ಆಳುಮಗನೂ ಸಾಗಿದನು, ಆಕೆಗೆ ಗೊತ್ತಾಗದಂತೆ.
ಆಕೆ ನೇರವಾಗಿ ಫಕೀರನ ಮನೆಗೆ ಹೋದಳು; ಅವನನ್ನು ತೆಕ್ಕೆಹೊಡೆದಳು.
“ಇಷ್ಟೇಕೆ ತಡಮಾಡಿ ಬಂದಿ ? ಇಷ್ಟೇಕೆ ರಾತ್ರಿ ಮಾಡಿದಿ ?" ಎಂದು ಅವಳ ಮೂಗನ್ನೇ ಕೊಯ್ದು ಹಾಕಿದನು. ಆಕೆ ಅಳುತ್ತ ಕರೆಯುತ್ತ ಮನೆಯ ಕಡೆಗೆ ಹೊರಟಳು.
ಇನ್ನು ಗಂಡನ ಮನೆಗೆ ಯಾವ ಮುಖದಿಂದ ಹೋಗುವದು?
“ಅವನೇ ಮೂಗು ಕೊಯ್ದನೆಂದು ಅಪವಾದ ಹೊರಿಸಿದರಾಯಿತು. ತಾನೇ ಮೂಕಾಟಲೆ ಕರಕೊಂಡು ಹೋಗುತ್ತಾನೆ. ಮತ್ತು ಎಲ್ಲ ಸುರಳೀತ ನಡೀತದೆ” ಎಂದು ಲೆಕ್ಕ ಹಾಕಿದಳು. ಹಾಗೂ ಗಂಡನ ಮಗ್ಗುಲಲ್ಲಿ ಮಲಗಿಕೊಂಡಳು.
ಬೆಳಗಾಗುವ ಮೊದಲೇ ಆಕೆಯೆದ್ದು “ನನ್ನ ಮೂಗು ಹೋಯಿತು" ಎಂದು ಬೊಜ್ಜೆ ಹೊಡೆದಳು. ಗಂಡನು ಗಾಬರಿಗೊಂಡು ಎದ್ದನು. ತಾಯಿತಂದೆ ಎಲ್ಲರೂ ಬಂದರು, “ಯಾಕೆ ಮಗಾ, ಏನಾಯ್ತು” ಎ೦ದು ಎಲ್ಲರೂ ಕೇಳುವವರೇ.
“ನನ್ನ ಗಂಡ ನನ್ನ ಮೂಗು ಕೊಯ್ದರೆಪ್ಪೋ” ಎಂದು ಗುಲ್ಲುಮಾಡಿದಳು.
ನೆರೆದ ಜನ ಅಳಿಯನಿಗೆ ಛೀ ಥೂ ಅಂದಿತು.
ಅಲ್ಲಿಯೇ ನಿಂತ ಆಳುಮಗ ಹೇಳಿದನು - “ನನ್ನ ಧೋರೀನೇ ಮೂಗು ಕೊಂಯ್ದಾನೆಂದರೆ ಅವನ ಕೈ ರಕ್ತ ಆಗಿರಬೇಕು. ಹಾ೦ಗ ಆಗಿಲ್ಲವಾದರೆ ಮತ್ತೆ ಯಾರಾದರೂ ಅವಳ ಮೂಗು ಕೊಯ್ದಿರಬೇಕು. ಫಕೀರ ಬಾವಾ ಸಾಹೇಬ ಅವಳ ಮೂಗು ಕೊಯ್ದಾನ.”
ಆಳು ಗಟ್ಟಿಸಿ ಹೇಳುವುದನ್ನು ಸುಳ್ಳು ಸತ್ಯ ನಿರ್ಣಯಿಸುವ ಸಲುವಾಗಿ ನೆರೆದವರೆಲ್ಲರೂ ಕಂದೀಲು ಹಿಡಕೊಂಡು ಫಕೀರನ ಮನೆಗೆ ಹೋದರು.
ಅಲ್ಲಿ ನೋಡಿದರೆ ಫಕೀರನ ಮನೆಯಲ್ಲಿ ರಕ್ತ ಬಿದ್ದಿರುತ್ತದೆ.
ಮಾವನನ್ನೂ ಮಾಲಕನ ಹೆಂಡತಿಯನ್ನೂ ಕಚೇರಿಗೆ ಕಳಿಸಲಾಯಿತು. ಆಳು ಮಗನು ಅಳಿಯನನ್ನು ಕರಕೊಂಡು ಮರಳಿ ತನ್ನೂರಿಗೆ ಹೋದನು.
ಕಲಿತ ಕಥೆಯನ್ನು ಮನಸ್ಸಿನಲ್ಲಿ ಇಟ್ಟುಕೊ೦ಡರೆ ಹೀಗೆ ಅಪವಾದ ಬರುತ್ತವೆ. ಅವು ಜನ್ಮಕ್ಕೇ ಮೂಲವಾಗುವವು. ಆದ್ದರಿಂದ ಬಂದಕಥೆ ಮಂದಿಗೆ ಹೇಳಬೇಕು.