಂತೆ ತೋರುತ್ತವೆ. ಇಂಥ ಅವಸ್ಥೆಯು ಬರುವುದರೊಳಗಾಗಿ ದೇವರು ನಿನ್ನ ಪ್ರಾಣವನ್ನು ಪರಿಗ್ರಹಿಸಿದರೆ, ಇದೇ ಪರಮ ಸುಖವೆಂದು ನಾನು ಭಾವಿಸುವೆನು.
ಕಾಮಮೋಹಿನಿ - ತಂದೆಯೇ ! ಈ ವಿಷಯಗಳನ್ನೆಲ್ಲಾ ನಾನು ಬಲ್ಲೆನು. ದುರಾತ್ಮನಾದ ಶಂಬರನು ನನ್ನ ಪಾತಿವ್ರತ್ಯ ಭಂಗವನ್ನು ಮಾಡ ಬೇಕೆಂದು ಸಂಕಲ್ಪ ಮಾಡಿರುವನು. ಇದು ಸಾಮಾನ್ಯವಾದ ಸಂಕಲ್ಪವೆ? ರಾವಣಾದಿಗಳು ಇಂಥ ದುಷ್ಟ ಸಂಕಲ್ಪವನ್ನು ಮಾಡಿ ಯಮಾಲಯವನ್ನು ಹೊಂದಲಿಲ್ಲವೆ? ನಿನ್ನ ಮಗಳಾದ ಕಾಮಮೋಹಿನಿಯು ಪತಿವ್ರತಾಶ್ರೇಷ್ಠಳಲ್ಲವೆ? ಅವಳ ಪಾತಿವ್ರತ್ಯಕ್ಕೆ ಭಂಗ ಬರುವ ಸಂದರ್ಭ ಬಂದರೆ, ಅವಳಿಗೆ ದೇವರ ಸಹಾಯವುಂಟಾಗಲಾರದೆ? ಈ ವಿಷಯದಲ್ಲಿ ನೀನು ಭಯ ಪಡಬೇಡ.
ತಂದೆ- ನಿನ್ನ ಧೈರ್ಯವು ಅಸಾಧಾರಣವಾದುದು. ಆದರೆ, ಅದು ಆಧಾರ ರಹಿತವಾದುದೆಂದು ನನಗೆ ತೋರುವುದು, ನೀನು ದೇವರಲ್ಲಿ ಸಂಪೂರ್ಣ ಭಕ್ತಿಯನ್ನಿಟ್ಟಿರುವೆ; ದೇವರು ಮಾತ್ರ ಕಣ್ಣುಗಳನ್ನು ಮುಚ್ಚಿಕೊಂಡಿರುವಂತೆ ತೋರುತ್ತದೆ. ಹಾಗಿಲ್ಲದ ಪಕ್ಷದಲ್ಲಿ, ಇಂಥ ಕಷ್ಟಕ್ಕೆ ಗುರಿಯಾಗ ತಕ್ಕ ಪಾತಿತ್ಯವನ್ನು ನಾವು ಏನುಮಾಡಿರುವೆವು?
ಕಾಮಮೋಹಿನಿ-ಎಲೈ ತಂದೆಯೇ! ಕಷ್ಟದಿಂದ ಪರವಶನಾಗಿ ನೀನು ಈರೀತಿಯಲ್ಲಿ ಮಾತನಾಡುವೆ. ದೇವರು ಎಂದಿಗೂ ಕಣ್ಣು ಮುಚ್ಚಿ 

೧೧೨
ಪರಂತಪ ವಿಜಯ

ಗೊಂಡು ಇಲ್ಲ. ನೀನೂ ನಾನೂ ಪಡುತ್ತಲಿರುವ ಕಷ್ಟಗಳು ಅವನಿಗೆ ತಿಳಿಯದೆ ಇಲ್ಲ. ಇದಕ್ಕೆ ತಕ್ಕ ಪ್ರತೀಕಾರವನ್ನು ಅವನು ಮಾಡದೆ ಹೋಗ ತಕ್ಕವನಲ್ಲ. ಈ ಶಂಬರನು ತನ್ನ ಪಾತಕಕ್ಕೆ ಅನುರೂಪವಾದ ಶಿಕ್ಷೆ ಯನ್ನು ಶೀಘ್ರದಲ್ಲಿಯೇ ಹೊಂದುವನು.
ತಂದೆ- ಎಲೈ ಮಗುವೇ! ದೇವರಲ್ಲಿ ಈ ವಿಧವಾದ ನಂಬಿಕೆಯು ಹಾಗಿರಲಿ. ಈ ದುರಾತ್ಮನಾದ ಶಂಬರನ ಇಷ್ಟಾರ್ಥ ಪರಿಪೂರ್ತಿಯನ್ನು ಮಾಡುವುದಕ್ಕೆ ನೀನು ಒಪ್ಪದಿದ್ದರೆ, ನನ್ನನ್ನು ಅವನು ನಿನ್ನ ಮುಂದುಗಡೆ ಯಲ್ಲಿಯೇ ಕೊಲ್ಲತಕ್ಕ ಸಂಕಲ್ಪವನ್ನು ಮಾಡಿಕೊಂಡಿದ್ದಾನೆ. ಇದು ಶೀಘ್ರದಲ್ಲಿಯೇ ನಡೆಯುವುದು.
ಕಾಮಮೋಹಿನಿ - ಎಲೈ ತಂದೆಯೆ ! ಹುಟ್ಟಿದವರು ಎಂದಾದರೂ ಒಂದು ದಿವಸ ಸಾಯಲೇಬೇಕು. ಕೆಲವು ದಿವಸಗಳ ಮುಂಚೆಯೇ ಸಾಯುವುದರಿಂದ ಬಾಧಕವೇನು? ಶಂಬರನು ಅತ್ಯುತ್ಕಟವಾದ ಪಾಪವನ್ನು ಮಾಡಲಾರಂಭಿಸಿರುವನು ಇಂಥ ಪಾಪಗಳಿಗೆ ಕೂಡಲೆ ಶಿಕ್ಷೆಯಾಗುವ ಸಂಭವವೂ ಉಂಟು. ಹಾಗಾಗದ ಪಕ್ಷದಲ್ಲಿ, ಈ ಪ್ರಪಂಚದ ಸೃಷ್ಟಿ ಸ್ಥಿತಿ ಲಯಗಳಿಗೆ ಕಾರಣಭೂತನಾಗಿ ದುಷ್ಟನಿಗ್ರಹ ಶಿಷ್ಟ ಪರಿಪಾಲನೆಗಳನ್ನು ಮಾಡತಕ್ಕ ಈಶ್ವರನು ಇಲ್ಲವೆಂಬುದಾಗಿಯೇ ಗೊತ್ತಾಗುವುದು. ಅಂಥ ಈಶ್ವರನಿಲ್ಲದ ಪ್ರಪಂಚವು ನಮಗೆ ಆವಶ್ಯಕವಿಲ್ಲ. ಈ ದೇಹವನ್ನು ನಿರ್ಲಕ್ಷವಾಗಿ ಬಿಟ್ಟು, ಈ ಕಷ್ಟಗಳನ್ನು ತಪ್ಪಿಸಿಕೊಳ್ಳೋಣ.

ತಂದೆ-ಪಾಪಿ ವಿಧಿಯು ನಮಗೆ ಅದಕ್ಕೂ ಅವಕಾಶವನ್ನು ಕೊಟ್ಟಿಲ್ಲ. ನೀನು ಈ ರತ್ನಾಕರಕ್ಕೆ ತರಲ್ಪಟ್ಟ ಮೇಲೆ, ನನ್ನ ಕಾಲು ಬೇಡಿಗಳು ತೆಗೆಯಇಟ್ಟುವು. ಕೈಬೇಡಿಗಳು ಇನ್ನೂ ಹಾಗೆಯೇ ಇವೆ. ಆತ್ಮಹತ್ಯವನ್ನು ಮಾಡಿಕೊಳ್ಳುವುದಕ್ಕೂ ಅವಕಾಶವಿಲ್ಲ. ನೀನು ಇವನ ಇಷ್ಟಾರ್ಥವನ್ನು ನಡೆಸದಿದ್ದರೆ, ಇವನು ನನ್ನನ್ನು ಕೊಲ್ಲುವುದಾಗಿ ಸಂಕಲ್ಪ ಮಾಡಿರುವನಷ್ಟೆ ! ಇದು ನನ್ನ ಭಾಗ್ಯವೇ ಸರಿ. ಆದರೆ, ನನ್ನ ಅನಂತರ ನಿನ್ನ ಗತಿ ಯೇನಾಗುವುದೋ ಎಂಬ ಯೋಚನೆಯೊಂದು ಮಾತ್ರ ನನ್ನನ್ನು ಬಾಧಿಸುವುದು. 
ಅಧ್ಯಾಯ ೧೪
೧೧೩

