ಕರ್ತೃ:ಉಮರ್ ಖಯ್ಯಾಮ್

ವಿಕಿಸೋರ್ಸ್ದಿಂದ
ಫಿಯಾತ್ ಉದ್ದೀನ್ ಅಬುಲ್ ಫಾತ್ ಒಮರ್ ಬಿನ್ ಇಬ್ರಾಹಿಂ ಅಲ್ ಖಯ್ಯಾಮ್
ಉಮರ್ ಖಯ್ಯಾಮ್ ರುಬಾಯ್ಯತ್ ಎಂದು ಪ್ರಸಿದ್ಧವಾಗಿರುವ ರುಬಾಯಿ ಛಂದಸ್ಸಿನ ಚೌಪದಿಗಳ ಮೂಲಕ ಪ್ರಪಂಚಕ್ಕೆ ಪ್ರಸಿದ್ಧನಾದ ಕವಿ. ಪರ್ಷಿಯ ದೇಶದವ. ಖೊರಾಸಾನ್ ಪ್ರಾಂತ್ಯಕ್ಕೆ ಸೇರಿದ ನೀಷಾಪುರ ಎನ್ನುವ ಗ್ರಾಮದಲ್ಲಿ ಜನ್ಮ ತಾಳಿದ. ಈತನ ಕಾಲದ ವಿಚಾರದಲ್ಲಿ ತಜ್ಞರಲ್ಲಿ ಭಿನ್ನಾಭಿಪ್ರಾಯಗಳಿವೆ. ಹಲವರ ಪ್ರಕಾರ ಈತ 1915 ಮತ್ತು 1020ರ ಮಧ್ಯೆ ಜನಿಸಿ 1123ರ ವರೆಗೂ ಜೀವಿಸಿದ್ದನೆಂದೂ ಮತ್ತೆ ಹಲವರ ಪ್ರಕಾರ 1050ರಲ್ಲಿ ಜನಿಸಿ 1132ರವರೆಗೂ ಇದ್ದನೆಂದೂ ತಿಳಿದುಬರುತ್ತದೆ. ಚಿಕ್ಕಂದಿನಿಂದಲೇ ಬುದ್ಧಿ ಸಂಪನ್ನನಾದ ಈತ ಕವಿ ಮಾತ್ರ ಆಗಿರದೆ ಜ್ಯೋತಿಷ್ಯ, ಬೀಜಗಣಿತ, ಕ್ಷೇತ್ರಗಣಿತ, ಭೌತವಿಜ್ಞಾನದಲ್ಲೂ ಪಾರಂಗತನಾಗಿದ್ದ. ಅಂತಃಸ್ಫೂರ್ತಿಯನ್ನು ಅಪಾರವಾಗಿ ಪಡೆದಿದ್ದ ಈತ ದಾರ್ಶನಿಕನಾಗಿಯೂ ಇದ್ದು ಸೂಫಿಗಳಂತೆ ಅನುಭಾವಿಯೂ ಆಗಿದ್ದ. ಉಮರನ ಕೃತಿಗಳಲ್ಲಿ ಜೀಝ ಮಲ್ಲಿಕ್ಷಾಹಿ ಎನ್ನುವ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಟಿಪ್ಪಣಿಗಳೂ ಪ್ರಕಟಗೊಂಡಿದ್ದು ವಿದ್ವಾಂಸರಿಂದ ಮನ್ನಣೆ ಪಡೆದಿವೆ. ಹಾಗೆಯೇ ಬೀಜಗಣಿತದ ಮೇಲಿನ ಕೃತಿ ಈತನ ಬುದ್ಧಿಶಕ್ತಿಯ ಅಳತೆಗೋಲಾಗಿದೆಯೆಂದು ಇಂದಿಗೂ ಹೇಳುತ್ತಾರೆ. ಯೂಕ್ಲಿಡನ ಕ್ಷೇತ್ರಗಣಿತದ ನಿರೂಪಣೆಗಳಲ್ಲಿರುವ ತೊಡಕುಗಳು ಎಂಬ ಗ್ರಂಥ ಉಮರನಿಗೆ ಅಪಾರ ಕೀರ್ತಿಯನ್ನು ತಂದಿತ್ತು. ಎಲ್ಲದಕ್ಕಿಂತ ಹೆಚ್ಚಾಗಿ ಈತನ ಖ್ಯಾತಿ ಉಳಿದಿರುವುದು ಇವನ ಕವನಗುಚ್ಛದಿಂದ. ಉಮರ್ ಖಯ್ಯಾಮನನ್ನು ಸಹಿಸದ ಅನೇಕರು ಈತನನ್ನು ತೆಗಳಿದ್ದುಂಟು. ನಿಝಾಮುದ್ದೀನ್ ರಾಸಿ ಎಂಬಾತ ಉಮರನನ್ನು ನಿರ್ಭಾಗ್ಯತಾತ್ತ್ವಿಕ, ನಾಸ್ತಿಕ, ಚಾರ್ವಾಕ ಎಂದು ಜರೆದಿದ್ದಾನೆ. ಆದರೆ ಉಮರನ ಧರ್ಮಪ್ರಜ್ಞೆ. ಧರ್ಮಶಾಸ್ತ್ರದಲ್ಲಿನ ನಿಪುಣತೆ ಎಷ್ಟಿತ್ತೆಂದರೆ ಅಬೂ ಹಮೀದ್ ಘಸಾಲಿ ಎಂಬ ಶಿಷ್ಯ ಮಸೀದಿಗಳಲ್ಲಿ ಉಮರನನ್ನು ಕುತರ್ಕಿ, ನಾಸ್ತಿಕ ಎಂದು ಬಹಿರಂಗವಾಗಿ ಬತ್ತಿದ್ದರೂ ಗುಪ್ತವಾಗಿ ಉಮರನ ಹತ್ತಿರವೇ ಹೋಗಿ ಧರ್ಮದ ಅಂತರಂಗವನ್ನು ಕಲಿಯುತ್ತಿದ್ದನಂತೆ. ತಾನಿದ್ದ ಪ್ರಪಂಚಕ್ಕೆ ವಿಚಿತ್ರ ಒಗಟಿನಂತೆ ಕಂಡಿದ್ದರೂ ಕಾಲ ಗತಿಸಿದಂತೆಲ್ಲ ಉಮರನ ನಿಜಸ್ವರೂಪ ಅರ್ಥವಾಗುತ್ತಿದೆ ಇಂಥ ಹುಚ್ಚ, ನಾಸ್ತಿಕ, ಗರ್ವಿಯ ರುಬಾಯತ್ಗಳು ನಾನಾ ಭಾಷೆಗಳಲ್ಲಿ ಅನುವಾದಗೊಂಡಿವೆ. ಇಂಗ್ಲಿಷ್, ಫ್ರೆಂಚ್, ಜರ್ಮನ್, ರಷ್ಯ ಮತ್ತಿತರ ಯುರೋಪಿನ ಭಾಷೆಗಳಲ್ಲಿ, ಸಂಸ್ಕೃತ, ಮರಾಠಿ, ತೆಲುಗು ಮತ್ತು ಕನ್ನಡ ಮೊದಲಾದ ಭಾರತೀಯ ಭಾಷೆಗಳಲ್ಲಿ ಉಮರನ ಅಮರನ್ ಅಮರವಾಣಿ ಕೇಳಿಬರುತ್ತಿದೆ. ಡಿ.ವಿ.ಗುಂಡಪ್ಪನವರ ಉಮರನ ಒಸಗೆಯಂತೂ ಖ್ಯಾತ ಅನುವಾದವೆನಿಸಿದೆ.
ಉಮರ ಖಯ್ಯಾಮ್
  1. ಉಮರನ ಒಸಗೆ