ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕನ್ನಡದಲ್ಲಿ ವಿಡಂಬನೆ ಸಾಹಿತ್ಯ

ವಿಕಿಸೋರ್ಸ್ದಿಂದ

ಕನ್ನಡದಲ್ಲಿ ವಿಡಂಬನಸಾಹಿತ್ಯ : ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ವಿಡಂಬನಕ್ಕೇನೂ ಕೊರತೆಯಿಲ್ಲ. ಆದರೆ ವಿಡಂಬನವೆಂಬ ಸಾಹಿತ್ಯಪ್ರಕಾರ ಮೈ ತಳೆದು ಬೆಳೆದದ್ದು 20ನೆಯ ಶತಮಾನದಲ್ಲೇ. ಈ ಪ್ರಕಾರಕ್ಕೇ ಅಷ್ಟಾಗಿ ಪ್ರಾಮುಖ್ಯವಿಲ್ಲದಿದ್ದ ಹಿಂದಿನ ಕಾಲದಲ್ಲಿ ವಿಡಂಬನವನ್ನೆ ಮುಖ್ಯೋದ್ದೇಶವಾಗಿ ಕೈಕೊಂಡು ಕೃತಿರಚನೆ ಮಾಡಿದ ಕವಿಯಂತೂ ಯಾರೂ ಇಲ್ಲ. ಶೃಂಗಾರ, ವೀರ, ಕರುಣಾದಿ ರಸಗಳ ಮೇಲೆ ಕಣ್ಣಿಟ್ಟ ಕವಿಗಳು ಆಗಾಗ್ಗೆ ಶೃಂಗಾರಕ್ಕೊ, ವೀರಕ್ಕೊ, ಕರುಣಕ್ಕೊ ಹೆಚ್ಚಿನ ಪ್ರಾಧಾನ್ಯ ಕೊಟ್ಟದ್ದುಂಟು. ವಿಡಂಬನ ಸಾಹಿತ್ಯವೆಂಬ ವಿಶಿಷ್ಟ ಪ್ರಕಾರವಂತೂ ಅವರ ಯೋಚನೆಯ ಪರಿಧಿಯೊಳಕ್ಕೆ ಬಂದೇ ಇರಲಿಲ್ಲ. ಮಾತು ಎಷ್ಟು ಸಹಜಮೋ ಅಷ್ಟೇ ಸಹಜವಾಗಿ ಅದರೊಂದಿಗೆ ಅಂಟಿಕೊಂಡ ವಿಡಂಬನದ ಮೆಟ್ಟಿಲುಗಳನ್ನು ಎಣಿಸಿ ಪಟ್ಟಿಮಾಡಲು ಯಾರೂ ಪ್ರಯತ್ನಿಸಲಿಲ್ಲ. ಆದರೆ ಪಾತ್ರಾಪಾತ್ರಗಳ ನಡುವಣ ಕಟಿಕಿ, ನಿಂದೆ, ಮೂದಲೆ, ಅಪಹಾಸ್ಯ, ವಕ್ರೋಕ್ತಿ,ಪರಿಹಾಸ ಮುಂತಾದವಕ್ಕೂ ಸಮಾಜ ಅಥವಾ ಸನ್ನಿವೇಶಜನ್ಯವಾದ ಜುಗುಪ್ಸೆ, ವಿನೋದ, ಕ್ರೋಧ, ಅಸಮಾಧಾನಗಳನ್ನು ನಗೆಯ ಉಬ್ಬು ಕನ್ನಡಿಯಿಂದ ಕಂಡಾಗ ಧ್ವನಿಯುಕ್ತವಾದ ಸಾಹಿತ್ಯಕ್ಕೆ ಕನ್ನಡದಲ್ಲಿ ಕೊರತೆಯಿಲ್ಲ ಎನ್ನಬಹುದು. ಶಾಸನದಿಂದ ಸರ್ವಜ್ಞನ ವರೆಗೆ ಹಳೆಯ ಸಾಹಿತ್ಯದಲ್ಲಿ ಎಲ್ಲೆಲ್ಲೂ ವಿಡಂಬನದ ನೂರಾರು ಉದಾಹರಣೆಗಳು ದೊರಕುತ್ತವೆ. ತುರುಗೋಳು ಗಡಿಕಾಳಗಗಳಲ್ಲಿ ಜೀವ ತೆತ್ತವರನ್ನು ಗೌರವಿಸಿ ನೆಟ್ಟ ವೀರಗಲ್ಲುಗಳು ಮತ್ತು ಮಾಸ್ತಿಕಲ್ಲುಗಳು ವಿಡಂಬನದ ತವರುಗಳು. ಕಟ್ಟಿದ ಸಿಂಘಮನ್ ಕೆಟ್ಟೊದೇನಮಗೆನ್ದು ಬಿಟ್ಟಮೋಲ್ ಕಲಿಗೆ ವಿಪರೀತಂಗಹಿತಕರ್ಕ್‌ಳ್ ಕೆಟ್ಟರ್ ಮೇಣ್ ಸತ್ತರ ವಿಚಾರಂ - ಎಂಬುದಾಗಿ ಕಲಿಯುಗವಿಪರೀತನಾದ ಕಪ್ಪೆ ಅರಭಟ್ಟನ ಪ್ರತಾಪವನ್ನು ಕುರಿತ ಬಾದಾಮಿ ಶಾಸನದಲ್ಲಿ (ಸು.700) ಅವನನ್ನು ಕೆಣಕುವವರ ಬಗ್ಗೆ ಅಪಹಾಸ್ಯವಿದೆ. ಇಂಥ ಎಷ್ಟೋ ಉದಾಹರಣೆಗಳನ್ನು ಶಾಸನಗಳಲ್ಲಿ ಕಾಣಬಹುದು. ಹಿಂದಿನ ಕಾಲದ ಪ್ರತಿಯೊಬ್ಬ ಕವಿಯೂ ಸಾಮಾನ್ಯವಾಗಿ ಮಾಡುತ್ತಿದ್ದ ಪ್ರಶಂಸೆ, ಅನ್ಯಕವಿನಿಂದೆಗಳು ಈ ಬಗೆಯ ವಿಡಂಬನಕ್ಕೆ ಸೂಕ್ತ ಉದಾಹರಣೆಗಳು. ಗೂಡಾರದ ಕವಿಯಂತಿರೆ ಮುಚ್ಚಿಪೋದ ಕವಿಯುಂ ಕವಿಯೇ ಎಂದೋ ಹಗವಿಗಳ ಕಬ್ಬಂಗಳ ಹೊಗಳಿಯಕ್ಕರದ ಹೊಲಿಗೆ, ಬಿರ್ಚಿದೊಡೆಲ್ಲಂ ಬತಾಗ ಬೀಗವೆತ್ತತತ್ತರವೆಕ್ಕಸಕ್ಕಮಸ್ತವ್ಯಸ್ತಂ ಎಂದೋ ಅಪಹಾಸ್ಯ ಮಾಡಿದ್ದಾರೆ. ನೇರವಾಗಿ ದಿsಕ್ಕರಿಸುವುದೂ ಒಂದು ಮಾರ್ಗ. ಧರೆಯೊಳ್ ಮೇಣ್ ಪುಟ್ಟಿ ಪುಟ್ಟುತ್ತುರುರ್ವ ನರರ ಮೇಲುರ್ಬಿ ಕಬ್ಬಂಗಳಂ ಬಿತ್ತರಿಸುತ್ತುಂ ಸಪ್ರಯಾಸಂ ಕೆಲಕೆಲರಕಟಾ ಕಬ್ಬಿಗರ್ ಕೆಟ್ಟುಪೋದರ್ ಎಂಬ ಪಾರಮಾರ್ಥಿಕವಾದ ಮರುಕ ದೃಷ್ಟಿ ಮತ್ತೊಂದು ಮಾರ್ಗ.

ಒಬ್ಬ ಒಂದು ಒಳ್ಳೆಯ ಕೃತಿ ಬರೆದಾಗ ಇತರರು ಅವನ ಶೈಲಿಯನ್ನೋ ಕಥೆಯನ್ನೋ ಅನುಕರಿಸಿ ಬರೆಯತೊಡಗುತ್ತಿದ್ದುದೂ ವಿಡಂಬನೆಗೆ ತುತ್ತಾಗದಿರಲಿಲ್ಲ. ರಾಮಾಯಣಗಳು ಅತಿಯಾದಾಗ ಮಿಡಿದ ಕುಮಾರವ್ಯಾಸ ಕವಿಯ ಹಾಸ್ಯದ ಮೊನೆ ತೀಕ್ಷ್ಣವಾದದ್ದು. ತಿಣಿಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ, ತಿಂತಿಣಿಯ ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲ ಎಂದು ಆತ ಬರೆದ. ಇದು ರಾಮಾಯಣಕ್ಕೆ ಮಾತ್ರ ಅನ್ವಯಿಸುವುದಿಲ್ಲ. ಮಹಾಭಾರತವನ್ನು ಹೊತ್ತು ಮುಲುಗಾಡಿದ ಅಳಿಗವಿಗಳಿಗೂ ಅನ್ವಯಿಸುತ್ತದೆ.

ಕವಿ-ವಾಚಕ-ವಿಮರ್ಶಕರ ಸಂಬಂಧವನ್ನು ಕುರಿತಾದ ವಿಡಂಬನೆಗೂ ಹಳಗನ್ನಡ ಸಾಹಿತ್ಯದಲ್ಲಿ ಕೊರತೆಯಿಲ್ಲ. ಇರುಮರುಳೆ ಶುಷ್ಕ ವೈಯಾಕರಣಂಗಂ ಶುಷ್ಕ ತಾರ್ಕಿಕಂಗಂ ಬೆಳ್ಳಕ್ಕರಿಗಂಗಂ ವಿಷಯವೆ ಕಾವ್ಯರತ್ನಮತಿಚತುರಕವಿ-ಕದಂಬಕ ವಿಷಯಂ ಎನ್ನುತ್ತಾನೆ ಪಂಪ. ಆರಾರೇರರ್ ಶಾಸ್ತ್ರ ಶ್ರೀರೋಹಣಗಿರಿಯನಲ್ಲಿ ನವಕವಿತಾ ಚಿಂತಾರತ್ನಂ ದೊರೆಗುಮೇ ಮಾರಾರಿಯ ಕೃಪೆಯಿಲ್ಲದಂಗೆ ಧರಣೀ ತಳದೊಳ್ ಎಂಬುದು ಷಡಕ್ಷರಿಯ ಚಿರಂತನ ಪ್ರಶ್ನೆ. ಎನಿತನೊಲ್ದು ಪೇಳ್ ಕವಿಯೇವನ್? ಅದಂ ಪೆಸರಿಟ್ಟು ಮೆಚ್ಚಬಲ್ಲವನನಸಲ್ಕೆವೇ¿Ä್ಪದು, ಕಟ್ಟಿಯುಮೇನೊ ಮಾಲೆಗಾರನ ಪೊಸ ಬಾಸಿಗಂ ಮುಡಿವ ಭೋಗಿಗಳಿಲ್ಲದೆ ಬಾಡಿಪೋಗದೇ? ಎಂಬುದು ಜನ್ನನ ಅಳಲು. ಆದರೆ ಇದನ್ನರಿಯಲಾರದ ಅನೇಕರು ಎಲ್ಲ ಕಾಲಕ್ಕೂ ಇದ್ದಾರೆ. ಇಂಥವರನ್ನು ಅನೇಕ ಕವಿಗಳು ವಿಡಂಬಿಸಿದ್ದಾರೆ. ಕು¾ೆಗಳೋಪಾದಿಯಲ್ಲಿ ಕಬ್ಬಿನ ಹೊರಗಣೆಲೆಯನು ಮೇದಕ ಮೇಲುಕಿರÄವು ತಲ್ಪಸುಖಕ್ಕೆ ಸೋಲಬಾರದೆಂಬುದು ಚಾಮರಸನ ಚುಚ್ಚುನುಡಿ.

ಪ್ರಾಚೀನವಾದ ಕನ್ನಡ ಭಾಷೆಯ ಮೇಲೆ ಆದ ಸಂಸ್ಕೃತದ ಪ್ರಭಾವದಿಂದಾಗಿ ಕನ್ನಡದ ಶಬ್ದಭಂಡಾರ ಇನ್ನಷ್ಟು ಸಮೃದ್ಧವಾಗಿ ಬೆಳೆಯಿತೆಂಬುದು ನಿಜವಾದರೂ ಸಂಸ್ಕೃತದ ಬಗ್ಗೆ ಹಲವರು ತಳೆದ ಅತಿಯಾದ ಮೋಹವನ್ನೂ ಕನ್ನಡಕ್ಕಿಂತ ಸಂಸ್ಕೃತವೇ ಉತ್ತಮ ವಾದುದೆಂಬ ಅವರ ಮನೋಭಾವವನ್ನೂ ಅನೇಕ ಕವಿಗಳು ವಿಡಂಬನದ ಕತ್ತಿಯಿಂದ ಕತ್ತರಿಸಲು ಯತ್ನಿಸಿದ್ದಾರೆ. ಪಳಿಗನ್ನಡದೆ ಪುದುಂಗೊಳೆ ಕೋ¾Âಸಕ್ಕದಮಂ ತಗುಳ್ಚಿ ಜಾಣ್ ಕಿಡೆ ಮುತ್ತುಂ ಮೆ¿ಸುಂಗೋದಂತಿರೆ ಪೇ¿್ವ¿Âಗವಿಗಳ ಕವಿತೆ ಬುಧರನೆರ್ದೆಗೊಳಿಸುಗುಮೇ ಎಂಬುದು ಈ ಬಗ್ಗೆ ಕವಿಯ ಉದ್ಗಾರ. ಸಂಸ್ಕೃತದಲ್ಲಿ ಹೇಳುವುದಾದರೆ ಸಂಸ್ಕೃತದಲ್ಲೇ ಹೇಳಿ, ಶುದ್ಧ ಕನ್ನಡದಲ್ಲಿ ಸಂಸ್ಕೃತವನ್ನು ತರುವುದೇಕೆ? ತಕ್ಕುದೆ ಬೆರಸಲ್ಕೆ ಘೃತಮುಮಂ ತೈಲಮುಮಂ ಎಂಬ ನಯಸೇನನ ಮಾತಿನ ನಂಜು ಬಲು ತೀವ್ರ. ಆದರೂ ಇದು ಸಕ್ಕದದೊಂದು ಚೆಲ್ವು ಎಂದು ಸಂಸ್ಕೃತಕ್ಕೆ ಜೋತುಬಿದ್ದವರನೇಕರ ಮನೋಧರ್ಮವನ್ನು ಹತ್ತೊಂಬತ್ತನೆಯ ಶತಮಾನದ ಕೊನೆಯಲ್ಲಿದ್ದ ಮುದ್ದಣ ಕವಿ ಮನೋರಮೆಯ ಬಾಯಲ್ಲಿ ವಿಡಂಬಿಸಿದ್ದಾನೆ. ಸಂಸ್ಕೃತ ಕನ್ನಡಗಳು ಪರಸ್ಪರ ಪುರಕವಾಗಿ ಬೆರೆಯಬೇಕೆಂಬುದಾಗಿ ಆತ ತೀರ್ಪು ನುಡಿದಿದ್ದಾನೆ.

