ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕರ್ನಾಟಕ ಏಕೀಕರಣ

ವಿಕಿಸೋರ್ಸ್ದಿಂದ

ಕರ್ನಾಟಕ ಏಕೀಕರಣ : 2006 ನವೆಂಬರ್ 1ನೆಯ ತಾರೀಕಿಗೆ ಕರ್ನಾಟಕ ಏಕೀಕರಣವಾಗಿ ಐವತ್ತು ವರ್ಷಗಳು ತುಂಬಿವೆ. ಕರ್ನಾಟಕ ಏಕೀಕರಣದ ಇತಿಹಾಸ ಬಲ್ಲವರಿಗೆ ಏಕೀಕರಣಕ್ಕೆ ನಡೆದ ಹೋರಾಟವು ಕಹಿ-ಸಿಹಿ ಘಟನೆಗಳ ಸ್ಮೃತಿ. ಒಡೆದುಕೊಳ್ಳುವ ಮತ್ತು ಕೂಡಿಕೊಳ್ಳುವ ಕನ್ನಡಿಗರ ಸ್ವಭಾವ ಇತಿಹಾಸಕ್ಕೆ ಹೊಸದಲ್ಲ. ಈ ಒಡೆದುಕೊಳ್ಳುವ ಮನೋಭಾವಕ್ಕೆ ಯಾವಾಗಲೂ ಪ್ರೇರಣೆಯಾಗಿರುವುದು ಬಹುತೇಕ ಅಧಿಕಾರದ ಆಸೆ. ಒಂದಾಗಲು ಕಾರಣವಾಗಿರುವುದು ಭಾಷೆ ಮತ್ತು ಸಂಸ್ಕೃತಿಯ ಬಗೆಗಿನ ಪ್ರೀತಿ ಮತ್ತು ಗೌರವ.

ಹೊಯ್ಸಳರು ಮತ್ತು ಸೇವುಣರ ನಡುವಿನ ರಾಜಕೀಯ ಸೆಣಸಾಟದಲ್ಲಿ ಕರ್ನಾಟಕವು ಎರಡು ಭಾಗವಾಯಿತು. ತುಂಗಭದ್ರಾ ನದಿಯ ಉತ್ತರಕ್ಕೆ ಸೇವುಣರೂ, ದಕ್ಷಿಣಕ್ಕೆ ಹೊಯ್ಸಳರೂ ಆಳಿದರು. ಇದು ನಡೆದದ್ದು 13ನೆಯ ಶತಮಾನದ ಆರಂಭದಲ್ಲಿ; ಆಗ ಬೇರೆಯಾದ ಕನ್ನಡಿಗರು ಆಡಳಿತಾತ್ಮಕವಾಗಿ ಒಂದಾದದ್ದು 1956ರಲ್ಲಿ. ಅಂದರೆ ಸುಮಾರು 750 ವರ್ಷಗಳ ಕಾಲ ಕನ್ನಡಿಗರೇ ಅಧಿಕವಾಗಿದ್ದ ಭಾಗಗಳನ್ನು ಆಳಿದವರು ಕನ್ನಡೇತರರು. ಆಳುವ ವರ್ಗವು ಬಯಸುವ ಭಾಷೆಯನ್ನು ಆಡಳಿತದಲ್ಲಿ ಬಳಸುವುದು ವಾಡಿಕೆ. ಯಾವುದೇ ಭಾಷೆಯ ಬಳಕೆ ಕಡಿಮೆಯಾದರೆ, ಆ ಭಾಷೆಯ ಅವನತಿ ಆರಂಭವಾಗುತ್ತದೆ. ಭಾಷೆಯ ಅವನತಿಯೊಡನೆ ಆ ಭಾಷಿಕರ ಸಂಸ್ಕೃತಿಯೂ ಅನ್ಯಾಕ್ರಾಂತವಾಗುತ್ತದೆ ಮತ್ತು ಕ್ರಮೇಣ ತನ್ನ ಸ್ವರೂಪದಲ್ಲಿ ಗುರುತಿಸಲಾಗದಷ್ಟು ಬದಲಾವಣೆಗಳನ್ನು ಪಡೆಯುತ್ತದೆ. ಕರ್ನಾಟಕದ ಗಡಿರೇಖೆಯು ಎಂದೂ ಸ್ಥಿರವಾಗಿರಲಿಲ್ಲ. ಕದಂಬ-ಗಂಗ-ಬಾದಾಮಿ ಚಳುಕ್ಯ ವಂಶಗಳ ಆಳ್ವಿಕೆಯ ಸಂದರ್ಭದಲ್ಲಿ ಗೋದಾವರಿ ನದಿಯನ್ನು ಉತ್ತರ ಗಡಿಯಾಗಿಯೂ, ಕಾವೇರಿ ನದಿಯು ಸಮುದ್ರವನ್ನು ಸೇರುವ ಭಾಗದವರೆಗಿನ ಭಾಗವನ್ನು ದಕ್ಷಿಣ ಗಡಿಯಾಗಿಯೂ ಹೊಂದಿದ್ದ ಕರ್ನಾಟಕವು ಬಾದಾಮಿ ಚಳುಕ್ಯ ವಂಶದ ಇಮ್ಮಡಿ ಪುಲಕೇಶಿಯ ಕಾಲದಲ್ಲಿ ನರ್ಮದೆಯವರೆಗೆ ತನ್ನ ಆಡಳಿತವನ್ನು ವಿಸ್ತರಿಸಿಕೊಳ್ಳುವ ಅವಕಾಶಗಳಿದ್ದರೂ ಹಾಗೆ ಮಾಡಲಿಲ್ಲ. ಶ್ರೀವಿಜಯನು, ತನ್ನ ‘ಕವಿರಾಜಮಾರ್ಗ’ ದಲ್ಲಿ `ಕಾವೇರಿಯಿಂದಮಾಗೋದಾವರಿವರಮಿರ್ದ’ ನಾಡು ಕನ್ನಡ ನಾಡು ಎಂದು ವರ್ಣಿಸಿದ್ದಾನೆ. ಕಲ್ಯಾಣ ಚಾಳುಕ್ಯರ ಆಳ್ವಿಕೆಯ ಕಾಲಕ್ಕೆ ಈಗಿನ ಮಹಾರಾಷ್ಟ್ರದ ದಕ್ಷಿಣ ಭಾಗಗಳು ಮತ್ತು ಆಂಧ್ರದ ಪಶ್ಚಿಮ ಭಾಗಗಳು ಆಗಿನ ಕರ್ನಾಟಕದ ಅವಿಭಾಜ್ಯ ಭಾಗಗಳಾಗಿದ್ದವು. ಈಗಾಗಲೇ ತಿಳಿಸಿರುವಂತೆ ಹೊಯ್ಸಳರು ಮತ್ತು ಸೇವುಣರ ಕಾಲದಲ್ಲಿ ಒಡೆದುಕೊಂಡ ಕರ್ನಾಟಕವು ಒಂದಾಗಲು ಹಲವು ಶತಮಾನಗಳು ಬೇಕಾಯಿತು; ಹೋರಾಟವೂ ಅನಿವಾರ್ಯವಾಯಿತು. ಇದು ವಿಪರ್ಯಾಸ ಎನಿಸಿದರೂ, ಮರೆಮಾಚಲಾಗದ ಸತ್ಯ. ಹೊಯ್ಸಳರು ಮತ್ತು ಸೇವುಣರ ಅನಂತರ ಆಳಿದ ವಿಜಯನಗರದ ಅರಸರ ಕಾಲದಲ್ಲೂ ಕರ್ನಾಟಕವು ತನ್ನ ಹಿಂದಿನ ಸ್ವರೂಪವನ್ನು ಪಡೆಯಲಿಲ್ಲ. ದಕ್ಷಿಣ ಭಾರತದ ಬಹುತೇಕ ಭಾಗವನ್ನು ವಿಜಯನಗರದ ಅರಸರು ಆಳಿದರು; ಆದರೆ ಆ ಮೊದಲು ಕರ್ನಾಟಕದ ಭಾಗವಾಗಿದ್ದ ಮತ್ತು ಈಗ ಕರ್ನಾಟಕಕ್ಕೆ ಸೇರಿರುವ ರಾಯಚೂರು, ಗುಲಬರ್ಗ ಮತ್ತು ಬೀದರ್ ಜಿಲ್ಲೆಗಳು ವಿಜಯನಗರದ ವ್ಯಾಪ್ತಿಗೆ ಸೇರಿರಲಿಲ್ಲ. ಅವೆಲ್ಲವೂ ಆದಿಲ್ ಷಾಹಿಗಳ ವಶದಲ್ಲಿದ್ದವು. ಮೈಸೂರು ರಾಜ್ಯವನ್ನು ವಿಸ್ತರಿಸಲು ಹೈದರ್ ಮತ್ತು ಟಿಪ್ಪು ಪ್ರಯತ್ನಿಸಿದರು. ಟಿಪ್ಪುವು ತುಂಗಭದ್ರಾ ನದಿಯ ಆಚೆಯ ಕೆಲವು ಪ್ರದೇಶಗಳನ್ನು ಗೆದ್ದನಾದರೂ, 1791ರರಲ್ಲಿ ಪೇಶ್ವೆಗಳೊಡನೆ ಆದ ಒಪ್ಪಂದದ ಪ್ರಕಾರ, ವರದಾ ನದದಿಯ ಉತ್ತರ ಭಾಗವನ್ನು ಪೇಶ್ವೆಗಳಿಗೂ, ಕೊಡಗು ಮತ್ತು ಮಲಬಾರ್ ಪ್ರಾಂತಗಳನ್ನು ಬ್ರಿಟಿಷರಿಗೂ ನೀಡಬೇಕಾಯಿತು. 1787ರಲ್ಲಿ ತುಂಗಭದ್ರೆಯು ತನ್ನ ರಾಜ್ಯದ ಉತ್ತರ ಗಡಿ ಎಂದು ಒಪ್ಪಿಕೊಂಡಿದ್ದ ಟಿಪ್ಪುವು, 1799ರಲ್ಲಿ ಮರಣ ಹೊಂದಿದ ಅನಂತರ, ಅಂದರೆ 4ನೆಯ ಮೈಸೂರು ಯುದ್ಧದ ಅನಂತರ ಬ್ರಿಟಿಷರು ಮತ್ತು ಹೈದರಾಬಾದ್ನ ನಿಜಾಮನ ನಡುವೆ ಆಗಿದ್ದ ಒಪ್ಪಂದದ ಪ್ರಕಾರ ಮೈಸೂರು ಸಂಸ್ಥಾನವು ಮಾತ್ರ ಮೈಸೂರಿನ ಒಡೆಯರಿಗೆ ಉಳಿಯಿತು. ಬೆಳಗಾಂವಿ, ಬಿಜಾಪುರ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಬ್ರಿಟಿಷರ ಮುಂಬಯಿ ಆಧಿಪತ್ಯಕ್ಕೂ, ದಕ್ಷಿಣ ಕನ್ನಡ ಮತ್ತು ಬಳ್ಳಾರಿ ಜಿಲ್ಲೆಗಳು ಬ್ರಿಟಿಷರ ಮದರಾಸಿನ ಆಧಿಪತ್ಯಕ್ಕೂ, ಬೀದರ್, ಗುಲಬರ್ಗ ಮತ್ತು ರಾಯಚೂರು ಜಿಲ್ಲೆಗಳು ಹೈದರಾಬಾದ್ ನಿಜಾಮನ ಆಳ್ವಿಕೆಗೂ ಸೇರಿದವು. ಕೊಡಗು ಜಿಲ್ಲೆಯು ಬ್ರಿಟಿಷರ ಒಂದು ಅಧೀನ ರಾಜ್ಯವಾಗಿ ಉಳಿಯಿತು. ಕೆಲವು ಪ್ರದೇಶಗಳು ಸ್ಥಳೀಯ ಮರಾಠೀ ಸಂಸ್ಥಾನಿಕರ ವಶದಲ್ಲಿ ಉಳಿದವು.

ಹೀಗೆ ರಾಜಕೀಯವಾಗಿ ಒಡೆದುಕೊಂಡು, ಭಿನ್ನ-ಭಿನ್ನ ಆಡಳಿತ ವ್ಯಾಪ್ತಿಗೆ ಸೇರಿದ ಕನ್ನಡ ಭಾಷಿಕರ ಪ್ರಾಂತಗಳಲ್ಲಿ, ಆಳುವ ವರ್ಗದವರ ಮರ್ಜಿಯಂತೆ, ಆಡಳಿತದ ಭಾಷೆಯ ಬಳಕೆ ಆಯಿತು. ಈಗಿನಂತೆಯೇ, ಹಿಂದೆಯೂ ಜನರ ಭಾಷೆಯ ಬದಲು, ಆಳುವವರ ಅಥವಾ ಆಳುವ ವರ್ಗದ ಅನುಕೂಲಕ್ಕಾಗುವ ಭಾಷೆಯು ಆಡಳಿತದಲ್ಲಿ ಬಳಕೆ ಆಯಿತು. ಕೇವಲ ಕೆಲವರೇ ಇದ್ದ ಆಳುವವರು, ಬಹು ಸಂಖ್ಯಾತ ಆಳಿಸಿಕೊಳ್ಳುವವರ ಭಾಷೆಯನ್ನು ಕಲಿಯಲಿಲ್ಲ; ಆಡಳಿತದಲ್ಲಿ ಬಳಸಿಕೊಳ್ಳಲಿಲ್ಲ. ಬದಲಿಗೆ ಬಹು ಸಂಖ್ಯಾತ ಆಳಿಸಿಕೊಳ್ಳುವವರು ಅಲ್ಪ ಸಂಖ್ಯಾತ ಆಳುವವರ ಭಾಷೆಯನ್ನು ಕಲಿತರು. ಇದಕ್ಕೆ ಕಾರಣ ಆಳುವವರ ಯಾಜಮಾನ್ಯ ಪ್ರವೃತ್ತಿ ಮತ್ತು ಆಳಿಸಿಕೊಳ್ಳುವವರ ಗುಲಾಮ ಪ್ರವೃತ್ತಿ. ತಮಗೆ ಅರ್ಥವಾಗದೆ ಇದ್ದರೂ ಆಳುವವರ ಭಾಷೆಯನ್ನು ಒಪ್ಪಿಕೊಂಡ ಜನ ಕ್ರಮೇಣ ಆಳುವವರ ಭಾಷೆಯನ್ನು ಬಲವಂತವಾಗಿಯಾದರೂ ಕಲಿತರು.

ಆಳುವ ಜನ ತಮ್ಮ ಅನುಕೂಲಕ್ಕೆ ಆಡಳಿತ ನಡೆಸುವುದು ಸಹಜ. ಬ್ರಿಟಿಷರಾಗಲೀ, ಹೈದರಾಬಾದ್ ನಿಜಾಮನಾಗಲೀ, ಮರಾಠೀ ದೇಸಾಯಿಗಳಾಗಲೀ ತಮಗೆ ಮಾತ್ರ ಅರ್ಥವಾಗುವ ಭಾಷೆಯಲ್ಲಿ ಆಡಳಿತ ನಡೆಸಿದರು. ತಾವು ಹೇಳಿದ್ದು ತಮಗೆ ಅರ್ಥವಾಗಬೇಕು ಎಂಬ ಅವರ ನಿರೀಕ್ಷೆಯಂತೂ ಸರಿ; ಆದರೆ ತಮ್ಮ ಮಾತು ಯಾರಿಗೆ ತಲುಪಬೇಕೋ ಅವರಿಗೆ ತಲುಪುತ್ತಿದೆಂÄೆÄೕ ಎಂದು ತಿಳಿಯುವ ಪ್ರಯತ್ನವನ್ನೂ ಆಳುವ ಜನ ಮಾಡಿದಂತೆ ತೋರುವುದಿಲ್ಲ. ಈ ಮಾತು ಎಲ್ಲ ಕಾಲಕ್ಕೆ ಮತ್ತು ಆಳಿದ ಎಲ್ಲರಿಗೂ ಅನ್ವಯಿಸುವುದಿಲ್ಲ. ಬ್ರಿಟಿಷರಲ್ಲಿ ಕೆಲವು ಅಧಿಕಾರಿಗಳು ಭಾರತಕ್ಕೆ ಬಂದ ಮೇಲೆ ಇಲ್ಲಿನ ಸ್ಥಳೀಯ ಭಾಷೆಗಳನ್ನು ಕಲಿತು, ಆ ಭಾಷೆಯಲ್ಲೇ ಮಹತ್ವದ ಸಾಧನೆಗಳನ್ನು ಮಾಡಿದರು. ಆ ನಿಟ್ಟಿನಲ್ಲಿ ಯೂರೋಪಿಯನ್ ವಿದ್ವಾಂಸರ ಕಾರ್ಯವಿಧಾನವನ್ನು ಮೆಚ್ಚಲೇಬೇಕಾಗುತ್ತದೆ. ಕರ್ನಾಟಕದ ಉತ್ತರ ಭಾಗದಲ್ಲಿಯೂ 18ನೆಯ ಶತಮಾನದ ಹೊತ್ತಿಗೆ ಮರಾಠೀ ಭಾಷೆಯ ಪ್ರಭಾವ ಅಧಿಕವಾಗಿತ್ತು. 1817ರಲ್ಲಿ ಸೋತ ಬಾಜೀರಾಯನಿಂದ ಬ್ರಿಟಿಷರು ಪೇಶವೆಗಳ ಆಳ್ವಿಕೆಗೆ ಸೇರಿದ್ದ ಎಲ್ಲಾ ಭಾಗಗಳನ್ನೂ ವಶಪಡಿಸಿಕೊಂಡರು.

ಆಡಳಿತಾತ್ಮಕ ಕಾರಣಗಳಿಂದ 1826ರಲ್ಲಿ ಧಾರವಾಡ ಜಿಲ್ಲೆಯನ್ನು ಮದ್ರಾಸ್ ಪ್ರಾಂತಕ್ಕೆ ಸೇರಿಸಲು ಆಗ ಬಳ್ಳಾರಿಯಲ್ಲಿ ಕಲೆಕ್ಟರ್ ಆಗಿದ್ದ ಸರ್ ಥಾಮಸ್ ಮನ್ರೋ ಶಿಫಾರಸು ಮಾಡಿ, ಮುಂಬಯಿ ಕರ್ನಾಟಕ ಪ್ರಾಂತವನ್ನು ‘ದಕ್ಷಿಣ ಮರಾಠ ಪ್ರಾಂತ್ಯ’ ಎಂದು ಕರೆದು ತಪ್ಪು ಮಾಡಿರುವೆನೆಂದು ಒಪ್ಪಿಕೊಂಡಿದ್ದ. ಶಾಶ್ವತ ಏಕೀಕರಣವನ್ನು ಸಾಧಿಸುವುದರಿಂದ ಒಟ್ಟು ಕನ್ನಡ ಜನರಿಗೆ ಹಿತ ಆಗುತ್ತದೆ ಎಂಬುದು ಮನ್ರೋನ ಆಸೆಯಾಗಿತ್ತು. ದಕ್ಷಿಣ ಮರಾಠ ಪ್ರಾಂತ್ಯದ ಆ ಭಾಗಗಳಲ್ಲಿ ಆಳುತ್ತಿದ್ದ ಮರಾಠೀ ದೇಸಾಯರು ಮತ್ತು ಜಹಗೀರುದಾರರು ಆಡಳಿತದಲ್ಲಿ ಇಡಿಯಾಗಿ ಮರಾಠೀ ಭಾಷೆಯನ್ನು ಜಾರಿಗೆ ತಂದಿದ್ದರು. ಆದ್ದರಿಂದ ಜನತೆಯು ಅನಿವಾರ್ಯವಾಗಿ ಮರಾಠೀ ಕಲಿಯಬೇಕಾಯಿತು. ಕನ್ನಡವು ಕೇವಲ ಮನೆಮಾತಾಗಿ ಉಳಿಯಿತು. ಆಡಳಿತಕ್ಕೆ ಪೂರ್ಣವಾಗಿ ಬಳಕೆ ಆಗುತ್ತಿದ್ದ ಮರಾಠೀ ಭಾಷೆಗೆ ಶಿಕ್ಷÀಣದಲ್ಲೂ ಆದ್ಯತೆ ದೊರೆಯಿತು. ಈ ವಿಪರ್ಯಾಸವನ್ನು ಸರಿಪಡಿಸಲು ಸರ್ ವಾಲ್ಟರ್ ಎಲಿಯಟ್ ಪ್ರಯತ್ನಿಸಿದ.

1826ರಲ್ಲಿ ಮುಂಬಯಿ ಆಧಿಪತ್ಯದ ಸರ್ಕಾರವು ಹುಬ್ಬಳ್ಳಿ ಮತ್ತು ಧಾರವಾಡಗಳಲ್ಲಿ ಒಂದೊಂದು ಮರಾಠೀ ಶಾಲೆಯನ್ನು ಆರಂಭಿಸಿತು. ಆಡಳಿತದಲ್ಲಿ ಮರಾಠಿಯ ಪ್ರಾಬಲ್ಯವೇ ಹೆಚ್ಚಾಗಿದ್ದುದರಿಂದ ಸರ್ಕಾರದೊಂದಿಗಿನ ಸಂಪರ್ಕಕ್ಕೆ ಅದೇ ಸುಲಭ ಭಾಷೆ ಎಂಬ ಅಭಿಪ್ರಾಯ ಅಧಿಕಾರಿಗಳಿಗಿದ್ದಂತೆ ತೋರುತ್ತದೆ. ಆದರೆ ಸರ್ ವಾಲ್ಟರ್ ಎಲಿಯಟ್ ಆಲೋಚಿಸಿದ ರೀತಿಂÄೆÄೕ ಬೇರೆ ಆಗಿತ್ತು. ‘ಇಲ್ಲಿಯ ಬಹುತೇಕ ಜನರ ಭಾಷೆ ಕನ್ನಡ ಆಗಿರುವುದರಿಂದ ಕನ್ನಡವೇ ಆಡಳಿತ ಭಾಷೆಯಾಗುವುದು ಸೂಕ್ತ’ ಎಂಬ ಅಭಿಪ್ರಾಯದಿಂದ ಧಾರವಾಡದಲ್ಲಿ ಕನ್ನಡ ಶಾಲೆಯೊಂದನ್ನು ಆರಂಭಿಸಲು ತಾನೇ 1830ರಲ್ಲಿ ಅರ್ಜಿ ಸಲ್ಲಿಸಿದ. ಆದರೆ ಸರ್ಕಾರ ಅನುಮತಿ ನೀಡಲಿಲ್ಲ. 1833 ರವರೆಗೆ, ಮೂರು ವರ್ಷಗಳ ಕಾಲ ಎಲಿಯಟ್ ಸ್ವಂತ ಖರ್ಚಿನಲ್ಲೇ ಶಾಲೆಯನ್ನು ನಡೆಸಿದ.

