ವಿಷಯಕ್ಕೆ ಹೋಗು

ಪುಟ:ಹಳ್ಳಿಯ ಚಿತ್ರಗಳು.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೮೦
ಹಳ್ಳಿಯ ಚಿತ್ರಗಳು

ನೀರಿನಲ್ಲಿ ಬೆಳ್ಳಿಯ ಚಿಕ್ಕ ಎರಡಾಣೆಯನ್ನು ಎಸೆದರೆ, ಒಂದು ಕ್ಷಣದೊಳಗೆ ಮುಳುಗಿ ಅದನ್ನು ತೆಗೆದುಕೊಂಡು ಬರುತ್ತಿದ್ದನು. ಈ ಚಿತ್ರದಲ್ಲಿ ಹೇಳಿರುವ ಸಂಗತಿ ನಡೆದಾಗ, ಅವನಿಗೆ ೬೦ ವಯಸ್ಸಿದ್ದಿರಬಹುದು. ಆದರೆ ಆಳು ಬಹಳ ಗಟ್ಟಿಮುಟ್ಟಾಗಿದ್ದನು. ಆಗಲೂ ಅವನು, ತುಂಬಿದ ನಮ್ಮೂರ ಹೊಳೆಯನ್ನು ಸರಾಗವಾಗಿ ಈಜಿಬಿಡುತ್ತಿದ್ದನು.

ಅವನ ವಿಷಯವಾಗಿ ಒಂದು ಸಂಗತಿಯನ್ನು ಹೇಳಬೇಕಾಗಿದೆ. ನಮ್ಮೂರ ಶ್ರೀನಿವಾಸಯ್ಯಂಗಾರರು ಒಂದುಸಲ ಎಲಿಯೂರಿಗೆ ಹೋಗಬೇಕಾಗಿತ್ತು. ಜೊತೆಗಾಗಿ ಹನುಮನನ್ನೂ ಕರೆದುಕೊಂಡರು. ಇಬ್ಬರೂ ನಡೆದುಕೊಂಡೇ ಹೊರಟರು. ಹಾಸನದಿಂದ ೩-೪ ಮೈಲು ಹೋದ ನಂತರ ಬಿಸಿಲು ಬಹಳ ತೀಕ್ಷ್ಯವಾಯಿತು. ಹೆಂಡವನ್ನು ಇಳಿಸಲು ಈಚಲ ಮರಗಳಿಗೆಲ್ಲಾ ಗಡಿಗೆಗಳನ್ನು ಕಟ್ಟಿದ್ದ ಒಂದು ಕಾಲುದಾರಿಗೆ ಇಬ್ಬರೂ ಬಂದರು. ಮರಕ್ಕೆ ಕಟ್ಟಿದ ಮಡಕೆಯನ್ನು ನೋಡಿ, ಹನುಮನಿಗೆ, ಹೆಂಡದ ಹುಚ್ಚು ಹಿಡಿಯಿತು. ತಡೆಯಲಾರದ ಬಾಯಾರಿಕೆ ಉಂಟಾಯಿತು. ಅವನು ಗೌರವದಿಂದ “ಬುದ್ಧಿ” ಎಂದನು. ಅಯ್ಯಂಗಾರು, "ಏನು" ಅಂದರು. ಹನುಮನು “ನೀವು ಸ್ವಲ್ಪ ಹೆಜ್ಜೆ ಹಾಕಿರಿ. ನಾನು ಹಿಂದೆಯೇ ಓಡ್ಬಂದೆ” ಎಂದನು. ಅಯ್ಯಂಗಾರಿಗೆ ಅವನ ಒಳಗುಟ್ಟು ತಿಳಿಯದೆ ಇರಲಿಲ್ಲ. ಅವರು ಮನಸ್ಸಿನಲ್ಲಿ "ಏನೋ ಪಾಪ ಬಿಸಲಿನಲ್ಲಿ ನಡೆದು ದಣಿದಿದ್ದಾನೆ. ಬಾಯಾರಿಕೆಯೋ ಏನೋ? ಅವನ ಜಾತಿಗೆ ಬಂದದ್ದನ್ನ ಬೇಡವೆಂದರೆ ಬಿಡ್ತಾನೆ? ನಾವು ಕಾಫಿ ಕುಡಿಯೋ ಹಾಗೆ” ಎಂದು ಯೋಚಿಸಿ “ನಾವು ಇನ್ನೂ ತುಂಬ ದೂರ ಹೋಗಬೇಕು, ಎಚ್ಚರಿಕೆ. ಬೇಗ ಬಾ" ಎಂಬುದಾಗಿ ಹೇಳಿದರು. ಹನುಮನು ಸ್ವಲ್ಪ ದೂರ ಹೋಗಿ ಕಣ್ಣಿಗೆ ಮರೆಯಾಗಿ ಹೆಂಡದಿಂದ ತುಂಬಿದ್ದ ಒಂದು ಮಡಕೆಯನ್ನು ತನ್ನ ಕೈಯಿನ ದೊಣ್ಣೆಯಿಂದ ಹೊಡೆದು ತೂತು ಕುಕ್ಕಿ ಅದಕ್ಕೆ ಬಾಯನ್ನು ಒಡ್ಡಿ, ಬಹಳ ಮದಕಾರಿಯಾದ ಹೆಂಡವನ್ನು ಕಂಠಪೂರ್ತಾ ಪಾನಮಾಡಿಬಿಟ್ಟನು.

ಬಿಸಿಲಿನಿಂದ ಸೋತ ಅಯ್ಯಂಗಾರರು ಅವನು ಬರುವವರೆಗೆ ವಿಶ್ರಾಂತಿಯನ್ನು ತೆಗೆದುಕೊಳ್ಳೋಣವೆಂದು ಒಂದು ಮರದ ನೆರಳಿನಲ್ಲಿ