ಪಂಪಯುಗ: 10ನೆಯ ಶತಮಾನದಲ್ಲಿದ್ದ ಪಂಪನ ಆದಿಪುರಾಣವಾಗಲಿ, ವಿಕ್ರಮಾರ್ಜುನವಿಜಯವಾಗಲಿ ವಿಡಂಬನಕಾವ್ಯಗಳಲ್ಲ. ಆದರೂ ವಿಡಂಬನದ ಹಲವು ಪ್ರಸಂಗಗಳು ಈ ಕಾವ್ಯಗಳಲ್ಲಿ ಕಂಡುಬರುತ್ತವೆ. ಒಂದು ಪಾತ್ರ ಇನ್ನೊಂದು ಪಾತ್ರವನ್ನು ಕುರಿತಾಡುವ ವಿಡಂಬನವೇ ಇಲ್ಲಿ ಹೆಚ್ಚು. ರಾಜಸೂಯಯಾಗದಲ್ಲಿ ಕೃಷ್ಣನಿಗೆ ಅಗ್ರಪುಜೆಯ ಮರ್ಯಾದೆಯೆಂಬುದು ತಿಳಿದಾಗ ಶಿಶುಪಾಲ ಗಳಪುವ ನುಡಿ ಒಂದು ಉದಾಹರಣೆ. ತನ್ನಂಥ ದನುಜ ಪುಟ್ಟದ್ದರಿಂದ ಕೃಷ್ಣನಿಗೆ ದನುಜಾಂತಕನೆಂಬ ಬಿರುದು ಲಭ್ಯವಾಯಿತೆಂದು ಆತ ಮೂದಲಿಸುತ್ತಾನೆ. ಕೃಷ್ಣ ಸಂಧಾನಕ್ಕೆ ಬಂದಿದ್ದಾಗ, ದುರ್ಯೋಧನನಿಗೆ ಆತ ಬುದ್ಧಿವಾದವನ್ನು ಹೇಳಿದಾಗ ದುರ್ಯೋಧನ ಕೊಡುವ ‘ನಾವೆಲ್ಲರು ಒಂದೆ ಗರುಡಿಯೊಳ್ ಓದಿದ ಮಾನಸರು. ನೀನು ಸುಮ್ಮನೆ ಬಳಲಬೇಡ, ಇರದೆ ಅಡಿ ಎತ್ತು’ ಎಂದ ಮಾತು ವ್ಯಂಗ್ಯಕ್ಕೆ ಸುಂದರವಾದ ಉದಾಹರಣೆಯಾಗಿದೆ. ಬಿsೕಷ್ಮನಿಗೆ ಸೇನಾದಿsಪತ್ಯ ದೊರಕಿದ ಸಂದರ್ಭದಲ್ಲಿ ಕರ್ಣನನ್ನು ಹೀನಕುಲಜನೆಂದು ದ್ರೋಣಾಚಾರ್ಯ ಹೇಳಿದಾಗ ಕರ್ಣ ನೀಡುವ ಉತ್ತರ ಸಮಾಜ ವಿಡಂಬನಕ್ಕೊಂದು ಉದಾಹರಣೆ. ಕುಲಮನೆ ಮುನ್ನಮುಗ್ಗಡಿಪಿರೇಂಗಳ ನಿಮ್ಮ ಕುಲಂಗಳಾಂತು ಮಾರ್ಮಲೆವನನಟ್ಟಿ ತಿಂಬುವೆ, ಕುಲಂ ಕುಲಮಲ್ತು ಚಲಂ ಕುಲಂ ಗುಣಂ ಕುಲಂ ಅಬಿsಮಾನಂ ಕುಲಂ - ಎಂಬುದು ಕರ್ಣನ ಕಟಕಿ. ಇಲ್ಲಿ ಸಮಾಜದ ಕಟ್ಟಳೆಯ ಬಗ್ಗೆ ನಂಜುನಗೆಯಿದೆ. ಅಶ್ವತ್ಥಾಮನು ಕರ್ಣನನ್ನು ಬಂiÀiÁ್ದಗ ಕರ್ಣ ಅಶ್ವತ್ಥಾಮನನ್ನು ಕುರಿತು ಹೇಳುವ ನೆಟ್ಟನೆ ವಿಷಮೊಳ್ಳೆಗುಳ್ಳೊಡಂ ಒಳ್ಳೆ ಒಳ್ಳೆಯೆ ಕಾಳಿಯನಾಗನಾಗದು ಎಂಬ ಮಾತಿನಲ್ಲಿ ಅಶ್ವತ್ಥಾಮನ ಶೌರ್ಯವನ್ನು ಕುರಿತ ವಿಡಂಬನೆ ಮೊನಚಾಗಿದೆ.

ರನ್ನನ ಗದಾಯುದ್ಧದಲ್ಲೂ ಕಟಕಿ ನಿಂದೆ ಅಪಹಾಸ್ಯ ಮೂದಲೆಗಳಿಗೆ ಕೊರತೆಯಿಲ್ಲ. ಇವಕ್ಕೆ ಕಾವು ಹೆಚ್ಚು. ಮೊನೆ ಅದಿsಕ. ಎಲ್ಲವನ್ನೂ ಸೋತು, ವೈಶಂಪಾಯನ ಸರೋವರವನ್ನು ಹೊಕ್ಕು ಕುಳಿತ ದುರ್ಯೋಧನನನ್ನು ಅರಸಿ ಹೊರಟಿದ್ದಾರೆ ಕೃಷ್ಣ, ಬಿsೕಮ. ಆ ಸಂದರ್ಭದಲ್ಲಿ ಬರುವ ಕುರುಧರೆಯೊಳ್ ಕುರುಪತಿಯನ¾ಸಿದಂ ಪವನಸುತಂ, ಇದೊಂದು ಲಜ್ಜೆಯಾಯ್ತು ಭರತಕುಲಕ್ಕೆ, ರಾಜ್ಯಲಕ್ಷ್ಮಿ ಪೇಸಿ ಬಿಸುಟ್ಟವನು ದುರ್ಯೋಧನ, ನೀರೊಳಗೆಸಡಿರ್ಕುಂ ಮೀನಿರ್ಕುಂ ಇರ್ಪರೆ ಗಂಡರ್? ಎಂಬ ಮಾತುಗಳು ಕೌರವನ ಕಡೆಗೆ ಎಸೆದ ಮೂದಲಿಕೆಯ ಕೂರಂಬುಗಳು. ಆದರೆ ಪಾಂಡವರಿಗೂ ಈ ಬಗೆಯ ಬಿರುದುಗಳನ್ನು ಪಡೆಯಲು ಅರ್ಹತೆಯಿಲ್ಲವೆ ನಾ¿Â್ಕಡಿಗಳೆದು¾Äಬೇರಂ ಬಿ¿Â್ಕಯುಮಂ ತಿಂದು ವನದೊಳಗಿದ್ದವರು ಪಾಂಡವರು. ಇನ್ನು ಬಿsೕಮಸೇನನ ಕೆಚ್ಚನ್ನೇನೆಂದು ಹೇಳೋಣ ಸಟ್ಟುಗಂ ಬಿಸುಟ್ಟು ಗದೆಗೊಂಡೊಟ್ಟೆಸುವಂಥದು! ದುರ್ಯೋಧನ, ಧರ್ಮಜಂ ಕೃಪೆಯಿಂದೊಳ್ಳಿತಂ ಪೇಳ್ದಪಂ - ಈಗಳುಂ ಕೇಳ್ದು ಬರ್ದುಕು - ಎಂದು ಉಪದೇಶ ಮಾಡಿದರೆ ಅವನಿಗೆ ಎಷ್ಟು ಉರಿಯಾಗಬೇಡ? ಕೊನೆಗೆ ಆತ ತೊಡೆಯೊಡೆದು ಬಿದ್ದ. ಇಡೆ ತೊಡೆಯನುಡಿದು ನೆಟ್ಟಗೆ ಕಡೆಯತ್ತುಂ ಕರ್ಚಿ ನೆಲನಾನದನೆಂತುಂ ಬಿಡೆನ್ -ಎಂದು ಹಟದಿಂದ ಭೂಮಿಯನ್ನಪ್ಪಿದ್ದಾನೆ. ಆತ ಈ ಸಂಗರಾಧ್ವರದಲ್ಲಿ ಅರಸನೇ ದೀಕ್ಷಿತ, ಉಳಿದ ನಾಲ್ವರು ಋತ್ವಿಜರು, ಮುರಹರನೇ ಉಪದೇಶಕ, ದ್ರೌಪದಿಯೇ ಗೃಹೀತವ್ರತಾಚರಣವ್ಯಾಪಿಕೆ, ಪರಿಭವವೇ ಸಂಚಾರಕ, ಕೌರವೇಶ್ವರನೇ ಪಶು. ವಿದೂಷಕನ ಈ ನಂಜು ಕೊರಳನ್ನು ಕೊಯ್ಯುವಂಥದು. ಬಿsೕಮ, ದುರ್ಯೋಧನರ ಗದಾಯುದ್ಧ ಸಂದರ್ಭದಲ್ಲಿ ಬರುವ ಮಾತುಗಳು ವ್ಯಂಗ್ಯಕ್ಕೆ ಹಾಸ್ಯಕ್ಕೆ ವಿಡಂಬನೆಗೆ ಸಾಕ್ಷಿಗಳಾಗಿವೆ.

ನಯಸೇನ, ಬ್ರಹ್ಮ, ಶಿವ, ವೃತ್ತವಿಲಾಸ: ಒಂದು ಪಾತ್ರದ ಮೇಲೆ ಪ್ರಯೋಗಿಸುತ್ತಿದ್ದ ವಿಡಂಬನಕ್ಕೆ ಸಮಾಜವೀಕ್ಷಣೆಯ ಕಣ್ಣು ದೊರೆತದ್ದೂ ಅನ್ಯ ಮತಗಳನ್ನೆ ಗುರಿಯಾಗಿಟ್ಟುಕೊಂಡು ಅವುಗಳನ್ನು ಪ್ರಹರಿಸುವ ಅಭ್ಯಾಸ ಬೆಳೆದದ್ದೂ ಮುಂದಿನ ಜೈನಕವಿಗಳ ಕಾವ್ಯಗಳಲ್ಲಿ. ನಯಸೇನ, ಬ್ರಹ್ಮಶಿವ, ವೃತ್ತವಿಲಾಸರು ಇದರಲ್ಲಿ ಅಗ್ರಗಣ್ಯರು. ಅನ್ಯಮತಾನುಯಾಯಿಗಳು ಜೈನರ ಉಪದೇಶದಿಂದ ಅವರ ಧರ್ಮಕ್ಕೆ ಪರಿವರ್ತನೆಗೊಳ್ಳುವ ಕಥೆಗಳೇ ಹಲವಾರು:

ಕಡುಮೂರ್ಖರ್ ತಮ್ಮಿಚ್ಫೆಗೆ ಪಿಡಿದುದೆ ಪಿರಿದೆಂಬರಣ್ಣ ಜಿನಮಾರ್ಗದೊಳೇಂ ನಡೆಯಲ್ ಬರ್ಕುಮೆ ಬಾರದು ಕಡಲೆಗಳಂ ತಿಂಬ ಮೊಗ್ಗು ಕಲ್ಗಳೊಳುಂಟೇ - ಎಂಬುದಾಗಿ ಜೈನಧರ್ಮದ ಹಿರಿಮೆಯನ್ನು ಇವು ಬೋದಿsಸುತ್ತವೆ. ಕಲಿತನದಿಂದಂ ಲೋಗರ್ ಪುಲಿಯಂ ಪಿಡಿದೊಡಮದೇಂ ಬಿಡೆಂಬರ್ ತಾಮೊಂ ದಿಲಿಯಂ ಪಿಡಿದೊಡಮದು ಪೆ ರ್ಬುಲಿಯೆಂಬರ್ ದುರ್ಜನರ್ಗೆ ತಾನಿದು ಸಹಜಂ - ಎಂಬುದು ಎಲ್ಲ ಕಾಲದಲ್ಲೂ ಕಾಣಬರುವ ಲೋಕರೂಡಿsಯ ವಿಡಂಬನೆ. ಕನ್ನಡಿಯಂ ತೋ¾ೆದೊಡತ್ಯುನ್ನತ ಸಲ್ಲಕ್ಷಣಂಗೆ ಮುಳಿಸಾಗದು ಮ ತ್ತೆನ್ನದೆ ಮೂಕೊ¾ೆಯಂಗಾ ಕನ್ನಡಿಯಂ ತೋ¾ೆ ಬಡಿಗುಮಿರಿಗುಂ ಕೊಲ್ಗುಂ

- ಎಂಬ ಇನ್ನೊಂದು ಪದ್ಯದಲ್ಲಿ ವಿಡಂಬನಕ್ಕೆ ಒಳಗಾಗಿರುವ ಮಾನವ ಸ್ವಭಾವ ವಾದರೂ ಸಾರ್ವಕಾಲಿಕ, ಸಾರ್ವದೇಶಿಕ. ಆಗಿನ ವೈದಿಕ ಮತದ ಅಂಧಾಚಾರವನ್ನು ಅಪಹಾಸ್ಯ ಮಾಡುವ ಪದ್ಯಗಳಿಗಂತೂ ಲೆಕ್ಕವೇ ಇಲ್ಲ. ಇದೊಂದು ಉದಾಹರಣೆ. ಹೋಮಮಂ ಮಾಡುವ ಬ್ರಾಹ್ಮಣಂ ನೊಣವು ಬೆನ್ನನೂ¾Âದೊಡೆ ಸೈರಿಸಲಾ¾ದೆ ಬೆನ್ನಂ ಪೊಯ್ದುಕೊಳ್ವುದುಂ ಕೆಲದೊಳಿರ್ದವರೆಲ್ಲಂ ಕೊಡನÀ ತುಪ್ಪದೊಳ್ ಕೈಯನದ್ದಿ ತಮ್ಮ ಬೆನ್ಗಳಂ ಪೊಯ್ದುಕೊಂಡರ್.

