ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾಕ್ಸೀಡಿಯ ರೋಗ

ವಿಕಿಸೋರ್ಸ್ದಿಂದ

ಕಾಕ್ಸೀಡಿಯ ರೋಗ

ಏಕಕೋಶ ಜೀವಿಗಳ ವಂಶದ ಕಾಕ್ಸೀಡಿಯ ವರ್ಗಕ್ಕೆ ಸೇರಿದ ಪರಾವಲಂಬಿ ಜೀವಿಗಳು, ಮೊಲ, ಕೋಳಿ ಮುಂತಾದ ಪ್ರಾಣಿಗಳನ್ನು ಹೊಕ್ಕು, ಆ ಪ್ರಾಣಿಗಳಲ್ಲಿ ಉತ್ಪತ್ತಿ ಮಾಡುವ ರೋಗ ಕಾಕ್ಸಿಡಿಯೋಸಿಸ್. ಈ ಪರಾವಲಂಬಿಗಳು ಆಶ್ರಯದಾತ ಪ್ರಾಣಿಯ ಸಣ್ಣ ಕರುಳಿನ ಉಪಲೇಪಕ ಅಂಗಾಂಶದ (ಎಪಿತೀಲಿಯಲ್ ಟಿಶ್ಯು) ಜೀವಕೋಶಗಳಲ್ಲಿ ಜೀವಿಸುತ್ತವೆ. ಬೆಳೆವಣಿಗೆಯ ಸ್ಥಿತಿಯಲ್ಲಿದ್ದಾಗ ಟ್ರೋಫೋಜûೂಆಯ್ಟ್ ಎಂದೂ ಪುನರುತ್ಪತ್ತಿ ಸ್ಥಿತಿಯಲ್ಲಿದ್ದಾಗ ಸ್ಕಿಜಾóಂಟ್ ಎಂದೂ ಹೆಸರು. ಸ್ಕಿಜಾóಂಟ್ ಸ್ಥಿತಿಯಲ್ಲಿ ನ್ಯೂಕ್ಲಿಯಸ್ ಹಲವು ಭಾಗಗಳಾಗಿ ವಿಭಜನೆ ಹೊಂದಿ ಮೀರೋeóÉೂೀಯ್ಟ್ ಎಂಬ ಮರಿಗಳು ಉತ್ಪತಿಯಾಗುತ್ತದೆ.  ಪ್ರತಿಯೊಂದು ಮೀರೋeóÉೂೀಯ್ಟ್ ಪುನಃ ಟ್ರೋಫೊಜûೂಆಯ್ಟ್, ಆಗಿ ಬೆಳೆಯುತ್ತದೆ. ಈ ತರದ ನಿರ್ಲಿಂಗ ವಂಶಾಭಿವೃದ್ಧಿ ಅನೇಕ ಪೀಳಿಗೆಗಳವರೆಗೆ ನಡೆಯಬಹುದು. ರೋಗ ಉಲ್ಬಣಿಸುವುದಕ್ಕೆ ಈ ಬಗೆಯ ವಂಶಾಭಿವೃದ್ಧಿ ಕಾರಣ.

