ಪುಟ:ಹಳ್ಳಿಯ ಚಿತ್ರಗಳು.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಮ್ಮ ಜೋಡಿದಾರರ ಕೆಲವು ಚಿತ್ರಗಳು

೫೯

ಯಾಗಿದ್ದಳು. ಆದರೆ ತಾನು ಬಹಳ ರೂಪವತಿಯೆಂದು ಅವಳಿಗೆ ನಂಬಿಕೆಯಾಗಿಬಿಟ್ಟಿದ್ದಿತು. ಜೋಡಿದಾರರ ಗ್ರಹಚಾರಕ್ಕೆ ಅವಳು “ಈ ಹಾರುವ ನನ್ನನ್ನ ಹಿಡೊಕೋಳೋಕ್ಬರ್‍ತಾನೆ" ಎಂಬುದಾಗಿ ಗಟ್ಟಿಯಾಗಿ ಕೂಗಿ ಕೊಂಡಳು. ಅವಳ ಕೂಗನ್ನು ಕೇಳಿ ಜೋಡಿದಾರರಿಗೆ ಆಶ್ಚರವಾಯಿತು. ಅವರು ನಗುತ್ತಾ ಮನಸ್ಸಿನಲ್ಲಿ "ಈ ಹೆಣ್ಣಿನ ಹೆಮ್ಮೆ ಹೇಳೋಕಿಲ್ಲ. ಸ್ವಲ್ಪ ಕೆಂಪು ತುಟಿ ಹೊಳೆಯುವ ಕಣ್ಣು ಇದ್ದ ಮಾತ್ರಕ್ಕೆ ತಾನೇ ರತಿ, ಲೋಕವೆಲ್ಲಾ ತನ್ನನ್ನೆ ಹಿಡಿದುಕೊಳ್ಳುವುದಕ್ಕೆ ಬರುತ್ತೆ ಅಂತ ತಿಳಿದಿದ್ದಾಳೆ" ಎಂದುಕೊಂಡು ಸುಮ್ಮನಾದರು. ಕೋಡಿಯನ್ನು ದಾಟಿ ಮೇಲಕ್ಕೆ ಹತ್ತಿದ ಕೂಡಲೇ, ತಾವು ಕಟ್ಟಿಕೊಂಡಿದ್ದ ಔದಾಸೀನ್ಯದ ಗಾಳಿಯ ಗೋಪುರವು ಪುಡಿ ಪುಡಿಯಾಯಿತೆಂಬುದು ಅವರಿಗೆ ಗೊತ್ತಾಯಿತು. ಅಂದು ಅವರು ಅನುಭವಿಸಿದುದನ್ನು ಮತ್ತೆ ಮರೆಯುವಂತೆ ಇಲ್ಲ. ನೆನಸಿಕೊಂಡರೆ ಈಗಲೂ ಮೈನಡುಕ ಬರುತ್ತೆ ಎಂಬುದಾಗಿ ಹೇಳುತ್ತಾರೆ. ಹುಡುಗಿಯ ಕೂಗನ್ನು ಕೇಳಿ ಸುತ್ತಮುತ್ತ ಕೆಲಸ ಮಾಡುತ್ತಿದ್ದವರೆಲ್ಲಾ ಕೈಯಲ್ಲಿ ಒಂದೊಂದು ದೊಣ್ಣೆಯನ್ನು ಹಿಡಿದುಕೊಂಡು ಇವರ ಕಡೆಗೆ ಬರುತ್ತಿದ್ದರು. ಹೊಲಗಳಲ್ಲಿಯೂ ಗದ್ದೆಗಳಲ್ಲಿಯೂ ಉಳುತ್ತಿದ್ದವರೆಲ್ಲಾ ಆರುಗಳನ್ನು ಅಲ್ಲಿಯೇ ಬಿಟ್ಟು ಕೈಯಲ್ಲಿ ಉಳುವ ಕೋಲನ್ನು ಹಿಡಿದುಕೊಂಡು ಓಡಿಬರುತ್ತಿದ್ದರು. ತೋಟಗಳಲ್ಲಿ ಕೆಲಸ ಮಾಡುತ್ತಿದ್ದವರು ಗುದ್ದಲಿ ಕುಡುಗೋಲುಗಳನ್ನು ಹಿಡಿದುಕೊಂಡೇ ಇವರ ಕಡೆಗೆ ಧಾವಿಸಿ ಬರುತ್ತಿದ್ದರು. ದನ ಕಾಯುವ ಹುಡುಗರು ದನಗಳನ್ನು ಅಲ್ಲಿಯೇ ಬಿಟ್ಟು ಓಡಿಬರುತ್ತಿದ್ದರು. ಕೆಲವರು ಹೆಂಗಸರೂ ಕೂಡ ಕೈಗಳಲ್ಲಿ ದೊಣ್ಣೆಗಳನ್ನೂ ಸಮ್ಮಾರ್ಜನಿಗಳನ್ನೂ ಹಿಡಿದುಕೊಂಡು ಬರುತ್ತಿದ್ದರು. ಇದನ್ನು ನೋಡಿ ಜೋಡಿದಾರರ ಎದೆ ಒಡೆದುಹೋಯಿತು. ಓಡಿಬರುತ್ತಿದ್ದವರೆಲ್ಲರೂ ಯಮದೂತರಂತೆ ಕಂಡರು. ಮೃತ್ಯುವು ಅವರ ಎದುರಿಗೆ ವಾಯುವೇಗದಲ್ಲಿ ಬರುತ್ತಿದ್ದಿತು. ಅವರು ಯಾವ ಕಡೆ ನೋಡಿದರೂ ೧೦ ಜನರು ಇವರ ಕಡೆಗೆ ಬರುತ್ತಿದ್ದರು. ಕೆಲಸ ಕೆಟ್ಟಿತೆಂದು ಜೋಡಿದಾರರು ವಿನಯದಿಂದ "ತಾಯಿ" ಎಂದರು. ಆ ಹುಡುಗಿಯು ತಾಯಿಯೂ ಅಲ್ಲ ಮಗನೂ ಅಲ್ಲ, ಅಲ್ಲಿ ನೋಡು ನಿನಗೆ ಹುಟ್ಟಿದ ದಿವಸ