ಅಂಧಾನುಕರಣೆಯ ಶುಷ್ಕತೆ ಅಪಾಯಗಳನ್ನು ತೆಗಳಿ ಮಾಡಬಹುದಾದ ಹಲವಾರು ಉಪನ್ಯಾಸಗಳಿಗಿಂತ ಇಂಥ ಒಂದು ವಿಡಂಬನದ ತುಣುಕು ಹೆಚ್ಚು ಮಾರ್ಮಿಕ, ಸಾರ್ಥಕ. ನಯಸೇನನ ಧರ್ಮಾಮೃತದಲ್ಲಿಯ ಹಲವಾರು ಕಥೆಗಳು ವಿಡಂಬನ ಸಾಹಿತ್ಯಕೃತಿಗಳೆಂದೇ ಹೇಳಬಹುದು. ವಿಡಂಬನದ ವಿವಿಧ ಮೊಗವಾಡಗಳಾದ ಬಿಸಿನಗೆ ಹುಸಿನಗೆ ನಂಜುನಗೆ ರಸನಗೆಗಳ ಮೆರವಣಿಗೆಯೇ ಇಲ್ಲಿ ನಡೆದಿದೆ.

ಇದೇ ಪೀಳಿಗೆಯ ಇನ್ನೊಬ್ಬ ಸಮರ್ಥನೆಂದರೆ ಬ್ರಹ್ಮಶಿವ. ಇವನ ಸಮಯ ಪರೀಕ್ಷೆಯಲ್ಲಿಯ ವಿಡಂಬನದ ಸರಳುಗಳು ಬಲು ತೀಕ್ಷ್ಣ. ಇವನ ದೃಷ್ಟಿಯಲ್ಲಿ ವಿಷ್ಣು ಸರ್ಮೋತ್ತಮ ಎನ್ನುವುದು ಹಾಸ್ಯಾಸ್ಪದ. ಧರೆಗೊಡೆಯಂ ಚಕ್ರೇಶಂ ತಿರಿವನೆ ಬಲಿಯಲ್ಲಿ ಬೇಡಿ ಮೂರಡಿ ನೆಲನಂ? ವಿಶ್ವವನ್ನೇ ಹೊಟ್ಟೆಯಲ್ಲಿಟ್ಟುಕೊಂಡು ರಕ್ಷಿಸುವ ಆತ, ಅದರೊಳಗೇ ಇದ್ದ ರಾಕ್ಷಸರನ್ನೇಕೆ ಕೊಂದ? ತರ್ಕಬದ್ಧವೆನಿಸುವ ಈ ಪ್ರಶ್ನೆಗಳಿಗೆ ಏನುತ್ತರ? ಆದರೆ ಸ್ವ ಮತಗಳ ಬಗ್ಗೆ ಈ ಕವಿ ಮತ್ತು ಇಂಥ ಕವಿಗಳು ಪಕ್ಷಪಾತಿಗಳು. ಇವರ ತರ್ಕವನ್ನೇ ಇತರರೂ ಅನ್ವಯಿಸುವರೆಂಬುದನ್ನು ಇವರು ಮರೆಯುತ್ತಾರೆ. ಇದು ಹೇಗಾದರೂ ಇರಲಿ, ಅನ್ಯಮತ ವಿಡಂಬನಕ್ಕೆಳಸಿದ ಎಲ್ಲ ಮತಗಳ ಕವಿಗಳಿಗೂ ಅನ್ವಯಿಸುವ ಮಾತು ಇದು. ಜಗಮಂ ಸುಡುಮೊಡೆ ರುದ್ರಂ ಜನದೊಳಗಿರ್ದಾತ್ಮ ಭಕ್ತರೆಲ್ಲರುಮಂ ಮೆಲ್ಲಗೆ ತೆಗೆದು ಬೇ¾ೆ ಪೊ¾ಗಿಕ್ಕುಮೋ ಮೇಣ್ ಕೂಡೆ ಸುಟ್ಟು ಕಳೆಗುಮೊಪೇ¿Âಂ? ಎಂದು ಆತ ಪ್ರಶ್ನೆ ಹಾಕಿದಾಗ ಇಂಥ ಕಲ್ಪನೆಯ ಚಿನ್ನಗಳಿಗೆ ತರ್ಕಮಣಿ ತಾಕಿ ಅವು ಕಬ್ಬಿಣದ ತುಂಡುಗಳಾಗಿ ಮಾರ್ಪಡುವುದಂತೂ ನಿಜ. ಈ ಚಮತ್ಕಾರ ದಿಂದ ಯಾರಿಗೆ ತಾನೆ ನಗೆ ಹೊಮ್ಮುವುದಿಲ್ಲ? ನಗೆಯ ಬಾಂಬೆಸೆದ ಜನರ ನಂಬಿಕೆಗಳ ಹೆಬ್ಬಂಡೆಗಳನ್ನು ಫಳಾರನೇ ಸೀಳಿಸುವುದು ವಿಡಂಬನ ಕೃತಿಗಳ ಉದ್ದೇಶ.

ಬಗೆಮೊಡದೇನಾನುಂ ಬಾ ¿್ತಗಲ್ಲವೆನಿಪರಳಿಗೊಲ್ದು ಪೊಡೆಮಡುವವನಾ ಚಿಗುರುಂ ಪುವುಂ ಕಾಯುಂ ಸೊಗಯಿಪ ಮಾವಿಂಗೆ ಪುಣಿಸೆಗೆ¾ಗಲ್ವೇಡಾ

ಏನು ಉತ್ತರ ಹೇಳಬೇಕು ಇದಕ್ಕೆ? ನಯಸೇನ ಬ್ರಹ್ಮಶಿವರಂತೆಯೇ ಅನ್ಯಮತಗಳ ಅಂಧಸಂಪ್ರದಾಯಗಳನ್ನು ಗೇಲಿಗೆ ಗುರಿಪಡಿಸಿದವನು ವೃತ್ತವಿಲಾಸ. ಮನೋವೇಗ ಪವನವೇಗರೆಂಬ ರಾಜಕುಮಾರರು ಪಾಟಲೀಪುತ್ರಕ್ಕೆ ಹೋಗಿ ಜೈನಧರ್ಮವನ್ನು ಮೆರೆದದ್ದು ಧರ್ಮಪರೀಕ್ಷೆಯ ಕಥೆ. ಇಲ್ಲಿಯ ವಿಡಂಬನದ ಚುರುಕು ಮುಟ್ಟಿನೋಡಿ ಕೊಳ್ಳುವಂಥದು. ಪುರಾಣಗಳೆಲ್ಲ ಸುಳ್ಳಿನ ಕಂತೆ. ದೇವರುಗಳಿಗೇನೂ ಶಕ್ತಿಯಿಲ್ಲ. ಕುರುಡು ಭಕ್ತಿಯಲ್ಲಿ ಫಲವಿಲ್ಲ- ಹೀಗೆಂದೆಲ್ಲ- ಸ್ಥಾಪಿಸಲು ಈತ ಅವಲಂಬಿಸಿರುವುದೂ ಗೇಲಿಯ ವಿಧಾನವೇ! ಮುಂದಿನದೊಂದು ಉದಾಹರಣೆ: ಅe್ಞÁನಿಗಳ್ ಇಟ್ಟಿವರುಂಗಳಂ ಒಟ್ಟಿದ ಕಲ್ಗಳಂ ದೈವಮೆಂದು ಪೆಸರಿಟ್ಟು ಕೊಂಡಾಡಿ ವರಮೀಗುಮೆಂಬಾಸೆಯಿಂ ತಮ್ಮೊಳರ್ಥಮಂ ಬ¾ೆಸೊಳೆಗೈವರ್. ಆ ದೈವಂ ವರಮನೀವಂದಂ ಎಂತುಟೆಂದೊಡೆ, ಬಂಜೆಯ ಪೆರ್ಮಗಂ ಮೃಗತೃಷ್ಣಾಂಬುವಂ ಮಿಂದು, ಕಲ್ಲನಾರ ಸೀರೆಯನುಟ್ಟು ಆಗಸವÆದು¾Äಂಬಿ, ಮೊಲದ ಕೋಡ ಬಿಲ್ವಿಡಿದು ಬರುತ್ತಿರ್ಪುದಂ ಪುಟ್ಟುಂಗುರುಡಂ ಅಂಧಕಾರದ ನಟ್ಟನಡುವಿರುಳೊಳ್ ಕಂಡನ್ ಎಂಬಂತೆ ನಿಷ್ಫಲಂ ಕ್ಲೇಶಂ ದುರ್ಗತಿ ದುಃಖವೇ ಅಕ್ಕುಂ. ಆ ದೈವಂ ಪೆ¾ರ್ಗೀವುದುಂ ಕಾವುದುಂ ಅಂತಿರ್ಕೆ. ತಮಗೆಂದು ಸಂಕಲ್ಪಿಸಿದ ವಸ್ತುವಂ ಕಾಯಲಾ¾ರ್.

ಈ ಮಾತಿನ ಚಮತ್ಕಾರ, ವಾದವೈಖರಿ, ಅಪಹಾಸ್ಯ - ಇವು ಅದ್ಭುತ. ಯಾವ ಮತಪ್ರಚಾರಕನೂ ಇದಕ್ಕಿಂತ ಚೆನ್ನಾಗಿ ಅನ್ಯಮತದ ವಿಡಂಬನೆ ಮಾಡಲಾರ.

ಈ ವಿಡಂಬನ ತ್ರಿಮೂರ್ತಿಗಳಿಗೂ ಮುಂಚೆ, ಎಂದರೆ ಸು.1031ರಲ್ಲಿ ಸಂಸ್ಕೃತದಿಂದ ಕನ್ನಡಕ್ಕೆ ಬಂದ ಗ್ರಂಥಮೊಂದನ್ನು ಇಲ್ಲಿ ಉಲ್ಲೇಖಿಸುವುದು ಮುಖ್ಯವೆನಿಸುತ್ತದೆ. ಅದು ಪಂಚತಂತ್ರ, ಅನುವಾದಕ ದುರ್ಗಸಿಂಹ. ತನ್ನ ಮೂವರು ದಡ್ಡ ಮಕ್ಕಳಿಗೆ ವಿದ್ಯೆ ಕಲಿಸುವ ದಾರಿ ಕಾಣದೆ ನಿರಾಶೆಗೊಂಡಿದ್ದ ದೊರೆಯೊಬ್ಬನಿಗೆ ಸಿಕ್ಕ ಬ್ರಾಹ್ಮಣನು ಹೇಳಿದ ಪ್ರಾಣಿಕಥೆಗಳಿಂದ ಆ ಮಕ್ಕಳು ವಿವೇಕ ಪಡೆಯುತ್ತಾರೆ. ಅಡಕವಾಗಿ ನಾಟಕೀಯವಾಗಿ ಹಾಸ್ಯಬದ್ಧವಾಗಿರುವ ಈ ಕಥೆಗಳ ಪಾತ್ರಗಳಾದ ಪ್ರಾಣಿಗಳು, ಮಾನವರ ಸ್ವಭಾವಗಳ ಪ್ರತೀಕಗಳು. ವೇದ ಕೂಡ ಅವಕ್ಕೆ ಗೊತ್ತುಂಟು. ಪಂಚತಂತ್ರಮೊಂದು ಅದ್ಭುತ ವಿಡಂಬನ ಗ್ರಂಥ. ಇದರ ಧ್ವನಿಶಕ್ತಿ ಅದ್ಭುತ ಪ್ರಚಂಡ ಪರಿಣಾಮಕಾರಿ.

ವಚನಕಾರರು: ಕನ್ನಡ ನಾಡಿನಲ್ಲಿ ಒಂದು ವ್ಯಾಪಕವಾದ ಧಾರ್ಮಿಕ ಸಾಮಾಜಿಕ ಕಾಂತ್ರಿಯನ್ನೇ ಪ್ರಾರಂಬಿsಸಿದ ವೀರಶೈವ ವಚನಕಾರರು ಸಮಾಜ ವಿಮರ್ಶಕರು. ತಮ್ಮ ಸುತ್ತಮುತ್ತಣ ಜನರಲ್ಲಿದ್ದ ಹಲವೆಂಟು ಕುಂದುಗಳನ್ನೂ ಡಂಭಾಚಾರಗಳನ್ನೂ ಕಂಡು ಸಿಡಿಮಿಡಿಗೊಂಡು ವಿಂಡಬನದ ನೆರವಿನಿಂದ ಸಮಾಜವನ್ನು ಶುದ್ಧೀಕರಿಸಲು ಯತ್ನಿಸಿದರು. ವಚನಕಾರರಲ್ಲಿ ಹಿರಿಯರೆನಿಸಿಕೊಂಡವರಿಗಂತೂ ಪುರ್ವಾಗ್ರಹವಿನಿತೂ ಇಲ್ಲ. ಅವರಿಗೆ ತಮ್ಮ ನಾಡವರಲ್ಲಿ ಪ್ರೀತಿ. ಅವರ ವಚನಗಳಲ್ಲಿ ಕಟಕಿ, ಮೂದಲೆ, ಅಪಹಾಸ್ಯಗಳಿಗಿಂತ ಪರಿಹಾಸ, ಚತುರೋಕ್ತಿಗಳಿಗೆ ಹೆಚ್ಚು ಮೌಲ್ಯ. ಆದರೆ ಸಾಂದಬಿರ್sಕವಾಗಿ ಮೂದಲೆ, ಕಟಕಿ, ನಿಂದೆಗಳಲ್ಲೂ ಅವರು ತೊಡಗದವರಲ್ಲ. ಬಸವಣ್ಣನವರಿಗಿಂತ ಮುಂಚೆ ಇದ್ದ ಸಕಲೇಶ ಮಾದರಸನ ಜನಮೆಚ್ಚಿ ಶುದ್ಧನಲ್ಲದೆ ಮನಮೆಚ್ಚಿ ಶುದ್ಧನಲ್ಲಯ್ಯಾ, ವೇಷ ಮೇಷದಲ್ಲದಿsಕನಲ್ಲದೆ ಭಾಷೆಯಲ್ಲದಿsಕನಲ್ಲಯ್ಯಾ, ನುಡಿಯ ಜಾಣನಲ್ಲದೆ ನಡೆಯ ಜಾಣನಲ್ಲಯ್ಯಾ, ಧನದೊರೆಯದಿರ್ದೊಡೆ ನಿಃಪ್ರಿಯನಲ್ಲದೆ ಧನ ದೊರೆತು ನಿಃಪ್ರಿಯನಲ್ಲಯ್ಯಾ,ಏಕಾಂತದ್ರೋಹಿ, ಗುಪ್ತಪಾತಕಿ, ಯುಕ್ತಿಹೀನರಿಗೆ ಸಕಲೇಶ್ವರದೇವ ಎಂತೊಲಿವ? ಎಂಬ ವಚನದಲ್ಲಿ ವಚನಕಾರರ ಸಮಾಜವೀಕ್ಷಣೆಯ ವಿಶಿಷ್ಟ ದೃಷ್ಟಿ ಆ ವೇಳೆಗಾಗಲೇ ಪ್ರಕಟವಾಗಿತ್ತು.