 ಆಶ್ರಯದಾತ ಜೀವಿಯಲ್ಲಿ ಈ ಪರಾವಲಂಬಿಗಳ ವಿರುದ್ಧವಾಗಿ ಏರ್ಪಡುವ ರಕ್ಷಣೆಯ ಪ್ರತಿಕ್ರಿಯೆಯಿಂದಾಗಿ ಮೀರೋeóÉೂೀಯ್ಟ್‍ಗಳು ಸ್ಕಿeóÁಂಟ್‍ಗಳಾಗಿ ಬೆಳೆಯದೆ ಗಂಡು, ಹೆಣ್ಣು ಜೀವಿಗಳಾಗಿ ಪರಿಣಮಿಸುತ್ತವೆ. ಗಂಡಾಗಿ ರೂಪಗೊಂಡ ಸೂಕ್ಷ್ಮ ಪ್ರಜನನ ಜೀವಿ (ಮೈಕ್ರೊಗ್ಯಾಮಿಟೊಸೈಟ್) ಅನೇಕ ಭಾಗಗಳಾಗಿ ವಿಭಜನೆ ಹೊಂದಿ ಸೂಕ್ಷ್ಮ ಸಂಯೋಗಿ ಕಣಗಳಾಗುತ್ತವೆ (ಮೈಕ್ರೊಗ್ಯಾಮೀಟ್ಸ್). ಹೆಣ್ಣಾಗಿ ರೂಪಗೊಂಡ ಸ್ಥೂಲ ಪ್ರಜನನ ಜೀವಿಯಿಂದ (ಮ್ಯಾಕ್ರೋಗ್ಯಾಮಿಟೊಸೈಟ್) ಕೇವಲ ಒಂದು ಸ್ಥೂಲ ಸಂಯೋಗಿಕರಣ (ಮ್ಯಾಕ್ರೋಗ್ಯಾಮೀಟ್) ಉದ್ಭವಿಸುತ್ತದೆ. ಒಂದೊಂದು ಸ್ಥೂಲ ಮತ್ತು ಸೂಕ್ಷ್ಮ ಸಂಯೋಗಿ ಕಣಗಳ ಸಂಯೋಗದಿಂದ ಒಂದು ಯುಗ್ಮಕಣ (eóÉೈಗೋಟ್) ಉತ್ಪತ್ತಿಯಾಗುತ್ತದೆ. ಇದು ತನ್ನ ದೇಹದ ಸುತ್ತಲೂ ರಕ್ಷಣಾ ಕವಚವನ್ನು ರೂಪಿಸಿಕೊಂಡು ಊಸಿಸ್ಟ್ ಆಗಿ ಪರಿಣಮಿಸುತ್ತದೆ. ಇಂಥ ಅನೇಕ ಊಸಿಸ್ಟ್‍ಗಳು ಆಶ್ರಯದಾತ ಜೀವಿಯ ಮಲದ ಮೂಲಕ ಹೊರಬಿದ್ದು, ಆಮೇಲೆ ಅನೇಕ ಸ್ಪೋರೊeóÉೂೀಯ್ಟ್‍ಗಳನ್ನು ಉತ್ಪಾದಿಸಿ ಕೆಲವು ದಿನಗಳಲ್ಲಿ ಪ್ರಬುದ್ಧ ಸ್ಥಿತಿಗೆ ಬರುತ್ತವೆ. ಇಂಥ ಊಸಿಸ್ಟ್‍ಗಳು ಆಹಾರದಲ್ಲಿ ಅಥವಾ ಕುಡಿಯುವ ನೀರಿನಲ್ಲಿ ಬೆರೆತು ಮತ್ತೊಂದು ಆಶ್ರಯದಾತ ಜೀವಿಯನ್ನು ಸೇರುತ್ತವೆ. ಕರುಳಿನಲ್ಲಿ ಊಸಿಸ್ಟ್ ಒಡೆದು, ಸ್ಪೈರೊeóÉೂೀಯ್ಟ್‍ಗಳು ಹೊರಬಂದು ಉಪಲೇಪಕ ಅಂಗಾಂಶವನ್ನು ಪ್ರವೇಶಿಸಿ ನಿರ್ಲಿಂಗ ರೀತಿ ಜೀವನ ಚರಿತ್ರೆಯನ್ನು ಪ್ರಾರಂಭಿಸುತ್ತವೆ.

 ಐಮೀರಿಯ ಜೂರ್ನಿ ದನಗಳಲ್ಲಿ ತೀಕ್ಷ್ಣವಾದ ಕಾಕ್ಸೀಡಿಯ ರೋಗವನ್ನುಂಟುಮಾಡುವುದು. ಬೇಸಗೆಯಲ್ಲಿ ಕರುಗಳು ಈ ರೋಗಕ್ಕೆ ತುತ್ತಾಗುತ್ತವೆ. ರೋಗದ ಮೊದಲ ಚಿಹ್ನೆ ಭೇದಿ, ಅನಂತರ ಎರಡು ಮೂರು ದಿನಗಳಲ್ಲಿ ಮಲದಲ್ಲಿ ರಕ್ತದ ಕಲೆಗಳು ಕಂಡುಬರುತ್ತವೆ. ಮಲವಿಸರ್ಜನೆ ಆಗುವ ವೇಳೆಯಲ್ಲಿ ಕರುಳಿನ ಶೂಲೆಯಿಂದ ಕರುಗಳು ವಿಪರೀತ ನರಳುತ್ತವೆ. ಸಕಾಲದಲ್ಲಿ ಚಿಕಿತ್ಸೆ ಮಾಡಿದರೆ ರೋಗ ಚಿಹ್ನೆಗಳು ಕ್ರಮೇಣ ಕಡಿಮೆಯಾಗಿ ಕರುಗಳು ಚೇತರಿಸಿಕೊಳ್ಳುತ್ತವೆ. ಇಲ್ಲದಿದ್ದರೆ ಸೇಕಡ ಹತ್ತರಷ್ಟು ಮರಣ ಸಂಭವಿಸಬಹುದು. ಐಮೀರಿಯ ಸ್ಟೆಯಿಡೀ ಎಂಬ ಪ್ರಭೇದ ಮೊಲಗಳಲ್ಲಿ ಕಾಕ್ಸೀಡಿಯ ರೋಗವುಂಟು ಮಾಡುತ್ತದೆ. ಇದು ಇತರ ಕಾಕ್ಸೀಡಿಯಾಗಳಂತೆ ಕರುಳನ್ನು ಆಕ್ರಮಿಸದೆ, ಪಿತ್ತಜನಕಾಂಗವನ್ನು ಆಕ್ರಮಿಸುತ್ತದೆ.