ಸರ್ ವಾಲ್ಟರ್ ಎಲಿಯಟ್ ಆರಂಭಿಸಿದ ಕೆಲಸವನ್ನು, ಎಂಜಿನಿಯರಿಂಗ್ ಶಿಣ ಪಡೆದರೂ ಶಿಕ್ಷÀಣ ಇಲಾಖೆಯಲ್ಲಿ ದುಡಿದು ಕನ್ನಡದ ‘ಡೆಪ್ಯುಟಿ’ ಎನಿಸಿಕೊಂಡು ಕನ್ನಡದ ರಕ್ಷÀಣೆ ಮಾಡಿದ ಡೆಪ್ಯುಟಿ ಚೆನ್ನಬಸಪ್ಪ ಮುಂದುವರಿಸಿದರು. ಅವರಿಗೆ ಆಗಿನ ವಿದ್ಯಾ ಇಲಾಖೆಯ ದಕ್ಷಿಣ ವಿಭಾಗದ ಇನ್ಸ್ಪೆಕ್ಟರ್ ಆಗಿದ್ದ ರಸೆಲ್ ಪ್ರೋತ್ಸಾಹ ನೀಡಿದರು. ಡೆಪ್ಯುಟಿ ಚೆನ್ನಬಸಪ್ಪನವರು ಬೆಳಗಾಂವಿಯ ನಾರ್ಮಲ್ ಸ್ಕೂಲಿನ ಪ್ರಿನ್ಸಿಪಾಲರಾಗಿದ್ದಾಗ ‘ಮಠಪತ್ರಿಕೆ’ ಎಂಬ ಕನ್ನಡ ಪತ್ರಿಕೆಯನ್ನೂ ಆರಂಭಿಸಿದರು.

1837ರಲ್ಲಿ ಬೆಳಗಾಂವಿಯ ಜಿಲ್ಲಾಧಿಕಾರಿಯಾಗಿದ್ದ ಜಾನ್.ಎ.ಡನ್ಲಪ್ ಅವರು ಧಾರವಾಡದ ಸಂದರ್ಶಕ ನ್ಯಾಯಾಂಗ ಕಮೀಷನರ್ ಅವರಿಗೆ 20-4-1837ರಂದು ಬರೆದದಿರುವ ಪತ್ರದಲ್ಲಿ ಬೆಳಗಾಂವಿಯ ಜಿಲ್ಲೆಯಾದ್ಯಂತ ಕನ್ನಡವನ್ನೇ ಆಡಳಿತ ಹಾಗೂ ವ್ಯವಹಾರದ ಭಾಷೆಯನ್ನಾಗಿ ಜಾರಿಗೆ ತರಲು ಆದೇಶ ಹೊರಡಿಸಿರುವುದನ್ನು ತಿಳಿಸಿದ್ದಾರೆ. ಅಂತೆಂÄೆÄೕ ಆಗಿನ ಮುಂಬಯಿ ಗವರ್ನರ್ ಆರ್.ಗ್ರಾಂಟ್ ಅವರ 19-9-1837ರ ಪತ್ರವು ಕನ್ನಡಕ್ಕೆ ದೊರೆಯಲೇ ಬೇಕಾದ ಪ್ರಾಶಸ್ತ್ಯದ ಬಗ್ಗೆ ಮನವರಿಕೆ ಮಾಡಿದೆ.

ಹೈದರಾಬಾದ್ ಸಂಸ್ಥಾನದಲ್ಲೂ ಕನ್ನಡದ ಪರಿಸ್ಥಿತಿಯು ಕೆಟ್ಟಿತ್ತು. ಅಲ್ಲಿ ಮರಾಠೀ ಭಾಷೆಯ ಜೊತೆಗೆ ಉರ್ದು ಭಾಷೆಯೂ ಪ್ರಭಾವಶಾಲಿಯಾಗಿತ್ತು. ಶಿಕ್ಷÀಣದಲ್ಲೂ ಉರ್ದುವೇ ಮುಖ್ಯವಾಗಿತ್ತು. ಮೈಸೂರು ಸಂಸ್ಥಾನದಲ್ಲಿ ಮಾತ್ರ ಕನ್ನಡದ ಪರಿಸ್ಥಿತಿ ತೀರಾ ಹದಗೆಟ್ಟಿರಲಿಲ್ಲ.

ಕನ್ನಡಿಗರೇ ಅಧಿಕವಾಗಿದ್ದ ಭಾಗಗಳಲ್ಲಿ ಕನ್ನಡ ಭಾಷೆಯ ಪರಿಸ್ಥಿತಿ ಇದಾದರೆ, ಕನ್ನಡ ಸಂಸ್ಕೃತಿಯ ಪರಿಸ್ಥಿತಿಯು ಮತ್ತಷ್ಟು ಹದಗೆಟ್ಟಿತ್ತು. ಕನ್ನಡ ಭಾಷೆ ಮತ್ತು ಆ ಮೂಲಕ ರೂಪುಗೊಳ್ಳುವ ಸಂಸ್ಕೃತಿಯನ್ನು ಉಳಿಸಲು ಕನ್ನಡಿಗರೇ ಹೆಚ್ಚು ವಾಸಿಸುವ ಪ್ರದೇಶಗಳನ್ನು ಒಂದೇ ಆಡಳಿತ ವ್ಯಾಪ್ತಿಗೆ ತರುವ ಅಗತ್ಯ ಇತ್ತು. ಅದಕ್ಕಾಗಿ ಅವಶ್ಯಕ ವಾತಾವರಣ ನಿರ್ಮಾಣವಾದದ್ದು 1905ರ ಸುಮಾರಿನಲ್ಲಿ; ಬಂಗಾಲ ವಿಭಜನೆ : ಒಡೆದು ಆಳುವ ನೀತಿಗೆ ಪ್ರಸಿದ್ಧರಾಗಿದ್ದ ಅಂದಿನ ಬ್ರಿಟಿಷ್ ಆಳುವ ವರ್ಗವು ಈಶಾನ್ಯ ಭಾರತವನ್ನು ಒಡೆದು ಆಳಲು ನಿರ್ಧಾರ ಮಾಡಿದ ಫಲವಾಗಿ, ಬಂಗಾಲದ ವಿಭಜನೆ ಆಯಿತು. ಮೊದಲಿನಿಂದಲೂ ರಾಷ್ಟ್ರೀಯತೆಗಾಗಿ ಬ್ರಿಟಿಷರನ್ನು ವಿರೋಧಿಸುತ್ತಲೇ ಇದ್ದ ಬಂಗಾಲದ ಜನ ಬ್ರಿಟಿಷ್ ರಾಜಕೀಯ ತಂತ್ರವನ್ನು ಒಪ್ಪಲಿಲ್ಲ. ಬಂಗಾಲದ ವಿಭಜನೆಯಾದ ದಿನ ಅಂದರೆ, 16-8-1905ರಂದು ಬಂಗಾಲದ ಯಾವ ಮನೆಯಲ್ಲೂ ಒಲೆಗಳನ್ನು ಹತ್ತಿಸಲಿಲ್ಲ. ಆ ದಿನವನ್ನು ಸಂತಾಪ ದಿನ ವಾಗಿ ಆಚರಿಸಲಾಯಿತು. ಹೋರಾಟವು ನಿರಂತರವಾಗಿ ಮುಂದುವರಿದು 1912ರಲ್ಲಿ ಬಂಗಾಲದ ವಿಭಜನೆ ರದ್ದಾಯಿತು. ಸರ್ಕಾರವೇ ನೇಮಿಸಿದ್ದ ಸಮಿತಿಯು 1918ರಲ್ಲಿ ಸಲ್ಲಿಸಿದ ಮಾಂಟ್ ಫೋರ್ಡ್ ವರದಿಯು ‘ಬ್ರಿಟಿಷರ ಆಡಳಿತದ ಆವರೆಗಿನ ಭಾರತದ ಆಡಳಿತ ವಿಭಾಗಗಳು ಅಸಮರ್ಪಕ ಮತ್ತು ಜನತೆಯ ಹಿತವನ್ನು ಅನುಸರಿಸಿಲ್ಲ’ ಎಂದು ಸ್ಪಷ್ಟಪಡಿಸಿತು.

ಕರ್ಣಾಟಕ ವಿದ್ಯಾವರ್ಧಕ ಸಂಘ

[ಸಂಪಾದಿಸಿ]

ಕನ್ನಡ ಶಿಕ್ಷಣದ ಬಗೆಗಿನ ಜಾಗೃತಿ ಒಂದೆಡೆಗಾದರೆ, ಕನ್ನಡ ಸಾಹಿತ್ಯ, ಸಂಸ್ಕೃತಿ, ಭಾಷೆ ಮತ್ತಿತರ ಕನ್ನಡಿಗರ ಸಮಸ್ಯೆಗಳನ್ನು ಅರ್ಥೈಸಿ, ನಿವಾರಿಸಿ, ಕನ್ನಡ ಭಾಷಿಕರನ್ನು ಒಂದಾಗಿಸುವ ಪ್ರಯತ್ನದ ಫಲವೇ ‘ಕರ್ಣಾಟಕ ವಿದ್ಯಾವರ್ಧಕ ಸಂಘ’ದ ಸ್ಥಾಪನೆ. ಕರ್ಣಾಟಕ ವಿದ್ಯಾವರ್ಧಕ ಸಂಘವು ರಾ.ಹ.ದೇಶಪಾಂಡೆ ಅವರ ಕಲ್ಪನೆಯ ಕೂಸು. ರಾ.ಹ.ದೇಶಪಾಂಡೆ ಅವರು ಆ ಭಾಗದಲ್ಲಿ ಎಂ.ಎ., ಪಡೆದ ಮೊದಲ ವ್ಯಕ್ತಿ ಎಂಬ ಕೀರ್ತಿಗೆ ಪಾತ್ರರಾದವರು. ವಿದ್ಯಾವರ್ಧಕ ಸಂಘದ ಮೂಲ ಉದ್ದೇಶವು 1)ಕನ್ನಡದಲ್ಲಿ ಉಪಯುಕ್ತ ಕೃತಿಗಳ ರಚನೆಗೆ ಪ್ರೋತ್ಸಾಹ 2) ಇತರ ಭಾಷೆಗಳ ಉಪಯಕ್ತ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿಸಿ ಬಹುಮಾನ ನೀಡಿಕೆ. 3) ಸಂಪನ್ಮೂಲಗಳಿಗೆ ತಕ್ಕಂತೆ ಹೊಸ ಕನ್ನಡ ಗ್ರಂಥ ಭಂಡಾರಗಳ ಸ್ಥಾಪನೆ ಅಥವಾ ಇರುವ ಗ್ರಂಥ ಭಂಡಾರಗಳಿಗೆ ನೆರವು 4) ಕಡಿಮೆ ಬೆಲೆಯಲ್ಲಿ ರಾಜಕೀಯ ಸ್ವರೂಪವಿರದ ಉಪಯುಕ್ತ ಸಾವಧಿಕ ಪತ್ರಿಕೆಗಳ ಪ್ರಕಟಣೆ ಅಥವಾ ಈಗಾಗಲೇ ಇರುವ ಅಂತಹ ಪತ್ರಿಕೆಗಳಿಗೆ ಸಹಾಯ ಹಾಗೂ 5) ಕನ್ನಡಿಗರಿಗೆ ಸಮರ್ಥವಾಗಿ ಸಂಪಾದಿತವಾದ ಪ್ರಾಚೀನ ಕನ್ನಡ ಕೃತಿಗಳನ್ನು ದೊರಕಿಸುವುದೇ ಆಗಿತ್ತು. 1890 ಜುಲೈ 30ರ ಸಂಜೆ ಧಾರವಾಡದಲ್ಲಿ ಆರಂಭವಾದ ಸಂಘವು ತನ್ನ ಉದ್ದೇಶಗಳಿಗೆ ತಕ್ಕಂತೆ ಕೆಲಸ ಮಾಡಿತು. ಹಲವು ಗ್ರಂಥಗಳನ್ನು ಪ್ರಕಟಿಸಿತು ಮತ್ತು ‘ವಾಗ್ಭೂಷಣ’ ಎಂಬ ಮಾಸಪತ್ರಿಕೆಯನ್ನೂ ಪ್ರಕಟಿಸಿತು. ಕರ್ನಾಟಕದಾದ್ಯಂತ ಹಲವಾರು ಲೇಖಕರನ್ನು ಬೆಳೆಸಿದ ಸಂಘವು ಕನ್ನಡ ಗ್ರಂಥಗಳ ಭಾಷೆಯು ಏಕರೂಪವಾಗಿರಬೇಕು ಎಂಬ ಅಭಿಪ್ರಾಯದಿಂದ ಅಖಿಲ ಕರ್ನಾಟಕ ಮಟ್ಟದ ಗ್ರಂಥಕರ್ತರ ಸಮ್ಮೇಳನವನ್ನು ಧಾರವಾಡದಲ್ಲಿ 1907ರ ಜೂನ್ ತಿಂಗಳ ಮೊದಲ ವಾರದಲ್ಲಿ ನಡೆಸಿತು. ಎರಡನೆಯ ಸಮ್ಮೇಳನವನ್ನು ಮೈಸೂರು ಸರ್ಕಾರದ ವಿದ್ಯಾ ಇಲಾಖೆಯವರು ಬೆಂಗಳೂರಿನಲ್ಲಿ ನಡೆಸಬೇಕಾಗಿತ್ತು. ಕಾರಣಾಂತರಗಳಿಂದ ಸಮ್ಮೇಳನ ಬೆಂಗಳೂರಿನಲ್ಲಿ ನಡೆಯಲಿಲ್ಲ. ಎರಡನೆಯ ಸಮ್ಮೇಳನವೂ ಧಾರವಾಡದಲ್ಲೇ ನಡೆಯಿತು.

ಕನ್ನಡ ಸಾಹಿತ್ಯ ಪರಿಷತ್ತು

[ಸಂಪಾದಿಸಿ]

ಮೂರನೆಯ ಅಖಿಲ ಕರ್ನಾಟಕ ಮಟ್ಟದ ಗ್ರಂಥಕರ್ತರ ಸಮ್ಮೇಳನವಾದರೂ ಬೆಂಗಳೂರಿನಲ್ಲಿ ನಡೆಯಬೇಕೆಂಬ ಕೆಲವು ಗಣ್ಯರ ಅಪೇಕ್ಷೆಯು ಕರ್ನಾಟಕ(ಕನ್ನಡ)ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಕಾರಣವಾಯಿತು. ಎರಡೂ ಸಂಘಟನೆಗಳು ಸಾಹಿತ್ಯಕ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ಕೊಟ್ಟರೂ ಸಹ, ಅವಕಾಶ ದೊರೆತಾಗಲೆಲ್ಲಾ ಏಕೀಕರಣದ ವಿಷಯದಲ್ಲೂ ಸಮರ್ಥವಾಗಿ ಕಾರ್ಯೋನ್ಮುಖವಾದವು. ಕರ್ನಾಟಕ ವಿದ್ಯಾವರ್ಧಕ ಸಂಘವು 7-10-1917ರಂದು ನಡೆದ ತನ್ನ ವ್ಯವಸ್ಥಾಪಕ ಸಮಿತಿಯ ಸಭೆಯಲ್ಲಿ ಏಕೀಕರಣಕ್ಕೆ ಸಂಬಂಧಿಸಿದಂತೆ ಸ್ವೀಕಾರ ಮಾಡಿದ ಗೊತ್ತುವಳಿಯು ಈ ಕೆಳಕಂಡಂತಿದೆ. ‘ಬ್ರಿಟಿಷ್ ಅಧಿಕಾರಕ್ಕೆ ಒಳಗಾದ ಎಲ್ಲ ಕನ್ನಡ ಊರು, ತಾಲೂಕು, ಜಿಲ್ಲೆಗಳನ್ನು ಒಟ್ಟುಗೂಡಿಸಿ ಒಂದು ರಾಜಕೀಯ ವಿಭಾಗವನ್ನು ಮಾಡಿ ಅದಕ್ಕೆ ಕರ್ನಾಟಕ ಪ್ರಾಂತವೆಂದು ಕರೆಯುವ ಬಗ್ಗೆ ಸರಕಾರಕ್ಕೆ ಬಿನ್ನಹ ಮಾಡಬೇಕು. ಉದಾಹರಣಾರ್ಥ ಸೊಲ್ಲಾಪುರ ಜಿಲ್ಲೆಯ ಕೆಲವು ಭಾಗ ಕನ್ನಡವಿರುತ್ತದೆ. ಮದ್ರಾಸ್ ಇಲಾಖೆಯಲ್ಲಿ ಬಳ್ಳಾರಿ, ದಕ್ಷಿಣ ಕನ್ನಡ ಈ ಜಿಲ್ಲೆಗಳು ಪೂರ್ಣ ಕನ್ನಡವಿದ್ದು ಕಡಪಾ, ಕರ್ನೂಲ, ಅನಂತಪುರ ಮುಂತಾದ ಜಿಲ್ಲೆಗಳಲ್ಲಿ ಎಷ್ಟೋ ಹಳ್ಳಿಗಳೂ ತಾಲೂಕುಗಳೂ ಕನ್ನಡ ಇರುತ್ತವೆ. ಇವುಗಳನ್ನೆಲ್ಲ ಒಟ್ಟುಗೂಡಿಸಿ ಒಂದು ಕರ್ನಾಟಕ ಇಲಾಖೆ ಅಥವಾ ಪ್ರಾಂತವೆಂಬ ರಾಜಕೀಯ ವಿಭಾಗವನ್ನು ಮಾಡಿದರೆ ಕನ್ನಡಿಗರ ಐಕ್ಯಕ್ಕೂ ಹಿತಕ್ಕೂ ಬೆಳವಣಿಗೆಗೂ ಅನುಕೂಲವಾಗುವುದು’. ಮೈಸೂರು ಸಂಸ್ಥಾನ ಮಾತ್ರವಲ್ಲದೆ ಮುಂಬಯಿ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮದ್ರಾಸ್ ಆಧಿಪತ್ಯ, ಕೊಡಗು ಇತ್ಯಾದಿ ಕನ್ನಡ ಪ್ರಾಂತಗಳ ಪ್ರಾತಿನಿಧ್ಯವೂ ಇದ್ದ ಕನ್ನಡ ಸಾಹಿತ್ಯ ಪರಿಷತ್ತು ತನ್ನ ಸಾಹಿತ್ಯ ಸಮ್ಮೇಳನಗಳಲ್ಲಿ ಏಕೀಕರಣದ ಪರವಾಗಿ ನಿರ್ಣಯ ಸ್ವೀಕರಿಸುವುದಲ್ಲದೆ, ತನ್ನ ‘ಕನ್ನಡ ನುಡಿ’ ಮತ್ತು ‘ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ’ಗಳಲ್ಲಿ ಏಕೀಕರಣದ ಪರವಾದ ಲೇಖನಗಳನ್ನು ಪ್ರಕಟಿಸಿ ಏಕೀಕರಣಕ್ಕೆ ಶ್ರಮಿಸಿತು.

ಕರ್ನಾಟಕ ಸಭೆ

[ಸಂಪಾದಿಸಿ]

ರಾಷ್ಟ್ರೀಯ ನಾಯಕರು ಕರ್ನಾಟಕ ಏಕೀಕರಣದ ವಿಷಯದಲ್ಲಿ ಆಸಕ್ತಿ ವಹಿಸಿದ ಅನಂತರ ಅದಕ್ಕೊಂದು ನಿಶ್ಚಿತ ಎಂಬ ಸ್ವರೂಪ ದೊರೆಯಿತು. ಈ ನಿಟ್ಟಿನಲ್ಲಿ ಯಾಜಮಾನ್ಯ ವಹಿಸಿದವರು ಆಲೂರು ವೆಂಕಟರಾಯರು. 1905ರಿಂದಲೂ ಕರ್ನಾಟಕ ಏಕೀಕರಣಕ್ಕೆ ದುಡಿದು, ಏಕೀಕರಣ ಆದದ್ದನ್ನು ನೋಡಿ ಸಂತೋಷಪಟ್ಟ ಹಿರಿಯರಾದ ಆಲೂರು ವೆಂಕಟರಾಯರನ್ನು ‘ಕನ್ನಡ ಕುಲಪುರೋಹಿತ’ ಎಂದೇ ಕರೆಯಲಾಗಿದೆ. ಆಲೂರರ ಕರ್ನಾಟಕ ಏಕೀಕರಣ ಪರ ಹೋರಾಟಕ್ಕೆ ‘ಹೋಂರೂಲ್’ ಸಂದರ್ಭದಲ್ಲಿ ತಿಲಕರು ಆಡಿದ್ದ ‘ಕನ್ನಡದಲ್ಲಿ ಮಾತನಾಡಿ ಕನ್ನಡ ಭಾಷೆಯ ಹಕ್ಕನ್ನು ಸ್ಥಾಪಿಸು’ಎಂಬ ಮಾತುಗಳೂ ಪ್ರೇರಣೆ ಆಗಿದ್ದವು. ಕನ್ನಡ ಮತು ಕರ್ನಾಟಕದ ಬಗ್ಗೆ ಆಲೂರರಿಗೆ ಇದ್ದ ಗೌರವ, ಅಭಿಮಾನ ಮತ್ತು ಕಳಕಳಿಗಳನ್ನು ಅವರ ‘ಕರ್ನಾಟಕ ಗತ ವೈಭವ’ ಕೃತಿಯಲ್ಲಿ ಗುರುತಿಸಬಹುದು. ಆಲೂರರ ಜೊತೆಗೆ ವೆಂಕಟರಂಗೋಕಟ್ಟಿ, ಮುದವೀಡು ಕೃಷ್ಣರಾಯರು, ಬಿಂದೂರಾವ್ ಮುತಾಲಿಕ ದೇಸಾಯಿ, ಕಡಪಾ ರಾಘವೇಂದ್ರ ರಾವ್, ಗದಿಗೆಯ್ಯ ಹೊನ್ನಾಪುರ ಮಠ, ಪಾಟೀಲ ಸಂಗಪ್ಪ ಮುಂತಾದ ಹಿರಿಯ ರಾಷ್ಟ್ರೀಯ ನಾಯಕರಿದ್ದರು. ಗದಿಗೆಯ್ಯ ಹೊನ್ನಾಪುರ ಮಠ ಅವರ ಅಟ್ಟದ ಮೇಲೆ 1916ರಲ್ಲಿ ಆಲೂರರು, ಕಡಪಾ ರಾಘವೇಂದ್ರ ರಾಯರು, ನರಗುಂದಕರರು ಒಟ್ಟಾಗಿ ಸ್ಥಾಪಿಸಿದ ‘ಕರ್ನಾಟಕ ಸಭೆ’ಯು ಕರ್ನಾಟಕ ಏಕೀಕರಣವನ್ನೇ ಪ್ರಧಾನ ವಿಷಯವನ್ನಾಗಿ ಸ್ವೀಕರಿಸಿ ಕಾರ್ಯತತ್ಪರವಾಯಿತು.

