ಮೂರಂತಸ್ತಿನ ಮನೆಯ ಎಲ್ಲಕ್ಕೂ ಮೇಲಿನ ಅಂತಸ್ವಿನಲ್ಲಿ ಡೊಳ್ಳು ಹೊಟ್ಟೆಯ ಆ ಮನೆಯೊಡೆಯನು, ಚಿಕ್ಕ ಬಾಗಿಲಿನ ಒಂದು ಕದವನ್ನು ತೆರೆದು ಏನೋ ಓದುತ್ತ ಕುಳಿತಿದ್ದನು. ಅತ್ತಕಡೆಯಿ೦ದ ಹಾಯ್ದು ಹೋಗುವ ಒಬ್ಬ ಹುಡುಗನು ಆತನನ್ನು ನೋಡುತ್ತ ಕೆಲಹೊತ್ತು ನಿಂತುಕೊಂಡನು. ಶ್ರೀಮಂತನ ದೃಷ್ಟಿಯು ಆ ಹುಡುಗನತ್ತ ಹರಿಯಿತು. ಹುಡುಗ ನಗುತ್ತ ನಿಂತಿದ್ದಾನೆ! ಅದನ್ನು ಕಂಡು ಶ್ರೀಮಂತನಿಗೆನಿಸಿತು - ತನ್ನ ಮನೆಯನ್ನೂ ತನ್ನ ವೈಭವವನ್ನೂ ನೋಡಿ ಆನಂದದಿಂದ ನಗುತ್ತಿದ್ದಾನೆ. ಈ ಹುಡುಗ. ಈತನಿಗೆ ಏನಾದರೂ ತಿನ್ನಲು ಮಿಠಾಯಿಕೊಡಿಸೋಣವೆಂದು ಯೋಚಿಸಿ, ಆ ಹುಡುಗನನ್ನು ಮಾತಾಡಿಸಿದನು-
“ಏನೋ, ತಮ್ಮಾ ಏಕೆ ನಗುತ್ತಿರುವಿ ?”
ಅನುಮಾನಿಸುತ್ತಲೇ ಆ ಹುಡುಗನು ಮರುನುಡಿದನು - “ಅಕಸ್ಮಾತ್ ನೀವು ಸತ್ತರೆ ನಿಮ್ಮ ಹೆಣವನ್ನು ಈಚೆಗೆ ಹೇಗೆ ತರುವುದು - ಎಂದು ಯೋಜಿಸಿ ನಕ್ಕೆನು.”
ಹುಡುಗನು ಅಧಿಕಪ್ರಸಂಗಿಯೆನ್ನುವುದು ಸ್ಪಷ್ಟವಾಯಿತು. ಅವನ ಮನೆಯೊಳಗಿನ ಹಿರಿಯರನ್ನು ಕರೆಯಿಸಿ ಈತನು ವಿವೇಕಿಯಾಗುವಂತೆ ತಿದ್ದಲು ಸೂಚಿಸಬೇಕೆಂದು ಶ್ರೀಮಂತನು ಬಗೆದನು.
“ಏ ಹುಡುಗಾ, ನಿಮ್ಮ ಮನೆಯಲ್ಲಿ ಯಾರಾರು ಇರುವಿರಿ ?”
“ನನ್ನ ಅಣ್ಣ ಹಾಗೂ ತಂದೆ ಇದ್ದಾರೆ? ಹುಡುಗನ ಹೇಳಿಕೆ.
“ಒಳ್ಳೇದು, ಇಲ್ಲಿ ಕುಳಿತುಕೋ” ಎಂದು ಆ ಹುಡುಗನನ್ನು ಕುಳ್ಳಿರಿಸಿಕೊಂಡು ಒಬ್ಬ ಆಳುಮಗನನ್ನು ಕರೆದು ಆ ಹುಡುಗನ ಅಣ್ಣನನ್ನು ಕರೆತರಲು ಹೇಳಿದನು.
ಹುಡುಗನ ಅಣ್ಣ ಬರಲು, ಶ್ರೀಮಂತನು ಅವನ ಅಧಿಕಪ್ರಸಂಗವನ್ನು ತಿಳಿಸಿದನು. ಆ ಮಾತು ಕೇಳಿ ಅಣ್ಣನಿಗೆ ತಮ್ಮನ ಮೇಲೆ ಸಿಟ್ಟು ಬಂತು. ಜ೦ಕಿಸಿ ನುಡಿದನು - “ಧನಿಯರು ಸತ್ತರೆ ಆ ಹೆಣವನ್ನು ಹೊರತರುವ ವಿಚಾರ ನಿನಗೇಕೆ ಬೇಕಾಗಿತ್ತು ? ಹೆಣವನ್ನು ಕಡಿಕಡಿದು ತಂದಾರು ಹೊರಗೆ. ಅದರ ಉಸಾಬರಿ ಏತಕ್ಕೆ ಮಾಡುವಿ ?"