 ಕೋಳಿಗಳಲ್ಲಿ ಸುಮಾರು ಒಂಬತ್ತು ಜಾತಿಯ ಕಾಕ್ಸೀಡಿಯಗಳು ರೋಗೋತ್ಪತ್ತಿ ಮಾಡುವುವೆಂದು ಕಂಡುಬಂದಿದೆ. ಇವುಗಳಲ್ಲಿ ಕರುಳಿನ ಸೀಕಂ ಎಂಬ ಭಾಗವನ್ನು ಆಕ್ರಮಿಸುವ ಐಮೀರಿಯ ಟೆನಲ ಎಂಬ ಪ್ರಭೇದ ಬಹಳ ಕ್ರೂರವಾದದ್ದು. ಈ ರೋಗ 5-8 ವಾರ ವಯಸ್ಸಾದ ಮರಿಗಳಿಗೆ ತಗಲುವುದು ಹೆಚ್ಚು. ಒಂದು ವಾರದ ಮರಿಗಳಿಗೂ, ವಯಸ್ಸಾದ ಕೋಳಿಗಳಿಗೂ ಬರುವುದುಂಟು. ರೋಗ ತಗುಲಿದ ನಾಲ್ಕು ದಿನಗಳಲ್ಲಿ ಆಮಶಂಕೆ ಕಂಡುಬಂದು ಒಂದೆರಡು ದಿನಗಳಲ್ಲಿ ಸಾಯುತ್ತವೆ. ಕೆಲವೊಮ್ಮೆ ಸ್ವಾಭಾವಿಕವಾಗೇ ಚೇತರಿಸಿಕೊಳ್ಳುವುದೂ ಉಂಟು. ಸೂಕ್ತ ಚಿಕಿತ್ಸೆ ನೀಡದಿದ್ದರೆ 90% ರಷ್ಟು ಸಾವು ಸಂಭವಿಸಬಹುದು.

 ಇಕ್ಕಟ್ಟಾದ ಜಾಗದಲ್ಲಿ ಹೆಚ್ಚು ಕೋಳಿಗಳನ್ನು ಇಡುವುದು ಕಾಕ್ಸೀಡಿಯ ರೋಗ ಹರಡುವಿಕೆಗೆ ಅನುವು ಮಾಡಿಕೊಟ್ಟಂತೆ. ತೇವವೂ ಊಸಿಸ್ಟುಗಳ ಬೆಳವಣಿಗೆಗೆ ಆವಶ್ಯಕ. ಇವುಗಳನ್ನು ಗಮನದಲ್ಲಿಟ್ಟು ತಕ್ಕ ನಿವಾರಣೆ ಕ್ರಮಗಳನ್ನು ಅನುಸರಿಸಬೇಕು. ಸಲ್ಫಮೆತಸೇನ್ ಮುಂತಾದ ಔಷಧಗಳು ಕಾಕ್ಸೀಡಿಯ ರೋಗಕ್ಕೆ ಗುಣಕಾರಕ ಮದ್ದು. ರೋಗ ತಲೆದೋರಿದ ಕೂಡಲೇ ಆ ಗುಂಪಿನ ಎಲ್ಲ ಮರಿಗಳೂ ಕುಡಿಯುವ ನೀರಿನಲ್ಲಿ ತಕ್ಕ ಪ್ರಮಾಣದಲ್ಲಿ ಈ ಔಷಧಿಯನ್ನು ಬೆರೆಸಿ ಒದಗಿಸುವುದು ರೋಗ ನಿವಾರಣೆಯ ಒಂದು ಮುಖ್ಯ ಕ್ರಮ.

(ಎಸ್.ಎನ್.ಕೆ.ಆರ್.)