ಕರ್ನಾಟಕ ರಾಜಕೀಯ ಪರಿಷತ್ತು

[ಸಂಪಾದಿಸಿ]

1918ರಲ್ಲಿ ಅಖಿಲ ಕರ್ನಾಟಕ ರಾಜಕೀಯ ಪರಿಷತ್ತು ಸ್ಥಾಪನೆ ಆಯಿತು. ಏಕೀಕರಣ ವಿಚಾರಗಳಿಗೆ ರಾಜಕೀಯ ಬೆಂಬಲವೂ ದೊರೆಯಿತು. ಪರಿಷತ್ತಿನ ಮೊದಲ ಅಧಿವೇಶನವು 1920ರಲ್ಲಿ ಧಾರವಾಡದ ಉಳವಿ ಚೆನ್ನಬಸಪ್ಪನ ಗುಡ್ಡದ ಮೇಲೆ, ಮೈಸೂರು ಸಂಸ್ಥಾನದ ನಿವೃತ್ತ ದಿವಾನ್ ವಿ.ಪಿ.ಮಾಧವರಾಯರ ಅಧ್ಯಕ್ಷತೆಯಲ್ಲಿ ನಡೆಯಿತು. ಆ ಅಧಿವೇಶನದಲ್ಲಿ ಕಾಂಗ್ರೆಸ್ ಸಂಸ್ಥೆಯು ಕನ್ನಡ ಮಾತನಾಡುವ ಜನರ ಪ್ರದೇಶವನ್ನೆಲ್ಲ ಸೇರಿಸಿ ಒಂದು ಸ್ವತಂತ್ರ ಪ್ರಾಂತವನ್ನಾಗಿಸಬೇಕೆಂಬ ನಿರ್ಣಯವನ್ನು ಸ್ವೀಕರಿಸಿತು. ಅದೇ ವರ್ಷ ನಾಗಪುರದಲ್ಲಿ ಸೇರಿದ್ದ ಕಾಂಗ್ರೆಸ್ ಮಹಾಧಿವೇಶನದಲ್ಲಿ ಪ್ರಾಂತಿಕ ಕಾಂಗ್ರೆಸ್ ಸಮಿತಿಗಳ ರಚನೆಗೆ ಅವಕಾಶ ದೊರೆಯಿತು. ಕಡಪಾ ರಾಘವೇಂದ್ರ ರಾಯರು ಮತ್ತು ಶಾಂತಕವಿಗಳೆಂದು ಹೆಸರಾಗಿದ್ದ ಸಕ್ಕರಿ ಬಾಳಾಚಾರ್ಯರ ಪ್ರಯತ್ನದಿಂದಾಗಿ ಆ ಅಧಿವೇಶನಕ್ಕೆ ಕರ್ನಾಟಕದಿಂದ ಸುಮಾರು 800 ಪ್ರತಿನಿಧಿಗಳು ಹೋಗಿದ್ದರು. ‘ಪ್ರಾಂತಗಳನ್ನು ಗುರುತಿಸಲು ಭಾಷೆಯೇ ಸರಿಯಾದ ಆಧಾರ’ ಎಂಬ ನಂಬಿಕೆಯಿದ್ದ ಮಹಾತ್ಮ ಗಾಂಧೀಜಿ ಅವರಿಗೆ ಭಾಷಾವಾರು ಪ್ರಾಂತ ರಚನೆಯ ಬಗ್ಗೆ ಒಲವಿತ್ತು. ಕರ್ನಾಟಕ ಪ್ರಾಂತ್ಯ ಕಾಂಗ್ರೆಸ್ ಸಮಿತಿಯ ರಚನೆಯಾದ ಮೇಲೆ ಸಮಿತಿಯ ವ್ಯಾಪ್ತಿಗೆ ಕನ್ನಡ ಮಾತನಾಡುವ ಜನರಿರುವ ಪ್ರದೇಶಗಳೆಲ್ಲ ಸೇರ್ಪಡೆ ಆಗಬೇಕೆಂದೂ ನಿರ್ಣಯವಾಗಿತ್ತು. ಈ ಹಿನ್ನೆಲೆಯಲ್ಲೇ ಕನ್ನಡಿಗರು ಪರಸ್ಪರ ಒಂದಾಗಿ ಸಭೆ, ಸಮಾರಂಭಗಳನ್ನು ಹಮ್ಮಿಕೊಳ್ಳುವ, ಸಮ್ಮೇಳನಗಳನ್ನು ನಡೆಸುವ ಸೌಹಾರ್ದದ ವಾತಾವರಣವನ್ನು ಸೃಷ್ಟಿಸಿಕೊಂಡರು.

ಕೇಳ್ಕರ್ ಸಮಿತಿ ವರದಿ

[ಸಂಪಾದಿಸಿ]

ಆದರೆ ಕೆ.ಪಿ.ಸಿ.ಸಿ ರಚನೆಯಾದ ಸಂದರ್ಭದಲ್ಲೇ ಬಳ್ಳಾರಿ ಜಿಲ್ಲೆಯು ಎಲ್ಲಿಗೆ ಸೇರಬೇಕು ಎಂಬ ಬಗ್ಗೆ ಕರ್ನಾಟಕ ಮತ್ತು ಆಂಧ್ರದ ನಾಯಕರಲ್ಲಿ ಭಿನ್ನಾಭಿಪ್ರಾಯ ಉಂಟಾಯಿತು. ಅದನ್ನು ಬಗೆಹರಿಸಲು ಕಾಂಗ್ರೆಸ್ ಸಂಸ್ಥೆಯು ಕೇಳಕರ್ ಸಮಿತಿಯನ್ನು ನೇಮಿಸಿತು. ಕೇಳಕರ್ ಸಮಿತಿಯ ವರದಿಯ ಪ್ರಕಾರ ಬಳ್ಳಾರಿ ಜಿಲ್ಲೆಯ ಆದವಾನಿ, ಆಲೂರು ಮತ್ತು ರಾಯದುರ್ಗ ತಾಲ್ಲೂಕುಗಳು ಆಂಧ್ರ ಪ್ರಾಂತಿಕ ಕಾಂಗ್ರೆಸ್ ಸಮಿತಿಯ ವ್ಯಾಪ್ತಿಗೆ ಸೇರಿತು. ಕರ್ನಾಟಕ ಪ್ರಾಂತ ಕಾಂಗ್ರೆಸ್ ಸಮಿತಿಯ ರಚನೆಯ ನಂತರ ಕರ್ನಾಟಕ ಏಕೀಕರಣವೇ ಆಗಿಹೋಯಿತು ಎಂಬ ಭಾವನೆಯಿಂದ ಹಲವು ಹಿರಿಯ ನಾಯಕರು ನಿರ್ಲಿಪ್ತರಾದರು. ಬೆಳಗಾಂವಿ ಕಾಂಗೆಸ್ ಅಧಿವೇಶನ ಮತ್ತು ಕರ್ನಾಟಕ ಏಕೀಕರಣ ಸಂಘ : 1924ರಲ್ಲಿ ಬೆಳಗಾಂವಿಯಲ್ಲಿ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಮಹಾಧಿವೇಶನದಲ್ಲಿ ಕರ್ನಾಟಕ ಏಕೀಕರಣ ವಿಚಾರಕ್ಕೆ ಮತ್ತೆ ಅತ್ಯಪೂರ್ವ ಚಾಲನೆ ದೊರೆಯಿತು. ಆ ಸಂದರ್ಭಕ್ಕೆಂದೇ ‘ಕರ್ಣಾಟಕದ ಕೈಪಿಡಿ’ ಎಂಬ ಗ್ರಂಥವನ್ನು ಕಾಂಗ್ರೆಸ್ ಸಮಿತಿಯೇ ಪ್ರಕಟಿಸಿತು. ಜೊತೆಗೆ ಬೆಳಗಾವಿಯ ಆರ್.ಬಿ. ಕುಲಕರ್ಣಿ ಕಾವ್ಯರತ್ನ ಎನ್ನುವವರು ಬರೆದ ‘ಕನ್ನಡಿಗನ ಸರ್ವಸ್ವ ಅಥವಾ ಸಂಯುಕ್ತ ಕರ್ನಾಟಕ ಪ್ರಾಂತ’ ಎಂಬ ಕೃತಿಯು ಬಿಡುಗಡೆ ಆಯಿತು. ಅದೇ ಸಂದರ್ಭದಲ್ಲಿ ಹುಯಿಲಗೋಳ ನಾರಾಯಣರಾಯರ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಎಂಬ ಕವನವು ಹಾಡಲ್ಪಟ್ಟಿತು. ಕರ್ನಾಟಕ ಏಕೀಕರಣಕ್ಕೆ ಸಂಬಂಧಿಸಿದಂತೆ ನಿಶ್ಚಿತ ರೂಪು-ರೇಷೆಗಳು ರೂಪುಗೊಂಡದ್ದೇ ಬೆಳಗಾವಿಯಲ್ಲಿ ಕಾಂಗ್ರೆಸ್ ಮಹಾಧಿವೇಶನ ನಡೆದ ಸಂದರ್ಭದಲ್ಲಿ ಎನ್ನುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಏಕೆಂದರೆ ಅದೇ ಸಂದರ್ಭದಲ್ಲಿ ‘ಕರ್ನಾಟಕ ಏಕೀಕರಣ ಸಂಘ’ದ ಸ್ಥಾಪನೆ ಆಯಿತು ಮತ್ತು ಅದರ ಮೊಟ್ಟ ಮೊದಲ ಪರಿಷತ್ತೂ ಸಹ ನಡೆಯಿತು. ಅದರ ಅಧ್ಯಕ್ಷತೆ ವಹಿಸಿದ್ದವರು ರಾವ್ ಬಹದ್ದೂರ್ ಸಿದ್ದಪ್ಪ ಕಂಬಳಿ; ಆಗ ಅವರು ಮುಂಬಯಿ ವಿಧಾನ ಪರಿಷತ್ತಿನ ಉಪ ಸಭಾಪತಿಯಾಗಿದ್ದರು. ಪರಿಷತ್ತಿನ ಸ್ವಾಗತಾಧ್ಯಕ್ಷರಾಗಿದ್ದವರು ದ.ವೆ.ಬೆಳವಿ. ಕರ್ನಾಟಕ ಏಕೀಕರಣ ಸಂಘದ ಹತ್ತನೆಯ ಪರಷತ್ತು ನಡೆದದ್ದು ಮುಂಬಯಿಯಲ್ಲಿ. ಆಗ ಉದ್ಘಾಟಕರು ವಲ್ಲಭಭಾಯಿ ಪಟೇಲ್ ಮತ್ತು ಅಧ್ಯಕ್ಷತೆ ವಹಿಸಿದ್ದವರು ಆಗ ಮುಂಬಯಿ ಆಧಿಪತ್ಯದ ಮುಖ್ಯ ಮಂತ್ರಿಗಳಾಗಿದ್ದ ಬಿ.ಜಿ.ಖೇರ್. ಏಕೀಕರಣಕ್ಕೆಂದೇ ರೂಪುಗೊಂಡ ‘ಕರ್ನಾಟಕ ಏಕೀಕರಣ ಸಂಘ’ವು ಪ್ರತಿ ಪರಿಷತ್ತಿನಲ್ಲೂ ಏಕೀಕರಣ ವಿಚಾರದ ಬಗ್ಗೆ ವಿಶೇಷ ಪ್ರಸ್ಥಾವನೆ ಮಾಡಿದೆ.

ಮಾಂಟೆಗೋ-ಚೆಲ್ಮ್‌ಸ್ಫರ್ಡ್ ಸಮಿತಿ

[ಸಂಪಾದಿಸಿ]

ಬಂಗಾಲದ ವಿಭಜನೆ ಮತ್ತು ಆನಂತರದ ಬೆಳವಣಿಗೆಗಳು ಬ್ರಿಟಿಷ್ ಸರ್ಕಾರದ ಒಡೆದು ಆಳುವ ನೀತಿಗೆ ಸಹಕಾರಿ ಆಗಿರಲಿಲ್ಲ. 1912ರಲ್ಲಿ ಆಗಿನ ಭಾರತದ ಗವರ್ನರ್ ಜನರಲ್ ಮತ್ತು ಭಾರತದ ಕಾರ್ಯದರ್ಶಿಗಳು ಭಾರತವನ್ನು ಭಾಷಾವಾರು ಸ್ವಾಯತ್ತ ಪ್ರಾಂತಗಳನ್ನಾಗಿ ವಿಭಾಗಿಸಲು ಇಚ್ಛಿಸಿದ್ದರು. 1918 ರಲ್ಲಿ ಸಂವಿಧಾನ ಪರಿಷ್ಕರಣೆಯ ಸಲುವಾಗಿ ಮಾಂಟೆಗೋ-ಚೆಲ್ಮ್‌ಸ್ಫರ್ಡ್ ನೇಮಕಗೊಂಡಿತು. ಸಮಿತಿಯು 1919ರಲ್ಲಿ ವರದಿಯನ್ನು ಸಲ್ಲಿಸಿತು. ಭಾಷಾವಾರು ಪ್ರಾಂತ ರಚನೆಯನ್ನು ಕೋರಿ ಕರ್ನಾಟಕದಲ್ಲೂ ಸಮಿತಿಗೆ ಮನವಿಗಳು ಸಲ್ಲಿಸಲ್ಪಟ್ಟವು. ಜನತೆಯ ಅಭಿಪ್ರಾಯವನ್ನು ಪುರಸ್ಕರಿಸುವ ಹಾಗೂ ಆಡಳಿತದ ಅನುಕೂಲದ ಕಾರಣದಿಂದಲೂ ಸಹ ಭಾಷಾವಾರು ಪ್ರಾಂತ ರಚನೆ ಒಳಿತು ಎಂಬ ಅಭಿಪ್ರಾಯ ಸಮಿತಿಯದಾಗಿತ್ತು. ಆ ವರದಿಯ ಹಿನ್ನೆಲೆಯಲ್ಲಿಯೇ ಪ್ರಾಂತೀಯ ಕಾಂಗ್ರೆಸ್ ಸಮಿತಿಗಳ ರಚನೆ ಆಯಿತು.

ಮೋತಿಲಾಲ್ ನೆಹರೂ ಸಮಿತಿ

[ಸಂಪಾದಿಸಿ]

ನಂತರದ ವರ್ಷಗಳಲ್ಲಿ, ಸುಮಾರು ಮೂವತ್ತನಾಲ್ಕು ರಾಜಕೀಯ ಸಂಸ್ಥೆಗಳ ಸರ್ವಪಕ್ಷÀ ಸಮ್ಮೇಳನವು ನಿರ್ಣಯಿಸಿದಂತೆ, ಭಾಷಾವಾರು ಪ್ರಾಂತ ರಚನೆಗೆ ಸಂಬಂಧಿಸಿದಂತೆ ವರದಿ ನೀಡಲು ಮೋತಿಲಾಲ್ ನೆಹರೂ ಅವರ ನೇತೃತ್ವದಲ್ಲಿ ಒಂದು ಸಮಿತಿಯ ರಚನೆ ಆಯಿತು. 1928 ಮೇ 19ರಂದು ನೇಮಕಗೊಂಡ ಸಮಿತಿಯು ಸುಮಾರು 25 ಬಾರಿ ಸಭೆ ಸೇರಿ ವರದಿಯನ್ನು ಸಿದ್ಧಪಡಿಸಿತು. ಬಾಷಾವಾರು ಪ್ರಾಂತ ರಚನೆಯನ್ನು ಅವಶ್ಯಕ ಎಂದು ಪರಿಗಣಿಸಿದ ಸಮಿತಿಯು ಕರ್ನಾಟಕ ಮತ್ತು ಆಂಧ್ರ ಪ್ರಾಂತಗಳ ರಚನೆಗೆ ಸೂಕ್ತ ಏರ್ಪಾಡನ್ನು ಮಾಡಲು ಶಿಪಾರ್ಸು ಮಾಡಿತು. ಆದರೆ ಆಳುತ್ತಿದ್ದ ಯಾವುದೇ ಸರ್ಕಾರ ಆ ಬಗ್ಗೆ ಆಸಕ್ತಿ ವಹಿಸಲಿಲ್ಲ.

ವಿಧಾನ ಪರಿಷತ್ತುಗಳಲ್ಲಿ ಪ್ರಸ್ತಾವನೆ

[ಸಂಪಾದಿಸಿ]

ಮದರಾಸ್ ಮತ್ತು ಮುಂಬಯಿಯ ವಿದಾನ ಪರಿಷತ್ತುಗಳಲ್ಲಿ ಕರ್ನಾಟಕ ಪ್ರದೇಶಗಳನ್ನು ಪ್ರತಿನಿಧಿಸುತ್ತಿದ್ದ ಅನೇಕ ಗಣ್ಯರು ಕರ್ನಾಟಕ ಪ್ರಾಂತ ರಚನೆಯ ಸಂಬಂಧವಾಗಿ ಪ್ರಶ್ನಿಸುತ್ತಲೇ ಇದ್ದರು. ನೆಹರೂ ವರದಿ ಸಲ್ಲಿಕೆ ಆದ ನಂತರವೂ ಕರ್ನಾಟಕ ಏಕೀಕರಣದ ಪ್ರಶ್ನೆಗೆ ವಿಧಾನ ಪರಿಷತ್ತುಗಳು ಸ್ಪಂದಿಸಲಿಲ್ಲ. ವಿಧಾನ ಪರಿಷತ್ತುಗಳ ಬೆಂಬಲವಿಲ್ಲದೆ ಕೇಂದ್ರ ಶಾಸನ ಸಭೆ ಭಾಷಾವಾರು ಪ್ರಾಂತ ರಚನೆಯನ್ನು ಒಪ್ಪುವುದು ಸಾಧ್ಯವಿರಲಿಲ್ಲ.ಕರ್ನಾಟಕ ಪ್ರಾಂತ ರಚನೆಗೆ ಕನ್ನಡಿಗರ ಬೆಂಬಲವಿಲ್ಲ ಎಂದು ಮುಂಬಯಿ ಸರ್ಕಾರ ವಾದ ಮಾಡಿತು. ಆದರೆ ಜಾತಿ, ಮತ ಭೇದವಿಲ್ಲದೆ ಕರ್ನಾಟಕ ಏಕೀಕರಣ ಕುರಿತಂತೆ ಸಂಘ-ಸಂಸ್ಥೆಗಳು, ಪತ್ರಿಕೆಗಳು, ವಾಚನಾಲಯಗಳು, ವಿವಿಧ ಪರಿಷತ್ತುಗಳು ಕಾರ್ಯನಿರತವಾದವು. ಏಕೀಕರಣದ ಪರವಾಗಿ 36000 ವಯಸ್ಕರ ಸಹಿಯನ್ನೊಳಗೊಂಡ ಮನವಿಯನ್ನು ಸಲ್ಲಿಸುವಲ್ಲಿ ಎನ್.ಎಸ್.ಹರ್ಡೀಕರ್ ಶ್ರಮಿಸಿದರು. ಮೈಸೂರು ಸಂಸ್ಥಾನದ ಜನತೆಗೆ ಕರ್ನಾಟಕ ಏಕೀಕರಣದ ಕಲ್ಪನೆ ಬರಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ಉತ್ತರ ಕರ್ನಾಟಕದ ಹಲವು ನಾಯಕರಿಗಿತ್ತು. ಆದರೆ ಸರ್.ಎಂ.ವಿಶ್ವೇಶ್ವರಯ್ಯನವರ ದೂರದರ್ಶಿತ್ವದ ಫಲವಾಗಿ ರೂಪುಗೊಂಡ ಕನ್ನಡ ಸಾಹಿತ್ಯ ಪರಿಷತ್ತು ಭಾವನಾತ್ಮಕವಾಗಿ ಕನ್ನಡಿಗರನ್ನು ಒಂದುಗೂಡಿಸುವ ಕೆಲಸ ಮಾಡುತ್ತಿತ್ತು. ಉತ್ತರ ಕರ್ನಾಟಕದಲ್ಲಿದ್ದ ಹಲವು ದೇಶೀ ಸಂಸ್ಥಾನಗಳು ಏಕೀಕರಣಕ್ಕೆ ಒಪ್ಪುವ ಬಗ್ಗೆ ಅನೇಕರಿಗೆ ಅನುಮಾನಗಳು ಇದ್ದವು. ಅಂತಹ ಬಹುತೇಕ ಸಂಸ್ಥಾನಗಳ ಒಡೆತನ ಇದ್ದದ್ದು ಮರಾಠೀ ಜನರ ಕೈಗಳಲ್ಲಿ ; ಅನುಮಾನಗಳಿಗೆ ಆ ವಿಚಾರವೂ ಕಾರಣವಾಗಿತ್ತು. 1928ರ ಆಗಸ್ಟ್‌ 28ರಿಂದ 31ರವರೆಗೆ ಲಖನೌನಲ್ಲಿ ನಡೆದ ಸರ್ವಪಕ್ಷÀ ಸಮಿತಿಯು ಮೋತಿಲಾಲ್ ನೆಹರೂ ಅವರ ವರದಿಯನ್ನು ಅಂಗೀಕರಿಸಿತು.28-12-1928ರಂದು ಕೋಲ್ಕತದಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಮಹಾಧಿವೇಶನವೂ ನೆಹರೂ ಸಮಿತಿಯ ವರದಿಯನ್ನು ಅಂಗೀಕರಿಸಿತು.

