ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಚಿಕ್ಕೋಡಿ

ವಿಕಿಸೋರ್ಸ್ದಿಂದ

ಚಿಕ್ಕೋಡಿ- ಕರ್ನಾಟಕ ರಾಜ್ಯದ ಬೆಳಗಾಂವಿ ಜಿಲ್ಲೆಯ ವಾಯುವ್ಯ ಭಾಗದ ಒಂದು ತಾಲ್ಲೂಕು; ಆ ತಾಲ್ಲೂಕಿನ ಕಸಬೆ. ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆ ಮತ್ತು ಕರ್ನಾಟಕ ರಾಜ್ಯದ ಬೆಳಗಾಂವಿ ಜಿಲ್ಲೆಯ ಅಥಣಿ. ರಾಯಬಾಗ್, ಗೋಕಾಕ್ ಮತ್ತು ಹುಕ್ಕೇರಿ ತಾಲ್ಲೂಕುಗಳೂ ಈ ತಾಲ್ಲೂಕನ್ನು ಬಳಸಿವೆ. ವಿಸ್ತೀರ್ಣ ಸು. 840 ಚ.ಮೈ. ಇಲ್ಲಿ 141 ಹಳ್ಳಿಗಳಿವೆ. ಜನಸಂಖ್ಯೆ 5,61,671 (2001).

ಚಿಕ್ಕೋಡಿ ತಾಲ್ಲೂಕಿನ ಪಶ್ಚಿಮ ಭಾಗವನ್ನು ಮಲೆನಾಡಿನ ಸೆರಗೆಂದು ಕರೆಯುತ್ತಾರೆ. ಈ ತಾಲ್ಲೂಕಿನ ದಕ್ಷಿಣ ಮತ್ತು ಪಶ್ಚಿಮ ಭಾಗಗಳಲ್ಲಿ ಗುಡ್ಡಗಳು ಬಹಳ. ಉಳಿದ ಭಾಗಗಳಲ್ಲಿ ಅಲ್ಲಲ್ಲಿ ಸಣ್ಣದೊಡ್ಡ ಗಿಡಗಳು ತುಂಬಿವೆ. ಮಧ್ಯಭಾಗ ಉಬ್ಬುಳ್ಳ ಪ್ರದೇಶ.

 	ತಾಲ್ಲೂಕಿನ ಬಹುಭಾಗವನ್ನು ಗುಡ್ಡಗಳು ಆವರಿಸಿದ್ದರೂ ಮುಖ್ಯವಾಗಿ ಪಶ್ಚಿಮದಿಂದ ಪೂರ್ವಕ್ಕೆ ಹಬ್ಬಿರುವ ಗುಡ್ಡಗಳ ಎರಡು ಸಾಲುಗಳನ್ನು ಕಾಣಬಹುದು. ಮೊದಲನೆಯ ಸಾಲು ಬೆಳಗಾಂವಿಯ ಪಶ್ಚಿಮದಲ್ಲಿ 24 ಮೈ. ಗಳ ಮೇಲೆ ಆರಂಭವಾಗಿ ಘಟಪ್ರಭಾ-ಮಲಪ್ರಭಾ ನದಿಗಳ ಮಧ್ಯದಲ್ಲಿ ಪೂರ್ವ ಮೇರೆಯನ್ನು ದಾಟಿ ವಿಜಾಪುರ ಜಿಲ್ಲೆಯನ್ನು ಸೇರುತ್ತದೆ. ಎರಡನೆಯ ಸಾಲುಸಾವಂತವಾಡಿಯ ಭಾಗದಲ್ಲಿ ಆರಂಭವಾಗಿ ಘಟಪ್ರಭಾ-ಕೃಷ್ಣಾ ಇವುಗಳ ಮಧ್ಯೆ ಪೂರ್ವಕ್ಕೆ ಸಾಗಿ ವಿಜಾಪುರ ಜಿಲ್ಲೆಯನ್ನು ಸೇರುತ್ತದೆ. ಈ ಗುಡ್ಡಗಳ ಮೇಲೆ ಕೆಲವು ಕಡೆ ಪುರಾತನ ಅವಶೇಷಗಳಿಂದ ಕೂಡಿದ ಹಾಳಾದ ಕೋಟೆಗಳನ್ನು ಕಂಡರೆ ಮತ್ತೆ ಕೆಲವು ಕಡೆ ಕಿರಿಅಡವಿಗಳು ಬೆಳೆದಿರುವುದನ್ನು ಕಾಣಬಹುದು. ಮತ್ತೆ ಕೆಲವು ಕಡೆ ಅಡಿಯಿಂದ ಮುಡಿಯವರೆಗೆ ನಾನಾ ಪ್ರಕಾರದ ಬೆಳೆಗಳು ಶೋಭಿಸುತ್ತವೆ.

