ಮುಡಿ
ಈ ಸಂಕಲನಕ್ಕೆ ತಮ್ಮ ಅಧ್ಯಯನಪೂರ್ಣವಾದ ಮುನ್ನುಡಿಯ ಗೌರವವನ್ನಿತ್ತವರು, ನನ್ನ ಬಹುಕಾಲದ ಆತ್ಮೀಯರೂ, ದೇಶದ ಅಗ್ರಮಾನ್ಯ ಸಾಹಿತ್ಯ, ಸಂಸ್ಕೃತಿ ತಜ್ಞರಲ್ಲೊಬ್ಬರೂ, ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರೂ ಮತ್ತು ಅಮೆರಿಕನ್ ಭಾರತೀಯ ಅಧ್ಯಯನ ಸಂಸ್ಥೆಯ ಮುಖ್ಯಸ್ಥರೂ ಆಗಿರುವ ಡಾ. ಪುರುಷೋತ್ತಮ ಬಿಳಿಮಲೆ, ಮುಖಪುಟದ ಮೂಲಚಿತ್ರವನ್ನು ರೇಖಿಸಿದವರು ಹಿರಿಯ ವಿಮರ್ಶಕ, ಸಂಶೋಧಕ, ಪತ್ರಕರ್ತ, ನಿರ್ದೇಶಕ, ಕಲಾವಿದ, ನನ್ನ ದೀರ್ಘಕಾಲದ ಆತ್ಮೀಯ ಡಾ. ಕೆ. ಎಂ. ರಾಘವ ನಂಬಿಯಾರರು. ರಕ್ಷಾವಿನ್ಯಾಸ ನೀಡಿ, ಒಳಗಿನ ರೇಖಾಚಿತ್ರಗಳನ್ನು ಒದಗಿಸಿದವರು ಮಿತ್ರ, ನಾಡಿನ ಹಿರಿಯ ಪ್ರತಿಭಾವಂತ ಬಹುಮುಖಿ ಕಲಾಕಾರ ಗೋಪಾಡ್ಕರ್ ಅವರು.
ಈ ಗ್ರಂಥವನ್ನು ಪ್ರಕಾಶಿಸುತ್ತಿರುವವರು ನಾಡಿನ ಜಾನಪದ ಕ್ಷೇತ್ರದ ಪ್ರಮುಖ ಜ್ಞಾನ ಸಂಪನ್ಮೂಲ ಕೇಂದ್ರವಾದ — ಜಾನಪದ ಅಧ್ಯಯನ ಕೇಂದ್ರ ಮತ್ತು ಯಕ್ಷಗಾನ ಕೇಂದ್ರ, ಎಂ.ಜಿ.ಎಂ. ಕಾಲೇಜು ಉಡುಪಿ, ಇದರ ನಿರ್ದೇಶಕ, ಮಿತ್ರ, ಹಿರಿಯ ಸಂಘಟಕ ಪ್ರೊ. ಹೆರಂಜೆ ಕೃಷ್ಣ ಭಟ್ಟರು ಈ ಹೊಣೆ ಹೊತ್ತಿದ್ದಾರೆ. ಎಂ.ಜಿ.ಎಂ. ಯಕ್ಷಗಾನ ಕೇಂದ್ರದ ಮುವತ್ತೈದನೆ ಸಂಭ್ರಮ ವರ್ಷಗಳ ಉತ್ಸವದಲ್ಲಿ ಈ ಪುಸ್ತಕವು ಪ್ರಕಾಶಿತವಾಗುತ್ತಿರುವುದು ಸಂತಸದ ಸಂಗತಿ. ಇವರೆಲ್ಲರಿಗೆ ತಲೆ ಬಾಗುತ್ತೇನೆ.
ಮುದ್ರಣ ಕಾರವನ್ನು, ವಾಣಿಜ್ಯ ಆಸಕ್ತಿಯನ್ನು ಮೀರಿದ ಸ್ನೇಹದಿಂದ, ಅಂದವಾಗಿ ನಿರ್ವಹಿಸಿದ ಮಂಗಳೂರು ಶ್ರೀ ಗಣೇಶ್ ಪ್ರಿಂಟರ್ಸ್‌ನ ಮಿತ್ರ ಸುಶೀಲ್ ಪೈ ಮತ್ತವರ ಸಹಕಾರಿಗಳಿಗೆ ವಂದನೆಗಳು.
ಇಲ್ಲಿಯ ಬರಹಗಳನ್ನು, ಪ್ರಬಂಧಗಳನ್ನು ನನ್ನಿಂದ ಬರೆಯಿಸಿದ, ವಿವಿಧ ಸಂಘ ಸಂಸ್ಥೆಗಳಿಗೆ, ವೇದಿಕೆಗಳಿಗೆ, ಪ್ರಕಾಶಿಸಿದ ಪತ್ರಿಕೆ, ಗ್ರಂಥಗಳ ಸಂಪಾದಕರಿಗೆ ನಾನು ಆಭಾರಿ.
ಕಲೆ, ಸಾಹಿತ್ಯಗಳ ನನ್ನ ಆಸಕ್ತಿಯನ್ನು ಪ್ರೀತಿ, ಪ್ರೋತ್ಸಾಹ, ಸಂವಾದ, ಚರ್ಚೆಗಳ ಮೂಲಕ ಜೀವಂತವಾಗಿರಿಸಿದ ಮಿತ್ರರು, ಸಹೋದ್ಯೋಗಿಗಳು, ಸಹಕಲಾವಿದರು, ಕಲಾಸಂಘಗಳು, ಸಂಘಟನೆಗಳಿಗೆ, ಕಲಾಭಿಮಾನಿಗಳಿಗೆ ಮತ್ತು ಬೆಸೆಂಟ್ ವಿದ್ಯಾಸಂಸ್ಥೆಗೆ ಧನ್ಯವಾದಗಳು. ಶ್ರೀಮತಿ ಸುಚೇತಾ ಜೋಶಿ, ಶ್ವೇತಾ, ಸ್ವಾತಿ ಇವರ ಪ್ರೋತ್ಸಾಹ ಅತಿಮುಖ್ಯವಾದುದು.