ಸೈಮನ್ ಆಯೋಗ

[ಸಂಪಾದಿಸಿ]

ಭಾರತದ ಸಂವಿದಾನದ ಪುನರ್ಘಟನೆಗೆ ಸಂಬಂಧಿಸಿದಂತೆ ನೇಮಕಗೊಂಡ ಸೈಮನ್ ಆಯೋಗವನ್ನು ಕಾಂಗ್ರೆಸ್ ಬಹಿಷ್ಕರಿಸಿತು. ಸೈಮನ್ ಆಯೋಗದ ವರದಿಯನ್ನನುಸರಿಸಿ ಸಿಂಧ್ ಮತ್ತು ಒರಿಸ್ಸಾ ಪ್ರಾಂತಗಳ ರಚನೆ ಆಯಿತು. ಕಾಂಗ್ರೆಸ್ ಸಂಸ್ಥೆಯು ಸೈಮನ್ ಆಯೋಗವನ್ನು ಬಹಿಷ್ಕರಿಸಿತಾದರೂ, ದುಂಡು ಮೇಜಿನ ಪರಿಷತ್ತನ್ನು ಬಹಿಷ್ಕರಿಸಲಿಲ್ಲ. ಆ ಪರಿಷತ್ತಿನಲ್ಲೂ ಭಾಷಾವಾರು ಪ್ರಾಂತ ರಚನೆಯ ವಿಷಯ ಪ್ರಸ್ತಾಪ ಆಗಿತ್ತು. 1937ರಲ್ಲಿ ಭಾರತಕ್ಕೆ ಸ್ವಾಯತ್ತತೆ ಲಭಿಸಿತಾದರೂ, ಸಿಂಧ್ ಮತ್ತು ಒರಿಸ್ಸಾ ಪ್ರಾಂತಗಳ ನಿರ್ಮಾಣ ಆದರೂ ಕರ್ನಾಟಕದ ನಿರ್ಮಾಣ ಆಗಲಿಲ್ಲ.

ಕರ್ನಾಟಕ ಏಕೀಕರಣ ಪರಿಷತ್ತುಗಳು ಮತ್ತು ಕರ್ನಾಟಕಸ್ಥರ ಮಹಾಸಭೆ

[ಸಂಪಾದಿಸಿ]

1924ರಿಂದ ಆರಂಭವಾಗಿ 1946ರವರೆಗೆ ನಡೆದ ಹತ್ತು ಕರ್ನಾಟಕ ಏಕೀಕರಣ ಪರಿಷತ್ತುಗಳ ಮುಖ್ಯ ಉದ್ದೇಶವೂ ಕರ್ನಾಟಕ ಏಕೀಕರಣವೇ ಆಗಿತ್ತು. ಬೇರೆ ಬೇರೆ ಸ್ಥಳಗಳಲ್ಲಿ ನಡೆದ ಈ ಪರಿಷತ್ತುಗಳಲ್ಲಿ ಸ್ವಾಗತಾಧ್ಯಕ್ಷರಾಗಲೀ, ಉದ್ಘಾಟಕರಾಗಲೀ ಅಥವಾ ಅಧ್ಯಕ್ಷರಾಗಲೀ ಕರ್ನಾಟಕ ಏಕೀಕರಣವನ್ನು ಹೊರತುಪಡಿಸಿ ಬೇರೇನನ್ನೂ ಪ್ರಸ್ತಾಪಿಸಿದಂತೆ ತೋರುವುದಿಲ್ಲ. ಹತ್ತನೆಯ ಪರಿಷತ್ತಿನ ಉದ್ಘಾಟಕರಾಗಿದ್ದ ಸರ್ದಾರ್ ವಲ್ಲಭ ಭಾಯಿ ಪಟೇಲರು ಭಾಷಾವಾರು ಪ್ರಾಂತ ರಚನೆಯ ಅಗತ್ಯತೆಯನ್ನು ತಿಳಿಸಿ, ಸಧ್ಯದಲ್ಲೇ ಕರ್ನಾಟಕ ಪ್ರಾಂತ ರಚನೆ ಆಗುವುದೆಂದು ತಿಳಿಸಿದ್ದರು. 31-8-1946ರಂದು ದಾವಣಗೆರೆಯಲ್ಲಿ ಕರ್ನಾಟಕಸ್ಥರ ಮಹಾಸಭೆ ನಡೆಯಿತು. ಸ್ವಾಗತಾಧ್ಯಕ್ಷರಾಗಿದ್ದವರು ಉರವಕೊಂಡ ಜಗದ್ಗುರುಗಳು ಮತ್ತು ಮಹಾ ಸಭೆಯನ್ನು ಉದ್ಘಾಟಿಸಿದವರು ಕೆ.ಆರ್.ಕಾರಂತರು. ಸಭೆಯ ಅಧ್ಯಕ್ಷತೆಯನ್ನು ಎಂ.ಪಿ.ಪಾಟೀಲರು ವಹಿಸಿದ್ದರು. ಬಹುತೇಕ ಕರ್ನಾಟಕದ ಎಲ್ಲಾ ಭಾಗಗಳಿಂದ, ಎಲ್ಲಾ ರಾಜಕೀಯ ಪಕ್ಷÀಗಳ ಪ್ರತಿನಿಧಿಗಳು ಮಹಾಸಭೆಗೆ ಬಂದಿದ್ದರು. ಭಾರತಕ್ಕೆ ಸ್ವಾತಂತ್ರ ಬರುವ ದಿನಗಳು ಹತ್ತಿರದಲ್ಲಿವೆ ಎಂದು ಅಲ್ಲಿದ್ದ ಬಹುತೇಕ ಎಲ್ಲರಿಗೂ ತಿಳಿದಿತ್ತು. ರಾಜಕೀಯ ಘಟನೆ ಸಿದ್ಧವಾಗುವುದಕ್ಕೆ ಮೊದಲೇ ಭಾಷಾವಾರು ಪ್ರಾಂತಗಳ ರಚನೆ ಆಗುವುದು ಒಳಿತು ಹಾಗೂ ಸೂಕ್ತ ಎಂಬುದು ಅನೇಕರ ಅಭಿಪ್ರಾಯವಾಗಿತ್ತು. ಆ ಸಭೆಯಲ್ಲಿ ‘ಸಾಧ್ಯವಾದರೆ ಮೈಸೂರನ್ನು ಒಳಗೊಂಡು, ಅಗತ್ಯವಾದರೆ ಅದನ್ನು ಬಿಟ್ಟು ಕರ್ನಾಟಕ ರಾಜ್ಯ ನಿರ್ಮಾಣವಾಗಬೇಕು’ ಎಂಬ ಗೊತ್ತುವಳಿಯನ್ನು ಬಳ್ಳಾರಿಯ ಕೋ.ಚೆನ್ನಬಸಪ್ಪ ಮಂಡಿಸಿದರು. ಅದನ್ನು ಬೆಂಗಳೂರಿನ ಬಿ.ಬಸವಲಿಂಗಪ್ಪ ಅನುಮೋದಿಸಿದರು. ಗೊತ್ತುವಳಿಗೆ ಕೆಂಗಲ್ ಹನುಮಂತಯ್ಯನವರು ಒಂದು ತಿದ್ದುಪಡಿ ತಂದರು. ಅದು ಪ್ರಮುಖವಾದ ಹಾಗೂ ಬಹು ಮುಖ್ಯವಾದ ತಿದ್ದುಪಡಿ ಆಗಿತ್ತು. ಆ ತಿದ್ದುಪಡಿಯು ‘ಮೈಸೂರನ್ನು ಒಳಗೊಂಡು ಕರ್ನಾಟಕ ರಾಜ್ಯ ನಿರ್ಮಾಣವಾಗಬೇಕು’ ಎಂದಿತ್ತು. ತಿದ್ದುಪಡಿಯ ವಿಷಯದಲ್ಲಿ ಶ್ರೀರಂಗರ ಪಾತ್ರ ಮುಖ್ಯವಾಗಿತ್ತು .ಬ್ರಿಟಿಷ್ ಕರ್ನಾಟಕ, ಸಂಸ್ಥಾನ ಕರ್ನಾಟಕ ಎಂಬ ಭೇದವನ್ನೆಣಿಸದೆ, ಕರ್ನಾಟಕ ಏಕೀಕರಣ ಮತ್ತು ಭಾಷಾನುಗುಣ ಪ್ರಾಂತ ರಚನೆಗೆ ಘಟನಾ ಸಮಿತಿಯಲ್ಲಿ ಆದ್ಯತೆ - ಈ ಎರಡು ವಿಚಾರಗಳಿಗೆ ನಿರ್ಣಯ ಸ್ವೀಕರಿಸಿದ ಮಹಾ ಸಭೆಯು ಮೇಲಿನ ಉದ್ದೇಶ ಸಾಧನೆಗೆ ಮೂವರು ಸದಸ್ಯರ ಸಮಿತಿಯನ್ನು ನೇಮಿಸಿತು. ಆ ಸಮಿತಿಯಲ್ಲಿದ್ದವರೆಂದರೆ, 1)ಎಂ.ಪಿ.ಪಾಟೀಲ, 2)ಎಸ್.ನಿಜಲಿಂಗಪ್ಪ ಮತ್ತು 3) ಶ್ರೀ ಕೆ.ಬಿ.ಜಿನರಾಜ ಹೆಗಡೆ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಆರಂಭವಾದಾಗಿನಿಂದಲೂ ಅದಕ್ಕೆ 1)ಭಾರತಕ್ಕೆ ಸ್ವಾತಂತ್ರ್ಯ ಮತ್ತು 2)ಕರ್ನಾಟಕ ಏಕೀಕರಣ-ಎರಡೂ ಗುರಿಗಳಿದ್ದವು. ಈ ನಿಟ್ಟಿನಲ್ಲಿ ಬ್ರಿಟಿಷ್ ಕರ್ನಾಟಕ ಭಾಗಗಳ ಜನತೆಯ ಪ್ರಯತ್ನಗಳು ಪ್ರಮುಖವಾಗಿದ್ದವು. ಮೊದಮೊದಲಿಗೆ, ಮೈಸೂರು ಸಂಸ್ಥಾನದಲ್ಲಿ ಏಕೀಕರಣಕ್ಕೆ ತೀವ್ರ ವಿರೋಧ ಇಲ್ಲದಿದ್ದರೂ, ಕೆಲವರಿಗೆ ಆಸಕ್ತಿಯಂತೂ ಇರಲಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ಬರುವ ದಿನಗಳು ಹತ್ತಿರವಾದಂತೆಲ್ಲಾ ಎಲ್ಲರಿಗೂ ಕರ್ನಾಟಕ ಏಕೀಕರಣ ಆಗಲೇಬೇಕೆಂಬ ಆಸಕ್ತಿ ಹೆಚ್ಚಿತು.

ಹತ್ತನೆಯ ಕರ್ನಾಟಕ ಏಕೀಕರಣ ಪರಿಷತ್ತು ಮತ್ತು ಮೂವತ್ತೊಂದನೆಯ ಕನ್ನಡ ಸಾಹಿತ್ಯ ಸಮ್ಮೇಳನ

[ಸಂಪಾದಿಸಿ]

ಈಗಾಗಲೇ ತಿಳಿಸಿರುವಂತೆ ಮುಂಬಯಿಯಲ್ಲಿ 1946ರಲ್ಲಿ ನಡೆದ ಹತ್ತನೆಯ ಕರ್ನಾಟಕ ಏಕೀಕರಣ ಪರಿಷತ್ತು ಏಕೀಕರಣದ ವಿಷಯದಲ್ಲಿ ಮಹತ್ವ ಪಡೆಯಿತು. ಕರ್ನಾಟಕ ಏಕೀಕರಣ ಪರಿಷತ್ತಿನ ಹನ್ನೊಂದನೆಯ ಪರಿಷತ್ತು 29-12-1947ರಂದು ಕಾಸರಗೋಡಿನಲ್ಲಿ ನಡೆಯಿತು. ಅದೇ ಸಂದರ್ಭದಲ್ಲಿ , 31ನೆಯ ಕನ್ನಡ ಸಾಹಿತ್ಯ ಸಮ್ಮೇಳನವೂ ಕಾಸರಗೋಡಿನಲ್ಲೇ ನಡೆಯಿತು. ಆ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದವರು ತಿ.ತಾ.ಶರ್ಮ. ಅವರ ಅಧ್ಯಕ್ಷ ಭಾಷಣದಲ್ಲೂ ಏಕೀಕರಣದ ವಿಚಾರ ಪ್ರಸ್ತಾಪವಾಯಿತು. ಏಕೀಕರಣ ಪರಿಷತ್ತಿನ ಅಧ್ಯಕ್ಷತೆಯನ್ನು ವಹಿಸಬೇಕಾಗಿದ್ದ ಎ.ಬಿ.ಶೆಟ್ಟರು ಕಾರಣಾಂತರಗಳಿಂದ ಬರಲಾಗಲಿಲ್ಲ. ಆದ್ದರಿಂದ ಪರಿಷತ್ತಿನ ಅಧ್ಯಕ್ಷತೆಯನ್ನು ಕೇಂದ್ರ ಶಾಸನ ಸಭೆಯ ಆರ್.ಆರ್.ದಿವಾಕರ್ ವಹಿಸಿದರು. ಕೆ.ಆರ್.ಕಾರಂತರು ಪರಿಷತ್ತಿನ ಸ್ವಾಗತಾಧ್ಯಕ್ಷರಾಗಿದ್ದರು. ಪರಿಷತ್ತಿನ ಉದ್ಘಾಟನೆ ಮಾಡಿದವರು ಮೈಸೂರು ಸಂಸ್ಥಾನದ ಎಚ್.ಸಿದ್ದಯ್ಯನವರು. ಭಾರತಕ್ಕೆ ಸ್ವಾತಂತ್ರ ಸಿಕ್ಕ ಮೇಲೂ ಏಕೀಕರಣ ವಿಳಂಬವಾಗುತ್ತಿರುವುದನ್ನು ಬಹುತೇಕ ಎಲ್ಲ ನಾಯಕರೂ ಆಕ್ಷೇಪಿಸಿದರು. ಏಕೀಕರಣಕ್ಕೆ ಇರುವ ಅಡೆ ತಡೆಗಳೇನು ಎಂದು ಸ್ಪಷ್ಟವಾಗಬೇಕು ಎಂಬುದೇ ಬಹು ಮುಖ್ಯ ಪ್ರಶ್ನೆಯಾಗಿತ್ತು. ರಾಜ್ಯಘಟಟನೆ ಜಾರಿಯಾಗುವುದರೊಳಗೆ ಕರ್ನಾಟಕ ಪ್ರಾಂತ ನಿರ್ಮಾಣ ಆಗದದಿದ್ದರೆ ತೀವ್ರ ಚಳವಳಿಯ ಮೂಲಕ ಅದನ್ನು ವಿರೋಧಿಸಲಾಗುವುದು ಎಂದು ಎಚ್ಚರಿಸಿದ ಆ ಸಭೆಯಲ್ಲಿ ಏಳು ಗೊತ್ತುವಳಿಗಳನ್ನು ಸ್ವೀಕರಿಸಲಾಯಿತು.

ಮುಂಬಯಿ ಶಾಸನ ಸಭೆಯಲ್ಲಿ ವಿಷಯ ಮಂಡನೆ

[ಸಂಪಾದಿಸಿ]

1-4-1947ರಂದು ಮುಂಬಯಿ ಶಾಸನ ಸಭೆಯಲ್ಲಿ ಪ್ರತ್ಯೇಕ ಕರ್ನಾಟಕ ರಚನೆಗೆ ಸಂಬಂಧಿಸಿದಂತೆ ಅಂದಾನಪ್ಪ ದೊಡ್ಡಮೇಟಿ ಅವರು ಮಂಡಿಸಿದ ಒಂದು ಖಾಸಗಿ ಗೊತ್ತುವಳಿಯು, ಮುರಾಜಿ ದೇಸಾಯಿ ಅವರ ವಿರೋಧದ ನಡುವೆಯೂ, ಮುಖ್ಯ ಮಂತ್ರಿ ಬಿ.ಜಿ. ಖೇರರು ಸೂಚಿಸಿದ ತಿದ್ದುಪಡಿಗಳೊಂದಿಗೆ, ಪರವಾಗಿ 60 ಮತ್ತು ವಿರುದ್ಧವಾಗಿ 8 ಮತಗಳಿಂದ ಸ್ವೀಕೃವಾತವಾಯಿತು. ಮದರಾಸು ಶಾಸನ ಸಭೆಯಲ್ಲಿ ವಿಷಯ ಮಂಡನೆ : 1947 ಏಪ್ರಿಲ್ 27ರಂದು ಮದರಾಸು ಶಾಸನ ಸಭೆಯಲ್ಲಿ ಪಿ.ಸುಬ್ಬರಾಯನ್ ಅವರು ‘ಭಾರತದ ಸಂವಿಧಾನವನ್ನು ರಚಿಸುವಾಗ ಭಾಷಾನುಗುಣವಾಗಿ ಪ್ರಾಂತಗಳ ಪುನರ್ರಚನೆ ಅತ್ಯಂತ ಅವಶ್ಯಕವಾಗಿದೆ. ಆದ್ದರಿಂದ ಘಟನಾ ಸಮಿತಿಯು ತನ್ನ ಪ್ರಥಮ ಸಭೆಯಲ್ಲೇ ಈ ವಿಷಯವನ್ನು ಕೈಗೆತ್ತಿಕೊಳ್ಳಬೇಕು’ ಎಂದು ನಿರ್ಣಯ ಮಂಡಿಸಿದರು ಘಟನಾ ಸಮಿತಿಯ ನಿರ್ಣಯ : ಸ್ವತಂತ್ರ ಭಾರತದ ಸಂವಿಧಾನವನ್ನು ಸಿದ್ಧಪಡಿಸಲು ರಚಿತವಾಗಿದ್ದ ಘಟನಾ ಸಮಿತಿಯು, ಭಾಷಾವಾರು ಪ್ರಾಂತ ರಚನೆಯ ವಿಚಾರವನ್ನೂ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಬೇಕಾಗಿತ್ತು. 1946ರ ಡಿಸೆಂಬರ್ನಲ್ಲಿ ಘಟನಾ ಸಮಿತಿಯ ಸಭೆಯು ದೆಹಲಿಯಲ್ಲಿ ಒಂದು ವಾರ ಕಾಲ ನಡೆದಾಗ. ಭಾಷಾವಾರು ಪ್ರಾಂತ ರಚನೆಯನ್ನು ಕುರಿತು ಕರ್ನಾಟಕದ ಪರ ವಾದ ಮಂಡಿಸುವವರಿಗೆ ನೆರವಾಗಲು ನೆಗಳೂರು ರಂಗನಾಥ ಹೋಗಿದ್ದರು. ಇದ್ದಕ್ಕಿದ್ದಂತೆ ರಂಗನಾಥರು ಶ್ರೀರಂಗರನ್ನು ದೆಹಲಿಗೆ ಕರೆಸಿಕೊಂಡರು. ಆ ಸಮಯದಲ್ಲಿ ಒಂದು ದಿನ(25-1-1947) ಶ್ರೀರಂಗರು ಕರ್ನಾಟಕದ ಇಬ್ಬರು ಕಾಂಗ್ರೆಸ್ ನಾಯಕರ ಜೊತೆಗೆ ನೆಹರೂ ಅವರನ್ನು ಕಂಡು, ಭಾಷಾವಾರು ಪ್ರಾಂತ ರಚನೆಯ ಅವಶ್ಯಕತೆ ಮತ್ತು ಅಗತ್ಯತೆಗಳನ್ನು ಕುರಿತು ವಿವರಿಸಿದರು. ಅಂದೇ ಘಟನಾ ಸಮಿತಿಯ ಸಭೆಯಲ್ಲಿ ಭಾಷಾವಾರು ಪ್ರಾಂತ ರಚನೆಯ ಬಗ್ಗೆ ಚರ್ಚೆ ನಡೆದು, ಆ ಸಂಬಂಧ ವರದಿಯನ್ನು ಸಿದ್ಧಪಡಿಸಲು ಎಂಟು ಜನರ ಉಪ ಸಮಿತಿಯೊಂದನ್ನು ರಚಿಸಲಾಯಿತು.

ಬೆಂಗಳೂರು ಮತ್ತು ಬೀರೂರುಗಳ ಕಾಂಗ್ರೆಸ್ ಅಧಿವೇಶನ

[ಸಂಪಾದಿಸಿ]

10-8-1947ರಂದೇ ಮೈಸೂರಿನ ಮಹಾರಾಜರು ಭಾರತ ಒಕ್ಕೂಟದಲ್ಲಿ ಸೇರುವ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದರೆ ಭಾರತಕ್ಕೆ ಸ್ವಾತಂತ್ರ ಬಂದ 15-8-1947ರಂದು ಮೈಸೂರು ಸಂಸ್ಥಾನ ಅದರಲ್ಲಿ ಸೇರಲಿಲ್ಲ. ಮೈಸೂರು ಸಂಸ್ಥಾನದ ಜನತೆ ಮೈಸೂರು ಚಲೋ ಚಳವಳಿ ಮಾಡಿದರು. 24-10-1947ರಂದು ಮೈಸೂರಿನಲ್ಲಿ ಜವಾಬ್ದಾರಿ ಸರ್ಕಾರವು ಅಸ್ತಿತ್ವಕ್ಕೆ ಬಂದಿತು.ಕೆ.ಸಿ.ರೆಡ್ಡಿ ಅವರು ಮೊದಲ ಮುಖ್ಯ ಮಂತ್ರಿಯಾದರು. 6-11-1948ರಂದು ಬೀರೂರಿನಲ್ಲಿ ನಡೆದ ಅಖಿಲ ಮೈಸೂರು ಕಾಂಗ್ರೆಸ್ ಅಧಿವೇಶನದಲ್ಲಿ ಕೆ.ಸಿ.ರೆಡ್ಡಿ ಅವರು ಕರ್ನಾಟಕ ಪ್ರಾಂತ ರಚನೆಗೆ ಮೈಸೂರು ರಾಜ್ಯವು ಅಡ್ಡಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಅದಕ್ಕೆ ಮೊದಲೇ 1946ರ ನವೆಂಬರ್ನಲ್ಲಿ, ಬೆಂಗಳೂರಿನ ಸುಭಾಷ್ ನಗರದಲ್ಲಿ ನಡೆದ ಮೈಸೂರು ಕಾಂಗ್ರೆಸ್ ಸಮಿತಿಯ ವಾರ್ಷಿಕ ಸಭೆಯಲ್ಲಿ, ಬೇರೆ ಬೇರೆ ಆಡಳಿತಗಳಲ್ಲಿ ಹರಿದು ಹಂಚಿಹೋಗಿರುವ ಭಾಗಗಳನ್ನೆಲ್ಲಾ ಒಗ್ಗೂಡಿಸಿ, ಶೀಘ್ರವೇ ಕರ್ನಾಟಕ ರಚನೆ ಆಗಬೇಕೆಂಬ ಗೊತ್ತುವಳಿ ಸ್ವೀಕರಿಸಿತ್ತು.