ಕಾಮಮೋಹಿನಿ-ನಿನ್ನ ಮರಣಕ್ಕನುರೂಪವಾದ ಮರಣವೇ ನನಗೂ ಬರುವುದು. ಈ ಚಂಡಾಲನ ಸಂಕಲ್ಪಕ್ಕೆ ಕಾಮಮೋಹಿನಿಯು ಒಳಪಡುವಳೇ ? ಹಾಗೆ ಒಳಪಟ್ಟರೆ, ಅವಳು ನಿನ್ನ ಮಗಳಾಗಿರುವುದಕ್ಕೆ ಅರ್ಹಳೇ? ಆ ವಿಷಯದಲ್ಲಿ ನೀನು ಭಯಪಡಬೇಡ. ಈ ಕಿರಾತನು ನಿನ್ನನ್ನು ಕೊಲ್ಲುವುದಾದರೆ, ನಿನು ಮಗಳ ಯೋಚನೆಯನ್ನು ಸಂಪೂರ್ಣವಾಗಿ ಬಿಟ್ಟು ಪರಬಹ್ಮನನ್ನು ಧ್ಯಾನಿಸುತ್ತ ಈ ದುಷ್ಟ ಲೋಕವನ್ನು ಬಿಟ್ಟು ತೆರಳು. ಕಾಮಮೋಹಿನಿಯು ಶೀಘ್ರದಲ್ಲಿಯೇ ನಿನ್ನನ್ನು ಅನುಸರಿಸಿ ಬರುವಳು.
  ಅಷ್ಟರಲ್ಲಿಯೇ ಶಂಬರನು ಅಲ್ಲಿಗೆ ಬಂದನು. ಕಾಮಮೋಹಿನಿಯ ಪ್ರಸನ್ನತೆಯು ತನ್ನ ವಿಷಯದಲ್ಲಿ ಉಂಟಾಗಬೇಕೆಂದು, ಅವಳ ತಂದೆಯ ಕೈಬೇಡಿಗಳನ್ನು ತೆಗೆಸಿ, ಆತನಿಗೆ ಉಪಚಾರವನ್ನು ಮಾಡಿ, ಅವನನ್ನು ಅವನ ಬಿಡಾರಕ್ಕೆ ಕಳುಹಿಸಿ, ಅವನ ಮೇಲೆ ಪಹರೆಯನ್ನು ಮಾತ್ರ ಇಟ್ಟಿದ್ದನು. ಕಾಮಮೋಹಿನಿಯನ್ನು ಉಪಾಯದಿಂದ ಸ್ವಾಧೀನ ಮಾಡಿಕೊಳ್ಳಬೇಕೆಂದು ಪ್ರಯತ್ನ ಮಾಡಿ, ಅವಳೊಡನೆ ಸಲ್ಲಾಪವಾಡಲುದ್ಯುಕ್ತನಾದನು.
ಶಂಬರ-ಎಲೆ ಕಾಮಮೋಹಿನಿಯೇ! ನಿನ್ನ ತಂದೆಯ ಹತ್ತು ವರುಷಗಳಿಂದ ಇಲ್ಲಿನ ಕಾರಾಗೃಹದಲ್ಲಿ ಅನಿರ್ವಚನೀಯವಾದ ಸಂಕಟಗಳನ್ನು ಅನುಭವಿಸಿದನು. ಈಗ ಅವನ ಕಷ್ಟಗಳೆಲ್ಲ ನಿವಾರಣೆಯಾದವು. ಕಾಮಮೋಹಿನಿ-ಇನ್ನೂ ನಿವಾರಣೆಯಾಗಿಲ್ಲ. ನಿವಾರಣೆಯಾಗುವುದಕ್ಕೆ ಉಪಕ್ರಮವಾಗಿ ಇದೆ.
ಶಂಬರ-ನಿನಗೊಸ್ಕರ ಅವನ ಕಷ್ಟಗಳನ್ನು ನಾನು ಸಂಪೂರ್ಣ ವಾಗಿ ನಿವಾರಣೆಮಾಡುವೆನು.

ಕಾಮಮೋಹಿನಿ - ಅದಕ್ಕೆ ಸಂಶಯವೇನು? ಅವನನ್ನು ಕಾರಾಗೃಹಕ್ಕೆ ಹಾಕಿದ ಪಾಪಿಷ್ಠನಾದ ಸುಮಿತ್ರನು, ನಿನ್ನ ಗುಂಡಿನ ಏಟಿನಿಂದಲೇ ಸತ್ತನು. ಈಗ ನನ್ನ ತಂದೆಯ ಮನಃಕ್ಲೇಶಕ್ಕೆ ಕಾರಣಭೂತನಾದ ನೀನೂ ಕೂಡ, ನಿನ್ನ ಪ್ರವರ್ತನದಿಂದಲೇ ಹತನಾಗುವೆ. ಈ ಯೆರಡು ಕೆಲಸವೂ ಪೂರ 
೧೧೪
ಪರಂತಪ ವಿಜಯ

ಯಿಸಿದಕೂಡಲೆ, ನನ್ನ ತಂದೆಯ ಮನಃಕ್ಲೇಶಕ್ಕೆ ಅವಧಿಯು ಉಂಟಾಗಿಯೇ ಆಗುವುದು.
ಶಂಬರ -ಈ ನಿಷ್ಟುರೋಕ್ತಿಗಳನ್ನು ಬಿಡು. ಈಗ ನೀನು ನನ್ನ ಹಸ್ತಗತಳಾಗಿರುವೆ. ನಿನ್ನ ತಂದೆಯೂ ಹಾಗೆಯೇ ಇರುವನು. ಪರಂತಪನು ಯಮಪುರಿಗೆ ಪ್ರಯಾಣ ಮಾಡಿದನು. ಈ ರತ್ನಾಕರ ಮೊದಲಾದುವುಗಳೆಲ್ಲ ನನ್ನ ಸ್ವಾಧೀನವಾಗಿರುವುವು. ಕುಬೇರನ ಸಂಪತ್ತಿಗೆ ಸಮಾನವಾದ ಸಂಪತ್ತುಗಳು ನನ್ನ ಅಧೀನವಾಗಿರುವುವು. ಕಾಲಾಧೀನನಾದ ಪರಂತಪನ ಯೋಚನೆಯನ್ನು ಬಿಡು. ನನ್ನ ಇಷ್ಟಾರ್ಥಪೂರ್ತಿಯನ್ನು ಮಾಡಿದರೆ, ನಿನ್ನ ತಂದೆಯನ್ನು ಕಾರಾಗೃಹದಿಂದ ಬಿಡುಗಡೆ ಮಾಡುವುದಲ್ಲದೆ, ಈ ನನ್ನ ಸಂಪತ್ತಿಗೆಲ್ಲ ನಿನ್ನನ್ನು ಭಾಗಿನಿಯನ್ನಾಗಿ ಮಾಡುವೆನು.
ಕಾಮಮೋಹಿನಿ- ಎಲಾ ಕೊಲೆಪಾತಕನೇ! ಈ ದುಷ್ಟವಚನಗಳನ್ನು ಬಿಡು. ಕಾಮಮೋಹಿನಿಯು ಸ್ವೈರಿಣಿಯಲ್ಲ. ಅವಳು ಮಹಾ ಪತಿವ್ರತೆಯೆಂದು ತಿಳಿದುಕೋ. ಪಾತಿವ್ರತ್ಯ ಭಂಗವನ್ನು ಮಾಡಬೇಕೆಂದು ಪ್ರಯ ತ್ನಿಸಿದ ರಾವಣಾದಿಗಳ ಅವಸ್ಥೆಯೇನಾಯಿತು? ಪರ್ಯಾಲೋಚಿಸು, ರಾವಣನ ಸಂಪತ್ತಿಗಿಂತಲೂ, ಶಕ್ತಿಗಿಂತಲೂ, ನಿನ್ನ ಸಂಪತ್ತೂ ಶಕ್ತಿಯೂ ಹೆಚ್ಚಾಗಿರುವುವೆ? ಈ ದುಷ್ಟ ಸಂಕಲ್ಪವನ್ನು ನೀನು ಇಟ್ಟುಕೊಂಡರೆ, ಅವನಿಗೆ ಆದ ಗತಿಯು ನಿನಗೆ ಎಂದಿಗೂ ತಪ್ಪುವುದಿಲ್ಲ. ನನಗೆ ನಿನ್ನ ಸಂಪತ್ತುಗಳಲ್ಲಿ ಭಾಗವೂ ಬೇಡ; ನನ್ನ ತಂದೆಗೆ ಸ್ವಾತಂತ್ರವನ್ನು ನೀನು ಕೊಡುತ್ತಿ ಯೆಂದು ನಾನು ನಿನ್ನ ಇಷ್ಟಾರ್ಥವನ್ನು ಸಲ್ಲಿಸತಕ್ಕವಳೂ ಅಲ್ಲ.

ಶಂಬರ-ಎಲೇ ಹುಚ್ಚೀ ! ಶ್ರೀರಾಮನು ಬದುಕಿದ್ದುದರಿಂದ, ಅವನು ರಾವಣನನ್ನು ವಧಿಸಿ ಸೀತೆಯ ಪಾತಿವ್ರತ್ಯವನ್ನು ಉಳಿಸಿದನು. ನಿನ್ನ ಪಾತಿವ್ರತ್ಯವನ್ನು ಉಳಿಸುವುದಕ್ಕೆ ಪರಂತಪನು ಜೀವಂತನಾಗಿದ್ದಾನೆಯೇ? ನಿನ್ನ ತಂದೆಯು ನನ್ನ ಹಸ್ತಗತನಾಗಿರುವುದಿಲ್ಲವೇ? ಬಲಾತ್ಕಾರವಾಗಿ ನಾನು ಈಗಲೇ ನಿನ್ನ ಪಾತಿವ್ರತ್ಯಕ್ಕೆ ಭಂಗವನ್ನು ತಂದರೆ, ನನಗೆ ಎದುರು ಯಾರು? ಮೌರ್ಖ್ಯದಿಂದ ಪೂರ್ವಾಪರಗಳನ್ನು ಯೋಚಿಸದೆ ನಡೆದುಕೊಳ್ಳಬೇಡ. 
ಅಧ್ಯಾಯ ೧೪
೧೧೫