ಬಸವಣ್ಣನವರು ಕಲ್ಯಾಣದಲ್ಲಿ ನೆಲಸುವ ವೇಳೆಗೆ ಹಲವರು ಶಿವಶರಣರು ಅಲ್ಲಿಗೆ ಬಂದು ಸೇರಿದ್ದರು. ವೈರಾಗ್ಯ e್ಞÁನನಿದಿs ಅಲ್ಲಮ, ಯೋಗಿ ಚೆನ್ನಬಸವಣ್ಣ, ಕರ್ಮದ ನೆಲೆ ಸಿದ್ಧರಾಮ, ಶರಣೆ ಮಹಾದೇವಿಯಕ್ಕ- ಇಂಥವರೆಲ್ಲ ಒಂದೆಡೆ ಸೇರಿದಾಗ ನಿರ್ದಾಕ್ಷಿಣ್ಯವಾಗಿ ಟೀಕಿಸುವ ಹಾದಿ ಇವರದು. ಇವರ ಕ್ರೋಧ ಸಾತ್ವಿಕದಿಂದ ಕೂಡಿದ್ದು.

ಶಿವಶರಣರ ವಚನಗಳು ನಾನಾ ತೆರ. ತಮ್ಮ ಸಾಧನೆಯಲ್ಲಿ ಸಿದ್ಧಿ ದೊರಕದುದಕ್ಕಾಗಿ ದೇಹವನ್ನೇ ವಿಡಂಬಿಸುವ ವಚನಗಳದು ಒಂದು ಗುಂಪು. ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ಆಚರಣೆಯಲ್ಲಿದ್ದ ಮೂಢ ನಂಬಿಕೆಗಳನ್ನೂ ಅನ್ಯಾಯಗಳನ್ನೂ ಬಂiÀÄಲಿಗೆಳೆದವು ಇನ್ನೊಂದು ಗುಂಪು. ಈ ಜೀವನ ನಿತ್ಯವಲ್ಲ- ಎಂಬುದು ಮೂರನೆಯ ಗುಂಪು. ಐಹಿಕ ಸುಖೋದ್ದೇಶ ದಿಂದ ವೀರಶೈವಮತ ಸ್ವೀಕಾರಮಾಡಿ, ಆ ಮತಕ್ಕೇ ಕಳಂಕ ತರುತ್ತಿದ್ದವರನ್ನು ಉದ್ದೇಶಿಸಿ ಆಡಿದ ವಚನಗಳದು ನಾಲ್ಕನೆಯ ಗುಂಪು. ವೀರಶೈವಮತದ ಮುನ್ನಡೆಯನ್ನು ಕಂಡು ಅಸೂಯೆಗೊಂಡು ಅವನ್ನು ತೆಗಳಿದವರಿಗೆ ಉತ್ತರ ರೂಪವಾಗಿ ಬಂದವು ಎಷ್ಟೋ ವಚನಗಳು. ಮತ, ಧರ್ಮ, ಭಕ್ತಿ, ಸಾಧನೆ-ಮುಂತಾದವುಗಳಿಗೆ ಸಂಬಂದಿsಸಿದ ವಚನಗಳೂ ಅಸಂಖ್ಯಾತವಾಗುಂಟು. ಕೊನೆಯವನ್ನು ಬಿಟ್ಟು ಉಳಿದೆಲ್ಲ ವಚನಗಳಲ್ಲೂ ವಿಡಂಬನೆಯ ನಾನಾ ಪ್ರಕಾರಗಳನ್ನು ಕಾಣಬಹುದು. ಭಕ್ತನಾದಾತ ದೇವರ ಒಲುಮೆಯನ್ನು ಗುರಿಯಾಗಿಟ್ಟುಕೊಂಡು ಸಾಧನೆ ಮಾಡಿದಾಗ ಅವನನ್ನು ದೇವರು ನಾನಾ ವಿಧವಾಗಿ ಪರೀಕ್ಷಿಸುತ್ತಾನೆ. ಎಲ್ಲದರಲ್ಲೂ ಗೆದ್ದ ಮೇಲೆಯೇ ದೇವರ ಅನುಗ್ರಹ. ಆದರೆ ಭಕ್ತನಿಗೆ ಅಸಹನೆ, ದುಗುಡ, ದೇವರ ಒಳ್ಳೆಯತನದಲ್ಲೇ ಸಂದೇಹ. ಆಗ ಹೊರಡುತ್ತದೆ ಅವನ ಬಾಯಿಂದ ವಿಡಂಬನೆ - ಹುಟ್ಟೆಂದು ಲೋಕದಲ್ಲಿ ಹುಟ್ಟಿಸಿ ಇಳಿಯಬಿಟ್ಟರೆ ನಿಮ್ಮ ನಗುವರಯ್ಯ.

ಆದರೆ ದೇವರ ಒಲುಮೆಗಾಗಿ ದೃಢಚಿತ್ತದಿಂದ ಸಾಧನೆ ಮುಂದುವರಿಸುವವರಾದರೂ ಎಷ್ಟು ಮಂದಿ? ಅನೇಕರದು ಬರಿಯ ತೋರಿಕೆಯ ಭಕ್ತಿ. ಏತ ತಲೆವಾಗಿದರೇನು, ಗುರುಭಕ್ತನಾಗಬಲ್ಲುದೇ? ಇಕ್ಕುಳ ಕೈಮುಗಿದರೇನು, ಭೃತ್ಯಾಚಾರಿಯಾಗಬಲ್ಲುದೇ? ಗಿಳಿಯೋದಿದರೇನು, ಲಿಂಗವೇದಿಯಾಗಬಲ್ಲುದೇ? ಈ ರೀತಿ ಆಡಂಬರದ ಭಕ್ತಿ ತೋರಿ, ಇಹವನ್ನೇ ಶಾಶ್ವತವೆಂದು ನಂಬಿ ಫಲವೇನು? ನೀರ ಬೊಬ್ಬುಳಿಗೆ ಕಬ್ಬುನದ ಕಟ್ಟ ಕೊಟ್ಟು ಸುರಕ್ಷಿತ ಮಾಡುವ ಭರ ಇದು. ಅದಕ್ಕೇ ಒಬ್ಬ ವಚನಕಾರ ‘ಭಕ್ತಿ ಎಂಬುದು ತೋರುಂಬ ಲಾಭ’ ಎಂದು ಕರೆದದ್ದು. ಆಗಿನ ಕಾಲದ ಮತವಾದರೂ ಅಷ್ಟೇ. ಆಡುವುದೊಂದು, ಮಾಡುವುದೊಂದು. ಕಲ್ಲ ನಾಗರಕ್ಕೆ ಹಾಲನೆರೆಯುವುದು, ದಿಟದ ನಾಗರ ಕಂಡರೆ ಕೊಲ್ಲೆಂಬುದು, ಕಿಚ್ಚು ದೈವವೆಂದು ಹವಿಯನಿಕ್ಕುವ ಹಾರುವರ ಮನೆಯಲು ಕಿಚ್ಚೆದ್ದು ಸುಡುವಾಗ ಬಚ್ಚಲ ನೀರ ಬೀದಿಯ ದೂಳವ ಹೊಯ್ದು ಬೊಬ್ಬಿಟ್ಟೆಲ್ಲರ ಕರೆಯುವುದು.

ಆದರೆ ವೀರಶೈವ ಧರ್ಮಾವಲಂಬಿಗಳೆಲ್ಲರೂ ಶಿವವಿe್ಞÁನಿಗಳಲ್ಲ. ಅವರಲ್ಲಿ ಜಳ್ಳೂ ಉಂಟು ಕಾಳೂ ಉಂಟು. ಕಷ್ಟಜೀವಿ ಮನುಜರೆಲ್ಲ ನೆಟ್ಟನೆ ಶಿವe್ಞÁನಿಗಳಾದರೆ ಮುಂದೆ ಭವದ ಬಳ್ಳಿಗೆ ಬೀಜವಿನ್ನೆಲ್ಲಿಹುದೊ.

ವಚನಕಾರರು ಎಲ್ಲರೂ ಒಂದೇ ತೆರನಲ್ಲ. ಒಬ್ಬೊಬ್ಬರ ವಚನ ಒಂದೊಂದು ರೀತಿಯದು. ಬಸವಣ್ಣನವರದು ತಿಳಿ ಮನಸ್ಸು. ಅವರಿಗೆ ಬೆಳ್ಳಗಿರುವುದೆಲ್ಲ ಹಾಲು. ಅಲ್ಲಮಪ್ರಭು ಬೇರೆ ತೆರ: ನಿರ್ದಾಕ್ಷಿಣ್ಯಪರ. ಲಿಂಗೈಕಶರಣರೆಂದು ತಿಳಿದಾಗ ಅವರಿಗೆ ಪ್ರಭುವಿನ ಪುರಸ್ಕಾರ. ಅಂಗಜೀವಿಗಳೆಲ್ಲ ಅಶನಕ್ಕೆ ನೆರೆದು ಲಿಂಗವಾರ್ತೆಯ ನುಡಿವರಯ್ಯ ಎಂದು ನೇರವಾಗಿ ಹೇಳುವುದವರ ಸ್ವಭಾವ, ಗುಹೇಶ್ವರಾ. ನೀನು ಕಲ್ಲಾದರೆ ನಾನೇನಪ್ಪೆನಯ್ಯಾ? ಎಂಬ ದಾಸಿಮಯ್ಯನ ವಚನದ ಧ್ವನಿ ಬಲು ಹರಿತ. ಚೆನ್ನಬಸವಣ್ಣ ಮನೆವಾರ್ತೆಯ ಯಜಮಾನ, ಅಕ್ಕಮಹಾದೇವಿಯದು ಭಾವಾವೇಶ. ಅಂಬಿಗರ ಚೌಡಯ್ಯನದು ರಜೋದೃಷ್ಟಿ. ಇವರೆಲ್ಲ ಒಂದು ಕಡೆ ಸೇರಿ ಸಮಾಜದ ಮುಖಕ್ಕೆ ಉಬ್ಬುತಗ್ಗಿನ ಕನ್ನಡಿ ಹಿಡಿದು ಅದರ ವಕ್ರತೆಗಳನ್ನೆತ್ತಿ ತೋರಿದರು.

ಹರಿಹರಯುಗ: ಹರಿಹರ ವಿಡಂಬನಕ್ಕೂ ಕೈ ಎತ್ತಿದ ಕವಿ. ಇವನ ಹಲವು ರಗಳೆಗಳಲ್ಲಿ ಅನ್ಯಮತ ವಿಡಂಬನ ಧಾರಾಳವಾಗಿ ಹರಿದಿದೆ. ಜಯಸಿಂಹರಾಯನ ರಾಜಧಾನಿಯಲ್ಲಿದ್ದ ವಿಷ್ಣುಗೃಹ ಕೋಳಿಯ ಗೂಡಿನಂತೆ ಇತ್ತು, ಶಂಕರದಾಸಿಮಯ್ಯ ತನ್ನ ನೊಸಲ ಕಣ್ಣು ತೆರೆದೊಡನೆ ಬೆಂಕಿ ಘುಳು ಘುಳಿಸಿ ಸುಳಿದು, ಧಗಿಲ್ಭುಗಿಲೆಂದು ಭೋಂಕನೆ ನೆಗೆದು, ಮುಂಗಾಣಿಸಿ ಪರಿದು, ನೃಸಿಂಹ ಪ್ರತಿಮೆಯಂ ನೆರೆದುರುಪಿತು. ಆಗ ಜಯಸಿಂಹರಾಯನುಂ ವೈಷ್ಣವರುಂ ವಾದಿಗಳುಂ ಉರಿದು ಮೊಗಂಗೆಡೆ ಪರಸಮಯಿಗಳ್ಮೊರೆಯಿಟ್ಟು ಹಲ್ಲು ಕಿರಿದು ಹುಲ್ಲು ಕರ್ಚಿದರು. ಪದ್ಮಾವತಿಯ ಪಿತನಾದ ಜೈನ ಪಾರಿಷ ಪಂಡಿತಂ ಮೇರೆಗೆಟ್ಟ ಮತಿಹೀನಂ ಕೋಪಣದಿಂ ಬಂದ ಹೊಸ ಋಷಿಯರು.... ನೀಚರುಂ.... ಬರಿಯ ಭಂಡರುಂ ಲೋಚಿನ ತಾಲ್ಯರುಂ ಬೆತ್ತಲೆಯ ಭ್ರಷ್ಟರುಂ ಕುಂಚದ ಖೂಳರುಂ ತಟ್ಟುಗಳ ಅe್ಞÁನಿಗಳುಂ ನಾ¾Äವಾಯ ನರಕಿಗಳುಂ ಸರ್ವಮಲ ಭಾಂಡರುಂ ಎಂದು ಮೊದಲಾಗಿ ಬರೆಯುತ್ತಾನೆ. ಹರಿಹರ ಹಿರಿಯ ಕವಿಯಾದರೂ ತನ್ನ ಧರ್ಮದ ಹಿರಿಮೆ ಸಾದಿsಸುವ ವಿಚಾರ ಬಂದಾಗ ಆತ ಹಿಂದೆ ಮುಂದೆ ನೋಡುವುದಿಲ್ಲ. ಅನ್ಯಮತಗಳ ನಿಂದೆಯನ್ನೇ ನೇಯುತ್ತಾನೆ. ಔಚಿತ್ಯಪ್ರe್ಞೆ ತಪ್ಪಿತೇನೋ ಎನಿಸಿದರೂ ಕಾವ್ಯಾವೇಶದ ದೃಷ್ಟಿಯಿಂದ ಆ ಕುಂದನ್ನು ಮರೆಯತಕ್ಕದ್ದು. ವಿಡಂಬನದ ಎಷ್ಟೊಂದು ಪ್ರಕಾರಗಳು ಎಷ್ಟೊಂದು ತೀವ್ರವಾಗಿ ಬಂದಿವೆಯೆಂಬುದು ಇಲ್ಲಿ ಗಮನಿಸಬೇಕಾದ ವಿಚಾರ. ಹರಿಹರನಿಂದೀಚೆಗೆ ಇತಿಹಾಸದಲ್ಲಿ ಬಹುದೂರ ಮುಂದೆ ಬಂದಿರುವ ಈ ಶತಮಾನದ ಜನಕ್ಕೆ ಆಗಿನ ವಾತಾವರಣದ ಇಣುಕು ನೋಟ ಪಡೆಯಲು ಇಂಥ ಪರಮತ ವಿಡಂಬನೆಗಳೂ ಒಂದು ಸಾಧನ. ಹರಿಹರನ ರಗಳೆಗಳ ಇನ್ನು ಕೆಲವು ಸಾಲುಗಳನ್ನೂ ನೋಡಬಹುದು. ಕರ್ಮಲತೆಯಂತಿದ್ದ ಜನ್ನಿವಾರಮಂ ಕಳೆದು ಬಿಸುಟು, ಹೋತಿನ ಗಂಟಲಂ ಬಿಗಿವಂತಿರ್ದ ಮೌಂಜಿಯಂ ಪ¾ೆದು ಬಿಸುಟು, ನವ್ಯ ದುಕೂಲಮಂ ತೆಗೆದುಟ್ಟು, ಬಸವಣ್ಣನವರು ಬಾಗೇವಾಡಿಯಿಂದ ಕಪ್ಪಡಿಸಂಗಮಕ್ಕೆ ಹೋದರು. ಬಿಜ್ಜಳನ ಗುರುಗಳು ಕಾಗೆಗಳಂತ¾ಚಿ, ಗೂಗೆಗಳಂತೆ ಪಲುಂಬಿ, ಕತ್ತೆಗಳಂತೆ ತೊ¿ಲಿ, ಕೋಡಗಗಳಂತೆ ಪಲುಗಿರಿದು, ನರಿಗಳಂತೆ ಜಿನುಗಿ ಮಾತಾಡುವರು. ಶರಣರನ್ನು ನಿಂದಿಸುತ್ತಿದ್ದವರಂತೂ bsÁಂದಸರು, ವೇದಜಡರು, ಬೈಟ್ಟಿಯ ಮರುಳ್ಗಳು, ಹೆಬ್ಬೇಳಿಗಳು, ದರ್ಭೆಯ ನಿರ್ಭಾಗ್ಯರು, ಹರಿಹರನ ಮುಗುಳದಲ್ಲೂ ಮಂತ್ರಶಕ್ತಿಯುಂಟು. ಅವನ ಶಬ್ದಗಳ ಆಯ್ಕೆ ಅಮೋಘ. ಹರಿಹರನ ಭತರ್ಸ್‌ನೆಗೆ ಈಡಾಗುವಂಥ ವ್ಯವಸ್ಥೆಯೊಂದಿದ್ದುದರಿಂದಲೆ ಈ ಎಲ್ಲ ವಾಕ್ಪ್ರವಾಹ, ನಿಂದೆ ಮೂದಲೆಗಳ ಚಂಡೆಮದ್ದಳೆ, ನಯಸೇನ ‘ಬ್ರಹ್ಮಶಿವ’ ವೃತ್ತವಿಲಾಸರ ಚತುರೋಕ್ತಿ ಇಲ್ಲಿ ಕಡಿಮೆಯಾದರೂ ಕಟಕಿಗೇನೂ ಕೊರತೆಯಿಲ್ಲ. ಚತುರತೆಯ ಅರಕೆಯನ್ನು ಇವನ ಆವೇಶ ಭರ್ತಿ ಮಾಡುತ್ತದೆ.