ಬೀರೂರಿನ ಕಾಂಗ್ರೆಸ್ ಅಧಿವೇಶನದಲ್ಲಿ ಆಗಿದ್ದ ನಿರ್ಣಯದಂತೆ ನೇಮಕಗೊಂಡ ಸಮಿತಿಯಲ್ಲಿ ಟಿ.ಸಿದ್ಧಲಿಂಗಯ್ಯ, ಟಿ.ಸುಬ್ರಹ್ಮಣ್ಯ, ಎಸ್.ಚನ್ನಯ್ಯ, ಕೆ.ಜಿ. ಒಡೆಯರ್, ಜಿ.ಬಂಡಿ ಗೌಡ ಮತ್ತು ನಾಮಕರಣಗೊಂಡಿದ್ದ ಬಿ.ಪಿ.ಹಾಲಪ್ಪ ಇದ್ದರು.ಈ ಸಮಿತಿಯು ಕರ್ನಾಟಕದ ಎಲ್ಲ ಭಾಗಗಳಲ್ಲಿ ಪ್ರವಾಸ ಮಾಡಿ ತನ್ನ ವರದಿಯನ್ನು ಸಲ್ಲಿಸಿತು.

ಧರ್ ಆಯೋಗ

[ಸಂಪಾದಿಸಿ]

ಭಾರತದ ಘಟನಾ ಸಮಿತಿಯು ಭಾಷಾವಾರು ಪ್ರಾಂತ ರಚನೆಗೆ ಸಂಬಂಧಿಸಿದಂತೆ ವರದಿ ನೀಡಲು ಅಲಹಾಬಾದ್ ಹೈಕೋರ್ಟಿನ ನಿವೃತ್ತ ನ್ಯಾಯಾಧೀಶ ಎಸ್.ಕೆ.ಧರ್ ಅವರ ಅಧ್ಯಕ್ಷತೆಯಲ್ಲಿ 17-6-1948 ರಂದು ಆಯೋಗವೊದನ್ನು ನೇಮಕ ಮಾಡಿತು. ಆ ಆಯೋಗದಲ್ಲಿ ಕರ್ನಾಟಕದ ಪರವಾಗಿ ಟೇಕೂರು ಸುಬ್ರಹ್ಮಣ್ಯಂ ಮತ್ತು ಆರ್.ಆರ್.ದಿವಾಕರ್ ಸಹಾಯಕ ಸದಸ್ಯರಾಗಿದ್ದರು. ಆಂಧ್ರ, ಕರ್ನಾಟಕ, ಕೇರಳ ಮತ್ತು ಮಹಾರಾಷ್ಟ್ರ - ಇವುಗಳಲ್ಲಿ ಯಾವ ಹೊಸ ಪ್ರಾಂತಗಳ ರಚನೆ ಆಗಬೇಕು ಮತ್ತು ಇವುಗಳ ಖಚಿತ ಗಡಿಯ ನಿರ್ಧಾರ ಆಗುವವರೆಗೆ ತಾತ್ಕಾಲಿಕ ಗಡಿ ಯಾವುದಿರಬೇಕು ಹಾಗೂ ಈ ಪ್ರಾಂತಗಳ ನಿರ್ಮಾಣದಿಂದ ಅವುಗಳ ಆಡಳಿತ , ಆರ್ಥಿಕ ಮತ್ತು ಇತರ ವಿಷಯಗಳ ಮೇಲೆ ಆಗುವ ಪರಿಣಾಮಗಳೇನು ಎಂಬುದನ್ನು ಆಯೋಗ ಅಧ್ಯಯನ ಮಾಡಿ ವರದಿ ಸಲ್ಲಿಸಬೇಕಾಗಿತ್ತು. 19-7-1948ರಂದು ಮೊದಲ ಬಾರಿಗೆ ಹೊಸದೆಹಲಿಯಲ್ಲಿ ಸಭೆ ಸೇರಿದ ಆಯೋಗವು ಭಾಷಾವಾರು ಪ್ರಾಂತ ರಚನೆಯ ಅಗತ್ಯತೆ, ವಿಧಾನ, ಪರಿಣಾಮ ಇತ್ಯಾದಿಗಳ ಬಗ್ಗೆ ತಿಳಿಯಲು ಇಪ್ಪತ್ತು ಪ್ರಶ್ನೆಗಳನ್ನು ಸಿದ್ಧಪಡಿಸಿ, 16-8-1948, ಅಂದರೆ 28 ದಿನಗಳ ಒಳಗಾಗಿ ಉತ್ತರವನ್ನು ದೆಹಲಿಗೆ ತಲುಪಿಸುವಂತೆ ಸೂಚಿಸಿ, ಪ್ರಶ್ನೆಗಳನ್ನು ಪ್ರಕಟಿಸಿತು. ಆಯೋಗದ ಕಾಟಾಚಾರದ ಕೆಲಸವನ್ನು ಜನತೆ ಹಗುರವಾಗಿ ಕಾಣಲಿಲ್ಲ. ಆಯೋಗದ ಪ್ರಶ್ನೆಗಳಿಗೆ ಗಂಬೀರವಾಗಿ ಉತ್ತರಿಸಿತು. ಆಗಸ್ಟ್‌ ತಿಂಗಳ ಕೊನೆಯ ವಾರದಲ್ಲಿ ಆಯೋಗವು ದೆಹಲಿಯಲ್ಲೇ ಕೆಲವು ಸಾಕ್ಷಿಗಳನ್ನು ಪರಿಶೀಲಿಸಿತು. ಸೆಪ್ಟೆಂಬರ್, ಅಕ್ಟೋಬರ್ ತಿಂಗಳುಗಳಲ್ಲಿ ವಿಶಾಖ ಪಟ್ಟಣ, ಮದರಾಸು, ಮದುರೆ, ಮಂಗಳೂರು, ಕಲ್ಲಿಕೋಟೆ, ಕೊಯಮತ್ತೂರು, ನಾಗಪುರ, ಹುಬ್ಬಳ್ಳಿ, ಪುಣೆ ಮತ್ತು ಮುಂಬಯಿಗಳಲ್ಲಿ ಸಾಕ್ಷಿಗಳನ್ನು ಸಂದರ್ಶಿಸಿ, ಮಾಹಿತಿ ಸಂಗ್ರಹಿಸಿ, 1000ದಷ್ಟು ಮನವಿಗಳನ್ನು ಸ್ವೀಕರಿಸಿ, ಸುಮಾರು 700 ಸಾಕ್ಷಿಗಳನ್ನು ಪರೀಕ್ಷಿಸಿದ್ದಾಗಿ ತಿಳಿಸಿದ ಆಯೋಗವು ನವೆಂಬರ್ 20 ಮತ್ತು 21 ರಂದು ಸಭೆ ಸೇರಿ, ವಿಚಾರ ವಿನಿಮಯ ಮಾಡಿ ಡಿಸೆಂಬರ್ 10ರಂದು ತನ್ನ ವರದಿಯನ್ನು ಘಟನಾ ಸಮಿತಿಗೆ ಸಲ್ಲಿಸಿತು.

ಧರ್ ಆಯೋಗದ ಪ್ರಶ್ನಾವಳಿಗೆ ದಕ್ಷಿಣ ಕನ್ನಡ ಜಿಲ್ಲೆ, ನೀಲಗಿರಿ ಜಿಲ್ಲೆ, ಕೊಯಮತ್ತೂರು, ಪೆನುಗೊಂಡ, ಬಳ್ಳಾರಿ, ಬೆಜವಾಡ, ಮದ್ರಾಸ್,ಕೊಳ್ಳೇಗಾಲ, ಹೊಸೂರು ಮತ್ತು ಕಾಸರಗೋಡಿನ ಹಲವು ನಾಯಕರು ಉತ್ತರ ಸಲ್ಲಿಸಿದ್ದರು. ಸೊಲ್ಲಾಪುರದ ಜನತೆಯೂ ಜಯದೇವಿ ತಾಯಿ ಲಿಗಾಡೆ ಅವರ ನೇತೃತ್ವದಲ್ಲಿ ತಾವು ಕರ್ನಾಟಕಕ್ಕೆ ಸೇರುವುದಾಗಿ ಮನವಿ ಮಾಡಿತು. ಧರ್ ಆಯೋಗವು ಸಲ್ಲಿಸಿದ ವರದಿಯಲ್ಲಿ, ಭಾಷಾವಾರು ಪ್ರಾಂತ ರಚನೆಗೆ ವಿಶೇಷವಾಗಿ ಆಂಧ್ರ , ಕರ್ನಾಟಕ ಮತ್ತು ಕೇರಳಗಳಲ್ಲಿರುವ ಭಿನ್ನಾಭಿಪ್ರಾಯಗಳನ್ನು ಪ್ರಸ್ತಾಪಿಸಲಾಗಿತ್ತು. ಈ ಭಿನ್ನಾಭಿಪ್ರಾಯಗಳು ಭಾಷಾವಾರು ಪ್ರಾಂತ ರಚನೆಗೆ ಅಡ್ಡಿಯಾಗಿವೆ ಎಂದು ತಿಳಿಸಿದ ಆಯೋಗವು ಕರ್ನಾಟಕ ಪ್ರಾಂತ ರಚನೆಯೇ ಹೆಚ್ಚು ತೊಡಕಾಗಿದೆ ಎಂದು ಸೂಚನೆ ನೀಡಿತ್ತು. ಆಯೋಗವು, ‘ನಮ್ಮ ಅಭಿಪ್ರಾಯದಲ್ಲಿ ಸಧ್ಯಕ್ಕೆ ರಾಷ್ಟ್ರವು ಗಂಡಾಂತರ ಪರಿಸ್ಥಿತಿಯಲ್ಲಿದೆ. ಈಗಿನ ಕಾಲದಲ್ಲಿ ಹಿಂದುಸ್ಥಾನವನ್ನೊಂದು ರಾಷ್ಟ್ರವನ್ನಾಗಿಸುವುದು ಮೊದಲನೇ ಮತ್ತು ಕೊನೆಯ ಅವಶ್ಯಕತೆಯಾಗಿದೆ. 555. ರಾಷ್ಟ್ರೀಯ ಭಾವನೆಗೆ ಪೋಷಕವಿದ್ದುದೆಲ್ಲವನ್ನೂ ಕೈಕೊಳ್ಳತಕ್ಕದ್ದು. ಅದರ ಮಾರ್ಗದಲ್ಲಿ ತೊಂದರೆಗಳನ್ನೊಡ್ಡುವ ಎಲ್ಲವನ್ನೂ ನಿರಾಕರಿಸತಕ್ಕದ್ದು ಅಥವಾ ತಡೆಹಿಡಿಯತಕ್ಕದ್ದು’ ಎಂದು ತಿಳಿಸಿ ಸಧ್ಯದ ಪರಿಸ್ಥಿತಿಯಲ್ಲಿ ಭಾಷಾವಾರು ಪ್ರಾಂತ ರಚನೆ ಸಮರ್ಥನೀಯವಲ್ಲ ಎಂದು ತಿಳಿಸಿತು.

ಜೆ.ವಿ.ಪಿ. (ತ್ರಿಮೂರ್ತಿ) ಸಮಿತಿ

[ಸಂಪಾದಿಸಿ]

ಧರ್ ಆಯೋಗದ ವರದಿ ಸಲ್ಲಿಕೆ ಆದ ಒಂದು ವಾರದಲ್ಲೇ (ಡಿಸೆಂಬರ್ 18, 19) ರಾಷ್ಟ್ರೀಯ ಕಾಂಗ್ರೆಸ್ನ ಐವತ್ತೈದನೆಯ ಅಧಿವೇಶನವು ಜಯಪುರದಲ್ಲಿ ನಡೆಯಿತು. ಆಗ ಧರ್ ಆಯೋಗದ ವರದಿಯನ್ನು ಪರಿಶೀಲಿಸಿ, ಮೂರು ತಿಂಗಳ ಒಳಗೆ ವರದಿ ಮಾಡಲು ಮೂವರು ಸದಸ್ಯರ ಸಮಿತಿಯೊಂದನ್ನು ರಚಿಸಲಾಯಿತು. ಆ ಸಮಿತಿಯಲ್ಲಿ ಸರ್ದಾರ್ ವಲ್ಲಭ ಭಾಯಿ ಪಟೇಲ್, ಪಟ್ಟಾಭಿ ಸೀತಾರಾಮಯ್ಯ ಮತ್ತು ಜವಹರಲಾಲ್ ನೆಹರೂ ಇದ್ದರು. ಈ ತ್ರಿಮೂರ್ತಿ(ಜೆ.ವಿ.ಪಿ.)ಸಮಿತಿಯ ವರದಿಯು 1-4-1949 ರಂದು ಪ್ರಕಟವಾಯಿತು. ಧರ್ ಆಯೋಗದ ವರದಿಯನ್ನು ಜೆ.ವಿ.ಪಿ.ಸಮಿತಿಯೂ ಎತ್ತಿ ಹಿಡಿಯಿತು. ಕೇರಳ ಮತ್ತು ಕರ್ನಾಟಕ ಪ್ರಾಂತ ರಚನೆಯು ಸಮಸ್ಯಾತ್ಮಕವಾಗಿದೆ ಎಂಬ ಅಭಿಪ್ರಾಯದಿಂದ, ಹೊಸದಾಗಿ ರಾಷ್ಟ್ರ ನಿರ್ಮಾಣವಾಗುತ್ತಿರುವ ಸಂದರ್ಭದಲ್ಲಿ ಭಾಷಾವಾರು ಪ್ರಾಂತ ರಚನೆಯು ರಾಷ್ಟ್ರದ ಐಕ್ಯತೆ ಹಾಗೂ ಆರ್ಥಿಕ ಪ್ರಗತಿಗೆ ಧಕ್ಕೆ ತರಬಹುದು ಎಂಬ ಸಂಶಯವನ್ನು ಜೆ.ವಿ.ಪಿ ಸಮಿತಿ ವ್ಯಕ್ತಪಡಿಸಿತು.

8-5-1949ರಂದು ಕರ್ನಾಟಕ ಪ್ರಾಂತಿಕ ಸಮಿತಿಯು ಹುಬ್ಬಳ್ಳಿಯಲ್ಲಿ ಸಭೆ ಸೇರಿ, ತ್ರಿಮೂರ್ತಿ ಸಮಿತಿಯ ವರದದಿಯ ಬಗ್ಗೆ ತನ ಅತೃಪ್ತಿ ವ್ಯಕ್ತಪಡಿಸಿತು. ಅಂತೆಯೇ 20-5-1949ರಂದು ಹುಬ್ಬಳ್ಳಿಯಲ್ಲೇ ಕರ್ನಾಟಕ ಏಕೀಕರಣ ಮಹಾ ಸಮಿತಿಯು ಸಭೆ ಸೇರಿ ‘ಕರ್ನಾಟಕ ಪ್ರಾಂತ ನಿರ್ಮಾಣವಾಗದಿದ್ದರೆ ಕನ್ನಡ ನಾಡಿನಲ್ಲೆಲ್ಲಾ ಅತ್ಯಂತ ಅತೃಪ್ತಿ ಮತ್ತು ಅಸಂತೋಷಗಳುಂಟಾಗಿ ಜನತೆಯ ತಾಳ್ಮೆಯು ಕೊನೆಯ ಮಟ್ಟಕ್ಕೆ ಮುಟ್ಟುತ್ತದೆ ‘ ಎಂದು ಗೊತ್ತುವಳಿ ಸ್ವೀಕರಿಸಿತು. ಅನಂತರ 23-5-1949ರಂದು ಎಂಟು ಸದಸ್ಯರ ಶಿಷ್ಟ ಮಂಡಳವು ಡೆಹರಾಡೂನ್ನಲ್ಲಿ ಕಾಂಗ್ರೆಸ್ ಸಮಿತಿಯನ್ನು ಕಂಡು ಕರ್ನಾಟಕದ ಜನತೆಗೆ ಆಗಿರುವ ಅತೀವ ನಿರಾಶೆಯನ್ನು ತಿಳಿಸಿ, ಭಾಷಾವಾರು ಪ್ರಾಂತ ರಚನೆಯು ಒಮ್ಮೆಗೇ ಆಗುವುದು ಅವಶ್ಯಕ ಮತ್ತು ನ್ಯಾಯಯುತ ಎಂದು ಮನವರಿಕೆ ಮಾಡಿತು. ಆದರೆ ಕೇಂದ್ರ ಕಾಂಗ್ರೆಸ್ ಸಮಿತಿಯು 16-11-1949ರಂದು ಕೇವಲ ಆಂಧ್ರಪ್ರದೇಶ ರಚನೆಗೆ ಗೊತ್ತುವಳಿ ಸ್ವೀಕರಿಸಿತು. ಇದನ್ನು ಪ್ರತಿಭಟಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು 3-12-1949ರಂದು ಸಭೆ ಸೇರಿ ಕರ್ನಾಟಕ ಪ್ರಾಂತ ರಚನೆಗೆ ಅಡ್ಡಿಯಾಗಿರುವ ಕಾಂಗ್ರಸ್ನ ನಿರ್ಣಯವನ್ನು ವಿರೋಧಿಸಿ, ಕೇಂದ್ರ ಹಾಗೂ ಪ್ರಾಂತ ಶಾಸನ ಸಭೆಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದ 12 ಜನರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ, ರಾಜೀನಾಮೆ ಪತ್ರಗಳನ್ನು ಕೆ.ಪಿ.ಸಿ.ಸಿ. ಅಧ್ಯಕ್ಷರಿಗೆ ತಲುಪಿಸಿದರು. ಆ ಹನ್ನೆರಡು ಜನರಲ್ಲಿ ಎಸ್.ನಿಜಲಿಂಗಪ್ಪನವರೂ ಒಬ್ಬರಾಗಿದ್ದರು.ಇದೇ ಸಂದರ್ಭದಲ್ಲಿ ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿಯೂ ಕರ್ನಾಟಕ ಪ್ರಾಂತ ರಚನೆಯಲ್ಲಿ ಮೈಸೂರು ಮಹಾರಾಜರು ಅಡ್ಡಿಯಾಗುವುದಿಲ್ಲ ಎಂದು ತಿಳಿಸಿತ್ತು.

22-12-1949ರಂದು ಕಾಂಗ್ರೆಸ್ ಪಕ್ಷದ ಕೇಂದ್ರ ಕಾರ್ಯಕಾರೀ ಸಮಿತಿಯು ಸಮಾವೇಶಗೊಂಡಾಗ ಹಾಜರಿದ್ದ ಕೆ.ಪಿ.ಸಿ.ಸಿ. ಅಧ್ಯಕ್ಷರಾದ ಎಸ್.ನಿಜಲಿಂಗಪ್ಪನವರು ಭಾಷಾವಾರು ಪ್ರಾಂತ ರಚನೆಯ ಬಗ್ಗೆ ಕನ್ನಡಿಗರ ಅಭಿಪ್ರಾಯಗಳನ್ನು ತಿಳಿಸಿ, ಆಗಲೇ ತಮ್ಮ ವಶಕ್ಕೆ ಬಂದಿದ್ದ 12 ರಾಜೀನಾಮೆಗಳನ್ನು ಸಮಿತಿಗೆ ಸಲ್ಲಿಸಿದರು. ಸಮಿತಿಯು ರಾಜೀನಾಮೆಗಳನ್ನು ಸ್ವೀಕರಿಸಲಿಲ್ಲ. ಈ ಮಧ್ಯೆ ಆಂಧ್ರಪ್ರದೇಶದ ರಚನೆಯ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲೆಯ ವಿಭಜನೆಗೆ ಆಗುತ್ತಿದ್ದ ಸನ್ನಾಹವನ್ನು ಆದವಾನಿಯ ಜನ ವಿರೋಧಿಸಿದರು. 9-1-1950ರಂದು ಗದಗದಲ್ಲಿ ನಡೆದ ಕೆ.ಪಿ.ಸಿ.ಸಿ.ಸಭೆಯು ಆಂಧ್ರಪ್ರದೇಶದ ರಚನೆಗೆ ಮುಂದಾಗಿ ಕರ್ನಾಟಕ ಪ್ರಾಂತ ರಚನೆಗೆ ವಿಳಂಬ ಮಾಡುತ್ತಿರುವ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ರಾಜೀನಾಮೆ ಸಲ್ಲಿಕೆಗೆ ಅನುಮತಿ ಕೇಳಿದರು.

26-1-1950ರಂದು ಭಾರತವು ಗಣರಾಜ್ಯವಾಯಿತು. ಆದರೆ ಭಾಷಾವಾರು ಪ್ರಾಂತ ರಚನೆ ಆಗಲಿಲ್ಲ. 20-4-1951ರಂದು ರಾಷ್ಟ್ರೀಯ ಕಾಂಗ್ರೆಸ ಅಧ್ಯಕ್ಷರಾದ ಪುರುಷೋತ್ತಮ ದಾಸ್ ಟಂಡನ್ ಬೆಂಗಳೂರಿಗೆ ಬಂದಿದ್ದಾಗ, ಬೆಂಗಳೂರಿನ ಏಕೀಕರಣ ಸಂಘವು ನಗರದ ಪ್ರಮುಖರ ಜೊತೆಗೆ ಅವರನ್ನು ಸನ್ಮಾನಿಸಿ, ಕರ್ನಾಟಕ ಪ್ರಾಂತ ರಚನೆಗೆ ಅವಕಾಶ ಕಲ್ಪಿಸಲು ಮನವಿ ಮಾಡಿತು. ಅದೇ ವರ್ಷ ಜುಲೈ ತಿಂಗಳ 13 ರಂದು ಬೆಂಗಳೂರಿನ ಸರ್ ಕೆ.ಪಿ.ಪುಟ್ಟಣ್ಣ ಚೆಟ್ಟಿ ಟೌನ್ಹಾಲ್ನಲ್ಲಿ ಅಖಿಲ ಕರ್ನಾಟಕ ಪ್ರಾಂತ ರಚನಾ ಸಮ್ಮೇಳನ ನಡೆಯಿತು. ಅದೇ ಸಮಯದಲ್ಲಿ ಲಾಲ್ಬಾಗಿನ ಗಾಜಿನ ಮನೆಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯೂ ಸಮಾವೇಶಗೊಂಡಿತ್ತು. ಮಹಾರಾಷ್ಟ್ರ, ಮದ್ರಾಸ್ ಮತ್ತು ಆಂಧ್ರ ಪ್ರದೇಶದ ಪ್ರತಿನಿಧಿಗಳೆಲ್ಲ ಸೇರಿದ್ದ ಸಮಾವೇಶದಲ್ಲಿ ಎಲ್ಲರೂ ಕರ್ನಾಟಕ ಏಕೀಕರಣವನ್ನು ಬೆಂಬಲಿಸಿ ಮಾತನಾಡಿದರು.