ಕಾಮಮೋಹಿನಿ-ಎಲಾ ದುಷ್ಟ ! ಇಲ್ಲಿಂದ ಆಚೆಗೆ ತೆರಳು. ಪರಂತಪನು ಕಾಲಾಧೀನನಾಗಿದ್ದಾಗ, ನನ್ನ ತಂದೆಯು ನಿನ್ನ ಸೆರೆಯಲ್ಲಿ ಸಿಕ್ಕಿದ್ದಾಗ್ಯೂ, ನನ್ನನ್ನು ಕೆಡಿಸುವುದು ನಿನಗೆ ಎಂದಿಗೂ ಸಾಧ್ಯವಾದುದಲ್ಲ. ಈ ದುಷ್ಟ ಪ್ರಯತ್ನವನ್ನು ನೀನು ಮಾಡಿದಕೂಡಲೆ, ನೀನು ಯಮಪುರಿಗೆ ಪ್ರಯಾಣ ಮಾಡಬೇಕಾಗುವುದು. ಪರಂತಪನು ಕಾಲಾಧೀನನಾಗಿದ್ದಾಗ್ಯೂ, ನಿನ್ನ ದುಷ್ಟಪ್ರಯತ್ನಗಳೇ ನಿನ್ನನ್ನು ವಧಿಸದೆ ಇರಲಾರವು. ಎಚ್ಚರಿಕೆ ಯಾಗಿರು. ನನ್ನ ಸಾನ್ನಿಧ್ಯವನ್ನು ಬಿಟ್ಟು ಹೊರಟುಹೋಗು.
ಶಂಬರ-ಎಲೈ ದುಷ್ಟಳಾದ ಕಾಮಮೋಹಿನಿಯೇ ! ನೀನು ಬುದ್ದಿಶಾಲಿನಿಯಲ್ಲ. ನಿನ್ನ ಉನ್ಮತ್ತ ಪ್ರಲಾಪಗಳಿಗೆ ನಾನು ಹೆದರತಕ್ಕವನಲ್ಲ. ಪೂರ್ವಾಪರಗಳನ್ನು ಯೋಚಿಸಿ ಬುದ್ದಿಶಾಲಿನಿಯಂತೆ ನಡೆದುಕೊಳ್ಳುವುದಕ್ಕೆ, ನಿನಗೆ ಈ ವೊಂದು ದಿನ ವಾಯಿದೆಯನ್ನು ಕೊಟ್ಟಿರುತ್ತೇನೆ. ನಾಳೆ ಬೆಳಗ್ಗೆ ಬರುತ್ತೇನೆ. ಅಷ್ಟರೊಳಗಾಗಿ ಈ ಮೌರ್ಖ್ಯವನ್ನು ಬಿಟ್ಟು ನನ್ನ ಹೆಂಡತಿಯಾಗಿರುವುದಕ್ಕೆ ಒಪ್ಪಿಕೊಂಡರೆ ಸರಿ; ಹಾಗಿಲ್ಲದ ಪಕ್ಷದಲ್ಲಿ, ನಿನ್ನ ಎದುರಿಗೆ ನಿನ್ನ ತಂದೆಯನ್ನು ವಧಿಸುತ್ತೇನೆ. ಅನಂತರ ನಿನ್ನ ಪಾತಿವ್ರತ್ಯಕ್ಕೆ ಭಂಗವನ್ನು ಮಾಡಿ, ತರುವಾಯ ನಿನ್ನನ್ನೂ ಯಮಪುರಿಗೆ ಕಳುಹಿಸುತ್ತೇನೆ.
  ಶಂಬರನು ಹೀಗೆಂದು ಹೇಳಿ, ಆ ಕೊಟಡಿಯನ್ನು ಬಿಟ್ಟು ಹೊರಟನು, ಕಾಮಮೋಹಿನಿಯು ಅವನಿಗೆ ಕೇಳುವಂತಯೇ “ ದುರಾತ್ಮರಾದವರು ಒಂದು ವಿಧವಾಗಿ ಯೋಚಿಸಿದರೆ ದೇವರು ಮತ್ತೊಂದು ವಿಧವಾಗಿ ಯೋಚಿಸ ಕೂಡದೇ? ಈ ಪ್ರಪಂಚದಲ್ಲಿ ದುಷ್ಟನಿಗ್ರಹ ಶಿಷ್ಟ ಪರಿಪಾಲನೆಗಳನ್ನು ದೇವರು ವಹಿಸಿರುವನೋ ಇಲ್ಲವೋ ಅದು ನಾಳೆ ಬೆಳಗ್ಗೆ ಗೊತ್ತಾಗುವುದು ” ಎಂದು ಹೇಳಿ, ಆತ್ಮಗತವಾಗಿ “ ಈಶ್ವರನು ಈ ಯಿಪ್ಪತ್ತನಾಲ್ಕು ಘಂಟೆಗಳೊಳಗಾಗಿ ಇವನಿಗೆ ಶಿಕ್ಷೆಯನ್ನು ಮಾಡದಿದ್ದರೆ, ಹೇಗಾದರೂ ನಾನು ಆತ್ಮಹತ್ಯವನ್ನಾದರೂ ಮಾಡಿಕೊಂಡು ನನ್ನ ಪಾತಿವ್ರತ್ಯಕ್ಕೆ ಭಂಗ ಬರದಂತೆ ಮಾಡಿಕೊಳ್ಳಬೇಕು ” ಎಂದು ಪರ್ಯಾಲೋಚಿಸುತ್ತಿದ್ದಳು.

♠♠ ♠♠


೧೧೬
ಪರಂತಪ ವಿಜಯ

ಅಧ್ಯಾಯ ೧೫
----

ಶಂಬರನೂ ಅರ್ಥಪರನೂ ಪರಂತಪನನ್ನು ಕಾರಾಗೃಹದ ಒಂದು ಕೊಟ್ಟಡಿಯಲ್ಲಿ ಸೇರಿಸಿ ಹೊರಟುಹೋದರಷ್ಟೆ! ಆಗ ಪರಂತಪನು ತನ್ನಲ್ಲಿ ತಾನೇ ಹೀಗೆ ಯೋಚಿಸಿಕೊಂಡನು:-ಇದು ದುಷ್ಪ್ರವೇಶವಾದ ದುರ್ಗವು. ಇದು ಭೂತ ಪ್ರೇತ ಪಿಶಾಚಾದಿಗಳಿಂದ ವಾಸಮಾಡ್ಪಟ್ಟಿರುವುದೆಂದು ಸತ್ಯ ಶರ್ಮಾದಿಗಳು ಹೇಳುತ್ತಿದ್ದರು. ಅವರ ಮಾತು ಸುಳ್ಳೆಂದು ನಾನು ಹೇಳುತಿದ್ದೆನು. ಶಂಬರ ಮೊದಲಾದ ಭೂತಗಳಿಂದ ಈ ದುರ್ಗವು ವ್ಯಾಪ್ತವಾಗಿರುವುದು. ನಾನು ಈ ಶಂಬರನ ಕೈಗೆ ಸಿಕ್ಕಿದೆನು. ಇಲ್ಲಿಂದ ತಪ್ಪಿಸಿಕೊಂಡು ಹೋಗುವುದು, ದೈವಗತಿಯಿಂದ ಸಾಧ್ಯವಾಗಬೇಕೇ ಹೊರತು, ಮನುಷ್ಯ ಪ್ರಯತ್ನಕ್ಕೆ ಸಾಧ್ಯವಾಗುವಂತೆ ತೋರುವುದಿಲ್ಲ. ಹೀಗೆ ಈ ಕಾರಾಗೃಹದಲ್ಲಿರುವುದಕ್ಕಿಂತಲೂ, ಇಲ್ಲಿಂದ ತಪ್ಪಿಸಿಕೊಳ್ಳುವ ಪ್ರಯತ್ನವನ್ನು ಮಾಡಿ ಆ ಪ್ರಯತ್ನದಲ್ಲಿ ಸಾಯುವುದಾದರೂ ಮೇಲು. ಅರ್ಥಪರನು ಸತ್ಯವಂತನೆಂದು ನಂಬಿದ್ದೆನು. ಇವನು ಮಹಾ ದ್ರೋಹಿಯಾಗಿ ಪರಿಣಮಿಸಿದನು. ಶಂಬರನನ್ನೂ ಅರ್ಥಪರನನ್ನೂ ನಿಗ್ರಹಿಸುವುದಕ್ಕೆ ಉಪಾಯವಾವುದೂ ತೋರುವುದಿಲ್ಲ. ಇದಕ್ಕೆ ಏನುಮಾಡುವುದು? ಇಂಥ ವಿಪತ್ಕಾಲದಲ್ಲಿ ಧೈಠ್ಯವನ್ನೂ ಪೌರುಷವನ್ನೂ ಅವಲಂಬಿಸಿದವರಿಗೆ ದೈವಸಹಾಯವೂ ಉಂಟಾಗಬಹುದು. ಅಂಥ ದೈವಸಹಾಯವು ಉಂಟಾದರೂ ಆಗಲಿ; ಅಥವಾ ಪುರುಷಪ್ರಯತ್ನದಲ್ಲಿ ಈ ದೇಹವನ್ನಾದರೂ ಬಿಡುವೆನು.
  ಈ ರೀತಿಯಲ್ಲಿ ಯೋಚಿಸುತ್ತ, ಕೈಕಾಲುಗಳಿಗೆ ಹಾಕಿದ್ದ ಬೇಡಿಯನ್ನು ಬಹು ಶ್ರಮಪಟ್ಟು ಕತ್ತರಿಸಿದನು. ಹಾಗೆಯೇ ಜೇಬಿಗೆ ಕೈಹಾಕಿ ನೋಡಲು, ಒಂದು ಗಡಿಯಾರವೂ ಒಂದು ದೀಪದ ಕಡ್ಡಿ ಪೆಟ್ಟಿಗೆಯೂ

ಸಿಕ್ಕಿದುವು. ಇವನನ್ನು ಕೂಡಿದ್ದ ಕೊಟ್ಟಡಿಗೆ ಸ್ವಲ್ಪವೂ ಬೆಳಕು ಬೀಳುತ್ತಿರಲಿಲ್ಲ. ದೀಪದ ಕಡ್ಡಿಯನ್ನು ಹಚ್ಚಿ, ಆ ಕೊಟ್ಟಡಿಯನ್ನು ಪರೀಕ್ಷಿಸಿದನು. ಅದು ಹತ್ತು ಅಡಿ ಚದರವುಳ್ಳದಾಗಿ, ಎಂಟು ಅಡಿ ಎತ್ತರವುಳ್ಳದಾಗಿ, ಒಂದು ದೊಡ್ಡ ಬಂಡೆಯಲ್ಲಿ ಕೊರೆಯಲ್ಪಟ್ಟ ಗವಿಯಾಗಿತ್ತು. ಇದರ 
ಅಧ್ಯಾಯ ೧೫
೧೧೭

