ಪುಟ:ಹಳ್ಳಿಯ ಚಿತ್ರಗಳು.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಮ್ಮ ಹೊಳೆಯ ಒಂದು ಅನುಭವ

೮೩

“ದೋಣಿಯು ಮುಂದಕ್ಕೆ ಹೋಗಿಬಿಟ್ಟರೊ? ಹರಿಗೋಲಿಗೆ ವೇಗವಾಗಿ ತಗಲಿ ಅದು ಮುಳುಗಿಹೋದರೊ? ಅದು ಮುಂದೆ ಇದು ಹಿಂದೆ ಆದರೆ?” ಎಂದು ಪ್ರೇಕ್ಷಕರೆಲ್ಲಾ ಯೋಚಿಸುತ್ತಿದ್ದರು. ನದಿಯು ತುಂಬಿ ಹರಿಯುತ್ತಿದ್ದುದರಿಂದ ಈಜಿ ನಿಂಗನನ್ನು ಸಂರಕ್ಷಿಸುವುದು ಹನುಮನಿಗೆ ಕೂಡ ಕಷ್ಟ ಸಾಧ್ಯವೇ ಆಗಿತ್ತು. ಆದರೆ ಹನುಮನಿಗೆ ಗಾಬರಿಯಿರಲಿಲ್ಲ. ತಾನು ಮಾಡುತ್ತಿದ್ದ ಕೆಲಸವೇನೆಂಬುದು ಅವನಿಗೆ ಗೊತ್ತಿದ್ದಿತು. ತನ್ನ ಶಕ್ತಿಯಲ್ಲಿ ಅವನಿಗೆ ನಂಬಿಕೆಯಿದ್ದಿತು. ನದಿಯ ಮಧ್ಯಭಾಗಕ್ಕೆ ಹರಿಗೋಲು ಬರುವ ವೇಳೆಗೆ ಸರಿಯಾಗಿ, ಬಿಲ್ಲಿನಿಂದೆಸೆದ ಅಂಬಿನಂತೆ ದೋಣಿಯು ಅಲ್ಲಿಗೆ ಬಂದಿತು. ಹನುಮನು ಎರಡು ಕೈಗಳನ್ನೂ ನೀಡಿ ನಿಂಗನನ್ನು ಎತ್ತಿ ದೋಣಿಯಲ್ಲಿ ಕುಳ್ಳಿರಿಸಿಬಿಟ್ಟನು. ಅದೇ ಕ್ಷಣದಲ್ಲಿಯೇ ಹರಿಗೋಲು ಮುಳುಗಿ ಹೋಯಿತು. ಪ್ರೇಕ್ಷಕರ ಭಲೆ ಭಲೆ ಶಬ್ದವು ಒಂದು ದಡದಿಂದ ಮತ್ತೊಂದು ದಡಕ್ಕೆ ಪ್ರತಿಧ್ವನಿತವಾಯಿತು.

ಈಗ ಹನುಮನು ಇಲ್ಲ; ಸೇತುವೆ ಇದೆ.