ಪಕ್ಷೇತರ ಕರ್ನಾಟಕ ಏಕೀಕರಣ ಪರಿಷತ್ತು

[ಸಂಪಾದಿಸಿ]

ಕರ್ನಾಟಕದ ಅನೇಕ ನಾಯಕರಿಗೆ ಕಾಂಗ್ರೆಸ್ಅನ್ನು ನಂಬಿದರೆ ಕರ್ನಾಟಕ ಏಕೀಕರಣವು ಕನಸಿನ ಮಾತಾಗಬಹುದೆಂದು ತೋರಿತು. ಆ ಕಾರಣದಿಂದ ಪಕ್ಷೇತರ ಕರ್ನಾಟಕ ಏಕೀಕರಣ ಪರಿಷತ್ತನ್ನು ನಡೆಸಲು ಮುಂದಾದರು. ಹೊಸಮನಿ ಸಿದ್ದಪ್ಪನವರ ನೇತೃತ್ವದಲ್ಲಿ ಮೊದಲ ಪಕ್ಷೇತರ ಕರ್ನಾಟಕ ಏಕೀಕರಣ ಪರಿಷತ್ತು 1951ರ ಮೇ 25 ಮತ್ತು 26ರಂದು ಸಮಾವೇಶಗೊಂಡಿತು. ಇದರಲ್ಲಿ ಕನ್ನಡ ಪ್ರದೇಶಗಳ ಬಹುತೇಕ ಎಲ್ಲ ರಾಜಕೀಯ ಪಕ್ಷÀಗಳೂ ಒಂದಾದವು. ಈ ಪರಿಷತ್ತಿನಲ್ಲಿ ಮುಂಬಯಿ, ಮದರಾಸು ಮತ್ತು ಹೈದರಾಬಾದ್ ಪ್ರಾಂತಗಳ ಕನ್ನಡ ಪ್ರದೇಶಗಳು, ಮೈಸೂರು ಮತ್ತು ಕೊಡಗು ರಾಜ್ಯಗಳನ್ನು ಸೇರಿಸಿ ಕೂಡಲೇ ಕರ್ನಾಟಕ ಪ್ರಾಂತ ರಚನೆ ಆಗಬೇಕು. ಹಾಗೆ ಆಗದಿದ್ದರೆ ಮುಂಬರುವ ಚುನಾವಣೆಗಳಲ್ಲಿ ಕರ್ನಾಟಕ ಪ್ರಾಂತ ರಚನೆಯ ಉದ್ದಿಶ್ಯವನ್ನು ಮುಖ್ಯವಾಗಿ ಹೊಂದಿರುವ ರಾಜಕೀಯ ಪಕ್ಷÀಗಳಿಗೆ ಬೆಂಬಲ ನೀಡಲಾಗುವುದು ಹಾಗೂ ಪ್ರಸ್ತುತ ರಾಜಕೀಯ ಅಧಿಕಾರ ಸ್ಥಾನಗಳಲ್ಲಿರುವ ಕರ್ನಾಟಕದ ಪ್ರತಿನಿಧಿಗಳು ತಮ್ಮ ಸ್ಥಾನಗಳಿಗೆ ಕೂಡಲೇ ರಾಜೀನಾಮೆ ನೀಡಬೇಕು ಎಂಬ ಪ್ರಮುಖ ಗೊತ್ತುವಳಿಗಳನ್ನು ಸ್ವೀಕರಿಸಲಾಯಿತು. ಗೊತ್ತುವಳಿಗಳ ಅನುಷ್ಠಾನಕ್ಕೆ ಸಮಿತಿಯೊಂದು ರಚಿತವಾಯಿತು ಮತ್ತು 1952ರಲ್ಲಿ ಚುನಾವಣೆಗಳು ನಡೆದಾಗ ಕರ್ನಾಟಕ ಏಕೀಕರಣ ಪಕ್ಷÀದ ಅಭ್ಯರ್ಥಿಗಳು ಗುಡಿಸಲಿನ ಗುರುತಿನ ಮೂಲಕ ಚುನಾವಣೆಯಲ್ಲಿ ಸ್ಪರ್ಧಿಸಿದರು.

ಪೊಟ್ಟಿ ಶ್ರೀರಾಮುಲು ಉಪವಾಸ ಮತ್ತು ಮರಣ

[ಸಂಪಾದಿಸಿ]

ಈ ಮಧ್ಯೆ ಆಂಧ್ರ ಪ್ರಾಂತ ರಚನೆಗೆ ಒತ್ತಾಯ ತೀವ್ರವಾಗಿ 15-8-1951ರಿಂದ ಸ್ವಾಮಿ ಸೀತಾರಾಮರು ತಿರುಪತಿಯಲ್ಲಿ ಆಮರಣಾಂತ ಉಪವಾಸ ಕೈಗೊಂಡರು. ಕೇಂದ್ರ ಮತ್ತು ಆಂಧ್ರ ಶಾಸನ ಸಭೆಗಳಲ್ಲಿ ಆಂಧ್ರ ಪ್ರಾಂತ ರಚನೆಯ ವಿಷಯ ಪ್ರಸ್ತಾಪಕ್ಕೆ ಬಂದಿತಾದರೂ ನಿರ್ಣಯಗಳ ಸ್ವೀಕಾರ ಆಗಲಿಲ್ಲ. 1952ರ ಸಾರ್ವತ್ರಿಕ ಚುನಾವಣೆಗಳು ಮುಗಿದ ಅನಂತರ ಜುಲೈ ಎರಡನೆಯ ವಾರ ಲೋಕಸಭೆಯಲ್ಲಿ ವಿರೋಧ ಪಕ್ಷÀಗಳು ಭಾಷಾವಾರು ಪ್ರಾಂತ ರಚನೆಯ ಗೊತ್ತುವಳಿಯನ್ನು ಮಂಡಿಸಿದವು. ಗೊತ್ತುವಳಿಯನ್ನು ವಿರೋಧಿಸಲು ಕಾಂಗ್ರೆಸ್ ಪಕ್ಷÀವು ತನ್ನ ಸದಸ್ಯರಿಗೆ ಆದೇಶ ನೀಡಿತು. ಆದರೆ ವಿಷಯದ ಬಗ್ಗೆ ಚರ್ಚೆ ನಡೆದಾಗ ಎಸ್.ನಿಜಲಿಂಗಪ್ಪನವರು ಭಾಷಾವಾರು ಪ್ರಾಂತ ರಚನೆಯ ಪರವಾಗಿಯೇ ವಿಚಾರಗಳನ್ನು ಮಂಡಿಸಿದರು. ಲೋಕಸಭೆಯಲ್ಲಿ ಗೊತ್ತುವಳಿಯು ಅತ್ಯಧಿಕ ಬಹುಮತದಿಂದ ಬಿದ್ದುಹೋಯಿತು. ಆಂಧ್ರ ಪ್ರಾಂತ ರಚನೆ ವಿಳಂಬವಾಗುತ್ತಿರುವುದನ್ನು ಸಹಿಸದ ತೆಲುಗರು ಪುನಃ ಸತ್ಯಾಗ್ರಹ, ಚಳವಳಿ ಇತ್ಯಾದಿಗಳನ್ನು ಆರಂಭಿಸಿದರು. ಆಗಲೇ ಆಂಧ್ರದ ಪೊಟ್ಟಿ ಶ್ರೀರಾಮುಲು ಅವರು 58 ದಿನಗಳ ಉಪವಾಸದ ಅನಂತರ 15-12-1952ರಂದು ನಿಧನರಾದರು. ಕೇಂದ್ರ ಸರ್ಕಾರವು ಪರಿಸ್ಥಿತಿಯ ಗಂಭೀರತೆಯನ್ನು ಗಮನಿಸಿತು. 19-12-1952ರಂದು ಲೋಕಸಭೆಯಲ್ಲಿ ವಿಷಯದ ಪ್ರಸ್ತಾವನೆಯಾಗಿ, ಮದ್ರಾಸ್ ನಗರವನ್ನು ಹೊರತುಪಡಿಸಿ ಆಂಧ್ರ ಪ್ರಾಂತ ರಚನೆಗೆ ಮುಂದಾದ ಕೇಂದ್ರ ಸರ್ಕಾರವು, ಈ ಬಗ್ಗೆ ವರದಿ ನೀಡಲು ಕೆ.ಎನ್.ವಾಂಛೂ ಸಮಿತಿಯನ್ನು ನೇಮಿಸಿತು.

ನಾನಲ್ ನಗರ ಅಧಿವೇಶನ

[ಸಂಪಾದಿಸಿ]

1953ರ ಜನವರಿ ತಿಂಗಳಿನಲ್ಲಿ ಹೈದರಾಬಾದ್ನ ನಾನಲ ನಗರದಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್ನ ವಾರ್ಷಿಕಾಧಿವೇಸನ ನಡೆದಾಗ ಮೈಸೂರು ರಾಜ್ಯದ ಮುಖ್ಯ ಮಂತ್ರಿ ಕೆ.ಹನುಮಂತಯ್ಯನವರು ಕರ್ನಾಟಕ ಪ್ರಾಂತ ರಚನೆಗೆ ಮೈಸೂರು ಸಂಸ್ಥಾನವು ಅಡ್ಡಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು. ಆ ಅಭಿಪ್ರಾಯವನ್ನು ಹಾರನಹಳ್ಳಿ ರಾಮಸ್ವಾಮಿ ಸಮರ್ಥಿಸಿದರು.

ವಾಂಛೂ ಸಮಿತಿ

[ಸಂಪಾದಿಸಿ]

ಆಂದ್ರ ಪ್ರಾಂತ ರಚನೆಯ ಬಗ್ಗೆ ಅಧ್ಯಯನ ಮಾಡಿ ವರದಿ ಸಲ್ಲಿಸಲು ಕೇಂದ್ರ ಸರ್ಕಾರವು ರಾಜಸ್ತಾನದ ಶ್ರೇಷ್ಠ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಕೆ.ಎನ್.ವಾಂಛೂ ಅವರನ್ನು 5-1-1953ರಂದು ನೇಮಿಸಿತು. 31-1-1953 ಅಂದರೆ ಕೇವಲ 26 ದಿನಗಳ ಒಳಗೆ ಆಯೋಗವು ವರದಿಯನ್ನು ಸಲ್ಲಿಸಬೇಕಾಗಿತ್ತು. ವಾಂಛೂ ಅನೆಕ ಸಂಘ-ಸಂಸ್ಥೆಗಳ ಮತ್ತು ರಾಜಕೀಯ ಪಕ್ಷÀಗಳ ಪ್ರತಿನಿಧಿಗಳಿಂದ ಮನವಿಗಳನ್ನು ಸ್ವೀಕರಿಸಿದರು.ವಾದ-ಪ್ರತಿ ವಾದಗಳನ್ನು ಕೇಳಿದರು. ಆಯೋಗವು ಕೆ.ಪಿ.ಸಿ.ಸಿ ಅಧ್ಯಕ್ಷ ಎಸ್.ನಿಜಲಿಂಗಪ್ಪ ಅವರನ್ನೂ ಭೇಟಿ ಮಾಡಿತ್ತು. 7-2-2953ರಂದು ವಾಂಛೂ ತಮ್ಮ ವರದಿಯನ್ನು ಸಲ್ಲಿಸಿದರು. ಹೈದರಾಬಾದ್ ಮತ್ತು ಮದ್ರಾಸ್ ರಾಜ್ಯಗಳಲ್ಲಿ ಸೇರಿರುವ, ತೆಲುಗೇ ಹೆಚ್ಚು ಜನರ ಮಾತೃಭಾಷೆ ಆಗಿರುವ ಹನ್ನೊಂದು ಜಿಲ್ಲೆಗಳನ್ನು ಮಾತ್ರ ಸೇರಿಸಿ ಆಂಧ್ರ ಪ್ರಾಂತ ರಚನೆ ಮಾಡಲು ಆಯೋಗವು ಶಿಫಾರ್ಸು ಮಾಡಿತು. ಬಳ್ಳಾರಿ ಜಿಲ್ಲೆಯು ಆಂಧ್ರದೊಡನೆ ಸೇರಲು ಹಲವು ತೊಂದರೆಗಳಿದ್ದುದನ್ನು ಆಯೋಗವು ತಿಳಿಸಿತು. 1921ರಲ್ಲಿ ಕೇಳಕರ್ ಅವರ ಶಿಪಾರ್ಸಿನ ಮೇಲೆ ಬಳ್ಳಾರಿ ಜಿಲ್ಲೆಯ ಆಲೂರು, ಆದವಾನಿ ಮತ್ತು ರಾಯದುರ್ಗ ತಾಲ್ಲೂಕುಗಳು ಆಂಧ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ವ್ಯಾಪ್ತಿಗೆ ಸೇರಿತ್ತು.

ಮಿಶ್ರಾ ಸಮಿತಿ

[ಸಂಪಾದಿಸಿ]

ಬಳ್ಳಾರಿ ಜಿಲ್ಲೆಯ ಬಗ್ಗೆ ಸ್ಪಷ್ಟ ತೀರ್ಮಾನ ಕೊಡಲು ವಿಫಲ ಆದ ವಾಂಛೂ ವರದಿಯನ್ನು ಆಧರಿಸಿ 25-3-1953ರಂದು ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ನೀಡಿದ ಪ್ರಕಟಣೆಯ ಪ್ರಕಾರ ಬಳ್ಳಾರಿ ಜಿಲ್ಲೆಯನ್ನು ಒಂದೇ ಘಟಕವೆಂದು ಪರಿಗಣಿಸಲು ಸಾಧ್ಯವಿಲ್ಲವಾದ್ದರಿಂದ ಆಲೂರು, ಆದವಾನಿ ಮತ್ತು ರಾಯದುರ್ಗ ತಾಲ್ಲೂಕುಗಳನ್ನು ಆಂಧ್ರ ಪ್ರದೇಶಕ್ಕೂ, ಹರಪನಹಳ್ಳಿ , ಹಡಗಲಿ, ಕೂಡ್ಲಿಗಿ, ಸೊಂಡೂರು ಮತ್ತು ಸಿರಗುಪ್ಪ ತಾಲ್ಲೂಕುಗಳನ್ನು ಮೈಸೂರು ರಾಜ್ಯಕ್ಕೂ ಸೇರಿಸಬಹುದಾದರೂ, ಮಿಶ್ರ ಭಾಷೆಯ ಬಳ್ಳಾರಿ ತಾಲ್ಲೂಕಿನ ಸಮಸ್ಯೆಯು ಕೇವಲ ಭಾಷೆಗೆ ಮಾತ್ರ ಸೀಮಿತವಾಗಿರದೆ, ತುಂಗಭಧ್ರಾ ಅಣೆಕಟ್ಟೆಯ ಕಾರಣದಿಂದ ಸಾಮಾಜಿಕ ಮತ್ತು ಆರ್ಥಿಕ ವಿಚಾರಗಳನ್ನೂ ಒಳಗೊಂಡಿರುವದರಿಂದ ಅದನ್ನು ಬಗೆಹರಿಸಲು ಭಾರತದ ರಾಷ್ಟ್ರಪತಿಗಳು ಹೈದರಾಬಾದ್ನ ಮುಖ್ಯ ನ್ಯಾಯಾಧೀಶ ಎಲ್.ಎಸ್.ಮಿಶ್ರಾ ಅವರನ್ನು 21-4-1953ರಂದು ನೇಮಿಸಿ, 15-5-1953ರ ಒಳಗೆ ವರದಿ ಸಲ್ಲಿಸಲು ಕೋರಿದರು. ವಾಂಛೂ ಸಮಿತಿಯ ನೇಮಕವಾದಾಗಲೇ ಕರ್ನಾಟಕ ಪ್ರಾಂತ ರಚನೆ ವಿಳಂಬವಾಗುತ್ತಿದೆ ಎಂದು ಕರ್ನಾಟಕ ಏಕೀಕರಣ ವಾದಿಗಳಿಗೆ ಅತೃಪ್ತಿ ಮತ್ತು ಅಸಂತೋಷಗಳಾಗಿದ್ದವು. ಇದರಿಂದ ಬೇಸತ್ತ ಪಕ್ಷೇತರ ಕರ್ನಾಟಕ ಏಕೀಕರಣ ಪರಿಷತ್ತು ಕೇಂದ್ರ ಸರ್ಕಾರದ ಕ್ರಮವನ್ನು ಪ್ರತಿಭಟಿಸಿತು. ಸಮಾಜವಾದಿ ಮತ್ತು ಕಮ್ಯುನಿಸ್ಟ್‌ ಪಕ್ಷÀಗಳು ಏಕೀಕರಣ ಭೇಡಿಕೆಯನ್ನು ಪ್ರಧಾನ ಮಾಡಿದವು. ಈ ಬೇಡಿಕೆಗೆ ಹಿರಿಯ ರಾಜಕೀಯ ನಾಯಕರ ಮಾತ್ರವಲ್ಲದೆ ಜನತೆಯ ಬೆಂಬಲವೂ ದೊರೆಯಿತು.

ಅದರಗುಂಚಿ ಶಂಕರಗೌಡ ಪಾಟೀಲರ ಉಪವಾಸ ಸತ್ಯಾಗ್ರಹ

[ಸಂಪಾದಿಸಿ]

ಮಿಶ್ರಾ ಸಮಿತಿಯ ನೇಮಕದಿಂದ ಜನತೆಗೆ ಆಗಿದ್ದ ಅಸಮಾಧಾನದ ಪ್ರತೀಕವಾಗಿ ಅದರಗುಂಚಿ ಶಂಕರಗೌಡ ಪಾಟೀಲರ ಆಮರಣಾಂತ ಉಪವಾಸ ಆರಂಭವಾಯಿತು. ಹುಬ್ಬಳ್ಳಿಯ ಸಮೀಪದ ಸಣ್ಣ ಹಳ್ಳಿಯಲ್ಲೇ ಯಾವ ಪೂರ್ವ ಪ್ರಚಾರವೂ ಇಲ್ಲದೆ ಆರಂಭವಾದ ಅದರಗುಂಚಿ ಶಂಕರಗೌಡ ಪಾಟೀಲರ ಆಮರಣಾಂತ ಉಪವಾಸ ಸತ್ಯಾಗ್ರಹ ಕ್ರಮೇಣ ರಾಜಕೀಯ ನಾಯಕರು ಮತ್ತು ಪತ್ರಿಕಾ ಮಾಧ್ಯಮದವರನ್ನು ಆಕರ್ಷಿಸಿತು. 28-3-1953ರಂದು ಅದರಗುಂಚಿಯ ಕಲ್ಮೇಶ್ವರ ದೇವಾಲಯದಲ್ಲೇ ಉಪವಾಸ ಸತ್ಯಾಗ್ರಹ ಆರಂಭವಾಯಿತು. ಎಸ್.ನಿಜಲಿಂಗಪ್ಪನವರೂ ಸೇರಿದಂತೆ ಹಲವಾರು ನಾಯಕರು ಅದರಗುಂಚಿಗೆ ಹೋಗಿ ಶಂಕರಗೌಡ ಪಾಟೀಲರನ್ನು ಕಂಡರು. ಆ ಸಂದರ್ಭದಲ್ಲಿ ಬೆನ್ನಿನ ಮಣಿಶಿರದ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಜಯದೇವಿ ತಾಯಿ ಲಿಗಾಡೆ ಅವರು, ತಮ್ಮ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ, ರಕ್ತಾಂಕಿತ ಪತ್ರವನ್ನು ಬರೆದಿದ್ದರೆಂದು ಶಂಕರಗೌಡ ಪಾಟೀಲರು ತಮ್ಮ ಅಪ್ರಕಟಿತ ‘ನನ್ನ ದಿನಚರಿ’ಯಲ್ಲಿ ದಾಖಲಿಸಿದ್ದಾರೆ. ಶಂಕರಗೌಡ ಪಾಟೀಲರ ಉಪವಾಸ ಸತ್ಯಾಗ್ರಹದ ವಿಷಯವನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಿದ ಅಳವಂಡಿ ಶಿವಮೂರ್ತಿಸ್ವಾಮಿ ಅವರು, ಶೀಘ್ರವೇ ಕರ್ನಾಟಕ ಪ್ರಾಂತ ರಚನೆ ಆಗದಿದ್ದರೆ ಪರಿಸ್ಥಿತಿ ಉಲ್ಬಣಗೊಳ್ಳುತ್ತದೆ ಎಂಬ ಸೂಚನೆ ನೀಡಿದರು.ಮುಂಬಯಿ ಮತ್ತು ಹೈದರಾಬಾದ್ ಕರ್ನಾಟಕದ ಬಹುತೇಕ ಎಲ್ಲ ಭಾಗಗಳಿಂದ ಅನೇಕರು ಅದರಗುಂಚಿಗೆ ಬಂದು ತಮ್ಮ ಬೆಂಬಲ ಸೂಚಿಸಿದರು. ಕರ್ನಾಟಕ ಏಕೀಕರಣ ಸಮಸ್ಯೆಯು ಕೇವಲ ಕೆಲವು ರಾಜಕೀಯ ನಾಯಕರ ಸಮಸ್ಯೆ ಆಗಿ ಉಳಿಯದೆ ಇಡೀ ಜನತೆಯ ವಿಷಯವಾಗಿ ಪರಿಣಮಿಸಿತು.

ಹುಬ್ಬಳ್ಳಿ ಗಲಭೆ

[ಸಂಪಾದಿಸಿ]

19-4-1953ರಂದು ಹುಬ್ಬಳ್ಳಿಯ ಪುರಸಭಾ ಭವನದಲ್ಲಿ ಕೆ.ಪಿ.ಸಿ.ಸಿ.ಯ ವಿಶೇಷ ಕಾರ್ಯಕಾರೀ ಸಮಿತಿ ಸಭೆ ನಡೆಯಲಿತ್ತು. ಇದು ಕಾಂಗ್ರೆಸ್ಸೇತರ ಪಕ್ಷÀಗಳ ನಾಯಕರಿಗೂ ತಿಳಿದಿತ್ತು. ರಾಜೀನಾಮೆ ನೀಡುತ್ತೇವೆ ಎಂದು ಕೇವಲ ಬಾಯಿ ಮಾತಿನಲ್ಲಿ ಹೇಳುತ್ತಾ, ಯಾವುದೇ ರೀತಿಯ ನಿರ್ಧಾರಕ್ಕೆ ಅವಕಾಶ ನೀಡದ ಕಾಂಗ್ರೆಸ್ ನಾಯಕರಿಂದ ರಾಜೀನಾಮೆ ಕೇಳಲು ಜನ ಸಿದ್ಧರಾದರು. . ಪುರಭವನಕ್ಕೆ ಕಾಂಗ್ರೆಸ್ ನಾಯಕರು ಆಗಮಿಸುತ್ತಿದ್ದಂತೆಯೇ ಜನರು ಧಿಕ್ಕಾರ ಹೇಳುತ್ತಾ ಸ್ವಾಗತಿಸುತ್ತಿದ್ದರು. ಸಭೆ ನಡೆಯುತ್ತಿದ್ದ ಸ್ತಳಕ್ಕೆ ಹೋದ ಕೆಲವರು ಕಾಂಗ್ರೆಸ್ ನಾಯಕರಿಗೆ ಅರಿಶಿನ-ಕುಂಕುಮ ಹಚ್ಚಿ, ಬಳೆ ತೊಡಿಸಿದರು. ಹಳ್ಳಿಕೇರಿ ಗುದ್ಲೆಪ್ಪನವರ ಜೀಪಿಗೆ ಏಕೀಕರಣ ವಿರೋಧಿಗಳು ಬೆಂಕಿ ಹಚ್ಚಿದರು.

