ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾವ್ಯಪ್ರಯೋಜನ

ವಿಕಿಸೋರ್ಸ್ದಿಂದ

ಮಮ್ಮಟ
ಕಾವ್ಯ ಪ್ರಯೋಜನಗಳು:- ಕಾವ್ಯವನ್ನು ರಚಿಸುವುದರಿಂದ ಕವಿಗಾಗಲೀ ರಚಿಸಿದ ಕಾವ್ಯಗಳನ್ನು ಓದುವುದರಿಂದ ಸಹೃದಯರಿಗಾಗಲೀ ಆಗುವ ಉಪಯೋಗವೇನು ಎಂಬ ಪ್ರಶ್ನೆಗೆ ಅನೇಕ ಲಾಕ್ಷಣಿಕರು ಅನೇಕ ಬಗೆಯಲ್ಲಿ ಉತ್ತರಿಸಿದ್ದಾರೆ.

 ಭರತಮುನಿ ತನ್ನ ನಾಟ್ಯಶಾಸ್ತ್ರದಲ್ಲಿ ನಾಟ್ಯ ಪ್ರಯೋಜನವನ್ನು ಹೇಳುತ್ತ ಲೋಕದಲ್ಲಿ ನಾಟ್ಯವೆಂಬುದು ದುಃಖ, ಶ್ರಮ ಮತ್ತು ಶೋಕದಿಂದ ಬೇಸತ್ತ ಜನರಿಗೆ ವಿಶ್ರಾಮಜನಕವಾಗುತ್ತದೆ ಎಂದಿದ್ದಾನೆ.

 ಸಾಧುಕಾವ್ಯ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳಲ್ಲಿ ವೈಚಕ್ಷಣ್ಯವನ್ನೂ ಪ್ರೀತಿಯನ್ನೂ ಕೀರ್ತಿಯನ್ನೂ ಉಂಟುಮಾಡುತ್ತದೆ ಎಂಬುದು ಭಾಮಹ, ವಾಮನ ಮುಂತಾದವರ ಅಭಿಪ್ರಾಯ.

 ಕಾವ್ಯಪ್ರಕಾಶಕಾರನಾದ ಮಮ್ಮಟ ಎಲ್ಲ ಅಲಂಕಾರಿಕರ ಅಭಿಪ್ರಾಯವನ್ನೂ ಕ್ರೋಢೀಕರಿಸಿ ಕಾವ್ಯ ಯಶಸ್ಸಿಗಾಗಿ, ಧನಾರ್ಜನೆಗಾಗಿ, ವ್ಯವಹಾರ ಜ್ಞಾನಕ್ಕಾಗಿ, ಅಮಂಗಳ ನಿವಾರಣೆಗಾಗಿ, ತತ್ಕಾಲದಲ್ಲೇ ಪರಮೋತ್ಕøಷ್ಟವಾದ ಆನಂದಾನುಭವಕ್ಕಾಗಿ ಮತ್ತು ಕಾಂತೆಯಂತೆ ಉಪದೇಶಿಸುವುದಕ್ಕಾಗಿ-ಎಂದು ಹೇಳಿ ಕಾವ್ಯಸೃಷ್ಟಿಗೆ ಹೆಚ್ಚು ವ್ಯಾಪಕವಾದ ಪ್ರಯೋಜನವನ್ನೇ ಹೇಳಿದ್ದರೂ 'ರಸಾಸ್ವಾದನ ಕ್ಷಣದಲ್ಲಿಯೇ ಜನಿಸಿ, ಬೇರೆಲ್ಲವನ್ನೂ ಮರೆಸಿ ಬಿಡುವಂಥ ಪರನಿರ್ವೃತಿಯೇ-ಆನಂದವೇ-ಸಕಲ ಪ್ರಯೋಜನ ಮೂಲಭೂತವಾದುದು' ಎಂಬ ಅಂಶವನ್ನು ಒತ್ತಿ ಹೇಳಿದ್ದಾನೆ.

 ಪಂಪ ತನ್ನ ಆದಿಪುರಾಣದ ಪೀಠಿಕಾ ಪ್ರಕರಣದಲ್ಲಿ ಹೇಳಿರುವ ಮಾತುಗಳು ಬಹಳ ಮಾರ್ವಿಕವಾಗಿವೆ: ಕವಿತೆಯಲ್ಲಿ ಆಶೆಮಾಡುವುದರಿಂದ ಒದಗುವ ಫಲವೇನು ? ಪೂಜೆಯೆ ? ಕೀರ್ತಿಯೆ ? ಧನಕನಕಗಳೆ ? ಇಂದ್ರಪೂಜೆ, ಲೋಕೋತ್ತರವಾದ ಕೀರ್ತಿ, ಮುಕ್ತಿಲಾಭ-ಇವು ಜಿನೇಂದ್ರನ ಗುಣಸ್ತುತಿಯಿಂದ ತಾವೆ ಒದಗುತ್ತವಾಗಿ ಬೇರೆಯವರು ಕೊಡುವುದೇನನ್ನು, ಮಾಡುವುದೇನನ್ನು! ಅವರಿಂದ ಆಗಬೇಕುದುದಾದರೂ ಏನು!