ಚಿಕ್ಕೋಡಿಯ ನೆರೆಯಲ್ಲಿ ಅತ್ಯಂತ ಎತ್ತರದ ಗುಡ್ಡ ನಾಗರಾಳದ ಗುಡ್ಡ. ಇದಲ್ಲದೆ ಮಲ್ಲಪ್ಪನ ಗುಡ್ಡ, ಜೋಗೀಗುಡ್ಡ, ನಿರ್ವಾಣೆಪ್ಪನ ಗುಡ್ಡಗಳು ತಕ್ಕಮಟ್ಟಿಗೆ ಪ್ರಸಿದ್ಧಿ ಪಡೆದಿವೆ. ಇವುಗಳಲ್ಲೆಲ್ಲ ಹುಲ್ಲು. ಗೋದಿ, ಜೋಳಗಳು ಬೆಳೆಯುತ್ತವೆ.

ಕೃಷ್ಣಾನದಿ ಈ ತಾಲ್ಲೂಕಿನಲ್ಲಿ ದೂಧಗಂಗಾನದಿಯೊಡನೆ ಸಂಗಮಿಸಿ ಸೂಸಿ ಹರಿಯುತ್ತದೆ. ವೇದಗಂಗೆ ಸಹ್ಯಾದ್ರಿಯಲ್ಲಿ ಹುಟ್ಟಿ ಈ ತಾಲ್ಲೂಕಿನಲ್ಲಿ ಹರಿದು ಬೋಜದ ಹತ್ತಿರ ದೂಧಗಂಗೆಗೆ ಸೇರುತ್ತದೆ. ದೂಧಗಂಗೆಯೂ ಸಹ್ಯಾದ್ರಿಯಲ್ಲಿ ಹುಟ್ಟಿ ಈ ತಾಲ್ಲೂಕಿನಲ್ಲಿ ಹರಿದು ಕಲ್ಲೊಳ್ಳಿಯ ಹತ್ತಿರ ಕೃಷ್ಣೆಯನ್ನು ಸಂಗಮಿಸುತ್ತದೆ. ಈ ಹೊಳೆಗಳ ದಂಡೆಯ ಮೇಲಿನ ಭೂಮಿ ಹಾಗೂ ತಾಲ್ಲೂಕಿನ ಉತ್ತರ ಭಾಗದ ನೆಲ ಹೆಚ್ಚು ಫಲವತ್ತಾಗಿವೆ. ತಾಲ್ಲೂಕಿನ ಪಶ್ಚಿಮದಲ್ಲಿ ಕೆಂಪು ಮಣ್ಣಿದೆ. ಉಳಿದದ್ದೆಲ್ಲ ಕಪ್ಪು ಭೂಮಿ. ಉಸುಬು ಕೂಡಿದ ಕೆಂಪು ನೆಲ ಕಪ್ಪು ನೆಲದಷ್ಟು ಫಲವತ್ತಾಗಿಲ್ಲ.