ಜನರನ್ನು ನಿಯಂತ್ರಿಸುವುದು ಕಷ್ಟ ಎಂದು ತಿಳಿದ ಪೋಲೀಸರು ಲಾಠೀಛಾರ್ಜ್ ಗೆ ಆಜ್ಞೆ ಮಾಡಿದರು. ಅದಕ್ಕೆ ಬೆದರದ ಜನ ಲಾಠಿಗಳಿಗೆ ಎದೆಯೊಡ್ಡಿ ನಿಂತರು. ಲಾಠೀಛಾರ್ಜ್ ಪರಿಣಾಮಕಾರಿ ಆಗಲಿಲ್ಲ ಎಂದು ಪೋಲೀಸರು ಗೋಲೀಬಾರ್ ಗೆ ಆದೇಶ ನೀಡಿದರು. ಜನರು ಅದಕ್ಕೂ ಎದೆಯೊಡ್ಡಿ ನಿಂತರು.  

ಆ ಗಲಭೆಗೆ ಕಾರಣವೆಂದು ಹಳ್ಳಿಕೇರಿ ಗುದ್ಲೆಪ್ಪ ನೀಡಿದ ಸುಳ್ಳು ದೂರು ಆಧರಿಸಿ, ಕರ್ನಾಟಕ ಏಕೀಕರಣಕ್ಕಾಗಿ ಹೋರಾಡುತ್ತಿದ್ದ ವಿದ್ಯಾರ್ಥಿ ನಾಯಕ, ಅನ್ನದಾನಯ್ಯ ಪುರಾಣಿಕರನ್ನು ಪೋಲಿಸರು ಬಂಧಿಸಿ, ವಿಚಾರಣೆ ಇಲ್ಲದೆ ೬ ದಿನಗಳವರೆಗೆ ಸರೆಮನೆಯಲ್ಲಿಟ್ಟರು.ಈ ಎಲ್ಲ ವಿಷಯಗಳನ್ನು ಸ್ಥಳೀಯ ಪತ್ರಿಕೆಗಳಲ್ಲದೆ ನ್ಯೂಯಾರ್ಕ್ ಟೈಂಸ್ ಪತ್ರಿಕೆಯು ಮುಖ ಪುಟದಲ್ಲೇ ವರದಿ ಮಾಡಿತು. ಅನ್ನದಾನಯ್ಯ ಪುರಾಣಿಕ ತಮ್ಮ ಅಕ್ರಮ ಬಂಧನ ವಿರುದ್ಧ ಸೆರೆಮನೆಯಲ್ಲಿ ಆಮರನಾಂತ ಉಪವಾಸ ಪ್ರಾರಂಭಿಸಿದರು. ಅವರ ಪರವಾಗಿ ಎಸ್.ಆರ್.ಬೊಮ್ಮಾಯಿ ಅವರು ಹುಬ್ಬಳ್ಳಿ ಕೋರ್ಟ್‌ನಲ್ಲಿ ವಾದಿಸಿದರು. ಪೋಲಿಸರು ಅಕ್ರಮವಾಗಿ ಬಂಧಿಸಿದ್ದನ್ನು ಖಂಡಿಸಿ, ನಿರಪರಾಧಿ ಎಂದು ಅನ್ನದಾನಯ್ಯ ಪುರಾಣಿಕರನ್ನು ನ್ಯಾಯಾಲಯ ಬಿಡುಗಡೆ ಮಾಡಿತು.

ಹುಬ್ಬಳ್ಳಿಯ ಗಲಭೆಯ ನಂತರ ಕರ್ನಾಟಕದ ಕಾಂಗ್ರೆಸ್ ನಾಯಕರು ಪ್ರಧಾನ ಮಂತ್ರಿ ನೆಹರೂ ಅವರನ್ನು ಏಕೀಕರಣಕ್ಕೆ ಒತ್ತಾಯಿಸತೊಡಗಿದರು. ಕಾಂಗ್ರೆಸ್ಸೇತರ ಪಕ್ಷಗಳ ಕೆಲವು ನಾಯಕರು ರಾಜ್ಯ ನಿರ್ಮಾಣವನ್ನೇ ಪ್ರಮುಖ ಗುರಿಯಾಗಿಟ್ಟುಕೊಂಡು ರೂಪಿಸಿದ ಸಂಸ್ಥೆಯೇ ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತು.

ಮಿಶ್ರಾ ಸಮಿತಿ

[ಸಂಪಾದಿಸಿ]

ಈ ಮೊದಲೇ ಪ್ರಸ್ತಾಪಿಸಿರುವಂತೆ 21-4-1953ರಂದು, ಅಂದರೆ ಹುಬ್ಬಳ್ಳಿ ಗಲಭೆ ನಡೆದ ಎರಡು ದಿನಕ್ಕೆ ಬಳ್ಳಾರಿ ನಗರ ಮತ್ತು ತಾಲ್ಲೂಕಿನ ಸಮಸ್ಯೆಯ ಪರಿಶೀಲನೆಗೆ ಎಲ್.ಎಸ್.ಮಿಶ್ರಾ ಸಮಿತಿಯ ನೇಮಕ ಆಯಿತು. ಮಿಶ್ರಾ ಅವರು 27-4-1953ರಿಂದಲೇ ಬಳ್ಳಾರಿಯಲ್ಲಿ ವಿಚಾರಣೆಯನ್ನು ಆರಂಭಿಸಿದರು. 10-5-1953ರಂದು ಮಿಶ್ರಾ ವರದಿಯು ಸಲ್ಲಿಕೆಯಾಗಿ, 13-8-1953ರಿಂದ 19-8-1953ರವರೆಗೆ ಲೋಕಸಭೆಯಲ್ಲಿ ಆ ಬಗ್ಗೆ ಚರ್ಚೆನಡೆಯಿತು. ಚರ್ಚೆಯಲ್ಲಿ ಕರ್ನಾಟಕದ ಪರವಾಗಿ ಪ್ರಮುಖವಾಗಿ ಎಸ್.ನಿಜಲಿಂಗಪ್ಪ, ಅಳವಂಡಿ ಶಿವಮೂರ್ತಿ ಸ್ವಾಮಿ, ಟಿ.ಸುಬ್ರಹ್ಮಣ್ಯಂ, ಸ್ವಾಮಿ ರಮಾನಂದ ತೀರ್ಥ, ಎಂ.ಎಸ್.ಗುರುಪಾದ ಸ್ವಾಮಿ, ಎನ್.ರಾಚಯ್ಯ ಅವರು ಪಾಲ್ಗೊಂಡರು. ಇವರೆಲ್ಲರ ಚರ್ಚೆಯಲ್ಲಿ ಬಳ್ಳಾರಿಯಂತೆಯೇ ಮದ್ರಾಸ್ ಸರ್ಕಾರಕ್ಕೆ ಸೇರಿಕೊಂಡ ದಕ್ಷಿಣ ಕನ್ನಡ, ನೀಲಗಿರಿ, ಕೊಳ್ಳೇಗಾಲ ಭಾಗಗಳೂ ಆ ಸಂದರ್ಭದಲ್ಲೇ ಮೈಸೂರು ಸಂಸ್ಥಾನಕ್ಕೆ ಸೇರುವುದು ಸೂಕ್ತ ಎಂಬ ವಿಚಾರವು ಪ್ರಮುಖವಾಗಿತ್ತು. ಸಚಿವ ಸಂಪುಟವು ಮಿಶ್ರಾ ವರದಿಯನ್ನು 20-5-1953ರಂದು ಸ್ವೀಕರಿಸಿತು. ಬಳ್ಳಾರಿ ತಾಲ್ಲೂಕು ಇಡಿಯಾಗಿ, ಕೆಲವು ತಾತ್ಕಾಲಿಕ ಏರ್ಪಾಡುಗಳಿಗೆ ಒಳಪಟ್ಟು ಮೈಸೂರು ಸಂಸ್ಥಾನಕ್ಕೆ ಸೇರಬೇಕು ಎಂಬುದು ಮಿಶ್ರಾ ವರದಿಯ ಪ್ರಮುಖ ಅಂಶವಾಗಿತ್ತು.

ಅ.ಕ.ರಾ.ನಿ. ಪರಿಷತ್ತು

[ಸಂಪಾದಿಸಿ]

ಅ.ಕ.ರಾ.ನಿ.ಪರಿಷತ್ತಿನ ಮೊದಲ ಅಧಿವೇಶನ 28-5-1953ರಂದು ದಾವಣಗೆರೆಯಲ್ಲಿ ನಡೆಯಿತು. ಕೆ.ಆರ್.ಕಾರಂತ ಅದರ ಅಧ್ಯಕ್ಷತೆ ವಹಿಸಿದ್ದರು. ಉದ್ಘಾಟನೆ ಮಾಡಿದವರು ಅಳವಂಡಿ ಶಿವಮೂರ್ತಿ ಸ್ವಾಮಿ. 1953ರ ಸೆಪ್ಟೆಂಬರ್ ಮೊದಲ ವಾರದಲ್ಲಿ ‘ಕರ್ನಾಟಕ ವಾರ’ವನ್ನು ಆಚರಿಸಲು ಅ.ಕ.ರಾ.ನಿ.ಪರಿಷತ್ತು ಕರೆ ನೀಡಿತು. ವಿದ್ಯಾರ್ಥಿಗಳು, ವ್ಯಾಪಾರಿಗಳು, ನಾಗರಿಕರು ಒಂದಾಗಿ ಹರತಾಳ, ಸಭೆ, ಮೆರವಣಿಗೆಗಳನ್ನು ನಡೆಸಿದರು. ಅ.ಕ.ರಾ.ನಿ.ಪರಿಷತ್ತಿನ ಹಲವು ಮುಖಂಡರನ್ನು ಮುಂಬಯಿ ಸರ್ಕಾರವು ಬಂಧಿಸಿತು. ಇದನ್ನು ಪ್ರತಿಭಟಿಸಿ ಅ.ಕ.ರಾ.ನಿ.ಪರಿಷತ್ತು 26-9-1953ರಂದು ಪ್ರತಿಭಟನಾ ದಿನವನ್ನು ಆಚರಿಸಿತು. 14-9-1953ರಂದು ಎಸ್.ನಿಜಲಿಂಗಪ್ಪನವರ ನೇತೃತ್ವದಲ್ಲಿ ಕೆ.ಪಿ.ಸಿ.ಸಿ.ನಿಯೋಗವು ಪ್ರಧಾನಿ ನೆಹರೂ ಅವರನ್ನು ಭೇಟಿ ಮಾಡಿ, ಹುಬ್ಬಳ್ಳಿಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷÀಕ್ಕೆ ಸೋಲಾಗಿ, ಕರ್ನಾಟಕ ಏಕೀಕರಣ ಪಕ್ಷÀದ ಅಭ್ಯರ್ಥಿಗೆ ಗೆಲುವಾಗಿರುವುದನ್ನು ಪ್ರಸ್ತಾಪಿಸಿದರು. ಆಗ ನೆಹರೂ ಅವರು ಇಡಿಯಾಗಿ ಭಾರತಕ್ಕೆ ಸಂಬಂಧಿಸಿದಂತೆಯೇ ರಾಜ್ಯ ಪುನರ್ವಿಂಗಡಣಾ ಆಯೋಗವೊಂದನ್ನು ಸಧ್ಯದಲ್ಲೇ ರಚಿಸುವುದಾಗಿ ಭರವಸೆ ನೀಡಿದರು.

ಮೈಸೂರಿಗೆ ಬಳ್ಳಾರಿ ಸೇರ್ಪಡೆ

[ಸಂಪಾದಿಸಿ]

1-10-1953ರಂದು ಆಂಧ್ರ ಪ್ರಾಂತದ ಉದಯವಾಯಿತು. ಅದೇ ದಿನ ಬಳ್ಳಾರಿಯು ಮೈಸೂರು ಸಂಸ್ಥಾನದೊಡನೆ ವಿಲೀನಗೊಂಡಿತು. 2-10-1953ರಂದು ಬಳ್ಳಾರಿಯ ಬಿ.ಡಿ.ಎ.ಎ. ಮೈದಾನದಲ್ಲಿ ಬಳ್ಳಾರಿ-ಮೈಸೂರು ವಿಲೀನ ಸಮಾರಂಭ ನಡೆಯಿತು. ಅದರಲ್ಲಿ ಮೈಸೂರು ರಾಜ್ಯದ ಮುಖ್ಯಮಂತ್ರಿ ಕೆ.ಹನುಮಂತಯ್ಯ ಪಾಲ್ಗೊಂಡು, ಬಳ್ಳಾರಿಯ ಜನತೆಯನ್ನು ಮೈಸೂರು ರಾಜ್ಯಕ್ಕೆ ಸ್ವಾಗತಿಸಿದರು. ಈ ಸಂತೋಷದ ಸಮಾರಂಭಕ್ಕೆ ಸಿದ್ಧತೆ ಮಾಡುತ್ತಿದ್ದ ರಂಜಾನ್ ಸಾಹೇಬ್ ಎಂಬ ಕನ್ನಡ ಪ್ರೇಮಿ ಕೆಲವು ದುಷ್ಟರ ಸಂಚಿಗೆ ಸಿಕ್ಕಿ 30-9-1953ರ ರಾತ್ರಿ ಆಸಿಡ್ ಬಲ್ಬ್ ಗೆ ಬಲಿಯಾದದ್ದು ಆ ಸಂದರ್ಭದ ಕಹಿ ನೆನಪಾಗಿದೆ.

ಅ.ಕ.ರಾ.ನಿ.ಪರಿಷತ್ತಿನ ಎರಡನೆಯ ಅಧಿವೇಶನವು 3-12-1953ರಂದು ಹಂಪೆಯಲ್ಲಿ ನಡೆಯಿತು. ಆ ಸಂದರ್ಭದಲ್ಲಿ ಅಳವಂಡಿ ಶಿವಮೂರ್ತಿ ಸ್ವಾಮಿಯವರನ್ನು ಪರಿಷತ್ತು ತನ್ನ ‘ಡಿಕ್ಟೇಟರ್’ಎಂದು ನಾಮಕರಣ ಮಾಡಿತು.

22-12-1953ರಂದು ನೆಹರೂ ಅವರು ಲೋಕಸಭೆಯಲ್ಲಿ ಭಾರತದ ರಾಜ್ಯಗಳ ಪುನರ್ವಿಂಗಡನೆಗಾಗಿ ಫಜಲ್ ಆಲಿ ಅವರ ಅಧ್ಯಕ್ಷತೆಯಲ್ಲಿ ವರಿಷ್ಠ ಸಮಿತಿಯೊಂದನ್ನು ನೇಮಿಸಲಿರುವುದಾಗಿ ಘೋಷಿಸಿದರು. 29-12-1953ರಂದು ರಾಜ್ಯ ಪುನರ್ವಿಂಗಡಣಾ ಆಯೋಗದ ನೇಮಕವಾಯಿತು.

ರಾಜ್ಯ ಪುನರ್ವಿಂಗಡಣಾ ಆಯೋಗ

[ಸಂಪಾದಿಸಿ]

ಆಯೋಗದ ಅಧ್ಯಕ್ಷರಾಗಿ ಒರಿಸ್ಸ ರಾಜ್ಯಪಾಲರಾಗಿದ್ದ ಫಜಲ್ ಅಲಿ ಮತ್ತು ಸದಸ್ಯರಾಗಿ ರಾಜ್ಯಸಭಾ ಸದಸ್ಯ ಹೃದಯನಾಥ ಕುಂಜ್ರೂ ಮತ್ತು ಈಜಿಪ್ಟಿನಲ್ಲಿ ಭಾರತದ ರಾಯಭಾರಿಯಾಗಿದ್ದ ಕೆ.ಎಂ.ಪಣಿಕ್ಕರ್ ನಾಮಕರಣಗೊಂಡಿದ್ದರು. 30-6-1955ರ ಒಳಗೆ ವರದಿಯನ್ನು ಸಲ್ಲಿಸಲು ಆಯೋಗಕ್ಕೆ ಸೂಚನೆ ನೀಡಲಾಯಿತು.

23-2-1954ರಂದು ಆಯೋಗವು ನೀಡಿದ ಪತ್ರಿಕಾ ಪ್ರಕಟಣೆಗೆ ಉತ್ತರವಾಗಿ ಸುಮಾರು 1,52,250 ಮನವಿಗಳು ಸ್ವೀಕೃತವಾದುವು. ಅವುಗಳಲ್ಲಿ ಸುಮಾರು 2000 ಮನವಿಗಳು ವಿಸ್ತೃತವಾಗಿದ್ದವು. ಜೊತೆಗೆ 1954ರ ಮಾರ್ಚ್ ತಿಂಗಳಿನ ಆರಂಭದಲ್ಲಿ ಆರಂಭವಾದ ಗೌಪ್ಯ ಸಂದರ್ಶನ ಕಾರ್ಯಕ್ರಮ ಮುಗಿದದ್ದು 1954ರ ಅಂತ್ಯಕ್ಕೆ . 8-4-1954ರಿಂದ ದೇಶದ ವಿವಿಧ ಭಾಗಗಳಲ್ಲಿ ಸಂಚರಿಸಿದ ಆಯೋಗವು ಸುಮಾರು 9000 ವ್ಯಕ್ತಿಗಳನ್ನು ಸಂದರ್ಶಿಸಿತು. ಅಂತಿಮವಾಗಿ ಆಯೋಗವು ತನ್ನ ವರದಿಯನ್ನು 30-9-1955ರಂದು ಸಲ್ಲಿಸಿತು.

ನೇಮಕಗೊಂಡ ತಕ್ಷÀಣವೇ ತನ್ನ ಕಾರ್ಯವನ್ನು ಆರಂಭಿಸಿದ ಆಯೋಗವು ವಿಳಂಬಕ್ಕೆ ಅವಕಾಶವಿಲ್ಲದಂತೆ ಕಾರ್ಯತತ್ಪರವಾಯಿತು. 1954ರಲ್ಲಿ ಕಲ್ಕತ್ತೆಯಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ರಾಜ್ಯ ಪುನರ್ವಿಂಗಡಣೆಗೆ ಸಂಬಂಧಿಸಿದಂತೆ ಪ್ರಾಂತಿಯ ಕಾಂಗ್ರೆಸ್ ಸಮಿತಿಗಳು ಮನವಿಯನ್ನು ಸಲ್ಲಿಸಬಹುದೆಂದು ತೀರ್ಮಾನವಾಯಿತು. ಅನಂತರ ಹುಬ್ಬಳ್ಳಿಯಲ್ಲಿ 4-2-1954ರಂದು ನಡೆದ ಕೆ.ಪಿ.ಸಿ.ಸಿ. ಮಹಾಸಭೆಯು, 29-4-1949ರಂದು ದಾವಣಗೆರೆಯಲ್ಲಿ ನಡೆದ ಅಖಿಲ ಕರ್ನಾಟಕ ಪ್ರತಿನಿಧಿಗಳ ಸಮ್ಮೇಳನದಲ್ಲಿ ಬಿ.ಬಸವಲಿಂಗಪ್ಪನವರು ಮಂಡಿಸಿ, ಕೋ.ಚೆನ್ನಬಸಪ್ಪನವರು ಅನುಮೋದಿಸಿದ್ದ ನಿರ್ಣಯದ ಪ್ರಕಾರ ಕೆ.ಪಿ.ಸಿ.ಸಿ.ಯು ಎಲ್ಲಾ ಕನ್ನಡಿಗರ ಪರವಾಗಿ ಮನವಿಯನ್ನು ಸಿದ್ಧಪಡಿಸಿ, ರಾಜ್ಯ ಪುನರ್ವಿಂಗಡಣಾ ಆಯೋಗಕ್ಕೆ ಸಲ್ಲಿಸಲು ವ್ಯವಸ್ಥೆ ಮಾಡುವ ಅಧಿಕಾರವನ್ನು ಎಸ್.ನಿಜಲಿಂಗಪ್ಪನವರಿಗೆ ನೀಡಿತು.