ಷಟ್ಪದಿಯ ಪಿತ ರಾಘವಾಂಕನ ಸೋಮನಾಥ ಚರಿತ್ರೆಯಲ್ಲಿ ಜೈನಮತ ಹೆಚ್ಚಾಗಿ ವಿಡಂಬನೆಗೆ ಈಡಾಗಿದೆ. ನರನೊಬ್ಬನ ಸತ್ಯವ್ರತವನ್ನು ಹೊಗಳಹೊರಟ ಹರಿಶ್ಚಂದ್ರಕಾವ್ಯದಲ್ಲಿ ಉದಾತ್ತ ವಿಡಂಬನೆಯನ್ನು ಎರಡು ಕಡೆಗಳಲ್ಲಿ ಕಾಣಬಹುದು. ವಸಿಷ್ಠ ವಿಶ್ವಾಮಿತ್ರರ ಸಂವಾದ ಮತ್ತು ಹರಿಶ್ಚಂದ್ರ ಗಾಯಕಿಯರ ಮಾತಿನ ಚಕಮಕಿಗಳು ಕಟಕಿ ಮೂದಲೆ ಅಪಹಾಸ್ಯ ಚತುರೋಕ್ತಿ ವಕ್ರನುಡಿಗಳ ಚಕ್ರಬಂಧವೆನಿಸುತ್ತದೆ. ಚಾಮರಸನ ಪ್ರಭುಲಿಂಗಲೀಲೆಯಲ್ಲಿ ಕಾಣುವುದು ನವುರಾದ ವಿಡಂಬನೆ, ಕವಿಯದು ವ್ಯಂಗ್ಯಾನುಭೂತಿ. ಈ ಕೃತಿ ಸತ್ತವರ ಕಥೆಯಲ್ಲ, ಜನನದ ಕುತ್ತದಲಿ ಕುದಿಕುದಿದು ಕರ್ಮದ ಕತ್ತಲೆಗೆ ಸಿಲುಕುವವರ ಸೀಮೆಯ ಮಾತು ತಾನಲ್ಲ, ಹೊತ್ತು ಹೋಗದ ಪುಂಡರಾಲಿಪ ಮತ್ತಮತಿಗಳ ಗೋಷಿವಿಯಲ್ಲ. ಈ ಕೃತಿಯಲ್ಲಿ ಕಾಣುವುದು ಪಾರಮಾರ್ಥಿಕ ವಿಡಂಬನೆ, ಮಾನವ ದೇವತ್ವಕ್ಕಡರಲು ಅಡ್ಡವಾಗಿ ಬರುವ ಕೊಳೆಯನ್ನು ಕಳೆಯಲು ವಿಡಂಬನಮೊಂದು ಮೃದುವಾದ ಪೊರಕೆ. ಮಾಯೆ ಅರಣ್ಯವನ್ನು ಹೊಕ್ಕಾಗ ತಪಸ್ವಿಗಳು ಆಕೆಯನ್ನು ಕಂಡು ತಮ್ಮ ಕಂತೆ ಕಚ್ಚಟಗಳನ್ನೂ ವಿಭೂತಿಯ ಬುಟ್ಟಿಗಳನ್ನೂ ಎತ್ತಿಕೊಂಡು ಎದ್ದೋಡಿದರು ಹುಲಿಗ್ದಂಡ ಹುಲ್ಲೆಗಳಂತೆ ದಸೆದೆಸೆಗೆ. ಅಲ್ಲಮಪ್ರಭು ಕಂಡ ಸಿದ್ಧರಾಮನದು ಮೂಢಭಕ್ತಿ, ದೇವರನ್ನು ತನ್ನೊಳಗೇ ಕಂಡುಕೊಳ್ಳುವ ಬದಲು, ಸಕಲ ಕಲ್ಲನು ಕಡಿದು ಕಲ್ಲಿಗೆ ಶಿಖರ ದೇಗುಲವೆಂದು ಮಾಡಿಸಿ ಅಲ್ಲಿ ದೇವರನ್ನು ಹುಡುಕುತ್ತಿದ್ದಾನೆ. ಅವನ ಆಗಮ ಯುಕುತಿಯೆಲ್ಲ ಪಾಷಾಣಕ್ಕೆ ಬಂದುದು. ಗೋರಕ್ಷನ ಕಥೆಯಲ್ಲಿ ಉದ್ದಕ್ಕೂ ಧರ್ಮನೀತಿಗಳೊಡನೆ ವಿಡಂಬನದ ಅಂತರ್ಗತ ಪ್ರವಾಹ ಹರಿದಿದೆ.

ಕುಮಾರವ್ಯಾಸನ ಭಾರತ ವಿಡಂಬನ ಕಾವ್ಯವಲ್ಲ. ಈತನದು ವಿಡಂಬನ ಸಾಹಿತ್ಯವÆ ಅಲ್ಲ. ಆದರೆ ಕೆಲವು ಕಡೆ ಕಥೆಯ ಹಂದರದ ಮೇಲೆ ವಿಡಂಬನದ ನಾನಾ ಬಗೆಯ ಬಳ್ಳಿಗಳನ್ನೇ ಈತ ಹಬ್ಬಿಸಿದ್ದಾನೆ. ಬೇಂದ್ರೆಯವರೆಂದಿರುವಂತೆ ಕಟಕಿ, ಬಿರುನುಡಿ, ಕಿರುನುಡಿ, ವ್ಯಂಗ್ಯ ಸರಸ, ವಕ್ರೋಕ್ತಿ, ಜಾಣ್ನುಡಿ, ಪರಿಹಾಸ- ಎಲ್ಲವÆ ಅವನ ಬತ್ತಳಿಕೆಯಲ್ಲಿವೆ. ಯುದ್ಧಬಿsೕರುವನ್ನು ಯುದ್ಧವೀರನ ಸೋಗಿನಲ್ಲಿ ಕುಣಿಸಿರುವ ಉತ್ತರನ ಪಾತ್ರಮೊಂದು ಉದಾಹರಣೆ. ಧನು ತನಗೆ ನೆಗಹಲ್ಕೆ ಕೃಷ್ಣಾಜಿನಮೊ ಸಾಲಗ್ರಾಮದೇವರೊ ವಿನುತ ತುಳಸಿಯೊ ಕುಶಮೊ ದರ್ಭೆಯೊ ಸಮಿಧೆÀಗಳ ಹೊರೆಯೋ- ಎಂದು ಮುಂತಾಗಿ ದ್ರೌಪದೀ ಸ್ವಯಂವರ ಕಾಲದಲ್ಲಿ ಬ್ರಾಹ್ಮಣ ವೇಷದ ಅರ್ಜುನನ ಬಗ್ಗೆ ಆಡಿಸಿರುವ ಮಾತು ಅಪಹಾಸ್ಯದ ಹುಚ್ಚುಹೊಳೆ. ಪತಿಗಳೆನ್ನನು ಮಾರಿ ಧರ್ಮಸ್ಥಿತಿಯ ಕೊಂಡರು - ಎಂದು ದ್ರೌಪದಿಯಾಡುವ ಮಾತು ಕಟಕಿಯ ಕೂರ್ಗಣೆ. ಹಿರಿಯರಿಲ್ಲದ ಸಭೆ ನೆರವಿಯದು ಸಭೆಯಲ್ಲ- ಎಂಬುದರ ಅರ್ಥ ಆ ಶಬ್ದಗಳಿಗೂ ಮೀರಿದ್ದು. ಕವಿತಾಗೌರವಕ್ಕೆ ಕುಂದಿಲ್ಲದಂತೆ ಅಲ್ಲಲ್ಲಿ ವಿಡಂಬನದ ಹರಳುಗಳನ್ನು ತನ್ನ ಮಹಾಭಾರತದ ಕುಂದಣದಲ್ಲಿಟ್ಟಿದ್ದಾನೆ ಕುಮಾರವ್ಯಾಸ.

ದಾಸಯುಗ: ಭಕ್ತಿಪ್ರಧಾನವಾದ ದಾಸಸಾಹಿತ್ಯದಲ್ಲಿ ವಿಡಂಬನಕ್ಕೇನೂ ಕೊರತೆಯಿಲ್ಲ. ವಚನ ಸಾಹಿತ್ಯದ ಮನೋಧರ್ಮವನ್ನೇ ಇಲ್ಲೂ ಕಾಣಬಹುದು. ಸಮಯದಲ್ಲಿ ಕೈಕೊಡುತ್ತಿದ್ದ ದೇವರನ್ನು ಕುರಿತು-ಆರು ಬದುಕಿದರಯ್ಯಾ ಹರಿ ನಿನ್ನ ನಂಬಿ ತೋರು ಈ ಜಗದೊಳಗೆ ಒಬ್ಬರನ್ನು ಕಾಣೆ ಎನ್ನುತ್ತಾರೆ ದಾಸರು. ದೇವರನ್ನು ಬಿಟ್ಟು ಮಾನವರ ಬಳಿಗೆ ಬಂದರೂ ಅವರಲ್ಲೂ ಹಲಮೊಮ್ಮೆ ಹೃದಯದ ಅಭಾವ. ಭಾರತ ರಾಮಾಯಣ ಪಂಚರಾತ್ರಾಗಮ ಸಾರತತ್ವದ ಬಿಂದು ಒಳಗೆ ಬಿದ್ದೀತೆಂದು ಗಯ್ಯಾಳಿ ಮೂಳೀ ಕದವನಿಕ್ಕಿದಳಿದಕೊ, ಪದುಮನಾಭನಲಿ ಲೇಶಭಕುತಿಯಿಲ್ಲ ಉದರವೈರಾಗ್ಯವಿದು, ಮಡಿಮಡಿಮಡಿಯೆಂದು ಮೂರು ಮಾರು ಹಾರುತಿ ಮಡಿಯೆಲ್ಲಿ ಬಂತೆ ಬಿಕನಾಶಿ? ಶಿಮೋಹಂ ಎಂದು ಕಣ್ಣು ಮುಚ್ಚಿ ಕೂತ ಬೂಟಕರನ್ನೂ ದಾಸರು ಬಿಟ್ಟಿಲ್ಲ. ಶಿವ ನೀ ಹೇಗಾದೊ? ಶಿವ ನೀನಾದರೆ ಶಿವನರ್ಧಾಂಗಿಗೆ ಧವನಾದೆಯಲ್ಲೊ ಅವಿವೇಕಿ ಮೂಢ ಎನ್ನುತ್ತಾರೆ.