ಚಿಕ್ಕೋಡಿ ತಾಲ್ಲೂಕಿನಲ್ಲಿ ನಿಯತವಾಗಿಯೂ ವಿಪುಲವಾಗಿಯೂ ಮಳೆ ಆಗುತ್ತದೆ. ಸರಾಸರಿ 508 ಮಿಮೀ. ಇಲ್ಲಿ ಮುಂಗಾರು ಮಳೆ ಮೃಗ ಪ್ರವೇಶದ ಸಮಯಕ್ಕೆ, ಸಾಮಾನ್ಯವಾಗಿ ಜೂನ್ 5ನೆಯ ದಿನಾಂಕ, ಆರಂಭವಾಗುತ್ತದೆ. ಅಧಿಕ ಮಳೆಯಿಂದಾಗಿ ಮಲೆನಾಡಿನ ಸೆರಗಿನಲ್ಲಿ ಆದ್ರ್ರತೆಯ ವಾಯುಗುಣ ಇರುತ್ತದೆ. ಈ ಆದ್ರ್ರ ಹವೆಯ ಪರಿಣಾಮವಾಗಿ ಅಲ್ಲಿ ಚಳಿಜ್ವರ, ಸನ್ನಿಪಾತ, ಅಜೀರ್ಣ, ವಿಷಮಜ್ವರ, ನೆಗಡಿ ಕೆಮ್ಮು ಮೊದಲಾದ ರೋಗಗಳ ಭಯವೂ ಬಹಳ.

ಹಳ್ಳಗಳಿಂದಲೂ ಕೆರೆಗಳಿಂದಲೂ ಬಾವಿಗಳಿಂದಲೂ ಕೆಲಮಟ್ಟಿಗೆ ಈ ತಾಲ್ಲೂಕಿನಲ್ಲಿ ನೀರನ್ನು ತೋಟಗಾರಿಕೆಗಾಗಿ ಉಪಯೋಗಿಸುತ್ತಾರೆ. ಇಂಥ ಹಳ್ಳಗಳಲ್ಲಿ ಕರೋಸಿ ಹಳ್ಳ ಮತ್ತು ನಿಪ್ಪಾಣಿ ಹಳ್ಳಗಳು ಪ್ರಮುಖವಾದವು. ಪ್ರತಿ 55 ಎಕರೆ ಸಾಗುಭೂಮಿಗೆ ಒಂದರಂತೆ ಕೆರೆಗಳನ್ನು ಕಾಣಬಹುದು. ಬಾವಿಗಳೂ ಹೆಚ್ಚು ಸಂಖ್ಯೆಯಲ್ಲಿವೆ.

ಸಾಮಾನ್ಯವಾಗಿ ಇಲ್ಲಿ ಎರಡು ಫಸಲು ತೆಗೆಯುತ್ತಾರೆ. ಜೋಳ, ಸಜ್ಜೆ, ನವಣೆ, ಬತ್ತ, ಗೋದಿ, ಮೆಕ್ಕೆಜೋಳ, ಜವೆಗೋದಿ, ಹುರುಳಿ, ತಡೆಗುಣಿ, ಅಗಸೆ, ಉದ್ದು, ಎಳ್ಳು, ಹತ್ತಿ, ಪುಂಡಿ, ತಂಬಾಕು, ಮೆಣಸಿನಕಾಯಿ, ಕಬ್ಬು ಮುಖ್ಯ ಬೆಳೆಗಳು. ಬಯಲುಸೀಮೆಯಲ್ಲಿ ತೇಗ, ಚಂದನ, ಜಾಲಿ, ಈಚಲು, ಕಳ್ಳಿ, ಮುಳ್ಳುಗಳ್ಳಿ, ಬೇವು, ಬಸಿರೆ, ಹುಣಸೆ, ಅರಳೆ, ಮಾವು, ಮಸಿವಾಳ, ಹುಲಗಲಿ, ದಿಂಡಲ, ಅತ್ತಿ, ಬಣವರಿ ಮುಂತಾದ ಗಿಡಗಳನ್ನು ಕಾಣಬಹುದು. ಇವುಗಳಲ್ಲದೆ ಕಿರುಜಾತಿಯ ಗಿಡಗಳಾದ ಹೊನ್ನವರಿ, ಮದುಗುಣಕೆ, ಗೊಳಗೋಲಕೆ ಮೊದಲಾದವನ್ನು ನೋಡಬಹುದು. ನೀರಿನ ಸೌಕರ್ಯ ತಕ್ಕಮಟ್ಟಿಗೆ ಇರುವುದರಿಂದ ಎಲೆಬಳ್ಳಿ, ಬಾಳೆ, ತರಕಾರಿಗಳೂ ಇಲ್ಲಿ ವಿಶೇಷವಾಗಿ ಬೆಳೆಯುತ್ತವೆ.