ರಾಜ್ಯ ಪುನರ್ವಿಂಗಡಣಾ ಆಯೋಗಕ್ಕೆ ಮನವಿ ಸಲ್ಲಿಕೆ

[ಸಂಪಾದಿಸಿ]

ಆರ್.ಎ.ಜಹಗೀರದಾರ್ ಅವರ ಅಧ್ಯಕ್ಷತೆಯಲ್ಲಿ ನೇಮಕಗೊಂಡ ಸಮಿತಿಯು, ಆ ವರೆಗಿನ ಎಲ್ಲಾ ಬೆಳೆವಣಿಗೆಗಳನ್ನೂ ಗಮನದಲ್ಲಿಟ್ಟುಕೊಂಡು, ಆವರೆಗಿನ ಎಲ್ಲಾ ಅಧ್ಯಯನಗಳನ್ನು ಆಧರಿಸಿ ಸಿದ್ಧಪಡಿಸಿದ ಮನವಿಯನ್ನು ಆಯೋಗಕ್ಕೆ ಸಲ್ಲಿಸಿತು. ಇಡಿಯಾಗಿ ಮೈಸೂರು ಸಂಸ್ಥಾನ, ಮುಂಬಯಿ ಕರ್ನಾಟಕದ ಧಾರವಾಡ, ಉತ್ತರ ಕನ್ನಡ ಜಿಲ್ಲೆ, ಬೆಳಗಾಂವಿ ಮತ್ತು ಬಿಜಾಪುರ ಜಿಲ್ಲೆಗಳು ಸಂಪೂರ್ಣವಾಗಿ ಮತ್ತು ಅವುಗಳಿಗೆ ಹೊಂದಿಕೊಂಡ ಕೆಲವು ಪ್ರದೇಶಗಳು, ಹೈದರಾಬಾದ್ ಭಾಗದ ಬೀದರ್, ಗುಲಬರ್ಗ ಮತ್ತು ರಾಯಚೂರು ಜಿಲ್ಲೆಗಳು, ಮದ್ರಾಸ್ ರಾಜ್ಯದ ದಕ್ಷಿಣ ಕನ್ನಡ ಹಾಗೂ ನೀಲಗಿರಿ ಜಿಲ್ಲೆಗಳು ಮತ್ತು ಹೊಂದಿಕೊಂಡ ಕೊಯಮತ್ತೂರು, ಸೇಲಂ ಜಿಲ್ಲೆಯ ಭಾಗಗಳು ಹಾಗೂ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆ ಮತ್ತು ಕರ್ನೂಲು ಜಿಲ್ಲೆಯ ಕೆಲವು ಭಾಗಗಳು ಮತ್ತು ಕೊಡಗು ಜಿಲ್ಲೆಯನನ್ನಿ ಸೇರಿಸಿ, ಕರ್ನಾಟಕ ರಾಜ್ಯವನ್ನು ನಿರ್ಮಿಸಲು ಕೆ.ಪಿ.ಸಿ.ಸಿ.ಯು ಮನವಿ ಮಾಡಿತು. ಅಂತೆಯೇ ದಾವಣಗೆರೆಯ ಅಖಿಲ ಕರ್ನಾಟಕ ಪ್ರತಿನಿಧಿ ಸಮಾವೇಶ, ಗುಡಿಬಂಡೆ ಪುರಸಭೆ, ಹುಬ್ಬಳ್ಳಿಯ ಬಹುತೇಕ ಸಂಘ-ಸಂಸ್ಥೆಗಳು ಮತ್ತು ಗಣ್ಯರು, ಅ.ಕ.ರಾ.ನಿ. ಪರಿಷತ್ತು, ಮಂಗಳೂರಿನ ಅನೇಕ ಸಂಘ-ಸಂಸ್ಥಗಳು, ಬೆಳಗಾವಿಯಲ್ಲಿ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಸಮಿತಿ, ಬೆಳಗಾಂವಿ ನಗರ ಕಾಂಗ್ರೆಸ್ ಸಮಿತಿ, ಕೆ.ಎಲ್.ಇ.ಸೊಸೈಟಿ ಮುಂತಾದ ಸಂಘ-ಸಂಸ್ಥೆಗಳಲ್ಲದೆ ಅಲ್ಲಿಯ ಅಲ್ಪಸಂಖ್ಯಾತ ಜನಾಂಗದವರು ತಾವು ಕರ್ನಾಟಕದ ಪರ ಇರುವುದನ್ನು ತಿಳಿಸಿದರು. ಬೆಂಗಳೂರಿನಲ್ಲೂ ಆಯೋಗವು ಹಲವಾರು ಗಣ್ಯರನ್ನು ಕಂಡು ಅವರ ಅಭಿಪ್ರಾಯಗಳನ್ನು ಸಂಗ್ರಹಿಸಿತು. ಇದೇ ಸಂದರ್ಭದಲ್ಲಿ ಮೈಸೂರು ಸಂಸ್ಥಾನದ ಮುಖ್ಯಮಂತ್ರಿ ಕೆ.ಹನುಮಂತಯ್ಯನವರು, ರಾಜ್ಯದಾದ್ಯಂತ ಸಂಚರಿಸುತ್ತಾ ಸಂಸ್ಥಾನವು ಕರ್ನಾಟಕ ಏಕೀಕರಣದ ಪರ ಇರುವುದನ್ನು ಜನತೆಗೆ ಮನದಟ್ಟು ಮಾಡಿಕೊಡುತ್ತಿದ್ದರು. 10-10-1955 ರಂದು ಆಯೋಗವು ಕೇಂದ್ರ ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಿತು. ರಾ.ಪು.ಆಯೋಗವು ಶಿಫಾರಸು ಮಾಡಿದ್ದ ಪ್ರಕಾರ ಕರ್ನಾಟಕವು ಈ ಕೆಳಕಂಡ ಪ್ರದೇಶಗಳನ್ನು ಸೇರಿಸಿಕೊಂಡು ರಚನೆ ಆಗಬೇಕಾಗಿತ್ತು. 1. ಹಾಲಿ ಬಳ್ಳಾರಿ ಜಿಲ್ಲೆಯ ಬಳ್ಳಾರಿ, ಸಿರಗುಪ್ಪ, ಹೊಸಪೇಟೆ ತಾಲ್ಲೂಕುಗಳು ಮತ್ತು ತುಂಗಭದ್ರಾ ಅಣೆ ಕಟ್ಟು ಇರುವ ಮಲ್ಲಾಪುರ ಉಪ ತಾಲ್ಲೂಕಿನ ಸ್ವಲ್ಪ ಭಾಗಗಳನ್ನು ಬಿಟ್ಟು ಈಗ ಇರುವ ಮೈಸೂರು ರಾಜ್ಯ. 2. ಮುಂಬಯಿ ರಾಜ್ಯದ ದಕ್ಷಿಣದ ಧಾರವಾಡ, ಬಿಜಾಪುರ, ಉತ್ತರ ಕನ್ನಡ ಮತ್ತು ಚಾಂದಗಡ ತಾಲ್ಲೂಕನ್ನುಳಿದು ಬೆಳಗಾಂವಿ - ಈ ನಾಲ್ಕೂ ಜಿಲ್ಲೆಗಳು 3. ರಾಯಚೂರು ಮತ್ತು ಗುಲಬರ್ಗ ಜಿಲ್ಲೆಗಳು 4. ಕಾಸರಗೋಡು ತಾಲ್ಲೂಕನ್ನುಳಿದು ದಕ್ಷಿಣ ಕನ್ನಡ ಜಿಲ್ಲೆ 5. ಮದ್ರಾಸ್ ರಾಜ್ಯದ ಕೊಯಮತ್ತೂರು ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕು 6. ಕೊಡಗು ಈ ವರದಿಯಿಂದ ಕನ್ನಡಿಗರಿಗೆ ಆಘಾತವಾಯಿತು. ಕೇವಲ ಎರಡು ವರ್ಷದ ಹಿಂದೆ ಸೇರಿದ್ದ ಬಳ್ಳಾರಿ ಜಿಲ್ಲೆಯ ಮೂರು ತಾಲ್ಲೂಕುಗಳು ,ದಕ್ಷಿಣ ಕನ್ನಡ ಜಿಲ್ಲೆಯ ಕಾಸರಗೋಡು ತಾಲ್ಲೂಕು, ಇಡಿಯಾಗಿ ಬೀದರ್ ಜಿಲ್ಲೆ ಕರ್ನಾಟಕಕ್ಕೆ ಸೇರಿರಲಿಲ್ಲ. ಕಾಸರಗೋಡಿನ ಜನರಿಗೆ ನೋವಾಗಿತ್ತು. ಅದನ್ನು ಆ ಭಾಗದ ಕವಿ ಕಯ್ಯಾರ ಕಿಂಙ್ಗಣ್ಣರೈ ತಮ್ಮ ‘ಬೆಂಕಿ ಬಿದ್ದಿದೆ ಮನೆಗೆ ‘ಕವನದಲ್ಲಿ ಅಭಿವ್ಯಕ್ಕಿ ಮಾಡಿದ್ದಾರೆ. ಬಳ್ಳಾರಿಯ ಭಾಗದ ಜನರು 16-11-1955ರಿಂದ ನೀರಿನ ಸತ್ಯಾಗ್ರಹವನ್ನು ಆರಂಭಿಸಿದರು. ಮಹಿಳೆ, ಮಕ್ಕಳೆನ್ನದೆ ಬಳ್ಳಾರಿಯ ಆಸುಪಾಸಿನ ಜನತೆ ಈ ಚಳವಳಿಯಲ್ಲಿ ಭಾಗವಹಿಸಿತು. ರಾ.ಪು. ಆಯೋಗದ ವರದಿಯ ಬಗ್ಗೆ ಸಾರ್ವಜನಿಕರಿಗೆ ಇದ್ದ ಅಭಿಪ್ರಾಯಗಳನ್ನು ಗಮನಿಸಿಯೇ ಲೋಕಸಭೆಯಲ್ಲಿ ಸುದೀರ್ಘ ಚರ್ಚೆ ನಡೆದು 16-3-1956ರಂದು ಭಾರತ ಸರ್ಕಾರವು ವಿಧೇಯಕವನ್ನು ಮಂಡಿಸಿತು. ಆ ಪ್ರಕಾರ ಕೆಳಕಂಡ ಭಾಗಗಳು ಸೇರಿ ಕರ್ನಾಟಕ ರಾಜ್ಯ ನಿರ್ಮಾಣವಾಗಬೇಕಾಗಿತ್ತು. 1. ಇಡಿಯಾಗಿ ಮೈಸೂರು ರಾಜ್ಯ. 2. ಮುಂಬಯಿ ರಾಜ್ಯದ ಬಿಜಾಪುರ, ಧಾರವಾಡ, ಉತ್ತರ ಕನ್ನಡ ಮತ್ತು ಬೆಳಗಾಂವಿ (ಚಾಂದಗಡ ತಾಲ್ಲೂಕನ್ನು ಬಿಟ್ಟು) ಜಿಲ್ಲೆಗಳು 3. ಹೈದರಾಬಾದ್ ರಾಜ್ಯದ ಗುಲಬರ್ಗಾ ಜಿಲ್ಲೆ(ಕೋಡಂಗಲ್ಲು ಮತ್ತು ತಾಂಡೂರು ತಾಲ್ಲೂಕುಗಳನ್ನು ಬಿಟ್ಟು), ರಾಯಚೂರು ಜಿಲ್ಲೆ(ಆಲಂಪುರ ಮತ್ತು ಗದ್ವಾಲ ತಾಲ್ಲೂಕುಗಳನ್ನು ಬಿಟ್ಟು) ಮತ್ತು ಬೀದರ್ ಜಿಲ್ಲೆಯ ಬೀದರ್, ಭಾಲ್ಕಿ, ಔರಾದ್, ಹುಮನಾಬಾದ್ ತಾಲ್ಲುಕುಗಳು 4. ಮದ್ರಾಸ್ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆ (ಕಾಸರಗೋಡು ತಾಲ್ಲೂಕು ಮತ್ತು ಅಮೀನ್ ದ್ವೀಪಗಳನ್ನು ಬಿಟ್ಟು) ಮತ್ತು ಕೊಯಮತ್ತೂರು ಜಿಲ್ಲೆಯ ಕೊಳ್ಳೆಗಾಲ ತಾಲ್ಲೂಕು 5. ಕೊಡಗು

ರಾ.ಪು. ಆಯೋಗದ ಶಿಫಾರಸುಗಳ ಪ್ರಕಾರ ಬೀದರ್ ಜಿಲ್ಲೆಯ ಬಸವಕಲ್ಯಾಣ ಮಹಾರಾಷ್ಟ್ರ ಪ್ರಾಂತಕ್ಕೂ, ಗದ್ವಾಲ್ ತಾಲ್ಲೂಕು ಕರ್ನಾಟಕಕ್ಕೂ ಸೇರಬೆಕಾಗಿತ್ತು. ಆದರೆ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದ ನಾಯಕರ ನಡುವೆ ಸಮಾಲೋಚನೆ ನಡೆಸಿ, ಆದ ಒಪ್ಪಂದದ ಪ್ರಕಾರ ಬಸವಕಲ್ಯಾಣವು ಬೀದರ್ ಜಿಲ್ಲೆಗೂ ಗದ್ವಾಲ್ ತಾಲ್ಲೂಕನ್ನು ಆಂಧ್ರಕ್ಕೂ ಸೇರಿಸಲಾಯಿತು. ಲೋಕಸಭೆಯಲ್ಲಿ ವಿಧೇಯಕದ ಮಂಡನೆ ಮತ್ತು ಸ್ವೀಕಾರ : ವಿಧೇಯಕವನ್ನು ಎಲ್ಲಾ ರಾಜ್ಯಗಳ ವಿಧಾನ ಮಂಡಲಗಳೂ ಒಪ್ಪಿದ ನಂತರ, 18-4-1956ರಂದು ಗೃಹ ಸಚಿವ ಗೋವಿಂದ ವಲ್ಲಭ ಪಂತರು ಲೋಕಸಭೆಯಲ್ಲಿ ಮಂಡಿಸಿದರು. ಮೂರು ದಿನಗಳ ಚರ್ಚೆಯ ನಂತರ ವಿಧೇಯಕವನ್ನು ಸಂಯುಕ್ತ ಪರಿಶೀಲಕ ಸಮಿತಿಗೆ ಕಳುಹಿಸಲು ನಿರ್ಣಯ ಮಾಡಲಾಯಿತು. ಈ ನಿರ್ಣಯವನ್ನು 2-5-1956ರಂದು ರಾಜ್ಯಸಭೆಯೂ ಒಪ್ಪಿತು. ಅರವತ್ತು ಜನರಿದ್ದ ಸಂಯುಕ್ತ ಪರಿಶೀಲನ ಸಮಿತಿಯಲ್ಲಿ ಕನ್ನಡಿಗರಾದ ಎಸ್.ನಿಜಲಿಂಗಪ್ಪ, ಬಿ.ಎನ್.ದಾತಾರ್ ಮತ್ತು ಶ್ರೀನಿವಾಸ ಮಲ್ಯ ಇದ್ದರು. ಪರಿಶೀಲಕ ಸಮಿತಿಯು ಪರಿಶೀಲಿಸಿದ ವಿಧೇಯಕವು ಲೋಕಸಭೆಯ ಮುಂದೆ 26-7-1956ರಂದು ಚರ್ಚೆಗೆ ಬಂದು 10-8-1956ರಂದು ಸ್ವೀಕರಿಸಲ್ಪಟ್ಟಿತು. 16-8-1956ರಿಂದ 23-8-1956ರವರೆಗೆ ವಿಧೇಯಕದ ಬಗ್ಗೆ ರಾಜ್ಯ ಸಭೆಯಲ್ಲೂ ಚರ್ಚೆ ನಡೆದು, ಅಲ್ಲಿಯೂ ಒಪ್ಪಿಗೆ ದೊರೆಯಿತು. 31-8-1956ರಂದು ರಾ.ಪು.ವಿಧೇಯಕಕ್ಕೆ ರಾಷ್ಟ್ರಪತಿಗಳ ಅಂಗೀಕಾರವೂ ದೊರೆಯಿತು. 1956ರ ನವೆಂಬರ್ ಒಂದರಂದು ಪುನರ್ವಿಂಗಡಣೆಗೊಂಡ ರಾಜ್ಯಗಳೆಲ್ಲವೂ ಅಸ್ತಿತ್ವಕ್ಕೆ ಬರುವುವೆಂಬ ಸಾರ್ವಜನಿಕ ಪ್ರಕಟಣೆ ಹೊರಬಿದ್ದಿತು. ಹೊಸದಾಗಿ ನಿರ್ಮಾಣಗೊಂಡ ಕನ್ನಡಿಗರ ರಾಜ್ಯದ ಹೆಸರು ‘ಮೈಸೂರು’ ಎಂದೇ ಉಳಿಯಿತು. ಕಾಸರಗೋಡು ಮತ್ತು ಸೊಲ್ಲಾಪುರಗಳು ಕರ್ನಾಟಕದಿಂದ ಹೊರಗುಳಿದದ್ದು ನೋವಿನ ವಿಷಯವಾಯಿತು.

ಎಲ್ಲಾ ಕನ್ನಡ ಪ್ರದೇಶಗಳ ವಿಧಾನ ಸಭಾ ಸದಸ್ಯರೂ 21-10-1956ರಂದು ಬೆಂಗಳೂರಿನಲ್ಲಿ ಸಭೆ ಸೇರಿ ಎಸ್.ನಿಜಲಿಂಗಪ್ಪನವರನ್ನು ತಮ್ಮ ನಾಯಕನನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿಕೊಂಡರು. ಮೈಸೂರು ಸಂಸ್ಥಾನ ಮತ್ತು ಕರ್ನಾಟಕ ಪ್ರದೇಶಗಳೆರಡರ ಜೊತೆಗೂ ಸಂಪರ್ಕ ಹೊಂದಿದ್ದ ನಿಜಲಿಂಗಪ್ಪನವರು ಏಕೀಕರಣಗೊಂಡ ಕರ್ನಾಟಕದ ಪ್ರಥಮ ಮುಖ್ಯಮಂತ್ರಿ ಆದರು.

‘ವಿಶಾಲ ಮೈಸೂರು’ ರಾಜ್ಯದ ಉದ್ಘಾಟನೆ

[ಸಂಪಾದಿಸಿ]

1956ರ ನವೆಂಬರ್ ಒಂದನೆಯ ತಾರೀಕು ಬೆಳಗ್ಗೆ ನಡೆದ ಸಮಾರಂಭದಲ್ಲಿ ‘ವಿಶಾಲ ಮೈಸೂರು’ ರಾಜ್ಯವನ್ನು ರಾಷ್ಟ್ರಪತಿ ಬಾಬೂ ರಾಜೇಂದ್ರ ಪ್ರಸಾದ್ ಉದ್ಘಾಟಿಸಿದರು. ಅಂದೇ ಹೊಸ ರಾಜ್ಯದ ರಾಜ್ಯಪಾಲರಾಗಿ ಜಯಚಾಮರಾಜ ಒಡೆಯರ್ ಮತ್ತು ಮುಖ್ಯಮಂತ್ರಿಯಾಗಿ ಎಸ್.ನಿಜಲಿಂಗಪ್ಪ ಅವರು ಅಧಿಕಾರ ಸ್ವೀಕರಿಸಿದರು. ಅದೇ ದಿನ ಹಂಪೆಯಲ್ಲಿ ವಿರೂಪಾಕ್ಷÀನ ಸನ್ನಿಧಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಕರ್ನಾಟಕ ಕುಲ ಪುರೋಹಿತರೆನಿಸಿ ಖ್ಯಾತರಾದ ಆಲೂರು ವೆಂಕಟರಾಯರ ನೇತೃತ್ವದಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಕನ್ನಡಿಗರ ಬಹು ದಿನಗಳ ಕನಸು ನನಸಾದರೂ, ಅನಂತಪುರ, ಮಡಕಶಿರಾ, ನೀಲಗಿರಿ, ಹೊಸೂರು, ಸೊಲ್ಲಾಪುರ, ಅಕ್ಕಲಕೋಟೆ ಮತ್ತು ಕಾಸರಗೋಡು ಪ್ರದೇಶಗಳು ವಿಶಾಲ ಮೈಸೂರಿನಲ್ಲಿ ವಿಲೀನವಾಗದೆ ಉಳಿದದ್ದು ಒಂದು ನೋವಾಗಿ ಈಗಲೂ ಕಾಡುತ್ತಿವೆ. ‘ಕರ್ನಾಟಕ’ ವಾದ ‘ವಿಶಾಲ ಮೈಸೂರು’ 1973ರ ನವೆಂಬರ್ ಒಂದನೆಯ ತಾರೀಕು ರಾಜ್ಯದ ಹೆಸರು ‘ಕರ್ನಾಟಕ’ ಎಂದು ಬದಲಾಯಿತು.

ಮಹಾಜನ್ ಆಯೋಗದ ವರದಿ

[ಸಂಪಾದಿಸಿ]

ಬೆಳಗಾಂವಿ ನಗರ ತಮಗೆ ಸೇರಬೇಕೆಂದು ಮಹಾರಾಷ್ಟ್ರದ ರಾಜಕಾರಣಿಗಳು ತಗಾದೆ ಆರಂಭಿಸಿದಾಗ, ಬೆಳಗಾಂವಿ ಮತ್ತು ಕಾಸರಗೋಡಿನ ಸಮಸ್ಯೆಯನ್ನು ಬಗೆಹರಿಸಲು, ಮೊದಲಿಗೆ ಪಾಟಸ್ಕರ್ ಆಯೋಗ ಮತ್ತು ಅದರ ವರದಿ ಸಮರ್ಪಕ ಎನಿಸದಿದ್ದಾಗ ಮಹಾಜನ್ ಆಯೋಗದ ನೇಮಕ ಆಯಿತು. ಮೊದಲಿಗೆ ಮೈಸೂರಿನವರು ಮಹಾಜನ್ ಆಯೋಗವನ್ನು ಒಪ್ಪಲಿಲ್ಲ. ಆದರೆ ಮಹಾರಾಷ್ಟ್ರದವರು ಮಹಾಜನ್ ಆಯೋಗವೇ ಬೇಕು ಎಂದರು. ಮಹಾಜನ್ ಆಯೋಗದ ವರದಿಯ ಪ್ರಕಾರ ಬೆಳಗಾಂವಿ ಕರ್ನಾಟಕದಲ್ಲೇ ಉಳಿಯುತ್ತದೆ ಎಂದು ತಿಳಿದಾಗ ಮಹಾರಾಷ್ಟ್ರದವರು, ತಮ್ಮ ಮಾತನ್ನೇ ಮರೆತು ಮಹಾಜನ್ ವರದಿಯನ್ನು ತಿರಸ್ಕರಿಸುತ್ತಿದ್ದಾರೆ. ಈ ಮಧ್ಯೆ ಕಾಸರಗೋಡು ಅತಂತ್ರವಾಗಿದೆ. ಮಹಾರಾಷ್ಟ್ರ-ಕರ್ನಾಟಕ-ಕೇರಳ ಗಡಿ ವಿವಾದವನ್ನು ಬಗೆಹರಿಸಲು ರಾಜಕಾರಣಿಗಳಿಗೆ ಆಸಕ್ತಿ ಇಲ್ಲವಾಗಿದೆ. ಈ ಚದುರಂಗದಾಟದಲ್ಲಿ ಗಡಿ ಭಾಗದ ಕನ್ನಡಿಗರು ನೋವಿನಿಂದ ನರಳುತ್ತಿದ್ದಾರೆ ಎಂಬುದನ್ನು ರಾಜಕಾರಣಿಗಳು ಅಲ್ಲಗಳೆಯಬಹುದು; ಜನತೆಯ ಅಳಲಿಗೆ ಪರಿಹಾರ ನೀಡಬಲ್ಲ ಜನ ಪ್ರತಿನಿಧಿಗಳು ಯಾವಾಗ ದೊರೆಯುತ್ತಾರೋ ಕಾದು ನೋಡಬೇಕಾಗಿದೆ. (ಪರಿಷ್ಕರಣೆ: ಎಚ್.ಎಸ್. ಗೋಪಾಲ ರಾವ್)