ಹನುಮನು ೪-೫ ಸಲ ಮುಳುಗಿ ನೀರು ಕುಡಿದನು. ಅನಂತರ ಮೇಲಕ್ಕೆ ಈಜಿಕೊಂಡು ಬಂದನು. ಬಂದವನೇ “ಬುದ್ದಿ” ಎಂದನು. ಮತ್ತೆ ನಾಗಾಲೋಟದಲ್ಲಿ ಓಡಲು ಸಿದ್ದರಾಗಿದ್ದ ಅಯ್ಯಂಗಾರರಿಗೆ, “ಬುದ್ದಿ" ಎಂದ ಕೂಡಲೆ ಸ್ವಲ್ಪ ಧೈರ್ಯ ಬಂದಿತು. ಹನುಮನು “ಬುದ್ದಿ, ನಾನೇನೂ ತುಂಬ ಕುಡೀಲಿಲ್ಲ. ಬಟ್ಟೆನೆಲ್ಲಾ ನೆನೆಸ್ಬಿಟ್ರಲ್ಲ" ಎಂದನು. ಅಯ್ಯಂಗಾರರು ಮದ್ಯಪಾನದ ಕೆಡಕುಗಳ ಮೇಲೆ ಅವನಿಗೆ ಉದ್ದಕ್ಕೂ ದೊಡ್ಡದಾದ ಉಪನ್ಯಾಸ ಮಾಡಿದರು.
ಇದೇ ಹನುಮನೇ ನಿಂಗನ ಹರಿಗೋಲನ್ನು ದೂರದಲ್ಲಿ ನೋಡಿದ. ಅರ್ಧ ಮುಳುಗಿಹೋಗಿದ್ದ ಹರಿಗೋಲು ನಮ್ಮೂರಿನವರೆಗೆ ಬರಲಾರದೆಂದೇ ಉಳಿದ ಬೆಸ್ತರು ಹೇಳಿದರು. ಹರಿಗೋಲು ಕಣ್ಣಿಗೆ ಕಾಣುವಂತೆ ನಿಧಾನವಾಗಿ ಒಂದೊಂದೇ ಅಂಗುಲ ಮುಳುಗುತ್ತಿದ್ದಿತು. ಕೆಲವು ಬೆಸ್ತರು “ಅಲ್ಲಿಗೇ ದೊಣಿಯನ್ನು ತೆಗೆದುಕೊಂಡು ಹೋಗೋಣ, ಇಲ್ಲದಿದ್ದರೆ ಈಜು ಬೀಳೋಣ” ಎಂದರು. ಹನುಮನು “ದೋಣಿ ತೆಗೆದುಕೊಂಡು ಪ್ರವಾಹಕ್ಕೆ ಎದುರಾಗಿ ಹೋಗೋಕೆ ಆಗೋದಿಲ್ಲ. ಈಜಿಬಿದ್ದು ಹರಿಗೋಲನ್ನು ಹಿಡಿಯೋದಕ್ಕೆ ಹೋದರೆ, ನಿಮ್ಮ ಕೈಗಳ ಅಲೆಗಳಿಂದ ಅದು ಮುಳಗಿ ಹೋಗ್ತದೆ" ಎಂದನು. ಉಳಿದ ಬೆಸ್ತರು ಅವನ ಮಾತಿಗೆ ಪ್ರತಿ ಹೇಳಲಿಲ್ಲ. ಹನುಮನು ವಿರಾಮವಾಗಿ ಬೀಡಿಯನ್ನು ಸೇದಿ ಎಲೆ ಅಡಿಕೆ ಅಗಿದನು. ಆ ವೇಳೆಗೆ ದೂರದಲ್ಲಿ ತೆರೆಗಳ ಸದ್ದನ್ನು ಭೇದಿಸಿಕೊಂಡು "ಗೋವಿಂದೋ ಗೋವಿಂದ” ಎಂಬ ಧ್ವನಿಯು ಅವರಿಗೆಲ್ಲಾ ಕೇಳಿಸಿತು. ಆವೇಳೆಗೆ ಹರಿಗೋಲು ಮುಕ್ಕಾಲುಪಾಲು ಮುಳುಗಿಹೋಗಿತ್ತು. ನಿಂಗನಿಗೆ ಸೊಂಟದವರೆಗೆ ಮತ್ಸ್ಯಾವತಾರವಾಗಿತ್ತು,
ಬದುಕಿದರೆ ಇಲ್ಲಿ ಬದುಕಬೇಕು, ಇಲ್ಲಿ ನೀರಿನ ಗೋರಿ, ಎಂದು ತಿಳಿದು ನಿಂಗನು ಮತ್ತೊಂದು ಸಲ ಗಟ್ಟಿಯಾಗಿ “ಗೋವಿಂದೋ ಗೋವಿಂದ” ಎಂದನು. ಹನುಮನು ದೋಣಿಯನ್ನು ಬಿಟ್ಟನು. ಈ ದೃಶ್ಯವನ್ನು ನೋಡುವುದಕ್ಕೆ ನದಿಯ ಎರಡು ತೀರಗಳಲ್ಲಿಯ ಜನರು ಇರುವೆಯ ಸಾಲಿನಂತೆ ನೆರೆದಿದ್ದರು, ಹನುಮನು ನಿಂಗನನ್ನು ಹೇಗೆ ಬದುಕಿಸುತ್ತಾನೆಂಬುದೇ ಎಲ್ಲರಿಗೂ ದೊಡ್ಡ ಸಮಸ್ಯೆಯಾಗಿತ್ತು.