ಬಾಗಿಲು, ಭಾರೀ ಕಬ್ಬಿಣದ ಸಲಾಕಿಗಳಿಂದ ಮಾಡಲ್ಪಟ್ಟಿತ್ತು. ಇದಕ್ಕೆ ದೊಡ್ಡ ಬೀಗವನ್ನೂ ಹಾಕಿದ್ದರು. ಈ ಬಂಡೆಯ ಹಿಂಭಾಗದಲ್ಲಿ ಒಂದು ಕಾಲುವೆಯು ಹರಿದುಹೋಗುತಿತ್ತು. ಅದರ ನೀರು ಈ ಗುಹೆಯ ಒಂದು ಕಂಡಿಯಿಂದ ಒಳಕ್ಕೆ ಪ್ರವೇಶಿಸಿ ಮತ್ತೊಂದು ಕಂಡಿಯಿಂದ ಹೊರಕ್ಕೆ ಹೋಗುತಿತ್ತು. ಈ ಗುಹೆಯಲ್ಲಿ, ಒಂದು ಮಂಚವೂ ಅದರ ಮೇಲೆ ಬಂದು ಹಾಸಿಗೆಯೂ ದಿಂಬೂ ಕಂಬಳಿಗಳೂ ಹಾಕಲ್ಪಟ್ಟಿದ್ದುವು. ಇದಲ್ಲದೆ, ಒಂದು ಕುರ್ಚಿ, ಒಂದು ಮೇಜು, ಒಂದು ನೀರಿನ ಪಾತ್ರೆ, ಸ್ವಲ್ಪ ಸೌದೆ, ಒಂದು ಚೌಕ, ಇವೂ ಹಾಕಲ್ಪಟ್ಟಿದ್ದವು. ಅವನು ಈ ಸೌದೆಯನ್ನು ಉರಿಸುತ್ತ ಕೆಲವು ದಿವಸಗಳವರೆಗೂ ಬೆಳಕನ್ನು ಅನುಭವಿಸಬಹುದೆಂದು ಯೋಚಿಸು ತಿದ್ದನು. ಎರಡು ದಿವಸಗಳವರೆಗೂ ತನಗೆ ಆಹಾರವು ಬರಲಿಲ್ಲವಾದುದರಿಂದ, ಬಹಳ ನಿಶ್ಯಕ್ತನಾಗಿ, ಆಹಾರವಿಲ್ಲದೆ ತನ್ನನ್ನು ಕೊಲ್ಲುವರೆಂದು ತಿಳಿದುಕೊಂಡು, ಈ ರೀತಿಯಲ್ಲಿ ಬದುಕುವುದಕ್ಕಿಂತ ಸಾಯುವುದೇ ಮೇಲೆಂದು ಯೋಚಿಸುತ್ತಿದ್ದನು. ಮೂರನೆಯ ದಿವಸ, ಅರ್ಥಪರನು ಅಲ್ಲಿಗೆ ಬಂದು, ಸಲಾಕಿಗಳ ಮಧ್ಯದಿಂದ ಬಂದು ರೊಟ್ಟಿಯನ್ನು ಬೀಸಾಕಿ, “ ಕಾಲವೆಯಲ್ಲಿ ನೀರಿದೆ, ಕುಡಿಯಬಹುದು ” ಎಂದು ಹೇಳಿ, ಅಲ್ಲಿ ನಿಲ್ಲದೆ ಹೊರಟು ಹೋದನು. ಹೀಗೆಯೇ ಕೆಲವು ದಿವಸಗಳು ನಡೆದುವು. ಒಂದು ದಿನ, ಕತ್ತಲೆಯಲ್ಲಿ ಮಂಚದ ಮೇಲೆ ತನ್ನ ಅವಸ್ಥೆಯನ್ನು ಕುರಿತು ಸಂತಪಿಸುತ್ತಿರುವಾಗ, ಒಂದು ಬೆಳಕು ಕಾಣ ಬಂದು, ಆ ದುರ್ಗದ ಕಾವಲಗಾರನು ಸಲಾಕಿಯ ಸಂದುಗಳಿಂದ ಪರಂತಪನನ್ನು ನೋಡಿದನು. ಪರಂತಪನು ಎದ್ದು ಹಾಸಿಗೆಯ ಮೇಲೆ ಕುಳಿತುಕೊಂಡು, ಇವನನ್ನು ಬಹಳ ಔತ್ಸುಕ್ಯದಿಂದ ನೋಡಿದನು. ಈ ಕಾವಲಗಾರನು, ಕುಳ್ಳನಾಗಿಯೂ, ಗೂನುಳ್ಳವನಾಗಿಯೂ, ಮಹಾ ಪ್ರಕಾಶಮಾನವಾದ ಕಣ್ಣುಗಳುಳ್ಳವನಾಗಿಯೂ, ಮಧ್ಯಸ್ಥವಾದ ವಯಸ್ಸುಳ್ಳವನಾಗಿಯೂ, ಬಹಳ ಭಯಂಕರನಾಗಿಯೂ ಕಾಣ ಬಂದನು. ಇವನು, ಪರಂತಪನನ್ನು ದುರುಗುಟ್ಟುಕೊಂಡು ನೋಡಲುಪಕ್ರಮ ಮಾಡಿದನು.

ಪರಂತಪ- ಅಯ್ಯಾ! ನೀನು ಯಾರು? ಇಲ್ಲಿ ಏನು ಕೆಲಸವಾಗಿ ಬಂದಿರುವೆ? 
೧೧೮
ಪರಂತಪ ವಿಜಯ

ಕಾವಲುಗಾರ-(ಆತ್ಮಗತ) ಇವನೊಡನೆ ಮಾತನಾಡುವುದು ಸಮನಲ್ಲ. ಈ ಗಂಟನ್ನು ಈ ಸಲಾಕಿಗಳ ಸಂದಿನಿಂದ ಬೀಸಾಕಿ ಹೊರಟು ಹೋಗುವೆನು. (ಪ್ರಕಾಶ) ನಿನ್ನೊಡನೆ ಮಾತನಾಡುವುದಕ್ಕೆ ನಾನು ಬಂದಿಲ್ಲ.ಇದನ್ನು ತೆಗೆದುಕೊ.


  ಹೀಗೆ ಹೇಳಿ, ಗಂಟನ್ನು ಒಳಕ್ಕೆ ಬೀಸಾಕಿ ಹೊರಟುಹೋದನು. ಕೂಡಲೇ ಪರಂತಪನು ದೀಪದ ಕಡ್ಡಿಯಿಂದ ಅಲ್ಲಿದ್ದ ಕಟ್ಟಿಗೆಗಳನ್ನು ಹತ್ತಿಸಿ, ಆ ಬೆಳಕಿನಲ್ಲಿ ಈ ಗಂಟನ್ನು ಬಿಚ್ಚಿದನು. ಅದರಲ್ಲಿ ಅನೇಕವಿಧ ವಾದ ಭಕ್ಷ್ಯಗಳೂ ಮೇಣದ ಬತ್ತಿಗಳೂ, ದೀಪದಕಡ್ಡಿ ಪೆಟ್ಟಿಗೆಗಳೂ ಇದ್ದುವು. ಆಗ ಪರಂತಪನು, ತನ್ನ ಮನಸ್ಸಿನಲ್ಲಿ “ ಇವನು ಶಂಬರನ ಕಡೆಯವನು. ಈ ಭಕ್ಷ್ಯಗಳನ್ನೂ ಮೇಣದಬತ್ತಿಗಳನ್ನೂ ದೀಸದ ಕಡ್ಡಿ ಪೆಟ್ಟಿಗೆಗಳನ್ನೂ ಹೀಗೆ ತಂದು ಹಾಕುವುದಕ್ಕೆ ಕಾರಣವೇನು? ಶಂಬರನೇನಾದರೂ ವಿಷವನ್ನು ಹಾಕಿ ನಾನು ಇದನ್ನು ತಿಂದು ಸಾಯಲೆಂದು ಇವನ ದ್ವಾರಾ ಈ ಭಕ್ಷ್ಯವನ್ನು ಕಳುಹಿಸಿರಬಹುದೇ? ಹಾಗಿರಲಾರದು. ನಾನು ಇವನ ಹಸ್ತಗತನಾಗಿರುತ್ತೇನೆ. ನನ್ನನ್ನು ಕೊಲ್ಲುವುದು ಇವನಿಗೆ ಏನೂ ಕಷ್ಟವಿಲ್ಲ. ಈ ರೀತಿಯಲ್ಲಿ ಪ್ರೇರಿತವಾಗಿ ಈ ಕಾವಲುಗಾರನು ಬಂದಿರ ಲಾರನು. ಈಶ್ವರ ಪ್ರೇರಣೆಯಿಂದ ನನಗೆ ಸಹಾಯಮಾಡಬೇಕೆಂದು ಇವನಿಗೆ ಏತಕ್ಕೆ ತೋರಿರಕೂಡದು ? ಇರಲಿ, ಪರೀಕ್ಷಿಸೋಣ. ಬಹುಶಃ ಈ ಕಷ್ಟ ನಿವಾರಣೆಗೆ ಈ ಕಾವಲುಗಾರನು ನನಗೆ ಸಹಾಯಭೂತನಾಗುವನು ” ಎಂದು ಯೋಚಿಸುತ್ತ ಆ ದಿನವನ್ನು ಕಳೆದನು. ಮಾರನೆಯ ದಿವಸವೂ, ಆ ಕಾವಲುಗಾರನು ಒಳ್ಳೆಯ ಭಕ್ಷ್ಯ ಭೋಜ್ಯಗಳನ್ನು ಗಂಟುಕಟ್ಟಿ ಆ ಕಾರಾಗೃಹಕ್ಕೆ ತಂದು ಬೀಸಾಕಿದನು. ಅರ್ಥಪರನು ರೊಟ್ಟಿಯನ್ನು ತಂದು ಹಾಕುವುದು ನಿಂತು ಹೋಯಿತು; ಈ ಕಾವಲಗಾರನು ತರತಕ್ಕೆ ಆಹಾರಗಳು ಮಾತ್ರ ಕ್ರಮವಾಗಿ ಬರುವುದಕ್ಕೆ ಉಪಕ್ರಮವಾಯಿತು. ಹಸಿವಿನಿಂದ ನಾನು ಸಾಯಲೆಂದು ಶಂಬರನು ಅರ್ಥಪರನ ಮೂಲಕವಾಗಿ ಕಳುಹಿಸುತ್ತಿದ್ದ ರೊಟ್ಟಿಯನ್ನು ನಿಲ್ಲಿಸಿರಬಹುದೆಂಬುದಾಗಿಯೂ, ಹೀಗೆ ನಾನು ಸಾಯದಿರಲೆಂದು ಈ ಕಾವಲಗಾರನು ಭಕ್ಷ ಭೋಜ್ಯಗಳನ್ನು ತಂದು ಕೊಡುತ್ತಿರಬಹುದೆಂಬುದಾಗಿಯೂ, ಪರಂತಪನು ಭಾವಿಸಿಕೊಂಡನು. ಇದು ನಿಜವಾದ
ಅಧ್ಯಾಯ ೧೫
೧೧೯