ರಾಮಧಾನ್ಯಚರಿತೆ: ಕನಕದಾಸರ ರಾಮಧಾನ್ಯಚರಿತೆ ಒಂದು ವಿಡಂಬನ ಕಾವ್ಯ. ಇದರಲ್ಲಿ ರಾಗಿ ಬತ್ತಗಳ ನಡುವೆ ತಂತಮ್ಮ ಹಿರಿಮೆಗಳ ಬಗ್ಗೆ ನಡೆದ ವಾಗ್ವಾದ ಮನೋಜ್ಞವಾಗಿದೆ. ಬುಧರು ಜರೆದು ನಿರಾಕರಿಸಿ ಬಿಡಲಂತು ನೀ ಶೂದ್ರಾನ್ನವಾದೆಯಲ ಎಂದು ಬತ್ತದಿಂದ ರಾಗಿಯ ಬಗ್ಗೆ ತಿರಸ್ಕಾರ. ಕ್ಷಿತಿಯಮರ ರೂಪ ನಮನದಲಿ ಸುವ್ರತ ಸುಭೋಜನ ಪರಮ ಮಂತ್ರಾಕ್ಷತೆಗಳಲ್ಲಿ ......... ದೇವರಿಗತಿಶಯದ ನೈವೇದ್ಯ ತಾನಹೆನೆಂದು ಬತ್ತಕ್ಕೆ ಜಂಬ, ಹೆತ್ತ ಬಾಣಂತಿಯರು ರೋಗಿಗೆ ಪತ್ಯ ನೀನಹೆ; ಹೆಣದ ಬಾಯಿಗೆ ತುತ್ತು ನೀನಹೆ; ಎಳ್ಳು ದರ್ಭೆಗೆ ತೆತ್ತಿಗನು ನೀನಾದೆ ಎಂದು ರಾಗಿ ಅಕ್ಕಿಯನ್ನು ಹೀಯಾಳಿಸುತ್ತದೆ. ಶ್ರೀಮಂತರ ಮತ್ತು ಬಡವರ ನಡುವಿನ ಅಂತರದ ಚಿತ್ರ ಈ ಕಥೆಯಲ್ಲಿ ವಿಡಂಬನಾತ್ಮಕವಾಗಿ ಮೂಡಿಬಂದಿದೆ. ಬಿಂಕಗುಳಿಗಳ, ಮದಾಂಧರ ಮತ್ತು ಪಟ್ಪಭದ್ರ ಹಿತಾಸಕ್ತರ ಶಕ್ತರ ಮೂಗು ಕೆತ್ತಿ, ಅವರ ಓರೆಕೋರೆಗಳನ್ನು ತಿದ್ದಬೇಕೆಂಬುದೇ ಕವಿಯ ಪ್ರತಿe್ಞೆಯಾಗಿದೆ; ಜೊತೆಗೆ ಈ ಓರೆಕೋರೆಗಳು ಸಾಮಾನ್ಯರಿಗೆ ಗ್ರಹಿಕೆಯಾಗಿ ಅವರು ಎಚ್ಚೆತ್ತುಕೊಳ್ಳಬೇಕೆಂಬುದು ಅವನ ಆಶಯವಾಗಿದೆ. ಸತ್ಯಾಸತ್ಯಗಳ ನಡುವೆ ರಾಜಿಯ ಸೂತ್ರ ಸಲ್ಲದೆಂಬುದು ಕವಿಯ ದೃಢನಿಲುವಾಗಿದೆ. ಅವನ ಗ್ರಾಮೀಣ ಸ್ವಭಾವಕ್ಕೆ ಅವನ ರೂಕ್ಷ ಪ್ರತಿe್ಞೆಗೆ ಉಪಾಯ ಹುನ್ನಾರುಗಳಾಗಲೀ, ಮಂತ್ರ ತಂತ್ರಗಳಾಗಲೀ ಮರೆಮೋಸಗಳಾಗಲೀ ನುಣ್ಣನೆಯ ಬೆಣ್ಣೆ ಮಾತುಗಳಾಗಲೀ ಒಗ್ಗುವಂತಿಲ್ಲ. ಒರಟುತನ, ನಿಷ್ಕಾಪಟ್ಯ, ತತ್ತ್ವನಿಷೆವಿ, ಶ್ರದ್ಧೋತ್ಸಾಹಗಳು ಅವನ ಪ್ರವೃತ್ತಿ ಜಾಯಮಾನಗಳಿಗೆ ಪೋಷಕವಾಗಿರುವ ದ್ರವ್ಯ ವಿಶೇಷಗಳು. ಆದ್ದರಿಂದ ಅವನ ವಿಡಂಬನೆಯಲ್ಲಿ ಕಹಿಯಿದೆ ವಿಷವಿಲ್ಲ. ಮೊನಚಿದೆ ನೋವಿಲ್ಲ. ಹಠವಿದೆ, ದ್ವೇಷವಿಲ್ಲ. ಕಾವಿದೆ, ತಾಪವಿಲ್ಲ. ಕೋಪವಿದೆ, ವೈರವಿಲ್ಲ. ಚುರುಕಿದೆ ಉರಿಯಿಲ್ಲ. ಎಲ್ಲಿಯೂ ಬ್ರಹ್ಮಶಿವ, ವೃತ್ತವಿಲಾಸರ ಮತಾಂಧತೆಯ ದೋಷಲೇಪವಿಲ್ಲ. ಕರ್ತವ್ಯಪ್ರe್ಞೆ, ಸತ್ಯನಿಷೆವಿ, ಲೋಕಕಾರುಣ್ಯ, ನೈತಿಕಶ್ರದ್ಧೆ ಮೇಲಾಗಿ ಧರ್ಮಕೋಪ-ಇವು ಈ ವಿಡಂಬನೆಯ ಹಿಂದಿರುವ ಮೂಲಭೂತ ವಾದ ಪ್ರೇರಕ ಪ್ರವೃತ್ತಿಗಳು - ಎಂದು ದೇಜಗೌ ಹೇಳಿರುವ ಮಾತುಗಳು ವಿಡಂಬನ ಕಾವ್ಯಕ್ಷೇತ್ರದಲ್ಲಿ ರಾಮಧಾನ್ಯ ಚರಿತ್ರೆಗಿರುವ ಭದ್ರಸ್ಥಾನದ ಬಗ್ಗೆ ನೀಡಲಾಗಿರುವ ನಿರ್ಣಯ.

ಸರ್ವಜ್ಞ: ಸರ್ವಜ್ಞ ವಿಡಂಬನದ ಸಾರ್ವಭೌಮ. ಆಡುಮುಟ್ಟದ ಸೊಪ್ಪಿಲ್ಲ. ಹಾಗೇ ದೈವನಂಬಿಕೆಯಿಂದ ರಾಜಕಾರಣದವರೆಗೆ ಎಲ್ಲ ವಿಷಯಗಳೂ ಇವನ ಸೊತ್ತೇ. ತ್ರಿಪದಿಗೆ ಹೊಸ ಬೆಡಗನ್ನೂ ಚುರುಕನ್ನೂ ನೀಡಿ ಸಾಸಿವೆಯ ಗಾತ್ರದಲ್ಲಿ ಬ್ರಹ್ಮಾಂಡದ ಶಕ್ತಿಯನ್ನು ತುಂಬಿರುವ ಸರ್ವಜ್ಞನ ವಚನಗಳಲ್ಲಿ ವಿಡಂಬನದ ಹಲವು ಶ್ರೇಣಿಗಳನ್ನು ಕಾಣಬಹುದು

ಒಂದಾಡ ತಿಂದಾತ ಹೊಂದಿದೆಡೆ ಸ್ವರ್ಗವನು ಎಂದೆಂದು ಅಜನ ಕಡಿತಿಂಬ ಕಟುಕ ತಾ ನಿಂದ್ರನೇಕಾಗ ಸರ್ವಜ್ಞ

ಎಂಬುದು ಈತನ ವಿಡಂಬನ ವಿಧಾನ. ವಿಪರ್ಯಯವೆನಿಸುವಂಥ ಎರಡು ಸನ್ನಿವೇಶಗಳನ್ನು ಮೂರೇ ಸಾಲಿನಲ್ಲಿ ಒಟ್ಟಿಗಿಟ್ಟು ಸಾದಿsಸಿರುವ ಪರಿಣಾಮ ಅದ್ಭುತ.

ಇತರ ಕೃತಿಗಳು: ಮುಪ್ಪಿನ ಷಡಕ್ಷರಿ ಬರೆದಿರುವ ಹಲವಾರು ಹಾಡು ಗಳಲ್ಲಿ ವಿಡಂಬನವಿಲ್ಲದೆ ಇಲ್ಲ. ಇದರ ಉದ್ದೇಶವÆ ಸಾಮಾನ್ಯವಾಗಿ ಪಾರಮಾರ್ಥಿಕ. ಈತ ಬರೆದಿರುವ ತಿರುಕನ ಕನಸು ಒಂದು ಉತ್ತಮ ವಿಡಂಬನ ಕೃತಿ. ಕನ್ನಡ ಜನಪದ ಸಾಹಿತ್ಯದಲ್ಲೂ ಸಂಚಿಯ ಹೊನ್ನಮ್ಮನ ಹದಿಬದೆಯ ಧರ್ಮ ಮುಂತಾದ ಕಾವ್ಯಗಳಲ್ಲೂ ನೀತಿ, ನಗೆ, ಕನಸು, ನನಸುಗಳೊಂದಿಗೆ ವಿಡಂಬನವÆ ಬೆರೆತುಕೊಂಡಿದೆ. ಗಾದೆಗಳಂತೂ ವಿಡಂಬನದ ಹುತ್ತ. ದುಡ್ಡಿನ ಆಸೆಗೆ ಬೆಲ್ಲ ಮಾರಿ ಗೋಣೀಚೀಲ ನೆಕ್ಕಿದ, ಅಳ್ತಾ ಹೋದ ನಾಯಿ ಮೊಲ ಹಿಡ್ದಾತೇ, ಇತ್ತಿತ್ತ ಬಾ ಅಂದರೆ ಇದ್ದ ಗೋಡೇನೂ ಕಿತ್ತುಕೊಂಡು ಬಂದ, ಅಜ್ಜಿಗರಿವೆ ಕಾಟ ಮಗಳಿಗೆ ಮಿಂಡನ ಕಾಟ, ಯಾಕಳ್ತಿಯಾ ಮಗಳೆ ಅಂದ್ರೆ ಲೋಕ ಮೆಚ್ಚಾಕೆ ಮೊದಲಾದ ಸಾವಿರಾರು ಗಾದೆಗಳಲ್ಲಿ ವಿಡಂಬನೆಯ ವಿಶ್ವರೂಪದರ್ಶನವನ್ನು ಮಾಡಬಹುದು. ಒಂದೇ ಒಂದು ವಾಕ್ಯದಲ್ಲಿ ಅರ್ಥಶ್ರೀಮಂತಿಕೆಯನ್ನು ತುಂಬಿಕೊಂಡು ಹೊಳೆಯವ ಈ ಗಾದೆಗಳು ವಿಡಂಬನ ಸಾಹಿತ್ಯದ ಭಂಡಾರಗಳು.

ಇಪ್ಪತ್ತನೆಯ ಶತಮಾನ: ಈ ಶತಮಾನದಲ್ಲಿ ವಿಡಂಬನ ಸಾಹಿತ್ಯ ಸಾಕಷ್ಟು ಬೆಳೆದಿದೆ. ಸಮಾಜಿಕ ವಿಡಂಬನ, ರಾಜಕೀಯ ವಿಡಂಬನ, ಸಾಹಿತ್ಯಕ ವಿಡಂಬನ ಮುಂತಾದ ನಾನಾ ಪ್ರಕಾರಗಳು ಹುಟ್ಟಿಕೊಂಡಿವೆ. ವಿಡಂಬನಾತ್ಮಕ ಸಣ್ಣಕಥೆ, ಕಾದಂಬರಿ, ಪದ್ಯ, ಚುಟುಕ, ಪ್ರಬಂಧಗಳಿಗೇನೂ ಕಡಿಮೆಯಿಲ್ಲ. ದಿನೇ ದಿನೇ ಬೆಳೆಯುತ್ತಿರುವ ಈ ಸಾಹಿತ್ಯದಲ್ಲಿ ಗಟ್ಟಿಯಾದ್ದನ್ನು ಆರಿಸಿ ಪಟ್ಟಿಮಾಡಿ ಪಠಿಸುವುದು ಇನ್ನೂ ಸ್ವಲ್ಪ ಕಾಲ ಸರಿದ ಮೇಲೆ. ಮುದ್ರೆಯೊತ್ತಿರುವ ಕೆಲವು ಲೇಖಕರ ಮತ್ತು ಕೃತಿಗಳ ಆನೆಹೆಜ್ಜೆಗಳನ್ನು ಇಲ್ಲಿ ಗುರುತಿಸಬಹುದಾಗಿದೆ. ಕನ್ನಡಕ್ಕೊಬ್ಬರೇ ಎಂದು ಕೀರ್ತಿ ಗಳಿಸಿರುವ ಟಿ.ಪಿ.ಕೈಲಾಸಂ ಹಾಸ್ಯಚಕ್ರವರ್ತಿ, ವಿಡಂಬನ ಪ್ರವೀಣ. ನಡೆ, ನುಡಿ, ನಾಟಕ ಎಲ್ಲಕ್ಕೂ ಹಾಸ್ಯದ ಉಡುಪು, ಒಡ್ಯಾಣ. ಮೊನೆಮಾತು ಎಸೆದು ಚುಚ್ಚಿ ಕೊಲ್ಲುವುದಕ್ಕಿಂತ ಹಾಸ್ಯದ ಹೊಳೆ ಹರಿಸಿ ಕೊಚ್ಚಿ ಬಿಸಾಡುವುದು ಇವರ ವಿಧಾನ. ಬಂಡ್ವಾಳ್ವಿಲ್ಲದ್ಬಡಾಯಿ, ಹೋಂ ರೂಲು, ಅಮ್ಮಾವ್ರ ಗಂಡ, ನಮ್ಬ್ನ್ರಾಹ್ಮಣ್ಕೆ, ಗಂಡಸ್ಕತ್ರಿ ಮುಂತಾದ ನಾಟಕಗಳಲ್ಲಿ ಸಮಾಜದ ವಿಡಂಬನೆ ಸಮರ್ಥವಾಗಿ ಮೂಡಿಬಂದಿದೆ. ಪುಟ್ಟು, ಮಾಧು, ನಾಗತ್ತೆ ಥಳಕಿನ ಪುತ್ಥಳಿ ಪಾತೂ, ಮಗಳ ಮದುವೆಗಾಗಿ ಅಂಚೆಯವನಿಗೆ ಕೂಡಾ ಕಾಸು ಕೊಡದೆ ಹಣ ಕೂಡಿಡುತ್ತಿದ್ದ ಲಾಯರ್ ನರಸಿಂಹಯ್ಯ, ದೊಡ್ಡ ಮನುಷ್ಯನ ಸೋಗು ಹಾಕಿ ಸಮಾಜದ ರಕ್ತ ಹೀರುವ ಜಿಗಣೆ ರಂಗಣ್ಣ, ರಾಮಣ್ಣ, ವಿ.ಸಿ. (ವರಪುಜೆ bsÁಂಪಿಯನ್), ಬಂಡ್ವಾಳ್ವಿಲ್ಲದ್ಬಡಾಯಿಗಾರ ಬುಳ್ಳಾಪುರದ ಲಾಯರಿ ಅಹೋಬ್ಲು-ಇವರೆಲ್ಲ ನಮ್ಮ ಸಮಾಜದ ವ್ಯಕ್ತಿಗಳೇ. ಇವರೇ ವಿಡಂಬನಕ್ಕೆ ಇಲ್ಲಿ ಆಹಾರ. ಇಬ್ಸ್‌ನ್ದು ಇನಿವಾತು, ಗ್ಯಾಲ್ಸ್‌ವರ್ದೀದು ಗೆಳೆವಾತು, ಷಾನದು ಸುಡೋ ಮಾತು, ಕೈಲಾಸಂದು ಕೊಡಲಿಪೆಟ್ಟು- ಇದು ಕೈಲಾಸಂ ಅಬಿsಪ್ರಾಯ. ಟೊಳ್ಳುತನಕ್ಕೆ ಪೆಟ್ಟುಕೊಟ್ಟು ಉರುಳಿಸುವುದರಲ್ಲಿ ಕೈಲಾಸಂ ಪ್ರವೀಣ. ಪ್ರಾಸ, ಶ್ಲೇಷೆ, ವಕ್ರೋಕ್ತಿ, ಚತುರೋಕ್ತಿ, ವಿಕಟಹಾಸ್ಯ- ಇವೇ ಇವರ ಸೇನೆ. ಆದರೆ ಇದಕ್ಕೆ ದ್ವೇಷ ಅಥವಾ ಕ್ರೋಧ ಮೂಲವಲ್ಲ; ಸಹಾನುಭೂತಿಯೇ ಇದರ ಜೀವಾಳ. ಆದ್ದರಿಂದ ಇವರ ನಗುವಿನ ಹಿಂದೆಯೇ ಅಳು ಮಡುಗಟ್ಟಿ ನಿಂತೇ ಇರುತ್ತದೆ.

