ವಿಷಯಕ್ಕೆ ಹೋಗು

ಪುಟ:ಜಾಗರ.pdf/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯಕ್ಷಗಾನ ಪರಂಪರೆ

ಯಕ್ಷಗಾನ ಪರಂಪರೆಯ ಸಂರಕ್ಷಣೆಯ ಮಾತು ಬರುವಾಗಲೆಲ್ಲ, ಕಲಾ ವಿದರಲ್ಲೂ, ವಿಮರ್ಶಾ ಪ್ರಜ್ಞೆಯುಳ್ಳ ಪ್ರಾಮಾಣಿಕ ಪರಂಪರಾವಾದಿಗಳಲ್ಲೂ ಸಹ, ಒಂದು ಗೊಂದಲವಿರುವುದು ತಟ್ಟನೆ ಗಮನಕ್ಕೆ ಬರುತ್ತದೆ. 'ಯಾವುದು ಪರಂಪರೆ?' 'ಯಾವುದನ್ನು ಉಳಿಸಲು ನಾವು ಯತ್ನಿಸಬೇಕು? ' ಇದು ಪರಂಪರೆ ಎಂಬುದಕ್ಕೆ ನಿರ್ಣಾಯಕ ಸೂತ್ರವೇನು? ಎಂಬ ಪ್ರಶ್ನೆಗಳಲ್ಲಿ ಆ ಗೊಂದಲವನ್ನು ಸಂಗ್ರಹಿಸಬಹುದು. ಹೀಗೆ ಪ್ರಶ್ನೆ ಮಾಡಿ, ಪರಂಪರಾವಾದಿ ಗಂಭೀರವಾಗಿ ಮಂಡಿಸುವ ಕಲಾ ವಿಮರ್ಶೆಯ ತತ್ವವೊಂದನ್ನು ಸುಲಭವಾಗಿ ತಳ್ಳಿ ಹಾಕಲು ಬರುತ್ತದೆ ಎಂಬುವುದರಿಂದಲೇ ಅಂತಹ ಪ್ರಶ್ನೆ ಎತ್ತುವವರೂ ಇದ್ದಾರೆ. ಯಕ್ಷಗಾನ 'ಪರಂಪರೆ' ಎಂಬ ಹೆಸರಿನಲ್ಲಿ ಉಳಿದು, ಬೆಳೆದು ಬಂದಿರುವ ಎಲ್ಲವನ್ನೂ ಪರಂಪರಾವಾದಿ ಸಮರ್ಥಿಸಬೇಕು, ಸಮರ್ಥಿಸುತ್ತಾನೆ - ಎಂಬ ಆಗ್ರಹವೂ ಇಂತಹ ಪ್ರಶ್ನೆಯ ಹಿಂದೆ ಇರುತ್ತದೆ ಏಕೆಂದರೆ ಯಕ್ಷಗಾನ ಪರಂಪರೆ ಎಂದು ಹೇಳುವ ಹಲವು ಅಸಂಬದ್ಧ ಅನೌಚಿತ್ಯಗಳನ್ನು ಬೆಟ್ಟು ಮಾಡಿ, ಇದಲ್ಲವೇ ನಿಮ್ಮ ಪರಂಪರೆ? ಎಂದು ಅಡ್ಡ ಸವಾಲು ಹಾಕಿ, ಪರಂಪರಾವಾದವನ್ನು ದಿಗ್ಭ್ರಮೆಗೊಳಿಸುವ ಒಂದು ಸುಲಭ ತಂತ್ರವು ಅದಾಗುತ್ತದೆ.

ಇದೇ ಗೊಂದಲದ ಇನ್ನೊಂದು ಅಂಶ ರಂಗ ಪ್ರಯೋಗದ ಕಡೆ ಸಂಬಂಧಿ ಸಿದ್ದು - ಪೌರಾಣಿಕ ಪ್ರಸಂಗಗಳನ್ನೇ ಆಡ ಬೇಕು, ಅದರಿಂದ ಮಾತ್ರ ಯಕ್ಷಗಾನ ಪರಂಪರೆ ಉಳಿಯುತ್ತದೆ - ಎಂಬ ವಾದ. ಹೀಗೆ ಹೇಳುವವರ ಕಳಕಳಿ ಪ್ರಾಮಾಣಿಕವೇ ನಿಜ. ಆದರೆ ಯಕ್ಷಗಾನ ಪರಂಪರೆ - ಪೌರಾಣಿಕ ಪ್ರಸಂಗದ ಪ್ರದರ್ಶನ, ಎಂಬ ಸಮೀಕರಣ ಬೇರೆ ತೊಡಕುಗಳಿಗೆ ಕಾರಣವಾಗುತ್ತದೆ. ಪೌರಾಣಿಕ ಪ್ರಸಂಗಗಳನ್ನು ಆಡುವುದರಿಂದಷ್ಟೇ ಪರಂಪರೆ ಉಳಿದೀತೆ? ಎಲ್ಲ ಪೌರಾಣಿಕ ಕಥಾನಕಗಳೂ, ಪ್ರಸಂಗಗಳೂ ರಂಗಕ್ಕೆ ಅನುಯೋಗ್ಯವಾಗಿ ವೆಯೇ? -ಎಂಬ ಪ್ರಶ್ನೆಗಳು ಬರುತ್ತವೆ. ಈ ಪ್ರಶ್ನೆಗಳ ಮುಂದೆ 'ಪ್ರಾಮಾಣಿಕ ಪ್ರಸಂಗ ಮಾತ್ರ' ವಾದವು ಬಿದ್ದು ಹೋಗುತ್ತದೆ.