ಭಾವನೆ. ಇವನಿಗೆ ಆಹಾರವಿಲ್ಲದಂತೆ ಮಾಡಿ ಅವನಾಗಿ ಸಾಯುವಂತೆ ಮಾಡಬೇಕೆಂದು, ಶಂಬರನು ಕಾವಲುಗಾರನಿಗೆ ಆಜ್ಞೆ ಮಾಡಿದ್ದನು. ಈ ಕಾವಲುಗಾರನ ಮನಸ್ಸು, ಇಂಥ ಅಕೃತ್ಯವನ್ನು ಮಾಡುವುದಕ್ಕೆ ಒಪ್ಪಲಿಲ್ಲ. ಆದುದರಿಂದಲೇ, ಅವನು ಏಕಾಂತವಾಗಿ ಆಹಾರವನ್ನು ತಂದುಕೊಡುತಿದ್ದನು. ಕಾಮಮೋಹಿನಿಯೂ ಅವಳ ತಂದೆಯೂ ಕಲೆತು ಮಾತನಾಡಿದ ದಿನ ಪ್ರಾತಃಕಾಲ, ಕಾವಲುಗಾರನು ಆಹಾರಾದಿಗಳನ್ನು ಗಂಟುಕಟ್ಟಿ ಪರಂತಪನಿದ್ಧ ಗುಹೆಗೆ ಹಾಕಿದನು. ಆದಾಗ್ಯೂ, ಆ ದಿನವೇ ಎರಡನೆಯ ಸಾರಿ ಲಾಂದ್ರವನ್ನು ಹಿಡಿದುಕೊಂಡು ಇವನು ಪರಂತಪನ ಬಳಿಗೆ ಬಂದನು. ಪರಂತಪನು ಇವನನ್ನು ದೃಷ್ಟಿಸಿ ನೋಡಲು, ಇವನ ಎದೆಯಲ್ಲಿ ಗಾಯ ವಾಗಿ ರಕ್ತವು ಸುರಿಯುತಿತ್ತು. ಇವನು ಮೂರ್ಛೆಯಿಂದ ಕೆಳಗೆ ಬೀಳುವಂತೆ ಕಾಣುತ್ತಿದ್ದನು. ಆದರೂ ಒಂದು ನಿಮಿಷದೊಳಗಾಗಿ ಆ ಕಾರಾಗೃಹದ ಬೀಗವನ್ನು ತೆಗೆದು ಒಳಗೆ ಹೋಗಿ ಪುನಃ ಹೊರಗೆ ಬೀಗವನ್ನು ಹಾಕಿದನು. ಪರಂತಪನು ಆಶ್ಚರ್ಯದಿಂದ ಇವನ ವ್ಯಾಪಾರವನ್ನೆಲ್ಲ ನೋಡುತ್ತಿದ್ದನು. ಆಗ ಕಾವಲುಗಾರನು ಕುರ್ಚಿಯನ್ನು ಎಳೆದುಕೊಂಡು ಅದರ ಮೇಲೆ ಕುಳಿತು ಕೊಂಡು ಸರಂತವನನ್ನು ದೃಷ್ಟಿಸಿನೋಡಿ - ಅಯ್ಯಾ ! ನೀನು ಪರಂತಪನೆ ? ” ಎಂದನು.
ಪರಂತಪ-ಅಹುದು.
ಕಾವಲುಗಾರ -ನಾನು ಈ ರತ್ನಾಕರದ ಕಾವಲಗಾರನು. ಲೋಕದಲ್ಲಿ ಎಲ್ಲರೂ ನನ್ನನ್ನು ಪಿಶಾಚನೆಂದು ತಿಳಿದುಕೊಂಡಿರುವರು. ಈಗ ನನಗೆ ಅಪಾಯಕರವಾದ ಏಟು ಬಿದ್ದಿರುವುದು. ಸ್ವಲ್ಪ ಹೊತ್ತಿನೊಳಗಾಗಿ ನಾನು ಸಾಯುವೆನು. ಸಾಯುವುದಕ್ಕೆ ಮುಂಚೆ ನಾನು ಹೇಳತಕ್ಕ ಕೆಲವು ಅಂಶಗಳುಂಟು.
ಪರಂತಪ – ಒಳ್ಳೆಯದು. ಹೇಳಬೇಕಾದುದನ್ನು ಹೇಳು. ನಿನಗೆ ತಗುಲಿರತಕ್ಕ ಏಟು ನಿಜವಾಗಿ ಅಪಾಯಕರವಾದುದೆ?

ಕಾವಲುಗಾರ-ಅದರಲ್ಲಿ ಏನೂ ಸಂದೇಹವಿಲ್ಲ. ಶಂಬರನ ಸಮೀಪ ದಲ್ಲಿದ್ದ ಕೆಲವು ಕಾಗದ ಪತ್ರಗಳನ್ನು, ಒಂದು ಧರ್ಮಕಾರ್ಯಾರ್ಥವಾಗಿ ನಾನು ಈ ರಾತ್ರಿ ಅಪಹರಿಸಿದೆನು. ಅವನು ನನ್ನನ್ನು ಗುಂಡಿನಿಂದ ಹೊಡೆ
೧೨೦
ಪರಂತಪ ವಿಜಯ

ದನು. ಆ ಕ್ಷಣದಲ್ಲಿಯೇ, ನನಗೆ ಮಾತ್ರ ತಿಳಿದಿರತಕ್ಕ ಒಂದು ಮಾರ್ಗದಿಂದ ನಾನು ಇಲ್ಲಿಗೆ ಬಂದಿರುವೆನು. ಅವನ ಅಪರಾಧಕ್ಕೆ ಪ್ರತೀಕಾರವನ್ನು ನೀನು ಮಾಡುವುದಾದರೆ, ನಿನಗೆ ಈ ಕಾರಾಗೃಹವಾಸವನ್ನು ತಪ್ಪಿಸುವೆನು.
ಪರಂತಪ- ನನಗೆ ಬಿಡುಗಡೆಯಾದ ಮೇಲೆ ಶಂಬರನಿಗೆ ಒಂದು ದಿವಸವೂ ಆಯುಸ್ಸು ಇರುವುದಿಲ್ಲವೆಂದು ನೀನು ದೃಢನಾಗಿ ನಂಬಬಹುದು. ಈ ದುರಾತ್ಮನು ಇನ್ನೂ ಎಷ್ಟೋ ಅಕೃತ್ಯಗಳನ್ನು ಮಾಡಿರುವನು, ಅವುಗಳಿಗೆ ಪ್ರತೀಕಾರವನ್ನು ಮಾಡಿಸುವದಕ್ಕೋಸ್ಕರ ದೇವರು ಸನ್ನದ್ಧನಾಗಿರುವನೆಂದು ತೋರುವ ಸಂದರ್ಭಗಳು ಉಂಟಾಗುತ್ತವೆ.
ಕಾವಲುಗಾರ- ಹಾಗಾದರೆ ಹೇಳುವೆನು -ಕೇಳು. ಕಳೆದ ಹತ್ತು ವರ್ಷಗಳಿಂದ ನಾನು ಸುಮಿತ್ರನ ಸೇವಕನಾಗಿದ್ದೆನು. ಅವನು ಕಾವಮೋಹಿನಿಯ ತಂದೆಯನ್ನು ಇಲ್ಲಿ ಒಂದು ಕಾರಾಗೃಹದಲ್ಲಿಟ್ಟು, ಅವನ ಮೇಲೆ ನನ್ನನ್ನು ಪಹರೆ ಹಾಕಿದ್ದನು. ಸುಮಿತ್ರನು ನನಗೆ ತುಂಬ ಸಂಬಳವನ್ನು ಕೊಡುತ್ತಿದ್ದನು. ಈ ಸಂಬಳದಲ್ಲಿ ಒಂದು ಭಾಗವನ್ನು ಕೈದಿಯ ಪೋಷಣೆಗಾಗಿ ನಾನು ವಿನಿಯೋಗಿಸುತ್ತಿದ್ದೆನು. ಅವನನ್ನು ಎಷ್ಟು ದಯೆಯಿಂದ ನಾನು ಕಾಣುತ್ತಿದ್ದೆನೋ ಅದು ನಿನಗೆ ಅವನಿಂದಲೇ ತಿಳಿಯುವುದು.
ಪರಂತಪ- ಅವನನ್ನು ನಾನು ಬಲ್ಲೆನೋ?
ಕಾವಲುಗಾರ- ನೀನು ಅವನನ್ನು ನೋಡಿಲ್ಲ.
ಪರಂತಪ- ಅವನು ಎಲ್ಲಿ ಇದ್ದಾನೆ ?
ಕಾವಲುಗಾರ-ಅವನಿಗೆ ಕೈಕಾಲು ಬೇಡಿಗಳನ್ನು ಹಾಕಿ, ಇಂತಹುದೆ ಒಂದು ಗುಹೆಯಲ್ಲಿ ಸುಮಿತ್ರನು ಅವನನ್ನು ಇಟ್ಟಿದ್ದನು. ಸುಮಿತ್ರನು ಸತ್ತ ಮೇಲೆ, ಶಂಬರನು ಅವನ ಬಂಧವಿಮೋಚನೆಯನ್ನು ಮಾಡಿ, ಅವನ ಸಹಾಯದಿಂದ ಕಾಮಮೋಹಿನಿಯನ್ನು ಪಾಣಿಗ್ರಹಣ ಮಾಡಿಕೊಳ್ಳಬೇಕೆಂದು ಇದ್ದಾನೆ.