ಇಲ್ಲಿ ಎತ್ತು, ಆಕಳು, ಎಮ್ಮೆ, ಕೋಣ, ಕುರಿ, ಕುದುರೆಗಳನ್ನು ಹೆಚ್ಚಾಗಿ ಸಾಕುತ್ತಾರೆ. ಅವುಗಳಿಂದ ಲಾಭವೂ ಉಂಟು. ಅಡವಿಗಳಲ್ಲಿ ಹಂದಿ, ಮೊಲ, ನರಿ, ಚಿರತೆ, ಕತ್ತೆಕಿರುಬ, ಅಡವಿಬೆಕ್ಕು ಮೊದಲಾದ ಪ್ರಾಣಿಗಳಿವೆ.

ಈ ಪ್ರದೇಶದಲ್ಲಿ ಹಬ್ಬಿರುವ ಗುಡ್ಡಗಳ ಒರೆಯಲ್ಲಿ ಚಿನ್ನದ ಮಣ್ಣು ದೊರೆಯುತ್ತದೆ. ಆದರೆ ಪರಿಶ್ರಮಕ್ಕೆ ತಕ್ಕಂತೆ ಅದರಿಂದ ಲಾಭ ಕಡಿಮೆ. ಈ ಭಾಗದಲ್ಲಿ ಹರಿಯುವ ಕೃಷ್ಣಾನದಿಯ ಪ್ರವಾಹದಲ್ಲಿ ಗೋಮೇದಿಕವೆಂಬ ಬೆಲೆಬಾಳುವ ಹರಳುಗಳು ದೋರೆಯುತ್ತವೆ. ಸರವು ಎಂಬಲ್ಲಿ ಅಭ್ರಕದ ನಿಕ್ಷೇಪಗಳಿವೆ.

ತಾಲ್ಲೂಕಿನ ಮುಖ್ಯ ಉದ್ಯೋಗ ಒಕ್ಕಲುತನ. ಕಬ್ಬನ್ನು ಹೆಚ್ಚಾಗಿ ಬೆಳೆಯುವುದರಿಂದ ಬೆಲ್ಲ ಹಾಗೂ ಸಕ್ಕರೆಗಳನ್ನು ಮಾಡುವ ಉದ್ಯಮಗಳೂ ಸಾಕಷ್ಟು ಪ್ರಗತಿಸಾಧಿಸಿವೆ. ತಾಮ್ರ ಹಾಗೂ ಹಿತ್ತಾಳೆಯ ಸಾಮಾನುಗಳ ಕೈಗಾರಿಕೆಯೂ ಉಂಟು. ಸೀರೆ, ಕುಪ್ಪಸ, ರುಮಾಲು, ಹಚ್ಚಡ ಮೊದಲಾದವುಗಳನ್ನು ನೇಯುವ ಉದ್ಯಮವನ್ನು ಇನ್ನೂ ಬೆಳೆಸಲು ಅವಕಾಶಗಳಿವೆ. ಬಂಗಾರದ ಆಭರಣಗಳಲ್ಲಿ ರತ್ನಗಳನ್ನು ಕೂಡಿಸುವ ಉದ್ಯಮ ಜನಪ್ರಿಯವಾಗಿದೆ. ಈ ಕೆಲವು ಉದ್ಯಮಗಳನ್ನು ಬಿಟ್ಟರೆ ಸಾಮಾನ್ಯವಾಗಿ ಎಲ್ಲ ಕಡೆಗೂ ಇರುವಂತೆ ಇಲ್ಲೂ ಬಡಿಗತನ, ಕಮ್ಮಾರಿಕೆ, ಚಮ್ಮಾರಿಕೆ, ಉಪ್ಪಾರಿಕೆ, ಗಾಣಿಗತನ ಮೊದಲಾದ ಉದ್ಯೋಗಗಳು ಉಳಿದುಬಂದಿವೆ. ಒಕ್ಕಲುತನವನ್ನು ಬಿಟ್ಟರೆ ಎರಡನೆಯ ಪ್ರಮುಖ ಉದ್ಯೋಗವೆಂದರೆ ವ್ಯಾಪಾರ. ಹತ್ತಿ, ಬೆಲ್ಲ, ತಂಬಾಕು, ಮೆಣಸಿನ ಕಾಯಿ ನಿಪ್ಪಾಣಿಯಿಂದ ಕೊಂಕಣ, ಕಲಾದಗಿ, ಪುಣೆ ಮೊದಲಾದ ಕಡೆಗಳಿಗೆ ನಿಯಾತವಾಗುತ್ತವೆ. ಏಲಕ್ಕಿ ಮೆಣಸುಗಳು ಕೊಂಕಣದಿಂದ ಆಯಾತವಾಗುವ ವಸ್ತುಗಳಲ್ಲಿ ಪ್ರಮುಖವಾದವು.