 ಕಾವ್ಯ ಸೃಷ್ಟಿಸಿದ ಕವಿಗೆ ಆನಂದ, ಯಶಸ್ಸುಗಳನ್ನೂ ಸಹೃದಯರಿಗೆ ಆನಂದ. ವ್ಯವಹಾರಜ್ಞಾನ ಮತ್ತು ಉಪದೇಶಾದಿಗಳನ್ನೂ ಒದಗಿಸುತ್ತದೆ. ಕಾವ್ಯಕಲೆಯ ಸದ್ಯಃ ಪ್ರಯೋಜನ ಕವಿ ಸಹೃದಯರಿಬ್ಬರಿಗೂ ಸೌಂದರ್ಯಾನುಭೂತಿಯಿಂದುಂಟಾಗುವ ಲೋಕೋತ್ತರವಾದ ಆನಂದ.

 ಮೇಲಿನ ಕೆಲವು ಅಭಿಪ್ರಾಯಗಳನ್ನು ನೋಡಿದರೆ ಕಾವ್ಯಮೀಮಾಂಸಕರು ಪ್ರಯೋಜನ ಎಂಬ ಪದವನ್ನು ವಿಶಿಷ್ಟಾರ್ಥದಲ್ಲಿ ಬಳಸಿರುವಂತೆ ಕಾಣುತ್ತದೆ. ಇಲ್ಲಿನ ಪ್ರಯೋಜನ ವ್ಯಾವಹಾರಿಕ ದೃಷ್ಟಿಯದಲ್ಲ. ವ್ಯವಹಾರದಲ್ಲಿ ಮನುಷ್ಯ ಹಣದ ಆಸೆಯಿಂದ, ಯಶಸ್ಸಿನ ಆಸೆಯಿಂದ, ಬೇರಿನ್ನಾವುದೋ ಲಾಭದ ಆಸೆಯಿಂದ ಕೆಲಸ ಮಾಡುತ್ತಾನೆ. ಅಂಥ ಲಾಭ ಕಾವ್ಯರಚನೆಯಿಂದ ಕವಿಗಾಗಲೀ ಕಾವ್ಯವ್ಯಾಸಂಗದಿಂದ ಓದುಗರಿಗಾಗಲೇ ಲಭಿಸುವುದಿಲ್ಲವೆಂದು ಲಾಕ್ಷಣಿಕರ ಅಭಿಪ್ರಾಯ. ಬರೆದ ಕವಿಗೆ ದ್ರವ್ಯಲಾಭವಾಗಿರಬಹುದು; ದಾನದತ್ತಿಗಳು ದೊರಕಿರಬಹುದು; ಆನೆಯ ಮೇಲಿನ ಮೆರವಣಿಗೆಯ ಭಾಗ್ಯ ಸಿಕ್ಕಿರಬಹುದು. ಆದರೆ ಅದೇ ಕಾವ್ಯದ ಪ್ರಯೋಜನವಲ್ಲ. ಅಲ್ಲ ಎನ್ನುವುದನ್ನು ಪಂಪನ ಮಾತು ಚೆನ್ನಾಗಿ ಸಮರ್ಥಿಸುತ್ತದೆ. ಎಲ್ಲ ಕಲೆಗಳೂ ನಿಷ್ಟ್ರಯೋಜಕ-ಎಂಬ ಆಂಗ್ಲ ಸೂಕ್ತಿಯೊಂದಿದೆ. ಅದರ ಅರ್ಥವೂ ಇದೇ. ಕಾವ್ಯವೂ ಒಂದು ಕಲೆ. ಕಲೆಯಿಂದ ದೊರಕುವ ಪ್ರಯೋಜನ ಲೌಕಿಕ ಲಾಭವಲ್ಲ. ಅದು ಬರೆದವನಿಗೂ ಓದುವವನಿಗೂ ಒದಗಿಸುವುದು ಸಕಲ ಪ್ರಯೋಜನಗಳಿಗೂ ಮೂಲಭೂತವೆನಿಸಿರುವ ಆನಂದವನ್ನು. ಅದೇ ಅದರ ಪರಮ ಪ್ರಯೋಜನ. ಕಲೆಗಾಗಿ ಕಲೆ ಎಂಬ ಸೂಕ್ತಿಗೆ ಈ ರೀತಿಯ ವಿವರಣೆ ಕೊಟ್ಟರೆ ಚೆನ್ನಾದೀತು. ಕಾವ್ಯ ರಚನೆ ಮತ್ತು ಕಾವ್ಯವ್ಯಾಸಂಗದ ಹವ್ಯಾಸ ಇನ್ನೇನನ್ನಲ್ಲದಿದ್ದರೂ ಜನರ ದುಃಖವನ್ನು ನಿವಾರಿಸಿ ವಿಶ್ರಾಂತಿ, ವಿರಾಮಗಳನ್ನೊದಗಿಸುತ್ತದೆ. ಎಲ್ಲ ಹವ್ಯಾಸಗಳಿಗಿಂತ ಕಲೆಯ ಹವ್ಯಾಸ ಪರಿಣಾಮದ ದೃಷ್ಟಿಯಿಂದ ಉತ್ತಮವಾದುದು. ಭರತಮುನಿ ಈ ಮಾತನ್ನು ಹೇಳಿದ್ದಾನೆ. ಕಾವ್ಯದಲ್ಲಿನ ರಸವನ್ನು ಬ್ರಹ್ಮಾನಂದ ಸೋದರನೆಂದು ಕರೆದಿರುವವರು ಕಾವ್ಯದಿಂದ ಆಗಬಹುದಾದ ಅತ್ಯುನ್ನತ ಉಪಕಾರವನ್ನು ಹೆಸರಿಸಿದ್ದಾರೆ.     (ಸಿ.ಜಿ.ಪಿ.)

ಮಮ್ಮಟ