ಪರಂತಪ-ಏನು ಹೇಳಿದೆ ? ಈ ಪಾಪಿಯನ್ನು ಅವಳು ಮದುವೆ ಮಾಡಿಕೊಳ್ಳುವಳೋ? ಎಂದಿಗೂ ಮಾಡಿಕೊಳ್ಳಲಾರಳು.
ಅಧ್ಯಾಯ ೧೫
೧೨೧

ಕಾವಲುಗಾರ- ನೀನು ಹೇಳುವುದು ನಿಜ. ನಾಡಿದ್ದು ಬೆಳಗ್ಗೆ ಎಂಟು ಘಂಟೆಯೊಳಗಾಗಿ ತನ್ನನ್ನು ಮದುವೆ ಮಾಡಿಕೊಳ್ಳುವಂತೆ ಮಗಳನ್ನು ಒಪ್ಪಿಸದಿದ್ದ ಪಕ್ಷದಲ್ಲಿ, ಪ್ರಥಮತಃ ತಂದೆಯ ಶಿರಶ್ಛೇದನವನ್ನು ಮಾಡಿ ಅನಂತರ ಕಾಮಮೋಹಿನಿಯನ್ನು ಕೆಡಿಸಿ, ತರುವಾಯ ಅವಳ ಶಿರಶ್ಛೇದನವನ್ನೂ ಮಾಡಬೇಕೆಂದು, ಈ ದುರಾತ್ಮನು ಸಂಕಲ್ಪ ಮಾಡಿದ್ದಾನೆ. ಶೀಘ್ರದಲ್ಲಿಯೇ ನೀನು ಇವನನ್ನು ವಧಿಸದಿದ್ದರೆ, ಕಾಮಮೋಹಿನಿಗೂ ಅವಳ ತಂದೆಗೂ ಮಾನಹಾನಿ ಪ್ರಾಣಹಾನಿಗಳು ತಪ್ಪುವುದಿಲ್ಲ.
ಪರಂತಪ - ಈ ಗುಹೆಯಿಂದ ಆಚೆಗೆ ಹೋಗುವುದಕ್ಕೆ ಮಾರ್ಗವನ್ನು ತೋರಿಸು. ಈ ಚಂಡಾಲನಾದ ಶಂಬರನ ಶರೀರವನ್ನು, ದುಷ್ಟಮೃಗಗಳಿಗೂ ಪಕ್ಷಿಗಳಿಗೂ ಆಹಾರವನ್ನಾಗಿ ಮಾಡುವೆನು.

ಕಾವಲುಗಾರ- ಆತುರಪಡಬೇಡ. ಈ ಕಾಗದಗಳನ್ನು ತೆಗೆದುಕೊ. ಇದೇ ಮಾಧವನ ಉಯಿಲು. ಇದರ ಪ್ರಕಾರ, ಈ ರತ್ನಾಕರಕ್ಕೆ ನೀನು ಹಕ್ಕುದಾರನು, ಇದನ್ನು ಅರ್ಥಪರನು ರಿಜಿಸ್ಟ್ರೇಷನ್ ಆಫೀಸಿನಿಂದ ಅಪಹರಿಸಿಕೊಂಡು ಬಂದು ಶಂಬರನಿಗೆ ಕೊಟ್ಟು, ಪ್ರತಿಫಲವನ್ನು ನಿರೀಕ್ಷಿಸುತ್ತಿರುವನು. ಈ ಯೆರಡನೆಯ ಕಾಗದವು, ಸುಮಿತ್ರನ ಉಯಿಲು. ಇದರಲ್ಲಿ ಸುಮಿತ್ರನು ಕಲಾವತಿಯನ್ನು ಮದುವೆ ಮಾಡಿಕೊಂಡವರಿಗೆ ತನ್ನ ಆಸ್ತಿಯನ್ನೆಲ್ಲ ಕೊಡುವುದಾಗಿ ಬರೆದಿರುವನು. ಇದನ್ನೂ ಕಲಾವತಿಯಿಂದ ಈ ದುರಾತ್ಮನು ಅಪಹರಿಸಿದನು. ಇದನ್ನು ಅಪಹರಿಸಿ ಇದಕ್ಕೆ ಹಕ್ಕುದಾರ೪ಾದ ಕಲಾವತಿಗೆ ಕೊಡಬೇಕೆಂದು ನಾನು ಪ್ರಯತ್ನ ಮಾಡಿದೆನು. ಇದನ್ನು ನೋಡಿ, ಶಂಬರನು ನನ್ನನ್ನು ಗುಂಡಿನಿಂದ ಹೊಡೆದನು. ಇನ್ನು ವಿಶೇಷ ಮಾತನಾಡುವುದಕ್ಕೆ ನನಗೆ ಶಕ್ತಿಯಿಲ್ಲ. ಈ ದುರ್ಗವನ್ನು ಬಿಟ್ಟು ಆಚೆಗೆ ಹೋಗುವುದಕ್ಕೆ ನಿನಗೆ ದಾರಿಯನ್ನು ತೋರಿಸಿ, ಅನಂತರ ಹಿಂದಿರುಗಿ ಬಂದು ನಾನು ಈ ದೇಹವನ್ನು ಬಿಡುವೆನು. ಈ ಶಂಬರನ ಕಡೆಯ ಐದು ಜನ ಕಾವಲುಗಾರರು ಈ ರತ್ನಾಕರದಲ್ಲಿರುವರು. ಅವರು ಬಹಳ ದುಷ್ಟರು. ಪಾಪಕೃತ್ಯಗಳನ್ನು ಮಾಡುವುದರಲ್ಲಿ ಅವರು ಶಂಬರನಿಗೆ ಸಮಾನರಾದವರು. ಶತ್ರುನಿಗ್ರಹವನ್ನು ಮಾಡುವುದರಲ್ಲಿ ನೀನು ಬಹಳ ಜಾಗರೂಕನಾಗಿರಬೇಕು. ಹಾಗಿಲ್ಲದ ಪಕ್ಷದಲ್ಲಿ ನಿನ್ನ ಪ್ರಾಣಕ್ಕೆ ಅಪಾಯ ಬರುವುದು. 
೧೨೨
ಪರಂತಪ ವಿಜಯ

ಹೀಗೆ ಹೇಳಿ, ಏಕಾಂತವಾದ ಒಂದು ಸುರಂಗದ ಮಾರ್ಗದಿಂದ ಅವನನ್ನು ಸ್ವಲ್ಪ ದೂರ ಕರೆದುಕೊಂಡು ಹೋಗಿ, ಅಲ್ಲಿದ್ದ ಒಂದು ಕೀಲಿನ ಬಾಗಿಲಿನ ಗುಂಡಿಯನ್ನು ಮುಟ್ಟಿದನು. ಕೂಡಲೆ ಬಾಗಿಲು ತೆಗೆದುಕೊಂಡಿತು. ಆ ಬಾಗಿಲನ್ನು ಹಾಕುವುದಕ್ಕೆ ಸಾಧಕವಾದ ಮತ್ತೊಂದು ಕೀಲನ್ನು ಅವನಿಗೆ ತೋರಿಸಿ, ಆ ಸುರಂಗ ಮಾರ್ಗದ ಏಕಾಂತಗಳನ್ನೆಲ್ಲ ಅವನಿಗೆ ಹೇಳಿ, ಕಾವಲುಗಾರನು ಕಳುಹಿಸಿಕೊಟ್ಟನು.


ಅಧ್ಯಾಯ ೧೬
----

ರಂತಪನು ರತ್ನಾಕರವನ್ನು ಬಿಟ್ಟು ಕಲ್ಯಾಣಪುರಕ್ಕೆ ವೇಷಧಾರಿಯಾಗಿ ಹೋದನು. ಅ ಪಟ್ಟಣದ ಕಲ್ಪತರುವೆಂಬ ಭೋಜನಶಾಲೆಯನ್ನು ಪ್ರವೇಶಿಸಿ, ಏಕಾಂತವಾಗಿ ಸಮರಸಿಂಹನ ಬಳಿಗೆ ಹೋಗಿ, ನಡೆದ ವಿದ್ಯಮಾನಗಳನ್ನೆಲ್ಲ ಹೇಳಿದನು.
ಸಮರಸಿಂಹ- ದುರಾತ್ಮನಾದ ಶಂಬರನನ್ನು ಶಿಕ್ಷಿಸಿ ನಿನ್ನ ಹೆಂಡತಿ ಮಾವ ಮೊದಲಾದವರನ್ನು ಬಿಡುಗಡೆ ಮಾಡುವದಕ್ಕೆ ನನ್ನ ಸಹಾಯವನ್ನು ಅಪೇಕ್ಷಿಸುತ್ತಿಲ್ಲವೆ?
ಪರಂತಪ- ಅದಕ್ಕೆ ಸಂದೇಹವೇನಿದೆ? ನಿನ್ನ ಸಹಾಯವಿಲ್ಲದಿದ್ದರೆ ಈ ಕೆಲಸ ನಡೆಯುವುದಿಲ್ಲ.
ಸಮರಸಿಂಹ- ಈ ದುಷ್ಟನನ್ನು ನಿಗ್ರಹಿಸುವುದಕ್ಕೋಸ್ಕರ ನಾನು ಪ್ರಾಣವನ್ನಾದರೂ ಕೊಡುವೆನು.
ಪರಂತಪ- ಹಾಗಾದರೆ ನನ್ನ ಕೆಲಸವಾಯಿತೆಂದು ಭಾವಿಸಿರುವೆನು. ಅದು ಹಾಗಿರಲಿ: ಈ ಪಟ್ಟಣಕ್ಕೆ ಮ್ಯಾಜಿಸ್ಟ್ರೇಟರು ಯಾರು?
ಸಮರಸಿಂಹ-ನಾನೇ ಇಲ್ಲಿಗೆ ಮ್ಯಾಜಿಸ್ಟ್ರೇಟಾಗಿ ಇರುವೆನು?