ತಾಲ್ಲೂಕಿನಲ್ಲಿ ಪ್ರತಿ 100 ಚ.ಮೈ.ಗೆ 19 ಹಳ್ಳಿಗಳಿವೆ. ಇಲ್ಲಿ ಕನ್ನಡ ಭಾಷೆಯನ್ನು ಆಡುವವರ ಸಂಖ್ಯೆಯೇ ಹೆಚ್ಚು. ಮರಾಠಿ ಮತ್ತು ಉರ್ದು ಆಡುವವರು ಅತ್ಯಲ್ಪ ಸಂಖ್ಯಾತರು. ಚಿಕ್ಕೋಡಿಯ ಪ್ರಮುಖ ಹಾಗೂ ಐತಿಹಾಸಿಕ ಸ್ಥಳಗಳು ಇವು:

1 ಅಕ್ಕೀವತ: ಇದು ಚಿಕ್ಕೋಡಿಯ ನೈಋತ್ಯಕ್ಕೆ, ಸಮುದ್ರಪಾತಳಿಯಿಂದ 2,278 ಎತ್ತರದಲ್ಲಿ, ಅಳಿದುಳಿದ ಕೋಟೆಕೊತ್ತಲಗಳಿಂದ ಗತವೈಭವವನ್ನು ಎತ್ತಿ ತೋರಿಸುವ ಊರು. 1777 ರಲ್ಲಿ ತಾಸಗಾವಿಯ ಪರಶುರಾಮ ಭಾವೂ ಇದನ್ನು ಗೆದ್ದ. 1827ರಲ್ಲಿ ಕೊಲ್ಲಾಪುರದವರಿಂದ ಆಗಿನ ಸರ್ಕಾರ ಈ ಊರನ್ನು ಪಡೆಯಿತು. 2 ಭೋಜ : ಚಿಕ್ಕೋಡಿಯ ವಾಯುವ್ಯಕ್ಕೆ ಸಮುದ್ರಪಾತಳಿಯಿಂದ 1,864 ಎತ್ತರದಲ್ಲಿದೆ. ಇಲ್ಲಿ ಸವದತ್ತಿಯ ರಟ್ಟರ ಒಂದು ಶಾಸನವಿದೆ.

