ವಿಷಯಕ್ಕೆ ಹೋಗು

ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೨೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಜಾತ್ರೆಯ ಗದ್ದಲ

ಬಯಲಾಟದ ಒಂದು ಮೇಳದಲ್ಲಿ ಸಂಕಣ್ಣ, ಹುಣಸಿಕ್ಕ ಹಿಮ್ಮೇಳದ ಹಾಡುಗಾರರಾಗಿದ್ದರು. ಸಂಕಣ್ಣ ಅಸಾಧ್ಯ ಸಿಂಬಳ ಬುರಕನಾಗಿದ್ದರೆ, ಹುಣಸಿಕ್ಕ ತಡೆಯಿಲ್ಲದೆ ತುರಿಸುವ ಹುರುಕಲಿಯಾಗಿದ್ದನು. ಸಿಂಬಳ ಹಣಿಕೆ ಹಾಕಿದಾಗೊಮ್ಮೆ ಸಂಕಣ್ಣ ಸರಕ್ಕನೇ ಮೂಗೇರಿಸಿ, ಅಂಗಿಯ ತೋಳಿನಿಂದ ಒರೆಸಿಕೊಳ್ಳುವನು. ಬಲಧಾರೆಯನ್ನು ಬಲತೋಳಿನಿಂದ, ಎಡಧಾರೆಯನ್ನು ಎಡತೋಳಿನಿಂದ ಒರೆಸಿಕೊಂಡು ಅಂಗಿಯ ತೋಳತುದಿಗಳೆರಡೂ ಕಟುರಾಗಿದ್ದವು. ಅದರಂತೆ ಹುಣಸಿಕ್ಕನು ಕೈಬೆರಳ ಸಂದುಗಳಲ್ಲಿ ತುರಿಕೆಯಿದ್ದರೆ ಕೈಗೆ ಕತ್ತರಿ ಮಾಡಿ ತಿಕ್ಕಾಡುವದರಿಂದ ತೊಗಲೆಲ್ಲ ಕೆತ್ತಿಹೋಗಿ ನೆತ್ತರು ಸುರಿಯುವದು.

ಮೇಳದವರು ಅಟ್ಟಹೂಡಿ ತಾವು ಕಲಿತ ಬಯಲಾಟವನ್ನು ಆಡುವದಕ್ಕೆ ಅಣಿಯಾದರು. ಸಂಕಣ್ಣ - ಹುಣಿಸಿಕ್ಕರನ್ನು ಕರೆದು, ಇಂದಿನ ರಾತ್ರಿಯಾದರೂ ಹೇಸಿತನಕ್ಕೆ ಆಸ್ಪದ ಕೊಡದೆ, ಜೊಕ್ಕಾಗಿರಬೇಕೆಂದು ಅವರಿಗೆ ಕಟ್ಟಪ್ಪಣೆ ಮಾಡಿದರು. ನಿಮ್ಮ ಹೇಸಿತನ ಕಂಡುಬಂದರೆ, ನಿಂತಕಾಲಮೇಲೆ ಅಟ್ಟದಿಂದ ಇಳಿಸಿ ನಿಮ್ಮನ್ನು ಮನೆಗೆ ಕಳಿಸುವೆವು ಎಂದು ಹೆದರಿಕೆ ಹಾಕಿದರು. ಆ ಲಕ್ಷ್ಮಣರೇಖೆಯಲ್ಲಿಯೇ ಅಂದಿನ ಇರುಳನ್ನು ಕಳೆಯುವೆವೆಂದು ಅವರಿಬ್ಬರೂ ಮಾತುಕೊಟ್ಟರು.

ಹಳ್ಳಿಯವರೆಲ್ಲ ಉಂಡುಂಡುಬಂದು ಬಯಲಲ್ಲಿ ಸೇರಿದರು. ತಡಮಾಡಿದರೆ ದೂರದಲ್ಲಿಯೇ ಕುಳಿತುಕೊಳ್ಳಬೇಕಾಗುವದೆಂದು ಜನರು ಬೇಗಬೇಗನೆ ಬಂದರು. ಬಂಪಿಲು ತುಂಬುವ ಹೊತ್ತಿಗೆ ಗಣಪತಿ ಸ್ತೋತ್ರವು ಆರಂಭವಾಯಿತು. ಅರ್ಧ ರಾತ್ರಿ ಕಳೆಯುವ ಹೊತ್ತಿಗೆ ಕಥೆ ಭರತಿಗೆ ಬಂತು. ಜನರೆಲ್ಲ ನಿಸ್ತಬ್ಜರಾಗಿ, ಬಿಟ್ಟ ಕಣ್ಣುಗಳಿಂದ ನೋಡುತ್ತ ಕುಳಿತುಕೊಂಡಿದ್ದರು. ಪಾತ್ರಧಾರಿಗಳಿಗೆ ತುಸು ವಿಶ್ರಾಂತಿಯೂ ಬೇಕಾಗಿತ್ತು. ಆ ಸಂದರ್ಭದ ಸದುಪಯೋಗ ಮಾಡಿಕೊಳ್ಳಬೇಕೆಂದು ಸಂಕಣ್ಣ ಹುಣಸಿಕ್ಕ ಮಾತಾಡಿಕೊಂಡು ಒಂದು ಅಡ್ಡಸೋಗು ತರುವುದಕ್ಕೆ ಸಿದ್ಧತೆ ಮಾಡಿದರು.

“ಏನು ಯಮನೂರು ಜಾತ್ರೆಯೋ ಸಂಕಾ! ಜನದಟ್ಟಣೆ ಏನು ಹೇಳಲಿ?"