ಪರಂತಪ-ಹಾಗಾದರೆ, ಬಲಿಷ್ಠರಾಗಿಯೂ ಯುದ್ಧ ಮಾಡುವುದರಲ್ಲಿ ಸಮರ್ಥರಾಗಿಯೂ ಇರತಕ್ಕ ಪೊಲೀಸಿನವರನ್ನು ಕರೆದುಕೊಂಡು ಹೊರಡು.
ಅಧ್ಯಾಯ ೧೬
೧೨೩

ಒಂದು ಏಕಾಂತವಾದ ಮಾರ್ಗದಿಂದ ನಿಮ್ಮನ್ನು ರತ್ನಾಕರದ ಒಳಕ್ಕೆ ಕರೆದುಕೊಂಡು ಹೋಗುವೆನು. ಅಲ್ಲಿಗೆ ಹೋದಮೇಲೆ ಸಮಯವನ್ನು ನೋಡಿ ನಾನು ಒಂದು ಗುರುತನ್ನು ಮಾಡುವೆನು ಆಗ ಇವರು ಶಂಬರನನ್ನು ದಸ್ತಗಿರಿ ಮಾಡಲಿ.
ಸಮರಸಿಂಹ- ಸರಿ, ಆಗಬಹುದು. ಸಮಯಕ್ಕೆ ಸರಿಯಾಗಿ ನಿನ್ನ ಭೃತ್ಯನು ಬರುತ್ತಾನೆ, ನೋಡು, ಇದು ನಿನಗೆ ಶುಭಸೂಚನೆಯಲ್ಲವೆ?
ಪರಂತಪ- ಒಹೋ! ಮಂಜೀರಕನು ಬರುವನು! ಸಹಸ್ರಜನ ಪೊಲೀಸಿನವರ ಸಹಾಯವು ಸಿಕ್ಕಿದಂತಾಯಿತು. ಶಂಬರನನ್ನು ಗಲಾಟೆಯಿಲ್ಲದೆ ದಸ್ತಗಿರಿ ಮಾಡುವುದು ಇನ್ನು ಬಹಳ ಸುಲಭ, ನಾನು ಇಲ್ಲಿರುವೆನೆಂದು ಅವನಿಗೆ ಹೇಳಬೇಡ. ನನ್ನ ವಿಷಯದಲ್ಲಿ ಏನು ವರ್ತಮಾನವನ್ನು ತಂದಿರುವನೋ ಅದನ್ನು ಕೇಳು.
ಸಮರಸಿಂಹ- ಹಾಗೆಯೇ ಮಾಡುವೆನು.
ಮಂಜೀರಕನು ಸಮರಸಿಂಹನ ಬಳಿಗೆ ಬಂದು ನಮಸ್ಕಾರವನ್ನು ಮಾಡಿದನು.
ಸಮರಸಿಂಹ- ಎಲೈ ಮಂಜೀರಕನೆ! ನೀನು ನನ್ನ ಅಪ್ಪಣೆಯನ್ನು ತೆಗೆದುಕೊಂಡು ಹೋಗಿ ಬಹಳ ದಿವಸವಾಯಿತು. ಪರಂತಪನ ವಿಚಾರವೇನು?
ಮಂಜೀರಕ- ಪರಂತಪನ ವಿಚಾರವನ್ನು ಸಮಗ್ರವಾಗಿ ತಿಳಿದುಕೊಳ್ಳುವಂತೆ ಬಹಳ ವ್ಯವಸಾಯ ಮಾಡಬೇಕಾಯಿತು. ಆತನು ರತ್ನಾಕರದಲ್ಲಿ ಕಾಡುಮೃಗದಂತೆ ಒಂದು ಬೋನಿನಲ್ಲಿ ಕೂಡಲ್ಪಟ್ಟಿರುವನು.
ಸಮರಸಿಂಹ- ಕಾಮಮೋಹಿನಿಯ ವೃತ್ತಾಂತವೇನು?
ಮಂಜೀರಕ - ಶಂಬರನು ಸತ್ಯವರ್ಮನ ಮನೆಯಿಂದ ಅವಳನ್ನು ಬಲಾತ್ಕಾರವಾಗಿ ತೆಗೆದುಕೊಂಡು ಹೋಗಿ ರತ್ನಾಕರದಲ್ಲಿ ಇಟ್ಟುಕೊಂಡಿರುವನು.
ಸಮರಸಿಂಹ- ಇದಕ್ಕೆ ರುಜುವಾತು ಏನಾದರೂ ಉಂಟೋ?
ಮಂಜೀರಕ-ಸಂಪೂರ್ಣವಾದ ರುಜುವಾತು ಸಂಪಾದಿಸಲ್ಪಟ್ಟಿರುವುದು.
ಸಮರಸಿಂಹ- ಶಂಬರನು ಈಗ ಎಲ್ಲಿರುವನು?

ಮಂಜೀರಕ- ಈ ಕಲ್ಯಾಣಪುರದಲ್ಲಿ ಅವನು ಇಲ್ಲ. ಬಹುಶಃ ರತ್ನಾಕರದಲ್ಲಿರಬಹುದು.
೧೨೪
ಪರಂತಪ ವಿಜಯ

ಸಮರಸಿಂಹ- ಒಳ್ಳೆಯದು; ಈ ಪ್ರಸ್ತಾವವನ್ನು ಏಕಾಂತವಾಗಿ ಇಟ್ಟುಕೊ. ಭೋಜನವನ್ನು ತೀರಿಸಿಕೊಂಡು ಬಂದು ಪುನಃನನ್ನನ್ನು ಕಾಣು. ಮಂಜೀರಕನು ಹೊರಟುಹೋದನು.
ಸಮರಸಿಂಹ- ಅಯ್ಯಾ! ಪರಂತಪ! ಈಗ ಮಾಡತಕ್ಕ ಕೆಲಸವೇನು?
ಪರಂತಪ- ಮಂಜೀರಕನ ಜತೆಗೆ ಸಹಾಯಾರ್ಥವಾಗಿ ನೀನು ಎಷ್ಟು ಜನಗಳನ್ನು ಕರೆದುಕೊಂಡು ಬರುವೆ?
ಸಮರಸಿಂಹ- ನಿನಗೆ ಎಷ್ಟು ಜನಗಳು ಬೇಕು?
ಪರಂತಪ- ಎಂಟು ಜನಗಳಾದರೆ ಸಾಕು.
ಸಮರಸಿಂಹ-ಆಗಬಹುದು; ಪ್ರಥಮತಃ ಎಂಟುಜನಗಳು ಹೋಗಲಿ. ಶೀಘ್ರದಲ್ಲಿಯೇ ನೂರುಜನ ಪೊಲೀಸಿನವರು ಅವರ ಹಿಂದೆ ಬರುವಂತೆ ಆಜ್ಞೆ ಮಾಡುತ್ತೇನೆ.
ಪರಂತಪ-ಅಷ್ಟು ಜನಗಳು ಏತಕ್ಕೆ? ಅದು ಗಲಾಟೆಗೆ ಕಾರಣವಾಗುವುದು. ಶಂಬರನು ಭಯಪಟ್ಟು ತನ್ನ ಅಧೀನದಲ್ಲಿರತಕ್ಕ ಕಾಮಮೋಹಿನಿ ಮೊದಲಾದವರನ್ನು ಕೊಲ್ಲುವುದಕ್ಕೆ ಇದು ಕಾರಣವಾದರೂ ಆಗಬಹುದು.
ಸಮರಸಿಂಹ- ನೀವೆಲ್ಲರೂ ಅಲ್ಲಿಗೆ ಹೋಗುವುದಕ್ಕೆ ಪೂರ್ವಭಾವಿಯಾಗಿಯೇ, ನಾನು ವೇಷಧಾರಿಯಾಗಿ ರತ್ನಾಕರವನ್ನು ಪ್ರವೇಶಿಸಿ, ಅಲ್ಲಿನ ವಿದ್ಯಮಾನಗಳನ್ನು ತಿಳಿದುಕೊಳ್ಳುವೆನು.
ಪರಂತಪ- ಇದು ಅಸಾಧ್ಯ.
ಸಮರಸಿಂಹ-ಸಾಧ್ಯಾಸಾಧ್ಯಗಳನ್ನು ನೀನೇ ನೋಡುವೆ. ಈ ಮಂಜೀರಕನನ್ನೂ ಬೇದಿರಸಿನಲ್ಲಿರತಕ್ಕ ಈ ಯೆಂಟು ಜನ ಯೋಧರನ್ನೂ ಕರೆದುಕೊಂಡು, ನೀನು ರತ್ನಾಕರವನ್ನು ಪ್ರವೇಶಿಸು. ಶಂಬರನ ಸಮೀಪದಲ್ಲಿ ನನ್ನನ್ನು ನೀನು ಕಾಣುವೆ.