ಕಿರಿ ಆಳದ ನಗೆನೀರಿನ ಮೇಲೆ ತಿರುಗುತ ಬಹು ವೇಳೆ ಕಣ್ಣೀರಿನ ಕಡಲಿನ ಪಾಲು ಹಾಸ್ಯದ ಹರಿಗೋಲು

ಎಂಬುದು ಅವರ ಮಾತು. ಬಂಡ್ವಾಳ್ವಿಲ್ಲದ್ಬಡಾಯಿಯ ಒಂದು ಪಾತ್ರವಾದ ಬೋರನನ್ನು ಕುರಿತು, ಬೀದೀಲೇನಾದ್ರೂ ಬಿಡಿಗಾಸು ಬಿದ್ದಿದೇಂತ ಬಗ್ನೋಡ್ತ ಬರ್ತಿದೀಯೇನೋ ಬಕ್ವೇ ಎಂದು ಅಹೋಬ್ಲು ಆಡುವ ಪ್ರಾಸಬದ್ಧ ಕಿರಿಚಾಟದ ತಕ್ಷಣದ ಪ್ರತಿಕ್ರಿಯೆಯೆಂದರೆ ಕೇಕೆ ನಗು. ಆದರೆ ಅದರ ಹಿಂದೆಯೇ ಬಡತನದ ದಾರುಣ ಚಿತ್ರವನ್ನು ನೆನೆದು ಕಣ್ಣೀರು, ಅಹೋಬ್ಲುವಿನ ಟೊಳ್ಳು ಜಂಬದ ಬಗ್ಗೆ ಮರುಕ. ಇದು ಕೈಲಾಸಂ ವಿಡಂಬನದ ಪರಿಣಾಮ.

ನಾಟಕ ಪ್ರಪಂಚದ ಇನ್ನೊಬ್ಬ ವಿಡಂಬನಕಾರರು ಶ್ರೀರಂಗ. ಇವರ ಮಾತು ಹೆಚ್ಚು ಮಾರ್ಮಿಕ. ಎಂ.ವಿ.ಸೀತಾರಾಮ್ಯನವರು ಶ್ರೀರಂಗರ ಬಗ್ಗೆ ಬರೆಯುತ್ತ ಅವರ ಹರಿತವಾದ ಬುದ್ಧಿಶಕ್ತಿ, ವ್ಯಂಗ್ಯ, ಕಟುಹಾಸ್ಯ, ವಿಡಂಬನೆ, ಮಾರ್ಮಿಕವಾದ ಮಾತುಗಾರಿಕೆ, ಹದಿರುನುಡಿಯ ಹೆಕ್ಕಳ ಮತ್ತು ಅವರ ವಿಚಾರಸರಣಿ, ವ್ಯಕ್ತಿತ್ವ- ಇವುಗಳೆಲ್ಲ ಅವರ ನಾಟಕಗಳಲ್ಲಿ ಚೆನ್ನಾಗಿ ಹೊಮ್ಮಿವೆ. ಬರಿಯ ವಿನೋದಕ್ಕಾಗಿ ಇಲ್ಲ ಇವರ ನಾಟಕಗಳು, ಅವು ವಿಚಾರಕ್ಕಾಗಿ ವಿಕಾಸಕ್ಕಾಗಿ-ವಿಡಂಬನ ವಿನೋದ ಗಳ ಮೂಲಕ ಎಂದು ಹೇಳಿದ್ದಾರೆ. ಕಟ್ಟಿದ ಮನೆಯನ್ನು ರಿಪೇರಿ ಮಾಡುವುದು ಎಷ್ಟು ಮೂರ್ಖ ತನಮೋ ಸಮಾಜವನ್ನು ಸುಧಾರಿಸು ವುದೂ ಅಷ್ಟೇ ಮೂರ್ಖತನ. ಚಿರಕಾಲ ಬಾಳ ಬೇಕಾದರೆ ಹೊಸ ಸಮಾಜವನ್ನೇ ರೂಪಿಸಬೇಕು- ಎಂಬ ಭಾವನೆ ಯಿಂದ ಹೊರಟ ಇವರ ಈಗಿನ ಹಲವಾರು ಕೃತಿಗಳು ಭ್ರಮನಿರಸನದ ಪ್ರತೀಕಗಳಾಗಿವೆ. ನಮ್ಮ ಸ್ವರ್ಗೀಯ ಶತ್ರುಗಳು ಎಂಬ ಪ್ರಬಂಧಗಳಲ್ಲಿ ದೇವತೆಗಳನ್ನು ಕೋರ್ಟಿಗೆಳೆದಿರುವ ಶ್ರೀರಂಗರ ಕೃತಿಗಳಲ್ಲಿ ಭಾವದ ಕಾವಿಗಿಂತ ಕ್ರೋಧದ ನೋವು ಹೆಚ್ಚು. ಇವರ ನಗೆ ಬಲು ಹರಿತ. ವಿಶ್ವಾಮಿತ್ರನ ಸೃಷ್ಟಿ ಕಾದಂಬರಿಯಲ್ಲಿ ಬರುವ ಹೋಟಲು ಮಾಲಿಕನ ಚಿತ್ರವಿದು. ‘ಕ್ಷೀರಸಾಗರದಲ್ಲಿ ಒರಗಿದ ವಿಷ್ಣುವಿಗೆ ಒಲಿದ ಲಕ್ಷ್ಮಿಯು ಚಹದಂಗಡಿಯವನಿಗೆ ಒಲಿಯುವುದು ಆಶ್ಚರ್ಯವೇ? ಇದ್ದಷ್ಟು ಕ್ಷೀರವನ್ನೇ ಸಾಗರವನ್ನಾಗಿ ಮಾಡುವ ಮಹಾಮಾಯಿಯಿವನು. ಲಕ್ಷ್ಮಿಯು ಅವನ ದಾಸಿಯಾಗಿದ್ದಾಳೆ; ಎರಡೂ ಕಿವಿಗಳಿಂದ ಜೋತುಬಿದ್ದಿದ್ದಾಳೆ; ಎರಡೂ ಕೈಗಳಲ್ಲಿ ಕುಣಿಯುತ್ತಿದ್ದಾಳೆ; ಬೆರಳುಗಳಲ್ಲಿ ಬಳುಕುತ್ತಲಿದ್ದಾಳೆ ಮಾಲಿಕನ ಲಕ್ಷ್ಮಿ’.

ಬೇಂದ್ರೆಯವರು ವಿಡಂಬನ ಕೃತಿಗಳನ್ನು ರಚಿಸದೆ ಇಲ್ಲ. ಇವರ ಅವರ್ಣನೀಯ, ಅರ್ವಾಚೀನ ಸೌಂದರ್ಯ, ಶೂನ್ಯ ಮುಂತಾದ ಹಲವು ಪದ್ಯಗಳಲ್ಲಿ ಕಾವ್ಯದ ಕಾವು ಕಡಿಮೆಯಾಗಿ ವಿಡಂಬನದ ಮೊನೆಯ ಅನುಭವವಾಗುತ್ತದೆ. ಬೇಂದ್ರೆಯವರು ರಾಜಕೀಯವನ್ನೂ ವಿಡಂಬನಕ್ಕೆ ತುತ್ತಾಗಿಸಿದ್ದಾರೆ. ಅವರ ಜಾತ್ರೆಯಿಂದ ಒಂದು ಉದಾಹರಣೆಯಿದು:

ಯಾರೆಂದರು ಪ್ಲೇಗೆಂದು? ಈ ಅರಮನೆಯಲ್ಲಿ ನನ್ನ ಅಪ್ಪಣೆಯಿಲ್ಲದೆ ಪ್ಲೇಗೂ ಬರಕೂಡದು ಯಾರೂ ಬರಕೂಡದು. ನಾನು ಪ್ಲೇಗಿದೆ ಎನ್ನುವ ವರೆಗೆ ಯಾರೂ ಪ್ಲೇಗು ಎಂಬ ಮಾತೂ ಎತ್ತಕೂಡದು.

ಶಿವರಾಮ ಕಾರಂತರ ಕೃತಿಗಳಲ್ಲಿ ಕಂಡುಬರುವ ಮುಖ್ಯ ಸೂತ್ರಗಳಲ್ಲಿ ವಿಡಂಬನವೂ ಒಂದು. ಇದು ಒಮ್ಮೆ ಹಾಸ್ಯದ ಕಡೆಗೂ ಇನ್ನೊಮ್ಮೆ ಕ್ರೋಧದ ಕಡೆಗೂ ಮತ್ತೊಮ್ಮೆ ವಿಷಾದದ ಕಡೆಗೂ ಓಲುತ್ತದೆ. ಅವರ ಗ್ನಾನ, ದೇವದೂತರು, ಹಳ್ಳಿಯ ಹತ್ತು ಸಮಸ್ತರು, ಮೈಲಿಕಲ್ಲುಗಳೊಡನೆ ಮಾತುಕತೆ ಇವೇ ವಿಡಂಬನ ಕೃತಿಗಳು. ಅವರ ಅನೇಕ ಕಾದಂಬರಿಗಳಲ್ಲೂ ವಿಡಂಬನೆ ಮೂಡಿಬಂದಿದೆ.

ಕುವೆಂಪು ಅವರ ಶ್ರೀರಾಮಾಯಣದರ್ಶನದಲ್ಲಿ, ಶೂದ್ರ ತಪಸ್ವಿಯಲ್ಲಿ, ಬೆರಳ್ಗೆ ಕೊರಳ್ ನಾಟಕದಲ್ಲಿ, ಕಾನೂರು ಹೆಗ್ಗಡತಿಯಲ್ಲಿ, ಅವರು ಬರೆದಿರುವ ನೂರಾರು ಕವನಗಳಲ್ಲಿ ವಿಡಂಬನಕ್ಕೇನೂ ಕೊರತೆಯಿಲ್ಲ. ರಕ್ತಾಕ್ಷಿ ನಾಟಕದಲ್ಲಿ ಬರುವ ಸಾಮಾನ್ಯ ಪಾತ್ರಗಳಲ್ಲಿ ಹೊಮ್ಮುವ ಅಸಾಮಾನ್ಯ ವಿಡಂಬನವನ್ನು ಕಂಡಾಗ, ಅವರ ಕವನಗಳಲ್ಲಿ ಬರುವ ವಿಡಂಬನೆಗಳನ್ನು ನೋಡಿದಾಗ ವಿಡಂಬನ ಸಾಹಿತ್ಯದಲ್ಲಿಯೂ ಅವರು ಸಮರ್ಥರು ಎಂಬ ಅಂಶ ವ್ಯಕ್ತವಾಗದಿರದು.