3 ಚಿಕ್ಕೋಡಿ : ತಾಲ್ಲೂಕಿನ ಮುಖ್ಯಸ್ಥಳ. ಉ.ಅ.16 25, ಪೂ.ರೇ. 74.38 ಮೇಲೆ ಜಿಲ್ಲಾ ಮುಖ್ಯಸ್ಥಳವಾದ ಬೆಳಗಾಂವಿಯಿಂದ 40ಮೈ. ಅಂತರದಲ್ಲಿ. ಸಮುದ್ರಪಾತಲಿಯಿಂದ 2,093 ಎತ್ತರದಲ್ಲಿದೆ. ಜನಸಂಖ್ಯೆ 32,820 (2001). ಗುಡ್ಡಗಳ ಸಾಲುಗಳ ಮಧ್ಯದಲ್ಲಿರುವ ಈ ಪಟ್ಟಣದ ಸುತ್ತಲೂ ಮಣ್ಣಿನ ಕೋಟೆಯ ಗೋಡೆಗಳಿವೆ. ಊರಿನಿಂದ ಹತ್ತು ಮೈ. ದೂರದಲ್ಲಿ ಕೃಷ್ಣಾ ನದಿ ಹರಿಯುತ್ತದೆ. ಈ ಸ್ಥಳ ಮೊದಲು ಕೊಲ್ಲಾಪುರ ಸಂಸ್ಥಾನಕ್ಕೆ ಸೇರಿತ್ತು. ಹಿತ್ತಾಳೆ ಮತ್ತು ತಾಮ್ರದ ಪಾತ್ರೆಗಳ ತಯಾರಿಕೆ, ಆಭರಣಗಳ ತಯಾರಿಕೆ, ನೇಯ್ಗೆ-ಇವು ಇಲ್ಲಿಯ ಕಸಬುಗಳು. 1680ರಲ್ಲಿ ಈ ಊರು ಸಾಕಷ್ಟು ಪ್ರಸಿದ್ಧಿ ಪಡೆದಿತ್ತೆಂದೂ ಅಕ್ಕಿ, ಬೇಳೆ, ಮೆಣಸಿನಕಾಯಿ, ತಂಬಾಕು, ಕಿರಾಣಿ ಸಾಮಾನುಗಳ ವ್ಯಾಪಾರ ವಿಶೇಷವಾಗಿ ನಡೆಯುತ್ತಿತ್ತೆಂದೂ ಬಟ್ಟೆಗಳೂ ಕಂಬಳಿಗಳೂ ತಾಮ್ರ ಮತ್ತು ಹಿತ್ತಾಳೆ ಪಾತ್ರೆಗಳೂ ಸಿದ್ಧವಾಗುತ್ತಿದ್ದುವೆಂದೂ ಒಬ್ಬ ಪ್ರವಾಸಿ ಬರೆದಿಟ್ಟ ದಾಖಲೆಗಳಿವೆ. 1720ರಲ್ಲಿ ಕ್ಯಾಪ್ಟನ್ ಮೂರ್ ಎಂಬುವನು ಈ ಊರನ್ನು ಬಹಳ ಅಭಿಮಾನದಿಂದ ಹೊಗಳಿದ್ದಾನೆ. ಆತ ಇಲ್ಲಿ ಗುರುವಾರ ಸಂತೆಯೆಂದೂ, ಇದು ಒಂದು ಮುಖ್ಯ ವ್ಯಾಪಾರ ಸ್ಥಳವೆಂದೂ ಇಲ್ಲಿಯ ನೇಯ್ಗೆಯ ಕೆಲಸ ಗಮನಾರ್ಹವೆಂದೂ ಜನರೂ ಗೌರವಾಭಿಮಾನಿಗಳೆಂದೂ ಬಣ್ಣಿಸಿ, ಈ ಊರಿನ ಸುತ್ತೆಲ್ಲ ಕಣ್ಣಿಗೆ ಅಂದವಾಗಿ ನಾಲಗೆಗೆ ರುಚಿಯಾಗಿರುವ ದ್ರಾಕ್ಷಿಯ ತೋಟಗಳು ಸಾಕಷ್ಟಿವೆಯೆಂದೂ ಅವು ಬಹಳ ಪ್ರಸಿದ್ಧವಾದವೆಂದೂ ಹೇಳಿದ್ದಾನೆ. ಇತ್ತೀಚೆಗೆ ಇಲ್ಲಿಯ ಜನರ ಅಭ್ಯುದಯಕ್ಕಾಗಿ ಕಾಲೇಜೊಂದನ್ನು ಆರಂಭಿಸಲಾಗಿದೆ. ಇಲ್ಲಿ ಪೌರಸಭೆಯಿದೆ.

4 ಕಬ್ಬೂರು : ಚಿಕ್ಕೋಡಿಯ ದಕ್ಷಿಣಕ್ಕೆ 12 ಮೈ. ಅಂತರದಲ್ಲಿ ಸಮುದ್ರಪಾತಳಿಯಿಂದ 2, 030 ಎತ್ತರದಲ್ಲಿದೆ. ಇದೊಂದು ರೈಲ್ವೆ ನಿಲ್ಧಾಣ. ಇಲ್ಲಿ ಸುಮಾರು 50ಕ್ಕೂ ಹೆಚ್ಚು ತೋಟಗಳಿವೆ. ಇಲ್ಲಿಯ ಈಶ್ವರ ದೇವಾಲಯದಲ್ಲಿ ಒಂದು ಶಾಸನವಿದೆ.