'ಒಳ್ಳೆಯದು' ಎಂದು ಸಮರಸಿಂಹನ ಅಪ್ಪಣೆಯನ್ನು ತೆಗೆದು ಕೊಂಡು, ಮಂಜೀರಕಾದಿಗಳೊಡನೆ ವೇಷಧಾರಿಯಾಗಿ ಪರಂತಪನು ಹೊರಟು, ಕಾಡುಮಾರ್ಗವಾಗಿ ರತ್ನಾಕರದ ಬಳಿಗೆ ಹೋಗಿ, ಏಕಾಂತ ವಾದ ದ್ವಾರದಿಂದ ಅದನ್ನು ಪ್ರವೇಶಿಸಿ, ತನ್ನನ್ನು ಕೂಡಿದ್ದ ಗುಹೆಯ ಬಳಿಗೆ
ಅಧ್ಯಾಯ ೧೬
೧೨೫

ಹೋದನು. ಅಲ್ಲಿ ಶಂಬರನ ಗುಂಡಿನ ಏಟನ್ನು ತಿಂದು ಅವನಿಗೆ ಪ್ರತೀಕಾರ ಮಾಡುವುದಕ್ಕೋಸ್ಕರ ಪರಂತಪನ ಬಂಧಮೋಕ್ಷವನ್ನು ಮಾಡಿದ ರತ್ನಾಕರದ ಕಾವಲುಗಾರನು, ಇನ್ನೂ ನರಳುತ್ತ ಮಲಗಿದ್ದನು. ಅವನಿಗೆ ಶೈತ್ಯೋಪಚಾರಗಳನ್ನು ಮಾಡಿ, ಶಂಬರನಿಗೆ ನರಕ ಪ್ರವೇಶಕಾಲವು ಸಂಭವಿಸಿರುವುದೆಂದು ಅವನಿಗೆ ಹೇಳಲು, ಅವನು ಯಾತನೆಯಿಂದ ಕಷ್ಟಪಡುತ್ತಿದ್ದಾಗ್ಯೂ ಎದ್ದು ಕುಳಿತುಕೊಂಡು, ಮಂಜೀರಕಾದಿಗಳನ್ನು ನೋಡಿ, "ನೀವೆಲ್ಲರೂ ಸಮರ್ಥರಾಗಿ ಕಾಣುತ್ತೀರಿ. ಇಲ್ಲಿ ಆಯುಧ ಪಾಣಿಗಳಾದ ದುರಾತ್ಮರು ಐದು ಜನಗಳಿರುತ್ತಾರೆ. ಅವರು ಬಹಳ ಸಮರ್ಥರು. ಆಯುಧವಿಲ್ಲದೆ ನಿಮ್ಮೆಲ್ಲರನ್ನೂ ತೀರಿಸಿಕೊಳ್ಳುವುದಕ್ಕೆ ಅವರಲ್ಲಿ ಒಬ್ಬನೇ ಸಾಕಾಗಿರುವನಲ್ಲ!" ಎನ್ನಲು, ಅವರೆಲ್ಲರೂ ತಮ್ಮ ಪಿಸ್ತೂಲು ವಗೈರೆಗಳನ್ನು ತೋರಿಸಿದರು. ಅದರಿಂದ ಸಂತುಷ್ಟನಾಗಿ, ಅವನು ಚೇತರಿಸಿಕೊಂಡು ಎದ್ದು, ಅವರಿಗೆ ಆ ಕಟ್ಟಡದ ಮಾರ್ಗಗಳನ್ನೆಲ್ಲ ಸುಲಭವಾಗಿ ತಿಳಿಯುವಂತೆ ತೋರಿಸಿದನು.
ಇಷ್ಟರಲ್ಲಿಯೇ, ಸಮರಸಿಂಹನ ಭಾರಿ ಕುದುರೆ ಕಟ್ಟಲ್ಪಟ್ಟ ಒಂದು ಸಾರೋಟಿನಲ್ಲಿ ತನ್ನ ಮುಖ್ಯ ಭೃತ್ಯರೊಳಗೆ ಇಬ್ಬರಿಗೆ ಒಳ್ಳೆ ದಿರಸನ್ನು ಹಾಕಿ ತನ್ನ ಜತೆಯಲ್ಲಿ ಕೂರಿಸಿಕೊ೦ಡು, ತಾನೂ ವೇಷಧಾರಿಯಾಗಿ, ನೂರಾರು ಜನ ಬೇದಿರಸಿನಲ್ಲಿರತಕ್ಕವರಿಂದ ಪರಿವೃತನಾಗಿ, ರತ್ನಾಕರವನ್ನು ಪ್ರವೇಶಿಸಿದನು. ಆಗ ಶಂಬರನಿಗೆ ಯಾರೋ ದೊಡ್ಡ ಮನುಷ್ಯರು ಬಂದಿರುವರೆಂಬುದಾಗಿ ಅಲ್ಲಿನ ಕಾವಲುಗಾರನು ತಿಳಿಸಲು, ಶಂಬರನು "ಬಂದಿರ ತಕ್ಕವನು ಯಾರೋ ತಿಳಿದುಕೊಂಡು ಬಾ” ಎಂದು ಅರ್ಥಪರನನ್ನು ಕಳುಹಿಸಿದನು. ಆಗ ಅರ್ಥಪರನು ಬಂದು ಸಮರಸಿಂಹನನ್ನು ನೋಡಿ, "ಅಯ್ಯಾ! ನೀನು ಯಾರು?" ಎಂದು ಕೇಳಿದನು.
ಸಮರಸಿಂಹ- ನಾನು ಸಿಂಧು ದೇಶದ ನಿವಾಸಿಯಾದ ಕಳಿಂಗನು.
ಅರ್ಥಪರ- ನಿನ್ನ ಕಸಬು ಏನು ?
ಸಮರಸಿಂಹ- ನಾನು ಆ ದೇಶದಲ್ಲಿ ಲಾಯರರಾಗಿರುವೆನು.
ಅರ್ಥ ಪರ- ಇಲ್ಲಿ ಏನು ಕೆಲಸವಾಗಿ ಬಂದಿದ್ದೀಯೆ ?

ಸಮರಸಿಂಹ- ಈ ದುರ್ಗಕ್ಕೆ ರತ್ನಾಕರವೆಂದು ಹೆಸರೋ?
೧೨೬
ಪರಂತಪ ವಿಜಯ

ಅರ್ಥಪರ-ಅಹುದು.
ಸಮರಸಿಂಹ- ಇದಕ್ಕೆ ಯಜಮಾನನು ಶಂಬರನೋ?
ಅರ್ಥಪರ- ಅಹುದು.
ಸಮರಸಿಂಹ- ಈ ಶಂಬರನ ಪಿತಾಮಹಂದರಿಗೆ ಬರತಕ್ಕ ಒಂದು ಕೋಟಿ ದ್ರವ್ಯವು ನಮ್ಮ ದೇಶದ ಕೋರ್ಟಿನಲ್ಲಿ ಡಿಪಾಜಟ್ಟಾಗಿರುವುದು. ಇದಕ್ಕೆ ಈ ಶಂಬರನು ಹಕ್ಕುದಾರನು. ಈ ವಿಷಯವನ್ನು ಇವನಿಗೆ ತಿಳಿಸುವುದಕ್ಕೋಸ್ಕರ ಬಂದಿರುವೆನು.
ಸಮರಸಿಂಹನು ಈ ರೀತಿಯಲ್ಲಿ ಹೇಳಲು, ಅರ್ಥಪರನಿಗೆ ಬಹಳ ಸಂತೋಷವಾಯಿತು. ಶಂಬರನ ಅಪ್ಪಣೆಯಿಲ್ಲದೆಯೇ ಸಮರಸಿಂಹನನ್ನೂ ಅವನ ಜತೆಯಲ್ಲಿದ್ದ ವೇಷಧಾರಿಗಳಾದ ಇಬ್ಬರು ಭೃತ್ಯರನ್ನೂ ಸತ್ಕರಿಸಿ, ರತ್ನಾಕರದ ಒಳಕ್ಕೆ ಶಂಬರನ ಬಳಿಗೆ ಕರೆದುಕೊಂಡು ಹೋಗಿ, ಕಳಿಂಗನ ವಿದ್ಯಮಾನಗಳನ್ನೆಲ್ಲ ಶಂಬರನಿಗೆ ವಿಜ್ಞಾಪಿಸಿದನು.
ಇದನ್ನು ಕೇಳಿ, ಶಂಬರನು ಬಹಳ ಸಂತುಷ್ಟನಾಗಿ, ಸಮರಸಿಂಹಾದಿಗಳಿಗೆ ಸತ್ಕಾರವನ್ನು ಮಾಡಿ, ಅವನ ಗಾಡಿ ಕುದುರೆ ಭೃತ್ಯಾದಿಗಳಿಗೆಲ್ಲ ತಕ್ಕ ಏರ್ಪಾಡನ್ನು ಮಾಡಿ, ಎಲ್ಲರಿಗೂ ಆತಿಥ್ಯವನ್ನು ಮಾಡಿಸುವುದಕ್ಕೋಸ್ಕರ ಪ್ರಯತ್ನಿಸುತ್ತಿದ್ದನು. ಅಷ್ಟರಲ್ಲಿಯೇ ಅರ್ಥಪರನು ಶಂಬರನ ಬಳಿಗೆ ಹೋದನು.
ಶಂಬರ- ಅಯ್ಯಾ! ಅರ್ಥಪರನೆ! ನನ್ನ ಭೃತ್ಯನಾದ ಕಾವಲುಗಾರನು ನೀನು ಅಪಹರಿಸಿಕೊಟ್ಟಿದ್ದ ಪರಂತಪನಿಗೆ ಸಂಬಂಧಪಟ್ಟ ಕಾಗದ ಪತ್ರಗಳನ್ನೂ ಕಲಾವತಿಯಿಂದ ನಾನು ಅಪಹರಿಸಿದ್ದ ಉಯಿಲು ಮೊದಲಾದುವುಗಳನ್ನೂ ಅಪಹರಿಸಿದನು. ಕೂಡಲೇ ನಾನು ಅವನನ್ನು ಗುಂಡಿನಿಂದ ಹೊಡೆದೆನು, ಏಟುಬಿದ್ದು ರಕ್ತ ಸುರಿಯುತ್ತಿದ್ದಾಗ್ಯೂ, ಅವನು ಕಿಟಕಿಯಿಂದ ಧುಮಿಕಿ ಓಡಿಹೋದನು. ಅವನನ್ನು ಪತ್ತೆ ಮಾಡಿ ಆ ಕಾಗದ ಪತ್ರಗಳನ್ನು ಸಂಪಾದಿಸಿಕೊಟ್ಟರೆ, ನಿನಗೆ ಪ್ರಯೋಜನವುಂಟಾಗುವುದು.
ಅರ್ಥಪರ- ನಿನ್ನ ಮಾತಿನಲ್ಲಿ ನನಗೆ ನಂಬುಗೆಯಿಲ್ಲ. ಮಾಡಬಾರದ ಕೆಲಸಗಳನ್ನು ಮಾಡಿ ನಿನಗೆ ಇದುವರೆಗೂ ಎಷ್ಟೋ ಸಹಾಯವನ್ನು ಮಾಡಿರುವೆನು. ಈ ಸಹಾಯಗಳಲ್ಲಿ ಯಾವುದಕ್ಕೂ ನೀನು ಪ್ರತಿಫಲ