ಪ್ರಬಂಧಕಾರರ ಪೈಕಿ ಗೊರೂರರದು ಸಕ್ಕರೆ ಹಚ್ಚಿದ ಕಹಿಗುಳಿಗೆಗಳ ರೀತಿ. ವಿಡಂಬನಕ್ಕೆ ತುತ್ತಾದ ವ್ಯಕ್ತಿಗಳ ಪೈಕಿ ಇವರಿಗೆ ಎಳ್ಳಷ್ಟೂ ಅಗೌರವವಿಲ್ಲ. ಇವರದು ವಿಡಂಬನದ ಸರಳಮಾರ್ಗ. ಇವರ ಶಾಲುಸಾಬಿ, ಜೋಡಿದಾರರು, ಶೀನಪ್ಪ, ರಂಗೇಗೌಡ- ಮುಂತಾದವರು ನಮಗೂ ಹತ್ತಿರದವರಾಗುತ್ತಾರೆ. ರಾಶಿಯವರ ತುಟಿಮೀರಿ ಹೊಮ್ಮುವ ಹಾಸ್ಯದ್ದು ವಿವಿಧ ಮುಖ. ಅದಕ್ಕೆ ನಗರದ ಸಂಸ್ಕಾರವಿದೆ; ಅದು ಸೌಮ್ಯವಾಗಿ ಕೆಲಸ ಮಾಡುವ ಅಗ್ನಿ ಪರ್ವತ. ರಾಶಿಯವರ ಗರಡಿಯಲ್ಲಿ ತಯಾರಾದವರ ಪೈಕಿ ಸುನಂದಮ್ಮ, ದಾಶರಥಿ ದೀಕ್ಷಿತ್ ಇವರ ಕೃತಿಗಳಲ್ಲಿ ನಗೆಯ ಅಂಶ ಹೆಚ್ಚು. ಅ.ರಾ.ಸೇ. ಬಲು ಚುರುಕು. ದೀಕ್ಷಿತರ ಕನ್ನಡದ ಗಾಡಿಯಲ್ಲಿ ಅವರ ವೈಶಿಷವ್ಯಿ ವ್ಯಕ್ತವಾಗುತ್ತದೆ. ಅವರ ಗಾಂಪರ ಗುಂಪು ನಗೆಗಡಲಿನ ತಮ್ಮ, ರಾಶಿಯವರ ಉರಿಗಾಳು, ಅರವಾಮೊದ್ದು, ಕೊರವ, ಹೆಬ್ಬಿ ಗುಬ್ಬಾಲೆಯ ಜನ- ಎಲ್ಲ ಚಿರಂಜೀವಿಗಳು. ಶ್ರೀರಂಗರ ಹಾದಿಯಲ್ಲಿ ನಡೆದ ಎನ್ಕೆ ಕುಲಕರ್ಣಿ ಇನ್ನೊಬ್ಬ ವಿಡಂಬನಕಾರ. ಶ್ರೀನಿವಾಸರನ್ನು ವಿಡಂಬನಕಾರರ ಪಟ್ಟಿಯಲ್ಲಿ ಸೇರಿಸುವುದಾಗುವುದಿಲ್ಲ ವಾದರೂ ಅವರ ಡೂಬಾಯಿ ಪಾದ್ರಿಯ ಪಾತ್ರದಂಥ ಹಲವು ಪ್ರಬಂಧಗಳಲ್ಲಿ ಮೃದುಮಧುರ ವಿಡಂಬನವಿದೆ. ಬೀಚಿ ವಿಡಂಬನಬ್ರಹ್ಮ. ಅವರ ತಿಂಮನ ತಲೆ, ಚಿನ್ನದ ಕಸ ಕನ್ನಡದಲ್ಲಿ ಹಾಸ್ಯ ವಿಡಂಬನೆಯ ಉತ್ತಮ ಬರೆಹಗಳು. ಪ್ರತಿಯೊಂದು ಸನ್ನಿವೇಶದಲ್ಲೂ ಹಾಸ್ಯವನ್ನು ಕಾಣುವ ಕಣ್ಣು ಬೀಚಿಯವರಿಗಿದೆ. ನಾಡಿಗೇರರ ನಗೆಬರೆಹಗಳ ಹಿಂದೆಯೂ ವ್ಯಂಗ್ಯನೋಟದ ಕೊಂಡಿಯಿದೆ. ಹಿಂದಿನ ತಲೆಮಾರಿನವರ ಪೈಕಿ ಹಾಸ್ಯವನ್ನೇ ತಮ್ಮ ಖಾಯಂ ಹವ್ಯಾಸವಾಗಿ ಮಾಡಿಕೊಂಡ ಕಸ್ತೂರಿ ಅವರ ನಗೆಪದ್ಯಗಳಲ್ಲೂ ಅಣಕವಾಡುಗಳಲ್ಲೂ ಲಘುಪ್ರಬಂಧಗಳಲ್ಲೂ ನಗರಜೀವಿಗಳ ಅಷ್ಟಾವಕ್ರದ ಹಾಸ್ಯನೋಟವಿದೆ. ಆಧುನಿಕ ಸಾಹಿತ್ಯದಲ್ಲಿ ಹಾಸ್ಯಕ್ಕೆಂದೇ ಹಲವು ಅಂತಸ್ತುಗಳ ಮಹಲ್ಲೊಂದನ್ನು ಕಟ್ಟಿದವರು ನಾ. ಕಸ್ತೂರಿ. ಉದಾಹರಣೆಗಾಗಿ ಅವರ ‘ಅನರ್ಥ ಕೋಶ’ದ ಶಬ್ದಗಳ ಪೈಕಿ ಎರಡನ್ನಿಲ್ಲಿ ಕೊಟ್ಟಿದೆ: ಕನ್ಯಾರ್ಥಿ - ಕಾಲೇಜು ವಿದ್ಯಾರ್ಥಿ. ತನಗಿಂತ ಹೆಚ್ಚು ಸೌಂದರ್ಯ, ಕಡಿಮೆ ವಿದ್ಯೆ ಇರುವ ಹೆಣ್ಣನ್ನೇ ಹುಡುಕುವವ. ಮೂಗು - ಅನೇಕರ ನಶ್ಯದ ಡಬ್ಬಿ, ಕನ್ನಡಕ ಧರಿಸಲು ಅತ್ಯಾವಶ್ಯಕವಾದ ಅಂಗ. ಇದರ ನೇರಕ್ಕೆ ನಡೆವವರೇ ಹೆಚ್ಚು, ಧ್ಯಾನಕ್ಕೆ ಇದರ ತುದಿ ತುಂಬ ಅನುಕೂಲ. ಇದರ ಕೊಂಕನ್ನು ತಿದ್ದುವುದು ಬಲು ಕಷ್ಟ. ದೇವರಿಂದಲೂ ಅಸಾಧ್ಯ. ನಮಗೆ ಇದೊಂದು ಸಂಗೀತೋಪಕರಣ, ನೆಗಡಿಯ ನೆಲವೀಡು.

ಇತ್ತೀಚೆಗೆ ಈ ಕ್ಷೇತ್ರದಲ್ಲಿ ಅನೇಕರು ಕೃಷಿ ನಡೆಸಿದ್ದಾರೆ. ಸಿ.ಕೆ.ಎನ್.ರಾಜ, ಎಂ.ಪಿ.ಮನೋಹರ ಚಂದ್ರನ್, ಪಿ.ಎಸ್.ರಾಮಾನುಜಂ, ಎಸ್.ಎನ್.ಶಿವಸ್ವಾಮಿ, ಎಂ.ಎಸ್.ನರಸಿಂಹಮೂರ್ತಿ, ಟಿ.ಸುನಂದಮ್ಮ, ಪ್ರಭುಶಂಕರ, ಬಿ.ಜಿ.ಎಲ್.ಸ್ವಾಮಿ. ಎಚ್.ಎಲ್.ಕೇಶವಮೂರ್ತಿ, ಎಚ್.ಧುಂಡಿರಾಜ್, ಭುವನೇಶ್ವರಿ ಹೆಗಡೆ, ಬಿ.ಚಂದ್ರೇಗೌಡ, ಎಚ್.ಆನಂದರಾಯಮೂರ್ತಿ ಮುಂತಾದ ಅನೇಕ ಲೇಖಕರೂ ಸಾಕಷ್ಟು ವಿಡಂಬನ ಸಾಹಿತ್ಯವನ್ನು ಸೃಷ್ಟಿಸಿದ್ದಾರೆ.

ಪಾಶ್ಚಾತ್ಯರಲ್ಲಿ ಸಾಹಿತ್ಯ ವಿಡಂಬನವೆಂಬ ವಿಶಿಷ್ಟ ಪ್ರಕಾರಮೊಂದು ಬೆಳೆದು ಬಂದಿದೆ. ಸಾಹಿತ್ಯದಲ್ಲಿ ಕಂಡುಬರುವ ನಾನಾ ವಿಚಾರಗಳನ್ನೂ ಅರ್ಥವಿಲ್ಲದ ಸಂಪ್ರದಾಯಗಳನ್ನೂ ಗೇಲಿ ಮಾಡುವುದು ಇದರ ಉದ್ದೇಶ. ಅಣಕವೇ ಇದರ ಅಸ್ತ್ರ. ವಿಡಂಬನಕ್ಕೆ ತುತ್ತಾದ ಕೃತಿಗಳಲ್ಲಿ ಎದ್ದು ಕಾಣುವ ಮಾತಿನ ಚಟಾಕಿಗಳನ್ನೇ ಎತ್ತಿ ಹಾಸ್ಯಕ್ಕೀಡು ಮಾಡುವುದು ಇದರ ವಿಧಾನ. ಆದರೆ ಅಣಕಿಸುವುದು ಅಷ್ಟೇನೂ ಸುಲಭವಲ್ಲ. ಅಣಕಿಸುವವನಿಗೆ ಮೂಲದ ಕೃತಿಯ ಲೇಖಕನಷ್ಟೇ, ಹಲವೇಳೆ ಅದಕ್ಕಿಂತ ಹೆಚ್ಚಾಗಿ ಶಕ್ತಿ ಇರಬೇಕು.

ಕನ್ನಡದಲ್ಲಿ ವಿಡಂಬನೆ ಒಂದು ಸಾಹಿತ್ಯ ಪ್ರಕಾರವಾಗಿ ಬೆಳೆದದ್ದು ಇಂಗ್ಲಿಷ್ ಸಾಹಿತ್ಯದ ಪ್ರಭಾವದಿಂದ, ಇಂಗ್ಲಿಷ್ನ ಸೆಟೈರ್ ಕನ್ನಡ ವಿಡಂಬನ ಸಾಹಿತ್ಯಕ್ಕೆ ಪ್ರೇರಣೆ ನೀಡಿತು. ಪದ್ಯ ಮತ್ತು ಗದ್ಯ ಈ ಎರಡೂ ರೂಪಗಳಲ್ಲಿ ಕನ್ನಡದಲ್ಲಿ ವಿಡಂಬನೆ ಕಾಣಿಸಿಕೊಂಡಿದೆ. ಕಾವ್ಯ ಕ್ಷೇತ್ರದಲ್ಲಿ ಹೆಚ್ಚಾಗಿ ಬಿಡಿ ಪದ್ಯಗಳು ರಚನೆಗೊಂಡಿವೆ. ನಮ್ಮಲ್ಲಿ ಪುರ್ಣ ಪ್ರಮಾಣದ ವಿಡಂಬನ ಕಾವ್ಯಗಳು ಕಡಿಮೆ. ಕೆರೋಡಿ ಸುಬ್ಬರಾಯರ ಅನುಕೂಲಸಿಂಧು (1926) ಕನ್ನಡದ ಮೊದಲ ವಿಡಂಬನ ಕಾವ್ಯ. ಜಿ.ಪಿ.ರಾಜರತ್ನಂ ಅವರ ಮಹಾಕವಿ ಪುರುಷಸರಸ್ವತಿ (1940) ಇದೇ ಬಗೆಯ ಇನ್ನೊಂದು ಮಹತ್ವದ ಕೃತಿ. ಕರ್ಣಾಟಕವೆಂಬ ಪದ ಸರಿಯೋ, ಕರ್ನಾಟಕ ಸರಿಯೋ ಎಂಬ ವಾದದ ಬಿರುಗಾಳಿ ನಾಡಿನಲ್ಲಿ ಬೀಸಿದಾಗ ಪುರುಷಸರಸ್ವತಿ ಹುಟ್ಟಿಕೊಂಡದ್ದು. ಕನ್ನಡ ಕವಿಗಳಲ್ಲಿ ಪರಂಪರೆಯಾಗಿ ಬಂದ ಕುಕವಿನಿಂದೆ, ಸ್ವಪ್ರತಿಷ್ಠೆಯ ಸ್ಥಾಪನೆ, ಅಲಂಕಾರಪ್ರಿಯತೆ, ಪ್ರಾಸದ ಪುಜೆ, ನಾಯಕನ ವರ್ಣನೆ, ನಾಯಕ ನಿವಾಸ ವರ್ಣನೆ, ನಿರ್ಜೀವ ವಸ್ತು ಸಂಭಾಷಣೆ, ಬಲವಂತದ ಉಪಮಾನ ಜೋಡಣೆ ಮುಂತಾದ ಇಡೀ ಕಾವ್ಯ ಪರಂಪರೆಯನ್ನೇ ರಾಜರತ್ನಂ ಇಲ್ಲಿ ಗೇಲಿ ಮಾಡಿದ್ದಾರೆ. ಮೇಲೆ ಹೇಳಿದ ಎರಡೂ ಕೃತಿಗಳಲ್ಲಿ ಕನ್ನಡಾಂಗ್ಲ ಭಾಷೆಯನ್ನು ಅತ್ಯಂತ ಸಮರ್ಥವಾಗಿ ಬಳಸಲಾಗಿದೆ. ಆಧುನಿಕ ವಿಡಂಬನ ಕಾವ್ಯ ಮಾದರಿಗೆ ಎರಡು ಪದ್ಯಗಳನ್ನು ಈ ಮುಂದೆ ಕೊಟ್ಟಿದೆ.

ಆಧುನಿಕ ವಿದ್ಯಾಭ್ಯಾಸದ, ವಿದ್ಯಾರ್ಥಿಯ ಆಡಂಬರದ ವಿಡಂಬನೆ ಹೀಗಿದೆ: ಫೆಲ್ಟ್‌ಕ್ಯಾಪ್ ತೊಗಲಂ ತಲೆಯೊಳ್ ಬೆಲ್ಟಿನ ಮೃದುತೊಗಲ ಟೊಂಕದೊಳ್ ಬಲಗೈಯೊಳ್ ಗಿಲ್ಟೆಡ್ ವಾಚಿನ ತೊಗಲಂ ಚಾಲ್ತಿಯೊಳಳವಡುವುದೊಂದು ವಿದ್ಯಾಭ್ಯಾಸಂ (ಕೆರೋಡಿ ಸುಬ್ಬರಾವ್)

ಕಾವ್ಯಾರಂಭದಲ್ಲಿ ಗಣಪತಿಯನ್ನು ಸ್ಮರಿಸುವ ಸಂಪ್ರದಾಯವನ್ನೂ ಪ್ರಾಸಪ್ರಿಯತೆಯನ್ನೂ ವಿಡಂಬಿಸಿರುವ ನವೀನ ರೀತಿ ಹೀಗಿದೆ:

ಕಳ್ಟು ಕಾವ್ಯದ ಮಸಿಯ ಕುಡಿಕೆಯ ಟಿಳ್ಟು ಮಾಡುವ ಮೊದಲು ಹಾವಿನ ಬೆಲ್ಟು ಹಾಕಿದ ಗಣಪನನು ಹಾಡುವುದು ನಮ್ಮವರ ಫಾಳ್ಟು ಮೀರಿದರಿದನು ಸಿವಿಯರ್ ಜೋಳ್ಟು ತಪ್ಪದು ಸತ್ಯ ಥಂಡರ್ ಬೋಳ್ಟು ಬಿದ್ದಂತೆಂದು ದೇರ್ಫೋರ್ ಗಣಪತಿಯ ನೆನೆವೆ (ಜಿ.ಪಿ.ರಾಜರತ್ನಂ)

ಮಾತಿಗೆ ಅರ್ಥ ಹೇಗೋ ಹಾಗೆ ನಗೆಯೊಂದಿಗೆ ಸಾಮಾನ್ಯವಾಗಿ ಜನ್ಮವೆತ್ತುವ ವಿಡಂಬನದ್ದು ಸರ್ವಾಂತರ್ಯಾಮಿ ಗುಣ. ಕನ್ನಡ ಸಾಹಿತ್ಯದಲ್ಲೂ ಇದು ಓತಪ್ರೋತವಾಗಿ ಹರಿದಿರುವುದಷ್ಟೇ ಅಲ್ಲ, ಪುರ್ತಿಯಾಗಿ ವಿಡಂಬನವೇ ಮೈಯಾಂತ ಕೃತಿಗಳು ಹೊರಬರುತ್ತಲೇ ಇವೆ. (ಎಚ್.ಎಸ್.ಕೆ.)