5 ಕರೋಸಿ : ಚಿಕ್ಕೋಡಿಯಿಂದ 4 ಮೈ. ದೂರದಲ್ಲಿ ಸಮುದ್ರಪಾತಳಿಯಿಂದ 2,283 ಎತ್ತರದಲ್ಲಿದೆ. ಪ್ರತಿವರ್ಷ ಈ ಊರಿನಲ್ಲಿ ಶ್ರಾವಣ ಮಾಸದ ಸಮಯಕ್ಕೆ ಗಂಟೆ ಬಸವನ ಜಾತ್ರೆ ನಡೆಯುತ್ತದೆ.

6 ಕೊಂಗನೊಳ್ಳಿ : ಚಿಕ್ಕೋಡಿಯ ವಾಯುವ್ಯಕ್ಕೆ 22 ಮೈ. ಅಂತರದಲ್ಲಿದೆ. ಇಲ್ಲಿ ಗುರುವಾರ ಸಂತೆ ನೆರೆದು, ಅಕ್ಕಿ, ಸಕ್ಕರೆ, ಉಪ್ಪು, ಬಟ್ಟೆ, ಕಂಬಳಿಗಳ ವ್ಯಾಪಾರ ಸಾಗುತ್ತದೆ. ಇಲ್ಲಿ 1877ಕ್ಕೂ ಮೊದಲು ಕಾಗದವನ್ನು ಮಾಡುವ ಕಾರ್ಖಾನೆಗಳಿದ್ದುವೆಂದು ತಿಳಿದುಬರುತ್ತದೆ. ಇಲ್ಲಿ ಒಂದು ಹಾಳು ಕಿಲ್ಲೆಯೂ ಇದೆ.

7 ನಿಪ್ಪಾಣಿ : ಚಿಕ್ಕೋಡಿಯ ಪಶ್ಚಿಮಕ್ಕೆ 15 ಮೈ. ಮೇಲೆ ಇದೆ. ತಾಲ್ಲೂಕಿನ ಬಹು ದೊಡ್ಡ ವ್ಯಾಪಾರಕೇಂದ್ರ. ನಗರಪಾಲಿಕೆ, ಧರ್ಮಶಾಲೆ, ಗ್ರಂಥಭಂಡಾರ, ಕಾಲೇಜುಗಳಿಂದ ಕೂಡಿ ಪ್ರಗತಿಹೊಂದಿದೆ. ಜನಸಂಖ್ಯೆ 35,116 (1971). ಇಲ್ಲಿ ಅಕ್ಕಿ, ಅಡಕೆ, ಏಲಕ್ಕಿ, ಕಿರಾಣಿ, ಸಕ್ಕರೆ, ಕಾಳು, ವಸ್ತ್ರ, ಪಾತ್ರೆಗಳ ವ್ಯಾಪಾರ ಏಳಿಗೆಯಲ್ಲಿದೆ. ತಂಬಾಕಿನ ವ್ಯಾಪಾರಕ್ಕೆ ಈ ಊರಿನ ಮಾರುಕಟ್ಟೆ ಹೆಸರುವಾಸಿ. ದನಗಳ ವ್ಯಾಪಾರಕ್ಕೂ ಇದು ಪ್ರಸಿದ್ಧವಾಗಿದೆ. ಊರು ಪ್ರಸಿದ್ದಿಗೆ ಬರಲು ದೇಸಾಯಿ ಸಿದೋಜಿರಾವ್ ಅಪ್ಪಾಸಾಹೇಬ ನಿಂಬಾಳಕರ್ ಎಂಬವನು ಕಾರಣನೆಂದು ಹೇಳಲಾಗಿದೆ. 1812ರಲ್ಲಿ ಪ್ರೆಸಿಡೆಂಟನಾಗಿದ್ದ ಎಲ್ ಫಿನ್ ಸ್ಟನ್ ಸಾಹೇಬನ ಮಧ್ಯಸ್ಥಿಕೆಯಿಂದ ಕೊಲ್ಲಾಪುರುದ ಅರಸಮನಗೋಳಿ ಮತ್ತು ಚಿಕ್ಕೋಡಿ ಪರಗಣೆಗಳನ್ನು ಪುನ: ತೆಗೆದುಕೊಂಡು ಕೊಲ್ಲಾಪುರದ ಅರಸನಿಗೆ ಕೊಟ್ಟರು. 1839ರಲ್ಲಿ ಅಪ್ಪಾಸಾಹೇಬ ಮರಣ ಹೊಂದಿದಾಗ ಇಂಗ್ಲೀಷ್ ಸರ್ಕಾರ ಅವನ ಮೊದಲಿನ 15000ದ ದೇಸಗತಿಯನ್ನು ಬಿಟ್ಟು ಉಳಿದ ಸೀಮೆಯನ್ನೆಲ್ಲ ತನ್ನ ವಶಕ್ಕೆ ತೆಗೆದುಕೊಂಡಿತು. ನಿಪ್ಪಾಣಿ ಸಮುದ್ರಪಾತಳಿಯಿಂದ 2,288 ಎತ್ತರದಲ್ಲಿದೆ. ವ್ಯಾಪಾರದ ದೃಷ್ಟಿಯಿಂದ ಉಜ್ವಲ ಭವಿಷ್ಯವುಳ್ಳ ಊರಿದು.

8 ಯಮಕನ ಮರಡಿ : ಚಿಕ್ಕೋಡಿಯ ದಕ್ಷಿಣಕ್ಕೆ 20 ಮೈ. ಅಂತರದಲ್ಲಿ ಒಂದು ಹಳೆಯ ಕಾಲದ ಕೋಟೆಯಿಂದ ಕೂಡಿರುವ ಊರು. ಇಲ್ಲಿ ಕಾಳು, ವಸ್ತ್ರ, ತೆಂಗು, ಉತ್ತತ್ತಿ ಮೊದಲಾದ ಸರಕುಗಳ ವ್ಯಾಪಾರ ನಡೆಯುತ್ತದೆ. ಇಲ್ಲಿ ಮಂಗಳವಾರ ಸಂತೆ ಕೂಡುತ್ತದೆ.

9 ಎಡೂರು: ಕೃಷ್ಣಾ ನದಿಯ ದಂಡೆಯ ಮೇಲೆ ಚಿಕ್ಕೋಡಿಯ ಈಶಾನ್ಯಕ್ಕೆ 12 ಮೈ. ಅಂತರದಲ್ಲಿದೆ. ಪ್ರತಿ ವರ್ಷ ಇಲ್ಲಿ ಶಿವರಾತ್ರಿಯ ಕಾಲಕ್ಕೆ ಒಂದು ತಿಂಗಳ ಕಾಲ ವೀರಭದ್ರದೇವರ ಜಾತ್ರೆ ಜರಗುತ್ತದೆ. ಇದೊಂದು ಪುಣ್ಯಕ್ಷೇತ್ರವೆಂದು ಪರಿಗಣಿತವಾಗಿದೆ.

ಅಂಕಲಿ, ಬಂಬಲವಾಡ, ಬೆಡಕಿಹಾಳ, ಬೆಳಕೂಡ, ಬೋರಗಾವ, ಚಿಂಚಣಿ, ಗಳತಿಗಿ, ಹತ್ತರವಾಟ, ಹಿರೇಕೋಡಿ, ಕಲ್ಲೋಳ, ಕೆರೊರ, ನಾಗರಮನೋಳಿ, ಸದಲಗಿ, ಎಕ್ಸಂಬ, ಮಾಂಜರಿ, ಶಮನೇವಾಡಿ, ಕರಗಾವ-ಇವು ಈ ತಾಲ್ಲೂಕಿನ ಇನ್ನು ಕೆಲವು ಮುಖ್ಯ ಊರುಗಳು. (ವಿ.ಕೆ.ಯು.ಎಸ್.)